ಭಾರತದ ಪ್ರಮುಖ ಜನಸಮುದಾಯಗಳಲ್ಲಿ ಹಾಲುಮತ ಸಮುದಾಯವೂ ಒಂದು. ಚಾರಿತ್ರಿಕ ಮತ್ತು ಸಾಂಸ್ಕೃತಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದ ಇವರನ್ನು ಸಾಮಾನ್ಯವಾಗಿ ಕುರುಬರು ಎಂದು ಕರೆಯಲಾಗುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಇವರನ್ನು ದನಗಾರರು, ಪಾಲರು, ಗಡಾರಿಯಾ, ಚಂದೇಲರು, ಗೊಲ್ಲರು, ಕುರುಮನ್, ಕುರುಂಬರು, ಯಾದವರು, ಗಡೇರಿ, ರೇವಡಿ, ಬಘೇಲರು ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಮೂಲ ಬುಡಕಟ್ಟು ಸಂಸ್ಕೃತಿಯವರಾದ ಕುರುಬರು ಪ್ರಾಚೀನ ಕಾಲದಿಂದಲೂ ಪಶುಪಾಲನೆ, ಕುರಿ ಸಾಕಣೆ, ಕಂಬಳಿ ತಯಾರಿಕೆ ಹಾಗೂ ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಜಾಗತೀಕರಣ ಉದಾರೀಕರಣಗಳಂಥ ಇಂದಿನ ಸಂದರ್ಭಗಳಲ್ಲಿಯೂ ತಮ್ಮ ಸಂಸ್ಕೃತಿಯ ಮೂಲ ಸೊಗಡನ್ನು, ಪರಂಪರಾಗತ ಜೀವನ ಪದ್ಧತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದವರಲ್ಲಿ ಕುರುಬರು ಪ್ರಮುಖರೆನಿಸುತ್ತಾರೆ. ಇಂದಿಗೂ ನಡೆಯುವ ಹಬ್ಬಹರಿದಿನ ಆಚರಣೆ ಉತ್ಸವ ನಂಬಿಕೆ ಸಂಪ್ರದಾಯಗಳು ಇದಕ್ಕೆ ಸಾಕ್ಷಿಯಾಗಿವೆ. ಕುರುಬರೇ ಈ ನೆಲದ ಮೂಲನಿವಾಸಿಗಳೆಂದು ಓಪರ್ಟ, ಥರ್ಸ್ಟನ್, ಎಂಥೋವನ್, ಸೊಂಥೈಮರ್, ಶಂಬಾ ಜೋಶಿ, ಚಿಂತಾಮಣಿ ಢೇರೆಮ ವಿ.ಆರ್. ಹನುಮಂತಯ್ಯ, ಶಾಮಸಿಂಗ್ ಶಶಿ, ಎಂ.ಎಂ. ಕಲಬುರ್ಗಿ ಅವರಂಥ ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.

ಕೊಲ್ಲಿಪಾಕಿಯ ರೇವಣಸಿದ್ದೇಶ್ವರ, ಸೊನ್ನಲಾಪುರದ ಸಿದ್ದರಾಮೇಶ್ವರ, ಅರಕೇರಿಯ ಅಮೋಘಸಿದ್ದೇಶ್ವರ, ಸರೂರಿನ ಶಾಂತಮುತ್ತಯ್ಯ, ತೂಗುಡ್ಡದ ಸಿದ್ದಮಂಕರು ಹಾಲುಮತ ಸಮುದಾಯದ ಪರಮ ಗುರುಗಳಾದರೆ, ಬೀರಪ್ಪ, ಮಾಳಪ್ಪ, ಮೈಲಾಪುರ, ಇಟ್ಟಪ್ಪ, ಬುಳ್ಳಪ್ಪ, ಹುಲ್ಲಪ್ಪ, ಚಂದಪ್ಪ ಮುಂತಾದವರು ಸಾಂಸ್ಕೃತಿಕ ವೀರರಾಗಿ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ವಿಜಯನಗರ ಸ್ಥಾಪಕರಾದ ಹಕ್ಕಬುಕ್ಕರು, ಇಂದೋರ ಅರಸುಮನೆತನದ ಅಹಲ್ಯಾಬಾಯಿ ಹೋಳ್ಕರ್, ಹಂಡೆ ಅರಸುಮನೆತನದ ಬಾಲದ ಹನುಮಪ್ಪನಾಯಕ, ಸ್ವಾತಂತ್ರ ಹೋರಾಟದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟ ವೀರ ಸಂಗೊಳ್ಳಿ ರಾಯಣ್ಣನವರಂಥ ಮಹಾನ್ ಧೀರರು ಶೂರರು ಈ ಸಮುದಾಯಕ್ಕೆ ಸೇರಿದವರು. ಭಾರತದಾದ್ಯಂಥ ಇಂಥ ಅನೇಕ ಮಹಾನುಭಾವರ ಹೆಸರಿನಲ್ಲಿ ಮಠಮಂದಿರಗಳಿವೆ. ನಿರ್ದಿಷ್ಠ ಅವಧಿಯಲ್ಲಿ ಜಾತ್ರೆ ಉತ್ಸವ ಆಚರಣೆಗಳು ಇಲ್ಲಿ ನೆರವೇರುತ್ತದೆ. ಸರೂರು, ಅರಕೇರಿ, ಅಲಕನೂರು, ಕೋಣಗನೂರು, ಮೈಲಾರ, ಬಂಕಾಪುರ, ಹುಲಜಂತಿ, ಪಟ್ಟಣ ಕಡೋಲಿ, ಶಿರಡೋಣ, ಗುಡೂರು, ದೇವರಗುಡ್ಡ ಮುಂತಾದ ಸ್ಥಳಗಳು ಕುರುಬರ ಧಾರ್ಮಿಕ ಮತ್ತು ಸಾಂಸ್ಕೃತಿಕ ಬಹುಮುಖ್ಯ ನೆಲೆಗಳಾಗಿವೆ. ಇಂಥ ವಿಶಿಷ್ಠ ಪರಂಪರೆಯನ್ನು ಹೊಂದಿದ್ದ ಈ ಸಮುದಾಯದ ಸಾಹಿತ್ಯ ಸಮಾಜ ಸಂಸ್ಕೃತಿ ಇತಿಹಾಸ ಕಲೆ ಜನಪದ ಪುರಾತತ್ವ ಮೊದಲಾದವುಗಳ ಸಮಗ್ರ ಸರ್ವೇಕ್ಷಣೆ, ಸಂಗ್ರಹ, ಸಂಶೋಧನೆ, ಅಧ್ಯಯನ ಮತ್ತು ಪ್ರಕಟಣೆಯ ಉದ್ದೇಶದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಾಲುಮತ ಅಧ್ಯಯನ ಪೀಠವು ೨೦೦೬ ರಲ್ಲಿ ಸ್ಥಾಪನೆಗೊಂಡಿದೆ.

ಪೀಠದ ಉದ್ದೇಶಗಳು

ಹಾಲುಮತ ಅಧ್ಯಯನ ಪೀಠವು ಪ್ರಧಾನವಾಗಿ ಸಂಶೋಧನೆ ದಾಖಲೀಕರಣ ವಿಶ್ಲೇಷಣೆ ಹಾಗೂ ಪ್ರಕಟಣೆ ಈ ನಾಲ್ಕು ಹಂತದಲ್ಲಿ ಕಾಲಬದ್ಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತದೆ.

. ಸಂಶೋಧನೆ

೧. ಹಾಲುಮತ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಶಾಸನ, ಕೈಫಿಯತ್ತು, ನಿರೂಪ, ಸನ್ನದುಗಳಂಥ ದಾಖಲು ಸಾಹಿತ್ಯ, ಕಾವ್ಯ ಪುರಾಣಗಳಂಥ ಶಿಷ್ಠ ಸಾಹಿತ್ಯ ಹಾಗೂ ಕಥೆ ಹಾಡು ನಂಬಿಕೆಗಳಂಥ ಮೌಖಿಕ ಸಾಹಿತ್ಯಗಳಲ್ಲಿ ಅಧಿಕ ಪ್ರಮಾಣದ ಆಕರ ಸಾಮಗ್ರಿಗಳಿವೆ. ಉದಾಹರಣೆಗೆ ತಗರ ಪವಾಡ, ಸಿದ್ಧಮಂಕ ಚರಿತೆ, ರೇವಣಸಿದ್ದೇಶ್ವರ ಕಾವ್ಯ, ಹಾಲುಮತ ಪುರಾಣ, ಹಾಲುಮತೊತ್ತೇಜಕ ಪುರಾಣ, ಗೊಲ್ಲಾಳಯ್ಯನ ಪುರಾಣ, ಅಮೋಘಸಿದ್ದೇಶ್ವರ ಪುರಾಣ ಹೀಗೆ ಲಿಖಿತ ಪರಂಪರೆಯಲ್ಲಿ ಹತ್ತು ಹಲವು ಕಾವ್ಯ ಪುರಾಣಗಳು ಲಭ್ಯವಿವೆ. ಅವೆಲ್ಲವುಗಳನ್ನು ತುಲನಾತ್ಮಕವಾಗಿ ಅಧ್ಯಯನಕ್ಕೊಳಪಡಿಸುವುದು. ಕುರುಬರ ಉದ್ಯೋಗ, ಗುರುಪರಂಪರೆ ಇತ್ಯಾದಿ ವಿವರಗಳನ್ನು ಶಾಸನ ಸನ್ನದು ಬಖೈರುಗಳು ದಾಖಲಿಸಿವೆ. ಅಂಥ ಎಲ್ಲ ಶಾಸನಗಳಾದಿಯಾಗಿ ಹಾಲುಮತ ದಾಖಲು ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು.

೨. ಮೌಖಿಕ ಪರಂಪರೆಯಲ್ಲಿ ಈ ಸಮುದಾಯದ ಸಂಸ್ಕೃತಿ ಕಲೆ ಕುರಿತು ಹಾಡು ಕಥೆಗಳಿವೆ. ಅವುಗಳನ್ನು ಆಡಿಯೊ ವಿಡಿಯೊ ಮೂಲಕ ದಾಖಲಿಸಿ ಪ್ರಕಟಿಸುವುದು. ಕುರುಬರ ವಿಶಿಷ್ಠ ಕಲೆ ಡೊಳ್ಳು. ಈ ಕಲೆಯ ಪ್ರದರ್ಶನ ಸಂದರ್ಭದಲ್ಲಿ ಹಾಡುವ ಹಾಡುಗಳಿಗೆ ಡೊಳ್ಳಿನ ಹಾಡುಗಳೆಂದು ಕರೆಯುವರು. ಹೀಗೆಯೇ ರ್ವಾಣಗಳು, ಚೌಡಿಕೆ ಪದಗಳು, ಹರಕೆಯ ಪದಗಳು, ಕರಡಿ ಮಜಲಿನ ಹಾಡುಗಳು ಮೌಖಿಕ ರೂಪದಲ್ಲಿವೆ. ಡೊಳ್ಳಿನ ಹಾಡುಗಳನ್ನೇ ಗಮನಿಸಿ ಹೇಳುವುದಾದರೆ ಕರ್ನಾಟಕದಾದ್ಯಂತ ಸರ್ವೇಕ್ಷಣೆ ನಡೆಸಿದರೆ ಅಂದಾಜು ಹತ್ತು ಸಾವಿರ ಪುಟಗಳಷ್ಟು ಹಾಡುಗಳು ಲಭ್ಯವಾಗಬಹುದು. ಅವೆಲ್ಲವುಗಳನ್ನು ಸಂಗ್ರಹಿಸಿ ಸಂಪುಟರೂಪದಲ್ಲಿ ಪ್ರಕಟಿಸಿ ಪ್ರಸಾರಗೊಳಿಸುವುದು.

೩. ಕುರುಬರ ಆರಾಧ್ಯ ದೈವಗಳಾದ ರೇವಣಸಿದ್ದ, ಶಾಂತಮುತ್ತಯ್ಯ, ಸಿದ್ಧರಾಮ, ಮರುಳಸಿದ್ಧ, ಅಮೋಘಸಿದ್ದ, ಬೀರಲಿಂಗ, ಮೈಲಾರಲಿಂಗ, ಮಾಳಿಂಗರಾಯ, ಇಟ್ಟಪ್ಪ ಮುಂತಾದವರ ಹೆಸರಿನಲ್ಲಿ ನಾಡಿನ ಅನೇಕ ಗ್ರಾಮಗಳಲ್ಲಿ ದೇವಾಲಯ, ಮಠ ಮಂಡಿರ, ಗದ್ದುಗೆ ಹಾಗೂ ಶಿಲ್ಪಗಳಿವೆ. ಕರ್ನಾಟಕದಲ್ಲಿಯೇ ಅಂದಾಜು ಒಂದು ಸಾವಿರದಷ್ಟು ಮಠ ಮಂದಿರಗಳಿವೆ. ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಸರ್ವೇಕ್ಷಣೆ ಕೈಕೊಂಡು ಅವುಗಳ ಸ್ವರೂಪದ ಬಗ್ಗೆ ಸಂಶೋಧನೆ ನಡೆಸುವುದು.

೪. ಹಬ್ಬ-ಹರಿದಿನ-ಉತ್ಸವ-ಜಾತ್ರೆಗಳಲ್ಲಿ ಕೆಲವು ವಿಶಿಷ್ಠ ಆಚರಣೆ ಮತ್ತು ಸಂಪ್ರದಾಯಗಳು ಜರುಗುತ್ತವೆ. ಅರಕೇರಿ ಅಮೋಘಸಿದ್ಧನ ಜಾತ್ರೆಗೆ ನೂರಾರು ಪಲ್ಲಕ್ಕಿಗಳು ಆಗಮಿಸುತ್ತವೆ. ಈ ಪಲ್ಲಕ್ಕಿಗಳನ್ನು ನೋಡಿಯೇ ಆನಂದಿಸಬೇಕು. ರೇವಣಸಿದ್ದೇಶ್ವರ ಮಠಗಳಲ್ಲಿ ಕಂಥಾಧಾರಣ ಉತ್ಸವ, ಬೀರದೇವರ ತೋಪು ಜಾತ್ರಗಳು ೧೨ ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಈ ಎಲ್ಲ ಉತ್ಸವ ಜಾತ್ರೆಯ ಆಚರಣೆಗಳನ್ನು ದಾಖಲಿಸುವುದು.

೫. ನಾಡು-ನುಡಿ ಸಮಾಜಕ್ಕಾಗಿ ಕುರುಬ ಸಮುದಾಯದ ಅನೇಕ ಗಣ್ಯ ಮಾನ್ಯರು ಮಹನೀಯರು ಧಾರ್ಮಿಕ ಪುಣ್ಯ ಪುರುಷರು ದುಡಿದಿದ್ದಾರೆ. ಕಣಗಿನಹಾಳದ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ ಅವರು ಇಡೀ ಏಶಿಯಾ ಖಂಡದಲ್ಲಿಯೇ ಪ್ರಪ್ರಥಮ ಸಹಕಾರ ಸಂಘವನ್ನು ಸ್ಥಾಪನೆ ಮಾಡುವುದರ ಮೂಲಕ ಸಹಕಾರ ಚಳುವಳಿಯ ಹರಿಕಾರರಾಗಿದ್ದಾರೆ. ಕೃಷಿ ತಜ್ಞ ಹೊಸಪೇಟೆಯ ಡಾ.ಆರ್. ನಾಗನಗೌಡ ಕನ್ನಡ ನಾಡುನುಡಿಗಾಗಿ ಅವಿರತ ಶ್ರಮಿಸಿದವರು. ಈ ಸಮುದಾಯದ ಸಂಗೊಳ್ಳಿ ರಾಯಣ್ಣ, ಕರಿಯಪ್ಪ ಸಂಗೂರ, ಕರಿಯಪ್ಪ ಹುಚ್ಚಣ್ಣವರ, ನಿಂಗಪ್ಪ ಕೂರಗುಂದ, ಗೋಣೆಪ್ಪ ಕಮತ ಇನ್ನೂ ಅನೇಕ ಮಹನೀಯರು ಭಾರತ ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ. ಹೀಗೆ ಸಮಾಜ ಸಂಸ್ಕೃತಿ ಸಾಹಿತ್ಯ ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಸಾಧನೆಗೈದವರ ಜೀವನ ಚರಿತ್ರೆಯನ್ನು ಬರೆಸುವುದು.

೬. ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದಂತೆ ವಿಶ್ವಕೋಶ, ಸಾಂಸ್ಕೃತಿಕ ಪದಕೋಶಗಳನ್ನು ಸಿದ್ದಪಡಿಸಿ ಪ್ರಕಟಿಸುವುದು. ಪ್ರಾಚೀನ ಕಾಲದಿಂದಲೂ ಕುರುಬರಿಗೆ ಸಂಬಂಧಿಸಿದ ಕೆಲವು ಪಾರಿಭಾಷಿಕ ಪದಗಳು ಜನರ ಬಾಯಿಂದ ಬಾಯಿಗೆ ಇಂದಿಗೂ ಬಳಕೆಗೊಳ್ಳುತ್ತ ಬಂದಿವೆ. ಉದಾಹರಣೆಗೆ ಕರಿಯ ಕಂತೆ, ಕಟ್ಟೆಮನೆ, ಕೋಲ್ಕಾರ, ಭಂಡಾರಿ, ಹರಿವಾಣದವರು, ಕಾಲಿಲ್ಲದ ಐನೋರು, ಒಡೆಯರು. ಇಂಥ ನೂರಾರು ಪದಗಳನ್ನು ಸಂಗ್ರಹಿಸ ಪದಕೋಶಗಳನ್ನು ಪ್ರಕಟಿಸುವುದು.

೭. ಸಾಹಿತ್ಯ ಇತಿಹಾಸ ಕಲೆ ಧರ್ಮ ಸಮಾಜ ಶಿಲ್ಪ ಇತ್ಯಾದಿ ವಿಷಯಾನುಸಾರ ವರ್ಗೀಕರಿಸಿ ಹಾಲುಮತ ವಿಶ್ವಕೋಶಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವುದು.

೮. ಹಾಲುಮತ ಸಂಸ್ಕೃತಿ ಸಾಹಿತ್ಯ ಕಲೆ ಸಮುದಾಯ ಕುರಿತು ನಾಡಿನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ, ವಿಚಾರ ಸಂಕಿರಣ, ತರಬೇತಿ ಶಿಬಿರ ಹಾಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು.

೯. ಹಾಲುಮತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಅಧ್ಯಯನ ಕೈಕೊಳ್ಳುವುದು. ಆ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಾಯಕಾರಿಯಾಗುವುದು.

. ದಾಖಲೀಕರಣ

೧. ಹಾಲುಮತ ಸಾಹಿತ್ಯ ಸಂಸ್ಕೃತಿ ಕಲೆ ಜನಪದ ಆಚರಣೆ ಸಂಪ್ರದಾಯ ಜಾತ್ರೆ ಉತ್ಸವಗಳನ್ನು ಆಡಿಯೊ ವಿಡಿಯೊ ಮೂಲಕ ದಾಖಲೀಕರಣ ಮಾಡಿಕೊಂಡು ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವುದು.

. ವಿಶ್ಲೇಷಣೆ

೧. ಸಂಗ್ರಹಿಸಿದ ಲಿಖಿತ ಮತ್ತು ಮೌಖಿಕ ಆಕರಗಳನ್ನು ವಿಶ್ಲೇಷಣೆಗೊಳಪಡಿಸಿ ಅವುಗಳಲ್ಲಿರುವ ಸಾಮ್ಯತೆ ಭಿನ್ನತೆಗಳನ್ನು ಗುರುತಿಸುವುದು. ಈಗಾಗಲೇ ಪ್ರಕಟಗೊಂಡಿರುವ ಹಾಲುಮತ ಕಾವ್ಯ ಪುರಾಣಗಳ ವಸ್ತು ವಿಶಿಷ್ಟತೆಗಳನ್ನು ಗುರುತಿಸುವುದು.

. ಪ್ರಕಟಣೆ

ಹಾಲುಮತ ಸಾಹಿತ್ಯ ಸಂಸ್ಕೃತಿ ಚರಿತ್ರೆ ಆಚರಣೆ ಸಂಪ್ರದಾಯಗಳನ್ನು ಅಧ್ಯಯನ ಮಾಡಿ ಅವುಗಳ ಫಲಿತಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು. ಹಾಗೆಯೇ ವಿಚಾರ ಸಂಕಿರಣ ಸಮ್ಮೇಳನ ವಿಶೇಷ ಉಪನ್ಯಾಸ ತರಬೇತಿ ಶಿಬಿರಗಳಲ್ಲಿ ಮಂಡಿತವಾದ ಸಂಪ್ರಬಂಧಗಳನ್ನು ಸಂಪುಟಗಳಲ್ಲಿ ಪ್ರಕಟಿಸಿ ಪ್ರಸಾರಗೊಳಿಸುವುದು. ಇದಿಷ್ಟು ಹಾಲುಮತ ಅಧ್ಯಯನ ಪೀಠದ ‌ಪ್ರಮುಖ ಉದ್ದೇಶಗಳು.

ಈ ಹಿನ್ನೆಲೆಯಲ್ಲಿ ಹಾಲುಮತ ಸಂಸ್ಕೃತಿಯ ಸಂಶೋಧನೆ ದಾಖಲೀಕರಣ ವಿಶ್ಲೇಷಣೆ ಹಾಗೂ ಪ್ರಕಟಣೆಯನ್ನು ಉದ್ದೇಶವಾಗಿಟ್ಟುಕೊಂಡು ಹಾಲುಮತ ಅಧ್ಯಯನ ಪೀಠ ತನ್ನ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಲಿದೆ.

೧೦೦೯-೧೦ನೆಯ ಶೈಕ್ಷಣಕ ವರ್ಷದಲ್ಲಿ ಹಾಲುಮತಕ್ಕೆ ಸಂಬಂಧಿಸಿದ ಹಸ್ತಪ್ರತಿ ಶಾಸನ ಶಿಲ್ಪಕಲೆ ಜಾನಪದಗಳಿಗೆ ಸಂಬಂಧಿಸಿದಂತೆ ಹಾಲುಮತ ಭಂಡಾರ ಹೆಸರಿನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಆ ಮೂಲಕ ಅವುಗಳನ್ನು ಸಂರಕ್ಷಿಸುವುದು. ಜೊತೆಗೆ ಈ ಸಮುದಾಯಕ್ಕೆ ಸಂಬಂಧಿಸಿದ ಪುಸ್ತಕಗಳು ನಿಯತಕಾಲಿಕಗಳು ಒಂದೇ ಕಡೆ ಲಭ್ಯವಾಗುವ ಹಾಗೆ ಹಾಲುಮತ ಮೇಲುದೀಪ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿ ಅಧ್ಯಯನಕ್ಕೆ ಅನುಕೂಲತೆಯನ್ನು ಮಾಡಿಕೊಡಲಾಗಿದೆ.

ಚಳ್ಳಕೆರೆಯ ಶ್ರೀ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ೨೫, ೨೬ ಜುಲೈ ೨೦೦೯ರಂದು ಎರಡು ದಿನಗಳ ಕಾಲ ಧಾರವಾಡದ ನಿವೃತ್ತ ಶಿಕ್ಷಕರೂ ಸೃಜನಶೀಲ ಲೇಖಕರಾದ ಶ್ರೀ ಬ.ಪ. ನಾಯ್ಕರ ಅವರ ಸರ್ವಾಧ್ಯಕ್ಷತೆಯಲ್ಲಿ ಎರಡನೆಯ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ಚಳ್ಳಕೆರೆಯ ದಲ್ಲಾಲರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಅದೇ ಸಂದರ್ಭದಲ್ಲಿ ಹಾಲುಮತ ವ್ಯಾಸಂಗ ಸಂಪುಟ-೧ ನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಲಾಯಿತು. ಈ ಸಮ್ಮೇಳನದಲ್ಲಿ ಮುಖ್ಯವಾಗಿ ಕುರುಬರ ಒಳಪಂಗಡಗಳ ಬಗೆಗೆ ನಾಲ್ಕು ಗೋಷ್ಠಿಗಳಲ್ಲಿ ವಿದ್ವಾಂಸರಿಂದ ಸಂಪ್ರಬಂಧಗಳು ಮಂಡಿಸಲ್ಪಟ್ಟವು. ಹೀಗೆ ಮಂಡಿಸಲ್ಪಟ್ಟ ಸಂಪ್ರಬಂಧಗಳ ಸಂಪುಟವಾಗಿದೆ. ಹಾಲುಮತ ವ್ಯಾಸಂಗ-೨. ಇದು ಹಾಲುಮತ ಅಧ್ಯಯನ ಮಾಲೆಯ ಮೂರನೆಯ ಪ್ರಕಟಣೆ.

* * *

ಕರ್ನಾಟಕದ ವಿವಿಧ ಸಮಾಜಗಳ ಒಳಪಂಗಡಗಳ ದಾಖಲೀಕರಣಕ್ಕೆ ನಾಂದಿ ಹಾಡಿದವರು ಪಾಶ್ಚಾತ್ಯ ವಿದ್ವಾಂಸರು. ಅದರಲ್ಲಿಯೂ ವಿಶೇಷವಾಗಿ ಬುಕನನ್, ಎಂಥೋವನ್, ಥರ್ಸ್ಟನ್ ಅವರಂಥ ವಿದ್ವಾಂಸರು ತಮ್ಮ ಪ್ರವಾಸ ಕಥನ, ದಿನಚರಿ, ಕೋಶ ಹಾಗೂ ಗೆಝೆಟಿಯರ್‌ಗಳಲ್ಲಿ ಒಳಪಂಗಡಗಳು ಕುರಿತು ಅನೇಕ ವಿವರಗಳನ್ನು ದಾಖಲಿಸಿದ್ದಾರೆ. ಇತ್ತೀಚೆಗೆ ಡಾ.ಎಂ.ಎಂ. ಕಲಬುರ್ಗಿಯವರ “ಲಿಂಗಾಯತ” ಸಂಪುಟದ ಮೂಲಕ ಲಿಂಗಾಯತ ಸಮಾಜದ ಒಳಪಂಗಡಗಳ ದಾಖಲೀಕರಣ ಕಾರ್ಯವನ್ನು ಹಲವು ವಿದ್ವಾಂಸರ ನೆರವಿನಿಂದ ಪೂರೈಸಿದ್ದಾರೆ. ಇಲಕಲ್ಲನ ಚಿತ್ತರಗಿ ಸಂಸ್ಥಾನಮಠದ ಪೂಜ್ಯಶ್ರೀ ಮ.ನಿ.ಪ್ರ.ಮಹಾಂತಸ್ವಾಮಿಗಳವರ ವಜ್ರಮಹೋತ್ಸವದ ಅಭಿನಂದನ ಸಂಪುಟವಿದು. ಲಿಂಗಾಯತ ಸಮಾಜದ ಮೂವತ್ತೈದು ಒಳಪಂಗಡಗಳ ಇತಿಹಾಸ, ವಿನ್ಯಾಸ, ಸಾಮಾಜಿಕ ಧಾರ್ಮಿಕ ಆರ್ಥಿಕ ಕೌಟುಂಬಿಕ ಸಾಂಸ್ಕೃತಿಕ ಸಂಗತಿಗಳನ್ನು ತಿಳಿಸುವ ಸಂಶೋಧನಾತ್ಮಕ ಸಂಪ್ರಬಂಧಗಳು ಇಲ್ಲಿವೆ. ಬಹುಶಃ ಸಮಾಜವೊಂದರ ಒಳಪಂಗಡಗಳ ಸಮಗ್ರ ದಾಖಲೀಕರಣ ಕಾರ್ಯ ಒಂದೆಡೆ ಪ್ರಥಮ ಬಾರಿಗೆ ನಡೆದುದು ಈ ಸಂಪುಟದ ಮೂಲಕ ಎಂದು ಹೇಳಬಹುದು.

ಈ ಮಾದರಿಯಲ್ಲಿ ಕುರುಬ ಸಮಾಜದ ಒಳಪಂಗಡಗಳ ದಾಖಲೀಕರಣ ಮಾಡಬೇಕೆಂಬ ಆಶಯದಿಂದ ಈ ಸಂಪುಟವನ್ನು ಸಿದ್ಧಪಡಿಸಲಾಗಿದೆ. ಎಂಥೋವನ್, ಎಡ್ಗರ್‌ಥರ್ಸ್ಟ್‌ನ್, ಸೊಂಥೈಮರ್, ವೆಂಕಟರಂಗೋ ಕಟ್ಟಿ, ಹಯವದನರಾವ್, ಎಚ್.ವಿ. ನಂಜುಂಡಯ್ಯ, ಎಲ್.ಕೆ. ಅನಂತಕೃಷ್ಣ ಅಯ್ಯರ್, ವಿ. ಹನುಮಂತಯ್ಯ, ಶಾಮಸಿಂಗ್ ಶಶಿ, ಶಿವಾನಂದ ಗುಬ್ಬಣ್ಣವರ ಮುಂತಾದ ವಿದ್ವಾಂಸರು ಅನುಷಂಗಿಕವಾಗಿ ಕುರುಬ ಸಮಾಜದ ಒಳಪಂಗಡಗಳ ದಾಖಲೀಕರಣ ಕಾರ್ಯಕ್ಕೆ ಪ್ರಯತ್ನಿಸಿದ್ದಾರೆ. ಇಷ್ಟಾಗಿಯೂ ಕುರುಬರ ಒಳಪಂಗಡಗಳ ಸಂಖ್ಯೆ ಎಷ್ಟು ಎಂಬುದನ್ನು ಖಚಿತವಾಗಿ ನಾವಿನ್ನು ಗುರುತಿಸಬೇಕಾಗಿದೆ. ಹೀಗಿದ್ದೂ ಈ ಸಂಪುಟದಲ್ಲಿ ಕಾಡುಕುರುಬರು, ಅಲೆಮಾರಿ ಕುರುಬರು, ಹತ್ತಿಕಂಕಣ ಉಣ್ಣೆ ಕಂಕಣ ಕುರುಬರು, ಒಡೆಯರು, ದನಗರ ಗವಳಿಗರು ಇತ್ಯಾದಿ ಕುರುಬ ಸಮಾಜದ ಹದಿನೇಳು ಒಳಪಂಗಡಗಳನ್ನು ಗುರುತಿಸಿ, ಅವುಗಳ ಮೂಲ, ವ್ಯಾಪ್ತಿ, ಆಚರಣೆ ಸಂಪ್ರದಾಯ, ಸಾಮಾಜಿಕ ಧಾರ್ಮಿಕ ಕೌಟುಂಬಿಕ ಆರ್ಥಿಕ ಹೀಗೆ ಅನೇಕ ವಿಚಾರಗಳನ್ನು ದಾಖಲಿಸಲು ಪ್ರಯತ್ನಿಸಲಾಗಿದೆ. ಹೀಗಾಗಿ ಕುರುಬ ಸಮಾಜದ ಒಳಪಂಗಡಗಳ ಸಮಗ್ರ ದಾಖಲೀಕರಣ ಕಾರ್ಯ ಒಂದೆಡೆ ಸಮಗ್ರವಾಗಿ ಮೊದಲಬಾರಿಗೆ ಈ ಸಂಪುಟದ ಮೂಲಕ ಕೈಗೂಡಿದಂತಾಗಿದೆ. ಇಲ್ಲಿನ ಸಂಪ್ರಬಂಧಗಳು ಒಂದೊಂದು ಒಳಪಂಗಡದ ಬಗೆಗೆ ಪ್ರತ್ಯೇಕ ಅಧ್ಯಯನವನ್ನು ಕೈಕೊಳ್ಳಬಹುದಾದ ಸಾಧ್ಯತೆಯತ್ತ ಸಂಶೋಧಕರ ಗಮನವನ್ನು ಸೆಳೆಯುತ್ತವೆ.

ಒಳಪಂಗಡಗಳ ಕುರಿತು ಬರೆಯುವುದು ತುಂಬ ಸೂಕ್ಷ್ಮ ವಿಷಯ. ಹೀಗಿದ್ದೂ ತುಂಬ ಶ್ರಮವಹಿಸಿ ಅನೇಕ ಆಕರಗಳನ್ನು ಸಂಗ್ರಹಿಸಿ ಸಂಪ್ರಬಂಧಗಳನ್ನು ಸಿದ್ಧಪಡಿಸಿದ ಎಲ್ಲ ವಿದ್ವಾಂಸರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಲ್ಲದೇ ಆಯಾ ಲೇಖನಗಳಲ್ಲಿನ ಅಭಿಪ್ರಾಯಗಳಿಗೆ ಅವರೇ ಜವಾಬ್ದಾರರೆಂದು ಬೇರೆ ಹೇಳಬೇಕಿಲ್ಲ.

ಚಿತ್ರದುರ್ಗ ಪರಿಸರದ ಕುರುಬ ಸಮುದಾಯದ ಧಾರ್ಮಿಕ ಸಾಮಾಜಿಕ ಜಾನಪದ ಹಾಗೂ ಆರ್ಥಿಕ ಸಂಗತಿಗಳನ್ನು ಅವಲೋಕನ ಮಾಡಿದ ಸಂಪ್ರಬಂಧಗಳು ಮೂರನೆಯ ಭಾಗದಲ್ಲಿವೆ. ಸಮ್ಮೇಳನದ ಸರ್ವಾಧ್ಯಕ್ಷರಾದ ಬ.ಪ. ನಾಯ್ಕರ ಅವರ ಜೀವನ ಸಾಧನೆ ಮತ್ತು ಸಾಹಿತ್ಯ ಕುರಿತು ವಿಶ್ಲೇಷಣಾತ್ಮಕವಾದ ಸಂಪ್ರಬಂಧವು ನಾಲ್ಕನೆಯ ಭಾಗದಲ್ಲಿದೆ. ಹಿರಿಯ ಜಾನಪದ ವಿದ್ವಾಂಸರಾದ ಡಾ.ತೀ.ನಂ. ಶಂಕರನಾರಾಯಣ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಕರ್ನಾಟಕದ ವಿವಿಧ ಜಾತಿ ಉಪಜಾತಿ, ಬುಡಕಟ್ಟು ಹಾಗೂ ಬೆಡಗುಗಳ ಅಧ್ಯಯನಗಳ ಉದ್ದೇಶ, ಉಪಯುಕ್ತತೆಯನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಜೊತೆಗೆ ಇಲ್ಲಿರುವ ಸಂಪ್ರಬಂಧಗಳ ವಿಶೇಷತೆಯನ್ನು ಗುರುತಿಸುತ್ತ “…ಇವುಗಳನ್ನು ಅಧ್ಯಯನ ಮಾಡಿದರೆ ಕುರುಬರ ಉಪಜಾತಿಗಳ ಒಂದು ಸ್ಥೂಲವಾದ ಚಿತ್ರ ದೊರಕುತ್ತದೆ. ಇವುಗಳು ಒಂದು ರೀತಿಯಲ್ಲಿ ಆರಂಭದ ಸಮೀಕ್ಷೆ ರೂಪದಲ್ಲಿದ್ದು ಮುಂದಿನ ಅಧ್ಯಯನಗಳಿಗೆ ಒಳ್ಳೆಯ ತಳಹದಿ ಹಾಕಿತು ಎಂದು ಹೇಳಬಹುದು. ಈ ಪ್ರಬಂಧಗಳು ಕುರುಬರ ಸಾಂಪ್ರದಾಯಕ ಜೀವನ ಕ್ರಮಗಳನ್ನು ದಾಖಲಿ ಮಾಡಿವೆ. ….ಜಾಗತೀಕರಣದ ಇಂದಿನ ದನಗಳಲ್ಲಿ ಕುರುಬ ಸಮುದಾಯ, ಅದರಲ್ಲಿನ ಉಪಜಾತಿಗಳು ಮತ್ತು ಬೆಡಗುಗಳು ಯಾವ ರೀತಿ ಮುಂದುವರಿಯಬೇಕು ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಾಗಿದೆ. ಇದಕ್ಕೆ ಈ ವಿಚಾರ ಸಂಕಿರಣದ ಸಂಪ್ರಬಂಧಗಳು ನಾಂದಿಯಾಗಲಿವೆ” ಎಂದು ಆಶಿಸಿದ್ದಾರೆ. ಹೀಗೆ ಈ ಸಂಪುಟವು ಕುರುಬ ಸಮುದಾಯದ ಒಳಪಂಗಡಗಳ ಅಧ್ಯಯನಕ್ಕೆ ಒಂದು ಆಕರ ಗ್ರಂಥವಾಗುತ್ತದೆಂಬ ನಂಬಿಕೆ ನಮ್ಮದಾಗಿದೆ.

ಈ ಸಂಪುಟದ ಪ್ರಕಟಣೆಗೆ ಆಡಳಿತಾತ್ಮಕ ಅನುಮತಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿಕಟ್ಟಿ ಅವರಿಗೆ ಗೌರಪೂರ್ವಕ ನಮನಗಳು. ಸಮ್ಮೇಳನದ ರೂಪುರೇಷಯನ್ನು ಸಿದ್ಧಪಡಿಸುವಲ್ಲಿ ಸಲಹೆ ಸಹಕಾರ ನೀಡಿದ ಹಿಂದಿನ ಕುಲಸಚಿವರಾದ ಕೆ.ಎ.ಎಸ್. ಅಧಿಕಾರಿ ಶ್ರೀ ಎಸ್.ಎಸ್. ಪೂಜಾರ್, ಹಾಲುಮತ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಶ್ರೀರಾಮ ಇಟ್ಟಣ್ಣವರ, ಶ್ರೀ ಈರಪ್ಪ ಕಂಬಳಿ ಅವರಿಗೆ ನಮಸ್ಕಾರಗಳು. ಚಳ್ಳಕೆರೆಯಲ್ಲಿ ಎರಡನೆಯ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ನಡೆಸಲು ಮುಂದೆ ಬಂದವರು ಶ್ರೀ ಕನಕ ನೌಕರರ ಸಂಘದ ಪದಾಧಿಕಾರಿಗಳು. ವಿಶೇಷವಾಗಿ ಗೌರವಾಧ್ಯಕರಾದ ಪ್ರೊ. ಎಂ. ಶಿವಲಿಂಗಪ್ಪ ಅವರು ಹಗಲಿರುಳು ದುಡಿದು ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದಾರೆ. ಅವರೊಂದಿಗೆ ಸಂಘದ ಅಧ್ಯಕ್ಷರಾದ ಪಿ. ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ರಾಜು, ಶ್ರೀ ರೇವಣಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಎಲ್. ಲೋಕೇಶ್‌ ಮೊದಲಾದವರು ಹೆಗಲಿಗೆ  ಹೆಗಲುಕೊಟ್ಟು ದುಡಿದಿದ್ದಾರೆ. ಈ ಎಲ್ಲ ಮಹನೀಯರಿಗೆ ಹಾರ್ದಿಕವಾದ ಕೃತಜ್ಞತೆಗಳು.

ಪುಸ್ತಕದ ಪ್ರಕಟಣೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ.ಮೋಹನ ಕುಂಟಾರ್‌, ಸಹಾಯಕ ನಿರ್ದೇಶಕ ಶ್ರೀ ಬಿ. ಸುಜ್ಞಾನಮೂರ್ತಿ, ಮುಖಪುಟ ಚಿತ್ರಿಸಿದ ಕಲಾವಿದ ಕೆ.ಕೆ.ಮಕಾಳಿ ಅವರಿಗೆ ವಂದನೆಗಳು. ಅಚ್ಚುಕಟ್ಟಾಗಿ ಅಕ್ಷರಗಳನ್ನು ಸಂಯೋಜನೆಗೊಳಿಸಿದ ಯಾಜಿ ಗ್ರಾಫಿಕ್ಸನ ಶ್ರೀಮತಿ ಸವಿತಾ ಗಣೇಶ ಅವರ ಸಹಕಾರವನ್ನು ಪ್ರೀತಿಯಿಂದ ನೆನೆಯುತ್ತೇನೆ.

ಡಾ. ಎಫ್.ಟಿ. ಹಳ್ಳಿಕೇರಿ