ಕುಡಿಯರು ಎಂದರೆ ಒಕ್ಕಲಿಗ, ಶೂದ್ರ, ಗುಡ್ಡಗಾಡು ಮನುಷ್ಯರು. ತುರುಗಾಹಿಗಳು ಎಂದರೆ ಗೊಲ್ಲರು, ಗೋವಳರು, ಪಶುಪಾಲಕರು ಎಂದು ಕರೆದಿರುವರು. ‘ಕಳ್‌’ ಎಂದರೆ ಹಾಲು, ಹಾಲು ಕೊಡುವ ಪ್ರಾಣಿಗಳು ಗೋವು ಮತ್ತು ಕುರಿ-ಮೇಕೆಗಳು. ಇವುಗಳನ್ನು ಸಾಕಿ, ಹಾಲು ಪಡೆಯುವವರಿಗೆ ಹಾಲುಮತದವರು ಕುರುಬರೆಂದೂ, ಗೋವಳರೆಂದೂ ಕರೆಯಲಾಗಿದೆ. ‘ಕುರುಂಬ’ ಎಂಬುದರಿಂದ ಕುರುಬ ಪದ ಉಂಟಾಗಿದೆ. ಇವರಿಗೆ ಹಾಲುಮತದವರೆಂದೂ ಕರೆಯುವರು. ಪ್ರಾಚೀನ ಕಾಲದಲ್ಲಿ ಹಾಲು ಹೆಚ್ಚಾಗಿ ದೊರೆಯುವ ಸ್ಥಳಗಳಿಗೆ ಹಾಲ್ವೊಳಲು ಎಂದು ಗುರುತಿಸಿರುವರು. ಬಳ್ಳಾರಿ ಜಿಲ್ಲೆಯ ಒಂದು ಶಾಸನದಲ್ಲಿ “ಹಾಲ್ವೊಳಲು ಹನ್ನೆರಡಕ್ಕೆ ಸೇರಿದ ಕೊಟಿಗನೂರು” ಎಂದಿದೆ. ಅದಕ್ಕೆ ಈಗ ಹರವಿ ಗ್ರಾಮ ಎಂದು ಕರೆಯುವರು. ‘ಲ’ ಕಾರಕ್ಕೆ ಬದಲಾಗಿ ‘ರ’ ಕಾರ ಉಂಟಾಗಿದೆ. ಕೊಟ್ಟೂರ ಬಳಿಯ ಒಂದು ಗ್ರಾಮ. ಅದಕ್ಕೂ ಹಾಲ್ವೊಳಲು ಎಂದು ಹೆಸರು. ಅದು ಈಗ ಹರಾಳು ಗ್ರಾಮವೆಂದು ಕರೆಯಿಸಿಕೊಳ್ಳುವುದು. ಈ ಗ್ರಾಮಗಳಲ್ಲಿ ಹೆಚ್ಚಾಗಿ ಕುರುಬ ಜನರು ಈಗಲೂ ಕಾಣುವರು.

ಬಳ್ಳಾರಿ ಜಿಲ್ಲೆಯ ಕುರುಗೋಡು ಬಸವೇಶ್ವರನ ೬.೬.೧೧೭೭ರ ಶಾಸನದಲ್ಲಿ “ಕುಡಿಯೊಕ್ಕಲ ಮಕ್ಕಳಿನೊರ್ಗ್ಗಳೊಪ್ಪುಗು” ಎಂಬುವ ಉಲ್ಲೇಖವಿದೆ. ಪ್ರಾಚೀನ ಕಾಲದಿಂದ ಈಚಿನ ಕಾಲದಲ್ಲಿಯೂ ಗ್ರಾಮೀಣರು ಹೊಸ ಕಾರ್ಯ ಆರಂಭಿಸುವಾಗ ಕುರುಬರಿಂದಲೇ ಪೂಜೆ ನಡೆಸುವ ಒಂದು ಸಂಪ್ರದಾಯವಿದ್ದಿತು. ತಮಿಳುನಾಡಿನಲ್ಲಿ ಕುರುಬಗೌಡರು ದೊರಕುವರು. ‘ಕುರಿ ಒಕ್ಕಲು’ ಬರಬರುತ್ತ ‘ಕುಡಿ ಒಕ್ಕಲು’ ಎಂದಾಗಿದೆ. ಈ ಕುಡಿ ಒಕ್ಕಲು ಕುರುಬರು ಈಗ ಲಿಂಗ ಧರ್ಮ ಸ್ವೀಕರಿಸಿದ್ದರೂ, ಅವರನ್ನು ಕುಡಿ ಒಕ್ಕಲಿಗರೆಂದೇ ಕರೆಯುವರು. ನಮ್ಮ ಭಾಗದಲ್ಲಿ ಅವರನ್ನು ಕಾಣಬಹುದು.

ಕುರುಬರಲ್ಲಿ ವಿಧಗಳು

೧.      ಹಾಲು ಕುರುಬರು

೨.      ಹಂಡೆ ಕುರುಬರು

೩.      ಜೇನು ಕುರುಬರು

೪.      ಗೊಂಡ ಕುರುಬರು

೫.      ಅಲೆಮಾರಿ ಕುರುಬರು

೬.      ಒಡೆಯರು

೭.      ಜೆಂಡೆ ಕುರುಬರು

೮.      ದಾಸ ಕುರುಬರು

೯.      ಸಾದ ಕುರುಬರು

೧೦.    ಕ್ರೈಸ್ತ ಕುರುಬರು

೧೧.    ಹತ್ತಿ ಕಂಕಣ್ಣ

೧೨.    ಉಣ್ಣೆ ಕಂಕಣ

೧೩.    ದನಗಾರರು

೧೪.    ನೊಣಬರು (ಕುರುಬರು)

೧೫.    ಕಾಡು ಕುರುಬರು

೧೬.    ಲಾಳಗೊಂಡರು

೧೭.    ಹೆಳವ ಕುರುಬರು

ಕುರುಬರಲ್ಲಿ ಕೆಲ ವೀರರು, ಸಾಹಸ ಮಾಡಿ, ರಾಜ್ಯ ಕಟ್ಟಿ ಆಳಿದರು. ಅಂಥವರಲ್ಲಿ ವಿಜಯನಗರದ ಹಕ್ಕ ಬುಕ್ಕ ಸೋದರರು, ಕನಕದಾಸರು, ಬಳ್ಳಾರಿ ಕೋಟೆಯನ್ನು ಕಟ್ಟಿ ಆಳಿದ ಹಂಡೆಯ ಪಾಳೆಯಗಾರ ಬಾಲದ ಹನುಮಪ್ಪ ನಾಯಕ. ಇವರಿಗಿಂತ ಮೊದಲು ಕರ್ನಾಟಕ ಪ್ರದೇಶವನ್ನು ಸು. ಕ್ರಿ. ಶ. ೭೫ ರಿಂದ ೧೦೫೪ರವರೆಗೂ ಆಳಿದ ಒಂದು ಜನಾಂಗ ಕುರುಬರೇ ಆಗಿದ್ದರು. ಅವರೇ ನೊಳಂಬರು-ನೊಣಬರು. ರೆವರೆಂಡ್‌  ಎಫ್‌. ಕಿಟೆಲ್‌ ಅವರು ನೊಣಬ ಎಂದರೆ ‘A man of a caste division of the Kurubas’ ಎಂದಿದ್ದಾರೆ.

ತಜ್ಞರ ಪ್ರಕಾರ ನೊಳಂಬ ಎಂದರೆ ಸುಂದರ, ಮುಂದುವರಿದವನು, ಮುಂದಾಳತ್ವವಹಿಸುವ, ಮುಂದಾಗು, ಮುನ್ನುಗ್ಗು, ಮೊದಲೇ ಹೋಗು, ಒಬ್ಬ ನಾಯಕನ ಮುಂದಾಳತ್ವದಲ್ಲಿಯ ಜನರ ಗುಂಪು. ನೊಳಂಬ ಎಂದರೆ ವೀರ ಜನರು, ಇತರರನ್ನು ಮುನ್ನಡೆಸುವವರು ಎಂದು. ತಮಿಳು ಮೂಲದ ಪ್ರಕಾರ  ನೂಲ್ಯೆ-ತೆವಳು ಎಂದು ಮತ್ತೊಂದು ಅರ್ಥದಲ್ಲಿ ಬೇರೆಯವರ ಮನಸ್ಸಿನ ಮೇಲೆ ತಮ್ಮ ಪ್ರಭಾವ ಬೀರುವವರು. ‘ಕುಳೈ-ಕುಲುಂಬು’, ‘ವರೈ’, ‘ವರಾಂಬು’ ಪ್ರವೇಶ ಮಾಡುವವರು, ಒಳನುಗ್ಗುವವರು ಎಂದಾಗುವುದು.

ಮೂಲ ರೂಪ ನುೞಂಬ, ನೊೞಂಬ ಆಗಿ ನೊಣಬ ಆಗಿದೆ. ಸಂಸ್ಕೃತದ ಪಲ್ಲವ ಕನ್ನಡದಲ್ಲಿ ಚಿಗುರು. ತಮಿಳಿನಲ್ಲಿ ನೊಳಂಬು, ಕನ್ನಡದಲ್ಲಿ ‘ಕುಡಿ’. ಅವರನ್ನೇ ಪಲ್ಲವರು, ನೊಳಂಬರು, ಕುಡಿಯರು ಎಂದು ಕರೆದಿರುವರು. ಶ್ರೀಗುರು ಸಿದ್ಧರಾಮೇಶ್ವರರು ಕುಡಿಯರ ಕುಲಶಿರೋಮಣಿ ಮುದ್ದು ಗೌಂಡರ ಮಗ. ಹಿಂದಿನ ಪಲ್ಲವರು ನಂತರದ ನೊಳಂಬರು (ನೊಣಬರು) ಕುಡಿಯ ರಾಜರಿಗೆ ಕುಡಿಯೊಕ್ಕಲಿಗ ಕುಡಿಯರ ಕೂಸು ಎಂದಿದೆ.

ಪ್ರಾಚೀನ ಕಾಲದಲ್ಲಿ ಬಾದಾಮಿ ಚಾಲುಕ್ಯರಿಗೂ ಕಂಚಿಯ ಪಲ್ಲವರಿಗೂ ಸತತವಾಗಿ ಕದನಗಳು ನಡೆಯುತ್ತಿದ್ದವು. ಈ ಸಮಯದಲ್ಲಿ ಸೋಲು-ಗೆಲುವುಗಳು ರಾಜ್ಯದ ಗಡಿಗಳಲ್ಲಿ ಹೆಚ್ಚು ಕಡಿಮೆಯಾಗುತ್ತಿದ್ದರು. ಇದರ ಸದುಪಯೋಗಪಡಿಸಿಕೊಂಡು ಪಲ್ಲವರ ಕೆಲ ಸೇನಾಧಿಕಾರಿಗಳು ಕರ್ನಾಟಕ ಪ್ರದೇಶಕ್ಕೆ ಪ್ರವೇಶ ಮಾಡಿ, ಚಾಲುಕ್ಯರ ರಾಜ್ಯದ ಗಡಿಗಳಲ್ಲಿ ಒಂದು ಚಿಕ್ಕ ರಾಜ್ಯವನ್ನು ಸ್ಥಾಪಿಸಿದರು. ಅದಕ್ಕೆ ನೊಂಬಳಿಗೆ ೧೦೦೦ ಎಂದು ಕರೆದರು. ನೊಳಂಬವಾಡಿ ಮೊದಲು ನೊಳಂಬಳಿಗೆ ಸಾಸಿರವಾಗಿ, ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತಮುತ್ತಲು ಪ್ರದೇಶವಾಗಿದ್ದು, ಕಾಲ ಕಳೆದಂತೆ ೯-೧೦ನೆಯ ಶತಮಾನಕ್ಕೆ ವರ್ಧಿಸಿ ನೊಳಂಬವಾಡಿ ೩೨,೦೦೦ ಸಾವಿರಕ್ಕೆ ವಿಸ್ತಾರಗೊಂಡಿದ್ದಿತು. ಇದು ಈಗಿನ ಕನ್ನಡ ನಾಡಿನ ಕೋಲಾರ, ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರು, ಬಳ್ಳಾರಿ ಮತ್ತು ಆಗ್ನೇಯ ದಿಕ್ಕಿನ ತಮಿಳುನಾಡಿನ ಧರ್ಮಪುರಿ, ನೈಋತ್ಯದಲ್ಲಿ ಮಂಡ್ಯ ಜಿಲ್ಲೆಯ ತಾಯೂರವರೆಗೆ ವಿಸ್ತರಿಸಿದ್ದಿತು. ರಾಷ್ಟ್ರಕೂಟ, ಗಂಗ, ಪಲ್ಲವ ಪೂರ್ವ ಚಾಲುಕ್ಯ ಮುಂತಾದ ಪ್ರಮುಖ ಅರಸರು ಒಬ್ಬರಿಗೊಬ್ಬರು ತಮ್ಮ ಮೇಲ್ಮೈಯನ್ನು ಸ್ಥಿರಗೊಳಿಸಲು, ಸೆಣಸಾಡುತ್ತಿರುವಾಗ, ಅವರ ಮಧ್ಯದಲ್ಲೂ ಒಂದು ಚಿಕ್ಕರಾಜ್ಯವನ್ನು ಕಾಲಾಂತರದಲ್ಲಿ ಸ್ಥಾಪಿಸಿ, ವಿಸ್ತರಿಸುವುದರಲ್ಲಿ ನೊಳಂಬರು ಯಶಸ್ವಿಯಾದರು. ಆದರೆ ಮಹಾರಾಜರಾಗಿ ಚಕ್ರವರ್ತಿಗಳಾಗುವ ಸಾಧ್ಯತೆಗಳು ಕಡಿಮೆಯಾದವು. ರಾಷ್ಟ್ರಕೂಟರು ಮತ್ತು ಗಂಗರ ಹೋರಾಟಗಳಲ್ಲಿ ನೊಳಂಬರ ಶಕ್ತಿ ಸಾಮರ್ಥ್ಯಗಳು, ಪ್ರಯತ್ನಗಳು ಫಲಕಾರಿಯಾಗಲಿಲ್ಲ. ೯ನೆಯ ಶತಮಾನದಲ್ಲಿ ಬಾಣರನ್ನು ಹಿಂದಕ್ಕಟ್ಟಿದರು. ‘ಮಹಬಲಿ ಕುಲವಿದ್ವಂಶಕ’ ಎಂಬುವ ಹೊಗಳಿಕೆಗೂ ಪಾತ್ರರಾದರು. ತಲಕಾಡಿನ ಗಂಗರ ಕೈಕೆಳಗೆ ತಮ್ಮ ಆಡಳಿತವನ್ನು ಆರಂಭಿಸಿ, ಕಾಲಕ್ರಮೇಣ ಗಂಗರು, ರಾಷ್ಟ್ರಕೂಟರು, ಚಾಲುಕ್ಯರ ವಂಶಗಳೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಿ, ಸುಮಾರು ಮೂರು ಶತಮಾನಗಳ ಕಾಲ ಕರ್ನಾಟಕವನ್ನು ಆಳಿದ ನೊಳಂಬರು ನಾಡಿನ ರಮ್ಯೇತಿಹಾಸ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿದವರಲ್ಲಿ ಒಬ್ಬರು.

ಬಿ. ಎಲ್‌. ರೈಸ್‌ ಅವರು ಸಿಂಹದಂತೆ ಗರ್ಜಿಸುವ ಜನಾಂಗವೆಂದು ಕರೆದಿರುವರು. ಮಂಗಳನೇ ಪ್ರಸಿದ್ಧ ಅರಸ. ಇವನು ಗಂಗರ ಸಾಮಂತನೂ ಸಂಬಂಧಿಯೂ ಆಗಿದ್ದನು. ಅವನ ಮಗ ಸೈಗೊಟ್ಟ ಶಿವಮಾರನಿಗೆ ಅಧೀನನಾಗಿದ್ದನು. ತನ್ನ ಆಶ್ರಯದಾತನಿಗಾಗಿ ಅನೇಕ ಅರಸರನ್ನು ಯುದ್ಧರಂಗದಲ್ಲಿ ಸೋಲಿಸಿ, ಗಂಗ ಸಾಮ್ರಾಜ್ಯವನ್ನು ಬಲಪಡಿಸಿದನು. ಇವರ ಮೊದಲ ರಾಜಧಾನಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಸಿರಾ ತಾಲೂಕಿನ ಹೆಂಜೇರು ಹೇಮಾವತಿ. ಅಲ್ಲಿ ಸಿದ್ದೇಶ್ವರ ದೇವಾಲಯವಿದೆ. ಅಲ್ಲಿಯ ಜನರು ಹಂಜೇರಪ್ಪ ಎಂದೂ ಕರೆಯುವರು. ಅದರ ಒಂದು ಕಂಬದ ಕ್ರಿ. ಶ. ೯೪೨ ಶಾಸನದಲ್ಲಿ ಇವರ ವಂಶವೃಕ್ಷವಿರುತ್ತದೆ. ಅದರ ಪ್ರಕಾರ ತ್ರಿಣಯ ಪಲ್ಲವ-ಮಂಗಳನಿಂದ ಸು. ೭೪೦- ಆಳ್ವಿಕೆ ಆರಂಭಗೊಂಡು ತ್ರೈಲೋಕ್ಯಮಲ್ಲ ನನ್ನಿನೊಳಂಬ ಪಲ್ಲವ ಪೆರ್ಮಾನಡಿ ಕ್ರಿ. ಶ. ೧೦೫೪ರ ವರೆಗೂ ಆಳಿದ್ದು ಗೊತ್ತಾಗುವುದು. ನೊಳಂಬರು ಬಳ್ಳಾರಿ ಜಿಲ್ಲೆಯ ಕಂಪಲಿಗೆ ಬಂದ ಬಳಿಕ ಅವರ ನೊಳಂಬವಾಡಿ ರಾಜ್ಯ ಮೊದಲಿನಂತೆ ವಿಸ್ತಾರವಾಗಿರಲಿಲ್ಲ. ಆಗ ಕೋಗಳಿ-೫೦೦ ಕದಂಬಳಿಗೆ ೧೦೦೦ ಬಲ್ಲಕುಂದೆ-೩೦೦, ಕಣಿಯಕಲ್ಲು-೩೦೦, ಕುಡಿ ಹರವಿ-೭೦, ಕರಿವಿಡಿ-೩೦, ಪ್ರಾಂತಗಳಿಗೆ ಒಡೆಯರಾಗಿದ್ದರು. ಕೊನೆ ಅರಸನು ತ್ರೈಲೋಕ್ಯಮಲ್ಲ ಮೊದಲ ಸೋಮೇಶ್ವರನ ಸಾಮಂತನಾಗಿದ್ದನು. ಕೃಷ್ಣಾನದಿಯ ದಂಡೆಯ ಕೊಪ್ಪದಲ್ಲಿ ಚಾಲುಕ್ಯರಿಗೂ ಚೋಳರಿಗೂ ನಡೆದ ಕ್ರಿ. ಶ. ೧೦೫೪ ರ ಯುದ್ಧದಲ್ಲಿ ನನ್ನಿ ನೊಳಂಬ, ದಶಪಣ್ಣ ಜಯಸಿಂಹರು ಮಡಿದರು.

ಆಡಳಿತ

ನೊಳಂಬ ಪಲ್ಲವ ರಾಜ್ಯದಲ್ಲಿ ಅರಸರನ್ನು ಬಿಟ್ಟರೆ, ಎರಡನೆಯ ಸ್ಥಾನದಲ್ಲಿ ರಾಣಿಯರು ಕಾಣಿಸಿಕೊಳ್ಳುವರು. ನೊಳಂಬ ಅರಸರಲ್ಲಿ ಪತಿ ಮಡಿದರೆ ಕೆಲಕಾಲ ಅವರ ರಾಣಿಯರೇ ರಾಜ್ಯವಾಳುವ ಪದ್ಧತಿಯಿದ್ದಿತು. ಮಗು ದೊಡ್ಡವನಾದ ಬಳಿಕ ಅವನಿಗೆ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿದ್ದರು. ಎರಡನೆಯ ಪೊಳಲ್ಚೋರನ ಮಡದಿ ಅಗ್ರ ಮಹಿಷಿ ರಾಣಿಯಾಗಿ ರಾಜ್ಯಭಾರ ಮಾಡಿದಳು. ಗವಗನಬ್ಬೆ ಗಂಡ ಪರಮೇಶ್ವರ ಪಲ್ಲವಾಧಿರಾಜನ ನೇತೃತ್ವದಲ್ಲಿ ಮದರಿಕಲ್‌ನ್ನು ಆಳಿದಳು. ಒಂದನೇ ಮಹೇಂದ್ರನಿಗೆ ನಾಲ್ಕು ಜನ ರಾಣಿಯರು ೧. ಬಿಜ್ಜಮಹಾದೇವಿ ೨. ಪರಮ ಮಹಾದೇವಿ ೩. ಅಕ್ಕಬ್ಬೆ ೪. ದೊಂಬಾಬ್ವೆ. ಅವನ ಪರವಾಗಿ ಇವರು ಬೇರೆ ಬೇರೆ ಪ್ರಾಂತಗಳನ್ನು ಆಳುತ್ತಿದ್ದರು. ಅಲ್ಟೇಕರ್‌ ಪ್ರಕಾರ ಮಂತ್ರಿಮಂಡಳ ೪-೬ ಜನರನ್ನು ಒಳಗೊಂಡಿದ್ದಿತು. ಟಿ. ವಿ. ಮಹಾಲಿಂಗಂ ಪ್ರಕಾರ ಅರಸರಿಗೆ ಐದು ಜನ ಸಲಹೆಗಾರರು ಇದ್ದರು. ದಂಡನಾಯಕನಿಗೆ ಪ್ರಚಂಡ ದಂಡನಾಯಕನೆಂದೂ (ಕಮ್ಯಾಂಡರ್‌ ಇನ್‌ ಚೀಫ್‌) ಕೆಲವು ಶಾಸನಗಳಲ್ಲಿ ಅಮಾತ್ಯ ಮತ್ತು ಪೆರ್ಗಡೆ ಎಂದೂ ತಿಳಿಸಿದೆ.

ನೀರಾವರಿ ಯೋಜನೆಗೆ ಆಧ್ಯತೆ

ಮಾನವರಿಗೆ, ಕಾಡು ಪ್ರಾಣಿಗಳಿಗೆ, ದನಕರು, ಪ್ರಾಣಿ-ಪಕ್ಷಿಗಳಿಗೆ ದಾಹ ತಣಿಸಲು ಹಾಗೂ ರೈತರ ಬೆಳೆಗಳಿಗೆ ನೀರನ್ನು ಒದಗಿಸುವ ಉದ್ದೇಶಗಳಿಂದ ಕೆರೆಗಳನ್ನು ನಿರ್ಮಿಸುತ್ತಿದ್ದರು. ಚಿಕ್ಕ ಅರಸರು ಸಮಾಜದಲ್ಲಿಯ ಶ್ರೀಮಂತರು ಅವುಗಳ ನಿರ್ಮಾಣ ಕಾರ್ಯ ಮತ್ತು ದುರಸ್ಥಿ ಕಾರ್ಯಕೈಗೊಂಡರೆ ಅಂಥವರನ್ನು ವಿಶೇಷ ಸಂದರ್ಭಗಳಲ್ಲಿ ಪುರಸ್ಕರಿಸುತ್ತಿದ್ದರು.

ದೇವಾಲಯಗಳ ರಚನೆ

ಪಲ್ಲವರಂತೆ ನೊಳಂಬರು ದೇವಾಲಯಗಳ ನಿರ್ಮಾಣದಲ್ಲಿ ಹೆಚ್ಚು ಆಸಕ್ತರಾಗಿದ್ದರು.

೧. ಹೇಮಾವತಿಯ ಸಿದ್ದೇಶ್ವರ ೨. ನಂದಿಯ ಭೋಗ ನಂದೀಶ್ವರ ೩. ಧರ್ಮಪುರಿಯ ರಾಮಕೃಷ್ಣ ದೇವಾಲಯ ೫. ಬರಗೂರು ಮಹೇಂದ್ರೇಶ್ವರ ದೇವಾಲಯ ೬. ಪೆನುಕೊಂಡದ ಉಮಾಮಹೇಶ್ವರ.

ಇವರ ಶಾಸನಗಳಲ್ಲಿ

ಸ್ವಸ್ತಿ ಸಮಧಿನತ ಮಹಾಶಬ್ದ ಪಲ್ಲವಾನ್ವಯ ಎಂದು ಹೇಳಿದೆ. ಆ ಪಂಚ ಶಬ್ಧಗಳು ೧. ಕೊಂಬು ೨. ಹಲಗೆ ೩. ಶಂಕ ೪. ಭೇರಿ ೫. ಜಾಗಟೆಗಳು.

“ಮೆರುವಿನಿ ಉಮಾಪತಿಯೆ ದಕ್ಷಿಣ ಭಾಗದ ಭೂಮಿಯಲ್ಲಾ
ಸಾರಮ್‌ ಇದೆಂದಿವಿಯಸಗೋಡೆನೋಳ್‌ ಇಂತು ಸ್ವಯಂಭೂ ಆಗಿಹರ್‌
ಹರಾಜಿತೇಂದ್ರಿಯವರಿಗೆ ಕನಸಿಂದ ಮೆತೋ ವಿಶೇಷದಿಂದೆ ವಿ
ಸ್ಥಾರದೆ ಈಶ್ವರಾಲ ಯಮನ್‌ ಎತ್ತಿಸಿದರ್ಧರೇಗೇನ್‌ ಅಪೂರ್ವವೋ”
(ಚಳ್ಳಕೆರೆ ಶಾಸನ)

ಕುಮಾರ ಚೋರಯದೇವ ಅಸಗೋಡನ ಸ್ವಯಂಭೂ ದೇವರಿಗೆ ದತ್ತಿ ಬಿಟ್ಟಿದ್ದನ್ನು ತಿಳಿಸುತ್ತದೆ.

ಹೀಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಶಾಸನದಲ್ಲಿ ಮೇಲಿನಂತೆ ತಿಳಿಸಿದೆ. ಇದರಲ್ಲಿ ಗದ್ಯಪದ್ಯ ಮಿಶ್ರವಾದ ಚಂಪೂ ಕಾವ್ಯ ಗುಣ ಕಾಣಬಹುದು. ಭಾಷೆ ಮಾತ್ರ ಕನ್ನಡವಾಗಿದೆ.

ಶಿಕ್ಷಣ

ನೊಳಂಬರು ವಿದ್ಯಾ ಪ್ರೇಮಿಗಳು. ಇವರ ಕಾಲದಲ್ಲಿ ಹೆಂಜೇರು ಒಂದು ದೊಡ್ಡ ವಿದ್ಯಾಕೇಂದ್ರವಾಗಿದ್ದಿತ್ತು. ೧. ಮೋರಿಗೇರಿ-೧೦೪೫ ೨. ನಾಗಾಯಿ-೧೦೫೮ ೩. ಸೂಡಿ-೧೦೬೦ ೪. ಹೊಟ್ಟೂರು-೧೦೬೪  ೫. ಕುಂಬಳ -೧೦೬೮  ೬. ರಾಯಬಾಗ್‌-೧೧೩೭ ೭. ಪುಲಿಗೆರೆ-೧೧೨೬ ೮. ಹೆಂಜೇರು-೧೧೬೭ ೯. ಕಡಲೆನಾಡು-೧೧೮೬ ಇವೆಲ್ಲ ಘಟಿಕಾ ಸ್ಥಾನಗಳು. ಹೆಂಜೇರು ಮತ್ತು ರಾಯಭಾಗಗಳು ಮಹಾಘಟಿಕಾ ಸ್ಥಾನಗಳು (ಈಗಿನಂತೆ ವಿಶ್ವ ವಿದ್ಯಾಲಯಗಳು).

ನೊಳಂಬ ಅರಸರ ಲಾಂಛನ ನಂದಿ ವಿಗ್ರಹ.

ನಾಣ್ಯಗಳು

ಚಿನ್ನದಿಂದ ಮಾಡಿದ ಗದ್ಯಾಣ ಪೋನ್‌, ವೃತ್ತಾಕಾರ, ತೂಕ ೨.೬೮ ಗ್ರಾಂ. ವ್ಯಾಸ ೧೪ ಮಿ. ಮೀ.

ಮುಂಭಾಗದ ಆಕಾರ-ಎಡಕ್ಕೆ ಮುಖ ಮಾಡಿದ ನಂದಿ ಮೇಲೆ ಸೂರ್ಯ ಮತ್ತು ಚಂದ್ರ. ಕೆಳಗಡೆ ಬಳ್ಳಿ ಆಕಾರದ ವಿನ್ಯಾಸ.

ಹಿಂಭಾಗದ ಆಕಾರ-  ಶ್ರೀವೀರನೊಳಂಬ ಎಂಬುವ ಎರಡು ಸಾಲಿನ ಕನ್ನಡ ಲಿಪಿ. ಶಾಸನ ನಡುವೆ ಚುಕ್ಕೆಗೆರೆ, ಕೆಲವು  ನಾಣ್ಯಗಳಲ್ಲಿ ನೊಳಂಬವಾಡಿಗೊಂಡ ಎಂದಿದೆ.

ತಮ್ಮ ಇಷ್ಟ ದೇವರಾದ ಸಿದ್ದೇಶ್ವರನನ್ನು ನೊಳಂಬೇಶ್ವರನೆಂದು ಕರೆದು ಶಾಸನದಲ್ಲಿ ದಾಖಲಿಸಿದರು. ಕಲ್ಯಾಣ ಚಾಲುಕ್ಯರು ಹಿರೇಕುರುವತ್ತಿಯ ಮಲ್ಲಿಕಾರ್ಜುನ ದೇವರಿಗೆ ಆಹವಮಲ್ಲನೆಂದು ಕರೆದು ಶಾಸನದಲ್ಲಿ ಬರೆಸಿದರು. ಅವರ ಸಾಮಂತರಾದ ಇವರು ಅದನ್ನೇ ಅನುಸರಿಸಿದ್ದಿರಬೇಕು.

ಕೆಲಕಾಲದ ಬಳಿಕ ನೊಳಂಬರು ಲಿಂಗ ಧರ್ಮೀಯರಾದರು. ಅದಕ್ಕೆ ಆಧಾರಗಳು ದೊರೆತಿಲ್ಲ. ಇವರು ಸಿದ್ದೇಶ್ವರನನ್ನು ದೈವವನ್ನಾಗಿ, ಸಿದ್ಧರಾಮೇಶ್ವರರನ್ನು ಸ್ವಾಮಿಗಳೆಂದು ಆರಾಧಿಸುವರು.

ಕುರುಬರೂ ಇದೇ ದೇವರನ್ನು ಹಾಗೂ ಸ್ವಾಮಿಗಳನ್ನು ಆರಾಧಿಸುವರು. ನೊಳಂಬರಿಗೆ ನೊಣಬರೆಂದು ಕರೆಯುವರು. ನೊಣಬ ಎಂಬುದು ಜಾತಿಯಲ್ಲ. ಅದು ವಂಶದ ಹೆಸರು. ನೊಣಬರ ಸಂಸ್ಕೃತಿಯು ಕುರುಬರ ಸಂಸ್ಕೃತಿಯು ಒಂದೇ ಆಗಿರುತ್ತದೆ. ಈ ನೊಣಬ ಜನಾಂಗ ಕರ್ನಾಟಕದಲ್ಲಿ ೧. ತುಮಕೂರು ಜಿಲ್ಲೆ ೨. ಬೆಂಗಳೂರು ಜಿಲ್ಲೆ ೩. ಚಿಕ್ಕಮಂಗಳೂರು ಜಿಲ್ಲೆ ೪. ಶಿವಮೊಗ್ಗ ಜಿಲ್ಲೆ ೫. ದಾವಣಗೆರೆ ಜಿಲ್ಲೆಯ ಹೊನ್ನಾಳಿ ೬. ಹಾವೇರಿ ಜಿಲ್ಲೆಯ ಹಾನಗಲ್ಲು-ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವರು. ಕರ್ನಾಟಕ ರಾಜ್ಯದ ಬಹುಭಾಗಗಳನ್ನು ಆಳಿದ ರಾಜ-ಮಹಾರಾಜರುಗಳ ವಂಶಗಳ ಕಣ್ಮರೆಯಾಗಿ, ಇತಿಹಾಸ ಸಂಪುಟವನ್ನು ಸೇರಿದರೆ, ಆ ವಂಶಕ್ಕೆ ಸಂಬಂಧಿಸಿದವರು ಈಗ ದೊರೆಯುವುದಿಲ್ಲ. ಆದರೆ ನೊಳಂಬ ಅರಸರ ವಂಶಸ್ಥರನ್ನು ಈಗಲೂ ನಾವು ಕಾಣುತ್ತೇವೆ.

ಒಂದು ಕಾಲದಲ್ಲಿ ಕರ್ನಾಟಕದ ತುಂಬಾ ಕುರುಬರೇ ಹೆಚ್ಚಾಗಿದ್ದರೆಂದು ಹೇಳುವ ಸಂಶೋಧಕ ಸಾಹಿತಿ, ಶಂ. ಭಾ. ಜೋಷಿ ಅವರ ಮಾತನ್ನು ಅಲ್ಲಗಳೆಯುವಂತಿಲ್ಲ.

01_64_HV2_KUH

 

 

02_64_HV2_KUH

ಪಲ್ಲವನೊಳಂಬ ಕುಡಿಯ ವಂಶ

ಪಲ್ಲವನೊಳಂಬ ವಂಶದ ಕುಡಿಯರ ಕುಲ ಶಿರೋಮಣಿ ಮುದ್ದುಗೌಡರ ಮಗನಾಗಿ ಜನಿಸಿದ ಶ್ರೀಗುರು ಸಿದ್ಧರಾಮೇಶ್ವರರು ಶಿವಯೋಗಿ ಆದ ಮೇಲೆ ಅವರ ಸೋದರರಾದ ೧. ಮಾರೇಗೌಡ (ಕಾವ್ಯದಲ್ಲಿ ಬೊಮ್ಮಣ್ಣ), ಕಾಳಣ್ಣಗೌಡ, ಚೆನ್ನಪ್ಪಗೌಡ, ಕಾಳಚಿಕ್ಕಪ್ಪಗೌಡ, ರಾಮಪ್ಪಗೌಡ, ಸಂಗಪ್ಪ ಗೌಡ ಮತ್ತು ಚಿಕ್ಕಪ್ಪಗೌಡರು ‘ನಾಗಮರಿ’ ಆಯುಧವನ್ನು ಆಶೀರ್ವಾದದಿಂದ ಪಡೆದು ದಕ್ಷಿಣಕ್ಕೆ ಬಂದು ಕಂಪಲಿಯಲ್ಲಿ ಕೆಲದಿನಗಳಿದ್ದು, ನಂತರ ಗಂಡು ಮೆಟ್ಟಿನ ನೆಲವಾದ ಏಳುನಾಡಿನಲ್ಲಿ ರಾಜ್ಯಕಟ್ಟಿ, ಗೃಹ ಕಲಹದಿಂದ ಮೂರು ಮನೆಯವರು ಒಂದು, ನಾಲ್ಕು ಮನೆಯವರು ಮತ್ತೊಂದು ಭಾಗವಾಗಿಯೂ ಮತ್ತೆ ಕಲಹದಿಂದ ಮಾರೇಗೌಡರು ಮುಮ್ಮಡಿ ಪಟ್ಟಣ, ಚೆನ್ನಪ್ಪಗೌಡ-ತೆರಿಯೂರು, ಸಂಗಪ್ಪಗೌಡ-ಚೇಳೂರು, ಕಾಳಚಿಕ್ಕಪ್ಪಗೌಡ-ಗುಬ್ಬಿ ಹೊಸಹಳ್ಳಿ, ರಾಮಪ್ಪಗೌಡ-ಎಣ್ಣೆಗೆರೆ, ಚಿಕ್ಕಪ್ಪಗೌಡ-ಬಿದರೆ, ಚಿಕ್ಕರಾಮಪ್ಪಗೌಡ-ಕೋರಾದಲ್ಲಿ ನಿಂತು ರಾಜ್ಯ ಕಟ್ಟಿದರು. (ಮಧುಗಿರಿಯ ಚರಿತ್ರೆ ಮತ್ತು ಶಾಸನಗಳು).

03_64_HV2_KUH

ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ, ರಾಯರಾಯ ಕೈಪಿಡಿ ಶಾಸನಗಳು.

ಆಕರಗಳು

೧. History of the pallavas of Kannchi Madras – B. R. Gopal.

೨. The Nolambas Dr. M. S. Krishna Murthy.

೩. The Maha Mandaleswara under the Chalukyas of Kalyani Bombay-Desai Dinakar.

೪. The Nolambas and the Tamil Country – C. R. Srinivasan.

೫. South Indian Inscription – IX

೬. Some Feudatory Families of Medical Karnataka-A Study Dr. Z. K. Ansari.

೭. ನೊಳಂಬರ ಆರ್ವಾಚೀನ ಇತಿಹಾಸ- ಗಂಗಪ್ಪ

೮. ನೊಳಂಬ ವಂಶವೃಕ್ಷ – ಕಂಬದ ಶಾಸನ, ಹೇಮಾವತಿ

೯. ನೊಳಂಬರ ವಂಶಾವಿ ಶಾಸನ – ಮೋರಿಗೇರಿ, ಹಗರಿಬೊಮ್ಮನಹರ್ಳಳಿ ತಾಲೂಕು.

೧೦. ನೊಳಂಬರ ಲಾಂಛನ-ಎಂ. ಎಸ್‌. ರಾಮಲಿಂಗಪ್ಪ.

೧೧. ಹಾಲುಮತ ದರ್ಶನ- ಶಂ. ಬಾ. ಜೋಷಿ.

೧೨. ನೊಳಂಬ ಇತಿಹಾಸ ದರ್ಶನ-ನೊಳಂಬ ವೀರಶೈವ ಸಂಘ.

೧೩. ಕರ್ನಾಟಕ ಪರಂಪರೆ ಸಂಪುಟ-೧ ಕನ್ನಡ ಸಂಸ್ಕೃತಿ ಇಲಾಖೆ.

೧೪. ಎಪಿಗ್ರಾಫಿಯಾ ಕರ್ನಾಟಕ ಸಂಪುಟ-IX, X, XI, XII.

೧೫. ಕರ್ನಾಟಕ ಸಂಸ್ಕೃತಿ ಸಮೀಕ್ಷೆ – ಡಾ. ಹೆಚ್‌. ತಿಪ್ಪೆರುದ್ರಸ್ವಾಮಿ.

೧೬. ಇಮ್ಮಡಿ ಚಿಕ್ಕ ಭೂಪಾಲ ಸಾಂಗತ್ಯ, ರಾಮರಾಯ ಕೈಪಿಡಿ ಶಾಸನಗಳು.