ಮೂಲತಃ ಧಾರವಾಡವನ್ನು ೧೯೯೭ರಲ್ಲಿ ವಿಭಜಿಸಿ ಹಾವೇರಿ ಜಿಲ್ಲೆಯನ್ನು ರಚಿಸಲಾಯಿತು. ಹಾವೇರಿ ಜಿಲ್ಲೆಯು ಏಳು ತಾಲೂಕುಗಳನ್ನು ಅಂದರೆ ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು, ಶಿಗ್ಗಾಂವ, ಬ್ಯಾಡಗಿ, ಹಾನಗಲ್ ಮತ್ತು ಸವಣೂರು ತಾಲೂಕುಗಳನ್ನು ಒಳಗೊಂಡಿರುತ್ತದೆ. ಹಾವೇರಿಯ ಪೂರ್ವ ರೇಖಾಂಶ ೭೫.೦೭ ಯಿಂದ ೭೫.೩೮ ಮತ್ತು ಉತ್ತರ ಅಕ್ಷಾಂಶ ೧೪.೨೮ ರಿಂದ ೧೪.೫೯. ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೪೮ ಚ.ಕಿ.ಮೀ. ಜಿಲ್ಲೆಯ ಒಟ್ಟು ಗ್ರಾಮಗಳು ೬೯೧ ಇರುತ್ತದೆ. ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ೪೮೫೧೫೬ ಹೆಕ್ಟೇರ್ ಇರುತ್ತದೆ. ಈ ಪೈಕಿ ನೀರಾವರಿಗೆ ಒಳಪಟ್ಟ ಪ್ರದೇಶ ೫೧೦೦೨ ಹೆಕ್ಟೇರ್ ಇರುತ್ತದೆ.

ಜಿಲ್ಲೆಯ ವಾರ್ಷಿಕ ಸರಾಸರಿ ವಾಡಕೆ ಮಳೆಯು ೭೫೨.೮ ಮಿ.ಮೀ. ಆಗಿರುತ್ತದೆ. ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ – ಜೋಳ, ಹತ್ತಿ, ಮೆಣಸಿನಕಾಯಿ, ಭತ್ತ, ಕಬ್ಬು, ಗೋವಿನಜೋಳ ಮತ್ತು ಎಣ್ಣೆ ಬೀಜಗಳು ಅಲ್ಲದೆ ದ್ವಿದಳ ಧಾನ್ಯಗಳು. ೨೦೦೧ನೇಯ ಜನಗಣತಿಯ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆ ೧೪,೩೯,೧೧೬ ಇರುತ್ತದೆ. ಈ ಪೈಕಿ ೭,೪೦,೪೬೯ ಗಂಡಸರು ಹಾಗೂ ೬,೯೮,೬೪೭ ಹೆಂಗಸರು ಇರುತ್ತಾರೆ.

ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ ಕನಕದಾಸರು ಕಾಗಿನೆಲೆಯಾದಿ ಕೇಶವನ ನಾಮದಲ್ಲಿ ದಾಸಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ತ್ರಿಪದಿ ಜನಕನಾದ ಸರ್ವಜ್ಞನು ಹಿರೇಕೆರೂರು ತಾಲೂಕಿನ ಅಬಲೂರಿನಲ್ಲಿ ಜನಿಸಿ ಲೋಕವಿಖ್ಯಾತನಾಗಿದ್ದಾನೆ. ಧಾರ್ಮಿಕ ಭಾವೈಕ್ಯದಿಂದ ಮೆರೆದ ಸಂತ ಶಿಶುನಾಳ ಷರೀಫರು ಶಿಗ್ಗಾಂವ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಜನಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಿಚಿಟಿμಂgಂ ವಿರುದ್ಧ ಬಂಡೆದ್ದ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪನವರು, ಹೊಸರಿತ್ತಿಯ ಗುದ್ಲೆಪ್ಪಾ ಹಳ್ಳಿಕೇರಿ, ಮಡಿವಾಳರು, ಸಂಗೂರಿನ ಯರೆಶೀಮಿ ಕರಿಯಪ್ಪನವರು ಜಿಲ್ಲೆಯ ಧೃವತಾರೆಗಳು. ಹಿರಿಯ ಪತ್ರಕರ್ತರು, ಕನ್ನಡ ಹೋರಾಟಗಾರರು ಆದ ಪಾಟೀಲ ಪುಟ್ಟಪ್ಪನವರು ಹಾಗೂ ಸಾಹಿತ್ಯ ಲೋಕಕ್ಕೆ ಅಗಾಧ ಕೊಡುಗೆ ನೀಡಿದ ಶ್ರೀ ಗಳಗನಾಥರು, ಶ್ರೀ ಮಹದೇವ ಬಣಕಾರರು, ಸರ್ವೋದಯ ನೇತಾರ ವಿನೋಬಾ ಭಾವೆ, ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಜಿಲ್ಲೆಗೆ ತಂದುಕೊಟ್ಟಂತಹ ವಿನಾಯಕ ಗೋಕಾಕರು ಇನ್ನೂ ಮುಂತಾದವರು ಜಿಲ್ಲೆಯ ಹೆಮ್ಮೆಯ ಪುತ್ರರು. ರಾಜ್ಯ ಪ್ರಶಸ್ತಿಯನ್ನು ಪಡೆದಿರುವ ಪಟವೆಗಾರ ಮನೆತನದವರು ಯಾಲಕ್ಕಿಯನ್ನು ಸರ ಮಾಡಿ ಮಾರಾಟ ಮಾಡುವ ಶ್ರಮಿಕ ವರ್ಗದವರು. ಒಂದರಿಂದ ಎಳೆಯಿಂದ ಇಪ್ಪತ್ತು ಎಳೆಯವರೆಗೂ ಯಾಲಕ್ಕಿ ಮಾಲೆಯನ್ನು ತಯಾರಿಸುತ್ತಾರೆ.