ವೃತ್ತಿಯಿಂದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಗ್ರಾಮೀಣ ಪ್ರದೇಶಗಳಲ್ಲಿಯೇ ಸಾರ್ಥಕವಾದ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಪ್ರವೃತ್ತಿಯಿಂದ ಸಾಹಿತಿಗಳಾಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಅನುಪಮವಾದ ಕೊಡುಗೆಯನ್ನು ನೀಡಿದವರಲ್ಲಿ ಸಿಂಪಿ ಲಿಂಗಣ್ಣ, ಮಿರ್ಜಿ ಅಣ್ಣರಾಯ ಮತ್ತು ಶಂಬಾ ಜೋಷಿ ಅವರು ಪ್ರಮುಖರಾಗಿದ್ದಾರೆ. ಇವರೆಲ್ಲ ಓದಿದ್ದು ತುಂಬಾ ಕಡಿಮೆ. ಆದರೆ ಸ್ವಪ್ರಯತ್ನದಿಂದ ಓದಿಕೊಂಡದ್ದು ಅಪಾರ. ಇವರ ಪರಂಪರೆಗೆ ಸೇರಬಹುದಾದ ಮತ್ತೊಂದು ಹೆಸರು ಬ. ಪ. ನಾಯ್ಕರ್‌ ಅವರು ನಮ್ಮ ನಡುವೆ ಇರುವ ಒಬ್ಬ ಅಪರೂಪದ ವ್ಯಕ್ತಿಯಾಗಿದ್ದಾರೆ. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆಯನ್ನು ಸಲ್ಲಿಸಿ ಈಗ ನಿವೃತ್ತ ಜೀವನವನ್ನು ಸಾಗಿಸುತ್ತಿರುವ ಇವರು ಪ್ರವೃತ್ತಿಯಿಂದ ಒಬ್ಬ ಉತ್ತಮ ಸಾಹಿತಿಗಳಾಗಿದ್ದಾರೆ. ಎಂಬತ್ತರ ಈ ಪ್ರಾಯದಲ್ಲಿಯೂ ಬರವಣಿಗೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡಿರುವ ಇವರು ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಒಂದೆರಡು ಕೃತಿಗಳನ್ನು ರಚಿಸಿದರೆ ಸಾಕು ಕೀರ್ತಿ ಸನ್ಮಾನಗಳಿಗೆ ಹಂಬಲಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಇಷ್ಟೊಂದು ಕೃತಿಗಳನ್ನು ರಚಿಸಿದರೂ ಕೂಡ ಯಾವ ಕೀರ್ತಿ ಸನ್ಮಾನಗಳನ್ನು ಅಪೇಕ್ಷಿಸದೇ, ಪ್ರಚಾರವನ್ನು ಬಯಸದೇ ಒಂದು ರೀತಿಯ ನಿರ್ಲಿಪ್ತ. ಜೀವನವನ್ನು ಸಾಗಿಸುತ್ತಿದ್ದಾರೆ. ಮೂಲತಃ ಬಹು ಸಂಕೋಚ ಪ್ರವೃತ್ತಿಯವರಾದ ನಾಯ್ಕರ್‌ ಅವರು ಒಂದರ್ಥದಲ್ಲಿ “ತೊಲಗು ಕೀರ್ತಿಶನಿ” ಎಂಬ ಕುವೆಂಪು ಮನೋಧರ್ಮದವರು. ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ‘ಎಲೆಮರೆಯಕಾಯಿ’ಯಂತೆ ಬದುಕಿ ಬರೆದ ಬ. ಪ. ನಾಯ್ಕರ್‌ ಅವರ ಜೀವನ ಹಾಗೂ ಸಾಹಿತ್ಯ ಸಾಧನೆಯನ್ನು ಪರಿಚಯಿಸುವ ಕಿರು ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

೧.  ಜನನ-ಬಾಲ್ಯ-ಶಿಕ್ಷಣ-ಸೇವೆ

ಬೆಳುವೊಲ ನಾಡಿನ ನವಲಗುಂದ ತಾಲೂಕಿನ ಸಾಸ್ವಿಹಳ್ಳಿ ಗ್ರಾಮವು ಬ. ಪ. ನಾಯ್ಕರ್‌ ಅವರು ಹುಟ್ಟಿದ ಊರು. ಅಲ್ಲಿಯ ಸಾಮಾನ್ಯ ಮಧ್ಯಮ ವರ್ಗದ ಕೃಷಿಕರಾದ ಶ್ರೀ ಪರಸಪ್ಪ ಶ್ರೀಮತಿ ರುಕ್ಮಿಣಿ ದಂಪತಿಗಳ ಚೊಚ್ಚಿಲ ಮಗನಾಗಿ ೧೯೩೦ ಮಾರ್ಚ್‌ ೫ ರಂದು ಜನಿಸಿದರು. ಜನಸಿದ ಮಗನಿಗೆ ದಂಪತಿಗಳು ಊರಿನ ಆರಾಧ್ಯದೈವವಾದ ಶ್ರೀ ಬಸವೇಶ್ವರನ ಹೆಸರನ್ನೇ ಇವರಿಗೆ (ಬಸಪ್ಪನೆಂದು) ಇಡುತ್ತಾರೆ. ಸ್ವಾತಂತ್ರ್ಯ ಪೂರ್ವದ ಆಂಗ್ಲರ ಆಡಳಿತ ಕಾಲದಲ್ಲಿ ನಮ್ಮ ದೇಶದಲ್ಲಿ ಶೈಕ್ಷಣಿಕ ಸೌಲಭ್ಯಗಳು ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ತುಂಬಾ ಕಡಿಮೆ ಎಂದೇ ಹೇಳಬೇಕು. ಕೆಲವು ಹಳ್ಳಿಗಳಲ್ಲಿ ಕಿರಿಯ ಪ್ರಾಥಮಿಕ ಹಂತದವರೆಗೆ ಶಾಲೆಗಳಿದ್ದರೆ, ಇನ್ನು ಕೆಲವು ಹಳ್ಳಿಗಳಲ್ಲಿ ಶಾಲೆಗಳೇ ಇರುತ್ತಿರಲಿಲ್ಲ. ಆ ಕಾಲದಲ್ಲಿ ಗ್ರಾಮೀಣ ಜನರೂ ಈಗಿನಂತೆ ಸಿಕ್ಷಣಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನೂ ನೀಡುತ್ತಿರಲಿಲ್ಲ. ತಮ್ಮ ಮಕ್ಕಳು ಓದಿ ನೌಕರಿಯನ್ನು ಮಾಡುವುದಕ್ಕಿಂತಲೂ, ಅಕ್ಷರ ಜ್ಞಾನವನ್ನು ಪಡೆದುಕೊಂಡ ತಮ್ಮ ಮನೆತನದ ಉದ್ಯೋಗವನ್ನು ಮುಂದುವರಿಸಿಕೊಂಡು ಹೋದರೆ ಸಾಕು ಎಂದು ಭಾವಿಸುವವರೇ ಹೆಚ್ಚು, ಇದೇ ಆಶಯವನ್ನು ಶ್ರೀ. ಬ. ಪ. ನಾಯ್ಕರ್‌ ಅವರ ತಂದೆಯವರು ಹೊಂದಿದ್ದರು. ತಮ್ಮ ಮಗನು ತಮ್ಮ ಊರಿನಲ್ಲಿಯೇ ಇರುವ ಕೆಳಹಂತದ ಪ್ರಾಥಮಿಕ ಶಾಲೆಯಲ್ಲಿ (೫ನೇ ತರಗತಿವರೆಗೆ) ಓದಿ, ಮುಂದೆ ತಮ್ಮ ಮನೆತನದ ಉದ್ಯೋಗವಾದ ಒಕ್ಕಲುತನವನ್ನೇ ಮುಂದುವರಿಸಿಕೊಂಡು ಹೋದರೆ ಸಾಕು ಎಂದು ಭಾವಿಸಿದ್ದರು. ಆದರೆ ಬಾಲಕ ಬಸಪ್ಪನ ಜಾತನವನ್ನು ಗಮನಿಸಿದ ಪ್ರಥಮಿಕ ಶಾಲೆಯ ಗುರುಗಳು, ತಂದೆಯವರಾದ ಶ್ರೀ ಪರಸಪ್ಪನವರಿಗೆ “ನಿಮ್ಮ ಮಗನು ತುಂಬಾ ಜಾಣನಿದ್ದಾನೆ, ಅವನ ಓದನ್ನು ನಿಲ್ಲಿಸಬೇಡಿರೆಂದು” ಹೇಳಿದ್ದರಿಂದಲೂ, ಈ ಅವಧಿಯಲ್ಲಿಯೇ ಪರಸಪ್ಪನವರಿಗೆ ಮತ್ತೆ ಇಬ್ಬರು ಗಂಡು ಮಕ್ಕಳು ಹುಟ್ಟಿದ್ದರಿಂದಲೂ ಮಗನ ಮುಂದಿನ ಓದಿಗೆ ಏರ್ಪಾಟು ಮಾಡುತ್ತಾರೆ. ಸಾಸ್ವಿಹಳ್ಳಿಯ ನೆರೆಯ ಗ್ರಾಮವಾದ ಹಳ್ಳಿಕೇರಿ ಹಿರಿಯ ಪ್ರಾಥಮಿಕ ಶಾಲೆಗೆ ಮಗನ ಹೆಸರನ್ನು ಹಚ್ಚುತ್ತಾರೆ. ಮೂರು ಮೈಲು ದೂರದ ಗ್ರಾಮವಾದ ಹಳ್ಳಿಕೇರಿಗೆ ನಡೆದುಕೊಂಡು ಹೋಗಿ ಬರುತ್ತಿದ್ದರು. ಹೀಗೆ ಎರಡು ವರ್ಷ ಬುತ್ತಿಯನ್ನು ಕಟ್ಟಿಕೊಂಡು ಹೋಗಿ ಬಂದು, ನಿಷ್ಠೆಯಿಂದ ಅಭ್ಯಾಸ ಮಾಡಿ ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಶೇ. ೭೪% ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗುತ್ತಾರೆ. ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಪಾಸಾದವರಿಗೆ ತುಂಬ ಮರ್ಯಾದೆ ಇರುತ್ತಿತ್ತು. ಇನ್ನು ಈ ರೀತಿಯಲ್ಲಿ ಉನ್ನತದರ್ಜೆಯಲ್ಲಿ ಪಾಸಾದರೆ ಕೇಳಬೇಕೆ? ಬಾಲಕ ಬಸಪ್ಪನವರು ಹೀಗೆ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾದರೂ ಕೂಡ ಅವರ ತಂದೆಯವರು ಮುಂದಿನ ಓದಿನ ಬಗ್ಗೆ ವಿಚಾರಿಸದೇ ಓದು ಸಾಕು ಒಕ್ಕಲುತನವನ್ನು ಮುಂದುವರಿಸಿಕೊಂಡು ಹೋಗಲಿ ಎಂದು ತೀರ್ಮಾನಿಸಿದ್ದರು. ಆದರೆ ಬಸಪ್ಪನವರ ಅದೃಷ್ಟವೋ ಏನೋ ಅದೇ ಸಮಯಕ್ಕೆ ಸಾಸ್ವಿಹಳ್ಳಿಯವರೇ ಆಗಿರುವ, ಗದುಗಿನಲ್ಲಿ ನೆಲೆಸಿದ್ದ ನಿವೃತ್ತ ಶಿಕ್ಷಕರೊಬ್ಬರು ಊರಿಗೆ ಬಂದಿದ್ದರು. ಯೋಗ ಕ್ಷೇಮವನ್ನು ವಿಚಾರಿಸುವುದಕ್ಕೆ ಪರಸಪ್ಪನವರ ಮನೆಗೂ ಬಂದರು. ಮಾತನಾಡುತ್ತಿರುವಾಗ ಅಲ್ಲಿಯೇ ಇದ್ದ ಬಾಲಕ ಬಸಪ್ಪನ ಬಗ್ಗೆ ಕೇಳಿದರು. ಅವನು ಉನ್ನತ ದರ್ಜೆಯಲ್ಲಿ ಮುಲ್ಕಿ ಪರೀಕ್ಷೆಯನ್ನು ಪಾಸು ಮಾಡಿರುವುದನ್ನು, ಅವನ ಓದನ್ನು ನಿಲ್ಲಿಸಿ ಕಮತಕ್ಕೆ ಹಚ್ಚಿರುವುದನ್ನು ಕೇಳಿ “ಛೇ! ಎಂಥ ಕೆಲಸ ಮಾಡಿದ್ದೀರಿ? ಇಂಥ ಬುದ್ಧಿವಂತ ಮಗನನ್ನು ಓದಿಸುವುದು ಬಿಟ್ಟು ಕಮತಕ್ಕೆ ಹಚ್ಚಿರುವುದು ಸರಿಯಲ್ಲವೆಂದು ತಂದೆಯವರಿಗೆ ಬುದ್ಧಿವಾದವನ್ನು ಹೇಳಿ, ಅಂದೇ ತಮ್ಮ ಜೊತೆಗೆ ಬಸಪ್ಪನವರನ್ನು ಗದುಗಿಗೆ ಕರೆದುಕೊಂಡು ಹೋಗುತ್ತಾರೆ. ಅದೇ ವರ್ಷ ಕೆ.ಎಲ್‌.ಇ. ಸಂಸ್ಥೆಯವರು ಗದುಗಿನಲ್ಲಿ ಪ್ರಾರಂಭಿಸಿದ ಶಿಕ್ಷಕರ ಕಾಲೇಜ್‌ (ಟಿ.ಸಿ.ಹೆಚ್‌)ನಲ್ಲಿ ಇವರನ್ನು ಸೇರಿಸಿ, ಮುಂದಿನ ಓದಿಗೆ ಅನುಕೂಲ ಮಾಡಿಕೊಟ್ಟರು. ಒಂದು ವರ್ಷ ಮಾತ್ರ ಗದುಗಿನಲ್ಲಿದ್ದ ಆ ಕಾಲೇಜು ಯಾವುದೋ ಕಾರಣಕ್ಕೆ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿತು. ಆಗ ಬಸಪ್ಪನವರು ಕೂಡ ಅನಿವಾರ್ಯವಾಗಿ ಹುಬ್ಬಳ್ಳಿಗೆ ಬಂದು ಎರಡನೇ ವರ್ಷದ ಓದನ್ನು ಮುಂದುವರಿಸಿದರು. ಶಿಕ್ಷಕ ತರಬೇತಿ (ಟಿ.ಸಿ.ಹೆಚ್‌)ಯಲ್ಲಿಯೂ ಪ್ರತಿಶತ ೮೦% ಅಂಕ ಗಳಿಸಿ ಉತ್ತೀರ್ಣರಾಗಿ (೧೯೪೯)ರಲ್ಲಿ ಆ ಕಾಲೇಜಿನ ಪ್ರಾಚಾರ್ಯರಾದ ಎಸ್‌. ಬಿ. ಹಂಚಿನಾಳ ಅವರಿಂದ ‘ಶಹಬ್ಬಾಸಿಗಿರಿ’ಯನ್ನು ಪಡೆದರು.

ಹೀಗೆ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ ನಾಯ್ಕರ್‌ ಅವರು ‘ಕಲಿತವನು ಖಾಲಿ ಕೂಡುವುದು ಏಕೆ? ಎಂದು ಮನೆಯವರಿಂದ ಅನುಮತಿಯನ್ನು ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಹೊಂದಿ ೧೯೫೦ರಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ಶಿಕ್ಷಕರಾಗಿ ತಮ್ಮ ತಾಲೂಕಿನಲ್ಲಿ (ನವಲಗುಂದ)ಯೇ ವೃತ್ತಿ ಜೀವನವನ್ನು ಆರಂಭಿಸಿದ್ದ ಇವರಿಗೆ ಅಂದಿನ ಸ್ಕೂಲ್‌ ಬೋರ್ಡಿನ ಆಡಳಿತಾಧಿಕಾರಿಗಳು ಹಾವೇರಿ ತಾಲೂಕಿನ ಕಬ್ಬೂರು ಗ್ರಾಮಕ್ಕೆ ವರ್ಗ ಮಾಡಿದರು. (೧೯೫೨). ಮೇಲಾಧಿಕಾರಿಗಳು ನನ್ನನ್ನು ಹಾವೇರಿ ತಾಲೂಕಿನ ಕಬ್ಬೂರು ಗ್ರಾಮಕ್ಕೆ ವರ್ಗ ಮಾಡಿದರು (೧೯೫೨). ಮೇಲಾಧಿಕಾರಿಗಳು ನನ್ನನ್ನು  ಹಾವೇರಿ ತಾಲೂಕಿನ ಕಬ್ಬೂರಿಗೆ ವರ್ಗಮಾಡಿರುವುದು ನನ್ನ ವೃತ್ತಿ ಜೀವನದ ಸಾಹಿತ್ಯಕ ಜೀವನದ ಬಹುದೊಡ್ಡ ತಿರುವುಗಳಲ್ಲಿ ಒಂದು ಎಂದು ನಾಯ್ಕರ್‌ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬಯಲು ಸೀಮೆಯ ಪ್ರದೇಶದಲ್ಲಿ ಬೆಳೆದ ನಾಯ್ಕರ್‌ ಅವರ ಮೇಲೆ ಮಲೆನಾಡಿನ ಸೆರಗಿನಲ್ಲಿರುವ ಕಬ್ಬೂರಿನ ಪರಿಸರವು ಗಾಢವಾದ ಪ್ರಭಾವವನ್ನು ಬೀರುತ್ತದೆ. ಆ ಕಾಲದಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ತುಂಬಾ ಇದ್ದವು. ಎಷ್ಟೋ ಗ್ರಾಮೀಣ ಶಾಲೆಗಳಿಗೆ ಸ್ವಂತ ಕಟ್ಟಡಗಳೇ ಇರಲಿಲ್ಲ. ಹೀಗಾಗಿ ಶಾಲೆಗಳು  ಸಾಮಾನ್ಯವಾಗಿ ನಡೆಯುತ್ತಿದ್ದುದು ಗುಡಿ ಗುಂಡಾರಗಳಲ್ಲಿ. ಅದೇ ರೀತಿ ಇವರ ವರ್ಗವು ನಡೆಯುತ್ತಿದ್ದುದು ಆ ಊರಿನ ಮಾರುತಿ ದೇವಸ್ಥಾನದಲ್ಲಿ. ಅಂದಿನ ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಮತ್ತು ಪ್ರಾರ್ಥನೆಗಳನ್ನು ಹಾಡಿಬೇಕಾಗಿತ್ತು. ಅದಕ್ಕಾಗಿ ನಾಯ್ಕರ್‌ ಅವರೇ “ದೇವ ಮಾರುತಿ ಭಾಗ್ಯವಿಧಾತ ಭಾವ ಭಾಗ್ಯನಿಧಿ ಭಕ್ತರ ಪೂರಿತ” ಎಂಬ ಪ್ರಾರ್ಥನಾ ಗೀತೆಯನ್ನು ರಚಿಸಿ ಅದನ್ನು ರಾಗಬದ್ಧವಾಗಿ ಹಾಡುವುದನ್ನು ಮಕ್ಕಳಿಗೆ ಕಲಿಸುತ್ತಿರುತ್ತಾರೆ. ಅದೇ ಸಮಯಕ್ಕೆ ಶಾಲೆಯ ಮುಖ್ಯೋಪಾಧ್ಯಾರಾದ ಎಸ್‌. ಎಂ. ಲಕ್ಕಣ್ಣನವರ ಅವರು ಬಂದು, ಇದನ್ನು ಹೊರಗಡೆ ನಿಂತು ಕೇಳುತ್ತಾರೆ. ನಂತರ ಅವರು ಒಳಗಡೆಗೆ ಬಂದು ಯಾರು ರಚಿಸಿದ ಗೀತೆ? ಇದು ಎಷ್ಟು ಚೆನ್ನಾಗಿದೆ? ಎಂದು ಕೇಳುತ್ತಾರೆ. ಆಗ ನಾಯ್ಕರ್‌ ಅವರು ಸಂಕೋಚದಿಂದಲೇ ನಾನೇ ರಚಿಸಿದ್ದು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಮುಖ್ಯೋಪಾಧ್ಯಾಯರು ನಿಮ್ಮಲ್ಲಿ ಉತ್ತಮವಾದ ಕವಿತ್ವ ಶಕ್ತಿಯಿದೆ. ನೀವು ಒಂದು ನಾಟಕವನ್ನು ಬರೆಯಿರಿ. ಅದನ್ನು ಮಕ್ಕಳಿಗೆ ಆಡಿಸೋಣ ಎಂದು ಹೇಳುತ್ತಾರೆ. ಅವರ ಪ್ರೋತ್ಸಾಹದ ಮಾತುಗಳನ್ನೇ ಆಶಿರ್ವಾದವೆಂದು ಭಾವಿಸಿ ‘ಪ್ರಾಣಾರ್ಪಣ’ವೆಂಬ ಐತಿಹಾಸಿಕ ನಾಟಕವನ್ನು ರಚಿಸುತ್ತಾರೆ. ಅದನ್ನು ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಆಡಿಸಿ, ಊರಿನ ಜನರಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ಹೀಗೆ ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯಕ ಬದುಕನ್ನು ಆರಂಭಿಸುತ್ತಾರೆ.

ಇದೇ ಸಮಯದಲ್ಲಿ ಅವರಿಗೆ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ಗ್ರಾಮದ ಶಾಲೆಗೆ ವರ್ಗವಾಗುತ್ತದೆ (೧೯೫೭).  ಕಲಾವಿದರ ಊರಾದ ಅಣ್ಣಿಗೇರಿಯಲ್ಲಿ ಇವರೊಬ್ಬ ಬರಹಗಾರರೆಂದು ತಿಳಿದು ಇವರಿಂದ ನಾಟಕಗಳನ್ನು ಬರೆಯಿಸಿ ಅಲ್ಲಿಯ ಕಲಾ ತಂಡದವರು ಅವುಗಳನ್ನು ಅಭಿನಯಿಸಿ ಇವರೊಬ್ಬ ಶ್ರೇಷ್ಠ ನಾಟಕಕಾರರೆಂದು ಹೆಸರು ಬರಲು ಕಾರಣರಾಗುತ್ತಾರೆ. ಮುಂದೆ ತಿರ್ಲಾಪುರ (೧೯೬೧-೬೫) ಭದ್ರಾಪುರ (೧೯೬೯-೭೦) ಅಣ್ಣಿಗೇರಿ (೧೯೭೧-೭೮) ಗ್ರಾಮಗಳಲ್ಲಿ ಸೇವೆಯನ್ನು ಸಲ್ಲಿಸಿ ತಮ್ಮ ಮಕ್ಕಳ ಶಿಕ್ಷಣದ ಸಲುವಾಗಿ ತಾವೇ ವರ್ಗವನ್ನು ಬಯಸಿ ಹುಬ್ಬಳ್ಳಿಯ ಶಾಲೆಯೊಂದಕ್ಕೆ ಪ್ರಧಾನ ಗುರುಗಳಾಗಿ ಬರುತ್ತಾರೆ. ಈ ಅವಧಿಯಲ್ಲಿ ಧಾರವಾಡದಲ್ಲಿ ಮನೆಯನ್ನು ಮಾಡಿದ ನಾಯ್ಕರ್‌ ಅವರು ಧಾರವಾಡದಿಂದ ಹುಬ್ಬಳ್ಳಿಗೆ ಹತ್ತು ವರ್ಷಗಳ ಕಾಲ ಅಡ್ಡಾಡಿಯೇ ಸೇವೆಯನ್ನು ಸಲ್ಲಿಸಿ ೧೯೮೮ನೆಯ ಏಪ್ರಿಲ್‌ ತಿಂಗಳಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿಯನ್ನು ಹೊಂದಿದರು. ಹೀಗೆ ನಿರಂತರ ಮೂವತ್ತು ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ, ಧಾರವಾಡದ ಶಕ್ತಿನಗರದ ತಮ್ಮ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ನಿವೃತ್ತ ಜೀವನವನ್ನು ಸಾಗಿಸುತ್ತಲಿದ್ದಾರೆ.

ಸಾಹಿತ್ಯ ಸಾಧನೆ

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಎರಡು ಮೂರು ದಶಕಗಳ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು, ಆದರ್ಶಗಳಿಗೆ ಪ್ರಾಮುಖ್ಯತೆ ಇತ್ತು. ಆ ಕಾಲದ ಪ್ರಾಥಮಿಕ ಶಾಲಾ ಶಿಕ್ಷಕರು ಕೇವಲ ಮುಲ್ಕಿ ಪರೀಕ್ಷೆಯವರಾಗಿದ್ದರು ಕೂಡ ಅವರ ಜ್ಞಾನ ತುಂಬ ಉನ್ನತ ಮಟ್ಟದ್ದಾಗಿರುತ್ತಿತ್ತು. ನಾಯ್ಕರ್‌ ಅವರು ಶಿಕ್ಷಕ ತರಬೇತಿಯನ್ನು ಮುಗಿಸಿ ಶಿಕ್ಷಕರಾಗಿ ನೇಮಕಗೊಂಡು ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ಶಾಲೆಗೆ ಬರುತ್ತಾರೆ. ಬಯಲು ಸೀಮೆಯಿಂದ ಬಂದ ಇವರ ಮೇಲೆ ಮಲೆನಾಡಿನ ಸೆರಗಿನಲ್ಲಿರುವ ಈ ಊರಿನ ಪರಿಸರ ತುಂಬಾ ಪ್ರಭಾವ ಬೀರುತ್ತದೆ. ಇನ್ನೂ ಅವಿವಾಹಿತರಾಗಿದ್ದ ನಾಯ್ಕರ್‌ ಅವರು ಶಾಲಾ ಅವಧಿಯ ನಂತರ ಸಮಯವನ್ನು ಕಳೆಯುವುದಕ್ಕೆ ಪ್ರಾಚೀನ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ದುರ್ಗಸಿಂಹ ಮುಂತಾದವರ ಕೃತಿಗಳನ್ನು ನಿಷ್ಠೆಯಿಂದ ಓದುತ್ತಾರೆ. ಅಲ್ಲದೆ ಆ ಕಾಲದ ನಮೋದಯದ ಪ್ರಸಿದ್ಧ ಕವಿಗಳಾದ ಕೆ. ವಿ. ಪುಟ್ಟಪ್ಪ, ಮಧುರಚೆನ್ನ, ದ. ರಾ. ಬೇಂದ್ರೆ, ಆನಂದಕಂದ, ಶಿವರಾಮ ಕಾರಂತ, ಅ.ನ.ಕೃ. ಮತ್ತು ತ. ರಾ. ಸು. ಮುಂತಾದವರ ಕಾಯ ಕಾದಂಬರಿಗಳನ್ನು ಆಸಕ್ತಿಯಿಂದ ಓದುತ್ತಾರೆ. ಹೀಗೆ ನಾಯ್ಕರ್‌ ಅವರು ಶೈಕ್ಷಣಿಕವಾಗಿ ಓದಿದ್ದು ಕಡಿಮೆಯಾದರೂ ಸ್ವಪ್ರಯತ್ನದಿಂದ ಓದಿಕೊಂಡದ್ದೇ ಹೆಚ್ಚು. ಹೀಗೆ ಹಳೆಯ ಹೊಸಕವಿಗಳ ಸಾಹಿತ್ಯವನ್ನು ಅದರಿಂದ ಓದಿ ಸ್ಫೂರ್ತಿಯನ್ನು ಪಡೆದು ಸಾಹಿತ್ಯ ರಚನೆಗೆ ತೊಡಗುತ್ತಾರೆ. ಆ ಸಮಯದಲ್ಲಿ ನಮ್ಮ ನಾಡಿನಲ್ಲಿ ಏಕೀಕರಣ ಚಳವಳಿಯು ಭರದಿಂದ ನಡೆಯುತ್ತಿರುವಾಗ ಅದರಿಂದ ಸ್ಫೂರ್ತಿಗೊಂಡು ಬರೆದ ‘ನಾವೆರಡು ಕೋಟಿ’ ಎಂಬ ಕವನವು ನವನಾಡು ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಆ ಕವನವನ್ನು ನೋಡಿ ಮಾನ್ಯ ಚಿ. ರು. ನೇಶ್ವಿ ಅವರು ಮೆಚ್ಚಿಕೊಂಡು ಬರೆದ ಪತ್ರವು ಇವರು ಉತ್ಸಾಹದಿಂದ ಬರೆಯುವುದಕ್ಕೆ ಕಾರಣವಾಯಿತು. ಈ ಅವಧಿಯಲ್ಲಿ ಇವರಿಗೆ ಅಣ್ಣಿಗೇರಿ ಶಾಲೆಗೆ ವರ್ಗವಾಗುತ್ತದೆ (೧೯೫೭). ಅಣ್ಣಿಗೇರಿ ಪರಿಸರವು ಸಾಹಿತಿಗಳ ಕಲಾವಿದರ ಊರಾಗಿರುವುದರಿಂದ ಇವರ ಸಾಹಿತ್ಯಕ ಚಟುವಟಿಕೆಗಳಿಗೆ ಇಲ್ಲಿ ಮತ್ತಷ್ಟು ಪ್ರೋತ್ಸಾಹ ಸಿಗುತ್ತದೆ. ಇವರು ಒಬ್ಬ ಸಾಹಿತಿಗಳು ಎಂದು ಗೊತ್ತಾದಾಗ ಅಲ್ಲಿಯ ನಾಟಕಾಸಕ್ತಿಯುಳ್ಳ ಜನರು ನಾಟಕವನ್ನು ಬರೆದುಕೊಡುವುದಕ್ಕೆ ಒತ್ತಾಯಿಸುತ್ತಿದ್ದರಂತೆ.

ಅವರ ಕೋರಿಕೆಯಂತೆ ಇವರು ಬರೆದ ‘ಕುಟುಂಬ’ ಸಾಮಾಜಿಕ ನಾಟಕವನ್ನು ಶ್ರೀ ಅಮೃತೇಶ್ವರ ನಾಟ್ಯ ಸಂಘದವರು, ‘ಮಂಗಲಾಕ್ಷತೆ’ ಎಂಬ ಸಾಮಾಜಿಕ ನಾಟಕವನ್ನು ಪತ್ರೇಶ್ವರ ಕೈಲಾಸ ಮಂದಿರದ ಕಲಾವಿದರು ಹಲವಾರು ಪ್ರಯೋಗಗಳನ್ನು ಮಾಡಿದಾಗ, ಇವರೊಬ್ಬ ಉತ್ತಮ ನಾಟಕಕಾರರು ಎಂದು ಹೆಸರು ಗಳಿಸಿಕೊಟ್ಟವು. ಇವರ ಜನಪ್ರಿಯತೆಯನ್ನು ಗಮನಿಸಿದ ಗೆಳೆಯ ಬಸಯ್ಯ ರಾಟೀಮನಿ ಅವರು ನಮಗೂ ಒಂದು ನಾಟಕವನ್ನು ಬರೆದುಕೊಡಿ. ಅದನ್ನು ನಮ್ಮೂರಿನಲ್ಲಿ (ಸಾಸ್ವಿಹಳ್ಳಿ) ಆಡುತ್ತೇವೆ ಎಂದು ಕೇಳಿಕೊಂಡರು. ಅವರ ಕೋರಿಕೆಯಂತೆ ‘ಮಿತ್ರದ್ರೋಹ’ ಎಂಬ ಸಾಮಾಜಿಕ ನಾಟಕವನ್ನು ಬರೆದುಕೊಟ್ಟರು. ಅದನ್ನು ಅವರ ಹುಟ್ಟೂರಾದ ಸಾಸ್ವಿಹಳ್ಳಿಯಲ್ಲಿ ಪ್ರಯೋಗಿಸಿದರು. ಈ ನಾಟಕಗಳ ಕಲಾವಿದರು ಅವುಗಳನ್ನು ಯಶಸ್ವಿಯಾಗಿ ಪ್ರಯೋಗಗೊಳಿಸಿರುವುದಲ್ಲದೆ, ನಾಟಕಗಳು ಮುದ್ರಣಗೊಳ್ಳುವುದಕ್ಕೂ ಕಾರಣ ಕರ್ತೃಗಳಾದರು. ಶಾಲಾ ಶಿಕ್ಷಕ ಬಳಗದವರು ನೀವು ಏಕಾಂಕ ನಾಟಕಗಳನ್ನು ಬರೆಯಿರಿ. ನಮ್ಮ ಶಾಲೆಯ ವಾರ್ಷಿಕೋತ್ಸವಗಳಲ್ಲಿ ಮಕ್ಕಳಿಂದ ಆಡಿಸುತ್ತೇವೆ ಎಂದು ಒತ್ತಾಯಿಸುತ್ತಿದ್ದರು. ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ರಚಿಸಿದ ‘ವಿಜಯಲಕ್ಷ್ಮಿ’ ಎಂಬ ನಾಟಕವನ್ನು ಕನ್ನಡ ಗಂಡುಮಕ್ಕಳ  ಶಾಲೆಯವರು, ‘ಝಾನ್ಸಿರಾಣಿ’ ಎಂಬ ನಾಟಕವನ್ನು ಕನ್ನಡ ಹೆಣ್ಣುಮಕ್ಕಳ ಶಾಲೆಯ ಗುರುಮಾತೆಯರು ಮಕ್ಕಳಿಂದ ಪ್ರಯೋಗ ಮಾಡಿಸಿ, ಇವರ ಕೀರ್ತಿ ಹೆಚ್ಚಲು ಕಾರಣರಾದರು. ಈ ಏಕಾಂಕ ನಾಟಕಗಳು, ಪ್ರಕಟವಾಗುವುದಕ್ಕೆ ಮೊದಲೇ ನಾಯ್ಕರ್‌ ಅವರೇ ‘ಗದ್ಯಗೀತೆ’ಯಲ್ಲಿ ಬರೆದ ‘ಭಕ್ತಜ್ಯೋತಿ’ ಎಂಬ ಏಕಾಂಕ ನಾಟಕವನ್ನು ಗೆಳೆಯರ ಒತ್ತಾಯಕ್ಕೆ ಮಣಿದು ಮುದ್ರಣಕ್ಕೆ ಕೊಡುತ್ತಾರೆ. ಆ ಸಂದರ್ಭದಲ್ಲಿಯೇ ಈ ಕೃತಿಯ ಸಾಹಿತ್ಯದ ಹೆಣಿಗೆಯನ್ನು ಕಂಡು ಮೆಚ್ಚಿಕೊಂಡ ಖ್ಯಾತ ಸಾಹಿತಿ ಎಂ. ಜೀವನ್‌ ಅವರ ಪರಿಚಯವಾಗುತ್ತದೆ. ಜೀವನ್‌ ಅವರೇ ಇವರು ಬರೆದ ‘ಸತ್ವ ಪರೀಕ್ಷೆ’ ಎಂಬ ನಾಟಕಕ್ಕೆ ಮುನ್ನುಡಿಯನ್ನು ಬರೆಯುತ್ತ ಅವರೇನು ಬರೆಯುತ್ತಾರೆ ಕನ್ನಡ ಶಾಲೆಯ ಮಾಸ್ತರರು ಎಂದು ಮೂಗು ಮುರಿಯುವವರು ಅವರು ಬರೆದ ‘ಭಕ್ತ ಜ್ಯೋತಿ’ ನಾಟಕವನ್ನು ಓದಲಿ ಅಂದರೆ ನಾಯ್ಕರ್‌ ಅವರ ಸಾಹಿತ್ಯದ ಆಳದ ತಿಳಿಯುತ್ತದೆ ಎಂದು ಇವರ ಸಾಹಿತ್ಯದ ಸತ್ವವನ್ನು ಗುರುತಿಸುತ್ತಾರೆ. ಈ ಮಧ್ಯ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದ ಆರ್‌. ಸಿ. ಹಿರೇಮಠರ ಪರಿಚಯವಾಗುತ್ತದೆ. ನಾಯ್ಕರ್‌ ಅವರ ಪ್ರಥಮ ಕವನ ಸಂಕಲನ ‘ಚಂದ್ರೋದಯ’ಕ್ಕೆ ಡಾ. ಆರ್‌. ಸಿ. ಹಿರೇಮಠ ಅವರೇ ಮುನ್ನುಡಿ ರೂಪದ ಮೆಚ್ಚುಗೆಯ ಮಾತುಗಳನ್ನು ಬರೆದು ಶುಭ ಹಾರೈಸಿರುವುದು ಇವರ ವಿಶೇಷವೆಂದೇ ಹೇಳಬೇಕು. ಇದೇ ಅವಧಿಯಲ್ಲಿ ಇವರಿಗೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಶಾಲೆಗೆ ವರ್ಗವಾಗುತ್ತದೆ. ಸರಳ ಸ್ವಭಾವದವರು ಸಾಹಿತಿಗಳು ಆದ ನಾಯ್ಕರ್‌ ಅವರು ಆ ಊರಿನಲ್ಲಿಯೂ ಎಲ್ಲರಿಗೂ ಬೇಕಾದ ವ್ಯಕ್ತಿಯಾಗುತ್ತಾರೆ. ತಿರ್ಲಾಪುರ ಗ್ರಾಮದವರೆ ಕಟ್ಟಿದ ಮಲ್ಲಿಕಾರ್ಜುನ ನಾಟಕ ಕಂಪನಿಗೆ ‘ಜೀವನಗಂಗಾ’ ಮತ್ತು ‘ಅಕ್ಷತಾಯೋಗ’ ಎಂಬ ಎರಡು ಸಾಮಾಜಿಕ ನಾಟಕಗಳನ್ನು ಬರೆದುಕೊಡುತ್ತಾರೆ. ಮಲ್ಲಿಕಾರ್ಜುನ ನಾಟಕ ಕಂಪನಿಯ ಮೂಲಕ ಆ ಭಾಗದ ವಿವಿಧ ಪಟ್ಟಣಗಳಲ್ಲಿ ಇವರ ನಾಟಕಗಳು ಪ್ರಯೋಗಗೊಂಡು ಇವರೊಬ್ಬ ಶ್ರೇಷ್ಠ ವೃತ್ತಿ ನಾಟಕ ರಚನಾಕಾರರು ಎಂಬ ಹೆಸರನ್ನು ಗಳಿಸಿಕೊಟ್ಟಿತು. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಶ್ರೇಷ್ಠ ನಾಟಕಕಾರರೆಂದು ಪ್ರಸಿದ್ಧರಾಗಿದ್ದ ಹೆಚ್. ಎನ್‌. ಹೂಗಾರ, ಬಾಬುಮಾಂಡ್ರೆ, ಸಾಳುಂಕೆ, ದುತ್ತರಗಿ ಮತ್ತು ಪೂಜ್ಯ ನಲವಡಿ ಶ್ರೀಕಂಠಶಾಸ್ತ್ರಿಗಳ ಪರಿಚಯವಾಗಲೂ ಕಾರಣವಾಯಿತು. ಮುಂದೆ ತಮ್ಮ ಮಕ್ಕಳ ಶಿಕ್ಷಣಕ್ಕೋಸ್ಕರವಾಗಿ ಹುಬ್ಬಳ್ಳಿಗೆ ವರ್ಗ ಮಾಡಿಸಿಕೊಂಡು ಧಾರವಾಡದಲ್ಲಿ ಮನೆಯನ್ನು ಮಾಡುತ್ತಾರೆ. ಧಾರವಾಡದ ಸಾಹಿತ್ಯಕ ಪರಿಸರದಲ್ಲಿ ಶಿಕ್ಷಕರ ಸಾಹಿತ್ಯ ವೇದಿಕೆಯನ್ನು ಹುಟ್ಟು ಹಾಕಿಕೊಂಡು ಅದರ ಅಧ್ಯಕ್ಷರಾಗಿ ಶಿಕ್ಷಕ ಸಾಹಿತಿಗಳಾದ ಎಂ. ಡಿ. ಗೋಗೇರಿ, ರಾಮಚಂದ್ರ ಪಾಟೀಲ, ನಿಂಗಣ್ಣ ಕುಂಟಿ, ಸುದರ್ಶನ ದೇಸಾಯಿ ಮುಂತಾದ ಗೆಳೆಯರ ಸಹಾಯದಿಂದ ವೇದಿಕೆಯಿಂದ ಹಲವಾರು ಕೃತಿಗಳನ್ನು ಪ್ರಕಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಹೀಗೆ ಶಾಲಾ ಶಿಕ್ಷಕರಾಗಿ ರಚಿಸಿದ್ದಾರೆ. ಇವರ ಸಮಗ್ರ ಸಾಹಿತ್ಯವನ್ನು ೧. ಕಾವ್ಯ ೨. ಸಣ್ಣ ಕತೆ ೩. ನಾಟಕ ೪. ಕಾದಂಬರಿ ಮತ್ತು ೫. ಇತರ ಕೃತಿಗಳೆಂದು ವಿಂಗಡಿಸಿಕೊಂಡು ಅವುಗಳ ಸಂಕಿಪ್ತ ಪರಿಚಯವನ್ನು ಇಲ್ಲಿ ಮಾಡಲಾಗಿದೆ.

ಕಾವ್ಯ

ಸ್ವಾತಂತ್ರ್ಯ ಪೂರ್ವಕಾಲದ ಸ್ವಾತಂತ್ರ್ಯೋತ್ತರ ಒಂದೂವರೆ ದಶಕದ ಕಾಲವನ್ನು ನವೋದಯ ಸಾಹಿತ್ಯದ ಸತ್ವ ಪೂರ್ಣವಾದ ಘಟ್ಟವೆಂದು ಕರೆಯಬಹುದು. ನಿಸರ್ಗ-ರಮ್ಯತೆ, ಪ್ರೇಮ-ಪ್ರೀತಿ, ಸಾಮಾಜಿಕ ಚಿಂತನೆ, ಆಧ್ಯಾತ್ಮಿಕತೆ ಮತ್ತು ನಾಡುನುಡಿ, ದೇಶಪ್ರೇಮಗಳಂತಹ ಆದರ್ಶ ಮೌಲ್ಯಗಳಿಂದ ಕೂಡಿದ ಕನ್ನಡ ನವೋದಯ ಕಾವ್ಯ ಆ ಕಾಲದ ಕನ್ನಡಿಗರ ಮೇಲೆ ಬಹುವಾದ ಪ್ರಭಾವವನ್ನು ಬೀರಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿಯೇ (೧೯೫೦) ಬರವಣಿಗೆಗೆ ತೊಡಗಿರುವ ಬ. ಪ. ನಾಯ್ಕರ್‌ ಅವರ ಮೇಲೆ ನವೋದಯ ಸಾಹಿತ್ಯದ ಪ್ರಭಾವ ಆಗಿರುವುದನ್ನು ಸಹಜವಾಗಿಯೇ ಗುರುತಿಸಬಹುದಾಗಿದೆ. ನವೋದಯದ ಶ್ರೇಷ್ಠ ಕವಿಗಳಾದ ಕೆ. ವಿ. ಪುಟ್ಟಪ್ಪ, ಅಂಬಿಕಾತನಯದತ್ತ, ಮಧುರಚೆನ್ನ, ಆನಂದಕಂದ, ಕೆ. ಎಸ್‌. ನರಸಿಂಹಸ್ವಾಮಿ ಮುಂತಾದವರ ಕವಿತೆಗಳನ್ನು ಪ್ರೀತಿಯಿಂದ ಓದಿಕೊಂಡು ಅದರಿಂದ ಸ್ಫೂರ್ತಿಯನ್ನು ಪಡೆದುಕೊಂಡು ಅದೇ ಮಾದರಿಗಳಲ್ಲಿ  ತಾವು ಕವಿತೆಗಳನ್ನು ಬರೆದು ನಾಡಿನ ಬೇರೆ ಬೇರೆ ಪತ್ರಿಕೆಗಳಿಗೆ ಕಳುಹಿಸುತ್ತಿದ್ದರಂತೆ. ಅವು ಪತ್ರಿಕೆಗಳಲ್ಲಿ ಮುದ್ರಣಗೊಂಡಾಗ ಸಂತೋಷಗೊಂಡು ಬರೆಯುತ್ತ ಹೋದೆ ಎಂದು ನಾಯ್ಕರ್‌ ಅವರೇ ಹೇಳಿಕೊಳ್ಳುತ್ತಾರೆ. ಬ. ಪ. ನಾಯ್ಕರ್‌ ಅವರ ‘ಚಂದ್ರೋದಯ’ ಮತ್ತು ‘ಶಾಂತಿದೀಪ’ ಎಂಬ ಎರಡು ಕವನ ಸಂಕಲನಗಳನ್ನು ನಲವತ್ತು ವರ್ಷಗಳ ಹಿಂದೆಯೇ ಬರೆದು ಪ್ರಕಟಿಸಿದ್ದಾರೆ. ‘ಮಡಿಪು’, ‘ಹುಚ್ಚು ಹಾಡು’(ಪ್ರಣಯ ಗೀತೆಗಳು) ಮತ್ತು ‘ಕಿರಿಯರ ಕವನ’ ಎಂಬ ಮಕ್ಕಳ ಕವನ ಸಂಕಲನ ಹೀಗೆ ಇನ್ನೂ ಮೂರು ಕವನ ಸಂಕಲನಗಳು ಪ್ರಕಟಗೊಳ್ಳಬೇಕಾಗಿವೆ. ಪ್ರಕಟಗೊಂಡಿರುವ ಎರಡು ಸಂಕಲನಗಳಲ್ಲಿ ‘ಚಂದ್ರೋದಯ’ ಎಂಬ ಸಂಕಲನ ಮಾತ್ರ ಈಗ ಲಭ್ಯವಿದೆ. ‘ಶಾಂತಿದೀಪ’ ಎಂಬ ಸಂಕಲನವು ಈಗ ಲಭ್ಯವಿಲ್ಲ. ಇದರ ಪ್ರತಿಗಳೂ ನಾಯ್ಕರ್‌ ಅವರ ಹತ್ತಿರವೂ ಇಲ್ಲದಿರುವುದು ತುಂಬಾ ನಿರಾಶೆಯನ್ನುಂಟು ಮಾಡಿದೆ. ಆದರೆ ದೊರಕಿರುವ ಒಂದು ಕವನ ಸಂಕಲನದ ಮೂಲಕವೇ ನಾಯ್ಕರ್‌ ಅವರ ಕಾವ್ಯದ ವಿಶೇಷತೆಯನ್ನು ನಾವು ಅರಿತುಕೊಳ್ಳಬಹುದಾಗಿದೆ.

‘ಚಂದ್ರೋದಯ’ ಇದು ಬ. ಪ. ನಾಯ್ಕರ್‌ ಅವರ ಪ್ರಥಮ ಕವನ ಸಂಕಲನ. ಇದು ಪ್ರಕಟಗೊಂಡದ್ದು ೧೯೬೯ರಲ್ಲಿ. ಈ ಸಂಕಲನದಲ್ಲಿ ಒಟ್ಟು ಮೂವತ್ತಂಟು ಕವಿತೆಗಳು ಇವೆ. ಈ ಕವಿತಾ ಸಂಕಲನದ ಮೇಲೆ ಕಣ್ಣಾಡಿಸಿದರೆ ನವೋದಯ ಸಾಹಿತ್ಯ ಪರಂಪರೆಯ ಲಕ್ಷಣಗಳನ್ನೊಳಗೊಂಡ ಹಲವಾರು ಉತ್ತಮ ಕವಿತೆಗಳು ಇಲ್ಲಿರುವುದು ಕಂಡುಬರುತ್ತದೆ. ಪ್ರಕೃತಿಯ ಸೌಂದರ್ಯವನ್ನು ಸುಂದರವಾಗಿ ಚಿತ್ರಿಸುವ ಕವಿತೆಗಳಿಗೆ ಇಲ್ಲಿಯ ದೀಪಾರಾಧನೆ, ಚಂದ್ರೋದಯ, ಮಧುಮಲ್ಲಿಗೆ, ಬಿಸಿಲ ದೇವನ ಮಗಳು, ಸಣ್ಣ ಚಿಟ್ಟಿಗೆ, ಮುಗ್ದೆ ಮುಂತಾದ ಕವನಗಳು ಉತ್ತಮ ಉದಾಹರಣೆಯಾಗಿವೆ. ಚಂದ್ರೋದಯ ಸಮಯದ ಚೆಲುವನ್ನು ಈ ಕವಿಯು ಎಷ್ಟೊಂದು ಉತ್ಸಾಹಪೂರ್ಣವಾದ ಪ್ರತೀಕಗಳೊಂದಿಗೆ ವರ್ಣಿಸುತ್ತಾನೆ ನೋಡಿ.

ನೀಲಿಯ ಗಗನದ ನವನಂದನದ
ಹೊಂಗನಸಿನ ಹೂವರಳುತಿದೆ
ಚೆಲ್ವಾಕಾರದ ಮುಕುಲದ ತೆರೆದಲಿ
ಕೆಂಗಿರಣಂಗಳ ತೂರುತಿದೆ!
ಬಾನಿನ ಬಯಕೆಯ ಹೆಣ್ಣದು ಮೆಲ್ಲಗೆ
ನೀಲಾಕಾಶಕೆ ಏರುತಿದೆ
ನನ್ನಿಯ ನಿರ್ಮಲ ಮನವನು ಬೆಳಗಿ
ಚಂದ್ರೋದಯವೀಗಾಗುತಿದೆ

ಎಂದು ಮುಂದುವರಿಯುತ್ತ ಈ ಕವಿತೆಯು ಚಂದ್ರೋದಯದ ಸಮಯದ ಚಿತ್ರಣವನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಡುತ್ತದೆ. ಹಸುರುಬಳ್ಳಿಯಲ್ಲಿ ಅರಳಿರುವ ಮಲ್ಲಿಗೆಯ ಹೂವು ಕವಿಯ ಮನಸ್ಸನ್ನು ಆಕರ್ಷಿಸಿದೆ. ಅದರ ಸೌಂದರ್ಯ –ಸೂಕ್ಷ್ಮತೆಗಳನ್ನು ‘ಮಧುಮಲ್ಲಿಗೆ’ ಎಂಬ ಕವಿತೆಯ ಕೆಳಗಿನ ಸಾಲುಗಳು ಎಷ್ಟು ಸುಂದರವಾಗಿ ಚಿತ್ರಿಸುತ್ತದೆ

ಹಸುರಿನಲಿ ಹಾಯಾಗಿ ಗಾಳಿಯಲಿ ತಲೆದೂಗಿ
ಸಂತಸದ ಸ್ಮಿತವದನೆ ಮದುರ ಹೂವೆ
ಹಸಿದಿರುವ ಚಿಟ್ಟೆಗಳ ಬಳಲಿರುವ ಭೃಂಗಗಳ
ಸಂತೈಸಿ ಕರೆಯುತಿಹ ಚಂದಿರನ ಕುರುಹೆ

ಹೀಗೆ ಹಸುರಿನ ಬಳ್ಳಿಯಲ್ಲಿ ಸ್ಮಿತವದನೆಯಾಗಿ ನಗುತ ನಿಂತಿರುವ ಹೂವಿಗೆ ‘ನವುರಾದ ಪಕಳೆಯಲಿ ಇಜಿಜೇನಿನಾ ಗಿಂಡಿಯನ್ನು ತುಂಬಿಕೊಂಡು ಯಾರೆದೆಯ ತಣಿಸಲ್ಕೆ ನಿಂತಿರುವೆ’ ಎಂದು ಕೇಳುತ್ತಾನೆ.

ಹೀಗೆ ಪ್ರಕೃತಿಯ ಸುಂದರ ಚಿತ್ರಣಗಳು, ಇಲ್ಲಿ ಇರುವಂತೆ ಉತ್ತಮವಾದ ಪ್ರೇಮಗೀತೆಗಳು ಈ ಸಂಕಲನದಲ್ಲಿ ಸೇರಿಕೊಂಡಿವೆ. ಅದರಲ್ಲಿಯೂ ‘ನಾನು-ನೀನು’ ಎಂಬ ಪ್ರೇಮಗೀತೆಯು ಶ್ರೇಷ್ಠವಾದ ಭಾವಗೀತೆಯಾಗಿದೆ.

ನಾನು-ನನ್ನ ಮನೆಯ ಮುಂದೆ
ನೀನು ನಿನ್ನ ತೋಟದಿ
ನನ್ನ ನಿನ್ನ ಎದೆಗಳೆರಡು
ಸಾನುರಾಗಬೇಟದಿ
ನಿನ್ನ ಪ್ರೇಮದೋಲೆಗಳನು
ತಂಪುಗಾಳಿತರುವುದು
ನಿನ್ನ ತೋಟದಿನಿಯ ಹೂವ
ಕಂಪು ತಂದು ಸುರಿವುದು

ಎಂದು ಮುಂದುವರಿಯುವ  ಈ ಕವಿತೆಯ ಎರಡು ಒಲಿದ ಜೀವಗಳು ಒಂದುಗೂಡಿ ಸಾರ್ಥಕತೆಯನ್ನು ಪಡೆಯುವ ರೀತಿಯನ್ನು ಸಮರ್ಥವಾಗಿ ನಿರೂಪಿಸುತ್ತದೆ. ಈ ಕವಿತೆಯಲ್ಲಿಯ ಮೂರು ಮಾತ್ರಾಲಯ ಹಾಗೂ ಪ್ರಾಸಗಳು ಸಹಜವಾಗಿ ಬಂದು ಇದರ ಮೌಲ್ಯವನ್ನು ಹೆಚ್ಚಿಸಿವೆ.

ಈ ಕವಿಯ ನಾಡು ನುಡಿಯ ಪ್ರೇಮವಂತೂ ಮೆಚ್ಚುವಂಥದ್ದಾಗಿದೆ. ಹರಿದು ಹಂಚಿಹೋಗಿದ್ದ ಕನ್ನಡನಾಡು ಮತ್ತೆ ಒಂದು ಗೂಡಿದ ಸಂಭ್ರಮದಲ್ಲಿ “ಬನ್ನಿ ಬನ್ನಿ ಕನ್ನಡ ಯುವಕರೆ ಒಂದುಗೂಡಿ ಬಾಳುವಾ! ನನ್ನಿಯಿಂದ ಕನ್ನಡಾಂಬೆಯ ಶಾಂತಿಗೀತೆಯ ಹೇಳುವಾ!” ಎಂದು ಕನ್ನಡಾಂಬೆಯ ಸೇವೆಗಾಗಿ ನಾಡಿನ ಯುವಕರನ್ನು ಆಹ್ವಾನಿಸುತ್ತಾರೆ. ಸತ್ಯ-ಶಾಂತಿ-ತ್ಯಾಗ-ಅಹಿಂಸೆಗಳೆಂಬ ಮೌಲ್ಯಗಳನ್ನು ಭಾರತೀಯರ ಹೃದಯದಲ್ಲಿ ಬಿತ್ತಿ, ಈ ಮೌಲ್ಯಗಳನ್ನೇ ಬ್ರಿಟಿಷರ ವಿರುದ್ಧ ಹೋರಾಡುವ ಅಸ್ತ್ರಗಳನ್ನಾಗಿ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಗಾಂಧೀಜಿ. ಆದರೆ ಅವರು ಮಡಿದ ಕೆಲವೇ ವರ್ಷಗಳಲ್ಲಿ ಅವರ ತತ್ವ ಆದರ್ಶಗಳು ಈ ದೇಶದಲ್ಲಿ ಕಣ್ಮರೆಯಾಗಿರುವುದನ್ನು ಕಂಡು ಕವಿಯ ಹೃದಯ ನೊಂದಿರುವುದನ್ನು ‘ನಿನ್ನದೇ ನಿರೀಕ್ಷೆ’ ಎಂಬ ಕವಿತೆಯು ನಿರೂಪಿಸುತ್ತದೆ. ಇವುಗಳ ಜೊತೆಗೆ ಸಾಮಾಜಿಕ ಚಿಂತನೆಯನ್ನು, ಆಧ್ಯಾತ್ಮಿಕ ಅನುಭವವನ್ನು ಸುಂದರವಾಗಿ ನಿರೂಪಿಸುವ ಅನೇಕ ಉತ್ತಮವಾದ (ಬಡವರ್‌-ದೇವರ ಮಕ್ಕಳು, ನಿನ್ನನುಳಿದವರಾರವರು ಮುಂತಾದ) ಕವಿತೆಗಳು ಈ ಸಂಕಲನದಲ್ಲಿದೆ. ಇವುಗಳ ವಿಸ್ತೃತವಾದ ವಿವರಣೆಗೆ ಇಲ್ಲಿ ಅವಕಾಶವಿಲ್ಲದುದರಿಂದ ಇಲ್ಲಿಗೆ ನಿಲ್ಲಿಸುತ್ತೇವೆ. ಒಟ್ಟಿನಲ್ಲಿ ಬ. ಪ. ನಾಯ್ಕರ್‌ ಅವರು ಒಬ್ಬ ಉತ್ತಮ ಕವಿಯೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ಕವಿತೆಯ ಎಲ್ಲ ಲಕ್ಷಣಗಳು ಇವರ ಹಲವಾರು ಕವಿತೆಗಳಲ್ಲಿ ಗೋಚರಿಸುತ್ತವೆ. ಅವರ ಕಾವ್ಯ ಶಕ್ತಿ ಹೇಗೆ ಉತ್ಸಾಹದಿಂದ ಚಿಮ್ಮಿದೆ ಎಂಬುದನ್ನು ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಡಾ. ಆರ್‌. ಸಿ. ಹಿರೇಮಠ ಅವರು ಚೆನ್ನಾಗಿಯೇ ಗುರುತಿಸಿರುವುದನ್ನು ಇಲ್ಲಿ ಗಮನಿಸಬಹುದು.

ಸಣ್ಣ ಕಥೆ

ಬ.ಪ. ನಾಯ್ಕರ್‌ ಅವರು ಕವಿತೆ, ನಾಟಕ, ಕಾದಂಬರಿಗಳಂತೆ ಸಣ್ಣ ಕಥೆಗಳನ್ನೂ ಬರೆದಿದ್ದಾರೆ. ಸಣ್ಣ ಕಥೆಗಳನ್ನು ಬರೆಯುವುದಕ್ಕೆ ಒದಗಿಬಂದ ಪ್ರೇರಣೆಯನ್ನು ಅವರೇ ಒಂದು ಕಡೆ ಹೀಗೆ ಹೇಳಿಕೊಂಡಿದ್ದಾರೆ. ಆಗಾಗ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸುವಂತ  ಒಂದು ಸಲ ‘ಯಾರತಪ್ಪು’ ಎಂಬ ಕಥೆಯನ್ನು ಬರೆದು ಬೆಟಗೇರಿ ಕೃಷ್ಣಶರ್ಮರವರು ಹೊರಡಿಸುತ್ತಿದ್ದ ‘ಜಯಂತಿ’ ಪತ್ರಿಕೆಗೆ ಕಳುಹಿಸಿದರಂತೆ. ಆ ಕಥೆಯು ಜಯಂತಿಯಲ್ಲಿ ಪ್ರಕಟವಾಗುವುದರ ಜೊತೆಗೆ ಮಾನ್ಯ ಬೆಟಗೇರಿ ಕೃಷ್ಣಶರ್ಮ ಅವರು “ಬರೆಯಿರಿ ನಿಮ್ಮಲ್ಲಿ ಸಾಹಿತ್ಯ ರಚನೆಯ ಕಳೆಯಿದೆ” ಎಂದು ಪ್ರೋತ್ಸಾಹಿಸುತ್ತಾರೆ. ಆ ಹಿರಿಯರ ಮಾತುಗಳಿಂದ ಸ್ಫೂರ್ತಿಗೊಂಡು ಆಗಾಗ ಕಥೆಗಳನ್ನು ಬರೆದು ನಾಡಿನ ಬೇರೆ ಬೇರೆ ಪತ್ರಿಕೆಗಳಿಗೆ ಕಳುಹಿಸುತ್ತಾರೆ. ಹೀಗೆ ಪ್ರಕಟಗೊಂಡಿರುವ ಕಥೆಗಳನ್ನು ಒಟ್ಟುಗೂಡಿಸಿ ‘ಆ ರಾತ್ರಿ’ ಎಂಬ ಹೆಸರಿನ ಕಥಾ ಸಂಕಲನವನ್ನು (೧೯೯೧) ಪ್ರಕಟಿಸಿದ್ದಾರೆ. ಇದು ನಾಯ್ಕರ್‌ ಅವರು ಬರೆದು ಪ್ರಕಟಿಸಿದ ಏಕಮಾತ್ರ ಕಥಾ ಸಂಕಲನವಾಗಿದೆ.

ಪ್ರಸ್ತುತ ಕಥಾ ಸಂಕಲನದಲ್ಲಿ ಒಟ್ಟು ಹದಿನೇಳು ಚಿಕ್ಕ ಚಿಕ್ಕ ಕಥೆಗಳು ಇವೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಬಡತನ, ನಿರುದ್ಯೋಗ, ಸಂಪ್ರದಾಯ, ಜಾತೀಯತೆ, ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯ-ಅತ್ಯಾಚಾರ, ವಿಶ್ವಾಸ ದ್ರೋಹಗಳಂಥ ವಿಷಯಗಳೇ ಇಲ್ಲಿಯ ಕಥೆಗಳಿಗೆ ವಸ್ತುವಾಗಿರುವುದು ಕಂಡುಬರುತ್ತದೆ. ಆದರೆ ಇಲ್ಲಿಯ ಕೆಲವು ಕಥೆಗಳಲ್ಲಿಯ ಪಾತ್ರಗಳು ಆಧುನಿಕ ವಿದ್ಯಾವಂತರಾಗಿದ್ದರೂ ಕೂಡ ಬಡತನ-ಜಾತೀಯತೆ ಸಂಪ್ರದಾಯಗಳಿಂದ ಉಂಟಾದ ಸಮಸ್ಯೆಗಳನ್ನು ಎದುರಿಸಿ ಗೆಲ್ಲಲಾರದೆ ಸಾವಿನ ಕಡೆಗೆ ಮುಖ ಮಾಡುತ್ತವೆ. ಇದು ಈ ಕಥೆಗಳಲ್ಲಿಯ ವೈಚಾರಿಕತೆಯ ಅಭಾವವೆಂದೇ ಹೇಳಬೇಕಾಗುತ್ತದೆ. ಈ ಮಾತಿಗೆ ಉತ್ತಮ ಉದಾಹರಣೆಗಳೆಂದರೆ ‘ಅನಂತದಲ್ಲಿ ಲೀನವಾದಳು’ ಕಥೆಯ ನಾಯಕ ವಿನಯ ಭೂಷಣ, ‘ಮೂರೊಂಬತ್ತು ತಿಂಗಳ ಬಸಿರು’ ಕಥೆಯ ನಾಯಕ ಅನಂತ ಮತ್ತು ‘ಆಹುತಿ’ ಕತೆಯ ನಾಯಕ ಸುರೇಶ.

‘ಅನಂತದಲ್ಲಿ ಲೀನವಾದಳು’ ಕಥೆಯ ನಾಯಕ ವಿನಯಭೂಷಣ ತುಂಬ ಪ್ರತಿಭಾವಂತ ವಿದ್ಯಾರ್ಥಿ. ಎಸ್‌.ಎಸ್‌.ಎಲ್‌.ಸಿ.ವರೆಗೆ ಈತನಿಗೆ ಮುಂದೆ ಓದಬೇಕೆಂಬ ಬಯಕೆ ಇದ್ದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮುಪ್ಪಿನ ತಂದೆ-ತಾಯಿ ಕಾರಣವಾಗಿ ಓದನ್ನು ನಿಲ್ಲಿಸಿ ಕೆಲಸ ಹುಡುಕಲು ಪ್ರಯತ್ನಿಸುತ್ತಾನೆ. ಇಂಥ ಸಂದರ್ಭದಲ್ಲಿ ವಿನಯಭೂಷಣನ ಮುಂದಿನ ಓದಿಗೆ ಸಹಾಯವನ್ನು ಮಾಡಿದವರು ಅದೇ ಊರಿನ ಆಗರ್ಭ ಶ್ರೀಮಂತ ಭೀಮರಾಯರು. ಅವರ ಸಹಾಯವನ್ನು ಪಡೆದು ಪಟ್ಟಣದ ಕಾಲೇಜೊಂದರಲ್ಲಿ ಸೇರಿಸಿ, ಮಿತವ್ಯಯದಿಂದ ಅತ್ಯಂತ ಶ್ರದ್ಧೆಯಿಂದ ಓದಿ ಬಿ.ಎ. ಪರೀಕ್ಷೆಯನ್ನು ಮುಗಿಸಿ ಊರಿಗೆ ಹಿಂದಿರುತ್ತಾನೆ. ಆಗಲೇ ವಯಸ್ಸಾದ ತಂದೆ ಶಾಮರಾಯರು ಮಗನ ಮದುವೆಯ ವಿಚಾರವನ್ನು ಮಾಡುತ್ತಾರೆ. ಅವನ ಓದಿಗೆ ಸಹಾಯವನ್ನು ಮಾಡಿದ ಶ್ರೀಮಂತ ಭೀಮರಾಯರ ಏಕಮಾತ್ರ ಪುತ್ರಿಯನ್ನು ತಂದುಕೊಂಡು ಮಗನ ಕಲ್ಯಾಣ ಮಾಡುವುದರ ಜೊತೆಗೆ ಓದಿಗೆ ಸಹಾಯ ಮಾಡಿದ ಭೀಮರಾಯರ ಉಪಕಾರವನ್ನು ತೀರಿಸಲು ಬಯಸುತ್ತಾನೆ. ಈ ನಿರ್ಧಾರದ ವಿಚಾರವನ್ನು ಮಗ ವಿನಯಭೂಷಣಿಗೆ ಹೇಳುತ್ತಾರೆ. ಆದರೆ ಮದುವೆಯ ಈ ವಿಚಾರ ವಿಜಯಭೂಷಣಿಗೆ ಸಮ್ಮತವಿಲ್ಲ. ಇದಕ್ಕೆ ಕಾರಣ ಹುಡುಗಿಯ ನಡತೆ ಸರಿಯಿಲ್ಲದ್ದು. ಮಗನ ಅಸಮ್ಮತಿಯನ್ನು ಲೆಕ್ಕಿಸದೇ ಶಾಮರಾಯರು ತಮಗೆ ಸಹಾಯವನ್ನು ಮಾಡಿದ ಮತ್ತು ಆ ರೀತಿ ವಚನ ಕೊಟ್ಟಂತೆ ಭೀಮರಾಯರ ಮಗಳೊಂದಿಗೆ ಮಗನ ವಿವಾಹಕ್ಕೆ ಸಕಲ ಸಿದ್ಧತೆಯನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ತಂದೆತಾಯಿಯವರ ಮುಖವನ್ನು ನೋಡಿದರೆ ಮತ್ತು ತನಗೆ ಸಹಾಯ ಮಾಡಿದವರ ಋಣವನ್ನು ತೀರಿಸುವುದಕ್ಕೆ ಮದುವೆಯನ್ನು ಆಗಬೇಕು. ಆದರೆ ಹುಡುಗಿಯ ನಡತೆಯ ಹಿನ್ನೆಲೆಯನ್ನು ನೋಡಿದರೆ ಈ ಮದುವೆಯನ್ನು ತಿರಸ್ಕರಿಸಬೇಕು. ಈ ಎರಡು ದ್ವಂದ್ವಗಳಲ್ಲಿ ಸಿಕ್ಕಿಹಾಕಿಕೊಂಡ ವಿನಯಭೂಷಣ ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳದೇ ಸಾವಿಗೆ ಶರಣಾಗುತ್ತಾನೆ. ಆದರೆ ನಾವು ಸಮಸ್ಯೆಗೆ ಉತ್ತರವಲ್ಲ. ಸಾಯುವುದರಿಂದ ಯಾರಿಗೆ ಉಪಯೋಗ? ಕಲಿಯಲು ಸಹಾಯ ಮಾಡಿದವರಿಗೆ ಏನಾದರೂ ಪ್ರಯೋಜನವಾಯಿತೆ? ಕೊನೆಗೆ ತಾನಾದರೂ ಏನು ಸಾಧಿಸಿದಂತೆ ಆಯಿತು? ಯಾರಿಗೂ ಪ್ರಯೋಜನವಿಲ್ಲ. ಹೀಗೆ ವಿಚಾರಿಸದೇ ಆತ್ಮಹತ್ಯೆಗೆ ಶರಣಾಗುವುದಕ್ಕಿಂತ ಕನ್ಯೆ ನಡತೆಗೆಟ್ಟವಳಾಗಿದ್ದರೂ ಪರವಾಗಿಲ್ಲ ಅವಳನ್ನು ಕೈಹಿಡಿದಿದ್ದರೆ ಚೆನ್ನಾಗಿರುತ್ತೇನೋ ಏನಿಸುತ್ತದೆ. ಇದರಿಂದ ಮುಪ್ಪಿನ ತಂದೆ-ತಾಯಿಯವರಿಗೂ ನೆಮ್ಮದಿ ಸಿಗುತ್ತಿತ್ತು. ಕಲಿಯಲೂ ಹಣದ ಸಹಾಯವನ್ನು ಒದಗಿಸಿದವರಿಗೂ ಪ್ರಯೋಜನವಾಗುತ್ತಿತ್ತು. ಸಾವಿನಿಂದ ಯಾರಿಗೆ ನೆಮ್ಮದಿ?.

‘ಆಹುತಿ’ ಕಥೆಯ ನಾಯಕ ಸುರೇಶನ ಪಾತ್ರ ಚಿತ್ರಣವು ಇದೇ ರೀತಿಯಲ್ಲಿ ನಿರೂಪಿತವಾಗಿದೆ. ಸುರೇಶ ಒಬ್ಬ ಆಗರ್ಭ ಶ್ರೀಮಂತ ವೈದ್ಯರ ಮಗ, ಕಾಲೇಜು ಕಲಿಯುತ್ತಿರುವ ಯುವಕ. ತನ್ನ ಮನೆಯಲ್ಲಿ ಕೆಲಸ ಮಾಡುತ್ತಿರುವ ಹದಿನಾರರ ಹರೆಯದ ಸುಂದರ ತರುಣಿಯನ್ನು ಪ್ರೀತಿಸುತ್ತಾನೆ. ಅವರ ಪ್ರೀತಿ ದಿನದಿಂದ ದಿನಕ್ಕೆ ಬೆಳೆದು ಗಾಢವಾಗಿ ಬೆಳೆದು ವಿವಾಹವಾಗಬೇಕು ಎನ್ನುತ್ತಿರುವಾಗಲೇ ಅವರ ಜಾತಿ ಅಂತಸ್ತುಗಳು ಕಾರಣವಾಗಿ ಸುರೇಶನ ತಂದೆ-ತಾಯಿಯರು ಈ ವಿವಾಹಕ್ಕೆ ಅಸಮ್ಮತಿಯನ್ನು ಸೂಚಿಸುತ್ತಾರೆ. ಆಗ ಅದನ್ನು ಎದುರಿಸಿ ಗೆಲ್ಲಲು ಆಗದ ಪ್ರೇಮಿಗಳು ಇಲ್ಲಿಯೂ ಸಾವಿಗೆ ಶರಣಾಗುತ್ತಾರೆ. ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಸಮಸ್ಯೆಗಳನ್ನು ಬಿಡಿಸಿಕೊಳ್ಳುವುದಕ್ಕೆ ದಾರಿಗಳು ಮತ್ತು ಆಯ್ಕೆಗಳು ಹಲವಾರು ಇದ್ದರೂ ಕೂಡ ಸಾವಿಗೆ ಶರಣಾಗುವುದು ತುಂಬಾ ಚೋದ್ಯವಾಗಿ ಕಾಣುತ್ತದೆ. ಇದೇನೇ ಇದ್ದರೂ ಕೂಡ ಈ ಸಂಕಲನದಲ್ಲಿಯ ಒಂದೊಂದು ಕಥೆಯೂ ವೈವಿಧ್ಯಮಯವಾಗಿ ಮೂಡಿ ಸಮಾಜದ ವಿವಿಧ ಸಮಸ್ಯೆಗಳ ಮೇಲೆ ‘ಕ್ಷಕಿರಣ’ ಬೀರುತ್ತವೆ ಎಂಬುದನ್ನು ಮರೆಯಬಾರದು.

ನಾಟಕ

ಒಂದು ಕಾಲವಿತ್ತು. ನಮ್ಮ ಹಳ್ಳಿಗಳ ಜನಜೀವನ (ಅಷ್ಟೇ ಏಕೆ ಪಟ್ಟಣಗಳ ಜೀವನ ಕೂಡ) ತುಂಬ ಪ್ರಶಾಂತವಾಗಿತ್ತು. ಇಂದಿನ ಆಧುನಿಕ ಮಾಧ್ಯಮಗಳಾದ ಸಿನೇಮಾ, ಟಿ.ವ್ಹಿ. ಇತ್ತೀಚೆಗೆ ವಿಷಾನಿಲದಂತೆ ವ್ಯಾಪಕವಾಗಿ ಹಬ್ಬುತ್ತಿರುವ ಮೊಬೈಲಗಳ ದಾಳಿ, ರಾಜಕೀಯದ ಹಾವಳಿ ಆಗಿರದೇ ಇದ್ದ ಕಾಲವದು. ನಮ್ಮ ಗ್ರಾಮೀಣ ಜನರು ತಮ್ಮ ಬದುಕಿನ ನಿರ್ವಹಣೆಗಾಗಿ ಎಲ್ಲರೂ ಒಟ್ಟಾಗಿ ಕಷ್ಟಪಟ್ಟು ದುಡಿಯುತ್ತಿದ್ದರು. ದುಡಿತದಿಂದ ಉಂಟಾದ ಆಯಾಸವನ್ನು ಪರಿಹರಿಸುವುದಕ್ಕೆ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಜಾತ್ರೆ ಉತ್ಸವಗಳಲ್ಲಿ ಬಯಲಾಟಗಳನ್ನು ನಾಟಕಗಳನ್ನು ಆಡುತ್ತಿದ್ದರು. ಬಯಲಾಟ ನಾಟಕಗಳು ಇಲ್ಲದೇ ಇರುವ ಜಾತ್ರೆಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಆಗಿನ ಕಾಲದಲ್ಲಿ ಶಾಲೆ-ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿಯೂ ಕನಿಷ್ಟ ಎರಡೂ ಮೂರು ನಾಟಕಗಳು ಇರಲೇಬೇಕು. ಆ ನಾಟಕಗಳನ್ನು ನೋಡುವುದಕ್ಕೆ  ಜನರು ಕಿಕ್ಕಿರಿದು ಸೇರುತ್ತಿದ್ದರು. ಅಂದರೆ ಆ ಕಾಲದ ಜನರನ್ನು ರಂಜಿಸುವ ಬಹುಮುಖ್ಯವಾದ ಮಾಧ್ಯಮವೆಂದರೆ ನಾಟಕವೇ ಆಗಿತ್ತು. ಇಂಥ ಪರಿಸರದಲ್ಲಿ ಹುಟ್ಟಿ ಬೆಳೆದ ಬ. ಪ. ನಾಯ್ಕರ್‌ ಅವರು ನಾಟಕದಿಂದ ಪ್ರಭಾವಿತರಾಗಿ, ನಾಟಕ ರಚನೆಗೆ ತೊಡಗಿರುವುದು ಸಹಜವೇ ಆಗಿದೆ. ಶಾಲಾ ಶಿಕ್ಷಕರಾಗಿ ಆಯ್ಕೆಗೊಂಡು ಹಾವೇರಿ ತಾಲೂಕಿನ ಕಬ್ಬೂರಿನ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಾವೇ ರಚಿಸಿದ ಪ್ರಾರ್ಥನಾ ಗೀತೆಯಲ್ಲಿ ಮಕ್ಕಳಿಗೆ ಕಲಿಸುತ್ತಿದ್ದರು. ಇದನ್ನು ಹೊರಗೆ ನಿಂತು ಆಲಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌. ಎಂ. ಲಕ್ಕಣ್ಣವರ ಅವರು ಈ ಗೀತೆಯ ರಚನಾಕಾರರು ನಾಯ್ಕರ ಅವರೇ ಎಂದು ತಿಳಿದು ನಿಮ್ಮಲ್ಲಿ ಸಾಹಿತ್ಯ ರಚನೆಯ ಶಕ್ತಿ ಇದೆ. ಒಂದು ನಾಟಕವನ್ನು ರಚಿಸಿರಿ, ಅದನ್ನು ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಆಡಿಸೋಣ ಎಂದು ಹುರಿದುಂಬಿಸುತ್ತಾರೆ. ಅವರ ಮಾತಿನಿಂದ ಸ್ಫೂರ್ತಿಗೊಂಡು ನಾಯ್ಕರ್‌ ಅವರು ‘ಪ್ರಾಣಾರ್ಪಣ’ ಎಂಬ ಐತಿಹಾಸಿಕ ನಾಟಕವನ್ನು ರಚಿಸುತ್ತಾರೆ. ಅದನ್ನು ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಲೆಯ ಮಕ್ಕಳಿಂದ ಪ್ರಯೋಗಿಸಿದಾಗ, ಜನರಿಂದ ಮೆಚ್ಚುಗೆಯ ಪ್ರತಿಕ್ರಿಯೆಯು ವ್ಯಕ್ತವಾಗುತ್ತದೆ. ಹೀಗೆ ಜನರಿಂದ ಮೆಚ್ಚುಗೆಯನ್ನು ಪಡೆದು ಸ್ಫೂರ್ತಿಗೊಂಡ ನಾಯ್ಕರ್‌ ಅವರು ಹಲವಾರು ಏಕಾಂಕ ನಾಟಕಗಳನ್ನು ಮತ್ತು ಮೂರಂಕಿನ ನಾಟಕಗಳನ್ನು ಬರೆಯುತ್ತಾರೆ. ಅವರ ಏಕಾಂಕ ನಾಟಕಗಳು ಶಾಲಾ ವಾರ್ಷಿಕೋತ್ಸವಗಳಲ್ಲಿ ಮಕ್ಕಳಿಂದ ಪ್ರಯೋಗಗೊಂಡರೆ, ಮೂರಂಕಿನ ನಾಟಕಗಳು ಜಾತ್ರೆ-ಉತ್ಸವಗಳಂತಹ ಸಂದರ್ಭದಲ್ಲಿ ಬೇರೆ ಬೇರೆ ಕಲಾ ತಂಡಗಳಿಂದ ನಾಟಕ ಕಂಪನಿಗಳವರಿಂದ ಪ್ರಯೋಗಗೊಂಡು ಇವರಿಗೆ ಜನಪ್ರಿಯತೆಯನ್ನು ತಂದು ಕೊಡುತ್ತವೆ.

ಏಕಾಂಕ ನಾಟಕಗಳು

ನಾಯ್ಕರ್‌ ಅವರು ‘ಭಕ್ತಜ್ಯೋತಿ’, ‘ಸತ್ವ ಪರೀಕ್ಷೆ’, ‘ಸಾವಿತ್ರಿ’, ‘ಗಿರಿಜಾ ಕಲ್ಯಾಣ’ ಮತ್ತು ‘ವಿಜಯಶ್ರೀ’ ಎಂಬ ಐದು ಏಕಾಂಕ ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಮೊದಲಿನ ನಾಲ್ಕು ನಾಟಕಗಳು ನಮ್ಮ ಪುರಾಣಗಳಲ್ಲಿಯ ಕಥೆಗಳನ್ನು ಆಧರಿಸಿ ರಚನೆಗೊಂಡಿರುವ ಪೌರಾಣಿಕ ನಾಟಕಗಳಾದರೆ, ವಿಜಯಶ್ರೀ ಎಂಬುದು ಸಾಮಾಜಿಕ ವಸ್ತುವನ್ನು ಆಧರಿಸಿ ರಚನೆಗೊಂಡಿರುವಂಥದ್ದಾಗಿದೆ.

ನಮ್ಮ ಪುರಾಣದಲ್ಲಿ ಪ್ರಸಿದ್ಧನಾದ ‘ಧ್ರುವನು’ ಮಲತಾಯಿಯ ದ್ವೇಷ ಕಾರಣದಿಂದ ರಾಜ್ಯಭ್ರಷ್ಟನಾಗಿ, ಕಠಿಣವಾದ ತಪಸ್ಸಿನಿಂದ ಹರಿಯನ್ನು ಒಲಿಸಿಕೊಂಡು, ಆತನ ಕರುಣೆಯಿಂದ ಮರಳಿ ರಾಜ್ಯವನ್ನು ಪಡೆದುಕೊಂಡಿರುವುದನ್ನು ‘ಭಕ್ತಜ್ಯೋತಿ’ ನಾಟಕವು ಅತ್ಯಂತ ಸಮರ್ಥವಾಗಿ ನಿರೂಪಿಸುತ್ತದೆ. ಈ ನಾಟಕವನ್ನು ನಾಯ್ಕರ್‌ ಅವರು ಗದ್ಯಗೀತೆಯಲ್ಲಿ ರಚಿಸಿರುವುದು ವಿಶೇಷ. ಅರೆ ಆಯುಷ್ಯವನ್ನು ಪಡೆದಿರುವ ಸತ್ಯವಾಹನನನ್ನು ವಿವಾಹವಾದ ಸಾವಿತ್ರಿ ಅನನ್ಯ ದೈವ ಭಕ್ತಿ, ಪತಿನಿಷ್ಠೆಯಿಂದ ಯಮಧರ್ಮನನ್ನು ಸೋಲಿಸಿ ಮರಳಿ ಗಂಡನ ಪ್ರಾಣವನ್ನು ಪಡೆದಿರುವುದೇ ಸಾವಿತ್ರಿ ನಾಟಕದ ಕಥಾವಸ್ತು. ಹಿಮವಂತ ಮಹಾರಾಜನ ಮಗಳಾಗಿ ಜನಿಸಿದ ಗಿರಿಜೆಯು ಕೈಲಾಸ ಪರ್ವತದಲ್ಲಿ ತಪಸ್ಸಿಗೆ ಕುಳಿತ ಶಿವನನ್ನು ಭಕ್ತಿನಿಷ್ಠೆಯಿಂದ ಪೂಜಿಸಿ, ಛಲದಿಂದ ಕಠಿಣವಾದ ತಪಸ್ಸನ್ನು ಆಚರಿಸಿ, ಶಿವನನ್ನು ಒಲಿಸಿ ವರಿಸಿದ ಪ್ರಸಿದ್ಧ ವಿಷಯವೇ ‘ಗಿರಿಜಾ ಕಲ್ಯಾಣ’ ನಾಟಕದ ವಸ್ತುವಾಗಿದೆ. ಅದೇ ರೀತಿ ತನ್ನ ತವರು ಮನೆಯವರಿಂದ ಅನ್ಯಾಯಕ್ಕೆ ಒಳಗಾದರೂ ಕೂಡ ತವರು ಮನೆಯ ಕಲ್ಯಾಣವನ್ನು ಬಯಸಿದ ಆದರ್ಶ ಹೆಣ್ಣಿನ ಕಥೆಯನ್ನು ಆಧರಿಸಿ ರಚನೆಗೊಂಡಿರುವುದು ‘ವಿಜಯಶ್ರೀ’ ಎಂಬ ಸಾಮಾಜಿಕ ನಾಟಕ. ಇಂಥಹ ನಾಟಕ ರಚನೆಯ ಮೂಲಕ ಭಕ್ತಿ, ನಿಷ್ಠೆ, ತ್ಯಾಗ ತಪಸ್ಸುಗಳಂತಹ, ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಬಿತ್ತುವ ಪ್ರಯತ್ನವನ್ನು ನಾಯ್ಕರ್‌ ಅವರು ಮಾಡಿದ್ದಾರೆ.

ಮೂರಂಕಿನ ನಾಟಕಗಳು

ಬ.ಪ.ನಾಯ್ಕರ್‌ ಅವರು ‘ಮಿತ್ರದ್ರೋಹ’, ‘ಕುಟುಂಬ’, ‘ಮಂಗಲಾಕ್ಷತೆ’, ‘ಜೀವನ ಗಂಗಾ’, ‘ಅಕ್ಷತಾಯೋಗ’, ‘ಅಣ್ಣ ತಂದ ಹೆಣ್‌ಉ’, ‘ವಿಜಯಶ್ರೀ’, ‘ಸಕಲಗುಣ ಸಂಪನ್ನ’, ‘ಪ್ರಾಣಾರ್ಪಣ’ಗಳೆಂಬ ಒಟ್ಟು ಒಂಬತ್ತು ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಮೊದಲಿನ ಎಂಟು ನಾಟಕಗಳು, ವಿಶ್ವಾಸದ್ರೋಹ, ವಿವಾಹ, ಕೌಟುಂಬಿಕ ಕಲಹ, ವರದಕ್ಷಿಣೆಯಂತ ಸಾಮಾಜಿಕ ವಿಷಯವನ್ನು ಆಧರಿಸಿ ರಚನೆಗೊಂಡಿರುವ ಸಾಮಾಜಿಕ ನಾಟಕಗಳಾಗಿವೆ. ಕೊನೆಯ ‘ಪ್ರಾಣಾರ್ಪಣ’ ಎಂಬುದು ಅರುಣಗಡದ ಅರಸು ಮನೆತನದ ಕಥೆಯ ಹಿನ್ನೆಲೆಯಲ್ಲಿ ರಚನೆಗೊಂಡ ಐತಿಹಾಸಿಕ ನಾಟಕವಾಗಿದೆ. ಈ ನಾಟಕಗಳನ್ನು ಅಂದಿನ ನಾಟಕ ಆಸಕ್ತ ಕಲಾವಿದರ, ನಾಟಕ ಕಂಪನಿಗಳ ಒತ್ತಾಯಕ್ಕೆ ಮಣಿದು ರಚಿಸಿದ್ದಾರೆ. ಇವರು ರಚಿಸಿದ ನಾಟಕಗಳನ್ನು ಶ್ರೀ ಅಮೃತೇಶ್ವರ ನಾಟ್ಯ ಸಂಘದವರು (ಅಣ್ಣಿಗೇರಿ) ಶ್ರೀ ಪತ್ರೇಶ್ವರ ಕೈಲಾಸ ಮಂದಿರದ (ಅಣ್ಣಿಗೇರಿ)ಕಲಾವಿದರಿಂದ, ಮಲ್ಲಿಕಾರ್ಜುನ ನಾಟಕ ಕಂಪನಿ (ತಿರ್ಲಾಪುರ) ಗಳಿಂದ ಆ ಭಾಗದ ಅನೇಕ ಗ್ರಾಮ-ಪಟ್ಟಣಗಳಲ್ಲಿ ಪ್ರಯೋಗ ಮಾಡುತ್ತಾರೆ. ಹೀಗೆ ಆ ಕಾಲದ ಜನರ ಮೇಲೆ ದೊಡ್ಡ ಪ್ರಭಾವವನ್ನು ಬೀರಿದ ನಾಯ್ಕರ್‌ ಅವರ ನಾಟಕಗಳನ್ನು ಕುರಿತು ಗಂಭೀರವಾದ ವಿವೇಚನೆ ನಡೆಯದೇ ಇರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.

ಕಾದಂಬರಿ

ನಾಟಕದಂತೆ ಕಾದಂಬರಿ ರಚನೆಯು ನಾಯ್ಕರ್‌ ಅವರ ಆಸಕ್ತಿಯ ಮುಖ್ಯಕ್ಷೇತ್ರ. ತಮ್ಮ ಮಕ್ಕಳ ಶಿಕ್ಷಣದ ಸಲುವಾಗಿ ಹುಬ್ಬಳ್ಳಿಯ ಶಾಲೆಯ ಮುಖ್ಯಗುರುಗಳಾಗಿ ಬಂದು ಧಾರವಾಡದಲ್ಲಿ ಮನೆಯನ್ನು ಮಾಡುತ್ತಾರೆ. ಧಾರವಾಡದ ಸಾಹಿತ್ಯಿಕ ವಾತಾವರಣದಲ್ಲಿ  ಅವರ ಸಾಹಿತ್ಯ ರಚನೆಯ ಹರವು ವಿಸ್ತಾರವಾಗುತ್ತದೆ. ಧಾರವಾಡದ ಶ್ರೇಷ್ಠ ಶಿಕ್ಷಕ ಸಾಹಿತಿಗಳು ಆದ ಸುದರ್ಶನ ದೇಸಾಯಿ, ಎಂ. ಡಿ. ಗೋಗೇರಿ, ನಿಂಗಣ್ಣ ಕುಂಟಿ ಮುಂತಾದವರ ಸಹಕಾರದೊಂದಿಗೆ ಧಾರವಾಡ ಜಿಲ್ಲಾ ಶಿಕ್ಷಕ ಸಾಹಿತ್ಯ ವೇದಿಕೆಯನ್ನು ಹುಟ್ಟುಹಾಕಿಕೊಂಡು ಅದರ ಅಧ್ಯಕ್ಷರೂ ಆದರು. ಅದರ ಮೂಲಕ ಅನೇಕ ಶಿಕ್ಷಕ ಸಾಹಿತಿಗಳ ಕೃತಿಯನ್ನು ಪ್ರಕಟಿಸಿದರು. ಅದರ ಜೊತೆಗೆ ತಾವು ಕೂಡ ಕಾದಂಬರಿಯಂತಹ ಸಾಹಿತ್ಯ ಪ್ರಕಾರದಲ್ಲಿ ಕೃತಿಯನ್ನು ರಚಿಸಿ ಅದರಲ್ಲಿ ಯಶಸ್ವಿಯೂ ಆದರು. ನಾಯ್ಕರ್‌ ಅವರು ಈವರೆಗೆ ‘ಸೌಜನ್ಯ’, ‘ಸುಖ ಸಿಗದ ಸಾದ್ವಿ’, ‘ತವರು ಮನೆ’, ‘ಹೊಸ ಹುಟ್ಟು’, ‘ವ್ಯವಸ್ಥೆ’ ಮತ್ತು ‘ಹೂವಿನ ಹುತ್ತ’ಗಳೆಂಬ ಆರು ಕಾದಂಬರಿಗಳ್ನನು ಬರೆದಿದ್ದಾರೆ. ಇವುಗಳಲ್ಲಿ ಮೊದಲಿನ ಐದು ಕಾದಂಬರಿಗಳು ಸಾಮಾಜಿಕ ಕಾದಂಬರಿಗಳ ಗುಂಪಿಗೆ ಸೇರಿದರೆ ‘ಹೂವಿನ ಹುತ್ತ’ವೆಂಬುದು ಪತ್ತೇದಾರಿ ಕಾದಂಬರಿಯಾಗಿದೆ.

ಪವಿತ್ರ ಪ್ರೇಮಿಗಳಾದ ಗೌರಿ-ರಾಜೀವರ ಬಾಳು ಸಂಶಯದ ಉರುಳಿಗೆ ಸಿಕ್ಕು ಕೊಚ್ಚಿಕೊಂಡು ಹೋಗಿರುವ ಸಂಗತಿಯನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ‘ಸೌಜನ್ಯ’ ಕಾದಂಬರಿ. ತಾರುಣ್ಯದಲ್ಲಿಯೇ ಪತಿಯನ್ನು ಕಳೆದುಕೊಂಡು ತಮ್ಮ ಬಂಧು-ಬಾಂಧವರಿಂದ ತಿರಸ್ಕಾರಕ್ಕೆ ಒಳಗಾಗಿ ಪರಕೀಯರಿಂದ ಸಾಂತ್ವವನ್ನು ಪಡೆದರೂ ಕೂಡ ಈ ಬದುಕಿನಲ್ಲಿ ಸುಖವನ್ನೇ ಕಾಣದ ಸೇವಂತಿಯೆಂಬ ಹೆಣ್ಣು ಮಗಳು ಜೈನ ಸನ್ಯಾಸಿಗಳಂತೆ ಮರಣವನ್ನು ಬಯಸಿ ಜೀವನ ತ್ಯಾಗ ಮಾಡಿದ ಸಂಗತಿಯನ್ನು ಮನಮುಟ್ಟುವಂತೆ ತಿಳಿಸುವುದು ‘ಸುಖಸಿಗದ ಸಾದ್ವಿ’ ಕಾದಂಬರಿ. ಅದೇ ರೀತಿ ತವರು ಮನೆಯವರಿಂದ ತಿರಸ್ಕಾರಕ್ಕೆ ಒಳಗಾಗಿಯು, ಅವರಿಂದ ಅನೇಕ ಅಪಮಾನಗಳು ಉಂಟಾದರೂ ಕೂಡ ತವರು ಮನೆಗೆ ಕೆಡುಕನ್ನು ಬಯಸದೆ ಒಳಿತನ್ನೇ ಬಯಸುವ ಆದರ್ಶ ಹೆಣ್ಣಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ‘ತವರು ಮನೆ’ ಕಾದಂಬರಿ. ಒಟ್ಟಿನಲ್ಲಿ ತ್ಯಾಗ, ಕರುಣೆ, ನಿಷ್ಕಲ್ಮಶವಾದ ಪ್ರೀತಿಯಂಥ ಮೌಲ್ಯಗಳು ನಮ್ಮ ಸಮಾಜದಲ್ಲಿ ಕಡಿಮೆಯಾಗುತ್ತಿದ್ದಾಗಲೂ ಆ ಆದರ್ಶ ಮೌಲ್ಯಗಳನ್ನು ಪುನರ್‌ಸ್ಥಾಪಿಸುವ ಪ್ರಯತ್ನವನ್ನು ನಾಯ್ಕರ್‌ ಅವರ ಕಾದಂಬರಿಗಳು ಮಾಡುತ್ತವೆ ಎಂದು ಹೇಳಿದರೆ ತಪ್ಪಾಗಲಾರದು.

ಇತರ ಕೃತಿಗಳು

ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ನಾಟಕ, ಸಣ್ಣಕಥೆ, ನಾಟಕ, ಕಾದಂಬರಿಗಳನ್ನು ಬರೆದಿರುವ ನಾಯ್ಕರ್‌ ಅವರು ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದಂತೆ ‘ಹಾಲುಮತಸ್ಥರು’, ‘ನಾವು ನಮ್ಮವರು’ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳಲ್ಲಿ ಕುರುಬರ ಇತಿಹಾಸ, ಭಾರತದಲ್ಲಿ ಕುರುಬರ ವಿವಿಧ ಹೆಸರುಗಳು, ಕುರುಬರ ಬೆಡಗುಗಳು ಮತ್ತು ಕುರುಬರ ದೇವರುಗಳು, ಕುರುಬರ ಮಹಾಪುರುಷಗಳ ಜೊತೆಗೆ ಆಧುನಿಕ ಸಾಧಕರ ಸಾಹಿತಿಗಳ ಪರಿಚಯವನ್ನು ಈ ಕೃತಿಗಳಲ್ಲಿ ಮಾಡಿದ್ದಾರೆ. ಇವಲ್ಲದೇ ಶ್ರೇಷ್ಠ ಸಹಕಾರಿ ಬಂಧು ಸಾಸ್ವಿಹಳ್ಳಿ ಶಿವನಗೌಡರು ಮತ್ತು ಸಾಸ್ವಿಹಳ್ಳಿಯ ಶ್ರೀಬಸವಾನಂದರು ಎಂಬ ಹೆಸರಿನ ಎರಡು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ.

ಹೀಗೆ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ನಿರಂತರ ಆರು ದಶಕಗಳ ಕಾಲ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಉತ್ತಮವಾದ ಕೃತಿಗಳನ್ನು ರಚಿಸಿದ್ದರೂ ಕೂಡ ಕನ್ನಡ ವಿದ್ವತ್‌ಲೋಕ ಅವರ ಕೃತಿಗಳತ್ತ ಗಮನ ಹರಿಸದೇ ಇರುವುದು ಆಶ್ವರ್ಯವನ್ನುಂಟು ಮಾಡುತ್ತದೆ. ಸಾಹಿತ್ಯ ರಚನೆಯಂತೆ ಅನೇಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುವುದು ಇವರ ಆದರ್ಶ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಧಾರವಾಡ ಜಿಲ್ಲಾ ಶಿಕ್ಷಕ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ, ಅನೇಕ ಶಿಕ್ಷಕ ಸಾಹಿತಿಗಳ ಸಹಕಾರದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಜಾಪುರ ಶ್ರೇಷ್ಠ ಮಕ್ಕಳ ಸಾಹಿತಿ ಶಿಶು ಸಂಗಮೇಶ ಅವರ ಜೊತೆಗೂಡಿ ‘ಎರಡನೆಯ ಮಕ್ಕಳ ಸಾಹಿತ್ಯ’ ಸಮ್ಮೇಳನದ ಯಶಸ್ಸಿಗೆ ದುಡಿದಿರುವುದಲ್ಲದೇ ಈಶ್ವರ ಕಮ್ಮಾರ ಅವರ ಜೊತೆಗೂಡಿ ‘ಬಟ್ಟಲ ತುಂಬ ಬಾರಿ ಕಾಯಿ’ ಎಂಬ ಹೆಸರಿನ ಮಕ್ಕಳ ಕಾವ್ಯ ಗುಚ್ಚವನ್ನು ಪ್ರಕಟಿಸಿದ್ದಾರೆ. ಪತ್ತೇದಾರಿ ಕಾದಂಬರಿಕಾರ, ಸುದರ್ಶನ ದೇಸಾಯಿ ಅವರ ಸಂಕಲ್ಪದಂತೆ ಅಖಿಲ ಭಾರತ ಪ್ರಥಮ ಪತ್ತೇದಾರಿ ಸಾಹಿತ್ಯ ಸಮ್ಮೇಳನ ಸಂಘಟಿಸುವಲ್ಲಿ ಸುದರ್ಶನ ದೇಸಾಯಿಯವರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದು ಅದರ ಯಶಸ್ಸಿಗೆ ಕಾರಣರಾದವರಲ್ಲಿ ಬ. ಪ. ನಾಯ್ಕರ್‌ ಮತ್ತು ನಿಂಗಣ್ಣ ಕುಂಟಿ ಅವರು ಮುಖ್ಯರಾಗಿದ್ದಾರೆ. ಇವರಲ್ಲದೆ ‘ಮಕ್ಕಳ ಮನೆಯ’ ಅಧ್ಯಕ್ಷರಾಗಿ ದುಡಿದಿದ್ದಾರೆ. ಜಿಲ್ಲಾ ಶೈಕ್ಷಣಿಕ ವಿಚಾರ ಪುಸ್ತಕವನ್ನು ಹೊರತರುವಲ್ಲಿಯೂ ಇವರು ಸೇವೆಯನ್ನು ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಬ.ಪ. ನಾಯ್ಕರ್‌ ಅವರು ಶಿಕ್ಷಕರಾಗಿ ನಿಷ್ಠೆ-ಪ್ರಾಮಾಣಿಕತೆಯಿಂದ ಸೇವೆಯನ್ನು ಸಲ್ಲಿಸಿದ್ದಾರೆ. ಸಾಹಿತಿಯಾಗಿ ಹಲವಾರು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಹಲವಾರು ಸಂಘಟನೆಗಳಲ್ಲಿಯೂ ದುಡಿದಿರುವ ನಾಯ್ಕರ್‌ ಅವರ ಸೇವೆಗೆ ಸಿಗಬೇಕಾದ ಗೌರವಗಳು ಸಿಕ್ಕಿಲ್ಲವೆಂದು ನೋವಿನಿಂದ ಹೇಳಬೇಕಾಗುತ್ತದೆ. ಆದರೂ ನವಲಗುಂದ ತಾಲೂಕಾ ಸಾಹಿತ್ಯ ಸಮ್ಮೇಳನವು ಸಾಸ್ವಿಹಳ್ಳಿ ಗ್ರಾಮದಲ್ಲಿ ಜರುಗಿತ್ತು. ಈ ಸಮ್ಮೇಳನದ ಅಧ್ಯಕ್ಷತೆಯನ್ನು ನಾಡಿನ ಹಿರಿಯ ಕವಿಗಳಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ವಹಿಸಿದ್ದರು. ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಆ ಸಮ್ಮೇಳನದ ಉದ್ಘಾಟನೆ ಗೌರವವು ನಾಯ್ಕರ್‌ ಅವರಿಗೆ ಲಭಿಸಿತ್ತು. ಅದೇ ರೀತಿ ನವಲಗುಂದ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಉದ್ಘಾಟನೆಯ ಅವಕಾಶವು ಇವರಿಗೆ ದೊರಕಿತ್ತು. ಇದೇ ಸಮ್ಮೇಳನದಲ್ಲಿ ಗದುಗಿನ ತೋಂಟದಾರ್ಯ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೇಷ್ಠ ನಾಟಕಕಾರರೆಂದು ಬಿರುದನ್ನು ನೀಡಿ ಗೌರವಿಸಿದ್ದು ಇವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.

ಬ. ಪ. ನಾಯ್ಕರ್ ಅವರ ಕೃತಿಗಳು

ಕಾವ್ಯ ಸಂಕಲನ
೧.   ಚಂದ್ರೋದಯ (೧೯೬೮)
೨.   ಶಾಂತಿದೀಪ

ಸಣ್ಣ ಕಥೆ
೧.   ಆ ರಾತ್ರಿ (೧೯೯೧)

ನಾಟಕಗಳು
ಏಕಾಂಕ ನಾಟಕಗಳು
೧.   ಭಕ್ತ ಜ್ಯೋತಿ
೨.   ಸತ್ವ ಪರೀಕ್ಷೆ
೩.   ಸಾವಿತ್ರಿ
೪.   ಗಿರಿಜಾ ಕಲ್ಯಾಣ
೫.   ವಿಜಯಶ್ರೀ

ಮೂರಂಕಿನ ನಾಟಕಗಳು
೧.   ಮಿತ್ರದ್ರೋಹ
೨.   ಕುಟುಂಬ
೩.   ಮಂಗಲಾಕ್ಷತೆ
೪.   ಜೀವನಗಂಗಾ
೫.   ಅಕ್ಷತಾಯೋಗ
೬.   ಅಣ್ಣ ತಂದ ಹೆಣ್ಣು
೭.   ವಿಜಯಶ್ರೀ
೮.   ಪ್ರಾಣಾರ್ಪಣ
೯.   ಸಕಲಗುಣ ಸಂಪನ್ನ

ಕಾದಂಬರಿಗಳು
೧.   ಸೌಜನ್ಯ
೨.   ಹೂವಿನ ಹುತ್ತ (ಪತ್ತೆದಾರಿ)
೩.   ಸುಖಸಿಗದ ಸಾದ್ವಿ
೪.   ತವರು ಮನೆ
೫.   ಹೊಸಹುಟ್ಟು
೬.   ವ್ಯವಸ್ಥೆ

ಇತರ ಕೃತಿಗಳು (ಧಾರ್ಮಿಕ)
೧.   ಹಾಲುಮತಸ್ಥರು
೨.   ನಾವು ನಮ್ಮವರು

ಜೀವನ ಚರಿತ್ರೆ
೧.   ಸಹಕಾರು ಬಂಧು ಶಿವನಗೌಡರು
೨.   ಸಾಸ್ವಿಹಳ್ಳಿಯ ಶ್ರೀ ಬಸವಾನಂದರು