ನಮ್ಮ ಭಾರತ ದೇಶದ ಜನಸಂಖ್ಯೆಯಲ್ಲಿ ಮೂರನೆಯ ಸ್ಥಾನದಲ್ಲಿರುವ ಕುರುಬ ಸಮುದಾಯ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತ, ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳಲ್ಲೂ ಇರುವುದಾಗಿ ತಿಳಿಯುತ್ತದೆ. ಕರ್ನಾಟಕದ ನೆಲದಲ್ಲಂತೂ ಆದಿಯಿಂದಲೂ ಇರುವ ಸಮುದಾಯಗಳಲ್ಲಿ ಇದೂ ಒಂದೆಂದು ತಿಳಿಯಲಾಗಿದೆ. ಹಾಗೆ ತಿಳಿಯಲು, ಸಾಮಾನ್ಯವಾಗಿ ಕನ್ನಡ ಬಿಟ್ಟು ಬೇರೆ ಭಾಷೆ ಆಡದ ಜನ ಸಮುದಾಯಗಳಲ್ಲಿ ಕುರುಬರ ಸಮುದಾಯವೂ ಒಂದೆಂದು ತಿಳಿದಿರುವುದು ಒಂದು ಮುಖ್ಯ ಕಾರಣವೆಂದು ತಿಳಿಯುತ್ತದೆ. ಕುರುಬ ಸಮುದಾಯದಲ್ಲಿ ವಿವಿಧ ಬಗೆಯ ಪಂಗಡಗಳಿದ್ದು, ಅವನ್ನು ಒಂದೊಂದೆಡೆ ಒಂದೊಂದು ರೀತಿಯಲ್ಲಿ ಹೇಳಲಾಗಿದೆ. ಹತ್ತಿಕಂಕಣದವರು, ಉಣ್ಣೆ ಕಂಕಣದವರು, ಹಂಡೆ ಕುರುಬರು, ಜಂಡೆ ಕುರುಬರು, ಒಡೆಯರು ಎಂಬ ಐದು ಪಂಗಡಗಳಿರುವುದಾಗಿ ಒಂದೆಡೆ ಹೇಳಿದರೆ, ಇನ್ನೊಂದೆಡೆ ಹಂಡೆ ಕುರುಬರು ಮತ್ತು ಕುರುಬರು ಎಂದು ಎರಡು ಪಂಗಡಳಿವೆಯೆಂದೂ, ಅವರಲ್ಲಿ ಕುರುಬರೆಂಬುವರಲ್ಲಿ ಆನಿ (ಆನೆ) ಕುರುಬರು, ಹಾಲು ಕುರುಬರು, ಅಸಲು ಕುರುಬರು ಮತ್ತು ಮೂರು ಹಿಂಡಿನ ಕುರುಬರು ಇತ್ಯಾದಿಯಾಗಿ ಇರುವುದಾಗಿ ಹೇಳಲಾಗಿದೆ. ಇಂಥ ವೈವಿಧ್ಯಮಯ ವರ್ಗೀಕರಣಕ್ಕೆ ಪ್ರಾದೇಶಿಕ ಭೇದವೂ ಕಾರಣವಿರುವಂತೆ ಕಾಣುತ್ತದೆ. ಅದೇನೆ ಇದ್ದರೂ ಹಂಡೆ ಕುರುಬರೆಂಬುವರು ಕುರುಬ ಸಮುದಾಯದಲ್ಲಿ ಬಹುಮುಖ್ಯವಾದ ಒಂದು ಪಂಗಡದವರೆಂದು ಕಾಣಿಸುತ್ತದೆ.

ಕುರಿಸಾಕಾಣಿಕೆಯಿಂದಾಗಿ ಕುರುಬರು ಎಂಬ ಹೆಸರು ಬಂದಿರುವುದು ಈಗಾಗಲೇ ವಿದಿತ. ಆದರೆ ಹಂಡೆ ಕುರುಬರು ಎಂಬ ಹೆಸರು ಹೇಗೆ ಬಂದದ್ದು ಎಂಬ ಪ್ರಶ್ನೆ ಕುತೂಹಲಕಾರಿಯಾದದ್ದು. ಅಲ್ಲದೆ ಈ ಹೆಸರಿನ ಸರಿಯಾದ ರೂಪ ‘ಹಂಡೆ ಕುರುಬರು’ ಎಂದೇ? ‘ಅಂಡೆ ಕುರುಬರು’ ಎಂದೋ? ಎಂಬ ಪ್ರಶ್ನೆಯೂ ಇದೆ. ಈ ಹಂಡೆ ಅಂಡೆಗಳೆರಡಕ್ಕೂ ಅನೇಕ ವಿವರಣೆಗಳು ಈಗಾಗಲೇ ಬಂದಿವೆ. ಅವೆಲ್ಲವನ್ನೂ ಇಲ್ಲಿ ವಿವೇಚಿಸಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಸತ್ಯಕ್ಕೆ ಸಮೀಪದವಿರಬೇಕು ಎನಿಸಿದರೆ, ಇನ್ನು ಕೆಲವು ಅವುಗಳ ಕಲ್ಪನಾ ಮಯತೆಯಿಂದಾಗಿ ಸತ್ಯಕ್ಕೆ ದೂರವಾದವು ಎಂದೇ ಅನಿಸುತ್ತದೆ. ಕುರುಬರು ಎಂಬುದಕ್ಕೆ ದನಗಾರರು ದನಗರು ಮುಂತಾದ ಶಬ್ದಗಳು ಪರ್ಯಾಯ ಶಬ್ದಗಳಂತೆ ಬಳಕೆಗೊಂಡಿರುವುದರಿಂದ ಇವರು ಬಿಳಿಯ ಹಸುಗಳನ್ನು (ಹೆಚ್ಚಾಗಿ) ಸಾಕುತಿದ್ದವರಿರಬಹುದೇ? ಎಂದು ಸಂದೇಹವಾಗುತ್ತದೆ. ಇನ್ನು ಅಂಡೆ ಎಂದರೆ ಹಾಲು ತುಂಬಲು ಬಳಸುತ್ತಿದ್ದ ಬೊಂಬಿನ ಕೊಳವೆ (ಪಾತ್ರ) ಎಂಬಂರ್ಥವೂ ವಿಚಾರಣೀಯವಾಗಿದೆ. ಹೀಗೆ ಇಂಥ ಯಾವುದೋ ಒಂದು ಮೂಲ ಅರ್ಥದಿಂದ ಈ ಶದ್ಬಗಳು ಬಳಕೆಯಾಗಿರುವ ಸಾಧ್ಯತೆ ಇದೆ.

‘ಅಂಡೆ ಕುರುಬರು’ ಎಂಬುದಕ್ಕಿಂತ ‘ಹಂಡೆ ಕುರುಬರು’ ಎಂಬ ರೂಪವೇ ಹೆಚ್ಚಾಗಿ ಬಳಕೆಯಾಗಿರುವುದರಿಂದ ಇಲ್ಲಿ ಆ ರೂಪವನ್ನೇ ಸ್ವೀಕರಿಸಲಾಗಿದೆ. ಹಂಡೆ ಕುರುಬರನ್ನು ಹಂಡೆ ವಜೀರರು, ಹಂಡೆ ರಾವುತರು, ಹಂಡೆ ದನುಗರು (ದನಗರರು) ಇಂಥ ಪರ್ಯಾಯ ಹೆಸರುಗಳಿಂದಲೂ ಕರೆಯಲಾಗಿದೆ. ‘ಕೃಷ್ಣದೇವರಾಯನ ದಿನಚರಿ’ಯಲ್ಲಿ ‘ಕುರುಬ ರಾವುತರು’ ಎಂದು ಕರೆದಿರುವುದು ಹಂಡೆ ಕುರುಬ ಪಂಗಡದವರನ್ನೇ ಎಂದು ತೋರುತ್ತದೆ. ಮಹಾರಾಷ್ಟ್ರದಲ್ಲಿ (ಧನಗರ’ ಎಂಬ ಮಾತು ಸಾರ್ವಿಕ (general) ವಾಗಿ ಕುರುಬರನ್ನು ಹೆಸರಿಸಲು ಮತ್ತು ಕರೆಯಲು ಈಗಲೂ ರೂಢಿಯಲ್ಲಿದೆ ಎಂದು ಹೇಳುತ್ತಾರೆ. ಇವರು ಮಹಾರಾಷ್ಟ್ರದ ದಕ್ಷಿಣ ಪ್ರದೇಶದಿಂದ ಕರ್ನಾಟಕ ಪ್ರದೇಶದೊಳಕ್ಕೆ ಬಂದವರು ಎಂಬುದನ್ನು ಸೂಚಿಸುವಂತಿದೆ ಹಂಡೆದನುಗರು (ಧನಗರರು) ಎಂಬ ಹೆಸರು.

ಹಂಡೆ ಕುರುಬರು ಇತರ ಕುರುಬ ಪಂಗಡಗಳವರಂತೆ ಕುರಿ ಸಾಕುವುದನ್ನೇ ಹೆಚ್ಚಾಗಿ ಕೈಕೊಂಡವರಲ್ಲ. ಕುರಿಸಾಕಣಿಕೆಗಿಂತ ಕಂಬಳಿ ನೇಯುವ ವೃತ್ತಿಯನ್ನು ಕೈಕೊಂಡದ್ದೇ ಹೆಚ್ಚು. ಹಾಲು, ಮೊಸರು ಮಾರುತ್ತಿದ್ದ ಅಥವಾ ವರ್ತನೆ ಕೊಡುತ್ತಿದ್ದ ವೃತ್ತಿಯನ್ನೂ ಕೈಕೊಂಡಿರಬಹುದು. ಘಟ್ಟದ ಕೆಳಗಿನ ಹಂಡೆ ಕುರುಬರು ಕುರಿಗಳ ಬದಲಿಗೆ ಹಸು ಎಮ್ಮೆಗಳನ್ನೂ ಸಾಕುತ್ತಿದ್ದರೆಂದೂ, ಅವುಗಳ ಹಾಲು, ಮೊಸರು, ತುಪ್ಪ ಇವನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದರೆಂದೂ ಹೇಳುತ್ತಾರೆ. ಇವರು ಇಂಥ ವೃತ್ತಿಗಳಲ್ಲದೆ ಇತರೆಡೆ, ಪೊಲೀಸರಿಗೆ ಶಸ್ತ್ರಧಾರಿ ಸುದ್ದಿವಾಹಕರಾಗಿಯೂ ಕೆಲಸ ಮಾಡುತ್ತಿದ್ದರೆಂದೂ ಇನ್ನು ಕೆಲವೆಡೆ ಇವರು ವ್ಯವಸಾಯದ ಕುಬಿನಲ್ಲಿ ನಿರತರಾಗಿದ್ದರೆಂದೂ ತಿಳಿದುಬರುತ್ತದೆ.

ಬಹುಹಿಂದೆಯೇ ಲಿಂಗಾಯತ ಧರ್ಮವನ್ನು ಸ್ವೀಕರಿಸಿದ ಹಂಡೆ ಕುರುಬರು ಮದ್ಯ ಮಾಂಸಗಳನ್ನು ಸೇವಿಸದೆ, ಭಕ್ತಿಯಿಂದ ಆ ಧರ್ಮವನ್ನು ಅನುಸರಿಸುತ್ತಿರುವುದಾಗಿ ಅನೇಕ ಕಡೆ ಹೇಳಲಾಗಿದೆ. ಹಿಂದೊಂದು ಕಾಲಕ್ಕೆ ಇವರು ಮೂಲತಃ ಶೈವ ಧರ್ಮೀಯರಾಗಿದ್ದುದು ಅವರ ಮೇಲೆ ಲಿಂಗಾಯತದ ಪ್ರಭಾವವಾಗಲು ಕಾರಣವಾಗಿರಬೇಕು. ಅಲ್ಲದೆ ಕುರುಬರು ಮೂಲ ಗುರುಗಳೆನಿಸಿದ ರೇವಣಸಿದ್ಧೇಶ್ವರ, ಅವರ ಪ್ರಸಾದಪುತ್ರರೆಂದು ನಂಬಲಾದ ಸಿದ್ಧರಾಮೇಶ್ವರ ಇವರ ಪರೋಕ್ಷ ಪ್ರಭಾವವೂ ಇವರ ಮೇಲಿದ್ದಂತೆ ಕಾಣುತ್ತದೆ. ಜೊತೆಗೆ ಮುಂದೆ ವಿವರಿಸಲಾಗುವ ಹಂಡೆ ಪಾಳೆಯಗಾರರ ಮೂಲಪುರುಷನೆನಿಸಿದ ಹನುಮಪ್ಪ ನಾಯಕನು, ಮೊದಲಿಗೆ ಶರಣ ಸಿದ್ಧರಾಮನ ಕಾರ್ಯಕ್ಷೇತ್ರವಾಗಿದ್ದ ಸೊನ್ನಲಪುರದಲ್ಲಿದ್ದನೆಂದೂ, ವಿಜಯನಗರದ ರಾಮರಾಯ ಮತ್ತು ತಿರುಮಲರಾಯರು ಅವನನ್ನು ಅವನ ಸೈನ್ಯದೊಂದಿಗೆ ಕರೆಸಿಕೊಂಡು, ತಮ್ಮಲ್ಲಿ ಸೇವೆಯಲ್ಲಿರಿಸಿಕೊಂಡರೆಂದೂ ಹೇಳಿರುವಲ್ಲಿ, ಸಿದ್ಧರಾಮೇಶ್ವರನ ಪ್ರಭಾವ ಇವರ ಮೇಲಾಗಲು ಅವನು ಸೊನ್ನಲಪುರದಲ್ಲಿದ್ದ ಒಂದು ಹಿನ್ನೆಲೆಯನ್ನು ಸೂಚಿಸಿದಂತಿದೆ.

ಇದಲ್ಲದೆ ಇದೇ ಪಂಗಡಕ್ಕೆ ಸೇರಿದ ‘ಹಂಡೆ ಮಲ್ಲಪ್ಪ’ ಎಂಬುವನೊಬ್ಬ ರಚಿಸಿದ ಕೆಲವು ಹಾಡುಗಳು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿರುವ ಹಸ್ತಪ್ರತಿಯೊಂದರಲ್ಲಿ ದೊರೆತಿದ್ದು ಅವು ಇನ್ನೂ ಪ್ರಕಟವಾಗಬೇಕಾಗಿದೆ. ಅವು ಬಹುಶಃ ಭಕ್ತಿಪರವಾದ ಅಥವಾ ತತ್ತ್ವಪರವಾದ ಹಾಡುಗಳಿದ್ದುದರಿಂದಲೋ ಏನೋ ‘ಹಂಡೆ ಮಲ್ಲಪ್ಪ ಮಾಡಿದ ವಚನ’ ಎಂದು ಕರೆಯಲ್ಪಟ್ಟಿವೆ. ಇವು ಹ ಈ ಪಂಗಡದವರ ಲಿಂಗಾಯತ ಶ್ರದ್ಧೆಗೆ ಸಾಕ್ಷಿಯೆನ್ನುವಂತಿದೆ.

ಕುರುಬ ಸಮುದಾಯದಲ್ಲಿ ವಿಶಿಷ್ಟ ಇತಿಹಾಸ ಹೊಂದಿರುವ ಪಂಗಡವೆಂದರೆ ಹಂಡೆ ಕುರುಬರೇ ಆಗಿದ್ದಾರೆ. ಇವರು ಬಹು ಹಿಂದಿನಿಂದ ಶಕ್ತಿವಂತರಾಗಿ ಶೌರ್ಯವಂತರಾಗಿ ಅನೇಕ ಸಾಹಸಗಳನ್ನು ತೋರಿದವರು. ಅದಕ್ಕಾಗಿ ಆಗಾಗ್ಗೆ ರಾಜಮನ್ನಣೆಯನ್ನು ಸಹ ಪಡೆದವರು. ಗ್ರಾಮಗಳಲ್ಲಿ ಗೌಡಿಕೆ, ವಿಜಯನಗರ ಅರಸರ ಸೈನ್ಯದಲ್ಲಿ ರಾವುತಿಕೆ (ವಜೀರಿಕೆ), ಬಿಜಾಪುರ ಬಾದಶಹರಲ್ಲಿ ಫೌಜುದಾರಿಕೆ (ಸರದಾರಿಕೆ) ಮತ್ತು ಕೆಲವು ಸಂಸ್ಥಾನಗಳಲ್ಲಿ ಪಾಳೆಯಗಾರಿಕೆ ಇಂಥ ಸೇವೆ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಈ ಸಮುದಾಯದವರು ಬಿಜಾಪುರ ದೇಶದಲ್ಲಿ ಕೃಷ್ಣಾ ನದಿಗೆ ಉತ್ತರ ಭಾಗದಲ್ಲಿರುವ ಮೂರ್ತಿಗಿರಿ ಎಂಬ ಗ್ರಾಮದಲ್ಲಿ ಗೌಡಿಕೆ ಮಾಡಿಕೊಂಡಿದ್ದರು ಎಂದು ಬಳ್ಳಾರಿ ಕೈಫಿಯತ್ತು ತಿಳಿಸಿದರೆ, ಈ ಸಮುದಾಯದವರು ಚಿತ್ರದುರ್ಗ ಸಂಸ್ಥಾನದ ಕೆನ್ನಳ್ಳಿ ಎಂಬಲ್ಲಿ ಗೌಡರಾಗಿದ್ದರು ಎಂದು ೧೭ನೆಯ ಶತಮಾನದ ತಾಮ್ರಶಾಸನವೊಂದು ತಿಳಿಸುತ್ತದೆ. ಈ ಸಮುದಾಯಕ್ಕೆ ಸೇರಿದವರು ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನ ಕುದುರೆ ಸೈನ್ಯದಲ್ಲಿ ರಾವುತರು (ವಜೀರರು) ಆಗಿದ್ದರೆಂದು ೧೬ನೆಯ ಶತಮಾನದ ತಾಮ್ರಶಾಸನ ಪ್ರತಿಗಳು ಮತ್ತು ಕೃಷ್ಣದೇವರಾಯನ ದಿನಚರಿ ಇವು ಸೂಚಿಸಿದರೆ, ಈ ಸಮುದಾಯದವರು ಬಿಜಾಪುರದ ಬಾದಶಹರಲ್ಲಿ ಸರದಾರರಾಗಿದ್ದರೆಂದೂ ಫೌಜುದಾರರಾಗಿದ್ದರೆಂದೂ ಕುರುಗೋಡು ಮತ್ತು ಬಳ್ಳಾರಿ ಕೈಫಿಯತ್ತುಗಳು ಸೂಚಿಸುತ್ತವೆ. ಈ ಸಮುದಾಯದವರೇ ಮುಂದೆ ಬಂಕಾಪುರ ಕುರುಗೋಡು ಬಳ್ಳಾರಿ ಮತ್ತು ಅನಂತಪುರ ಸಂಸ್ಥಾನಗಳನ್ನು ಮೊದಲಿಗೆ ಬೇರೆ ಬೇರೆ ಅರಸರ ಅಧೀನರಾಗಿ, ಆ ಮೇಲೆ ಸ್ವತಂತ್ರರಾಗಿ ಆಳ್ವಿಕೆ ನಡೆಸಿದ್ದನ್ನು ಕುರುಗೋಡು, ಬಳ್ಳಾರಿ ಮತ್ತು ಹಂಡೆ ಅನಂತಪುರ ಈ ಕೈಫಿಯತ್ತುಗಳು, ಕೆಲವು ಶಾಸನಗಳು, ಕೆಲವು ಮಠಗಳ ಸನ್ನದುಗಳು, ಕೆಲವು ಸಾಹಿತ್ಯಕೃತಿ ಇತ್ಯಾದಿಗಳು ಸಾರುತ್ತವೆ. ಹೀಗೆ ಆಳ್ವಿಕೆ ನಡೆಸಿದವರೇ ಮುಂದೆ ಹಂಡೆ ಪಾಳೆಯಗಾರರು ಎಂದು ಇತಿಹಾಸರಲ್ಲಿ ಖ್ಯಾತರಾಗಿದ್ದಾರೆ. ಈ ಬಗೆಗಿನ ವಿವರವನ್ನು ಮುಂದೆ ಗಮನಿಸಲಾಗುವುದು.

ಈ ಸಮುದಾಯದವರು ಹೊಯ್ಸಳ ದೊರೆಗಳ ಕಾಲದಲ್ಲೂ ದಳವಾಯಿಕೆಗೆ ಸಾಹಸಕ್ಕೆ ಹೆಸರಾಗಿದ್ದರು ಎಂಬುದನ್ನು ಶಕ ವರ್ಷ (ಕ್ರಿ.ಶ. ೧೧೯೪) ಎಂದು ಕಾಲ ನಮೂದಾಗಿರುವ ಲೋಹ (ಹಿತ್ತಾಳೆ?) ಶಾಸನವೊಂದು ಸೂಚಿಸುತ್ತದೆ. ಹಂಡೆ ವಜೀರ ಮುಮ್ಮಡಿ ದಳವಾಯಿ ರಂಗರಾವುತ ಎಂಬುವನು ಹೊಯ್ಸಳ ದೊರೆಗಳ ಪರವಾಗಿ ಬಾರಕನೂರು (ಬಾರಕೂರು) ಪ್ರದೇಶದ ಮೇಲೆ ಸೈನ್ಯ ತೆಗೆದುಕೊಂಡು ಹೋಗಿ ಜನ ಸಾಧಿಸಿದ್ದಕ್ಕೆ ದೊರೆಗಳು ಶ್ವೇತಚ್ಛತ್ರಿ, ಹಗಲು ದೀವಟಿಗೆ, ಮಕರತೋರಣ, ಗಂಡೆ ಸರಪಣಿ, ಒಂಟಿ ಜಂಗು, ನೆಲ್ಲುಹುಲ್ಲುಬಾರಿ ಇಂಥ ವಿಶೇಷ ಸವಲತ್ತು ಬಿರುದು  ಮನ್ನಣೆಗಳನ್ನು ನೀಡಿದ್ದಾಗಿ ಆ ಶಾಸನ ನಿರೂಪದಿಂದ ತಿಳಿಯುತ್ತದೆ. ಇದರಲ್ಲಿ ವಿಷ್ಣುವರ್ಧನ, ಬಲ್ಲಾಳ, ಇವರ ಹೆಸರುಗಳು ಬಂದಿವೆಯಾದರೂ, ಇದರ ಕನ್ನಡ ಲಿಪಿ ಆ ಕಾಲದ್ದಿರದೆ ನಂತರದ ಕಾಲದ್ದಾಗಿ ಕಾಣುವುದು ಮತ್ತು ಇದರೊಳಗೆ ನಿಸನಿ (ನಿಶಾನಿ), ಲಡಯಿ (ಲಡಾಯಿ), ವಜೀರ ಇಂಥ ಆ ಕಾಲಕ್ಕೆ ಅಸಂಭಾವ್ಯವೆನಿಸುವ ಅನ್ಯದೇಶ್ಯ ಶಬ್ದಗಳು ಇದರ ಕನ್ನಡ ಭಾಷೆಯಲ್ಲಿರುವುದು, ಜೊತೆಗೆ ಭಾಷೆ ಕೂಡಾ ಅಷ್ಟೊಂದು ಶುದ್ಧ ಸ್ಥಿತಿಯಲ್ಲಿ ಇಲ್ಲದಿರುವುದು, ಈ ಶಾಸನದ ಬಗ್ಗೆ ಇದು ಆ ಮೇಲಿನ ಕಾಲದಲ್ಲಿ ರಚಿಸಿಕೊಂಡಿದ್ದಿರಬಹುದೆ ಎಂದು ಸಂದೇಹ ತಾಳುವಂತೆ ಮಾಡುತ್ತವೆ. ಒಟ್ಟಿನಲ್ಲಿ ಬಹುಹಿಂದಿನಿಂದಲೂ ಈ ಸಮುದಾಯದವರು ವೀರತನದ ವೃತ್ತಿಯಲ್ಲಿ ಸಾಗಿಬಂದವರು ಎಂಬುದಕ್ಕೆ ಇದನ್ನು ಒಂದು ಸೂಚಿಕೆಯಾಗಿ ಭಾವಿಸಬಹುದು.

ಇದೇ ಹಂಡೆ ಕುರುಬ ಸಮುದಾಯದ ತಿಮ್ಮರಾವುತ ಎಂಬುವನು ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯನ ಕಾಲದಲ್ಲಿ ತೋರಿದ ಸಾಹಸಗಳ ಬಗ್ಗೆ ಇಲ್ಲಿ ಎರಡು ಮಾತುಗಳನ್ನು ಹೇಳಬೇಕು. ತಾಳೆಯ ಗರಿಯ ಕಟ್ಟಿನಲ್ಲಿ ಪ್ರತಿಮಾಡಕೊಂಡಂತೆ ಹೆಸರಿಸಿರುವ ಮೂರು (ಇವುಗಳಲ್ಲಿ ಮೂರನೆಯದು ಅಪೂರ್ಣ) ತಾಮ್ರ ಶಾಸನಗಳು ಆ ತಿಮ್ಮರಾವುತನ ಮೂರು ವಿವಿಧ ಸಾಹಸಗಳನ್ನೂ ಅವಕ್ಕಾಗಿ ಅವನು ಪಡೆದ ಮನ್ನಣೆಯನ್ನೂ ತಿಳಿಸುತ್ತವೆ. ಇವುಗಳಲ್ಲಿ ಕೊಟ್ಟಿರುವ ಶಕ ವರ್ಷ ಸಂಖ್ಯೆ, ಸಂವತ್ಸರದ ಹೆಸರು ಕೃಷ್ಣರಾಯನಿಗೂ ಅಚ್ಯುತರಾಯನಿಗೂ, ರಾಮರಾಯನಿಗೂ ಇರುವ ಪರಸ್ಪರ ಸಂಬಂಧದ, ಬಗ್ಗೆ ಹೇಳಿರುವ ಅಸಮರ್ಪಕ ಮಾಹಿತಿ ಇತ್ಯಾದಿಗಳಿಂದ ಈ ಶಾಸನಪ್ರತಿಗಳ ಬಗ್ಗೆ ಸಂದೇಹ ಮೂಡುತ್ತದೆಯಾದರೂ, ಇವನ್ನು ಘಟನಾನಂತರದ ಕಾಲದಲ್ಲಿ (೧೫೫೮ ರಲ್ಲಿ ಮತ್ತು ಅನಂತರದಲ್ಲಿ) ದಾಖಲಿಸಿ ಪಡೆದು ಕೊಂಡಿರುವ ಸಾಧ್ಯತೆಯೊಂದಿಗೆ, ಇವು ಒಳಗೊಂಡಿರುವ ವಿಷಯದ ಸಲುವಾಘಿ ಇವನ್ನು ಗಮನಿಸಬೇಕಾಗಿದೆ. ಅವುಗಳ ಪಾಠಗಳೊಳಗೆ ಅವನ್ನು ನಿರೂಪ ಎಂದು ಹೆಸರಿಸಲಾಗಿದೆ.

ವಿಜಯನಗರದಲ್ಲಿ ಕೃಷ್ಣರಾಯನು ಆಳುತ್ತಿರುವಾಗ್ಗೆ, ನವರಾತ್ರಿ ಹಬ್ಬದ ಏಳನೆಯ ದಿನ ನಾಲ್ಕು ಮಾರು ಅಗಲ, ನಾಲ್ಕು ಮಾರು ಉದ್ದ, ನಾಲ್ಕು ಮಾರು ಆಳ ಇರುವಂಥ ಗುಂಡಿಯೊಂದರಲ್ಲಿ ಒಂದು ಹುಲಿ ಮತ್ತು ಒಂದು ಸರ್ಪವನ್ನು ಹಾಕಿದ್ದಾರೆ. ಯಾರು ಆ ಸರ್ಪವನ್ನು ಮೆಟ್ಟಿ ಆ ಹುಲಿಯನ್ನು ಎದುರಿಸಿ ಎರಡನ್ನೂ ಕೊಲ್ಲುತ್ತಾರೋ ಅಂಥವರಿಗೆ ಅವರು ಬೇಡಿದ ಇಷ್ಟಾರ್ಥವನ್ನು ದೊರೆ ಸಲ್ಲಿಸುವುದಾಗಿ ೧೨೦೦೦ ವಜೀರ (ಕುದುರೆ ಯೋಧ)ರಲ್ಲಿ ಡಂಗುರದ ಮೂಲಕ ಘೋಷಣೆ ಮಾಡಿಸಿದಾಗ, ಯಾರೂ ಆ ಸವಾಲನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಆಗ ತಿಮ್ಮರಾವುತ ಎಂಬುವನು ಬಂದು, ಸವಾಲನ್ನು ಸ್ವೀಕರಿಸಿ ಅವೆರಡನ್ನೂ ಕೊಂದನು. ಅವನ ಧೈರ್ಯ ಸಾಹಸಕ್ಕೆ ಸಂತೋಷಪಟ್ಟ ದೊರೆ, “ನಿನಗೇನು ಬೇಕು” ಎಂದು ಕೇಳಿದಾಗ, ಅವನು ಸ್ವಾಮಿ, “ನಮ್ಮ ಹಂಡೆದನುಗರ ಜನಾಂಗದಲ್ಲಿ ಹೆಣ್ಣಿಗೆ ೧೦೧ ವರಹ (ತೆರ) ಕನ್ಯಾಶುಲ್ಕ ಕೊಡಬೇಕು; ಮದುವೆ ಸುಂಕ ಎಂದು ಸರ್ಕಾರಕ್ಕೆ ೭ ವರಹ ಕೊಡಬೇಕು. ಹೀಗೆ ೧೦೮ ವರಹ ಕೊಡುವಷ್ಟು ಶಕ್ತಿ ಇಲ್ಲದ ಅನೇಕ ಕುಟುಂಬಗಳಲ್ಲಿ ಅನೇಕ ಯುವಕರು ಮದುವೆಯಾಗದೆ ಹಾಗೆ ಉಳಿದಿದ್ದಾರೆ. ಸರ್ಕಾರಕ್ಕೆ ತೆರುವ ೭ ವರಹವನ್ನೇ ಹೆಣ್ಣಿನ ತೆರನಾಗಿ ನಿಗದಿಪಡಿಸಿ, ಸರ್ಕಾರಕ್ಕೆ ಪಾವತಿಸವೇಕಾದ ಸುಂಕವನ್ನು ಪೂರ್ಣವಾಗಿ ಮಾಫಿ ಮಾಡಬೇಕು” ಎಂದು ಕೇಳಿಕೊಂಡನು. ದೊರೆ ಸಂತೋಷಪಟ್ಟು ಹಾಗೇ ಮಾಡಿದನು.

ಇಲ್ಲಿ ಕೆಲವು ಅಂಶಗಳನ್ನು ಗಮನಿಸಬೇಕು: ವಿಜಯನಗರ ಕಾಲದಲ್ಲಿ ಹಂಡೆ ಕುರುಬರಲ್ಲಿ ಮದುವೆ ಹೆಣ್ಣಿಗೆ ತೆರ ಹೊರೆಯಾಗುವಷ್ಟು ಇದ್ದುದು, ಅದನ್ನು ೭ ವರಹಕ್ಕೆ ಸೀಮಿತಗೊಳಿಸಿ ನಿಗದಿಪಡಿಸಲು ತಿಮ್ಮರಾವುತ ಪ್ರಯತ್ನಿಸಿದುದು ಸ್ಪಷ್ಟವಾಗಿದೆ. ತಿಮ್ಮರಾವುತ ತನ್ನ ಸ್ವಂತಕ್ಕಾಗಿ ಯಾವುದಾದರೊಂದು ಪ್ರಾಂತದ ಮೇಲೆ ಅಧಿಪತಿಯಾಗಿ ಅಧಿಕಾರ, ಸಂಪತ್ತು ಹೀಗೆ ಏನನ್ನಾದರೂ ಬೇಡಬಹುದಾಗಿತ್ತು. ರಾಜ ಅದನ್ನು ಕೊಟ್ಟೂ ಕೊಡುತ್ತಿದ್ದ. ಆದರೆ ಅವನು ಹಾಗೆ ಸ್ವಂತ ಲಾಭವನ್ನು ಬಯಸದೆ, ತನ್ನ ಸಮುದಾಯದ ಹಿತಸಾಧನೆಗೆ ಯತ್ನಿಸಿದ್ದು ಶ್ಲಾಘನೀಯವಾಗಿ ಕಾಣುತ್ತದೆ.

ತಿಮ್ಮರಾವುತ ಮೇಲಿನ ಸಾಹಸ ಮಾಡಿದ ಮರುವರ್ಷವೇ ಮತ್ತೊಂದು ಸಾಹಸ ಮಾಡದ ವಿವರ ಇನ್ನೊಂದು ಶಾಸನ ಪ್ರತಿಯಲ್ಲಿದೆ. ಮೇಲಿನ ಸಾಹಸದ ಬಗ್ಗೆ ಕೇಳಿ ತಿಳಿದ ಮುಸ್ಮಿಂ ಬಾದಶಹನೊಬ್ಬ (ಇವನು ಡಿಳ್ಳಿಯವನಾಗಿರದೆ, ಬಹಮನಿ ಸುಲ್ತಾನರಲ್ಲೊಬ್ಬನಾಗಿರಬೇಕೆಂದು ಕಾಣುತ್ತದೆ) ಎರಡು ಪಾವಟಿಗೆಯ ಒಂದು ತೇಜಿ (ಮೇಲೆ ಹತ್ತಲು ರಿಕಾಪಿನಲ್ಲಿ ಎರಡು ಮೆಟ್ಟಿಲುಗಳಿರುವಷ್ಟು ಎತ್ತರದ ಕುದುರೆ)ಯನ್ನು ಆಭರಣ, ಉಡುಗೊರೆ, ಕಾಣಿಕೆ ಸಹಿತ ನಿಯೋಗದೊಂದಿಗೆ ವಿಜಯನಗರಕ್ಕೆ ಕಳಿಸಿ, ಅದನ್ನು ಯಾರು ಏರಿ ಪಳಗಿಸುತ್ತಾರೋ ಅವರಿಗೆ ಆ ಮಾನ ಸನ್ಮಾನಗಳೆಲ್ಲ ಸಲ್ಲುತ್ತವೆ ಎಂದು, ಹಿಂದೆ ಮಾಡಿದಂತೆ ೧೨೦೦೦ ವಜೀರರ (ರಾವುತರ) ನಡುವೆ ಘೋಷಣೆ ಮಾಡಿಸಿದಾಗ, ಅವರಲ್ಲಿ ಯಾರೊಬ್ಬರೂ ಮುಂದೆ ಬರಲಿಲ್ಲ. ಆಗ ದೊರೆ ಕೃಷ್ಣ (ದೇವ)ರಾಯನು ತಿಮ್ಮರಾವುತನನ್ನು ಕರೆದು “ಹಿಂದೆ ಹುಲಿ ಮತ್ತು ಸರ್ಪವನ್ನು ಕೊಂಡು ಸಾಹದ ಮೆರೆದಿದ್ದೀಯೆ, ಈಗ ಈ ಸಾಹಸಕ್ಕೂ ನೀನೇ ಮುಂದಾಗಬೇಕು” ಎಂದಾಗ ಅವನು ಅತ್ಯಂತ ವಿನಯದಿಂದ, “ನಾನು ಈ ೧೨,೦೦೦ ವೀರಭಂಟರ ಹಸ್ತಪಾದ ಮಾತ್ರನಾಗಿ ಇದ್ದೇನೆ. ತಾವು ನುಡಿದಂತೆ ಈ ಸಾಹಸ ಕೈಕೊಳ್ಳುತ್ತೇನೆ” ಎಂದು, ಆ ಕುದುರೆಯನ್ನು ಏರಿ ಒಂದು ಯೋಜನದವರೆಗೆ ಅದನ್ನು ಓಡಿಸಿ, ಮಣಿಸಿ, ತಿರುಗಿ ಬಂದನು. ಸಂತುಷ್ಟನಾದ ದೊರೆ “ನಿನಗೇನು ಬೇಕು ಕೇಳಿಕೋ” ಎಂದಾಗ ತಿಮ್ಮರಾವುತನು “ಹಿಂದೆ ಮದುವೆ ಹೆಣ್ಣಿನ ತೆರವನ್ನು ಕಡಿಮೆ ಮಾಡಿ, ಮದುವೆ ಸುಂಕವನ್ನು ಮಾಫಿ ಮಾಡಿ ನಮ್ಮ ಜನಾಂಗದ ಕಷ್ಟ ಪರಿಹಾರ ಮಾಡಿ ಕೀರ್ತಿಶಾಲಿಗಳಾದಿರಿ. ಈಗ ನಮ್ಮ ಕುಲಾಚಾರದ ಗೌಡಿಕೆ, ಕುಲದಲ್ಲಿ ಆದ ಹಾದರ, ಅನ್ಯಾಯ, ಚರಾದಾಯ, ಹೊರಾದಾಯ, ಕೈತಪ್ಪು, ಬಾಯಿತಪ್ಪು, ಸಂತಾನವಿಲ್ಲದ (ವರ) ಬದುಕು (ಜೀವನ ನಿರ್ವಹಣೆ), ದಿಕ್ಕಿಲ್ಲದ ಹೆಣ್ಣಿನ ಜೀವನ ನಿರ್ವಹಣೆ, ಇವನ್ನೆಲ್ಲ ನೋಡಿಕೊಳ್ಳಲು ಅನುಕೂಲವಾಗುವಂತೆ ನನಗೆ ಸೀಮೆ ತಳವಾರಿಕೆ ಇತ್ಯಾದಿ ನಡೆದುಕೊಂಡು ಬರುವ ಹಾಗೆ ದಯಪಾಲಿಸಬೇಕು” ಎಂದನು. ಅದಕ್ಕೆ ಸಕಲ ಸಾಮಾಜಿಕರು (ಪ್ರಮುಖರು) ಸರದಾರರು ಅವನ ಬೇಡಿಎಕಯನ್ನು ಬೆಂಬಲಿಸಿ, ದೊರೆಯಲ್ಲಿ ಕೇಳಿಕೊಂಡರು. ದೊರೆ ಕೃಷ್ಣರಾಯ ಅದರಂತೆ ತಿಮ್ಮ ರಾವುತನ ಕೋರಿಕೆಯನ್ನು ಈಡೇರಿಸಿದನು.

ಅಪೂರ್ಣವಾಗಿ ದೊರೆತಿರುವ ಮತ್ತೊಂದು ನಿರೂಪ ಪ್ರತಿ ತಿಮ್ಮರಾವುತನ ಇನ್ನೊಂದು ಸಾಹಸದತ್ತ ಬೆರಳುಮಾಡುತ್ತದೆ. ಇವನ ಘನ ಸಾಹಸಗಳ ಬಗ್ಗೆ ಕೇಳಿದ ಒಬ್ಬ ಬಾದಶಹ ಇದರಲ್ಲಿ ಕೂಡಾ ಡಿಳ್ಳಿ ಬಾದಶಹ ಎಂದೇ ಹೇಳಿದೆಯಾದರೂ, ಹಿಂದೆ ಹೇಳಿದಂತೆ ಇವನು ನಿಜವಾಗಿ ಡಿಳ್ಳಿಯವನಿರದೆ, ವಿಜಯನಗರದ ನೆರೆಯ ಬಹಮನಿ ಸುಲ್ತಾನರಲ್ಲಿ ಯಾರಾದರೊಬ್ಬನಿರಬಹುದು ಎನಿಸುತ್ತದೆ, ೧೨೦ ಜನ ಜಟ್ಟಿಯರ ಸಂಗಡ ಆಭರಣ, ಉಡುಗೊರೆ, ಕಾಣಿಕೆ ಮುಂತಾದವನ್ನು ಆನೆಯ ಮೇಲೆ ಹೇರಿಸಿ ಸಾಗಿಸಿ, ಈ ೧೨೦ ಜಟ್ಟಿಯರೊಂದಿಗೆ (ಏಕಕಾಲದಲ್ಲಿ) ಹೋರಾಡಿ ಗೆದ್ದ ವೀರನಿಗೆ ಆ ಎಲ್ಲ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಕಳಿಸಿರುವುದರ ಬಗ್ಗೆ (ಹಿಂದೆ ಮಾಡಿದಂತೆಯೇ) ೧೨೦೦೦ ಜನ ವಜೀರರ ನಡುವೆ ಘೋಷಣೆ ಮಾಡಿಸಿದಾಗ, ಆಗಲೂ ಯಾರೂ ಮುಂದೆ ಬರದಿದ್ದಾಗ ದೊರೆ ತಿಮ್ಮರಾವುತನನ್ನು ಕರೆದು “ಈ ಹಿಂದೆ ನೀನು ನಾಲ್ಕು ಹುಲಿಗಳನ್ನು ಕೊಂದು ನಿನ್ನ ಸಾಮರ್ಥ್ಯ ತೋರಿದ್ದೀಯ, ಈಗ ಈ ಸವಾಲನ್ನು ಸ್ವೀಕರಿಸಲು ನೀನೇ ಸಮರ್ಥ” ಎಂದಾಗ, ಅವನು “ಸ್ವಾಮಿ, ನಾನು ವೀರಾಧಿವೀರರ ಪಾದಸೇವಕನಾಗಿ, ಈ ಸವಾಲನ್ನು ಸ್ವೀಕರಿಸುತ್ತೇನೆ” ಎನ್ನುವವರೆಗೆ ಈ ನಿರೂಪದ ಪ್ರತಿಯಿಂದ ತಿಳಿಯುತ್ತದೆ. ಮುಂದೆ ತಿಮ್ಮರಾವುತ ಆ ೧೨೦ ಜಟ್ಟಿಗಳೊಂದಿಗೆ ಹೋರಾಡಿ ಅವರನ್ನು ಮಣಿಸಿ, ಎಲ್ಲ ಮಾನ ಸನ್ಮಾನಗಳನ್ನೆ ಪಡೆದಿರಬೇಕೆಂದು ಕಾಣುತ್ತದೆ.

ಇಲ್ಲಿ ಗಮನಿಸಬೇಕಾದ ಒಂದೆರಡು ಮುಖ್ಯ ಸಂಗತಿಗಳಿವೆ, ಅವೆಂದರೆ, ತಿಮ್ಮರಾವುತ ಈ ಜಟ್ಟಿಗಳೊಂದಿಗೆ ಹೋರಾಡುವ ಕಾಲಕ್ಕಾಗಲೇ ನಾಲ್ಕು ಹುಲಿಗಳನ್ನು ಕೊಂಡು ಸಾಹಸವನ್ನು ಮೆರೆದಿದ್ದ ಎಂಬ ಸಂಗತಿ ಒಂದಾದರೆ, ಅವನು ಹುಲಿಯನ್ನು ಕೊಂದ ಸಾಹಸದ ಸುದ್ದಿ ಆ ವೇಳೆಗಾಗಲೇ ಸಾಮ್ರಾಜ್ಯದಾದ್ಯಂತ ಮತ್ತು ಇತರ ಸಾಮ್ರಾಜ್ಯಗಳವರೆಗೆ ಹರಡಿತ್ತು ಎಂಬ ಸಂಗತಿ ಇನ್ನೊಂದು. ವಿಜಯನಗರಕ್ಕೆ ಶತ್ರು ಪಕ್ಷದವರಾದ ಬಹಮನಿ ರಾಜ್ಯದಂಥವರು ಇಂಥ ಸುದ್ದಿ ಕೇಳಿ ತಿಮ್ಮರಾವುತನಂತ ವೀರರಿದ್ದ ವಿಜಯನಗರದ ಬಗ್ಗೆ ಆತಂಕಗೊಂಡಿದ್ದರೆ ಅದು ಸಹಜವೇ. ಹಾಗೇ ಇನ್ನೂ ಎಂಥೆಂಥ ಸಾಹಸ ಮಾಡಬಲ್ಲವರಿದ್ದಾರೋ ಎಂದು ಪರೀಕ್ಷೆ ಮಾಡಲು, ಮೇಲೆ ಹೇಳಿದಂಥ ಕೆಲವು ಸವಾಲುಗಳನ್ನೊಡ್ಡುವ ಪ್ರಯತ್ನ ಮಾಡಿದ್ದರೆ ಅದೂ ಕೂಡಾ ಸಹಜವೇ. ಶತ್ರು ಪಕ್ಷದವನೇ ಇದ್ದರೂ ‘ಗುಣಕ್ಕೆ ಮಾತ್ಸರ್ಯವಿಲ್ಲ’ ಎಂಬಂತೆ ಪರೋಕ್ಷವಾಗಿ ತಿಮ್ಮರಾವುತನಂಥವರ ಬಗ್ಗೆ ಗೂಢವಾದ ಮೆಚ್ಚುಗೆ ಇದ್ದರೂ ಆಶ್ಚರ್ಯವಿಲ್ಲ. ಈ ಪರೀಕ್ಷಾ ಪ್ರಯತ್ನಗಳು ನಡೆಯುವ ಕಾಲದಲ್ಲಿ ಶತ್ರುಪಕ್ಷದವರು ಯುದ್ಧಕ್ಕೆ ತೊಡಗದೆ ಕೆಲಕಾಲ ಗಾಢ ಶಾಂತಿ ನೆಲೆಸಿದ್ದಂತೆ ಕಾಣುತ್ತದೆ.

ಒಟ್ಟಿನಲ್ಲಿ ತಿಮ್ಮರಾವುತನ ಸಾಹಸ ಪ್ರಸಂಗಗಳು ಅಂದಿನ ಹಂಡೆಕುರುಬ ಸಮುದಾಯದ ಕೆಲವು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳಿಗೆ ಕನ್ನಡ ಹಿಡಯುವಂತಿವೆ. ಆ ಸಮುದಾಯದವರಲ್ಲಿ ತೆರ (ಕನ್ಯಾಶುಲ್ಕ ಅಥವಾ ವಧುದಕ್ಷಿಣೆ) ಮತ್ತು ಮದುವೆ ಸುಂಕ ಇವನ್ನು ಕೊಡುವಷ್ಟು ಆರ್ಥಿಕ ಚೈತನ್ಯ ಅನೇಕರಿಗೆ ಆಗ ಇರಲಿಲ್ಲ ಎಂಬುದೂ ತಿಮ್ಮರಾವುತನ ಸ್ವಜನ ಹಿತದೃಷ್ಟಿ ಹಾಗೇ ನಿಸ್ವಾರ್ಥದೃಷ್ಟಿ ಆ ಸಮುದಾಯಕ್ಕೆ ಎಷ್ಟೊಂದು ಹಿತಕಾರಿಯಾಯಿತೆಂಬುದೂ, ವಿಜಯನಗರದ ದೊರೆಗಳವರು ಯಾವ ಜಾತಿ ಭೇದ ಭಾವನೆ ಇಲ್ಲದೆ ಸಾಮರ್ಥ್ಯ ಅರ್ಹತೆಗಳನ್ನು ಪುರಸ್ಕರಿಸಿದ್ದು ಈ ಸಮುದಾಯದ ಏಳಿಗೆಗೆ ಸಹಕಾರಿಯಾಗಿರಬೇಕೆಂಬುದೂ ಮನಸ್ಸಿಗೆ ಬರುತ್ತವೆ.

ಹಂಡೆ ಕುರುಬ ಸಮುದಾಯದವರು ಕೆಲವು ಗ್ರಾಮಗಳಲ್ಲಿ ಗೌಡಿಕೆ ಮಾಡುತ್ತಿದ್ದರೆಂದು ಹಿಂದೆಯೇ ಪ್ರಸ್ತಾಪಿಸಲಾಗಿದೆಯಷ್ಟೆ. ಅವರು ಚಿತ್ರದುರ್ಗ ಸಂಸ್ಥಾನದೊಳಗಣ ಗ್ರಾಮವೊಂದರಲ್ಲಿ ಗೌಡಿಕೆ ನಡೆಯಿಸುತ್ತಿದ್ದ ಕಾಲದಲ್ಲಿ ನಡೆಯಿತೆನ್ನಲಾದ ಘಟನೆಯೊಂದನ್ನು ಇಲ್ಲಿ ಹೇಳಬೇಕಾಗುತ್ತದೆ. ತಾಮ್ರ ಶಾಸನವೊಂದು ಹೇಳುವ ಆ ಘಟನೆ ಹೀಗಿದೆ:

(ಕ್ರಿ.ಶ.೧೭ನೆಯ ಶತಮಾನದ ಸುಮಾರು ಮಧ್ಯಕಾಲದಲ್ಲಿ) ಚಿತ್ರದುರ್ಗ ಪ್ರಾಂತದಲ್ಲಿ ಕೆನ್ನಳ್ಳಿ ಎಂಬ ಗ್ರಾಮದಲ್ಲಿ ಹಂಡೆಕುರುಬರ ಸಮುದಾಯದ ತಿಮ್ಮರಾವುತ ಎಂಬುವನು ಗೌಡಿಕೆ ಮಾಡುತ್ತಿದ್ದ. ಅವನ ಮಗಳು ಲಕ್ಕು (<ಲಕ್ಷ್ಮಿ). ಪ್ರಾಯಶಃ ಅತ್ಯಂತ ರೂಪವತಿಯಾಗಿದ್ದ ಆಕೆಯ ಮೇಲೆ ಚಿತ್ರದುರ್ಗದ ದೊರೆ ೨ನೇ ಇಮ್ಮಡಿ ಮದಕೇರಿ ನಾಯಕ ಮನಸ್ಸಿಟ್ಟನಾದ ಕಾರಣ ಅವಳನ್ನು ಮದುವೆ ಮಾಡಿಕೊಳ್ಳಲು ಬಯಸಿ, ಆ ಬಗ್ಗೆ ಪ್ರಸ್ತಾಪ ಮಾಡಲು ತನ್ನ ಇಬ್ಬರು ದಳವಾಯಿಗಳನ್ನು ಕಳಿಸಿಕೊಟ್ಟ. ಅವರು ಕೆನ್ನಳ್ಳಿಗೆ ಬಂದು ಈ ಬಗ್ಗೆ ಪ್ರಸ್ತಾಪ ಮಾಡಿದಾಗ ರಾವುತರಿಗೆ ಸಿಟ್ಟು ಬಂದು. ಅವರು “ನಮ್ಮ ಜಾತಿಯವರಲ್ಲಿ ವಾಲ್ಮೀಕಿ ಜಾತಿಯವರು ಹೆಣ್ಣು ಕೇಳಲಿಕ್ಕೆ ಯಾವ ಹಕ್ಕಿದೆ?” ಎಂದು ಪ್ರಶ್ನಿಸಿ, ಕಡೆಗೆ ಆ ದಳವಾಯಿಗಳ ಕಾಲಿಗೆ ಹಗ್ಗ ಕಟ್ಟಿ ಗ್ರಾಮದ ಹೊರಕ್ಕೆ ಎಳೆಸಿ ಹಾಕಿಸಿದರು. ಆಗ ಅವರು ಬಂದು ದೊರೆಯಲ್ಲಿ ಫಿರಿಯಾದಿ ಹೇಳಿದರು. ದೊರೆ ಕುಪಿತನಾಗಿ ೧೬೮ ಮಂದಿ ಜವಾನರನ್ನು ಕೆನ್ನಳ್ಳಿಗೆ ಕಳಿಸಿದ. ಅವರು ಬಂದವರೇ ಲೂಡಿ ಮಾಡುವುದು, ಬಣವೆ ಬೆಳೆಗಳಿಗೆ ಬೆಂಕಿ ಹಚ್ಚುವುದು, ಮಾಡಿ ಕಡೆಗೆ ಆ ರಾವುತರ ಮನೆಯನ್ನು ಮುತ್ತಿ ಲಕ್ಕುವನ್ನು ಹಿಡಿದರು. ಆಗ ಕೆನ್ನಳ್ಳಿಯ ಹಿರಿಯರಾವುತರು ೫ ಜನ, ಕಿರಿಯರು ೧೫ ಜನ ಒಟ್ಟು ೨೦ ಜನ ಸೇರಿ ೧೬೮ ಜವಾನರ ಮೇಲೆ ಬಿದ್ದರು. ಆಗ ನಡೆದ ಲಡಾಯದಲ್ಲಿ ದೊರೆಯ ಕಡೆಯವರು ೧೧೨ ತಲೆಗಳು ಬಿದ್ದವು; ರಾವುತರಲ್ಲಿ ೯ ತಲೆಗಳು ಬಿದ್ದವು. ಉಳಿದ ದೊರೆಯ ಕಡೆಯವರು ಅಲ್ಲಿಂದ ಓಡಿ ಹೋದರು. ರಾವುತರಲ್ಲಿ ಸತ್ತ ೯ ಜನರಿಗೆ ಕಿಚ್ಚು ಹಾಕಿದಾಗ, “ನನ್ನಿಂದಾಗಿ ನನ್ನ ಅಣ್ಣಂದಿರು ಸತ್ತರು” ಎಂದು ಲಕ್ಕು ತಾನೂ ಅದೇ ಕಿಚ್ಚಿಗೆ ಹಾರಿ ಪ್ರಾಣ ದೊರೆದಳು. “ದೊರೆಯ ದ್ವೇಷ ಕಟ್ಟಿಕೊಂಡದ್ದಾಯಿತು. ಇತ್ತ ಲಕ್ಕು ಕೂಡಾ ತೀರಿಹೋದಳು. ನಾಳೆ ನಾವು ಬದುಕಿ ಉಳಿಯುವುದು ಕಷ್ಟ” ಎಂದು ರಾವುತರು ರಾತ್ರಿಯಲ್ಲೇ ತಮ್ಮ ದೇವರುಗಳನ್ನು ಬಂಡಿಯಲ್ಲಿ ಹೇರಿಕೊಂಡು ಇಕ್ಕೇರಿ ಸೀಮೆಗೆ ಹೋಗಿ ಅಲ್ಲಿ ಆಶ್ರಯ ಪಡೆದರು.

ಆಗ ಇಕ್ಕೇರಿಯಲ್ಲಿ ಆಳುತ್ತಿದ್ದ ಶಿವಪ್ಪನಾಯಕ (೧೬೪೬-೧೬೬೧) ದೊರೆಗೆ ದುರ್ಗದ ದೊರೆ “ನಮ್ಮ ಪ್ರಾಂತರ ರಾವುತರು ನಿಮ್ಮ ಪ್ರಾಂತಕ್ಕೆ ಬಂದು ಮರೆಬಿದ್ದಿದ್ದಾರೆ. ಅವರನ್ನು ಹಿಡಿದು ನಮಗೊಪ್ಪಿಸಿ” ಎಂದು ಪತ್ರ ಕಳಿಸಿದಾಗ, ಶಿವಪ್ಪನಾಯಕ “ನಾವು ಇಕ್ಕೇರಿಯವರು, ಮರೆಬಿದ್ದವರನ್ನು ಬಿಟ್ಟುಕೊಡುವವರಲ್ಲ. ನಾವು ಈ ರಾವುತರ ಪರಾಕ್ರಮಕ್ಕೆ, ಲಕ್ಕು ಕೊಂಡಕ್ಕೆ ಬಿದ್ದದ್ದಕ್ಕೆ ಮೆಚ್ಚಿಕೊಂಡಿದ್ದೇವೆ” ಎಂದು ಮಾರುತ್ತರದ ಪತ್ರ ಕಳಿಸಿದನು. ಆ ತರುವಾಯ ಶಿವಪ್ಪನಾಯಕ ದೊರೆ “ನಿಮಗೇನು ಬೇಕೋ ಕೇಳಿ” ಎಂದಾಗ ರಾವುತರು “ಡಿಳ್ಳಿ ಸೀಮೆಗೆ ಸೇರಿದ ತಿಮ್ಮನ ಕಟ್ಟೆ, ವಿಜಯನಗರದ ಸೀಮೆಗೆ ಸೇರಿದ ಕೆಲಕೋಟೆಪುರ ಮತ್ತು ಹಿಡಂಬದುರ್ಗ ಸೀಮೆಗೆ ಸೇರಿದ ಕೆನ್ನಳ್ಳಿ, ಈ ಗ್ರಾಮಗಳಲ್ಲಿ ನಮ್ಮ ದೇವರುಗಳಿಗೆ ಯಾರಿಂದಲೂ ಯಾವ ಅಡ್ಡಿಯೂ ಬರದ ಹಾಗೆ ನೋಡಿಕೊಳ್ಳುತ್ತೇವೆ. ಜೊತೆಗೆ ನಮ್ಮ ಜಾರಿಯವರ ಏನೇ ಲೋಪದೋಷಗಳನ್ನೂ ನಾವೇ ವಿಚಾರಿಸಿಕೊಳ್ಳುತ್ತೇವೆ. ಹಿಂದೆ ರಾಜರು ನಮಗೆ ಇಂಥ ಅಧಿಕಾರ ಹಕ್ಕು ಕೊಟ್ಟಿದ್ದಂತೆ, ಈಗ ನಮ್ಮ ಕಡೆಯಿಂದಲೂ ಅಂಥದೇ ಹುಕುಂ ಆಗಬೇಕು” ಎಂದು ಕೇಳಿಕೊಂಡಾಗ ಶಿವಪ್ಪನಾಯಕ ದೊರೆ ಅದಕ್ಕೊಪ್ಪಿ ತನ್ನ ಪ್ರಧಾನದ ಸಮಕ್ಷಮದಲ್ಲಿ ಅವರಿಗೆ  ಗ್ರಾಮ ನೇಮಕ ಮಾಡಿಕೊಟ್ಟನು.

ಈ ಮೇಲಿನ ಪ್ರಸಂಗದಿಂದ ಹಂಡೆ ಕುರುಬ ಸಮುದಾಯದವರು ಸಾಮಾನ್ಯ ಪ್ರಜೆಗಳಾದರೂ, ದೊರೆಯನ್ನು ಎದುರುಹಾಕಿಕೊಳ್ಳುವಷ್ಟರ ಮಟ್ಟಿಗೆ ತಾವು ನಂಬಿದ್ದ ತಮ್ಮ ಸಮುದಾಯದ ಪಾವಿತ್ರ್ಯಕ್ಕೆ ಪ್ರಜ್ಞಾ ಪೂರ್ವಕವಾಗಿ ಪ್ರತಿಕ್ರಿಯಿಸುತ್ತಿದ್ದರೆಂದು ವ್ಯಕ್ತವಾಗುತ್ತದೆ. ಅವರು ಹಾಗೆ ಮಾಡಿದ್ದು ಸಾಮಾನ್ಯ ಸಂಗತಿಯಾಗಿ ಕಾಣುವುದಿಲ್ಲ. ಮುಂದೆ ಅವರು ಶಿವಪ್ಪನಾಯಕ ದೊರೆ “ನನ್ನಿಂದ ನಿಮಗೇನು ಸಹಾಯವಾಗಬೇಕು” ಎಂದು ಕೇಲಿದಾಗಲೂ ಅವರು ಅದೇ ರೀತಿ ತಮ್ಮ ಸಮುದಾಯದ ಆಗು-ಹೋಗುಗಳಲ್ಲಿ ಕಟ್ಟುಪಾಡುಗಳಲ್ಲಿ ಅನ್ಯಜಾತಿಯವರು ಕೈಹಾಕದಂತೆ, ತಾವೇ ನಿಭಾಯಿಸಿಕೊಂಡು ಹೋಗುವಂತೆ, ಅಪ್ಪಣೆ ನೀಡಬೇಕು ಎಂದು ಕೇಳುವುದು ಸಹ ಮೇಲೆ ಹೇಳಿದ ಅಂಶಕ್ಕೆ ಪೂರಕವಾಗಿದೆ. ಅವರ ಸ್ವಾಭಿಮಾನವನ್ನು ಪರೋಕ್ಷವಾಗಿ ಹೇಳುವಂತಿದೆ. ಈ ಮೇಲಿನ ಎಲ್ಲ ಘಟನೆಗಳಿಂದ ಹಂಡೆ ಕುರುಬ ಸಮುದಾಯದವರು ನಿಧಾನವಾಗಿ ತಮ್ಮ ಕುಲಕಸುಬಿನ ಬದಲಿಗೆ ಗೌಡಿಕೆ, ಸರದಾರಿಕೆ, ಫೌಜುದಾರಿಕೆ, ರಾವುತಿಕೆ ಹೀಗೆ ಬೇರೆ ಬೇರೆಯ ಹೊಣೆಗಾರಿಕೆಯ ಸ್ಥಾನಗಳಲ್ಲಿ ಮತ್ತು ರಾಜರಸೇವೆಯಲ್ಲಿ ತೊಡಗಿ, ತಮ್ಮ ದಕ್ಷತೆ, ಸಾಮರ್ಥ್ಯಗಳಿಂದ ಜನಮನ್ನಣೆ ರಾಜಮನ್ನಣೆಗಳಿಸಿ ಗುರುತಿಸಲ್ಪಡುವಂತಾಗಿದ್ದರೆಂದೂ ಹೇಳಬಹುದು.

ಇದರ ಜೊತೆಗೆ ಹಂಡೆಕುರುಬ ಸಮುದಾಯವರು ಪಾಳೆಯಪಟ್ಟುಗಳ ಅಧಿಪತಿಗಳಾಗಿ ಸಹ ಇತಿಹಾಸದಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಿರುವುದನ್ನು ಇಲ್ಲಿ ಸ್ವಲ್ಪ ಅವಲೋಕಿಸಬಹುದು; ಇತಿಹಾಸದಲ್ಲಿ ಇವರು ‘ಹಂಡೆ ಪಾಳೆಯಗಾರರು’ ಎಂದು ಪ್ರಸಿದ್ಧರಾಗಿದ್ದಾರೆ. ಇವರ ಬಗ್ಗೆ ವಿವರವಾಗಿ ಬರೆಯುವುದು ಇನ್ನೊಂದು ಪ್ರತ್ಯೇಕ ಲೇಖನ ಅಥವಾ ಕಿರುಹೊತ್ತಿಗೆಯಾಗುವಷ್ಟು ವ್ಯಾಪ್ತಿಯನ್ನು ಹೊಂದಿರುವುದರಿಂದ, ಅವರ ಇತಿಹಾಸದ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ಮಾತ್ರ ಅವಲೋಕಿಸಿಲಾಗಿದೆ. ಇವರ ಇತಿಹಾಸ ರಚನೆಗೆ ಹಿಂದೆ ಹೇಲಿದಂತೆ ಹಲವು ಶಾಸನಗಳು, ಸಾಹಿತ್ಯ ಕೃತಿಗಳು, ಕೃಫಿಯತ್ತುಗಳು ಕೆಲವು ಲಿಂಗಾಯತ ಮತ್ತಿತರ ಮಠಗಳ ಸನ್ನದು-ನಿರೂಪ-ದಾನಪತ್ರಗಳು, ಇಂಥ ಅನೇಕ ಆಕರಗಳು ಸಹಾಯಕವಾಗಿವೆ. ಇಷ್ಟಾದರೂ ಇವರ ಚರಿತ್ರೆ ಪೂರ್ಣವಾಗಿ ತಿಳಿದಿದೆ ಎಂದು ಹೇಳಲಾಗುವಂತಿಲ್ಲ. ಈಗ ತಿಳಿದುಬಂದಿರುವಂತೆ ಈ ಪಾಳೆಯಗಾರರ ಮೂಲಪುರುಷ (ಲಕ್ಕಿನಾಯಕನ ಮಗನಾದ) ಬಾಲದ ಹನುಮಪ್ಪನಾಯಕ. ಈ ಮನೆತನದವರು ಮೊದಲಿಗೆ ಬಿಜಾಪುರ ಬಾದಶಹನಲ್ಲಿ ಸರದಾರರಾಗಿ ಆ ರಾಜ್ಯಕ್ಕೆ ಸೇರಿದ ಮುತ್ತಿಗೆ ವಡವಡಿಗೆ ಗ್ರಾಮಗಳಲ್ಲಿ ಇದ್ದರೆಂದೂ, ಹೀಗಿರುವಾಗ ಬಾದಶಾಹನು ದಕ್ಷಿಣಕ್ಕೆ ತನ್ನ ರಾಜ್ಯವನ್ನು ವಿಸ್ತರಿಸುವ ಆಶಯದಿಂದ ಆಗ ತನ್ನಲ್ಲಿ ಫೌಜುದಾರನಾಗಿದ್ದ ಬಾಲದ ಹನುಮಪ್ಪನಾಯಕನಿಗೆ ದಕ್ಷಿಣದಲ್ಲಿದ್ದ ಬಂಕಾಪುರವನ್ನು ಜಹಗೀರಾಗಿ ನೀಡಿ (೧೫೬೮ರಲ್ಲಿ) ಅಲ್ಲಿಗೆ ಕಳಿಸಿಕೊಟ್ಟನೆಂದೂ, ಹೀಗೆ ಬಂಕಾಪುರಕ್ಕೆ ಬಂದ ಅವನು ಅಲ್ಲಿ ಕೋಟೆ ಕಟ್ಟಿಸಿ, ಅಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ನೆಲೆಗೊಳಿಸಿದಾಗ, ಬಾದಶಹ ಅವನಿಗೆ ವಜೀರ ಬಿರುದು ಬೀಡಿ, ಬಳ್ಳಾರಿಗೆ ಕಳಿಸಿಕೊಟ್ಟಾಗ ಅಲ್ಲಿಗೆ ಬಂದ ಅವನು ಬಳ್ಳಾರಿಯ ಗುಡ್ಡಕ್ಕೆ ಹೊಂದಿಕೊಂಡಂತೆ ಅಲ್ಲೂ ಕೋಟೆ ಕಟ್ಟಿಸಿ, ಸುತ್ತ ಮುತ್ತಲ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಆಳಿದನೆಂದೂ ತಿಳಿಯುತ್ತದೆ.

ಮೊದಲಿಗೆ ಸೊನ್ನಲಪುರದಲ್ಲಿದ್ದ ಹನುಮಪ್ಪನಾಯಕನನ್ನು ವಿಜಯನಗರದ ರಾಮರಾಯ ಮತ್ತು ತಿರುಮಲರಾಯ ಇವರು ಕರೆಸಿಕೊಂಡು ತಮ್ಮಲ್ಲಿ ಸೇವೆಯಲ್ಲಿರಿಸಿಕೊಂಡರೆಂದೂ ಮುಂದೆ ಅವನು ನಿಜಾಮ್ ಶಾಹನನ್ನು ಸೆರೆಹಿಡಿದು ತಂದು ಅವರಿಗೊಪ್ಪಿಸಿ ಸಾಹಸ ಸ್ವಾಮಿಭಕ್ತಿಯನ್ನು ಮೆರೆದಿದ್ದಾಗಿ ತಿಳಿಯುತ್ತದೆ. ಹೀಗೆಯೇ ವಿಜಯನಗರದ ರಾಮರಾಯನು ಶತ್ರುಗಳಿಂದ ಸೆರೆಯಾಗಿದ್ದಾಗ ಇವನು ಹೋಗಿ ಪಾರುಮಾಡಿದನೆಂದೂ ಅದಕ್ಕೆ ರಾಮರಾಯ ಅವನಿಗೆ ಅನೇಕ ಗ್ರಾಮಗಳನ್ನು ನೀಡಿದನೆಂದು ತಿಳಿಯುತ್ತದೆ. ಆಗ ಬಂಕಾಪುರವಷ್ಟೇ ಅಲ್ಲದೆ, ಕುರುಗೋಡು, ಶಿರಗುಪ್ಪಿ, ತೆಕ್ಕಲಕೋಟೆ, ಅನಂತಪುರ, ಧರ್ಮಪುರ, ನಂದ್ಯಾಲ, ಸಿರಿವಾಳ, ಪರಗಣೆಗಳೂ, ಸಿಂಧನೂರು, ದರೋಜಿ, ವಡ್ಡು, ಕಣೇಕಲ್ಲು ಮುಂತಾದ ಸಮ್ಮತ್ತುಗಳೂ ಇವನ ಆಳ್ವಿಕೆಯ ವ್ಯಾಪ್ತಿಗೆ ಬಂದಿದ್ದವು. ಇಷ್ಟೊಂದು ವಿಶಾಲ ಪ್ರಾಂತಾಧಿಕಾರ ಹೊಂದಿದ ಇವನು ಮುಂದೆ ತನ್ನ ಮಕ್ಕಳೊಂದಿಗೆ ಬಳ್ಳಾರಿಯಲ್ಲಿದ್ದು ಕೆಲಕಾಲ ರಾಜ್ಯಭಾರ ಮಾಡಿದ. ಇವನ ಆಳ್ವಿಕೆ ೧೫೩೭ಕ್ಕೆ ಮುಂಚಿನಿಂದಲೇ ಪ್ರಾರಂಭವಾಗಿದ್ದಂತೆ ತಿಳಿದುಬಂದಿದೆ.

ಬಾಲದ ಹನುಮಪ್ಪನಾಯಕನಿಗೆ ಐದು ಜನ ಗಂಡುಮಕ್ಕಳೂ ಒಬ್ಬ ಮಗಳೂ ಇದ್ದರು. ಮುಂದೆ ರಾಜ್ಯಕ್ಕಾಗಿ ಗಂಡು ಮಕ್ಕಳು ತಮ್ಮ ತಮ್ಮಲ್ಲಿ ಯಾವುದೇ ಅಸಮಾಧಾನ, ಘರ್ಷಣೆ ಆಗದ ಹಾಗೆ ಮತ್ತು ತಂದೆ ಗಳಿಸಿದ ರಾಜ್ಯ ವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ಅಡ್ಡಿಯಾಗದ ಹಾಗೆ, ಅವರು ಹಂಚಿಕೊಂಡರು. ಹಿರಿತನದ ಅನುಕ್ರಮದಲ್ಲಿ ಅಂಕುಶರಾಯನಿಗೆ ಬಂಕಾಪುರದ ಸೀಮೆ, ದೇವಪ್ಪನಾಯಕನಿಗೆ ಸಿರಿವಾಳದ ಸೀಮೆ, (ನಿಚ್ಚಮದುವಣಿಗ ಅಥವಾ ನಿಚ್ಚ ಮದಲಿಂಗ ಎಂಬ ಅನ್ವರ್ಥನಾಮ ಹೊಂದಿದ್ದ) ರಾಮಪ್ಪನಾಯಕನಿಗೆ ಕುಂದುರ್ಪೆ ಸೀಮೆ, ಹಿರಿಯ ಮಲಕಪ್ಪನಾಯಕನಿಗೆ ಬಳ್ಳಾರಿ, ಕುರುಗೋಡು, ತೆಕ್ಕಲಕೋಟೆ, ಸಿನ್ನೂರು, ಸಿರುಗುಪ್ಪತಿ, ಮೇಕೆ ಇತ್ಯಾದಿ ಸೀಮೆ ಮತ್ತು ಚಿಕ್ಕಮಲಕಪ್ಪನಾಯಕನಿಗೆ ಅನಂತಪುರ ಧರ್ಮಾವರಂ ಸೀಮೆ- ಹೀಗೆ ಹಂಚಿಕೆ ಮಾಡಿಕೊಂಡರು. ಹೀಗೆ ಇವರು ಹಂಚಿಕೊಂಡ ಪ್ರಾಂತಗಳಲ್ಲಿ ಮುಂದೆ ಕೆಲಕಾಲ ಅವರ ಆಳ್ವಿಕೆ ಸಾಗಿತು. ಇವರಲ್ಲಿ ಮೂರನೆಯ ಹಾಗೂ ನಾಲ್ಕನೆಯ ಮಕ್ಕಳಾದ ಉಳಿಯದೆ, ಅವರಿಗೆ ಸೇರಿದ್ದ ಪ್ರಾಂತ್ಯಗಳು ಉಳಿದ ಸೋದರ ಸಂತತಿಯವರ ಪಾಲಾಗಿ ಅನೇಕ ವರ್ಷಗಳವರೆಗೆ ಈ ಹಂಡೆ ಮನೆತನದವರ ಆಳ್ವಿಕೆ ನಡೆಯಿತು.

ಬಾಲದ ಹನುಮಪ್ಪನಾಯಕನ ಐದು ಜನ ಗುಂಡುಮಕ್ಕಳನ್ನು ಕುರುಗೋಡು ಕೃಫಿಯತ್ತಿನಲ್ಲಿರುವ ಒಂದು ಭಟ್ಟಾಂಗಿಇ ಪದ್ಯ, ಅನುಕ್ರಮವಾಗಿ ಪಾಂಡವರಿಗೆ ಹೋಲಿಸಿ ಹೀಗೆ ವರ್ಣಿಸುತ್ತದೆ.

ಧರೆಗೇ ಧರ್ಮಜನಂಕುಶ
ಪರಬಲದೊಳ್ ಭೀಮ ದೇವ ಅರ್ಜುನ ರಾಮಂ
ಧುರಧೀರ ಕುಲ ಮಲ್ಕನು
ನೆರೆ ಗೆಲ ಸಹದೇವ ಚಿಕ್ಕಮಲ್ಯ ವಜೀರಾ

ಹೀಗೆ ವರ್ಣಿಸುವುದರ ಜೊತೆಗೆ, ಅಂಕುಶರಾಯ ಬಹುಧರ್ಮಿಷ್ಠ, ದ್ಯಾವಣ್ಣನಾಯಕ ಬಹುಪರಾಕ್ರಮಿ, ನಿಚ್ಚಮದುವಣಿಗ ರಾಮಪ್ಪನಾಯಕ ಬಹುಭೋಗಿ, ಹಿರೇಮಲ್ಕಪ್ಪನಾಯಕ ಮತ್ತು ಚಿಕ್ಕಮಲ್ಕಪ್ಪನಾಯಕ ಇವರು ಪ್ರಸಿದ್ಧ ಪುರುಷರು ಎಂದೂ ಹೇಳುತ್ತದೆ.

ಬಾಲದ ಹನುಮಪ್ಪ ನಾಯಕನಿಗೂ ಬಿಜಾಪುರದ ಬಾದಶಹನಿಗೂ ವೈಮನಸ್ಯ ಉಂಟಾದ ಒಂದು ಕುತೂಹಲಕಾರಿ ಪ್ರಸಂಗವನ್ನು ಕುರುಗೋಡು ಮತ್ತು ಬಳ್ಳಾರಿ ಕೈಫಿಯತ್ತುಗಳೆರಡೂ ಹೇಳುತ್ತವೆ. ಅದನ್ನು ಇಲ್ಲಿ ಹೀಗೆ ಸಂಗ್ರಹಿಸಬಹುದು: ಬಾಲದ ಹನುಮಪ್ಪ ನಾಯಕನು ಒಮ್ಮೆ ತನ್ನ ಐವರು ಗಂಡು ಮಕ್ಕಳೊಂದಿಗೆ ಬಿಜಾಪುರಕ್ಕೆ ಹೋಗಿ ಬಾದಶಹನನ್ನು ಕಂಡಾಗ, ಬಾದಶಹನು ನಾಯಕನ ಸ್ಫುರದ್ರೂಪಿಗಳಾದ ಆ ಮಕ್ಕಳನ್ನು ಕಂಡು, “ಈ ಮಕ್ಕಳೊಳಗೆ ಒಬ್ಬನನ್ನು ನಮಗೆ ಕೊಡು” ಎಂದು ನಾಯಕನನ್ನು ಕೇಳಿದನು. ಆಗ ನಾಯಕನು ತನ್ನ ಮಕ್ಕಳಲ್ಲೊಬ್ಬನನ್ನು ಮುಸ್ಲಿಮನಾಗಿ ಮತಾಂತರಿಸಿ ತನ್ನಲ್ಲಿ ಇಟ್ಟುಕೊಳ್ಳಬೇಕೆಂಬ ಬಯಕೆ ಬಾದಶಹನಿಗಿರುವುದನ್ನು ಗ್ರಹಿತಿ, ಕೋಪ ಬಂದು “ನಿಮ್ಮ ಜನಾನಾ (ಅಂತಃಪುರ)ದಲ್ಲಿ ಒಬ್ಬ ಬೀಬಿ (ಸತಿ)ಯನ್ನು ಕೊಟ್ಟರೆ, ಈ ರೀತಿ ಇರುವ ಮಗನನ್ನು ಹುಟ್ಟಿಸಿಕೊಡುತ್ತೇನೆ” ಎಂದನು. ಹಾಗೆಂದವನೇ ಅಲ್ಲಿ ನಿಲ್ಲದೆ ಹೊರಟು ತ್ವರಿತವಾಗಿ ತನ್ನ ಸೈನ್ಯ ಸಹಿತವಾಗಿ ಬಿಜಾಪುರವನ್ನು ತೊರೆದು ಸಾಗಿದಾಗ, ಬಾದಶಹನ ೧೦ ಸಾವಿರದಷ್ಟು ಫೌಜು ಬೆನ್ನಟ್ಟಿ ಬರು, ನಾಯಕನು ತನ್ನೆಲ್ಲ ಜನ ಸಮೇತ ಕೃಷ್ಣಾನದಿಯನ್ನು ದಾಟಿ ಮುಂದಕ್ಕೆ ಹೋದನು. ಆದರೆ ಬಾದಶಹನ ದಂಡು ಮಾತ್ರ ನದಿ ದಾಟಲಾಗದೆ ವಾಪಸಾಗಿ ನಡೆದ ಸಂಗತಿಯನ್ನು ಬಾದಶಹನಿಗೆ ವರದಿ ಮಾಡಿತು. ಇತ್ತ ಬಾಲದ ಹನುಮಪ್ಪ ನಾಯಕನು ತನ್ನ ಮಕ್ಕಳು ಸಹಿತವಾಗಿ ಬಳ್ಳಾರಿಗೆ ಬಂದನು. ಮುಂದೆ ಅವನು ಅಲ್ಲಿ ಕೆಲಕಾಲ ರಾಜ್ಯವಾಗಿ ನಿಧನನಾಗಲಾಗಿ, ಅವನ ಮಕ್ಕಳು ಮೇಲೆ ಹೇಳಿದಂತೆ ರಾಜ್ಯವನ್ನು ಹಂಚಿಕೊಂಡು ಆಳತೊಡಗಿದರು.

ಬಾಲದ ಹನುಮಪ್ಪನಾಯಕನ ಹಿರಿಯಮಗನಾದ ಅಂಕುಶರಾಯ ತಂದೆ ಮರಾಣಾನಂತರ ಬಂಕಾಪುರ, ನಂದ್ಯಾಲ, ಸಿರಿವಾಳ ಈ ಸೀಮೆಗಳ ಪ್ರಭುವಾಗಿದ್ದ. ಇವನ ಮರಣಾನಂತರ ಇವನ ಮಕ್ಕಳಾಗಿದ್ದ ಸಿದ್ಧಪ್ಪನಾಯಕ, ಪ್ರಸನ್ನಪ್ಪನಾಯಕ ಇವರು ಆಳುತ್ತಿದ್ದಾಗ, ಬಿಜಾಪುರದ ಆದಿಲ್‌ಶಾಹನ ಆಕ್ರಮಣದಿಂದ ತಮ್ಮ ಪ್ರಾಂತವನ್ನು ಕಳೆದುಕೊಂಡು ಬಳ್ಳಾರಿಯ ಸಮೀಪದ ಹಂದರಹಾಳು ಎಂಬಲ್ಲಿ ಒಕ್ಕಲುತನದ ವೃತ್ತಿಯನ್ನು ಕೈಕೊಳ್ಳಬೇಕಾಯಿತು. ಈ ಸಿದ್ಧಪ್ಪನಾಯಕನಿಗೆ ದೊಡ್ಡ ತಲೆ ರಾಮಪ್ಪನಾಯಕ ಮತ್ತು ಹನುಮಪ್ಪನಾಯಕ, ಇವರು ಇಬ್ಬರು ಮಕ್ಕಳು. ಬಾಲದ ಹನುಮಪ್ಪನಾಯಕನ ಕೊನೆಯ ಮಗ ಚಿಕ್ಕಮಲಕಪ್ಪನ ಸಂತತಿಯಲ್ಲಿ ಮುಂದೆ ಬಂದ ದ್ಯಾವಪ್ಪನಾಯಕ ಎಂಬುವನ ಹಿರಿಯ ಪತ್ನಿ ಪದ್ಮಮ್ಮನಲ್ಲಿ ಹನುಮಪ್ಪನಾಯಕ, ಹಿರಿಯ ರಾಮಪ್ಪನಾಯಕ ಮತ್ತು ಚಿಕ್ಕರಾಮಪ್ಪ ನಾಯಕ ಎಂಬ ಮಕ್ಕಳಿದ್ದು, ಕಿರಿಯ ಪತ್ನಿ ನೀಲಮ್ಮನಿಗೆ ಸಂತಾನವಿರಲಿಲ್ಲ. ಹಿರಿಯ ಹೆಂಡತಿಯ ಮಕ್ಕಳು ಬಳ್ಳಾರಿ ಪರಗಣೆಯನ್ನು ಆಳಿ ಕೆಲಕಾಲಾನಂತರ ನಿಧನರಾಗಲು, ಅವರಾರಿಗೂ ಸಂತಾನವಿಲ್ಲದ ಕಾರಣ ನೀಲಮ್ಮ ಹಂದರಹಾಳಿಗೆ ಬಂದು ಮೇಳೆ ಹೇಳಿದ ಸಿದ್ಧಪ್ಪ ನಾಯಕನ ಮಕ್ಕಳನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿ, ಹಿರಿಯವನಾದ ದೊಡ್ಡ ತಲೆ ರಾಮಪ್ಪನಾಯಕ ಬಾಲಕನನ್ನು ಪಟ್ಟಕ್ಕೆ ಕೂರಿಸಿದಳು. ಅವನು ಬಳ್ಳಾರಿ, ಸಿರಿಗೇರಿ, ಎಮ್ಮಿಗನೂರು ಮುಂತಾದ ಪರಗಣೆಗಳನ್ನು ಆಳಿದನು.

ನೀಲಮ್ಮ ದೊಡ್ಡತಲೆ ರಾಮಪ್ಪನಾಯಕನನ್ನು ಪಟ್ಟಕ್ಕೆ ಕೂರಿಸಿದಾಗ, ಕಿರಿಯವನಾದ ಹನುಮಪ್ಪನಾಯಕನಿಗೆ ಅಸಮಾಧಾನವಾದರೂ ಜೊತೆಯಲ್ಲೇ ಇದ್ದನು. ಈ ಮಧ್ಯೆ ಮೊಗಲರ ದಂಡು ಬಂದು ಆ ರಾಮಪ್ಪನಾಯಕನ ಮೇಲೆ ಆಕ್ರಮಣಮಾಡಲು ಯತ್ನಿಸಿದಾಗ, ತಮ್ಮನಾದ ಹನುಮಪ್ಪನಾಯಕನನ್ನು ಒತ್ತೆಯಾಳಾಗಿ ಕೊಡಬೇಕಾಗಿ ಬಂತು. ಗ್ರಾಮವೊಂದರ ಕೋಟೆಯೊಳಗೆ ಒಂದೆಡೆ ಅವನನ್ನು ಸೆರೆಯಲ್ಲಿಡಲಾಯಿತು. ಅಣ್ಣನಿಗೆ ಅವನನ್ನು ಬಿಡಿಸಲು ಆಗಲೇ ಇಲ್ಲ. ಹೀಗಿರುವಾಗ ಸಮಯನೋಡಿ ತಮ್ಮನು ತಾನೇ ಅಲ್ಲಿಂದ ತಪ್ಪಿಸಿಕೊಂಡು ಕೆಂಚನಗುಡ್ಡಕ್ಕೆ ಹೋಗಿ ಅಲ್ಲಿ ಆಶ್ರಯಪಡೆದನು. ಮುಂದೆ ದೊಡ್ಡ ತೆಲೆ ರಾಮಪ್ಪನಾಯಕನು ತೀರಿಹೋಗಲಾಗಿ ಹನುಮಪ್ಪನಾಯಕನನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿ ಅವನನ್ನು ಪಟ್ಟ್ಕೆ ಕೂರಿಸಿದರು. ಇವನು ಬಳ್ಳಾರಿ ಕುರುಗೋಡು ತೆಕ್ಕಲಕೋಟೆ ಈ ಪ್ರದೇಶಗಳನ್ನು ಆಳಿ ಕೆಲಕಾಲನಂತರ ನಿಧನನಾದನು. ಇವನಿಗೆ ಸಹ ಸಂತಾನವಿರದಿದ್ದರೂ, ಇವನ (ಪ್ರಿಯಪತ್ನಿ ಸಿದ್ಧರಾಮವ್ವ ಎಂಬುವಳು ಸಾಕಿ ಬೆಳೆಸಿದ್ದ) ದೊಡ್ಡಪ್ಪನಾಯಕ ಎಂಬ ಸಾಕುಮಗನಿಗೆ ಪಟ್ಟವೆಂದು ಸಾರಲಾಯಿತು. ಇದನ್ನು ಇಷ್ಟಪಡದ ಹನುಮಪ್ಪನಾಯಕನ ಧರ್ಮಪತ್ನಿ ಪದ್ಮಮ್ಮ ಎಂಬುವಳು. ತನ್ನ ಅಣ್ಣನ ಒಂದು ಚಿಕ್ಕ ಮಗುವನ್ನು ದ್ಯಾವಪ್ಪನಾಯಕ ಎಂಬ ಹೆಸರಿನಿಂದ ಪಟ್ಟಕ್ಕೆ ತರಲು ಯತ್ನಿಸಿದಳು. ಆಗ ದೊಡ್ಡತಲೆ ರಾಮಪ್ಪನಾಯಕನ ಹೆಂಡತಿ ಸಿದ್ಧಮ್ಮನಿಂದ ಆ ಕೊಲೆಯ ಪ್ರಯತ್ನ ತಪ್ಪಿ, ದೊಡ್ಡಪ್ಪನಾಯಕನು ಪಟ್ಟವೇರುವಂತಾಯಿತು.

ಮುಂದೆ ಈ ದೊಡ್ಡಪ್ಪನಾಯಕನು ಆಳುವಾಗ್ಗೆ, ಶ್ರೀರಂಗಪಟ್ಟಣದ ಹೈದರಾಲೀಖಾನ್‌ನ ದಂಡು ಬಳ್ಳಾರಿಯ ಕೋಟೆಯನ್ನು ಮುತ್ತಿದಾಗ, ಅದನ್ನು ಅವನ ದಳಪತಿಗಳು ಹೈದರಾಲಿಗೆ ಬಳ್ಳಾರಿ ವಶವಾಗದಂತೆ ಹೋರಾಡಿ ಅವನ ದಂಡನ್ನು ಅಲ್ಲಿಂದ ಕಾಲ್ತೆಗೆಸಿದರು. ಮುಂದೆ ದೊಡ್ಡಪ್ಪ ನಾಯಕನ ಆಳ್ವಿಕೆಯೇನೂ ಬಹಳ ಕಾಲ ನಡೆಯಲಿಲ್ಲ.

ಹಿಂದೆ ಹೇಳಿದ ಅಂಕುಶರಾಯನ ಎರಡನೆಯ ಮಗ ಪ್ರಸನ್ನನಾಯಕನು ರಾಜ್ಯವಾಳಿದುದರ ಬಗ್ಗೆ ವಿವರ ದೊರೆತಿಲ್ಲ. ಹಿಂದೆ ಹೇಳಿದಂತೆ ನೀಲಮ್ಮ ದೊಡ್ಡ ತಲೆರಾಮಪ್ಪನಾಯಕ (ಬಾಲಕ)ನನ್ನು ಪಟ್ಟಕ್ಕೆ ಕೂರಿಸುವಾಗ ತಂದೆ ಸಿದ್ಧಪ್ಪನಾಯಕ ಮತ್ತು ಚಿಕ್ಕಪ್ಪ ಪ್ರಸನ್ನನಾಯಕ ಇವರು ಇದ್ದರೆ ತನ್ನ ಅಧಿಕಾರ ಏನೂ ನಡೆಯದು ಎಂದು ಅವರಿಬ್ಬರನ್ನೂ ಕೊಪ್ಪಿಸಿದಳು ಎಂದು ಹೇಳಿಕೆಯಿದೆ.

ಇನ್ನು ಬಾಲದ ಹನುಮಪ್ಪನಾಯಕನ ಎರಡನೆಯ ಮಗನಾದ ದ್ಯಾಮಪ್ಪ (ದೇವಪ್ಪ) ನಾಯಕನೂ, ಕೊನೆಯ ಮಗನಾದ ಚಿಕ್ಕ ಮಲಕಪ್ಪನಾಯಕನೂ ಜಂಟಿಯಾಗಿ ಬಳ್ಳಾರಿ, ಕುರುಗೋಡು, ತೆಕ್ಕಲಕೋಟೆ, ಸಿಂಧನೂರು, ಸಿರುಗುಪ್ಪೆ, ಕಣೇಕಲ್ಲು, ರೂಪಗುಡ್ಡಿ (<ವಿರುಪನಗುಡ್ಡಿ?) ವಡ್ಡು, ದರೋಜಿ, ಇವೇ ಮೊದಲಾದ ಸೀಮೆಗಳನ್ನು ಆಳಿದರು. ಹಿಂದೆ ಹೇಳಿದಂತೆ ಬಿಜಾಪುರದ ಆದಿಲ್ ಶಹನ ದಂಡು ದಾಳಿಮಾಡಿದ ಕಾಲಕ್ಕೆ, ಬಂಕಾಪುರ ಶತ್ರುಗಳ ವಶವಾಗಿ, ದ್ಯಾಮಪ್ಪನಾಯಕ ಅವರೊಂದಿಗೆ ಕಪ್ಪಕೊಡುವ  ಒಪ್ಪಂದ ಮಾಡಿಕೊಂಡು ಕೆಲಕಾಲ ಆಳ್ವಿಕೆ ನಡೆಸಿ ಮರಣಿಸಿದನು. ಈತನ ಮಗನಾದ ಪವಾಡದ ರಾಮಪ್ಪನಾಯಕ ಕೆಲಕಾಲ ಆಳ್ವಿಕೆ ನಡೆಸಿ ಅವನೂ ಸಂತಾನರಹಿತನಾಗಿ ವಿಧಿವಶನಾದನು.

ಬಾಲದ ಹನುಮಪ್ಪನಾಯಕನ ಮೂರನೆಯ ಮಗನೇ ‘ನಿಚ್ಚಮದವಣಿಗ’ ಎಂಬ ಹೆಸರು ಹೊತ್ತ ರಾಮಪ್ಪನಾಯಕ. ಇವನು ತನ್ನ ಪಾಲಿಗೆ ಬಂದ ಪ್ರದೇಶವನ್ನು ಆಳುತ್ತಾ ಇರುವಾಗ, ಕುಂದುರ್ಪಿ ಬಳಿ ಕದನವೊಂದರಲ್ಲಿ ಗುಂಡುತಾಗಿ ಮೃತನಾದನು. ಬಾಲದ ಹನುಮಪ್ಪನಾಯಕನ ನಾಲ್ಕನೆಯ ಮಗ ಹಿರಿಯ ಮಲಕಪ್ಪನಾಯಕ ತನ್ನ ಪಾಲಿಗೆ ಬಂದ ಪ್ರದೇಶಗಳನ್ನು ಆಳಿದನು. ಇವನಿಗೆ ಸಿದ್ಧಪ್ಪನಾಯಕ ಎಂಬ ಹೆಸರಿನ ಮಗನೊಬ್ಬನಿದ್ದನೆಂದು ಹೇಳಿಕೆ ಇದ್ದರೂ ಅವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ. ಇನ್ನೂ ಬಾಲದ ಹನುಮಪ್ಪ ನಾಯಕನ ಕೊನೆಯ ಮಗ ಚಿಕ್ಕಮಲಕಪ್ಪನಾಯಕ ತನ್ನ ಪಾಲಿನ ಪ್ರದೇಶದ ಆಡಳಿತ ನಿರ್ವಹಿಸಿದ. ಅವನು ಮಗ ಚಿಕ್ಕನಾಯಕ ಸಾಹೇಬ ತಂದೆಯ ಪ್ರದೇಶಗಳನ್ನು ಆಳುವ ಉತ್ತರಾಧಿಕಾರಿಯಾದನು. ಇವನ ಆಳ್ವಿಕೆ ಸುಸೂತ್ರವಾಗಿ ನಡೆದಂತೆ ಕಾಣುವುದಿಲ್ಲ. ಏಕೆಂದರೆ ಬಿಜಾಪುರದ ಆದಿಲ್ ಶಹನ ಕಡೆಯಿಂದ ಕೆಲವು ಪ್ರದೇಶಗಳು ಕೈಬಿಟ್ಟು ಹೋಗಿ, ಮುಂದೆ ಮೊಗಲರ ಕಡೆಯಿಂದಲೂ ಕೆಲವು ಪ್ರದೇಶ ಕೈತಪ್ಪಿಹೋಗಿ, ಇವನ ಪಾಲಿಗೆ ಕೇವಲ ಕುರುಗೋಡು ಮತ್ತು ಬಳ್ಳಾರಿ ಎರಡು ಪರಗಣೆಗಳು ಮಾತ್ರ ಉಳಿದಂತೆ ಕಾಣುತ್ತದೆ. ಈ ಪರಗಣೆಗಳೊಂದಿಗೆ ತೆಕ್ಕಲಕೋಟೆಯೂ ಸೇರಿದ ‌ಪ್ರದೇಶವನ್ನು ಮುಂದೆ ಆಳಿದನು ಅವನ ಮಗನಾದ ದ್ಯಾಮಪ್ಪನಾಯಕ. ಅವನು ವೋರವಾ, ಗುತ್ತಿಗನೂರು, ಆನೆಗೊಂದಿ ಗಡಿ ಪರದೇಶ, ಯಮ್ಮಿಗನೂರು, ಹಾವಿನಹಾಲು, ಸಿರಿಗೇರಿ, ಕರೂರು, ಇವುಗಳವರೆಗೆ ತನ್ನ ರಾಜ್ಯ ವಿಸ್ತರಣೆ ಮಾಡಿ ಆಳ್ವಿಕೆ ನಡೆಸಿದ.ಇವನಿಗೆ ಮೊದಲ ಹೆಂಡತಿ ಪದ್ಮಮ್ಮನಲ್ಲಿ ಹನುಮಪ್ಪನಾಯಕ, ಹಿರಿಯ ರಾಮಪ್ಪನಾಯಕ ಮತ್ತು ಚಿಕ್ಕರಾಮಪ್ಪನಾಯಕ ಎಂಬ ಮೂರು ಮಕ್ಕಳು; ಆದರೆ ಎರಡನೆಯ ಹೆಂಡತಿ ನೀಲಮ್ಮನಲ್ಲಿ ಯಾವ ಮಕ್ಕಳೂ ಆಗಲಿಲ್ಲ. ಈ ಬಗ್ಗೆ ಹಿಂದೆಯೇ ವಿವರಿಸಲಾಗಿದೆ. ಇನ್ನೂ ಹನುಮಪ್ಪ ನಾಯಕ ಬಳ್ಳಾರಿಯಲ್ಲಿದ್ದುಕೊಂಡು ಕುರುಗೋಡು ಸೀಮೆಯನ್ನು, ಹಿರಿಯ ರಾಮಪ್ಪನಾಯಕ ಬಳ್ಳಾರಿ, ಕುರುಗೋಡು, ತೆಕ್ಕಲಕೋಡೆ ಈ ಮೂರು ಸೀಮೆಗಳನ್ನು ಚಿಕ್ಕರಾಮಪ್ಪನಾಯಕ ತೆಕ್ಕಲಕೋಟೆಯೊಂದನ್ನೂ ಅನುಕ್ರಮವಾಗಿ ಒಬ್ಬರಾದ ಮೇಲೆ ಒಬ್ಬರು ಆಲಿದಂತೆ ಹೇಳಲಾಗಿದೆ. ಈ ಮೂವರಿಗೆ ಸಂತಾನವಿಲ್ಲದ ಕಾರಣ ರಾಣಿ ನೀಲಮ್ಮ ಈ ಹಿಂದೆ ವಿವರಿಸಿರುವಂತೆ ಸಿದ್ಧಪ್ಪ ನಾಯಕ ಎಂಬುವನ ಹಿರಿಯ ಮಗ ಬಾಲಕ ದೊಡ್ಡ ತಲೆರಾಮಪ್ಪನಾಯಕನನ್ನು ಕರೆತಂದು ಅವನಿಗೆ ಪಟ್ಟಗಟ್ಟಿ ಅವನು ಪರವಾಗಿ ತಾನೇ ಕೆಲಕಾಲ ರಾಜ್ಯವಾಳಬೇಕಾಯಿತು. ಆಮೇಲೆ ದೊಡ್ಡತಲೆರಾಮಪ್ಪ ನಾಯಕನಿಗೂ ನೀಲಮ್ಮನಿಗೂ ವಿರಸವುಂಟಾದಾಗ, ಅವನು ಅವಳನ್ನೇ ಕೊಲ್ಲಿಸಿ ರಾಜ್ಯಭಾರ ಮಾಡಬೇಕಾಯಿತು.

ಇಷ್ಟು ಸುದೀರ್ಘಕಾಲ ಹಂಡೆ ಮನೆತನದವರ ಕೈಯಲ್ಲಿದ್ದ ಬಳ್ಳಾರಿಯನ್ನು ತಮ್ಮ ವಶಮಾಡಿಕೊಳ್ಳಬೇಕೆಂದು ಬಿಜಾಪುರದವರು, ಮೊಗಲರು, ಅದೋನಿ (ಆದಿವಾನಿ)ಯವರು ಕಣ್ಣಿಟ್ಟಿದ್ದರಾದರೂ, ಅಂತಿಮವಾಗಿ ಅವನ್ನು ತನ್ನ ಕೈವಶಮಾಡಿಕೊಳ್ಳುವಲ್ಲಿ ಯಶಸ್ವಿಯಾದವನು ಶ್ರೀರಂಗಪಟ್ಟಣದ ಹೈದರ್‌ಅಲೀ ಖಾನ್. ಕ್ರಿ.ಶ. ೧೭೭೫ ರಿಂದ ೧೭೮೨ರ ವರೆಗೆ ಹೈದರ್ ಮತ್ತು ತಿಪ್ಪು ಅವರ ವಶದಲ್ಲಿದ್ದ ಇದು ಮುಂದೆ ೧೭೯೨ರಲ್ಲಿ ನಡೆದ ಮೂರನೇ ಮೈಸೂರು ಯುದ್ಧದ ಅನಂತರ ಹೈದರಾಬಾದ್ ನಿಜಾಮನ ವಶಕ್ಕೆ ಬಂದು, ಆಮೇಲೆ ೧೮೦೦ರ ಹೊತ್ತಿಗೆ ಬ್ರಿಟಿಷರ ಪಾಲಾಯಿತು.

ಈ ಮೇಲಿನ ಚರಿತ್ರ ವಿವರಕ್ಕೆ ವಿಭಿನ್ನವಾದ ಚರಿತ್ರ ವಿವರಗಳು ಅನಂತಪುರ ಕೈಫಿಯತ್ತಿನಲ್ಲಿ ಕಾಣಸಿಗುತ್ತವೆ. ಕೆಲವು ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ಸಂಗ್ರಹಿಸಿದೆ. ಈ ಕೈಫಿಯತ್ತಿನ ಪ್ರಕಾರ, ಬಾಲದ ಹನುಮಪ್ಪ ನಾಯಕನ ಮಗ ಇಮ್ಮಡಿ ಹಂಪರಾಯ. ಇವನು ೧೨ ವರ್ಷ ರಾಜ್ಯವಾಳಿದ ಮೇಲೆ ಇವನ ಮಗ ಮಲಕಪ್ಪರಾಯನು ದೊರೆಯಾಗಿ ಆಳಿದನು. ಕೆಲವು ಯುದ್ಧಗಳಲ್ಲಿ ಉವನು ವಿಜಯನಗರದ ಅರಸರ ಪರವಾಗಿ ಪಾಲ್ಗೊಂಡಿದ್ದನು. ಆ ಸಾಮ್ರಾಜ್ಯ ಅಸ್ತಂಗತವಾದ ಮೇಲೆ ಗೋಲ್ಕೊಂಡದ ನವಾಬನನ್ನು ಆಶ್ರಯಿಸಿದನು. ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಿ ಅನಂತಪುರದಲ್ಲಿ ಅರಮನೆ ನಿರ್ಮಿಸಿ ಅದನ್ನೇ ರಾಜಧಾನಿ ಯಾಗಿಸಿಕೊಂಡನು. ಇವನ ಪಟ್ಟಮಹಿಷಿ ಸಿದ್ಧರಾಮಮ್ಮನಲ್ಲಿ ಇವನಿಗೆ ದೇವಪ್ಪರಾಯ, ಸಣ್ಣರಾಮಪ್ಪರಾಯ, ಲಿಂಗಪ್ಪರಾಯ ಮತ್ತು ಹಂಪರಾಯ ಎಂಬ ನಾಲ್ಕು ಗಂಡುಮಕ್ಕಳಾದರು. ಇವನು ದೇವಪ್ಪರಾಯನಿಗೆ ನಂದ್ಯಾಲ ಸೀಮೆ, ಸಣ್ಣ ರಾಮಪ್ಪರಾಯನಿಗೆ ಬಳ್ಳಾರಿ, ಕುರುಗೋಡು ಸೀಮೆ, ಲಿಂಗಪ್ಪರಾಯನಿಗೆ ಕುಂದುರ್ಪಿ, ಕಣೇಕಲ್ಲು ಸೀಮೆ, ಹಂಪರಾಯನಿಗೆ ಅನಂತಪುರ, ಬುಕ್ಕಾಪಟ್ಟಣ ಮತ್ತು ಧರ್ಮಾವರ ಸೀಮೆ – ಹೀಗೆ ಹಂಚಿಕೆ ಮಾಡಿಕೊಟ್ಟನು. ಈ ಮಲಕಪ್ಪನ ಕಾಲದಲ್ಲಿ ಅವನ ರಾಜ್ಯ ಮತ್ತು ಅದರ ಕಂದಾಯದ ಆದಾಯ ದೊಡ್ಡ ಪ್ರಮಾಣದಲ್ಲೇ ಇದ್ದುವು. ಮಲಕಪ್ಪನ ತರುವಾಯ ಹಂಪರಾಯ ಮತ್ತು ಸಿದ್ಧಪ್ಪರಾಯ, ಇವರು ಆಳಿದರು.

ಸಿದ್ಧಪ್ಪರಾಯನ ಅನಂತರದಲ್ಲಿ ಬಂದವನು ಪವಾಡಪ್ಪನಾಯಕ, ಇವನ ಕಾಲದಲ್ಲಿ ಧರ್ಮಾವರವು ರಾಯದುರ್ಗದವರ ವಶವಾಯಿತು. ಇವನು ಅಕಾಲಿಕವಾಗಿ ಮರಣಿಸಿದಾಗ ಇವನ ಪತ್ನಿ ಸಿದ್ಧರಾಮಕ್ಕ ಸಿದ್ಧಪ್ಪನಾಯಕ ಎಂಬ ಮಗನ ಪರವಾಗಿ ತಾನೇ ಕೆಲಕಾಲ ಆಳ್ವಿಕೆ ನಡೆಸಿದಳು. ಇವನ ಮಗನೇ ಪ್ರಸನ್ನಪ್ಪನಾಯಕ. ಇವನು ರಾಯದುರ್ಗದವರಿಂದ ಧರ್ಮಾವರವನ್ನು ಮರಳಿ ಗೆದ್ದುಕೊಂಡನಾದರೂ ಸಂಚಿನಲ್ಲಿ ದುರಂತ ಮರಣಕ್ಕೀಡಾದನು. ಇವನ ತರುವಾಯದಲ್ಲಿ ಇಮ್ಮಡಿ ಪವಾಡಪ್ಪನಾಯಕನು ಆಳುವಾಗ್ಗೆ ಕಡಪೆಯ ನವಾಬನಿಗೆ ಕಪ್ಪ ಕೊಡಲು ಒಪ್ಪಲಿಲ್ಲವಾದ್ದರಿಂದ ತನ್ನ ಅರಮನೆಯಲ್ಲೇ ಗೃಹಬಂಧಿಯಾಗಬೇಕಾಯಿತು. ಹಾಗೆ ಗೃಹಬಂಧಿಯಾಗಿದ್ದ ಇವನನ್ನು ಶತ್ರುಗಳು ಕಡಪೆಗೆ ಸಾಗಿಸಿಕೊಂಡು ಹೋಗುವ ಪ್ರಯತ್ನದಲ್ಲಿದ್ದರು. ಆಗ ಗುರುಗಳಾದ ನಿಡುಮಾಮಿಡಿ ಕರಿಬಸವ ಸ್ವಾಮಿಗಳೆಂಬುವರು ತಮ್ಮ ಶಿಷ್ಯರೊಂದಿಗೆ ಅನಂತಪುರಕ್ಕೆ ಬಂದು ಅವನನ್ನು ರಕ್ಷಿಸಿದರು. ಹಾಗಾಗಿ ಇವನು ತನ್ನ ಕೊನೆಯ ದಿನಗಳನ್ನು ನಿಡುಮಾಮಿಡಿ ಮಠದಲ್ಲಿ ಕಳೆದನು. ಪ್ರಸನ್ನಪ್ಪನ ಮಗ ರಾಮಪ್ಪನನ್ನು ಪಟ್ಟಕ್ಕೆ ಕೂರಿಸಬೇಕೆಂದು ಗುತ್ತಿಯ ಪ್ರಭುವಾದ ಮುರಾರಿರಾವ್ ಘೋರ್ಪಡೆ ಮುಂತಾದವರು ಬೆಂಬಲಿಸಿ, ಪಟ್ಟಕ್ಕೆ ತಂದರು. ಆದರೆ ಇನ್ನೊಂದು ಗುಂಪು ಬೆಂಬಲಿಸಿದ್ದ ಸಿದ್ಧಪ್ಪನು ಸೆರೆಯಲ್ಲೇ ಅಸುನೀಗಿದನು. ಅವನ ಪತ್ನಿ ಭದ್ರಮ್ಮ ಅಲ್ಲಿಂದ ಬಳ್ಳಾರಿಗೆ ಹೋಗಿ ಅಲ್ಲಿ ದೊರೆಯಾಗಿದ್ದ ಇದೇ ವಂಶದ ರಾಮಪ್ಪನಲ್ಲಿ ಆಶ್ರಯ ಪಡೆದಳು.

ರಾಮಪ್ಪನ ಆಳ್ವಿಕೆಯ ಕಾಲಕ್ಕೆ ದಾಳಿ ಮಾಡ ಬಂದ ರಾಯದುರ್ಗದ ಕೋನೇಟಿರಾಯನು ರಾಮಪ್ಪನಿಂದ ಸೋಲಿಸಲ್ಪಟ್ಟನು. ಇತ್ತ ಬಳ್ಳಾರಿಯಲ್ಲಿದ್ದ ಭದ್ರಮ್ಮನ ಸಂಚಿನ ಮೇರೆಗೆ ಬಳ್ಳಾರಿಯ ರಾಮಪ್ಪನು ಅನಂತಪುರದ ರಾಮಪ್ಪನ ಮಗನನ್ನು ದತ್ತು ತೆಗೆದುಕೊಳ್ಳಲು, ಅನಂತಪುರಕ್ಕೆ ಬಂದವನು ಅನಂತಪುರದ ರಾಮಪ್ಪನನ್ನು ಕೊಲೆಮಾಡಿಸಿ ಆ ರಾಜ್ಯವನ್ನೂ ತನ್ನ ರಾಜ್ಯಕ್ಕೇ ಸೇರ್ಪಡೆ ಮಾಡಿಕೊಂಡನು. ಅನಂತಪುರದ ರಾಮಪ್ಪನ ಮಗ ಸಿದ್ಧರಾಮಪ್ಪನನ್ನು ಬಳ್ಳಾರಿಯಲ್ಲಿ ಸೆರೆಯಲ್ಲಿಟ್ಟಿದ್ದಾಗ ಅವನು ಅಲ್ಲಿಂದ ತಪ್ಪಿಸಿಕೊಂಡು ಹಿರೇಹಾಳಿಗೆ ಹೋಗಿ ಅಲ್ಲಿದ್ದು, ಮುಂದೊಂದು ದಿನ ಅನಂತಪುರಕ್ಕೆ ಅಧಿಪತಿಯಾದನು. ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಿಕೆಲಕಾಲಾನಂತರ ದೈವಾಧೀನನಾದನು. ಬಸಲತ್‌ಜಂಗ್ ಎಂಬುವನು ಬಳ್ಳಾರಿಯನ್ನು ಮುತ್ತಿದ್ದಾಗ ಅಲ್ಲಿಂದ ದೊಡ್ಡಯ್ಯ ಎಂಬ ಹೆಸರಿನ ಹಂಡೆ ವಂಶದ ದೊರೆ ಹೈದರಾಲಿಯ ನೆರವು ಪಡೆದು ಅವನನ್ನು ಓಡಿಸಿದನಾದರೂ ಮುಂದೆ ಹೈದರಾಲಿಯ ಈ ಸಂದರ್ಭದ ದುರ್ಲಾಭ ಪಡೆದು, ಬಳ್ಳಾರಿಯನ್ನು ತನ್ನ ಕೈವಶ ಮಾಡಿಕೊಂಡು, ಆ ಮೇಲೆ ಗುತ್ತಿಯನ್ನು ಮುತ್ತಿ ತೆಗೆದುಕೊಂಡು, ಅನಂತಪುರ ರಾಜ್ಯವಾಳಲು ಅಲ್ಲಿಯ ನಾಯಕನಿಗೆ ಕಪ್ಪ ನಿಗದಿ ಮಾಡಿದನಾದರೂ, ಅವನು ಕಪ್ಪದ ಬಾಕಿ ವಸೂಲಿಗೆಂಬಂತೆ ಬಂದು ಸಿದ್ಧರಾಮಪ್ಪನನ್ನು ಬಂಧಿಸಿ, ಅನಂತಪುರವನ್ನೂ ವಶಪಡಿಸಿಕೊಂಡನು. ಸಿದ್ಧರಾಮಪ್ಪನ ಇಬ್ಬರು ಮಕ್ಕಳು ಹೈದರಾಲಿಯ ಸೈನ್ಯದೊಳಗೆ ಸೇರಿದರು. ಉಳಿದ ಇನ್ನೊಬ್ಬ (ಮೂರನೆಯ ಮಗ ಸಿದ್ಧಪ್ಪ) ನನ್ನು ಶ್ರೀರಂಗಪಟ್ಟಣದಲ್ಲಿ ಸೆರೆಯಲ್ಲಿಡಲು ಕಳಿಸಿಕೊಡಲಾಯಿತು. ಸಿದ್ಧರಾಮಪ್ಪ ಗತಿಸಿದ ಮೇಲೆ, ಮುಂದೆ ಬಂದ ಟಿಪ್ಪು ಸುಲ್ತಾನ್ ಆ ವಂಶವನ್ನೇ ತೊಡೆದು ಹಾಕಲು ಯತ್ನಿಸಿದ ಎಂದು ಹೇಳಲಾಗಿದೆ. ಸೆರೆಯಲ್ಲಿದ್ದ ಸಿದ್ಧಪ್ಪ ಹೇಗೋ ತಪ್ಪಿಸಿಕೊಂಡು, ಕಾಳಹಸ್ತಿ ರಾಜನಲ್ಲಿಗೆ ಹೋಗಿ ಅವನ ಆಶ್ರಯ ಪಡೆದುಕೊಂಡನು. ಮುಂದೆ ಟಿಪ್ಪುವಿನ ಮರಣಾನಂತರ ಇವನು ಅನಂತಪುರಕ್ಕೆ ಹೋಗಿ ಅದನ್ನು ಮರಳಿ ತನ್ನ ಕೈಗೆ ತೆಗೆದುಕೊಂಡನು. ಅವನಿಗೆ ಹೈದರಾಬಾದಿನ ನಿಜಾಮನ ಆಶ್ರಯವೂ ದೊರೆತು, ಕೆಲಕಾಲ ಆಳ್ವಿಕೆ ನಡೆಸಿ ೧೮೦೧ರಲ್ಲಿ ವಿಧಿವಶನಾದನು. ಅಲ್ಲಿಗೆ ಹಂಡೆ ಪಾಳೆಯಗಾರರ ಪ್ರಭುತ್ವ ಕೊನೆಗೊಂಡಿತು.

ಇಂಗ್ಲಿಷರ ಪ್ರಭುತ್ವ ಬಂದ ಮೇಲೆ ಹಂಡೆ ಪಾಳೆಯಗಾರರ ವಂಶದವರಿಗೆ ರಾಜಧನ ನಿಗದಿಯಾಗಿ ಅನೇಕ ವರ್ಷಗಳವರೆಗೆ ಅದು ಅವರಿಗೆ ಸಲ್ಲುತ್ತ ಬಂದಿತು ಎನ್ನುವುದು ಆಮೇಲಿನ ಇತಿಹಾಸ.

ಈ ವಂಶದವರು ಪಾಳೆಯಗಾರರಾಗಿರುವ ಪೂರ್ವದಲ್ಲಿಯೇ ಲಿಂಗಾಯತ ಧರ್ಮೀಯರಾಗಿದ್ದರೆಂದು ತಿಳಿದುಬರುತ್ತದೆ. ಇವರು ತಮ್ಮ ಆರಾಧ್ಯ ದೈವವಾಗಿ ಸ್ವೀಕರಿಸಿದ್ದು ೧೨ನೆಯ ಶತಮಾನದ ಹಿಡಿಯ ಶರಣರಲ್ಲಿ ಒಬ್ಬರಾಗಿ ಖ್ಯಾತರಾಗಿರುವ ಸೊನ್ನಲಿಗೆಯ ಸಿದ್ಧರಾಮೇಶ್ವರರನ್ನು. ಈ ಪಾಳೆಯಗಾರರ ಹಲವು ದಾನಪತ್ರ ಇತ್ಯಾದಿಗಳ ಮೇಲ್ಭಾಗದಲ್ಲಿ ಮತ್ತು ಒಳಗೆ ಸಿದ್ಧರಾಮೇಶ್ವರರ ಸ್ಮರಣೆಯನ್ನು ಕಾಣಬಹುದು. ಇವರು ಲಿಂಗಾಯತ ಗುರುಗಳಾದ ಶ್ರೀ ಕೊಟ್ಟೂರು ಸ್ವಾಮಿಗಳ ಪರಂಪರೆ, ಶ್ರೀಶೈಲ ನಿಡುಮಾಮಿಡಿ ಸ್ವಾಮಿಗಳ ಪರಂಪರೆ, ಶ್ರೀ ತೋಂಟದ ಸ್ವಾಮಿಗಳ ಪರಂಪರೆಯವರಿಗೆ ಭಕ್ತಿ-ಗೌರವಗಳಿಂದ ನಡದುಕೊಂಡದ್ದಲ್ಲದೆ ಅನೇಕ ದಾನ-ದತ್ತಿಗಳನ್ನು ನೀಡಿದ್ದಾರು. ಇವರಷ್ಟೇ ಅಲ್ಲದೆ ಬ್ರಾಹ್ಮಣ ಗುರುಗಳಾದ ಶ್ರೀ ಕೂಡಲಿಶೃಂಗೇರಿ ಸ್ವಾಮಿಗಳ ಪರಂಪರೆಯವರಿಗೂ ಸಹ ಇವರು ದಾನದತ್ತಿಗಳನ್ನು ನೀಡಿ ಭಕ್ತಿ ತೋರಿದ್ದಾರೆ.

ಇವರು ಅನೇಕ ಕೋಟೆ, ಅರಮನೆ, ದೇವಾಲಯ, ಬಾವಿ, ಕೆರೆ, ದೀಪಸ್ತಂಭ ಮುಂತಾದವನ್ನು ವಿವಿಧ ಸ್ಥಳಗಳಲ್ಲಿ ನಿರ್ಮಿಸಿದರೆಂದು ತಿಳಿಯುತ್ತದೆ. ಬಳ್ಳಾರಿಯ ಕೋಡೆ, ಅದರೊಳಗಿರುವ ಚಿತ್ರಶಿಲ್ಪಗಳಿಂದ ಕೂಡಿದ ಕಲ್ಲಿನ ಬಾವಿ, ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿರುವ ಪಂಚಮಲಕಪ್ಪನ ಬಾವಿ, ಬಳ್ಳಾರಿ ಜಿಲ್ಲೆಯ ಯರ್ರದುರ್ಗದ ಕೋಟೆ ಮತ್ತು ದೇವಾಲಯಗಳು, ಕುರುಗೋಡಿನ ನೀಲಮ್ಮನ ದೇವಸ್ಥಾನ ಇವೇ ಮುಂತಾದವು ಈ ನಾಯಕರ ಕೊಡುಗೆಗಳಾಗಿ ಇಂದಿಗೂ ನಮ್ಮೆದುರಲ್ಲಿವೆ.

ಪರಾಮರ್ಶನ ಸಾಹಿತ್ಯ

೧. ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಗುರುಪರಂಪರೆ (ಸಂ) ಗೌ.ಮ.ಉಮಾಪತಿಶಾಸ್ತ್ರಿ ಹೊಸಪೇಟೆ, ೧೯೮೩.

೨. ಶ್ರೀ ನಿಡುಮಾಮಿಡಿ ಪೀಠದ ಸಂಕ್ಷಿಪ್ತ ಚರಿತ್ರ, ಡಾ.ಎಂ. ಜಿ. ನಾಗರಾಜ್, ಬೆಂಗಳೂರು, ೨೦೦೪.

೩. ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ, ಡಾ. ಸಿ. ನಾಗಭೂಷಣ, ನಂದಿಹಳ್ಳಿ-ಸಂಡೂರು, ೧೯೯೯.

೪. ಬಂಕಾಪುರ ಶೋಧನ, ಡಾ. ಚೆನ್ನಕ್ಕ ಎಲಿಗಾರ, ಧಾರವಾಡ, ೧೯೯೦.

೫. ಬುಕ್ಕರಾಯ ಚರಿತ್ರೆ, (ಸಂ) ಎಸ್. ಸಿ. ಪಾಟೀಲ, ವಿಜಾಪುರ, ೨೦೦೨೦.

೬. ಕರ್ನಾಟಕದ ಕೈಫಿಯತ್ತುಗಳು, (ಸಂ) ಡಾ. ಎಂ. ಎಂ. ಕಲಬುರ್ಗಿ, ಹಂಪಿ, ೧೯೯೪.

೭. ಬಳ್ಳಾರಿ ಜಿಲ್ಲೆ ಶಾಸನ ಸಂಪುಟ, ಕನ್ನಡ ವಿ.ವಿ. ಹಂಪಿ, ೨೦೦೦.

೮. ಹಂಪಿ ಶಾಸನ ಸಂಪುಟ, ಕನ್ನಡ ವಿ.ವಿ., ಹಂಪಿ, ೨೦೦೦.

೯. ವೀರಶೈವ ಹಂಡೆವಜೀರ ಜನಾಂಗದ ಪರಿಚಯ, ಡಾ.ಎಸ್.ಸಿ. ಪಾಟೀಲ, ವಿಜಾಪುರ, ೨೦೦೪.

೧೦. ಹಂಡೆ ಪಾಳೆಯಗಾರರ ಧಾರ್ಮಿಕ ಸೇವೆ, ಡಾ. ಮೃತ್ಯುಂಜಯ ರುಮಾಲೆ, ಹೊಸಪೇಟೆ ಅಪ್ರಕಟಿತ ಲೇಖನ, ೨೦೦೮.

೧೧. ವಿಜಯನಗರದ ಅಧ್ಯಯನ-ಸಂಪುಟ ೧೨, (ಸಂ) ಡಾ. ಆರ್. ಗೋಪಾಲ್ ಮತ್ತು ಇತರರು ೨೦೦೮.

೧೨. ಶ್ರೈಶೈಲ ಪೀಠದರ್ಶನ (ಸಂ) ಶ್ರೀ ಜಚನಿ, ಬೆಂಗಳೂರು, ೧೯೬೭.

೧೩. ಬಳ್ಳಾರಿ  ಜಿಲ್ಲಾ ಸಾಂಸ್ಕೃತಿಕ ದರ್ಶನ. ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ, ೧೯೯೦.

೧೪. ಹಂಡೆ ಕುರುಬರು: ಒಂದು ಅಧ್ಯಯನ, ವೈ. ಕೆ. ಗುಂಡಕರ್ಜಗಿ, ಧಾರವಾಡ ೨೦೦೨,  ಪಿಎಚ್‌.ಡಿ. ಮಹಾಪ್ರಬಂಧ (ಅಪ್ರಕಟತ).

೧೫. ನಿರಂತರ, ಪ್ರೊ. ಬಿ. ರಾಜಶೇಖರಪ್ಪ, ಪಾಂಡವಪುರ, ೨೦೦೧.

೧೬. ಮುಂಬೈ ಕರ್ನಾಟಕದ ಗ್ಯಾಝೇಟೀಯರು, (ಅನು) ವೆಂಕಟರಂಗೋಕಟ್ಟಿ, ೧೮೯೩, AES, Reprint, Newdelhi 1984.

೧೭. ಕೂಡ್ಲಿ ಶೃಂಗೇರಿ ಸಂಸ್ಥಾನದ ಪ್ರಾಚೀನ ಶಾಸನ ಲೇಖನ ಸಂಗ್ರಹ, ಭಾಗ-೧, ೧೯೬೫.

೧೮. ಕನ್ನಡ ನಿಘಂಟು, ಸಂಪುಟ ೧, ಕಸಾಪ, ಬೆಂಗಳೂರು, ೧೯೭೦.

೧೯. ಕನ್ನಡ ನಿಘಂಟು, ಸಂಪುಟ ೪, ಕಸಾಪ, ಬೆಂಗಳೂರು, ೧೯೭೯.

೨೦. ಕನ್ನಡ ನಿಘಂಟು, ಸಂಪುಟ ೮, ಕಸಾಪ, ಬೆಂಗಳೂರು, ೧೯೯೫.

೨೧. ಸತ್ಯಶುದ್ಧಕಾಯದ ಸಂಪುಟ ೨, ಸಂಚಿಕೆ ೫-೬, ಮೇ-ಆಗಸ್ಟ್ ೧೯೯೨, ಚಿತ್ರದುರ್ಗ.

(ಲೇಖನ: ೨ನೆಯ ಬಲ್ಲಾಲಣ ಕಾಲದ ಒಂದು ತಾಮ್ರ ಶಾಸನ, ಟಿ. ಶಂಭುಲಿಂಗಪ್ಪ)

೨೨. ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಶಂ. ಬಾ. ಜೋಶಿ, ಶಾರವಾಡ.

೨೩. The wars of the Rajas- C.P. Brown (1853) Newdelhi, 1988.

೨೪. The Mysore Tribes and Castes. Vol IV. H.V. Nanjudayya, L.K. Ananthakrishna Iyer, Mysore 1931.

೨೫. A journary from Madras…. Vol. I, II & III Francis Buchanan, London, 1805.