ನಾವೆಲ್ಲಾ ಹುಬ್ಬಳ್ಳಿಯ ಸಮೀಪದ ಹಳೇಗಬ್ಬೂರಿನ ಪಾರ್ವತಮ್ಮನವರ ಮನೆಯ ಜಗುಲಿಯಲ್ಲಿ ಕುಳಿತಿದ್ದೆವು. ಭೈಪ್ ಸಂಸ್ಥೆಯ ಸಹಾಯದಿಂದ ಪಾರ್ವತಮ್ಮ ಒಂದು ಎಮ್ಮೆ ಕೊಂಡಿದ್ದಾರೆ. ಎಮ್ಮೆಯ ಬೆಲೆ ೮,೬೦೦ ರೂಪಾಯಿಗಳು, ಬೈಫ್ ೩,೦೦೦ ರೂಪಾಯಿ ಸಹಾಯಧನ ನೀಡಿದೆ. ಮುರ್ರಾ ಜಾತಿಯ ಎಮ್ಮೆ ದಿನಕ್ಕೆ ನಾಲ್ಕು ಲೀಟರ್ ಹಾಲು ನೀಡುತ್ತಿದೆ. ಎಮ್ಮೆ ಕೊಂಡ ಮೇಲೆ ಆಕೆಯ ಬದುಕಿನ ರೀತಿ ಬದಲಾಗಿದೆಯೇ ಎನ್ನುವ ಮಾಹಿತಿಯನ್ನು ದಾಖಲಿಸಲು, ಬೆಂಗಳೂರಿನ ಬೆಸ್ಟ್ ಪ್ರಾಕ್ಟೀಸಸ್ ಸಂಸ್ಥೆಯ ಸಂಗೀತ ಅಲ್ಲಿಗೆ ಬಂದಿದ್ದರು. ಅವರ ಜೊತೆಗೆ ಆ ಊರಿನ ಸಾಮಾಜಿಕ ಆರ್ಥಿಕ ಸ್ಥಾನಮಾನದ ಕುರಿತು ತಿಳಿದುಕೊಳ್ಳಲು ಬಂದ ಇಂಗ್ಲೆಂಡ್ನ ಲೀಸ್ ವಾಟ್ಸನ್ ಇದ್ದರು.
ಎಮ್ಮೆ ಕೊಂಡಿದ್ದೇ ಹಾಲು ಮಾರುವ ಉದ್ದೇಶದಿಂದ. ಬೆಳಗ್ಗಿನ ಹಾಲು ಮಾರಾಟಕ್ಕೆ. ಸಂಜೆಯದು ಮನೆ ಖರ್ಚಿಗೆ. ಹುಬ್ಬಳ್ಳಿಯಲ್ಲಿ ಹಾಲಿಗಿಂತ ಬೆಣ್ಣೆಗೆ ಹಕ್ಕೊತ್ತಾಯ ಹೆಚ್ಚು. ಬೈಫ್ನವರೂ ಬೆಣ್ಣೆಯಿಂದಾಗುವ ಲಾಭ ತಿಳಿಸಿದರು. ಬೆಣ್ಣೆ ಮಾಡಲು ಪಾರ್ವತಮ್ಮನ ಮನವೊಲಿಸಿದರು. ಹಾಲನ್ನು ಕಾಯಿಸಿ, ಮಜ್ಜಿಗೆ ಹೆಪ್ಪು ಬಿಡುವುದು. ಮರುದಿನ ಮೊಸರು ಕಡೆದು ಬೆಣ್ಣೆ ತೆಗೆಯುವುದು ಹಳ್ಳಿಯ ವಿಧಾನ. ಇದರಿಂದ ವಾರಕ್ಕೆ ಎರಡು ಕಿಲೋದಷ್ಟು ಬೆಣ್ಣೆ ಸಿಗುತ್ತದೆ.
ಹಾಲು ಲೀಟರೊಂದಕ್ಕೆ ೧೨ರೂಪಾಯಿ, ಬೆಣ್ಣೆ ಒಂದು ಕಿಲೋಗ್ರಾಂಗೆ ೧೧೦ರೂಪಾಯಿ. ಇದರಂತೆ ಹಾಲಿನ ವ್ಯಾಪಾರದಿಂದ ೧೬೮ ರೂಪಾಯಿ ವಾರಕ್ಕೆ ಸಿಕ್ಕರೆ, ಬೆಣ್ಣೆ ವ್ಯಾಪಾರದಿಂದ ವಾರಕ್ಕೆ ೨೨೦ ರೂಪಾಯಿ ಸಿಗುತ್ತದೆ. ಹೆಚ್ಚುವರಿ ಲಾಭ ೫೨ ರೂಪಾಯಿ. ಇದು ಇಸವಿ ೨೦೦೪ರ ಲೆಕ್ಕಾಚಾರ. ಈಗ ದುಪ್ಪಟ್ಟಾಗಿದೆ.
ಬೆಣ್ಣೆಯಿಂದ ಹೆಚ್ಚು ಲಾಭ ಗಳಿಸುವುದು ಹೇಗೆ?
ಬೆಣ್ಣೆ ಮಾಡುವ ವಿಧಾನದಲ್ಲಿ ಬದಲಾವಣೆ ಆದರೆ ಮಾತ್ರ ಇದು ಸಾಧ್ಯ ಅನ್ನುವುದು ಬೈಫ್ನ ವಾದ. ಹಾಗಾಗಿ ಬದಲಾವಣೆಯ ಮಾರ್ಗವನ್ನೂ ಬೈಫ್ ಸೂಚಿಸಿತು. ಹಾಲು ಕಾಯಿಸಿದ ಮೇಲೆ ಕೆನೆ ಮತ್ತು ಹಾಲನ್ನು ಪ್ರತ್ಯೇಕ ಮಾಡಿ ಹಾಲನ್ನು ಹೆಪ್ಪು ಹಾಕುವುದು ಜೊತೆಗೆ ತೆಗೆದಿಟ್ಟ ಕೆನೆಯನ್ನು ವಾರಕ್ಕೊಮ್ಮೆ ಕಡೆದು ಬೆಣ್ಣೆ ಮಾಡುವುದು. ಮೊಸರನ್ನು ಪ್ರತಿದಿನ ಮಾರಾಟ ಮಾಡುವುದು. ಇದರಿಂದ ಮೊಸರು, ಬೆಣ್ಣೆ ಎರಡರ ಆದಾಯವೂ ಸಿಗುತ್ತದೆ ಎಂದು ಬೈಫ್ ಸಂಸ್ಥೆ ಪಾರ್ವತಮ್ಮನವರಿಗೆ ಸಲಹೆ ನೀಡಿತ್ತು. ಪಾರ್ವತಮ್ಮ ಅದಕ್ಕೆ ಒಪ್ಪಿದ್ದರು.
ಹೀಗೆ ಮಾಡಿದ್ದರಿಂದ ವಾರದ ಕೊನೆಗೆ ಬೆಣ್ಣೆ ಒಂದೂವರೆ ಕಿಲೋ ಸಿಕ್ಕಿತು. ಮೊಸರು ವ್ಯಾಪಾರದಿಂದ ೧೦೦ ರೂಪಾಯಿ ಸಿಕ್ಕಿತು. ಒಟ್ಟಾರೆ ಆದಾಯ ೨೭೦ರೂಪಾಯಿ. ಇದೂ ಸಹ ಇಸವಿ ೨೦೦೪ರ ಲೆಕ್ಕಾಚಾರ. ಇಂದಿನ ಬೆಲೆ ೬೮೦ರೂಪಾಯಿಗಳು. ಪಾರ್ವತಮ್ಮನವರ ಮನೆಯ ಸದಸ್ಯರ ಸಂಖ್ಯೆ ಒಂಭತ್ತು. ಎರಡು ಎಕರೆ ಹೊಲ ಮಾಡಿದ್ದಾರೆ. ಅಲ್ಲಿ ಸಿಗುವ ಸೊಪ್ಪು, ಹುಲ್ಲು ಎಮ್ಮೆಗೆ ಆಹಾರ. ಒಳ್ಳೆಯ ಬೆಣ್ಣೆ ಬರಲು ಹತ್ತಿ ಕಾಳನ್ನು ಹಾಕುತ್ತಾರೆ. ಎಮ್ಮೆ ಹಾಗೂ ಕರುವನ್ನು ಮೇಯಿಸಲು ಮನೆಯವರೇ ಹೋಗುತ್ತಾರೆ. ಹೀಗೆ ವಾರದ ಖರ್ಚು ಕಳೆದು ನಿವ್ವಳ ಲಾಭ ೧೩೦ ರೂಪಾಯಿ.
ಇಲ್ಲಿ ಹುಲ್ಲಿನ ಲೆಕ್ಕ, ಮನೆಬಳಕೆ ಹಾಲಿನ ಲೆಕ್ಕ, ಸಗಣಿ ಗೊಬ್ಬರದ ಲೆಕ್ಕ, ಎಮ್ಮೆಯ ಇತರ ಖರ್ಚಿನ ಲೆಕ್ಕ ಪರಿಗಣಿಸಿಲ್ಲ.
ಹಳೇಗಬ್ಬೂರಿನಲ್ಲಿ ಗ್ರಾಮದೇವತೆ, ಬೀಬಿ ಫಾತಿಮಾ, ಭೀಮಾಂಬಿಕೆ ಎನ್ನುವ ಮೂರು ಮಹಿಳಾ ಸ್ವಸಹಾಯ ಸಂಘಗಳಿವೆ. ಸಂಘದ ಮೂಲಕ ಪಾರವ್ವ, ಮೇಠಿ, ನೀಲವ್ವ, ಬಿಡ್ನಿಯವರು ಹಸು ಕೊಂಡಿದ್ದಾರೆ. ರೇಣುಕಾ ಮೇಠಿ ಎಮ್ಮೆ ಕೊಂಡಿದ್ದಾರೆ. ಎರೆಗೊಬ್ಬರ, ಕುರಿ ಸಾಕಣೆ, ಹೈನು ಗುತ್ತಿಗೆ, ಕೃಷಿ ಮುಂತಾದ ಕೆಲಸಗಳನ್ನು ಸಾಂಘಿಕವಾಗಿ ಮಾಡುತ್ತಿದ್ದಾರೆ. ಇದೆಲ್ಲಾ ಬೈಫ್ನ ಮಾರ್ಗದರ್ಶನದಂತೆ ನಡೆಯುತ್ತಿದೆ.
ಅಂದು ರಾತ್ರಿ ದೇವಸ್ಥಾನದಲ್ಲಿ ಮೂರು ಸಂಘಗಳ ಮೀಟಿಂಗ್, ಧಾರವಾಡ ವಿಶ್ವವಿದ್ಯಾನಿಲಯದ ಪ್ರೊ. ಸುಭಾಷ್ ಅವರು ವ್ಯಾಪಾರ ಮತ್ತು ಮಾರುಕಟ್ಟೆ ತಂತ್ರಗಳನ್ನು ತಿಳಿಸಲು ಬಂದಿದ್ದರು. ವ್ಯಾಪಾರದಲ್ಲಿ ಅಬಿವೃದ್ಧಿಯಾಗಬೇಕಿದ್ರೆ ಮಾರುಕಟ್ಟೆಯಲ್ಲಿ ಯಾವುದಕ್ಕೆ ಹಕ್ಕೊತ್ತಾಯವಿದೆ ಅನ್ನೋದು ತಿಳಿದಿರಬೇಕು. ಅವ್ರಿಗೆ ಬೇಕಾದ್ದನ್ನು ನಾವು ನಿಯಮಿತವಾಗಿ, ಶುದ್ಧವಾಗಿ, ನಂಬಿಕೆಗೆ ಯೋಗ್ಯವಾಗಿ ಪೂರೈಸೋದ್ರಿಂದ ನಮ್ಮ ಮತ್ತು ಗ್ರಾಹಕರ ಮಧ್ಯೆ ಉತ್ತಮ ಸಂಬಂಧ ಉಳಿಸ್ಕೋಬಹುದು ಎನ್ನುವ ತಿಳುವಳಿಕೆ ನೀಡಿದರು.
ಇಸವಿ ೧೯೯೦ಕ್ಕೆ ಹೋಲಿಸಿದ್ರೆ ಇವತ್ತು ಹಾಲಿನ ಬೆಲೆ ಜಾಸ್ತಿಯಿದೆ ಅನ್ನಿಸಿದ್ರೂ, ಅದು ಖಂಡಿತಾ ಜಾಸ್ತಿಯಾಗಿಲ್ಲ. ಹಾಲಿನ ಬೆಲೆ ಪೂರೈಕೆ ಮತ್ತು ಹಕ್ಕೊತ್ತಾಯವನ್ನು ಅವಲಂಬಿಸಿದೆ. ಅಂದು ಒಂದು ಲೀಟರ್ ಹಾಲಿಗೆ ಆರು ರೂಪಾಯಿ ಮಾತ್ರ. ಕೇವಲ ಹಾಲು ವ್ಯಾಪಾರ ಮಾತ್ರ ಚಾಲ್ತಿಯಲ್ಲಿತ್ತು. ಕ್ರಮೇಣ ಹಾಲಿನ ಆವಕ ಹೆಚ್ಚಿತು. ಆಗ ಬೆಲೆ ಕಡಿಮೆಯಾಗಬೇಕಿತ್ತು. ಬೆಲೆ ಮತ್ತು ಆವಕದ ಹೆಚ್ಚಳ ಸರಿದೂಗಿಸಲು ಬೆಣ್ಣೆ, ತುಪ್ಪ, ಖೋವಾ, ಹಾಲಿನಪುಡಿ ಮುಂತಾದ ಉಪ ಉತ್ಪನ್ನಗಳ ತಯಾರಿಕೆ ಪ್ರಾರಂಭವಾಯಿತು. ಉಪ ಉತ್ಪನ್ನಗಳಿಗೆ ಹಕ್ಕೊತ್ತಾಯ ಹೆಚ್ಚಿತು. ಮಾರಾಟ ವಹಿವಾಟು ಹೆಚ್ಚಿತು. ಒಟ್ಟಾರೆ ಹಾಲಿನ ಬೆಲೆ ಹೆಚ್ಚಿತು. ಕೆ.ಎಂ.ಎಫ್. ಈ ಬಾರಿ ೪೫೦ ಟನ್ ಬೆಣ್ಣೆ ಮತ್ತು ೩೦೦ ಟನ್ ಹಾಲಿನಪುಡಿಯನ್ನು ವಿದೇಶಗಳಿಗೆ ವಿತರಣೆ ಮಾಡುತ್ತಿದೆ ಮತ್ತು ಸಾರ್ವಜನಿಕವಾಗಿಯೂ ಬೇಡಿಕೆ ಹೆಚ್ಚಿದೆ.
ಉದಾಹರಣೆಗೆ, ವಾರದಲ್ಲಿ ಸಿಗುವ ಸುಮಾರು ೧೫ ಲೀಟರ್ ಎಮ್ಮೆ ಹಾಲನ್ನು ಲೀಟರ್ಗೆ ೧೬ ರೂಪಾಯಿಗಳಂತೆ ಮಾರಿದರೂ ೨೪೦ ರೂಪಾಯಿ ಸಿಗುತ್ತದೆ. ಅಷ್ಟೇ ಹಾಲಿನಿಂದ ೧೦ ಲೀಟರ್ ಮೊಸರು, ೨ ಕಿಲೋ ಬೆಣ್ಣೆ ಸಿಗುತ್ತದೆ. ಒಟ್ಟಾರೆ ಆದಾಯ ೩೨೦ ರೂಪಾಯಿ ಆಗುತ್ತದೆ. ೧೫ ಲೀಟರ್ ಹಾಲಿನಿಂದ ಫೇಡೆ ತಯಾರಿಸಿದರೆ ಖರ್ಚೆಲ್ಲಾ ಕಳೆದು ನಿವ್ವಳ ೪೦೦ ರೂಪಾಯಿ ಲಾಭ ಸಿಗುತ್ತದೆ ಎನ್ನುವುದು ಫೇಡ ತಯಾರಕ ಬಾಬೂರಾವ್ ಅವರ ಹೇಳಿಕೆ.
ಇದನ್ನೇ ಪ್ರೊ.ಸುಭಾಷ್ರವರು ಮೌಲ್ಯ ಸರಪಳಿ ಎನ್ನುತ್ತಾರೆ. ಉದಾಹರಣೆಗೆ ಜೋಳದ ಬೆಲೆ ಒಂದು ಕಿಲೋಗ್ರಾಂಗೆ ಎಂಟು ರೂಪಾಯಿಗಳು. ಆದರೆ ಜೋಳದ ಹಿಟ್ಟು ಕಿಲೋ ಒಂದಕ್ಕೆ ೧೨ ರೂಪಾಯಿ ಮತ್ತು ಜೋಳದ ರೊಟ್ಟಿ ಮಾಡಿ ಮಾರಿದರೆ ಕಿಲೋ ಒಂದಕ್ಕೆ ೪೦ ರೂಪಾಯಿಗಳು ಸಿಗುತ್ತದೆ. ಇದರಲ್ಲಿ ಸ್ವಲ್ಪ ತ್ರಾಸೂ ಇರುತ್ತದೆ. ಕೆಲಸಾನೂ ಇರುತ್ತದೆ. ರೊಕ್ಕನೂ ಬರುತ್ತದೆ. ನಿರುದ್ಯೋಗಿಯಾಗಿ ಸುಮ್ಮನೆ ಕೂರೋ ಬದ್ಲು ಸ್ವಲ್ಪ ಕಷ್ಟ ಪಟ್ಟು ದುಡಿದರೆ ಬದುಕು ಸುಸೂತ್ರವಾಗುತ್ತೆ. ಅದಕ್ಕಾಗಿ ನೀವೆಲ್ಲಾ ಹಾಲು ಮಾರೋ ಬದ್ಲು ಬೆಣ್ಣೆ ಮಾರಾಟದಿಂದ ಹೆಚ್ಚು ರೊಕ್ಕ ಪಡೀಬಹುದು ಎನ್ನುವ ಸೂತ್ರ ಪ್ರೊ.ಸುಭಾಷ್ರದ್ದು.
ಮಹಿಳೆಯರ ಗುಂಪಿನಲ್ಲಿ ಗುಸುಗುಸು. ಹಾಲಿಗಿಂತಲೂ ಬೆಣ್ಣೇಲಿ ರೊಕ್ಕ ಸಿಗೋದು ಜಾಸ್ತಿಯಾದ್ರೆ ಯಾಕೆ ಮಾಡಬಾರದು. ಅಲ್ಲಾ ಹಸುವಿನ ಹಾಲಿನಲ್ಲಿ ಬೆಣ್ಣೆ ಕಡಿಮೆ. ಅದಕ್ಕೆ ಹಾಲು ಮಾರಾಟವೇ ಒಳ್ಳೆಯದು ಎನ್ನುವ ವಾದ ವಿವಾದಗಳು.
ಮನೆ ಗಂಡಸ್ರು ಇರೋ ಹಾಲನ್ನು ಪೂರಾ ಮಾರ್ಲಿಕ್ಕೆ ಓಯ್ತಾರ್ರೀ ಸಾಹೇಬ್ರೆ. ನಾವೇನ್ ಮಾಡೋದು? ಅನ್ನೋ ಪ್ರಶ್ನೆ ಮುನ್ನಾಬೀಯದು. ನಾವು ಪಟ್ಣಕ್ಕೆ ಹೊಗಾಕಿಲ್ಲ, ಮೊಸರು ಬೆಣ್ಣೆ ಮಾರೋದು ಹ್ಯಾಂಗ್ರಿ ರೇಣುಕಾ ಮೇಠಿಯ ಅಳಲು.
ನೋಡ್ರಿ ನೀವು ಸಬೂಬು ಹೇಳ್ಬ್ಯಾಡ್ರಿ. ಗಂಡಸರ ಸ್ವಸಹಾಯ ಗುಂಪ್ನೋರು ಬೆಣ್ಣೆ, ಮೊಸರು ಮಾರ್ಲಿಕ್ಕೆ ಒಪ್ಯಾರ. ನೀವೀಗ ಹಾಲಿಗೆ ನೀರು ಬೆರೆಸಿ ಮಾರಿ ಲಾಭ ಸಿಗತೈತಿ ಅಂತಾ ತಿಳಿದೀರಿ. ಅದು ತಪ್ಪು ದಾರಿ. ಬೆಣ್ಣೆಗೆ ಜಾಸ್ತಿ ಬೆಲೆ ಅನ್ನೋದು ಗೊತ್ತಾಗೈತಿ. ನೀವೇ ಯೋಚ್ನೆ ಮಾಡ್ರಿ ಎಂದಿದ್ದರು ಬೈಫ್ ಅಧಿಕಾರಿ ಅನಿಲ್ ನಿಟ್ಟೂರ್ಕರ್.
ಪಾರ್ವತಮ್ಮ ಮತ್ತು ಮುನ್ನಾಬೀ ಮಾತನಾಡಲಿಲ್ಲ. ಅವರಿಬ್ಬರಿಗೂ ಬೆಣ್ಣೆ ಮಾರಾಟವೇ ಲಾಭದಾಯಕ ಅನ್ನೋದು ಗೊತ್ತು. ಬೇರೆಯವರು ಬೆಣ್ಣೆ ಮಾರೋದ್ರಿಂದ ತಮ್ಮ ವ್ಯಾಪಾರಕ್ಕೆ ತೊಂದರೆಯಾದರೆ ಅನ್ನೋ ಆತಂಕ.
ಹಾಲಿಗೆ ನೀರು ಬೆರ್ಸೋದು ಖರೆ. ನಿಮ್ಮ ವರ್ತನೆಯ ಮನೆಯೋರು ಒಂದಿನ ಬ್ಯಾಡ ಅಂದ್ರೆ ಅಥ್ವಾ ನಿಮ್ಮಲ್ಲಿ ಹಾಲಿಲ್ದಾಗ ಬಿಡಬೋದು. ಆದರೆ ಬೆಣ್ಣೆ ಮಾಡಿದ್ರೆ ಈ ತ್ರಾಸು ಇರಾಂಗಿಲ್ಲ. ನೀವು ಕೊಡೋ ಶುದ್ಧ ಬೆಣ್ಣೆಗಾಗೇ ಕಾಯ್ತಾರೆ ಎನ್ನುವ ಪ್ರೇರಣೆ ಪ್ರೊ. ಸುಭಾಷ್ರದು.
ಪಾರಮ್ಮ, ಹುಸೇನ್ಬೀ, ನೀಲಮ್ಮ ಮೊದಲಾದವರು ಒಪ್ಪಲು ಸಿದ್ಧರಾಗಲಿಲ್ಲ. ಹೆಚ್ಚು ಹಾಲಿಲ್ಲ, ವರ್ತನೆ ಮನೆಗಳವರ ನಂಬಿಕೆ ಹೀಗೆ ಏನೆಲ್ಲಾ ತಕರಾರು.
ರಾತ್ರಿ ಹೆಪ್ಪುಗಟ್ಟುತ್ತಾ ಹೋಯಿತು. ಹಾಲು ಮೊಸರಾಗಲು, ಬೆಣ್ಣೆಯಾಗಲು ಬೇಕಾದ ಸೂಕ್ತ ಒಪ್ಪಿಗೆ ಸಿಗಲೇಯಿಲ್ಲ. ಹಾಲು-ಬೆಣ್ಣೆ ತಕರಾರು ಹಾಗೇ ಉಳಿಯಿತು. ನೀವೇನ್ಹೇಳ್ತೀರಾ?
Leave A Comment