Categories
ಕನ್ನಡ ಕುವೆಂಪು ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ರಾಷ್ಟ್ರಕವಿ ಕೃತಿ ಸಂಚಯ

ಹಾಳೂರು

ಬಾ, ಪುರದ ಗೆಳೆಯನೇ, ಹಾಳೂರ ನೋಡು:
ಹಾಳೂರು ಇದು ನಮ್ಮ ರೈತರಿಹ ಬೀಡು;
ದೇಶಕನ್ನವ ನೀಡುವರಿಗೆಲ್ಲ ಗೂಡು,
ನಮ್ಮೂರು ದಿನದಿನವು ಆಗುತಿದೆ ಕಾಡು!
ಅರೆಮುರಿದು ಒರಗಿಹವು ಗುಡಿಸಲುಗಳೆಲ್ಲ,
ಸರಿಮಾಡಿ ಹುಲ್ಲುಹೊದಿಸುವರೊಬ್ಬರಿಲ್ಲ.
ಪುರಗಳು ಸೇರಿದರು ಹಳ್ಳಿಯವರೆಲ್ಲ;
ಹಳ್ಳಿ ನಿರ್ಜನವಾಯ್ತು; ಕೇಳುವರೆ ಇಲ್ಲ.
ನಲಿದಾಡುತಿದ್ದಿತೈ ನಮ್ಮೂರು ಅಂದು;
ಕಳೆಯಿಲ್ಲದಾಗಿಹುದು ಹಾಳೂರು ಇಂದು.       ೧೦
ಅಂದು ನಾವಾಲಿಸಿದ ಸುತರ ಕೂಗಿಲ್ಲ,
ಅದು ನಮ್ಮನು ಕರೆದ ಹಿತವಚನವಿಲ್ಲ,
ಹಳ್ಳಿಯಿದು ಪಟ್ಟಣದ ಪಾಲಾಯಿತೆಲ್ಲ;
ಹಳ್ಳಿಗರು ಪುರಮಾರಿಗುಣಿಸಾದರಲ್ಲಾ!

ಬಾ, ಗೆಳೆಯ, ಇಲ್ಲೆ ಚೆಂಡಾಡಿದುದು ನಾವು;
ಈ ಹಸುರ ಮೇಲೆಯೇ ಹೊರಳಿದುದು ನಾವು;
ಕೇಕೆ ಹಾಕುತ ಕುಣಿದು ನೆರೆ ನಲಿದುದಿಲ್ಲಿ;
ಗೋಲಿಯಾಡುತ ನಾವು ಮರೆದ ತಳವಿಲ್ಲಿ.
ಇಂದಿಗೂ ಕಿವಿಯೊಳಿದೆ ಅಂದಿನಾ ಕೂಗು,
ಮನದೊಳಿದೆ ಅಂದಿನಾಟದ ತಾಗುಬಾಗು,    ೨೦
ಆ ಚಿಣ್ಣಿಕೋಲು, ಆ ಕಳ್ಳರಾ ಆಟ,
ಸೊಗೆಸೆನಿತು ಬೆಡಗೆನಿತು ಆ ನಮ್ಮ ಕೂಟ!
ಹಲಸಿನಾ ಹಣ್ಣುಗಳ ಕದ್ದು ತಂದಲ್ಲಿ
ಪೂರೈಸುತಿದ್ದೆವೈ ನಡುಹಗಲಿನಲ್ಲಿ.
ಬಾ ಗೆಳೆಯ, ಇಲ್ಲೆ ನೋಡಾ ಹಸುರಿನಲ್ಲಿ
ಕಾಳಗವ ಮಾಡುತ್ತಿದ್ದೆವು ಬೈಗಿನಲ್ಲಿ;
ಊರ ಹಿರಿಯವರೆಲ್ಲ ಇಲ್ಲಿಗೈತಂದು
ನೋಡುತಿದ್ದರು ನಮ್ಮ ಕಾಳಗವನಂದು.
ಈಗ ಬೀಸುವ ತಂಬೆಲರೆ ಬೀಸಿತಂದು,
ಈಗ ತೊಳಗುವ ರವಿಯೆ ರಂಜಿಸಿದನಂದು;   ೩೦
ಈಗಿನಾ ಗಗನವೇ ಮೇಲಿದ್ದಿತಂದು;
ಆದರೂ ಅಂದಿನಾ ಬೆಳಕಿಲ್ಲವಿಂದು!
ಎಲ್ಲಿಹೋಯಿತು ಅಂದಿನಾನಂದವಿಂದು?
ಹಳ್ಳಿಯಿದು ಹಾಳಾಯ್ತೆ ಮುಂದೆ ಎಂದೆಂದೂ?

ದೂರ ಕಾಣವುದು ಪಂಚಾಯಿತರ ಕೂಡು,
ಊರಗೌಡನ ಕಟ್ಟೆ, ಬಾ ಗೆಳೆಯ, ನೋಡು.
ದೂರ ಹೇಳುವರೆಲ್ಲ ಅಲ್ಲಿಗೈತಂದು
ತೀರ್ಪುಪಡೆದಲ್ಲಿಂದ ತೆರಳಿದರು ಅಂದು.
ಹೈಕೋರ್ಟುಗಳಿಗವರು ಹೋಗುತಿರಲಿಲ್ಲ,
ಲಾಯರುಗಳಿಗೆ ಹಣವ ಸುರಿಯುತಿರಲಿಲ್ಲ;     ೪೦
ಮೂರುಕಾಸಿನ ಜಗಳಕವರಾಸ್ತಿಯೆಲ್ಲ
ಮಾರಿ ಲಾಯರರ ಪಾಲಾಗುತಿರಲಿಲ್ಲ.
ಹಲ್ಲಿಯೊಳು ಮನೆಬಿದ್ದು ಹಾಳಾಗುತಿಹವು,
ಪೇಟೆಯೊಳು ಲಾಯರರ ಮನೆಯೇಳುತಿಹವು.
ಹಳ್ಳಿಯರ ರಕ್ತವನು ದೂರದಿಂ ಹೀರಿ
ಕೊಬ್ಬಿ ಬೆಳೆದಿಹರು ಲಾಯರರು ಮಿತಿಮೀರಿ.
ಮೊಂಡ ಕುರಿಗಳ ತೆರದಿ ಹಳ್ಳಿಯರು ಬಂದು
ಲಾಯರೊಡ್ಡುವ ಬಲೆಗೆ ಬೀಳುತಿಹರೆಂದೂ!
ಅಯ್ಯಯ್ಯೋ ಬಂದಿತೇ ಹಳ್ಳಿಗೀ ಕಾಲ?
ಕಾಪಾಡೋ ಹಳ್ಳಿಯನೂ, ಹೇ ಲಕುಮಿಲೋಲ!           ೫೦

ಬಾ ಗೆಳೆಯಾ, ಬಾ ಮುಂದೆ, ಹಾಳೂರ ನೋಡು;
ಹಾಳಾದ ವೈಭವಕೆ ಮನ್ನಣೆಯ ಮಾಡು.
ಅರೆಬಿದ್ದ ಗೋಡೆಯಿಹ, ಬೆಣ್ಣೆ ಹೂ ಬಳ್ಳಿ
ಹಬ್ಬಿ ಕಾಡಾಗಿರುವ, ಈ ಗುಡಿಸಲಲ್ಲಿ
ನಮ್ಮೂರ ಬರಗಾರ ತಾತಯ್ಯನಿದ್ದ;
ದಿನದಿನವು ಅವನು ಜೈಮಿನಿಯೋದುತಿದ್ದ.
ನಾವೆಲ್ಲ ಬಂದಾತನೋದುವುದ ಕೇಳೆ
ಸೇರುತಿದ್ದೆವು ಅಂದು ಈ ಜಗಲಿ ಮೇಲೆ.
ಅವನೋದು ನಮಗರ್ಥವಾಗುತಿರಲಿಲ್ಲ
ಆದರಾತುರದೊಳಾಲಿಸಿದೆವದನೆಲ್ಲ  ೬೦
ಅವನ ಪುಸ್ತಕ ಹಳೆಯ ತಾಳೆಗರಿಯೋಲೆ.
ಪೂಜಿಸುತಲಿದ್ದನದ ಓದಾದ ಮೇಲೆ;
ಆ ಊರಿಗೆಲ್ಲ ಅದು ಒಂದೆ ಮಾಗ್ರಂಥ,
ತಾತಯ್ಯ ಪುಸ್ತಕದ ಭಂಡಾರವಂತ.
ವಿದ್ಯಾಂಸನಾತನೇ ಈ ಊರಿಗೆಲ್ಲ,
ಆತನಿಗೆ ಮರ್ಯಾದೆಮಾಡುವರು ಎಲ್ಲ.
ಕನ್ನಡದ ನುಡಿಯೆಂದರಾತನಿಗೆ ಪ್ರೀತಿ;
ಆಚಾರ್ಯನವನಾಡಿದುದೆ ಊರ ನೀತಿ!
ತಾಯನುಡಿಯೊಲುಮೆ ತಾತಯ್ಯಗಿದ್ದಂತೆ
ನಮಗಿದ್ದರೇನುಂಟು ತಾಯ್ನುಡಿಗೆ ಚಿಂತೆ?      ೭೦
ನಾವೀಗ ಮಾತೃಭಾಷೆಯ ತಳ್ಳಿ ದೂರ
ಪರಭಾಷೆಯನ್ನಪ್ಪಿ ಚುಂಬಿಪೆವು ಪೂರ.
ನಮ್ಮ ನಾಡಿನ ನುಡಿಯು ನಮಗೆ ಸೊಗಸಲ್ಲ,
ಪರಭಾಷೆಯೆಂದರದು ನಮಗೆಲ್ಲ ಬೆಲ್ಲ.
ನಮ್ಮ ಪಡೆದಿಹ ತಾಯ ತಳ್ಳಿಹೆವು ದೂರ;
ಪರಕೀಯಳೊಬ್ಬಳಿಗೆ ಹಾಕಿದೆವು ಹಾರ!
ಕರ್ಣಾಟಮಾತೆಯಾ ಮಕ್ಕಳಿರ ಕೂಡಿ
ತಾಯ್ನುಡಿಯ ಸೇವೆಯನು ಮನಸಿಟ್ಟು ಮಾಡಿ:
ರನ್ನ ಪಂಪರು ಪೂಜಿಸಿದ ಪರಮಭಾಷೆ,
ಲಕ್ಷ್ಮೀಶನಿಂಪಾಗಿ ವಿರಚಿಸಿದ ಭಾಷೆ, ೮೦
ನಾರಣಪ್ಪನು ಬರೆದ ಭಾರತದ ಭಾಷೆ,
ಕನಕದಾಸರು ಹಾಡಿದಾ ಮಧುರ ಭಾಷೆ,
ತ್ಯಾಗಿಯಾದಾ ಪುರಂದರ ಕವಿಯ ಭಾಷೆ,
ರಾಘವಾಙ್ಕನು ಬರೆದ ಕನ್ನಡದ ಭಾಷೆ;
ಇದು ನಮ್ಮ ತಾಯ್ನುಡಿಯು! ಇದು ನಮ್ಮ ಭಾಷೆ!
ಇರದೆ ನಿಮಗೆಲ್ಲ ಇದನೆತ್ತುವಭಿಲಾಷೆ?
ಕನ್ನಡದ ಕವಿವರರೆ, ನೀವೆಲ್ಲ ಸೇರಿ,
ಕನ್ನಡದ ಕೇತನವು ನಭದಲ್ಲಿ ಹಾರಿ,
ಜಗದ ಕಂಗಳ ಹಿಡುದು ಮೆರೆವಂತೆ ಮಾಡಿ,
ಕನ್ನಡದ ವಾಗ್ದೇವಿಗಮರತೆಯ ನೀಡಿ!           ೯೦

ಇಂದಿಲ್ಲಿ ಜೈಮಿನಿಯನೋದುವರು ಇಲ್ಲ,
ಹಾಳೂರು ಮಾಡಿದರು ಪುರವಸೇರೆಲ್ಲ!’
ಕಾರ್ಖಾನೆಗಳ ಕೂಲಿಗಾಸೆಪಡುತೆಲ್ಲ
ಓಡಿದರು ಪಟ್ಟಣಕೆ: ದೇವರೇ ಬಲ್ಲ.
ಪಟ್ಟಣವ ಸೇರೆ ದುರ್ನಡತೆಗಳನೆಲ್ಲ
ಒಂದೊಂದನೇ ಕಲಿತು ಹಾಳಾದರೆಲ್ಲ.
ಪುರದೊಳಗೆ ಸೌಭಾಗ್ಯ ದೊರಕುವುದು ಎಂದು
ಬರಿದೆ ಭಾವಿಸಿ ಹಳ್ಳಿಗಳ ಬಿಟ್ಟರಂದು.
ಪುರಕೆ ನೋಡಲು ಬಂದು ಕಂಡುದವರೇನು?
ದುರ್ವ್ಯಸನ ಕುಡುಕುತನ ಜೂಜಾಟವೇನು,    ೧೦೦
ಹೊಟ್ಟೆಗಿಲ್ಲದ ಬಟ್ಟೆಯಾಡಂಬರೇನು,
ಸಿನಿಮಾನಾಟಕಶಾಲೆಗಳ ಭೋಗವೇನು!
ಸಂಪಾದಿಸಿದುದೆಲ್ಲ ದುರ್ನಡತೆಗಾಯ್ತು,
ಹಳ್ಳಿಯಾ ಸುಖವಳಿದು, ಪುರ ಮಸಣವಾಯ್ತು!
ಹಳ್ಳಿಯಾ ಸುಖವಿಲ್ಲ; ಪುರದ ಸುಖವಿಲ್ಲ;
ಹಳ್ಳಿಯಗಲಿದ ನರಗೆ ಏನೊಂದುಮ್ಮಿಲ್ಲ.
ದೂರದಾ ಗಿರಿ ಕಣ್ಣಿಗತಿನುಣ್ಣಗಾಗಿ
ತೋರ್ಪಂತೆ ಕಾಣುವನು ಪಟ್ಟಣದ ಭೋಗಿ;
ಹೊಳೆಯಾಚೆಯಾ ಹಸುರು ಮನಮೋಹಿಪಂತೆ
ಮನವನಾಕರ್ಷಿಪುದು ಪುರದಂತೆ ಕಂತೆ!       ೧೧೦
ಮೇಲೆಲ್ಲ ಹೊಸತಳುಕು, ಕೆಳಗೆ ಬರಿ ಹುಳುಕು;
ಮೇಲೆ ನೋಡಲು ಬೆಳಕು, ಒಳಗಿಳಿಯೆ ಕೊಳಕು!
ಹಳ್ಳಿಯರಿಗಿರುವ ಸುಖ ಪಟ್ಟಣಿಗಗೆಲ್ಲಿ?
ಹಳ್ಳಿಯವ ತಾ ರಾಜ ತನ್ನೂರಿನಲ್ಲಿ!
ಗಂಜಿಯುಂಡರು ಹಳ್ಳಿಯದು ಪರಮನಾಕ,
ಪಾಯಸವನುಂಡರೂ ಪುರ ನರಲೋಕ!
ಹಳ್ಳಿಯೊಳು ಬಲುಶಾಂತಿ, ಗಲಿಬಿಲಿಯೆ ಇಲ್ಲ;
ಪಟ್ಟಣವೊ ಬರಿಬೊಬ್ಬೆ, ಶಾಂತಿಯೇ ಇಲ್ಲ!
ಪುರಜನದ ದಾಸತನ ಹಳ್ಳಿಯವಗಿಲ್ಲ.
ತನ್ನ ಕೆಲಸವ ಮಾಡಿ ತಾ ದುಡಿವನೆಲ್ಲ.          ೧೨೦
ಹಳ್ಳಿಯವ ಬಾಯ್ಬಿಡನು ಪರರನ್ನಕಾಗಿ;
ಹಳ್ಳಿಯವ ತಿರುಗನೈ ಸೋಮಾರಿಯಾಗಿ;
ಹಳ್ಳಿಯವನೆಂದಿಗೂ ಗರ್ವಿತಾನಲ್ಲ,
ಕಡತಂದ ಬಟ್ಟೆಯಾ ಷೋಕಿ ಅವಗಿಲ್ಲ.
ಹಳ್ಳಿಗನೆ, ಪುರದವನ ಅನುಸರಿಸಬೇಡ;
ಹಳ್ಳಿಯೇ ಸ್ವರ್ಗವೈ, ಅದ ಬಿಡಲುಬೇಡ.
ಹಳ್ಳಿಯೊಳಗಿಹವು ಸುಖ ಶಾಂತಿ ವಿಶ್ರಾಂತಿ,
ಹಳ್ಲಿಯೊಳಗಿಲ್ಲ ಪುರದ ಹೆಮ್ಮೆ ಭ್ರಾಂತಿ.
ಕೋಟಿ ಧನವಿದ್ದರೂ ಪಟ್ಟಣವು ಗೋಳು;
ಕಾಸಿಲ್ಲದಿದ್ದರೂ ಸುಖ ಹಳ್ಳಿಬಾಳು!   ೧೩೦
ಕಷ್ಟವಿದ್ದರು ಸರಿಯೆ, ಇರಲಿ ಸ್ವಾತಂತ್ರ್ಯ;
ಸುಖವಿದ್ದರೂ ಹೀನವೈ ಪಾರತಂತ್ರ್ಯ:
ಸ್ವಾತಂತ್ರ್ಯವಿಲ್ಲದವಗಾನಂದವೆಲ್ಲಿ?
ಸ್ವಾತಂತ್ರ್ಯಕಾವಾಸವಾಗಿಹುದು ಹಳ್ಳಿ!
“ಮುಂದಲ್ಲಿ ಕಾಣುವಾ ನೆಲಗಟ್ಟದೇನು?
ಹಳುಬೆಳೆದು ಹಾಳಾಗಿಹುದು; ಹೇಳು ನೀನು.
ಅದ ನೋಡಿ ಕಂಬನಿಯ ಸೂಸುತಿಹೆ ಏಕೆ?
ಬಿಡು, ಗೆಳೆಯ, ಆದುದಾಯಿತು, ಶೋಕವೇಕೆ?”
ಹಿಂದಿನಾ ದಿನಗಳಾಲೋಚನೆಯು ಎನ್ನ
ಮನವ ಪೀಡಿಸುತಿಹುದು! ಪೀಡಿಸದೆ ನಿನ್ನ?    ೧೪೦
ಸಂತಸದಿ ನಲಿದಾಡಿತಂದು ನಮ್ಮೂರು
ಮಸಣವಾಗಿಹುದಿಂದು; ಈಗ ಹಾಳೂರು!
ಅದು ನಮ್ಮ ಹಳ್ಳಿಮಠವಾಗಿದ್ದಿತಂದು
ಅಲ್ಲೆ ನಾವಕ್ಷರಗಳನು ಕಲಿತೆವಂದು;
ಅದೆ ನಮ್ಮ ಗುರುಗಳಾ ವರ ಪಾಠಶಾಲೆ,
ಅಲ್ಲೆ ಅಕ್ಷರಮಾಲೆಯನು ಮರಳಮೇಲೆ
ತಿದ್ದಿದೆವು, ಬರೆಬರೆದು ಕೈ ಕೆಂಪಗಾಗೆ,
ನೋವಿಂದ ಕಂಬನಿಗಳಿಳಿದಿಳಿದು ಹೋಗೆ!
ನಮ್ಮ ಗುರುಗಳ ರೂಪು ತಾ ಮನದ ಮುಂದೆ
ಈಗಲೂ ನಿಂತಂತೆ ತೋರುವುದು; ಹಿಂದೆ     ೧೫೦
ಅವರೆನ್ನ ಕಿವಿ ಹಿಂಡಿ ಬೆದರಿಸಿದ ರೀತಿ
ಇಂದಿಗೂ ಹುಟ್ಟಿಸುವುದೆನಗೊಂದು ಭೀತಿ!
ಮಠದೈಗಳವರೇನು ವಿದ್ವಾಂಸರಲ್ಲ,
ಬರೆದೋದುವುದು ಗಣಿತವಿದೆ ವಿದ್ಯೆಯೆಲ್ಲ.
ಶಿಕ್ಷಣಪ್ರಿಯರಾದರೂ ಒಳ್ಳೆಯವರು,
ಪರರ ಕಷ್ಟವ ಕಂಡು ಗೋಳಿಡುವರವರು.
ಅವರ ದಾರಿಯೊಳವರು ದೊಡ್ಡವರೆ ಹೌದು;
ಕೀಳಲ್ಲವವರ ಬಾಳದು ಹಿರಿದೆ ಹೌದು;
ಸುಖವಾದಿಯಾಗಿದ್ದರವರು, ಜನಕ್ಕೆಲ್ಲ
ಸುಖದ ಮಾತನೆ ಹೇಳಿ, ದುಃಖಗಳೆನೆಲ್ಲ        ೧೬೦
ಕ್ಷಣಮಾತ್ರ ತಳ್ಳುವರು ಜನದ ಮನದಿಂದ;
ಕ್ಷಣಮಾತ್ರವಾದರೂ ಕೊಡುವರಾನಂದ!
ಅಷ್ಟು ಕಿರಿ ಬುರುಡೆಯೊಳು ಆ ವಿದ್ಯೆಯೆಷ್ಟು
ತುಂಬಿರುವುದೆಂದಲ್ಲರಾಶ್ಚರ್ಯಪಟ್ಟು
ಪೂಜಿಸುವರಾತನನು; ತರ್ಕದಲ್ಲೇನು
ಕಡಿಮೆಯಾಗಿರಲಿಲ್ಲ; ಹೆಚ್ಚು ಮಾತೇನು?
ನಮ್ಮ ಗುರುಗಳ ಬುದ್ಧಿ ‘ಇಪರೀತ ಬುದ್ಧಿ’
ಎಂದು ಹರಡಿತ್ತು ಊರೊಳಗೆಲ್ಲ ಸುದ್ದಿ!
ವಾದದೊಳು ಸೋತರೂ ವಾದಿಸುವರಿನ್ನೂ
“ವಾದದೊಳಗೆಂದಿಗೂ ಸೋತಿಲ್ಲ ನಾನು”      ೧೭೦
ಎಂದವರು ಹೇಳುವರು ಅಭಿಮಾನದಿಂದ;
ವಾದವೆಂದರೆ ನಮ್ಮ ಗುರುಗಳಾನಂದ!
ಹೊರುವರವರತಿ ದೊಡ್ಡ ಪುಸ್ತಕದ ಗಂಟು:
ಗ್ರಂಥ ಬೇರೆಯದಲ್ಲ, ಕನ್ನಡ ನಿಘಂಟು!
ಹಳ್ಳಿಯವರಲ್ಲಲ್ಲೆ ಬೆರಗಾಗಿ ನಿಂತು
ನೋಡುವರು ಸರ್ವಜ್ಞ ಸಾಗುತಿರಲಿಂತು!
ಪಾಪ, ನಮಗೇಕೆಮ್ಮ ಗುರವರರ ಗೋಳು?
ಸುಖದುಃಖವೀ ಲೋಕವಿದು ಕಲೆತ ಬಾಳು.
ಅವರ ಜೀವನದೊಳಿರಬಹುದೈ ಕಳಂಕ;
ತೋರಬಹುದವರೊಳು ನಿರುಪಯೋಗದಂಕ;            ೧೮೦
ಆದರೂ ಗುರುಗಳನು ದೂರದಿರು ನೀನು.
ಪರರ ಜೀವನದಳಲ ನೀ ಬಲ್ಲೆಯೇನು?
ಜಾಲದೊಳು ಸಿಲುಕಿರುವದೀ ಜಗದ ಬಾಳು,
ಯಾರ ಕಷ್ಟವನಾರು ಬಲ್ಲರದ ಹೇಳು?
ಸಂಬಳವೊ ಬಲು ಕಡಿಮೆ; ಬಡತನದ ಬಾಳು;
ಉಪ್ಪಿಲ್ಲ; ಮೆಣಸಿಲ್ಲ; ದಿನದಿನವು ಗೋಳು.
ಆದರೂ ಸಜ್ಜನರ ಮಾರ್ಗವನು ಬಿಡದೆ
ನಡೆಸಿದರು ಜೀವನವನವರು ಗೊಣಗುಡದೆ.
ವಿದ್ಯೆ ಬೋಧಿಸಿದವರು ಯಾರಾದರೇನು?
ವರ ಗುರುಗಳವರೆನಗೆ ಹೇಗಿದ್ದರೇನು?          ೧೯೦
ನಮ್ಮ ಹಳ್ಳಿಯ ಗುರುಗಳಮಲತರ ಜೀವ
ನಮಗಿದ್ದರದೆ ಸಾಕು, ಮೇಣವರ ಭಾವ!

ಇಲ್ಲೋದಿದವರು ಕೆಲರು ಕಾಲೇಜ ಸೇರಿ
ಪ್ರೌಢವಿದ್ಯಾಭ್ಯಾಸ ಮಾಡಿದರು ಮೀರಿ:
ಆಸ್ತಿಯಾಭರಣಗಳನೆಲ್ಲವನು ಮಾರಿ
ಓದಿಸಿದರಾತನನು, ಒಂದು ಸರಕಾರಿ
ಚಾಕರಿಯು ಸಿಗಲೆಂದು ಬಹಳ ಹಾರೈಸಿ;
ನೌಕರಿಯು ದೊರಕಿತೈ ಓದು ಪೂರೈಸಿ!
ಊರ ಜಾಣರು ಪುರದ ಪಾಲಾಗಲೆಲ್ಲ
ಊರಿನೊಳಗುಳಿವರೈ ಮಂಕರೇ ಎಲ್ಲ.          ೨೦೦
ಓದು ಕಲಿತವರೆಲ್ಲ ಸೇರೆ ಮೈಸೂರ
ಯಾರಿಂದಲಾಗುವುದು ಹಳ್ಳಿಯುದ್ಧಾರ?
ವಿದ್ಯಾರ್ಥಿಗಳಿಗೆಲ್ಲ ಹಿಡಿದಿರುವುದೀಗ
ಸರಕಾರಿ ನೌಕರಿಯ ಚಾಕರಿಯ ರೋಗ.
ಹಳ್ಳಿಯಿಂದಲೆ ಬಂದು ಹಳ್ಳಿಯನೆ ದೂರಿ.
ಹಳ್ಳಿಯನು ಸುಲಿಯುವರು ಲಾಯರೊಳು ಸೇರಿ.
ಬೀದಿಯೊಳು ಸಂಚರಿಸಿ ಗೆಳೆಯರೊಡಗೂಡಿ
ನಾಚುವನು ಮುಂದೆ ಬಹ ತಂದೆಯನು ನೋಡಿ!
ಗೆಳೆಯನಿವರಾರೆಂದು ಪ್ರಶ್ನೆಯನು ಕೇಳೆ
ತಮ್ಮೂರಿನಾಳೆಂಬುವನು ನೋಡಿ ಮೇಲೆ:      ೨೧೦
ತಂದೆಯನು ಆಳೆಂದು ಹೇಳುವನು ನಾಚಿ
ಮಗನೆ? ಅವನುದರದಿಂ ಬಂದಿಹ ಪಿಶಾಚಿ!
ನಮ್ಮ ದೇಶದ ಜೀವವೀ ನಮ್ಮ ಹಳ್ಳಿ
ಅಮ್ಮ ಭಾರತಿಗಿದೇ ಸಂಜೀವಬಳ್ಳಿ.
ಹಳ್ಳಿ ಹಾಳಾಗುವುದ ಕಂಡು ಕಣ್ಣಾರ,
ಯುವಕನೇ, ಓಡುವೆಯ ಸೇರೆ ಮೈಸೂರ?
ಭಾರತಿಯುದರ ಹಳ್ಳಿ ಹಸಿದಿಹುದ ನೋಡಿ
ಓಡುವವನಲ್ಲವೇ ಬಲು ನೀಚ ಹೇಡಿ?
ಭಾರತಾಂಬೆಗೆ ಹಳ್ಳಿಯೇ ಹೃದಯ, ಹೊಟ್ಟೆ;
ಯಂತ್ರಗಳು ಬಂದರೂ ಬೇಸಾಯ ಬಟ್ಟೆ.       ೨೨೦
ಹೊಟ್ಟೆಗಿಲ್ಲದೆ ಕೂಗುತಿಹುದೆಮ್ಮ ದೇಶ;
ಬೆದರಿಸುವುದೆಮ್ಮ ನಾಗರಿಕತೆಯ ರೋಷ;
ಚೀರುತಿದೆ ಮಾರಿಯಂದದಿ ಯಂತ್ರಘೋಷ;
ಪಾಪ ಧರಿಸಿಹುದೀಗ ಪುಣ್ಯದಾ ವೇಷ!
ಹಳ್ಳಿಗಳೆ ಅಮ್ಮ ಭಾರತದೇವಿಗನ್ನ:
ಹಳ್ಳಿಯುದ್ಧಾರದೊಳು ತೊಡಗುವನೆ ಧನ್ಯ!

ಮುಂದೆ ಕಾಣುವುದೆಮ್ಮ ಗೋವುಗಳ ಹಟ್ಟಿ;
ಬಹುಕಾಲ ಬಾಳೀಗ ಹಾಳಾದ ತೊಟ್ಟಿ.
ಪೂರ್ವಗಗನದೆ ನಳನಳಿಸೆ ಅರುಣಲೀಲೆ,
ಕೆಂಬಿಸಿಲು ನಲಿದಾಡೆ ಬೆಟ್ಟಗಳ ಮೇಲೆ,         ೨೩೦
ಮೆಲುಮೆಲನೆ ನಿಶೆ ಜಾರೆ, ತಾರೆ ಕೆಲಸಾರೆ,
ವಿಹಗ ಸಂಕುಲವೆದ್ದು ಇಂಚರವ ಬೀರೆ,
ಭೂದೇವಿ ತನ್ನ ಕರಿ ಹೊದಿಕೆಯನು ತೂರೆ,
ಮೈದೋರಲಾಕೆಯಾ ಪೊಸ ಹಸರು ಸೀರೆ;
ತಂಬೆಲರು ಬೀಸೆ ಸಮಗಳ ಸೂರೆಗೊಂಡು,
ಝೇಂಕರಿಸಿ ಭೃಂಗಾಳಿ ಹಾರೆ ಬಂಡುಂಡು,
ಎಲ್ಲಿಯುಂ ನವಜೀವನದ ಕಳೆಯು ತೋರೆ,
ಶಾಂತಿಯಾನಂದಗಳ ಸೌಂದರ್ಯ ತಾರೆ,
ಆಡುತಿದ್ದೆವು ನಾವು ಕರುಗಳೊಡಗೂಡಿ
ಮುದ್ದಿಸುತ ಹೊಂಬಿಸಲೊಳೋಡಾಡಿಯಾಡಿ! ೨೪೦
ಬೇಸಾಯಗಾರರಿಗೆ ತುರುಗಳಾಧಾರ;
ದನಕರುಗಳಿಂದಹುದು ಹಳ್ಳಿಯುದ್ಧಾರ.
ಶ್ರೀಕೃಷ್ಣ ಗೋಕುಲದಿ ಗೋಗಳನು ಕಾಯೆ,
ಗೋವೊಳಿರಲುರ್ವರೆಯೆ, ಗೋವೆಮ್ಮ ತಾಯೆ!
ಭಾರತಿಯ ಸಲಹಿದವು ಗೋವುಗಳ ಹಿಂದೆ,
ಭಾರತಿಯನುದ್ಧಾರ ಮಾಡುವುವು ಮುಂದೆ,
ಎಳೆ ಮಕ್ಕಳಿಗೆ ಗೋವೆ ಪೀಯೂಷವೀವ
ಪರಮ ಜನನಿಯು; ಗೋವು ಕೂಳಿಡುವ ಜೀವ.
ದುಡಿದುಡಿದು ಮುದಿಯಾದ ಗೋಗಳನು ಮಾರಿ,
ಪಾಪಿಯಾಗಲು ಬೇಡ! ಕೆನ್ನೀರು ಚೂರಿ          ೨೫೦
ಕತ್ತಿಗಳ ಕಂಡ ಗೋ ಶಪಿಸದೇ ನಿನ್ನ?
ವಿಷವಾಗದೇ, ಪಾಪಿ, ನಿನ್ನ ಹಾಲನ್ನ?

ನಮ್ಮೂರ ಗೋಪಾಲ ತಿಮ್ಮನಾಗಿದ್ದ;
ಬಲಶಾಲಿ, ತನ್ನ ಧರ್ಮದಿ ತಾನೆ ಸಿದ್ಧ.
ಮುಂಜಾನೆಯೊಳಗೆದ್ದು ಬಿಸಿಗಂಜಿಯುಂಡು,
ಎಲೆಯಡಿಕೆ ತಂಬಾಕುಗಳ ಹಾಕಿಕೊಂಡು,
ಸಿಳ್ಳುಹಾಕುತ ಬಹನು, ಬಾನಾಡಿ ಹಾರಿ
ಮುಂಬೆಳಕು ರಂಜಿಸುವ ಬಾಂದಳವ ಸೇರಿ
ಹೊಂಬಣ್ಣದಿಂದೆಸೆವ ಮೇಘಗಳೊಳಾಡಿ        ೨೬೦
ಮುಂಜಾನೆ ಹಾಡುಗಳ ಸಂತಸದಿ ಹಾಡಿ
ನಲಿವಂತೆ, ಉಲಿವಂತೆ, ಒಲಿವಂತೆ ಮನವ
ಬೆಳಗಾಗೆ ಬರುವನಾತನು ಕಾಯೆ ದನವ:
ಎದೆಗಾರನೆತ್ತರದ ಮೈ ತುಂಬಿದಾಳು;
ಬಗ್ಗದಿಹ ಕುಗ್ಗದಿಹ ಕಗ್ಗಲ್ಲ ಬಾಲು!
ಬಡತನದ ಬಾವುಟಗಳವನುಟ್ಟ ಬಟ್ಟೆ;
ರಂದ್ರಗಳಲಲ್ಲಲ್ಲಿ ಇಣುಕುವುದು ಹೊಟ್ಟೆ.
ಮುಚ್ಚುತಿದ್ದುದು ಪಂಚೆಯವನ ಮೊಳಕಾಲ;
ಬಗಲೊಳಿಹುದಾವಗಂ ಎಲೆಯಡಿಕೆ ಚೀಲ.
ಹಗಲೊಳಿರುವುದು ಸದಾ ಕಂಬಳಿಯ ಚಿಂದಿ,
ಮೈಮೇಲೆ ಪಟವಾಡುವುದು ಹರಿದ ಹಂಗಿ;     ೨೭೦
ಕೈಯೊಳಗೆ ಕೊಳಲೊಂದು ಬಿಡದಿದ್ದಿತೆಂದೂ;
ಕೊಳಲೆಂದರವನಾತ್ಮ, ಕೊಳಲವನ ಬಂಧು.
ನಿರ್ಜನಾರಣ್ಯಗಳ ನಡುವೆ ಕೊಳಲೂದಿ
ನಲಿಯುವನು ಸಂತಸದ ಸಾಗರವ ಸೇದಿ;
ಬಿಸಿಲೇರೆ ಹಸುಗಳನು ಹಸರು ಹುಲುಸಾಗಿ
ಬೆಳೆದೆಡೆಗೆ ಹೊಡೆಯುತವು ಮೇಯೆ ತಲೆಬಾಗಿ,
ಬಳಲಿಕೆಯ ನೀಗುವನು ಮಲಗಿ ನೆರಳಲ್ಲಿ;
ವೈಕುಂಠವಾಗಿತ್ತು ತಿಮ್ಮನಿಗೆ ಹಳ್ಳಿ!
ಬಿಸಿಲಬೇಗೆಯು ಮೀರೆ ನಡುಹಗಲಿನಲ್ಲಿ
ನಿಬಿಡವನಗಳ ಕೃಷ್ಣತರ ಛಾಯೆಯಲ್ಲಿ           ೨೮೦
ಗೋಗಳೊರಗಿರೆ ಮೆಲುಕಹಾಕಿ ಕಣ್ಮುಚ್ಚಿ,
ತಿಮ್ಮ ತೊರೆಯನು ಸೇರಿ ಬುತ್ತಿಯನು ಬಿಚ್ಚಿ
ತಣ್ಣೆಲರ ತೀಟದೊಳು ತಂಗಳನು ತಿಂದು
ಹಸುರ ಮೇಲ್ಮಲಗುವನು ಗೋಗಳೆಡೆ ಬಂದು!
ಸಂಜೆಯೊಳು ಕೊಟ್ಟಿಗೆಗೆ ತುರುಗಳನ್ನಟ್ಟಿ,
ಗೂಳಿಗಳ ಕೂಡಿ, ಕರು ಗೋವುಗಳ ಕಟ್ಟಿ,
ದಿನದಿನದ ಕೂಲಿ ತಾಂಬೂಲಗಳ ಕೊಂಡು
ಸೇರುವನು ಜೋಪಡಿಯನಾಯಾಸಗೊಂಡು.
ಸೃಷ್ಟಿಯೊಳು ನಮ್ಮ ಬಡ ತಿಮ್ಮನ ಸ್ಥಾನ
ಕಿರಿದಲ್ಲ; ರಾಜತನಕಲ್ಲವದು ಹೀನ!  ೨೯೦
ಜೀವನದ ದಾರಿಗಳಲದು ಒಂದು ದಾರಿ:
ಕೈಮರವು ನಿಂತಿಹುದು ದೇವನನು ತೋರಿ!

ಎಲೆ ಗೆಳೆಯ, ಅಲ್ಲಿ ಕಾಣುವ ಹುಲ್ಲುಮಾಡು
ನಮ್ಮೂರಿನಂಗಡಿಯದಾಗಿತ್ತು ನೋಡು!
ಸಿದ್ದಣ್ಣನಿದ್ದ, ನಮ್ಮೂರ ವ್ಯಾಪಾರಿ;
ಅವನಂಗಡಿಯು ಸುಮ್ಮನಿರದ ಸಂಚಾರಿ!
ಅದು ಬಿದಿರಿನಲಿ ಹೆಣೆದ ಬಲುದೊಡ್ಡ ಬುಟ್ಟಿ;
ಇಂತಿದ್ದಿತದರೊಳಿಹ ಸರಕುಗಳ ಪಟ್ಟಿ:
ಬಿಸಿಬಿಸಿಯ ಪುರಿ, ಕಡಲೆ; ಕರ್ಜೂರ, ಬೆಂಡು;
ಸಿಗರೇಟು, ವೀಳ್ಯದೆಲೆ, ಗಿಲಿಗಿಚ್ಚಿ, ಚೆಂಡು,      ೩೦೦
ಬಿಸ್ಕತ್ತು, ಉತ್ತುತ್ತೆ, ರವೆವುಂಡೆ, ಹಣ್ಣು;
ಕಲ್ಲುಸಕ್ಕರೆ, ದ್ರಾಕ್ಷಿ, ಕಡೆಗಿನಿತು ಮಣ್ಣು!
ಸಿದ್ದಣ್ಣ ಬಲುದಡ್ಡ; ಕಡವಾಗಿ ಮಾರಿ
ಮನೆಮನೆಗೆ ಸುತ್ತುವನು ನೂರಾರುಸಾರಿ.
ಸಿದ್ದಣ್ಣಗಿರುತಿದ್ದ ಲಾಭವತ್ಯಲ್ಪ
ಅವನ ಜೀವನದ ವೈಭವಗಳೂ ಸ್ವಲ್ಪ.
ಮಕ್ಕಳಿಗೆ ಸಿದ್ದಣ್ಣನೆಂದರಾನಂದ:
“ಸಿದ್ದಣ್ಣ ಬಂದಾ ಕಡಲೆ ಕೊಬರಿ ತಂದ!”
ಎಂದು ಕೂಗುವರವರು ಕರೆದು ಕುಣಿದಾಡಿ.
ಸಿದ್ದಣ್ಣನವರೊಡನೆ ಮೊರೆದು ಮಾತಾಡಿ,      ೩೧೦
ಕಡಲೆ ಕರ್ಜೂರಗಳನವರ ಕೈಗಿಟ್ಟು
ತೆರಳುವನು ಮನೆಯಿಂದ ಸಂತೋಷಪಟ್ಟು.
ಪುರದ ವರ್ತಕರಂತೆ ಸಿದ್ದಣ್ಣ ಕೆಡದೆ
ಶುದ್ಧನಾಗಿದ್ದ ದುರ್ವ್ಯಸನಕೆಡೆಗೊಡದೆ.
ದಾಕ್ಷಿಣ್ಯ, ಚಾರಿತ್ರ, ಕರುಣೆ, ನಯ, ದಯವು,
ಸಜ್ಜನತೆ, ತುಸು ಧರ್ಮ, ದೇವರೊಳು ಭಯವು,
ಸದ್ಗುಣಗಳಾತನೊಳು ನೆಲೆಸಿದ್ದುವಿನ್ನೂ;
ನರತನವನವನು ಮಾರಿರಲಿಲ್ಲವಿನ್ನೂ.
ಇಂತಿರ್ದ ಸಿದ್ದಣ್ಣ ಪೇಟೆಯೊಡಗೂಡಿ
ತನ್ನ ಯೋಗ್ಯತೆ ಮೀರಿ ವ್ಯಾಪಾರ ಮಾಡಿ     ೩೨೦
ನಷ್ಟಪಡೆ, ಪಾಪರಾದನು ಸಾಲ ಕೂಡಿ;
ಮೇಲೆ ಜೀವಿಸತೊಡಗಿದನು ಮೋಸವಾಡಿ!
ಹಳ್ಳಿಯ ಗುಣಗಳೆಲ್ಲ ಜಾರಿದುವು ಬೇಗ,
ಹಿಡಿಯಿತವನಿಗೆ ಹಾಳು ಪಟ್ಟಣದ ರೋಗ;
ಮುಗ್ಧನಾಗಿದ್ದವನು ಬಲು ಠಕ್ಕನಾದ,
ಕೆಡದೆ ಪಟ್ಟಣ ಸೇರಿ ಹಾಳಾಗಿಹೋದ!
ಸಿದ್ದಣ್ಣ ಕಡೆಗೆ ಜೂಜಾಟದೊಳು ಬಿದ್ದು
ಹಣಕಾಗಿ ಮನೆ ನುಗ್ಗಿ ಒಡವೆಗಳ ಕದ್ದು
ಜೈಲು ಸೇರಿಹನಂತೆ! ಈಗಾತನಲ್ಲಿ
ಹಳ್ಳಿಯೊಳಗಂದಿದ್ದ ಸದ್ಗುಣಗಳೆಲ್ಲಿ?  ೩೩೦

ಹಳ್ಳಿಯ ನಿವಾಸಿಗಳೆ, ಎಲ್ಲಿರುವಿರೀಗ?
ಯಾವನೊಳಿಗವೆಸಗಿ, ಯಾವನತಿಭೋಗ
ಭೂತಕ್ಕೆ ಬಲಿಯಾಗಿ, ದಾಡೆಯೊಳು ಸಿಕ್ಕಿ,
ಸೋದರರೆ, ನರಳುತಿರುವಿರಿ ಬಿಕ್ಕಿ ಬಿಕ್ಕಿ?
ದುಷ್ಟನಾವನು ನಿಮ್ಮ ಪೀಡಿಸುತಲಿಹನು?
ಕಷ್ಟಗಳನೆಷ್ಟೆಷ್ಟು ಹೇರುತ್ತಲಿಹನು?
ನೆನೆವಿರಾ ನೀವಂದು ಬಿಟ್ಟ ನಮ್ಮೂರ?
ನೆನೆವಿರಾ ನಿಮ್ಮ ತಾಯ್ತಂದೆಯಿದ್ದೂರ?
ಕರೆವಿರಾ ಕಣ್ಣೀರ ಮನೆಯಿಲ್ಲದಾಗಿ?
ಸುರಿವಿರಾ ಕಂಬನಿಯ ಹಾಳೂರಿಗಾಗಿ?         ೩೪೦
ಹೌದು, ತೋರುವುದೆನ್ನ ಕಣ್ಣುಗಳ ಮುಂದೆ
ನಿಂತಿಹುದು ಗೋಳಿಡುವ ಹಳ್ಳಿಗರ ಮುಂದೆ.
ನೆಗೆದು ಬಿದ್ದರು ಕೆಲರು ರೋಗ ವಶರಾಗಿ;
ಹೊಟ್ಟೆಗಿಲ್ಲದೆ ಕೆಲರು ಜೀವವನು ನೀಗಿ
ಶಾಂತಿಯನು ಹೊಂದಿದರು; ಮತ್ತುಳಿದರೆಲ್ಲ
ಬಾಳ ನೂಂಕುತಹಲಿರು; ಕೂಳು ಕಾಳಿಲ್ಲ!
ವಿಷಪಾನಮಾಡಿದಿರ, ಸೋದರರೆ, ನೀವು?
ಹಾಲೆಂದು ನಂಬಿದಿರಿ, ನಿಮಗಾಯ್ತು ಸಾವು!
ನೀವು ತಿರುಗಾಡಿದೀ ಬೀದಿಗಳಲಾರೂ
ಸಂಚರಿಸುತಿಲ್ಲವಿದು ದೆವ್ವಗಳ ಊರು!          ೩೫೦
ಉತ್ತುಬಿತ್ತುತಲಿದ್ದ ಹೊಲಗದ್ದೆ ತೋಟ
ಹಾಳಾಗಿಯಾಗಿಹವು ಸುಡುಗಾಡ ನೋಟ.
ನಿಮ್ಮ ನೇಗಿಲಕುಳಕೆ ನೆಲ ತಡೆಯಲಿಲ್ಲ,
ನಿಮ್ಮ ಕೊಡಲಿಯ ಕುಡಿತಕುಳಿದ ತರುವಿಲ್ಲ.
ನಿಮ್ಮ ಶಕ್ತಿಗೆ ಮಣಿದು ಕಾನನಗಳೆಲ್ಲ,
ತಲೆಬಾಗಿಯುರುಳಿದುವು: ಬಯಲಾದುದೆಲ್ಲ!
ಹಾ ಸೋದರರೆ, ನಿಮ್ಮ ಗತಿಯಿಂತುಟಾಯ್ತೆ?
ನಿಮ್ಮೂರ ಬಾಳಳಿದು ಗತಿಗೆಟ್ಟುಹೋಯ್ತೆ?
ಎಲ್ಲಿಹರು ನಿಮ್ಮೂರ ದೇವತೆಗಳೀಗ?
ಊರಮಾರಿಯ ಹಬ್ಬವೇನಾಯಿತೀಗ?          ೩೬೦
ಊರದೇವರ ಗುಡಿಯೊಳಾರತಿಯುಮಿಲ್ಲ,
ದೇವರಿಗೆ ಹಣ್ಣಿಲ್ಲ, ಹೂವುಕಾಯಿಲ್ಲ.
ಶಂಖ ಊದುವರಿಲ್ಲ; ಪೂಜಾರಿಯಿಲ್ಲ;
ಧೂಪಧೂಮಗಳಿಲ್ಲ; ಕಾಣಿಕೆಯುಮಿಲ್ಲ!
ಗ್ರಾಮದೇವತೆಗಳಿರ, ನೀವು ನಮ್ಮೂರ
ಜನರೆಲ್ಲ ಬಿಡುತಿರಲು ಓಡಿದಿರ ದೂರ?
ನೆನವರಿಕೆಯೊಂದಲ್ಲದೇನಿಲ್ಲವಿಲ್ಲಿ;
ದೆವ್ವಗಳಿಗಾಡುವಾ ಬಯಲಾಯ್ತು ಹಳ್ಳಿ!

ಎಲೆ ರಾಜತಂತ್ರಜ್ಞರಿರ, ನೀವು ಎಂದೂ
ಮರೆಯದಿರಿ ವೈಭವವೆ ಸುಖವಲ್ಲವೆಂದು!      ೩೭೦
ಪುರವ ಸಿಂಗರಿಸಿದೊಡೆ ಬಡಜನಗಳೆಲ್ಲ
ಶೃಂಗಾರವನು ತಿಂದು ಜೀವಿಸುವುದಿಲ್ಲ!
ಹೊಟ್ಟೆತುಂಬಿದಮೇಲೆ ಕಣ್ತುಂಬಬೇಕು;
ಕೂಳಿದ್ದರಲ್ಲವೇ ಸೌಂದರ್ಯಬೇಕು:
ಬಡಜನರು ಸಾಯುತಿರಲರಮನೆಗಳೇಕೆ?
ಹಳ್ಳಿಹಾಳಾಗುತಿದೆ, ಪುರವೊಂದೆ ಸಾಕೆ?
ಹಳ್ಳಿಗಳ ಲೆಕ್ಕಿಸದ ಹಾಳು ಸರಕಾರ
ತನ್ನಾತ್ಮಹತ್ಯಕ್ಕೆ ತಾನೆ ಆಧಾರ.
ಹಳ್ಳಿಯೊಳು ಬೀದಿಗಳು ಕಲ್ಲು ಕಂಡಿಲ್ಲ;
ಮಳೆಗಾಲದೊಳು ಕೆಸರು; ಬೇಸಗೆಯಲೆಲ್ಲ     ೩೮೦
ತಡೆಯಲಾಗುವುದಿಲ್ಲ ಬರಿಯ ಕೆಂಧೂಳಿ.
ರಾಜತಂತ್ರಜ್ಞರೇ, ಕಿವಿಗೊಟ್ಟು ಕೇಳಿ:
ದೆವ್ವಗಳು ಸಂಚರಿಸದಾ ಗಿರಿಯ ಮೇಲೆ
ಉರಿಯುವುವು ನಿಶೆಯೆಲ್ಲ ದೀಪಗಳ ಮಾಲೆ;
ಆದರೀ ಪಟ್ಟಣದ ಬಡ ಮನೆಗಳಲ್ಲಿ
ತಿಂದೋದುವರು ಹಣತೆಗಳ ಬೆಳಕಿನಲ್ಲಿ;
ಕೆಲರದನು ಕೊಳ್ಳಲಾರದೆ ಕತ್ತಲಾಗೆ
ಹಾಸಗೆಯ ಸೇರುವರು ಬೇಸರವ ನೀಗೆ!

ಸಿರಿಸುತರು ಕಾನೂನುಗಳ ರಚಿಸುತಿಹರು     ೩೯೦
ಬಡವರದಕೊಳಗಾಗಿ ಗೋಳಾಡುತಿಹರು;
ಸಿರಿಸುತರ ಬೊಬ್ಬೆಯಲಿ ಬಡಜನರ ದನಿಯು
ಸಾಗರದ ನಡುವೆ ಇಹ ತುಂತರಿನ ಹನಿಯು.
ರಾಜ್ಯದಾಡಳಿತಗಳು ಹಣಗಾರರಲ್ಲಿ,
ರಾಜ್ಯದಲ್ಲಿಹ ದಾಸ್ಯವದು ಬಡವರಲ್ಲಿ;
ಹಣಗಾರರಾನಂದ ಬಡಜನರ ಗೋಳು,
ಕೂಲಿಕಾರರ ರಕುತ ಧನಿಕರಿಗೆ ಕೂಳು.
ದಿನವು ತಿಂದರು ರೈತನೀಯುತಿಹ ನೆಲ್ಲ
ಧಿಕ್ಕರಿಪರಾತನನು ಪಟ್ಟಣಿಗರೆಲ್ಲ.
ಹಳ್ಳಿಯವನೆಂದರಾಯಿತು ದಡ್ಡನೆಂದು
ದೂರುವರು ಸುಲಿಯುವರು ಅವನನ್ನು ತಿಂದು.            ೪೦೦
ದೊಡ್ಡವರದಾಗಿಹುದು ಠಾವಿದ್ದುದೆಲ್ಲ
ಬಡಜನರಿಗೊಂದಂಕಣದ ಜಾಗವಿಲ್ಲ.
ಲಕ್ಷಗಳ ಚೆಲ್ಲುವರು ನಾಯಿಗಳಿಗಾಗಿ
ಭಿಕ್ಷುಕರಿಗೀಯಲಾರರು ಮುಷ್ಟಿ ರಾಗಿ.
ಹರಿದಾರಿಯುದ್ದವಿಹುದಶ್ವಗಳ ಲಾಯ,
ಕೂಳಿಲ್ಲದವರಿಗಿಲ್ಲ ಅವರಾ ಸಹಾಯ.
ಚೆಲ್ಲುವರು ತಣ್ಣಗಿಹ ಕಲ್ಲುಗಳ ಮೇಲೆ
ಎಣ್ಣೆಯನು ಬೆಣ್ಣೆಯನು; ಹಾಕುವರು ಮಾಲೆ;
ತರತರದ ಹಣ್ಣುಕಾಯಲರುಗಳ ಕೊಟ್ಟು,
ಅಡ್ಡಬೀಳುವರು ಕರ್ಪೂರವನು ಸುಟ್ಟು.          ೪೧೦
ದಾರಿಯೊಳು “ಕಣ್ಣಿಲ್ಲ, ಕಾಲಿಲ್ಲವಪ್ಪಾ!
ಧರ್ಮರೇ ತಾಯ್ತಂದೆ ಕಾಸು ಕೊಡಿರಪ್ಪಾ!”
ಎಂಬುವನ ಕಣ್ಣೆತ್ತಿ ನೋಡದೆಯೆ ಹೋಗಿ
ನಮಿಸುವರು ವಿಗ್ರದಹ ಮುಂದೆ ತಲೆ ಬಾಗಿ!
ಮಾನವನೆ, ನಾರಾಯಣನು ಗುಡಿಯೊಳಿಲ್ಲ;
ಫಲಪುಷ್ಪವನು ಕೊಟ್ಟರದೆ ಭಕ್ತಿಯಲ್ಲ.
ಬಡ ನರನೆ ದೇವನಿಹ ದೇಗುಲವು, ಮುಕ್ತಿ;
ಬಡಜನರ ಸೇವೆಯನು ಮಾಡುವುದೆ ಭಕ್ತಿ;
ಬೀದಿಯ ದರಿದ್ರನಾರಾಯಣರ ನೋಡು,
ಅನ್ನವಸ್ತ್ರವನೀವ ಪೂಜೆಯನು ಮಾಡು.         ೪೨೦
ಮಾನವರ ಸೇವೆಯೇ ಪರಮಾತ್ಮ ಸೇವೆ,
ಪರಮೇಶ್ವರನ ಪರಮ ದಿವ್ಯಾಂಶ ನಾವೆ!

ನಿನ್ನ ಕೈಗಾರಿಕೆಗಳೀಗೆಲ್ಲಿ? ಎಲ್ಲಿ?
ಮಾಯವಾದುವೆ ಎಲ್ಲ, ಎಲೆ ಮುದ್ದು ಹಳ್ಳಿ?
ಅಕ್ಕಸಾಲಿಗರೆಲ್ಲಿ? ಕಮ್ಮಾರರೆಲ್ಲಿ?
ನಿನಗೆ ವಸನವನಿತ್ತ ನೆಯ್ಗೆಯವರೆಲ್ಲಿ?
ನಿನ್ನ ಅಂದಿನ ಕುಶಲ ಕಲೆಗಳೀಗೆಲ್ಲಿ?
ಪರರ ಕೈ ಹಾರೈಸದಾ ಸುಖವದೆಲ್ಲಿ?
ದೇಶವೆಲ್ಲವ ತುಂಬೆಯತಿಭೋಗ ರೋಗ
ಕುಶಲಕಲೆಗಳು ಮಾಯವಾದುವೈ ಬೇಗ.      ೪೩೦
ಭಾರತಿಯೆ, ನಿನ್ನ ಕಲೆಗಳ ಕೊಂದರಾರು?
ಕೈಗಾರಿಕೆಯ ನಾಶ ಮಾಡಿದವರಾರು?
ನಿನ್ನ ಜೀವನದನ್ನವನು ಕಸಿದರಾರು?
ನಿನ್ನನೀ ಕೀಳ್ಗತಿಗೆ ತಂದವರದಾರು?
ನಿನ್ನವರ ಕೈ ಬೆರಳ ಕಡಿದವರದಾರು?
ಹಾಲೆಂದು ನಿನಗೆ ವಿಷವೂಡಿದವರಾರು?
ವ್ಯಾಪಾರ ನೆವದಿಂದ ಬಂದಿಲ್ಲಿ ನಿನ್ನ
ಸರ್ವಸ್ವವನು ಸುಲಿದು, ನಿನ್ನೊಳಿಹ ಚಿನ್ನ
ಧನಧಾನ್ಯಗಳನೆಲ್ಲ, ಪಾಪಿಗಳು ತಮ್ಮ
ದೇಶಕೆಳೆದರು, ದೇವಿ, ಭಾರತಿಯೆ, ಅಮ್ಮ!    ೪೪೦
ಪರಕೀಯರಿಂತು ನಿನ್ನನು ಸುಲಿಯುತಿರಲು,
ನೋವಿನಲಿ ನೀನು ಗೋಳಾಡಿ ಅಳುತಿರಲು,
ನಿನ್ನವರು ತಮ್ಮತಮ್ಮೊಳೆ ಕದನವಾಡಿ.
‘ಜಾತಿ ಜಾತಿ’ ಎಂದು ಬರಿದೆ ಹೋರಾಡಿ,
ಸೋದರರ ಕೊಂದರೌ ಪರಕೀಯರನು ಕರೆದು,
ಭಾರತಿಯೆ, ನಿನ್ನ ಸೌಭಾಗ್ಯವನು ತೊರೆದು;
ತಮ್ಮ ಋಷಿಗಳ ಧರ್ಮಶಾಸ್ತ್ರಗಳ ಹರಿದು
ತಮ್ಮ ಹಿರಿಯರ ಕೀರ್ತಿ ಮಹಿಮೆಗಳ ಜರಿದು.
ಜಾತಿ ಮಾರಿಯೆ, ಪಾಪಿ, ಬಂದೆ ಎಲ್ಲಿಂದ?
ಭಾರತೀಯರ ಕೊಂದೆ, ತಿಂದೆ ಭರದಿಂದ!     ೪೫೦
‘ಕೆಂಪ’ನೆಂದರೆ ಅವನ ತಳ್ಳುವೆವು ದೂರ:
‘ಜಾನ’ನಾದರೆ ಅವನೆ, ಮನ್ನಿಪೆವು ಪೂರ!
ನಮ್ಮ ಮತಕಾಯ್ತು ಹೃದಯ ಮನಗಳ ಚಾಗ;
ಸೇರಿರುವದನ್ನದಾ ಮಡಕೆಯೊಳಗೀಗ!
ಪಂಡಿತರ ಬಾಯಲ್ಲಿ ಕೇಳಿದರೆ ಏನು?
“ತತ್ತ್ವಮಸಿ, ಬ್ರಹ್ಮಾಸ್ಮಿ, ಶಿವನಾನು, ನಾನು!”
ನೋಡಿದರೆ ನಡತೆಯೊಳು, ದೇವರೇ ಬಲ್ಲ:
‘ದೂರ, ದೂರೆ’ನ್ನುವರು ಕೀಳುಜನಕೆಲ್ಲ!
ಆಡುವುದು ಬಾಯಲ್ಲಿ ದೊಡ್ಡ ವೇದಾಂತ
ಮಾಡುವುದು ದುರ್ನಡತೆ; ಹೀನವೈ ಸ್ವಾಂತ! ೪೬೦
ಕೊಳೆತು ನಾರುತಲಿರುವುದವರಂತರಂಗ;
ಆದರೂ ಮಘಮಘಿಪುದವರ ಬಹಿರಂಗ!
ನೀಲ ನಿರ್ಮಲನಭದಿ ಹಾರುತಿಹ ಹದ್ದು
ಶುಭ್ರ ನಭಕಾಶಿಸದೆ ಕೊಳೆತ ಹೆಣ ಬಿದ್ದು
ನಾರುತೆಲ್ಲಿಹುದೆಂದು ದೃಷ್ಟಿಯಿಡುವಂತೆ,
ನೋಡುವುದು ಒಣವೇದ ಪಂಡಿತರ ಸಂತೆ!
ಕೈಯಲ್ಲಿ ಶರಣಾರ್ತಿ, ಬಗಲಲ್ಲಿ ದೊಣ್ಣೆ;
ವಿಷಘೋರವೆದೆಯಲ್ಲಿ, ಬಾಯಲ್ಲಿ ಬೆಣ್ಣೆ!

ನಮ್ಮೂರೆ, ಹಾಳೂರೆ, ಎಲೆ ಮುದ್ದು ಹಳ್ಳಿ,
ನಿನ್ನಡಕೆ ತೊಟಗಳು ವನಗಳೀಗೆಲ್ಲಿ? ೪೭೦
ನಲಿವ ಹೊಲಗದ್ದೆಗಳ ಸೌಂದರ್ಯವೆಲ್ಲಿ?
ನಿನ್ನ ಜೀವದ ಸಿರಿಯ ಲಾವಣ್ಯವೆಲ್ಲಿ?
ಸುಖದಿ ಜೀವಿಸುತಿದ್ದ ನಿನ್ನ ಜನರೆಲ್ಲಿ?
ಹಾಳಾಗಿ ಹೋದೆಯಾ, ಹಾ, ಮುದ್ದುಹಳ್ಳಿ!
ನಿನ್ನ ಗುಡಿ ಗೂಬೆಗಳಿಗಾಯಿತಾವಾಸ;
ನಿನ್ನನಿರದಾವರಿಸಿತು ಮಹಾ ವಿನಾಶ!
ಗೋವುಗಲು ಸಂಚರಿಸಿದಾ ಬಯಲಮೇಲೆ
ತೋರುವುದು ಹಾಳೂರ ಗಾಳಿಗಳ ಲೀಲೆ!
ಮನೆಯಲ್ಲಿ ಜನ ತುಂಬಿ ತುಳುಕಾಡಿತಾಗ
ಕಾಡಿಲಿಗಳಾವಾಸಮಾಗಿರುವುದೀಗ!            ೪೮೦
ನಿನ್ನ ಗಿರಿ ಕಾನನ ತರಂಗಿಣಿಗಳಂದು
ತೋರಿದುವು ಚೈತನ್ಯವನು; ತೋರವಿಂದು!
ವನದ ಮರಗಳನೇರಿ ಹಣ್ಣುಗಳ ಕೊಯ್ದ
ಉಗನಿ ಕಾಯ್ಗಳ ಕಿತ್ತು ಮಾಲೆಗಳ ನೆಯ್ದು
ಕೇಕೆ ಹಾಕುತ ನಲಿದ ಬಾಲತತಿಯಿಲ್ಲ;
ಕೆರೆಯೊಳೀಜಾಡಿದಂದಿನ ಯುವಕರಿಲ್ಲ!
ವನಗಳಲಿ ಹೂವಾಯ್ದು ಹಾಡುಗಳನೆಲ್ಲ
ಇಂಪಾಗಿ ಹಾಡಿದಾ ಬಾಲೆಯರುಮಿಲ್ಲ!
ಎಲ್ಲಿಹುದು ಬಾಲೆಯರ ಕಡೆಗಣ್ಣ ನೋಟ?
ಎಲ್ಲಿಹುದು ರನ್ನೆಯರ ಮುಗುದ ಚೆಲ್ಲಾಟ?       ೪೯೦
ಎಲ್ಲಿ ಹಳ್ಳಿಯ ಕನ್ಯೆಯರ ಸವಿಯ ಬೇಟ?
ಎಲ್ಲಿರುವುದೀಗ ತೋರಾ ಪ್ರಣಯಕೂಟ?
ನುಂಗಿತಾ ಲೀಲೆಗಳನತಿಭೋಗಮಾರಿ,
ಮಾಯವಾದುವು ನಾಶ ಮಸಣವನು ಸೇರಿ!
ಮುಂದಿಲ್ಲಿ ಗೀತೆಗಳ ಹಾಡುವರು ಇಲ್ಲ;
ಮುಂದಿಲ್ಲಿ ಲೀಲೆಗಳನಾಡುವರು ಇಲ್ಲ;
ಮುಂದೆ ನೇಗಿಲ ಕಟ್ಟಿ ಉಳುವರಾರಿಲ್ಲ;
ಬೆಳೆದು ನಲಿಯುವ ಪೈರು ಕೊಯ್ದಂಬರಿಲ್ಲ;
ಬಿಟ್ಟ ಬೀದಿಯೊಳಿನ್ನು ಉತ್ಸವಗಳಿಲ್ಲ;
ಹಬ್ಬಗಳ ಮಾಡಿ ಸಂತೋಷಿಸುವರಿಲ್ಲ;          ೫೦೦
ಪತಿಯ ಸೇರುವ ಮಗಳಿಗಾಗಳುವರಿಲ್ಲ!
ಅಹಹ! ಹೋದೆಯ ಹಳ್ಳಿ! ಜೀವ ನಿನಗಿಲ್ಲ!

ಎಲೆ ವಿಹಂಗಮಗಳಿರ, ಹಳ್ಳಿಯೊಳು ಹಾರಿ
ಹಾಳಾದ ಸುದ್ದಿಯನು ಎಲ್ಲರಿಗೂ ಸಾರಿ!
ದಿನ ದಿನವು ಕಣ್ಣೀರ ಕಾರಿ, ಮೇಲೇರಿ,
ನಿಮ್ಮಗಳ ನವಶೋಕದಿಂಚರವ ಬೀರಿ!
ಕೋಕಿಲೆಯೆ, ನಿನ್ನನಣಕಿಪರೊಬ್ಬರಿಲ್ಲ;
ಗೊರವಂಕವೇ, ನಿನ್ನ ಚಾಳಿಸುವರಿಲ್ಲ;
ಲಾವುಗೆಯೆ, ನಿನ್ನ ಮೂದಲಿಪರಾರಿಲ್ಲ;
ಎಲೆ ಚೋರೆಯೇ, ನಿನ್ನ ಹಂಗಿಸುವರಿಲ್ಲ!        ೫೧೦
ಹಕ್ಕಿಗಳೆ, ನಿಮ್ಮ ಹರುಷೋತ್ಸವದಿ ಕೂಡಿ
ನಲಿದಾಡುವವರಿಲ್ಲ ನಿಮ್ಮೊಡನೆ ಹಾಡಿ.
ಮಲ್ಲಿಗೆಯೆ, ನಿನಗೆ ನೀರೆರೆವವಳು ಇಲ್ಲ;
ಸೇವಂತಿಗೆಯೆ, ನಿನಗೆ ಮುತ್ತಿಡುವರಿಲ್ಲ.
ಕೊಳದ ತಾವರೆ, ನಿನ್ನ ಪೀಡಿಸುವರಿಲ್ಲ.
ಎಲೆ ಶಿರೀಷವೆ, ನಿನ್ನ ನೋಯಿಸುವರಿಲ್ಲ.
ಎಲೆ ವನಸ್ಥಳಗಳಿರ, ನಿಮ್ಮೊಡನೆ ಸೇರಿ
ನಲಿವರನು ನುಂಗಿತೈ ಪಟ್ಟಣದ ಮಾರಿ!
ನಿನ್ನನಟ್ಟುವರಿಲ್ಲ, ಬಣ್ಣದ ಪತಂಗ,
ಬನಗಾಳಿಗಾಗಿಹುದು ನಿನ್ನ ಸತ್ಸಂಗ! ೫೨೦
ಮರುಭೂಮಿಯಾದುದೇ ಹಳ್ಳಿಯಾರಾಮ?
ಸೊಬಗಿಲ್ಲದಾದುದೇ ಹುಣ್ಣಿಮೆಯ ಸೋಮ?

ಅತಿಭೋಗವದು ರೋಗ, ಕೊಲ್ಲುವುದು ಬೇಗ;
ಪುರಗಳಿಂದೈತಂದಿಹುದು ಹಳ್ಳಿಗೀಗ.
ಸಾಮಾನ್ಯ ಜೀವನವು ಪರಮ ಸುಧೆಯಂತೆ,
ಮಿತಿಮೀರಿದತಿಭೋಗ ಘೋರ ವಿಷದಂತೆ.
ದೇಶಗಳು ಹಾಳಾದುದತಿಭೋಗದಿಂದ,
ನೀತಿ ನಾಶವು ಕೀರ್ತಿನಾಶವದರಿಂದ.
ಬೇಸಾಯದಾಧಾರದಿಂದಿರುವ ದೇಶ
ಎಂದಿಗೂ ಸುಖಕರವು, ಅದಕ್ಕಿಲ್ಲ ನಾಶ!        ೫೩೦
ಹಳ್ಳಿಯಿಲ್ಲದ ದೇಶವದು ನಿತ್ಯ ರೋಗಿ,
ಕೊಳೆಯುವುದು ನಿರ್ಜೀವ ಶವದಂತೆಯಾಗಿ.
ಹಳ್ಳಿಗಳಿರುವ ದೇಶವದು ಸದಾ ಭೋಗಿ,
ಅದೆ ಎಂದಿಗಾನಂದದಿಂದಿರುವ ಯೋಗಿ!
ಅಮ್ಮ, ಭಾರತಿ, ಹಳ್ಳಿ ಹಾಳಾಗದಿರಲಿ!
ನಿನಗೆಂದು ಸುಖ ಶಾಂತಿಯಾನಂದವಿರಲಿ!
ಹಳ್ಳಿಗಳ ಮಾತಾಯಿ, ಭಾರತಿಯೆ, ಅಮ್ಮಾ,
ಹಳ್ಳಿಗಳು ಹಾಳಾಗದಂತೆ ಸಲಹಮ್ಮಾ!