ಬುಡಕಟ್ಟು ಮೂಲದಿಂದ ಬಂದ ಗೊಲ್ಲ, ಬೇಡ, ಒಕ್ಕಲಿಗ, ಕುರುಬ ಮೊದಲಾದ  ಸಮುದಾಯಗಳು ಸಾಂಸ್ಕೃತಿಕ ಅನನ್ಯತೆಯಿಂದ ಈ ನಾಡಿನ ಸಾಮಾಜಿಕ ಪರಿಸರ, ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಮಾತೃ ಪ್ರಧಾನ ಸಂಸ್ಕೃತಿಯ ಮೂಲದಿಂದ ಬಂದ ಈ ಸಮುದಾಯಗಳು, ಕ್ರಮೇಣ ಪಿತೃ ಪ್ರಧಾನ ಸಂಸ್ಕೃತಿಯನ್ನು ಅನುಸರಿಸಿವೆ. ಆಧುನಿಕತೆಯ ಪರಿಣಾಮ ಮೂಲ ಸಂಸ್ಕೃತಿಯ ಲಕ್ಷಣಗಳು ಕ್ರಮೇಣ ಮರೆಯಾಗಿ, ಕೃಷಿಕ ಸಮಾಜವಾಗಿ ಪರಿವರ್ತನೆಗೊಂಡಿವೆ. ಬುಡಕಟ್ಟು ಸಮುದಾಯಗಳಲ್ಲಿ ನೆಲಮೂಲ ಸಂಸ್ಕೃತಿಯ ಪ್ರಧಾನ ಕಸುಬುಗಳಾದ

೧. ಬೇಟೆ ಸಂಸ್ಕೃತಿ

೨. ಪಶುಪಾಲನಾ ಸಂಸ್ಕೃತಿ

೩. ಕೃಷಿ-ಶ್ರಮ ಸಂಸ್ಕೃತಿಗಳನ್ನು ಅನುಕ್ರಮವಾಗಿ ಕಾಣಬಹುದು. ಇವುಗಳನ್ನು ನಂಬಿ ಬದುಕನ್ನು ಕಟ್ಟಿಕೊಂಡಿದ್ದು ಈಗ ಇತಿಹಾಸ. ಈ ಎಲ್ಲಾ ಸಮುದಾಯಗಳಲ್ಲಿ ಹುಟ್ಟು, ಸಾವು ಮದುವೆ, ಹಬ್ಬ ಜಾತ್ರೆ, ಉತ್ಸವ, ಮೊದಲಾದ ಆಚರಣೆಗಳಲ್ಲಿ ಏಕಮಾದರಿ ಇದ್ದರೂ, ಕೆಲವೊಂದು ಹಬ್ಬ ಮದುವೆ ಮೊದಲಾದ ಆಚರಣೆಗಳಲ್ಲಿ ವೈವಿಧ್ಯತೆಯನ್ನು ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ಕಾಣಬಹುದು.

ಬುಡಕಟ್ಟು ಸಂಸ್ಕೃತಿಯಿಂದ ಬಂದ ಹಾಲುಮತ ಸಮುದಾಯದವರು ಅತ್ಯಂತ ಸ್ವಾಭಿಮಾನಿಗಳು. ಇತರೆ ಸಮುದಾಯಗಳೊಂದಿಗೆ ಬಿಗಿಯಾದ, ಅದರಲ್ಲೂ ಆತ್ಮೀಯ ಸಂಬಂಧ ಇಟ್ಟುಕೊಂಡವರು.

೧. ಕುರಿ ಸಾಕಣೆ,

೨. ಕಂಬಳಿ ನೇಕಾರಿಕೆ

೩. ಕೃಷಿ-ಈ ಪಾರಂಪರಿಕ ವೃತ್ತಿಗಳಲ್ಲಿ ಪರಿಣತಿಯನ್ನು ಪಡೆದವರಾಗಿದ್ದಾರೆ. ಕುರುಬರು ದೈಹಿಕ ಶಕ್ತಿಗೆ ಹೆಸರಾದವರು. ಕುಸ್ತಿ (ಪೈಲ್ವಾನ್‌) ಪ್ರವೀಣರು. ಮೊದಲು ಕುರುಬರಿರುವ ಈ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಚಿತ್ರದುರ್ಗದ ಗರಡಿ ಮನೆಗಳು ಈಗಲೂ ಇದನ್ನೇ ಬಿಂಬಿಸುತ್ತವೆ. ಪೈಲ್ವಾನರ ಮನೆಗಳೆಂದೇ ಖ್ಯಾತಿ ಪಡೆದಿವೆ. (ಪೈಲ್ವಾನ್‌ ತಿಪ್ಪಾಸ್ವಾಮಿ, ಪೈಲ್ವಾನ್‌ ನಂಜಪ್ಪ) ದೊಡ್ಡಪೇಟೆ, ಬುರುಜನಹಟ್ಟಿ, ಪುರುವಿನಕಟ್ಟೆ ಪ್ರದೇಶಗಳಲ್ಲಿ ಪಾಳೆಗಾರರ ಕಾಲದಿಂದಲೂ ಗರಡಿಮನೆಗಳಿದ್ದು, ಇತ್ತೀಚೆಗೆ ವ್ಯಾಯಾಮಶಾಲೆಗಳೆಂದು ಬದಲಾಗಿವೆ. ದಾವಣಗೆರೆಯಲ್ಲಿ ಶ್ರೀಬೀರೇಶ್ವರ ವ್ಯಾಯಾಮ ಶಾಲೆ ತುಂಬಾ ಜನಪ್ರಿಯವಾದುದು. ಡೊಳ್ಳು ಕುಣಿತ, ದಟ್ಟಿ ಕುಣಿತ, ಗೊರವಯ್ಯನ ಕುಣಿತ, ಚೌಡಿಕೆ ಹಾಡು ಇವೆಲ್ಲವೂ ಈ ಸಮುದಾಯದವರ ಜನಪದ ನೃತ್ಯ ಮತ್ತು ಕಲೆಗಳಾಗಿವೆ.

‘ಹಾಲುಮತ ಮೇಲುಮತ’ವೆಂಬ ಭಾವನೆ ಈ ಸಮುದಾಯಕ್ಕಿದ್ದು, ಶೈವ ಮತ್ತು ವೈಷ್ಣವ ಸಂಬಂಧಿ ಆಚರಣೆಗಳೆರಡನ್ನೂ ಇವರಲ್ಲಿ ಕಾಣಬಹುದು. ಸುಮಾರು ೯೦% ಶೈವ ಸಂಪ್ರದಾಯವಿದ್ದು ಅಂಗಾರ, ಭಂಡಾರ, ವಿಭೂತಿಯನ್ನು ಹಣೆಗೆ ಧರಿಸುತ್ತಾರೆ. ಬೀರಲಿಂಗೇಶ್ವರನೇ ಆರಾಧ್ಯ ದೈವವಾಗಿದ್ದರೂ, ಮೈಲಾರಲಿಂಗ ಮತ್ತು ರೇವಣಸಿದ್ಧರ ಸಂಪ್ರದಾಯವೂ ಇದೆ. ಇವುಗಳನ್ನು ಮಠ, ಸಿಂಹಾಸನವೆಂದು ಕರೆಯುತ್ತಾರೆ. ಉಳಿದ ೧೦% ವೈಷ್ಣವ ಸಂಪ್ರದಾಯವಿದ್ದು, ತಿಮ್ಮಪ್ಪನ ಒಕ್ಕಲುಗಳಾಗಿ ನಾಮ ಧರಿಸುತ್ತಾರೆ. ಉಳಿದ ೧೦% ವೈಷ್ಣವ ಸಂಪ್ರದಾಯವಿದ್ದು, ತಿಮ್ಮಪ್ಪನ ಒಕ್ಕಲುಗಳಾಗಿ ದೇವತಾರಾಧನೆಯೂ ಇದ್ದು, ಉಚ್ಚಂಗಿಯಲ್ಲಮ್ಮನ ಸಂಪ್ರದಾಯವಿದೆ. ಬೀರಪ್ಪದೇವರ ಜೊತೆಯಲ್ಲಿ ಹೆಣ್ಣುದೇವತೆ ಇದ್ದೇ ಇರುತ್ತದೆ. ಮನೆದೇವರು, ಕುಲದೇವರು, ಗ್ರಾಮದೇವರ ಭಕ್ತರಾಗಿ ಧಾರ್ಮಿಕ ಕಾರ್ಯಾಚರಣೆಗಳಲ್ಲಿ ಭಾಗಿಯಾಗುತ್ತಾರೆ.

ಸಾಮಾಜಿಕವಾಗಿ ಈ ಸಮುದಾಯದಲ್ಲಿ ಪ್ರಧಾನವಾಗಿ ಎರಡು ಒಳ ಪಂಗಡಗಳನ್ನು ಕಾಣಬಹುದು.

೧. ಹತ್ತಿ ಕಂಕಣದವರು

೨. ಉಣ್ಣೆ ಕಂಕಣದವರು

ಪೂರ್ವದಲ್ಲಿ ಇವರಲ್ಲೆ ಶ್ರೇಷ್ಠ ಮತ್ತು ಕನಿಷ್ಠವೆಂಬ ಭಾವನೆಯಿದ್ದರೂ, ಇತ್ತೀಚೆಗೆ ಶೈಕ್ಷಣಿಕವಾಗಿ ಸಮುದಾಯ ಒಳಗಾದಂತೆ ಈ ಭಾವನೆ ಕಡಿಮೆಯಾಗುತ್ತಿದೆ. ಇದು ಇಂದಿಗೆ ಅನಿವಾರ್ಯ ಕೂಡ. ಸಮಾಜ ಸಂಕೀರ್ಣ, ಸಂಕುಚಿತತೆ, ಸ್ವಾರ್ಥಕತೆಯಿಂದ ತುಂಬಿಕೊಳ್ಳುತ್ತಿರುವಾಗ, ಇಂಥ ಸಮುದಾಯಗಳು ಈ ತಾರತಮ್ಯ ಮರೆತು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಒಗ್ಗೂಡುವಿಕೆ ಆಗುವುದು ಸಮಾಜದ ಅಭಿವೃದ್ಧಿಯಿಂದ ಅಗತ್ಯವಾಗಿದೆ. ಸಮುದಾಯದಲ್ಲಿ ಹಲವಾರು ಒಳ ಬೆಡಗುಗಳಿದ್ದು, ಒಂದೇ ಬೆಡಗಿನ ಒಳಗೆ ಅಂದರೆ ಒಳಬಾಂಧವ್ಯದಲ್ಲಿ ವಿವಾಹ ನಿಷೇಧ. ಅದು ಸೋದರ ಸಂಬಂಧ, ಬೇರೆ ಬೆಡಗು ಅಂದರೆ ಹೊರ ಬಾಂಧವ್ಯ ನೆಂಟರ ಸಂಬಂಧ. ಮದುವೆಯ ಸಂದರ್ಭಗಳಲ್ಲಿ ಸಮುದಾಯದ ಬಹುಪಾಲು ಜನರು ಭಾಗವಹಿಸಿ, ಬಾಂಧವ್ಯ ವೃದ್ಧಿಯಲ್ಲಿ ಭಾಗಿಯಾಗುತ್ತಾರೆ. ಮದುವೆಯ ಸಂದರ್ಭಗಳಲ್ಲಿ ಪ್ರಾಥಮಿಕ ಆಚರಣೆಗಳು ಪ್ರಧಾನ ಆಚರಣೆಗಳು ಮತ್ತು ನಂಬಿಕೆಯಲ್ಲಿವೆ. ಹಾಗೆಯೇ ನಾಮಕರಣದ ಸಂದರ್ಭದಲ್ಲೂ ಮಗುವಿಗೆ ಮೊದಲು ಮನೆದೇವರು ಇಲ್ಲವೆ, ಕುಟುಂಬದ ಹಿರಿಯರ ಹೆಸರಿಟ್ಟು, ಅನಂತರ ತಮಗಿಷ್ಟ ಬಂದ ಹೆಸರನ್ನು ಕರೆಯುತ್ತಾರೆ.

ಕುರುಬರು ಸಾಮಾನ್ಯವಾಗಿ ತಮ್ಮ ಯಾವುದೇ ಶುಭ ಕಾರ್ಯಗಳಲ್ಲಿ ‘ಕಂಬಳಿಗೆ’ ಹೆಚ್ಚಿಗೆ ಮಹತ್ವ ನೀಡುತ್ತಾರೆ. ಕಂಬಳಿ ಗದ್ದುಗೆ ಅತಿ ಪವಿತ್ರವೆಂಬ ಭಾವನೆಯಿದ್ದು, ಕಂಬಳಿ ಗದ್ದುಗೆ ಜೀವಂತ ಗದ್ದುಗೆಯೆಂದೂ, ಉಳಿದ ಗದ್ದುಗೆಗಳು ಸತ್ತ ಗದ್ದುಗೆಗಳೆಂಬ ಭಾವನೆಯೂ ಪ್ರಚಲಿತದಲ್ಲಿದೆ. ಕಂಬಳಿಯನ್ನು ಜೀವಂತ ಕುರಿಗಳ ತುಪ್ಪಟದಿಂದ ತಯಾರಿಸಿದರೆ, ಬೇರೆ ಗದ್ದುಗೆಗೆ ಹಾಸುವ ಹೊದಿಕೆ ಸತ್ತ ಪ್ರಾಣಿಯ ಚರ್ಮದಿಂದ (ಜಿಂಕೆ, ಹುಲಿ) ತಯಾರಿಸುತ್ತಾರೆ. ಹಾಗಾಗಿಯೇ ಪ್ರತಿ ಮಂಗಳ ಕಾರ್ಯದಲ್ಲಿ ಕಂಬಳಿ ಪಾತ್ರ ವಹಿಸುತ್ತದೆ.

ಸಾಮರಸ್ಯ, ಸೌಹಾರ್ದತೆಗೆ ಹೆಸರಾದ ಕುರುಬ ಸಮುದಾಯ ತನ್ನ ನೆರೆಹೊರೆಯ ಸಮುದಾಯಗಳೊಂದಿಗೆ ಕೊಡು ಕೊಳುವಿಕೆಯಿಂದ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ಬಡಗಿಯವರಿಗೆ, ಕಮ್ಮಾರರಿಗೆ, ಗೊಲ್ಲರಿಗೆ, ಅಗಸರಿಗೆ, ಮಣೆಗಾರರಿಗೆ, ಉಚಿತವಾದ ಕಂಬಳಿ ಕೊಡುವುದು, ಅವರಿಂದ ವೃತ್ತಿಗೆ ಸಂಬಂಧಿಸಿದ ಸಹಾಯ ಪಡೆಯುವುದು ಸಾಮಾನ್ಯವಾಗಿ ಎಲ್ಲಾ ಕಡೆಯೂ ಇದೆ.

ಒಂದು ಸಮಾಜದ ಪ್ರಗತಿ ನಿಂತಿರುವುದು, ಆ ಸಮಾಜದ ಸಂಘ ಸಂಸ್ಥೆಗಳಿಂದ. ಸಮಾಜ ಸುಧಾರಕರಿಂದ, ರಾಜಕೀಯ ನಾಯಕರುಗಳಿಂದ. ಯಾವುದೇ ಸಮುದಾಯ ರಾಜಕೀಯವಾಗಿ ಪ್ರಬಲರಾಗದಿದ್ದಲ್ಲಿ ಅಥವಾ ರಾಜಕೀಯ ಸ್ಥಾನಮಾನವಿಲ್ಲದೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವೇ ಇಲ್ಲವೆಂಬ ವಾತಾವರಣವನ್ನು ಇಂದು ಕಾಣುತ್ತಿದ್ದೇವೆ. ಬಲಿಷ್ಠ ಸಮುದಾಯಗಳು ರಾಜಕೀಯ ಅಧಿಕಾರವನ್ನು ಹಿಡಿಯುವ ಪೈಪೋಟಿಯಲ್ಲಿ ತೊಡಗಿ, ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರವೆಂಬುದು ಉಳ್ಳವರ ಶಕ್ತಿಯಾಗುತ್ತದೆ. ಇದರಿಂದ ಅನ್ಯ ಸಮುದಾಯಗಳ ಸೌಲಭ್ಯಗಳು ಉಳ್ಳವರ ಪಾಲಾಗುತ್ತವೆ. ಹಾಗಾಗಿ ಹಿಂದುಳಿದ, ಶೋಷಿತ, ಸಮುದಾಯಗಳು ಶಿಕ್ಷಣ ಸಂಘಟನೆಗಳ ಮೂಲಕ ರಾಜಕೀಯ ಸ್ಥಾನ ಪಡೆದು ಆ ಮೂಲಕ ತಮ್ಮ ಪಾಲಿನ ಹಕ್ಕನ್ನು ಪಡೆದು, ಸಮುದಾಯದ ಶಕ್ತಿಯನ್ನು ದೃಢೀಕರಿಸಬೇಕಿದೆ. ಹಾಗಾಗಿ ಯಾವುದೇ ಸಮುದಾಯದ ಸ್ಥಿತಿ-ಗತಿ ಸುಧಾರಣೆಯಾಗಬೇಕಾದರೆ ಮುಖ್ಯವಾಗಿ

೧. ಶಿಕ್ಷಣ

೨. ಸಂಘಟನೆ

೩. ರಾಜಕೀಯ

ಇವುಗಳ ಪಾತ್ರ ಅತಿಮುಖ್ಯ. ದೈಹಿಕ ಶಕ್ತಿ ಎಷ್ಟು ಮುಖ್ಯವೋ ಈಗ ಬೌದ್ಧಿಕ ಶಕ್ತಿಯು ಅಷ್ಟೇ ಮುಖ್ಯ. ಬೌದ್ಧಿಕವಾಗಿ ಸಮುದಾಯ ಜಾಗೃತಗೊಳ್ಳಬೇಕಿದೆ. ತನ್ನ ಸ್ಥಾನಮಾನ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸಮುದಾಯದ ಸಾಮಾಜಿಕ ಸ್ಥಾನಮಾನಕ್ಕೆ ಶಿಕ್ಷಣ ಅಗತ್ಯ. ಜ್ಞಾನ ವಿಕಾಸ ಒಂದು ಕಡೆಯಾದರೆ, ಉದ್ಯೋಗದ ಆಧಾರಕ್ಕೂ ಅಷ್ಟೇ ಮುಖ್ಯ. ಶೋಷಿತ ಅಥವಾ ಹಿಂದುಳಿದ ಸಮುದಾಯಗಳು ಇತ್ತೀಚೆಗೆ ಈ ಕ್ಷೇತ್ರವನ್ನು ಪ್ರವೇಶಿಸುತ್ತಿವೆ. ಇನ್ನೂ ಆಗ ಬೇಕಾದದ್ದು ಗ್ರಾಮೀಣ ಪ್ರದೇಶದಲ್ಲಿ. ಅದರಲ್ಲೂ ಈ ಸಮುದಾಯದ ಮಹಿಳೆಯರು ಶಿಕ್ಷಣ ಪಡೆಯುವಂತಾಗಬೇಕು. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಆಧುನಿಕ, ಅದರಲ್ಲೂ ಉದ್ಯೋಗ ಆಧಾರಿತ ಶಿಕ್ಷಣ ಸಿಗುವಂತಾದರೆ, ಸಮುದಾಯದ ಸಾಮಾಜಿಕ ಸ್ಥಾನಮಾನ ಉನ್ನತ ಸ್ಥಿತಿಗೇರುತ್ತದೆ.

ಸಂಘ ಸಂಸ್ಥೆಗಳ ಪಾತ್ರವಂತೂ ಸಮುದಾಯ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಪ್ರಧಾನ ಪಾತ್ರವಹಿಸುತ್ತವೆ. ಸಮುದಯದ ವಿದ್ಯಾವಂತ ಯುವಕರು ಸಂಘಟಕರು, ಬುದ್ಧಿ ಜೀವಿಗಳು, ಅಧಿಕಾರಿಗಳು ಒಂದಾಗಿ ಸಾಂಸ್ಕೃತಿಕ ಸಂಘಟನೆಗಳನ್ನು ಸ್ಥಾಪಿಸಬೇಕು. ಸಮುದಾಯದ ನೌಕರರ ಸಂಘ, ಸ್ತ್ರೀಶಕ್ತಿ ಸಂಘ, ಯುವಕ ಸಂಘ ಮೊದಲಾದವುಗಳು ಹಳ್ಳಿ, ತಾಲೂಕು ಜಿಲ್ಲೆಗಳಲ್ಲಿ ಸ್ಥಾಪನೆಯಾಗಬೇಕಿದೆ. ಆ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ. ಸರ್ಕಾರಿ ಸೌಲಭ್ಯ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಬೇಕಿದೆ. ಕಾಳಿದಾಸ, ಕನಕದಾಸ, ಸಂಗೊಳ್ಳಿ ರಾಯಣ್ಣ, ರೇವಣಸಿದ್ದೇಶ್ವರ, ಬೀರಲಿಂಗೇಶ್ವರ ಮೊದಲಾದ ಇತಿಹಾಸ ಮತ್ತು ಧಾರ್ಮಿಕ ಸುಧಾರಕರ ಹೆಸರಿನಲ್ಲಿ ಸಂಘ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದು, ಈ ಮೂಲಕ ಶೈಕ್ಷಣಿಕ ಸುಧಾರಣೆ, ಸಮುದಾಯ ಸಂಘಟನೆ ಮತ್ತು ಆರ್ಥಿಕ ಸುಧಾರಣೆಯನ್ನು ಸಾಧಿಸುತ್ತಿರುವುದನ್ನು ಕಾಣಬಹುದು. ಸಮುದಾಯದ ಹಿತಕ್ಕೆ ಸಂಘಟಕರು ವೈಯಕ್ತಿಕ ಹಿತವನ್ನು ಮರೆತು ಸಾಂಸ್ಕೃತಿಕ ಶಕ್ತಿಯಾಗಿ ಹೊರಬರಬೇಕಿದೆ. ಸಮುದಾಯ ಬಲಗೊಳ್ಳಬೇಕಿದೆ.

ಈ ಎಲ್ಲವುಗಳ ಹಿಂದೆ ಸಮುದಾಯಕ್ಕೆ ರಾಜಕೀಯ ಶಕ್ತಿ ಬೇಕು. ರಾಜ್ಯದಲ್ಲಿ ೩ನೇ ಅತಿದೊಡ್ಡ ಜನಾಂಗವಾಗಿದ್ದರೂ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯಿದ್ದರೂ ರಾಜಕೀಯದಲ್ಲಿ ಸಮುದಾಯಕ್ಕೆ ತಕ್ಕ ಪ್ರಾತಿನಿಧ್ಯ ದೊರೆತಿಲ್ಲ. ಬೇರೆ ಬೇರೆ ಪಕ್ಷಗಳನ್ನು ಬೆಂಬಲಿಸಿ ಕವಲೊಡೆದಿರುವುದರಿಂದ ರಾಜಕೀಯ ಒಗ್ಗಟ್ಟು ಸಂಘರ್ಷದ ಸ್ಥಿತಿಯಲ್ಲದೆ ಬಲಶಾಲಿ ಸಮುದಾಯಗಳ ಮುಂದೆ ಹಿಂದುಳಿದ ಸಮುದಾಯದ ಶಕ್ತಿಯಾಗಿ ಹಲವಾರು ಸಮಸ್ಯೆಗಳನ್ನು ಪರಿಹರಿಸುವುದಲ್ಲದೆ ಈ ಕ್ಷೇತ್ರದಲ್ಲಿ ಶಾಶ್ವತ ನೆಲೆ ಕಂಡುಕೊಳ್ಳಬಹುದು.

ಚಿತ್ರದುರ್ಗ ಪರಿಸರ ಬಹುಮುಖಿ. ಸಂಸ್ಕೃತಿಯ ನೆಲೆ. ಇಲ್ಲಿನ ಬುಡಕಟ್ಟು, ಸಮುದಾಯಗಳು, ಜಾತಿ, ಜನಾಂಗ, ಭಾಷೆ, ಸಾಹಿತ್ಯ, ಸಂಸ್ಕೃತಿಗಳು ವಿಶಿಷ್ಟತೆಯಿಂದ ಕೂಡಿದ್ದು, ಈ ಹಿನ್ನಲೆಯೊಳಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೂ ಸಮುದಾಯದ ಪರಂಪರೆಯನ್ನು ಕುರಿತ ಮೌಖಿಕ ಆಕರಗಳು, ಹಾಡು, ಕತೆ, ಕಾವ್ಯ ಸಂಗ್ರಹವಾಗಬೇಕಿದೆ. ಆ ಮೂಲಕ ಪರಂಪರೆಯ ಆಹಾರ, ಪದ್ಧತಿ,  ಆರೋಗ್ಯ, ನ್ಯಾಯ, ಆಡಳಿತ, ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಸ್ಥಿತಿಗತಿ, ನಿಸರ್ಗದ ಬಗೆಗಿನ ಪರಿಭಾವನೆ ಮೊದಲಾದ ಅವರ ಆರೋಗ್ಯಕರ ಮೌಲ್ಯಗಳನ್ನು ಗುರುತಿಸುವ, ಶೋಧಿಸುವ ಸಂಗ್ರಹಿಸುವ ಕೆಲಸ ಆಗಬೇಕಿದೆ.

ಈಗಾಗಲೇ ಚರ್ಚಿತವಾದಂತೆ ಯಾವುದೇ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳು ನಿರ್ಧಾರವಾಗುವುದು ಶಿಕ್ಷಣ, ಸಂಘಟನೆ ಮತ್ತು ರಾಜಕೀಯ ಸ್ಥಾನಮಾನಗಳಿಂದ. ಈ ಹಿನ್ನೆಲೆಯೊಳಗೆ ಈವರೆಗೆ ಚರ್ಚಿಸಿದ್ದು, ಚಿತ್ರದುರ್ಗ ಜಿಲ್ಲೆಯನ್ನೆ ಗಮನಿಸಿ ಹೇಳುವುದಾದರೆ ಹೊಸದುಗ್ ಕ್ಷೇತ್ರದಲ್ಲಿ ರಾಜಕೀಯ ಪ್ರಾಬಲ್ಯ ಸ್ಥಾಪಿಸಿರುವುದನ್ನು ಬಿಟ್ಟರೆ, ಉಳಿದ ತಾಲೂಕುಗಳಲ್ಲಿ ಇಲ್ಲಿ ಹೊಸದುರ್ಗ ಕ್ಷೇತ್ರದಲ್ಲಿ ಸಮುದಾಯದ ರಾಜಕೀಯ ಪ್ರಜ್ಞೆ ೧೯೬೨ರಲ್ಲೇ ಜಾಗೃತಗೊಂಡಿತು. ರಾಜ್ಯದ ೩ನೇ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರನ್ನು ಸೋಲಿಸುವ ಮೂಲಕ ಶ್ರೀ. ಜಿ. ಟಿ. ರಂಗಪ್ಪನವರು ಸಮುದಾಯದ ಪ್ರತಿನಿಧಿಗಳಾಗಿ ಚುನಾಯಿತರಾದರು. ಮುಂದೆ ೧೯೬೭ರಲ್ಲಿ ಎಂ. ರಾಮಪ್ಪನವರು, ೧೯೭೨ರಲ್ಲಿ ಬಿ. ಜಿ. ಗೋವಿಂದಪ್ಪನವರು ಮತ್ತೆ ೨೦೦೪ರಲ್ಲಿ ಬಿ. ಜಿ. ಗೋವಿಂದಪ್ಪನವರು ತಮ್ಮ ಸಮುದಾಯದ  ಶಕ್ತಿಯಿಂದ ರಾಜಕೀಯ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಅವಿಭಜಿತ ಜಿಲ್ಲೆಯಾಗಿದ್ದಾಗ ೧೯೮೩-೮೫ ಕೆ. ಮಲ್ಲಪ್ಪಜ್ಜನವರು ಹರಿಹರ ಮತ್ತು ಮಾಯಗೊಂಡ ಕ್ಷೇತ್ರದಿಂದ, ಡಾ. ವೈ. ನಾಗಪ್ಪನವರು ೧೯೮೯-೯೯ರಲ್ಲಿ ಹರಿಹರ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗದಲ್ಲಿ ಸಹೋದರರಾದ ಕಾಂ. ಜಿ. ಚಂದ್ರಪ್ಪ ಮತ್ತು ಮುರುಘರಾಜೇಂದ್ರ ಒಡೆಯರ್‌ ರಾಜಕೀಯ ಅನುಭವಿಗಳು. ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ, ಹಲವಾರು ಜನಪರ ಹೋರಾಟಗಳಲ್ಲಿ, ಚಳುವಳಿಗಳಲ್ಲಿ, ಗುರುತಿಸಿಕೊಂಡಿದ್ದಾರೆ. ಅರಣ್ಯ ಚಳವಳಿ, ರೈಲ್ವೆ ಚಳವಳಿ, ಕಾರ್ಮಿಕ ಸಂಘಟನೆ ಮೊದಲಾದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಳವಳಿಯಲ್ಲಿ ಭಾಗವಹಿಸಿ, ಸೆರೆಮನೆವಾಸ ಅನುಭವಿಸಿದವರೂ ಇದ್ದಾರೆ. ಇದಲ್ಲದೆ ಅಹಿಂದ ಚಳವಳಿ, ಭದ್ರಾ ಮೇಲ್ದಂಡೆ ಯೋಜನೆ ಮೊದಲಾದ ಜನಪದ ಹೋರಾಟಗಳಲ್ಲಿ ಹಲವಾರು ಮುಖಂಡರು ಭಾಗವಹಿಸುತ್ತಿದ್ದಾರೆ. ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿಯೂ ಗುರುತಿಸಿಕೊಂಡಿರುವ ಸಮುದಾಯ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆಗಳಲ್ಲಿ ಸಮುದಾಯದ ಮುಖಂಡರು ಪ್ರಾತಿನಿಧ್ಯ ಸ್ಥಾಪಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ರಾಷ್ಟ್ರಸೇವೆ ಮಾಡಿರುವವರು, ಸಮುದಾಯದ ಮುಖಂಡರು ಈ ಜಿಲ್ಲೆಯಲ್ಲಿದ್ದಾರೆ. ಎಂ. ರಾಮಪ್ಪನವರು, ಕೆ. ವೆಂಕಟರಾಮಯ್ಯ, ಕೌನ್ಸಿಲರ್‌ ಭೀಮಪ್ಪ ಸೊಪ್ಪಿನವರ, ವರದುಣಿಸೆಪ್ಪ, ಗಿರಿಯಪ್ಪ, ಸೊಪ್ಪಿನಮಠ ಗೋಪಾಲ ಕೃಷ್ಣ, ಮೇಣುಗೋಪಾಲ, ಚಳ್ಳಕೆರೆ ಕೆಂಚಪ್ಪ, ಮೊದಲಾದವರು ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದ್ದಾರೆ.

ಸಮುದಾಯದ ಸಾಮಾಜಿಕ ಸ್ಥಾನಮಾನ ಪಡೆಯಲು ಮುಖ್ಯವಾಗಿ ಶೈಕ್ಷಣಿಕ ಸುಧಾರಣೆ, ಸಾಮಾಜಿಕ ಸಂಘಟನೆ, ರಾಜಕೀಯ ಸ್ಥಾನಮಾನಬೇಕು. ಆ ಮೂಲಕ ಸಾಮಾಜಿಕ ಭದ್ರತೆ ಒದಗಿಸಬಹುದು. ಚುನಾಯಿತ ಪ್ರತಿನಿಧಿಗಳು, ಸಮಾಜದ ಮುಖಂಡರು, ಸರ್ಕಾರದ ಸೌಲಭ್ಯಗಳನ್ನು ವಿವಿಧ ಯೋಜನೆಗಳ ಲಾಭಗಳನ್ನು ಸಮುದಾಯಕ್ಕೆ ಸಕಾಲದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು. ಸ್ಥಳೀಯ ಸಂಸ್ಥೆ ಮತ್ತು ಸಹಕಾರ ಸಂಘಗಳ ಸ್ಥಾಪನೆಯಾಗಬೇಕು. ಕೈಗಾರಿಕೆ, ವಿದ್ಯಾಸಂಸ್ಥೆಗಳ ಆರಂಭ, ಜೊತೆಗೆ ಇತರೆ ಉಪಕಸಬುಗಳಲ್ಲಿ ಜನತೆ ತೊಡಗಿಕೊಳ್ಳುವಂತೆ ಆ ಮೂಲಕ ಸಮಾಜವನ್ನು ಆರ್ಥಿಕವಾಗಿ ಸದೃಢವಾಗಿ ಕಟ್ಟಬೇಕಿದೆ. ಶಿಕ್ಷಣ ಸಂಘಟನೆ ಆರ್ಥಿಕ ಸುಧಾರಣೆ ಇವುಗಳಿಗಾಗಿಯೇ ಸಮುದಾಯದ ಯುವ ಜನತೆಯ ನಿರ್ಮಾಣ ಮಾಡಿಕೊಳ್ಳಬೇಕಿದೆ. ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಶಿಕ್ಷಣ ಸ್ವ-ಉದ್ಯೋಗ ಮಾಹಿತಿಯ ಜೊತೆಗೆ ಆಧುನಿಕ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನ್ನದ್ಧಗೊಳ್ಳಬೇಕಿದೆ. ಈ ಹಿನ್ನೆಲೆಯೊಳಗೆ ಮುನ್ನೆಡೆದರೆ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢವಾಗಲು ಸಾಧ್ಯ.