ಕನ್ನಡ ವಿಶ್ವವಿದ್ಯಾನಿಲಯದ ಹಾಲುಮತ ಅಧ್ಯಯನ ಪೀಠವು ಚಳ್ಳಕೆರೆಯ ಕನಕ ನೌಕರರ ಸಂಘದ ಸಹಯೋಗದಲ್ಲಿ ಬ.ಪ. ನಾಯ್ಕರ್‌ ಅವರ ಅಧ್ಯಕ್ಷತೆಯಲ್ಲಿ ಎರಡನೆಯ ಹಾಲುಮತ ಸಮ್ಮೇಳನವನ್ನು ಏರ್ಪಡಿಸಿ ಸಮಾರೋಪ ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಎಸ್. ಎಸ್‌. ಪೂಜಾರ ಅವರಿಗೆ ಹಾಗೂ ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್‌. ಟಿ. ಹಳ್ಳಿಕೇರಿ ಅವರಿಗೆ ಧನ್ಯವಾದಗಳು. ಹಾಲುಮತದ ಬಗ್ಗೆ ನಾನು ಅಧ್ಯಯನ ಮಾಡಿದವನಲ್ಲ. ಆದರೆ ಕಳೆದ ನಲ್ಕು ದಶಕಗಳಿಂದಲೂ ಸಂಸ್ಕೃತಿ ಅಧ್ಯಯನದಲ್ಲಿ ತೊಡಗಿಸಿಕೊಂಡು, ಪಶುಪಾಲಕ ಸಮುದಾಯದವರಾದ ಕಾಡುಗೊಲ್ಲರ ಬಗ್ಗೆ ಅಧ್ಯಯನ ಮಾಡಿದ್ದೇನೆ. ಕಾಡುಗೊಲ್ಲರಿಗೆ ಮತ್ತು ಕುರುಬರಿಗೆ ನಿಕಟವಾದ ಸಂಬಂಧವಿರುವುದರಿಂದ, ನಾನು ಏನಾದರೂ ಈ ಬಗ್ಗೆ ಹೇಳಬಹುದೆಂದು ಭಾವಿಸಿ ನನ್ನನ್ನು ಆಹ್ವಾನಿಸಿರುವುದು ನನಗೆ ಸಂತೋಷ ಉಂಟುಮಾಡಿದೆ. ಹಾಲುಮತದ ವಿವಿಧ ಉಪಜಾತಿಗಳ ಬಗ್ಗೆ ವಿದ್ವಾಂಸರು ಈವರೆಗೆ ಮಂಡಿಸಿರುವ ಪ್ರಬಂಧಗಳು ಅನೇಕ ವಿಷಯಗಳನ್ನು ಒಳಗೊಂಡು ತುಂಬ ಉಪಯುಕ್ತವಾಗಿವೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ೨೦೦೭ರಲ್ಲಿ ಆರಂಭವಾದ  ಹಾಲುಮತ ಅಧ್ಯಯನ ಪೀಠ ಕಳೆದ ಮೂರು ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಿದೆ. ಇವುಗಳಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಅಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ  ಪ್ರಕಟಿಸುವುದು ಒಂದು ಮುಖ್ಯವಾದ ಕಾರ್ಯಕ್ರಮ. ಮೊದಲನೆಯ ವಿಚಾರ ಸಂಕಿರಣದಲ್ಲಿ ಹಾಲುಮತ ಅಧ್ಯಯನದ ಆಕರಗಳು, ಸಾಂಸ್ಕೃತಿಕ ವೀರರು, ದೈವಗಳು, ಸಾಧಕರು ಮೊದಲಾದ ವಿಷಯಗಳ ಬಗ್ಗೆ ಮಂಡಿತವಾದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಈಗ ಹಾಲುಮತದ ಉಪಜಾತಿಗಳ ಬಗ್ಗೆ ನಡೆಯುತ್ತಿರುವ ವಿಚಾರ ಸಂಕಿರಣದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇದಕ್ಕಾಗಿ ವಿಶೇಷವಾಗಿ ಶ್ರಮಿಸುವ ಡಾ. ಎಫ್‌. ಟಿ. ಹಳ್ಳಿಕೇರಿ ಅವರಿಗೆ ನನ್ನ ಅಭಿನಂದನೆಗಳು. ಕಾಡುಗೊಲ್ಲರ ಬಗ್ಗೆ ಅಧ್ಯಯನ ಮಾಡಿರುವ ನನಗೆ ಈ ಬುಡಕಟ್ಟಿನೊಡನೆ ನಿಕಟಸಂಪರ್ಕ ಹೊಂದಿರುವ ಕುರುಬರ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿಯುವ ಸದಾವಕಾಶ ದೊರೆತಿದೆ.

ಕರ್ನಾಟಕ ಜಾತಿ ಮತ್ತು ಬುಡಕಟ್ಟುಗಳ ಬಗ್ಗೆ ಸಂಬಂಧಿಸಿದಂತೆ, ಹೆಚ್‌. ಸಿ. ನಂಜುಂಡಯ್ಯ ಮತ್ತು ಎಲ್‌. ಕೆ. ಅನಂತಕೃಷ್ಣ ಅಯ್ಯರ್‌ ಅವರ ನಾಲ್ಕು ಸಂಪುಟಗಳ The Mysore Tribes and Castes ಎಂಬ ಗ್ರಂಥವೇ ಮೊದಲನೆಯದು. ನಾಲ್ವಡಿ ಕೃಷ್ಣರಾಜ ಒಡೆಯರು ನೇಮಿಸಿದ್ದ ಮಿಲ್ಲರ್‌ ಕಮಿಟಿ ವರದಿಯ ಆಧಾರದ ಮೇಲೆ ಹಿಂದುಳಿದ ವರ್ಗಗಲಿಗೆ ಮೀಸಲಾತಿ ಕಲ್ಪಿಸಲಾಯಿತು. ಆದರೆ ಹಿಂದುಳಿದ ಜಾತಿಗಳಿಗೆ ಮತ್ತು ಬುಡಕಟ್ಟುಗಳಿಗೆ ವಿದ್ಯಾಭ್ಯಾಸದಲ್ಲಿ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ಸೌಲಭ್ಯ ದೊರೆತದ್ದು ೧೯೭೭ರಲ್ಲಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸ್‌ ಅವರು ನೇಮಿಸಿ ಅನುಷ್ಠಾನಗೊಳಿಸಿದ ಹಾವನೂರು ವರದಿಯಿಂದ. ಹಿಂದುಳಿದ ವರ್ಗಗಳ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಹತ್ವಪೂರ್ಣ ಘಟ್ಟ.

ಅಲ್ಲಿಂದೀಚೆಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಹಿಂದುಳಿದ ಜಾತಿ ಬುಡಕಟ್ಟುಗಳ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸರಕಾರ ಹಾಗೂ ಇತರೆ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ೧೯೬೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ. ಎ. ತರಗತಿಯಲ್ಲಿ ಜಾನಪದವನ್ನು ಐಚ್ಛಿಕ ವಿಷಯವಾಗಿ, ಅನಂತರ ಜಾನಪದ ಅಧ್ಯಯನಕ್ಕೆ ಪ್ರತ್ಯೇಕವಾದ ವಿ.ವಿ. ಕೋರ್ಸ್‌ನ್ನು ಆರಂಭಿಸಿದ್ದು ಇನ್ನೊಂದು ಮಹತ್ವದ ಘಟನೆ. ಪ್ರೊ. ದೇಜಗೌ, ಪ್ರೊ. ಹಾ. ಮಾ. ನಾಯಕ ಹಾಗೂ ಪ್ರೊ. ಜೀಶಂಪ ಅವರ ಸಂಘಟಿತ ಪ್ರಯತ್ನದಿಂದ ಆರಂಭವಾದ  ಈ ಘಟನೆಯಿಂದ ಮುಂದಕ್ಕೆ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ಕನ್ನಡ ಎಂ. ಎ. ಮತ್ತು ಜಾನಪದ ಎಂ. ಎ. ವಿದ್ಯಾರ್ಥಿಗಳು ಎಂ.ಫಿಲ್‌ ಮತ್ತು ಪಿ. ಹೆಚ್‌. ಡಿ. ಪದವಿಗಳಿಗೂ ಜಾತಿಗಳು ಮತ್ತು ಬುಡಕಟ್ಟುಗಳ ಬಗ್ಗೆ ನೂರಾರು ನಿಬಂಧಗಳನ್ನು ಮಹಾಪ್ರಬಂಧಗಳ್ನನೂ ರಚಿಸಿದ್ದಾರೆ. ಕೆಲವು ಪುಸ್ತಕ ರೂಪದಲ್ಲಿಯೇ ಪ್ರಕಟವಾಗಿವೆ. ಇವುಗಳಲ್ಲಿ ಬಹುಪಾಲು ವಿವರಣಾತ್ಮಕ ಅಧ್ಯಯನಗಳಾಗಿದ್ದು, ಕೆಲವು ಮಾತ್ರ ವಿಶ್ಲೇಷಣಾತ್ಮಕವಾಗಿವೆ. ನಾನು ಕಾಡುಗೊಲ್ಲರ ಬಗ್ಗೆ ಪಿ.ಹೆಚ್‌. ಡಿ. ಪದವಿಗಾಗಿ ಸಂಶೋಧನೆಯನ್ನು ೧೯೭೦ರಲ್ಲಿ ಆರಂಭಿಸಿದ್ದಾಗ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಸಮಾಜ ವಿಜ್ಞಾನಿಗಳ ವಿಜ್ಞಾನ ವಿಭಾಗದಲ್ಲಿ ಇಂಗ್ಲಿಷ್‌ನಲ್ಲಿ ಜಾತಿ, ಬುಡಕಟ್ಟುಗಳ ಬಗ್ಗೆ  ಎಲ್ಲೋ ಕೆಲವು ಅಧ್ಯಯನಗಳು ನಡೆಯುತ್ತಿದ್ದವು. ಜಾತಿಗಳ ಅಧ್ಯಯನ ಸಮಾಜ ವಿಜ್ಞಾನ, ವಿಭಾಗಗಳ್ಲಿಯೂ, ಬುಡಕಟ್ಟುಗಳ ಅಧ್ಯಯನ ಮಾನವ ವಿಜ್ಞಾನಗಳ ಭಾಗಗಳಲ್ಲಿಯೂ ನಡೆಯುವುದು ಅಲಿಖಿತ ನಿಯಮವಾಗಿತ್ತು. ಕನ್ನಡ ವಿಭಾಗಗಳಲ್ಲಿ ಬುಡಕಟ್ಟುಗಳ ಅಧ್ಯಯನ ಮಾಡಬಹುದೆಂಬ ಕಲ್ಪನೆ ಕೂಡ ಇರಲಿಲ್ಲ. ಆ ಸಂದರ್ಭದಲ್ಲಿ ಜಗತ್ತಿನಲ್ಲಿ ಹಾಗೂ ಭಾರತದಲ್ಲಿ ನಡೆದಿದ್ದ ಬುಡಕಟ್ಟು ಅಧ್ಯಯನಗಳನ್ನು ನಾನು ಅದ್ಯಯನ ಮಾಡಿ ಬುಡಕಟ್ಟು ಅಧ್ಯಯನದ ಮಾದರಿಯನ್ನು ರೂಪಿಸಿಕೊಂಡೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗಗಳಲ್ಲಿ ಕನ್ನಡದಲ್ಲಿ ಬರೆದ ಮೊಟ್ಟಮೊದಲ ಪಿಹೆಚ್‌ಡಿ ಮಹಾಪ್ರಬಂಧ ನನ್ನದು. ಅನಂತರ ಈ ಬಗೆಯ ಅನೇಕ ಮಹಾಪ್ರಬಂಧಗಳು ಪ್ರಕಟವಾಗಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಇಂದು ಸಮಾಜ ವಿಜ್ಞಾನ ಮತ್ತು ಮಾನವ ವಿಜ್ಞಾನ ವಿಭಾಗಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ, ಜಾನಪದ ಮತ್ತು ಬುಡಕಟ್ಟು ವಿಭಾಗಗಳಲ್ಲಿ ಜಾತಿ ಮತ್ತು ಬುಡಕಟ್ಟುಗಳ ಬಗ್ಗೆ ಸಂಬಂಧಗಳು ಹಾಗೂ ಮಹಾಪ್ರಬಂಧಗಳು ರಚನೆಯಾಗುತ್ತಿವೆ.  Anthoropological survey of India ಸಂಸ್ಥೆಯಲ್ಲಿ ಕರ್ನಾಟಕದ ಕೆಲವು ಪರಿಶಿಷ್ಟ ಬುಡಕಟ್ಟುಗಳ ಬಗ್ಗೆ (Scheduled tribes)ಇಂಗ್ಲಿಷ್‌ನಲ್ಲಿ gfrMಗ್ರಂಥಗಳು ಪ್ರಕಟವಾಗಿವೆ.

ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಿಂದ ಸಮುದಾಯಗಳ ಅಧ್ಯಯನಗಳು (Community studies)ಹೆಚ್ಚು ಮಹತ್ವ ಪಡೆದುಕೊಂಡಿವೆ. ಸಮುದಾಯಗಳಲ್ಲಿ ವಿವಿಧ ಬಗೆಗಳಿವೆ. ಧಾರ್ಮಿಕ ಸಮುದಾಯಗಳು, ಭೌತಿಕ ಸಮುದಾಯಗಳು, ವೃತ್ತಿ ಸಮುದಾಯಗಳು, ಜಾತಿಗಳು ಬುಡಕಟ್ಟುಗಳು, ಇವುಗಳಲ್ಲಿ ಜಾತಿಗಳು, ಬುಡಕಟ್ಟುಗಳು ರಕ್ತ ಸಂಬಂಧದಿಂದ ಕೂಡಿವೆ. ಇವುಗಳಲ್ಲಿ ಹುಟ್ಟಿನಿಂದ ನಿರ್ಧಾರವಾಗುವ ಅತ್ಯಂತ ಬಿಗಿ ಕಟ್ಟಾದ ಜಾತಿ ವ್ಯವಸ್ಥೆ ಭಾರತದಲ್ಲಿ ಹಿಂದೂ ಧರ್ಮಕ್ಕೆ ವಿಶಿಷ್ಟವಾದುದಾಗಿದೆ. ಇತರ ಧರ್ಮಗಳಲ್ಲಿ ಹಾಗೂ ದೇಶಗಳಲ್ಲಿ ಜಾತಿಯನ್ನು ಹೋಲುವ ಸಮುದಾಯಗಳಿದ್ದರೂ ಅವು ಹಿಂದೂ ಧರ್ಮದ ಜಾತಿ ವ್ಯವಸ್ಥೆಯಷ್ಟು ಸಂಕೀರ್ಣ ಸ್ವರೂದಲ್ಲಿಲ್ಲ. ಭಾರತಕ್ಕೆ ಸ್ವಾತಂತ್ಯ್ರ ಬಂದ ಮೇಲೆ, ಆಧುನಿಕ ವಿದ್ಯಾಭ್ಯಾಸ, ಕೈಗಾರೀಕರಣ, ಜಾಗತೀಕರಣ ಪ್ರಕ್ರಿಯೆಗಳಿಂದ ಜಾತಿ ವ್ಯವಸ್ಥೆ ನಶಿಸಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಜಾತಿ ವ್ಯವಸ್ಥೆ ಇನ್ನೂ ಪ್ರಬಲವಾಗುತ್ತಿದೆ. ಹೀಗಾಗಿ ಜಾತಿ ವ್ಯವಸ್ಥೆ ಒಂದು ವಾಸ್ತವ ಸ್ಥಿತಿ ಎಂಬುದನ್ನು ಒಪ್ಪಿಕೊಂಡು, ಜಾತಿಗಳ ನಡುವೆ ಸಾಮರಸ್ಯವನ್ನು ತರುವುದು ಹೇಗೆ ಎಂಬುದರ ವಿಚಾರ ಮಾಡಬೇಕಾದ, ಕಾರ್ಯಪ್ರವೃತ್ತರಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಜಗತ್ತಿನಾದ್ಯಂತ ಬುಡಕಟ್ಟುಗಳಿವೆ. ಭಾರತದಲ್ಲಿ  ಬುಡಕಟ್ಟುಗಳು ಜಾತಿ ವ್ಯವಸ್ಥೆಯಿಂದ ಶತಮಾನಗಳ ಕಾಲ ದೂರ ಉಳಿದಿದ್ದು, ಭಾರತಕ್ಕೆ ಸ್ವಾತಂತ್ಯ್ರ ಬಂದ ಮೇಲೆ ಜಾತಿಗಳ ಸಂಪರ್ಕಕ್ಕೆ ಬಂದದ್ದರಿಂದ ಇವು ಬುಡಕಟ್ಟುಗಳ ಮೂಲ ರೂಪದಲ್ಲಿ ಉಳಿದಿಲ್ಲ. ಸಂಕೀರ್ಣ ಸ್ಥಿತಿಯಲ್ಲಿವೆ. ಆಧುನೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳಿಂದ ಇವು ಪರಿವರ್ತನೆಯ ಹಂತದಲ್ಲಿವೆ. ಇವು ಉಳಿಯುವುದೇ ಕಷ್ಟಕರವಾಗಿದೆ.

ಜಾತಿ-ಉಪಜಾತಿಗಳ, ಬುಡಕಟ್ಟುಗಳ ಮತ್ತು ಅವುಗಳ ಬೆಡಗುಗಳ ಅಧ್ಯಯನದ ಉದ್ದೇಶಗಳು ಕೆಳಕಂಡಂತಿವೆ:

೧.   ಬ್ರಿಟಿಷ್‌ ವಸಾಹತುಷಾಹಿ ಕಾಲಾವಧಿಯಲ್ಲಿ ನಡೆದ ಜಾತಿ/ಬುಡಕಟ್ಟುಗಳ ಅಧ್ಯಯನಕ್ಕೆ ಎರಡು ಉದ್ದೇಶಗಳಿದ್ದವು. ಈ ಅಧ್ಯಯನದ ಮೂಲಕ ಜನರ ಮನಸ್ಥಿತಿಯನ್ನು ತಿಳಿದು ಅವರನ್ನು ಆಡಳಿತದ ಮೂಲಕ ನಿಯಂತ್ರಿಸುವುದು ಮೊದಲನೆಯ ಉದ್ದೇಶ. ಅವರ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದು ಎರಡನೆಯ ಉದ್ದೇಶ.

೨.   ಸ್ವಾತಂತ್ರಾ ನಂತರ ಭಾರತದಲ್ಲಿ ನಡೆಯುತ್ತಿರುವ ಅಧ್ಯಯನಗಳು ಜಾತಿ/ಬುಡಕಟ್ಟುಗಳ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಜೀವನವನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿವೆ. ಈ ಬಗ್ಗೆ ಸರ್ಕಾರಗಳು ಆಸಕ್ತಿ ಹೊಂದಿವೆ. ಹಾಗೆಯೇ ಜಾತಿ/ಬುಡಕಟ್ಟು ಸಮುದಾಯಗಳೂ ಆಸಕ್ತಿ ಹೊಂದಿವೆ. ಬುಡಕಟ್ಟುಗಳ ಜಾತಿ ಜಾತಿಗಳ ಜೀವನಕ್ರಮಗಳು ಆಧುನಿಕ ಕಾಲಕ್ಕೆ ಮೊದಲಿಗೆ ೧೯ನೆಯ ಶತಮಾನದ ಕೊನೆಯವರೆಗೆ ಹೇಗಿದ್ದವು? ಆಧುನಿಕತೆಯಿಂದಾಗಿ ಇಪ್ಪತ್ತನೆಯ ಶತಮಾನದಲ್ಲಿ ಹೇಗೆ ಬದಲಾಗಿವೆ? ಜಾಗತೀಕರಣದ ಸಂದರ್ಭದಲ್ಲಿ ಹೇಗೆ ಬದಲಾಗುತ್ತವೆ? ಈ ಬಗ್ಗೆ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಅನ್ವಯಿಕವಾದ ಈ ಅಧ್ಯಯನಗಳಿಂದ, ಇವು ಸರಿಯಾಗಿ ಅನುಷ್ಠಾನಗೊಂಡರೆ, ಸರಕಾರಗಳು, ಈ ಸಮುದಾಯಗಳಿಗೆ ನೆರವಾಗಲು ಸಾಧ್ಯವಾಗುತ್ತದೆ.

೩.   ಪ್ರತಿಯೊಂದು ಸಮುದಾಯವೂ ತನ್ನ ಮೂಲದ ಪಾರಂಪರಿಕ ಜ್ಞಾನವನ್ನು ಸಮಕಾಲೀನ ಜೀವನಕ್ಕೆ ಅನ್ವಯಿಸಿ, ಉಪಯುಕ್ತವಾದುದನ್ನು ಉಳಿಸಿಕೊಂಡು ಮುಂದುವರೆಯಬೇಕಾಗುತ್ತದೆ. ಹಾಗೆಯೇ ನಿರುಪಯುಕ್ತವಾದುದನ್ನು, ಹಾನಿಕಾರಕವಾದುದನ್ನು, ಬೆಳವಣಿಗೆಗೆ ಅಡೆತಡೆಯಾಗಿರುವ ಮೂಢನಂಬಿಕೆಗಳನ್ನು ವೈಜ್ಞಾನಿಕ ವೈಚಾರಿಕ ದೃಷ್ಟಿಯಿಂದ, ವಿಮರ್ಶಾತ್ಮಕವಾಗಿ ಪರಿಶೀಲಿಸಿ, ಉಪಯುಕ್ತವಾದುದನ್ನು ಉಳಿಸಿಕೊಂಡು,  ಉಳಿದುವನ್ನು ಕೈಬಿಟ್ಟು ಮುಂದುವರೆಯಬೇಕಾಗುತ್ತದೆ. ಇದು ಭಾರತದ ಎಲ್ಲಾ ಧಾರ್ಮಿಕ ಸಮುದಾಯಗಳಿಗೂ, ಬುಡಕಟ್ಟುಗಳಿಗೂ ಹಿಂದೂ ಧರ್ಮದ ಎಲ್ಲಾ ಜಾತಿಗಳಿಗೂ ಅನ್ವಯವಾಗಬೇಕು.

೪.   ಹಿಂದೂ ಧರ್ಮದಲ್ಲಿ ವೈದಿಕ ಧರ್ಮವೇ ಶ್ರೇಷ್ಠ ಎಂಬ ಯಜಮಾನಿಕೆಯ ಧೋರಣೆಯನ್ನು ವಿರೋಧಿಸಿ, ತಮ್ಮ ಜಾತಿ ಬುಡಕಟ್ಟುಗಳಲ್ಲಿ ಹಾಗೂ ಉಪಜಾತಿ, ಬೆಡಗು ಬಳಿಗಳಲ್ಲಿಯೂ ಮೌಲಿಕವಾದ ಅಂಶಗಳಿವೆ ಎಂಬುದನ್ನು ಆಧಾರ ಸಮೇತ ಸಾಧಿಸಿ ತೋರಿಸುವುದು. ಆ ಮೂಲಕ ಜಾತಿಯ ಕೀಳರಿಮೆಯನ್ನು ಮೀರಿ, ಎಲ್ಲರಿಗೂ ತಾವು ಸಮಾನರಾದವರು ಎಂದು ಜಗತ್ತಿಗೆ ತೋರಿಸುವುದು ಹಾಗೂ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ತಮ್ಮ ಪುರಾಣಗಳ, ಐತಿಹ್ಯಗಳ ಹಾಗೂ ಇತಿಹಾಸದ ಮೂಲಕ ಎತ್ತಿ ತೋರಿಸುವುದು.

೫.   ಜ್ಞಾನದಲ್ಲಿ ಎರಡು ಬಗೆಗಳಿವೆ. ಅಕ್ಷರವಿದ್ಯೆಯಿಲ್ಲದ ಸಮುದಾಯಗಳು ಪರಂಪರಾನುಗತವಾಗಿ ಅನುಭವದಿಂದ ಪಡೆದುಕೊಂಡ ಜ್ಞಾನ (Traditional Knowledge). ಇದು ಮೌಖಿಕವಾಗಿ ಹಾಗೂ ಅನುಕರಣೆಯ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ, ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಇದರ ಸ್ವರೂಪವನ್ನು ತಿಳಿಯುವುದಕ್ಕಾಗಿ ಅಧ್ಯಯನ ಮಾಡುವುದು ಮೊದಲನೆಯದು. ಎರಡನೆಯದು, ಅಕ್ಷರ ವಿದ್ಯೆಯನ್ನು  ಕಲಿತು ಪಾಶ್ಚಾತ್ಯ ಮೂಲದ ಆಧುನಿಕತೆಯಿಂದ ರೂಪುಗೊಂಡ ವಿದ್ಯೆಯಿಂದ ಪಡೆದುಕೊಂಡ ಜ್ಞಾನ (Scientific Knowledge). ಇದು ಪ್ರಯೋಗ ಮತ್ತು ಪರೀಕ್ಷೆಗೆ ಒಳಪಟ್ಟು ಪಡೆದುಕೊಂಡ ಜ್ಞಾನ. ಈ ಜ್ಞಾನಕ್ಕೆ ಪ್ರಕೃತಿಯನ್ನು ಹಾಗೂ ಸಮಾಜವನ್ನೂ, ತಂತ್ರಜ್ಞಾನದ ನೆರವಿನಿಂದ ಬದಲಾಯಿಸುವ ಶಕ್ತಿಯಿದೆ. ಈ ವಿಜ್ಞಾನವು ಪರಾಂಪರಾನುಗತ ಜ್ಞಾನವನ್ನು ತಾತ್ಸಾರದಿಂದ ಕೀಳಾಗಿ ಕಾಣುತ್ತದೆ. ಇದರ ಎದುರಿನಲ್ಲಿ ಪಾರಂಪರಿಕ ಜ್ಞಾನದಲ್ಲಿಯೂ ಮಹತ್ವಪೂರ್ಣ ಅಂಶಗಳಿವೆ ಎಂಬುದನ್ನು ಸಿದ್ಧಪಡಿಸಿ ತೋರಿಸುವುದಕ್ಕಾಗಿ ಜಾತಿ/ಬುಡಕಟ್ಟುಗಳ ಅಧ್ಯಯನ ನಡೆಯುತ್ತಿದೆ. ಇದು ಆಧುನಿಕೋತ್ತರ (Postmodern) ಬೆಳವಣಿಗೆಯಾಗಿದೆ.

೬.   ಜಾಗತೀಕರಣದ ಈ ಸಂದರ್ಭದಲ್ಲಿ ಪಾಶ್ಚಾತ್ಯ ದೇಶಗಳು ಬಲವಂತವಾಗಿ ಹೇರುತ್ತಿರುವ ಏಕರೂಪ ಸಂಸ್ಕೃತಿಯನ್ನು ವಿರೋಧಿಸಿ ಬಹುರೂಪಿ ಸಂಸ್ಕೃತಿಗಳನ್ನು ಉಳಿಸಿಕೊಳ್ಳುವುದು. ಇದು ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಭಾರತದಲ್ಲಿಯೂ ಈ ಪ್ರಕ್ರಿಯೆ ಸಹಜವಾಗಿಯೇ ನಡೆಯುತ್ತಿದೆ. ಸಮುದಾಯಗಳು ತಮ್ಮ ಸಂಸ್ಕೃತಿಯನ್ನು ಅನುಸರಿಸುವುದು ಅವುಗಳ ಹಕ್ಕು ಎಂಬ ಮನೋಧರ್ಮ ಇಲ್ಲಿದೆ.

೭.   ಇತಿಹಾಸವನ್ನು ಪುನಾರಚನೆ ಮಾಡುವಾಗ ಕೇವಲ ರಾಷ್ಟ್ರಗಳ, ರಾಜ್ಯಗಳ ರಾಜಕೀಯ ಇತಿಹಾಸವನ್ನು ಮಾತ್ರವಲ್ಲದೆ ಸಮುದಾಯಗಳ ಸಾಂಸ್ಕೃತಿಕ ಇತಿಹಾಸವನ್ನು ಸೇರಿಸುವುದು ಅತ್ಯಗತ್ಯ. ಯುನೆಸ್ಕೋ ಈ ತತ್ವವನ್ನು ಒಪ್ಪಿಕೊಂಡು ತನ್ನ ಸದಸ್ಯ ರಾಷ್ಟ್ರಗಳಿಗೆ, ವೈಚಾರಿಕ ತಾಂತ್ರಿಕ ನೆರವು ನೀಡುವ ಸಲುವಾಗಿ ೧೯೮೯ರಲ್ಲಿ ರೂಪಿಸಿದ ಶಿಫಾರಸುಗಳು ಈ ಸಂದರ್ಭದಲ್ಲಿ ಮುಖ್ಯವಾಗುತ್ತವೆ. ಹಾಗೆಯೇ ಸಂಸ್ಕೃತಿಯ ಉಳಿದ ಘಟಕಗಳಾದ ಭಾಷೆ, ತಂತ್ರಜ್ಞಾನ, ಕಲೆ, ಸಂಗೀತ, ನೃತ್ಯ ಇತ್ಯಾದಿ ಎಲ್ಲ ಅಂಶಗಳನ್ನು ಉಳಿಸಿಕೊಳ್ಳುವುದು ಅಗತ್ಯ. ಈ ದೃಷ್ಟಿಯಿಂದ ಸಮುದಾಯಗಳ ಅಧ್ಯಯನ ಅವಶ್ಯವಾಗಿ ನಡೆಯಬೇಕಾಗಿದೆ.

೮.   ಸಾಂಸ್ಕೃತಿಕ ಅನನ್ಯತೆಯನ್ನು ಸ್ಥಾಪಿಸಿ ಸಮಾಜದಲ್ಲಿ ಸೂಕ್ತವಾದ ಸಾಂಸ್ಕೃತಿಕ ಪ್ರತಿನಿಧೀಕರಣವನ್ನು (Cultural Representation) pಪಡೆಯುವುದು ಎರಡನೆಯ ಹಂತ. ಸಮುದಾಯಗಳು ಈ ಕಾರಣಗಳಿಗಾಗಿ ಅಧ್ಯಯನಗಳನ್ನು ಪ್ರೋತ್ಸಾಹಿಸುತ್ತವೆ. ಇಂದು ಜಾತಿಗಳ ಬಗ್ಗೆ ಅಧ್ಯಯನ ಮಾಡುವವರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೇವಲ ಕುತೂಹಲಕ್ಕಾಗಿ ಮಾಡುವ ವಿವರಣಾತ್ಮಕ ಅಧ್ಯಯನಗಳ ಉಪಯುಕ್ತತೆ ಪರಿಮಿತವಾಗಿರುತ್ತದೆ.

ಕರ್ನಾಟಕದಲ್ಲಿ ಜಾತಿಗಳ ಬಗ್ಗೆ  ಬುಡಕಟ್ಟುಗಳ ಬಗ್ಗೆ ಅಧ್ಯಯನಗಳು ನಡೆದಿವೆಯೇ ಹೊರತು ಉಪಜಾತಿಗಳ ಬಗ್ಗೆ, ಬುಡಕಟ್ಟುಗಳ ಬೆಡಗುಗಳ ಅಥವಾ ಬಳಿಗಳ (Clans) ಬಗ್ಗೆ ಅಧ್ಯಯನ ನಡೆದಿಲ್ಲ. ಈ ಬಗೆಯ ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ. ಈ ದೃಷ್ಟಿಯಿಂದ ಈಗ ನಡೆಯುತ್ತಿರುವ ಕುರುಬರ ಉಪಜಾತಿಗಳಿಗೆ ಸಂಬಂಧಿಸಿದ ಪ್ರಬಂಧಗಳು ತುಂಬಾ ಉಪಯುಕ್ತವಾಗಿವೆ. ಈ ಉಪಜಾತಿಗಳ ಸ್ವರೂಪವೇನು? ಇವು ಏಕೆ ರೂಪುಗೊಂಡವು? ಒಂದು ಉಪಜಾತಿಗೂ ಇನ್ನೊಂದು ಉಪಜಾತಿಗೂ ಇರುವ ವ್ಯತ್ಯಾಸವೇನು? ಜಾತಿಗಳಲ್ಲಿ ಮಾತ್ರವಲ್ಲದೆ ಉಪಜಾತಿಗಳಲ್ಲಿಯೂ ಮೇಲು-ಕೀಳು ಭಾವನೆಗಳು ಏಕೆ ಬಂದಿವೆ? ಇವುಗಳಿಗೆ ಸಂಬಂಧಿಸಿದ ಪುರಾಣಗಳನ್ನು ಐತಿಹ್ಯಗಳನ್ನು ಹೇಗೆ ಅರ್ಥೈಸಬೇಕು? ಮೇಲುಕೀಳು ಭಾವನೆಗಳನ್ನು ಹೋಗಲಾಡಿಸಿ, ಸಮಾನತೆ ಅಥವಾ ಸಾಮರಸ್ಯವನ್ನು ಸಾಧಿಸುವುದು ಹೇಗೆ? ಈ ಎಲ್ಲಾ ವಿಷಯಗಳಲ್ಲಿಯೂ ವಿವರವಾಗಿ ಚರ್ಚೆ ನಡೆಯಬೇಕಾಗಿದೆ.

ಉದಾಹರಣೆಗೆ, ಉಪಜಾತಿಗಳು ಹೇಗಾದವು? ಎಂಬುದನ್ನು ತೆಗೆದುಕೊಳ್ಳಬಹುದು. ಪ್ರದೇಶ ಮತ್ತು ವಲಸೆ, ಮತಾಂತರ ಅಥವಾ ಜಾತ್ಯಂತರ, ವೃತ್ತಿ ಮತ್ತು ತಂತ್ರಜ್ಞಾನ, ಭಾಷೆ ಇವುಗಳು ಪ್ರಮುಖವಾದ ಕಾರಣಗಳಾಗಬಹುದು. ವಿಭಿನ್ನ  ಪ್ರದೇಶಗಳಲ್ಲಿ ವಾಸ ಮಾಡುವ ಒಂದೇ ಜಾತಿಯ ಜನರು ಉಪಜಾತಿಗಳಾಗುವ ಸಾಧ್ಯತೆಗಳಿವೆ. ಆಧುನಿಕ ಕಾಲಕ್ಕೆ ಮೊದಲು ಸಾರಿಗೆ ಸಂಪರ್ಕಗಳು ಪರಿಮಿತವಾಗಿದ್ದ ಕಾಲದಲ್ಲಿ ಒಂದು ಪ್ರದೇಶದ ಜನ ಮತ್ತೊಂದು ಪ್ರದೇಶಕ್ಕೆ ಹೋಗಲು ಸುಲಭವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಉಪಜಾತಿಗಳೂ ಪ್ರತ್ಯೇಕವಾಗಿ ಉಳಿದು ಭಿನ್ನವಾದ ಸಂಪ್ರದಾಯಗಳನ್ನು ರೂಢಿಸಿಕೊಂಡಿರುವ ಸಾಧ್ಯತೆಗಳಿವೆ. ಉಪಜಾತಿಗಳಲ್ಲಿಯೇ ಮದುವೆಯಾಗುತ್ತಿದ್ದುದು ಸಹಜವಾಗಿತ್ತು. ಕೆಲವು ಸಂದರ್ಭದಲ್ಲಿ ಒಂದು ಜಾತಿಯ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಬಂದಾಗ ಅಲ್ಲಿನ ಜನ ವಲಸೆ ಬಂದವರನ್ನು ತಮ್ಮವರೆಂದು ಪರಿಗಣಿಸದೇ ಇರಬಹುದು. ಅಥವಾ ವಲಸೆ ಬಂದವರೇ ಸ್ಥಳೀಯ ಜನರೊಡನೆ ಬೆರೆಯದೆ ಪ್ರತ್ಯೇಕವಾಗಿ ಉಳಿಯಬಹುದು. ಬಹಳ ದೀರ್ಘಕಾಲ ಹೀಗೆಯೇ ಮುಂದುವರೆದರೆ ಉಪಜಾತಿಗಳೂ ಪ್ರತ್ಯೇಕವಾಗಿಯೇ ಉಳಿಯುತ್ತವೆ. ಸಂಪರ್ಕಕ್ಕೆ ಬಂದಾಗ ಆಹಾರ ಪಾನೀಯಗಳ, ಆರ್ಥಿಕ ವಿಷಯಗಳ ವಿನಿಮಯ ನಡೆಯಬಹುದು. ಆದರೆ ರಕ್ತಸಂಬಂಧ ಉಂಟುಮಾಡುವ ಮದುವೆಗೆ ಒಪ್ಪದೇ ಇರಬಹುದು.

ಮತಾಂತರಗೊಂಡ ಗುಂಪುಗಳನ್ನು ಜಾತಿಯಲ್ಲಿರುವ ಮೂಲ ಗುಂಪುಗಳು ದೂರವಿಡುತ್ತವೆ. ತಾವು ಅವರಿಗಿಂತ ಹೆಚ್ಚು ಶುದ್ಧರಾದವರು ಎಂಬ ಭಾವನೆ ಇದಕ್ಕೆ ಕಾರಣ. ಹಾಗೆಯೇ ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಪರಿವರ್ತನೆ ಹೊಂದಿದಾಗ ಉಪಜಾತಿಗಳಾಗುತ್ತವೆ. ಇಲ್ಲಿಯೂ ಒಂದು ಜಾತಿ ಮೇಲು, ಇನ್ನೊಂದು ಜಾತಿ ಕೀಳು ಎಂಬ ಭಾವನೆಗಳ ಜೊತೆಗೆ ಒಂದು ಉಪಜಾತಿ ಮೇಲು ಇನ್ನೊಂದು ಉಪಜಾತಿ ಕೀಳು ಎಂಬ ಭಾವನೆಯು ಕೆಲಸ ಮಾಡುತ್ತದೆ. ವೃತ್ತಿಗಳೂ ಉಪಜಾತಿಗಳಾಗಲು ಕಾರಣವಾಗುತ್ತವೆ. ಪ್ರತಿಯೊಂದು ಜಾತಿಯಲ್ಲಿಯೂ ಒಂದು ಪುರೋಹಿತವರ್ಗ ಹುಟ್ಟಿಕೊಳ್ಳುತ್ತದೆ. ಈ ಗುಂಪು ತನ್ನನ್ನು ಉಳಿದ ಗುಂಪುಗಳ ಮಾರ್ಗದರ್ಶಕವೆಂದು ಭಾವಿಸಿ ತನ್ನನ್ನು ಮೇಲುಮಟ್ಟದ್ದೆಂದು ಪರಿಗಣಿಸುವುದರಿಂದ ಪ್ರತ್ಯೇಕವಾದ ಉಪಜಾತಿಯಾಗಿ ಉಳಿಯುತ್ತದೆ. ಎಲ್ಲ ಧರ್ಮಗಳಲ್ಲಿಯೂ ಈ ಗುಂಪು ಪ್ರತ್ಯೇಕವಾಗಿರುವುದನ್ನು ಕಾಣಬಹುದು. ಹಿಂದೂ ಧರ್ಮದಲ್ಲಿ ಇಂತಹ ಗುಂಪುಗಳು ಉಪಜಾತಿಗಳಾಗೇ ಉಳಿದುಬಿಡುತ್ತವೆ. ಇವರು ಸಾಮಾನ್ಯವಾಗಿ ಸಸ್ಯಾಹಾರಿಗಳಾಗಿದ್ದು, ಮಾಂಸಾಹಾರಿಗಳಿಗಿಂತ ತಾವು ಮೇಲೆಂದು ಭಾವಿಸುತ್ತಾರೆ. ಆಹಾರದ ರಾಜಕಾರಣ ಇಲ್ಲಿ ಕೆಲಸ ಮಾಡುತ್ತದೆ. ಒಂದೊಂದು ಉಪಜಾತಿಯೂ ತನ್ನ ಅಸ್ತಿತ್ವವನ್ನು ಹಾಗೂ ಅನನ್ಯತೆಯನ್ನು ವ್ಯಕ್ತಪಡಿಸುವ ಸಲುವಾಗಿ ಕುಲಪುರಾಣಗಳನ್ನೂ, ಐತಿಹ್ಯಗಳನ್ನೂ ಸೃಷ್ಟಿಸಿಕೊಳ್ಳುತ್ತವೆ. ಇವು ಕೆಲವು ಸಲ ನೇರವಾಗಿರಬಹುದು ಅಥವಾ ಸಾಂಕೇತಿಕವಾಗಿರಬಹುದು. ಇವುಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ ಸತ್ಯ ಏನೆಂದು ತಿಳಿಯಬೇಕಾಗುತ್ತದೆ. ಒಂದೇ ಜಾತಿಯಲ್ಲಿ ವಿಭಿನ್ನ ವೃತ್ತಿಗಳನ್ನು ಅವಲಂಬಿಸಿರುವ ಗುಂಪುಗಳು ಉಪಜಾತಿಗಳಾಗುತ್ತವೆ. ಆರ್ಥಿಕತೆ ಮತ್ತು ತಂತ್ರಜ್ಞಾನದ ಕಾರಣದಿಂದಾಗಿ ಕೆಲವು ಉಪಜಾತಿಗಳು ಇತರ ಉಪಜಾತಿಗಳಿಗಿಂತ ಹೆಚ್ಚು ಮುಂದುವರೆದು ಪ್ರತ್ಯೇಕ ಗುಂಪುಗಳಾಗುತ್ತವೆ. ಧಾರ್ಮಿಕ ಕಾರ್ಯಾಚರಣೆ, ಆಹಾರ ಸಂಗ್ರಹಣೆ, ಪಶುಪಾಲನೆ, ಕೃಷಿ, ವ್ಯಾಪಾರ, ಕುಶಲಕಲೆಗಳು ಹಾಗೂ ಯುದ್ಧ ವಿದ್ಯೆಯಲ್ಲಿ ಪರಿಣತಿ, ಬೇಟೆಗಾರಿಕೆ, ಆಡಳಿತ ಮೊದಲಾದ ಕ್ಷೇತ್ರಗಳಲ್ಲಿ ಪರಿಣತಿ ಪಡೆದ ಗುಂಪುಗಳು ಪ್ರತ್ಯೇಕವಾದ ಉಪಜಾತಿಗಳಾಗುತ್ತವೆ. ಒಂದೇ ಜಾತಿಯಲ್ಲಿ ಬೇರೆ ಬೇರೆ ಭಾಷೆಗಳನ್ನು ಅಥವಾ ಉಪಭಾಷೆಗಳನ್ನು ಆಡುವ ಗುಂಪುಗಳು ಪ್ರತ್ಯೇಕ ಉಪಜಾತಿಗಳಾಗಿ ರೂಪುಗೊಳ್ಳುತ್ತವೆ.

ಈ  ಹಿನ್ನೆಲೆಗಳಲ್ಲಿ ಕುರುಬರ ಸಮುದಾಯದ ಉಪಜಾತಿಗಳನ್ನು ಕುರಿತು ಈ ವಿಚಾರ ಸಂಕಿರಣದಲ್ಲಿ ಮಂಡಿತವಾಗಿರುವ ಪ್ರಬಂಧಗಳನ್ನು ಪರಿಶೀಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಕುರುಬರು ತುಂಬಾ ಪ್ರಾಚೀನವಾದ ಜಾತಿಯಾಗಿರುವುದು ಮಾತ್ರವಲ್ಲದೇ ಜನಸಂಖ್ಯೆಯಲ್ಲಿ ಮೂರನೆಯ ಸ್ಥಾನದಲ್ಲಿರುವ ಪ್ರಮುಖವಾದ ಜಾತಿಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಜನರಿದ್ದಾರೆ. ಬುಡಕಟ್ಟು ಸ್ಥಿತಿಯಿಂದ ಹಿಡಿದು, ಪಶುಪಾಲನೆ, ಕಂಬಳಿ ನೇಕಾರಿಕೆ, ವ್ಯಾಪಾರ ಕೃಷಿ ಹಾಗೂ ರಾಜ್ಯಾಡಳಿತದಲ್ಲಿ ತೊಡಗಿರುವ ವಿವಿಧ ಉಪಜಾತಿಗಳಿಂದ ಕೂಡಿರುವ, ಸಂಕೀರ್ಣವಾದ ಜಾತಿಯಾಗಿದೆ. ಕಾಡುಕುರುಬರು ಹೆಗ್ಗಡದೇವನಕೋಟೆ ಮತ್ತು ಕಾಕನಕೋಟೆಗಳಲ್ಲಿ ವಾಸವಾಗಿದ್ದು ಆಹಾರ ಸಂಗ್ರಹಣೆಯ ಹಂತದಲ್ಲಿದ್ದಾರೆ. ಇವರಲ್ಲಿ ಜೇನು ಕುರುಬರು, ಜೇನು ಸಂಗ್ರಹ ಮಾಡಿ ಸುತ್ತ ಮುತ್ತ ಹಳ್ಳಿಗಳಲ್ಲಿ ಮಾರಾಟ ಮಾಡಿ ಜೀವನ ಮಾಡುತ್ತಾರೆ. ಇನ್ನೊಂದು  ಗುಂಪಿನವರೂ ಖೆಡ್ಡಾದಲ್ಲಿ ಕಾಡಾನೆಗಳನ್ನು ಪಳಗಿಸುವ ಹಾಗೂ ಮೈಸೂರು ನಗರಕ್ಕೆ ಬಂದು ದಸರಾ ಮೆರವಣಿಗೆಯಲ್ಲಿ ಅಂಬಾರಿ ಆನೆಯನ್ನು ನಡೆಸುವ ಉದ್ಯೋಗದಲ್ಲಿದ್ದಾರೆ. ಇದು ವಿಶೇಷ ಪರಿಣತಿಯನ್ನು ನಿರೀಕ್ಷಿಸುವ ವೃತ್ತಿಯಾದುದರಿಂದ ಇವರು ಒಂದು ಪ್ರತ್ಯೇಕ ಗುಂಪಾಗಿ ಉಳಿದಿದ್ದಾರೆ. ಬೆಟ್ಟ ಕುರುಬರು ಎಂಬ ಇನ್ನೊಂದು ಗುಂಪು ಹೆಗ್ಗಡದೇವಕೋಟೆ ಕಾಡುಗಳಲ್ಲಿ ದೊರೆಯುವ ಬಿದುರಿನಿಂದ ಅನೇಕ ವಸ್ತುಗಳನ್ನು  ಮಾಡಿ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಈ ಬಗ್ಗೆ ಡಾ. ಕೇಶವನ್‌ ಪ್ರಸಾದ್‌ ಒಳ್ಳೆಯ ಲೇಖನ ಬರೆದಿದ್ದಾರೆ.

ಬೆಳಗಾವಿ ಮತ್ತು ಕೊಲ್ಹಾಪುರದ ಕಡೆಯಿರುವ ಕುರುಬರು ಅಲೆಮಾರಿಗಳು. ಇವರು ಕುರಿ, ಮೇಕೆಗಳನ್ನು ಕರ್ನಾಟಕದ ವಿವಿಧ ಕಡೆಗಳಲ್ಲಿ ಮೇಯಿಸಿ ಹೊಲಗಳಲ್ಲಿ ಕುರಿಮಂದೆಯನ್ನು ನಿಲ್ಲಿಸಿ, ಕುರಿಗೊಬ್ಬರ ಹಾಗೂ ಗಂಜಲದ ಮಾರಾಟದಿಂದ ಹಣ ಸಂಪಾದನೆ ಮಾಡುತ್ತಾರೆ. ಇವರು ಅಲೆಮಾರಿಗಳಾಗಿಯೇ ಜೀವನ ಸಾಗಿಸುತ್ತಾರೆ. ಇವರ ವಲಸೆಯ ಕಾರಣಗಳು ಹಾಗೂ ಆರ್ಥಿಕ ವ್ಯವಸ್ಥೆಯ ಬಗ್ಗೆ ಡಾ. ಎರಿಯಪ್ಪ ಅವರು ಉಪಯುಕ್ತ ವಿವರಗಳನ್ನು ನೀಡಿದ್ದಾರೆ. ಇವರು ಕೊಡುವ ಅಲೆಮಾರಿ ಕುರುಬರ ಜೀವನಕ್ಕೂ ಕುರಿಗಳನ್ನು ಕಾಯುವ ಈಗಿನ ಕಾಡುಗೊಲ್ಲರ  ಜೀವನಕ್ಕೂ ಸಾಮ್ಯ ಕಂಡುಬರುತ್ತದೆ.

ಒಂದೇ ಜಾತಿಯಲ್ಲಿ ಮೊದಲಿಗೆ ಒಂದೇ ವೃತ್ತಿಯನ್ನು ಅನುಸರಿಸುತ್ತಿದ್ದು ಆನಂತರ ವೃತ್ತಿಗಳೂ ಭಿನ್ನವಾದರೆ ಏನಾಗುತ್ತದೆ ಎಂಬುದಕ್ಕೂ ಕುರುಬರಲ್ಲಿರುವ ಉಣ್ಣೆಕಂಕಣ ಕುರುಬರು ಮತ್ತು ಹತ್ತಿಕಂಕಣ ಕುರುಬರ ಜೀವನವನ್ನು ಗಮನಿಸಬಹುದು.

ಉಣ್ಣೆಕಂಕಣ ಕುರುಬರು ಮತ್ತು ಹತ್ತಿಕಂಕಣ ಕುರುಬರು ಇವರಲ್ಲಿ ಉಣ್ಣೆಕಂಕಣ ಕುರುಬರು ಮದುವೆಯ ಸಂದರ್ಭದಲ್ಲಿ ಉಣ್ಣೆಯ ದಾರದ ಕಂಕಣವನ್ನು, ಹತ್ತಿಕಂಕಣ ಕುರುಬರು ಹತ್ತಿಯ ದಾರದಿಂದ ಮಾಡಿದ ಕಂಕಣವನ್ನೂ ಕಟ್ಟಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಇವೆರಡೂ ಪ್ರತ್ಯೇಕ ಉಪಜಾತಿಗಳಾಗಿವೆ. ಈ ಎರಡೂ ಉಪಜಾತಿಗಳು ತಮ್ಮನ್ನು ಸಹೋದರರೆಂದು ಭಾವಿಸಿಕೊಳ್ಳುವುದರಿಂದ ವಿವಾಹ ಸಂಬಂಧವನ್ನು  ಮಾಡುವುದಿಲ್ಲ. ಉಣ್ಣೆ ಕಂಕಣ ಕುರುಬರ ಬಗ್ಗೆ ಚಂದ್ರಪ್ಪನವರು ಹಾಗೂ ಹತ್ತಿಕಂಕಣ ಕುರುಬರ ಬಗ್ಗೆ ಎ. ಬಿ. ಬಾಳಪ್ಪ ಅವರು ಅನೇಕ ವಿವರವನ್ನು ನೀಡಿ, ಈ ಎರಡು ಉಪಜಾತಿಗಳು ಏಕೆ ಪ್ರತ್ಯೇಕವಾಗಿರಬಹುದು ಎಂಬುದರ ಬಗ್ಗೆ ವಿಚಾರ ಮಾಡಿದ್ದಾರೆ. ಕಂಬಳಿಯ ನೇಕಾರಿಕೆ ಮತ್ತು ಕೃಷಿ ಈ ಎರಡು ಭಿನ್ನ ವೃತ್ತಿಗಳು ಈ ಉಪಜಾತಿಗಳೂ ರೂಪುಗೊಳ್ಳಲು ಕಾರಣವಾಗಿವೆ ಎಂಬ ವಾದವನ್ನು ಸಮರ್ಥವಾಗಿ ಮಂಡಿಸಿದ್ದಾರೆ. ಹತ್ತಿಯ ಗಿಡದ ಆವಿಷ್ಕಾರ ಕ್ರಿ. ಪೂ. ೧೨೦೦ ರಿಂದ ೧೦೦೦ ವರ್ಷಗಳ ಕಾಲಾವಧಿಯಲ್ಲಿ ಆಗಿರಬಹುದೆಂಬ ಜೇಮ್ಸ್‌ ಕ್ಯಾಂಪ್‌ಬೆಲ್‌ ಅವರ ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಹತ್ತಿ ಬಟ್ಟೆಗಿಂತ ಕಂಬಳಿ ಪ್ರಾಚೀನವಾದುದು ಎಂದು ಎ. ಬಿ. ಬಾಳಪ್ಪನವರು ಹೇಳಿರುವುದು ಸರಿಯಾಗಿದೆ. ಕೃಷಿ ಅಥವಾ ಹತ್ತಿಕಂಕಣ ಕುರುಬರು ಫಲವತ್ತಾದ ಜಾಗಗಳಲ್ಲಿ ನೆಲೆನಿಂತರು. ಮುಂದುವರಿದ ಜಾತಿಗಳ ಸಂಪರ್ಕಕ್ಕೆ ಬಂದು ಸಸ್ಯಾಹಾರಿಗಳಾದರು. ವೀರಶೈವ ಜಂಗಮರು ಅಥವಾ ವೈಷ್ಣವ ಬ್ರಾಹ್ಮಣರು ಇವರಿಗೆ ಪೂಜಾರಿಗಳಾದರು. ಉಣ್ಣೆಕಂಕಣ ಕುರುಬರು ಕಂಬಳಿ ನೇಕಾರಿಕೆಯನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡು ಮಾಂಸಾಹಾರಿಗಳಾಗಿಯೇ ಮುಂದುವರಿದರು.  ಒಡೆಯರನ್ನೇ ತಮ್ಮ ಗುರುಗಳೆಂದು ಒಪ್ಪಿಕೊಂಡರು. ಆದರೆ ಹತ್ತಿಕಂಕಣ ಕುರುಬರು ಒಡೆಯರಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ಉಣ್ಣೆಕಂಕಣ ಕುರುಬರ ಬಗ್ಗೆ ಪ್ರಬಂಧ ಬರೆದಿರುವ ಚಂದ್ರಪ್ಪನವರು ಉಣ್ಣೆಕಂಕಣ ಹಾಗೂ ಹತ್ತಿಕಂಕಣ ಕುರುಬರ ಆರ್ಥಿಕ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ವಿಚಾರ ಮಾಡಿ ಕೃಷಿಗಿಂತಲೂ ಕುರಿಗಾರಿಕೆ ಹೆಚ್ಚು ಲಾಭದಾಯಕವಾಗಿದ್ದುದರಿಂದ ಉಣ್ಣೆಕಂಕಣ ಕುರುಬರು ಹತ್ತಿಕಂಕಣ ಕುರುಬರಿಗಿಂತ ಆರ್ಥಿಕವಾಗಿ ಪ್ರಬಲರಾದರು. ಆ ಕಾರಣದಿಂದಲೇ ರಾಜಕೀಯವಾಗಿಯೂ ಪ್ರಬಲರಾಗಿ ರಾಜರಾದರು ಎಂದು ಸಮರ್ಪಕವಾಗಿ ಗುರುತಿಸಿದ್ದಾರೆ. ಅರೇಬಿಯನ್‌ ರಾಷ್ಟ್ರಗಳಿಗೆ ಕಂಬಳಿ ರಫ್ತಾಗುತ್ತಿದ್ದುದು ಸೂಫಿಗಳು ಮತ್ತು ನಾಥರು ಕಂಬಳಿಯ ಸಲುವಾಗಿ ಉಣ್ಣೆಕಂಕಣ ಕುರುಬರಿಗೆ ನಿಕಟವರ್ತಿಗಳಾಗಿದ್ದರು ಎಂಬ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ರೇವಣಸಿದ್ದರಿಗೆ ಅರ್ಪಿಸುವ ಕಂತೆಸೇವೆ ನೇಯ್ಗೆ ಸಂಸ್ಕೃತಿಗೆ ಸಂಬಂಧಿಸಿದ್ದು ಎಂಬುದನ್ನು ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯಗಳು ತಾಂತ್ರಿಕೇತರ ಸಮುದಾಯಗಳ ಮೇಲೆ ಹಿಡಿತ ಸಾಧಿಸಿವೆ ಎಂಬುದನ್ನು ಸಮರ್ಪಕವಾಗಿ ಗುರುತಿಸಿದ್ದಾರೆ. ಬಿಳಿಕಂಬಳಿ ಮತ್ತು ಕರಿಕಂಬಳಿಗಳಲ್ಲಿನ ತಾರತಮ್ಯ ಹಾಗೂ ಒಡೆಯರು ಉಪಯೋಗಿಸುವ ಬಿಳಿಕಂಬಳಿಗಳಿಗೆ ಹಾಕುವ ಪಟ್ಟಿಗಳ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ. ಇದು ಒಳ್ಳೆಯ ಒಳನೋಟಗಳಿಂದ ಕೂಡಿದ ಲೇಖನವಾಗಿದೆ.

ಡಾ. ಬಿ.ರಾಜಶೇಖರಪ್ಪ ಅವರು ಇತಿಹಾಸದ ವಿಭಿನ್ನ ಆಕರಗಳ ಆಧಾರದ ಮೇಲೆ ಹಂಡೆ ಕುರುಬರ ಸಾಧನೆಗಳನ್ನು ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ. ಕೇವಲ ಕುರಿಸಾಕಾಣಿಕೆ ಅಥವಾ ಕೃಷಿಗೆ ಬದಲಾಗಿ ಕಂಬಳಿ ನೇಯ್ಗೆಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದರಿಂದ ಇವರು ಶ್ರೀಮಂತರಾದರು. ಧೈರ್ಯಶಾಲಿಗಳೂ ಸಾಹಸಿಗಳೂ ಆದ ಇವರು ಪಾಳೆಯಗಾರರೂ ಆಗಿದ್ದರು ಈ ಉಪಜಾತಿಗೆ ಸೇರಿದ ತಿಮ್ಮರಾವುತನ ಧೈರ್ಯ ಶೌರ್ಯ, ಸಾಹಸ, ಔದಾರ್ಯಗಳ ಬಗ್ಗೆ ಶಾಸನಗಳೂ, ಕೈಫಿಯತ್ತುಗಳು ಮೊದಲಾದ ದಾಖಲೆಗಳನ್ನಿಟ್ಟುಕೊಂಡು ಅಧ್ಯಯನ ಮಾಡಿದ್ದಾರೆ. ಇದು ಒಳ್ಳೆಯ ಸಂಶೋಧನ ಲೇಖನವಾಗಿದೆ.

ಡಾ. ಸಿದ್ಧಣ್ಣ ಎಫ್‌ ಜಕಬಾಳ ಅವರು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿರುವ ಝಂಡೆ ಕುರುಬರ ಬಗ್ಗೆ ಶಂಕರಬಾಬು ರಾವ್‌ ಲಾಂಡೆ, ಶಂಭಾ ಜೋಷಿ ಹಾಗೂ ಅಮರಸಿಂಗ್‌ ಶಶಿ ಅವರ ಸಂಶೋಧನೆಗಳ ಆಧಾರದ ಮೇಲೆ ಝಂಡೆ ಕುರುಬರು ಹೇಗೆ ವೀರರಾದ್ಧರು ಎಂಬುದನ್ನು ವಿವರಿಸಿದ್ದಾರೆ. ಧನಗರ್‌ ಝಂಡೆ ಸಮುದಾಯದಲ್ಲಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್‌ ಪ್ರತಿಷ್ಠಿತ ವ್ಯಕ್ತಿಯಾಗಿದ್ದುದನ್ನು ಉಲ್ಲೇಖಿಸಿದ್ದಾರೆ. ಝಂಡೆ ಕುರುಬರು ತಮ್ಮ ಉತ್ತಮಕುಲದವರು ಉತ್ತಮ ವರ್ಣದವರು ಎಂದು ಹೇಳಿಕೊಳ್ಳುತ್ತಾರೆ. ಅಗ್ನಿ, ಸೂರ್ಯ, ಚಂದ್ರ, ಸೋಮ ಮತ್ತು ಯದುವಂಶಗಳನ್ನು ಪುಂಡರೀಕ, ಭಾರದ್ವಾಜ, ಕಶ್ಯಪ, ಕೌಂಡಿಲ್ಯ, ಗೌತಮ ಮುಂತಾದ ಗೋತ್ರಗಳನ್ನು ತಮ್ಮ ವಂಶಗಳ ಜೊತೆಯಲ್ಲಿ ಹಚ್ಚಿಕೊಳ್ಳುತ್ತಾರೆ ಎಂದು ಗುರುತಿಸಿದ್ದಾರೆ. ಇದನ್ನು ಗಮನಿಸಿದರೆ ಇವರು ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲು ಕ್ಷತ್ರಿಯರನ್ನೂ ಬ್ರಾಹ್ಮಣರನ್ನು ಅನುಕರಿಸಿರುವುದು ಕಂಡುಬರುತ್ತದೆ. ಉಣ್ಣೆ ಕುರುಬರು ಹತ್ತಿ ಕುರುಬರು, ಹಂಡೆಕುರುಬರು ಮತ್ತು ಝಂಡೆಕುರುಬರು ಉಪಜಾತಿಗಳ ತೌಲನಿಕ ಅಧ್ಯಯನ ಎಂಬ ಉಪಯುಕ್ತವಾದುದು. ಆರ್ಥಿಕತೆ ಮತ್ತು ತಂತ್ರಜ್ಞಾನ ಹೇಗೆ ಉಪಜಾತಿಗಳನ್ನು ಪ್ರತ್ಯೇಕಗೊಳಿಸುತ್ತದೆ ಎಂಬುದನ್ನು ಇದರಿಂದ ತಿಳಿಯಬಹುದು.

ಮತಾಂತರ ಮತ್ತು ಜಾತ್ಯಂತರದ ದೃಷ್ಟಿಯಿಂದ ಕ್ರೈಸ್ತ ಕುರುಬರು, ದಾಸಕುರುಬರು, ಹೆಗಡೆಗಳು, ಒಡೆಯರು ಈ ಉಪಜಾತಿಗಳನ್ನು ಕುರಿತು ವಿಚಾರ ಮಾಡುವುದು ಉಪಯುಕ್ತ. ಡಾ. ಎನ್. ಎಂ. ಅಂಬಲಿ ಅವರು ಕ್ರೈಸ್ತ ಕುರುಬರ ಬಗ್ಗೆ ವಿವರಗಳನ್ನು ತಮ್ಮ ಪ್ರಬಂಧದಲ್ಲಿ ಕೊಟ್ಟಿದ್ದಾರೆ. ಮತಾಂತರವಾಗುವವರಲ್ಲಿ ಉಣ್ಣೆ ಕಂಕಣ ಕುರುಬರು, ಬಡವರು, ಅಸ್ಪೃಶ್ಯರು, ಅನಾಥರು ಹೆಚ್ಚು. ಕ್ರಿಶ್ಚಿಯನ್ನರು ತಮ್ಮ ಮಾಮೂಲು ತಂತ್ರಗಳನ್ನು ಬಳಸಿ ಕುರುಬರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಏಸೂವೂ ಒಬ್ಬ ಕುರುಬನಾಗಿದ್ದ. ಆದ್ದರಿಂದ ನಾವೂ ನೀವು ಒಂದೇ ಎಂದು ಹೇಳಿ ಮುಗ್ದರಾದ ಕುರುಬರನ್ನು ಮತಾಂತರಿಸಿರುವ ಸಾಧ್ಯತೆ ಇದೆ. ಈ ಲೇಖನದಲ್ಲಿ ಮತಾಂತರಗೊಂಡವರ ಸಂಖ್ಯೆ ಎಷ್ಟು ಎಂದು ತಿಳಿಸಿಲ್ಲ. ಮತಾಂತರದ ಪ್ರಮಾಣವನ್ನು ತಿಳಿಯಬೇಕಾದರೆ ಕ್ರೈಸ್ತ ಕುರುಬರ ಸಂಖ್ಯೆ ಎಷ್ಟು ಎಂಬುದನ್ನು ತಿಳಿಯುವುದು ಅಗತ್ಯ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದು ಕರಾವಳಿ ಜಿಲ್ಲೆಯ ಮುಂಡಗೋಡು, ಯಲ್ಲಾಪುರ, ಹಳಿಯಾಳ ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕುಗಳಲ್ಲಿ ಹೈನುಗಾರಿಕೆಯನ್ನು ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಬಂದವರು ದನಗರ ಗವಳಿಗರು. ಮಹಾರಾಷ್ಟ್ರದಲ್ಲಿ ಕುರುಬರಿಗೆ ದನಗಾರರೆಂದು ಕರೆಯುತ್ತಾರೆ. ಈ ದನಗರ ಗವಳಿಗರ ಮೂಲ, ಭೌಗೋಳಿಕ ವ್ಯಾಪ್ತಿ, ಬೆಡಗುಗಳು, ವೇಷಭೂಷಣ, ಉಟೋಪಚಾರ, ಉದ್ಯೋಗ, ಆಚರಣೆ, ಸಂಪ್ರದಾಯ, ಆರ್ಥಿಕ ಪರಿಸ್ಥಿತಿ, ಶೈಕ್ಷಣಿಕ ಹಾಗೂ ಸಂಘಟನೆ ಸೌಲಭ್ಯಗಳ ಕುರಿತು ಡಾ. ಟಿ. ಹಳ್ಳಿಕೇರಿ ಅವರು ದನಗರ ಗವಳಿಗಳು ಎಂಬ ಲೇಖನದಲ್ಲಿ ವಿವರವಾಗಿ ಚರ್ಚಿಸಿದ್ದಾರೆ.

ಕುರುಬ ತಂದೆ ಮತ್ತು ಬ್ರಾಹ್ಮಣ ತಾಯಿಯ ಮಕ್ಕಳೇ ಹೆಗಡೆಗಳೆಂಬ ಉಪಜಾತಿಯಾಗಿದ್ದಾರೆಂಬ ಐತಿಹ್ಯವಿದೆ. ಇದರ ಪ್ರಕಾರ ಕುರುಬ ತಂದೆಯ ಮೊದಲ ಹೆಂಡತಿಯಾದ ಕುರುಬ ತಾಯಿಯ ಮಕ್ಕಳೇ ಸೋಮವಾರದ ಕುರುಬರು; ಎರಡನೆಯ ಹೆಂಡತಿಯಾದ ಬ್ರಾಹ್ಮಣ ತಾಯಿಯ ಮಕ್ಕಳೇ ಗುರುವಾರದ ಕುರುಬರು. ಇವರು ಅಣ್ಣತಮ್ಮಂದಿರು ಎಂಬ ನಂಬಿಕೆ ಇದೆ. ಇವರ ನಡುವೆ ವೈವಾಹಿಕ ಸಂಬಂಧ ನಿಷಿದ್ದ. ಇವರು ಉಣ್ಣೆ ಕಂಕಣದವರು. ಇವರು ಶಾಖಾಹಾರಿಗಳಾಗಿದ್ದು ತಾವು ಪವಿತ್ರವಾದವರೆಂಬ ಮೇಲರಿಮೆ ಇದೆ. ಒಡೆಯರ್‌ ಡಿ. ಹೆಗಡೆ ಈ ಉಪಜಾತಿಯ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳ ಬಗ್ಗೆ ವಿಚಾರ ಮಾಡಿದ್ದಾರೆ. ಬ್ರಾಹ್ಮಣದಲ್ಲಿ ಮದುವೆಯಾಗುವ ಮೊದಲೇ ಹೆಣ್ಣನ್ನು ಕಣ್ಣುಕಟ್ಟಿ ಕಾಡಿಗೆ ಬಿಡುವ ಪದ್ಧತಿ ಇದ್ದ ಕಾಲದಲ್ಲಿ ಕುರುಬ ಗಂಡು ಮತ್ತು ಬ್ರಾಹ್ಮಣ ಕನ್ಯೆಯ ಮದುವೆಯಾಗಿರಬಹುದು ಎಂದು ಊಹಿಸಲು ಸಾಧ್ಯವಿದೆ.

ಕುರುಬರಲ್ಲಿ ಅಲ್ಪಸಂಖ್ಯಾತರಾದ ದಾಸ ಕುರುಬರ ಮೇಲೆ ಬ್ರಾಹ್ಮಣರ ಉದಾರವಾದಿ ವೈಷ್ಣವ ಧರ್ಮದ ಪ್ರಭಾವವಿದೆ. ಮೂಲತಃ ಜೈನರಾಗಿದ್ದ ಕುರುಬರು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದಾರೆ. ಇವರು ಹತ್ತಿ ಕಂಕಣದವರು. ದಾಸದೀಕ್ಷೆ ಪಡೆದು ಹಣೆಗೆ ನಾಮ ಕೊರಳಿಗೆ ತುಳಸಿ ಮಾಲೆ ಧರಿಸುತ್ತಾರೆ. ತಿರುಪತಿ ಯಾತ್ರೆ ಮಾಡುತ್ತಾರೆ. ಉಳಿದ ಕುರುಬರಿಗಿಂತ ತಾವು ಭಿನ್ನವೆಂದೂ ಮೇಲ್ಮಟ್ಟದವರೆಂದೂ ಭಾವಿಸುತ್ತಾರೆ. ಇವರ ಬಗ್ಗೆ ಕ್ಷೇತ್ರಕಾರ್ಯದ ಆಧಾರದ ಮೇಲೆ  ಪ್ರಬಂಧ ಮಂಡಿಸಿರುವ ಚನ್ನಪ್ಪ ಕಟ್ಟಿ, ಅವರು ದಾಸಗೊಂಡರ ವೈಶಿಷ್ಟ್ಯವಾದ ಜನಿವಾರ ಪಟ್ಟಿಯ ಬಗ್ಗೆ ಹೀಗೆ ಹೇಳಿದ್ದಾರೆ.

“ದಾಸ ಕುರುಬರಿಗೆ ಹಾಗೂ ದಾಸಗೊಂಡರಿಗೆ ಜನಿವಾರ ಧರಿಸುವ ಹಕ್ಕಿಲ್ಲ, ಆದರೆ ದಾಸಗೊಂಡರಲ್ಲಿ ಜನಿವಾರ ಪಟ್ಟಿ ಧರಿಸುವ ಪದ್ಧತಿ ಇದೆ. ಹೆಸರು ಜನಿವಾರ ಪಟ್ಟಿ ಎಂದಿದ್ದರೂ ಇದನ್ನು ಕೊರಳಿಗೆ ಧರಿಸುವುದಿಲ್ಲ. ಬೆಳ್ಳಿಯಿಂದ ತಯಾರಿಸಿದ ಈ ಆಭರಣವನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ವಿಷ್ಣು ಭಕ್ತರೇನೋ ಅನಿಸಿಕೊಂಡೆವು, ಆದರೆ ಜನಿವಾರ ಧರಿಸುವ ಹಕ್ಕೂ ಇಲ್ಲದಂತಾಯಿತಲ್ಲ ಎಂಬ ಹಳಹಳಿಕೆಯಲ್ಲಿ ಈ ಜನಿವಾರ ಪಟ್ಟಿ ಆವಿಷ್ಕಾರವಾಗಿರಬಹುದು”. ಈ ಊಹೆ ಸರಿಯಾಗಿದೆ. ಚನ್ನಪ್ಪ ಕಟ್ಟಿಯವರು ಬ್ರಾಹ್ಮಣರು ಮಾಡಿದ ಈ ಮತಾಂತರದ ರಾಜಕಾರಣವನ್ನೂ ಸಮರ್ಪಕವಾಗಿ ಹೀಗೆ ಗುರುತಿಸಿದ್ದಾರೆ.

“ಹಿಂದೂ fold ನ ಕೆಳಸಮುದಾಯಗಳು ಅನ್ಯಧರ್ಮಕ್ಕೆ ವಲಸೆ ಹೋಗದೆ ಹಾಗೆ ಹಿಂದೂ ಧರ್ಮ ರಚಿಸಿಕೊಂಡ safety volve ಇದಾಗಿತ್ತು. ಹರಿಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡು ಹರಿಯ ನಾಮಸ್ಮರಣೆ ಮಾತ್ರದಿಂದಲೇ ಮುಕ್ತಿಯನ್ನು ಸಾಧಿಸಬಹುದು ಎಂದು ಈ ಪರಿಕಲ್ಪನೆ ಸಾರಿತು. ಹಾಗೂ ಆ ಮೂಲಕ ವಲಸೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವಲ್ಲಿ ಸಫಲವಾಯಿತು. ಒಂದರ್ಥದಲ್ಲಿ ವೈದಿಕವು ಕೆಳವರ್ಗದ ಜನರ ಬಗ್ಗೆ ತನ್ನ ನಿಲುವನ್ನು ಮರುವ್ಯಾಖ್ಯಾನಿಸಿಕೊಂಡ ಪ್ರಸಂಗ ಇದಾಗಿತ್ತು. ಹೀಗೆ ಉಗಮವಾದ ಈ ಪಂಥಕ್ಕೆ ಒಲಿದ ಇವರನ್ನು ಕುರುಬದಾಸರು, ಗೊಲ್ಲದಾಸರು ಹಾಗೂ ಹೊಲೆದಾಸರ ಎಂದು ಗುರುತಿಸಲಾಗುತ್ತದೆ.”

ಜೈನ ಧರ್ಮ ಮತ್ತು ವೀರಶೈವ ಧರ್ಮಗಳು ಜಾತಿ ವ್ಯವಸ್ಥೆಯ ಬಗ್ಗೆ ಉದಾರವಾದಿ ನಿಲುವನ್ನು ತಳೆದಿದ್ದರಿಂದ ಅನಿವಾರ್ಯವಾಗಿ ದಾಸ ಪಂಥದಲ್ಲಿ ಕೆಳಜಾತಿಯ ಜನರಿಗೆ ಹರಿದಾಸರಾಗುವ ಅವಕಾಶವನ್ನು ನೀಡಬೇಕಾಯಿತೆಂಬುದನ್ನು ಲೇಖಕರು ಗುರುತಿಸಿದ್ದಾರೆ. ಹಾಗೆಯೇ ಇನ್ನೊಂದು ಮಹತ್ವದ ಅಂಶವನ್ನೂ ಗುರುತಿಸಿದ್ದಾರೆ. ದಾಸ ದೀಕ್ಷೆಯನ್ನು ಪ್ರತಿ ಗಂಡು ಮಗುವೂ ತಿರುಪತಿ ತಿಮ್ಮಪ್ಪನ ಅರ್ಚಕರಿಂದಲೇ ಕಡ್ಡಾಯವಾಗಿ ಪಡೆಯಬೇಕು. ಆದರೆ ಈ ಅವಕಾಶವನ್ನು ಹೆಂಗಸರಿಗೆ ನಿರಾಕರಿಸಲಾಗಿದೆ. ಇದು ಮಧ್ವ ಸಿದ್ಧಾಂತದ ತಾತ್ವಿಕತೆಗೆ ಅನುಗುಣವಾಗಿದೆ. ದಾಸ ಕುರುಬರೂ ಜಾತಿ ತಾರತಮ್ಯ ಮಾಡುವುದನ್ನು ಲೇಖಕರು ಹೀಗೆ ಗುರುತಿಸಿದ್ದಾರೆ.

“ತಮಗಿಂತ ಮೇಲಿನವರಾದ ಲಿಂಗಾಯಿತರ ಮನೆಗಳಿಗೆ ಹೋಗಿ ಅಲ್ಲಿ ಪ್ರಸಾದ ಸ್ವೀಕರಿಸಿದ್ದನ್ನು ಹೇಳಿಕೊಂಡಷ್ಟೇ ಅಭಿಮಾನದಿಂದ ಹರಿಜನರ ಮನೆಗಳಿಗೆ ಹೋಗಿ ಅಲ್ಲಿ ಪ್ರಸಾದ ಸ್ವೀಕರಿಸದೆ ಬಂದುದ್ದನ್ನು ಅಷ್ಟೇ ಅಭಿಮಾನದಿಂದ ಹರಿಜನರ ಮನೆಗಳಿಗೆ ಹೋಗಿ ಅಲ್ಲಿ ಪ್ರಸಾದ ಸ್ವೀಕರಿಸದೆ ಬಂದುದ್ದನ್ನು ಅಷ್ಟೇ ಅಭಿಮಾನದಿಂದ ದಾಸಕುರುಬರು ಹೇಳಿಕೊಳ್ಳುತ್ತಾರೆ. ಲೇಖಕರು ಈ ಲೇಖನದಲ್ಲಿ ಜಾತಿ ರಾಜಕಾರಣ ಮತ್ತು ಲಿಂಗಭೇದದ ರಾಜಕಾರಣವನ್ನು ಚೆನ್ನಾಗಿ ಗುರುತಿಸಿದ್ದಾರೆ.”

ವೀರಶೈವ ಧರ್ಮದ ಪ್ರಭಾವಕ್ಕೆ ಒಳಗಾಗಿ ಕುರುಬರಲ್ಲಿ ಪುರೋಹಿತ ವರ್ಗಕ್ಕೆ ಸೇರಿದವರೇ ಒಡೆಯರು. ಒಡೆಯರಿಗೆ ಸಂಬಂಧಿಸಿದಂತೆ ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಶಾಸನಗಳಲ್ಲಿ, ಆಧುನಿಕ ಕಾಗದ ಪತ್ರಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ. ಈ ಆಕರಗಳ ಅಧ್ಯಯನದಿಂದ ಡಾ. ಕೆ. ರವೀಂದ್ರನಾಥ ಅವರು ಒಡೆಯರ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ಒಡೆಯರಲ್ಲಿ ರೇವಣಸಿದ್ದ ಸಂಪ್ರದಾಯದ ಶಾಂತೊಡೆಯರು, ಸಿದ್ಧರಾಮೇಶ್ವರ ಸಂಪ್ರದಾಯದ ಮಂಕೊಡೆಯರು. ಅಮೋಘಸಿದ್ಧ ಸಂಪ್ರದಾಯದ ಅಮೋಘ ಒಡೆಯರು ಎಂಬ ಮೂರು ಪರಂಪರೆಗಳನ್ನು ಗುರುತಿಸಿದ್ದಾರೆ. ಇವರು ಸಸ್ಯಾಹಾರಿಗಳು ಹಾಗೂ ಲಿಂಗಧಾರಿಗಳು. ಇವರು ಉಣ್ಣೆ ಕಂಕಣದವರಿಗೆ ಹಾಗೂ ಹತ್ತಿಕಂಕಣದವರಿಗೆ ಗುರುಗಳಾಗಿದ್ದರೂ ಇವರಿಗೆ ಹೆಚ್ಚು ಮಹತ್ವ ಕೊಡುವವರು ಉಣ್ಣೆ ಕಂಕಣದವರೇ; ಹತ್ತಿಕಂಕಣದವರು ಇವರಿಗೆ ಪರಿಮಿತ ಗೌರವ ನೀಡುತ್ತಾರೆ. ಹತ್ತಕಂಕಣದವರು ವೈಷ್ಣವರಾಗಿರುವುದು ಇದಕ್ಕೆ ಕಾರಣ. ಲೇಖಕರು ಈ ಸಂಬಂಧವಾದ ವಿವರಗಳನ್ನು ಕೊಟ್ಟಿದ್ದಾರೆ. ಒಡೆಯರ ಸ್ಥಾನಮಾನಗಳನ್ನು ನೀಡಿರುವುದು ಹಾಗೂ ಗಂಡ ಸತ್ತ ನಂತರವೂ ಆಕೆ ವಿಧವೆಯಾಗದೇ ಮುತ್ತೈದೆಯಾಗಿಯೇ ಉಳಿಯುವುದು ಪ್ರಗತಿಪರವಾದ ಸಂಪ್ರದಾಯವಾಗಿದೆ. ಈ ಬಗ್ಗೆ ಪ್ರೊ. ಚಿದಾನಂದಮೂರ್ತಿ ಅವರು ಬಹಳ ಹಿಂದೆಯೇ ಸಂಶೋಧನ ಪ್ರಬಂಧವನ್ನು ಬರೆದು ಇವರ ವೈಶಿಷ್ಟ್ಯವನ್ನು ಮಹತ್ವವನ್ನೂ ಸ್ಪಷ್ಟಪಡಿಸಿದ್ದರು.

ಸಾದರು, ನೊಣಬರು ಮತ್ತು ಕುಡುಒಕ್ಕಲಿಗರಲ್ಲಿ ಬಹುಪಾಲು ಜನ ಲಿಂಗಾಯತರಾಗಿದ್ದಾರೆ. ಆದರೆ ಇವರು ಮೂಲತಃ ಕುರುಬರಾಗಿದ್ದು, ಕೆಲವರು ಈಗಲೂ ಆ ಸ್ಥಿತಿಯಲ್ಲಿಯೇ ಇದ್ದಾರೆ. ಸಾದ ಕುರುಬರ ಬಗ್ಗೆ ಪ್ರಬಂಧ ಮಂಡಿಸಿರುವ ಪ್ರೊ. ಬಿ. ಬಿ. ಪಾಟೀಲ ಅವರು “ಕುರುಬರಲ್ಲಿಯೇ ಬಹು ಸಂಖ್ಯಾತರು ಲಿಂಗಾಯಿತರಾದವರೂ ಅದೇಕೋ ತಮ್ಮ ಕುರುಬ ಮೂಲವನ್ನು ಅವರು ಹೇಳಿಕೊಳ್ಳದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ” ಎಂದು ಹೇಳಿದ್ದಾರೆ. “ಅಂಎ, ನೊಣಬ, ಸಾದಕುರುಬರಲ್ಲಿನ ಮುಖ್ಯ ಬೆಡಗುಗಳು, ಅವು ಪ್ರತ್ಯೇಕ ಜಾತಿಗಳಾಗಿ ಮಾರ್ಪಟ್ಟು ನಂತರ ಇತರ ಕೆಲ ಬೆಡಗುಗಳು ಜನ ಸೇರಿಕೊಂಡು ಮತ್ತು ಕೆಲ ಬೆಡಗುಗಳಲ್ಲಿ ಶಾಖೆಗಳಾಗಿ ಬೆಳೆದದ್ದು ಕಂಡುಬರುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಚರ್ಮದ ಕಾಯಕದ ಕುರುಬರು, ಸಾದರು ಮಾದಿಗರೆನಿಸಿರಬೇಕು ಎಂದರೆ ಈ ಮೂರು ಜಾತಿಗಳಲ್ಲಿ ಸಮಾನ ಬೆಡಗುಗಳಿವೆ. ಈ ಹಿನ್ನೆಲೆಯಲ್ಲಿ ಪ್ರೊ. ಎಸ್‌. ಎಸ್‌. ಹಿರೇಮಠ ಅವರು ಕುರುಬ ರೇವಣಸಿದ್ಧನ ಶಿಷ್ಯ ಮಾದಿಗ ಮರುಳಸಿದ್ಧ ಎಂದು ಹೇಳಿದ್ದು ಅರ್ಥಪೂರ್ಣ ಎನಿಸುತ್ತದೆ” ಎಂದು ಅಭಿಪ್ರಾಯಪಡುತ್ತಾರೆ. ತಮ್ಮ ಮಾತು ಕೂಡ್ಲಿಗಿ ತಾಲೂಕಿನ ಉಜ್ಜನಿಯ ಮರುಳಸಿದ್ಧನಿಗೆ ಅನ್ವಯಿಸುತ್ತದೆ ಎಂದೂ ಹೇಳಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಿಂದ ಕರ್ನಾಟಕಕ್ಕೆ ವಲಸೆ ಬಂದ ಕುರುಬರು ಅಜ್ಜಂಪುರ ತಾಲ್ಲೂಕಿನ ಶಿವನಿಯಲ್ಲಿ ನೆಲೆಸಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಲಿಂಗಾಯಿತರಾದ ಸಾದ ಕುರುಬರು ಪ್ರತ್ಯೇಕ ಮಠ ಕಟ್ಟಿಕೊಂಡು ತರಳಬಾಳು ಗುರುಪರಂಪರೆಯನ್ನು ಪ್ರಾರಂಭಿಸಿದ್ದನ್ನು ಪ್ರಸ್ತಾಪಿಸಿದ್ದಾರೆ.

ಕುಡುಒಕ್ಲಲಿಗರು ವೀರಶೈವ ಧರ್ಮಕ್ಕೆ ಸೇರಿದವರಾಗಿದ್ದು ಜಾತಿ ವ್ಯವಸ್ಥೆಯಲ್ಲಿ ಕುರುಬರಿಗಿಂತ ಮೇಲಿದ್ದಾರೆ. ಕುಡು ಒಕ್ಕಲಿಗ ಬಗ್ಗೆ ಪ್ರಬಂಧ ಬರೆದಿರುವ ಡಾ. ಶ್ರೀರಾಮ ಇಟ್ಟಣ್ಣನವರು “ಕುಡು ಒಕ್ಕಲಿಗರು ಕುರುಬ ಸಮಾಜದ ಒಂದು ಪಂಗಡ ಎನ್ನುವುದಕ್ಕಿಂತ ಅವರನ್ನು ಕುರುಬರು ಸೋದರ ಸಂಬಂಧ ಸಮುದಾಯ ಎನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ” ಎಂದು ಅಭಿಪ್ರಾಯಪಡುತ್ತಾರೆ.

ನೊಣಬರ ಬಗ್ಗೆ ಪ್ರಬಂಧ ಮಂಡಿಸಿರುವ ಕುಂ. ಬಾ. ಸದಾಶಿವಪ್ಪನವರು “…..ಕರ್ನಾಟಕ ಪ್ರದೇಶವನ್ನು ಸುಮಾರು ಕ್ರಿ. ಶ. ೭೫೦ ರಿಂದ ೧೦೫೪ರವರೆಗೂ ಆಳಿದ ಒಂದು ಜನಾಂಗ ಕುರುಬರೇ ಆಗಿದ್ದರು. ಅವರೇ ನೊಳಂಬರು-ನೊಣಬರು (ಕುರುಬರು) ಒಂದು ವಿಧ ಎಂದು ಹೇಳಿದ್ದಾರೆ. ನೊಳಂಬರು ಕ್ರಮೇಣ ವೀರಶೈವರಾದರು. ನೊಣಬರ ಸಂಸ್ಕೃತಿಯು ಕುರುಬರ ಸಂಸ್ಕೃತಿಯೂ ಒಂದೇ ಆಗಿರುತ್ತದೆ” ಎಂದು ಲೇಖಕರು ಹೇಳಿದ್ದಾರೆ.

ಗೊಂಡರು ಕರ್ನಾಟಕದಲ್ಲಿ ಭಟ್ಕಳ ತಾಲೂಕಿನಲ್ಲಿರುವ ಬುಡಕಟ್ಟಿನ ಜನ. ಇವರ ಬಗ್ಗೆ ಪ್ರಬಂಧ ಮಂಡಿಸಿರುವ ಡಾ. ಕೆ. ಎಂ. ಮೈತ್ರಿ ಅವರು ಜಗತ್ತಿನ ವಿವಿಧ ದೇಶಗಳ ಪಶುಪಾಲಕರ ಜೀವನ ಕ್ರಮದ ಹಿನ್ನೆಲೆಯಲ್ಲಿ ಭಾರತದ ಹಾಗೂ ಕರ್ನಾಟಕದ ಗೊಂಡರ ಬಗ್ಗೆ ವಿಚಾರ ಮಾಡಿದ್ದಾರೆ. ಗೊಂಡ ಹೆಸರಿನ ಪಟ್ಟಿಯನ್ನು ಕೊಟ್ಟಿದ್ದಾರೆ. ಬೀದರ ಜಿಲ್ಲೆಯಲ್ಲಿ ಕುರಿಗಳನ್ನು ಸಾಕುತ್ತಾರೆ. ಇವರಲ್ಲಿ ಬಹುಪಾಲು ಜನ ಉಣ್ಣೆ ಕಂಕಣದವರು. ಲೇಖಕರು ರಾಜಗೊಂಡರ ಬಗ್ಗೆಯೂ ಬೇಟೆ ಮೂಲಕ ಕೊಡಗಿನ ಕುರುಬರ ಬಗ್ಗೆಯೂ ವಿಚಾರ ಮಾಡಿದ್ದಾರೆ. “ಕರ್ನಾಟಕದಲ್ಲಿ ಕುರುಬ, ಗೊಂಡ, ರಾಜಗೊಂಡ, ಕಾಡುಕುರುಬ, ಜೇನುಕುರುಬ ಎಂದೇ ಎಲ್ಲಾ ಪದಗಳೂ ಒಂದೇ ಬುಡಕಟ್ಟಿಗೆ ಬಳಸುವ ಸಮಾನಾಂತರ ಪದಗಳು” ಎಂದು ಹೇಳಿ ಇವು ಪ್ರಾದೇಶಿಕತೆ ಮತ್ತು ಕಸುಬಿನ ಕಾರಣದಿಂದಾಗಿ ಪ್ರತ್ಯೇಕ ಬುಡಕಟ್ಟುಗಳಾಗಿವೆ ಎಂದು ಅಭಿಪ್ರಾಯಪಡುತ್ತಾರೆ.

“ಕುಂಚಿಟಿಗರ ಬಗ್ಗೆ ಪ್ರಬಂಧ ಮಂಡಿಸಿರುವ ಡಾ. ಮೀರಾಸಾಬಿಹಳ್ಳ ಶಿವಣ್ಣ ಅವರು ಕುಂಚಿಟಿಗರು ಒಕ್ಕಲಿಗರ ಒಂದು ಪ್ರಭೇದ ಎಂದು ಹೇಳಿ ಕುಂಚಿಟಿಗರು ಮೂಲತಃ ಪಶುಪಾಲಕರಾಗಿದ್ದು ಹುಲ್ಲುಗಾವಲುಗಳು ಕಡಿಮೆಯಾದ ಮೇಲೆ ಕಾಡುಗೊಲ್ಲರು ಮತ್ತು ಮ್ಯಾಸಬೇಡರಂತೆ ಕುರಿ ಸಾಕಾಣಿಕೆಗೆ ತೊಡಗಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಂಚಿಟಿಗರು ಮತ್ತು ಕುರುಬರ ಸಂಬಂಧಗಳೂ ನಿಕಟವಾಗಿವೆ ಎಂಬುದನ್ನು ಐತಿಹ್ಯ ಬೆಡಗು ಮತ್ತು ಗಾದೆಯ ಮೂಲಕ ವಿವರಿಸಿದ್ದಾರೆ. ಕಂಬಳಿ ನೇಯ್ಗೆಯಲ್ಲಿ ಕುಂಚವನ್ನು ಹಿಡಿದದ್ದರಿಂದ ಕುಂಚಿಟಿಗರು ಮತ್ತು ಕುರುಬರ ಸಂಬಂಧಗಳೂ ನಿಕಟವಾಗಿವೆ ಎಂಬುದನ್ನು ಉಲ್ಲೇಖಿಸುತ್ತಾರೆ. “….ಕುರುಬರು, ಕುಂಚಿಟಿಗರು, ಗೊಲ್ಲರು ಮೂಲತಃ ಬುಡಕಟ್ಟು ಮೂಲದ ಪಶುಪಾಲನ ಸಂಸ್ಕೃತಿಯವರು. ಆದ್ದರಿಂದ ಹಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಈ ಸಾಮ್ಯತೆಗಳಿರುವ ಹಿನ್ನೆಲೆಯಲ್ಲಿ ಬಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯ ಎನ್ನುವುದೇ ವಾಸ್ತವಕ್ಕೆ ದೂರವಾದ ಸಂಗತಿ” ಎಂದು ಲೇಖಕರು ಹೇಳಿರುವುದು ಸಮರ್ಪಕವಾಗಿದೆ.

ಕಾಡುಗೊಲ್ಲರು ಕುರುಬರ ಉಪಪಂಗಡವಲ್ಲ. ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರಂತೆಯೇ ಕಾಡುಗೊಲ್ಲರ ಬಗ್ಗೆ ಪ್ರಬಂಧ ಮಂಡಿಸಿರುವ ಡಾ. ಸಿ. ಶಿವಲಿಂಗಪ್ಪ ಅವರು ಕಾಡುಗೊಲ್ಲರು ಪ್ರತ್ಯೇಕವಾದ ಬುಡಕಟ್ಟು. ಆಧರೆ ನಿಕಟವಾದ ಸಂಪರ್ಕ ಹೊಂದಿರುವ ಬುಡಕಟ್ಟು ಎಂದು ಸಮರ್ಪಕವಾಗಿ ಹೇಳಿದ್ದಾರೆ. ಮೊದಲಿಗೆ ದನಗಳನ್ನು ಕಾಯುತ್ತಿದ್ದ ಕಾಡುಗೊಲ್ಲರು ಹುಲ್ಲುಗಾವಲುಗಳು ಕಡಿಮೆಯಾದ ಮೇಲೆ ಕುರಿಸಾಕಾಣಿಕೆಗೆ ತೊಡಗಿದರು. ಇದಕ್ಕೆ ಸಮರ್ಥನೆಯಾಗಿ ಬರುವ ಐತಿಹ್ಯವನ್ನು ನಾನು ಉದಾಹರಿಸಿರುವುದನ್ನು ತಮ್ಮ ಪ್ರಬಂಧದಲ್ಲಿ ಶಿವಲಿಂಗಪ್ಪ ಅವರು ಉಲ್ಲೇಖಿಸಿದ್ದಾರೆ. ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು ಎಂಬ ನನ್ನ ಕೃತಿಯಲ್ಲಿ ಈ ಐತಿಹ್ಯವನ್ನು ಮತ್ತು ಕಾಡುಗೊಲ್ಲರು ಕುರಿಯ ತುಪ್ಪಟವನ್ನು ಕತ್ತರಿಸಿ ಕುರುಬರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಮಾಡುವ ಆಚರಣೆಯ ವಿವರಗಳನ್ನು ಕೊಟ್ಟಿದ್ದೇನೆ. ಚಳ್ಳಕೆರೆಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದರಿಂದ ಚಿತ್ರದುರ್ಗ ಜಿಲ್ಲೆಯ ಕುರುಬ ಸಮುದಾಯದ ಆರ್ಥಿಕ, ಸಾಮಾಜಿಕ, ದಾರ್ಮಿಕ, ರಾಜಕೀಯ ಪರಿಸ್ಥಿತಿಯ ಬಗ್ಗೆ ಪ್ರಬಂಧಗಳನ್ನು ವಿದ್ವಾಂಸರು ಮಂಡಿಸಿರುವುದು ಸೂಕ್ತವಾಗಿವೆ. ಹಾಗೂ ಇವು ಉಪಯುಕ್ತವಾಗಿದೆ.

ಕುರುಬರ ಉಪಜಾತಿಗಳ ಬಗ್ಗೆ ಮಂಡಿತವಾಗಿರುವ ಈ ಪ್ರಬಂಧಗಳಲ್ಲಿ ಕೆಲವು ವಿವರಣಾತ್ಮಕವಾಗಿವೆ, ಕೆಲವು ಸಂಶೋಧನಾತ್ಮಕವಾಗಿವೆ, ಕೆಲವು ವಿಶ್ಲೇಷಣಾತ್ಮಕವಾಗಿವೆ. ಇವುಗಳನ್ನು ಅಧ್ಯಯನ ಮಾಡಿದರೆ ಕುರುಬರ ಉಪಜಾತಿಗಳ ಒಂದು ಸ್ಥೂಲವಾದ ಚಿತ್ರ ದೊರಕುತ್ತದೆ. ಇವುಗಳು ಒಂದು ರೀತಿಯಲ್ಲಿ ಆರಂಭದ ಸಮೀಕ್ಷೆ (pilot survey)ರೂಪದಲ್ಲಿದ್ದು ಮುಂದಿನ ಅಧ್ಯಯನಗಳಿಗೆ ಒಳ್ಳೆಯ ತಳಹದಿ ಹಾಕಿತು ಎಂದು ಹೇಳಬಹುದು. ಈ ಪ್ರಬಂಧಗಳು ಕುರುಬರ  ಸಾಂಪ್ರದಾಯಿಕ ಜೀವನ ಕ್ರಮಗಳನ್ನು ದಾಖಲು ಮಾಡಿವೆ.

ಇಂದು ಮುಂದುವರಿದ ಜಾತಿಗಳಲ್ಲಿನ ಉಪಜಾತಿಗಳು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಮಹತ್ವ ಪಡೆಯುತ್ತವೆ. ಇವು ತಮ್ಮದೇ ಮಠಗಳನ್ನೂ ಮಠಾಧಿಪತಿಗಳನ್ನು ಹೊಂದಿವೆ. ಸಮುದಾಯ ಭವನಗಳು ಶಾಲಾ ಕಾಲೇಜುಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹಕಾರಿ ಸಂಘಗಳು ಮದುವೆ ಸಲಹಾ ಕೇಂದ್ರಗಳು, ವಾರ್ತಾ ಪತ್ರ ಹಾಗೂ ಪುಸ್ತಕ ಪ್ರಕಟಣೆ ಮೊದಲಾದ ವಿಭಿನ್ನ ಕಾರ್ಯಚಟುವಟಿಕೆಗಲ್ಲಿ ತೊಡಗಿವೆ. ಮುಂದುವರಿದ ಜಾತಿಗಳಲ್ಲಿ ಉಪಜಾತಿಗಳ ಮೂಲಕ ವಿಕೇಂದ್ರೀಕರಣ ಪ್ರಕ್ರಿಯೆ ನಡೆದಿರುವಂತೆ ಜಾತಿಗಳು ಒಗ್ಗಟ್ಟಾಗಬೇಕು ಎಂಬ ಪ್ರಕ್ರಿಯೆಯೂ ನಡೆಯುತ್ತಿವೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಕುರುಬರ ಸಮುದಾಯ, ಅದರಲ್ಲಿನ ಉಪಜಾತಿಗಳು ಮತ್ತು ಬೆಡಗುಗಳು (ಬಳಿಗಳು) ಯಾವ ರೀತಿ ಮುಂದುವರಿಯಬೇಕು ಎಂಬುದರ ಬಗ್ಗೆಯೂ ಅಧ್ಯಯನಗಳೂ ನಡೆಯಬೇಕಾಗಿದೆ. ಇದಕ್ಕೆ ಈ ವಿಚಾರ ಸಂಕಿರಣದ ಪ್ರಬಂಧಗಳು ನಾಂದಿಯಾಗಲೆಂದು ಆಶಿಸುತ್ತೇನೆ.