“ಜೀವನವನ್ನು ಒದಗಿಸುವುದು ಆರ್ಥಿಕಾಭಿವೃದ್ಧಿಯ ಗುರಿಯಾಗಬೇಕು”. ಯಾವುದೇ ರಾಷ್ಟ್ರದ, ರಾಜ್ಯದ ಅಥವಾ ಪ್ರದೇಶದ ಅರ್ಥವ್ಯವಸ್ಥೆಯನ್ನು ಆ ರಾಷ್ಟ್ರದ ಅಥವಾ ಆ ಪ್ರದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ. ಪ್ರತಿ ರಾಜಕೀಯ ಅಥವಾ ಧಾರ್ಮಿಕ ಸಿದ್ಧಾಂತದೊಳಗೊಂದು ಸಂಸ್ಕೃತಿ, ಆ ಸಂಸ್ಕೃತಿಯಲ್ಲಿ ಅದರದೇ ಆದ ರಾಜಕೀಯ-ಆರ್ಥಿಕ-ಸಾಮಾಜಿಕ ರಚನೆಗಳಿರುತ್ತವೆ. ಆ ರಚನೆಗಳಾದರೂ ಸಂಘಟನಾತ್ಮಕ ರೂಪ ಪಡೆದು ವ್ಯವಸ್ಥೆ ಅಥವಾ ಸಮಾಜ ನಿರ್ಮಿತವಾಗಿರುತ್ತವೆ. ನಾಗರಿಕತೆಯ ಹಾದಿಯಲ್ಲಿ ಆದಿಮಾನವ ಆಧುನಿಕ ಮಾನವನಾಗಿ ರೂಪಾಂತರಗೊಳ್ಳುತ್ತಾ ಸಾಗುವಾಗ ವಿವಿಧ ಕಾಲಘಟಗಳಲ್ಲಿ ಅವನ ಬದುಕನ್ನು ಅಥವಾ ಒಟ್ಟು ಸಮೂಹದ ಬದುಕನ್ನು ಸಹನೀಯವಾಗಲು ಹಲವಾರು ಚಿಂತಕರ  ಸಿದ್ಧಾಂತಗಳು ತತ್ವಗಳು ನೆರವಾಗುತ್ತಾ ಬಂದಿರುವುದು ಸತ್ಯ. ಇಂಥ ಮಾರ್ಗದರ್ಶನಗಳಿಂದ ಪ್ರೇರಣೆ ಪಡೆದು ಜನ್ಮತಾಳಿದ ಆಚರಣೆಗಳು, ಸಂಸ್ಕೃತಿ ಸಂಘಟನೆಗಳು ಎಲ್ಲಾ ಕಾಲದಲ್ಲೂ ಎಲ್ಲಾ ಭೌಗೋಳಿಕ ಸಂದರ್ಭಗಳಲ್ಲೂ ಒಂದೇ ಆಗಿರದೆ, ತಮ್ಮೊಳಗಿನ ಕ್ರಿಯೆ ಮತ್ತು ಪ್ರಕ್ರಿಯೆಗಳ ಕಾರ್ಯಾಚರಣೆಯಿಂದಾಗಿ ಬದಲಾವಣೆಗೊಳಪಡುತ್ತಿರುತ್ತವೆ. ತತ್ಫಲವಾಗಿ ನವಸಂಸ್ಕೃತಿಯೊಂದು ಚಿಗುರೊಡೆದು ಬೆಳೆಯಬಹುದು ಅಥವಾ ಹೊಸ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೊಂದು ಅಸ್ತಿತ್ವಕ್ಕೆ ಬರಬಹುದು. ಈ ವ್ಯವಸ್ಥೆ ಮುಂದೆ ಜನ ಮನ್ನಣೆಯಿಂದಲೋ ಅಥವಾ ಅದು ತಳೆಯಬಹುದಾದ ಸಾಮ್ರಾಜ್ಯಶಾಹಿ ನಿಲುವಿನಿಂದಲೋ ಆಲದ ಮರದಂತೆ ಕೊಂಬೆಗಳನ್ನು ಚಾಚುತ್ತಾ, ಬಿಳಿಲುಗಳನ್ನು ಇಳಿಸುತ್ತಾ ನಿಸರ್ಗದೊಳಗಿನ ಸೃಷ್ಟಿ-ಪುನರ್‌ ಸೃಷ್ಟಿಯಂತೆ ಹುಟ್ಟು-ಮರುಹುಟ್ಟನ್ನು ಪಡೆಯುತ್ತಾ ಜಡತೆ ಮತ್ತು ಕ್ರಿಯಾಶೀಲತೆಗಳನ್ನು ಮೈಗೂಡಿಸಿಕೊಂಡು ಸಾಗುವುದನ್ನು ಚರಿತ್ರೆಯ ಘಟನಾವಳಿಗಳಿಂದ ಕಾಣಬಹುದು.

ನಮ್ಮ ಸಂಪನ್ಮೂಲಗಳ ಅಭಿವೃದ್ಧಿ ಪ್ರಯತ್ನದ ಪ್ರಾಥಮಿಕ ಗುರಿಯಾಗಿರಬೇಕು. ಅಭಿವೃದ್ಧಿ ಸ್ವದೇಶದ ಜನರಲ್ಲಿ ಕ್ಷೇಮ, ನೆಮ್ಮದಿಗಳನ್ನು ಉಂಟುಮಾಡುವುದಕ್ಕೇ ವಿನಾ ಆರ್ಥಿಕ ಬೆಳವಣಿಗೆಯ ಪ್ರಮಾಣಗಳನ್ನು ಏರಿಸುವ ಪೈಪೋಟಿಯ ಬಲಿಪೀಠಕ್ಕೆ ನಾಗರಿಕರನ್ನು ಬಲಿಕೊಡುವುದಕ್ಕಲ್ಲ ಎಂಬುದನ್ನು ನಾವು ಮರೆಯಬಾರದು. ಮನುಷ್ಯನನ್ನು ಕೇಂದ್ರವಾಗಿರಿಸಿಕೊಂಡ ಅಭಿವೃದ್ಧಿ ಸಮಕಾಲೀನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಅಂಶವಾಗಿದೆ. ಜನರು ಆರ್ಥಿಕಾಭಿವೃದ್ಧಿಯ ಕೇಂದ್ರ ಬಿಂದು ಎಂಬುದು ಈಗ ಮನವರಿಕೆಯಾಗಿದೆ. ಅಭಿವೃದ್ಧಿಯ ಪ್ರಕ್ರಿಯೆಯೆಂದರೆ ಜನರ ಶಕ್ತಿ, ಸಾಮರ್ಥ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯೇ ಆಗಿದೆ ಎಂಬುದನ್ನು ಈಗ ಹೆಚ್ಚು ವ್ಯಾಪಕವಾಗಿ ತಿಳಿಯಲಾಗುತ್ತಿದೆ. ಮಾನವ ಅಭಿವೃದ್ಧಿಯ ಗುರಿಗಳನ್ನು ಈಡೇರಿಸಲು ಅಗತ್ಯವಾದ ಉತ್ತಮ ಪರಿಸ್ಥಿತಿಗಳ ನಿರ್ಮಾಣಕ್ಕೆ ಸಮಾನತೆಯೊಂದಿಗೆ ಬೆಳವಣಿಗೆ ಸಾಧಿಸುವುದು ಅತ್ಯುತ್ತಮ ಮಾರ್ಗವಾಗಿದೆ.

ವಿಶ್ವದ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದ ಪ್ರೊ. ಕೇನ್ಸ್‌ರ್‌ ಅವರು ‘ಪೂರ್ಣ ಪ್ರಮಾಣದ ಉದ್ಯೋಗ’ (Full Employment) ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಈ ಸಿದ್ಧಾಂತದ ಪ್ರಕಾರ ದೇಶದ ಸರ್ವಸಂಪತ್ತನ್ನೂ ಆಯಾ ದೇಶದ ಸರ್ಕಾರಗಳು ಸಮಾಜದ ಅಭಿವೃದ್ಧಿಗಾಗಿ ಸದುಪಯೋಗಪಡಿಸಿಕೊಂಡಾಗ ಮಾತ್ರ ಎಲ್ಲಾ ವರ್ಗಗಳ ಜನಾಂಗದವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಂತಾಗುವುದೆಂದು ಅಭಿಪ್ರಾಯಪಟ್ಟಿದ್ದರು. ಈ ಸಿದ್ಧಾಂತವು ಕುರುಬ ಜನಾಂಗದವರಿಗೆ ಎಷ್ಟರಮಟ್ಟಿಗೆ ಪ್ರಸ್ತುತವೆಂಬುದರ ಬಗ್ಗೆ ಈ ಲೇಖನದಲ್ಲಿ ಚಿಂತನೆ ನಡೆಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಹೆಗ್ಗಳಿಕೆಗೆ ಪಾತ್ರರಾದ ಕುರುಬ ಜನಾಂಗದವರು ಆರ್ಥಿಕವಾಗಿ ಹಿಂದುಳಿದಿರುವುದು ಗಮನಾರ್ಹವಾದ ಸಂಗತಿ. ಪ್ರಪ್ರಥಮವಾಗಿ ಕ್ರಿ. ಪೂ. ೧೫೬೫ರಲ್ಲಿ ನಡೆದ ತಾಳಿಕೋಟೆ ಯುದ್ಧದ ನಂತರ ಅನೇಕರು ಮನೆ-ಮಠಗಳನ್ನು ಕಳೆದುಕೊಂಡು ಕರ್ನಾಟಕದ ಇತರ ಭಾಗಗಳಿಗೆ ವಲಸೆ ಹೋಗುವುದರ ಮೂಲಕ ಹೊಸ ಜೀವನ ಆರಂಭಿಸಿದರು. ಇವರ ಹೊಸಜೀವನವು ಆರ್ಥಿಕ ದೃಷ್ಟಿಯಿಂದ ಕುಂಠಿತಗೊಂಡಿತು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಕುರುಬ ಜನಾಂಗದವರು ಕುರಿ ಸಾಕಣೆ, ಕಂಬಳಿ ನೇಯುವುದು, ಕೃಷಿ ಮುಂತಾದ ಕಸುಬುಗಳನ್ನು ಅವಲಂಬಿಸಿದ್ದರು. ಇತರೆ ಜನಾಂಗದವರೂ ಸಹ ಅವರವರ ಕುಲಕಸುಬುಗಳಲ್ಲಿ ನಿರತರಾಗಿ, ಅವರದೇ ಆದ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ಪ್ರಜಾಪ್ರಭುತ್ವ ಸರ್ಕಾರವು ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ವೃತ್ತಿಗಳಲ್ಲಿ ಅದಲು ಬದಲು ಉಂಟಾಯಿತು.

ಕರ್ನಾಟಕದ ಪ್ರಮುಖ ಜನಸಮುದಾಯಗಳಲ್ಲಿ ಕುರುಬ ಜನಾಂಗವೂ ಒಂದು. ಇವರನ್ನು ಹಾಲುಮತದವರೆಂದು, ಹೆಗ್ಗಡೆಗಳೆಂದು, ಕುರುಬರೆಂದು, ಪೂಜಾರಿಗಳು ಎಂದು ಕರೆಯುವುದು ರೂಢಿಯಲ್ಲಿದೆ. ಮೂಲತಃ ಶಿವಾರಾಧಕರಾಗಿರುವ ಇವರು ದ್ರಾವಿಡ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪ್ರಾಚೀನ ಕಾಲದಿಂದಲೂ ಕುರಿ ಸಾಕಾಣಿಕೆ, ಕಂಬಳಿ ನೇಯ್ಗೆ, ಕೃಷಿಯನ್ನು ಮುಖ್ಯ ಕುಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಹೀಗೆ ಪರಂಪರಾನುಗತವಾಗಿ ಕುರಿ ಸಾಕಾಣಿಕೆಯನ್ನು ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿರುವುದರಿಂದಲೇ ಇವರಿಗೆ ‘ಕುರುಬರು’ ಎಂಬ ಹೆಸರು ಬರಲು ಕಾರಣವಾಗಿದೆಯೆಂದು ಸಾಮಾನ್ಯವಾದ ತಿಳಿವಳಿಕೆಯಾಗಿದೆ.

‘ಅಪ್ಪ ಹಾಕಿದ ಆಲದ ಮರ’ ಎಂಬ ಗಾದೆಯಂತೆ ತಂದೆ-ತಾಯಿಂದಿರನ್ನು ಬಿಟ್ಟು ದೂರ ಪ್ರದೇಶಗಳಲ್ಲಿನ ಅವಕಾಶಗಳನ್ನು ತಪ್ಪಿಸಿಕೊಂಡಿದ್ದು ಹಾಗೂ ‘ತಮ್ಮ ಕಣ್ಣೆದುರಲ್ಲೇ ನಮ್ಮ ಮಕ್ಕಳಿ ಇರಲಿ’ ಎಂಬ ಪೋಷಕರ ಇಂಗಿತಗಳು ಕುರುಬ ಜನಾಂಗದ ಪೀಳಿಗೆಗಳು ಹೊರಜಗತ್ತನ್ನು ಕಾಣದಂತೆ ಮಾಡಿದ್ದುದು ಮತ್ತೊಂದು ವಿಪರ್ಯಾಸ. ಆರ್ಥಿಕ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಕುರುಬ ಜನಾಂಗದವರಿಗೆ ಮಾಹಿತಿಯಾಗಲೀ ಅಥವಾ ಸಂಪೂರ್ನ ಅರಿವಾಗಲಿ ಇರಲಿಲ್ಲ. ಆದರೆ ದಿನವಿಡೀ ಮೈಮುರಿದು ದುಡಿಯುವುದನ್ನು ಹೊರತುಪಡಿಸಿ ಬೇರೇನನ್ನೂ ಚಿಂತಿಸಿದಂತೆ ಕಾಣುವುದಿಲ್ಲ. ಮೇಲಾಗಿ ಕುರುಬ ಜನಾಂಗದವರು ಮರ್ಯಾದೆಗೆ ಅಳುಕುತ್ತಾ ಬದುಕನ್ನು ನಡೆಸುತ್ತಿದ್ದರಿಂದ ಲಜ್ಜೆಬಿಟ್ಟು ಸಂಪಾದನೆಗೆ ಕೈ ಹಾಕಲಿಲ್ಲ.

ಚಿತ್ರದುರ್ಗ ಪರಿಸರದ ಕುರುಬರ ಆರ್ಥಿಕ ವಿಚಾರಗಳು

ಕರ್ನಾಟಕದ ಬಯಲುಸೀಮೆ, ಗಂಡು ಮೆಟ್ಟಿನ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಕುರುಬ ಜನಾಂಗದವರಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಕಾರಣ ಈ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದೇ ಇರುವುದು, ಸದಾ ಬರಗಾಲದಲ್ಲಿಯೇ ಬಳಲುತ್ತಿದ್ದು ಯಾವುದೇ ನೀರಾವರಿ ಯೋಜನೆಗಳಿಲ್ಲದೇ ಈ ಭಾಗದ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದ್ದಾರೆ. ಪ್ರಾಚೀನ ಕಾಲದಿಂದಲೂ ಕುರಿ ಸಾಕಾಣಿಕೆ, ಕಂಬಳಿ ನೇಯ್ಗೆ, ಕೃಷಿ, ವ್ಯಾಪಾರ ಮುಖ್ಯ ಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಈ ಜಿಲ್ಲೆಯಲ್ಲಿ ಇತ್ತೀಚೆಗೆ ಕುರಿ ಸಾಕಾಣಿಕೆಯನ್ನು ಗೊಲ್ಲ ಸಮುದಯದವರಲ್ಲಿಯೂ ಕಾಣಬಹುದು.

ಕೃಷಿ ಕ್ಷೇತ್ರದಲ್ಲಿ ಇಂದಿಗೂ ಸಹ ಅನೇಕರ ಜಮೀನುಗಳು ಆರ್ಥಿಕ ಮುಗ್ಗಟ್ಟಿನ ಕಾರಣ ಪ್ರಗತಿ ಕಾಣದೆ ಬಣಬಣವೆನ್ನುತ್ತಿವೆ. ಕೊಳವೆ ಬಾವಿಗಳನ್ನೂ ಕೊರೆಸಿದರೆ ಅಂತರ್ಜಲ ಕ್ಷೀಣಿಸಿರುವುದು, ಅನೇಕರು ಒಣಭೂಮಿಗಳಲ್ಲಿ ಮಳೆಯ ಕಣ್ಣುಮುಚ್ಚಾಲೆ ಆಟದೊಂದಿಗೆ ಸೆಣಸಾಡುವಂತಿದೆ. ರೈತರ ಕನಸಿನ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯಿಂದ ಮುಂದೊಂದಿನ ಒಣ ಭೂಮಿಯಲ್ಲಿ ಹಸಿರನ್ನು ಕಾಣುವ ಭಾಗ್ಯ ಲಭಿಸಬಹುದೆ?

ಜಾಗತೀಕರಣದ ಕರಿ ನೆರಳಿನಲ್ಲಿ ಕಂಬಳಿ ಉದ್ಯಮ

೧೯೯೦ರ ದಶಕದ ಆರಂಭದಿಂದ ಜಗತ್ತಿನಾದ್ಯಂತ ಬೀಸತೊಡಗಿದ ಜಾಗತೀಕರಣದ ಗಾಳಿ ಹಲವು ಬದಲಾವಣೆಗಳನ್ನು ತಂದಿದೆ ಮತ್ತು ತರುತ್ತಿದೆ. ಉದಾರೀಕರಣ, ಖಾಸಗೀಕರಣ ಮತ್ತು ಇವೆರಡರ ಜಾಗತೀಕರಣವನ್ನು ಕೆಲವರು ಆಧುನೀಕರಣ ಎಂದಾಗಿ ಭ್ರಮಿಸಿರುವುದುಂಟು, ಶುಚಿಯಾದ ಗಾಳಿಯನ್ನು ಸ್ವಾಗತಿಸುವುದು ಎಷ್ಟು ಮುಖ್ಯವೋ ಹಾಗೆಯೇ ಆ ಗಾಳಿ ತರುವ ಕಸವನ್ನು ತಡೆಯುವುದೂ ಸಹ ಅಷ್ಟೆ ಮುಖ್ಯ. ಖಾಸಗೀಕರಣ ಮೂಲಕ ಕಾಲಿಡುತ್ತಿರುವ ವ್ಯಾಪಾರೀಕರಣವೇ ಆ ಕಸವಾಗಿದೆ. ಈ ವ್ಯಾಪಾರೀಕರಣದ ಜಾಗತೀಕರಣ ತನ್ನ ಕಸವನ್ನು ಇಂದು ಚಿಕಕ ಮತ್ತು ಗೃಹ ಕೈಗಾರಿಕೆಗಳ ಮೇಲೆ ಚೆಲ್ಲುತ್ತಿದೆ.

ಭಾರತದ ಅರ್ಥವ್ಯವಸ್ಥೆಯಲ್ಲಿ ಚಿಕ್ಕ ಮತ್ತು ಗೃಹ ಕೈಗಾರಿಕೆಗಳು ಬಹಳ ಮಹತ್ವದ ಸ್ಥಾನವನ್ನು ಪಡೆದಿವೆ. ಅವು ಭಾರತದ ಅರ್ಥವ್ಯವಸ್ಥೆಯ ತಳಹದಿಯೆಂದು ಪರಿಗಣಿಸಲ್ಪಟ್ಟಿದೆ.

ಭಾರತದ ಏಳ್ಗೆಯು ಗೃಹ ಕೈಗಾರಿಕೆಗಳಿಂದ ಮಾತ್ರ ಸಾಧ್ಯವೆಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹೇಳಿದ್ದಾರೆ.

ಕಂಬಳಿ ಉದ್ಯಮ

ಬಡವರು, ಬಲ್ಲಿದರು ಎಂಬ ತಾರತಮ್ಯವಿಲ್ಲದೆ ಕಂಬಳಿಗಳನ್ನು ಪ್ರತಿಯೊಬ್ಬರೂ ಬಳಸುತ್ತಿದ್ದ ಕಾಲ ಒಂದಿತ್ತು ಎಂದರೆ ತಾವು ಆಶ್ಚರ್ಯಗೊಳ್ಳಬಹುದು. ಪ್ರತಿಯೊಂದು ಮನೆಯಲ್ಲಿ ಕಂಬಳಿ ಇಟ್ಟುಕೊಳ್ಳುವುದು ಹೆಮ್ಮೆಯ ಹಾಗೂ ಪ್ರತಿಷ್ಠೆಯ ಸಂಗತಿಯಾಗಿತ್ತು. ಇಂದು ‘ಕಂಬಳಿ’ಯನ್ನು ವಿಶೇಷವಾಗಿ ಪೂಜೆ, ಮದುವೆ, ಸಮಾರಂಭಗಳಲ್ಲಿ ಮಾತ್ರ ಬಳಸುತ್ತೇವೆ. ಕುರುಬ ಜನಾಂಗದವರು ಕಂಬಳಿಗಳನ್ನು ನೇಯುವುದು ಅವರಿಗೆ ಅವರ ಹಿರಿಯರಿಂದ ಬಂದ ಬಳುವಳಿ. ಕಂಬಳಿಯ ಕುರಿತು ಕನ್ನಡ ಸಾಹಿತ್ಯದಲ್ಲಿ ಅನೇಕ ಗ್ರಂಥಗಳಲ್ಲಿ ಉಲ್ಲೇಖಗಳು ದೊರೆಯುತ್ತವೆ. ಇದರಿಂದ ಕಂಬಳಿ ನೇಯ್ಗೆಯ ಇತಿಹಾಸ ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಹಾಗೇ ನೋಡಿದರೆ ಕಂಬಳಿ ಉದ್ಯಮಕ್ಕೆ ಪ್ರಾಚೀನ ಇತಿಹಾಸವಿದೆ. ಕ್ರಿ. ಪೂ. ೧೦,೦೦೦ ವರ್ಷಗಳ ಹಿಂದೆ ಗ್ರಾಮಗಳು ಹುಟ್ಟಿರಬಹುದೆಂಬ ಅಂದಾಜಿದೆ. ಆದರೆ ಪುರಾಣ, ಸಾಹಿತ್ಯಕ ಪರಂಪರೆಯಲ್ಲಿನ ಉಲ್ಲೇಖಗಳ ಪ್ರಕಾರ ೨೦೦೦ ವರ್ಷಗಳಿಂದಲೂ ಗ್ರಾಮಗಳು ಅಸ್ತಿತ್ವದಲ್ಲಿವೆ. ಕಂಬಳಿ ಉದ್ಯಮ ಕೂಡ ಸಾಕಷ್ಟು ಪ್ರಾಚೀನವಾಗಿಯೇ ಇದೆ. ಅಷ್ಟೇ ದೊಡ್ಡ ಇತಿಹಾಸವೂ ಇದೆ.

ಆಧುನಿಕತೆಯ ಪರಿಣಾಮವಾಗಿ ಕಂಬಳಿ ಇದ್ದ ಜಾಗವನ್ನು ಇಂದು ಜರ್ಕಿನ್‌, ಶಾಲುಗಳು ಕಬಳಿಸಿಎ. ಇದರಿಂದಾಗಿ ಕಂಬಳಿ ಉದ್ಯಮ ಲಾಭ-ನಷ್ಟಗಳ ಲೆಕ್ಕಾಚಾರಗಳ ನಡುವೆ ಕಳೆದುಹೋಗುತ್ತಿದೆ. ಕಂಬಳಿ ಉದ್ಯಮವನ್ನು ನಂಬಿಕೊಂಡಿದ್ದ ಜನರೆಲ್ಲಾ ಇಂದು ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದ್ದಾರೆ. ಆರ್ಥಿಕವಾಗಿ ಸಾಕಷ್ಟು ಹೀನಾಯ ಸ್ಥಿತಿಗೆ ಬಂದಿದ್ದಾರೆ. ಒಂದು ಕಾಲದಲ್ಲಿ ಕಂಬಳಿ ಉದ್ಯಮ ಗ್ರಾಮೀಣ ಲಾಭದಾಯಕ ಉದ್ಯಮವೇ ಆಗಿತ್ತು. ಕುರುಬ ಜನಾಂಗದ ಆರ್ಥಿಕ ತತ್ವ ಇದೇ ಉದ್ಯಮದಲ್ಲಿ ಅಡಗಿತ್ತು. ಕುರುಬರು ಹೆಚ್ಚಾಗಿರುವ ಯಾವುದೇ ಹಳ್ಳಿಗೆ ಹೋದರೂ ಕೂಡ ಪೈಪೋಟಿಯ ಮೇಲೆ ಕಂಬಳಿ ನೇಯ್ಗೆ ನಡೆಯುತ್ತಿತ್ತು. ಕುರುಬರ ಬೀದಿಯಲ್ಲಿ ಒಮ್ಮೆ ಸಂಚರಿಸಿದರೆ ಸಾಕು ಮಗ್ಗದ ಲಾಳಿ ಕಿವಿಯಲ್ಲಿ ಸಂಗೀತ ನುಡಿಸುತ್ತಿತ್ತು. ಮಹಿಳೆಯರು ಜಾನಪದ ಹಾಡುಗಳನ್ನು ಗೂಣಗುತ್ತಾ ರಾಟಿ ನೂಲುತ್ತಿದ್ದರು. ಆದರೆ ಇಂದು ಮಗ್ಗಗಳೆಲ್ಲಾ ಮೂಲೆ ಸೇರಿದರೆ ರಾಟೆಯ ಚಕ್ರಗಳು ಕಳಚಿಬಿದ್ದಿವೆ.

ಇಂದು ಅನೇಕ ಉಣ್ಣೆಯ ವಸ್ತುಗಳು ಬಳಕೆಗೆ ಬಂದಿವೆಯಾದರೂ, ಕಂಬಳಿಯೇ ಉಣ್ಣೆಯ ಮೂಲವನ್ನು ಎಂಬುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಉಣ್ಣೆಯಿಂದ ತಯಾರಿಸಿದ ಅತ್ಯಂತ ಬೆಚ್ಚನೆಯ ಹೊದಿಕೆ ಕಂಬಳಿ. ಎಷ್ಟೇ ಆಧುನಿಕತೆ ಬೆಳೆದಿದ್ದರೂ ಇಂದಿಗೂ ಕೂಡ ಗ್ರಾಮೀಣ ಭಾಗದಲ್ಲಿ ಯಾವುದೇ ಶುಭಕಾರ್ಯ ಕಂಬಳಿ ಇಲ್ಲದೇ ನಡೆಯುವುದೇ ಇಲ್ಲ. ಇಂದು ಮಾರುಕಟ್ಟೆಯಲ್ಲಿ ಏರಿರುವ ಉತ್ಪಾದನಾ ದರ ಕೂಡ ಕಂಬಳಿ ಉದ್ಯಮ ನಲುಗಲು ಸಾಕಷ್ಟು ಕೊಡುಗೆ ನೀಡಿದೆ. ಸರ್ಕಾರ ಕೂಡ ಅಷ್ಟೇ ಪ್ರಮಾಣದಲ್ಲಿ ಕಂಬಳಿ ಉದ್ಯಂವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಕಂಬಳಿ ಉಪಯೋಗ ಕುರಿತಂತೆ ಪುರಾಣ ಮತ್ತು ಇತಿಹಾಸದಲ್ಲಿ ಪ್ರಸ್ತಾಪಗಳು ಕಂಡುಬರುತ್ತಿವೆ. ಕುರುಬರ ಆರಾಧ್ಯ ದೈವ ಶ್ರೀಮೈಲಾರಲಿಂಗೇಶ್ವರನ ಉಡುಪು ಕಂಬಳಿಯಿಂದ ತಯಾರಿಸಿದ್ದಾಗಿದೆ. ಅದನ್ನು ಇಂದಿಗೂ ಗೊರವರಲ್ಲಿ ಕಾಣಬಹುದಾಗಿದೆ. ಅದೇ ರೀತಿ ಇತಿಹಾಸದಲ್ಲೂ ಕಂಬಳಿ ಉಪಯೋಗದ ಬಗ್ಗೆ ಅಲ್ಲಲ್ಲಿ ಉಲ್ಲೇಖಗಳಿವೆ. ನಾಗರಿಕತೆ ಸುಪ್ತಾವಸ್ಥೆಯಲ್ಲಿದ್ದಾಗ ಚಳಿ ಮತ್ತು ಗಾಳಿಯಿಂದ ರಕ್ಷಿಸಿಕೊಳ್ಳಲು ಕಾಡುಕುರಿಗಳ ಮತ್ತು ಮೇಲೆಗಳ ಕೂದಲಿನ ಚರ್ಮವನ್ನು ಉಪಯೋಗಿಸಲಾಗುತ್ತಿತ್ತು. ಮುಂದೆ ಬೆಳೆದಂತೆ ಕಂಬಳಿ ಮತ್ತು ಇತರೆ ಉಣ್ಣೆಯ ವಸ್ತುಗಳು ಬೆಳಕು ಕಂಡವು.

ಕಂಬಳಿಯ ನೇಯ್ಗೆ

ಕಂಬಳಿ ತಯಾರಿಕೆಗೆ ಮೂಲವಾಗಿ ಕುರಿ ಸಾಕಾಣಿಕೆ ಅಗತ್ಯ. ಕುರಿಗಳಿಂದ ಉಣ್ಣೆಯನ್ನು ತೆಗೆದು ಶುದ್ಧೀಕರಿಸಿ ಪುರಾತನ ಪದ್ಧತಿಯಿಂದ ಅಥವಾ ಆಧುನಿಕ ಪದ್ಧತಿಯಿಂದ ದಾರದಿಂದ ಕಂಬಳಿ ತಯಾರಾಗುತ್ತಿದೆ. ಎರಡೂ ಮೂರು ವರ್ಷದ ಒಂದು ಕುರಿಯಿಂದ ಸುಮಾರು ಅರ್ಧ ಕೆ. ಜಿ.ಯಿಂದ ೧ ಕೆ.ಜಿ. ಉಣ್ಣೆ ದೊರೆಯುತ್ತದೆ. ಮೂರು ಕೆ.ಜಿ. ಶುದ್ಧೀಕರಿಸಿದ ಉಣ್ಣೆಗೆ ಒಂದು ಕಂಬಳಿ ತಯಾರಾಗುತ್ತದೆ. ಒಂದು ಕೆ.ಜಿ. ಉಣ್ಣೆ ರೂ. ೪೦ ರಿಂದ ೫೦ ರೂ.ಗಳವರೆಗೆ ಇರುತ್ತದೆ. ಈ ಉಣ್ಣೆಯನ್ನು ಶುದ್ಧೀಕರಿಸಿ ಕಂಬಳಿಯನ್ನು ನೇಯುವುದು ನಿಜಕ್ಕೂ ಬಹಳ ಕಷ್ಟದ ಕೆಲಸ. ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಾಕಷ್ಟು ಧೂಳಿನಿಂದ ಕೂಡಿರುವುದರಿಂದ ಕೆಮ್ಮು, ಅಸ್ತಮಾ, ಹೃದಯ ಖಾಯಿಲೆಗಳಂತಹ ಭಯಾನಕ ಖಾಯಿಲೆಗಳಿಂದ ನರಳಬೇಕಾಗುತ್ತದೆ. ಆದರೂ ಇಲ್ಲಿ ಒಳ್ಳೆಯ ನೈಪುಣ್ಯತೆ, ಅನುಭವ ಬಹಳ ಮುಖ್ಯ.

ಕಂಬಳಿ ವಿಧಗಳು

೧. ಕರಿ ಕಂಬಳಿ ೨. ಬಿಳಿ ಕಂಬಳಿ ೩. ಪಟ್ಟೆ ಕಂಬಳಿ ೪. ಮಟ್ಟೆ ಕಂಬಳಿ ೫. ಬಣ್ಣದ ಕಂಬಳಿ ೬. ಜಾಡಿ ಕಂಬಳಿ ೭. ತೊಳೆದ ಕಂಬಳಿ ಇತರೆ…

ಇದರಲ್ಲಿ ಕರಿಕಂಬಳಿ ಭಾರಿ ಬೇಡಿಕೆಯ ಕಂಬಳಿಯಾಗಿದ್ದು, ಈ ಕಂಬಳಿಗಳು ಸುಮಾರು ರೂ. ೩೦೦ ರಿಂದ ರೂ. ೧೦೦೦ ರೂ.ವರೆಗೂ ಬೆಲೆ ಬಾಳುತ್ತವೆ. ಹಿಂದಿನ ದಿನಗಳಲ್ಲಿ ಕಡ್ಡಾಯವಾಗಿ ಕಂಬಳಿಗಳನ್ನು ನಮ್ಮ ಹಿರಿಯರು, ಬಂಧು-ಬಳಗದವರು ಸೇರಿದ ಸಭೆಗಳಲ್ಲಿ ಕಂಬಳಿ ಬಳಸುವ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದವು. ಆದರೆ ಇಂದು ಈ ಕಾರ್ಯಕ್ರಮಗಳು ಬಹಳ ವಿರಳವಾಗಿವೆ.

ಕಂಬಳಿಯ ವೈಶಿಷ್ಟ್ಯ

ಕಂಬಳಿಯ ವೈಶಿಷ್ಟ್ಯವೆಂದರೆ ಇದು ಎರಡು ಪದರಿನಿಂದ ಕೂಡಿದ್ದು, ಆರು ಅಡಿ ಉದ್ದ ಹಾಗೂ ನಾಲ್ಕು ಅಡಿ ಅಗಲವಾಗಿರುತ್ತದೆ. ಕೆಲವೊಮ್ಮೆ ೬-೪’. ೬-೩’. ೭-೪’ ಉದ್ದ –ಅಗಲ ಇರುವ ಕಂಬಗಳಿವೆ. ಇದರಿಂದ ಟೊಪ್ಪಿಗೆ ಮಾಡಿ ಜಡಿ ಮಳೆಯಿಂದ ರಕ್ಷಣೆ ಪಡೆಯಬಹುದು. ಮೈ ನಡುಗಿಸುವ ಬಳಿಯಿಂದ ಮೈ ಬೆಚ್ಚಗಿಟ್ಟುಕೊಳ್ಳಬಹುದು. ಕೆಲವು ಕಂಬಳಿಗಳು ನಯವಾಗಿ ಮೃದುವಾಗಿರುತ್ತವೆ. ಕೆಲವು ಕಂಬಳಿಗಳು ಚುಚ್ಚುವಿಕೆಯಿಂದ ಇಂದಿನ ನಯಾನಾಜೂಕಿನ ಜನರಿಗೆ ಈ ಕಂಬಳಿಯ ಮೈ ಚುಚ್ಚುವಿಕೆಯನ್ನು ತಾಳಿಕೊಳ್ಳುವ ತಾಳ್ಮೆಯಿಲ್ಲ.

ಕುರುಬರ ಮುಖ್ಯವಾದ ಕಸುಬು ಕುರಿ ಸಾಕುವುದು, ಕಂಬಳಿ ನೇಯುವುದು ಶತಮಾನಗಳಿಂದ ಬಂದ ಪ್ರಕ್ರಿಯೆ. ಕರ್ನಾಟಕದಲ್ಲಿ ಚಿತ್ರದುರ್ಗ, ತುಮಕೂರು, ಕೋಲಾರ, ಬೀದರ್‌, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಕಂಬಳಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಅಂದರೆ ಪಿ. ಮಹದೇವಪುರ, ಗೌರೀಪುರ, ಪರಶುರಾಮಪುರ. ಚೌಳೂರು, ಟಿ. ಎನ್‌. ಕೋಟೆ, ಓಬನಹಳ್ಳಿ, ಕಡೇಹುಡೆ, ವೃಂದಾವನಹಳ್ಳಿ, ಪಗಡಲಬಂಡೆ, ಓಬಳ್ಪುರ, ನೇರ್ಲಗುಂಟೆ, ಚಿಕ್ಕಮಧುರೆ, ಚಿಕ್ಕಮ್ಮನಹಳ್ಳಿ, ಗೊರ್ಲಕಟ್ಟೆ, ಸಿದ್ದಾಪುರ, ಗೋಪನಹಳ್ಳಿ ಇತರೆ… ಮೊಳಕಾಲ್ಮೂರು ತಾಲ್ಲೂಕಿನಲ್ಲಿ ರೇಷ್ಮೆ ಸೀರೆ ನೇಯ್ಗೆ ಪ್ರಮುಖ ಉದ್ಯಮವಾಗಿದ್ದು ಸಹ ಕೆಲವು ಊರುಗಳಲ್ಲಿ ಕಂಬಳಿ ಉದ್ಯಮವನ್ನು ಕಾಣುತ್ತೇವೆ. ಮುಖ್ಯವಾಗಿ ಕೊಂಡ್ಲಹಳ್ಳಿ, ವುಡೇವು ಇತರೆಡೆ ನೇಯುತ್ತಾರೆ. ತುಮಕೂರು ಜಿಲ್ಲೆಯಲ್ಲಿ ಮುಖ್ಯವಾಗಿ ಶಿರಾ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ, ಪಾವಗಡ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ, ಬೀದರ್‌ ಜಿಲ್ಲೆಯ ಕೆಲವು ಭಾಗಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ ಗಡಿನಾಡು ಪ್ರದೇಶಗಳಲ್ಲಿ ಕಂಬಳಿ ಉದ್ಯಮವನ್ನು ಕಾಣುತ್ತೇವೆ.

ಕಂಬಳಿ ಮಾರುಕಟ್ಟೆ

ಚಿತ್ರದುರ್ಗ ಜಿಲ್ಲೆಯ ಅತಿದೊಡ್ಡ ತಾಲ್ಲೂಕು ಚಳ್ಳಕೆರೆ. ಇದು ತನ್ನದೇ ಆದ ವ್ಯವಹಾರಿಕ ಹಿನ್ನೆಲೆಯನ್ನು ಹೊಂದಿದೆ. ವಾಣಿಜ್ಯನಗರಿ ಎಂದೇ ಹೆಸರಾಗಿರುವ ಈ ನಗರ ಎಣ್ಣೆನಗರ ವಾಣಿಜ್ಯ ನಗರಿಯಾಗಿ ಹೊರಹೊಮ್ಮುತ್ತಿದೆ. ಸದಾ ಬರಗಾಲ ಬಿಸಿಲಿನ ತಾಪಮಾನ ಅಧಿಕವಿದ್ದರೂ ಎಲ್ಲಾ ತರಹದ ವ್ಯಾಪಾರಸ್ಥರನ್ನು ವಾಣಿಜ್ಯೋದ್ಯಮಿಗಳನ್ನು ಹೊರಹೊಮ್ಮಿರುವುದು ಒಂದು ಸಂತೋಷದ ಸಂಗತಿಯಾಗಿದೆ.

ಚಳ್ಳಕೆರೆಯಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ಇದರಲ್ಲಿ ಪ್ರಮುಖವಾಗಿ ಕಂಬಳಿ ಮಾರುಕಟ್ಟೆಯನ್ನು ನಾವು ಕಾಣುತ್ತೇವೆ. ಕಂಬಳಿ ಮಾರುಕಟ್ಟೆಯ ಪ್ರದೇಶ ಚಿಕ್ಕದಾಗಿದ್ದು, ಮಾರಾಟದ ವ್ಯವಸ್ಥೆಯಲ್ಲಿ ಬಹಳ ದೊಡ್ಡ ಮಾರುಕಟ್ಟೆಯಾಗಿ ಕಾಣುತ್ತೇವೆ. ಕರ್ನಾಟಕದಲ್ಲಿಯೇ ದೊಡ್ಡ ಕಂಬಳಿ ಮಾರುಕಟ್ಟೆ ಇದಾಗಿದೆ. ಪ್ರತಿ ಭಾನುವಾರ ಬೆಳಿಗ್ಗೆ  ೭ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯ ಅವಧಿಯೊಳಗೆ ಸುಮಾರು ೪೦ ಲಕ್ಷದಿಂದ ೫೦ ಲಕ್ಷದವರೆಗೆ ವ್ಯವಹಾರ ವಹಿವಾಟು ನಡೆಯುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೨೬೮೫ ಕೈ ಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು ೨೦,೦೦೦ ದಿಂದ ೩೦,೦೦೦ ಕಂಬಳಿಗಳು ಮಾರಾಟವಾಗುತ್ತವೆ.

ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಾರಾಟಗಾರರು ಉತ್ಪಾದಿಸಿದ ಕಂಬಳಿಗಳನ್ನು ಹೊತ್ತು ಮಾರುಕಟ್ಟೆಗೆ ತರುತ್ತಾರೆ. ಆದರೆ ಕೊಂಡುಕೊಳ್ಳುವವರ ಸಂಖ್ಯೆ ಅತಿವಿರಳ. ಕಾರಣ ಕಂಬಳಿಯನ್ನು ಖರೀದಿಸುವವರು ಮಹಾರಾಷ್ಟ್ರದ ಕೆಲವು ಖರೀದಿದಾರರು ಮತ್ತು ಕರ್ನಾಟಕದ ಮಲೆನಾಡಿನ ಕೆಲವೇ ಜನರು ಬಂದು ಬೇಕಾದ ಕಂಬಳಿಗಳನ್ನು ಅತೀ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಉತ್ಪಾದಕರು ತಾವು ಉತ್ಪಾದಿಸಿದ ಕಂಬಳಿಗಳಿಗೆ ಮಾರಾಟ ಬೆಲೆ (M.R.P)ಯನ್ನು ನಿಗಧಿಪಡಿಸಬೇಕು. ಆದರೆ ಈ ಮಾರುಕಟ್ಟೆಯಲ್ಲಿ ಖರೀದಿದಾರರು ಮಾರಾಟದ ಬೆಲೆಯನ್ನು ನಿಗದಿಪಡಿಸಿ, ಅತೀ ಕಡಿಮೆ ಬೆಲೆಗೆ ಕೊಂಡುಕೊಳ್ಳುವ  ವ್ಯವಸ್ಥೆಯನ್ನು ಕಾಣುತ್ತೇವೆ. ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿ (Commission agent)ಗಳ ಹಾವಳಿಯಿಂದ ಮಾರಾಟಗಾರರ ನಿರಂತರ ಶೋಷಣೆ ನಡೆಯುತ್ತಿದೆ. ಖರೀದಿದಾರರು ಕೇಳಿದ ಬೆಲೆಗೆ ಕೊಡುವ ಅನಿವಾರ್ಯತೆ ಇರುತ್ತದೆ. ಕಾರಣ ಜೀವನ ಸಾಗಿಸುವುದು ತುಂಬಾ ತೊಂದರೆಯಾಗುತ್ತದೆ. ಮಕ್ಕಳಿಗೆ ಶಿಕ್ಷಣ, ಊಟ, ಬಟ್ಟೆ, ವಸತಿ ಸಮಸ್ಯೆಗಳಿಂದ ಮಾರಾಟ ಮಾಡುವಂತಹ ವ್ಯವಸ್ಥೆ ನಿರ್ಮಾಣವಾಗುತ್ತದೆ. ಇಂದು ನಾಜೂಕಿನ ಫ್ಯಾಷನ್‌ ಜಗತ್ತಿನಲ್ಲಿ ಗ್ರಾಹಕರು ಇಂತಹ ವಸ್ತುಗಳನ್ನು ಕೊಂಡುಕೊಳ್ಳಲು ಮುಂದೆ ಬರಲಾರರು. ಆದ್ದರಿಂದ ಇಂದಿನ ಮಾರುಕಟ್ಟೆ ವ್ಯವಸ್ಥೆ ಸಾಕಷ್ಟು ಬದಲಾಗುತ್ತಾ ಸಾಗಿದೆ. ಆಧುನಿಕ ತಾಂತ್ರಿಕತೆಯಿಂದ ನವೀನತೆಯಿಂದ ಕೂಡಿದ ವಸ್ತುಗಳನ್ನು ತಯಾರಿಸುವುದು ಉತ್ಪಾದಕರ ಜವಾಬ್ದಾರಿಯಾಗಿದೆ.

ಜಾಗತೀಕರಣ ಮತ್ತು ಕಂಬಳಿ ಉದ್ಯಮ

ಜಾಗತೀಕರಣದ ಪ್ರಭಾವದಿಂದಾಗಿ ಇಂದು ಬಹುರಾಷ್ಟ್ರೀಯ ಕಂಪನಿಗಳು ಸಾಕಷ್ಟು ನೆಲೆಯನ್ನು ಕಂಡುಕೊಳ್ಳುವುದರ ಮೂಲಕ ಗೃಹ ಮತ್ತು ಸಣ್ಣ ಕೈಗಾರಿಕೆಯನ್ನು ಮೂಲೆಗುಂಪಾಗಿ ಮಾಡುವುದರಲ್ಲಿ ಯಶಸ್ವಿಯಾಗಿವೆ. ಇದರಿಂದ ಇಂದು ಕಂಬಳಿ ಉದ್ಯಮ ಸಂಪೂರ್ಣ ಅವನತಿಯ ಅಂಚಿನಲ್ಲಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆಯ ಕಡೆಗೆ ಹೆಚ್ಚಿನ ಗಮನಹರಿಸಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪೈಪೋಟಿ ನೀಡುವಂತಹ ನವಿರಾದ ಕಂಬಳಿಗಳನ್ನು ಕಾರ್ಪೆಟ್‌, ರತ್ನಗಂಬಳಿಗಳನ್ನು ಉತ್ಪಾದಿಸುವ ಅನಿವಾರ್ಯತೆ ಇದೆ.

ಉಪಜೀವನಕ್ಕಾಗಿ ಆಶ್ರಯಿಸಿದ ಉದ್ಯೋಗವೊಂದು ನಿರೀಕ್ಷಿತ ಫಲ ನೀಡದಿದ್ದರೆ ಅದನ್ನು ಅವಲಂಬಿಸಿ ಫಲವಿಲ್ಲ ಎನ್ನುವಂತೆ ಇಂದು ಬಹುಮಂದಿ ಈ ಉದ್ಯಮವನ್ನು ತ್ಯಜಿಸಿ ಬೇರೆ ವೃತ್ತಿಯನ್ನು ಕೈಗೊಳ್ಳುತ್ತಿದ್ದಾರೆ. ಉದ್ಯೋಗವನ್ನರಿಸಿ ಬೆಂಗಳೂರಿಗೆ ವಲಸೆ ಹೊರಟಿದ್ದಾರೆ. ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ಮರುಜೀವ ನೀಡುವುದು ಬಹಳ ಅವಶ್ಯಕತೆಯಿದೆ.

ಸರ್ಕಾರದ ಮಧ್ಯಪ್ರವೇಶ

ಕಂಬಳಿ ಉದ್ಯಮ ಬಹಳ ಬಸಳಿವದು ಮೂಲೆ ಗುಂಪಾಗುತ್ತಿರುವ ಸರ್ಕಾರ ಯಾವ ರೀತಿ ಮಧ್ಯಪ್ರವೇಶ ಮಾಡೇಕಿತ್ತೋ ಹಾಗೆ ಮಾಡಿದೆಯೇ ಎಂಬುದು ಚರ್ಚಾಸ್ಪದ ಸಂಗತಿಯಾಗಿದೆ. ಸರ್ಕಾರ ಸಹಕಾರಿ ಸಂಸ್ಥೆಯನ್ನು ಬಲಪಡಿಸುವ ಮೂಲಕ ನೇಕಾರರಿಗೆ ಸಹಕಾರಿಯಾಗಬೇಕು. ಅಗತ್ಯವಾದ ಕಚ್ಚಾವಸ್ತುಗಳು ಸೇರಿದಂತೆ ಕಂಬಳಿಗಳನ್ನು ಖರೀದಿಸುವ (ಯೋಗ್ಯ ಬೆಲೆಗೆ) ವ್ಯವಸ್ಥೆಯವರೆಗೆ ಎಲ್ಲವನ್ನೂ ಸಹಕಾರಿ ಕ್ಷೇತ್ರದ ಮೂಲಕ ನಡೆಯುವಂತಾಗಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ೬೧ ಉಣ್ಣೆ ಕೈಮಗ್ಗ ಸಹಕಾರ ಸಂಘಗಳಿವೆ. ಇದರಲ್ಲಿ ೫೫ ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ೬ ಸಹಕಾರ ಸಂಘಗಳು ನಿಷ್ಕ್ರೀಯವಾಗಿವೆ. ಒಟ್ಟು ೧೬,೮೦೦ ಸದಸ್ಯರಿದ್ದು, ೨೬೮೫ ಕೈಮಗ್ಗಳಿವೆ. ೧೨ ಸಹಕಾರ ಸಂಘ-ಸಂಸ್ಥೆಗಳು ಲಾಭಗಳಿಸಿದ್ದು, ೪೧ ಸಹಕಾರ ಸಂಘ ಸಂಸ್ಥೆಗಳು ನಷ್ಟದಲ್ಲಿವೆ. ಸಹಕಾರಿ ಸಂಘಗಳು ಸರಿಯಾದ ದಿಕ್ಕಿನಲ್ಲಿ ಕಾರ್ಯನಿರ್ವಹಣೆಯಲ್ಲಿ ಎಡವುತ್ತಿವೆ. ಇದನ್ನು ಸರಿಪಡಿಸುವ ವ್ಯವಸ್ಥೆ ಸರ್ಕಾರ ಮತ್ತು ಜನರ ಮೇಲಿದೆ. ಜನರು ಹೆಚ್ಚು ಜಾಗೃತರಾಗಿ, ವಿದ್ಯಾವಂತರಾಗಿ ಸಂಘಟಿತರಾಗಿ ಉದ್ಯಮವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊರಬೇಕಾಗಿದೆ.

ಉಪಸಂಹಾರ

ಒಟ್ಟಿನಲ್ಲಿ ಹೇಳವುದಾದರೆ ಇಂದು ಜಾಗತೀಕರಣ ಯಾವ ಮುಖಗಳನ್ನು ಹೊಂದಿರಬೇಕೆಂದರೆ ಅದು ಮನುಷ್ಯರನ್ನು ಮಾನವ ಸಂಪನ್ಮೂಲವನ್ನಾಗಿಸುವಂತಹ ಹುದ್ದೆಯಾಗಿರಬೇಕು. ಕೆಲಸವಿಲ್ಲದ ಕೈಗಳಿಗೆ ಕೆಲಸ ನೀಡುವಂತಹದ್ದಾಗಿರಬೇಕು. ಇಂದು ಕಂಬಳಿ ಉದ್ಯಮವು ಬದಲಾದ ಪರಿಸ್ಥಿತಿಯಲ್ಲಿ ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಉತ್ಪಾದನ ಕೌಶಲ್ಯಗಳನ್ನು ಸೃಷ್ಟಿಸುವ ಶಿಕ್ಷಣ ತರಬೇತಿಯನ್ನು ನೀಡುವುದರ ಮೂಲಕ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗೃಹ ಕೈಗಾರಿಕೆಗಳಿಗೆ ಮರುಜೀವ ನೀಡುವುದು ತುಂಬಾ ಅವಶ್ಯಕತೆಯಿದೆ. ಪೋಕೇನ್ಸರವರು ಹೇಳುವಂತೆ ದೇಶದ ಸಂಪತ್ತನ್ನು ಸಮಾಜದ ಅಭಿವೃದ್ಧಿಗೆ ಉಪಯೋಗಿಸಿದಾಗ ಮಾತ್ರ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಾ ಜನರ ಆರ್ಥಿಕ ಅಭಿವೃದ್ಧಿಪಡಿಸಬಹುದು. ಜೀವನವನ್ನು ಒದಗಿಸುವುದು ಆರ್ಥಿಕಾಭಿವೃದ್ಧಿಯ ಗುರಿಯಾಗಬೇಕು.

ಆಕರ ಗ್ರಂಥಗಳು

೧. ಬುಡಕಟ್ಟು ಕುಲಕಸುಬುಗಳು, ಡಾ. ಕೆ. ಎಂ. ಮೈತ್ರಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨. ಅಭಿವೃದ್ಧಿ ಅಧ್ಯಯನ, ಸಹಕಾರ ಮತ್ತು ಸಮುದಾಯ ಪ್ರಯತ್ನ ಎಂ. ಚಂದ್ರಪೂಜಾರಿ.

೩. ಬುಡಕಟ್ಟು ಅಧ್ಯಯನ, ಸಂಪುಟ ೨, ಸಂಚಿಕೆ ೨, ಡಾ. ಕೆ. ಎಂ. ಮೈತ್ರಿ, ಡಾ. ಚಲುವರಾಜ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪. ಬೆಳಗಿನ ಬೆರಗು, ಜಿ. ಎನ್‌. ಮಲ್ಲಿಕಾರ್ಜುನಪ್ಪ.

೫. ಕುರುಬರಗುರು ಒಡೆಯರು, (ಸಂ) ಡಾ. ಎಫ್‌. ಟಿ. ಹಳ್ಳಿಕೇರಿ.

೬. ಕುರುಬ ಸಮಾಜದ ಆರ್ಥಿಕ ಚಿಂತನೆ, ಎಂ. ಕೆ. ನಾಗರಾಜ.

೭. ವೇದಾವತಿ, ಸಂಚಿಕೆ, ೨೦೦೭, ಸಿ. ಚನ್ನಕೇಶವ.

೮. Rural Enterprenceurship Dr. G. T. Govindappa.