ಯಾರಿಗಾಗಿ ಸೊಬಗು ಇಂತು
ಸೂರೆಯಾಗಿ ಹೋಗಿದೆ ?
ಶಶಿಯ ಕೃಪೆಯ ಜೊನ್ನವಿಂತು
ಜಗವನೆಲ್ಲ ಹಬ್ಬಿದೆ.

ಅರ್ಧರಾತ್ರಿ ! ಲೋಕವೆಲ್ಲ
ದಣಿದು ಮಲಗಿದೆ
ಮೌನಧಾತ್ರಿ ಶಿಶುವಿನಂತೆ
ಮುಗ್ಧವಾಗಿದೆ.

ಶರದ ಗಗನದಭ್ರ ಪುಳಿನ
ವಿಹಾರಿಯಾದ ಜೊನ್ನಗಂಗೆ
ತನ್ನ ಲೀಲೆಗಾಗಿ ತಾನೆ
ಹರಿದು ಬಂದಿದೆ.

ತಾರೆಯೂರ ನಾಕದಿಂದ
ಮರ್ತ್ಯದೂರ ಮನೆಯ ಮೇಲೆ
ಅಮೃತ ಭವ್ಯಹರಕೆಯಂತೆ
ಹರಿದು ಬಂದಿದೆ.
ವ್ಯೋಮ ತಪೋರೂಪದಂತೆ
ಹರಹಿ ನಿಂದಿದೆ.

ಸಗ್ಗದಿಂದ ಇಳಿದ ಹಾಲು
ಮರದ ಪರ್ಣ ಪರ್ಣದಲ್ಲಿ
ಹೊಕ್ಕು ಇಳಿದು ಕೆಳಗೆ ಜಿನುಗಿ
ಹರಿದು ಹೋಗಿದೆ.

ಇಲ್ಲಿ ಊರ ಮನೆಗಳಲ್ಲಿ
ದುಡಿದು ದಣಿದ ಜೀವ ಯಂತ್ರ
ದಣಿವ ಕಳೆಯಲೆಂದು ಮಲಗಿ
ನಿದ್ರಿಸುತ್ತಿವೆ.
ಬದುಕಿನಲ್ಲಿ ಪಡೆಯದಿದ್ದ
ಬಯಕೆಗಳನು ಕನಸಿನಲ್ಲಿ
ಕಂಡು ಪಡೆದು ಸುಖಿಸುವಂತೆ
ತೋರುವಂತಿದೆ.

ಹೊರಗೆ ಹರಡಿ ನಿಂದ ಸೊಬಗ
ಯಾರು ಸವಿಯದಿದ್ದರೇನು ?
ತನ್ನ ಲೀಲೆ ತನಗೆ ಪ್ರೀತಿ
ಎಂಬ ಬಗೆಯಲಿ
ಅಲ್ಪದೃಷ್ಟಿಗಿದುವೆ ನಷ್ಟ
ಪೂರ್ಣದೃಷ್ಟಿಗಿದುವೆ ಇಷ್ಟ
ಎಂಬ ತೆರದಿ ತನ್ನ ತಾನೆ
ಸೃಜಿಸಿಕೊಂಡಿದೆ.

ಸುತ್ತ ಮುತ್ತ ಮೇಲೆ ಕೆಳಗೆ
ಬುವಿಯ ಮಣ್ಣಿನುಸಿರಿನೊಳಗೆ
ಮೌನದೆದೆಯ ಮೌನದೊಳಗೆ
ಜೊನ್ನವಿಳಿದಿದೆ,

ಜೊನ್ನದಲ್ಲಿ ಮಿಂದ ಊರ
ಮನೆಗಳೆಲ್ಲ ಏನೊ ಒಂದು
ಮಂತ್ರಜಾತ ಲೋಕದೊಂದು
ಸೃಷ್ಟಿಯಂತಿವೆ !
ಸರ್ವವ್ಯಾಪಿ ಜೊನ್ನದಲ್ಲಿ
ಮಾಟದೂರ ನೋಟದಲ್ಲಿ
ಅರ್ಧರಾತ್ರಿ, ಬಯಲಿನಲ್ಲಿ
ನಾನು ನಿಂದಿಹೆ !

ಜೊನ್ನದಲ್ಲಿ ಮಿಂದ ನನ್ನ
ಪಾಪವೆಲ್ಲ ಹರಿದ ಹಾಗೆ
ನನ್ನ ನೆರಳು ಕಾಲ ಬದಿಗೆ
ಹೊರಳಿಹೋಗಿದೆ.

ನಷ್ಟ ಪಾಪ, ನಷ್ಟ ರೂಪ
ಜೊನ್ನದಲ್ಲಿ ಜೊನ್ನ ರೂಪ
ನಿತ್ಯಶಾಂತಿ ಸ್ವಸ್ವರೂಪ
ಎಂಬ ಬೋಧೆಯುದಯವಾಗಿ
ಹೃದಯವರಳಿದೆ !