ಬೆಡಗಿನಲ್ಲಿ ಒಂಟಿ ನಕ್ಷತ್ರ

ಬೆಡಗುಗಳು ಕುರುಬರಲ್ಲಿ ವಿವಾಹ ಸಂಬಂಧ ನಿರ್ಮಿಸಿಕೊಳ್ಳುವಲ್ಲಿ ಬಹು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಒಂದು ಅಂದಾಜಿನ ಪ್ರಕಾರ ಕುರುಬರಲ್ಲಿ 585 ಬೆಡಗುಗಳಿವೆ. ಅಲ್ಲಿರುವ ಬೆಡಗುಗಳಲ್ಲಿ ಪಶು, ಪಕ್ಷಿ, ಆಯುಧ, ಲೋಹ, ಧಾತು, ಊರು ಕೇರಿಗಳ ಹೆಸರುಗಳಿವೆ. ಆದರೆ ಅವುಗಳಲ್ಲಿ ಒಂದೇ ಒಂದು ಬೆಡಗಿನ ಹೆಸರು ಸ್ತ್ರೀ ಸೂಚಕವಾಗಿದೆ. ಈ ರೀತಿಯ ನಗಣ್ಯ ಪ್ರಮಾಣವು ಕುರುಬ ಮಹಿಳೆಯ ಅವಗಣನೆಯ ಆಳವನ್ನು ಸೂಚಿಸುತ್ತದೆ. ಅಣ್ಣಿ, ಅತ್ತಿ, ಅರಳಿ, ನುಗ್ಗಿ, ನೆಲ್ಲಿ, ಹತ್ತಿ, ಬನ್ನಿ ಎಂಬ ಗಿಡಮರ ಸೂಚಿ, ಎಮ್ಮೆ, ಕೆಂಗುರಿ, ಚೇಳು, ನವಿಲು, ಗೀಜಗದಂಥ ಪಶುಪಕ್ಷಿ ಸೂಚಿ, ಕುಂದಣ, ಸುವರ್ಣ, ಕೆಂಗಲ್ಲದಂಥ ಲೋಹ ಸೂಚಿ, ಕತ್ತಿ, ಕೊಡ್ಲಿ, ಚೂರಿಯಂಥ ಅಯುದ ಸೂಚಿ, ಕಂಬಳಿ, ಗೊಂಗಡಿ, ಕೋರಿ ಯಂಥ ವಸನ ಸೂಚಿ ಶಬ್ದಗಳು ದಟ್ಟೈಸಿ ಬಳಕೆಗೊಂಡಿವೆ. ಆದರೆ ಮಹಿಳೆಯ ಹೆಸರಿನಲ್ಲೂ ಒಂದು ಬೆಡಗು ಇರಲಿ ಎನ್ನುವಂತೆ ಒಂದೇ ಒಂದು ಬೆಡಗನ್ನು ನೀಡಿದ್ದಾರೆ. ಅದೇ ಸಾವಿತ್ರಿ ಎಂಬ ಬೆಡಗು.

ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಈ ಬೆಡಗುಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಇಳಿದು ಬರುವುದು ತಂದೆಯಿಂದ ಮಕ್ಕಳಿಗೆ ಮತ್ತು ಮದುವೆಯೊಂದಿಗೆ ಹೆಣ್ಣುಮಗಳ ಮೂಲ ಬೆಡಗು ಕರಗಿಹೋಗುತ್ತದೆ. ಅಂದರೆ ಕುರುಬ ಹೆಣ್ಣು ಮಗಳಿಗೆ ಯಾವುದೇ ರೀತಿಯ ಐಡೆಂಟಿಟಿಯಿಲ್ಲ. ಅದೇನಿದ್ದರೂ ಅವಳು ಪುರುಷನನ್ನು (ಮೊದಲು ತಂದೆಯನ್ನು ನಂತರ ಗಂಡನನ್ನು) ಅನುಸರಿಸಿಯೇ ತನ್ನ ಐಡೆಂಟಿಟಿಯನ್ನು ಪಡೆಯಬೇಕು. ಅಂದರೆ ಅರಳೀ ಬೆಡಗಿನ ತಂದೆಗೆ ಹುಟ್ಟಿದ ಮಗಳಿಗೆ ಅವಳು ಮದುವೆಯಾಗುವವರೆಗೆ ಅರಳಿ ಬೆಡಗು ಇರುತ್ತದೆ. ಅವಳನ್ನು ಕರಿಬೇವಿನ ಬೆಡಗಿನ ಮನೆತನಕ್ಕೆ ಮದುವೆ ಮಾಡಿಕೊಟ್ಟರೆ ಅವಳ ಮೂಲಬೆಡಗು ಕರಗಿ ಹೋಗಿ ಕರಿಬೇವಿನ ಬೆಡಗಿನವಳಾಗುತ್ತಾಳೆ. ಹೀಗೆ ಅವಳ ಅಸ್ತಿತ್ವ ಕರುಗುತ್ತ ಹೋಗುತ್ತದೆಯೇ ಹೊರತು, ಲೀನವಾಗುತ್ತಲೆ ಹೋಗುತ್ತದೆಯೇ ಹೊರತು ದಾಖಲಾಗುವುದಿಲ್ಲ. ಬೀಜದ ಅಹಂಮಿಕೆಯಲ್ಲಿ ಭೂಮಿ ಮರೆಯಾಗುವ ಬೆರಗು ಕುರುಬರ ಬೆಡಗಿನಲ್ಲಿದೆ.

ಬೀದರದ ಗೊಂಡ ಮಹಿಳೆ ವಿವಾಹದ ಮೂಲಕ ಏನನ್ನೂ ಕಳೆದುಕೊಳ್ಳುವುದಿಲ್ಲ. ಹಾಗೂ ಹೊಸದಾಗಿ ಏನನ್ನೂ ಪಡೆದುಕೊಳ್ಳುವುದಿಲ್ಲ. ಯಾಕೆಂದರೆ ಬೀದರದ ಗೊಂಡರಲ್ಲಿ ಬೆಡಗುಗಳಿಲ್ಲ. ಅವರೆಲ್ಲ ಉಣ್ಣೆ ಕಂಕಣದವರೇ ಆಗಿರುವುದರಿಂದ ವಿವಾಹ ನಂತರವೂ ಗೊಂಡ ಮಹಿಳೆಯ ಮೂಲ ಕಂಕಣ ಮುಂದುವರಿದುಕೊಂಡು ಹೋಗುತ್ತದೆ ಅಷ್ಟೇ.

ಮಾತೃ ಮೂಲದ ಬಳಿ ಮತ್ತು ಬುಡ

ಕರ್ನಾಟಕದ ಕುರುಬರಲ್ಲಿ ಬೆಡಗುಗಳಿದ್ದರೆ, ಭಟ್ಕಳದ ಗೊಂಡರಲ್ಲಿ ಬುಡ ಹಾಗೂ ಬಳಿಗಳು ಇವೆ. ಭಟ್ಕಳದ ಗೊಂಡರದು ಈ ನಿಟ್ಟಿನಲ್ಲಿ ತುಂಬಾ ಪ್ರಗತಿಪರವಾದ ವ್ಯವಸ್ಥೆಯಿದೆ. ಬಳಿಗಳು ಇಳಿದು ಬರುವ ಕ್ರಮವನ್ನು ಗಮನಿಸಿದರೆ ಭಟ್ಕಳದ ಗೊಂಡರಲ್ಲಿ ಮಾತೃಪ್ರಧಾನ ಕುಟುಂಬದ ಲಕ್ಷಣಗಳು ಕಂಡುಬರುತ್ತವೆ. ಕುರುವರ ಬೆಡಗು ಪುರುಷನನ್ನು ಹಿಡಿದು ಇಳಿದು ಬಂದರೆ, ಗೊಂಡರ ಬಳಿ ಮಹಿಳೆಯನ್ನು ಹಿಡಿದು ಇಳಿದು ಬರುತ್ತದೆ. ಕುರುಬರಲ್ಲಿ ಸಮಬೆಡಗುಗಳಲ್ಲಿ ವಿವಾಹ ನಿಷಿದ್ಧವಿರುವಂತೆ ಭಟ್ಕಳ ಗೊಂಡರಲ್ಲಿ ಸಮಬಳಿ ವಿವಾಹ ನಿಷಿದ್ಧವಾಗಿದೆ. ಅದೇನೇ ಇರಲಿ, ವಿವಾಹವಾದ ನಂತರ ಅವಳ ಮಕ್ಕಳಿಗೆ ಬಳಿಗಳು ಅವಳನ್ನೇ ಅನುಸರಿಸಿ ಬರುತ್ತವೆ. ಉದಾಹರಣೆಗೆ ಅಜ್ಜರ ಬಳಿಯ ಗೊಂಡ ಮಹಿಳೆ ಆನ್ ಬಳಿಯ ಗಂಡನನ್ನು ಮದುವೆಯಾದ ನಂತರ ಅವರಿಗೆ ಹುಟ್ಟುವ ಮಕ್ಕಳು ಗಂಡಾಗಲಿ, ಹೆಣ್ಣಾಗಲಿ ಅಜ್ಜರ ಬಳಿಯನ್ನೇ ಹೊಂದುತ್ತವೆ. ಮಾತೃತ್ವವನ್ನು ಗೌರವಿಸುವ ಇಂಥದ್ದೊಂದು ಸಂಪ್ರದಾಯ ನಿಜವಾಗಿಯೂ ಅಪರೂಪದ್ದೆಂದೇ ಹೇಳಬೇಕು.

ಬುಡದ ವಿಷಯದಲ್ಲೂ ಗೊಂಡರದು ಮಾತೃಪ್ರಧಾನ ಸಂಪ್ರದಾಯ. ಸದ್ಯದಲ್ಲಿ ಬೇರೆ ಬೇರೆ ಬಳಿ ಹೊಂದಿರುವ ಗೊಂಡ ಮಹಿಳೆಯರ ತಾಯಿಯರ ತಾಯಂದಿರು ಮೂಲದಲ್ಲಿ ಒಂದೇ ದೈವವನ್ನು ಆರಾಧಿಸುತ್ತಿದ್ದರೆ ಆ ದೈವವನ್ನು ಬುಡ ಅಥವಾ ತಳವೆಂದು ಕರೆಯುತ್ತಾರೆ. ಅಂದರೆ ಬೇರೆ ಬೇರೆ ಬಳಿಯ ಮಹಿಳೆಯರು ಮೂಲದಲ್ಲಿ ಒಂದೇ ಬುಡ ಕಟ್ಟಿನವರಾಗಿರಬಹುದು. ಇಲ್ಲಿನ ವಿಶೇಷವೆಂದರೆ ಬುಡಕ್ಕೆ ನಡೆದುಕೊಳ್ಳುವವರು ಪುರುಷರಲ್ಲ, ಕೇವಲ ಮಹಿಳೆಯರು. ಅಂದರೆ ಮಹಿಳೆ ಮೂಲದ ಬಳಿ ಹಿಡಿದು ಬುಡಕ್ಕೆ ತಲುಪುವಾಗಲೂ ಮಹಿಳೆಯೇ ಪ್ರಧಾನವಾಗುತ್ತಾಳಾದ್ದರಿಂದ ಭಟ್ಕಳದ ಗೊಂಡರದು ಮಾತೃಮೂಲ ಕುಟುಂಬ ಪ್ರಜ್ಞೆಯೊಂದು ತಿಳಿದು ಬರುತ್ತದೆ. ಆದರೆ ಸಂಪ್ರದಾಯದಲ್ಲಿ ಮಹಿಳೆಗೆ ತೋರಿಸುವ ಗೌರವವನ್ನು ಗೊಂಡರು ವ್ಯವಹಾರಿಕ ಬದುಕಿನಲ್ಲಿ ತೋರಿಸುವುದಿಲ್ಲವೆನ್ನುವುದು ವಿಪರ್ಯಾಸದ ಸಂಗತಿಯಾಗಿದೆ.

ಅಂದು ಕುರುಬತಿ ಇಂದು ಒಡೇರಮ್ಮ

ಕುರುಬರ ಗುರು ಒಡೆಯರ ವಿವಾಹ ಸಂಪ್ರದಾಯದಲ್ಲಿ ಕುರುಬ ಮಹಿಳೆಯರದ್ದು ಇನ್ನೊಂದು ರೀತಿಯ ಸಂದಿಗ್ಧ ಸ್ಥಿತಿ. ಒಡೆಯರೆಲ್ಲರೂ ಕೋಟೆನವರ ಎಂಬ ಒಂದೇ ಬೆಡಗಿನವರಿರುವುದರಿಂದ ಒಡೆಯರು ಒಡೆಯರಲ್ಲಿಯೇ ವಿವಾಹ ಸಂಬಂಧ ಏರ್ಪಡುವುದಿಲ್ಲ. ಅವರು ಏನಿದ್ದರೂ ನಡಹಟ್ಟಿ ಬೆಡಗಿನವರೊಂದಿಗೆ ಇಲ್ಲವೆ ಕುರುಬರಲ್ಲಿಯೇ ಹತ್ತಿ ಕಂಕಣದ ಶುದ್ದ ಶಾಕಾಹಾರಿಗಳೊಂದಿಗೆ ವಿವಾಹ ಸಂಬಂಧ ಬೆಳೆಯಿಸುತ್ತಾರೆ. ಹೀಗೆ ಕುರುಬರ ಮನೆಯ ಹೆಣ್ಣುಮಗಳು ಒಡೆಯರ ಮನೆಗೆ ವಿವಾಹವಾಗಿ ಹೋದರೆ ಅವಳನ್ನು ಒಡೇರಮ್ಮ ಎಂದು ಸ್ವೀಕರಿಸಲಾಗುತ್ತದೆ. ಒಡೇರಮ್ಮ ಒಡೆಯರ ಅನುಪಸ್ಥಿತಿಯಲ್ಲಿ ಒಡೆಯರು ಪೂರೈಸುವ ಎಲ್ಲ ಧಾರ್ಮಿಕ ವಿಧಿಗಳನ್ನು ನಡೆಯಿಸಿಕೊಡಬಹುದು. ಹೀಗಾಗಿ ಅವಳು ಅಲ್ಲಿ ಅಪರೂಪದ ಎತ್ತರದ ಸ್ಥಾನವನ್ನು ಅನುಭವಿಸುತ್ತಾಳೆ. ಅವಳು ತವರು ಮನೆಗೆ ಬಂದರೆ ಗುರುಪತ್ನಿಯಾದ ಅವಳನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಮನೆಯ ಕಸಗುಡಿಸುವುದು, ಊಟದ ತಾಟು ಎತ್ತಿ ಇಡುವುದು, ಮುಸುರೆ ತಿಕ್ಕುವುದು ಇತ್ಯಾದಿ ಕೆಲಸಗಳನ್ನು ಅವಳಿಂದ ಮಾಡಿಸಿಕೊಳ್ಳುವುದಿಲ್ಲ. ಭಾರತೀಯ ಸಾಮಾಜಿಕ ಸಂದರ್ಭದಲ್ಲಿಯೇ ಪ್ರಗತಿಪರವೆನ್ನಬಹುದಾದ ನಿಲುವನ್ನು ಒಡೇರಮ್ಮನಲ್ಲಿ ಗುರುತಿಸಬಹುದಾಗಿದೆ.

ಕೊಟ್ಟ ಕಂಬಳಿಯವಳು

ಈಗಾಗಲೇ ತಿಳಿಸಿರುವಂತೆ ಒಡೆಯರು ಒಡೆಯರಲ್ಲಿಯೇ ಬೀಗತನವಾಗುವುದಿಲ್ಲ. ಅವರು ತಮ್ಮ ಮನೆಯ ಹೆಣ್ಣುಮಗಳನ್ನು ನಡೆತನದವರು ಇಲ್ಲವೆ ನಡಹಟ್ಟೀಯವರ ಮನೆಗೆ ಕೊಟ್ಟಿರುತ್ತಾರೆ. ಹೀಗೆ ಮದುವೆಯಾಗಿ ಹೋದ ಈ ಹೆಣ್ಣುಮಗಳು ತನ್ನ ಬೆಡಗನ್ನು ಕಳೆದುಕೊಂಡಿರುತ್ತಾಳೆ. ಈ ಮಹಿಳೆಯ ತವರು ಮನೆಯಲ್ಲಿ ಅಂದರೆ ಒಡೆಯರ ಮನೆಯಲ್ಲಿ ಗಂಡು ಸಂತಾನವಿಲ್ಲದೆ ಅವರ ಬಡ್ಡಿ ಅಲ್ಲಿಗೇ ನಿಲ್ಲುವ ಹಾಗೆ ಕಂಡು ಬಂದ ಪ್ರಸಂಗದಲ್ಲಿ ಆ ಮನೆಯವಳೇ ಆದ ಈಗ ವಿವಾಹಿತಳಾದ ಈ ಹೆಣ್ಣುಮಗಳಿಗೆ ಅವರ ಗುಡಿಯ ಜವಾಬ್ದಾರಿಯನ್ನು ಕೊಡುತ್ತಾರೆ. ಗುಡಿಯ ಜವಾಬ್ದಾರಿಯನ್ನು ತೆಗೆದುಕೊಂಡರೂ ಇವಳದು ಕೋಟೆನವರ ಬೆಡಗು ಆಗುವುದಿಲ್ಲ. ಅವಳ ಗಂಡನ ಮನೆಯ ಬೆಡಗೇ ಅವಳಿಗೆ ಉಳಿಯುತ್ತದೆ. ಅವಳಿಗೆ ಗುಡಿಯ ಜವಾಬ್ದಾರಿ ಗುರುಸ್ಥಾನವನ್ನು ಒಪ್ಪಿಸುವಾಗ ಅಧಿಕಾರದ ಸಂಕೇತವಾಗಿ ಕಂಬಳಿಯನ್ನು ಕೊಟ್ಟಿರುತ್ತಾರೆ. ಹೀಗಾಗಿ ಇವರನ್ನು ಕೊಟ್ಟ ಕಂಬಳಿಯವಳು ಎಂದು ಕರೆಯುತ್ತಾರೆ. ಮನೆತನದ ಆಸ್ತಿಯೊಂದು ಅನ್ಯರ ಪಾಲಾಗಬಾರದೆಂಬ ಕಾರಣದಿಂದ ಮಾಡಿಕೊಂಡ ಒಡಂಬಡಿಕೆ ಇದಾದ್ದರಿಂದ ಇವಳಿಗೆ ಇಂಥದೊಂದು ಸೌಲಭ್ಯವೊದಗಿರುತ್ತದೆಯೇ ಹೊರತು ತಮ್ಮ ಹೆಣ್ಣು ಮಗಳಿಗೆ ಕೊಡಬೇಕಾದ ಪಾಲದು ಎನ್ನುವಂಥ ಪ್ರಗತಿಪರ ಧೋರಣೆ ಇಲ್ಲಿ ಇದ್ದಂತಿಲ್ಲ. ಆದರೂ ತಮ್ಮ ಮನೆಯ ಹೆಣ್ಣುಮಗಳಿಗೆ ಆದಾಯದ ಮೂಲವೊಂದನ್ನು ಒದಗಿಸುವ ಇಂಥ ಆಚರಣೆಯಲ್ಲಿರುವ ಉದಾರತೆಯನ್ನು ಮೆಚ್ಚಬೇಕು.

ಚೆಂದಾಳ ಗೊಂಬಿ

ಸಮಾಜದ ಇತರ ಜಾತಿ ಜನಾಂಗಗಳಲ್ಲಿ ಇರುವಂತೆ ಕುರುಬರಲ್ಲಿಯೂ ಮದುವೆ ಎಂಬ ದೀರ್ಘ ಪ್ರಕ್ರಿಯೆಯು ಬೆಡಗು ಕಂಕಣ  ಹೊಂದಾಣಿಕೆಯಾಗುವಂತಾದರೆ, ಕನ್ಯೆ ನೋಡುವ ಶಾಸ್ತ್ರದೊದಿಗೆ ಪ್ರಾರಂಭವಾಗುತ್ತದೆ. ಈ ಶಾಸ್ತ್ರ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಆಳವಾಗಿ ಬೇರೂರುವಂತೆ ಮಾಡುವ ಇನ್ನೊಂದು ತಂತ್ರ. ಯಾಕೆಂದರೆ ಮಹಿಳೆೆಯಾದವಳು ಇಲ್ಲಿ ಒಂದು ವಸ್ತು ವಾಗಿ, ಅವಳನ್ನು ಮದುವೆಯಾಗಬೇಕಾದವನು ಆ ವಸ್ತುವಿನ ಗುಣಲಕ್ಷಣಗಳನ್ನು ನೋಡಿ ಆಯ್ಕೆ ಮಾಡುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಆಯ್ಕೆ ಯ ಸ್ವಾತಂತ್ರ್ಯ ಇಲ್ಲಿಗೆ ಗಂಡಿಗೆ ಮಾತ್ರ ಎನ್ನುವುದು ಎದ್ದು ಕಾಣುವ ಅಂಶ. ಅದೂ ಅಲ್ಲದೆ ಬಾಹ್ಯರೂಪ/ಚೆಲುವು ಆಯ್ಕೆಯ ಪ್ರಮುಖ ಮಾನದಂಡ. ಉಳಿದ ಅಂಶಗಳಾದ ಮನೆತನದ ಸ್ಥಾನಮಾನ, ಹುಡುಗಿಯ ಗುಣಸ್ವಭಾವ ನಂತರದ ಸ್ಥಾನದಲ್ಲಿರುತ್ತವೆ. ಹುಡುಗಿ  ಚೆಂದಾಳಗೊಂಬಿ ಆಗ್ಯಾಳ ಎಂದು ಅವಳ ದೇಹಸಿರಿಯನ್ನು ಗ್ರಹಿಸುತ್ತಾರೆಯೇ ಹೊರತು ಅವಳೊಳಗಿರುವ ಮನಸ್ಸನ್ನು ಯಾರೂ ನೋಡುವ ಗೋಜಿಗೆ ಹೋಗುವುದಲ್ಲ. ಹೀಗಾಗಿ ಕನ್ಯೆಯರು ಚೆಂದಾಳ ಗೊಂಬಿಯಾಗಬೇಕಾದ ಒತ್ತಡದಲ್ಲಿ ಸಿಲುಕುತ್ತಾರೆ. ಇಂಥದೊಂದು ಮಾನಸಿಕ ಸ್ಥಿತಿ ಹಳ್ಳಿಯ ಹುಡುಗಿ ಪಟ್ಟಣದ ಹುಡುಗಿ ಎನ್ನದೆ ಎಲ್ಲರಲ್ಲಿಯೂ ಇರುವುದರಿಂದ ಪಟ್ಟಣ ಪ್ರದೇಶಕ್ಕೆ ಸೀಮಿತವಾಗಿದ್ದ ಸೌಂದರ್ಯವರ್ಧಕಗಳು ಇಂದು ಗ್ರಾಮಪ್ರದೇಶದಲ್ಲೂ ಪ್ರವೇಶಪಡೆದಿವೆ.

ಸಿದಗಿ ತಗ್ಗು

ಕನ್ಯೆಯಾದವಳು ಈ ಪರೀಕ್ಷೆಯ ಸಮಯದಲ್ಲಿ ಅನೇಕ ಅಗ್ನಿಕುಂಡಗಳನ್ನು ದಾಟಬೇಕಾಗುತ್ತದೆ. ಕನ್ಯೆ ನೋಡಲು ಬಂದವರು ಹೆಣ್ಣು ಗಂಡು ಎಂಬ ಭೇದವಿಲ್ಲದೆ ಅವಳನ್ನು ಪರೀಕ್ಷಿಸುವ ಕೆಲಸದಲ್ಲಿ ನಿರತರಾಗುತ್ತಾರೆ. ಗ್ರಾಮೀಣ ಪರಿಸರದಲ್ಲಿ ಈ ರೀತಿಯ ಸೂಕ್ಷ್ಮ ಅವಲೋಕನ ಇನ್ನೂ ಜೀವಂತವಾಗಿಯೇ ಇದೆ. ಮೊದಲನೆಯದಾಗಿ ಕನ್ಯೆಯ ಬೈತಲೆ ಭಾಗವನ್ನು ನೋಡುತ್ತಾರೆ. ಅಲ್ಲಿ ಸುಳಿ ಇದ್ದರೆ ಅಂಥವಳಿಗೆ ಇದಿರು ಸುಳಿ ಯವಳು ಎಂದು ಹಣೆಪಟ್ಟಿ ಹಚ್ಚುತ್ತಾರೆ. ಎಲ್ಲರೊಂದಿಗೆ ವಾದಿಸುವ ಸ್ವಭಾವದವಳು ಇವಳು ಎಂದು ತೀರ್ಮಾನಿಸುತ್ತಾರೆ. ಎದೆಯ ಭಾಗದಲ್ಲಿ ಸ್ತನಗಳು ಕೂಡುವ ಜಾಗೆಯಲ್ಲಿ ಆಳವಾದ ತಗ್ಗು ಬಿದ್ದಿದ್ದರೆ ಅವಳು ಪರೀಕ್ಷೆಯ ಫೇಲಾದಂತೆಯೇ ಯಾಕೆಂದರೆ ಆ ತಗ್ಗನ್ನು ಅವರು ಸಿದಗಿ ತಗ್ಗು ಎಂದು ಭಾವಿಸುತ್ತಾರೆ. ಇಂಥ ಸಿದಗಿ ತಗ್ಗಿನವಳನ್ನು ಮದುವೆಯಾದರೆ ಅವಳ ಗಂಡನ ಆಯುಷ್ಯ ಕಡಿಮೆ ಎಂಬ ನಂಬಿಕೆಯಿದೆ.

ಆದರೆ ಕನ್ಯೆಯ ಕಾಲುಂಗರ ಬೆರಳು ಉದ್ದವಿದ್ದರೆ ಅವಳ ಆಯ್ಕೆ ಖಚಿತ. ಯಾಕೆಂದರೆ ಮುತ್ತೈದಿತನದ ಸಂಕೇತವಾದ ಕಾಲುಂಗುರದ ಬೆರಳು ಅದಾಗಿರುತ್ತದೆ. ಕನ್ಯೆ ಪಾದವೂರಿ ನಿಂತರೆ ಅವಳ ಪಾದದ ಮುಂಭಾಗ ಹಾಗೂ ಹಿಂಭಾಗ ನೆಲ್ಲಕ್ಕೆ ತಾಕಿ, ಪಾದದ ನಡುವಿನ ಭಾಗ ನೆಲಕ್ಕೆ ಹತ್ತದಿದ್ದರೆ ಅವಳನ್ನು ಕುರದುರೆಗಾಲಿನವಳು ಎಂದು ಕರೆಯುತ್ತಾರೆ. ಯಾಕೆಂದರೆ  ಇಂಥವಳ ಕಾಲು ಒಂದೆಡೆ ನಿಲ್ಲುವುದಿಲ್ಲ. ಅಂದರೆ ಅವಳ ನಡತೆ ಸರಿಯಿರುವುದಿಲ್ಲ ಎಂದು ಭಾವಿಸಿರುತ್ತಾರೆ. ಕನ್ಯೆಯಾದವಳ ಹಿಂಬಡ ಕೂಡ ಇಲ್ಲಿ ಗಣನೆಗೆ ಬರುತ್ತದೆ. ಕನ್ಯೆಯ ಹಿಂಬಡ ಸಣ್ಣವಿರಬೇಕೆಂದು ನಿರೀಕ್ಷಿಸುತ್ತಾರೆ. ದಪ್ಪ ಹಿಮ್ಮಡವಿದ್ದರೆ ಅವಳ ಆಯ್ಕೆ ಅಸಾಧ್ಯ. ಯಾಕೆಂದರೆ ದಪ್ಪಹಿಂಬಡದವರನ್ನು ರಂಡ ಹಿಂಬಡ ದವರು ಎಂದೇ ಕರೆಯುತ್ತಾರೆ. ಇಂಥ ಹಿಂಬಡದವಳನ್ನು ಮದುವೆಯಾದರೆ ಅವಳ ಗಂಡನಿಗೆ ಸಾವು ಬೇಗನೆ ಬರಲಿದೆ ಎಂದರ್ಥ. ದೇಹದ ರಚನೆಯ ಮೇಲೆ ಕನ್ಯೆಯನ್ನು ಆಯ್ಕೆ ಮಾಡುವ ಹಾಗು ನಿರಾಕರಣೆ ಮಾಡುವ ಮೂಢನಂಬಿಕೆ ಆಧಾರಿತ ಈ ನಿಲುವುಗಳು ಅರ್ಥಹೀನ ಹಾಗು ಇದನ್ನ  ನಂಬುವ ಸಮಾಜ ನಿರ್ದಯಿಯಾದ ಸಮಾಜವೇ ಸರಿ.

ಇತ್ತೀಚೆಗೆ ಇಂಥ ನಂಬಿಕೆಗಳು ಕಡಿಮೆಯಾಗುತ್ತ ಬರುತ್ತವೆ. ಕನ್ಯೆದಾಟವಬೇಕಾದ ಅಗ್ನಿಕುಂಡಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆ.

ಮಾತುಕತೆ

ಕನ್ಯೆ ಒಪ್ಪಿಗೆಯೆಂದಾದರೆ ಮುಂದಿನ ಹೆಜ್ಜೆ ಮಾತುಕತೆ ಯದ್ದು. ಈ ಮಾತುಕತೆಯ ಪ್ರಮುಖ ಮಾತು ವರದಕ್ಷಿಣೆಗೆ ಸಂಬಂಧ ಪಟ್ಟಿದ್ದು. ಅನ್ಯ ಸಮಾಜಗಳಲ್ಲಾಗಿರುವಂತೆ ವರದಕ್ಷಿಣೆ ಕುರುಬರಲ್ಲಿಯೂ ವರನ ಹಾಗು ವರನ ಕುಟುಂಬದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ವಿಷಾದದ ಸಂಗತಿಯೆಂದರೆ ವರನ ಮನೆಯ ಮಹಿಳೆಯರೂ ಪ್ರತಿಷ್ಠೆಯ ಪಾಲುದಾರರಾಗುತ್ತಿರುವುದು. ವರದಕ್ಷಿಣೆಯೆಂಬುದು ಮಾರುಕಟ್ಟೆಯ ನಿಯಮವನ್ನೇ ಬುಡಮೇಲು ಮಾಡುತ್ತದೆ. ವಸ್ತುವನ್ನು ಕೊಂಡು ಕೊಳ್ಳುವವನೇ ನಾನು ವಸ್ತುವನ್ನು ಕೊಂಡರೆ ನನಗೆ ನೀವು ಇಂತಿಷ್ಟು ಬೆಲೆ ಕೊಡಬೇಕು ಎನ್ನುತ್ತಾನೆ. ಇಂಥ ವಿಪರ್ಯಾಸ ಮದುವೆ ಮಾರುಕಟ್ಟೆಯಲ್ಲಿ ಮಾತ್ರ ಸಾಧ್ಯ !

ಈ ಪ್ರಬಂಧದ ಪ್ರಾರಂಭದಲ್ಲಿ ಪುರುಷ ಮಹಿಳೆಯರ ಅನುಪಾತದಲ್ಲಿ ವೈಪರೀತ್ಯ ಉಂಟಾಗುತ್ತಿರುವುದನ್ನು ಗಮನಿಸಿದ್ದೇವೆ. ಈ ಅನುಪಾತ ವೈಪರೀತ್ಯ ಹೀಗೆ ಮುಂದುವರಿದರೆ ಮದುವೆಯಾಗುವ ಹುಡುಗರಿಗೆ ಕನ್ಯೆಯರು ದೊರೆಯುವುದೇ ದುರ್ಲಭವಾಗಬಹುದು. ಆಗ ತೆರಕೊಟ್ಟು ಮದುವೆಯಾಗುವ ಪ್ರಸಂಗ ಬಂದರು ಬರಬಹುದು. ಇವೆಲ್ಲಕ್ಕಿಂತಲೂ ಪ್ರಮುಖವಾದ ಅಂಶವೆಂದರೆ ಕುರುಬ ಸಮಾಜವನ್ನು ಚಿಂತೆಗೀಡು ಮಾಡಬೇಕಾದ ಮಹಿಳೆಯರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು.

ಭಾಟಗಿ

ಮಾತುಕತೆ ಮುಗಿದ ನಂತರ ಕುಂಕುಮ ಕಾರಣ, ಇಳೇಕಾರಣ, ನಿಶ್ಚಯ ಕಾರಣ, ಭಾಟಗಿ ಹಾಕುವುದು ಇತ್ಯಾದಿ ಹೆಸರುಗಳಿಂದ ಕರೆಯಿಸಿಕೊಳ್ಳುವ ಕಾರಣವನ್ನು ಮಾಡುತ್ತಾರೆ. ಅಂದು ಮದುವೆಯಾಗಲಿರುವ ಹುಡುಗಿಗೆ ಗಂಡಿನ ಕಡೆಯವರು ಒಂದು ಕೆಂಪು ಸೀರೆ ಉಡಿಸುತ್ತ್ತಾರೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ಮದುವೆಯಾಗಲಿರುವ ಹುಡುಗಿಯ ಜೊತೆಗೆ ಅವಳ ತಂಗಿಯನ್ನು ಇಲ್ಲವೆ ಅವಳ ಕಾಕಾ ದೊಡ್ಡಪ್ಪನ ಮಗಳನ್ನೋ ಕೂಡಿಸಿ ಅವಳಿಗೂ ಉಡಿ ತುಂಬುತ್ತಾರೆ. ಈ ತಂಗಿ ಯ ಪ್ರವೇಶ ಇಲ್ಲೇಕೆ ಎಂದು ಸೋಜಿಗವಾಗದಿರಲಾರದು. ಒಂದು ವೇಳೆ ಅಕ್ಕ ಎನ್ನಿಸಿಕೊಂಡವಳು ಮದುವೆ ಪೂರ್ವದಲ್ಲಿ ಅಕಾಲ ಮೃತ್ಯುವಿಗೆ ತುತ್ತಾದರೆ ಈ ತಂಗಿಯೇ ಸೊಸೆಯಾಗಿ ಬರಲಿ ಎನ್ನುವ ದೂರಾಲೋಚನೆ ಆಚರಣೆಯ ಹಿಂದೆ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ.

ಈ ಸನ್ನಿವೇಶದ ತಿರುವು ಮುರುವಿನ ಚಿತ್ರದ ಹಾಗೆ ಕಾಣುವ ಆಚರಣೆಯೊಂದು ಭಟ್ಕಳದ ಗೊಂಡರಲ್ಲಿ ಇದೆ. ಗೊಂಡರಲ್ಲಿ ಮದುವೆ ಕಡ್ಡಾಯವಾಗಿ ವಧುವಿನ ಮನೆಯಲ್ಲಿಯೇ ಜರುಗುತ್ತದೆ. ಮದುವೆಗೆ ಒಂದು ದಿವಸ ಮುಂಚಿತವಾಗಿಯೇ ವರನೊಂದಿಗೆ ವಧುವಿನ ಮನೆಗೆ ಬಂದ ಮುತ್ತೈದೆಯರು ವಧುವಿಗೆ ಹೂವು ಮುಡಿಸುತ್ತಾರೆ. ಈ ಸಂದರ್ಭದಲ್ಲಿಯೇ ವರನ ತಮ್ಮ ಇಲ್ಲವೆ ಅಣ್ಣನಾದವನು ವಧುವಿನ ಕೈಬೆರಳಿಗೆ ಉಂಗುರ ತೊಡಿಸುತ್ತಾನೆ. ಆಗ ವಧು ಮುಷ್ಠಿ ಬಿಗಿ ಹಿಡಿದು ಅದನ್ನು ಪ್ರತಿರೋಧಿಸುತ್ತಾಳೆ. ಆದರೂ ಒತ್ತಾಯ ಪೂರ್ವಕವಾಗಿ ಅವಳ ಗಂಡನಾಗಲಿರುವವನ ಎದುರಿನಲ್ಲಿಯೇ ಅವಳಿಗೆ ಉಂಗುರ ತೊಡಿಸುತ್ತಾನೆ. ಗಂಡನಾದವನು ಅಕಾಲಮೃತ್ಯುವಿಗೆ ತುತ್ತಾದರೆ ಅವಳನ್ನು ಮದುವೆಯಾಗಲು ಇಲ್ಲಿನ ಸಹೋದರ ಸಿದ್ಧ ಎನ್ನುವುದನ್ನು ಈ ಆಚರಣೆ ಸೂಚಿಸುತ್ತಿರಬಹುದೇ? ಕುರುಬರಲ್ಲಿನ ಭಾಟಗಿ ಸಂದರ್ಭದ ಆಚರಣೆ ಪುರುಷ ಕೇಂದ್ರಿತವಾಗಿದ್ದರೆ, ಗೊಂಡರಲ್ಲಿನ ಈ ಆಚರಣೆ ಸ್ತ್ರೀ ಕೇಂದ್ರಿತವಾಗಿರುವುದು ಸ್ಪಷ್ಟ ಒಳಕಲ್ಲು ಪೂಜೆ.

ಮದುವೆ ಪ್ರಕ್ರಿಯೆ ಸಂಭ್ರಮದ ಘಟ್ಟ ತಲುಪುವುದು ಒಳಕಲ್ಲು ಪೂಜೆಯೊಂದಿಗೆ. ಒಂದೊಮ್ಮೆ ಈ ಪೂಜೆ ಪ್ರಾರಂಭವಾಯಿತೆಂದರೆ ಮದುವೆಯ ಸಂಪೂರ್ಣ ಪ್ರಕ್ರಿಯೆ ಮುಗಿಯುವವರೆಗೆ ಮಹಿಳೆಯರದ್ದೇ ಪ್ರಮುಖ ಪಾಲು. ಗಂಡಸರದ್ದು ಏನಿದ್ದರೂ ಹೊರಗಿನ ಉಸ್ತುವಾರಿಗೆ ಸೀಮಿತ. ಒಳಕಲ್ಲು ಪೂಜೆಯೆಂದರೆ ಮುತ್ತೈದೆಯರೆಲ್ಲ ಸೇರಿ ಹಾಡು ಹೇಳುತ್ತ ವರ ಮನೆಯೊಳಗಿರುವ ಒಳಕಲ್ಲು, ರುಬ್ಬುಕಲ್ಲು, ವಣಕೆ, ಹಾಗೂ ಬೀಸು ಕಲ್ಲು ಗೂಟಗಳಿಗೆ ಅರಿಷಿಣ ಬೋಟ ಹಾಗೂ ಎಲೆಗಳನ್ನು ಕಟ್ಟಿ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ. ಒಂದೆಡೆ ಈ ಆಚರಣೆಯು ಮದುವೆ ನಂತರದ ಗಂಡು ಹೆಣ್ಣಿನ ಮಿಲನ ಆರಾಧನೆಯಂತೆ ಗೋಚರಿಸಿದರೆ ಇನ್ನೊಂದೆಡೆಗೆ ಈ ಮನೆಗೆ ಬರಲಿರುವ ಸೊಸೆ ಅಡುಗೆ ಸಾಧನಗಳಾದ ಇದೆಲ್ಲವುಗಳೊಂದಿಗೆ ಜೀವ ತೇಯಬೇಕಾದುದನ್ನು ಸೂಚಿಸುವ ಹಾಗೆ ತೋರುತ್ತದೆ.

ಸುರಗಿ ಮಗಿ

ಒಳಕಲ್ಲ ಪೂಜೆಯ ದಿವಸವೇ ಐರಾಣಿ ಕಾರ್ಯಕ್ರಮವೂ ಇರುತ್ತದೆ. ಐರಾಣಿ ಎಂದರೆ ಐದು ಗಡಿಗೆಗಳು. ಐರಾಣಿ ತರಲು ವರನ ಮನೆಯ ಮುತ್ತೈದೆಯರು ಆ ಊರಿನ ಕುಂಬಾರನ ಮನೆಗೆ ಹೋಗುತ್ತಾರೆ. ಕುಂಬಾರನ ಮನೆಯಿಂದ ಮೆರವಣಿಗೆಯಲ್ಲಿ ತಂದ ಈ ಐದು ಗಡಿಗೆಗಳಲ್ಲಿ ದವಸಧಾನ್ಯಗಳನ್ನು ತುಂಬಿಸಿಡುತ್ತಾರೆ. ಕುರುಬ ಜನಾಂಗದವರು ತಮ್ಮ ಮದುವೆಯಲ್ಲಿ ಐರಾಣಿಯ ಜೊತೆಗೆ ಐದು ಸುರಗಿಮಗಿಗಳನ್ನು ತರುತ್ತಾರೆ. ಅವುಗಳಲ್ಲಿನ ಒಂದು ಮಗಿಯನ್ನು ಹಾಲಗಂಬದ ಮೇಲಿಡುತ್ತಾರೆ. ಉಳಿದ ನಾಲ್ಕು ಮಗಿಗಳನ್ನು ಮದುಮಕ್ಕಳಿಗೆ ಅರಿಷಿಣ ಹಚ್ಚುವ ಸಂದರ್ಭದಲ್ಲಿ ಮದುಮಕ್ಕಳನ್ನು ಮಧ್ಯದಲ್ಲಿ ಕೂಡ್ರಿಸಿ ನಾಲ್ಕೂ ಮೂಲೆಗಳಲ್ಲಿ ಇಡುತ್ತಾರೆ. ಈ ಸುರಗಿ ಮಗಿಗಳಿಗೆ ನೂಲು ಸುತ್ತುತ್ತಾರೆ. ಹೀಗೆ ಸುರಗಿ ಸುತ್ತಿದ ದಾರ/ನೂಲಿನಿಂದಲೇ ಮದುಮಕ್ಕಳು ಹಾಗೂ ಅವರ ಹಿಂದೆ ಕುಳಿತವರಿಗೆ ಕಂಕಣ ಕಟ್ಟುತ್ತಾರೆ.

ಮೂಗುತಿ ನೀರು

ನಾಲ್ಕು ಸುರಗಿ ಮಗಿಗಳ ಮಧ್ಯದಲ್ಲಿ ಮಣಿಗಳ ಮೇಲೆ ಕುಳಿತ ಮದುಮಕ್ಕಳಿಗೆ ಹಾಗೂ ಅವರ ಹಿಂದೆ ಕುಳಿತವರಿಗೆ ಅರಿಷಿಣ ಹಚ್ಚಿ. ತಲೆಗೆ ಎಣ್ಣೆ ಉಣ್ಣಿಸಿದ (ನೈಯೆಣ್ಣೆ) ಕಾರ್ಯ ಮುಗಿದ ನಂತರ ಮುತ್ತೈದೆಯರು ಇಲ್ಲಿಯೇ ಇನ್ನೊಂದು ಮಹತ್ವದ ಆಚರಣೆಯನ್ನು ಮಾಡುತ್ತಾರೆ. ಅದೇ ಮೂಗುತಿ ನೀರು ಬಿಡುವ ಕಾರ್ಯಕ್ರಮ. ಅಲ್ಲಿಯೇ ಇದ್ದ ಮುತ್ತೈದೆಯೊಬ್ಬಳಿಂದ ಮೂಗುತಿಯನ್ನು ತೆಗೆದುಕೊಂಡು ಅದನ್ನು ಕಂಚಿನ ಗಂಗಾಳಕ್ಕೆ ಹಚ್ಚಿ ಅದರ ಮೇಲೆ ನೀರು ಸುರುವುತ್ತಾರೆ. ಹಾಗೆ ಸುರುವಿದಾಗ ಬೀಳುವ ನೀರು ಮದುಮಕ್ಕಳ ಬೆನ್ನಿನ ಮೇಲೆ ಬೀಳುವ ಹಾಗೆ ಮಾಡುತ್ತಾರೆ. ಈ ಆಚರಣೆಯ ಮೂಲಕ ಮದುಮಕ್ಕಳಿಗೆ ಮುತ್ತೈದೆತನದ ಭಾಗ್ಯ ಇಳಿದು ಬರಲಿ ಎಂಬ ಸದಾಶಯವಿರುತ್ತದೆ.

ಅಜ್ಜಿಯ ಕೆಳಗೆ ಅವ್ವ, ಅವ್ವನ ಕೆಳಗೆ ಮಗಳು

 ಗೊಂಡರಲ್ಲಿ ಇಂಥದೇ ಇನ್ನೊಂದು ಅಪರೂಪದ ಆಚರಣೆಯಿದೆ. ಕುರುಬರಲ್ಲಿರುವಂತೆ ಗೊಂಡರಲ್ಲಿಯೂ ಮದುಮಕ್ಕಳಿಗೆ ಅರಿಶಿಣ ಹಚ್ಚಿ ಮೀಯಿಸುವ ಕಾರ್ಯಕ್ರಮವಿದೆ. ಆದರೆ ಗೊಂಡರು ಮದುಮಗಳಿಗೆ ಮೀಯಿಸುವ ಆಚರಣೆೆ ತುಂಬಾ ವಿಶೇಷವಾದುದಾಗಿದೆ. ಹೀಗೆ ಮೀಯಿಸುವ ಸಮಯದಲ್ಲಿ ಅಜ್ಜಿಯಾದವಳು ಗೋಣು ಬಗ್ಗಿಸಿ ನಿಂತಿರುತ್ತಾಳೆ. ಅಜ್ಜಿಯ ಕೆಳಗೆ ಮಧುವಿನ ತಾಯಿ ಅಜ್ಜಿಯ ಮಗಳು ಬೆನ್ನುಬಾಗಿಸಿ ನಿಂತಿರುತ್ತಾಳೆ. ಬಾಗಿನಿಂತ ತಾಯಿಯ ಕೆಳಗೆ ಮದುಮಗಳು ಕುಳಿತಿರುತ್ತಾಳೆ. ಅಜ್ಜಿಯ ತಲೆಯ ಮೇಲೆ ಹಾಕಿದ ನೀರು ಅವ್ವನ ತಲೆಯ ಮೇಲೆ ಹರಿದು ಮಗಳ ಮೇಲೆ ಇಳಿದು ಬರುತ್ತದೆ. ಬಹುಸ್ತರದ ಅರ್ಥವನ್ನು ಹೊರಡಿಸು ಧ್ವನಿಪೂರ್ಣ ಆಚರಣೆಯಿದು. ತಾಯ್ತನದ ಸಾತತ್ಯದ ಸಂಕೇತವೂ ಹೌದು. ಮಾತೃಮೂಲ ವ್ಯವಸ್ಥೆಯ ರೂಪಕವು ಹೌದು. ಗೋಂಡರಲ್ಲ ಬಳಿ’ ಮಹಿಳೆಯ ಮೂಲಕ ಇಳಿದು ತಲೆತಲಾಂತರ ಹರಿದು ಬರುವುದರ ನಾಟಕೀಕರಣವೂ ಹೌದು.

ಬಲದಲ್ಲಿ ಕುಳಿತುಕೊಳ್ಳಲು ಪಾರ್ವತಿಯೇ?

ಅರಿಶಿಣ ಹಚ್ಚಿಕೊಂಡು ಮೈಯೆಣ್ಣೆ ಮುಗಿಸಿಕೊಂಡು ಕಂಕಣ ಕಟ್ಟಿಕೊಂಡ ವಧುವರರು ಮದುವೆ ಬಟ್ಟೆ ಧರಿಸುತ್ತಾರೆ. ಇದಕ್ಕೆ ಶಾಸೆ ಬಟ್ಟೆ ಧರಿಸುವುದು ಎನ್ನುತ್ತಾರೆ. ಯಾಕೆಂದರೆ ಅವರು ಈ ಬಟ್ಟೆ ಧರಿಸಿಕೊಂಡು, ಮುತ್ತೈದೆಯರು ಕರಿಕಂಬಳಿಯ ಮೇಲ ಹೊಯ್ದ ಶಾಸಕ್ಕಿಯ ಮೇಲೆ ಅಕ್ಷತೆಗಾಗಿ ಬಂದು ಕುಳಿತುಕೊಳ್ಳುವವರಿರುತ್ತಾರೆ. ಇಲ್ಲಿ ಕಡ್ಡಾಯವಾಗಿ ಹೆಣ್ಣಾದವಳು ಗಂಡಿನ ಎಡಬದಿಯಲ್ಲಿಯೇ ಕುಳಿತು ಕೊಳ್ಳಬೇಕೆಂಬ ವಿಧಿಯಿದೆ. ಇಂಥದೊಂದು ವಿಧಿಯ ಮೂಲಕ ನಈನು ಎಡ, ಹೀನ ಎಂಬ ಪ್ರಜ್ಞೆಯನ್ನು ಮೂಡಿಸಲಾಗುತ್ತಿರುತ್ತದೆ.

ಗೊಂಡರ ಜಾನಪದ ಗೀತೆಯೊಂದರಲ್ಲಿ ಈ ವಿಧಿಯನ್ನು ಪ್ರಶ್ನಿಸುವ ಪ್ರಸಂಗವೊಂದರ ವರ್ಣನೆಯಿದೆ. ಮದುಮಗನ ಅಕ್ಕಳಾದವಳು ಮದುಮಗಳನ್ನು ಬಲದಲ್ಲಿ ಕೂರಿಸಿಕೊಳ್ಳಲು ತನ್ನ ತಮ್ಮನಿಗೆ ಹೇಳುತ್ತಾಳೆ. ಮದುಮಗನು ಅಕ್ಕನ ಮಾತನ್ನು ಕಡ್ಡಿಮುರಿದಂತೆ ನಿರಾಕರಿಸುತ್ತಾನೆ. ಅಷ್ಟೇ ಅಲ್ಲ, ಬಲಬದಿಗೆ ಕುಳಿತುಕೊಳ್ಳಲು ಅವಳೇನು ಪಾರ್ವತಿಯೇ ಎಂದು ಪ್ರಶ್ನಿಸುತ್ತಾನೆ. ಅದೂ ಅಲ್ಲದೆ ನನ್ನ ಬಲಬದಿಗೆ ಖಡ್ಗವೊಂದನ್ನು ಜೋತುಬಿಟ್ಟುಕೊಂಡಿದ್ದೇನೆ. ಆದ್ದರಿಂದ ಅವಳಿಗೆ ಬಲದಲ್ಲಿ ಜಾಗೆಯಿಲ್ಲ. ಅವಳೇನಿದ್ದರೂ ನನ್ನ ಎಡದಲ್ಲಿಯೇ ಕುಳಿತುಕೊಳ್ಳಲಿ ಎಂದು ಅಕ್ಕನಿಗೆ ಹೇಳುತ್ತಾನೆ.

ಗೊಂಡರಲ್ಲಿ ಪ್ರಚಲಿತವಿರುವ ಈ ಜಾನಪದ ಗೀತೆಯ ಪ್ರಸಂಗ ಗೊಂಡ ಹೆಣ್ಣು ಗಂಡಿನ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ. ಗೊಂಡರ ನಂಬಿಕೆಯ ಪ್ರಕಾರ ಹೆಂಡತಿಯಾದವಳು ಗಂಡನ ಬಲಬದಿಗೆ ಕುಳಿತುಕೊಳ್ಳುವುದು ದೇವಲೋಕದಲ್ಲಿ ಮಾತ್ರ. ಮರ್ತ್ಯಲೋಕದಲ್ಲಿ ಹಾಗೆ ನಿರೀಕ್ಷಿಸುವುದು ದೇವತೆಗಳಿಗೆ ಅವಮಾನ ಮಾಡಿದಂತೆ. ಅಷ್ಟೇ ಅಲ್ಲ ಹೆಣ್ಣಾದವಳು ಬಲಕ್ಕೆ ಬರುವ ಯೋಚನೆ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆ ಎಂದು ಎಚ್ಚರಿಸುವ ಧ್ವನಿಯೂ ಇಲ್ಲಿದೆ. ತನ್ನ ಬಲಭಾಗದಲ್ಲಿ ಬಾಕು ಇದೆ ಎಂದು ಹೇಳುವ ಅವನ ಮಾತಿನಲ್ಲಿ ಈ ಧ್ವನಿಯನ್ನು ಗುರುತಿಸಬಹುದಾಗಿದೆ.

ಒಟ್ಟಾರೆ ಹೆಣ್ಣಾದವಳು ತನಗೆ ಈಗಿರುವ ಸೌಲಭ್ಯಗಳಿಗಿಂತ ಹೆಚ್ಚಿನದೇನನ್ನು ನಿರೀಕ್ಷಿಸಕೂಡದು ಎಂದು ಎಚ್ಚರಿಸಲು ಇಂಥ ಕಥನಗಳು ಹುಟ್ಟಿಕೊಂಡಿರುತ್ತವೆ ಎಂಬುದನ್ನು ಗಮನಿಸಬೇಕು. ಆಚರಣೆಗಳ ಬೇರು ಹಿಡಿದುಕೊಂಡು ಹೋದರೆ ಮಾತೃಮೂಲಕ್ಕೆ ಒಯ್ದು ನಿಲ್ಲಿಸುವ ಗೊಂಡರೂ ವ್ಯವಹಾರಿಕ ನೆಲೆಯಲ್ಲಿ ಅನ್ಯಸಮಾಜದ ಪುರುಷರಿಗಿಂತ ಭಿನ್ನವಾಗಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಾರೆ.

ಬ್ರಹ್ಮಗಂಟು

ಶಾಸೆ ಕಂಬಳಿಯ ಮೇಲೆ ವಧುವರರು ಬಂದು ಕುಳಿತುಕೊಳ್ಳುವ ಹೊತ್ತಿಗೆ ಆ ಶಾಸೆ ಎದುರಿಗೆ ಪಂಚಕಳಸ ಹೂಡಿರುತ್ತಾರೆ. ಆಗ ಮದುವೆಯ ಶಾಸ್ತ್ರ ನಡೆಯಿಸಿಕೊಡಲು ಬಂದ ಕುರುಬರ ಗುರು ಒಡೆಯರು ಇಲ್ಲವೆ ಜಂಗಮ ಸ್ವಾಮಿಗಳು ವರನ ಮೈಮೇಲೆ ಹಾಕಿಕೊಂಡ ಶೆಲ್ಲೆಗೆ ಹಾಗೂ ವಧುವಿನ ತಲೆಮೇಲೆ ಇರುವ ಮೇಲುಮುಸುಕಿಗೆ ಮೂರು ಗಂಟು ಹಾಕುತ್ತಾರೆ. ಇದಕ್ಕೆ ಬ್ರಹ್ಮಗಂಟು ಎಂದು ಕರೆಯುತ್ತಾರೆ. ಹೀಗೆ ಗಂಟು ಹಾಕುವಾಗ ಅದರಲ್ಲಿ ಐದು ತೆರನಾದ ಧಾನ್ಯಗಳನ್ನು ಇಟ್ಟಿರುತ್ತಾರೆ. ಈ ಗಂಟು ಕುರುಬ ಮದುಮಗಳಿಗೆ ಬಿಡಿಸಿಕೊಳ್ಳಲಾಗದ ಬಂಧನದ ಸಂಕೇತವೂ ಹೌದು. ಒಂದಿಷ್ಟು ಪ್ರಮಾಣದ ಭದ್ರತೆಯ ಸಂಕೇತವು ಹೌದು. ಮದುವೆಯಾದ ಗಂಡು ಎಂಥವನೇ ಇರಲಿ ಅವನೊಂದಿಗೆ ಹೊಂದಿಕೊಂಡು ಹೋಗಲೇಬೆಕಾದ ಅನಿವಾರ್ಯತೆಯನ್ನು ಈ ವಿಧಿಯ ಮೂಲಕ ಬಿಂಬಿಸಲಾಗುತ್ತದೆ. ಈ ವಿಧಿಯೊಂದಿಗೆ ಅಯಾಚಿತವಾಗಿ ಕುರುಬ ಮಹಿಳೆಗೆ ಭದ್ರತೆಯೂ ಒದಗಿ ಬಂದಿರುತ್ತದೆ. ಯಾಕೆಂದರೆ ಗಂಡು ಹೆಣ್ಣು ಭೇದವಿಲ್ಲದೆ ಈ ಬ್ರಹ್ಮಗಂಟಿನ ಮೇಲೆ ಅಪಾರವಾದ ಶ್ರದ್ಧೆಯಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಕುರುಬ ವಿವಾಹಿತ ಮಹಿಳೆ ಸಣ್ಣಪುಟ್ಟ ಕಾರಣಗಳಿಗಾಗಿ ಸಂಭವಿಸುವ ವಿಚ್ಛೇದನದ ತೂಗು ಕತ್ತಿಯ ಬೆದರಿಕೆಯಲ್ಲಿ ಬದುಕಬೇಕಾಗಿಲ್ಲ. ಹೀಗಾಗಿ ಕುರುಬರಲ್ಲಿ ವಿವಾಹ ವಿಚ್ಛೇದನದ ಸನ್ನಿವೇಶಗಳು ಅಪರೂಪ. ಅಂದಮಾತ್ರಕ್ಕೆ ಕುರುಬ ವಿವಾಹಿತ ಮಹಿಳೆ ನೆಮ್ಮದಿಯಿಂದ ಇದ್ದಾಳೆಂದೂ ಭಾವಿಸಬೇಕಾಗಿಲ್ಲ.

ಮಸೂಟ

ಮದುವೆಯ ಆಚರಣೆಯ ಕೊನೆಯ ಚರಣದಲ್ಲಿ ಮಸೂಟ ಮೆರವಣಿಗೆ ಕಾರ್ಯಕ್ರಮವಿರುತ್ತದೆ. ಕೆಲವೊಂದು ಭಾಗದಲ್ಲಿ ಇದಕ್ಕೆ  ಸುರಗಿ ಕಾರ್ಯಕ್ರಮವೆಂದೂ ಕರೆಯುತ್ತಾರ. ಕುರುಬರಲ್ಲಿ ಸಾಮಾನ್ಯವಾಗಿ ವರನ ಮನೆಯಲ್ಲಿಯೇ ವಿವಾಹವಾಗುತ್ತವೆ. ಇಲ್ಲವೆ ವರನ ಕಡೆಯವರು ಗುಡಿಗುಂಡಾರ ಇಲ್ಲವೆ(ಇತ್ತೀಚೆಗೆ) ಕಲ್ಯಾಣ ಮಂಟಪಗಳಲ್ಲೂ ವಿವಾಹ ನೆರವೇರಿಸಿಕೊಡಲಾಗುತ್ತದೆ. ಹೀಗಾಗಿ ಮದುವೆ ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲಿ ವರನ ಕಡೆಯವರದ್ದೇ ದರ್ಬಾರು ನಡೆದಿರುತ್ತದೆ. ಮಸೂಟದ ಮೆರವಣಿಗೆ ಕಾರ್ಯಕ್ರಮ ಬರುತ್ತಿದ್ದಂತೆ ಹೆಣ್ಣಿನ ಕಡೆಯವರಲ್ಲಿ ಸಂಚಲವುಂಟಾಗುತ್ತದೆ. ಯಾಕೆಂದರೆ ಹೆಣ್ಣಿನ ಕಡೆಯವರಿಗೆ ತಮ್ಮ ಪ್ರತಿಷ್ಠೆಯನ್ನು ತೋರ್ಪಡಿಸುವ ಬಹುದೊಡ್ಡ ಅವಕಾಶ ಇಲ್ಲಿರುತ್ತದೆ. ಇಂದು ನಗರ ಪ್ರದೇಶದಲ್ಲಿ ಸುರಗಿಯಲ್ಲಿ ಕಾಟು, ಗಾದಿ, ಖುರ್ಚಿ, ಟ್ರೆಜರಿ, ಫ್ರಿಜ್‌ಗಳೇ ಸುರಗಿಯ ಪ್ರಮುಖ ಅಕರ್ಷಣೆಯಾಗಿವೆಯಾದರೂ ಮೂಲದಲ್ಲಿ ಅದು ಹೆಣ್ಣಿನ ಕಡೆಯವರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಪ್ರತಿಷ್ಠೆಯ ಪ್ರದರ್ಶನದ ಕಣವಾಗಿತ್ತು. ಹೆಣ್ಣಿನ ಮನೆಯವರ ಆಹಾರ ಪದ್ಧತಿ ಹಾಗೂ ಕಲಾವಂತಿಕೆಯ ಮೇಲೆ ಈ ಮಸೂಟ ಬೆಳಕು ಚೆಲ್ಲುವಂಥದ್ದಾಗಿದೆ. ಹೀಗಾಗಿ ಹೆಣ್ಣಿನ ಕಡೆಯವರು ಮದುವೆಗೆ ಪೂರ್ವದಲ್ಲಿಯೇ ತಮ್ಮ ಆಹಾರ ಪದ್ಧತಿಯ ಶ್ರೇಷ್ಠತೆಯನ್ನು ಬಿಂಬಿಸುವ ಸಿಹಿ ಪದಾರ್ಥಗಳನ್ನು ಕರ್ಚಿಕಾಯಿ, ಸುರಳಿ ಹೋಳಿಗೆ, ಇತ್ಯಾದಿ ತಯಾರಿಸಿಟ್ಟುಕೊಂಡಿರುತ್ತಾರೆ. ತಮ್ಮಲ್ಲಿರುವ ಕಲಾಕೌಶಲವನ್ನು ಬಿಂಬಿಸುವಂತೆ ಕಸೂತಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ಸುಂದರವಾದ ಗಿಳಿಗಳ, ನವಿಲುಗಳ, ತೇರುಗಳ, ದೇವರುಗಳ ಚಿತ್ರವನ್ನು ಕಸೂತಿ ಬಟ್ಟೆಯ ಮೇಲೆ ಬಿಡಿಸಿರುತ್ತಾರೆ. ಒಟ್ಟಾರೆ ಹೆಣ್ಣಿನ ಕಡೆಯವರ ಉಪಭೋಗ್ಯತೆ ಹಾಗೂ ಕಲಾವಂತಿಕೆ ಎರಡನ್ನೂ ಬಿಂಬಿಸುವ ಈ ಮಸೂಟದ ಬಗೆಗೆ ಹೆಣ್ಣಿನ ಕಡೆಯ ಮಹಿಳೆಯರು ಬಹಳ ಜಾಗರೂಕರಾಗಿರುತ್ತಾರೆ. ಮೇಲಾಗಿ ಈ ಮಸೂಟ ಊರಲ್ಲಿ ಮೆರವಣಿಗೆಯಾಗಿ ಬರುತ್ತದೆಯಾದ್ದರಿಂದ ಹೆಣ್ಣಿನ ಮನೆತನ ಸಂಸ್ಕಾರವನ್ನು ಊರವರು ಈ ಮಸೂಟದ ಆಧಾರದ ಮೇಲೆಯೇ ಅಳೆಯುತ್ತಿರುತ್ತಾರೆ. ಮೇಲೆ ಹೇಳಿದ ವಸ್ತುಗಳಲ್ಲದೆ ಮಸೂಟದಲ್ಲಿ ಕೊಡಕ್ಕೆ ಮಹತ್ವದ ಸ್ಥಾನವಿದೆ. ಮದುಮಗಳ ಸಹೋದರಿ, ಚಿಕ್ಕವ್ವ, ದೊಡ್ಡವ್ವ ಈ ಕೊಡವನ್ನಿ ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿರುತ್ತಾರೆ. ಇದಕ್ಕೆ ಸುರಗಿ ಕೊಡ ಎಂದು ಕರೆಯುತ್ತಾರೆ. ತವರು ಮನೆಯವರು ತಮ್ಮ ಮಗಳಿಗೆ ಕೊಡುತ್ತಿರುವ ಹಲವಾರು ದೈನಂದಿನ ಬಳಕೆಯ ಮಹತ್ವದ ವಸ್ತುಗಳಲ್ಲಿ ಇದೂ ಒಂದು. ಸುರಗಿ ಕೊಡ ಹೊತ್ತ ಮಹಿಳೆಗೆ ಮೆರವಣಿಗೆ ಮುಗಿದ ನಂತರ ಗಂಡಿನ ಕಡೆಯವರು ಸೀರೆ ಉಡುಗೊರೆ ಕೊಡುತ್ತಾರೆ.

ಹಾದಿಬೀದಿ ಮುಗಿಸುವುದು

ಬೀದರದ ಗೊಂಡರು ಮದುವೆಯಾದ ತಮ್ಮ ಮಗಳು ಐದು ದಿವಸದೊಳಗಾಗಿ ಹಾದಿಬೀದಿ ಮುಗಿಸಲೇಬೇಕು ಎನ್ನುತ್ತಾರೆ. ಬೀದಿಯನ್ನು ಮುಗಿಸುವುದೆಂದರೆ ಲಗ್ನವಾದ ಮದುಮಕ್ಕಳನ್ನು ಗಂಡನ ಊರಿನ ಬೀದಿಯಲ್ಲಿ ಮೆರೆಯಿಸುತ್ತ ದೇವರ ಗುಡಿಗೆ ಕರೆದುಕೊಂಡು ಹೋಗಿ ಬರುವುದು. ಹಾದಿ ಮುಗಿಸುವುದೆಂದರೆ ಮದುವೆಯಾದ ಮಗಳು ಗಂಡನ ಮನೆಯ ಹಾದಿ ಯನ್ನು ಕ್ರಮಿಸುವುದು. ಕೊಟ್ಟ ಹೆಣ್ಣು ಕುಲಕ್ಕೆ ಹೊರತು ಎನ್ನುವ ಮಾತಿನಂತೆ ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ.

ಹೊಸ್ತಿಲಲ್ಲಿ ಮೊಳೆ

ಮದುವೆಯಾಗಿ ಮೊದಲ ಬಾರಿಗೆ ಗಂಡನ ಮನೆಗೆ ನಡೆಯಲು ಬರುವ ಮಹಿಳೆಗೆ ಹೊಸ ಮಾಲಗಿತ್ತಿ ಎನ್ನುತ್ತಾರೆ. ಹೀಗೆ ಬರುವ ಹೊಸ ಮಾಲಗಿತ್ತಿಯನ್ನು ಮನೆಯೊಳಗೆ ಬರಮಾಡಿಕೊಳ್ಳುವ ವಿಶಿಷ್ಟವಾದ ಆಚರಣೆಯನ್ನು ನೆರವೇರಿಸುತ್ತಾರೆ. ಸಾಮಾನ್ಯವಾಗಿ ಅಂದು ಬೇರೆಲ್ಲ ಸಮಾಜದವರಲ್ಲಿ ನಡೆವಂತೆ ಹೊಸ ಮಾಲಗಿತ್ತಿಗೆ ಸೊಡ್ಡಾರತಿ ಬೆಳಗುತ್ತಾರೆ. ಹಾಗೂ ಸಿಡಿಗಾಯಿ ಒಡೆಯುತ್ತಾರೆ. ಸೊಡ್ಡಾರತಿ ಎಂದರೆ ಬೇಯಿಸಿದ ಅನ್ನದಿಂದ ತಯಾರಿಸಿದ ಆರತಿಗಳು. ಹೀಗೆ ಬೆಳಗಲು ಎರಡು ಆರತಿ ತಯಾರಿಸಿಕೊಂಡಿರುತ್ತಾರೆ. ಗಂಡನ ಮನೆಯ ಮುತ್ತೈದೆಯರು ಈ ಆಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಎರಡರಲ್ಲಿ ಒಂದು ಆರತಿಯನ್ನು ಬಲಗಡೆಯಿಂದ ಬೆಳಗಿ ಹೊಸಮಾಲಗಿತ್ತಿಯ ಎಡಭಾಗಕ್ಕೆ ಇಡುತ್ತಾರೆ. ಇನ್ನೊಂದು ಆರತಿಯನ್ನು ಎಡಗಡೆಯಿಂದ ಬೆಳಗಿ ಅವಳ ಬಲಭಾಗಕ್ಕೆ ಇಡುತ್ತಾರೆ. ನಂತರ ತೆಂಗಿನ ಕಾಯಿಯೊಂದರಿಂದ ಅವಳಿಗೆ ಇಳೆದಗೆದು ನೆಲಕ್ಕೆ ಜೋರಾಗಿ ಒಗೆದು ಒಡೆಯುತ್ತಾರೆ. ಇದಕ್ಕೆ ಸಿಡಗಾಯಿ ಒಡೆಯುವುದು ಎನ್ನುತ್ತಾರೆ. ಇದಾದ ನಂತರ ಕುರುಬರೆ ಆಚರಿಸುವ ವಿಧಿಯೊಂದಿದೆ. ಅದೇ ಹೊಸ್ತಿಲಲ್ಲಿ ಮೊಳೆ ಹೊಡೆಯುವುದು. ಹೊಸ ಮಾಲಗಿತ್ತಿಗೆ ತನ್ನ ಬಲಗಾಲವನ್ನು ತಾನೀಗ ಪ್ರವೇಶಿಸಲಿರುವ ಗಂಡನ ಹೊಸ್ತಿಲ ಮೇಲೆ ಇಡಲು ಹೇಳುತ್ತಾರೆ. ಅವಳ ಪಾದದ ಹೆಬ್ಬೆರಳು ಹಾಗೂ ಉಂಗುರಬೆರಳುಗಳ ಮಧ್ಯೆ ಉದ್ದವಾದ ಮೊಳೆಯೊಂದನ್ನು ಇಡುತ್ತಾರೆ. ಹೊಸ್ತಿಲಲ್ಲಿ ಆಳವಾಗಿ ಬೇರೂರುವಂತೆ ಈ ಮೊಳೆಯನ್ನು ಹೊಡೆಯುತ್ತಾರೆ. ಈಗಾಗಲೇ ಆ ಹೊಸ್ತಿಲಲ್ಲಿ ಸೇರಿಹೋದ ಹಲವಾರು ಮಳೆಗಳಲ್ಲಿ ಈ ಹೊಸ ಮೊಳೆಯೂ ಸೇರಿಕೊಳ್ಳುತ್ತದೆ. ಹೊಸ್ತಿಲ ಮೇಲೆ ಲೀನವಾದ ಮೊಳೆಗಳು ಈಗಾಗಲೇ ಈ ಮನೆಯಲ್ಲಿ ಎಷ್ಟು ಜನ ಹೊಸ ಮಾಲಗಿತ್ತಿಯರು ಬಂದು ಲೀನವಾಗಿದ್ದರೆ ಎನ್ನುವುದನ್ನು ಸೂಚಿಸುತ್ತಿರುವಂತೆ ಇರುತ್ತದೆ. ಈ ಆಚರಣೆ ಹೊಸದಾಗಿ ಪ್ರವೇಶ ಮಾಡಲಿರುವ ಈ ಮಹಿಳೆಯ ಮೇಲೆ ಅಗಾಧವಾದ ಪ್ರಭಾವವನ್ನು ಬೀರುತ್ತದೆ. ಈ ಮನೆಯ ಹೊಸ್ತಿಲಿಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಆಚರಣೆ ಒತ್ತಿ ಹೇಳುತ್ತದೆ. ಈಗಾಗಲೇ ಹೊಸ್ತಿಲ ಮೇಲೆ ಮೊಳೆ ಹೊಡೆಯಿಸಿಕೊಂಡು ಈ ಮನೆಯನ್ನು ಪ್ರವೇಶಿಸಿದವರು ಇಲ್ಲಿ ಹೇಗೆ ಬದುಕಿದಾರೆ ನೋಡು, ನೀನು ಅವರ ಹಾಗೆಯೇ ಬದುಕು ಎನ್ನುವ ವಾಸ್ತವ ಸತ್ಯದ ಕಡೆಗೆ ಈ ಆಚರಣೆ ಬೆರಳು ಮಾಡಿ ತೋರಿಸುತ್ತದೆ. ಒಮ್ಮೆ ಹೊಸ್ತಿಲಲ್ಲಿ ಸೇರಿದ ಮೊಳೆ ಹೊಸ್ತಿಲಿಂದ ಹೊರಬರಲು ಸಾಧ್ಯವಿಲ್ಲದಷ್ಟು ಆಳವಾಗಿ ಹೊಸ್ತಿಲಿಗೆ ಅರ್ಪಿಸಿಕೊಂಡಿರುತ್ತದೆ. ಪ್ರಸಂಗ ಎಂಥದೇ ಬಂದರೂ ಹೊಸ್ತಿಲಲ್ಲಿ ಬಂಧಿಯಾದ ಮೊಳೆಯ ಹಾಗೆ ಅವಳು ಬದುಕಬೇಕೆಂಬುದರ ಸಂಕೇತವಿದು. ಮದುವೆಯಾದ ನಂತರ ಕುರುಬ ಮಹಿಳೆ ಗಂಡನ ಮನೆಯಲ್ಲಿ ಲೀನವಾಗುವುದರ ಕುರಿತ ಅನನ್ಯ ರೂಪಕವಿದು.

ಪದರ ಫಾಡನಾ

ಹೊಸ ಮಾಲಗಿತ್ತಿಯಾಗಿ ನಡೆಯಲು ಬಂದ ಕುರುಬ ಮಹಿಳೆಯರ ಪಾದದ ಹೆಬ್ಬೆರಳು ಹಾಗೂ ಉಂಗುರ ಬೆರಳಿನ ನಡುವೆ ಮೊಳೆ ಹೊಡಿಯಿಸಿಕೊಂಡೇ ಸ್ವಾಗತಿಸಲ್ಪಟ್ಟವಳಾಗಿರುವುದರಿಂದ ಅವರ ಬದುಕಿನಲ್ಲಿ ವಿವಾಹ ವಿಚ್ಛೇದನ ಘಟನೆ ಅಲ್ಲೊಂದು ಇಲ್ಲೊಂದು ಎನ್ನುವಂತೆ ಸಂಭವಿಸುತ್ತವೆ. ಇದೊಂದು ರೀತಿಯ ಉಸಿರುಗಟ್ಟಿದ ವಾತಾವರಣದಲ್ಲಿ ಸಂಭವಿಸುವ ಸ್ಫೋಟ. ಕೆಲವೊಂದು ಸಂದರ್ಭದಲ್ಲಿ ಮಹಿಳೆಗೆ ಮುಕ್ತಿಯ ಹಾದಿಯೂ ಹೌದು. ಹೀಗೆ ಸಂಭವಿಸುವ ಸ್ಪೋಟಗಳಿಗೆ ಕುರುಬ ಸಮಾಜದಲ್ಲಿ ಗೌರವವಿಲ್ಲವೆನ್ನುವುದನ್ನು ಈ ಸ್ಫೋಟಕ್ಕೆ ಅವರು ಬಳಸುವ ಶಬ್ದವೇ ಸಾಕ್ಷಿ. ನಿಪ್ಪಾಣಿ ಭಾಗದ ಕುರುಬರು ಇದಕ್ಕೆ ಪದರ ಫಾಡನಾ ಎಂದೂ ಉಳಿದ ಭಾಗದಲ್ಲಿ ಇದಕ್ಕೆ ಸೆರಗು ಹರಿಯುವುದು ಎಂದೂ ಕರೆಯುತ್ತಾರೆ. ವಿಚ್ಛೇದನವೆಂಬ ಕ್ರಿಯೆಯ ಮೂಲಕ ಏನೇ ಊನವಾದರೂ ಅದು ಮಹಿಳೆಗೇ ಎನ್ನುತ್ತವೆ ಈ ಶಬ್ದಗಳು. ಅವಳು ಉಟ್ಟುಕೊಂಡ ಮಾನಮುಚ್ಚುವ ಸೀರೆ ಹರಿದು ಅವಳ ಮಾನಕ್ಕೆ ಧಕ್ಕೆಯಾಗುತ್ತದೆಯೇ ಹೊರತು ಇದರಲ್ಲಿ ಪಾಲುದಾರನಾಗಿರುವ ಪುರುಷನ ಕೂದಲು ಕೊಂಕುವುದಿಲ್ಲ. ಹೀಗೆ ಶಬ್ದಗಳ ಮೂಲಕ ವಿಚ್ಛೇದನ ಕ್ರಿಯೆಯ ತುಚ್ಛೀಕರಣ ನಡೆಯುತ್ತದೆ.

ಇಮ್ಮುಡಿ ಕನ್ಯೆ

ಹೀಗೆ ವಿಚ್ಛೇದನಗೊಂಡವರಿಗೆ ಭವಿಷ್ಯತ್ತಿನಲ್ಲಿ ಕಷ್ಟಗಳೇ ಕಾದಿರುತ್ತವೆ. ಯಾಕೆಂದರೆ ಮೊದಲಿನ ಗಂಡನೊಂದಿಗೆ ಸರಿಯಾಗಿ ಬದುಕು ಮಾಡಲಾರದವಳು. ಈಗ ಎರಡನೆಯ ಗಂಡನೊಂದಿಗೆ ಎಷ್ಟರಮಟ್ಟಿಗೆ ಸರಿಯಾಗಿ ಮಾಡಬಲ್ಲಳು ಎಂದು ಕುರುಬ ಸಮಾಜ ಯೋಚಿಸಿರುವಂತಿದೆ. ವಸ್ತುಸ್ಥಿತಿ ಹೀಗಿರುವಾಗ ಮರು ಮದುವೆ ಸಂಭವಿಸುವುದು ಅಪರೂಪ. ಹಾಗೊಂದು ವೇಳೆ ಮರುಮದುವೆ ನಡೆದರೆ ಅವರನ್ನು ಸಮಾಜ ಗೌರವದಿಂದ ಕಾಣುವುದಿಲ್ಲವೆನ್ನುವ ಸತ್ಯವನ್ನು ಇಂಥವರು ಮರು ಮದುವೆಯಾಗುವಾಗ ಬಳಸುವ ಪಾರಿಭಾಷಿಕ ಪದಗಳೂ ಸೂಚಿಸುತ್ತವೆ.

ಸೆರಗು ಹರಿಯಿಸಿಕೊಂಡು ಬಂದವಳನ್ನು ಮರು ಮದುವೆಯಾಗಲು ಮುಂದೆ ಬರುವ ವ್ಯಕ್ತಿ ಸಾಮಾನ್ಯವಾಗಿ ವಿದುರನೋ ಅಥವಾ ಇವಳಂತೆ ಹೆಂಡತಿ ಬಿಟ್ಟವನೋ ಆಗಿರುತ್ತಾನೆ. ಸುರಪುರ ಭಾಗದಲ್ಲಿ ಮರುಮದುವೆಯಾಗಲು ಒಪ್ಪಿಕೊಂಡಿರುವ ಗಂಡ ಹೆಣ್ಣನ್ನು ವರಕನ್ಯೆ ಯೆಂದು ಗುರುತಿಸುವುದಿಲ್ಲ. ಅವರನ್ನು ಇಮ್ಮುಡಿವರ ಹಾಗೂ ಇಮ್ಮುಡಿ ಕನ್ಯೆಯೆಂದು ಗುರುತಿಸುತ್ತಾರೆ. ಇಮ್ಮುಡಿ ಎಂಬ ವಿಶೇಷಣವನ್ನು ಬಳಸುವ ಮೂಲಕ ಅವರ ದ್ವಿತೀಯ ದರ್ಜೆಗೆ ಇಳಿಸಲಾಗುತ್ತದೆ. ಈ ರೀತಿಯ ಮದುವೆಗಳಿಗೆ ಸಾಮಾಜಿಕ ಒಪ್ಪಿಗೆಯಿಲ್ಲವೆನ್ನುವುದನ್ನು ಅವರ ಮದುವೆಯ ಮುಹೂರ್ತ ಸೂಚಿಸುತ್ತದೆ. ಮೊದಲ ಬಾರಿಗೆ ಮದುವೆಯಾಗುವ ಸಂದರ್ಭದಲ್ಲಿ ತಿಥಿ ನಕ್ಷತ್ರ ಎಲ್ಲವನ್ನೂ ಕೂಲಂಕುಷವಾಗಿ ವಿಚಾರಿಸಿ ನಿರ್ಧರಿಸುವ ಸಮಾಜ, ಮರುಮದುವೆ ಮಾಡಿಕೊಳ್ಳುವವರಿಗೆ ತಿಥಿ ನಕ್ಷತ್ರ ನಿರ್ಧರಿಸುವ ಗೋಜಿಗೆ ಹೋಗುವುದಿಲ್ಲ. ಯಾವ ಜೋಯಿಸರೂ ಅವರಿಗೆ ಒಳ್ಳೆಯ ಮುಹೂರ್ತ ನಿಗದಿಪಡಿಸಲು ಮುಂದೆ ಬರುವುದಿಲ್ಲ. ಇವರ ಮದುವೆ ನಡೆಯುವುದು ಮಧ್ಯರಾತ್ರಿಯ ವೇಳೆಯಲ್ಲಿ. ಇವರ ಮದುವೆಯಲ್ಲಿ ಪಾಲ್ಗೊಳ್ಳುವವರು ವಿಧವೆಯರು. ಮುತ್ತೈದೆಯಾದ ಮಹಿಳೆ ಇಲ್ಲಿನ ಯಾವುದೇ ವಿಧಿಯಲಿ ಪಾಲ್ಗೊಳ್ಳುವುದಿಲ್ಲ. ಹೀಗೆ ಇಡೀ ಕ್ರಿಯೆಯನ್ನು ಸಮಾಜ ತುಚ್ಛೀಕರಿಸುವ ಕೆಲಸ ಮಾಡುತ್ತದೆ. ಮರುಮದುವೆಗೆ ಉಡುಕಿ ಮಾಡಿಕೊಳ್ಳುವುದೂ ಎನ್ನುತ್ತಾರೆ. ಇಂಥ ಮದುವೆಯಲ್ಲಿ ಪಾಲುದಾರನಾದ ಗಂಡಿನ ಬಗೆಗೆ ಏನೂ ಚಕಾರವೆತ್ತದ ಸಮಾಜ ಪಾಲುದಾರಳಾದ ಮಹಿಳೆಯನ್ನು ಕಡಬುಡುಕಿ ಎಂದು ಅಪಹಾಸ್ಯ ಮಾಡುತ್ತದೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಸಮಾಜದಲ್ಲಿ ನಡೆಯುವ ಶುಭಸಮಾರಂಭಗಳಲ್ಲಿ ಹೀಗೆ ಮದುವೆಯಾದವರಿಗೆ ಯಾವುದೇ ತೆರನಾದ ಚಾಜ ಇರುವುದಿಲ್ಲ. ಹೀಗೆ ಮದುವೆಯಾದ ಮಹಿಳೆಗೆ ಸುರಗಿ ಕೊಡ ಹೊರುವ ಚಾಜ ಕೊಡುವುದಿಲ್ಲ.  ಇವಳು ಮದುವೆಯಲ್ಲಿ ಶಾಸಕ್ಕೆ ಹೊಯ್ಯಲು ಬರುವಂತಿಲ್ಲ, ಇತ್ಯಾದಿ. ಅದೂ ಅಲ್ಲದೆ ಇವರ ಮಕ್ಕಳ ಮದುವೆ ಇಮ್ಮುಡಿಯವರ ಕನ್ಯೆಯರಿಗೆ ಹುಟ್ಟಿದ ಮಕ್ಕಳೊಂದಿಗೆ ಮಾತ್ರ ಜರುಗುತ್ತವೆ. ಇವರು ಸಮಾಜದೊಳಗಿದ್ದೂ ಒಂದು ಅಸ್ಪಶ್ಯ ದ್ವೀಪದ ಹಾಗೆ ಬದುಕಬೇಕಾಗುತ್ತದೆ. ಒಟ್ಟಾರೆ ಇಂಥದೊಂದು ಮದುವೆಗೆ ತಮ್ಮ ಒಪ್ಪಿಗೆಯಿಲ್ಲ ಎನ್ನುವುದನ್ನು ಕುರುಬ ಸಮಾಜದವರು ಉಡುಕಿಯಾದವರನ್ನು ನಡೆಯಿಸಿಕೊಳ್ಳುವ ರೀತಿಯಲ್ಲಿ ನೋಡಬಹುದು.

ಒಂಟಿಸುರಗಿ

ಸೆರಗು ಹರಿಯಿಸಿಕೊಂಡು ಬಂದವಳನ್ನು ಮದುವೆಯಾಗಲು ಮುಂದೆೆ ಬಂದ ಗಂಡು ಪ್ರಥಮಬಾರಿಗೆ ಮದುವೆಯಾಗಲಿರುವ  ವರನಾಗಿದ್ದ ಪಕ್ಷದಲ್ಲಿ ಮೂಲ ಮದುವೆಯಲ್ಲಿ ಸುರಗಿ ಸುತ್ತುವಂತೆ ಇಲ್ಲಿಯೂ ಸುರಗಿ ಸುತ್ತುತ್ತಾರೆ. ಆದರೆ ವರನೊಬ್ಬನನ್ನೇ ಕೂಡ್ರಿಸಿ ಸುರಗಿ ಸುತ್ತಿ ಮಹಿಳೆಯನ್ನು ಇಡೀ ವಿಧಿಯಿಂದ ಹೊರಗಿಡುತ್ತಾರೆ. ಇದಕ್ಕೆ ಒಂಟಿಸುರಗಿ ಎನ್ನುತ್ತಾರೆ. ಮಹಿಳೆಯನ್ನು ಮತ್ತೆ ಮತ್ತೆ ಅನ್ಯಗೊಳಿಸುವ ಈ ಕರಿಯೆ ಅತ್ಯಂತ ಅಮಾನವೀಯವಾದುದಾಗಿದೆ