ಈ ಸಮ್ಮೇಳದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳ ಪರಿಕಲ್ಪನೆ ಎರಡು ಉದ್ದೇಶಗಳಿಂದ ಮಹತ್ವ ಪಡೆದಿದೆ. ಒಂದನೆ ಉದ್ದೇಶವೆಂದರೆ ಜಾಗತಿಕ ಸಂಸ್ಕೃತಿ ತನ್ನ ಏಕರೂಪಿ ಸಂಸ್ಕೃತಿಯನ್ನು ಭಾರತೀಯ ಸಮುದಾಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹೇರುವ ರಾಜಕಾರಣವನ್ನು ಹೊಡೆದು ಹಾಕುವುದು. ಅಂದರೆ, ಈಗ ಜಾಗತಿಕ ಮಟ್ಟದಲ್ಲಿ ಖಾಸಗೀಕರಣದವರು ಭಾರತ ದೇಶದ ಸಾಮಾಜಿಕ ವ್ಯವಸ್ಥೆಯೊಳಗೆ ಜಾತಿ ಅನ್ನುವುದು ಇಲ್ಲ. ಅದು ಕೇವಲ ಭ್ರಮೆ ತನ್ನುವ ಪರಿಕಲ್ಪನೆಯಲ್ಲಿ ಅಧ್ಯಯನಗಳನ್ನು ಮಾಡಿಸಿ ಮಂಡಿಸುತ್ತಿದ್ದಾರೆ. ಇದರ ಹಿಂದಿನ ರಾಜಕಾರಣವೆಂದರೆ ತಮ್ಮದೆಯಾದ ಅಥವಾ ತಮ್ಮ ಅನುಕೂಲಕ್ಕೆ ಉಪಯೋಗ ಆಗುವಂತೆ ತಾವೇ ಸೃಷ್ಟಿಸಿಕೊಂಡಿರುವ ಸಂಸ್ಕೃತಿಯನ್ನು ಜಾರಿಗೆ ತರುವುದು. ಇದನ್ನು ಜಾರಿಗೆ ತರುವುದಕ್ಕೆ ನಮ್ಮಲ್ಲಿರುವ ‘ಬಹುಸಂಸ್ಕೃತಿ’ ಅಡ್ಡಿಯನ್ನುಂಟು ಮಾಡುತ್ತಿದೆ. ಹಾಗಾಗಿ ಬಹುಸಂಸ್ಕೃತಿಯನ್ನು ಹೊಡೆದು ಹಾಕುವುದಕ್ಕೆ ಜಾತಿ ವ್ಯವಸ್ಥೆಯೇ ಇಲ್ಲವೆಂದು ಪ್ರತಿಪಾದನೆ ಮಾಡುವುದಕ್ಕೆ ಹೊರಟಿದ್ದಾರೆ. ಇದು ಪೂರ್ವ ಸಿದ್ಧತಾ ಫಲಿತವೇ ಹೊರತು ವಾಸ್ತವ ಅಲ್ಲ. ಇದರಿಂದ ಹಲವು ಅಪಾಯಗಳು ಆಗುತ್ತಿವೆ. ನಮ್ಮದೆಯಾದ ಸಂಸ್ಕೃತಿ, ವಿಸ್ಮೃತಿ ಆಗುತ್ತಿದೆ. ಏಕೆಂದರೆ ಈ ಅಧ್ಯಯನ ವಿಧಾನ ವಾಸ್ತವ ಸಂಗತಿಯನ್ನು ಬಚ್ಚಿಡುತ್ತದೆ. ದೇಶಿ ಸಮುದಾಯಗಳನ್ನು ಅಪರಾಧಿಗಳನ್ನಾಗಿ ಮಾಡುತ್ತಿದೆ. ಸಂಸ್ಕೃತಿ ಇವರ ವಾದದಂತೆ ಇಲ್ಲ. ನಮ್ಮ ಜಾತಿ ಮೂಲವಾದ ಸಂಸ್ಕೃತಿ ಇದೆ. ಜಾತಿ ಮೂಲವಾದ ಭಾಷೆ ಇದೆ. ಜಾತಿ ಮೂಲವಾದ ಆಹಾರ ಪದ್ಧತಿ ಇದೆ. ಜಾತಿ ಮೂಲವಾದ ಧರ್ಮವಿದೆ. ಜಾತಿ ಮೂಲವಾದ ನಂಬಿಕೆಗಳು, ನಡಾವಳಿಗಳು ಇವೆ. ಇಲ್ಲಿ ಸಾವಿರ ಜಾತಿಗಳಿದ್ದರೆ ಸಾವಿರ ಭಾಷೆಗಳಿವೆ. ಸಾವಿರ ಕಲ್ಪನೆಗಳಿವೆ. ಸಾವಿರ ಆಚರಣೆಗಳಿವೆ. ಇವೇ ಸಾಮಾಜಿಕ ಸತ್ಯಗಳು. ಪ್ರತಿಯೊಂದು ಸಂಸ್ಕೃತಿಯಲ್ಲೂ ಅದರದೇ ಆದ ವಾಸ್ತವವಿದೆ. ಜೀವ ಚೈತನ್ಯವಿದೆ. ಜ್ಞಾನವಿದೆ. ವಿವೇಕವಿದೆ. ಈ ಪರಿಕಲ್ಪನೆಗಳು ಜಾತಿ, ಧರ್ಮ, ಲಿಂಗ ಜನಾಂಗಗಳ ಆಧಾರದಲ್ಲಿ ಭಿನ್ನ ಸಮುದಾಯಗಳಾಗಿ ಜೀವಂತವಾಗಿವೆ. ಇವುಗಳು ಶ್ರೇಷ್ಠವೆಂದಲ್ಲ. ಕೆಳಜಾತಿ ಕೆಳವರ್ಗಗಳು ಅದೇ ವ್ಯವಸ್ಥೆಯ ಪ್ರತಿಷ್ಠಿತ ಜಾತಿ ವರ್ಗಗಳಿಂದ ತುಳಿತಕ್ಕೆ ಒಳಗಾಗಿವೆ. ಮೌಢ್ಯ ಜೀವ ವಿರೋಧಿ ಗುಣಗಳಿರುವಂತೆ ಇಲ್ಲಿ ಅಪಾರವಾದ ಜೀವಪರ ಮೌಲ್ಯಗಳಿವೆ. ಜೀವ ಚೈತನ್ಯವು ಇದೆ. ಈ ಚೈತನ್ಯವನ್ನು ಶೋಧಿಸಿ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಅನವಯಿಸಿಕೊಳ್ಳುವುದರ ಮೂಲಕ ಪ್ರತಿಷ್ಠಿತರ ಆಲೋಚನ ವಿನ್ಯಾಸಗಳು ಬದಲಿಸಬಹುದು. ಇದು ‘ಜಾಗತಿಕ ಏಕರೂಪಿ ಚಿಂತನೆ’ಯ ತಾತ್ವಿಕತೆಯನ್ನೂ ದುರ್ಬಲಗೊಳಿಸಲು ನೆರವಾಗುತ್ತದೆ. ಈ ಕುರಿತು ನಮ್ಮ ಸಮುದಾಯಗಳಿಗೆ ತಿಳಿಸಿ ಹೇಳಬೇಕಾದ ತುರ್ತು ನಮ್ಮ ಮುಂದಿದೆ’ (ರಹಮತ್; ಪ್ರತಿಸಂಸ್ಕೃತಿ, ೧೯೯೩, ಪು. ೧೬-೧೮). ಜೊತೆಗೆ ನಮ್ಮಲ್ಲಿರುವ ಜ್ಞಾನಶಿಸ್ತುಗಳನ್ನು ಹೊಸದಾಗಿ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ದಿನ ದಿನಕ್ಕೆ ಹೆಚ್ಚುತ್ತಲಿದೆ. ಹಾಗಾಗಿ ಹಾಲುಮತ ಸಮುದಾಯಗಳ ಕುಲಗಳ ಮಹತ್ವವನ್ನು ತಿಳಿಸಿ ಹೇಳುವ ಕೆಲಸವನ್ನು ಇವತ್ತಿನ ಸಮ್ಮೇಳನ ಮಾಡುತ್ತಿದೆ.

ಎರಡನೆ ಉದ್ದೇಶವೆಂದರೆ ಸಮುದಾಯ ಚರಿತ್ರೆಯನ್ನು ಸಮಷ್ಠಿ ನೆಲೆಯಲ್ಲಿ ಅರ್ಥೈಸಿಕೊಳ್ಳುವುದು ಅಥವಾ ಕಟ್ಟಿಕೊಳ್ಳುವುದು. ಒಂದು ಸಮುದಾಯದಲ್ಲಿರುವ ಕುಲಗಳು ಆ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು. ಸಮಾಜದ ಹಲವು ಕಾರಣಗಳಿಂದ ಬಿಡಿ ಬಿಡಿ ಘಟಕಗಳಾಗಿ ರೂಪ ತಾಳಿರುತ್ತವೆ. ಈ ಸಮುದಾಯದ ಸಾಂಸ್ಕೃತಿಕ ಚರಿತ್ರೆಯನ್ನು ಗ್ರಹಿಸುವಾಗ ಆ ಎಲ್ಲಾ ಕುಲಗಳ ಸಾಂಸ್ಕೃತಿಕ ಕಥನಗಳನ್ನು ಒಟ್ಟಿಗೆ ಸೇರಿಸಿಯೇ ಅರ್ಥೈಸಿಕೊಳ್ಳಬೇಕು. ಆಗ ಸಮುದಾಯದ ಸಮಷ್ಠಿ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಹಾಲುಮತ ಸಮುದಾಯಕ್ಕೆ ಈ ಬಗೆಯ ಅಧ್ಯಯನದ ಮಹತ್ವ ಇನ್ನೂ ಹೆಚ್ಚು.ಈ  ಸಮುದಾಯದ ಸಂರಚನೆ ವಿಭಿನ್ನ. ಇಲ್ಲಿ ಸಾವಿರಾರು ಕುಲಗಳಿವೆ. ಹತ್ತಾರು ಪಂಗಡಗಳಿವೆ. ಅವುಗಳೆಲ್ಲವೂ ಭಿನ್ನವಾದ ಚರಿತ್ರೆಯನ್ನು  ಹೇಳುತ್ತಿವೆ. ಸಂರಚನೆಯಲ್ಲೂ ಅಲ್ಲದೆ ಪ್ರಾದೇಶಿಕತೆಯಲ್ಲೂ ಭಿನ್ನತೆಗಳಿವೆ. ಉದಾಹರಣೆಗೆ ‘ಕುಲದ ಪ್ರಜ್ಞೆ’ ಅಥವಾ ‘ಕುಲ ಆರಾಧನೆ’ಯ ಮಹತ್ವ ಮತ್ತು ವಿಧಾನವನ್ನು ನೋಡುವುದಾದರೆ ಉತ್ತರ ಕರ್ನಾಟಕದ ಹಾಲುಮತಸ್ಥರಿಗಿಂತ ದಕ್ಷಿಣ ಕರ್ನಾಟಕದ ಹಾಲುಮತಸ್ಥರಲ್ಲಿ ಹೆಚ್ಚಾಗಿದೆ. ಗೋತ್ರ(ಕುಲ)ಕ್ಕೆ ಒಂದು ಕುಲದೈವ ಮತ್ತು ಆ ದೈವವನ್ನು ಆರಾಧನೆ ಮಾಡುವುದಕ್ಕೆ ಒಂದು ದೇವಾಲಯ ಇರಲೇಬೇಕು ಎನ್ನುವ ಪದ್ಧತಿ ಇದೆ. ಕುಲ ದೈವದ ದೇವಾಲಯವನ್ನು ಹೊಂದಿರದ ಕುಲವನ್ನು ಬೆಳವಣಿಗೆ ಹೊಂದಿದ ಕುಲವೆಂದು ಪರಿಗಣಿಸುತ್ತಾರೆ. ಈ ಪರಿಕಲ್ಪನೆ ಇವತ್ತಿನದಲ್ಲ, ಪ್ರಾಚೀನವಾದದು. ಐದು-ಆರು ದಶಕಗಳಿಂದೀಚೆಗೆ ಇನ್ನೂ ಹೆಚ್ಚಾಗಿದೆ. ಹಾಗಾಗಿಯೇ ಕೆಲವೊಂದು ಗ್ರಾಮಗಳಲ್ಲಿ ಆರರಿಂದ ಎಂಟು ಹಾಲುಮತದ ಆರಾಧ್ಯ ದೈವಗಳ ದೇವಾಲಯಗಳನ್ನು ಕಾಣಬಹುದು. ಇತರ ಸಮುದಾಯಗಳಲ್ಲಿ ಈ ಪರಿಕಲ್ಪನೆ ತುಂಬಾ ಕಡಿಮೆ. ಕುಲದ ಅಥವಾ ಮನೆತನದ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಕುಲದೈವಕ್ಕೆ ಮೊದಲ ಆದ್ಯತೆ, ಕುಲದೈವಕ್ಕೆ ಪೂಜೆ ಸಲ್ಲಿಸಿದ ನಂತರವೇ ಆಚರಣೆಗಳನ್ನು ಆರಂಬಿಸುತ್ತಾರೆ. ಕೆಲವೊಂದು ಗ್ರಾಮಗಳಲ್ಲಿ ಎರಡು ಮೂರು ಕುಲದೈವಗಳ ದೇವಾಲಯಗಳಿವೆ. ಒಂದು ಹಳೆಯದು ಮತ್ತೊಂದು ಹೊಸದು. ಮೊದಲ ಪೂಜೆ ಹಳೆ ದೇವಾಲಯಗಳಲ್ಲಿ ನಡೆಯಬೇಕು ಅನ್ನುವುದು ಇವರ ನಿಯಮ. ಪ್ರಾಚೀನ ದೇವಾಲಯಗಳನ್ನೇ ನಮ್ಮ ದೈವದ ಮೂಲ ನೆಲೆಯೆಂದು ಆವಿಸಿ ಆರಾಧನೆ ಮಾಡುತ್ತಾರೆ. ಈ ನಂಬಿಕೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ವಲಸೆ ಹೋದ ಮತ್ತು ಗ್ರಾಮಕ್ಕೆ ಗ್ರಾಮವೇ ಸ್ಥಳಾಂತರವಾದ ಹಾಲುಮತಸ್ಥರಲ್ಲೂ ಇದೆ. ತಮ್ಮ ಪೂರ್ವಜರು ವಾಸವಾಗಿದ್ದ ಗ್ರಾಮದ ದೇವಾಲಯಗಳ ಸ್ಥಳಗಳನ್ನೇ ತಮ್ಮ ದೈವಗಳ ಮೂಲಸ್ಥಳಗಳೆಂದು ಭಾವಿಸಿ ಆರಾಧಿಸುತ್ತಿದ್ದಾರೆ. ಹೊಸದುರ್ಗ ತಾಲೂಕು ‘ಕಡ್ಲೆಕಂಸಾಗರ’ ಗ್ರಾಮದಲ್ಲಿ ಈ ಬಗೆಯ ಆವರಣೆಗಳನ್ನು ಕಾಣಬಹುದು. ಈಗ ಕಡ್ಲೆಕಂಸಾಗರ ಗ್ರಾಮದಲ್ಲಿ ಜನವಸತಿ ಇಲ್ಲ. ಹಿಂದೆ ಹೆಚ್ಚು ಜನರು ವಾಸವಾಗಿದ್ದು ಕುರುಹುಗಳು ದಟ್ಟವಾಗಿವೆ. ಬೀರಪ್ಪ ರೇವಣಸಿದ್ಧ ಮತ್ತು ಇಂಡೆ ಮಲ್ಲಿಕಾರ್ಜು ದೈವಗಳ ದೇವಾಲಯಗಳಿವೆ. ಬೀರಪ್ಪ ದೇವಾಲಯ ಶಿಥಿಲಾವಸ್ಥೆ ತಲುಪಿದೆ. ಉಳಿದೆರಡು ದೇವಾಲಯಗಳು ಚೆನ್ನಾಗಿವೆ. ಈ ದೈವಗಳನ್ನು ಪೂಜೆ ಮಾಡುವ ಪೂಜಾರಿ ಮನೆತನಗಳಿವೆ. ಅವರು ಸಹ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪೂಜಾ ಕಾರ್ಯಕ್ಕಾಗಿ ದಿನಾಲು ಬಂದು ಹೋಗುತ್ತಾರೆ. ಪೂಜಾರಿಗಳು ಇದು ನಮ್ಮ ಪಾರಂಪರಿಕ ವೃತ್ತಿ. ನಮ್ಮ ಮನೆತನದ ಹಕ್ಕು. ಐದಾರು ತಲೆಮಾರುಗಳಿಂದಲೂ ಈ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ. ಸುಮಾರು ಐದು ಶತಮಾನದ ಕೆಳಗೆ ಉತ್ತರ ಕರ್ನಾಟಕದ ಕುರುಬರು ಗುಂಪಾಗಿ ಇಲ್ಲಿಗೆ ವಲಸೆ ಬಂದು ನೆಲೆಸಿದ ಗ್ರಾಮವಿದು. ಇಲ್ಲಿ ನೆಲೆಸಿದವರು ೨೦-೩೦ ಕಿಲೋಮೀಟರ್‌ಅಂತರದ ಸುತ್ತಮುತ್ತಲಿನ ಹಳ್ಳಿಗಳಕ್ಕಿ ನೆಲೆಸಿದ್ದಾರೆ. ಅವರು ನೆಲೆಸಿದ ಸ್ಥಳಗಳಲ್ಲಿ ಅದೇ ದೈವಗಳ ಗುಡಿಗಳನ್ನು ಕಟ್ಟಿಕೊಂಡಿದ್ದಾರೆ. ಆ ದೈವಗಳ ಜಾತ್ರೆಗಳನ್ನು ಆರಂಭಿಸುವಾಗ ಕಂಸಾಗರದಲ್ಲಿರುವ ದೈವಗಳನ್ನು ಪೂಜಿಸಿ, ಅಪ್ಪಣೆ ಪಡೆದು ಆರಂಭಿಸುವ ಪದ್ಧತಿ ಇವರಲ್ಲಿದೆ.

ಕಂತೆಸೇವೆ, ತೋಪುಜಾತ್ರೆ, ದೊಡ್ಡ ದೇವರ ಜಾತ್ರೆ ಮುಂತಾದ ಜಾತ್ರೆಗಳಲ್ಲಿ ಒಂದೊಂದು ಕಡೆ ಸೇರುವ ಮತ್ತು ಒಟ್ಟಾಗಿ ಸೇರಿ ‘ಎಡೆ’ಯನ್ನು ಅರ್ಪಿಸುವ ವಿಧಾನ ಭಿನ್ನವಾದದು. ತೋಪು ಜಾತ್ರೆ ಮತ್ತು ದೊಡ್ಡದೇವರ ಜಾತ್ರೆಗಳಿಗೆ ಆ ದೈವದ ಗುಡಿಕಟ್ಟು ವ್ಯವಸ್ಥೆಗೆ ಸೇರಿದ ಏಳು ಕುಲದವರು ಸುಮಾರು ಎಪ್ಪತ್ತು-ಎಂಬತ್ತು ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಜಾತ್ರೆಯಲ್ಲಿ ಅಷ್ಟು ಗ್ರಾಮಗಳ ಒಂದೊಂದು ಕುಲದವರು ಒಂದು ಕಡೆ ನೆಲೆಸುವ ವಿಧಾನ ಗಮನ ಸೆಳೆಯುತ್ತದೆ. ನಾವೆಲ್ಲ ಒಂದೇ ಮನೆತನಕ್ಕೆ ಸೇರಿದವರು. ಅಣ್ಣ-ತಮ್ಮಂದಿರು ಎನ್ನುವುದು ಇವರ ಅಭಿಪ್ರಾಯ. ಈ ವಿಧಾನ ‘ಕುಲಭದ್ಧತೆ’ಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಹಲವು ‘ಕುಲ ಬದ್ಧತೆ’ ನಿಯಮಗಳು ಹಾಲುಮತ ಸಂಸ್ಕೃತಿಯಲ್ಲಿವೆ. ಸೈದ್ಧಾಂತಿಕವಾಗಿ ಇವುಗಳ ಅಧ್ಯಯನ ಆಗಬೇಕಾಗಿದೆ. ಮೊದಲು ಇವುಗಳ ಬಿಡಿ ಬಿಡಿ ಅಧ್ಯಯನ ಆಗಬೇಕು. ಬಹಳ ಹಿಂದೆಯೇ ಈ ಕೆಲಸ ಆಗಬೇಕಾಗಿತ್ತು. ಈಗ ಆರಂಭವಾಗಿದೆ. ಒಂದೇ ವೇದಿಕೆಯಲ್ಲಿ ಹದಿನೆಂಟು ಪಂಗಡಗಳ; ಕುಲಗಳ ಚರ್ಚೆ ನಡೆಯುತ್ತಿದೆ. ಹಾಲುಮತ ಸಂಸ್ಕೃತಿಯಲ್ಲಿ ಇಷ್ಟೊಂದು ಕುಲಗಳ ಚರ್ಚೆ ಒಂದೇ ವೇದಿಕೆಯಲ್ಲಿನ ಡೆಯುತ್ತಿರುವುದು  ಇದು ಮೊದಲ ಬಾರಿ

* * *

ಹಾಲುಮತ ಸಮುದಾಯದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಪಂಗಡಗಳೆಂದರೆ ‘ಹತ್ತಿಕಂಕಣ’ ಮತ್ತು ‘ಉಣ್ಣೆ ಕಂಕಣ’. ಇವುಗಳನ್ನು ಅತ್ಯಂತ ಪ್ರಾಚೀನ ಪಂಗಡಳೆಂದೂ ಕರೆಯುತ್ತಾರೆ.‘ ‘ಕಂಕಣ’ ಅನ್ನುವುದು ಇಲ್ಲಿ ವಿಶಾಲವಾದ ಅರ್ಥವನ್ನು ಪಡೆದುಕೊಂಡಿದೆ. ‘ಕುಲ’, ‘ಪಂಗಡ’ ಮತ್ತು ‘ಮನೆತನ’ ಎನ್ನುವ ಅರ್ಥದಲ್ಲಿ ಜೀವಂತವಾಗಿದೆ. ‘ಉಣ್ಣೆಕಂಕಣ’ವನ್ನು ಹೇಳುವ ಸೃಷ್ಟಿ ಮೂಲ ಕಥನಗಳು ಇದಕ್ಕೆ ಹೊರತಾಗಿಲ್ಲ. ‘ಕಂಕಣ’ ಅನ್ನುವುದು ಅವರ ಕುಲವನ್ನು ಗುರುತಿಸಿಕೊಳ್ಳುವುದಕ್ಕೆ ಬಳಕೆಯಾದ ಸಾಂಕೇತಿಕ ವಸ್ತು. ಹತ್ತಿ ಕಂಕಣದವರು ಹತ್ತಿಯನ್ನು ಸಾಂಕೇತಿಕ ವಸ್ತುವನ್ನಾಗಿ ಮಾಡಿಕೊಂಡರೆ, ಉಣ್ಣೆಕಂಕಣದವರು ಉಣ್ಣೆಯನ್ನು ಸಾಂಕೇತಿಕ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಇವು ಅವರವರ ‘ಕುಲಚಿಹ್ನೆ’ಯು ಹೌದು. “ಒಂದು ಮಾತನ್ನು ಇಲ್ಲಿ ಗಮನಿಸಬೇಕು. ಆರಂಭದಲ್ಲಿ ಕುಲ ಚಿಹ್ನೆ ಅವರನ್ನು ಅವರು ಗುರುತಿಸಿಕೊಳ್ಳುವ ಸಾಧನವಾಗಿತ್ತೇ ಹೊರತು ದೈವವಾಗಿರಲಿಲ್ಲ. ಆದರೆ ಬರು ಬರುತ್ತಾ ಆಯಾ ಗುಂಪುಗಳಲ್ಲಿ ಬಲಾಢ್ಯ ಮತ್ತು ದುರ್ಬಲ ಎಂಬ ಗುಂಪುಗಳಾದವು. ಒಂದು ಮತ್ತೊಂದನ್ನು ನಿಯಂತ್ರಿಸಬಯಸಿತು. ಸಮಾಜದಲ್ಲಿ ತನ್ನ ಸ್ಥಾನಮಾನವನ್ನು ಮೇಲೇರಿಸಿಕೊಂಡ ಲಾಂಛನ ಇತರರಿಗೂ ಅನುಸರಿಸಬೇಕಾದ ಅಥವಾ ಗೌರವಿಸಬೇಕಾದ ಸಂಗತಿಯಾಯಿತು. ಹೀಗೆ ಗೌರವಿಸಲ್ಪಟ್ಟ ಲಾಂಛನವೇ ಮುಂದೆ ದೈವವಾಗಿ ರೂಪುಗೊಂಡಿರಬೇಕು ಎನ್ನುವುದು ಅನೇಕ ವಿದ್ವಾಂಸರ ಅಭಿಪ್ರಾಯ” (ಹಿ.ಚಿ. ಬೋರಲಿಂಗಯ್ಯ, ದೇಸಿ ಸಂಸ್ಕೃತಿ ಸಂಕಥನ, ೨೦೦೮, ಪುಟ ೦೩). ‘ಉಣ್ಣೆ’ ಉಣ್ಣೆ ಕಂಕಣದವರಿಗೆ ಕೇವಲ ಲಾಂಛನ ಮಾತ್ರವಲ್ಲ. ದೈವವೂ ಹೌದು. ಹಾಗಾಗಿ ಉಣ್ಣೆ ಕಂಕಣದವರ ಚರಿತ್ರೆಯನ್ನು ಅರ್ಥೈಸಿಕೊಳ್ಳುವಾಗ ಅವರಲ್ಲಿ ಉಣ್ಣೆ ಬಳಕೆ ಆಗುತ್ತಿರುವ ಸ್ವರೂಪವನ್ನು ಮತ್ತು ಅದರ ಬಗ್ಗೆ ಕಟ್ಟಿಕೊಂಡಿರುವ ಕಥನಗಳನ್ನು ಮುಖ್ಯವಾಗಿಟ್ಟುಕೊಳ್ಳಬೇಕು. ಏಕೆಂದರೆ ಈ ಕಂಕಣದವರ ಬಗ್ಗೆ ಲಿಖಿತ ಆಧಾರದಗಳು ಸಿಗುವುದು ಕಡಿಮೆ. ಜೊತೆಗೆ ಆಚರಣೆಗಳೇ ಇವರ ಸಾಂಸ್ಕೃತಿಕ ಅಭಿವ್ಯಕ್ತಿ. ಆದ್ದರಿಂದ ಆಚರಣೆಗಳಲ್ಲಿ ವೃತ್ತಿಗಳಲ್ಲಿ ಉಣ್ಣೆಯನ್ನು ಬಳಸುತ್ತಿರುವ ವಿಆನಗಳ ಮೂಲಕ ಇವರ ಚರಿತ್ರೆಯನ್ನು ಸೈದ್ಧಾಂತಿಕವಾಗಿ ಕಟ್ಟಿಕೊಳ್ಳಬೇಕಾಗಿದೆ. ಆದರೆ ಜನನದಿಂದ ಮರಣದವರೆಗೂ ನಡೆಯುವ ಆಚರಣೆಗಳಲ್ಲಿ ಉಣ್ಣೆ ಈ ಕಂಕಣದವರಲ್ಲಿ ಹೇಗೆ ಬಳಕೆಯಾಗುತ್ತಿದೆ ಎನ್ನುವ ವಿವರಗಳನ್ನು ಸಂಗ್ರಹಿಸುವುದಕ್ಕೆ ನನ್ನಿಂದ ಆಗಿಲ್ಲ. ಆ ಕೊರತೆಯನ್ನು ಇಲ್ಲಿ ನೆರೆದ ವಿದ್ವಾಂಸರು ಮತ್ತು ಸಭಿಕರು ತುಂಬುತ್ತೀರಿ ಎನ್ನುವ ನಂಬಿಕೆ ನನ್ನದು. ಏಕೆಂದರೆ ಉಣ್ಣೆ ಕಂಕಣದವರು ಹೆಚ್ಚಾಗಿರುವ ಪ್ರದೇಶವಿದು. ಉಣ್ಣೆ ಕಂಕಣದವರು ಮತ್ತು ‘ಕಂಬಳಿ’ ನೇಯುವ ಜನರು ಹೆಚ್ಚಾಗಿರುವುದರಿಂದ ಮಾಹಿತಿ ಸಿಕ್ಕೇ ಸಿಗುತ್ತೆ ಅನ್ನುವ ನಂಬಿಕೆ ನನ್ನದು.

* * *

ಹತ್ತಿಕಂಕಣ ಮತ್ತು ಉಣ್ಣೆ ಕಂಕಣಗಳ ಸೃಷ್ಟಿಯನ್ನು ಹೇಳುವ ಅನೇಕ ಕಥನಗಳು ಸಿಗುತ್ತವೆ. ಇವು ಜನಪದವಾದುದರಿಂದ ಸಹಜವಾಗಿಯೇ ಹಲವಾರು ಪಠ್ಯಗಳಲ್ಲಿ ಪ್ರಸಾರವಾಗಿದೆ. ಇಲ್ಲಿ ಆ ಎಲ್ಲಾ ಪಠ್ಯಗಳನ್ನು ಹೇಳುವುದಿಲ್ಲ. ಒಂದು ಕಥನವನ್ನು ಹೇಳಿ ತೌಲನಿಕ ಅಧ್ಯಯನಕ್ಕಾಗಿ ಮತ್ತು ಕಥನಗಳಲ್ಲಿ ಆದ ರೂಪಾಂತರವನ್ನು ಹೇಳುವುದಕ್ಕಾಗಿ ಕೆಲವು ಪಠ್ಯಗಳಲ್ಲಿನ ಸಾಲುಗಳನ್ನು ಮಾತ್ರ ಹೇಳುತ್ತೇನೆ. ಒಂದು ಕಥನ ಹೀಗಿದೆ:

“ಭೃಂಗಿ ಕೈಲಾಸದಲ್ಲಿ ಶಿವ-ಪಾರ್ವತಿ ಒಡ್ಡೋಲಗದಲ್ಲಿರುವಾಗ ತನ್ನ ಮೂರು ಕಾಲುಗಳಿಂದ ನರ್ತನ ಮಾಡಿದ. ಇದನ್ನು ನೋಡಿದ ದೇವತೆಗಳು ಪರಿಹಾಸ್ಯದಿಂದ ನಕ್ಕರು. ಭೃಂಗಿಗೆ ಕೋಪ ಬಂತು. ಆ ಕೋಪದಲ್ಲಿ ನೀವು ಭೂಲೋಕದಲ್ಲಿ ಕುರಿಗಳಾಗಿ ಹುಟ್ಟಿ” ಎಂದು ಶಾಪ ಹಾಕಿದ. ದೇವತೆಗಳು ಕುರಿಗಳಾಗಿ ಹುಟ್ಟಿ ಭೂ ಲೋಕದ ಹುತ್ತವೊಂದರಲ್ಲಿ ಅಡಗಿ ಕುಳಿತರು. ಆ ಜಾಗ ಹಾಲುಮತದ ಮೂಲ ಪುರುಷನಾದ ಆದಿಗೊಂಡನಿಗೆ ಸೇರಿತ್ತು. ಆದಿಗೊಂಡನಿಗೆ ಏಳು ಜನ ಮಕ್ಕಳು. ಕೊನೆಯವನು ಪದ್ಮಣ್ಣ. ಈತ ಸೋಮಾರಿ. ಮನೆಯಲ್ಲಿ ಎರಡೊತ್ತು ಉಂಡು-ತಿಂದು ಕೆಲಸ ಮಾಡದೆ ತಿರುಗುತ್ತಿದ್ದ. ಹಾಗಾಗಿ ಈತನನ್ನು ಉಂಡಾಡು ಪದ್ಮಣ್ಣ ಎಂದು ಕರೆಯುತ್ತಿದ್ದರು. ಇವನ ಸೋಮಾರಿತನವನ್ನು ಅಣ್ಣಂದಿರು ಸಹಿಸುತ್ತಿರಲಿಲ್ಲ. ತೋಟದಲ್ಲಿ ಕೆಲಸಕ್ಕೆ ಬರುವಂತೆ ಹಲವು ಬಾರಿ ಒತ್ತಾಯ ಮಾಡಿದರೂ ಕೇಳಲಿಲ್ಲ. ಕೋಪಿತರಾದ ಅಣ್ಣಂದಿರು ಒಂದು ದಿವಸ ತಂದೆ-ತಾಯಿಯರ ಹತ್ತಿರ ಹೋಗಿ ಕೆಲಸಕ್ಕೆ ಕಳಿಸುವಂತೆ ಹಠ ಮಾಡುತ್ತಾರೆ. ಈ ಒತ್ತಡಕ್ಕೆ ಮಣಿದ ತಂದೆ ತಾಯಿ ಪದ್ಮಣ್ಣನನ್ನು ಹೊಲಕ್ಕೆ ಕಳಿಸಿದರು. ಹೊಲಕ್ಕೆ ಬಂದ ಪದ್ಮಣ್ಣನಿಗೆ ಅಣ್ಣಂದಿರು ಹುತ್ತವನ್ನು ಅಗೆಯಲು ಹೇಳಿದರು. ಅಲ್ಲಿ ದೇವತೆಗಳು ಭೃಂಗಿಯ ಶಾಪದಿಂದ ಕುರಿಗಳಾಗಿ ಕುಳಿತಿರುವುದು ಇವರ್ಯಾರಿಗೂ ತಿಳಿದಿರಲಿಲ್ಲ. ಪದ್ಮಣ್ಣ ಹುತ್ತವನ್ನು ಅಗೆದಾಗ ಕುರಿಗಳು ಹೊರಬಂದವು. ಇವುಗಳನ್ನು ನೋಡಿದ ಪದ್ಮಗೊಂಡ ಭಯಭೀತನಾದ. ಹೊರ ಬರದಂತೆ ತಡೆಯುವುದಕ್ಕೆ ಪ್ರಯತ್ನಿಸಿದ. ಬೆಂಕಿಯನ್ನು ಹಾಕಿದ. ಕೆಲವು ಕುರಿಗಳು ಸುಟ್ಟು ಹೊರಬಂದವಾದರೂ ನಿಲ್ಲಲಿಲ್ಲ. ಇದನ್ನು ಕಂಡು ಹೆದರಿದ ಪದ್ಮಣ್ಣ ಭಯದಿಂದ ಕಾಡಿನತ್ತ ಓಡಿದ ಕುರಿಗಳು ಆತನನ್ನು ಬಿಡಲೇ ಇಲ್ಲ. ಹಿಂದೆ ಹಿಂದೆ ಓಡಿಬಂದವು. ಸುಸ್ತಾಗಿ ಕಾಡಿನಲ್ಲಿ ನಿಂತಾಗ ‘ನಮ್ಮನ್ನು ರಕ್ಷಿಸು ನಮ್ಮನ್ನು ರಕ್ಷಿಸು’ ಎನ್ನುತ್ತ ಅವನನ್ನೆ ನೋಡುತ್ತ ನಿಂತವು. ಏನೂ ತೋಚದ ಪದ್ಮಣ್ಣ ಶಿವನನ್ನು ಪ್ರಾರ್ಥಿಸಿದ. ಪ್ರತ್ಯಕ್ಷನಾದ ಶಿವ ನೀನು ಕುರಿಗಳನ್ನು ಕಾಪಾಡುವುದಕ್ಕಾಗಿಯೇ ಭೂ ಲೋಕದಲ್ಲಿ ಜನ್ಮ ತಾಳಿರುವೆ. ಆದ್ದರಿಂದ ನೀನು ಕುರಿಗಳನ್ನು ಕಾಯ್ದುಕೊಂಡು ಸುಖವಾಗಿ ಬಾಳು ಎಂದು ಹರಸಿ ಕಣ್ಮರೆಯಾದ.

ಶಿವನ ಮಾತಿನಂತೆ ಕುರಿಗಳನ್ನು ಕಾಯುತ್ತಾ ಅಲೆಮಾರಿಯಾದ ಪದ್ಮಣ್ಣನಿಗೆ ಊಟ ಸಿಗದೆ ಏಳು ದಿನಗಳ ಕಾಲ ಉಪವಾಸವಾಗಿದ್ದ. ಈ ಕಷ್ಟದ ಪರಿಸ್ಥಿತಿಯನ್ನು ಅರಿತ ಶಿವ ಪರೀಕ್ಷಿಸಲೆಂದೇ ಪದ್ಮಣ್ಣನ ಹತ್ತಿರ ಭಿಕ್ಷೆಗೆ ಬಂದ. ತಾನೂ ಉಪವಾಸವಿರುವ ಸಂಗತಿ ಅರುಹಿದ. ಶಿವ ಕುರಿಗಳನ್ನು ಹಿಡಿದುತಂದು ಹಾಲು ಹಿಂಡಿದ. ಕಪ್ಪರದೊಳಗೆ ಹಾಕಿ ಗಿಣ್ಣವನ್ನು ಮಾಡಿದ. ಇಬ್ಬರು ಸೇರಿ ಊಟ ಮಾಡಿದರು. ಅಗ್ನಿ ಇದ್ದಲ್ಲಿ ಹೀಗೆ ಅಡಿಗೆ ಮಾಡಿಕೊಂಡು ಊಟ ಮಾಡು ಎಂದು ಹರಸಿ ಶಿವ ಅಂತರ್ದಾನಾದ. ಪದ್ಮಣ್ಣನ ಕುರಿಗಾರಿಕೆಯ ಅಲೆಮಾರಿತನ ಮುಂದುವರೆಯಿತು. ಆತನಿಗೆ ಒಂದು ದನ ಬೆಂಕಿಯ ಅವಶ್ಯಕತೆಯುಂಟಾಯಿತು. ಬೆಟ್ಟವನ್ನು ಹತ್ತಿ ಸುತ್ತ ದೃಷ್ಟಿ ಹಾಯಿಸಿದ. ದೂರದಲ್ಲಿ ಹೊಗೆ ಬರುತ್ತಿರುವುದು ಕಾಣಿಸಿತು. ಕುತೂಹಲದಿಂದ ಅಲ್ಲಿಗೆ ಹೋದ. ಅದು ಗುಹೆ. ರಾಕ್ಷಸಿವಾಸ ಮಾಡಿದ್ದ ಸ್ಥಳವದು. ಗುಹೆ ಹೊಕ್ಕನು. ಒಳಗಡೆ ಸುಂದರ ಕನ್ಯೆ ಕಾಣಿಸಿದಳು. ಆಕೆ ರಾಕ್ಷಸಿಯಿಂದ ಅಪಹರಿಸಲ್ಪಟ್ಟ ಕನ್ಯೆ ಆಗಿದ್ದಳು. ಪದ್ಮಣ್ಣನನ್ನು ನೋಡಿದ ಕನ್ಯೆ ರಾಕ್ಷಸಿಯ ಬಂಧನದಿಂದ ಮುಕ್ತರನ್ನಾಗಿ ಮಾಡಿ ವಿವಾಹವಾಗುವಂತೆ ಬೇಡಿಕೊಂಡಳು. ಕೆಲವು ದಿನಗಳ ಕಾಲ ಅಲ್ಲಿಯೇ ತಂಗಿದ್ದ ಪದ್ಮಣ್ಣ ಕನ್ಯೆಯ ಸಹಾಯ ಪಡೆದು ರಾಕ್ಷಸಿಯನ್ನು ಸಂಹಾರ ಮಾಡಿದ. ತನ್ನ ಕುಲದೇವರಾದ ಬೀರೇಶನನ್ನು ನೆನೆದ. ಶಿವ-ಪಾರ್ವತಿಯರು ಪ್ರತ್ಯಕ್ಷರಾದರು. ಇವರಿಬ್ಬರ ಬೇಡಿಕೆಯನ್ನು ಆಲಿಸಿದ ಶಿವ-ಪಾರ್ವತಿಯರು ವಿವಾಹ ಕಾರ್ಯವನ್ನು ಆರಂಭಿಸಿದರು. ಆ ಸಂದರ್ಭದಲ್ಲಿ ಕಂಕಣಕ್ಕೆ ದಾರ ಸಿಗಲಿಲ್ಲ. ಕುರಿ ಉಣ್ಣೆಯನ್ನು ತಂದು ದಾರವನ್ನು ಮಾಡಿ ಪಾರ್ವತಿಯ ಕೊರಳಲ್ಲಿದ್ದ ಅರಿಶಿಣವನ್ನು ಹತ್ತಿ ಕಂಕಣ ಕಟ್ಟಿದರು. ನಂತರ ಪದ್ಮಣ್ಣನ ವಂಶದವರಗೆ ‘ಉಣ್ಣೆ  ಕಂಕಣ’ದವರೆಂದೂ ಆತನ ಅಣ್ಣಂದಿರು ವಂಶದವರಿಗೆ ಹತ್ತಿಕಂಕಣದವರೆಂದೂ ನಾಮಕರಣ ಮಾಡಿ ಕಣ್ಮರೆಯಾದರು.

* * *

ಈ ಕಥನದ ಕೊನೆಯಲ್ಲಿ ಕಾಣಿಸುವ ವಸ್ತು ಪರಿಕಲ್ಪನೆ ಓದುಗನಲ್ಲಿ ಅನೇಕ ಗೊಂದಲಗಳನ್ನು ಸೃಷ್ಠಿಸುತ್ತದೆ. ಪದ್ಮಗೊಂಡ ಮತ್ತು ಆತನ ಅಣ್ಣಂದಿರು ಹತ್ತಿಕಂಕಣ ಮತ್ತು ಉಣ್ಣೆ ಕಂಕಣದವರಾದರು ಅನ್ನುವುದು ಲಿಖಿತ ಹಾಲುಮತ ಪುರಾಣಗಳ ತಾತ್ವಿಕತೆ. ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಮತ್ತು ಇತರ ಹಾಲುಮತ ಪುರಾಣಗಳಲ್ಲಿ ಈ ಚಿತ್ರಣಗಳನ್ನೇ ಕಾಣಬಹುದು. ಆದರೆ ಜನಪದ ಹಾಲುಮತ ಮಹಾಕಾವ್ಯದಲ್ಲಿ ಕಾಣಿಸುವ ವಸ್ತು ಚಿತ್ರಣ ಭಿನ್ನವಾಗಿದೆ. ಪದ್ಮಗೊಂಡ ಮತ್ತು ಆತನ ಅಣ್ಣಂದಿರು ಎನ್ನುವ ಬದಲು ಪದ್ಮಗೊಂಡನ ಇಬ್ಬರು ಹೆಂಡತಿಯರ ಮಕ್ಕಳು ಎನ್ನುವ ಚಿತ್ರಣವಿದೆ.

“ತಾಯಿ ಮಕ್ಕಳು ಕೂಡಿದರಯ್ಯ ತಂದಿ ಮಕ್ಕಳು ಕೂಡಿದರಯ್ಯ
ತಂದಿ ಮಕ್ಕಳು ಕೂಡ್ಯಾರವರು ಮದುಮಗೊಂಡ ಹೇಳ್ಯಾನ
ಉಣ್ಣೆ ಕಂಕಣದವರಿಗಪ್ಪ ಹಿರಿಯಾ ಮಗನಂದಾರ
ಹತ್ತಿಕಂಕಣದವರಿಗಪ್ಪ ಸಣ್ಣ ಮಗನ ನೀನಯ್ಯ
ನೀನೇ ದೊಡ್ಡ ತಮ್ಮನೇ ಅವರೇ ಸಣ್ಣ ತಮ್ಮದೇರಾ
ಶಿವಲಿಂಗಮ್ಮನ ಮಕ್ಕಳಿಗಯ್ಯ ಹತ್ತಿಕಂಕಣದವರಿಗೆ
ಹತ್ತಿಕಂಕಣದವರಿಗಯ್ಯಾ ನೀವೇ ತಮ್ಮದೇರು ಅಂದಾಳು
ಮಡ್ಡಪ್ಪ ಪಾಲ ಕೊಟ್ಟಾನೆ ಅಣ್ಣದೇರು ಪಾಲ ಕೊಟ್ಟಾನ
ಶಿವಲಿಂಗಮ್ಮನ ಮಕ್ಕಳಿಗಯ್ಯಾ ಇಬ್ಬರಿಗೆ ಪಾಲು ಕೊಟ್ಟಾರ
ತಾಯಿದೇರಿಗೆ ಹಿಡಿದೇವೆ ತಂದಿನ ಬಿಟ್ಟು ಬಂದೀವೆ
ಸಿದ್ದಮ್ಮನ ಗಂಡ ಮದುಮಗೊಂಡ ಶಿವಲಿಂಗಮ್ಮನ ಗಂಡ ಪದುಮಗೊಂಡ
ಇಬ್ಬರ ಇಬ್ಬರಿಗಲ್ಲೇಳಯ್ಯ ಪದಮಗೊಂಡನಿದ್ದಾನೆ
ತಂದಿ ಹಿಡಿದು ಬಂದಾರೆ ನಾವೇ ಗೊಂಡಗುರುಬರೆ
ಕಾಡಿನಲ್ಲಿ ಇದ್ದರ ನಾವ ಕಾಕುರುಬರಾದೇವೆ
ಕಾಡುಕುರುಬರು ನಾವೇನಾದೇವು ಅಡವೀಯ ಕುರುಬರು ನಾವೇನ
ಗೊಂಡಕುರುಬರು ನಾವೇನಯ್ಯ ಪದಮಗೊಂಡನ ಮಕ್ಕಳೆ
ಗೊಂಡಗೋಳಾ ಪದಗೋಳಯ್ಯ ಇಲ್ಲಿಗೆ ಮುಗದಾವೇನಯ್ಯ”
(ವೀರಣ್ಣ ದಂಡೆ: ಜನಪದ ಹಾಲುಮತ ಮಹಾಕಾವ್ಯ, ಪುಟ ೪೮)

ಪದ್ಮಗೊಂಡನ ಮಕ್ಕಳೇ ಎರಡು ಪಂಗಡಗಳಾಗಿ ಕವಲೊಡೆದರು. ಜೊತೆಗೆ ಕಾಡುಕುರುಬ ಮತ್ತು ಗೊಂಡಗುರುಬ ಪಂಗಡಗಳ ಸೃಷ್ಟಿ ಮೂಲವನ್ನು ಹತ್ತಿಕಂಕಣ ಮತ್ತು ಉಣ್ಣೆ ಕಂಕಣ ಸೃಷ್ಟಿ ಮೂಲದೊಂದಿಗೆ ತಳಕು ಹಾಕೊಕೊಂಡಿದೆ. ಗೊಂಡ ಮತ್ತು ಕಾಡುಕುರುಬ ಕುಲಗಳ ಸೃಷ್ಟಿಯನ್ನು ಹೇಳುವ ವಿಧಾನ ಭಿನ್ನವಾದದು. ಇವೆರಡು ವಿಂಗಡನೆಗೊಂಡ ಕುಲಗಳಲ್ಲ. ವಾಸಿಸುವ ಪ್ರದೇಶದಿಂದ ಮತ್ತು ವಂಶವನ್ನು ಗುರುತಿಸುವ ಪದದ ಬಳಕೆಯ ಹಿನ್ನೆಲೆಯಲ್ಲಿ ನಾಮಾಂಕಿತ ಪಡೆದ ಕುಲಗಳು ಎನ್ನುವ ತಾತ್ವಿಕತೆಯನ್ನು ನಮ್ಮ ಮುಂದಿಡುತ್ತದೆ. ಕಾಡುಕುರುಬರಿಗೆ ಕಾಡಿನಲ್ಲಿ ವಾಸಿಸುವ ಕಾರಣಕ್ಕೆ ಈ ಹೆಸರು ಬಳಕೆಗೆ ಬಂತು ಎನ್ನುವುದನ್ನು ಹಲವು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಕಾಡುಕುರುಬ ಮತ್ತು ಗೊಂಡಗುರುಬ ಉಣ್ಣೆ ಕಂಕಣಕ್ಕೆ ಸೇರಿದವರು ಎನ್ನುವುದು ಜನಪದ ಹಾಲುಮತ ಮಹಾಕಾವ್ಯದವಾದ. ಇತರ ಹಾಲುಮತ ಮಹಾಕಾವ್ಯಗಳಲ್ಲಿ ಈ ಚಿತ್ರಣ ಕಾಣಿಸುವುದಿಲ್ಲ. ಗೊಂಡಗುರುಬರು ಪದ್ಮಗೊಂಡನ ಮಕ್ಕಳೆಂದು ನೇರವಾಗಿ ಹೇಳಿಬಿಡುತ್ತದೆ. ಈ ವಾದವನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಗೊಂಡರ ಕುಲಮೂಲ ಕಥನಗಳನ್ನು ಅಧ್ಯಯನ ಮಾಡಬೇಕು.

ಹತ್ತಿ ಕಂಕಣ ಮತ್ತು ಉಣ್ಣೆ ಕಂಕಣಗಳ ಸೃಷ್ಟಿ ಮೂಲ ಕಥನಗಳ ಪರಿಕಲ್ಪನೆಗಳು ಅಲ್ಲದೆ ವಸ್ತು ಸ್ವರೂಪವು ಸಹ ಅಧ್ಯಯನಕಾರರನ್ನು ಗೊಂದಲಕ್ಕೆ ಸಿಕ್ಕಿಸಿಬಿಡುತ್ತದೆ. ಈ ಬಗ್ಗೆ ಚಂದ್ರಕಾಂತ ಬಿಜ್ಜರಗಿ ಅವರು ವ್ಯಕ್ತಪಡಿಸಿರುವ ಆತಂಕವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. “ಈ ಕಥನದಲ್ಲಿ ಕೃಷಿ ಮೊದಲಿಗೆ ನಂತರ ಪಶುಪಾಲನೆ ಇದೆ. ಭೌಗೋಳಿಕವಾಗಿ ಪಶುಪಾಲನೆ ಮೊದಲು. ಕೃಷಿ ನಂತರದು. ಆದರೆ ಈ ಸೃಷ್ಟಿ ಕಥನ ವಿಮುಖ ಚಲನೆಯ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಇದು ತಪ್ಪು. ಈ ಕಥನದ ರೂಪಾಂತರದ ಮೇಲೆ ಅನ್ಯಧರ್ಮದ ರಾಜಕಾರಣವಿದೆ. ಜೈನಧರ್ಮದ ಪ್ರಭಾವವೇ ಇದಕ್ಕೆ ಕಾರಣ ಎನ್ನುತ್ತಾರೆ” (ಚಂದ್ರಕಾಂತ ಬಿಜ್ಜರಗಿ, ಕುರುಬರ ಹೆಜ್ಜೆಗಳು). ಇದು ಕೇವಲ ಬಿಜ್ಜರಗಿ ಅವರ ಅನುಮಾನವಲ್ಲ. ಈ ಸೃಷ್ಟಿ ಕಥನಗಳನ್ನು ಅಧ್ಯಯನ ಮಾಡ ಹೊರಟ ಪ್ರತಿಯೊಬ್ಬರಲ್ಲೂ ಈ ಅನುಮಾನ ಕಾಡುತ್ತದೆ. ಇಂತಹ ಅನುಮಾನಗಳು ಬೇಕು. ಇವು ವಸ್ತುವನ್ನು ಹಲವು ಆಯಾಮಗಳಿಂದ ನೋಡುವ ದಾರಿಗಳಲ್ಲಿ ಕಲಿಸಿಕೊಡುತ್ತವೆ. ಆದರೆ ಅದನ್ನೇ ಸುತ್ತುಹಾಕುವುದು ಒಳಿತಲ್ಲ. ಏಕೆಂದರೆ ನಮ್ಮ ಮುಂದೆ ಅನೇಕ ಸವಾಲುಗಳಿವೆ. ಅಗಬೇಕಾದ ಕೆಲಸಗಳು ಹೆಚ್ಚಾಗಿವೆ. ಇಂತಹ ಅನೇಕ ಕಥನಗಳು ಕ್ಷೇತ್ರದಲ್ಲಿ ಜೀವಂತವಾಗಿವೆ. ಅವುಗಳನ್ನು ಸಂಗ್ರಹಿಸಿಲ್ಲ. ಸಂಗ್ರಹಿಸುವ ಕೆಲಸವನ್ನು ಮೊದಲು ಮಾಡಬೇಕು. ಆಗ ಕಥನದ ರೂಪಾಂತರವನ್ನು ಮತ್ತು ಕಥನದ ಮೇಳೆ ಆದ ‘ಸಂಸ್ಕೃತೀಕರಣ’ವನ್ನು ಅಥವಾ ಕಥನದ ಮೇಲೆ ಆದ ರಾಜಕಾರಣವನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯ. ಅದಕ್ಕಿಂತ ಮುಂಚೆ ಕಥನದ ವಸ್ತುವನ್ನು ಖಚಿತಪಡಿಸಿಕೊಳ್ಳಬೇಕು. ಅದನ್ನು ಕುಲಗಳ ಬದುಕಿನ ಅಥವಾ ಜೀವನ ವಿಧಾನದ ಹಿನ್ನೆಲೆಯಲ್ಲಿ ತಾತ್ವಿಕವಾಗಿ ವಿಶ್ಲೇಷಣೆ ಮಾಡಬೇಕು. ಹಾಗಾಗಿ ಮೊದಲು ಕಥನದ ಸಾಂಕೇತಿಕ ವಸ್ತುವಿನ ಕಡೆ ಗಮನಹರಿಸುವುದು ಒಳಿತು ಎನಿಸುತ್ತದೆ. ಈ ಕಥನದಲ್ಲಿ ವಸ್ತು ಖಚಿತವಾಗಿ ಒಂದು ಕುಟುಂಬ ಎರಡು ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಮುಂದುವರೆಸುವುದಕ್ಕಾಗಿ ವಿಂಗಡನೆಗೊಂಡ ಸಂದರ್ಭವನ್ನು ಹೇಳುತ್ತದೆ. ವೃತ್ತಿಗಳನ್ನು ಹಿಂಬಾಲಿಸಿದ ವ್ಯಕ್ತಿಗಳು ತಮ್ಮ ಅನನ್ಯತೆಗಾಗಿ ಬಳಸಿದ ಪರಿಕರಗಳ ವಿವರಗಳನ್ನು ಮುಂದಿಡುತ್ತದೆ. ಆ ವೃತ್ತಿ ಮತ್ತು ಪರಿಕರಗಳನ್ನು ಇಟ್ಟುಕೊಂಡು ಎರಡು ಕುಲಗಳ ಕುಲಮೂಲ ಅನನ್ಯತೆಯನ್ನು ಕಟ್ಟಬಹುದು.

* * *

ಹಿಂದೆ ಹೇಳಿದಂತೆ ಈ ಸೃಷ್ಟಿ ಮೂಲ ರೂಪಾತ್ಮಕ ಕಥನ ಒಂದು ಪ್ರಮೇಯವನ್ನು ಮಂಡಿಸುತ್ತದೆ. ಪ್ರಮೇಯದ ತಾತ್ವಿಕತೆಯನ್ನು ಸ್ಪಷ್ಟಗೊಳಿಸಬೇಕು. ಸ್ಪಷ್ಟತೆಗಾಗಿ ಕಾಣಿಸಿಕೊಂಡಿರುವ ಕೆಲವು ಚಿತ್ರಣಗಳನ್ನು ಅಧ್ಯಯನಕ್ಕಾಗಿ ಈ ರೀತಿ ಪಟ್ಟಿ ಮಾಡಿಕೊಳ್ಳಬಹುದು.

೧. ಕೃಷಿಯನ್ನು ಮಾಡುತ್ತಿದ್ದ ಆದಿಗೊಂಡನ ಅವಿಭಕ್ತ ಕುಟುಂಬದ ಸದಸ್ಯರಲ್ಲಿ ಒಬ್ಬನಾದ ಪದ್ಮಗೊಂಡ ಕುರಿಗಾರಿಕೆಯನ್ನು ಆರಂಭಿಸಿದ. ಕುರಿಗಾರಿಕೆಗಾಗಿ ಕುಟುಂಬದಿಂದ ಹೊರಬಂದು ಅಲೆಮಾರಿತನವನ್ನು ಆರಂಭಿಸುತ್ತಾನೆ. ಹಾಗಾಗಿ ಪದ್ಮಗೊಂಡ ಭೂಲೋಕದಲ್ಲಿ ಕುರಿಗಳನ್ನು ಕಂಡ ಮತ್ತು ಕಾಯ್ದ ಪ್ರಥಮ ವ್ಯಕ್ತಿಯಾಗಿ ಕಾಣಿಸುತ್ತಾನೆ.

೨. ಅಲೆಮಾರಿತನದ ಕುರಿಗಾರಿಕೆಯನ್ನು ಆರಂಬಿಸಿದ ಪದ್ಮಗೊಂಡ ಕಾಡಿನಲ್ಲಿ ವಾಸವಾಗಿದ್ದ ರಾಕ್ಷಸ ಕುಟುಂಬಕ್ಕೆ ಸೇರಿದ ಕನ್ಯೆಯನ್ನು ವಿವಾಹವಾಗುತ್ತಾರೆ. ಸಮುದಾಯದ ಕಥನಗಳಲ್ಲಿ ರಾಕ್ಷಸ ಪರಿಕಲ್ಪನೆ ‘ಕಾಡಿನ ಸಂಸ್ಕೃತಿ’ಯವರು ಎನ್ನುವ ಅರ್ಥದಲ್ಲಿ ಬಳಕೆಯಾಗಿರುವುದು ಹೆಚ್ಚು. ಇಲ್ಲಿ ಕಾಡಿನ ಮಹಿಳೆ ಅನ್ನುವುದನ್ನು ರಾಕ್ಷಸಿ ಎಂದು ಕರೆದುಕೊಂಡಿರುವುದಕ್ಕೆ ಸಾಧ್ಯವಿದೆ. ಇಲ್ಲಿ ವಿವಾಹವಾಗುವ ಸಂದರ್ಭ ಮುಖ್ಯ. ಏಕೆಂದರೆ ಆ ಸಂದರ್ಭದಲ್ಲಿ ವೈವಾಹಿಕ ಕಾರ್ಯಕ್ಕಾಗಿ ‘ಉಣ್ಣೆ’ಯನ್ನು ಬಳಸಲಾಗುತ್ತದೆ. ಆ ಬಳಕೆ ಪ್ರತ್ಯೇಕ ಕುಲದ ಸೃಷ್ಠಿಗೆ ಕಾರಣವಾಗುತ್ತದೆ. ಕುಟುಂಬ ವಿಂಗಡಣೆಗೆ ಕಾರಣವಾಗುತ್ತದೆ. “ನಿಮ್ಮ ವಿವಾಹದ ಸಂದರ್ಭದಲ್ಲಿ ಬಳಸುವ ಕಂಕಣಕ್ಕೆ ಉಣ್ಣೆಯನ್ನು ಬಳಸಿದ ಕಾರಣ ನೀವು ಉಣ್ಣೆ ಕಂಕಣದವರಾಗಿ ಬಾಳಿರಿ” ಎಂದು ಶಿವ-ಪಾರ್ವತಿಯರು ಹರಸುತ್ತಾರೆ.

೩. ಪದ್ಮಗೊಂಡನ ಇಬ್ಬರು ಹೆಂಡತಿಯರು ತಮ್ಮ ತಮ್ಮ ಮಕ್ಕಳನ್ನು ಎದುರುಗಡೆ ಇಟ್ಟುಕೊಂಡು ಪದ್ಮಗೊಂಡನ ಸಮ್ಮುಖದಲ್ಲಿಯೇ ಆತನ ಆಸ್ತಿಯನ್ನು ಒಪ್ಪಿತವಾದ ಮನಸ್ಸಿನಿಂದ ಹಂಚಿಕೊಳ್ಳುತ್ತಾರೆ. ಇಬ್ಬರ ಹೆಂಡತಿಯ ಮಕ್ಕಳಿಗೆ ಕುರಿಗಳು ಸಮಾನವಾಗಿ ಹಂಚಿಕೆ ಆಗುತ್ತವೆ. ಇದರಿಂದ ಎರಡು ಕಂಕಣದವರು ಕುರಿಗಾರಿಕೆಯನ್ನು ಆರಂಭಿಸಿದರು ಎನ್ನುವುದು ಖಚಿತವಾಗುತ್ತದೆ. ಈಗಲೂ ಎರಡು ಕಂಕಣದವರಲ್ಲೂ ಕುರಿಗಾರಿಕೆ ಇದೆ. ಈ ಪರಿಕಲ್ಪನೆ ನಮಗೆ ಮುಖ್ಯ.

ಆದರೆ ‘ಉಣ್ಣೆಕಂಕಣ’ದವರಿಗೆ ಪ್ರಧಾನ ವೃತ್ತಿಯಾದಂತೆ ಹತ್ತಿಕಂಕಣದವರಿಗೆ ಪ್ರಧಾನವೃತ್ತಿಯಾಗಿಲ್ಲ. ಉಣ್ಣೆಕಂಕಣದವರು ಹತ್ತಿಕಂಕಣದವರಿಗಿಂತ ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಕುರಿಗಾರಿಕೆ ಲಾಭದಾಯಕ ವೃತ್ತಿಯಾಗಿದೆ. ಈ ಕಾರಣಕ್ಕೆ ಇವತ್ತು ಸಹ ಹಲವು ಸಮುದಾಯದವರು ಈ ವೃತ್ತಿಯತ್ತ ಆಕರ್ಷಿತರಾಗುತ್ತಿದ್ದಾರೆ. ಕೃಷಿ (ಹತ್ತಿ) ಉಣ್ಣೆ (ಕುರಿಗಾರಿಕೆ) ವೃತ್ತಿಗಳು ಪ್ರತ್ಯೇಕಗೊಂಡ ಕಾಲದಲ್ಲೂ ಕುರಿಗಾರಿಕೆ ಲಾಭದಾಯಕ ವೃತ್ತಿ ಆಗಿತ್ತು. ಕುರಿ ಬಹು ಉಪಯೋಗಿ ವಸ್ತು ಹೌದು. ಹಾಲು, ಬೆಣ್ಣೆ, ತುಪ್ಪ, ಮಾಂಸ, ಉಣ್ಣೆ ಮತ್ತು ಚರ್ಮ ಬಳಕೆಯಾಗುತ್ತವೆ. ಜೊತೆಗೆ ಉಣ್ಣೆ ಬಳಕೆಯ ವಿಧಾನಗಳು ತಿಳಿದಷ್ಟು ಹತ್ತಿಯ ಬಳಕೆಯ ವಿಧಾನಗಳು ತಿಳಿದಿರಲಿಲ್ಲ. ಈ ಪರಿಕಲ್ಪನೆಯನ್ನು ೧೮೮೪ರಲ್ಲಿ ಮುಂಬಾಯಿ ಕರ್ನಾಟಕದಲ್ಲಿ ಕುರುಬರ ಬಗ್ಗೆ ಸಂಶೋಧನೆ ಕೈಗೊಂಡ ಜೇಮ್ಸ್‌ಕ್ಯಾಂಬೆಲ್ (James Campbell) ಅವರು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಜೇಮ್ಸ್ ಅವರ ಪ್ರಕಾರ ಉಣ್ಣೆ ಕಂಕಣದ ಕುರುಬರು ಹತ್ತಿ ಕಂಕಣದವರಿಗಿಂತ ಸುಧಾರಿಸಿದವರು. ಕುರಿ ಕಾಯುವುದನ್ನು ಬಿಟ್ಟು ನೇಕಾರಿಕೆಗೆ ತಿರುಗಿದ್ದರಿಂದ ಅವರು ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಸುಧಾರಣೆಗೊಂಡವರು. ಆದ್ದರಿಂದ ಊಣ್ಣೆಕಂಕಣದವರೇ ಹೆಚ್ಚಾಗಿ ರಾಜರಾಗಿದ್ದು ಇತಿಹಾಸ ಪುಟಗಳಿಂದ ತಿಳಿದುಬರುತ್ತದೆ. ಆದರೆ ಹತ್ತಿಕಂಕಣದವರು ಯಥಾವತ್ತಾಗಿ ಕುರಿಕಾಯುವ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎನ್ನುತ್ತಾರೆ. ಜೇಮ್ಸ್‌ಕ್ಯಾಂಬೆಲ್ ಅವರ ಈ ವಾದ ಸರಿಯಾಗಿದೆ.

ಚಳ್ಳಕೆರೆ, ರಾಯದುರ್ಗ, ಪಾವಗಡ, ಹಿರಿಯೂರು, ತಿಪಟೂರು, ಅರಸಿಕೆರೆ ಚಿಕ್ಕ ನಾಯಕನಳ್ಳಿ, ಹೊಸದುರ್ಗ, ತುರುವೇಕೆರೆ, ಅರಸಿಕೆರೆ ಸುತ್ತಮುತ್ತಲಿನ ಪ್ರದೇಶದ ಜನರು ಹೆಚ್ಚಾಗಿ ನೇಯ್ಗೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ವೈಜ್ಞಾನಿಕ ಮತ್ತು ಆರ್ಥಿಕ, ಸಾಮಾಜಿಕ ಕಾರಣಗಳಿವೆ. ಅವುಗಳನ್ನು ಹೀಗೆ ಊಹಿಸಬಹುದು. ಆದರೆ ಇವೆ ಅಂತಿಮ ಸತ್ಯಗಳಲ್ಲ. ಇದರ ಬಗ್ಗೆ ಇನ್ನೂ ಅಧ್ಯಯನಗಳಾಗಬೇಕು. ನೇಯ್ಗೆಯನ್ನು ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿರುವ ಚಳ್ಳಕೆರೆ, ಹಿರಿಯೂರು ಈ ಭಾಗದ ಪ್ರದೇಶವು ಭೌಗೋಳಿಕವಾಗಿ ಬೆಳಗಾವಿ, ಸೊಲ್ಲಾಪುರ, ಕೊಪ್ಪಳ, ರಾಯಚೂರು, ದಾವಣಗೆರೆ, ಹರಿಹರ ಪ್ರದೇಶಗಳಷ್ಟು ಗುರಿಗಾರಿಕೆಗೆ ಯೋಗ್ಯವಲ್ಲ. ಈಗಲೂ ಕರ್ನಾಟಕ, ಮಹಾರಾಷ್ಟ್ರ ಗಡಿನಾಡು ಪ್ರದೇಶದಿಂದ ಕುರಿಗಾರಿಕೆಗೆ ವಲಸೆ ಬರುವ ಕುರಿಗಾರರನ್ನು ನೋಡಬಹುದು. ಅವರು ಚಿತ್ರದುರ್ಗ, ಹರಿಹರ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳ ಪ್ರಾಂತ್ಯವನ್ನು ದಾಟಿ ಬರುವುದೇ ಇಲ್ಲ. ಜೊತೆಗೆ ದಕ್ಷಿಣ ಕರ್ನಾಟಕದಲ್ಲಿ ಕಂಬಳಿಯ ಬಳಕೆ ಹತ್ತಾಗಿತ್ತು. ಹೊರದೇಶಕ್ಕೆ ರಫ್ತು ಮಾಡುವುದಕ್ಕೆ ಅನುಕೂಲಕರವಾದ ಪ್ರದೇಶವು ಇದಾಗಿತ್ತು. ಹಡಗಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ವಿಶೇಷವಾಗಿ ಅರೇಬಿಯನ್ ರಾಷ್ಟ್ರಗಳಿಗೆ ರಫ್ತು ಮಾಡುವುದಕ್ಕೆ ಬಂದರುಗಳು ಸಿಗುತ್ತಿದ್ದವು. ಅರೇಬಿಯನ್ ರಾಷ್ಟ್ರಗಳಲ್ಲಿ ಕಂಬಳಿಯ ಬಳಕೆ ಹೆಚ್ಚಾಗಿತ್ತು. ಆ ಕಾರಣಕ್ಕಾಗಿ ಕುರುಬರಿಗೂ ಮತ್ತು ‘ಮುಸ್ಲಿಂ’ರಿಗೂ ಒಂದು ಬರೆಯ ಸಂಬಂಧ ಬೆಳೆಯಿತು. ಸೂಫಿಗಳು ಉಣ್ಣೆಗಾಗಿಯೆ ಅಲೆಮಾರಿ ಕುರಿಗಾರರ ಜೊತೆ ಅಲೆಮಾರಿಗಳಾಗಿ ತಿರುಗಾಡುತ್ತಿದ್ದರು. ನಾಥರು ಇದಕ್ಕೆ ಹೊರತಾಗಿಲ್ಲ.

ಎರಡನೆಯ ಕಾರಣವೆಂದರೆ ನೇಯ್ಗೆಯ ಹಂತವನ್ನು ತಲುಪಿದ ಜನರೇನು ಇದ್ದರಲ್ಲ ಆ ವರ್ಗ ಈ ಪ್ರದೇಶದ ಕಡೆಗೆ ಹೆಚ್ಚಾಗಿ ವಲಸೆ ಬಂದಿರುವುದಕ್ಕೆ ಸಾಧ್ಯವಿದೆ. ಬೇಡಿಕೆ ಮತ್ತು ಮಾರಾಟದ ಅನುಕೂಲಗಳು ಹೆಚ್ಚಾಗಿದ್ದ ಕಾರಣ ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರಬಹುದು. ದಕ್ಷಿಣ ಕರ್ನಾಟಕದ ಕುರುಬರು ಉತ್ತರ ಕರ್ನಾಟಕದಿಂದ ವಲಸೆ ಬಂದವರೆಂದು ಹಲವು ಕಥನಗಳಿಂದ ತಿಳಿದುಬರುತ್ತವೆ. ನಮ್ಮ ಹಿರಿಯರು ವಿಜಯನಗರ ಸಾಮ್ರಾಜ್ಯದ ಪತನದ ನಂತರ ವಲಸೆ ಬಂದು ಇಲ್ಲಿ ನೆಲೆಸಿದ್ದಾರೆ ಎಂದು ಹೇಳುವ, ಮುಸ್ಲಿಂರ ಹಿಂದೆ ತಾಳಲಾರದೆ ಗ್ರಾಮದ ಕುರುಬರೆಲ್ಲರೂ ಸೇರಿ ತಮ್ಮ ದೈವಗಳನ್ನು ಬಿಟ್ಟಿಯಲ್ಲಿ ಹಾಕಿಕೊಂಡು ಬಂದು ಇಲ್ಲಿ ನೆಲೆಸಿದ್ದೇವೆಂದು ಹೇಳುವ ಹಲವು ಗ್ರಾಮ ಮೂಲ ಕಥನಗಳು ಸಿಗುತ್ತವೆ. ಇವರು ಆರಾಧನೆ ಮಾಡುವ ದೈವಗಳ ಮೂಲಕ ಹೇಳಿದಾಗ ಕರ್ನಾಟಕ ಮಹಾರಾಷ್ಟ್ರದ ಗಡಿನಾಡು ಪ್ರದೇಶವೆಂದು ಹೇಳುತ್ತಾರೆ. ಶಂಬಾ ಜೋಶಿ ಅವರು ಈಗಿನ ಕರ್ನಾಟಕ-ಮಹಾರಾಷ್ಟ್ರ ಗಡಿನಾಡು ಪ್ರದೇಶವನ್ನು ಕುರುಬರ ಮೂಲ ನೆಲೆಯೆಂದು ಗುರುತಿಸಿದ್ದಾರೆ. ಕುರುಬರ ಕುಲಗುರು ‘ಗುರು ಒಡೆಯ’ ವರ್ಗ ಜನ್ಮ ತಾಳಿದ್ದು ಬಿಜಾಪುರ ಜಿ. ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದಲ್ಲಿ. ಈ ಗುರುವರ್ಗ ತುಂಬಾ ತಡವಾಗಿ ದಕ್ಷಿಣ ಕರ್ನಾಟಕಕ್ಕೆ ವಿಸ್ತರಣೆಯಾಯಿತು ಎಂಬುದು ಆಧಾರಗಳಿಂದ ತಿಳಿದುಬರುತ್ತದೆ.

ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪ ಮಾಡಲೇಬೇಕು. ‘ಕುರುಬ ಕುಲ ಗುರುವರ್ಗ’ ವನ್ನು ಹುಟ್ಟು ಹಾಕಿದ ರೇವಣಸಿದ್ಧನಿಗೆ ಅರ್ಪಿಸುವ ‘ಕಂತೆ ಸೇವೆ’ ನೇಯ್ಗೆ ಸಂಸ್ಕೃತಿಗೆ ಸಂಬಂಧಿಸಿದ್ದು. ಕಂತೆ ಸೇವೆ ಆಚರಣೆಯಲ್ಲಿ ನೇಯುವ ವಿಧಾನವನ್ನು ಒಂದು ಆಚರಣೆಯನ್ನಾಗಿ ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ಆಚರಣೆ ಇಲ್ಲ. ತಮ್ಮ ಆರಾಧ್ಯ ದೈವಗಳಾದ ಬೀರಪ್ಪ, ಮಾಳಿಂಗರಾಯ, ಇಟ್ಟಪ್ಪ (ವಿಠೋಬ)ಅಮೋಘಸಿದ್ಧ, ಮಾಯವ್ವ ಮುಂತಾದ ದೈವಗಳಿಗೆ ‘ಉಣ್ಣೆ’ಯನ್ನೇ ಅರ್ಪಿಸುತ್ತಾರೆ. ಪಟ್ಟಣಕಡೋಲಿಯ ಇಟ್ಟಪ್ಪ, ಹುಲಜಂತಿ ಮಾಳಿಂಗರಾಯ, ಚಿಂಚಲಿ ಮಾಯವ್ವನ ಜಾತ್ರೆಯಲ್ಲಿ ನೆರೆದ ಭಕ್ತರು ಸಾವಿರಾರು ಕೆ.ಜಿ. ಉಣ್ಣೆಯನ್ನು ಅರ್ಪಿಸುತ್ತಾರೆ. ಹಾರಿಸಿದ ಉಣ್ಣೆಯನ್ನು ಮನೆಗೆ ತೆಗೆದುಕೊಂಡು ಹೋಗಿ ದೈವವೆಂದು ಪೂಜಿಸುತ್ತಾರೆ. ರೋಗ-ರುಜಿನಗಳ ಪರಿಹಾರಕ್ಕೆ ಬಳಸುತ್ತಾರೆ. ಇದು ‘ಉಣ್ಣೆ ಸಂಸ್ಕೃತಿ’ಯನ್ನು ಪ್ರತಿಬಿಂಬಿಸಿದರೆ ಕಂತೆ ಸೇವೆ ಆಚರಣೆ ‘ನೇಯ್ಗೆ ಸಂಸ್ಕೃತಿ’ಯನ್ನು ಪ್ರತಿಬಿಂಬಿಸುತ್ತದೆ. ಕಂತೆ ಉಣ್ಣೆಯ ಮುಂದುವರೆದ ಭಾಗ. ಇದರಿಂದ ದೈವಗಳ ಪ್ರಾಚೀನತೆಯನ್ನು ಗುರುತಿಸುವುದಕ್ಕೆ ಸಾಧ್ಯವಿದೆ.

ಇವತ್ತು ಉಣ್ಣೆಯನ್ನು ಅರ್ಪಿಸುತ್ತಿರುವ ಬೀರಪ್ಪ, ಮಾಳಿಂಗರಾಯ, ಮಾಯವ್ವ, ಇಟ್ಟಪ್ಪ ಮುಂತಾದ ಸಾಂಸ್ಕೃತಿಕ ವೀರರು ರೇವಣಸಿದ್ಧ, ಸಿದ್ಧರಾಮರಿಗಿಂತ ಪ್ರಾಚೀನರು. ಈ ದೈವಗಳನ್ನು ಎರಡು ಕಂಕಣದವರು ಕುಲದೈವಗಳನ್ನಾಗಿ ಮಾಡಿಕೊಂಡು ಆರಾಧನೆ ಮಾಡುತ್ತಿದ್ದಾರೆ. ಇವರ ಕಾಲಘಟ್ಟದಲ್ಲಿ ಕುಲ ವಿಂಗಡಣೆ ಅಷ್ಟೊಂದು ಮಹತ್ವ ಪಡೆದಿರಲಿಲ್ಲವೆನಿಸುತ್ತದೆ. ರೇವಣಸಿದ್ಧನ ಕಾಲಘಟ್ಟಕ್ಕೆ ಕುಲ ವಿಂಗಡಣೆ ಸ್ಪಷ್ಟ ರೂಪ ಪಡೆಯಿತು. ಎರಡು ಕಂಕಣಗಳಲ್ಲಿರುವ ದೈವಗಳ ಆರಾಧನಾ ವಿಧಾನವನ್ನು ಎಸ್.ಜಿ. ಸಿದ್ಧರಾಮಯ್ಯ ಅವರು ಚೆನ್ನಾಗಿ ಗುರುತಿಸಿದ್ದಾರೆ. ಹತ್ತಿಕಂಕಣದಲ್ಲಿಯೂ ಬೀರೇಶ್ವರ, ಮಲ್ಲೇಶ್ವರ, ಮೈಲಾರಲಿಂಗ, ಕರಿಸಿದ್ದೇಶ್ವರ, ಗಂಗರಾಯ, ಆಸಬೇಡಪ್ಪ, ಯಲ್ಲಮ್ಮ, ಮುಂತಾದ ದೇವರುಗಳಿಗೆ ನಡೆದುಕೊಳ್ಳುವ ಒಕ್ಕಲುಗಳಿವೆ. ಆದರೆ ಉಣ್ಣೆ ಕಂಕಣದ ಕುರುಬರಿಗೆ ರೇವಣಸಿದ್ದೇಶ್ವರ ಪ್ರಧಾನ ದೈವವಾದಂತೆ ಇವರಿಗೆ ಆಗಿಲ್ಲ. ಇವರಲ್ಲಿ ಕೆಲವರಿಗೆ ರೇವಣಸಿದ್ಧೇಶ್ವರ ಬೇರೆ ದೈವಗಳಂತೆ ಮನೆದೈವಾಗಿದ್ದಾನೆ ಅಷ್ಟೆ. ಹತ್ತಿಕಂಕಣದ ಕುರುಬರಿಗೆ ಒಡೆಯರುಗಳು ಗುರುಗಳಾದರೂ ಮನೆಯ ಸಾಂಸ್ಕೃತಿಕ ಆಚರಣೆಗಳಲ್ಲಿ ಪುರೋಹಿತರಂತೆ ಭಾಗಿಯಾಗುವ ನಿಯಮವಿಲ್ಲ. ಇವರಿಗೆ ಮದುವೆಯ ಸಂದರ್ಭದಲ್ಲಿ ಗುರುವಿನ ಎಲೆಯನ್ನು ಮಾತ್ರ ಕೊಡುತ್ತಾರೆ. ಕೆಲವರು ಮನೆಗೆ ಕರೆದುಕೊಂಡು ಹೋಗಿ ಬಟ್ಟೆ ಬರಿಯನ್ನು ಕೂಡ ‘ಗುರುವಿಗೆ’ ಕೊಡುತ್ತಾರೆ. ಆಗ ರೊಕ್ಕವನ್ನು ದಕ್ಷಿಣೆಯಾಗಿ ಕೊಡುತ್ತಾರೆ. ಇದೇನಿದ್ದರೂ ಖುಷಿಗೆ ಮಾಡುವ ಸತ್ಕಾರವೇ ಹೊರದು ನಿಯಮ ಪಾಲನೆ ಅಲ್ಲ. ‘ಗುರುವಿನ ಎಲೆ’ಯನ್ನು ಕೊಡುವುದು ಮಾತ್ರ ನಿಯಮ ರೂಢಿ. ಸಿಂಧನೂರು, ರಾಯಚೂರು ಪ್ರದೇಶದಲ್ಲಿ ಗಮನಿಸಿದಾಗ ಇಲ್ಲಿನ ಹತ್ತಿಕಂಕಣದ ಕುರುಬರು ತಮ್ಮ ಮದುವೆ ಕಾರ್ಯಕ್ಕೆ ವೀರಶೈವ ಜಂಗಮರು ಅಥವಾ ಬ್ರಾಹ್ಮಣ ಆಚಾರಿಗಳು (ಪುರೋಹಿತರು) ಬರುತ್ತಾರೆ (ಪಾವನ). ಎಸ್. ಜಿ. ಸಿದ್ಧರಾಮಯ್ಯ ಅವರು ‘ಹತ್ತಿಕಂಕಣದ ಕುರುಬರಲ್ಲಿ ಮದುವೆಯ ಆಚರಣೆ’ ಎನ್ನುವ ಲೇಖನವನ್ನು ಬರೆದ ಸಂದರ್ಭದಲ್ಲಿ ‘ಸಿದ್ಧಮಂಕ ಚರಿತೆ’ ಮತ್ತು ‘ತಗರ ಪವಾಡ’ ಪಠ್ಯಗಳು ಸಂಗ್ರಹವಾಗಿರಲಿಲ್ಲ. ಅವರಿಗೆ ಈ ಎರಡು ಪಠ್ಯಗಳು ಸಿಕ್ಕಿದ್ದರೆ ಅವರ ಆಲೋಚನೆಗಳು ಬೇರೆ ಆಗಿರುತ್ತಿದ್ದವು.

ಸಿದ್ಧಮಂಕ ಚರಿತೆ, ತಗರ ಪವಾಡ ಕೃಷಿಗಳ ಕಥಾವಸ್ತು ಮತ್ತು ಕಂತೆಸೇವೆ ಆಚರಣೆಯ ಸಂದರ್ಭದಲ್ಲಿ ಮಹಿಳೆಯರು ಹಾಡುವ ಜನಪದ ಗೀತೆಗಳ ಕಥಾವಸ್ತುವನ್ನು ಗಮನಿಸಿದಾಗ ಕಲ್ಯಾಣದಲ್ಲಿ ಮಾಡಿದ ತಗರ ಪವಾಡ ‘ಉಣ್ಣೆ ಸಂಸ್ಕೃತಿ’ಯನ್ನು ಅಥವಾ ಕುರಿಗಾರಿಕೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಮಾಡಿದ ಹೋರಾಟದಂತೆ ಕಾಣಿಸುತ್ತದೆ. ಗುರು ಒಡೆಯರುಗಳು ಉಣ್ಣೆ ಸಂಸ್ಕೃತಿಯನ್ನು ಜೀವಂತಗೊಳಿಸುವುದಕ್ಕೆ ಸೃಷ್ಟಿಸಿರುವ ವಕ್ತಾರತಂತೆ ಕಾಣಿಸುತ್ತದೆ. ಒಡೆಯರುಗಳ ನಂತರದಲ್ಲಿ ಉಣ್ಣೆ ಸಂಸ್ಕೃತಿಯನ್ನು ಸಂಸ್ಕೃತೀಕರಣಗೊಳಿಸಿದರು. ಆ ರಾಜಕಾರದ ಚರ್ಚೆ ಬೇರೆ. ಕುರುಬರು ಕಲ್ಯಾಣದಲ್ಲಿ ಕುರಿಮಾಂಸವನ್ನು ಹೊತ್ತು ಮಾರಿದರೆನ್ನುವ ಕಾರಣಕ್ಕೆ ಕಲ್ಯಾದಿಂದ ಹೊರಹಾಕಿದರು. ಈ ಬಹಿಷ್ಕಾರವನ್ನು ರಹಮತ್ ತರೀಕೆರೆ ಅವರು ‘ಆಹಾರ ಸಂಸ್ಕೃತಿ’ ಮೇಲೆ ಹೇರಿದ ಬಹಿಷ್ಕಾರವೆಂದು ಕರೆಯುತ್ತಾರೆ. ಇದನ್ನು ಸ್ವಲ್ಪ ವಿಸ್ತರಿಸಿಕೊಳ್ಳಬೇಕು. ಆಹಾರಕ್ಕೂ, ವೃತ್ತಿಗೂ ಮತ್ತು ಆರ್ಥಿಕತೆಗೂ ಸಂಬಂಧಿಸಿದೆ. ಹಾಗಾಗಿ ಇದನ್ನು ವೃತ್ತಿ ಮೇಲೆ ಹೇರಿದ ಬಹಿಷ್ಕಾರವೆಂದು, ಆರ್ಥಿಕ ಅಭಿವೃದ್ಧಿಯ ಮೇಲೆ ಹೇರಿದ ಬಹಿಷ್ಕಾರವೆಂದೂ ಕರೆಯಬಹುದು. ಆರ್ಥಿಕತೆಯನ್ನು ವಿಮುಖಗೊಳಿಸಿ ಸಮುದಾಯಗಳನ್ನು ಅಧೀನರನ್ನಾಗಿ ಮಾಡಿಕೊಳ್ಳುವ ತಂತ್ರಗಾರಿಕೆ ಇದು. ಆ ಕಾರಣಕ್ಕೆ ಲಿಂಗಾಯತ ಧರ್ಮ ಕಲ್ಯಾಣದ ರಾಜಪ್ರಭುತ್ವವನ್ನು ಬಳಸಿಕೊಂಡು ಹಲವು ಪಶುಪಾಲನ ಸಮುದಾಯಗಳ ಮೇಲೆ ತನ್ನ ಧಾರ್ಮಿಕ ರಾಜಕಾರಣವನ್ನು ಪ್ರಯೋಗ ಮಾಡಿತು. ಈ ರಾಜಕಾರಣಕ್ಕೆ ಬಲಿಯಾದ ಸಮುದಾಯಗಳು ತೀವ್ರವಾದ ಪ್ರತಿರೋಧ ಮಾಡಿದವು. ಜಯಶೀಲವಾದವು. ತಮ್ಮ ಸಾಂಸ್ಕೃತಿಕ ಅನನ್ಯತೆಯೇ ಶ್ರೇಷ್ಟವೆಂದು ಪ್ರತಿಪಾದನೆ ಮಾಡಿದವು. ಆದರೂ ತಮ್ಮ ಸಂಸ್ಕೃತಿಯನ್ನು ಯಥಾವತ್ತಾಗಿ ಮುಂದುವರೆಸುವುದಕ್ಕೆ ಅಥವಾ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಲಿಂಗಾಯತ ಧರ್ಮದ ಸಾಂಸ್ಕೃತಿಕ ರಾಜಕಾರಣಕ್ಕೆ ಬಲಿಯಾಗಿ ಸಂಸ್ಕೃತೀಕರಣಗೊಂಡವು. ಹಾಲುಮತ ಸಮುದಾಯವು ಇದಕ್ಕೆ ಹೊರತಾಗಿಲ್ಲ. ಕಲ್ಯಾಣದಿಂದ ಹಾಕಿದ ಬಹಿಷ್ಕಾರವನ್ನು ಮರುಳಮಂಕ, ಶಾಂತಮುತ್ತಯ್ಯ, ರೇವಣಸಿದ್ಧ, ಸಿದ್ಧರಾಮ ಮುಂತಾದ ಸಾಂಸ್ಕೃತಿಕ ನಾಯಕರೆಲ್ಲರೂ ಸೇರಿ ಪ್ರತಿರೋಧ ಮಾಡಿದರು. ಒಂದು ಸಮುದಾಯದ ಹಲವು ಸಾಂಸ್ಕೃತಿಕ ನಾಯಕರೆಲ್ಲರೂ ಒಟ್ಟಿಗೆ ಸೇರಿ ಕಲ್ಯಾಣದ ಬಹಿಷ್ಕಾರವನ್ನು ಪ್ರತಿರೋಧಿಸಿದ ವಿವರಗಳು ಬೇರೆ ಸಮುದಾಯಗಳಲ್ಲಿ ಸಿಗುವುದಿಲ್ಲ. ಇದು ಹಾಲುಮತ ಸಮುದಾಯದ ವಿಶೇಷತೆ. ಈ ಸಮಷ್ಠಿ ಹೋರಾಟ ನಂತರದ ಕಾಲಮಾನದಲ್ಲಿ ಗುಂಪುಗಾರಿಕೆಯನ್ನು ಸೃಷ್ಟಿಸಿತು. ಒಡೆಯರಲ್ಲಿ ಕಾಣಿಸುವ ಮೂರು ಪಂಗಡಗಳು ವಿಂಗಡಣೆಗೊಂಡ ಚಿತ್ರಣಗಳಾಗಿ ಕಾಣಿಸುತ್ತವೆ. ಇವುಗಳು ಹಾಲುಮತದ ಗುರು ಪರಂಪರೆಯಲ್ಲಿದ್ದ ಆಂತರಿಕ ಸಂಘರ್ಷವನ್ನು ಪ್ರತಿಬಿಂಬಿಸುತ್ತವೆ.

ಒಡೆಯ ವರ್ಗ ಸೃಷ್ಟಿಯಾದ ನಂತರ ಉಣ್ಣೆ ಸಂಸ್ಕೃತಿಯಲ್ಲಿ ಅನೇಕ ಪಲ್ಲಟಗಳಾದವು. ‘ಕಂಬಳಿ’ (ನೇಯ್ಗೆ) ಸಂಸ್ಕೃತಿ ಪ್ರಧಾನಧಾರೆಗೆ ಬಂದಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಉಳಿದ ಸಮುದಾಯಗಳ ಮೇಲೆ ಹಿಡಿತ ಸಾಧಿಸಿತು. ಈ ಮನಸ್ಥಿತಿ ರೂಢಿಗತವಾದ ಕಾರಣಕ್ಕಾಗಿಯೇ ಉಣ್ಣೆ ಕಂಕಣದವರು ಹೆಚ್ಚಾಗಿ ರಾಜರುಗಳಾದರು. ಕಂಬಳಿ ನೇಯುವುದು ತಾಂತ್ರಿಕ ಕೆಲಸವಾಗಿತ್ತು. ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಐಗಳು ತಾಂತ್ರಿಕೇತರ ಸಮುದಾಯ ಅಥವಾ ವರ್ಗದ ಮೇಲೆ ಹಿಡಿತ ಸಾಧಿಸಿರುವುದು ಚರಿತ್ರೆಯುದ್ದಕ್ಕೂ ಕಾಣಬಹುದು. ಕಂಬಳಿಯಲ್ಲಿ ವಿಶೇಷವಾಗಿ ‘ಬಿಳಿ ಕಂಬಳಿ’ ಪ್ರಧಾನಧಾರೆಗೆ ಬಂದಿತು. ಬಿಳಿ ಶ್ರೇಷ್ಟ ಕಪ್ಪು ಕನಿಷ್ಟ ಎನ್ನುವ ಪರಿಕಲ್ಪನೆಯಲ್ಲಿ ಇವತ್ತಿಗೂ ಜೀವಂತವಾಗಿದೆ. ಗುರು ಒಡೆಯರು ಅಥವಾ ರೇವಣಸಿದ್ಧ. ಸಿದ್ಧರಾಮ ಶಾಂತಮುತ್ತಯ್ಯನ ಸಂಸ್ಕೃತಿಯವರು ಮಾತ್ರ ಬಿಳಿ ಕಂಬಳಿಯನ್ನು ಬಳಸಬೇಕು. ಗೊರವರು, ಪೂಜಾರಿಗಳು, ದಳವಾಯಿಗಳು ಅಥವಾ ಮೈಲಾರಲಿಂಗ ಬೀರಪ್ಪ ಮಾಳಿಂಗರಾಯ ಬುಳ್ಳಪ್ಪ ಮುಂತಾದ ದೈವಗಳ ಆಚರಣಾತ್ಮಕ ಸಂದರ್ಭಗಳಲ್ಲಿ ಕಪ್ಪು ಕಂಬಳಿಯನ್ನು ಬಳಸಬೇಕು ಎನ್ನುವ ನಿಯಮಗಳು ಜಾರಿಗೆ ಬಂದವು. ಮುದ್ದೇಬಿಹಾಳ್ ತಾಲೂಕು ಸರೂರು ಗ್ರಾಮದ ಒಡೆಯರು ಆಚರಣೆಗಳ ಸಂದರ್ಭದಲ್ಲಿ ಬಿಳಿ ಕಂಬಳಿಯನ್ನು ಬಳಸುತ್ತಾರೆ. ಅದನ್ನು ಧರಿಸಿ ನರ್ತನ ಮಡುತ್ತಾರೆ. ಧರಿಸಿ ಮರಗಳನ್ನು ಮೈಲಾರಲಿಂಗನ ಗೊರವರು ಹೇಳಿಕೆಗಳನ್ನು ಹೇಳುವಾಗ ಕಪ್ಪು ಕಂಬಳಿಯನ್ನು ಬಳಸುತ್ತಾರೆ. ಇದು ಅಲ್ಲದೇ ಕಪ್ಪು, ಬಿಳಿ ಕಂಬಳಿಯಲ್ಲೂ ವರ್ಗೀಕರಣವಿದೆ. ಪಟ್ಟಿ (ಏನಿನ) ಕಂಬಳಿಗಳನ್ನು ಬಳಸಲಾಗುತ್ತದೆ. ಪಟ್ಟಿಗಳನ್ನು ಅವರನ್ನು ಗುರುತಿಸಿಕೊಳ್ಳುವ ಅನನ್ಯತೆ ಸಂಕೇತಗಳಾಗಿ ಬಳಸಿಕೊಳ್ಳುವುದಕ್ಕೆ ಆರಂಭಿಸಿದರು. ರೇವಣಸಿದ್ಧನ ಒಡೆಯರುಗಳು ಒಂದು ಬರೆಯ ಪಟ್ಟಿ ಕಂಬಳಿಯನ್ನು ಬಳಸಿದರೆ ಸಿದ್ಧರಾಮ, ಅಮೋಘಸಿದ್ಧ ಒಡೆಯರು ಮತ್ತೊಂದು ಬಗೆಯ ಪಟ್ಟಿ ಕಂಬಳಿಗಳನ್ನು ಬಳಸುತ್ತಿದ್ದಾರೆ. ಈ ನಿಯಮಗಳು ಕಾನೂನಿನಂತೆ ಬಳಕೆಯಲ್ಲಿವೆ. ಯಾರು ಮೀರುವುದಿಲ್ಲ. ಮೀರಿ ಬಳಿಸಿದರೆ ನಮಗೆ, ನಮ್ಮ ಮನೆತನಕ್ಕೆ ಒಳಿತಾಗುವುದಿಲ್ಲ ಎನ್ನುವ ನಂಬಿಕೆ ಇವರಲ್ಲಿದೆ. ಇವು ಸೃಷ್ಟಿಕೃರ್ತ ನಿಯಮಗಳೇ ಹೊರತು ಇದರಲ್ಲಿ ರಾಜಕಾರಣವಿದೆ. ಈ ಬಗೆಯ ಬಳಕೆಯ ವಿಧಾನದಲ್ಲಿ ಹಾಲುಮತ ಸಮುದಾಯದ ಕುಲ ತಾರತಮ್ಯದಂತೆ, ವರ್ಗ ತಾರತಮ್ಯದಂತೆ ಕಾಣಿಸುತ್ತದೆ. ಹಾಗಾಗಿ ಉಣ್ಣೆ ಕಂಕಣದವರಲ್ಲಾದ ಸಾಂಸ್ಕೃತಿಕ ಪಲ್ಲಟವನ್ನು ಅಥವಾ ಸಂಸ್ಕೃತೀಕರಣವನ್ನು ಅಧ್ಯಯನ ಮಾಡುವುದಕ್ಕೆ ‘ಕಂಬಳಿ ಸಂಸ್ಕೃತಿ’ಯನ್ನು ಸೈದ್ಧಾಂತಿಕವಾಗಿ ಅಧ್ಯಯನ ಮಾಡಬೇಕು.

* * *

ವೃತ್ತಿಯನ್ನು ಕೇಂದ್ರವಾಗಿಟ್ಟುಕೊಂಡು ವಿಂಗಡಣೆಗೊಂಡ ಈ ಕುಟುಂಬ ಜಾತಿ ರೂಪವಾಗಿ ಪರಿವರ್ತನೆಗೊಂಡಿತು. ಭಾರತದ ಹಲವು ಸಮುದಾಯಗಳು ಜಾತಿಯತೆಗೆ ತಿರಿಗಿರುವುದು ಈ ಹಿನ್ನೆಲೆಯಲ್ಲಿಯೇ. ಬುಡಕಟ್ಟು ಸಮುದಾಯಗಳು ಜಾತಿಗಳಾಗಿ ರೂಪಾಂತರಗೊಂಡಿರುವ ವಿಧಾನವನ್ನು ಡಾ. ಮೊಗಳ್ಳಿ ಗಣೇಶ್ ಅವರು ‘ಬುಡಕಟ್ಟು ಸಮುದಾಯಗಳ ತಾತ್ವಿಕ ರೂಪಾಂತರ’ವೆಂದು ಕರೆಯುತ್ತಾರೆ. ‘ಹತ್ತಿಕಂಕಣ’ ಮತ್ತು ‘ಉಣ್ಣೆ ಕಂಕಣ’ ಜಾತಿಯತೆ ಪರಿಕಲ್ಪನೆಗೆ ರೂಪಾಂತರಗೊಂಡ ನಂತರ ಹಲವು ಪಲ್ಲಡಗಳಾದವು. ವೈವಾಹಿತ ಸಂಬಂಧಕ್ಕೆ ನಿಷೇಧವನ್ನು ಹಾಕಿಕೊಮಡವು. ತಮ್ಮ ತಮ್ಮ ಅನನ್ಯತೆಯನ್ನು, ವೃತ್ತಿಯನ್ನು ಸ್ಥಾಪಿಸುವುದಕ್ಕೆ ಮತ್ತು ಕಾಪಾಡಿಕೊಳ್ಳುವುದಕ್ಕೆ ಹೋರಾಡ ಮಾಡಿದವು. ಈ ಕಾರಣಕ್ಕಾಗಿ ಒಂದು ಮತ್ತೊಂದರ ಮೇಲೆ ಯಜಮಾನಿಕೆಯನ್ನು ಸ್ಥಾಪಿಸುವುದಕ್ಕೆ ಆರಂಭಿಸಿದವು. ಈಗಿನ ವಿಜಾಪುರ ಜಿಲ್ಲೆ ಬಿಜ್ಜರಗಿ ಗ್ರಾಮದ ಸ್ಥಳದಲ್ಲಿ ಬೀರಪ್ಪನ ಸಾಕು ಶಿಷ್ಯನಾದ ಮಾಳಿಂಗರಾಯ ಗಾಣಿಗರ ಮಲ್ಲಪ್ಪನೊಂದಿಗೆ ಮಾಡಿದ ಸಂಘರ್ಷ ಕೃಷಿ ಮತ್ತು ಪಶುಪಾಲಕ (ಕುರಿಗಾರ)ರ ನಡುವೆ ನಡೆದ ಸಂಘರ್ಷವೇ ಸರಿ. ಮಾಳಿಂಗರಾಯ, ಮಲ್ಲಪ್ಪ ಬೆಳೆದ ಬೆಳೆಗಳಿಗೆ ಕುರಿಗಳನ್ನು ಬಿಟ್ಟು ಮೇಯಿಸಿ ಹಾಳು ಮಾಡುತ್ತಾವೆ. ಸೋಲಿಸಿ ತನ್ನ ಒಕ್ಕಲನ್ನಾಗಿ ಮಾಡಿಕೊಳ್ಳುತ್ತಾನೆ. ಪಶುಪಾಲಕರಲ್ಲಿ ಆಂತರಿಕ ಸಂಘರ್ಷಗಳು ಆರಂಭವಾದವು. ದನಗಾರ ಮತ್ತು ಕುರಿಗಾರರಲ್ಲಿ ಸಂಘರ್ಷಗಳು ಆರಂಭವಾದವು ಡಿ.ಡಿ. ಕೊಸಂಬಿಯವರು Myth and Reelity ಕೃತಿಯಲ್ಲಿ ಈ ಪರಿಕಲ್ಪನೆಯನ್ನು ಕುರಿತು ಚರ್ಚೆ ಮಾಡುತ್ತಾರೆ. ಪಶುಪಾಲನೆಗಳ ವಿಂಗಡಣೆಯಿಂದಲೇ ಹಟ್ಟಿಗಳ ಯಜಮಾನಿಕೆ ಆರಮಭವಾಯಿತು ಎನ್ನುವುದು ಇವರ ವಾದ. ಇವತ್ತು ಚಿತ್ರದುರ್ಗ ಪರಿಸರದಲ್ಲಿ ಕಾಣಿಸುವ ‘ಕಾಡುಗೊಲ್ಲ’ ಮತ್ತು ‘ಕುರುಬರ ಹಟ್ಟಿಗಳು’ ಒಂದೇ ಕುಲಗಳು ಅಥವಾ ಒಂದು ಸಮುದಾಯ ಮಾಡಿಕೊಂಡಿರುವ ವೃತ್ತಿ ವಿಂಗಣೆಯಂತೆ ಕಾಣಿಸುತ್ತದೆ. ಸಮುದಾಯಗಳು ಈ ಬಗೆಯಲ್ಲಿ ವಿಂಗಡಣೆಗೊಂಡಿರುವ ವಿಧಾನವನ್ನು ವಿದ್ವಾಂಸರು ಆರ್ಥಿಕ ಛಿದ್ರೀಕರಣವೆಂದು ಕರೆಯುತ್ತಾರೆ. ಹತ್ತಿಕಂಕಣ ಮತ್ತು ಉಣ್ಣೆಕಂಕಣ ಆರ್ಥಿಕವಾಗಿ ಛಿದ್ರೀಕರಣಗೊಂಡ ರೂಪಕಗಳೇ ಸರಿ. ಇದನ್ನು ಹಾಲುಮತ ಸಮುದಾಯದಲ್ಲಿ ಆರ್ಥಿಕ ಛಿದ್ರೀಕರಣಗೊಂಡ ಮೊದಲ ಹಂತವೆಂದು ಕರೆಯಬಹುದು. ಹಾಗಾಗಿ ಈ ಕುಲಗಳ ಸೃಷ್ಠಿಯನ್ನು ಸಾಮಾಜಿಕ, ರಾಜಕೀಯ, ಧಾರ್ಮಿಕ ಹಿನ್ನೆಲೆಗಳ ಜೊತೆಗೆ ಆರ್ಥಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕು. ಇದಕ್ಕೆ ಸಾಂಸ್ಕೃತಿಕ ವೀರರ ಆಚರಣೆಗಳನ್ನು ಮುಖ್ಯವಾಗಿಟ್ಟಕೊಳ್ಳಬೇಕು.

ಏಕೆಂದರೆ ಹುಲಜಂತಿ ಮಾಳಿಂಗರಾಯನ ಜಾತ್ರೆ, ಓರಂಗಲ್ಲಿನ ಯಲ್ಲಮ್ಮನ ಜಾತ್ರೆ. ಅರಕೇರಿ ಅಮೋಘಸಿದ್ಧನ ಜಾತ್ರೆ, ಚಿಂಚಲಿ ಮಾಯವ್ವನ ಜಾತ್ರೆ, ಮುಂತಾದ ಸಾಂಸ್ಕೃತಿಕ ವೀರರ ಜಾತ್ರೆಗಳು ಆರ್ಥಿಕ ವಹಿವಾಟುಗಳ ಕೇಂದ್ರಗಳಾಗಿದ್ದವು. ಸಾಂತೈಮರ್ ಅವರು (Postral Detes in Western India) ‘ಜಾತ್ರೆಗಳು ಆರಂಭವಾದದ್ದು ಆರ್ಥಿಕ ವಹಿವಾಟುಗಳಿಗಾಗಿ ಎನ್ನುತ್ತಾರೆ. ಇದಕ್ಕೆ ಕರ್ನಾಟಕ ಮಹಾರಾಷ್ಟ್ರದಲ್ಲಿ ಪ್ರಚಲಿತದಲ್ಲಿರುವ ಖಂಡೋಬಾ, ಬಿರೋಭಾ ಮತ್ತು ವಿಠೋಬಾ ದೈವಗಳು ದನಗಾರರ ಮೂಟೆಗಳಲ್ಲಿ ದೊರೆತ ಕಂಥನಗಳನ್ನು ಹಾಗೂ ಆ ದೈವಗಳ ಜಾತ್ರೆಗಳಲ್ಲಿ ನಡೆಯುವ ವ್ಯಾಪಾರಗಳನ್ನು ಉದಾಹರಣೆ ಕೊಡುತ್ತಾರೆ. ಎಸ್.ಎಸ್. ಹಿರೇಮಠ ಮತ್ತು ಚಿಂತಾಮಣಿ ಢೇರೆ ಮುಂತಾದ ವಿದ್ವಾಂಸರು ಸಾಂತೈಮರ್ ಅವರ ವಾದವನ್ನು ಒಪ್ಪಿಕೊಂಡಿದ್ದಾರೆ. ಉಣ್ಣೆಕಂಕಣದವರಿಗೆ ಕುರಿಗಾರಿಕೆ ವ್ಯಾಪಾರದ ಮುಖ್ಯ ವಸ್ತು ಆಗಿತ್ತು. ಹಾಲು, ಮಾಂಸ, ಉಣ್ಣೆ, ಕಂಬಳಿಯನ್ನು ಹೊತ್ತು ಮಾರಾಟ ಮಾಡುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಹಾಲಿನ ಜೊತೆಗೆ ಕುರಿಮಾಂಸವನ್ನು ಹೊತ್ತು ಮಾರಿದರೆನ್ನುವ ಕಾರಣಕ್ಕೆ ಕಲ್ಯಾಣದಿಂದ ಬಹಿಷ್ಕಾರಕ್ಕೆ ಒಳಗಾಗುತ್ತಾರೆ. ಕುರಿಗಾರಿಕೆಯನ್ನು ಮಾಡಬೇಕಾದರೆ ಹಾಲು ಹಿಂಡುವ, ಉಣ್ಣೆ ಕತ್ತರಿಸುವ, ಕಂಬಳಿ ನೇಯುವ ಮತ್ತು ಮಾರಾಟ ಮಾಡುವ ವಿಧಾನಗಳು ಗೊತ್ತಿರಬೇಕು. ಗೊತ್ತಿದ್ದರೆ ಮಾತ್ರ ಕುರಿಗಾರಿಗೆ ಮಾಡುವುದಕ್ಕೆ ಅರ್ಹ. ಗೊತ್ತಿರದಿದ್ದರೆ ಆ ಜ್ಞಾನವನ್ನು ಕೊಟ್ಟು ಕುರಿಗಾರಿಕೆ ಹಚ್ಚುತ್ತಿದ್ದರು. ಸಾಂಸ್ಕೃತಿಕ ವೀರರ ಜೀವನ ಚರಿತ್ರೆಯಲ್ಲಿ ಈ ಪರಿಕಲ್ಪನೆಯನ್ನು ಕಾಣಬಹುದು. ಉದಾಹರಣೆ ಕಾಲುಮತದ ಸಾಂಸ್ಕೃತಿಕ ವೀರನಾದ ಇಟ್ಟಪ್ಪ (ವಿಠೋಬಾ-ಪಾಂಡುರಂಗ) ಮಾಳಿಂಗರಾಯ ಮತ್ತು ಬೀರಪ್ಪನಲ್ಲಿ ಕುರಿಗಾರಿಕೆಯನ್ನು ಕಲಿಯುವ ಅಥವಾ ಮಾಡುವ ಹಂಬಲವನ್ನು ವ್ಯಕ್ತಪಡಿಸುತ್ತಾನೆ. ಇವರು ಕುರಿಗಾರಿಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಆದರೆ ಚರ್ಚೆ ಇಲ್ಲಿ ಅಸಮಂಜಸ. ಇವರ ನಿರಾಕರಣೆಯಿಂದ ಬೇಸತ್ತ ಇಟ್ಟಪ್ಪ ಅಕ್ಕ ನಾಗಮ್ಮನೆನ್ನುವ ಸಪ್ತಮಾತೃಕೆಯರ ಹತ್ತಿರ ಹೋಗುತ್ತಾನೆ. ಅವರು ಕುರಿಗಾರಿಕೆಯನ್ನು ಕಲಿಸುವ ಮೊದಲು ಹಾಲು ಹಿಂಡುವ, ಉಣ್ಣೆ ಕತ್ತರಿಸುವ, ಕಂಬಳಿ ನೇಯುವ ಮತ್ತು ಸಂತೆಗಳಲ್ಲಿ ಇವುಗಳನ್ನು ಮಾರಾಡ ಮಾಡಿಕೊಂಡ ಬರುವ ಕಾಯಕಕ್ಕೆ ಹಚ್ಚುತ್ತಾರೆ.

ತನ್ನ ಮಿನಿಯಾ ಮುಂದೇನ ಗಳಗಿ ಕಟ್ಟುತಾನೇನ
ಕಂಬಳೆಪ್ಪ ಕಂಬಳೆ ಏಸ ಕಂಬಳೆ ನೈದಾನ
ಪಾಂಡುರಂಗನಲ್ಲೇಳ ಏಳನೂರ ಕಂಬಳೆ
ಏಳ ನೂರ ಕಂಬಳೆ ನೈದ ಕಟ್ಟು ತಾನೇನ
ಬಂಗಾರ ವರ್ಣದ ಕಂಬಳೆ ಗಳಗಿ ಹಾಕುತಾನೇನ
ಬಾರೊ ಬಾರೋ ಹಡದಪ್ಪ ಏಳಂಪುರದ ಪ್ಯಾಟ್ಯಾಗ
ಏಳಂಪುರದ ಪ್ಯಾಟ್ಯಾಗೆ ಮೂರ ರೂಪಾಯಿಗ ಮಾರ್ಯಾನೆ
ಮೂರ ರೂಪಾಯಿಗ ಮಾರಿ ಸಗರವಾಡಕ ಹೋದನ
(ವೀರಣ್ಣದಂಡೆ (ಸಂ); ಜನಪದಹ ಲುಮತ ಮಹಾಕಾವ್ಯ, ಪುಟ ೬೨೭)

ಕುರಿಗಾರಿಕೆಯಲ್ಲಿ ವೃತ್ತಿಗಿಂತ ಆರ್ಥಿಕತೆಗೆ ಪ್ರಧಾನ್ಯತೆ ಇತ್ತು. ಹಾಗಾಗಿ ಹತ್ತಿ ಕಂಕಣದ ಮತ್ತು ಉಣ್ಣೆ ಕಂಕಣಗಳು ವೃತ್ತಿಯನ್ನು ಆಧರಿಸಿ ವಿಂಗಡಣೆಗೊಂಡ ಕುಲಗಳಾಗಿ ನಮಗೆ ಕಾಣಿಸುತ್ತವೆ. ಕರ್ನಾಟಕ ಮಹಾರಾಷ್ಟ್ರ ಗಡಿನಾಡು ಮತ್ತು ಬಳ್ಳಾರಿ, ರಾಯಚೂರ, ಕೊಪ್ಪಳ ಸುತ್ತಮುತ್ತಲಿನ ಪ್ರದೇಶ ಅಥವಾ ಭೀಮಾ, ತುಂಗಭದ್ರ ನದಿ ದಂಡೆಯ ಮಧ್ಯಪ್ರದೇಶ ಭೌಗೋಳಿಕವಾಗಿ ಹತ್ತಿ ಬೆಳೆಯುವುದಕ್ಕೆ ಮತ್ತು ಕುರಿಗಾರಿಕೆ ಯೋಗ್ಯವಾದ ಭೂಮಿ, ಇಲ್ಲಿ ಜನ್ಮ ತಾಳಿರುವುದರಿಂದ ಆರ್ಥಿಕ ಹಿನ್ನೆಲೆಯಲ್ಲಿಯೇ ರೂಪಗೊಂಡಿರುವುದಕ್ಕೆ ಸಾಧ್ಯವಿದೆ. ಜೊತೆಗೆ ಇಲ್ಲಿಯೇ ತಮ್ಮ ಅಸ್ತಿತ್ವವನ್ನು ಕಟ್ಟಿಕೊಂಡಿವೆ. ಎರಡು ಕುಲಗಳು ಸಂಘರ್ಷ ಮಾಡಿವೆ, ಸಂಸ್ಕೃತೀಕರಣಗೊಂಡಿವೆ. ಇದರಲ್ಲಿ ಹತ್ತಿಕಂಕಣದವರು ಸಂಸ್ಕೃತೀಕರಣಗೊಂಡಿದ್ದು ಹೆಚ್ಚು. ವಿರು ಒಂದು ಕಡೆ ನಲೆನಿಂತ ಕಾರಣಕ್ಕೆ ಹಲವು ಧರ್ಮಗಳ ಪ್ರಭಾವವು ಆಯ್ತು. ‘ಆಹಾರ ಸಂಸ್ಕೃತಿ’ಯಲ್ಲೂ ಬದಲಾವಣೆಯನ್ನು ಕಂಡುಕೊಂಡರು. ಹೆಚ್ಚು ಜನ ಲಿಂಗಾಯತ ಸಂಸ್ಕೃತಿಗೆ ಪರಿವರ್ತನೆಯಾಗಿ ಅಥವಾ ಪ್ರಭಾವಿತರಾಗಿ ಸಸ್ಯಹಾರಿಗಳಾದರು. ಇದಕ್ಕೆ ಕೃಷಿಯಲ್ಲಿ ಸಾಧನೆ ಮಾಡಿದ್ದು ಮತ್ತು ಹತ್ತಿ ಬಳಕೆಯಲ್ಲಿ ಸುಧಾರಣೆ ಕಂಡಿದ್ದು ಕಾರಣವಾಯಿತು. ಉಣ್ಣೆ ಕಂಕಣದವರಲ್ಲಿ ಇಷ್ಟು ಪ್ರಮಾಣಭರಿತವಾಗಿ ಬದಲಾವಣೆಗಳು ಆಗಲಿಲ್ಲ. ತಮ್ಮ ದೈವಗಳೆ ಅಥವಾ ತಮ್ಮ ಸಾಂಸ್ಕೃತಿಕ ವೀರರೇ ನಮ್ಮ ಕುರಿಗಳನ್ನು ರಕ್ಷಣೆ ಮಾಡಿದವರು ಮತ್ತು ಮಾಡುತ್ತಿರುವವರು ಎನ್ನುವ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ನಂಬಿಕೆಯಿಂದಲೇ ಸಾಂಸ್ಕೃತಿಕ ವೀರರನ್ನು ಆರಾಧಿಸುತ್ತಿದ್ದರು. ಆದ್ದರಿಂದಲೇ ಕುರಿಗಾರಿಕೆಯ ಅಲೆಮಾರಿತನದ ಜೊತೆಗೆ ಸಾಂಸ್ಕೃತಿಕ ವೀರರ ಜೊತೆಗೆ ವಿಸ್ತರಣೆ ಮಾಡುತ್ತಾ ನಡೆದರು. ಹೆಚ್ಚು ದೈವಗಳು ವಿಸ್ತರಣೆ ಆಗಿದ್ದು ಇವರಿಂದಲೇ. ಈ ಮಾತುಗಳನ್ನು ಒಂದು ಕುಲ ಹೆಚ್ಚು, ಮತ್ತೊಂದು ಕುಲ ಕಡಿಮೆ ಅನ್ನುವ ಉದ್ದೇಶದಿಂದ ಮಾತನಾಡುತ್ತಿಲ್ಲ. ಚರಿತ್ರೆಯ ವಿಶ್ಲೇಷಣೆ ಅಷ್ಟೆ. ಅಧ್ಯಯನದ ದೃಷ್ಟಿಯಿಂದ ಎರಡು ಕುಲಗಳು ಮುಖ್ಯ. ಒಂದು ‘ಕಂಕಣ’ ಮೂಲ ಸಂಸ್ಕೃತಿಗೆ ಹೆಚ್ಚು ಆಕರವಾದರೆ ಮತ್ತೊಂದು ಕಂಕಣ ಸಂಸ್ಕೃತೀಕರಣಗೊಂಡಿರುವ ವಿಧಾನವನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚು ಆಕರವಾಗಿದೆ. ಎನ್ನುವ ಗ್ರಹಿಕೆ ನನ್ನದು. ಈ ಎರಡು ಕುಲಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದಾಗ ಮಾತ್ರ ಹಾಲುಮತದ ಸಮಗ್ರ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಹಾಗಾಗಿ ಈ ಪರಿಕಲ್ಪನೆಯಿಂದಲೇ ಹುಡುಕಾಟಗಳನ್ನು ಆರಂಭಿಸಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಈ ಎರಡು ಕಂಕಣಗಳ ಅಧ್ಯಯನ ಮೊದಲಿಗೆ ಆಗಬೇಕು.