ರಾಜ್ಯಮಟ್ಟದ ಎರಡನೆಯ ಹಾಲುಮತ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಿರುವ ಗಣ್ಯ ಮಾನ್ಯರೇ, ವಿದ್ವಾಂಸ ಮಿತ್ರರೇ, ಬಂಧುಗಳೇ ತಮಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು.

ಹಾಲುಮತ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕೆಂದು ಕಳೆದ ಒಂದು ತಿಂಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಿಂದ ನನಗೆ ಪತ್ರ ಬಂದಿತು. ನನಗೆ ಆಶ್ಚರ್ಯವೂ ಆಯಿತು. ನಾನು ಒಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತನಾದವನು. ಬಿಡುವಿದ್ದಾಗ ಕೆಲವು ಕಥೆ, ಕಾದಂಬರಿ, ನಾಟಕ, ಕವನಗಳನ್ನು ಬರೆದು ಪ್ರಕಟಿಸಿದವನು. ಜೊತೆಗೆ ಸಮಾಜ ಸಂಸ್ಕೃತಿಯ ಬಗ್ಗೆ ಅಷ್ಟಿಷ್ಟು ಓದಿಕೊಂಡವನು. ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣ ಸಂಸ್ಥೆಯು ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಸಮ್ಮೇಳನ ಅಧ್ಯಕ್ಷತೆಯ ಉನ್ನತ ಜವಾಬ್ದಾರಿಯನ್ನು ವಹಿಸಿರುವುದು ನನ್ನ ಭಾಗ್ಯವೆಂದು ಭಾವಿಸಿದ್ದೇನೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಶ್ರೀ ಎಸ್.ಎಸ್. ಪೂಜಾರ್ ಅವರಿಗೆ ಹಾಗೂ ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಕರ್ನಾಟಕ ಜನಪದದಲ್ಲಿ ಬದುಕು ಸಾಗಿಸುತ್ತಿರುವ ಜನರಲ್ಲಿ ಮೂರನೆಯ ಒಂದು ಭಾಗದಷ್ಟು ಕುರುಬ ಜನಸಮುದಾಯವಿರುವುದು ಒಂದು ವಿಶೇಷ. ಇಷ್ಟು ದೊಡ್ಡ ಜನಸಂಖ್ಯೆ ಹೊಂದಿದ್ದರೂ ಪ್ರಗತಿಪಥದತ್ತ ಹೆಜ್ಜೆ ಹಾಕದೇ, ತನ್ನದೇ ಆದ ನೀತಿ, ಸಂಸ್ಕೃತಿ, ಆಚಾರ ವಿಚಾರದ ಚೌಕಟ್ಟಿನಲ್ಲಿ ಸುಸಂಪನ್ನರೆಂದು ಬಾಳಿಕೊಂಡದ್ದು ಏಕೆ? ಹೇಗೆ? ಎನ್ನುವ ವಿಚಾರ ವಿಮರ್ಶಿಸಿ ಮೂಲವನ್ನು ಕಾಣುವ ಉದ್ದೇಶವನ್ನಿಟ್ಟುಕೊಂಡು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಾಲುಮತ ಅಧ್ಯಯನ ಪೀಠ ೨೦೦೭ ರಲ್ಲಿ ಸ್ಥಾಪನೆಗೊಂಡು ತನ್ನ ಕರ್ತವ್ಯದ ಕಾರ್ಯಕ್ಷೇತ್ರವನ್ನು ನಾಡಿನ ತುಂಬ ಪ್ರಸಾರ ಮಾಡುವ ಕಾಯಕದಲ್ಲಿ ಪ್ರಯತ್ನಿಸುತ್ತಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ. ಈ ದೊಡ್ಡ ಸಮುದಾಯಕ್ಕೆ ದಿವ್ಯ ಇತಿಹಾಸವಿದೆ. ಸಾಹಿತ್ಯವಿದೆ. ತನ್ನದೇ ಆದ ಸಂಪ್ರದಾಯ, ಆಚಾರ, ವಿಚಾರ, ಧಾರ್ಮಿಕ ಕಟ್ಟಳೆಗಳನ್ನು ಉಳಿಸಿಕೊಂಡು ಬಂದಿದೆ. ನಾಡು ಅಷ್ಟೇ ಅಲ್ಲ, ದೇಶದ ತುಂಬ ಪಸರಿಸಿಕೊಂಡು ಆಯಾ ಭಾಷೆಗಳಲ್ಲಿ ಸಮೀಕರಿಸಿಕೊಂಡು ಸುಸಂಪನ್ನತೆಯನ್ನು ಉಳಿಸಿಕೊಂಡು ಬಂದ ಈ ಸಮಾಜದ ಬಗ್ಗೆ ನಮಗೆಲ್ಲ ಅಭಿಮಾನ ಮತ್ತು ಗೌರವವಿರಬೇಕು. ಹಿಂದೂ ಧರ್ಮವನ್ನು ಸಂಸ್ಕೃತಿಯನ್ನು ದಕ್ಷಿಣ ಭಾರತದಲ್ಲಿ ಉಳಿಸಿ ಬೆಳೆಸಿಕೊಂಡು ಬಂದ ಕೀರ್ತಿ ಕುರುಬ ಸಮಾಜಕ್ಕೆ ಸಲ್ಲುತ್ತದೆ. ಏಕೆಂದರೆ ೧೪ನೆಯ ಶತಮಾನದಲ್ಲಿ ಹಂಪೆಯನ್ನು ತನ್ನ ಕಾರ್ಯಕ್ಷೇತ್ರವನ್ನು ಮಾಡಿಕೊಂಡು ತಲೆಯೆತ್ತಿ ನಿಂದ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಸಂಗಮವಂಶದ ಹಕ್ಕ, ಬುಕ್ಕ, ಮಾರಪ್ಪ, ಮುದ್ದಪ್ಪ ಸಹೋದರರು. ಇಂಥ ಐತಿಹಾಸಿಕ ಕೇಂದ್ರದಲ್ಲಿಯೇ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿತಗೊಂಡಿರುವುದು, ಹಾಲುಮತ ಅಧ್ಯಯನ ಪೀಠ ಆರಂಭವಾಗಿರುವುದು ಔಚಿತ್ಯಪೂರ್ಣವೆಂದೇ ಹೇಳಬೇಕು.

ಈ ಸಂದರ್ಭದಲ್ಲಿ ಕುರುಬ ಸಮುದಾಯದ ವ್ಯಾಪ್ತಿಯ ಬಗೆಗೆ ಹೇಳಿಕೊಂಡರೆ ತಪ್ಪೇನಿಲ್ಲ. ಅಲ್ಲಲ್ಲಿ ಚದುರಿ ಹೋಗಿರುವ ನಮ್ಮವರ ಬಗೆಗೆ ನಮಗೆ ತಿಳುವಳಿಕೆ ಇರುವುದು ಅವಶ್ಯವಿದೆ. ರಸ್ಲೆ, ಹಟ್ಟನ್ ಮೊದಲಾದ ವಿದ್ವಾಂಸರು ಭಾರತದ ಬೇರೆ ಬೇರೆ ಪ್ರಾಂತಗಳಲ್ಲಿರುವ ಕುರುಬರನ್ನು ಭಾರತೀಯ ಆರ್ಯ ಹಾಗೂ ಆಗ್ನೇಯ ಏಷಿಯಾ ಮೂಲದವರೆಂದು ಎರಡು ವಿಧವಾಗಿ ವಿಂಗಡಿಸುತ್ತಾರೆ. ಅವರಿಬ್ಬರ ವಿಚಾರಗಳ ಪ್ರಕಾರ ಮೊದಲ ವರ್ಗದ ಕುರುಬರು ದಕ್ಷಿಣದಲ್ಲಿ ನೆಲೆಸಿದರೂ ಅವರ ಮೂಲ ಉದ್ದೇಶ ಪಶುಪಾಲನೆ, ಆರ್ಥಿಕ ಸ್ಥಿತಿಗತಿ, ದೇಹರಚನೆ ಭಾರತೀಯರನ್ನೇ ಹೋಲುತ್ತವೆ ಎಂದಿದ್ದಾರೆ. ಅಂಥ ಸಂಸ್ಕೃತಿಯನ್ನು ರೂಢಿಸಿಕೊಂಡು ಈ ಸಮುದಾಯ ಭಾರತ ದೇಶದ ಸಮಸ್ತ ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಅವುಗಳ ವಿವರಗಳು ಹೀಗಿವೆ:

ಕರ್ನಾಟಕ ಕುರುಬ, ಹಾಲುಮತ, ರಾಜಗೊಂಡ
ಆಂಧ್ರಪ್ರದೇಶ ಗೊಲ್ಲವಾಡು, ಕುರುಮವಾರು, ಕುರುವನ್
ಅಸ್ಸಾಂ ಗೊಂಡ, ಧನವಾಡ
ಗುಜರಾತ ಗಡಾರಿ, ಧನಗರ್
ಬಿಹಾರ್ ಗಡೇರಿಯಾ, ಧನಗರ್
ಹರಿಯಾಣ ಬಘೇಲರು, ಬಿಲ್ತಾ, ಹರನ್ವಾಲ್, ಕನಾಲಿಯಾ, ಪೊಡ್ನುವಾಲ್
ಹಿಮಾಚಲಪ್ರದೇಶ ಗಡೇರಿಯಾ
ಜಮ್ಮು ಕಾಶ್ಮೀರ ಗಡೇರಿಯಾ
ಕೇರಳ ರಾಜಗೊಂಡ, ಗೋದಾರಿ, ಹೆಗ್ಡೆ, ಮಧ್ಯಗೊಂಡ, ಗೊಂಡಿ
ಮಧ್ಯಪ್ರದೇಶ ಧನಗರ್, ಬಾಂಗ್ಲಾ, ಗಾಂಡ್ರಿ, ಹಟಗಾರ, ಪಾಲ್, ಕುರಿಯರ್
ಮಹಾರಾಷ್ಟ್ರ ಧನಗರ್, ಕುರುಬರ್, ಗಡಾರಿಯಾ
ಮೇಘಾಲಯ ಕುಮಾರ್, ರುದ್ರಪಾಲ್, ಗೊಂಡ
ಓಡಿಸ್ಸಾ ಕುರುವನ್, ಕುರುಂಬ, ಮಧ್ಯಗೊಂಡ
ಪಂಜಾಬ ಗಡಾರಿಯ, ಗದಾರಿಯ
ರಾಜಸ್ಥಾನ ಗಡಾರಿಯಾ, ಚಾಂಡಾಲಿಯ, ಗಾವಳ, ಕಬೀರಿಯ, ಕುಮರ್
ತಮಿಳುನಾಡು ಕುರುಂಬನ್, ಗೊಂಡ ಹೆಗ್ಡೆ
ತ್ರಿಪುರಾ ಗೊಂಡ, ಕುರಾರಿಯರ್
ಉತ್ತರಪ್ರದೇಶ ಗಡ್ಡಿ, ಗಡಾರಿಯಾ, ಪಾಲ್
ಪಶ್ಚಿಮ ಬಂಗಾಳ ಗೊಂಡ, ಗುಡೇರಿಯಾ, ಪಾಲ್
ಚಂಧೀಗಡ ಗಡಾಡಿ, ಗಡ್ಡಿ
ದೆಹಲಿ ಗಡ್ಡಿ, ಗಾರಿ, ಕುಮಾರ್
ಗೋವಾ, ದಮನ್ ದನಗರ್
ಪಾಂಡಿಚೇರಿ ಕುರುವ, ರಾಜಗೊಂಡ

ಅಲ್ಲದೇ ಛೋಟಾನಾಗ್ಪುರ, ಶೋಣೀನದಿ ತೀರದಲ್ಲಿ ಹಾಗೂ ರಾಜಮಹಲ್ ಗುಡ್ಡದಲ್ಲಿ ಕುರು ಎಂಬ ಹೆಸರಿದೆ. ಮಣಿಪುರ, ನಾಗಲ್ಯಾಂಡ, ಸಿಕ್ಕಿಂ, ಅಂಡಮಾನ್, ದಾದರ, ನಗರವೇಲಿ, ಲಕ್ಷದ್ವೀಪ, ಮಿಜೋರಾಂಗಳಲ್ಲೂ ಕೂಡಾ ಇದ್ದುದರಿಂದ ಇವರು ಭಾರತದ ಮೂಲ ನಿವಾಸಿಗಳು ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಇಷ್ಟು ವಿಸ್ತೃತವಾಗಿ ಹರಡಿಕೊಂಡಿರುವ ಈ ಜನಾಂಗ ಮಾನವ ಬದುಕಿನ ವಿಕಾಸ ಕಾಲದಿಂದಲೂ ಬದುಕು ಸಾಗಿಸಿದ ದೊಡ್ಡ ಸಮುದಾಯ ಇದಾಗಿದೆ.

ಕುರುಬ ಈ ಹೆಸರಿನ ನಿಷ್ಪತ್ತಿ ಉದ್ಯೋಗವಾಚಕಕ್ಕಿಂತಲೂ ಬೇರೆಯಾಗಿಯೇ ಬಳಕೆಯಾದುದು ತಿಳಿದುಬರುತ್ತದೆ. ಕು ಎಂದರೆ ಬೆಟ್ಟ, ಎತ್ತರ ಪ್ರದೇಶ ಎಂದು ತಮಿಳು, ತೆಲುಗು, ಕನ್ನಡ ದ್ರಾವಿಡ ಭಾಷೆಗಳಲ್ಲಿ ಬಳಕೆಯಲ್ಲಿದೆ. ಈ ಜನ ತನ್ನ ಕುರಿ ಹಿಂಡುಗಳನ್ನು ಮೇಯಿಸಲು ಹುಲ್ಲುಗಾವಲಿಗಾಗಿಯೋ ಅಥವಾ ಮಳೆ ಗಾಳಿಗಳಿಂದ ತಪ್ಪಿಸಿಕೊಳ್ಳಲು ಗುಡ್ಡ ಬೆಟ್ಟಗಳಲ್ಲಿ ವಾಸವಾಗಹತ್ತಿದರು. ಅದಕ್ಕಾಗಿ ಈ ಪಂಗಡಕ್ಕೆ ಆ ಹೆಸರು ಬಂದಿರಬೇಕು. ಆದರೆ ಇಲ್ಲಿ ಒಂದು ವಿಚಾರ ತಿಳಿದು ಬರುವುದೇನೆಂದರೆ, ಕುರುಬರು ಆ ಪ್ರಾಣಿಗಳ ಪೋಷಕರೇ ವಿನಹ ಅವುಗಳನ್ನು ಕೊಂದು ತಿಂದು ಬದುಕಿದವರಲ್ಲ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಕಾವ್ಯ ಪುರಾಣ ಕಥೆ ಹಾಗೂ ಇತರೆ ದಾಖಲೆಗಳಲ್ಲಿಯೂ ಕುರುಬರ ಆಹಾರ ಮಾಂಸಹಾರಿಗಳೆಂದು ಹೇಳಿಲ್ಲ. ಗೋರಕ್ಷಕ ಆರ್ಯರು ಗೋಸಂರಕ್ಷಣೆಗೆ ಪ್ರಾಧಾನ್ಯತೆ ಕೊಟ್ಟಂತೆ ಕುರುಬರು ಕುರಿಯನ್ನು ಲಕ್ಷ್ಮಿಯೆಂದು ತಿಳಿದುಕೊಂಡಿರುವರು. ಹಾಲು ಶುಭ್ರತೆಯ ಸಂಕೇತ, ಕುರಿ ಮುಗ್ಧತೆಯ ಸಂಕೇತ ಹಾಗೂ ಹಾಲು ಮಾರಿ ಜೀವನ ಸಾಗಿಸುವ ವೃತ್ತಿಯಾಗಿದ್ದರಿಂದ ಹಾಲುಮತ ಎಂಬ ಅಭಿದಾನ ಇವರಿಗೆ ಬಂದಿರಲಿಕ್ಕೆ ಸಾಕು. ಹಾಲು ಕೆಟ್ಟರೂ ಕೆಟಬಹುದು, ಆದರೆ ಹಾಲುಮತ ಕೆಟ್ಟಿಲ್ಲ ಎನ್ನುವ ಮಾತು ಜನಜನಿತವಾಗಿದೆ. ಆ ಸಂಸ್ಕಾರ ಬಲವಿದ್ದುದರಿಂದ ವ್ಯಾಪಾರ, ಉದ್ಯೊಗ, ಉದ್ಯಮಗಳನ್ನು ಆರಂಭ ಮಾಡುವಾಗ ಕುರುಬರಿಂದಲೇ ಬೋಣಿಗೆ ಮಾಡಿಸುವ ಪರಂಪರೆ ಇಂದಿಗೂ ಚಾಲ್ತಿಯಲ್ಲಿರುವುದನ್ನು ಪ್ರಸ್ತುತ ಸಮಾಜದಲ್ಲಿಯೂ ಕಾಣುತ್ತೇವೆ. ಸೂಫಿ ಸಂತ ಶರಣರ ಹೆಸರಿನಲ್ಲಿ ಇತರ ಸಮುದಾಯದವರು ಮಠ-ಮಂದಿರಗಳನ್ನು ನಿರ್ಮಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಭದ್ರಪಡಿಸಿದಂತೆ ಕುರುಬರು ಸಹ ಸಮಾಜದ ನೀತಿ-ನಿಯಮ ಸಂಸ್ಕೃತಿ ರಕ್ಷಣೆಗಾಗಿ ಗುರುಸ್ವಾಮಿಗಳನ್ನು ನಿಯಮಿಸಿದ್ದನ್ನು ಕಾಣುತ್ತೇವೆ. ಕುರುಬರ ಗುರುಪರಂಪರೆ ವಿಶಿಷ್ಟವಾದುದು. ಈ ಗುರುಸ್ವಾಮಿಗಳಿಗೆ ಒಡೆಯರು, ಅಯ್ನೋರು, ಸ್ವಾಮಿಗಳು ಎಂದು ಇತ್ಯಾದಿಯಾಗಿ ಕರೆಯುತ್ತಾರೆ. ಇಂಥ ವ್ಯವಸ್ಥೆಯನ್ನು ಮಾಡಿಕೊಂಡು ಭೇದ-ಭಾವವಿಲ್ಲದೇ ನಡೆದು ಬಂದ ಸಮಾಜ ಇದಾಗಿದೆ.

ಇಂದು ಮತ್ತು ನಾಳೆ ನಡೆಯುವ ಸಮ್ಮೇಳನದಲ್ಲಿ ಕುರುಬರ ಉಪಪಂಗಡಗಳ ಕುರಿತು ಇಲ್ಲಿ ಚರ್ಚೆ-ಸಂವಾದಗಳು ನಡೆಯುತ್ತಿರುವುದು ಅತ್ಯಂತ ಸ್ತುತ್ಯಾರ್ಹವಾದ ಕೆಲಸ. ಕುರುಬರ ಒಳಪಂಗಡಗಳೆಷ್ಟು? ಅವುಗಳ ವಿಶಿಷ್ಟತೆಗಳೇನು? ಎಂಬುದರ ಬಗೆಗೆ ನಮಗೆ ಸ್ಪಷ್ಟವಾದ ಮಾಹಿತಿಗಳಿಲ್ಲ. ಅಲ್ಲಲ್ಲಿ ಕೆಲವು ವಿದ್ವಾಂಸರು ಚರ್ಚೆ ಮಾಡಿದ್ದರೂ ಪೂರ್ಣಪ್ರಮಾಣದಲ್ಲಿ ಅಧ್ಯಯನ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಇಂಥ ವಿಚಾರಗೋಷ್ಠಿಗಳಿಗೆ ಐತಿಹಾಸಿಕ ಮಹತ್ವ ಬರುತ್ತದೆ. ಬದುಕಿನ ಅಗತ್ಯತೆಗೆ ಅನುಗುಣವಾಗಿ ಕುರುಬರಲ್ಲಿ ಕೆಲವು ಉಪಪಂಗಡಗಳು ಹುಟ್ಟಿರಲಿಕ್ಕೂ ಸಾಕು. ಇನ್ನು ಕೆಲವು ವೃತ್ತಿ ಆಧರಿಸಿ ಬಂದಂಥವುಗಳಾಗಿವೆ. ಜೇನುಕುರುಬರ, ಕಾಡುಕುರುಬ, ಸುಡುಗಾಡು ಸಿದ್ಧರಂಥ ಉಪಪಂಗಡಗಳು ಪರಿಸ್ಥಿತಿ ಪರಿಸರದಿಂದ ಹುಟ್ಟಿಕೊಂಡಂಥವುಗಳು. ಈ ಎಲ್ಲ ಸಮುದಾಯಕ್ಕೆ ಶಿಕ್ಷಣ, ಉದ್ಯೋಗವನ್ನು ಕೊಡಬೇಕು ಅಂದಾಗ ಮಾತ್ರ ಇವರ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಅಂಥ ಸಲಹೆ ಸೂಚನೆಗಳನ್ನು ವಿದ್ವಾಂಸರು ನೀಡಬೇಕು.

ಸಾಮಾನ್ಯವಾಗಿ ಕುರುಬರಲ್ಲಿ ಉಣ್ಣೆಕಂಕಣ ಮತ್ತು ಹತ್ತಿಕಂಕಣ ಕುರುಬರು ಎಂದು ಪ್ರಮುಖವಾಗಿ ಎರಡು ಪಂಗಡಗಳು ಇರುವುದನ್ನು ನಾವು ಕಾಣುತ್ತೇವೆ. ಈ ಪಂಗಡಗಳ ಕುರಿತು ಹಾಲುಮತ ಪುರಣಾಗಳು ಸ್ವಾರಸ್ಯಕರವಾದ ವಿಷಯಗಳನ್ನು ಹೇಳುತ್ತೇವೆ. ಈ ವಿಷಯಗಳು ಇಲ್ಲಿ ನೆರೆದಿರುವ ತಮಗೆಲ್ಲ ತಿಳಿದಿರುವ ಸಂಗತಿಗಳೆಂದೇ ಭಾವಿಸಿದ್ದೇನೆ. ಕುರುಬರ ಮೂಲ ಪುರುಷ ಮುದ್ದಪ್ಪ-ಮುದ್ದವ್ವ. ಇವರಿಗೆ ಆದಿಗೊಂಡ ಅನಂತಗೊಂಡ, ಸಿದ್ಧಗೊಂಡ ಪದ್ಮಗೊಂಡ ಎಂಬ ಮಕ್ಕಳಿದ್ದರು. ಇವರಲ್ಲಿ ಕೊನೆಯವನಾದ ಪದ್ಮಗೊಂಡ ಮನೆಗೆಲಸ ಮಾಡದೇ ಉಂಡಾಡಿಯಂತಿದ್ದನು. ಹೀಗಾಗಿ ಆತನಿಗೆ ಉಂಡಾಡಿ ಪದ್ಮಣ್ಣ ಎಂದೇ ಕರೆಯಲಾಗಿದೆ. ಒಂದು ದಿನ ಹೊಲದಲ್ಲಿ ಕುರಿ ಕಾಯಕದಲ್ಲಿ ನಿರತನಾಗಿದ್ದನು. ಕಾಡಿನ ಸಂಚಾರಿಯಾಗಿರುವಾಗ ಯೋಗಯೋಗದಿಂದ ಜಿಂಕಾದೇವಿ ಎಂಬ ಯುವತಿಯೊಂದಿಗೆ ಮದುವೆಯಾದನ. ಶಿವಪಾರ್ವತಿಯರ ಸಮ್ಮುಖದಲ್ಲಿಯೇ ಈ ಮದುವೆ ನಡೆಯುವಾಗ ಕೈಗೆ ಕಂಕಣ ಕಟ್ಟಲು ಕುರಿಯ ಮೇಲಿನ ಉಣ್ಣೆಯನ್ನು ಬಳಸಿಕೊಂಡರು. ಅಂದಿನಿಂದ ಉಣ್ಣೆಯ ಕಂಕಣದವರೆಂದೂ, ಮೊದಲಿನ ಹೆಂಡತಿಯಿಂದ ಜನಿಸಿದ ಮಕ್ಕಳು ಹತ್ತಿ ಕಂಕಣದವರೆಂದು ಕರೆಯಲಾಯಿತು. ಅಂದಿನಿಂದ ಕುರುಬರಲ್ಲಿ ಈ ಎರಡು ಪಂಗಡಗಳು ಹುಟ್ಟಿಕೊಂಡು ಬಂದವು.

ಇನ್ನು ಉಳಿದ ಜನಾಂಗದವರು ತಮ್ಮ ಮೂಲಗಳನ್ನು ಗೋತ್ರ ಬಗೆ ಪಂಗಡಗಳ ಮೂಲಕ ವಿಂಗಡಿಸಿ ಹೇಳಿಕೊಳ್ಳುವಂತೆ ಕುರುಬರು ಅನೇಕ ಬೆಡಗುಗಳನ್ನು ಅನುಸರಿಸುತ್ತ ಬಂದಿದ್ದಾರೆ. ಅಂದಾಜು ೫೨೫ ಬೆಡಗುಗಳನ್ನು ರೂಪಿಸಿಕೊಂಡು ನಡೆಯುತ್ತಿರುವುದು ರೂಢಿಯಲ್ಲಿದೆ. ಈ ರೀತಿಯ ಕಟ್ಟಳೆಯನ್ನು ಅನುಸರಿಸುವುದು ಸೂಕ್ತ.

ಇಂದಿನ ಆಧುನಿಕ ಯುಗದಲ್ಲಿ ಸಮಾಜದ ರೀತಿನೀತಿಗಳಲ್ಲಿ ಬಹಳಷ್ಟು ಮಾರ್ಪಾಟಾಗಿವೆ. ವಿಶ್ವವೇ ಸಮೀಪದ ಮನೆಯಂಗಳವಾಗಿದೆ. ಬದಲಾವಣೆ ಸಹಜ ಕ್ರಿಯೆಯಾಗಿದೆ. ಅದನ್ನು ತಡೆಯುವುದು ಅಸಾಧ್ಯವಾಗಿದೆ. ಆದ್ದರಿಂದ ಕುರುಬ ಸಮಾಜವು ಅಂಥ ಬದಲಾವಣೆಗಳಿಗೆ ಸ್ಪಂಧಿಸುವುದು ಅನಿವಾರ್ಯವಾಗಿದೆ.

ಈ ಸಮಾಜದಲ್ಲಿ ಅನೇಕ ಸಾಧಕರು ಪುಣ್ಯಪುರುಷರು, ಸಮಾಜ ಧುರೀಣರು, ಹೋರಾಟಗಾರರು, ಸಂಘಟಕರು, ರಾಜಕೀಯ ಪ್ರತಿನಿಧಿಗಳು ಆಧುನಿಕ ಕರ್ನಾಟಕದ ಸಂದರ್ಭದಲ್ಲಿ ಆಗಿಹೋಗಿದ್ದಾರೆ. ಅಂಥವರಲ್ಲಿ ಕೋಲಾರದ ಗಟ್ಟಿಹಳ್ಳಿ ಅಂಜನಪ್ಪ ಸ್ವಾಮಿಗಳು, ಮುಗುಳಖೋಡದ ಯಲ್ಲಾಲಿಂಗ ಮಹಾರಾಜರು, ಇಟಗಿ ಭೀಮಾಂಬಿಕೆ, ಕಣಗಿನಹಾಳದ ಸಿದ್ಧನಗೌಡ ಪಾಟೀಲ, ಹೊಸಪೇಟೆಯ ಡಾ. ಆರ್. ನಾಗನಗೌಡ, ಕೊಲ್ಲೂರು ಮಲ್ಲಪ್ಪ, ಕೂರಗುಂದ ನಿಂಗಪ್ಪ, ಕರಿಯಪ್ಪ ಸಂಗೂರ, ಕರಿಯಪ್ಪ ಹುಚ್ಚಣ್ಣವರ ಮೊದಲಾದವರನ್ನು ಇಲ್ಲಿ ಸೇರಿಸಬಹುದು. ಅಂಥ ಮಹನೀಯರ ಜೀವನ ಸಾಧನೆಗಳನ್ನು ಪರಿಚಯಿಸುವ ಕಿರುಹೊತ್ತಿಗೆಗಳನ್ನು ಪ್ರಕಟಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಈಗಲಾದರೂ ಆರಂಭಿಸಬೇಕಾಗಿದೆ. ಅಂಥ ಕೆಲಸವನ್ನು ಹಾಲುಮತ ಅಧ್ಯಯನ ಪೀಠ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.

ಹಾಲುಮತ ಸಾಹಿತ್ಯ ಸಂಸ್ಕೃತಿ ಚರಿತ್ರೆ ಕುರಿತು ಇಲ್ಲಿಯವರೆಗೆ ನಡೆದ ಅಧ್ಯಯನಗಳನ್ನು ಅವಲೋಕಿಸಿದಾಗ ಮಾಡಬೇಕಾದ ಕಾರ್ಯ ಸಾಕಷ್ಟಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ವಿ.ಆರ್. ಹನುಮಂತಯ್ಯ ಅವರು ಭಾರತ ಕುರುಬರ ಚರಿತ್ರೆ, ಶಂಬಾ ಜೋಶಿ ಅವರ ಹಾಲುಮತ ದರ್ಶನ, ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಶಿವಾನಂದ ಗುಬ್ಬಣ್ಣವರ ಕರ್ನಾಟಕದ ಕುರುಬರು ಮೊದಲಾದ ಗ್ರಂಥಗಳು ಕರುಬರ ಸಮಗ್ರ ಚರಿತ್ರೆಯನ್ನು ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿವೆ. ಆದರೂ ಈ ಕ್ಷೇತ್ರದಲ್ಲಿ ಮಾಡಬೇಕಾದ ಸಂಶೋಧನೆ ಸಾಕಷ್ಟಿದೆ. ಇಂಗ್ಲಿಷಿನಲ್ಲಿ ಈ ಬಗ್ಗೆ ಅಧ್ಯಯನಗಳು ನಡೆದಿವೆ ಎಂಬುದನ್ನು ಕೇಳಿದ್ದೇನೆ. ಆ ಎಲ್ಲ ಗ್ರಂಥಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕು, ಜಾನಪದದಲ್ಲಿರುವ ಡೊಳ್ಳಿನ ಹಾಡುಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದಾಗ ಕುರುಬರಿಗೆ ಸಂಬಂಧಿಸಿದ ಅನೇಕ ಹೊಸ ವಿಷಯಗಳು ತಿಳಿದು ಬರಬಹುದು. ಕರ್ನಾಟಕದಾದ್ಯಂತ ಕುರುಬರ ಸಂಸ್ಕೃತಿಯನ್ನು ಬಿಂಬಿಸುವ ಮಠ-ಮಂದಿರಗಳಿವೆ. ಆ ಮಠ-ಮಂದಿರಗಳ ಸಾಂಸ್ಕೃತಿಕ ಚರಿತ್ರೆಯನ್ನು ರಚಿಸುವುದು, ದೇವಣಸಿದ್ದೇಶ್ವರ, ಸಿದ್ಧರಾಮೇಶ್ವರ, ಅಮೋಘಸಿದ್ದೇಶ್ವರ, ಶಾಂತಮುತ್ತಯ್ಯ, ಬೀರಪ್ಪ, ಮೈಲಾರ, ಓರಗಲ್ಲಮ್ಮ, ಮರುಳಸಿದ್ದೇಶ್ವರ ಮೊದಲಾದವರ ಕುರಿತು ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಜನರಿಗೆ ತಲುಪಿಸುವ ಕೆಲಸವಾಗಬೇಕು. ಕುರುಬರ ಸಂಸ್ಕೃತಿಯನ್ನು ಪರಿಚಯಿಸುವಂಥ ತರಬೇತಿ ಶಿಬಿರಗಳನ್ನು ನಾಡಿನ ತುಂಬ ಆಯೋಜಿಸಬೇಕು. ಮೌಖಿಕ ಪರಂಪರೆಯಲ್ಲಿರುವ ಕಾವ್ಯಪುರಾಣ, ಕಥೆ ಹಾಡು, ಗಾದೆಮಾತುಗಳು, ನಂಬಿಕೆ ಇತ್ಯಾದಿಗಳನ್ನು ದೃಶ್ಯ ಮತ್ತು ಶೃವ್ಯ ಮಾಧ್ಯಮದ ಮೂಲಕ ಸಂಗ್ರಹಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವೂ ಆಗಬೇಕಾಗಿದೆ. ಇವು ನನಗೆ ತಿಳಿದ ಕೆಲವು ವಿಷಯಗಳು. ಇಲ್ಲಿ ಸಮಾವೇಶಗೊಂಡಿರುವ ವಿದ್ವಾಂಸರು, ಚಿಂತಕರು ಅನೇಕ ಉಪಯುಕ್ತವಾದ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ಕೊನೆಯದಾಗಿ ಒಂದು ಮಾತು, ಕುರುಬರ ಸಂಸ್ಕೃತಿಯ ಶೋಧ ಹಾಗೂ ಪ್ರಸಾರಕ್ಕಾಗಿ ಈಗಲಾದರೂ ಅಧ್ಯಯನ ಪೀಠವು ಆರಂಭಗೊಂಡಿರುವುದು ಸಂತಸದ ವಿಷಯ. ಆ ಪೀಠಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೂಢೀಕರಿಸುವಲ್ಲಿ ಸಮಾಜದ ದಾನಿಗಳು ನೆರವಾಗಬೇಕು. ಅಂದಾಗ ಮಾತ್ರ ಪೀಠವು ಅನೇಕ ರಚನಾತ್ಮಕ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಇಂಥ ಕೆಲವು ಯೋಜನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠ ಹಾಗೂ ಚಳ್ಳಕೇರಿಯ ಶ್ರೀ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎಲ್ಲ ಪದಾಧಿಕಾರಿಗಳಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ನಮಸ್ಕಾರ.