ಭಾರತದ ಕುರುಬ ಸಂಸ್ಕೃತಿಯಲ್ಲಿ ಕರ್ನಾಟಕದ ಕುರುಬರ ಸಂಸ್ಕೃತಿ ಭಿನ್ನವಾದಂತೆ ಚಿತ್ರದುರ್ಗ ಜಿಲ್ಲೆಯ ಕುರುಬರ ಸಂಸ್ಕೃತಿಯು ಕೂಡ ವಿಭಿನ್ನವಾಗಿದ್ದು ತನ್ನದೇ ಆದ ಆಚರಣೆ, ಸಂಪ್ರದಾಯಗಳನ್ನು ಹೊಂದಿದೆ. ವಿಭಿನ್ನ ನೆಲೆಗಟ್ಟಿನ ದೃಷ್ಟಿಯಿಂದ ನೋಡಿದರೆ ಈ ಸಂಸ್ಕೃತಿಯು ಭೌಗೋಳಿಕ ಹಿತದೃಷ್ಟಿಯ ಹಿನ್ನೆಲೆಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಭಾಗದ ಬೀರದೇವ, ಮೈಲಾರಲಿಂಗ, ರೇವಣಸಿದ್ದ ಹಾಗೂ ಇತರೆ ದೈವಗಳ ಆಚರಣೆ, ಸಂಪ್ರದಾಯ ಮತ್ತು ಬದುಕಿನ ನೆಲೆಗಟ್ಟುಗಳು ಈ ಭಾಗದ ದೇಶೀಯ ಸಂಸ್ಕೃತಿಯ ಪ್ರತಿಬಿಂಬವಾಗಿ ಕಾಣುತ್ತವೆ.

ಚಿತ್ರದುರ್ಗದ ಭಾಗವು ಭಾಗವು ಬಯಲು ಸೀಮೆಯಂತಹ ವಾತಾವರಣವನ್ನು ಹೊಂದಿರುವುದರಿಂದ ಇಲ್ಲಿಯ ಜನರು ಕುರಿಕಾಯುತ್ತಾ, ಕಂಬಳಿ ನೇಯುತ್ತ, ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಕಂಬಳಿ ಮತ್ತಿತರ ವ್ಯಾಪಾರವನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿರುವ ಜನರು ಪ್ರಧಾನವಾಗಿ ಬೀರಲಿಂಗ, ಮೈಲಾರಲಿಂಗ, ರೇವಣಸಿದ್ದರು ಪ್ರಮುಖ ಆರಾಧ್ಯ ಸಾಂಸ್ಕೃತಿಕ ನಾಯಕರಾಗಿ ಕಂಡುಬರುತ್ತಾರೆ. ಆದರೆ ಇಲ್ಲಿಯ ಕುರುಬರ ಉಪಪಂಗಡಗಳಿಗೆ ಸಂಬಂಧಿಸಿದಂತೆ ಇತರ ದೇವತೆಗಳನ್ನು ಆರಾಧಿಸುತ್ತಿರುವುದು ಇಲ್ಲಿಯ ವಿಶಿಷ್ಠತೆಗಳಲ್ಲಿ ಒಂದಾಗಿದೆ.

ಚಿತ್ರದುರ್ಗದ ಹಾಲುಮತ ಸಂಸ್ಕೃತಿಯು ವಿಭೂತಿ ಮತ್ತು ಭಂಡಾರ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ಬೀರಲಿಂಗ, ಮೈಲಾರಲಿಂಗರು ಭಂಡಾರ ಸಂಸ್ಕೃತಿಯ ಆರಾಧನೆಯಲ್ಲಿ ಬಂದರೆ ರೇವಣಸಿದ್ದರು ವಿಭೂತಿ ಸಂಸ್ಕೃತಿಯಲ್ಲಿ ಬರುವರು. ೧೨ನೇ ಶತಮಾನದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ನಡೆದ ವರ್ಗಸಂಘರ್ಷವು ಸಹ ಇಂದಿಗೂ ಈ ಜನತೆ ಅನುಭವಿಸುತ್ತದೆ. ಅಂದರೆ ಅತ್ತ ಭಂಡಾರ ಸಂಸ್ಕೃತಿಯನ್ನು ಬಿಡದೆ, ಇತ್ತ ವಿಭೂತಿ ಸಂಸ್ಕೃತಿಗೆ ಒಗ್ಗಿಕೊಳ್ಳದೆ ಬೀರದೇವರ ಗುಡಿಗಳಲ್ಲಿ ಭಂಡಾರ ಮತ್ತು ವಿಭೂತಿಯ ಆಚರಣೆಗಳು ಜೊತೆ ಜೊತೆಯಲ್ಲಿ ಬರುವುದು ಕಾಣಸಿಗುತ್ತವೆ.

ಬೀರದೇವರ ಆಚರಣೆಗಳು

ಬೀರಪ್ಪನು ಕುರುಬರ ಕುಲದೇವರಾದರೆ ಇಲ್ಲಿಯ ಹಾಲುಮತ ಬುಡಕಟ್ಟು ಸಂಸ್ಕೃತಿಯ ಉಪಕುಲಗಳು ಒಂದೊಂದು ದೇವರನ್ನು ಪೂಜಿಸುವುದನ್ನು ನೋಡುತ್ತೇವೆ. ಬೀರಪ್ಪನನ್ನು ಪ್ರಧಾನವಾಗಿ ಸಾಂಸ್ಕೃತಿಕ ನಾಯಕನಾಗಿ ಕಾಣುವ ಜೊತೆ ಜೊತೆ ಉಪಕುಲಗಳಾದ ಗೌಡನ ಕುರುಬರು ಲಕ್ಕಮ್ಮ ನನ್ನ, ಸಾವಂತಲ ಕಾಲದವರು ರೇವಣಸಿದ್ದ ಮತ್ತು ಉಚ್ಚಂಗಿ ಯಲ್ಲಮ್ಮನನ್ನ, ಹೊನ್ನುಂಗುರದವರು ಈರಮಾಳಪ್ಪ ಮತ್ತು ಮಾಳಮ್ಮ ನನ್ನ, ಹುಲಿಯಾನ ಕುರುಬರು ಕೆಂಚಲಿಂಗೇಶ್ವರ ಮತ್ತು ಈರಮಾಳಮ್ಮನನ್ನ, ಹಾಲಿನ ಕುರುಬರು, ಬಾಗಾಡೆಪ್ಪನನ್ನು, ಸುಲಪನಕುರುಬರು ಆಂಜನೇಯ, ಕರೀದೇವರನ್ನು ಹಾಗೂ ದಾಸಯ್ಯನನ್ನು ಬಿಜ್ಜಳನ ಕುರುಬರು ಬನಶಂಕರಿ ಮತ್ತು ಬೀರಪ್ಪನನ್ನು, ಅರೆಕುರುಬರು ಓರಗಲ್ಲಮ್ಮನನ್ನ, ಭಾಗದ ಕುರುಬರು ಹೊಸರಮ್ಮನನ್ನು ಮತ್ತು ಎಂಗಲಾರದಮ್ಮನನ್ನ, ಮಲ್ಲಿಗೆ ಕುರುಬರು, ಕೊಲಲಾಪುರದಮ್ಮನನ್ನು ಬೆಳ್ಳನೆ ಕುರುಬರು, ತಿಮ್ಮಪ್ಪನನ್ನ ತೆಕ್ಕೆನ ಕುರುಬರು ಮೈಲಾರಲಿಂಗನನ್ನ ಹೀಗೆ ಒಂದೊಂದು ಉಪಕುಲದವರು ಒಂದೊಂದು ಮನೆದೇವರನ್ನು ಆರಾಧಿಸುವ (ಪೂಜಿಸುವ) ಸಂಪ್ರದಾಯವನ್ನು ಕಾಣುತ್ತೇವೆ. ಹೀಗೆ ಒಂದೊಂದು ಒಳಪಂಗಡಕ್ಕೆ ಒಂದೊಂದು ದೇವರನ್ನು ಆರಾಧಿಸುತ್ತಿದ್ದರೂ ಹಾಲುಮತದ ಮೂಲದೇವರು ಬೀರಪ್ಪ ಗುರು ರೇವಣಸಿದ್ದ.

ಈ ಭಾಗದಲ್ಲಿ ಹೆಚ್ಚಾಗಿ ತೋಪುಜಾತ್ರೆ, ಜಾತ್ರೆ, ದೊಡ್ಡದೇವರು, ಶಿವರಾತ್ರಿಯಲ್ಲಿ ದೇವರನ್ನು ಹೊಳೆಗೆ ಹೊರಡಿಸುವುದು ಮುಂತಾದ ಆಚರಣೆಗಳು ಕಾಣಸಿಗುತ್ತವೆ. ಇಲ್ಲಿ ಪ್ರಮುಖವಾಗಿ ಹೊಸದುರ್ಗ ಮತ್ತು ಹೊಳಲ್ಕೆರೆಯ ಭಾಗದಲ್ಲಿ ಬೀರದೇವರ ಉತ್ಸವಗಳಾದ ತೋಪು ಜಾತ್ರೆ ಮತ್ತು ಕಂತೆ ಸೇವೆಯಂತಹ ಆಚರಣೆಗಳು ಪ್ರಮುಖವಾದರೆ ಚೆಳ್ಳಕೆರೆ, ಹಿರಿಯೂರು, ಚಿತ್ರದುರ್ಗ ಮತ್ತು ಮೊಳಕಾಲ್ಮೂರುವಿನ ಭಾಗದಲ್ಲಿ ಹತ್ತು ಹದಿನೈದು ವರ್ಷಗಳಿಗೆ ಪ್ರತಿ ಗುಡಿಕಟ್ಟಿನ ಎಲ್ಲಾ ಪರಿವಾರದವರು ದೊಡ್ಡ ಜಾತ್ರೆಗಳನ್ನು ಸಾಗಿಸುವುದು ಕಾಣುತ್ತೇವೆ. ಇಂತಹ ಉತ್ಸವಗಳಲ್ಲಿ ಆಯಾ ಸರಹದ್ದಿನ ಬೀರಪ್ಪನು ಪ್ರಮುಖ ನಾಯಕನಾದರೆ ಉಪಪಂಗಡದ ಅಣ್ಣ ತಮ್ಮಂದಿರ ದೇವರುಗಳು ಅಲ್ಲಿಗೆ ಬಂದು ಸೇರುತ್ತವೆ. ಬೀರದೇವರ ಪರಿವಾರದವರಾದ ಗೌಡ, ಯಜಮಾನ, ಪೋತಲರಾಜ, ದಳವಾಯಿ, ಈರಗಾರ, ಕೋಲುಕಾರ, ಪೂಜಾರಿ ಎಲ್ಲರೂ ಒಂದೆಡೆ ಸೇರಿ ತೆಗೆದುಕೊಂಡ ತೀರ್ಮಾನದಂತೆ ಸಂಬಂಧಿಸಿದ ಜನತೆಯು ನಡೆದುಕೊಳ್ಳಬೇಕು. ಈ ಜಾತ್ರೆಗಳು ಸಾಮಾನ್ಯವಾಗಿ  ಈ ಭಾಗದ ಮಳೆ ಬೆಳೆಯನ್ನು ಆಧರಿಸಿ ನಡೆಯುವಂತಹ ಆಚರಣೆಗಳಾಗಿರುತ್ತವೆ. ವರ್ಷದಲ್ಲಿ ಮಳೆ, ಬೆಳೆ ಸಮೃದ್ಧವಾಗಿದ್ದರೆ ಜಾತ್ರೆಗಳು ಜೋರಾಗಿ ನಡೆಯುತ್ತವೆ. ಮಳೆ, ಬೆಳೆ ಕಡಿಮೆಯಾದರೆ ಆಯಾ ಹಣಕಾಸಿಗೆ ಅನುಗುಣವಾಗಿ ಆಚರಣೆಗಳು ನಡೆಯುತ್ತವೆ.

ಬೀರದೇವರ ಆಚರಣೆಯಲ್ಲಿ ಕಂತೆಸೇವೆ ಮತ್ತು ಕಂತೆಧಾರಣೆ ಪ್ರಮುಖವಾದ ಆಚರಣೆ. ಇದರಲ್ಲಿ ಪೂಜಾರಿಯಿಂದ ಗುಡಿಗೌಡ ಮತ್ತು ಯಜಮಾನನಿಂದ ಎಲ್ಲಾ ಸಂಪ್ರದಾಯದವರು ನಡೆಮುಡಿ ಮತ್ತು  ಒಂದು ಹೊತ್ತಿನೊಂದಿಗೆ ದೇವರುಗಳನ್ನು ಹೊಳೆಯ ಹತ್ತಿರ ಒಂದು ಹುಟ್ಟು ಕುರಿಮರಿಯನ್ನು (ಕೂದಲೂ ಬೆಳೆದ) ತಂದು ಅದಕ್ಕೆ ಮೈ ತೊಳೆದು ಅದರ ಎಣ್ನೆಯನ್ನು ಕತ್ತರಿಯಿಂದ ಕತ್ತರಿಸಿ ಕೈಯಿಂದ ನೂಲನ್ನು ತೆಗೆದು ಮಗ್ಗದ ಸಾಮಾನುಗಳಿಂದ ಹಾಸುಹಾಕಿ ಗದ್ದುಗೆ ಕಂಬಳಿಯನ್ನು ನೇಯ್ದು ಈ ಕಂಬಳಿಯನ್ನು ಗದ್ದುಗೆಯಾಗಿ ಮಾಡಿ ದೇವರಿಗೆ ಸ್ನಾನ ಮಾಡಿಸಿ ಗದ್ದುಗೆ ಪೂಜೆಯು ಈ ನಾಯಕನಿಗೆ ತುಂಬಾ ಶ್ರೇಷ್ಠವಾದುದು. ಆದುದರಿಂದಲೇ ಬೀರದೇವರ ಯಾವುದೇ ಆಚರಣೆಯಲ್ಲಿ ಕರಿಯಕಂಬಳಿ ಗದ್ದುಗೆ ತುಂಬಾ ಮುಖ್ಯವಾದುದು. ಇದರಂತೆಯೇ ಡೊಳ್ಳು ತುಂಬಾ ಅರ್ಪಿತವಾಗುವಂತಹ ವಾದ್ಯ. ಮುಂದುವರಿದು ಛತ್ರಿ, ಚಾಮರ, ಎಲ್ಲಾ ಬಿರುದುಗಳು ಬೀರಪ್ಪನಿಗೆ ಸಲ್ಲುತ್ತವೆ. ಈ ಬೀರಪ್ಪನ ಸಮ್ಮುಖದಲ್ಲಿಯೇ ಎಲ್ಲ ಆಚರಣೆಗಳು ನಡೆಯುತ್ತವೆ. ಬೀರಪ್ಪನಿಗೆ ಸಲ್ಲುತ್ತವೆ. ಈ ಬೀರಪ್ಪನ ಸಮ್ಮುಖದಲ್ಲಿಯೇ ಎಲ್ಲ ಆಚರಣೆಗಳು ನಡೆಯುತ್ತವೆ. ಹೊಳಲ್ಕೆರೆ ತಾಲೂಕು ತಾಳಿಕಟ್ಟೆಯ ತೋಪುಜಾತ್ರೆ (ಏಳೂರು ದೇವತೆಗಳು) ಹೊಸದುರ್ಗದ ಶ್ರೀರಾಮಪುರದ ಬೀರದೇವರ ಕಂತೆ ಸೇವೆಯ ಜಾತ್ರೆ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕಿನ ದೊಡ್ಡದೇವರ ಜಾತ್ರೆಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.

ಮೈಲಾರಲಿಂಗನ ಸಂಪ್ರದಾಯಗಳು

ಹಾಲುಮತ ಸಾಂಸ್ಕೃತಿಕ ನಾಯಕರಲ್ಲಿ ಬೀರಪ್ಪನ ನಂತರದ ಸ್ಥಾನವೇ ಮೈಲಾರಲಿಂಗನ ಸ್ಥಾನ. ಮೈಲಾರಲಿಂಗನ ಸಂಪ್ರದಾಯದವರು ಒಂದು ವರ್ಷಕ್ಕೆ ಒಮ್ಮೆ ಮೈಲಾರ ಜಾತ್ರೆಗೆ ಹೋಗಿ ಕಾರಣಿಕವನ್ನು ಕೇಳಿಬಂದ ಜನರು ಅವರವರು ವಾಸಿಸುವ ಊರುಗಳಲ್ಲಿ, ಹಟ್ಟಿಗಳಲ್ಲಿ, ಮೈಲಾರದೇವರ ಗುಡಿಯನ್ನು ನಿರ್ಮಿಸುತ್ತಾರೆ. ಪ್ರತಿ ಭಾನುವಾರ ಈ ದೇವರಿಗೆ ಪೂಜೆ ಮಾಡುವುದರಿಂದ ಹಿಡಿದು ಗೊರವಯ್ಯ, ಗೊರಪ್ಪಗಳಾಗಿ ತಮ್ಮ ಜೀವನವನ್ನೇ ದೇವರಿಗೆ ಅರ್ಪಿಸಿಕೊಂಡು ಊರು, ಕೇರಿ ತಿರುಗುತ್ತಾ ಬುಡ ಬುಡಕಿಯನ್ನು ಆಡಿಸುತ್ತಾ ಕೈಯಲ್ಲಿ ತ್ರಿಶೂಲವನ್ನು ಹಿಡಿದು ತಲೆಗೆ ಕರಡಿಯ ಟೋಪಿಯನ್ನು ಮತ್ತು ಕಂಬಳಿ ನಿಲುವಂತಿಯನ್ನು ಧರಿಸಿ ದೋಣಿಯಲ್ಲಿ ಭಂಡಾರವನ್ನು ನೀಡುತ್ತ ಗೊರವನ ಆಟಗಳನ್ನು ಆಡುತ್ತಾರೆ. ಮನೆ ಮನೆ ಭಿಕ್ಷೆ ಮುಗಿಸಿಕೊಂಡು ಭಕ್ತರು ಕರೆಸಿದ ಕಡೆ ಗೊರವಯ್ಯನ ಸರಪಳಿ ಪವಾಡ, ದೋಣಿ ಸೇವೆಯನ್ನು ನೆರವೇರಿಸಿಕೊಂಡು ಮೈಲಾರ ಲಿಂಗನು ಮೈಯಲ್ಲಿ ಬಂದಾಗ ಸಾಕ್ಷಾತ್‌ ಶಿವನ ಪ್ರತಿರೂಪ ಮೈಲಾರ ಲಿಂಗನಂತೆ ನರ್ತಿಸುತ್ತಾ ಮೈಲಾರಪ್ಪನ ಸಂದೇಶವನ್ನು ಸಾರುತ್ತಾ ಊರೂರು ತಿರುಗುವರು.

ಪ್ರಸ್ತುತ ಜಿಲ್ಲೆಯಲ್ಲಿ ಹೊಸದುರ್ಗ ತಾಲ್ಲೂಕಿನ ಸೂಜಿಗಲ್ಲು ಗುಡ್ಡದಲ್ಲಿರುವ ದೇವಾಲಯವೇ ಅತ್ಯಂತ ದೊಡ್ಡದು. ಉಳಿದಂತೆ ಅಲ್ಲಲ್ಲಿನ ಊರುಗಳಲ್ಲಿ ಮೈಲಾರಲಿಂಗನ ದೇವಾಲಯಗಳನ್ನು ಕಾಣಬಹುದು. ಹಿರಿಯೂರು ಟೌನ್‌ ತೇರುಮಲ್ಲೇಶ್ವರ ಜಾತ್ರೆಯ ಪ್ರಾರಂಭದಲ್ಲಿ ಗೊರವಯ್ಯಗಳಿಂದ ಸರಪಳಿ ಪವಾಡ ನಡೆಯುವುದು. ಈ ಪವಾಡವನ್ನು ನಿರ್ವಹಿಸಿದ ನಂತರವೇ ಮರುದಿನ ಜಾತ್ರೆ ಪ್ರಾರಂಭವಾಗುವುದು. ಪ್ರತಿವರ್ಷ ಫೆಬ್ರವರಿ ತಿಂಗಳು ಮೈಲಾರಲಿಂಗನ ಜಾತ್ರೆ ನಡೆದ ತರುವಾಯ ಕಾರಣಿಕವನ್ನು ಕೇಳಿ ವಾಪಾಸ್‌ ಬರುವಾಗ ಹಳ್ಳಿ ಹಳ್ಳಿಯಲ್ಲಿ ಮೈಲಾರಲಿಂಗಯ್ಯನ ಕಾವ್ಯವನ್ನು ಹಾಡುತ್ತಾ ಭಿಕ್ಷೆಯನ್ನು ಮಾಡುತ್ತಾ ಅಲ್ಲಲ್ಲಿ ಭಕ್ತರು ಬಯಸಿದ ಕಡೆ ಭಕ್ತರ ಮನೆಯಲ್ಲಿ ಮೈಲಾರಲಿಂಗನ ಕಾವ್ಯವನ್ನು ಹಾಡಿ ದೋಣಿ ಸೇವೆಯನ್ನು ನಿರ್ವಹಿಸಿ ಮುಂದೆ ಸಾಗುವರು. ದೋಣಿ ಸೇವೆಯಲ್ಲಿ ಹಾಲು, ತುಪ್ಪ, ಬಾಳೆಹಣ್ಣು, ಉತ್ತತ್ತಿ ಹಣ್ಣುಗಳೆಂದರೆ ಈ ಭಕ್ತರಿಗೆ ಪಂಚಪ್ರಾಣ.

ಇತ್ತೀಚಿನ ದಿನಗಳಲ್ಲಿ ಕುರುಬ ಸಮುದಾಯವೇ ಅಲ್ಲದೆ ಲಿಂಗಾಯಿತರು, ವಾಲ್ಮೀಕಿ, ಒಕ್ಕಲಿಗ, ಮಡಿವಾಳ, ಆದಿಕರ್ನಾಟಕ ಮತ್ತು ಆದಿದ್ರಾವಿಡ ಜನಾಂಗದವರು ಈ ದೇವರ ಭಕ್ತರಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಹಾಗೂ ಇವರ ಮನೆದೇವರಾಗಿ ನಡೆದುಕೊಳ್ಳುವುದು ಹೆಚ್ಚಾಗಿ ಕಂಡುಬಂದಿದ್ದು, ಮೈಲಾರಲಿಂಗನು ಕೇವಲ ಕುರುಬರಿಗೆ ಸೀಮಿತವಾಗದೆ ಜಾತ್ಯಾತೀತ ನಾಯಕನಾಗಿ ಕಂಡುಬರುತ್ತಿರುವನು.

ರೇವಣಸಿದ್ದ ಪರಂಪರೆ

ಹಾಲುಮತ ಸಂಸ್ಕೃತಿಯಲ್ಲಿ ಶ್ರೀಗುರು ರೇವಣರ ಪಾತ್ರವು ಪ್ರಮುಖವಾದುದು. ೧೨ನೇ ಶತಮಾನದ ಬಿಜ್ಜಳರಾಯನ ಆಸ್ಥಾನದಲ್ಲಿ ವರ್ಗ ಸಂಘರ್ಷವುಂಟಾಗಿ ಸಿದ್ದಪರಂಪರೆಗೆ ಪರಿವರ್ತನೆಗೊಂಡ ರೇವಣಸಿದ್ದರು ಸಲ್ಲಿಸಿದ ಸೇವೆಯು ಅಪಾರ ಎಂಬುದಕ್ಕೆ ಈ ಭಾಗದಲ್ಲಿ ಇರುವ ರೇವಣಸಿದ್ದೇಶ್ವರ ಮಠಗಳೇ ಸಾಕ್ಷಿ (ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿಯೇ ಹೆಚ್ಚು ರೇವಣಸಿದ್ದ ಮಠಗಳು ಕರ್ನಾಟಕದಲ್ಲಿ ಕಂಡುಬರುವುದು).

ರೇವಣಸಿದ್ದನು ಕುರುಬರ ಕುಲಗುರು. ಇವರು ಸಾವಂತ ಕುಲದವರು. ಇವರು ಹುಟ್ಟು ಲಿಂಗದವರಾದುದರಿಂದ ಯಾವುದೇ ರೀತಿಯ ಮಾಂಸಹಾರವನ್ನು ಸೇವಿಸದೆ ಗುರುವಿನ ಸ್ಥಾನವನ್ನು ಉಳಿಸಿಕೊಂಡು ಬಂದಿರುವರು. ಈತನ ಶಿಷ್ಯ ಪರಂಪರೆಯಲ್ಲಿ ಒಡೆಯರು ಪ್ರಮುಖರು. ಹಾಲುಮತ ಸಮಾಜದಲ್ಲಿ ಯಾವುದೇ ಪುಣ್ಯ ಕಾರ್ಯಗಳಾದರೆ ಕಂಬಳಿಯ ಗದ್ದುಗೆ ತೀರಿಸುವುದು ಇವರ ಕರ್ತವ್ಯ. ಈ ರೀತಿ ಸೇವೆಯನ್ನು ನೀಡುತ್ತಾ ಹಾಲುಮತ ಸಮುದಾಯದವರು ನೀಡುವ ವರ್ಷದ ಕಾಣಿಕೆಯ ಹಣ ಮತ್ತು ಕುರಿ, ಕುರಿಯ ಉಣ್ಣೆಯನ್ನು ತೆಗೆದುಕೊಂಡು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಒಟ್ಟಿನಲ್ಲಿ ಸಿದ್ದಪರಂಪರೆ ಈ ಸಮುದಾಯದಲ್ಲಿ ವಿಶಿಷ್ಠವಾಗಿ ಕಂಡುಬಂದರೂ ಇವರು ಸಮಾಜದ ಓರೆಕೋರೆಗಳನ್ನು ತಿದ್ದಿ ಇಂದಿಗೂ ಸೇವೆಯನ್ನು ಸಲ್ಲಿಸುತ್ತಾ ಬಂದು ಕುರುಬ ಸಂಸ್ಕೃತಿಯಲ್ಲಿ ವಿಶಿಷ್ಠವಾಗಿ ಕಂಡುಬರುವರು.

ಮದುವೆಯ ಸಂಬಂಧ

ಇವರನ್ನು ಈ ಭಾಗದಲ್ಲಿ ಒಡೆಯರು ಎಂದು ಕರೆಯುವರು. ಇವರು ಕುರುಬರ ಮನೆಯಿಂದ ಹೆಣ್ಣನ್ನು ತರುವರು. ಈ ಮನೆಗೆ ಬಂದ ಹೆಣ್ಣಿಗೆ ಬೇವಿನ ಕಡ್ಡಿಯಿಂದ ನಾಲಿಗೆಯನ್ನು ಸುಟ್ಟು ಅಪ್ಪ, ಅಮ್ಮನ ಮನೆಯಲ್ಲಿ ಮಾಂಸ ಮದ್ದು ತಿಂದಿದ್ದರೆ ಶುದ್ಧಗೊಳಿಸಿಕೊಂಡು ಮನೆಗೆ ಕರೆದುಕೊಳ್ಳುವರು. ಇನ್ನು ಹಾಲುಮತ ಸಮುದಾಯದಲ್ಲಿ ಒಡೆಯರು ಮನೆಗೆ ಬಂದರೆ ಇವರಿಗೆ ಊಟ ಮಾಡಲು ಬೇರೆಯ ತಟ್ಟೆಯನ್ನು ಕೊಡುವ ವ್ಯವಸ್ಥೆಯನ್ನು ಕಾಣುತ್ತೇವೆ. ಹಾಗೂ ಒಡೆಯರಮ್ಮ ನಿತ್ಯಮುತ್ತೈದೆ. ಇವರು ಒಂದು ವೇಲೆ ಗಂಡನು ಮೃತನಾದರೆ ತಾಳಿಯನ್ನು ತೆಗೆಯುವುದಿಲ್ಲ. ಈ ರೀತಿ ವಿಶಿಷ್ಟ ಸ್ಥಾನಮಾನವನ್ನು ಪಡೆದು ಕುರುಬರ ಮನೆಯಲ್ಲಿ ಕೆಲವು ಕಲಹಗಳಾದರೆ ಒಡೆಯರು ಹೇಳಿದ ರೀತಿಯಲ್ಲಿಯೇ ನಡೆದುಕೊಂಡು ಗುರುವಿನ ಸ್ಥಾನವನ್ನು ನೀಡಿರುವರು. ಇಂತಹ ಸಂಪ್ರದಾಯ ಇರುವುದರಿಂದ ಹಾಲುಮತದವರು ಒಡೆಯರ ಮನೆಗೆ ಹೆಣ್ಣು ಕೊಡಲು ಮತ್ತು ತೆಗೆದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಹೆಚ್ಚು ಒಪ್ಪುವುದಿಲ್ಲ.

ಕಂಬಳಿ ಸಂಸ್ಕೃತಿ

ಕಂಬಳಿ ಸಂಸ್ಕೃತಿಯು ಕುರುಬರ ಒಂದು ವಿಶಿಷ್ಟ ಸಂಸ್ಕೃತಿಯಾಗಿದೆ. ಇವರ ಕಸಬು ಕುರಿ ಕಾಯುವುದು, ಕಂಬಳಿ ನೇಯುವುದು, ಕಂಬಳಿ ವ್ಯಾಪಾರ ಮಾಡುವುದು ಹೆಚ್ಚು ವಾಡಿಕೆಯಾದರೂ ಇನ್ನು ಕೆಲವರು ಬೇಸಾಯ ಮತ್ತಿತತರ ಉದ್ಯೋಗವನ್ನು ಆಶ್ರಯಿಸಿದವರು. ಚಿತ್ರದುರ್ಗ ಸೀಮೆಯ ಚಳ್ಳಕೆರೆಯಲ್ಲಿ ಕಂಬಳಿ ಮಾರುಕಟ್ಟೆ ಇದೆ. ಭಾರತದಲ್ಲಿ ಪಂಜಾಬ್‌ ರಾಜ್ಯದ ಲೂದಿಯಾನವನ್ನು ಬಿಟ್ಟರೆ ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಕಂಬಳಿ ಮಾರುಕಟ್ಟೆ ಇರುವುದು ಚಳ್ಳಕೆರೆಯಲ್ಲಿ. ಲೂದಿಯಾನದಲ್ಲಿ ಆವಿಸ್ಕಲಿತ ಕಂಬಳಿ ತಯಾರಾದರೆ, ಚಳ್ಳಕೆರೆಯಲ್ಲಿ ಶುದ್ಧ ದೇಶೀ ಕಂಬಳಿಗಳು ಈ ಭಾಗದಲ್ಲಿ ಬಿಟ್ಟರೆ ಬೇರೆ ಎಲ್ಲೂ ತಯಾರಿಸುತ್ತಿಲ್ಲ. ಇವರು ಕಂಬಳಿ ನೇಯ್ಗೆಯನ್ನು ಜೀವಾಳವಾಗಿಟ್ಟುಕೊಂಡು ಕಂಬಳಿ, ಉಣ್ಣೆ, ಕುರಿಗೆ ದೇವರ ಸ್ಥಾನಮಾನವನ್ನು ನೀಡುವರು. ಇವರು ವರ್ಷಕ್ಕೆ ಒಮ್ಮೆ ದಸರಾ ಹಬ್ಬದಲ್ಲಿ ಆಯುಧ ಪೂಜೆ ಮಾಡುವ ಸಂದರ್ಭದಲ್ಲಿ ಕಂಬಳಿ ನೇಯಲು ಬಳಸುವ ಮಗ್ಗದ ಮಟ್ಟುಗಳಾದ ಬೇವು, ಲಾಳಿ, ಕುಂಟೆ, ಅಂಬತ್ತಿಗೆ, ರಾಟೆ, ಒಳಕೋಲು, ಹೂಡುಮಿಣಿ, ಕತ್ತರಿ, ಅಲುಬೆ ಮುಂತಾದ ಸಾಮಾನುಗಳಿಗೆ ಮಗ್ಗದ ಗುಣಿಯ ಮೆಲ್‌ ಭಾಗದಲ್ಲಿ ನೀರಿನಲ್ಲಿ ತೊಳೆದು ಹೂಗಳಿಂದ ಶೃಂಗರಿಸಿ ಪೂಜೆಯನ್ನು ನೆರವೇರಿಸುವರು.

ಕುರಿಕಾಯುವುದು ಮತ್ತು ಕುರಿಯ ಉಣ್ಣೆಯನ್ನು ಕತ್ತರಿಸುವ ಸಂಪ್ರದಾಯವೂ ಕೂಡ ವಿಶಿಷ್ಟವಾಗಿದೆ. ಈ ಭಾಗದಲ್ಲಿ ಕುರುಬರಿಗಿಂತ ಕುಂಚಿಟಿಗರು, ಗೊಲ್ಲರು, ಲಿಂಗಾಯತರು, ನಾಯಕರು ಹೆಚ್ಚು ಕರಿಮೇಕೆಯನ್ನು ಸಾಕುವರು. ಆದರೆ ಕುರಿಯ ಉಣ್ಣೆಯನ್ನು ಕತ್ತರಿಸುವವರು ಕುರುಬರು ಮಾತ್ರ. ಆದುದರಿಂದ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಒಂದು ವಿಶಿಷ್ಟ ಆಚರಣೆ ನಡೆಸುವರು. ಇದನ್ನು ಹಾಲುಚೆಲ್ಲುವ ಕಾರ್ಯಕ್ರಮ ಎಂದು ಕರೆಯುತ್ತಾರೆ. ಉಣ್ಣೆಯನ್ನು ಕತ್ತರಿಸುವ ಮೊದಲು ಕುರಿಯ ಉಣ್ಣೆಯನ್ನು ಶುದ್ಧಗೊಳಿಸುವ ನಿಟ್ಟಿನಲ್ಲಿ ಕುರಿಯನ್ನು ನೀರಿನಲ್ಲಿ ತೊಳೆಯುವರು. ಈ ಕ್ರಿಯೆಗೆ ಕುರಿಯನ್ನು ನೀರಿಗೆ ಹಾಕುವುದು ಎನ್ನುವರು. ನಂತರ ಹಾಲು ಚೆಲ್ಲುವರು ಹಾಲುಮತದವರು ಕುರಿಯನ್ನು ನೀರಿಗೆ ಹಾಕಿ ಹಾಲು ಚಲ್ಲಿದರೆ ಈ ಕುರಿಯ ಉಣ್ಣೆಯನ್ನು ಬೇರೆಯವರು ಕತ್ತರಿಸುವಂತಿಲ್ಲ. ಒಂದು ವೇಳೆ ಬೇರೆ ಕೆಲಸದ ಒತ್ತಡದಲ್ಲಿ ಅವರು ಕುರಿಯ ಉಣ್ಣೆಯನ್ನು ಕತ್ತರಿಸಲು ಬಾರದಿದ್ದ ಪಕ್ಕದಲ್ಲಿ ಒಂದು ವರ್ಷವಾದರೂ ಬೇರೆ ಕುರುಬರಿಗೆ ಈ ಉಣ್ಣೆಯನ್ನು ನೀಡುವುದಿಲ್ಲ. ಇಂತಹ ಸಂಪ್ರದಾಯವಿದ್ದು ಕುರಿಗೆ ಹಾಲುಚೆಲ್ಲಿದ ದಿನ ಕುರಿಯವರ ಮನೆಯಲ್ಲಿ ಹುಗ್ಗಿ ತುಪ್ಪದಿಂದ ಕುರುಬರಿಗೆ ಊಟವನ್ನು ಮಾಡಿಸಿದರೆ ಕುರಿಯ ಹಿಂಡು ಹೆಚ್ಚುತ್ತದೆ ಎಂಬ ವಾಡಿಕೆಯಿದೆ. ಅದಕ್ಕಾಗಿ ಕುರುಬರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವರು. ಇಂತಹ ಸಂಪ್ರದಾಯದಿಂದ ಕುರಿಯ ಉಣ್ಣೆ ಕತ್ತರಿಸಿಕೊಂಡು ಅವರಿಗೆ ಕರಿಕಂಬಳಿಯನ್ನು ನೀಡುವಂತಹ ವಸ್ತುವಿನಿಮಯ ಪದ್ಧತಿಯು ಜೀವಂತವಾಗಿವೆ. ಈ ರೀತಿಯ ಕೊಡುಕೊಳ್ಳುವಿಕೆಯಿಂದ ಇಂದಿಗೂ ಈ ಸಮುದಾಯದಲ್ಲಿ ಸಹೋದರ ಭಾವನೆಗಳು ಇದ್ದು ಇಂದಿಗೂ ಅನ್ಯೂನ್ಯವಾಗಿ ಹಳ್ಳಿಗಳಲ್ಲಿ ಜೀವನ ಸಾಗಿಸುವ ಸಂಪ್ರದಾಯವು ಜೀವಂತವಾಗಿ ಕಾಣಬಹುದು.

ದಾಸ ಪರಂಪರೆ

ಕನಕದಾಸರು ದಾಸಪರಂಪರೆಯ ಭಾಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಕನಕದಾಸರ ಜಯಂತಿ, ಉತ್ಸವ ಮತ್ತು ಭಾಷಣಗಳನ್ನು ಏರ್ಪಡಿಸಿ ಸಮುದಾಯವನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ ಮುಂದೆ ತರುವ ಪ್ರಯತ್ನವು ನಡೆದಿದೆ. ಕಾಗಿನೆಲೆಯ ಕನಕಗುರುಪೀಠದ ಶಾಖಾಮಠವು ಚಿತ್ರದುರ್ಗದ ಹೊಸದುರ್ಗದಲ್ಲಿ ಪ್ರಾರಂಭಗೊಂಡು ಜನರಲ್ಲಿ ಜಾಗೃತಿಯತ್ತ ಕೊಂಡೊಯುತ್ತಿರುವುದು ಒಂದು ಜಾಗೃತಿಯ ಸಂಕೇತವಾಗಿದೆ. ಇಂದಿನ ದಿನಗಳಲ್ಲಿ ಸಮುದಾಯದ ಮುಖಂಡರು ಕನಕ ಗುರುಪೀಠಕ್ಕೆ ನೀಡುವ ಕಳಕಳಿ ಮತ್ತು ಕಾಳಜಿಯನ್ನು ರೇವಣಸಿದ್ದ ಮಠಗಳಿಗೆ ನೀಡಿ ಕನಕ ಮಠದ ಜೊತೆ ರೇವಣಸಿದ್ದ ಮಠವನ್ನು ಬೆಳೆಸುವ ಪ್ರಯತ್ನವನ್ನು ಮಾಡಿದರೆ ಸಮಾಜದ ಅಭಿವೃದ್ಧಿಯ ಜೊತೆ ಜೊತೆ ಸಿದ್ಧಪರಂಪರೆ ಮತ್ತು ಹಾಲುಮತ ಪರಂಪರೆಯನ್ನು ಬೆಳೆಸುವ ಪ್ರಯತ್ನ ನಡೆಸಿದಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಕನಕ ಮಠದ ಜೊತೆಗೆ ರೇವಣಸಿದ್ದ ಮಠಕ್ಕೆ ಅನುದಾನವನ್ನು ನೀಡಿದಲ್ಲಿ ಸಿದ್ದಪರಂಪರೆ ಮತ್ತು ಹಾಲುಮತ ಸಂಸ್ಕೃತಿ ಜೀವಂತವಾಗಿರಲು ಸಹಕಾರಿಯಾಗುವುದು.

ಈ ಭಾಗದಲ್ಲಿ ಇಲ್ಲಿಯವರೆಗೆ ನಡೆದ ಹಾಲುಮತ ಸಂಸ್ಕೃತಿಯ ಅಧ್ಯಯನಗಳು

ಇಲ್ಲಿಯವರೆಗೆ ಈ ಭಾಗದಲ್ಲಿ ಅಷ್ಟಾಗಿ ಅಧ್ಯಯನಗಳು ನಡೆದಿರುವುದಿಲ್ಲ. ಆದರೂ ನಿರ್ಲಕ್ಷ್ಯಕ್ಕೆ ಒಳಗಾಗದೆ ಕೆಲವು ಅಧ್ಯಯನಗಳು ನಡೆದಿವೆ. ಯಕ್ಷಗಾನ ಅಕಾಡೆಮಿಯವರು ಹೊರತಂದಿರುವ ಡಾ. ರಾಜಪ್ಪ ದಳವಾಯಿ ಅವರು ಸಂಪಾದಿಸಿರುವ ಏಳೂರು ದೇವತೆಗಳು ಈ ಕೃತಿಯು ಹೊಳಲ್ಕೆರೆ ತಾಲೂಕು ತಾಳಿಕಟ್ಟೆಯ ಕಿರಿಯಯ್ಯ ಮತ್ತು ಹಿರಿಯಯ್ಯ ಇವರ ಬಗ್ಗೆ ಕೆಲವೊಂದು ಸಂಗ್ರಹಗಳು ನಡೆದಿವೆ. ಮತ್ತು ಈ ಗ್ರಾಮದ ಬೀರದೇವ ದೇವಾಲಯದಲ್ಲಿ ಬೀರದೇವರ ಪಕ್ಕದಲ್ಲಿ ಒಂದು ಶಾಸನವನ್ನು ಹುಗಿದಿಟ್ಟಿದ್ದು ಕಂಡುಬಂದಿದ್ದು ಈ ಶಾಸನವನ್ನು ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಪೂಜಿಸಿ ನಂತರ ಜಾತ್ರೆಯ ಮುಕ್ತಾಯದ ದಿನ ಹೂತು ಪೂಜಿಸುವ ಸಂಪ್ರದಾಯವಿದೆ. ಹಾಲುಮತ ಅಧ್ಯಯನ ಪೀಠ ಮತ್ತು ಕನಕಗುರು ಪೀಠವು ಇದರಲ್ಲಿ ಇರುವ ಅಂಶವನ್ನು ಹೊರತರುವ ಕಾರ್ಯವನ್ನು ಮಾಡಬೇಕಾಗಿದೆ. ಹಾಗೂ ನಮ್ಮಂತಹ ಸಂಶೋಧಕರಿಗೂ ಕೂಡ ಇದು ಒಂದು ಸವಾಲಾಗಿಯೇ ಉಳಿಯುವುದು.

ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಇವರು ಜಾನಪದ ಅಕಾಡೆಮಿಯಿಂದ ಹೊರತಂದಿರುವ ‘ಕಲಮರಹಳ್ಳಿಯ ಕಥೆಗಳು’ ಈ ಕಥಾ ಸಂಕಲನದಲ್ಲಿ ‘ಕಥೆಗಾರ ಈರಬಡಪ್ಪ’ ಇವರ ಕಥೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಡಾ. ಎಫ್‌. ಟಿ. ಹಳ್ಳಿಕೇರಿಯವರ ಮಾರ್ಗದರ್ಶನದಲ್ಲಿ ನಡೆದ ಕಂಬಳಿ ಸಂಸ್ಕೃತಿ ಒಂದು ಅಧ್ಯಯನ’ ಎಂಬ ವಿಷಯವನ್ನು ಕುರಿತು ಅಧ್ಯಯನ ಮಾಡಿರುವ ಜಯಶ್ರೀ ಇಟ್ಟಣ್ಣನವರ ಕಿರುಪ್ರಬಂಧದಲ್ಲಿ ಚಳ್ಳಕೆರೆಯ ಕಂಬಳಿ ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲುತ್ತದೆ. ‘ಹೊಸದುರ್ಗ ಸೀಮೆಯ ಜನಪದ’ ಎಂಬ ಕೃತಿಯನ್ನು ಬಾಗೂರು ನಾಗರಾಜ ಇವರು ಹೊರತಂದಿದ್ದು ಇದರಲ್ಲಿ ಸೂಜಿಕಲ್ಲು ಗುಡ್ಡದ ಮೈಲಾರಲಿಂಗನ ಬಗ್ಗೆ ಮಾಹಿತಿಯನ್ನು ನೀಡುವುದು. ಡಾ. ಮೀರಾಸಾಬಿಹಳ್ಳಿ ಶಿವಣ್ಣ ಇವರು ಸಂಪಾದಿಸಿರುವ ‘ಗಣಿಯದನಿ’ ಕೃತಿಯು ಸಂಗೀತ ಮೋಡಿಕಾರ ಲಿಂಗರಾಜು ಇವರ ಬಗ್ಗೆ ಮಾಹಿತಿಯನ್ನು ನೀಡಿರುವರು. ಜನಪದ ಸಾಹಿತ್ಯದಲ್ಲಿ ಡಾ. ಪಿ. ಆರ್‌. ತಿಪ್ಪೆಸ್ವಾಮಿ ಇವರ ಕಲೆ ಮತ್ತು ಜೀವನದ ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡುವುದು. ಕನಕ ಗುರುಪೀಠವು ಹೊರತಂದಿರುವ ಕನಕ ರಶ್ಮಿಯಲ್ಲಿ ಹಲವು ಹತ್ತು ಮಾಹಿತಿಯನ್ನು ನೀಡುವುದನ್ನು ಬಿಟ್ಟರೆ ಈ ಭಾಗದಲ್ಲಿ ಸಂಶೋಧಿಸಿ ಬೆಳಕಿಗೆ ತರುವಂತಹ ಕುರುಬರ ಬದುಕಿನ ಹತ್ತು ಹಲವು ಮಹತ್ತರ ಸಂಗತಿಗಳೂ ಹಾಗೆಯೇ ಉಳಿದಿವೆ.

ಜನಪದ ಸಾಹಿತ್ಯಕ್ಕೆ ಈ ಸೀಮೆಯ ಕೊಡುಗೆ

ಕುಂಚ ಕಲಾವಿದರಾದ ಹಾಗೂ ಜನಪದ ತಜ್ಞರಾದ ಡಾ. ಪಿ. ಆರ್‌. ತಿಪ್ಪೇಸ್ವಾಮಿಯವರು ಹಿರಿಯೂರಿನ ಹರತಿಕೋಟೆಯವರು. ಜನಪದ ಕಥಾ ಕಣಜ ಎಂದು ಹೆಸರಾಗಿರುವ ಕಥೆಗಾರ ಈರಬಡಪ್ಪ ಕಲಮರಹಳ್ಳಿ ಚಳ್ಳಕೆರೆ ತಾಲ್ಲೂಕಿನವರು. ಕನಕ ಗುರುಪೀಠದಲ್ಲಿ ಇರುವ ಸರ್ವಶ್ರೀಗಳಾದ ನಿರಂಜನಾನಂದ ಮಹಾಸ್ವಾಮಿಗಳೂ, ಈಶ್ವರಾನಂದ ಮಹಾಸ್ವಾಮಿಗಳು ಮತ್ತು ಸಿದ್ದರಾಮ ಮಹಾಸ್ವಾಮಿಗಳು ಚಿತ್ರದುರ್ಗದ ಸೀಮೆಯವರು. ಹೀಗೆ ಜನಪದ ಸಾಹಿತ್ಯ ಲೋಕಕ್ಕೆ ಈ ಭಾಗದ ಕೊಡುವೆ ಕಡಿಮೆಯೇನಲ್ಲ.

ಒಟ್ಟಾರೆ ಈ ಭಾಗದ ಜನಪದ ಸಂಸ್ಕೃತಿಯನ್ನು ಉಂಡ ಹಾಲುಮತ ಸಂಸ್ಕೃತಿಯು ತನ್ನ ಅಂತರಾಳದಲ್ಲಿ ತನ್ನದೇ ಆದ ಜನಪದ ಸಂಸ್ಕೃತಿಯನ್ನು ಬೆಳೆಸುವುದರ ಜೊತೆ ಜೊತೆ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ.