ಭಾರತೀಯ ಸಂಸ್ಕೃತಿಯಲ್ಲಿ ಕುರುಬ ಸಮುದಾಯಕ್ಕೆ ವಿಶೇಷ ಚರಿತ್ರೆ ಇವೆ. ಕರ್ನಾಟಕದ ಮಟ್ಟಿಗೆ ಇದು ದೊಡ್ಡ ಸಮಾಜ. ಒಂದು ಸಮಾಜವೆಂದರೆ ಅಲ್ಲಿ ಧಾರ್ಮಿಕ ಪುರುಷರು, ಸಾಂಸ್ಕೃತಿಕ ವೀರರು, ಆಚರಣಾದೈವಗಳು, ಅವರದೇ ಆದ ಸಾಮಾಜಿಕ ನಂಬಿಕೆ, ಸಂಪ್ರದಾಯ, ವಿಧಿವಿಧಾನಗಳು ರೂಪುಗೊಂಡಿರುತ್ತವೆ. ಇಂಥ ಸಾಮಾಜಿಕ ಚಟುವಟಿಕೆಗಳು ವ್ಯವಸ್ಥಿತವಾಗಿ, ಸುಗಮವಾಗಿ ನಡೆಯುವುದಕ್ಕಾಗಿ ಆ ಸಮಾಜ ಧಾರ್ಮಿಕ ಮುಖಂಡರೆನಿಸಿದ ಪುರೋಹಿತ ವರ್ಗವನ್ನು ನಿಯೋಜಿಸಿಕೊಂಡಿರುತ್ತದೆ. ಕುರುಬ ಸಮುದಾಯ ನಿಯೋಜಿಸಿಕೊಂಡಿರುವ ಇಂಥ ಪುರೋಹಿತ ವರ್ಗದವರನ್ನೆ “ಒಡೆಯರು” ಎಂದು ಕರೆಯಲಾಗುತ್ತದೆ. ಇವರು ಆ ಸಮಾಜದ ಏಳ್ಗೆ, ಸಾಮಾಜಿಕವಾಗಿ ನಡೆಯುವ ಹಬ್ಬ-ಉತ್ಸವಗಳು, ಮದುವೆ-ಮರಣಗಳಂಥ ಕಾರ್ಯಗಳಲ್ಲಿ ಪೌರೋಹಿತ್ಯವನ್ನು ವಹಿಸಿಕೊಂಡಿರುತ್ತಾರೆ. ಕುರುಬ ಸಮಾಜದ ಒಡೆಯರು ಒಳಪಂಗಡಗಳಲ್ಲಿ ಪ್ರಮುಖರಾಗಿದ್ದಾರೆ.

. ಒಡೆಯರು ಪದದ ಅರ್ಥ

‘ಒಡೆಯ’ ಎಂದರೆ ಸಾಮಾನ್ಯವಾಗಿ ನಾಯಕ, ಯಜಮಾನ, ಮುಖಂಡ, ಹಿರಿಯ, ನೇತಾರ, ಮುಂದಾಳು ಎಂದು ಹೇಳಲಾಗುತ್ತದೆ. ಕುರುಬ ಸಮುದಾಯದಲ್ಲಿ ಬರುವ ‘ಒಡೆಯದು’ ಎಂಬ ಪದಕ್ಕೆ ಸ್ವಾಮಿ, ಅಯ್ಯ, ಜಂಗಮ, ಧಾರ್ಮಿಕ ಮುಖಂಡ, ಗುರು ಎಂಬರ್ಥಗಳಿವೆ. ಹೀಗಾಗಿ ಕುರುಬರ ಅಯ್ನೋರು, ಕುರುಬರ ಗುರುವಿನವರು, ಕುರುಬರ ಮಾರಾಯಗೋಳು, ಎಂದು ಕರೆಸಿಕೊಳ್ಳುವ ಧಾರ್ಮಿಕ ಮುಖ್ಯಸ್ಥನೇ ‘ಗುರು ಒಡೆಯರು’- ಎಂಬ ಪದ ವಿಶಾಲಾರ್ಥವಾಗಿ ಹಾಗೂ ಪಾರಿಭಾಷಿಕವಾಗಿ ಪ್ರತಿನಿಧಿಸುತ್ತದೆ.

. ಗುರು ಒಡೆಯರ ಪರಂಪರೆ

ಕುರುಬ ಸಮುದಾಯದ ಪೌರೋಹಿತ್ಯವನ್ನು ನಡೆಸುವ ಒಡೆಯರಿಗೆ ‘ಗುರು’ ಸ್ಥಾನ ನೀಡಿದ ಪ್ರಯುಕ್ತ ಇವರು ಗುರು ಒಡೆಯರೆನಿಸಿದರು. ಇಂಥ ಗುರು ಒಡೆಯರಿಗೆ ಒಂದು ಸಂಪ್ರದಾಯದ ಹಿನ್ನೆಲೆಯಲ್ಲಿ ನಿರ್ವಹಿಸಿರುವ ಅನೇಕ ಕಾವ್ಯ-ಪುರಾಣ, ಜನಪದ ಕಥನಗಳು, ಶಾಸನಗಳು, ಆಧುನಿಕ ಕಾಗದ ಪತ್ರಗಳಂಥ ಆಕರಗಳು ಲಭ್ಯವಿವೆ. ಆ ಎಲ್ಲ ಆಕರಗಳ ನೆರವಿನಿಂದ ಗುರು ಒಡೆಯರ ಪರಂಪರೆ ಮೂರು ಸಂಪ್ರದಾಯಗಳಲ್ಲಿ ಕವಲೊಡೆದಿರುವುದನ್ನು ಗಮನಿಸಬಹುದಾಗಿದೆ.

. ರೇವಣಸಿದ್ಧ ಸಂಪ್ರದಾಯದ ಗುರು ಒಡೆಯರು: ಕರ್ನಾಟಕದಲ್ಲಿ ರೇವಣಸಿದ್ಧೇಶ್ವರ ದೇವಾಲಯ, ಮಠಗಳು ನೂರಾರು ಇವೆ. ಇವುಗಳ ಪೂಜಾರಿಗಳಾಗಿ, ಪೀಠಾಧಿಕಾರಿಗಳಾಗಿ ‘ಶಾಂತೊಡೆಯರು’ ಕಂಡು ಬರುತ್ತಾರೆ. ಬಿಜಾಪುರ ಜಿಲ್ಲೆಯ ಸರೂರಿನ ಶಾಂತಮುತ್ತಯ್ಯ ಮೂಲಪುರುಷನಾದ್ದರಿಂದ ಇವರು ತಮ್ಮನ್ನು ಶಾಂತೊಡೆಯರು ಎಂದು ಕರೆದುಕೊಂಡಿದ್ದಾರೆ. ಶಾಂತೊಡೆಯ ಸಂಪ್ರದಾಯವನ್ನು ನಿರೂಪಿಸುವ “ತಗರ ಪವಾಡ” ಹೆಸರಿನ ಚಾರಿತ್ರಿಕ ಕಾವ್ಯ “ಸತ್ತ ಕುರಿಯನ್ನು ಕಲ್ಯಾಣಕ್ಕೆ ತಂದ ತಪ್ಪಿಗಾಗಿ ಬಹಿಷ್ಕಾರಗೊಂಡಿದ್ದ ಕಲ್ಯಾಣದ ಕುರುಬರು ೧೨ ವರ್ಷಗಳ ಬಳಿಕ ಶಾಂತಮುತ್ತಯ್ಯನ ಕೃಪೆಯಿಂದ ಕಲ್ಯಾಣ ಪ್ರವೇಶಿಸಿದ” ಕಥೆಯನ್ನು ತಿಳಿಸುತ್ತದೆ. ಅಲ್ಲಿ “ಶಾಂತಮುತ್ತಯ್ಯ ಗುರು, ರೇವಣಸಿದ್ಧ ಪರಮ ಗುರು”-ಎಂಬ ಉಲ್ಲೇಖದಿಂದ ಶಾಂತಮುತ್ತಯ್ಯ ಸಂಪ್ರದಾಯದ ಒಡೆಯರನ್ನು, ರೇವಣಸಿದ್ಧ ಸಂಪ್ರದಾಯದ ಒಡೆಯರೆಂದೂ ಕರೆಯಲಾಗುತ್ತದೆ. ಹೀಗಾಗಿ ರೇವಣಸಿದ್ಧನೆಂಬ ಪರಮಗುರು, ಶಾಂತ ಮುತ್ತಯ್ಯನೆಂಬ ಗುರು ಸಂಪ್ರದಾಯದ ಒಡೆಯರು “ಶಾಂತೊಡೆಯರು” ಎಂಬ ಹೆಸರಿನಿಂದ ಪ್ರಚಲಿತವಾಗಿದ್ದಾರೆ. ಗುರು ಪರಂಪರೆಯನ್ನು ಸಾರುವ ಸಿರಿವಾರ (೧೧೭೦), ಕೆಲ್ಲೂರ (೧೧೭೫), ಹೋತಗಲ್ಲ (೧೧೭೫), ತುರುವೇಕೆರೆ (೧೪೮೦) ಮುಂತಾದ ಶಾಸನಗಳು, ತಾಮ್ರಪತ್ರಗಳು, ಕಾಗದ ದಾಖಲೆಗಳು ಲಭ್ಯವಿವೆ. ಕರ್ನಾಟಕದಲ್ಲಿ ಶಾಂತೊಡೆಯರ ಸಂಪ್ರದಾಯದ ಒಡೆಯರ ಮನೆತನಗಳು ೨೦೦ಕ್ಕೂ ಹೆಚ್ಚು ದೊರೆಯಬಹುದು. ಹಲ್ಲೂರು, ಕೊಪ್ಪಳ, ಬಂಕಾಪುರ, ಚಿಕ್ಕನಾಯಕನಹಳ್ಳಿ, ಸವದತ್ತಿ, ಹುಮ್ನಾಬಾದ, ಡಂಬಳ, ತುರುವೇಕೆರೆ, ಬಳ್ಳಾರಿ ಭಾಗಗಳಲ್ಲಿ ಈ ಸಂಪ್ರದಾಯದ ಗುರು ಒಡೆಯರು ಕಂಡುಬರುತ್ತಾರೆ.

. ಸಿದ್ಧರಾಮೇಶ್ವರ ಸಂಪ್ರದಾಯದ ಗುರು ಒಡೆಯರು: ಕರ್ನಾಟಕದಲ್ಲಿ ಸಿದ್ಧರಾಮೇಶ್ವರ ದೇವಾಲಯ, ಮಠಗಳು ನೂರಾರು ಇವೆ. ಇವುಗಳ ಅರ್ಚಕರಾಗಿ, ಪೀಠಾಧಿಕಾರಿಗಳಾಗಿ ‘ಮಂಕೊಡೆಯರು’ ಕಂಡುಬರುತ್ತಾರೆ. ಸೊಲ್ಲಾಪುರ ಸೀಮೆಯ ಸಿದ್ಧರಾಮೇಶ್ವರನ ಅನುಯಾಯಿಯಾದ ಸಿದ್ಧಮಂಕನನ್ನು ಮಂಕಂತಂದೆ, ಮರುಳ ಮಂಕ ಎಂದು ಕರೆಯಲಾಗಿದೆ. ಈತ ಈ ಸಂಪ್ರದಾಯದ ಮೂಲಪುರುಷನಾದ್ದರಿಂದ ಇವರು ‘ಮಂಕೊಡೆಯರು’ ಎಂದು ತಮ್ಮನ್ನು ಕರೆದುಕೊಂಡಿದ್ದಾರೆ. ಈ ಸಂಪ್ರದಾಯವನ್ನು ನಿರೂಪಿಸುವ “ಸಿದ್ಧಮಂಕ ಚರಿತೆ” ಹೆಸರಿನ ಚಾರಿತ್ರಿಕ ಕಾವ್ಯ “ಸುತ್ತ ಕುರಿಯನ್ನು ಕಲ್ಯಾಣಕ್ಕೆ ತಂದ ತಪ್ಪಿಗಾಗಿ ಬಹಿಷ್ಕಾರಗೊಂಡ ಕಲ್ಯಾಣದ ಕುರುಬರು ೧೨ ವರ್ಷಗಳ ಬಳಿಕ ಸಿದ್ಧಮಂಕ ತಂದೆಯ ಕೃಪೆಯಿಂದ ಕಲ್ಯಾಣ ಪ್ರವೇಶೀಸಿದ” ಕಥೆಯನ್ನು ತಿಳಿಸುತ್ತದೆ. ಅಲ್ಲಿ “ಮಂಕ ತಂದೆ ಗುರು ಸಿದ್ಧರಾಮ ಪರಮಗುರು” ಎಂಬ ಉಲ್ಲೇಖದಿಂದ ಸಿದ್ಧಮಂಕ ಸಂಪ್ರದಾಯದ ಒಡೆಯರನ್ನು, ಸಿದ್ಧರಾಮೇಶ್ವರ ಸಂಪ್ರದಾಯದ ಒಡೆಯರೆಂದೂ ಕರೆಯಲಾಗುತ್ತದೆ. ಹೀಗಾಗಿ ಸಿದ್ಧರಾಮೇಶ್ವರನೆಂಬ ಪರಮಗುರು, ಸಿದ್ಧಮಂಕನೆಂಬ ಗುರು ಸಂಪ್ರದಾಯದ ಒಡೆಯರು “ಮಂಕೊಡೆಯರು” ಎಂಬ ಹೆಸರಿನಿಂದ ಪ್ರಚಲಿತವಾಗಿದ್ದಾರೆ. ಶಾಂತೊಡೆಯರಿಗೆ ಹೋಲಿಸಿದರೆ ಈ ಸಂಪ್ರದಾಯದ ಗುರು ಒಡೆಯರು ಕಡಿಮೆ. ಮುದ್ದೇಬಿಹಾಳ, ತುಮಕೂರು ಭಾಗಗಳಲ್ಲಿ ಈ ಮನೆತನಗಳು ಕಂಡುಬರುತ್ತದೆ. ಸರೂರಿನ ಮಲ್ಲಿಕಾಜುನ ದೇವಾಲಯದ ಕ್ರಿ.ಶ.೧೨೦೮ ಹಾಗೂ ೧೨೧೦ರ ಶಾಸನಗಳು, ‘ಮಂಕಯ್ಯಗಳೆಂಬ’ ಉಲ್ಲೇಖ ಒಳಗೊಂಡಿರುವುದನ್ನು ನೋಡಿದರೆ ಇವರ ಪ್ರಾಚೀನತೆ ತಿಳಿದುಬರುತ್ತದೆ.

. ಅಮೋಘಸಿದ್ಧ ಸಂಪ್ರದಾಯದ ಗುರು ಒಡೆಯರು: ಕರ್ನಾಟಕದಲ್ಲಿ, ಬಿಜಾಪುರ, ಬೆಳಗಾವಿ, ಗುಲಬರ್ಗಾ ಜಿಲ್ಲೆಗಳಲ್ಲಿ, ಶಿರಹಟ್ಟಿ ತಾಲೂಕಿನಲ್ಲಿ ಹಾಗೆಯೇ ಕರ್ನಾಟಕೇತರ ಪ್ರಾಂತಗಳಾದ ಸೊಲ್ಲಾಪುರ, ಸಾಂಗಲಿ, ಸಾತಾರ ಜಿಲ್ಲೆಗಳಲ್ಲಿ  ಅಮೋಘಸಿದ್ಧ ಸಂಪ್ರದಾಯದ ಮಠಗಳು, ದೇವಾಲಯಗಳು ಹರಡಿಕೊಂಡಿವೆ. ಇವುಗಳ ಅರ್ಚಕರಾಗಿ, ಪೀಠಾಧಿಕಾರಿಗಳಾಗಿ “ಅಮೋಘ ಒಡೆಯರು” ಇಲ್ಲವೇ “ಅಮುಗೋಡೆಯರು” ಕಂಡುಬರುತ್ತಾರೆ. ಅಮೋಘಸಿದ್ಧನ ಸಂಪ್ರದಾಯದ ಕಥೆ ಪುರಾಣದಿಂದ ಹಿಡಿದು ಕಲ್ಯಾಣದ ಶರಣರು, ಸೊನ್ನಲಿಗೆ ಸಿದ್ಧರಾಮೇಶ್ವರರೊಂದಿಗೆ ತಳುಕು ಹಾಕಿಕೊಂಡಿದೆ. ಬಿಜಾಪುರ ಜಿಲ್ಲೆಯ ‘ಮುಮ್ಮಟಗಿರಿ’ ಈ ಸಂಪ್ರದಾಯ ಒಡೆಯರ ಮೂಲ ಕೇಂದ್ರವಾಗಿರಬೇಕು. ಈ ಸಂಪ್ರದಾಯದ ಪರಂಪರೆಯು ಕುತೂಹಲಕಾರಿಯಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಶಿಷ್ಯಪ್ರಶಿಷ್ಯರಿಂದ ಈ ಪರಂಪರೆ ಉಜ್ವಲವಾಗಿ ಬೆಳೆದಿದೆ.

. ಗುರು ಒಡೆಯರ ಆಚರಣೆಗಳು: ಧಾರ್ಮಿಕವಾಗಿ ಸಿದ್ಧಪುರುಷರಾದ ರೇವಣಸಿದ್ಧ, ಸಿದ್ಧರಾಮ ಹಾಗೂ ಅಮೋಘಸಿದ್ಧರ ಅರ್ಚಕರಾಗಿ ದೇವತಾರಾಧನೆ, ಹಬ್ಬ, ಉತ್ಸವ ಜಾತ್ರೆಗಳಲ್ಲಿ ಭಾಗವಹಿಸಿ ವಿಧಿವತ್ತಾಗಿ ಆ ಎಲ್ಲ ಆಚರಣೆಗಳನ್ನು ನಡೆಸಿಕೊಡುತ್ತಾರೆ. ವಿಶೇಷವಾಗಿ ಸಾಮಜಿಕ ಆಚರಣೆಗಳಾದ ಕುರುಬರ ಜನನ, ನಾಮಕರಣ, ಮದುವೆ, ಗೃಹಪ್ರವೇಶ, ಅಂತ್ಯಸಂಸ್ಕಾರ, ಋತುಮತಿ ಸಮಯದ ಶುದ್ಧಿಕರಣ ಕ್ರಿಯೆ, ಮನೆಮದ್ದು, ಅಂತ್ರ-ತಂತ್ರ-ಜ್ಯೋತಿಷ್ಯ, ವ್ಯಾಜ್ಯ, ಪರಿಹಾರಗಳಂಥ ಲೌಖಿಕ ಬದುಕಿನ ನಿರ್ವಹಣೆಗಳಲ್ಲಿ ಗುರು ಒಡೆಯರ ಸಾಮಾಜಿಕ ಜವಾಬ್ದಾರಿ ಅತಿ ಮುಖ್ಯವಾಗಿ ತೋರುತ್ತದೆ.

ವಧು-ವರರನ್ನು ಸುರಗಿನೂಲು ಸುತ್ತಿ ಹಸೆಮಣೆಯ ಮೇಲೆ ಕುಳ್ಳಿರಿಸಿ, ಎಣ್ಣೆ ಇಟ್ಟು ಅರಿಷಿಣವನ್ನು ಹಚ್ಚಿ ಸ್ನಾನಮಾಡಿಸಿ ಹೊಸ ಬಟ್ಟೆ ಧರಿಸುತ್ತಾರೆ. ಕರಿಯ ಕಂಬಳಿ ಗದ್ದುಗೆ ಮೇಲೆ ಕುಳಿತು ಒಡೆಯರು ಕಂಕಣಧಾರಣೆ ಮಾಡಿಸಿ “ಕಲಿಕಲಿಯಾದ ಕರ್ಯಜ್ಜನಾಗಿ, ಭೀಮಣ್ಣನಾಗಿ, ಭಿಲ್ಲರಾಜ್ಯವನಾಳಿ, ಗುರು ರೇವಣಸಿದ್ಧ ಕಟ್ಟಿದ ಸೇಸೆ ಸ್ಥಿರವಾಗಿರಲಿ, ಸರೂರು ಶಾಂತ ಮುತ್ತಯ್ಯ ಕಟ್ಟಿದ ಕಲ್ಯಾಣ ಸ್ಥಿರವಾಗಿರಲಿ, ಸೋಬತಿ ಸೋಬಾನ”- ಎಂದು ಒಡೆಯರು ಮದುಮಕ್ಕಳಿಗೆ ಶುಭಹಾರೈಕೆಯ, ಮಂತ್ರದೀಕ್ಷೆಯನ್ನು ವಾಚಿಸುತ್ತಾರೆ. ಹಾಗೆಯೇ ಜನನ-ಋತುಮತಿ ಸಂದರ್ಭದಲ್ಲಿ ಒಡೆಯರು ಸೂತಕವನ್ನು ಕಳೆಯುವುದು ಒಂದು ರೀತಿಯ ಆಚರಣೆಯಾಗದೆ. ಸೂತಕವಾದ ಭಕ್ತರ ಮನೆಗೆ ೫ ಇಲ್ಲವೇ ೧೩ ದಿವಸಕ್ಕೆ ಆಗಮಿಸಿದ ಒಡೆಯರು, ಕರಿಯ ಕಂಬಳಿ ಗದ್ದುಗೆಯ ಮೇಲೆ ಕುಳಿತು, ಪಾದ ತೊಳೆಸಿಕೊಂಡು ಆ ಪಾದೋದಕರಿಂದ ಭಕ್ತರ ಮನೆಯ ಸೂತಕವನ್ನು ತೊಡೆದು ಶುದ್ಧೀಕರಣ ಮಾಡುತ್ತಾರೆ. ಇಂಥದ್ದೇ ಮರಣ ಸಂದರ್ಭದ ಆಚರಣೆಯನ್ನು “ಕರ್ಮನಿರಸನಾಚರಣೆ” ಎಂದು ಕರೆಯುವುದುಂಟು. ಸತ್ತ ವ್ಯಕ್ತಿಯ ಹಣೆಗೆ ಒಡೆಯರು ನೊಸಲಿಟ್ಟು ಅಂತಿಮ ಕ್ರಿಯೆಗೆ ದಾರಿ ಮಾಡಿಕೊಡುವುದು, ಅನಂತರದಲ್ಲಿ ಲಿಂಗಾಯತರಂತೆ “ಒಳಗೆ ತೆಗೆದುಕೊಳ್ಳುವ” ಕ್ರಿಯೆಯನ್ನು ನೆರವೇರಿಸುವುದು ರೂಢಿಯಲ್ಲಿದೆ. ಲೋಕೋಪಕಾರಕ ಕಾರ್ಯಗಳಾದ ನಾಟಿವೈದೈ, ಜ್ಯೋತಿಷ್ಯ ಹೇಳುವುದರ ಮೂಲಕ ಶ್ರೀಸಾಮಾನ್ಯರ ಸಾಮಾಜಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣರಾಗಿದ್ದಾರೆ. ಕೌಟುಂಬಿಕವಾಗಿ ಜಗಳ-ತಕರಾರುಗಳು ಸಂಭವಿಸಿದರೆ ಅದರ ನ್ಯಾಯ ನಿರ್ಣಾಯಕರಾಗಿ ಒಡೆಯರೇ ತೀರ್ಪುಗಾರರಾಗಿರುತ್ತಾರೆ. ಇಲ್ಲೆಲ್ಲ ಸಾಮಾಜಿಕ ನೆಮ್ಮದಿಯ ಕಾಳಜಿಗಾಗಿ ಒಡೆಯರು ನಿರ್ವಹಿಸುವ ಪಾತ್ರ ಮುಖ್ಯವೆನಿಸಿದೆ. ಹೀಗಾಗಿ ‘ಒಡೆಯರು’ ಸಾಮಾಜಿಕ ಮುಖಂಡನಾಗಿ ರೂಪಾಂತರಗೊಳ್ಳುವುದನ್ನು ಗಮನಿಸಬಹುದಾಗಿದೆ.

. ಗುರು ಒಡೆಯರ ಸಾಂಸ್ಕೃತಿಕ ಶಿಷ್ಠಾಚಾರಗಳು: ಉಣ್ಣೆಕಂಕಣ – ಹತ್ತಿಕಂಕಣ ಕುರುಬರಿಗೆ ಕುಲಗುರುಗಳಾಗಿರುವ ಶಾಂತೊಡೆಯರು, ಹಣೆಗೆ ವಿಭೂತಿ, ಕಾರ್ಯಕ್ಕೆ ಕರಿಯ ಕಂಬಳಿ ಉಪಯೋಗಿಸುತ್ತಾರೆ. ಮಂಕೊಡೆಯರು ಸಾಧುಗುರುಬರಿಗೆ-ಚಿಕ್ಕಗುರುಬರಿಗೆ ಕುಲಗುರುಗಳಾಗಿರುವುದರ ಜೊತೆಗೆ ಹಣೆಗೆ ವಿಭೂತಿ, ಕಾರ್ಯಕ್ಕೆ ಬಿಳಿಯ ಕಂಬಳಿ ಉಪಯೋಗಿಸುತ್ತಾರೆ. ಕುರುಬರಿಗೆ ಕುಲಗುರುಗಳಾಗಿರುವ ಅಮುಗೊಡೆಯರು ಹಣೆಗೆ ಭಂಡಾರ, ಕಾರ್ಯಕ್ಕೆ ‘ಕರಿಯ ಕಂಬಳಿ’ ಜೊತೆಗೆ ‘ನೇಮದ ಬೆತ್ತ’ ಉಪಯೋಗಿಸುತ್ತಾರೆ. ಶಾಂತೊಡೆಯರು-ಅಮುಗೊಡೆಯರು ರಕ್ತಸಂಬಂಧವನ್ನು ಬೆಳೆಸುತ್ತಾರೆ. ಈ ಎರಡು ಸಂಪ್ರದಾಯದವರು ಕುರುಬರೊಂದಿಗೂ ಕೊಡು-ಕೊಳ್ಳುವಿಕೆಯನ್ನು ನಡೆಸುತ್ತಾರೆ. ಇದಕ್ಕೆ ಮಂಕೊಡೆಯರು, ಹೊರತಾಗಿದ್ದಾರೆ. ಈ ಮೂರು ಸಂಪ್ರದಾಯದ ಗುರು ಒಡೆಯರು ‘ಲಿಂಗಧಾರಿಗಳು’ ‘ಸಸ್ಯಾಹಾರಿಗಳು’. ವಿಶೇಷವಾಗಿ ಒಡೆಯರ ಮನೆಯಲ್ಲಿ ಗಂಡುಮಗು ಹುಟ್ಟಿದ ಮೂರು ದಿನಗಳಲ್ಲಿ ಪೀಠವಿರುವ (ಶಿವಲಿಂಗ) ಸಣ್ಣಲಿಂಗವನ್ನು ಕಟ್ಟುತ್ತಾರೆ. ಇದನ್ನು ‘ಹುಟ್ಟುಲಿಂಗ’ವೆಂದು ಕರೆಯಲಾಗಿದೆ. ಇದು ಒಂದನೇ ಲಿಂಗದೀಕ್ಷೆ. ಇನ್ನು ಮದುವೆಯ ಸಮಯದಲ್ಲಿ ವಧುವರರಿಗೆ ಲಿಂಗದೀಕ್ಷೆ ನೀಡುವುದು ಎರಡನೇ ಹಂತ. ಇದು ಇಷ್ಟಲಿಂಗ. ಇಲ್ಲಿ ಕುರುಬರ ಓಣಿಯ ಸಹವಾಸ, ಸಹವ್ಯಸನಗಳಿಂದ ಯುವಕ-ಯುವತಿಯರನ್ನು ಮುಕ್ತಗೊಳಿಸುವುದು. ಹಾಗೆಯೇ ಭಕ್ತರೆನಿಸಿದ ಕುರುಬ ಹುಡುಗಿಯನ್ನು ಒಡೆಯರ ಸೊಸೆಯಾಗಿ ತಂದುಕೊಳ್ಳುವ ಸಂದರ್ಭದಲ್ಲಿ ಲಿಂಗದೀಕ್ಷೆ ನೀಡಿ ದಂಪತಿಗಳಿಬ್ಬರಿಗೂ ಜೋಳಿಗೆ ಬೆತ್ತಕೊಟ್ಟು ಕೋರಧ್ಯಾನ್ಯ ಭಿಕ್ಷೆಗೆ ಕಳಿಸುವುದರ ಮೂಲಕ ಗಂಡನ್ನು ‘ಒಡೆಯ’ನನ್ನಾಗಿ, ಹೆಣ್ಣನ್ನು ‘ಒಡೆಯರಮ್ಮ’ ನನ್ನಾಗಿ ರೂಪಾಂತರಿಸುವ ಈ ಪ್ರಕ್ರಿಯೆ ಲಿಂಗಾಯತರ ‘ಅಯ್ಯಾಚಾರ’ಕ್ಕೆ ಸಮಾನಾಂತರವಾಗಿದೆ.

. ಒಡೇರಮ್ಮನ ಸಮಾಜಿಕ ಸ್ಥಾನಮಾನ: ಹೆಣ್ಣು ಸಾಕ್ಷಾತ್ ಶ್ರೀಗೌರಿ, ಸಾಕ್ಷಾತ್ ಕಪಿಲ ಸಿದ್ಧ ಮಲ್ಲಿಕಾರ್ಜುನ, ಆಕೆ ಮಾಯೆಯಲ್ಲ ಎಂಬ ಶರಣ ಸಿದ್ಧಾಂತವನ್ನು ಅಕ್ಷರಶಃ ಆಚರಣೆಗೆ ತಂದಿರುವುದು ಕುರುಬ ಗುರು ಒಡೆಯರ ಪತ್ನಿ ಒಡೇರಮ್ಮನ ಸಾಮಾಜಿಕ ಸ್ಥಾನಮಾನಗಳಲ್ಲಿ. ಪುರುಷರಿಗೆ (ಒಡೆಯರಿಗೆ) ಇರುವ ಎಲ್ಲ ಸಾಮಾಜಿಕ, ಧಾರ್ಮಿಕ ಹಕ್ಕು ಬಾಧ್ಯತೆಗಳು ಈಕೆಗೆ ಇರುತ್ತವೆ. ಒಡೆರಮ್ಮ ಆದ ದಿನದಿಂದ ತಂದೆ-ತಾಯಿ ಮೊದಲಾಗಿ ಅಬಾಲವೃದ್ಧರೂ ಈಕೆಗೆ ನಮಸ್ಕರಿಸಬೇಕು. ಎದೆಯ ಮೇಲೆ ಲಿಂಗ, ಹಣೆಯ ಮೇಲೆ ವಿಭೂತಿ ಧರಿಸಿದ ಈಕೆಗೆ ಸಮುದಾಯದ ಎಲ್ಲ ಧಾರ್ಮಿಕ ಆಚರಣೆಗಳಲ್ಲಿ ಒಡೆಯರಷ್ಟೆ ಆದ್ಯತೆ ಕೊಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಪತಿ ವಿಯೋಗ ಪತ್ನಿಗೆ ಮಾತ್ರವಲ್ಲ ಸಮಾಜಕ್ಕೆ ಅಶುಭ ಸೂಚನೆ. ಇದರಿಂದ ಆಕೆ ಧಾರ್ಮಿಕ ಹಾಗೂ ಸಾಮಾಜಿಕ ರಂಗಗಳಿಂದ ಹೊರಗೆ, ಇದು ಬಹುತೇಕ ಸಮುದಾಯಗಳ ಸಂವಿಧಾನಾತ್ಮಕ ವಿಧಿ. ಆದರೆ ಕುರುಬ ಸಮುದಾಯ ಇದಕ್ಕೆ ಹೊರತಾಗಿದೆ. ಒಡೇರಮ್ಮನಿಗೆ ಪತಿ ವಿಯೋಗವಾದರೂ, ಆಕೆ ವಿಧವೆಯಲ್ಲ. ಕೈಹಿಡಿದ ಗಂಡ ತೀರಿದರೂ ಕಟ್ಟಿಕೊಂಡ ಲಿಂಗದೊಂದಿಗೆ ಪತಿತನವನ್ನು  ಕಾಣುವ ಶರಣಸತಿಭಾವವನ್ನು ಒಡೇರಮ್ಮ ಹೊಂದಿರುವುದು ನಿಜಕ್ಕೂ ಶರಣತತ್ತ್ವವನ್ನು ಆಚರಣೆಗೆ ತಂದಿರುವ ವಿಶೇಷ ಉಪಕ್ರಮವಾಗಿದೆ. ಸೌಭಾಗ್ಯ ಸಂಕೇತಗಳಾದ ಮಂಗಳಸೂತ್ರ, ಬಳೆ, ಮೂಗುತಿ, ಕುಂಕುಮಗಳನ್ನು ಉಳಿಸಿಕೊಳ್ಳುವುದರ ಮೂಲಕ ‘ಚಿರಮುತ್ತೈದೆ’ಯ ಸ್ಥಾನವನ್ನು ಆಕೆಗೆ ನೀಡಲಾಗಿದೆ. ಒಬ್ಬ ಮಹಿಳೆಯ ಆಸ್ತಿ, ಆಧ್ಯಾತ್ಮಜ್ಞಾನ, ಧಾರ್ಮಿಕ ಮನೋಭಾವಗಳನ್ನು ಮೂಲೆಗುಂಪಾಗಿಸುವ ಹುನ್ನಾರದಲ್ಲಿ ಪುರುಷವರ್ಗ, ಪುರೋಹಿತವರ್ಗ, ಸೃಷ್ಟಿಸುತ್ತಲಿದ್ದ ‘ಮಹಾಸತಿ ಆಚರಣೆ’ ಸಂದರ್ಭದಲ್ಲಿ; ಅದನ್ನು ನಿರಾಕರಿಸಿ ಸ್ವಾತಂತ್ರ್ಯದ ಬಗ್ಗೆ ದನಿಎತ್ತಿದ ಶರಣ ಚಳುವಳಿಯ ಆಶಯವನ್ನು ಬಿಡದೇ ಅನುಷ್ಠಾನಗೊಳಿಸಿದ  ಹೆಗ್ಗಳಿಕೆಯನ್ನು ಕುರುಬ ಸಮುದಾಯದ ಒಡೇರಮ್ಮನ ಸಾಮಾಜಿಕ ಸ್ಥಾನಮಾನದಲ್ಲಿ ಕಾಣಬಹುದಾಗಿದೆ.

. ಗುರು ಒಡೆಯರು ಮತ್ತು ವಿಭೂತಿಗಟ್ಟಿ: ಭಂಡಾರ ಪ್ರಜ್ಞೆಯ ಜೊತೆಗೆ ವಿಭೂತಿ ಪ್ರಜ್ಞೆಯನ್ನು ಗಟ್ಟಿಗೊಳಿಸಿಕೊಂಡಿರುವ ಕುರುಬ ಸಮಾಜ ‘ವಿಭೂತಿಗೆ’ ಗುರುಸ್ಥಾನ ನೀಡಿ, ಒಡೆಯರ ಗೌರವ ಸಲ್ಲಿಸಿದೆ. ಸಮಾಜದಲ್ಲಿ ಗುರು ಒಬ್ಬ, ಭಕ್ತ ಸಮುದಾಯ ಹಲವು. ಹೀಗಾಗಿ ಎಲ್ಲರಿಗೂ ಪ್ರತ್ಯೇಕ ಗುರುದರ್ಶನ ಅಸಂಭವ. ಇಂಥ ಸಂದರ್ಭದಲ್ಲಿ ಒಡೆಯರ ಪ್ರತಿನಿಧಿಯಾಗಿ ವಿಭೂತಿ ಗಟ್ಟಿಯನ್ನು ಆಹ್ವಾನಿಸುತ್ತಾರೆ. ಇದು ಊರಿನ ಕುರುಬಗೌಡನ ಮನೆಯಲ್ಲಿರುತ್ತದೆ. ಅದನ್ನು ಪೂಜಾವಿಧಿಗಳಿಂದ ತಂದು ಕರಿಯ ಕಂಬಳಿಯ ಮೇಲೆ ಮೂರ್ತಿಗೊಳಿಸಿ ತಮ್ಮ ಧಾರ್ಮಿಕ ಕಾರ್ಯಗಳನ್ನು ಪೂರೈಸಿಕೊಳ್ಳುವ ವಿಶಿಷ್ಟ ಆಚರಣೆ ಇವರಲ್ಲಿದೆ. ಇದನ್ನು ‘ಕಾಲಿಲ್ಲದ ಐನೋರ’ ಎಂದು ಕರೆಯುತ್ತಾರೆ.

. ಗುರು ಒಡೆಯರ ಹೇಳಿಕೆಗಳು: ಅರವತ್ತು ಸಂವತ್ಸರಗಳನ್ನು ತಮ್ಮ ಪ್ರಾಕೃತಿಕ ಬದುಕಿನಲ್ಲಿ ಹತ್ತಿರದಿಂದ ಕಂಡ ಕುರುಬ ಸಮಾಜ ಮಳೆ-ಬೆಳೆ-ನಕ್ಷತ್ರಾದಿ ಸಂಗತಿಗಳನ್ನು “ಹೇಳಿಕೆಗಳ” ರೂಪದಲ್ಲಿ ವಿವರಿಸುತ್ತದೆ. ಬೆಡಗಿನಿಂದ, ಕಾವ್ಯತ್ಮಕವಾಗಿ ಕೂಡಿದ ಈ ಹೇಳಿಕೆಗಳು ಮೈಲಾರಲಿಂಗನ ಕಾಣಿಕೆ (ಕಾರ್ಣಿಕೆ) ರೂಪದಲ್ಲಿರುತ್ತವೆ. ನಿಸರ್ಗದ ಸೂಕ್ಷ್ಮ ನಿರೀಕ್ಷಣೆ, ಮೋಡಗಳ ಚಲನವಲನ, ಪಕ್ಷಿಗಳ ಕಲರವ, ಗಾಳಿಯ ಸುಳಿದಾಟದ ದಿಸೆಗಳಿಂದ ಋತುಮಾನದ ಬದಲಾವಣೆಗಳನ್ನು ಹೇಳಿಕೆಗಳ ಮೂಲಕ ಬಿತ್ತರಿಸುವ ರೀತಿ ದೈವೀಸ್ಪೂರ್ತಿಗೆ ನಿದರ್ಶನವೆನಿಸಿದೆ. ಉದಾ: ಮುರುಗಾನೂರು ಸಿದ್ಧ ಏನ ಹೇಳ್ಯಾನಂದೀರಿ! ಹಿಂಗಾಗಿ ನಾಡಕ ಹಿಂಗಾರಿ, ಮುಂಗಾರಿ ನಾಡಕ ಮುಂಗಾರಿ, ಹಿಂಗಾರಿ ಮಿಂಗಾರಿ ಕಾಚಾ ಮಾಡುದುರಾಗ ಜೋಡು ನುಚ್ಚಿನ ಕಟ್ಟಿ ಹಾಕಿ ನೆಲೆ ಗಾಣಮಿಣಿ-ಹೀಗೆ ಅಮವಾಸ್ಯೆ ಶಿವರಾತ್ರಿ ಹಬ್ಬ-ಹರಿದಿನಗಳಲ್ಲಿ ಇಂಥ ಹೇಳಿಕೆಗಳನ್ನು ಮಾಡುತ್ತಾರೆ. ಪ್ರಾಯಶಃ ಲಿಂಗಾಯತ “ಕುಲಜ್ಞಾನ ಸಾಹಿತ್ಯದ” ಮತ್ತೊಂದು ಪರಿಭಾಷೆ ಗುರು ಒಡೆಯರ ಈ ಹೇಳಿಕೆಗಳು. ಹೀಗಾಗಿ ಜೈನರ ಅವಧಿಜ್ಞಾನ, ಲಿಂಗಾಯತರ ಕಾಲಜ್ಞಾನ, ಕುರುಬರ ಹೇಳಿಕೆಗಳ ತೌಲನಿಕ ಅಧ್ಯಯನ ಮಾಡುವುದರ ಮೂಲಕ ಈ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯನ್ನು ದಾಖಲಿಸಬಹುದಾಗಿದೆ.

. ಗುರು ಒಡೆಯರು ಮತ್ತು ಆಧುನಿಕ ಪರಂಪರೆ: ಪ್ರಾಚೀನ ಗುರು ಒಡೆಯರ ಪರಂಪರೆಯನ್ನು ಸಮಾಜ ಸಂಘಟನೆಗಾಗಿ ಮುಂದುವರಿಸಿಕೊಂಡು ಬರುತ್ತಲಿರುವ ಆಧುನಿಕರಲ್ಲಿ ವೇದಮೂರ್ತಿ ಸಿದ್ಧಪ್ಪಯ್ಯ ಒಡೆಯರು. ಸಂಗ್ರೇಶಕೊಪ್ಪದ ವೇದಮೂರ್ತಿ ಚನ್ನಯ್ಯ ಒಡೆಯರು, ಶ್ರೀಶಂಕರಗೌಡ ಮಾಲೀಪಾಟೀಲ ಒಡೆಯರು, ಹೀಗೆ ಹತ್ತಾರು ಜನ ಒಡೆಯರು ಕುರುಬ ಸಮಾಜದಲ್ಲಿದ್ದು ಅವರ ಕುರಿತಾಗಿ ಪೂರ್ಣ ಪ್ರಮಾಣದ “ಹಾಲುತ ಪುಣ್ಯಪುರುಷರ” ಮಾಲೆಗಳಲ್ಲಿ ಗ್ರಂಥ ಪ್ರಕಟಿಸುವುದರ ಕಡೆಗೆ ಚಿಂತಿಸಬೇಕಾಗಿದೆ. ಯಾಕೆಂದರೆ ಆಧುನಿಕ ಬದುಕಿನ ಆರ್ಭಟದಲ್ಲಿ ಅವರ ಸಾಮಾಜಿಕ ಸ್ಥಾನಮಾನದ ಶಿಥಿಲೀಕರಣ, ಆರ್ಥಿಕ ಅಭದ್ರತೆ, ಧಾರ್ಮಿಕ ಪಲ್ಲಟತೆಗಳು ಉಂಟಾಗಿರುವುದು ಸಹಜ. ಹೀಗಾಗಿ ಗುರು ಒಡೆಯರ ಜೀವನ ಪದ್ಧತಿಯ ಪರಿವರ್ತನಾ ಹಂತಗಳ ಇತಿಹಾಸವನ್ನು ಇದರಿಂದ ರೂಪಿಸಿಕೊಟ್ಟಂತಾಗುತ್ತದೆ.

ಒಟ್ಟಿನಲ್ಲಿ ಕುರುಬರ ಒಳಪಂಗಡವೆನಿಸುವ “ಗುರು ಒಡೆಯರ” ಅಧ್ಯಯನವೆಂದರೆ ಆ ಸಮುದಾಯದ ಧಾರ್ಮಿಕ, ಆರ್ಥಿಕ ಸಾಮಾಜಿಕ ಅಧ್ಯಯನದ ಜೊತೆಗೆ ಜಾನಪದ ನಂಬಿಕೆ ಆಚರಣೆ, ಸಂಪ್ರದಾಯಗಳನ್ನು ಕಾಳಜಿಯಿಂದ ಪೋಷಿಸಿಕೊಂಡು ಬಂದ ಅಧ್ಯಯನವೂ ಆಗುತ್ತದೆ. ಕಾರಣ ಸಮಾಜದಲ್ಲಿ ‘ಗುರು ಒಡೆಯರು’ ನಿರ್ವಹಿಸಿದ ಅಂತರಂಗ-ಬಹಿರಂಗಗಳು ಅಂದರೆ ವ್ಯಕ್ತಿ ಉದ್ಧಾರ ಮತ್ತು ಸಮಾಜ ಉದ್ಧಾರಗಳ ಶುದ್ಧೀಕರಣದ ದಾಖಲೀಕರಣವನ್ನು ವ್ಯಾಪಕವಾಗಿ ಮಾಡುವುದು ಮುಂದಿನ ದಿನಮಾನಗಳಲ್ಲಿ ನಡೆಯಬೇಕಾಗಿದೆ. ಕುರುಬ ಗುರುಒಡೆಯರ ನಡಾವಳಿಗಳು ಲಿಂಗಾಯತ ಜಂಗಮರ ನಡಾವಳಿಗಳಿಗೆ ಹತ್ತಿರವಾಗಿವೆ. ಈ ಹತ್ತಿರಕ್ಕೆ ಕಾರಣವಾಗಿರಬಹುದಾದ ಚಾರಿತ್ರಿಕ – ಐತಿಹಾಸಿಕ ಹಿನ್ನೆಲೆಯನ್ನು ಆ ಮೂಲಕ ಶೋಧಿಸಿದಂತಾಗುತ್ತದೆ.

ಸಹಾಯಕ ಗ್ರಂಥಗಳು

೧. ಕುರುಬರ ಗುರು ಒಡೆಯರು: ಸಾಂಸ್ಕೃತಿಕ ಅಧ್ಯಯನ, ಡಾ.ಬಿ.ಜಿ. ಬಿರದಾರ, ವಿಕಾಸ ಪ್ರಕಾಶನ, ಹೊಸಪೇಟೆ, ೨೦೧೦

೨. ಕುರುಬರ ಗುರು ಒಡೆಯರು: (ಸಂ) ಡಾ. ಎಫ್. ಟಿ. ಹಳ್ಳಿಕೇರಿ, ವಿಕಾಸ ಪ್ರಕಾಶನ, ಹೊಸಪೇಟೆ, ೨೦೦೭.

೩. ಲಿಂಗಾಯತ: (ಪ್ರ.ಸಂ). ಡಾ.ಎಂ. ಎಂ. ಕಲಬುರ್ಗಿ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಎಜ್ಯುಕೇಶನ್ ಸೊಸಾಯಿಟಿ, ಇಳಕಲ್ಲ, ೨೦೦೯.

೪. ಚಿದಾನಂದ ಸಂಪುಟಗಳು, ಸ್ವಪ್ನ ಪಬ್ಲಿಕೇಷನ್, ಬೆಂಗಳೂರು.