ಮುತ್ತಿನ ಸೆರಗು ಮರೆಮಾಡುವ ಅಕ್ಕ

ಬೀರಪ್ಪ ದೇವರಿಗೆ ಸಂಬಂಧಪಟ್ಟಂತೆ ಸೋದರಿ ಮಾಯಮ್ಮನಲ್ಲಿರುವ ಮಾತೃಗುಣಕ್ಕೆ ಸಂವಾದಿಯಾದ ಗುಣ ಗೊಂಡರು ಹಾಡುವ ಮದುವೆಯ ಕುರಿತ ದೀರ್ಘವಾದ ಗೀತೆಯಲ್ಲಿ ಬರುವ ಅಕ್ಕನಲ್ಲಿ ಕಾಣಸಿಗುತ್ತದೆ. ಗೊಂಡರು ತಮ್ಮ ಮನೆಯ ಹೆಣ್ಣುಮಗಳಿಗೆ ವಿಶೇಷವಾದ ಸ್ಥಾನಗೌರವ ನೀಡಿದ್ದಾರೆ. ಸಹೋದರನೊಬ್ಬನ ಮದುವೆಯಲ್ಲಿ ಅಕ್ಕನಿಗೆ ವಿಶೇಷವಾದ ಚಾಜಗಳು ಇರುತ್ತವೆ. ಅವಳೊಂದಿಗೆ ಅವಳ ಗಂಡನಿಗೂ ಗೌರವಸ್ಥಾನ ದೊರೆಯುತ್ತದೆ.

ಗೊಂಡರಲ್ಲಿ ಮದುವೆಗಳು ಹೆಣ್ಣಿನ ತವರು ಮನೆಯಲ್ಲಿ ನಡೆಯುತ್ತವೆ. ಗಂಡಿನ ಕಡೆಯವರು ಮದುವೆಯ ಹಿಂದಿನ ದಿವನವೇ ವರನೊಂದಿಗೆ ತಮ್ಮ ಊರಿನಿಂದ ಕಾಲ್ನಡಿಗೆಯಲ್ಲಿ ಬರುತ್ತಾರೆ. ವರನೊಂದಿಗೆ ಅವಳ ಅಕ್ಕ ಹಾಗೂ ಭಾವ ಇರುತ್ತಾರೆ. ಹೀಗೆ ನಡೆದುಕೊಂಡು ಬರುವಾಗ ತಮ್ಮನಿಗೆ ದಣಿವಾಗುತ್ತದೆ. ಆಗ ಅಕ್ಕಳಾದವಳೂ ತಮ್ಮನನ್ನು ತನ್ನ ತೋಳಿನ ಮೇಲೆ ಮಲಗಿಸಿಕೊಂಡು ತನ್ನ ಮುತ್ತಿನ ಸೆರಗಿನಿಂದ ಅವನಿಗೆ ಮರೆಮಾಡಿ ಅವನು ದಣಿವು ಆರಿಸಿಕೊಳ್ಳುವಂತೆ ಮಾಡುತ್ತಾಳೆ ಎಂದು ಈ ಮದುವೆ ಕುರಿತ ಕಥನಗೀತೆ ವಿವರಿಸುತ್ತದೆ.

ಅತ್ತಿಗೆಯನ್ನು ಮದುವೆಯಾಗು

ಗೊಂಡರಲ್ಲಿ ಈ ಪೂರ್ವದಲ್ಲಿ ಇದ್ದರಬಹುದಾದ ಪದ್ಧತಿಯೊಂದರ ಮೇಲೆ ಬೆಳಕು ಚೆಲ್ಲುವ ಗೀತೆ ರಥಕೃಷ್ಣ. ಈ ಹಾಡಿನಲ್ಲಿ ಗೊಂಡ ಅತ್ತಿಗೆಯರು ಸಣ್ಣ ಮೈದುನನೊಂದಿಗೆ ತಮ್ಮ ದೇಹವನ್ನು ಹಂಚಿಕೊಳ್ಳುತ್ತಿದ್ದಿರಬಹುದಾದ ಪದ್ಧತಿಯ ಕಡೆಗೆ ಈ ಕತೆ ಬೆರಳು ಮಾಡಿ ತೋರುತ್ತದೆ. ಚಿನ್ನದ ಕೂದಲಿನ ಹಾಗೂ ಬೆಳ್ಳಿ ಭುಜದ ಹೆಣ್ಣನ್ನೇ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮನೆಯ ಸಣ್ಣಮಗ ಹೊರಟು ನಿಲ್ಲುತ್ತಾನೆ. ಅಂಥ ಕನ್ಯೆ ಖಂಡಿತವಾಗಿಯೂ ಇವನಿಗೆ ಸಿಗುವುದು ದುರ್ಲಭವೆಂದು ಭಾವಿಸಿದ ಆತನ ಅಣ್ಣಂದಿರ ಹೆಂಡಂದಿರು ಅವನನ್ನು ತಡೆಯಲು ಪ್ರಯತ್ನಿಸುತ್ತಾರೆ. ಆತ ಹೊರಟೇ ನಿಂತಾಗ ಕೊನೆಯ ಅಸ್ತ್ರವೆಂಬಂತೆ ಅವರು ಈ ರೀತಿ ಬೇಡಿಕೊಳ್ಳುತ್ತಾರೆ.

ನಾವಾರೂ ಜನಲತುಗುದೀರು ಇರ‌್ವರಾಲ ತಾನಾ ಬಗುವಂತ
ನಮ್ಮ  ಅಳಿ ನೀ ನು ಇರುದಾವಿ ತಾನಾ ॥

ನಾವು ಆರು ಜನರು ಅತ್ತಿಗೆಯಂದಿರು ಇದ್ದೇವೆ. ನಮ್ಮನ್ನು ಅಳಿಕೊಂಡು ನೀನು ಇಲ್ಲಿಯೇ ಇರು ಎಂದು ಬೇಡಿಕೊಳ್ಳುತ್ತಾರೆ. ಅವನು ಅವರು ಕೇಳಿಕೊಂಡಂತೆ ನಡೆದುಕೊಳ್ಳುವುದಿಲ್ಲ. ತನ್ನ ಹುಡುಕಾಟವನ್ನು ಆತ ಮುಂದುವರಿಸುತ್ತಾನೆ. ಆ ಮಾತು ಬೇರೆ.

ಗೊಂಡ ಮಹಿಳೆಯರು ಗಂಡ ಸತ್ತ ನಂತರ ಮೂಗುತಿ ಬಳೆಗಳನ್ನು ಮೂರು ದಿವಸದವರೆಗೆ ತೆಗೆದಿಟ್ಟು ಮತ್ತೆ ಧರಿಸುತ್ತಾರೆ. ಈ ಸಂಪ್ರದಾಯವನ್ನು ಬಿಂಬಿಸುವ ಜಾನಪದ ಕತೆಯೊಂದು ಗೊಂಡರಲ್ಲಿ ಪ್ರಚಲಿತವಿದೆ. ಮೃತಪಟ್ಟ ಮೂರು ಲೋಕದ ಅರಸ ಎನ್ನುವ ಹೆಸರಿನ ಕತೆಯೊಂದು ಪ್ರಚಲಿತವಿದೆ. ಈ ಕತೆಯಲ್ಲಿ ವಿಕ್ರಮತಿ ರಾಜನ ಮಗನನ್ನು ಮದುವೆಯಾದ ಮಲ್ಲಿಗೆದೇವಿಯು ತನ್ನ ಗಂಡ ಸತ್ತರೂ ಮೂಗುತಿ ಬಳೆಗಳನ್ನು ತೆಗೆಯಲು ಒಪ್ಪುವುದಿಲ್ಲ.

ಇಬ್ಬರು ಹೆಂಗಸರಿಗೆ ಒಬ್ಬ ಗಂಡಸು ಬಸಿರು

ಎಷ್ಟೆಲ್ಲಾ ದಮನಕ್ಕೆ, ಹೀಯಾಳಿಕೆಗೆ ಅವಮಾನಕ್ಕೆ ಗೊಂಡ ಮಹಿಳೆ ತುತ್ತಾಗಿದ್ದರೂ ಸಮಯ ಸಿಕ್ಕಾಗಲೆಲ್ಲಾ ತನ್ನ ವ್ಯಕ್ತಿತ್ವದ ಅನನ್ಯತೆಯನ್ನು ತನ್ನ ಸತ್ವವನ್ನು ಪ್ರಕಟಪಡಿಸದೇ ಬಿಟ್ಟಿಲ್ಲ. ಸೃಷ್ಟಿಕ್ರಿಯೆಯ ಆಧಾರ ಸ್ತ್ರೀ ಎಂದು ನಂಬಿರುವ ಅವರು ಪುರುಷಪ್ರಧಾನ ನಿಲುವು ಅಲುಗಾಡುವಂಥ ಒಗಟುಗಳನ್ನು ಹೇಳಬಲ್ಲವರಾಗಿದ್ದಾರೆ. ಸಾಮಾನ್ಯವಾಗಿ ಭೂಮಿ ಹಾಗೂ ನೀರನ್ನು ಪ್ರಕೃತಿ  ಸ್ತ್ರೀಯ ಸಂಕೇತವೆಂದು ಭಾವಿಸುತ್ತಾರೆ. ಬೀಜ ಪುರುಷದ ಸಂಕೇತವೆಂದೂ ಭಾವಿಸಲಾಗಿದೆ. ಬೀಜದ ಕಾರಣದಿಂದ ಭೂಮಿ ಬಸಿರಾಗುವುದನ್ನು ಈ ಸಂಕೇತದ ಮೂಲಕ ಸ್ವೀಕರಿಸಲಾಗಿದೆ. ಆದರೆ ಗೊಂಡರು ಹೇಳುವ ಒಗಟು ಇಡೀ ಪ್ರಕ್ರಿಯೆಯನ್ನು ತಿರುವು ಮಾಡುತ್ತದೆ  ಈ ಒಗಟಿನಲ್ಲಿ ಭೂಮಿ ಹಾಗೂ ನೀರು ಇಬ್ಬರು ಸೇರಿ ಬೀಜವನ್ನು ಬಸಿರು ಮಾಡಿದಂತೆ ಒಗಟು ಕಟ್ಟಲಾಗಿದೆ. ಹಾಗೆ ಮಾಡುವ ಮೂಲಕ ಪುರುಷ ಪ್ರಾಧಾನ್ಯದ ನಿರಾಕರಣೆ ಮಾಡುತ್ತ ಮಾತೃಪ್ರಧಾನಕತೆಯ ಮರುಸ್ಥಾಪನೆಯ ಕೆಲಸ ಮಾಡುತ್ತದೆ. ಆ ಒಗಟು ಹೀಗೆ ನೋಡಿ :

ಎರ‌್ಡು ಹೆಂಗಸರು ಸೇರಿ
ಒಬ್ಬ ಗಂಡಸಿಗೆ ಬಸ್ರು ಮಾಡವ್ರೆ, ಅಂದೆಥದು?

ಬಸಿರು ಮಾಡುವ ಧಾತು ಶಕ್ತಿಯನ್ನು ಹೊಂದಿದೆ ಎಂದು ನಂಬಲಾದ ಬೀಜ ಇಲ್ಲಿ ತಾನೇ ಬಸಿರಾಗುತ್ತದೆ. ಬಸಿರು ಧಾರಣ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾದ ಭೂಮಿ  ನೀರುಗಳು ಬಸಿರು ಮಾಡಿವೆ. ಸ್ತ್ರೀಯನ್ನು ಮರುಸ್ಥಾಪಿಸುವ ಅದ್ಭುತ ಶಕ್ತಿಯುಳ್ಳ ಒಗಟಿದು.

ಉಡುಗೆ ತೊಡುಗೆ

 ಕೃಷಿ ಕುಟುಂಬದ ಕುರುಬ ಮಹಿಳೆಯರು, ಕೃಷಿಕೂಲಿ ಕುರುಬ ಮಹಿಳೆಯರು ಹಾಗೂ ಕುರಿಗಾರ ಮಹಿಳೆಯರು ತಮ್ಮ ಉಡುಗೆ ವಿಷಯದಲ್ಲಿ ಅನ್ಯ ಸಮಾಜದ ಮಹಿಳೆಯರಂತೆ ಇದ್ದಾರೆ. ಆದರೆ ನಿಪ್ಪಾಣಿ ಕುರಿಗಾರ ಮಹಿಳೆಯರು ಸೀರೆಯನ್ನು ಉಳಿದವರು ಧರಿಸುವುದಕ್ಕಿಂತ ಸ್ವಲ್ಪ ಭಿನ್ನವಾಗಿ ಉಡುತ್ತಾರೆ. ಅವರು ಕಚ್ಚೆಹಾಕಿ ಸೀರೆ ಉಡುತ್ತಾರೆ.

ಆದರೆ ಭಟ್ಕಳದ ಗೊಂಡ ಮಹಿಳೆಯರ ಉಡುಗೆ ಸಾಂಸ್ಕೃತಿಕವಾಗಿ ಮಹಿಳಾ ಅವಮಾನದ ಸಂಕೇತವಾಗಿದೆ. ಗೊಂಡ ಮಹಿಳೆಯರು ತೀರ ಇತ್ತೀಚಿನವರೆಗೆ ಪಾದ ತಲುಪುವ ಹಾಗೆ ಸೀರೆ ಉಡುವಂತಿರಲಿಲ್ಲ. ಮೊಳಕಾಲವರೆಗೆ ಮೇಲೇರಿಸಿ ಸೀರೆಯನ್ನು ಉಡಬೇಕಾಗುತ್ತಿತ್ತು. ಅವರಿಗೆ ಕುಪ್ಪಸ ಉಡುವುದು ನಿಷಿದ್ಧವಾಗಿತ್ತು. ಎದೆ ಭಾಗವನ್ನು ಮುಚ್ಚಿಕೊಳ್ಳಲಷ್ಟೇ ಅವಳು ಸೀರೆಯನ್ನೆ ಬಳಸಿಕೊಳ್ಳಬಹುದಾಗಿತ್ತು. ಬೆನ್ನು ಬೆತ್ತಲೆಯಾಗಿದ್ದರೆ ಅವಳು ಚಿಂತಿಸಬೇಕಾಗಿರಲಿಲ್ಲ. ಗೊಂಡ ಮಹಿಳೆಯ ಬೆತ್ತಲೆ ಬೆನ್ನಿನ ದೇಹಸಿರಿ ಯಾರು ಬೇಕಾದರೂ ಸವಿಯಬಹುದಾದ ವಸ್ತು ಎಂದು ಸಮಾಜ ಭಾವಿಸಿದುದರ ಸಂಕೇತವಿದು. ಆದರೆ ಈಗ ಕಾಲ ಬದಲಾಗುತ್ತ ಬಂದಿದೆ. ಗೊಂಡ ಮಹಿಳೆಯರಲ್ಲಿ ಜಾಗ್ರತೆ ಮೂಡುತ್ತಿದೆ. ಗೊಂಡ ಮಹಿಳೆಯರ ಉಡುಗೆ ವಿಧಾನ ವೇಗವಾಗಿ ಬದಲಾಗುತ್ತವೆ. ಎಪ್ಪತ್ತು ಎಂಬತ್ತು ವರ್ಷದಾಟಿದ ಗೊಂಡ ಮಹಿಳೆಯರು ಇನ್ನೂ ಹಳೆಯ ಮಾದರಿಯ ಉಡುಗೆಯಲ್ಲಿಯೇ ಇದ್ದಾರೆ. ಅದಕ್ಕಿಂತ ಕಡಿಮೆ ವಯಸ್ಸಿನ ಗೊಂಡ ಮಹಿಳೆಯರು ಸೀರೆ  ಕುಪ್ಪಸ  ಬ್ಲೌಸು ಧರಿಸುತ್ತಿದ್ದಾರೆ. ಇನ್ನು ಸಣ್ಣ ವಯಸ್ಸಿನ ಹುಡುಗಿಯರಲ್ಲಿ ಲಂಗ ಜಂಪರ ಬಳಕೆಯಲ್ಲಿ ಬಂದಿದೆ.

ಭಟ್ಕಳ ಗೊಂಡ ಮಹಿಳೆಯರ ತೊಡುಗೆಯ ವಿಶೇಷತೆಗೆ ಬಂದರೆ ಅವರಲ್ಲಿ ತಾಳಿಸರ ವೆನ್ನುವ ಆಭರಣವಿದೆ. ಇದನ್ನು ಅವರು ತೀರ ಇತ್ತೀಚಿನವರೆಗೆ ವಿವಾಹವಾದುದರ ಸಂಕೇತವೆಂದು ಭಾವಿಸಿರಲಿಲ್ಲ. ಅವರು ಯಾವುದನ್ನು ತಾಳಿಸರ ವೆಂದು ಕರೆಯುತ್ತಾರೋ ಅದು ಅವರಲ್ಲಿ ಅಪ್ಪನ ಮನೆ ಕರಿಮಣಿಸರ ಮಾತ್ರವಾಗಿತ್ತು. ಆದರ ಕುರುಬರಲ್ಲಿ ತಾಳಿಸರ ಆವಾಗಲೂ ಮುತ್ತೈದೆತನದ ಸಂಕೇತವಾಗಿಯೇ ಇದೆ. ತಾಳಿಯು ಅದನು ಧರಿಸಿದವಳ ಗಂಡ ಜೀವಂತವಾಗಿರುವುದರ ಸಂಕೇತವಾಗಿದೆ. ಕುರುಬ ಮಹಿಳೆಯ ಗಂಡ ಸತ್ತರೆ ಅವಳ ತಾಳಿಯನ್ನು ತೆಗೆಯುತ್ತಾರೆ. ಅಷ್ಟೇ ಅಲ್ಲ ಸತ್ತವನಿಗೆ ಸಮಾಧಿ ಮಾಡುವಾಗ ತಾಳಿಯ ಬಂಗಾರದ ಒಂದು ತುಣುಕನ್ನು ಮೃತಗಂಡನ ಬಾಯಿಯಲ್ಲಿ ಹಾಕುತ್ತಾರೆ. ಅಂದರೆ ಕುರುಬ ಮಹಿಳೆಯ ಮುತ್ತೈದೆತನ ಅವಳ ಗಂಡನ ಸಾವಿನೊಂದಿಗೆ ಸಮಾಧಿಯಾಗುತ್ತದೆ.

ಕರಕುಶಲತೆ

ಭಟ್ಕಳದ ಗೊಂಡ ಮಹಿಳೆಯರು ತಮ್ಮ ವಿರಾಮದ ವೇಳೆಯನ್ನು ಸುಮ್ಮನೆ ಹರಣಮಾಡುವುದಿಲ್ಲ. ಅವರು ನಿತ್ಯ ಉಪಯೋಗಕ್ಕೆ ಬರುವ ವಸ್ತುಗಳನ್ನು ಕಲಾತ್ಮಕವಾಗಿ ತಯಾರಿಸಿಕೊಳ್ಳುತ್ತಾರೆ. ಹಾಗು ಮಿಕ್ಕಿದವುಗಳನ್ನು ಮಾರಾಟಮಾಡಿ ಒಂದಷ್ಟು ಹಣ ಸಂಪಾದನೆ ಮಾಡುತ್ತಾರೆ. ಕಾಡಿನ ಮಧ್ಯದಲ್ಲಿ ಜೀವಿಸುವ ಗೊಂಡರು ಅಲ್ಲಿ ಸುಲಭವಾಗಿ ದೊರೆಯುವ ಬೆತ್ತ ಹಾಗೂ ಬಿದಿರನ್ನು ಬಳಸಿ ಬುಟ್ಟಿಗಳನ್ನು ತಯಾರಿಸುತ್ತಾರೆ. ಅಲ್ಲದೆ ಕುಪ್ಪೆಯ ತರಹದ ಗುರುಬುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಹುಲ್ಲು ಇಲ್ಲದೆ ತೆಂಗಿನ ಗರಿಗಳನ್ನು ಬಳಸಿ ಗಟ್ಟಿಮುಟ್ಟಾದ ಚಾಪೆಗಳನ್ನು ಹೆಣೆಯುವ ಕಲೆ ಗೊಂಡ ಮಹಿಳೆಯರಿಗೆ ಕರಗತವಾಗಿದೆ. ಅದೂ ಅಲ್ಲದೆ, ಕಾಡಿನಲ್ಲಿಯೇ ದೊರೆಯುವ ಸುವಾಸನೆಯುಳ್ಳ ಬೇರುಗಳನ್ನು ಬಳಸಿ ಚೆಂದದ ಬೀಸಣಿಕೆಗಳನ್ನು ತಯಾರಿಸಿಕೊಳ್ಳುವ ಕಲೆಯೂ ಗೊಂಡ ಮಹಿಳೆಯರಿಗೆ ತಿಳಿದಿದೆ. ಈ ಬೀಸಣಿಕೆಯಿಂದ ಗಾಳಿಬೀಸಿಕೊಂಡರೆ ಸುವಾಸನಾ ಭರಿತ ಗಾಳಿಯನ್ನು ಪಡೆಯಬಹುದು.

ಮನೆಮದ್ದು

ಕಾಡಿನಲ್ಲಿಯೇ ವಾಸಿಸುವ ಇವರಿಗೆ ಯಾವುದೇ ರೀತಿಯ ಆಧುನಿಕ ವೈದ್ಯಕೀಯ ಸೌಲಭ್ಯ ದೊರೆಯುವುದಿಲ್ಲ. ಹೀಗಾಗಿ ಗೊಂಡ ಮಹಿಳೆಯರು ಸಣ್ಣಪುಟ್ಟ ಕಾಯಿಲೆಗಳಿಗೆ ತಮ್ಮ ಸುತ್ತಲಿನ ಪರಿಸರದಲ್ಲಿ ದೊರೆಯುವ ಗಿಡ ಮೂಲಿಕೆಗಳಿಂದ ಔಷಧವನ್ನು ತಯಾರಿಸಿಕೊಳ್ಳುತ್ತಾರೆ. ಈ ಜ್ಞಾನವನ್ನು ಅವರು ತಮ್ಮ ಅಜ್ಜಿ ಹಾಗೂ ತಾಯಂದಿರಿಂದ ಪಡೆದಿರುತ್ತಾರೆ. ಹಾಗೂ ಒಂದೊಂದು ಸಲ ಸ್ವಂತ ಅನುಭವದ ಮೇಲೆ ಶೋಧಿಸಿಕೊಂಡಿರುತ್ತಾರೆ. ತನ್ನ ಮಗು ಸುಟ್ಟಗಾಯವನ್ನು ಮಾಡಿಕೊಂಡಿತೆಂದರೆ ಗೊಂಡ ತಾಯಿ ಥಟ್ಟನೆ ಮುಲಾಮು ತಯಾರಿಸಿಕೊಂಡು ಗಾಯಕ್ಕೆ ಲೇಪಿಸುತ್ತಾಳೆ. ಮುಲಾಮು ತಯಾರಿಸಲು ಅವಳು ಬಳಸುವ ವಸ್ತುಗಳು ಸಾಗವಾನಿ ಮರದ ಚಿಗುರು ಹಾಗು ತೆಂಗಿನೆಣ್ಣೆ, ತೆಂಗಿನೆಣ್ಣೆಯಲ್ಲಿ ಸಾಗವಾನಿಯ ಚಿಗುರನ್ನು ಕುದಿಸಿ ಅದರಿಂದ ಮುಲಾಮು ತಯಾರಿಸಿಕೊಳ್ಳುತ್ತಾಳೆ. ಮಕ್ಕಳು ಹಲ್ಲು ನೋವಿನಿಂದ ಬಳಲುತ್ತಿದ್ದರೆ ಗೊಂಡ ಮಹಿಳೆಯರು ಯಾದಿ ಸೊಪ್ಪು, ಬಿಲ್ಕಂಬಿ ಸೊಪ್ಪನ್ನು ಕೂಡಿಸಿ ಅರೆದು ರಸ ತೆಗೆದು, ರಸವನ್ನು ಮಗುವಿನ ಕಿವಿಯಲ್ಲಿ ಹಿಂಡಿ ಹಲ್ಲಿನಲ್ಲಿರುವ ಹುಳುವನ್ನು ಹೊರತೆಗೆಯುತ್ತಾರೆ. ದನಗಳ ಹೊಟ್ಟೆಯಲ್ಲಿರುವ ಜಂತು ನಿವಾರಣೆಗೆ ಗೊಂಡ ಮಹಿಳೆಯರು ಬೆಳ್ಳಾಟಿ ಸೊಪ್ಪನ್ನು ಅಕ್ಕಿಗ ಗಂಜಿಯಲ್ಲಿ ಬೇಯಿಸಿ ಕುಡಿಸುತ್ತಾರೆ. ತಾವು ಸಾಕುವ ಕೋಳಿಗಳ ಮೈಯಲ್ಲಿ ಹೇನು ಬಿದ್ದರೆ ಕೋಳಿಗೂಡಿನಲ್ಲಿ ಗುಂಗುರು ಸೊಪ್ಪನ್ನು ಇಡುತ್ತಾರೆ. ಅನೌಪಚಾರಿಕವಾಗಿ ಗೊಂಡ ಮಹಿಳೆಯರು ಮನೆಮದ್ದಿನ ಜ್ಞಾನವನ್ನು ಪಡೆದು ಅಷ್ಟೆ ಅನೌಪಚಾರಿಕವಾಗಿ ಮುಂದಿನ ತಲೆಮಾರಿಗೆ ದಾಟಿಸುತ್ತ ಬಂದಿರುವುದರಿಂದ ಇಂದಿಗೂ ಅವರಲ್ಲಿ ಮನೆ ಮದ್ದು ಕುರಿತ ಅಗಾಧವಾದ ಜ್ಞಾನ ಸಂಪತ್ತು ಇದೆ.

ರಾಜಗೊಂಡರಂತೂ ವೈದ್ಯವನ್ನು ತಮ್ಮ ಕುಲಕಸಲು ಮಾಡಿಕೊಂಡವರು. ರಾಜಗೊಂಡರು ವಿಂಧ್ಯ, ನರ್ಮದಾ, ಗೋದಾವರಿ ಜಲಾನಯನ ಪ್ರದೇಶಗಳಲ್ಲಿ ತಿರುಗಾಡಿ ಔಷಧಿ ಸಸ್ಯಗಳನ್ನು ಕಷ್ಟಪಟ್ಟು ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ವಸ್ತುವನ್ನು ಅವರು ಜಡಿಬೂಟಿ ಎಂದು ಕರೆಯುತ್ತಾರೆ. ರಾಜಗೊಂಡ ಮಹಿಳೆಯರು ಜಡಿಬೂಟಿ ಸಂಗ್ರಹಕಾರ್ಯದಲ್ಲಿ ತಮ್ಮ ಗಂಡಂದಿರೊಂದಿಗೆ ಹೋಗುವುದಿಲ್ಲವಾದರೂ ಗಂಡಸರು ಸಂಗ್ರಹಿಸಿ ತಂದ ಸಸ್ಯವನ್ನು ಸಮಪ್ರಮಾಣದಲ್ಲಿ ಬೆರೆಸಿ ಔಷಧಿ ತಯಾರಿಸುವ ಕೆಲಸದಲ್ಲಿ ಸಹಕರಿಸುತ್ತಾರೆ.

ಸಾಹಿತ್ಯ ಹಾಗೂ ಕುರುಬ ಮಹಿಳೆ

ಜಾನಪದ ಗೀತೆ ಹಾಗೂ ಕಥನ ಸಾಹಿತ್ಯದ ಬಹು ಭಾಗ ಜೀವಂತವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದುದು ಮಹಿಳೆಯರಿಂದಲೇ, ಅದರಲ್ಲೂ ವಿಶೇಷವಾಗಿ ಕೆಳವರ್ಗದ ಶ್ರಮಿಕ ಮಹಿಳೆಯರಿಂದಲೇ. ಕುರುಬರು ಮೂಲತಃ ಶ್ರಮಿಕ ಸಮುದಾಯ ದವರಾಗಿರುವುದರಿಂದ ಜಾನಪದ ಗೀತೆ ಹಾಗೂ ಕಥನ ಸಾಹಿತ್ಯವನ್ನು ಅವರು ತಮ್ಮ ನಾಲಗೆಯ ಮೇಲೆ ಪೋಷಿಸಿಕೊಂಡು ಬಂದಿದ್ದಾರೆ. ಗ್ರಾಮ ಪ್ರದೇಶದಲ್ಲಿ ಇಂದಿಗೂ ಸೋಬಾನ ಪದವನ್ನು ರಾಗಬದ್ಧವಾಗಿ ಹಾಡುವ ಕುರುಬ ಮಹಿಳೆಯರು ಇದ್ದಾರೆ.

ಇಂಡಿಯಾದ ಚರಿತ್ರೆಯನ್ನು ಗಮನಿಸಿದಾಗ ಮಹಿಳೆಯನ್ನು ಅಕ್ಷರಲೋಕದಿಂದ ದೂರಕ್ಕೆ ತಳ್ಳಿರುವುದು ಗೋಚರಿಸುತ್ತದೆ. ಕುರುಬ ಮಹಿಳೆ ಅಕ್ಷರಲೋಕಕ್ಕೆ ತೆರೆದುಕೊಂಡುದು ತೀರಾ ಇತ್ತೀಚೆಗೆ. ಹೀಗಾಗಿ ಅಕ್ಷರದ ಮೂಲಕ ಅಭಿವ್ಯಕ್ತಿಸುವ ಪ್ರಕ್ರಿಯೆಯಿಂದ ಅವರು ವಂಚಿತರಾಗಿಯೇ ಉಳಿದಿದ್ದರು. ಒಂದು ಸಾವಿರ ವರ್ಷಕ್ಕೂ ದೀರ್ಘವಾದ ಚರಿತ್ರೆಯುಳ್ಳ ಸಾಹಿತ್ಯದಲ್ಲಿ ಕುರುಬ ಮಹಿಳೆಯರ ಪಾಲು ನಗಣ್ಯವಾದುದೆಂದೇ ಹೇಳಬೇಕು. ಆರೇಳು ಜನ ಮಹಿಳೆಯರು ಕತೆ, ಕಾವ್ಯ, ಕಾದಂಬರಿ, ವಿಮರ್ಶೆ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಷ್ಟೇ.

ವಚನ ಚಳುವಳಿಯ ಸಂದರ್ಭದಲ್ಲಿ ಅಮುಗೆ ರಾಯಮ್ಮ ಎಂಬ ಕುರುಬ ಮಹಿಳೆ ವಚನ ರಚಿಸಿರುವುದು ತಿಳಿದು ಬರುತ್ತದೆ. ಮಹಿಳಾ ಲೋಕವನ್ನೇ ಹಲವಾರು ಬಂಧನಗಳಿಂದ ಮುಕ್ತಗೊಳಿಸಿದ ಕಾಲ ಹನ್ನೆರಡನೆಯ ಶತಮಾನ. ಅದರ ಫಲವೆಂಬಂತೆ ಮೂವತ್ತಕ್ಕೂ ಹೆಚ್ಚು ಮಹಿಳೆಯರು ವಚನ ಚಳುವಳಿಯಲ್ಲಿ ಪಾಲ್ಗೊಳ್ಳುವಂತಾಯಿತು. ಅದರಲ್ಲಿ ಬಹುಪಾಲು ಕೆಳವರ್ಗದ ಮಹಿಳೆಯರೇ ಇದ್ದರು ಎನ್ನುವುದು ಚಳವಳಿಯ ಸತ್ವವನ್ನು ಬಿಂಬಿಸುತ್ತದೆ. ಅಮುಗೆ ರಾಯಮ್ಮ ಕುರುಬ ಜನಾಂಗದ ಪ್ರಥಮ ಕವಯತ್ರಿ ರಾಯಮ್ಮ 115 ವಚನಗಳನ್ನು ಬರೆದಿದ್ದಾಳೆ. ಸಮಾಜದ ವೈಪರೀತ್ಯಗಳ ಕಟುವಿಮರ್ಶೆ ಹಾಗೂ ಆತ್ಮನಿರೀಕ್ಷೆ ಇವೆರಡು ರಾಯಮ್ಮ ವಚನಗಳ ಮೂಲ ಅಶಯವಾಗಿದೆ. ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ, ಚಿತ್ತಶುದ್ಧದಲ್ಲಿ ಕಾಯಕನ ಮಾಡುವಲ್ಲಿ ಸದ್ಭಕ್ತರಿಗೆ ಎತ್ತನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಎಂಬಂಥ ಅವಳ ವಚನದ ಸಾಲುಗಳು ಅವಳ ಕಾವ್ಯದ ವಸ್ತು ಸತ್ವವನ್ನು ಹಾಗೂ ಕಲೆಗಾರಿಕೆಯನ್ನು ಬಿಂಬಿಸುತ್ತದೆ.

ಹದಿನಾಲ್ಕನೆಯ ಶತಮಾನದಲ್ಲಿ ’ಗಂಗಾದೇವಿ’ ಎಂಬ ಕುರುಬ ಕವಯಿತ್ರಿ ಆಗಿ ಹೋಗಿದ್ದಾಳೆ. ಇವಳು ’ಮಧುರಾವಿಜಯಂ’ ಎಂಬ ಒಂಬತ್ತು ಸಂಧಿಗಳ ಸಂಸ್ಕೃತ ಕಾವ್ಯವನ್ನು ಬರೆದಿದ್ದಾಳೆ. ಇದೊಂದು ಐತಿಹಾಸಿಕ ಘಟನೆಯ್ನು ಆಧರಿಸಿ ಬರೆದ ಕಾವ್ಯವಾಗಿದೆ.  ಗಂಗಾದೇವಿಯ ಗಂಡ ಕಂಪಣ ಮಧುರೆಯ ಮೇಲೆ ದಂಡೆತ್ತಿ ಹೋಗಿ ವಿಜಯ ಸಾಧಿಸುತ್ತಾನೆ. ಈ ಐತಿಹಾಸಿಕ ಘಟನೆಯೇ ಅವಳು ಬರೆದ  ಈ ಕಾವ್ಯ ಮೂಲ ಆಕರ. ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿಯೇ ಮಹಿಳೆಯೊಬ್ಬಳಿಂದ  ರಚಿತವಾದ ಪ್ರಥಮ ಸಂಸ್ಕೃತ ಕಾವ್ಯವಿದು. ಅವಳ ಗಂಡನಾದ ಕಂಪಣ ವಿಜಯನಗರ ಅರಸು ಮನೆತನದ ಸಂಸ್ಥಾಪಕರಲ್ಲಿ ಒಬ್ಬನಾದ ಬುಕ್ಕರಾಯನ ಮಗ. ಆತ ಬುಕ್ಕರಾಯನ ಪ್ರಧಾನಿಯೂ ಹೌದು. ಕಂಪಣನ ಸಾಹಸವನ್ನು ಹಾಡಿ ಹೊಗಳುವ ಈ ಕಾವ್ಯಕ್ಕೆ ’ವೀರ ಕಂಪಲ ರಾಯ ಚರಿತೆ’ ಎಂಬ ಹೆಸರೂ ಇದೆ.

ಕುರುಬ ಮಹಿಳೆಯೊಬ್ಬಲು ಸಂಸ್ಕೃತದಲ್ಲಿ ಕಾವ್ಯವೊಂದನ್ನು ರಚಿಸಿದಳೇನೋ ನಿಜ. ಆದರೆ ಅವಳ ನಂತರ ವಾರಸುದಾರಳಾಗಿ ಒಬ್ಬಳೇ ಒಬ್ಬಳು ಮಹಿಳೆ ಆರು ಶತಮಾನದವರೆಗೆ ಬರೆಯಲಿಲ್ಲವೆನ್ನುವುದು ಚರಿತ್ರೆಯ ವಿಪರ‌್ಯಾಸವೇ ಸರಿ.

ಹದಿನಾಲ್ಕನೇ ಶತಮಾನ ದಾಟಿದ ನಂತರ ಇಪ್ಪತ್ತನೆಯ ಶತಮಾನದವರೆಗೆ ಕುರುಬ ಮಹಿಳಾ ಸಾಹಿತಿಗಳೊಬ್ಬರೂ ದೊರೆಯುವುದಿಲ್ಲ. ಆಧುನಿಕ ಶಿಕ್ಷಣದ ಪ್ರಭಾವದಿಂದ ಕುರುಬ ಮಹಿಳೆಯರು ಅಕ್ಷರಲೋಕಕ್ಕೆ ತೆರದುಕೊಳ್ಳು ವಂತಾಯಿತು. ಕುರುಬ ಮಹಿಳೆಯರಲ್ಲಿ ಕೆಲವರು ಶಿಕ್ಷಣ ಪಡೆದರೇನೋ ನಿಜ. ವೃತ್ತಿಯಲ್ಲೂ ತೊಡಗಿದರೇನೋ ನಿಜ. ಆದರೆ ತಮ್ಮ ಬದುಕಿನ ಅನುಭವಗಳ ಅನುಸಂಧಾನದಲ್ಲಿ ಅಕ್ಷರ ಮಾಧ್ಯಮದ ಮೂಲಕ ಅಭಿವ್ಯಕ್ತಿಗೆ ಹಂಬಲಿಸಿದವರು ತೀರ ವಿರಳ. ಸಂಖ್ಯೆ ಕಡಿಮೆಯಿದ್ದರೂ ಅವರು ಆರಿಸಿಕೊಂಡ ಸಾಹಿತ್ಯ ಪ್ರಕಾರ ವೈವಿಧ್ಯಮಯವಾಗಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಅಂಕಣಬರಹದಂಥ ವೈವಿಧ್ಯಮಯ ಕ್ಷೇತ್ರದಲ್ಲಿ ಅವರು ಅಭಿವ್ಯಕ್ತಿಗೊಳಿಸಿಕೊಂಡಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಡಾ. ಮಲ್ಲಿಕಾ ಘಂಟಿಯವರು ಗಮನಾರ್ಹವಾದ ಕಾರ್ಯ ಮಾಡಿರುವರು. ಶ್ರೀಮತಿ ಸರೋಜಾ ಇಟ್ಟಣವರ ಸಾಹಿತಿಕ ಚಟುವಟಿಕೆಯಲ್ಲಿ ತೊಡಿಗಿಸಿಕೊಂಡಿರುವರು.

ನಾಟಕ ಚಲನ ಚಿತ್ರ

ನಾಟಕ ಹಾಗೂ ಚಲನ ಚಿತ್ರಗಳಲ್ಲಿ ನಟನೆ ಮಾಡಿದ ಕುರುಬ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. ಮಹಿಳೆಯರು ಈ ರಂಗದಲ್ಲಿ ಪ್ರವೇಶ ಮಾಡದಂತೆ ನಿಷೇಧಿಸುವ ಮಡಿವಂತ ಪುರುಷ ವರ್ಗವೇ ಇದಕ್ಕೆ ಪ್ರಮುಖ ಕಾರಣ. ಶಾಂತಮ್ಮ ಎಂಬ ಚಿತ್ರನಟಿ ಡಾ.ರಾಜಕುಮಾರ್ ಅವರ ಹಲವಾರು ಚಲನಚಿತ್ರಗಳಲ್ಲಿ ತಾಯಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪ್ರೇಕ್ಷಕ ವರ್ಗದ ಮೆಚ್ಚುಗೆಯನ್ನು ಪಡೆದ ಕುರುಬ ಮಹಿಳೆಯಾಗಿದ್ದಾಳೆ.

ಚಿತ್ರದಲ್ಲಿ ನಾಯಕಿಯಾಗಿ, ತಾಯಿಯಾಗಿ, ಅತ್ತೆಯಾಗಿ, ನಟಿಸುವ ಮೂಲಕ ಚಿತ್ರರಸಿಕರ ಮನಸೂರೆಗೊಂಡ ಜನಪ್ರಿಯ ನಟಿ ಬಿ.ವಿ. ರಾಧಾ ಇನ್ನೋರ್ವ ಕುರುಬ ಮಹಿಳೆ. ತಮ್ಮ ಮನೋಜ್ಞ ಅಭಿನಯದ ಮೂಲಕ ಎಂಥ ಪಾತ್ರವಾದರೂ ಸರಿಯೇ ಅದಕ್ಕೆ ಜೀವಕಳೆ ತುಂಬುವ ಕಲೆ ಬಲ್ಲ ಬಿ.ವಿ.ರಾಧಾ ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ಉಳಿಯಬಲ್ಲ ನಟಿ. ಕವಿತಾ ಕಾಶಪ್ಪನವರ ಹವ್ಯಾಸಿ ರಂಗಭೂಮಿ ಮತ್ತು ಚಲನಚಿತ್ರದಲ್ಲಿಯು ಅಭಿನಯಿಸಿರುವರು. ಶಶಿಕಲಾ ಸತ್ಯಮೂರ್ತಿ ಹಾಗೂ ಮೈನಾ ಇವರಿಬ್ಬರು ಖ್ಯಾತ ರಂಗನಟಿಯರು. ಗುಬ್ಬಿವೀರಣ್ಣ, ಹಿರಣ್ಣಯ್ಯ, ಓಂಕಾರೇಶ್ವರ ನಾಟ್ಯಸಂಘಗಳಲ್ಲಿ ಕೆಲಸ ಮಾಡಿರುವ ಮೈನಾ ಅವರು ನಾಡಿನುದ್ದಗಲಕ್ಕೂ ಸಂಚರಿಸಿ ತಮ್ಮ ನಟನಾ ಸಾಮರ್ಥ್ಯದ ಮೂಲಕ ಜನಪ್ರಿಯರಾದವರು.

ಇತ್ತೀಚೆಗೆ ಕುರುಬ ಮಹಳೆಯರಲ್ಲಿ ಅದರಲ್ಲೂ ವಿಶೇಷವಾಗಿ ಯುವತಿಯರಲ್ಲಿ ಡೊಳ್ಳಿನ ಹಾಡುಗಳ ಹಾಡುಗಾರಿಕೆಯಲ್ಲಿ ಆಸಕ್ತಿ ಮೂಡಿದೆ. ತಂಡಗಳನ್ನು ಕಟ್ಟಿಕೊಂಡು ಡೊಳ್ಳುಬಾರಿಸುತ್ತ ಹಾಡುಗಾರಿಕೆ ಪ್ರದರ್ಶಿಸುತ್ತಿದ್ದಾರೆ. ಈ ತಂಡಗಳು ವಿಜಾಪುರ, ಬೆಳಗಾವ, ಗುಲಬರ್ಗಾ ಜಿಲ್ಲೆಯಲ್ಲಿ ಜೀವ ತಳೆದಿರುವುದು ಕುತೂಹಲದ ಸಂಗತಿ. ಇಂಡಿ ತಾಲೂಕಿನ ಬೆನಕನಹಳ್ಳಿಯ ಮಾನಂದ ಡೋಣೂರ, ಸಾವಿತ್ರಿ ಡೋಣೂರು, ಇಂಡಿ ತಾಲೂಕಿನ ಮಾರ್ಸನಳ್ಳಿಯ ಶಾಂತವ್ವ, ಪೂಜಾರಿ, ಜಕ್ಕವ್ವ, ಪೂಜಾರಿ. ಸಾಂಗ್ಲಿ ಜಿಲ್ಲೆಯ ಜತ್ತಿ ತಾಲೂಕಿನ ಸೋನ್ಯಾಳ ಗ್ರಾಮದ ಜಕ್ಕವ್ವ, ಪೂಜಾರಿ ಇವರೆಲ್ಲ ಅಲ್ಲಲ್ಲಿ ಹಾಡಿಕಿ ಮಾಡುತ್ತಿದ್ದಾರೆ. ತಮ್ಮ ಕುಲದೈವವಾದ ಬೀರಪ್ಪ, ಮಾಳಿಂಗರಾಯ, ಅಮೋಘಸಿದ್ದನ ಕುರಿತು ಹಾಡುಗಳನ್ನು ಹಾಡುವುದಲ್ಲದೆ ವರ್ತಮಾನದ ಸಮಸ್ಯೆಗಳ ಬಗೆಗೂ ಹಾಡುಗಳನ್ನು ಕಟ್ಟಿ ಹಾಡಲು ಪ್ರಾರಂಭಿಸಿದ್ದಾರೆ.

ವಾಟ್ ಎ ಸ್ಮಾರ್ಟ್ ಬಾಯ್

ಅಧ್ಯಯನದ ಅವಧಿಯಲ್ಲಿ ಈ ಲೇಖಕ ಕುರುಬ ಮಹಿಳೆಯ ಕುರಿತು ಹಲವಾರು ಕುತೂಹಲಕರ ಸಂಗತಿಗಳನ್ನು ಗಮನಿಸಿದ್ದಾನೆ. ಕುರುಬರು ತಮ್ಮ ಮಹಿಳೆಯನ್ನು ನೋಡಿದ್ದು, ನೋಡುತ್ತಿರುವುದು ಪುರುಷ ಪ್ರಧಾನ ನೆಲೆಯಿಂದಲೇ ಎಂಬುದು ಇಲ್ಲಿನ ಪ್ರಮುಖ ಅಂಶವಾಗಿದೆ. ಇಲ್ಲಿ ಅವಳು ಮಹಿಳೆ ಎಂಬ ಕಾರಣಕ್ಕಾಗಿಯೇ ಅವಮಾನಕ್ಕೆ ತುತ್ತಾಗುತ್ತಿದ್ದಾಳೆ. ಅವಗಣನೆಗೆ ಗುರಿಯಾಗುತ್ತಿದ್ದಾಳೆ. ಪುರುಷ ಸಂಖ್ಯೆಯ ಎದುರಿಗೆ ಸ್ತ್ರೀಸಂಖ್ಯೆ ಕಡಿಮೆಯಾಗುತ್ತ ಬಂದಿರುವುದು ಅವಗಣನೆಯ ಘೋರಸತ್ಯದ ದರ್ಶನ ಮಾಡಿಸುತ್ತದೆ.

ಕುರುಬ ಮಹಿಳೆಯು ತನ್ನ ಜೈವಿಕ ರಚನೆಯ ಕಾರಣದಿಂದ ಅನೇಕ ನಿಷಿದ್ಧಗಳನ್ನು ಹೇರಿಸಿಕೊಂಡಿದ್ದಾಳೆ. ಈ ನಿಷಿದ್ಧಗಳು ಅವಳನ್ನು ಅಧೀರಳನ್ನಾಗಿ ಮಾಡಿವೆ. ತನ್ನ ಬಗೆಗೆ ತಾನೇ ಅಸಹ್ಯಪಟ್ಟುಕೊಳ್ಳುವಂಥ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾಳೆ.

ಪುರುಷನ ಎದುರಿಗೆ ಹೀನಳಾಗಿ ಪರಿಗಣಿಸಲ್ಪಟ್ಟ ಇವಳು ತನ್ನ ಸಮಾಜದ ಇತರ ಮಹಿಳೆಯರೊಂದಿಗೆ ತನ್ನನ್ನು ಹೋಲಿಸಿಕೊಂಡು ಅವರಿಗಿಂತ ತಾನು ಶ್ರೇಷ್ಠಳು ಎಂಬ ಭ್ರಮೆಯಲ್ಲಿ ಕೆಲವು ಕುರುಬ ಮಹಿಳೆಯರಿದ್ದಾರೆ. ಮಹಿಳೆಯರೆಲ್ಲ ಕುಟುಂಬದ ಉತ್ಪಾದನೆಯ ಬಹುಪಾಲು ಚಟವಟಿಕೆಗಳಲ್ಲಿ ತಮ್ಮ ಪಾಲುದಾರಿಕೆ ಸಲ್ಲಿಸಿದರೂ ಉತ್ಪನ್ನದ ವಿಲೇವಾರಿ ವಿಷಯಕ್ಕೆ  ಬಂದಾಗ ಅವಳ ಸಲಹೆಯನ್ನು ಕೇಳುವ, ಅಭಿಪ್ರಾಯವನ್ನು ಮನ್ನಿಸುವ ಸೌಜನ್ಯವನ್ನು ಇಲ್ಲಿನ ಪುರುಷ ವರ್ಗ ತೋರಿಸುವುದಿಲ್ಲ. ಅದೇ ಕಾಲಕ್ಕೆ ಮಹಿಳೆಯನ್ನು ಒಂದು ಉಪಭೋಗದ ವಸ್ತು ಎನ್ನುವ ಹಾಗೆ ನೋಡುವ ಫ್ಯೂಡಲ್ ಮನೋಭಾವ ಕುರುಬ ಪುರುಷರಲ್ಲಿ ಇನ್ನೂ ಜೀವಂತವಾಗಿದೆ.

ಪುರುಷನಾದವನು ಮಹಿಳೆಯನ್ನು ಸಹಜೀವಿಯಂತೆ ನೋಡದೆ ಪರೋಪಜೀವಿಯ ಹಾಗೆ ನೋಡಿ ಉಪೇಕ್ಷೆ ಮಾಡಿರುವ ಕಾರಣದಿಂದ ಕುರುಬ ಮಹಿಳೆ ತನ್ನ ಆತಂಕಗಳನ್ನು, ಅಭೀಪ್ಸೆಗಳನ್ನು ಅವನೊಂದಿಗೆ ಹಂಚಿಕೊಳ್ಳಲಾಗದೆ ಅವ್ಯಕ್ತರೂಪದ ದೇವರಲ್ಲಿ ಮೊರೆಹೋಗಿ ಹರಕೆಗಳ ಮಹಾ ಮಡುವಿನಲ್ಲಿ ಸಿಲುಕಿಕೊಂಡಿದ್ದಾಳೆ. ಹರೆಕ ಯಂಥ ಒತ್ತಡಗಳಿಗೆ ಮಹಿಳೆ ಒಳಗಾಗಲು ಪುರುಷನ ದಿವ್ಯ ಉಪೇಕ್ಷೆಯ ನಿಲುವೇ ಕಾರಣವಾಗಿದೆ.

ಕಾಲಚಕ್ರ ಉರುಳಿದಂತೆ ಅನೇಕ ಸ್ಥಿತ್ಯಂತರಗಳು ಉಂಟಾಗುವುದು ಸಹಜ. ಆಧುನಿಕ ಶಿಕ್ಷಣ ಕ್ರಮ. ನೌಕರಿಯಲ್ಲಿ ಮಹಿಳಾ ಮೀಸಲಾತಿಯಂಥ ಸೌಲಭ್ಯಗಳು ಮಹಿಳೆಗೆ ಬಿಡುಗಡೆಯ ಹೊಸ ಹಾದಿಯನ್ನು ತೋರಿಸಿವೆ. ಉದ್ಯೋಗಸ್ಥ ಮಹಿಳೆಗೆ ಹೊಸ ದಿಗಂತಗಳು ಗೋಚರಿಸತೊಡಗಿವೆ. ಹೊಸ್ತಿಲಲ್ಲಿ ಮೊಳೆ ಹೊಡೆಯಿಸಿಕೊಂಡು ಗೃಹಬಂಧನದಲ್ಲಿ ಸಿಲುಕಿ ಅಲ್ಲಿಯೇ ಲೀನವಾಗುತ್ತಿದ್ದ ಮಹಿಳೆ ಈಗ ದಾಟುವ ಕ್ರಿಯೆಯಲ್ಲಿ ತೊಡಗಿದ್ದಾಳೆ.

ಕ್ಷೇತ್ರಕಾರ್ಯಕ್ಕೆಂದು ಹೋದಾಗ ಎಪ್ಪತ್ತು ವರ್ಷದ ಮುದುಕಿಯೊಬ್ಬಳನ್ನು ಸಂದರ್ಶಿಸುತ್ತಿದ್ದಾಗ ನಡೆದ ಘಟನೆಯೊಂದಿಗೆ ಈ ಚರ್ಚೆಯನ್ನು ಮುಗಿಸಬಹುದು ಅನ್ನಿಸುತ್ತದೆ. ಆ ಮನೆಗೆ ತಾಯಿಯೊಬ್ಬಳು ಹನ್ನೆರಡು ಹದಿಮೂರು ವರ್ಷದ ತನ್ನ ಮಗಳೊಂದಿಗೆ ಲಗ್ನ ಪತ್ರಕೊಟ್ಟು ಮದುವೆಗೆ ಆಮಂತ್ರಿಸಲು ಬಂದಿದ್ದಳು. ಅದು ಆ ತಾಯಿಯ ಹಿರಿಯ ಮಗಳ ಮದುವೆ. ಲಗ್ನವಾಗುತ್ತಿರುವ ಹಿರಿಯ ಮಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಸ್ಥೆ. ಮುದುಕಿ ಲಗ್ನ ಪತ್ರ ಹಂಚಲು ಬಂದವರ ದೂರದ ಸಂಬಂಧಿ. ಲಗ್ನ ಪತ್ರ ಕೊಟ್ಟು ಮುದುಕಿಯ ಸೊಸೆಯೊಂದಿಗೆ ಸುಖದುಃಖವನ್ನು ಹಂಚಿಕೊಳ್ಳುತ್ತ ಕುಳಿತಾಗ, ತಡವಾಗುತ್ತಿರುವುದನ್ನು ಗಮನಿಸಿದ ಹನ್ನೆರಡು ಹದಿಮೂರು ವರ್ಷದ ಹುಡುಗಿ. ‘mom, you are always what you have been. It  is getting late. I have to prepare for my exams. Be Quick’ ಎಂದು ಅರಳು ಹುರಿದಂತೆ ಮಾತನಾಡಿದಳು. ಅಲ್ಲಿಯೇ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದ ಇಂಗ್ಲೀಷ್ ಮ್ಯಾಗಝಿನ್ ಒಂದರ ಪುಟಗಳನ್ನು ಹೊರಳಿಸುತ್ತ ಅದರಲ್ಲಿರುವ ಚಿತ್ರನಟನ ಚಿತ್ರವೊಂದನ್ನು ನೋಡಿ ಅವನ ಮೂಗನ್ನು ಹಿಂಡಿದಂತೆ ಮಾಡಿ ‘What a smart boy’ಎಂದು ಉದ್ಧಾರ ತೆಗೆದಳು.

ಹಣೆಯ ಮೇಲ ಇಷ್ಟಗಲ ಕುಂಕುಮ ಹಚ್ಚಿಕೊಂಡು, ಮುಂಗೈ ತೋಳಿನ ಮೇಲೆ ಹಣಮಂತ ದೇವರ ಹಚ್ಚೆ ಹಾಕಿಸಿಕೊಂಡ ಮುದುಕಿ, ಅಡುಗೆ ಮನೆಯಲ್ಲಿ ಪಿಸುಧ್ವನಿಯಲ್ಲಿ ಸುಖದುಃಖ ಹಂಚಿಕೊಳ್ಳುತ್ತ ಕುಳಿತ ತಾಯಿ, ಅರಳು ಹುರಿದಂತೆ ಇಂಗ್ಲೀಷ್ ಬಳಸಬಲ್ಲ ಹುಡುಗಿ ಈ ಮೂವರು ಕುರುಬ ಕುಟುಂಬದ ಸಧ್ಯದ ಮಹಿಳೆಯ ಮೂರು ಅವಸ್ಥೆಗಳನ್ನು ಸೂಚಿಸುವಂತಿವೆ.

ಗ್ರಂಥ ಋಣ

1.             ಕರ್ನಾಟಕ ಸಂಸ್ಕೃತಿ ಪೂರ್ವ ಪೀಠಿಕೆ : ಶಂಬಾ ಜೋಶಿ

2.             ಬುಡಕಟ್ಟು ಕಲಕಸಬು: ಡಾ.ಕೆ.ಎಂ. ಮೇತ್ರಿ

3.             ಹಾಲ್ಮತ್ತೋತ್ತೇಜಕ ಪುರಾಣ: ರಸ್ತಾಪುರ ಭೀಮಕವಿ

4.             ಹಾಲುಮತಸ್ಥರು: ಬ.ಪ. ನಾಯ್ಕರ್

5.             ಗೊಂಡರ ಸಂಸ್ಕೃತಿ: ಡಾ.ಸೈಯದ್ ಜಮೀರುಲ್ಲಾ ಷರೀಫ್

6.             ಕರ್ನಾಟಕ ಬುಡಕಟ್ಟುಗಳು: ಸಂ. ಡಾ.ಎಚ್.ಜೆ. ಲಕ್ಕಪ್ಪಗೌಡ

7.             ಕುರುಬ ಜನಪದ: ಸಾ. ಚೆನ್ನಪ್ಪ ಕಟ್ಟಿ, ಆರ್.ಎಸ್. ವಾಡೇದ

8.             ಹಾಲಕೆನೆ: ಸಂ.ಡಾ.ಶ್ರೀರಾಮ ಇಟ್ಟಣ್ಣವರ, ವಿ.ಡಿ.ವಸ್ತ್ರದ, ಚೆನ್ನಪ್ಪ ಕಟ್ಟಿ,

9.             ಕುರುಬ ದರ್ಪಣ: ಚಂದ್ರಕಾಂತ ಬಿಜ್ಜರಗಿ

10.           ಕುರುಬರ ಹೆಜ್ಜೆಗಳು: ಚಂದ್ರಕಾಂತ ಬಿಜ್ಜರಗಿ

11.           ಸಿದ್ಧಸಿರಿ: ಮದಗೊಂಡ ಧೋಂಡಪ್ಪ ಒಡೆಯರು(ಮಹಾರಾಜರು)

12.           ಉತ್ತರ ಕನ್ನಡ ಜಿಲ್ಲೆಯ ಕೆಲವು ಬುಡಕಟ್ಟುಗಳಲ್ಲಿ ಪ್ರಸಾಧನ ಕಲೆ: ಡಾ.ಸವಿತಾ ನಾಯಕ

13.           ಹಾಲುಮತದ ಹುಟ್ಟು: ಬೋನಾ ಬಸವರಾಜ

14.           ಕುರುಬರ ಚರಿತ್ರೆ: ವಿ.ಆರ್. ಹನುಮಂತಯ್ಯ ಸಂ.ಸುಧಾಕರ

15.           ಮಹಾತ್ಮಾ ಬೊಮ್ಮಗೊಂಡೇಶ್ವರ ಪವಾಡಗಳು: ಮಾಳಪ್ಪ ಅಡಸಾರೆ

ವಕ್ತೃಗಳು

 ಭಟ್ಕಳ ಗೊಂಡರ ಬಗೆಗೆ ಮಾಹಿತಿ ನೀಡಿದವರು

 1. ಬಡಿಯಾ ಸೋಮಗೊಂಡ ವೆ.63, ಕುಂಟವಾಣಿ
 2. ಬುಡ್ಡಿ, ಮಂಗಳಿ, ವ.40, ವ.35 ಕುಂಟವಾಣಿ
 3. ಭೀಮ ಮಾಸ್ತಿಗೊಂಡ ವೆ.39, ಮೂಡಲಕೆರೆ
 4. ಮಳ್ಳಿ ಭೀಮ ಮಾಸ್ತಿಗೊಂಡ ವ.52, ಮೂಡಲಕೆರೆ
 5. ಕುರ‌್ರ ಮಂಜಗೊಂಡ ವ.95 ಹಡೀಲ
 6. ಸುಕ್ರನಾರಾಯಣಗೊಂಡ ವ.44 ಹಡೀಲ

ನಿಪ್ಪಾಣಿ ಕುರುಬರ ಬಗೆಗೆ ಮಾಹಿತಿ ನೀಡಿದವರು

 1. ಬೀರಪ್ಪ ಮಾಯಪ್ಪ ಭಂಡಾರಿ, ವ: 74, ಕರನೂರ ತಾ.ಕಾಗಲ, ಕೋಲಾಪುರ ಜಿಲ್ಲೆ
 2. ಹಾಲಪ್ಪ ವಿಠಲಡೋಣಿ ವ.45, ಬೇನಾಡಿ ತಾ.ಚಿಕ್ಕೋಡಿ

ಬೀದರ ಗೊಂಡರ ಬಗೆಗೆ ಮಾಹಿತಿ ನೀಡಿದವರು

 1. ನರಸಪ್ಪ ಬಸಪ್ಪ ಗಣಗೊಂಡ ವ.75 ಮನ್ನೈಖೇ 4 ತಾ ಹುಮನಾಬಾದ
 2. ಗಣಪತರಾವ ಗುಂಡಪ್ಪ ಪವಾಡಿ ವ.91 ಮನ್ನೈಖೇಳಿ, ತಾ.ಹುಮನಾಬಾದ
 3. ಮಾಳಪ್ಪ ಅಡಸಾರೆ ವ.40 ಬೀದರ
 4.  ಬಸವರಾಜ ಮಾಳಗೆ ವ.42 ಬೀದರ

ಕುರುಬರ ಬಗೆಗೆ ಮಾಹಿತಿ ನೀಡಿದವರು

 1. ಸಿದ್ದಪ್ಪ ಬಸಪ್ಪ ಹಂಚಿನಾಳ ವ.68 ಅಡವಿಸೋಮಾಪುರ ತಾ.ಗದಗ
 2. ಶಿವರಾಯ ಮಲ್ಲಪ್ಪ ದೊಡಮನಿ ವ.57 ಚಟ್ನಳ್ಳಿ, ತಾ.ಸಿಂದಗಿ
 3. ಬಸಲಿಂಗಪ್ಪ ಗೊಬ್ಬೂರ ವ.45 ಬಂದಾಳ, ತಾ.ಸಿಂದಗಿ
 4. ಹನುಮವ್ವ ಬಸಪ್ಪ ಕಟ್ಟಿ ವ.58 ಹಿರೇಹಾಳ ತಾ.ರೋಣ, ಗದಗ ಜಿಲ್ಲೆ
 5. ದೇವಕ್ಕ ಸಿದ್ದಪ್ಪ ಹಂಚಿನಾಳ 55 ಅಡವಿಸೋಮಾಪುರ ತಾ.ಗದಗ
 6. ಬಿ.ಕೆ.ರವಿ. ಬೆಂಗಳೂರು
 7. ಲಕ್ಷ್ಮೀಕಾಂತ ತೋಂಟಾಪುರ, ಬೆಂಗಳೂರು
 8. ಎಂ.ಆರ್.ನಾಯಕ ವ.51. ಕಾರವಾರ