ದನಗರ, ಕುರುಬ ಪದಕ್ಕೆ ಇನ್ನೊಂದು ಪರ್ಯಾಯ ಪದ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಕುರುಬರಿಗೆ ದನಗಾರರೆಂದೇ ಕರೆಯಲಾಗುತ್ತಿದೆ. ಅಷ್ಟೇ ಏಕೆ, ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿಯೂ ಕೆಲವು ಕುರುಬರಿಗೆ ದನಗರ ಎಂದು ಸಂಬೋಧಿಸಲಾಗುತ್ತಿದೆ. ದನಕರ ಎಂಬ ಅಡ್ಡ ಹೆಸರುಗಳೂ ಇವೆ. ಕುರುಬ ಅಥವಾ ದನಗರ ಸಮುದಾಯದಲ್ಲಿ ಗವಳಿಗರು ಎಂಬ ಉಪಪಂಗಡವಿದೆ. ವೆಂಕಟ ರಂಗೋಕಟ್ಟಿ[1], ರಾ.ಚಿಂ. ಢೇರೆ[2], ಶಂಬಾ ಜೋಶಿ[3], ಎಡ್ಗರ್ ಥರ್ಸ್ಟನ್[4], ಗುಂಥರ ಸೊಂತಾಯಮರ[5], ಕೆ.ಸಿ. ಮಲ್ಹೋತ್ರಾ[6] ಮತ್ತು ಮಾಧವ ಗಾಡ್ಗೀಳ[7] ಮೊದಲಾದ ಕೆಲವೇ ವಿದ್ವಾಂಸರು ಈ ಸಮುದಾಯದ ಬಗೆಗೆ ಅಧ್ಯಯನ ಮಾಡಿದ್ದಾರೆ1. ಎಡ್ಗರ್ ಥರ್ಸ್ಟನ್‌ನು Caste and Tribes of Southern India ಗ್ರಂಥದಲ್ಲಿ ದನಗರ ಗವಳಿಗರನ್ನು ಕುರಿತು ಹೀಗೆ ಹೇಳಿದ್ದಾನೆ:  Dhangar or Donigar is recorded in the Madras Sences Report 1901, as a Marathi caste of Shephereda and cattle-breeders. I gather from a note (Gazzetter of the Bombay Presidency XV Part I, 1883) on the Dhanagar of the Kanara district in the Bombay Presidency, that the word Dhangar is generally derived from the Sanskrit dhenu, a cow. Their home speech is Marathi, but they can speech kanarese. They keep a special breed of cows and buffaloes, known as Dhanagar mhasis and Dhanagar gavlis which are the largest cattle in kanara. Many of Shivajis infantry were Satar Dhanagars[8]. ಅಂದರೆ ದನಗರ ಗವಳಿಗರು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಕಳು ಎಮ್ಮೆಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನು ಮಾಡುವ ಉದ್ಯೋಗವನ್ನು ಮಾಡುವವರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ದನಗರ ಗವಳಿಗರ ಮೂಲ, ಪರಂಪರೆ, ಬೆಡಗುಗಳು ಕುಟುಂಬ ವ್ಯವಸ್ಥೆ, ಭೌಗೋಳಿಕ ವ್ಯಾಪ್ತಿ, ವೇಷ ಭೂಷಣಗಳು, ಆವರಣೆ ಸಂಪ್ರದಾಯ, ಉದ್ಯೋಗ, ಆರ್ಥಿಕ ವಿಚಾರ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆ, ಸೌಲಭ್ಯಗಳು, ವರ್ತಮಾನದ ಪರಿಸ್ಥಿತಿ ಇವೇ ಮೊದಲಾದ ಸಂಗತಿಗಳನ್ನು ಲಭ್ಯವಾದ ಆಕರ ಸಾಮಗ್ರಿಗಳು ಹಾಗೂ ‌ಕ್ಷೇತ್ರಕಾರ್ಯ ಮೂಲಕ ಸಮಗ್ರವಾಗಿ ಅವಲೋಕಿಸುವುದು ಪ್ರಸ್ತುತ ಸಂಪ್ರಬಂಧದ ಉದ್ದೇಶವಾಗಿದೆ.

ಈ ಸಮುದಾಯದ ಬಗ್ಗೆ ಮಾಹಿತಿ ಕರೋಢೀಕರಿಸಲು ನಾನು ಸ್ನೇಹಿತರಾದ ಡಾ. ಬಿ.ಜಿ. ಬಿರಾದಾರ ಅವರೊಂದಿಗೆ ಮುಂಡಗೋಡ ತಾಲೂಕಿನ ಕ್ಷೇತ್ರಕಾರ್ಯ ಕೈಕೊಂಡಿದ್ದೆ. ಆ ಸಂದರ್ಭದಲ್ಲಿ ಅಲ್ಲಿನ ಪದವಿಪೂರ್ವ ಕಾಲೇಜಿನ ಅಧ್ಯಾಪಕರಾದ ಶ್ರೀ ಹೊಂಗಲ ಅವರು ಗವಳಿಗ ಸಮುದಾಯದ ಬಗ್ಗೆ ಕೆಲವು ವಿವರಗಳನ್ನು ನೀಡುತ್ತ “ಜೇನುಮುರಿ ಗ್ರಾಮದಲ್ಲಿ ಗವಳಿಗರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅಲ್ಲಿಗೆ ಹೋದರೆ ನಿಮಗೆ ಅಧಿಕೃತ ಮಾಹಿತಿ ಸಿಗಬಹುದು” ಎಂಬ ಸೂಚನೆಯನ್ನು ನೀಡಿದರು. ಜೇನುಮುರಿ ಗ್ರಾಮವು ಮುಂಡಗೋಡದಿಂದ ಐದು ಕಿ.ಮೀ. ಅಂತರದಲ್ಲಿ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡು ಇದೆ. ಆ ಗ್ರಾಮಕ್ಕೆ ಹೋಗಿ ಇಳಿದಾಗ ಎಲ್ಲೆ ಆಕಳುಗಳ ಸಮೂಹವೇ ನಮಗೆ ಕಂಡುಬಂದಿತು. ಅವುಗಳ ಹಿಂದೆ ಒಬ್ಬ ಗಿಡ್ಡ ವ್ಯಕ್ತಿಯು ಕೈಯಲ್ಲಿ ಕೋಲು ಹಿಡಿದುಕೊಂಡು ಎಮ್ಮೆ ದನಗಳನ್ನು ಮೇಯಿಸಲು ಅರಣ್ಯದ ಕಡೆಗೆ ಹೊರಟಿದ್ದನು. ನಾವು ಆತನನ್ನು ನೋಡಿದಾಗಲೇ ಗವಳಿಗರ ವ್ಯಕ್ತಿಯೇ ಇರಬೇಕೆಂದು ಊಹಿಸಿದ್ದೆವು. ಆತನನ್ನು ಮಾತನಾಡಿಸಿದಾಗ ನಮ್ಮ ಊಹೆ ನಿಜವಾಯಿತು. ಆತ ನಮ್ಮನ್ನು ಊರೊಳಗೆ ಕರೆದುಕೊಂಡು ಹೋಗಿ ತಮ್ಮ ಹಿರಿಯರನೆಲ್ಲ ಒಂದು ಮನೆಯಲ್ಲಿ ಕೂಡಿಸಿ, ತಮ್ಮ ಸಮುದಾಯದ ಬಗ್ಗೆ ಮಗೆ ಅನೇಕ ಮಾಹಿತಿಗಳನ್ನು ಹೇಳಿದರು. ಆ ಎಲ್ಲ ಮಾಹಿತಿಗಳನ್ನು ಬಳಸಿಕೊಂಡು ಈ ಸಂಪ್ರಬಂಧವನ್ನು ಸಿದ್ಧಪಡಿಸಿದ್ದೇನೆ.

. ಗವಳಿಗರ ಮೂಲ

ಗವಳಿಗರ ಮೂಲ ಮಹಾರಾಷ್ಟ್ರ. ವಿಶೇಷವಾಗಿ ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಈ ಸಮುದಾಯವು ಅಧಿಕ ಪ್ರಮಾಣದಲ್ಲಿದೆ. ಎಮ್ಮೆ ಆಕಳುಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡು ಬಂದ ಗವಳಿಗರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯತ್ತ ವಲಸೆ ಬರಲು ಜೇನುಮುರಿಯ ನವಲು ಜಾನು ಜೋರೆ ಅವರು ಕೊಡುವ ಬಹುಮುಖ್ಯವಾದ ಕಾರಣಗಳು ಹೀಗಿವೆ: ಮಹಾರಾಷ್ಟ್ರದಲ್ಲಿ ಕಳೆದೆರಡು ಶತಮಾನಗಳ ಹಿಂದೆ ಮಳೆ ಅಧಿಕ ಪ್ರಮಾಣದಲ್ಲಿ ಬೀಳುತ್ತಿತ್ತು. ಹೀಗಾಗಿ ಎಮ್ಮೆ ಆಕಳುಗಳನ್ನು ಮೇಯಿಸಲು ಕಾಡಿಗೆ ಹೋಗುವುದು ಕಷ್ಟಕರವಾಗಹತ್ತಿತ್ತು. ಮೇಲಾಗಿ ಮಹಾರಾಷ್ಟ್ರದಲ್ಲಿ ಆ ಕಾಲದಲ್ಲಿ ತುಂಬ ಛಳಿ ಇರುತ್ತಿತ್ತು. ಆ ಛಳಿಗೆ ಆಕಳು ಎಮ್ಮೆಗಳು ಸಾಯುತ್ತಿದ್ದವು. ಇದನ್ನರಿತ ನಮ್ಮ ಪೂರ್ವಜನರು ಅಂದಾಜು ಎರಡುನೂರು ವರ್ಷಗಳ ಹಿಂದೆ ದನಗಳನ್ನು ಹೊಡೆದುಕೊಂಡು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯತ್ತ ವಲಸೆ ಬಂದರು. ದನಕರುಗಳನ್ನು ಮೇಯಿಸಲು ಈ ಪ್ರದೇಶವು ಪ್ರಶಸ್ತವಾದ ಸ್ಥಳ. ಏಕೆಂದರೆ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ಇರುತ್ತದೆ.

ಕಳೆದ ೩೦-೪೦ ವರ್ಷಗಳ ಹಿಂದೆ ಕಾಡುಪ್ರಾಣಿಗಳ ಕಾಟ, ಮಳೆಯ ಆರ್ಭಟ ಮುಂತಾದುವನ್ನು ಲೆಕ್ಕಿಸದೇ ಕಾಡಿನಲ್ಲಿಯೇ ಆಕಳು ಎಮ್ಮೆಗಳನ್ನು ಸಾಕಿಕೊಂಡು ವಾಸಿಸುತ್ತಿದ್ದರು. ಹಟ್ಟಿಯನ್ನು ಹಾಕಿಕೊಂಡಿದ್ದೇವೆ. ಸರ್ಕಾರದವರು ವಿದ್ಯುಚ್ಛಕ್ತಿ ಕೊಟ್ಟಿದ್ದಾರೆ. ಆದರೆ ಮನೆಗಳು ನಮ್ಮ ಹೆಸರಿನಲ್ಲಿ ಖರೀದಿಯಾಗಿಲ್ಲ. ಆದರೂ ನಾವು ಮನೆ ಕಂದಾಯವನ್ನು ಸರ್ಕಾರಕ್ಕೆ ಕಟ್ಟುತ್ತೇವೆ. ಹೀಗೆ ಅನೇಕ ಮಾಹಿತಿಗಳನ್ನು ನಮಗೆ ಜೋರೆ ಅವರು ನೀಡುತ್ತಾ ಹೋದರು.

ಈ ಸಮುದಾಯದ ಮಾತೃಭಾಷೆ ಮರಾಠಿ. ಮನೆಯಲ್ಲಿ ಎಲ್ಲರೂ ಮರಾಠಿಯಲ್ಲಿಯೇ ಮಾತನಾಡಿದರೆ, ಹೊರಗಿನ ಜನರೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಬಹುತೇಕ ಎಲ್ಲ ಗವಳಿಗರು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ. ಗವಳಿಗರಿಗೆ ನವಲು, ದುಂಡು, ಬೀರು, ವಿಠಲ, ರಾಮು, ಇಟ್ಟು, ಜಾನು, ಸಗ್ಗು, ಬೊಮ್ಮು, ದಿವೂ ಮುಂತಾದ ಹೆಸರುಗಳನ್ನು ಪುರುಷರಿಗೆ ಇಟ್ಟಿರುತ್ತಾರೆ. ಮಹಿಳೆಯರಿಗೆ ಗಂಗೂಬಾಯಿ, ಸಕ್ಕೂಬಾಯಿ, ಬೊಮ್ಮಬಾಯಿ, ಸೋನುಬಾಯಿ, ಜನ್ನುಬಾಯಿ, ನಾಗೂಬಾಯಿ, ಸಾವುಬಾಯಿ ಮೊದಲಾದ ಹೆಸರುಗಳನ್ನಿಡುವ ಪದ್ದತಿ ಇದೆ.

. ಭೌಗೋಳಿಕ ವ್ಯಾಪ್ತಿ

ಮೂಲತಃ ಮಹಾರಾಷ್ಟ್ರದವರಾದ ದನಗರ ಗವಳಿಗರಲ್ಲಿ ಕೆಲವರು ಕಳೆದ ಶತಮಾನದಲ್ಲಿ ಕರ್ನಾಟಕಕ್ಕೆ ವಲಸೆ ಬಂದವರು. ಬೆಳಗಾವಿಯ ಜಿಲ್ಲೆಯ ಖಾನಾಪುರ, ಧಾರವಾಡ ಜಿಲ್ಲೆಯ ಕಲಘಟಗಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಯಲ್ಲಾಪುರ, ದಾಂಡೇಲಿ ಹಾಗೂ ಹಳಿಯಾಳ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ತರೀಕೆರೆ ತಾಲೂಕುಗಳಲ್ಲಿ ಗವಳಿ ಸಮುದಾಯದವರ ನೆಲೆಗಳಿವೆ. ಅದರಲ್ಲಿಯೂ ಯಲ್ಲಾಪುರ ತಾಲೂಕಿನಲ್ಲಿ ಇವರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಅಂಶವನ್ನು ವೆಂಕಟ ರಂಗೋ ಕಟ್ಟಿಯವರು ಸಹ ತಮ್ಮ ಗ್ಯಾಝೇಟಿಯರನಲ್ಲಿ ದಾಖಲಿಸಿದ್ದಾರೆ. ಮುಂಡಗೋಡ ತಾಲೂಕಿನ ಜೇನುಮುರಿ, ಮೈನಳ್ಳಿ, ನ್ಯಾಸರ್ಗಿ, ಚೌಡಳ್ಳಿ, ಉಗ್ಗಿನಕೇರಿ, ಗುಂಜಾವತಿ, ಯಲ್ಲಾಪುರ ತಾಲೂಕಿನ ಸಿಡ್ಲಗುಂಡಿ, ಕಿರುವತ್ತಿ, ಹಳಿಯಾಳ ತಾಲೂಕಿನ ಕೆಲವು ಗ್ರಾಮಗಳಲ್ಲಿ ದನಗರ ಗವಳಿಗರು ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಾರೆ.

. ಚರಿತ್ರೆಯ ಪುಟಗಳಲ್ಲಿ ಗವಳಿಗರು

ಹತ್ತನೆಯ ಶತಮಾನಕ್ಕಿಂತ ಪೂರ್ವದಲ್ಲಿಯೇ ದನಗರ ಸಮುದಾಯದವರು ಕರ್ನಾಟಕದಲ್ಲಿ ನೆಲೆಸಿದ್ದರೆಂಬುದನ್ನು ಶಾಸನವೊಂದು ನಿದರ್ಶನವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲದ ಕ್ರಿ.ಶ. ೯೪೦ರ ಶತಮಾನವು ಬೆಳಾಡಿಯ ಧನಗರ (ಕುರುಬ) ಸಮುದಾಯದ ಕರಿಯ ಕೇತಿಮಯ್ಯನ ಹೆಂಡತಿ ಕಂಚಿಕಬ್ಬೆಯ ವ್ಯಕ್ತಿತ್ವ, ಅವಳು ಸುವರ್ಣಾಕ್ಷಿ ದೇವರಿಗೆ ದಾನ ನೀಡಿದ ವಿಷಯಗಳನ್ನು ವಿವರಿಸುತ್ತದೆ. ಬಹುಶಃ ದನಗರರಿಗೆ ಸಂಬಂಧಿಸಿದ ಮೊದಲ ಶಾಸನವಿದು. “….. ಮಾರಾಜನ ಬೆಳವಾಡಿಯ ಚಾರುಗುಣಂ ಕರಿಯಕೇತಿಮಯ್ಯ|ನವಳು ವಿಸ್ತಾರ ಗುಣಾಂಬುಧಿ ಧರ್ಮ್ಮದ ಮೇರುವನಾ ಕಂಚಿಕಬ್ಬೆಯಂ ಪೊಗಳದರಾರ್| ಪರಹಿತ ಗುಣ ಚರಿತದ | ಧನಗಾರ ಗೋತ್ರದ ಕಂಚಿಯಬ್ಬೆ  ಮಾತಾರತ್ಣ ಧರೆಗೆಸೆವ ದಾನರ್ಮ್ಮದ ಪರಿಣತಿಕೆಯ ಪಿರಿದು ಪರಮ ಮಾಹೇಶ್ವ|ರಿಯೆ…” ಎಂದು ಕಂಚಿಕಬ್ಬೆಯ ವ್ಯಕ್ತಿತ್ವವನ್ನು ಈ ಶಾಸನ ವರ್ಣನಾತ್ಮಕವಾಗಿ ವಿವರಿಸುತ್ತದೆ.[9] ಹಾಗೆಯೇ ಮರಾಠಾ ದೊರೆ ಛತ್ರಪತಿ ಶಿವಾಜಿಯು ಮೂಲತಃ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸೊರಟೂರು ಗ್ರಾಮದವನು. ಮೇಲಾಗಿ ಈತ ದನಗರ ಗವಳಿಗ ಸಮುದಾಯಕ್ಕೆ ಸೇರಿದವನೆಂಬುದನ್ನು ರಾ.ಚಿಂ. ಢೇರೆಯವರು ತಮ್ಮ ಗ್ರಂಥವೊಂದರಲ್ಲಿ ಆಧಾರಗಳೊಂದಿಗೆ ಸ್ಪಷ್ಟ ಪಡಿಸಿದ್ದಾರೆ.[10]

. ಬೆಡಗು (ಕುಲ)ಗಳು

ಯಾವುದೇ ಸಮುದಾಯದಲ್ಲಿ ವೈವಿಧ್ಯಮಯವಾದ ಬೆಡಗುಗಳಿರುವುದು ಸಹಜ. ಅದರಂತೆ ಗವಳಿಗರ ಸಮುದಾಯದಲ್ಲಿಯೂ ಅಂದಾಜು ಐವತ್ತಕ್ಕೂ ಹೆಚ್ಚು ಬೆಡಗುಗಳಿವೆ. ಜೋರ್ಯಾ, ಗಾವಡಿ, ಪಿಂಗಳಿ, ಕೊಕರಿ, ಸಿಂಧ್ಯಾ, ವರುಕಾ, ಎಡಿಗೆ ಇತ್ಯಾದಿ ಬೆಡಗುಗಳು ಈ ಪ್ರದೇಶದ ಗವಳಿಗರಲ್ಲಿವೆ. ಎಡಿಗೆ ಎಂಬ ಬೆಡಗಿನವರು ಇನ್ನುಳಿದ ಗವಳಿಗರಿಗೆ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಜನನ, ನಾಮಕರಣ, ಮದುವೆ, ಮರಣಗಳಂಥ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪುರೋಹಿತರಂತೆ ನಿಂತು ನಡೆಸಿಕೊಡುತ್ತಾರೆ. ಹೀಗಾಗಿ ಈ ಬೆಡಗಿನವರಿಗೆ ಗವಳಿಗರ ಸಮುದಾಯದಲ್ಲಿ ಉನ್ನತವಾದ ಗೌರವ ಸ್ಥಾನವಿದೆ. ಒಂದು ಬೆಡಗಿನವರು ಇನ್ನೊಂದು ಬೆಡಗಿನವರ ಜೊತೆ ವೈವಾಹಿಕ ಸಂಬಂಧಗಳನ್ನು ಬೆಳೆಸುತ್ತಾರೆ. ಅಂದರೆ ಇತರೆ ಸಮುದಾಯಗಳಂತೆ ಇಲ್ಲಿಯೂ ಸಗೋತ್ರ ಮದುವೆ ನಿಷೇಧವಿದೆ.

. ವೇಷಭೂಷಣ-ಊಟೋಪಚಾರಗಳು

ಗವಳಿಗರ ವೇಷಭೂಷಣಗಳು ಉಡುಗೆ ತೊಡುಗೆಗಳು ವಿಶಿಷ್ಟವಾಗಿವೆ. “ಇವರ ಮೈಬಣ್ಣ ಕಪ್ಪು, ಆಳು ಗಿಡ್ಡ, ಲಂಗೋಟಿ, ರುಮಾಲು, ಕಂಬಳಿ ಇಷ್ಟೇ ಇವರ ಉಡುಗೆಗಳು. ಹೆಂಗಸರು ಕುಪ್ಪಸ ಹಾಕುವರು. ಕಚ್ಚೆ ಹಾಕುವುದಿಲ್ಲ” ಎಂದು ವೆಂಕಟ ರಂಗೋಕಟ್ಟಿಯವರು ತಮ್ಮ ಗ್ಯಾಝೇಟೀಯರನಲ್ಲಿ ದಾಖಲಿಸಿದ್ದಾರೆ[11]. ಆದರೆ ಇತ್ತೀಚಿನ ವರ್ಷಗಳಲ್ಲಿ ಪುರುಷರು ಹಾಪ್ಯಾಂಟ್ (ಬರ್ಮುಡಾ), ಧೋತ್ರ, ಅಂಗಿ, ರುಮಾಲು ಅಥವಾ ಟೊಪ್ಪಿಗೆಯನ್ನು ಧರಿಸುತ್ತಾರೆ. ಕೈಯಲ್ಲಿ ಕಡಗ, ಕಿವಿಯಲ್ಲಿ ಮುತ್ತು, ಕೊರಳಲ್ಲಿ ಸರ, ಕೈಯಲ್ಲಿ ಕೋಲು, ಹೆಗಲ ಮೇಲೆ ಕಂಬಳಿ, ಮಹಿಳೆಯರು ರವಿಕೆ ಸೀರೆ ಕಚ್ಚೆ ಹಾಕಿಕೊಂಡಂಥವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಯಲ್ಲಾಪುರ, ಹಳಿಯಾಳ, ಧಾರವಾಡ ಜಿಲ್ಲೆಯ ಕಲಘಟಗಿ ಜಿಲ್ಲೆಯಲ್ಲಿ ಕಂಡುಬಂದರೆ ಅವರು ಧನಗರ ಗವಳಿಗರಾಗಿರುತ್ತಾರೆ. ಇವರು ತುಂಬ ಭಯಸ್ಥರು. ಮೊದ ಮೊದಲು ಪ್ಯಂಟ ಧರಿಸಿದ ವ್ಯಕ್ತಿಗಳನ್ನು ಕಂಡರೆ, ಸೈಕಲ್ ಮೋಟಾರು ಮತ್ತು ಇತರೆ ವಾಹನಗಳನ್ನು ನೋಡಿದರೆ ಹೆದರಿಕೊಂಡು ಓಡಿಹೋಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಗರದ ಸಂಪರ್ಕ ಬಂದ ಮೇಲೆ ಗವಳಿಗರು ಭಯದಿಂದ ದೂರವಾಗಿದ್ದಾರೆ.

ಸಾಮಾನ್ಯವಾಗಿ ಗವಳಿಗರು ಶಾಖಾಹಾರಿಗಳು. ರೊಟ್ಟಿ, ಚಪಾತಿ, ಅನ್ನ ಸಾರು ಪಲ್ಯಗಳಂಥ ಆಹಾರ ಪದಾರ್ಥಗಳನ್ನು ದಿನಾಲು ಮನೆಯಲ್ಲಿ ಮಾಡುತ್ತಾರೆ. ಊಟದ ಜೊತೆಗೆ ಹಾಲು ಮೊಸರು ಮಜ್ಜಿಗೆ ಬೆಣ್ಣೆಯನ್ನು ಉಪಯೋಗಿಸುತ್ತಾರೆ. ಬೆಳಿಗ್ಗೆ ಚಹಾ ಕಡ್ಡಾಯವಾಗಿ ಸೇವಿಸುತ್ತಾರೆ. ನಂತರ ಹನ್ನೊಂದು ಗಂಟೆಯ ಹೊತ್ತಿಗೆ ಊಟವನ್ನು ಮಾಡಿ ಪಶುಪಾಲನೆಗಾಗಿ ಅರಣ್ಯಕ್ಕೆ ಹೋಗುವುದು ಇವರ ನಿತ್ಯದ ದಿನಚರಿ. ಬೆಳಗಿನ ಉಪಹಾರವಂತೂ ಇಲ್ಲವೇ ಇಲ್ಲ. ಕೆಲವರು ವಾರ ಹದಿನೈದು ದಿವಸಕ್ಕೊಮ್ಮೆ ಕೋಳಿ ಅಥವಾ ಕುರಿ ಮಾಂಸವನ್ನು ಸೇವಿಸುತ್ತಾರೆ. ಎಲೆ ಅಡಿಕೆ ಹಾಕಿಕೊಳ್ಳುವುದು ಸರ್ವೇಸಾಮಾನ್ಯ.

. ಉದ್ಯೋಗ

ಈಗಾಗಲೇ ಹೇಳಿದಂತೆ ಗವಳಿಗರ ಪ್ರಧಾನ ಉದ್ಯೋಗ ಪಶುಪಾಲನೆ. ಆಕಳು ಎಮ್ಮೆಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿ ಬದುಕುವುದೇ ಇವರ ಮುಖ್ಯ ಉದ್ಯೋಗ, ಕೆಲವರು ಆಕಳು ಎಮ್ಮೆಗಳ ಜೊತೆಗೆ ಆಡುಗಳನ್ನು ಸಾಕುತ್ತಿದ್ದಾರೆ. ಒಂದೊಂದು ಕುಟುಂಬದವರು ಕನಿಷ್ಠ ಐದು, ಗರಿಷ್ಟ ಮೂವತ್ತು ಎಮ್ಮೆ ಅಥವಾ ಐದು ಆಕಳುಗಳನ್ನು ಹೊಂದಿರುತ್ತಾರೆ. ಈ ಹಿಂದೆ ದಿನಾಲು ಹಾಲನ್ನು ಮಾರಿಕೊಂಡು ಬರಲು ಪಕ್ಕದ ನಗರಗಳಿಗೆ ಹೋಗಿಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಯಲ್ಲಾಪುರ ತಾಲೂಕಿನ ಕಿರುವತ್ತಿಯಲ್ಲಿ ಶ್ರೀಕೃಷ್ಣ ಹಾಲಿನ ಡೈರಿಯವರು ಗವಳಿಗರಿರುವ ಊರಿಗೆ ಬಂದು ಹಾಲನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ. ಇನ್ನುಳಿದಂತೆ ಹಾಲಿನಿಂದ ಮೊಸರು, ಬೆಣ್ಣೆ, ಮಜ್ಜಿಗೆಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಜೊತೆಗೆ ಹಾಲಿನಿಂದ ಖೋವಾವನ್ನೂ ತಯಾರಿಸುವುದನ್ನು ಕಾಣಬಹುದು. ಈ ಖೋವಾವನ್ನು ಧಾರವಾಡ-ಹುಬ್ಬಳ್ಳಿ ಹಾಗೂ ಬೆಳಗಾವಿಗಳಲ್ಲಿರುವ ಬೇಕರಿಯವರು ಖರೀದಿಸುತ್ತಾರೆ. ಇತ್ತೀಚೆಗೆ ಆರ್ಥಿಕವಾಗಿ ಸಬಲವಿದ್ದ ಕೆಲವು ಗವಳಿಗರು ಹೊಲ ಗದ್ದೆಗಳನ್ನು ಲಾವಣಿ ರೂಪದಿಂದ ಅಥವಾ ಖರೀದಿ ಮಾಡಿಕೊಂಡು ಒಕ್ಕಲುತನ ಕೈಕೊಂಡಿದ್ದಾರೆ.

ಒಂದು ಕುಟುಂಬದಲ್ಲಿ ಹೆಚ್ಚು ಸದಸ್ಯರಿದ್ದರೆ ರೈತರ ಹೊಲದಲ್ಲಿ ದುಡಿಯಲು ಹೋಗುವುದು ಸಹಜ. ಮಹಿಳೆಯರು ಮನೆಯ ಕೆಲಸಗಳ ಜೊತೆಗೆ ಹೈನುಕಾರಿಗೆ ಮಾಡುವುದು, ಕೂಲಿಕೆಲಸಕ್ಕೆ ಹೋಗುವುದನ್ನು ಕಾಣುತ್ತೇವೆ. ಅಷ್ಟೇ ಏಕೆ, ಬೇಸಿಗೆ ಕಾಲದಲ್ಲಿ ದನಗಳನ್ನು ಮೇಯಿಸಲು ಅಡವಿಯಲ್ಲಿ ಹುಲ್ಲು ಮೇವು ಇರುವುದಿಲ್ಲ. ಅದಕ್ಕಾಗಿ ಕುಟುಂಬದ ಕೆಲವು ಸದಸ್ಯರು ದುಡಿಯಲಿಕ್ಕೆ ತಿಂಗಳಾನುಗಟ್ಟಲೆ ಗೋವಾಕ್ಕೆ ವಲಸೆ ಹೋಗುತ್ತಾರೆ.

. ಕೌಟುಂಬಿಕ ವ್ಯವಸ್ಥೆ

ಗವಳಿಯರದು ಪುರುಷ ಪ್ರಧಾನ ಕುಟುಂಬ. ಮನೆಯ ಯಜಮಾನನೇ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಾನೆ. ಮಹಿಳೆಯರು ಮನೆಗೆಲಸ ಮಾಡಿಕೊಂಡು ಹೋಗುವುದರ ಜೊತೆಗೆ ಮಕ್ಕಳ ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯು ಇರುತ್ತದೆ. ಈ ಹಿಂದೆ ಬಾಲ್ಯವಿವಾಹ ಪದ್ಧತಿ ಇವರಲ್ಲಿ ರೂಢಿಯಲ್ಲಿತ್ತು. ಆದರೆ ಇತ್ತೀಚಿನ ಸರ್ಕಾರದ ಕಟ್ಟುನಿಟ್ಟಾದ ನೀತಿ ನಿಯಮಾವಳಿಗಳಿಂದ ಬಾಲ್ಯವಿವಾಹ ಪದ್ದತಿಯನ್ನು ಕೈಬಿಡಲಾಗಿದೆ. ಹುಡುಗರಿಗೆ ೨೧ ವರ್ಷ ಹುಡುಗಿಯರಿಗೆ ೧೮ ವರ್ಷ ತುಂಬಿದ ನಂತರ ಮದುವೆ ಮಾಡುತ್ತಾರೆ. ವರದಕ್ಷಿಣೆ ಕೊಡುವ ಪದ್ದತಿಯನ್ನು ಗವಳಿಗರಲ್ಲಿ ಕಾಣುವುದಿಲ್ಲ. ಬದಲಾಗಿ ವಧುದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಂಪರೆ ಈಗಲೂ ಇವರಲ್ಲಿ ಇದೆ. ಆದರೆ ಅಳಿಯನಿಗೆ ಖುಷಿಯಿಂದ ವಾಚು, ಸೈಕಲ್, ಉಂಗುರ ಹೀಗೆ ತಮ್ಮ ಶಕ್ತಾನುಸಾರ ಕಾಣಿಕೆಯಾಗಿ ಕೊಡುತ್ತಾರೆ. ವಿಧವೆಯರಿಗೆ ಮರುಮದುವೆಯಾಗಲು ಅವಕಾಶವನ್ನು ಕಲ್ಪಿಸಲಾಗಿದೆ.

. ಆಚರಣೆ ಸಂಪ್ರದಾಯಗಳು

ಒಂದೊಂದು ಸಮುದಾಯದ ಆಚರಣೆ ಸಂಪ್ರದಾಯಗಳು ವಿಶಿಷ್ಟವಾಗಿರುತ್ತವೆ. ಆ ವಿಶಿಷ್ಟತೆಯಿಂದಲೇ ಆಯಾ ಸಮುದಾಯದ ಅನನ್ಯತೆಯು ನಮಗೆ ಸ್ಪಷ್ಟವಾಗುತ್ತದೆ. ಗವಳಿಗರು ದೀಪಾವಳಿ, ಮಹಾನವಮಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ಅಂದು ತಮ್ಮ ತಮ್ಮ ಹಟ್ಟಿಗಳನ್ನು ಅಥವಾ ಮನೆಗಳನ್ನು ಆಕಳ ಸೆಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಸಿಹಿ ಅಡುಗೆಯನ್ನು ಮಾಡಿ ನೈವೇದ್ಯ ಮಾಡಿ ಮನೆಮಂದಿಯೆಲ್ಲ ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ.

ಮಹಾರಾಷ್ಟ್ರದ ಪಟ್ಟಣಕಡೋಲಿಯ ಇಟ್ಟಪ್ಪಹಾಗ  ಪಂಢರಪುರದ ವಿಠೋಬರು ಗವಳಿಗರ ಪ್ರಮುಖ ಆರಾಧ್ಯ ದೈವಗಳು.[12]  ಪ್ರತಿ ವರ್ಷಕ್ಕೊಮ್ಮೆ ಈ ಕ್ಷೇತ್ರಕ್ಕೆ ಹೋಗಿ ದರ್ಶನವನ್ನು ಪಡೆದುಕೊಂಡು ಬರುತ್ತಾರೆ. ಇತ್ತೀಚೆಗೆ ಗವಳಿಗರು ತಾವು ನೆಲೆ ನಿಂತ ಗ್ರಾಮಗಳಲ್ಲಿಯೇ ವಿಠಲ ದೇವಸ್ಥಾನಗಳನ್ನು ನಿರ್ಮಿಸಿಕೊಂಡು ಆರಾಧನೆ ಮಾಡುತ್ತಿದ್ದಾರೆ.

. ಆರ್ಥಿಕ ಪರಿಸ್ಥಿತಿ

ಆರ್ಥಿಕವಾಗಿ ಗವಳಿಗರು ತುಂಬ ಹಿಂದುಳಿದವರು. ಹೈನುಗಾರಿಕೆಯ ಆದಾಯವೇ ಇವರ ಬದುಕಿಗೆ ಆಧಾರ. ಎಮ್ಮೆ ಆಕಳುಗಳಿಗೆ ಆಹಾರ ಒದಗಿಸುವುದು ಈಗೀಗ ತುಂಬ ಕಷ್ಟವಾಗುತ್ತಿದೆ ಎಂದು ನಾವು ಭೆಟ್ಟಿ ಮಾಡಿದ ಕೆಲವು ಗವಳಿಗರು ತಮ್ಮ ನೋವನ್ನು ಹೇಳಿಕೊಂಡರು. ಅರಣ್ಯದಲ್ಲಿ ಹುಲ್ಲುಗಾವಲು ಪ್ರದೇಶ ಕಡಿಮೆಯಾದ ಕಾರಣ ದನಕರುಗಳು ಹೊಟ್ಟೆತುಂಬ ಮೇಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೈನುಕಾರಿಕೆಯ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ಮಳೆಗಾಲ ಅಥವಾ ಚಳಿಗಾಲದಲ್ಲಿ ಹೇಗೊ ದನಕರುಗಳನ್ನು ಅಡವಿಗೆ ಹೋಗಿ ಮೇಯಿಸಿಕೊಂಡು ಬರುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಮಾತ್ರ ರೈತರಿಂದ ಖರೀದಿಸಿ ಸಂಗ್ರಹಿಸಿದ ಮೇವನ್ನು ಹಾಕಿ ಸಾಕಬೇಕಾಗುತ್ತದೆ. ಅಲ್ಲದೇ ಶೇಂಗಾ ಹಿಂಡಿ ಮತ್ತು ಗೋಧಿ ಅಥವಾ ಜೋಳದ ತೌಡ್ನನು ಕಲಸಿ ಹಾಕಿದರೆ ಎತ್ತು ಎಮ್ಮೆಗಳು ಸ್ವಲ್ಪ ಹೆಚ್ಚಿಗೆ ಹಾಲನ್ನು ಕರೆಯುತ್ತವೆ. ದಿನಾಲು ಐದರಿಂದ ಹತ್ತು ಲೀಟರವರೆಗೆ ಹಾಲನ್ನು ಮಾರಾಟ ಮಾಡುತ್ತಾರೆ. ಇದನ್ನು ಬಿಟ್ಟರೆ ಮಿಕ್ಕ ಹಾಲನ್ನು ಕಾಸಿ ಹೆಪ್ಪು ಹಾಕಿ ತುಪ್ಪ, ಮಜ್ಜಿಗೆ, ಖವ್ವಾ ಮಾಡುತ್ತಾರೆ. ಅವುಗಳನ್ನು ಪೇಟೆಗೆ ಹೋಗಿ ಮಾರಾಟ ಮಾಡಿಕೊಂಡು ಬರುತ್ತಾರೆ. ಇನ್ನು ಎಮ್ಮೆ ಆಕಳುಗಳ ಸೆಗಣಿಯ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡುತ್ತಾರೆ. ಈ ಮಾರಾಟದಿಂದ ಬಂದ ಹಣದಿಂದ ದನಗಳಿಗೆ ಮೇವು ಹಿಂದು ತೌಡನ್ನು ತರುತ್ತಾರೆ. ಆರ್ಥಿಕ ಅನುಕೂಲಕ್ಕಾಗಿ ಮುಂಡಗೋಡದಲ್ಲಿ ಗವಳಿಗ ಸಮಾಜದವರು “ದನಗರ ಗೌಳಿಗರ ಸಹಕಾರಿ ಸಂಘ”ವನ್ನು ೧೯೯೯ ರಲ್ಲಿ ಸ್ಥಾಪಿಸಿದ್ದಾರೆ. ಸಂಘದ ಮೊದಲ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಶ್ರೀ ಬೀರು ಜನ್ನು ಖಾತ್ರಟ, ಸದಸ್ಯರಾಗಿ ನವಲು ದೇವು ಜೋರೆ, ಬಿಕ್ಕುಬಾಬು ಜೋರೆ, ದೂಳು ವಿಠ್ಠು ತೊರವತ,ಜ ನ್ನು ವಾಘು ಗೌಳಿ, ಕೋಂಡು ಬಾಗೂ ಜೋರೆ, ಬಮ್ಮು ಬೀರು ಎಡಿಗೆ, ಬಮ್ಮು ಬಾಗೂ ಎಡಿಗೆ, ಬಾಬು ದಾಕ್ಲು ಕೋಕರೆ, ಜಾನು ಲಕ್ಕು ಪಾಂಡುರಮೀಸೆ ಹಾಗೂ ಮಹಿಳಾ ಪ್ರತಿನಿಧಿಯಾಗಿ ನಾಗೂಬಾಯಿ ಜನ್ನು ಜೋರೆ ಅರು ಕಾರ್ಯ ನಿರ್ವಹಿಸಿದ್ದಾರೆ. ಆರಂಭದಿಂದಲೂ ಯು.ಎಂ. ಹೆಗಡೆ ಅವರು ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸಂಘವನ್ನು ಮುನ್ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಗವಳಿಗ ವ್ಯಕ್ತಿಗೆ ಐದುಸಾವಿರವರೆಗೂ ಕಡಿಮೆ ಬಡ್ಡಿಯ ಸಾಲಸೌಲಭ್ಯವನ್ನು ಕಲ್ಪಿಸಲಾಗಿದೆ. ಕಂತುಗಳ ರೂಪದಲ್ಲಿ ಸಾಲದ ಹಣವನ್ನು ತುಂಬುತ್ತ ಹೋಗವುದು ಕಡ್ಡಾಯ.

ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಂತೆ ಮುಂಡಗೋಡದಲ್ಲಿ ದನಗರ ಗವಳಿಗರ ಸಹಕಾರ ಸಂಘದ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿಯೇ ಮುಂಡಗೋಡ ತಾಲೂಕು ದನಗರ ಗವಳಿಗರ ವಿವಿದೋದ್ಧೇಶ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಈ ಸಂಘದ ಮೂಲಕ ಗವಳಿಗರಿಗೆ ಆಹಾರ ಧಾನ್ಯಗಳನ್ನು, ಬಟ್ಟೆ, ಇತ್ಯಾದಿ ಸಾಮಾಗ್ರಿಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಯಲ್ಲಾಪುರ ತಾಲೂಕಿನ ಕಿರುವತ್ತಿಯಲ್ಲಿ ಉನ್ನತಿ ಗವಳಿಗರ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ.ಈ  ಸಂಘವು ಆ ಆಭಗದ ಗವಳಿಗರ ಆರ್ಥಿಕ ಅಭಿವೃದ್ಧಿಗೆ ಬಹಳಷ್ಟು ಸಹಾಯಕಾರಿಯಾಗಿದೆ.

೧೦. ಶೈಕ್ಷಣಿಕ

ಭಾರತದ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು ಎಂಬುದಕ್ಕೆ ಸರಕಾರ ಬದ್ಧವಾಗಿದೆ. ಆದರೂ ನಮ್ಮಲ್ಲಿ ಎಷ್ಟೋ ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳು ಇನ್ನೂ ಶಿಕ್ಷಣದಿಂದ ವಂಚಿತವಾಗಿವೆ. ಇದಕ್ಕೆ ದನಗರ ಗವಳಿಗರು ಹೊರತಾಗಿಲ್ಲ. ಇತ್ತೀಚೆಗೆ ಸರಕಾರ ಗವಳಿಗರಿರುವ ಪರಿಸರದಲ್ಲಿಯೇ ಶಾಲೆಯನ್ನು ಸ್ಥಾಪಿಸಿದೆ. ಈ ಮೂಲಕ ಅವರ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಕಾರಿಯಾಗುತ್ತಲಿದೆ. ನಾವು ಭೇಟಿ ನೀಡಿದ ಜೇನುಮುರಿ ಮೂವತ್ತು ಗವಳಿಗರ ಮನೆಗಳನ್ನು ಹೊಂದಿರುವ ಒಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿರುವ ಗವಳಿಗರ ಮಕ್ಕಳಿಗಾಗಿ ಐದನೆಯ ತರಗತಿಯವರೆಗೆ ಸರಕಾರಿ ಶಾಲೆಯನ್ನು ಹದಿನಾಲ್ಕು ವರ್ಷಗಳ ಹಿಂದೆ ಆರಂಭಿಸಿದೆ. ಹೀಗಾಗಿ ಗವಳಿಗರ ಮಕ್ಕಳು ಈಗೀಗ ವಿದ್ಯಾವಂತರಾಗುತ್ತಿದ್ದಾರೆ. ಐದನೆಯ ತರಗತಿಯವರೆಗೆ ಓದಿದ ಮಕ್ಕಳು ಹೆಚ್ಚಿನ ವಿದ್ಯಾರ್ಜನೆಗಾಗಿ ಸಮೀಪದ ಮುಂಡಗೋಡಕ್ಕೆ ಹೋಗುತ್ತಾರೆ. ಕೆಲವು ಮಕ್ಕಳು ಮುಂಡಗೋಡ, ಯಲ್ಲಾಪುರ, ಕಲಘಟಗಿ, ಹಳಿಯಾಳಗಳಲ್ಲಿರುವ ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ. “ಹೈನುಕಾರಿಗೆ ಉದ್ಯೋಗ ತುಂಬ ಕಷ್ಟವಾಗುತ್ತಿರುವ ಈ ಕಾಲದಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಿ ನೌಕರಿಗೆ ಹೋಗುವುದೇ ಸರಿಯಾದ ಮಾರ್ಗೋಪಾಯ” ಎಂಬುದು ಗವಳಿಗರ ಅಭಿಪ್ರಾಯವಾಗಿದೆ. ಇಂದಿನ ಬಹುತೇಕ ಗವಳಿಗರ ಮಕ್ಕಳೆಲ್ಲಶಿಕ್ಷಣವನ್ನು ಪಡೆಯುತ್ತಿರುವುದು ಆಶಾದಾಯಕವಾಗಿದೆ.

೧೧. ಸಂಘಟನೆ-ಸೌಲಭ್ಯಗಳು

ಮುಗ್ಧರು, ಸೌಮ್ಯವಾದಿಗಳು, ನೇರ ನಡೆನುಡಿಯನ್ನು ಮೈಗೂಡಿಸಿಕೊಂಡ ದನಗರ ಗವಳಿಗರಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತದೆ. ಆರ್ಥಿಕ ಅನುಕೂಲಕ್ಕಾಗಿ ಸಹಕಾರ ಸಂಘವನ್ನು ಸ್ಥಾಪಿಸಿದ್ದನ್ನು ಬಿಟ್ಟರೆ ಒಗ್ಗಟ್ಟಾಗಿ ತಮಗೆ ದೊರಬೇಕಾದ ಸರಕಾರಿ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಹೀಗಾಗಿ ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರೇ ಹೇಳುವಂತೆ “ಜನಪ್ರತಿನಿಧಿಗಳು ಚುನಾವಣೆ ಇದ್ದಾಗ ಮಾತ್ರ ನಮ್ಮ ಹಟ್ಟಿಗಳಿಗೆ ಭೇಟಿ ನೀಡಿ ಅನೇಕ ಆಶ್ವಾಸನೆಗಳನ್ನು ನೀಡಿ ಮತವನ್ನು ಕೇಳುತ್ತಾರೆ. ಆಶ್ವಾಸನಗಳನ್ನು ಕೊಟ್ಟು ಹೋದವರು ಮತ್ತೆ ಮರಳಿ ಕಾಲಿಡುವುದಿಲ್ಲ. ನಾವು ಅವರನ್ನೂ ಮತ್ತೆ ಕೇಳಲಿಕ್ಕೂ ಹೋಗುವುದಿಲ್ಲ” ಎನ್ನುತ್ತಾ. ಜೇನುಮುರಿ ಗ್ರಾಮದಲ್ಲಿ ಈ ಸಮುದಾಯದ ಮಹಿಳೆಯೊಬ್ಬಳು ಈ ವರ್ಷ ಗ್ರಾಮ ಪಂಚಾಯಿತಿ ಸದಸ್ಯಳಾಗಿ ಆಯ್ಕೆಯಾಗಿದ್ದಾಳೆ.

ಕರ್ನಾಟಕದ ಕುರುಬರು ಗವಳಿಗರು ನಮ್ಮವರೆಂದು ಈವರೆಗೂ ಅರಿತುಕೊಂಡಂತಿಲ್ಲ. ಈಗಲಾದರೂ ಕುರುಬರ ಸಮುದಾಯದ ನಾಯಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಗವಳಿಗರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವರಿಗೆ ಸಿಗಬಹುದಾದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಹಾಯ ಸಹಕಾರ ನೀಡಬೇಕಾಗಿವೆ. ಕರ್ನಾಟಕ ಪ್ರದೇಶ ಕುರುಬರ ಸಂಘವು ಗವಳಿಗರನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕಾಗಿದೆ. ಅಂದಾಗ ಮಾತ್ರ ಅವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.

ಮೀಸಲಾತಿಯಲ್ಲಿಯೂ ದನಗರ ಗವಳಿಗರಿಗೆ ನ್ಯಾಯ ದೊರಕಬೇಕಾಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ ೧ ರಲ್ಲಿ ಇವರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಹಟ್ಟಿ ಹಾಕಿಕೊಂಡು ವಾಸಿಸುತ್ತಿರುವ ಇವರು ಕಾಡು ತಿರುಗಿಕೊಂಡು ಪಶುಪಾಲನೆ ಮಾಡುತ್ತ ಹೈನುಗಾರಿಕೆ ವೃತ್ತಿಯನ್ನು ಮಾಡುತ್ತಿರುವ ಇವರನ್ನು ಪರಿಶಿಷ್ಟ ಪಂಗಡ (Scheduled Tribe) ದಲ್ಲಿ ಪರಿಗಣಿಸಬೇಕು. ಅಂದಾಗ ಮಾತ್ರ ಗವಳಿಗರಿಗೆ ಸರಕಾರಿ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಮೇಲಾಗಿ ಶೈಕ್ಷಣಿಕ ಸಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ.

೧೨. ಉಪಸಂಹಾರ

ಒಟ್ಟಾರೆ ಕುರುಬರ ಉಪಪಂಗಡಗಳಲ್ಲಿ ಒಂದಾದ ದನಗರ ಗವಳಿಗರು ಪಶುಪಾಲನೆ ಮಾಡುತ್ತಾ ಹೈನುಗಾರಿಕೆಯನ್ನೇ ತಮ್ಮ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಂಥವರು. ಜಾಗತೀಕರಣದ ಪ್ರಭಾವದಿಂದಾಗಿ ಅವರ ಉದ್ಯೋಗ ಹಾಗೂ ದೈನಂದಿನ ಬದುಕಿನಲ್ಲಿಯೂ ಏರುಪೇರುಗಳಾಗುತ್ತಿರುವುದು ಸಹಜ. ಈ ಏರುಪೇರುಗಳಿಗೆ ಬಗ್ಗದೇ ಗವಳಿಗರು ಮುನ್ನಡೆಯಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ಕಂಡುಕೊಳ್ಳಬೇಕಾದರೆ ಅವರಿಗೆ ಅವರ ಸಂಸ್ಕೃತಿ ಸಮುದಾಯದ ಅನನ್ಯತೆಯನ್ನು ತಿಳಿಸಿಕೊಡುವುದು ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ದನಗರ  ಗವಳಿಗರನ್ನು ಕುರಿತು ಸಮಗ್ರವಾದ ಅಧ್ಯನವನ್ನು ಕೈಕೊಳ್ಳಬೇಕಾಗಿದೆ. ಅದಕ್ಕೆ ಪೂರ್ವಪೀಠಿಕೆಯಾಗಿ ಈ ಸಂಪ್ರಬಂಧವನ್ನು ಸಿದ್ಧಪಡಿಸಲಾಗಿದೆ.

 

[1]ವೆಂಕಟರಂಗೋ ಕಟ್ಟಿ, (ಅನುವಾದ) ಗ್ರಾಝೇಟಿಯರ್‌, ಏಷಿಯನ್‌ ಎಜುಕೇಷನಲ್ ಸರ್ವೀಸಸ್ ನವದೆಹಲಿ, ೧೮೯೩, ಪುಟ ೧೭೫.

[2]ರಾ.ಚಿಂ.ಢೇರೆ, ಶ್ರೀ ವಿಠಲ: ಒಂದು ಮಹಾಸಮನ್ವಯ, ಅನುವಾದ ಚಂದ್ರಕಾಂತ ಪೋಕಳೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨.

[3]ಶಂಬಾ ಜೋಷಿ, ಮರ್ಹಾಠೀ ಸಮಸ್ಕೃತಿ: ಕೆಲವು ಸಮಸ್ತೆಗಳು, ೧೯೫೮.

[4]Edger Thurston, Caste and Tribes of Southern India, Vol-II, Asian Educational Services, New Delhi, 2001.

[5]Gunther Sontheimer, Pastrol Deities in Western India, 1989.

[6]K.C. Malhotra & Madhava Gadgil, The Ecological Basis of the Geographical Distribution of the Dhanagars: A Pastroal Caste-Cluster of Maharashtra.

[7]Madhava Gadgi & K.C. Malhotra, Ecology of Pastroal Caste: Gavali Dhanagars of peninsular India, Human Ecology Vol-10, No-I, 1982.

[8]Edger Thurston, Caste and Tribes of Southern India, Vol-II, Asian Educational Services, Page No. 167.

[9]Epigraphia India Vol-XVI, Page-4.

[10]ಸರಜೂ ಕಾಟ್ಕರ್, ಶಿವಾಜಿಯ ಮೂಲ ಕನ್ನಡ ನೆಲ (ರಾ.ಚಿಂ.ಢೇರೆಯವರ ಶಿಖರ ಶಿಂಗಣಾಪುರ ಶಂಭು ಮಹಾದೇವ ಕೃತಿಯಯ ಆಧಾರ), ಲೋಹಿಯಾ ಪ್ರಕಾಶನ ಬಳ್ಳಾರಿ, ೨೦೦೬.

[11]ವೆಂಕಟರಂಗೋ ಕಟ್ಟಿ, (ಅನುವಾದ) ಗ್ಯಾಝೇಟಯರ್, ಏಷಿಯನ್ ಎಜುಕೇಷನಲ್ ಸರ್ವೀಸಸ್ ನವದೆಹಲಿ, ೧೮೯೩ ಪುಟ ೧೭೫.

[12]ರಾ.ಚಿಂ. ಢೇರೆಯವರು ತಮ್ಮ ಶ್ರೀ ವಿಠಲ: ಒಂದು ಮಹಾಸಮನ್ವಯ ಕೃತಿಯಲ್ಲಿ ಗವಳಿಗರ ಆರಾಧ್ಯ ದೈವಗಳ ಕುರಿತು ಚರ್ಚಿಸಿದ್ದಾರೆ. ನೋಡಿ: ಅನುವಾದ : ಚಂದ್ರಕಾಂತ ಪೋಕಳೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨.