ಹಾಲುಮತ ಸಂಸ್ಕೃತಿ ಸಮ್ಮೇಳನದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ನೆಚ್ಚಿನ ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರೇ, ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಚೇತನ ಶ್ರೀ ಬ.ಪ. ನಾಯ್ಕರ ಅವರೇ, ಹಾಲುಮತ ವ್ಯಾಸಂಗ ಸಂಪುಟವನ್ನು ಲೋಕಾರ್ಪಣೆ ಮಾಡಲು ಆಗಮಿಸಿರುವ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ. ಎಂ. ನಾಗರಾಜ ಅವರೇ, ಸಮ್ಮೇಳನವನ್ನು ಉದ್ಘಾಟನೆ ಮಾಡಲು ಆಗಮಿಸಿರುವ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಎಸ್.ಎಸ್. ಪೂಜಾರ ಅವರೇ, ಸಮ್ಮೇಳನದ ಸ್ಥಳೀಯ ಸಂಚಾಲಕರಾದ ಪ್ರೊ. ಎಮ್. ಶಿವಲಿಂಗಪ್ಪನವರೇ, ಶ್ರೀ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿಯವರೇ, ವೇದಿಕೆ ಮೇಲೆ ಉಪಸ್ಥಿತರಿರುವ ಗಣ್ಯ ಮಾನ್ಯರೇ, ಇಲ್ಲಿ ಸಮಾವೇಶಗೊಂಡಿರುವ ವಿದ್ವಾಂಸರೇ, ಪತ್ರಿಕಾ ಪ್ರತಿನಿಧಿಗಳೇ ಹಾಗೂ ಸಭಿಕರೇ- ಎಲ್ಲರಿಗೂ ನನ್ನ ನಮಸ್ಕಾರಗಳು.

ಹಾಲುಮತ ಸಂಸ್ಕೃತಿಯ ಸಮಗ್ರ ಅಧ್ಯಯನಕ್ಕಾಗಿ ಸ್ಥಾಪನೆಗೊಂಡಿರುವ ಹಾಲುಮತ ಅಧ್ಯಯನ ಪೀಠವು ಪ್ರಾರಂಭವಾಗಿ ಎರಡು ವರ್ಷವಾಗುತ್ತಲಿದೆ. ಈ ಅವಧಿಯಲ್ಲಿ ಪೀಠವು ಅನೇಕ ರಚನಾತ್ಮಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಹಾಲುಮತ ಸಂಸ್ಕೃತಿ ಸಮ್ಮೇಳನ, ಡೊಳ್ಳಿನ ಹಾಡುಗಳ ತರಬೇತಿ ಶಿಬಿರ, ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಗ್ರಂಥ ಪ್ರಕಟಣೆ, ಹಾಲುಮತ ಭವನ ಕಟ್ಟಡ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಕಾಲಬದ್ಧವಾಗಿ ಹಾಕಿಕೊಂಡು ಮುಕ್ತಾಯಗೊಳಿಸಿದೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ೩, ೪ ಮಾರ್ಚ್‌೨೦೦೮ರಲ್ಲಿ ಗದುಗಿನ ಶ್ರೀ ಕನಕ ಭವನದಲ್ಲಿ ಮೊದಲನೆಯ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಹಿರಿಯ ಜಾನಪದ ವಿದ್ವಾಂಸರಾದ ಪ್ರೊ. ಜ್ಯೋತಿ ಹೊಸೂರ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಈ ಸಮ್ಮೇಳನದಲ್ಲಿ ಹಾಲುಮತ ಆಕರಗಳು, ದೈವಗಳು, ಸಾಂಸ್ಕೃತಿಕ ವೀರರು ಹಾಗೂ ಸಾಧಕರು ಎಂಬ ನಾಲ್ಕು ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಚರ್ಚೆ ಸಂವಾದಗಳಲ್ಲಿ ಅನೇಕ ವಿದ್ವಾಂಸರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಹಾಗೆಯೇ ೨೦೦೮, ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೧ರ ವರೆಗೆ ನಾಲ್ಕು ದಿನಗಳ ಕಾಲ ಅಥಣಿ ತಾಲ್ಲೂಕು ಮುರಗುಂಡಿಯ ಶ್ರೀ ಮುರಸಿದ್ಧೇಶ್ವರ ದೇವಸ್ಥಾನ ಟ್ರಸ್ಟ್ ಸಹಯೋಗದಲ್ಲಿ ಡೊಳ್ಳಿನ ಹಾಡುಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ೬೦ ಡೊಳ್ಳಿನ ತಂಡಗಳು ಭಾಗವಹಿಸಿದ್ದವು. ಅಂದಾಜು ೨೦೦ ಡೊಳ್ಳಿನ ಕಲಾವಿದರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಕೊಪ್ಪಳ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಕೆ.ವಿರೂಪಾಕ್ಷಪ್ಪನವರ ಅನುದಾನದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಲುಮತ ಭವನ ನಿರ್ಮಾಣಗೊಂಡಿದೆ. ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದ ಗ್ರಂಥಾಲಯ, ವಸ್ತುಸಂಗ್ರಹಾಲಯ, ಆಡಿಯೋ-ವಿಡಿಯೋ ವ್ಯವಸ್ಥೆ, ಸಭಾ ಭವನ, ಕಂಪ್ಯೂಟರ್ ವಿಭಾಗವನ್ನು ಈ ಭವನ ಒಳಗೊಂಡಿದೆ.

ಹಾಲುಮತ ಅಧ್ಯಯನದ ಕಾರ್ಯಯೋಜನೆಗಳನ್ನು ರೂಪಿಸಿ ಕರ್ನಾಟಕ ಸರ್ಕಾರಕ್ಕೆ ೨೦೦೮ ರಲ್ಲಿ ಅನುದಾನ ಕೋರಿ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೆವು. ನಮ್ಮ ಪ್ರಸ್ತಾವನೆಯನ್ನು ಪರಿಶೀಲಿಸಿದ ಕರ್ನಾಟಕ ಸರ್ಕಾರವು ಪೀಠದ ಕಾರ್ಯಯೋಜನೆಗಳಿಗೆ ೨೦೦೮-೦೯ರ ಸಾಲಿನಲ್ಲಿ ರೂ.೨೦ ಲಕ್ಷಗಳ ಅನುದಾನವನ್ನು ಮಂಜೂರು ಮಾಡಿ, ಅದರಲ್ಲಿ ಮೊದಲ ಕಂತಾಗಿ ೫ ಲಕ್ಷಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸರ್ಕಾರದ ನಿರ್ದೇಶನದಂತೆ ೫ ಲಕ್ಷ ರೂ. ಗಳನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಡಲಾಗಿದೆ. ಇನ್ನೂ ೧೫ ಲಕ್ಷಗಳ ಅನುದಾನ ಇಷ್ಟರಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ನಮ್ಮದಾಗಿದೆ.

ಪೀಠದ ಯೋಜನೆ, ಸಿಬ್ಬಂದಿ ವೇತನ ಹಾಗೂ ಪ್ರಕಟನೆಗಾಗಿ ವರ್ಷಕ್ಕೆ ಅಂದಾಜು ೧೦ ಲಕ್ಷ ರೂ.ಗಳ ಅವಶ್ಯಕತೆ ಇದೆ. ಇದಕ್ಕಾಗಿ ಮತ್ತೆ ಒಂದು ಕೋಟಿ ರೂ.ಗಳ ಪ್ರಸ್ತಾವನೆಯೊಂದನ್ನು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಲಾಗಿದೆ.

ಹಾಲುಮತ ಅಧ್ಯಯನ ಪೀಠದ ಯೋಜನೆಗಳು

ಈ ವರ್ಷ ದಾನಿಗಳ ನೆರವಿನಿಂದ ಪುಸ್ತಕ ಪ್ರಕಟಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಬೀರಪ್ಪ, ಮಾಳಪ್ಪ, ಗೊಲ್ಲಾಳೇಶ್ವರ, ಅಮೋಘಸಿದ್ದೇಶ್ವರ, ಇಟ್ಟಪ್ಪ ಹಾಗೂ ಕುರುಬರ ಹೇಳಿಕೆಗಳು ಹೆಸರಿನ ಪುಸ್ತಕಗಳನ್ನು ಸಿದ್ಧಪಡಿಸಿಕೊಡಲು ವಿದ್ವಾಂಸರಿಗೆ ಕೇಳಿಕೊಳ್ಳಲಾಗಿದೆ.

೨೦೦೯-೧೦ರ ಶೈಕ್ಷಣಿಕ ವರ್ಷದಲ್ಲಿ ಪೀಠವು ಎರಡು ವಿಶೇಷವಾದ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ತೀರ್ಮಾನಿಸಿದೆ. ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಕುರುಬರ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಈ ಸಂಸ್ಕೃತಿ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಬರುವ ಜುಲೈ ತಿಂಗಳಲ್ಲಿ ನಡೆಸಲಾಗುವುದು. ಬೆಳಗಾವಿ ಜಿಲ್ಲೆಯ ಕುರುಬರ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗುವುದು. ಹಾಗೆಯೇ ಹಾಲುಮತ ಸಂಸ್ಕೃತಿ ಕುರಿತು ಅಧ್ಯಯನ ನಡೆಸಿದ ದೇಶಿಯ ಹಾಗೂ ಪ್ರಾಶ್ಚಾತ್ಯ ವಿದ್ವಾಂಸರ ಸಿಂಚನೆಗಳನ್ನು ಚರ್ಚಿಸುವ ಎರಡು ದಿನದ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ವ್ಹಿ.ಆರ್. ಹನುಮಂತಯ್ಯ, ಶಂಬಾ ಜೋಶಿ, ಎಂ.ಎಂ. ಕಲಬುರ್ಗಿ, ಎಂ. ಚಿದಾನಂದ ಮೂರ್ತಿ, ಶಿವಾನಂದ ಗುಬ್ಬಣ್ಣವರ, ಚಿಂತಾಮಣಿ ಢೇರೆ, ಶಶಿ ಶಾಮ್‌ಸಿಂಗ್, ಸೊಂಥೈಮರ್, ಥರ್ಸ್ಟನ್‌, ಎಂಥೋವನ್ ಮೊದಲಾದವರು ಈ ಸಮುದಾಯದ ಬಗ್ಗೆ ನಡೆಸಿದ ಅಧ್ಯಯನದ ಫಲಿತಗಳನ್ನು ಅವಲೋಕಿಸುವುದು ಈ ವಿಚಾರ ಸಂಕಿರಣದ ಮುಖ್ಯ ಉದ್ದೇಶವಾಗಿದೆ. ಈ ಎಲ್ಲ ಯೋಜನೆ-ಯೋಚನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಹಾಲುಮತ ಅಧ್ಯಯನ ಪೀಠದ ಸಲಹಾಸಮಿತಿ ಅಧ್ಯಕ್ಷರಾದ ಮಾನ್ಯ ಕುಲಪತಿ ಡಾ.ಎ. ಮುರಿಗೆಪ್ಪನವರಿಗೆ, ಕುಲಸಚಿವರಾದ ಎಸ್.ಎಸ್. ಪೂಜಾರ ಅವರಿಗೆ, ಸಲಹಾ ಸಮಿತಿ ಸದಸ್ಯರಾದ ಡಾ. ಶ್ರೀರಾಮ ಇಟ್ಟಣ್ಣವರ ಹಾಗೂ ಈರಪ್ಪ ಕಂಬಳಿ ಅವರಿಗೆ ವಂದನೆಗಳು.

ಹಾಲುಮತ ಸಂಸ್ಕೃತಿ ಸಮ್ಮೇಳನ ೨

ಹಾಲುಮತ ಅಧ್ಯಯನ ಪೀಠದ ಬಹುಮುಖ್ಯವಾದ ಯೋಜನೆ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸುವುದು. ಹಿರಿಯ ಸಾಹಿತಿಗಳಾದ ಬ.ಪ. ನಾಯ್ಕರ ಅವರ ಸರ್ವಾಧ್ಯಕ್ಷತೆಯಲ್ಲಿ ಇಂದು ಮತ್ತು ನಾಳೆ ನಡೆಯುವ ಈ ಸಮ್ಮೇಳನದಲ್ಲಿ ಕುರುಬರ ಉಪಪಂಗಡಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ನಮ್ಮ ತಿಳುವಳಿಕೆಗೆ ಬಂದಂತೆ ಸಧ್ಯಕ್ಕೆ ಕುರುಬರಲ್ಲಿ ೧೮ ಉಪಪಂಗಡಗಳನ್ನು ಗುರುತಿಸಲಾಗಿದೆ. ಈ ಒಳಪಂಗಡಗಳ ಪ್ರಾಚೀನತೆ, ಆಚಾರ-ವಿಚಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಗಳ ಕುರಿತು ಇಲ್ಲಿ ಚರ್ಚಿಸಲಾಗುವುದು.

ಸಮ್ಮೇಳನದ ಸರ್ವಾಧ್ಯಕ್ಷರಾದ ಬ.ಪ. ನಾಯ್ಕರ ಅವರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೂರು ದಶಕಗಳ ಕಾಲ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರು. ೮೦ ವರ್ಷಗಳ ಈ ತುಂಬು ವಯಸ್ಸಿನಲ್ಲಿಯೂ ಬರವಣಿಗೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಪಾಠ, ಪ್ರವಚನದ ಜೊತೆಗೆ ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆಗಳಂತಹ ಆಧುನಿಕ ಪ್ರಕಾರಗಳಲ್ಲಿ ಸಾಹಿತ್ಯಿಕ ಕೃಷಿಯನ್ನು ಮಾಡಿದವರು. ಚಂದ್ರೋದಯ, ಶಾಂತಿ ದೀಪ, ವಿಜಯಶ್ರೀ, ಜೀವನಗಂಗಾ, ಅಕ್ಷತಾ ಯೋಗ, ಸಕಲ ಗುಣಸಂಪನ್ನ, ಸೌಜನ್ಯ ಇತ್ಯಾದಿ ೩೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಎಲೆಮರೆಯ ಕಾಯಿಯಂತೆ, ಸದ್ದುಗದ್ದಲವಿಲ್ಲದೆ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ನಾಯ್ಕರ್ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿರುವುದು ನಮಗೆ ಸಂತಸವನ್ನುಂಟುಮಾಡಿದೆ. ಈ ಸಮ್ಮೇಳನದ ಪರವಾಗಿ ಮತ್ತೊಮ್ಮೆ ಅವರನ್ನು ನಾನು ಗೌರವಪೂರ್ವಕವಾಗಿ ಸ್ವಾಗತಿಸುತ್ತೇನೆ.

ಈ ಸಮ್ಮೇಳನ ಚಳ್ಳಕೆರೆಯಲ್ಲಿ ನಡೆಯುತ್ತಿರುವುದರಿಂದ ಚಿತ್ರದುರ್ಗ ಪರಿಸರದ ಕುರುಬರ ಸಂಸ್ಕೃತಿ ಎಂಬ ಒಂದು ಗೋಷ್ಠಿಯನ್ನು ಇಲ್ಲಿ ನಡೆಸಲಾಗುತ್ತಿದೆ. ಚಿತ್ರದುರ್ಗ ಪರಿಸರದ ಕುರುಬರ ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಜನಪದ ವಿಷಯಗಳನ್ನು ಒಂದೆಡೆ ಗುರುತಿಸಿ ಅವಲೋಕಿಸುವುದು ಈ ಗೋಷ್ಠಿಯ ವಿಶೇಷವಾಗಿದೆ. ಈ ಭಾಗದಲ್ಲಿ ಧಾರ್ಮಿಕವಾಗಿ ರೇವಣಸಿದ್ದೇಶ್ವರ, ಸಿದ್ಧರಾಮೇಶ್ವರ, ಬೀರಪ್ಪ, ಓರಗಲಮ್ಮರಂತಹ ಕುರುಬರ ಆರಾಧ್ಯ ದೈವಗಳ ಮಠ ಮಂದಿರಗಳು ಅಧಿಕ ಸಂಖ್ಯೆಯಲ್ಲಿವೆ. ಚಳ್ಳಕೆರೆ ಪರಿಸರದ ಹರ್ತಿಕೋಟೆ, ದೊಡ್ಡೇರಿ, ರಂಗವ್ವನಹಳ್ಳಿ, ಹಿರಿಯೂರು, ಕಣಜನಹಳ್ಳಿ, ಹುಲ್ಲೂರು ಹೀಗೆ ಅನೇಕ ಗ್ರಾಮಗಳಲ್ಲಿ ರೇವಣಸಿದ್ಧೇಶ್ವರ ಮಠಗಳಿರುವುದನ್ನು ನಾವು ನೋಡಬಹುದು. ಹಲ್ಲೂರಿನಲ್ಲಿರುವ ರೇವಣಸಿದ್ಧೇಶ್ವರ ಮೂರ್ತಿಯು ಈ ಭಾಗದಲ್ಲಿಯೇ ವಿಶೇಷವಾದುದು. ಪ್ರಸಿದ್ಧ ಚಿತ್ರ ಕಲಾವಿದರಾದ ಪಿ.ಆರ್. ತಿಪ್ಪೇಸ್ವಾಮಿಯವರು ಹರ್ತಿಕೋಟೆ ಗ್ರಾಮದವರು. ಕುರುಬರ ಗುರುಗಳಾದ ಮೇ.ಮೂ.ಶ್ರೀ ಚನ್ನಯ್ಯ ಒಡೆಯರ ಅವರು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರು. ಈ ಭಾಗದ ಅನೇಕ ಕುರುಬರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿರುವರು. ಜಾನಪದ ಕಥೆಗಾರ ಶ್ರೀ ಈರಬಡಪ್ಪ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು. ಇಂತಹ ಮಹನೀಯರ ಸಾಧನೆಗೆ ಕಾರ್ಯಕ್ಷೇತ್ರವಾದ ಈ ಪರಿಸರದಲ್ಲಿ ಸಮ್ಮೇಳನ ನಡೆಯುತ್ತಿದೆ.

ಎರಡನೆಯ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ಚಳ್ಳಕೆರೆಯಲ್ಲಿ ನಡೆಸುವಂತೆ ಕೋರಿ ನಾಲ್ಕು ತಿಂಗಳ ಹಿಂದೆ ಸ್ನೇಹಿತರಾದ ಪ್ರೊ. ಎಂ. ಶಿವಲಿಂಗಪ್ಪನವರಿಗೆ ಪತ್ರವನ್ನು ಬರೆದಿದ್ದೆ. ಆ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಚಳ್ಳಕೆರೆಯಲ್ಲಿ ಸಮ್ಮೇಳನವನ್ನು ನಡೆಸಲು ಒಪ್ಪಿಕೊಂಡರು. ಕಳೆದ ಒಂದು ತಿಂಗಳಿನಿಂದ ಈ ಸಮ್ಮೇಳನದ ಪೂರ್ವಸಿದ್ಧತೆಯಲ್ಲಿ ಕನಕ ನೌಕರ ಸಂಘದ ಗೌರವಾಧ್ಯಕ್ಷರು ಹಾಗೂ ಸ್ಥಳೀಯ ಸಂಚಾಲಕರಾದ ಪ್ರೊ. ಎಂ. ಶಿವಲಿಂಗಪ್ಪ, ಅಧ್ಯಕ್ಷರಾದ ಪಿ.ಕೃಷ್ಣಮೂರ್ತಿ ಮತ್ತು ಅವರ ಎಲ್ಲ ಪದಾಧಿಕಾರಿಗಳು ಶ್ರಮಿಸಿದ್ದಾರೆ. ಈ ಎಲ್ಲ ಮಹನೀಯರ ಸಹಕಾರವನ್ನು ಹಾಲುಮತ ಅಧ್ಯಯನ ಪೀಠವು ಸ್ಮರಿಸುತ್ತದೆ.

ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯ ಜನಪದ ಕಥೆಗಾರ ಈರಬಡಪ್ಪನವರು ಒಬ್ಬರು. ಇವರೊಂದಿಗೆ ಹಿರಿಯ ವೈದ್ಯರಾದ ಡಾ. ಆರ್. ಕಾಂತರಾಜು, ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರೊ. ಎಂ. ಶಿವಲಿಂಗಪ್ಪ ಹಾಗೂ ಯುವ ಪ್ರಶಸ್ತಿ ಪುರಸ್ಕೃತ ಪಿ. ಕುಮಾರ ಅವರನ್ನು ಈ ದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ.

ನಮ್ಮ ಆಹ್ವಾನವನ್ನು ಸ್ವೀಕರಿಸಿ ಸಮ್ಮೇಳನಕ್ಕೆ ಆಗಮಿಸಿದ ಎಲ್ಲ ವಿದ್ವಾಂಸರಿಗೆ, ಮಾಧ್ಯಮದ ಮಿತ್ರರಿಗೆ, ವಿಶೇಷ ಆಹ್ವಾನಿತರಿಗೆ ಹಾಗೂ ಇಲ್ಲಿ ಸಮಾವೇಶಗೊಂಡಿರುವ ಸಮಸ್ತರಿಗೆ ಮತ್ತೊಮ್ಮೆ ಸ್ವಾಗತವನ್ನು ಬಯಸಿ ನನ್ನ ಪ್ರಾಸ್ತಾವಿಕ ಮಾತುಗಳನ್ನು ಮುಗಿಸುತ್ತೇನೆ.