ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲೂಕುಗಳನ್ನೊಳಗೊಂಡು ಚಿತ್ರದುರ್ಗವಾಗಿದೆ. ಜಿಲ್ಲೆಯು ತನ್ನ ಹೆಸರಿಗೆ ಪೂರಕವಾಗಿ ಕುರು-ಬೆಟ್ಟ, ದುರ್ಗ ಬೆಟ್ಟ ಗುಡ್ಡಗಳಿಂದ ಆವೃತವಾದ ಪ್ರದೇಶವು ನಿರ್ದಿಷ್ಟವಾಗಿ ಜನ ವಸತಿಗೆ ಯೋಗ್ಯವಾದ ಪ್ರದೇಶವಾಗಿದೆ. ಪ್ರಧಾನವಾಗಿ ವೇದಾವತಿ ನದಿ ದಡದುದ್ದಕ್ಕೂ ಹಾಲುಮತ ಸಮುದಾಯಗಳು ಬೆಟ್ಟ-ಗುಡ್ಡ ಬಯಲಿನ ಹಾಗೂ ಅದರ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಪಶುಪಾಲನೆ ಅದರಲ್ಲೂ ಕುರಿ ಸಾಕಾಣಿಕೆ ಮೂಲಕ ತನ್ನ ಬದುಕನ್ನು ಕಟ್ಟಿಕೊಂಡಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಾ ಅತ್ಯಂತ ಸುರಕ್ಷಿತ ಹಾಗೂ ನದಿದಂಡೆಗಳ ಮತ್ತು ಫಲವತ್ತಾದ ಬಯಲು ಪ್ರದೇಶಗಳಲ್ಲಿ ನೆಲೆ ನಿಂತು ತಾನು ಇರುವಲ್ಲಿಯೇ ಕುಲಗುರುವಾದ ಶ್ರೀ ಗುರು ರೇವಣಸಿದ್ದರ ಸಾನಿಧ್ಯದಲ್ಲಿ ತನ್ನ ಕುಲದೈವನಾದ ಬೀರಪ್ಪನನ್ನು ಆರಾಧಿಸುತ್ತಾ ಶತಶತಮಾನಗಳಿಂದಲೂ ತನ್ನದೇ ಆದಂತಹ ಕುರುಹುಗಳನ್ನು ಜನಪದೀಯ ಹಾಗೂ ಮೌಖಿಕ ವಿಚಾರಗಳನ್ನು ಪ್ರಸ್ತುತ ಜಾಗತೀಕರಣ ಹಾಗೂ ವ್ಯಾಪಾರೀಕರಣದ ದಿನಗಳಲ್ಲಿಯೂ ತನ್ನ ಮೂಲ ಸಂಸ್ಕೃತಿಯನ್ನು ಅನುಸರಿಸುತ್ತಾ ಅದನ್ನು ಸಂರಕ್ಷಿಸಿಕೊಳ್ಳುತ್ತಾ ಮುಂದುವರಿಸಿಕೊಂಡು ಹೋಗುತ್ತಿರುವುದು ಸಮಗ್ರ ಹಾಗೂ ಬೃಹತ್‌ ಹಾಲುಮತ ಕುರುಬ ಸಮುದಾಯದ ಹೆಗ್ಗಳಿಕೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಹಾಲುಮತ ಸಂಸ್ಕೃತಿಯ ಸಮುದಾಯಗಳು ಜಿಲ್ಲೆಯಾದ್ಯಂತ ೩/೧ ಭಾಗದ ಜನಸಂಖ್ಯೆಯನ್ನು ಹೊಂದಿದ್ದು ಯಾವುದೆ ಪಕ್ಷದ ಒಬ್ಬ ರಾಜಕೀಯ ವ್ಯಕ್ತಿ ಯಾವುದೇ ಕ್ಷೇತ್ರಗಳಲ್ಲಿ ಆಯ್ಕೆಯಾಗಬೇಕಾದರೆ ಈ ಸಮುದಾಯದವರ ಮತದಾನದ ತೀರ್ಪಿನ ಆಧಾರದ ಮೇಲೆಯೇ ನಿಂತಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಸಂಗತಿಯಾಗಿದೆ.

ಧಾರ್ಮಿಕ ಪರಿಸರ

ಜಿಲ್ಲೆಯು  ಹಾಲುಮತ ಸಂಸ್ಕೃತಿಯುಳ್ಳ ಕುರುಬ ಜನಾಂಗದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಜನಪದ, ಆಚಾರ-ವಿಚಾರ, ಸತ್‌-ಸಂಪ್ರದಾಯಗಳು ಹಬ್ಬ ಹರಿದಿನಗಳು ಉತ್ಸವ ಜಾತ್ರೆಗಳನ್ನು ಕಾಲಕಾಲಕ್ಕೆ ಆಚರಿಸಿಕೊಳ್ಳುತ್ತಾ ಮುನ್ನಡೆದಿದೆ. ಆ ಮೂಲಕ ಸಮುದಾಯದ ಮೂಲಸೊಗಡನ್ನು ಪರಂಪರಾಗತವಾಗಿ ಅನುಸರಿಸುತ್ತಾ ತನ್ನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮುಖೇನ ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಜ್ವಲಗೊಳಿಸುವಲ್ಲಿ ಸಮುದಾಯದ ಕೊಡುಗೆ ಅಪಾರವಾಗಿದೆ. ಇದರೊಂದಿಗೆ ಕುರುಬ ಜನಾಂಗವು ತನ್ನ ಸಾಂಸ್ಕೃತಿಕ ವೀರರುಗಳಾದ ಮೈಲಾರಲಿಂಗ, ಯಲ್ಲಾಟಲಿಂಗ, ಮಾಳಿಂಗರಾಯ, ಕರಿಸಿದ್ದೇಶ್ವರ, ಭೈರವೇಶ್ವರ, ವೀರಭದ್ರೇಶ್ವರ (ಈರಣ್ಣ ದೇವರು) ದೊಡ್ಡಣ್ಣ, ಚಿಕ್ಕಣ್ಣ, ಬಾಳಪ್ಪ, ನಗರಗೇರಪ್ಪ, ಕರಿಯಣ್ಣ (ಕರಿಯಾಲದಯ್ಯ) ಬೀರಲಿಂಗೇಶ್ವರ, ಸೋಮಲಿಂಗ (ಸೋಮೇಶ್ವರ) ಹೆಣ್ಣು ದೇವತೆಗಳಾದ ಹೊಸೂರಮ್ಮ, ಹುಲಿಗೆಮ್ಮ, ಹೊಸುರಾಂಭ, ನಗರಗೇರಮ್ಮ, ಲಕ್ಷ್ಮಿದೇವಿ, ಲಕ್ಕಮ್ಮ, ಚೌಡಮ್ಮ, ಬನಶಂಕರಮ್ಮ, ಆದವಾನಿ ಕೆಂಚಮ್ಮ, ಚಿಕ್ಕಮಾಳಮ್ಮ ಗಂಗಮ್ಮಾಳಮ್ಮ ಮುಂತಾದ ದೇವತೆಗಳು ಹಾಗೂ ನಾಗದೇವತೆಗಳು (ನಾಗರಕಲ್ಲುಗಳು) ಮುಂತಾದ ದೇವ ದೇವತೆಗಳನ್ನು ಶತಶತಮಾನಗಳಿಂದ ಆರಾಧಿಸಿಕೊಳ್ಳುತ್ತಾ ಪೂಜಿಸಲ್ಪಡುತ್ತಾ ಧಾರ್ಮಿಕ ಸಾಮರಸ್ಯತೆಯನ್ನು ಮೂಡಿಸುತ್ತಾ ಹಾಲುಮತ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುತ್ತಾ ಬಂದಿರುವುದು ಈ ಸಮುದಾಯದ ವಿಶೇಷತೆ.

ನಿರ್ದಿಷ್ಟವಾಗಿ ಚಿತ್ರದುರ್ಗ ಜಿಲ್ಲಾ ಪರಿಸರದಲ್ಲಿ ಪ್ರಮುಖ ಜನಸಮೂದಾಯಗಳಲ್ಲಿ ಹಾಲುಮತ ಜನಾಂಗವು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದೆ. ಈ ಸಮುದಾಯದವರನ್ನು ಕುರುಬರೆಂದು ಕರೆಯಲಾಗುತ್ತದೆ. ಇವರಲ್ಲಿ ‘‘ಹತ್ತಿ ಕಂಕಣ ಕುರುಬರು”, “ಉಣ್ಣೆ ಕಂಕಣ ಕುರುಬರು,” “ಗುರು ಒಡೆಯರು” ಇತ್ಯಾದಿ ಉಪಪಂಗಡಗಳು ಇವೆ. ಪ್ರತಿಯೊಂದು ಉಪ ಪಂಡಗಳಿಗೆ ತನ್ನದೆ ಆದ ವಿಶಿಷ್ಟವಾದ ಆಚರಣೆಗಳು, ಸತ್‌ – ಸಂಪ್ರದಾಯಗಳು, ಹಬ್ಬ ಹರಿದಿನಗಳು ಉತ್ಸವ ಪಲ್ಲಕ್ಕಿಗಳು ಕೆಂಡೋತ್ಸವಗಳು (ಕೆಂಡಾರ್ಚನೆ) ಗೊರವರ ಕುಣಿತ (ಡೋಣಿಸೇವೆ) ಕಂತೆಸೇವೆ, ತೋಪುಜಾತ್ರೆ, ದೊಡ್ಡಜಾತ್ರೆ ಮತ್ತು ಹಲವಾರು ಪವಾಡಗಳನ್ನು ಶತ-ಶತಮಾನಗಳಿಂದ ಆಚರಿಸಿಕೊಳ್ಳುತ್ತಾ ತಾನು ವಾಸಿಸುವ ಪರಿಸರದಲ್ಲಿ ಪಶುಪಾಲನೆ, ಕುರಿ ಸಾಕಾಣಿಕೆ ಕಂಬಳಿ ನೇಕಾರಿಕೆ ಪ್ರಧಾನವಾಗಿ ಕೃಷಿಯನ್ನು ತನ್ನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಇದರ ಜೊತೆ ಜೊತೆಯಲ್ಲಿ ಹಾಲುಮತ ಸಂಸ್ಕೃತಿಯ ಮೂಲ ಸೊಗಡನ್ನು ಪರಂಪರಾಗತ ಜೀವನ ಪದ್ಧತಿಯನ್ನು ಯಥವತ್ತಾಗಿ ಉಳಿಸಿಕೊಂಡು ಬಂದಂತಹ ಜನಸಮುದಾಯಗಳಲ್ಲಿ ಹಾಲುಮತಸ್ಥರು (ಕುರುಬರು) ಪ್ರಮುಖರೆನಿಸಿಕೊಂಡಿರುತ್ತಾರೆ. ಇಂದಿಗೂ ಜನಪದೀಯರಲ್ಲಿ ಒಂದು ನೀತಿ ಮಾತಿದೆ “ಹಾಲು ಕೆಟ್ಟರೂ ಕೆಡಬಹುದು? ಹಾಲುಮತಸ್ಥರು ಕೆಡುವುದಿಲ್ಲಾ” ಎಂಬ ಮಾತು ಜನಪದೀಯರಲ್ಲಿದೆ.

ಚಿತ್ರದುರ್ಗ ಜಿಲ್ಲಾ ಪರಿಸರದಲ್ಲಿ ರೇವಣಸಿದ್ದೇಶ್ವರ ಮಠಗಳು ಅಧಿಕ ಪ್ರಮಾಣದಲ್ಲಿವೆ. ಈ ಮಠಗಳಿಗೆ ಆಯಾ ಸಂಪ್ರದಾಯದ ಗುರು ಒಡೆಯರು ಮಠಾಧಿಪತಿಗಳಾಗಿರುವರು. ಇವರು ಕುರುಬ (ಹಾಲುಮತಸ್ಥ) ಸಮುದಾಯಗಳ ನಾಮಕರಣ, ಮದುವೆ, ಹುಟ್ಟು ಮತ್ತು ಸಾವಿನವರೆಗಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಮುಂತಾದ ಹತ್ತಾರು ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ನೆರವೇರಿಸಿಕೊಡುತ್ತಾರೆ. ಇಂತಹ ವಿಶಿಷ್ಟ ಪರಂಪರೆಯನ್ನು ಹೊಂದಿದ ಈ ಸಮುದಾಯದ ಧಾರ್ಮಿಕ, ಸಾಮಾಜಿಕ, ಸಂಶೋಧನೆಗಳು ಅದರಲ್ಲೂ ಜನಪದ ಮೌಖಿಕ ವಿಚಾರಗಳನ್ನು ಸಂಗ್ರಹಿಸಿ ಪರಿಶೀಲಿಸಿ ಸತ್ಯಾಸತ್ಯತೆಯನ್ನು ದಾಖಲಿಸಿ ಹಾಲುಮತ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದೇ ಸಂಶೋಧನೆಯ ಏಕೈಕ ಉದ್ದೇಶವಾಗಿದೆ. ಪ್ರಧಾನವಾಗಿ ತನ್ನ ಪಿಹೆಚ್‌ಡಿ ವಿಷಯವಾದ ರೇವಣಸಿದ್ದ ಪರಂಪರೆಯ ಹಾಲುಮತ ಮಠಗಳ ಚಾರಿತ್ರಿಕ ಅಧ್ಯಯನದಡಿಯಲ್ಲಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಈ ಸಮುದಾಯಗಳ ಪ್ರಮುಖ ಊರುಗಳಿಗೆ ಸಂರ್ದಶನ ನೀಡಿದಾಗ ಪ್ರತಿ ತಾಲೂಕಿನಲ್ಲಿರುವ ರೇವಣಸಿದ್ದ ಮಠಗಳು, (ಮಠಾಧಿಪತಿಗಳು) ಗುರುಒಡೆಯರು, ಒಡೆಯರಮ್ಮಗಳು, ಪ್ರತಿಮಠದಡಿಯಲ್ಲಿ ಬರುವ ಸಮುದಾಯದ ಹಳ್ಳಿಗಳು, ಗುಡಿಕಟ್ಟೆಗಳು, ಬೆಡಗುಗಳು ಕುಲದೇವರು-ದೇವತೆಗಳು ಈ ದೇವರುಗಳ-ದೇವತೆಗಳ ಆಚಾರ-ವಿಚಾರ-ಸಂಪ್ರದಾಯ, ಹಬ್ಬಹರಿದಿನಗಳು, ಜಾತ್ರೆ ಉತ್ಸವ, ಕೆಂಡಾರ್ಚನೆಗಳು, ಹಲವು ಪವಾಡಗಳು ಅಮವಾಸ್ಯೆ, ಹುಣ್ಣಿಮೆ, ಪೂಜಾ ವಿಧಿ ವಿಧಾನಗಳಲ್ಲಿ ಒಂದನ್ನು ಪರಿಚಯಿಸಿಕೊಳ್ಳೋಣ.

ಪ್ರಥಮವಾಗಿ ಚಳ್ಳಕೆರೆ ತಾಲೂಕಿನಲ್ಲಿರುವ ಚಳ್ಳಕೆರೆ ತಾಲೂಕಿನಲ್ಲಿ ಪ್ರಸ್ತು ದೊಡ್ಡೇರಿ ರೇವಣಸಿದ್ದೇಶ್ವರ ಮಠವು ಅತ್ಯಂತ ಪ್ರಾಚೀನ ಮಠವಾಗಿದೆ. ಈ ಪ್ರದೇಶವು ಕಳೆದೆರಡು ಶತಮಾನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಕೇಂದ್ರಸ್ಥಾನವಾಗಿತ್ತೆಂಬುದಕ್ಕೆ ಹಲವಾರು ದಾಖಲೆಗಳು ಪುಷ್ಟೀಕರಿಸುವುದರ ಹಿನ್ನೆಲೆಯಲ್ಲಿ ಈ ಮಠದಡಿಯಲ್ಲಿ ಹಾಲುಮತ ಸಂಸ್ಕೃತಿ ಪರಂಪರೆಯು ಇಂತಿದೆ. ರೇವಣಸಿದ್ದ ಪರಂಪರೆಯ ಹಾಲುಮತದವರಲ್ಲಿ (ಕುರುಬರ) ಸ್ಯಾವಂತಲ, ಬೆಡಗಿನವರನ್ನೇ ಕುಲಗುರುಗಳನ್ನಾಗಿಸಿಕೊಂಡು ಈ ಗುರುಗಳ ಒಡೆಯರುಗಳ, ಒಡೆಯರಮ್ಮಗಳ ಸಾನಿಧ್ಯದಲ್ಲಿ ಸ್ಯಾವಂತಲ ಬೆಡಗಿನ ಕುಟುಂಬದಲ್ಲಿ ಗಂಡು ಮಗು ಹುಟ್ಟಿದ ಮೂರು ದಿನಗಳೊಳಗಾಗಿ ಲಿಂಗವನ್ನು ಕಟ್ಟುತ್ತಾರೆ. ಇದನ್ನು ಹುಟ್ಟುಲಿಂಗವೆನ್ನುತ್ತಾರೆ. ಬಳಿಕ ವಿವಾಹದ ಸಮಯದಲ್ಲಿ ಲಿಂಗಪೂಜೆಯಾಗುತ್ತದೆ. ಮತ್ತು ಸ್ವಗೋತ್ ವಿವಾಹ ನಿಷೇಧಿತವಾಗಿರುತ್ತದೆ. ಈ ಗುರು ಒಡೆಯರ ಮನೆಯ ಹುಡುಗಿ (ವಧು)ಯನ್ನು ಹಾಲುಮತಸ್ಥರ ಕುರುಬರ ಮನೆಗಳಿಗೆ ಕೊಟ್ಟು ವೈವಾಹಿಕ ಸಂಬಂಧ ನಡೆಯುತ್ತದೆ. ಒಡೆಯರುಗಳ ಮನೆಗೆ ಕೊಡುವ ಹೆಣ್ಣಿಗೆ ಕಡ್ಡಾಯವಾಗಿ ಲಿಂಗದೀಕ್ಷೆ ನಡೆಯುತ್ತದೆ. ವಿವಾಹದ ಹಿಂದಿನ ದಿನ ಪ್ರಥಮ ಶಾಸ್ತ್ರದ (ಮದಲಿಂಗ ಶಾಸ್ತ್ರದ)ದಿನ ರೇವಣಸಿದ್ದೇಶ್ವರ ಮಠದ ಗುರು ಒಡೆಯರುಗಳ ಸಾನಿಧ್ಯದಲ್ಲಿ ೫ ಬಗೆಯ ಮರದ ಚುಕ್ಕೆಯನ್ನು ಸುಟ್ಟು (ಕೆಂಡವನ್ನು ಮಾಡಿ) ಕನ್ಯೆಯ (ವಧುವಿನ) ನಾಲಿಗೆಯ ತುದಿಯನ್ನು ಗಂಧದ ಕಡ್ಡಿಯಿಂದ ಸುಟ್ಟು ಶುದ್ಧಿ ಮಾಡುತ್ತಾರೆ. ಬಳಿಕ ಕರಿಕಂಬಳಿ ಗದ್ದಿಗೆ ಮಾಡಿ ಕಂಚಿನ ಕಳಸವನ್ನು ಹೂಡಿ ಅದರ ಮೇಲೆ ವಧು-ವರರನ್ನು ಕುಳ್ಳಿರಿಸಿ ವಧು-ವರರ ತಂದೆ-ತಾಯಿಗಳ ಸಂಬಂಧಿಕರ ಸಮಕ್ಷಮದಲ್ಲಿ ಸಂಪ್ರದಾಯ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಾರೆ. ಮರುದಿನ ಧಾರೆ-ಮುಹೂರ್ತದಂದು ಇದೇ ಗುರುಗಳ ಸಾನಿಧ್ಯದಲ್ಲಿ ಗುಡೀಗೌಡ, ಕೋಲ್ಕಾರ, ಬಂಢಾರಿ ಹಾಗೂ ಕುಲಸ್ತರ ಹಿರಿಯರ ಸಮ್ಮುಖದಲ್ಲಿ ಮಂಗಳ ಸೂತ್ರವನ್ನು ಮಾಡುವ ಶ್ರೀ ಗುರು ರೇವಣಸಿದ್ದೇಶ್ವರನನ್ನು ನೆನೆಯುತ್ತಾ ಗಟ್ಟಿಯಾಗಿ ಕುಲದೇವರನ್ನು ಸ್ಮರಿಸುತ್ತಾ ಮತ್ತು ವಧು-ವರರ ಹೆಸರು ಅವರ ತಂದೆ ತಾಯಿಗಳ ಹೆಸರು ಗ್ರಾಮ ಅವರುಗಳ ಬೆಡಗು ಪೂರ್ಣ ವಿವರಗಳನ್ನು ಅಲ್ಲಿ ನೆರೆದಿದ್ದವರಿಗೆಲ್ಲರಿಗೂ ಪರಿಚಯಿಸಿ ನೆರೆದಿರುವ ಕುಲಸ್ಥರ ಅಪ್ಪಣೆಯನ್ನು ಪಡೆದು ಮಾಂಗಲ್ಯಧಾರಣೆ ನೆರವೇರಿಸಲಾಗುತ್ತದೆ.

ಗುರು ಒಡೆಯರ ಕುಟುಂಬದ ಸದಸ್ಯರಿಗೆ ಸಾವು ಸಂಭವಿಸಿದಾಗ ವಿಭಿನ್ನವಾಗಿ ಶವಸಂಸ್ಕಾರ ಮಾಡಲಾಗುತ್ತದೆ. ಕುಳ್ಳಿರಿಸಿದ ಶವದ ಮೇಲೆ ಕಟ್ಟಿದ ಹುಟ್ಟು ಲಿಂಗಧಾರವನ್ನು ತೆಗೆಯಲಾಗುತ್ತದೆ. ಚೌಕಕಾರದ ಸಮಾಧಿ ನಿರ್ಮಿಸಿ ಲಿಂಗ ಪೂಜೆ ಮಾಡುತ್ತಿರುವ ಭಂಗಿಯಲ್ಲಿ ಕುಳ್ಳಿರಿಸಿ ವಿಭೂತಿ, ಬಿಲ್ವಪತ್ರೆ ಹಾಕಿ ಶವ ಸಂಸ್ಕಾರ ಮಾಡುತ್ತಾರೆ. ಗುರು ಒಡೆಯರಿಗೆ ನೀಡಿದ ಸ್ಥಾನಮಾನಗಳನ್ನು ಅವರ ಒಡೆಯರಮ್ಮಗಳಿಗೂ ನೀಡುತ್ತಾರೆ. ಗುರು ಒಡೆಯರುಗಳ ಸಾನಿಧ್ಯದಲ್ಲಿ ಹಾಲುಮತಸ್ಥ ಸಮುದಾಯಗಳ ಜನನ, ಮರಣ, ಮೋಕ್ಷ-ದೀಕ್ಷೆ ಮುಂತಾದ ಧರ್ಮಿ ವಿಧಿ-ವಿಧಾನಗಳನ್ನು ನೆರವೇರಿಸುತ್ತಾ ಹಾಲುಮತ ಸಮುದಾಯಗಳಲ್ಲಿನ ಯಾವುದೇ ಬಗೆಯ ಸಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘರ್ಷಗಳನ್ನು ಆಯಾ ಕಟ್ಟೇ ಮನೆಯ ರೇವಣಸಿದ್ದ ಮಠದಡಿಯಲ್ಲಿನ ಗುರು ಒಡೆಯರ ಸಾನಿಧ್ಯದಲ್ಲಿ ಬಗೆಹರಿಸಿ ತಪ್ಪು-ಒಪ್ಪುಗಳನ್ನು ತಿದ್ದಿಕೊಂಡು ತಪ್ಪಿತಸ್ಥರಿಗೆ ದಂಡವನ್ನು ವಿಧಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಚಪ್ಪಲಿ ಸಂಘರ್ಷಗಳಾದಾಗ (ಹೊಡೆದಾಡಿದಾಗ) ಆ ವ್ಯಕ್ತಿಯನ್ನು ಗುರುಗಳ ಸಾನಿಧ್ಯದಲ್ಲಿ ಶುದ್ಧೀಕರಿಸಿ ಸಮಾಜಕ್ಕೆ ಸಮರ್ಪಿಸಲಾಗುತ್ತದೆ. ಆ ಮೂಲಕ ಸಮಾಜದ ಸಾಮಾಜಿಕ, ಧಾರ್ಮಿಕ, ಸತ್ವವನ್ನು ಕಾಪಾಡುವಲ್ಲಿ ಒಡೆಯರ ಪಾತ್ರ ದೊಡ್ಡದು. ಚಳ್ಳಕೆರೆ ತಾಲೂಕಿಗೆ ಸಂಬಂಧಿಸಿದ ಗ್ರಾಮಗಳಾದ ಚಳ್ಳಕೆರೆ, ನೇರಲಗುಂಟೆ, ಮಲ್ಲೂರಹಳ್ಳಿ, ಕೆರೆಯಾಗಹಳ್ಳಿ, ಓಬಯ್ಯನಹಟ್ಟಿ, ಚಿಕ್ಕಹಳ್ಳಿ, ಸೂರನಹಳ್ಳಿ, ನಗರಂಗೆರೆ, ಸಿದ್ದಾಪುರ, ಮಹದೇವಪುರ, ನಾಯಕನಹಟ್ಟಿ, ಗೌಡಗೆರೆ, ಪಿಲ್ಲಹಳ್ಳಿ, ಭೀಮನಕೆರೆ, ಬುಡ್ನಹಟ್ಟಿ, ವಡೇರಹಳ್ಳಿ, ದೊಡ್ಡೇರಿ ಈ ಗ್ರಾಮಗಳಲ್ಲಿನ ಹಾಲುಮತಸ್ಥರು ದೊಡ್ಡೇರಿ ಮಠದಡಿಯ ವ್ಯಾಪ್ತಿಗೆ ಬರುತ್ತಾರೆ. ಇದರ ಜೊತೆಗೆ ಮೊಳಕಾಲ್ಮೂರು ತಾಲೂಕಿಗೆ ಸಂಬಂಧಪಟ್ಟ ಕೆಲವು ಗ್ರಾಮಗಳು ಈ ಮಠದಡಿಯ ವ್ಯಾಪ್ತಿಯಲ್ಲಿ ಒಳಗೊಂಡಿರುತ್ತವೆ. ಆ ಗ್ರಾಮಗಳೆಂದರೆ ಮೊಳಕಾಲ್ಮೂರು, ಕೋನಸಾಗರ, ಉಡೇವು, ಕೊಂಡ್ಲಹಳ್ಳಿ, ಮೊಗಲಹಳ್ಳಿ ಬಿ.ಜಿ.ಕೆರೆ (ಬೊಮ್ಮಗೊಂಡನಕೆರೆ) ನಾಗಸಮುದ್ರ, ಓಬಳಾಪುರ (ಸಿರವಾಳ) ಬಸಾಪುರ, ಕಡದರಹಳ್ಳಿ ದೊಡ್ಡುಳ್ಳಾರ್ತಿ, ಘಟಫರ್ತಿ, ಹೊನ್ನೂರು, ಗೌರಸಮುದ್ರದ ದೇವರಹಳ್ಳಿ, ಮಲ್ಲಸಮುದ್ರ, ಗೌರಸಮುದ್ರ ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ಕುರುಬರ ಶಿಷ್ಯಾರ್ಚನೆ ಶುಭ ಸೋಭಾನೆ ಕಾರ್ಯಕ್ರಮಗಳು ಈ ಮಠದಡಿಯಲ್ಲಿಯ ವ್ಯಾಪ್ತಿಗೆ ಒಳಪಟ್ಟಿವೆ.

ಚಿತ್ರದುರ್ಗದ ಪಶ್ಚಿಮ ಭಾಗಕ್ಕೆ ೫ ಕಿ. ಮೀ. ಸಮೀಪ ಇರುವ ಹುಲ್ಲೂರು ಗ್ರಾಮದಲ್ಲಿ ಅತ್ಯಂತ ಪ್ರಾಚೀನ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ರೇವಣಸಿದ್ದೇಶ್ವರಮಠ (ದೇವಾಲಯ)ವಿದೆ. ಇದು ವಿಜಯನಗರ ಕಾಲ-ವಿಜಯನಗರೋತ್ತರ ಕಾಲಗಳಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದು ಇಲ್ಲಿನ ವಿಶಾಲವಾದ ಒಂದು ಎಕರೆ ಆವರಣದಲ್ಲಿ ಅತ್ಯಂತ ಸವಿಸ್ತಾರವಾದ ಕಲ್ಲಿನ ತೊಲೆಗಳನ್ನು ಬಳಸಿ ಗರ್ಭಗೃಹ, ನವರಂಗ, ಸುಖನಾಸಿ, ಮುಖಮಂಟಪ ಮತ್ತು ಮುಂಭಾಗದಲ್ಲಿ ಎರಡು ಜಗಲಿಗಳನ್ನು ನಿರ್ಮಿಸಿದ್ದು ಈ ದೇವಾಲಯದ ಕಟ್ಟಡ ಸಂಪೂರ್ಣವಾಗಿ ಕಲ್ಲಿನ ಕಂಬಗಳನ್ನು ಮತ್ತು ಬೋದಿಗೆಗಳನ್ನು ಮತ್ತು ತೊಲೆಗಳಿಂದ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿ ೩ ೧/೨ ಅಡಿ ಎತ್ತರದ ಕಪ್ಪುದಾದ ಅಮಸ್ಥತಶಿಲಾ ಕಲ್ಲಿನಲ್ಲಿ ನಿಂತಿರುವ ಭಂಗಿಯಲ್ಲಿ ಗುರು ರೇವಣಸಿದ್ದೇಶ್ವರ ಏಕಶಿಲಾ ಮೂರ್ತಿಯು ವಿಶಿಷ್ಟವಾಗಿದೆ. ಈ ದೇವಾಲಯದ ಎದುರಿಗೆ ೩೧ ಅಡಿ ಎತ್ತರದ ೨ ಕಲ್ಲಿನ ಉಯ್ಯಾಲೆ ಕಂಬಗಳಿವೆ. ಈ ಉಯ್ಯಾಲೆ ಕಂಬಗಳನ್ನು ಅವಲೋಕಿಸಿದರೆ ಚಿತ್ರದುರ್ಗದ ಉಚ್ಚಂಗಿಯಲ್ಲಮ್ಮನ ದೇವಸ್ಥಾನದ ಮುಂಭಾಗದಲ್ಲಿನ ಉಯ್ಯಾಲೆ ಕಂಬಗಳ ಮಾದರಿಯಲ್ಲಿವೆ. ಈ ದೇವಾಲಯದ ನವರಂಗ, ಮುಖಮಂಟಪದಲ್ಲಿನ ಕಂಬಗಳಲ್ಲಿ ಟಗರು ಚಿತ್ರವಿರುವ ಉಬ್ಬು ಶಿಲ್ಪಗಳು ಮತ್ತು ಗೌರಮ್ಮದೇವಿ ಹಾಗೂ ನಾಗದೇವತಾ ಶಿಲ್ಪಗಳು ಕಂಡುಬರುತ್ತವೆ. ಒಟ್ಟಾರೆ ಈ ದೇವಾಲಯ ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಶ್ರೀಹುಲ್ಲೂರು ಶ್ರೀನಿವಾಸ ಜೋಯಿಸರವರು ತಮ್ಮ ಬರಹಗಳಲ್ಲಿ ಹುಲ್ಲೂರಿನ ಶ್ರೀರೇವಣಸಿದ್ದೇಶ್ವರ ದೇವಾಲಯವು ಸುಮಾರು ೧೫-೧೬-೧೭೧೮ ನೇ ಶತಮಾನಗಳಲ್ಲಿ ಅತ್ಯಂತ ಉನ್ನತ ಧಾರ್ಮಿಕ ಶ್ರೀಮಂತಿಕೆ ಸುಸ್ಥಿತಿಯಲ್ಲಿತ್ತೆಂಬುದನ್ನು ತಮ್ಮ ಬರಹಗಳಲ್ಲಿ ತಿಳಿಸಿರುತ್ತಾರೆ. ಈ ಮಠದಡಿಯಲ್ಲಿ ೫ ಕಟ್ಟೆ ಮನೆಗಳಾದ ಚಿತ್ರದುರ್ಗ, ಸಂತೆಬೆನ್ನೂರು, ಅದಡಿ, ಜಗದಪುಳ್ಳಪುರ, ಸೊಲ್ಲಾಪುರ ಈ ಕಟ್ಟೆಮನೆಗಳ ಅಡಿಯಲ್ಲಿ ೧೩೦ ಹಳ್ಳಿಗಳ ಹಾಲುಮತಸ್ಥ ಸಮುದಾಯಗಳು ಪ್ರತಿ ೧೨ ವರ್ಷಕ್ಕೊಮ್ಮೆ ಇಲ್ಲಿಗೆ ಸೇರಿ ಕಂತೆ ಸೇವೆ ತೋಪು ಜಾತ್ರೆಯನ್ನು ಮಾಡುತ್ತಾರೆ. ಪ್ರತಿವರ್ಷ ಕಡೇ ಶ್ರಾವನ ಸೋಮವಾರ ಪ್ರಸ್ತುತ ಮಠದ ಗುರು ಒಡೆಯರಾದ ಶ್ರೀ ರವಿ ಒಡೆಯರ್‌ ಮತ್ತು ಶ್ರೀಶಿವಮೂರ್ತಿ ಒಡೆಯರ್‌ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಜರುಗುತ್ತವೆ. ಒಡೆಯರುಗಳನ್ನು ಮೌಖಿಕವಾಗಿ ಸಂದರ್ಶಿಸಿದಾಗ ನಮ್ಮ ಪೂರ್ವಜರು ಧಾರವಾಡ ಜಿಲ್ಲೆಯ ಹುಲ್ಲೂರಿನಿಂದ ಹಂಪೆಗೆ ಹೋದರೆಂದು ಹಂಪೆಯಿಂದ ಚಿತ್ರದುರ್ಗಕ್ಕೆ ಬಂದೆವೆಂದು ಚಿತ್ರದುರ್ಗದಿಂದ ಸೊಲ್ಲಾಪುರ ಹುಲ್ಲೂರಿಗೆ ಬಂದು ಇಲ್ಲಿ ನೆಲೆಸಿರುತ್ತೇವೆ ಎಂದು ತಿಳಿಸುತ್ತಾರೆ. ಇದೇ ತಾಲೂಕಿನ ತುರುವನೂರು, ಚಿಕ್ಕೇನಹಳ್ಳಿ, ಬರುಜನಹಟ್ಟಿ, ಕುರುಬರಹಳ್ಳಿ ಮಠದ ದಂಡಿನ ಕುರುಬರ ಹಟ್ಟಿಗಳಲ್ಲಿ ಹಾಲುಮತಸ್ಥ ಸಮುದಾಯವು ಹೇರಳವಾಗಿದ್ದು, ಇಲ್ಲಿ ಮೈಲಾರಲಿಂಗ, ಬೀರಪ್ಪ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಆದರೆ ಇಲ್ಲಿ ಮಠಗಳಿರುವುದಿಲ್ಲಾ.

ಹಿರಿಯೂರು ತಾಲೂಕಿನ ರೇವಣಸಿದ್ದ ಪರಂಪರೆಯ ಹಾಲುಮತಸ್ಥ ಸಮುದಾಯಗಳ ಧಾರ್ಮಿಕ ವಿಚಾರಗಳನ್ನು ಅವಲೋಕಿಸಿದಾಗ ಹಿರಿಯೂರಿನಲ್ಲಿ ಎರಡು ರೇವಣಸಿದ್ದೇಶ್ವರ ಮಠಗಳಿದ್ದು, ಈ ಮಠಗಳು ದೊಡ್ಡೇರಿ ಮಠದಡಿಯಲ್ಲಿ ಬರುತ್ತವೆ. ಇವುಗಳೇನು ಅಷ್ಟೇನೂ ವಿಶೇಷತೆಯುಳ್ಳ ಕಟ್ಟಡಗಳನ್ನು ಹೊಂದಿರದೇ ಸಾಧಾರಣ ಬಿಡುಗಲ್ಲು, ಗಾರೆ, ಇಟ್ಟಿಗೆ ಮತ್ತು ಮರದ ಕಂಬಗಳನ್ನು ಬಳಸಿ ಸಾಧಾರಣ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಹಿರಿಯೂರಿನ ಮೈಲಾರಲಿಂಗ ದೇವಾಲಯದ ಹಿಂಭಾಗದ ಕುರುಬರ ಕೇರಿಯಲ್ಲಿರುವ ಮಠಕ್ಕೆ ಪ್ರಸ್ತುವಾಗಿ ಹರ್ತಿಕೋಟೆಯ ಶ್ರೀ ಗುರುಸಿದ್ದಯ್ಯ ಒಡೆಯರವರೇ ಈ ಮಠದ ಗುರು ಒಡೆಯರಾಗಿದ್ದು, ಈ ಮಠದಡಿಯಲ್ಲಿನ ೧೮ ಹಳ್ಳಿಗಳ ಗುರುಪರಂಪರೆಯನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಹಿರಿಯೂರಿನ ಇನ್ನೊಂದು ಮಠಕ್ಕೆ (ಬಂಬೂಬಜಾರ್‌)ನಲ್ಲಿನ ಈ ಮಠಕ್ಕೆ ಆರಂಭಿಕವಾಗಿ ಚಳ್ಳಕೆರೆ ತಾಲೂಕು, ದೊಡ್ಡೇರಿಯಿಂದ ಒಂದು ಕುಟುಂಬವು ಇಲ್ಲಿಗೆ ಬಂದು ಶ್ರೀಗುರು ಶಾಂತಮುತ್ತಯ್ಯರವರಿಂದ ಈ ಮಠದ ಪರಂಪರೆಯನ್ನು ಶ್ರೀರೇವಯ್ಯ ಒಡೆಯರಿಂದ ಆರಂಭಿಸಿ ನಂತರ ಶ್ರೀ ಕರಿಯಪ್ಪ ಒಡೆಯರ್‌, ಶ್ರೀ ಸಿದ್ಧಯ್ಯ ಒಡೆಯರ್‌, ಶ್ರೀ ಶೇಖರ್‌ ಒಡೆಯರ್‌, ಶ್ರೀ ಮಂಜಪ್ಪ ಒಡೆಯರ್‌ಗಳು ಈ ಮಠದ ಒಡೆಯರುಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದರು. ಈ ಮಠದಡಿಯಲ್ಲಿ ೮ ಗುಡಿ ಕಟ್ಟೆಗಳು ಇದ್ದು ಇದರ ಅಡಿಯಲ್ಲಿ ೧೮ ಹಳ್ಳಿಗಳಾದ ಹಿರಿಯೂರು, ಇಕ್ಕನೂರು, ಬೇವಿನಹಳ್ಳಿ, ನಂದಿಹಳ್ಳಿ, ಕೆರೆಹಳ್ಳಿ, ಹುಲಿತೊಟ್ಟಿಲು, ಪರಮೇನಹಳ್ಳಿ, ಮಸ್ಕಲ್‌, ಕಾಮಗಾನಹಳ್ಳಿ, ಈರಗಾನಹಳ್ಳಿ, ಕಂದಿಕೆರೆ, ಸೋಮೇರಹಳ್ಳಿ, ತಾಳವಟ್ಟಿ, ಆಲೂರು, ಸಮುದ್ರದಹಳ್ಳಿ, ದಿಂಡಾವರ, ಓಬಳಾಪುರ, ಸಕ್ಕರ ಈ ಹಳ್ಳಿಗಳ ಹಾಲುಮತಸ್ಥರು ಪ್ರತಿ ೧೨ ವರ್ಷಕ್ಕೊಮ್ಮೆ ಇಲ್ಲಿ ಒಂದೆಡೆ ಸೇರಿ ಕಂತೇ ಸೇವೆ ಮತ್ತು ದೊಡ್ಡ ಜಾತ್ರೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿರುವುದು ಇಂದಿಗೂ ರೂಢಿಯಲ್ಲಿದೆ.

ಹೊಸದುರ್ಗ ತಾಲೂಕಿನಾದ್ಯಂತ ಹಾಲುಮತಸ್ಥ ಸಮುದಾಯಗಳು ಅತ್ಯಂತ ಹೆಚ್ಚು ಇರುವುದನ್ನು ಗಮನಿಸಿದರೆ ಇದಕ್ಕೆ ಪೂರಕವಾಗಿ ತಾಲೂಕಿನಾದ್ಯಂತ ಶ್ರೀರೇವಣಸಿದ್ದೇಶ್ವರ ಮಠಗಳು ಬೀರಪ್ಪ ದೇವಾಲಯಗಳು (ಬೀರದೇವರುಗಳು) ಮೈಲಾರಲಿಂಗ ದೇವಾಲಯಗಳು, ದೊಡ್ಡಣ್ಣ, ಚಿಕ್ಕಣ್ಣ, ಕರಿಸಿದ್ದೇಶ್ವರ, ಮಾದಾಳಪ್ಪ, ನಗರಗೇರಪ್ಪ, ಮಲಿಯಮ್ಮ, ಲಕ್ಕಮ್ಮ, ಲಕ್ಷ್ಮಿದೇವಿ ಮುಂತಾದ ದೇವರು ದೇವತೆಗಳನ್ನು ಕಾಣಬಹುದಾಗಿದೆ. ಪ್ರಧಾನವಾಗಿ ತಾಲೂಕಿನ ಶ್ರೀರಾಂಪುರದ ರೇವಣಸಿದ್ದೇಶ್ವರ ಮಠ (ದೇವಸ್ಥಾನವು) ಅತ್ಯಂತ ಕಲಾತ್ಮಕ ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯವು ವಿಜಯನಗರ ಕಾಲದ ಅಥವಾ ನಂತರದ ವರ್ಷಗಳಲ್ಲಿ ನಿರ್ಮಿಸಿರಬಹುದು. ಕಲ್ಲಿನ ಕಂಬಗಳು ಹಾಗೂ ಸುಂದರವಾದ ನಾಟ್ಯರಂಗ, ನವರಂಗ ಮತ್ತು ಮುಖಮಂಟಪ, ಸುಖನಾಸಿ, ಗರ್ಭಗೃಹವನ್ನು ಈ ದೇವಾಲಯವು ಹೊಂದಿದೆ. ಇಲ್ಲಿನ ಕಲ್ಲಿನ ಕಂಬಗಳು ಅವುಗಳಲ್ಲಿರುವ ಶಿಲ್ಪಕಲೆ ಹಾಗೂ ಉಬ್ಬು ಶಿಲ್ಪಗಳು ವಿಜಯನಗರ ದೇವಾಲಯದ ಮಾದರಿಯನ್ನು ನೆನಪಿಸುತ್ತವೆ. ಆಶ್ಚರ್ಯದ ಸಂಗತಿ ಎಂದರೆ ಈ ದೇವಾಲಯದ ಗರ್ಭಗುಡಿಯಲ್ಲಿ ೪ ದೇವರುಗಳ ವಿಗ್ರಹಗಳಿವೆ. ಅವುಗಳೆಂದರೆ ರೇವಣಸಿದ್ದೇಶ್ವರ, ಬೀರಪ್ಪ, ಮಾದಳಪ್ಪ, ನಗರಗೇರಪ್ಪ ದೇವರುಗಳು ಆಗಿದ್ದು ಇವುಗಳನ್ನು ವಿಶೇಷ ಪೂಜೆಗಳಿಂದ ನಿತ್ಯ ನೆರವೇರಿಸುತ್ತಾರೆ. ಇಲ್ಲಿನ ಹಿರಿಯರ ಮೌಖಿಕ ಅಭಿಪ್ರಾಯದ ಪ್ರಕಾರ ಈ ಮಠಕ್ಕಿಂತಲೂ ದೊಡ್ಡ ತೇಕಲವಟ್ಟಿಯಲ್ಲಿರುವ ರೇವಣಸಿದ್ದೇಶ್ವರ ಮಠವೇ ಇದರ ಮೂಲ ಮಠವೆಂದು ತಿಳಿಸುತ್ತಾ ಈ ೪ ದೇವರುಗಳ ಅಡಿಯಲ್ಲಿ ೪೯ ಹರಿವಾಣದ ಹಳ್ಳಿಗಳು ಮತ್ತು ೧೨ ಬೆಡಗಿನವರು ಜೊತೆಗೂಡಿ ದೊಡ್ಡ ಜಾತ್ರೆಯನ್ನು ೧ ವಾರ ಕಾಲ ಆಚರಿಸುತ್ತಾರೆ. ತಾಲೂಕಿನ ಬಾಗೂರು, ಕಾರೆಹಳ್ಳಿ, ತಾಳಿಕಟ್ಟೆ ಈ ೭ ಗುಡಿಕಟ್ಟೆಗಳ ದೇವರುಗಳನ್ನು ಒಂದೆಡೆ ಸೇರಿಸಿ ತೋಪು ಜಾತ್ರೆಯನ್ನು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ತಾಲೂಕಿನ ಕಾರೆಹಳ್ಳಿ ಗ್ರಾಮದಲ್ಲಿ ೫೦೦ ಮನೆ ಹಾಲುಮತಸ್ಥ ಮನೆಗಳಿವೆ. ಇಲ್ಲಿ ೨ ಮಠಗಳಿದ್ದು ಒಂದು ಹಿರೇಮಠ ಮತ್ತೊಂದು ಚಿಕ್ಕಮಠ ಹಾಗೆಯೇ ೨ ಬೀರಲಿಂಗೇವರ ದೇವಾಲಯಗಳೂ ಇವೆ. ಇಲ್ಲಿನ ಗುಡಿಗೌಡ ಕೋಲ್ಕಾರ ಭಂಡಾರಿಗಳಿದ್ದು ಇವರು ಸಮಾಜದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಬ್ಬಹರಿದಿನ ಉತ್ಸವಗಳನ್ನು ನೆರವೇರಿಸಿಕೊಂಡು ಹೋಗುವುದರ ಮೂಲಕ ಸಮಾಜದ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದೊಡ್ಡಮಠದಡಿಯಲ್ಲಿ ೧ ಗುಡಿಕಟ್ಟೆ ೩ ಹರಿವಾಣದವರಾದ ಮಾಚೇನಹಳ್ಳಿ, ಬೋಕಿಕೆರೆ, ಕಲ್ಲೋಡು ಇವರುಗಳು ಪ್ರತಿ ೧೨ ವರ್ಷಕ್ಕೊಮ್ಮೆ ಕಂತೇ ಸೇವೆ-ತೋಪುಜಾತ್ರೆ ಮಾಡುತ್ತಾರೆ. ಅದೇ ರೀತಿಯಲ್ಲಿ ಚಿಕ್ಕಮಠದಡಿಯಲ್ಲಿ ೭ ಗುಡಿ ಕಟ್ಟೆಗಳಾದ ಕಡೂರು, ತರೀಕೆರೆ, ಅಜ್ಜಂಪುರ, ಸೊಲ್ಲಾಪುರ, ಮುಗುಳಿ, ಶಿವನಿ, ತಡಗಿ, ಅನುವನಹಳ್ಳಿ ಹೊಸೂರು ಈ ಹಳ್ಳಿಗಳ ಹಾಲುಮತಸ್ಥ ಸಮುದಾಯಗಳು ಪ್ರತಿ ೧೨ ವರ್ಷಕ್ಕೊಮ್ಮೆ ಕಂತೇ ಸೇವೆ-ತೋಪು ಜಾತ್ರೆಯನ್ನು ಆಚರಿಸಿಕೊಂಡು ಬರುವುದರೊಂದಿಗೆ ರೇವಣಸಿದ್ದೇಶ್ವರ ಹಾಗೂ ಬೀರಪ್ಪನ ದೇವಾಲಯಗಳಲ್ಲಿ ಪ್ರತಿವರ್ಷ ಕಾರ್ತಿಕ ಮಾಸ ದೀಪಾವಳಿ, ಮಹಾನವಮಿ ಮುಂತಾದ ಹಬ್ಬಗಳಲ್ಲಿ ಪಲ್ಲಕ್ಕಿ ಉತ್ಸವ ವಿಶೇಷ ಪೂಜೆಗಳನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿಕೊಂಡು ಬರುತ್ತಿರುವುದು ಇಂದಿಗೂ ರೂಢಿಯಲ್ಲಿದೆ.

ಹೊಸದುರ್ಗ ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್‌ನ ಆವರಣದಲ್ಲಿ ರೇವಣಸಿದ್ದೇಶ್ವರ ಮಠವಿದ್ದು ಇಲ್ಲಿಯೂ ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಕಲ್ಲಿನ ಉಯ್ಯಾಲೆ ಕಂಬಗಳನ್ನು ಹೊಂದಿದ್ದು ಈ ದೇವಾಲಯವು ದಕ್ಷಿಣಾಭಿಮುಖವಾಗಿ ಇರುವುದು ಕಂಡುಬರುತ್ತದೆ. ಹೊಸದುರ್ಗದಿಂದ ೫ ಕಿ. ಮೀ. ದೂರದಲ್ಲಿನ ಕೆಲ್ಲೋಡು ಎಂಬ ಗ್ರಾಮವಿದ್ದು ಇಲ್ಲಿನ ವಿಶಾಲ ಆವರಣದಲ್ಲಿ ಹೊಸದುರ್ಗದ ಬೆಟ್ಟದ ಮೇಲಿನ ಭೈರವೇಶ್ವರ ದೇವರು ಬೆಟ್ಟದಿಂದ ಬಂದು ಇಲ್ಲಿ ನೆಲೆಸಿದ್ದು ದೊಡ್ಡಣ್ಣ, ಚಿಕ್ಕಣ್ಣ, ಭೈರಪ್ಪ, ಕರಿಸಿದ್ದೇಶ್ವರ ದೇವರುಗಳು ಈ ಹಿಂದೆ ಅತ್ಯಂತ ಉತ್ತಮ ಸ್ಥಿತಿಯಲ್ಲಿದ್ದು ಈ ದೇವಾಲಯಗಳು ಇಂದು ನಾಶವಾಗಿವೆ. ಇದೇ ಸ್ಥಳದಲ್ಲಿ ಸಮುದಾಯದ ರಾಜಕೀಯ ಧುರೀಣರಾದ ಮಾನ್ಯ ಶ್ರೀ ಬಿ. ಜಿ. ಗೋವಿಂದಪ್ಪನವರ ನೇತೃತ್ವದಲ್ಲಿ ನೂತನ ದೇವಾಯಗಳು ನಿರ್ಮಿಸಲಾಗುತ್ತಿದೆ. ವಿಶೇಷತೆ ಎಂದರೆ ಈ ಗ್ರಾಮದ ಉತ್ತರ ಭಾಗದ ತೆಂಗಿನ ತೋಟದ ಮಧ್ಯೆ ರೇವಣಸಿದ್ದೇಶ್ವರ ಮಠ/ದೇವಾಲಯವಿದೆ. ಇದು ಚಿತ್ರದುರ್ಗಕ್ಕೆ ಸಮೀಪವಿರುವ ಹುಲ್ಲೂರು ಶ್ರೀರೇವಣ ಸಿದ್ದೇಶ್ವರರ ದೇವಾಲಯದ ಮಾದರಿಯಲ್ಲಿದ್ದು ಈ ಎರಡು ದೇವಾಲಯಗಳು ಜೊತೆಜೊತೆಯಲ್ಲಿ ನಿರ್ಮಾಣಗೊಂಡಿರಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ದೇವಾಲಯವೂ  ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಗರ್ಭಗೃಹ ಸುಖನಾಸಿ ನವರಂಗ ಮುಖಮಂಟಪ ಎರಡು ಜಗಲಿಗಳನ್ನು ಒಳಗೊಂಡಿದ್ದು ಸಂಪೂರ್ಣವಾಗಿ ಕಲ್ಲಿನ ಕಂಬಗಳು ಮತ್ತು ಬೋದಿಗೆಗಳನ್ನು ಹೊಂದಿದ್ದು ಈ ದೇವಾಲಯದ ಎದುರು ಕಲ್ಲಿನ ತೂಗು ಉಯ್ಯಾಲೆ ಕಂಬಗಳಿದ್ದು ಈ ಕಂಬಗಳು ಸಿಡಿಲಿಗೆ ಆಹುತಿಯಾಗಿ ಭಗ್ನಗೊಂಡಿವೆ. ಅತ್ಯಂತ ವಿನಾಶದ ಅಂಚಿನಲ್ಲಿರುವ ಈ ದೇವಾಲಯವನ್ನು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡಿಸಿದಲ್ಲಿ ಮೂಲ ಸ್ವರೂಪಕ್ಕೆ ದಕ್ಕೆಯಾಗದೇ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗಬಹುದು. ಒಟ್ಟಾರೆ ಈ ದೇವಾಲಯವು ಪ್ರಾಚೀನ ಹಾಗೂ ಬೃಹತ್‌ ಐತಿಹಾಸಿಕ ದೇವಾಲಯವಾಗಿದ್ದು ಇಲ್ಲಿ ಪ್ರತಿ ೨೫ ವರ್ಷಕ್ಕೊಮ್ಮೆ ಕಂತೆ ಸೇವೆ ತೋಪುಜಾತ್ರೆ ನಡೆದುಕೊಂಡು ಬರುತ್ತಿದೆ. ಒಟ್ಟಾರೆ ಇಡೀ ಜಿಲ್ಲೆಯಾದ್ಯಂತ ಹಾಲುಮತಸ್ಥರ ರೇವಣಸಿದ್ದ ಪರಂಪರೆಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಮಠದಡಿಯಲ್ಲಿ ಕಾಲಕಾಲಕ್ಕೆ ಧಾರ್ಮಿಕ ವಿಧಿ-ವಿಧಾನಗಳನ್ನು ಹಾಗೂ ಸತ್‌ ಸಂಪ್ರದಾಯಗಳನ್ನು ಆಚಾರ-ವಿಚಾರಗಳನ್ನು ಆಚರಿಸಿಕೊಳ್ಳುತ್ತಾ ಸಂರಕ್ಷಿಸಿಕೊಳ್ಳುತ್ತಾ, ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು, ಆ ಮೂಲಕ ಹಾಲುಮತದವರ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಈ ಸಮುದಾಯದ ಪಾತ್ರ ವಿಶೇಷವಾಗಿದೆ.