ಜಿಲ್ಲಾ ಕೇಂದ್ರದಿಂದ ದೂರ : ೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦ ಕಿ.ಮೀ

ಪುರಸಿದ್ದೇಶ್ವರ ದೇವಸ್ಥಾನ, ಹಾವೇರಿ

ಹಾವೇರಿಯ ಸ್ಟೇಷನ್ ರೋಡನಲ್ಲಿರುವ ಪುರಸಿದ್ದೇಶ್ವರ ದೇವಸ್ಥಾನ  ಹುಕ್ಕೇರಿಮಠದ ಎದುರಿಗೆ ಇದೆ. ಬಸ್‌ಸ್ಟ್ಯಾಂಡನಿಂದ ಒಂದು ಕಿ.ಮೀ. ದೂರದಲ್ಲಿದ್ದು ಇದೊಂದು ಪ್ರವಾಸಿ ತಾಣಗಿದೆ.

ಈ ದೇವಸ್ಥಾನವನ್ನು ಶಿಲ್ಪಿ ಜಕ್ಕಣಾಚಾರ್ಯ ನಿರ್ಮಿಸಿದನೆಂದು ಶಾಸನಗಳಲ್ಲಿ ಮಾಹಿತಿ ಇದೆ. ಅತಿ ಸುಂದರವಾದ ಸೂಕ್ಷ್ಮ ಕಲಾಕೃತಿ ಇರುವ ಈ ಗುಡಿಯನ್ನು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಕಟ್ಟಿಸಲಾಗಿದೆ. ಈ ಗುಡಿಯ ಆವರಣದಲ್ಲಿರುವ ಶಾಸನಗಳು ಹಾವೇರಿಯ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಶ್ರೀ ನರಸಿಂಹದೇವರು, ವಿಷ್ಣು, ಮಹಾಲಕ್ಷ್ಮಿ ಮತ್ತು ಸೂರ್ಯದೇವರ ಸುಂದರ ವಿಗ್ರಹಗಳಿವೆ.

ಇದೀಗ ಸರಕಾರ ಇದನ್ನು ರಕ್ಷಣೆ ಮಾಡುತ್ತಿದ್ದು, ಸುಂದರವಾದ ಬೃಂದಾವನ ನಿರ್ಮಿಸಿದೆ. ಪ್ರತಿದಿನ ಅಸಂಖ್ಯಾತ ಜನರು ಬೃಂದಾವನಕ್ಕೆ ವಿಶ್ರಾಂತಿಗೆಂದು ಬರುತ್ತಾರೆ.

 

ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ : ೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೦ ಕಿ.ಮೀ

 

ಬ್ರಹ್ಮಕುಮಾರಿ ತಪೋವನ

ಸನ್ ೨೦೦೫-೦೬ ರಲ್ಲಿ ಸಂಪೂರ್ಣಗೊಂಡ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಶಿವಲಿಂಗರೂಪದ ಕಟ್ಟಡ ಹೊಂದಿದೆ. ಜನಸಾಮಾನ್ಯರಿಗೆ ನೈತಿಕ ಶಿಕ್ಷಣ, ಮೌಲ್ಯ ಶಿಕ್ಷಣ, ಧ್ಯಾನ, ಯೋಗ ಧಾರ್ಮಿಕ ಶಿಕ್ಷಣ ಹೀಗೆ ಹಲವಾರು ವಿಷಯಗಳ ಪರಿಚಯ ಮಾಡುವುದಾಗಿದೆ.

ಜನರಿಗೆ ದುಶ್ಚಟಗಳಿಂದ ದೂರವಿರಲು ಹಾಗೂ ಆತ್ಮಬಲ ಹೆಚ್ಚಿಸಿಕೊಳ್ಳಲು ಬೇಕಾದ ಜ್ಞಾನವನ್ನು ನೀಡುತ್ತಿದೆ. ಇದರ ಕೇಂದ್ರ ಕಛೇರಿಯು ರಾಜಸ್ಥಾನದ ಮೌಂಟ್‌ಅಬುವಿನಲ್ಲಿದೆ.

ಹಾವೇರಿಯ ಈಶ್ವರೀ ವಿಶ್ವವಿದ್ಯಾಲಯವು ೭, ೮, ೯ನೇ ವರ್ಗದ ಮಕ್ಕಳಿಗಾಗಿ ‘ಟಚ್ ದಿ ಲೈಟ್’ ಎಂಬ ಕಾರ್ಯಕ್ರಮವನ್ನು ಶಾಲೆಗಳಿಗೆ ನೀಡುತ್ತಿದೆ. ತಪೋವನ ‘ಯಲ್ಲಾಪುರ’ ದಲ್ಲಿ ೩೦ ಎಕರೆ ಭೂಮಿಯ ವಿಸ್ತೀರ್ಣದಲ್ಲೊಂದು ಕೇಂದ್ರವಿದ್ದು, ಅನೇಕ ದುರ್ವ್ಯಸನಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಬದುಕು ಸಾಕಾರಗೊಳ್ಳುವಂತೆ ಮಾಡಲಾಗುತ್ತಿದೆ.

ಹಾವೇರಿಯ ಈಶ್ವರೀಯ ವಿಶ್ವವಿದ್ಯಾಲಯವು ಜಯದೇವ ನಗರದಲ್ಲಿದ್ದು ಜೆ.ಎಚ್. ಪಟೇಲ ವೃತ್ತದಿಂದ ಕಾಲ್ನಡಿಗೆ ಅಂತರದಲ್ಲಿದೆ. ಸುಂದರವಾಗಿ ನಿರ್ಮಿತವಾದ ಈ ಶಿವಾಲಯ ನೋಡುಗರನ್ನು ತನ್ನತ್ತ ಸೆಳೆಯುತ್ತದೆ.

 

ಹೊಸಮಠ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ :೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦ ಕಿ.ಮೀ.

 

ಹೊಸಮಠ

ಹಾವೇರಿಯ ಮಾಗಾವಿ ಚಿತ್ರಮಂದಿರದ ಹತ್ತಿರವಿರುವ ಈ ಮಠವು ಚಿತ್ರದುರ್ಗದ ಬ್ರಹನ್ಮಠದ ಶಾಖಾಮಠವಾಗಿದೆ. ಮೂಲ ಮುರುಘಾಮಠವು  ಹಾವೇರಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಾಗಿನೆಲೆ ರಸ್ತೆಯಲ್ಲಿದೆ. ಇದರ ಸ್ಥಾಪನೆಯು ಕಿ.ಶ. ೧೮೦೦ ರಲ್ಲಿ ಆಗಿದ್ದು ಪೂಜ್ಯರಾದ  ಸಂಘಂಟಿತ ಸಿದ್ಧಬಸವ ಮಹಾಸ್ವಾಮಿಗಳಿಂದ ಸ್ಥಾಪನೆಯಾಯಿತು. ಮುಂದೆ ಪೂಜ್ಯ ಮಲ್ಲಿಕಾರ್ಜುನ ಜಗದ್ಗುರಗಳು ಇದನ್ನು ವಿಸ್ತರಿಸಿದರು. ಪೂಜ್ಯ ಮುರುಘರಾಜೇಂದ್ರ ಶಿವಮೂರ್ತಿ ಶರಣರು ಇದಕ್ಕೆ ಕಾಯಕಲ್ಪ ಕಲ್ಪಿಸಿದರು. ಸಮಾಜಕ್ಕೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಯನ್ನು ಈ ಮಠವು ನೀಡಿದೆ. ಇಂದು ಅಂದಾಜು ೨೫೦೦ ಮಕ್ಕಳು ಪೂರ್ವ ಪ್ರಾಥಮಿಕ, ಡಿ.ಇಡಿ., ಬಿ.ಇಡಿ. ವ್ಯಾಸಂಗವನ್ನು ಇಲ್ಲಿ ಪಡೆಯುತ್ತಿದ್ದಾರೆ. ವಿಶೇಷ ಅಗತ್ಯತೆಯುಳ್ಳ ೧೦೦ ಮಕ್ಕಳು ವಸತಿ, ಊಟದ ಸೌಲಭ್ಯ ಪಡೆಯುತ್ತಿದ್ದಾರೆ. ‘ಮನೆಯಲ್ಲಿ ಮಹಾಮನೆ’ ಎಂಬ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ‘ಶರಣ ಸಂಸ್ಕೃತಿ ಉತ್ಸವ’ ವರ್ಷಕ್ಕೊಮ್ಮೆ ನಡೆಯುತ್ತದೆ. ಪ್ರತಿ ತಿಂಗಳು ೨ನೇ ತಾರೀಖಿನಂದು ‘ಶಿವಾನುಭವಗೋಷ್ಠಿ’ ನಡೆಯುತ್ತಿರುತ್ತದೆ.

 

ಮೈಲಾರ ಮಹದೇವಪ್ಪನವರ ವೀರಸೌಧ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ : ೧ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧ ಕಿ.ಮೀ.

 


ಮೈಲಾರ ಮಹದೇವಪ್ಪನವರು ದಿನಾಂಕ: ೦೮-೦೬-೧೯೧೧ ರಂದು ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಮಾರ್ತಾಂಡಪ್ಪ ಮತ್ತು ಬಸಮ್ಮನವರ ಗರ್ಭದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಘೀಳು ಅಂಟಿಸಿಕೊಂಡು ಗಾಂಧೀಜಿಯವರ ತತ್ವಾದರ್ಶಗಳ ಅನುಯಾಯಿಯಾಗಿದ್ದರು. ೧೯೩೦ರಲ್ಲಿ ಗಾಂಧೀಜಿಯವರು ಮಹದೇವಪ್ಪನವರನ್ನು ಸಬರಮತಿಗೆ ಕರೆಯಿಸಿಕೊಂಡರು. ಇವರು ದಂಡೀಯಾತ್ರೆಯಲ್ಲೂ ಪಾಲ್ಗೊಂಡರು.

ಹೊಸರಿತ್ತಿಯಲ್ಲಿ ಹಪ್ತೆ ಬಡೆಯುವ ಸಂದರ್ಭದಲ್ಲಿ ಮಹದೇವಪ್ಪನವರು ಹಾಗೂ ಕೊಗನೂರಿನ ವೀರಯ್ಯ ಹಿರೇಮಠ, ಕರಿಯಪ್ಪ, ಸಂಗೂರ ಸಹ ಬ್ರಿಟೀಷ್ ಪೋಲಿಸ್ ಗುಂಡಿಗೆ ಬಲಿಯಾದರು. ಈ ಮೂವರ ಸ್ಮರಣೆಗಾಗಿ ವೀರಸೌಧ ಮೈದಳೆದಿದೆ. ಮಹದೇವಪ್ಪನವರ ಧರ್ಮಪತ್ನಿ ಸ್ವಾತಂತ್ರ ಹೋರಾಟಗಾರ್ತಿ ಶ್ರೀಮತಿ ಸಿದ್ಧಮ್ಮನವರ ಸಮಾಧಿಯೂ ಸಹ ಇಲ್ಲಿಯೇ ಇದೆ.

 

ಗಳಗೇಶ್ವರ ದೇವಾಲಯ, ಗಳಗನಾಥ

ಜಿಲ್ಲಾ ಕೇಂದ್ರದಿಂದ ದೂರ :೫೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೫೦ ಕಿ.ಮೀ.

ಶ್ರೀ ಗಳಗೇಶ್ವರ ಸ್ವಾಮಿ ದೇವಸ್ಥಾನ

ಹಾವೇರಿಯಿಂದ ೫೦ ಕಿ.ಮೀ. ಅಂತರದಲ್ಲಿ ಇರುವ ಗಳಗನಾಥ ಒಂದು ಸುಂದರ ಪ್ರವಾಸಿ ತಾಣ. ವರದಾನದಿ ಮತ್ತು ತುಂಗಭಧ್ರಾನದಿಗಳ ಸಂಗಮ ಸ್ಥಳವಿದು. ಮಕರ ಸಂಕ್ರಾಂತಿಯಂದು ಬಹುಸಂಖ್ಯೆಯಲ್ಲಿ ಜನರು ಸೇರುತ್ತಾರೆ.

ಇಲ್ಲೊಂದು ಗಳಗೇಶ್ವರ ದೇವಾಲಯವಿದೆ. ಪ್ರಾಚೀನ ಶಿಲ್ಪ ಸಿರಿಯೇ ತಲೆ ಎತ್ತಂತಿದೆ. ಎತ್ತರ ಶಿಲಾವಿನ್ಯಾಸ ಹೊಂದಿರುವ ಈ ದೇಗುಲದ ವೈಶಿಷ್ಟ್ಯವೆಂದರೆ ಇದು ನಕ್ಷತ್ರಾಕಾರದ ತಲಾವಿನ್ಯಾಸ ಮತ್ತು ಎತ್ತರದ ಅಧಿಷ್ಠಾನ ಹೊಂದಿರುವುದಲ್ಲದೆ ಮೇಲಕ್ಕೆ ನೋಡುತ್ತಾ ಹೋದ ಹಾಗೆ ಗೋಪುರ ತುದಿಯವರೆಗೆ ಕಿರಿದಾಗುತ್ತಾ ಹೋಗುತ್ತದೆ. ಗರ್ಭಸ್ಥಳದಲ್ಲಿ ಆಳೆತ್ತರದ ಈಶ್ವರಲಿಂಗ ಪ್ರತಿಷ್ಠಾಪನೆಯಾಗಿದೆ. ಸಪ್ತಮಾತೃಕೆಯರಿದ್ದಾರೆ. ಸುಮಾರು ೧೨ ಅಡಿ ಎತ್ತರದ ಬಾಗಿಲು ವಾಡವಿದೆ. ಅಂತರಾಳದಲ್ಲಿ ಸರಸ್ವತಿ ಹಾಗೂ ಜನಾರ್ಧನರಿದ್ದಾರೆ. ನವರಂಗದಲ್ಲಿ ಆಳೆತ್ತರದ ವಿಷ್ಣು, ಗಣಪತಿ, ಸೂರ್ಯ, ಮಹಿಷಾಸುರ ಮರ್ದಿನಿ ಸೇರಿದಂತೆ ಇನ್ನೂ ಹಲವಾರು ಮೂರ್ತಿಗಳಿವೆ. ಕಲ್ಯಾಣ ಚಾಲುಕ್ಯರ ಶೈಲಿಯ ಗಳಗೇಶ್ವರ ದೇವಾಲಯವನ್ನು ಕ್ರಿ.ಶ. ೧೧೦೦ರಲ್ಲಿ ನಿರ್ಮಿಸಿರಬಹುದಾದ ದಾಖಲೆಗಳಿವೆ.

ದೇವಾಲಯದ ಆವಿಷ್ಕಾರ ಕಾಲಕ್ಕೆ ವಿಶೇಷ ಕುಸರಿ ಕೆಲಸ, ದೈನಂದಿನ ಬದುಕಿನ ಜೀವನ ಶೈಲಿ, ಯುದ್ದ ಕಾರ್ಯಗಳ ವಿವಿಧ ಆಯಾಮಗಳು ತಂತ್ರಗಳನ್ನು ಪರಿಚಯಿಸುವ ಶಿಲ್ಪ ಕೆತ್ತನೆಗಳು ಕಂಡುಬರುತ್ತವೆ.

 

ಜಿಲ್ಲಾ ಆಡಳಿತ ಭವನ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ : ೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೫ ಕಿ.ಮೀ.

 

ಜಿಲ್ಲಾ ಆಡಳಿತ ಭವನ

ಮಾನ್ಯ ಶ್ರೀ ಜೆ.ಹೆಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ಹೊಸ ಜಿಲ್ಲೆಗಳ ಘೋಷಣೆಯಾಯಿತು. ಅವಿರತವಾಗಿ ಶ್ರಮಿಸಿದ ಅನೇಕ ಮಹನೀಯರ ಪ್ರಯತ್ನದಿಂದಾಗಿ ದಿನಾಂಕ: ೨೪-೦೮-೧೯೯೭ರಲ್ಲಿ ಹಾವೇರಿ ಪ್ರತ್ಯೇಕ ಜಿಲ್ಲೆಯಾಯಿತು.

ಹಾವೇರಿಯಲ್ಲಿ ಸರಕಾರಿ ಇಲಾಖೆಗಳು ಚದುರಿಕೊಂಡಿದ್ದವು. ಹೊಸಜಿಲ್ಲೆಗೆ ಅನೇಕ ಕಾಯಕಲ್ಪಗಳ ಬೇಡಿಕೆಯಿತ್ತು. ಜಿಲ್ಲಾಧಿಕಾರಿಗಳ ಕಛೇರಿಯ ಅವಶ್ಯಕತೆ ಇತ್ತು. ಇದನ್ನರಿತ ಸರಕಾರ ಹಾವೇರಿಗೆ ೫ ಕಿ.ಮೀ. ಅಂತರದಲ್ಲಿರುವ ದೇವಗಿರಿ ಗುಡ್ಡದ ವಿಶಾಲ ಪ್ರದೇಶದಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದು, ಜಿಲ್ಲೆಯ ಬಹುತೇಕ ಸರಕಾರಿ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಸುಂದರ ಪರಿಸರದ ಮಧ್ಯ ಮೈದಳೆದ ಈ ಕಟ್ಟಡ ಕಣ್ಮನಗಳಿಗೆ ಹರ್ಷ ತರುತ್ತದೆ. ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆದೊಯ್ದು ಅವರಿಗೆ ವಿವಿಧ ಇಲಾಖೆಗಳನ್ನು ಮತ್ತು ಕಛೇರಿಗಳನ್ನು ಪರಿಚಯ ಮಾಡಿಸಬಹುದಾಗಿದೆ.

 

ಸಿಂದಗಿಯ ಮಠ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ : ೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦ ಕಿ.ಮೀ.

ಸಿಂಧಗಿ ಮಠ

ಸಿಂಧಗಿ ಮಠವು ಹಾವೇರಿಯ ಶಿವಬಸವ ನಗರದಲ್ಲಿ ಪೂರ್ವಾಭಿಮುಖವಾಗಿ ರೈಲ್ವೆ ನಿಲ್ದಾಣಕ್ಕೆ ಹತ್ತಿರವಿದ್ದು, ಬಸ್ ನಿಲ್ದಾಣದಿಂದ ೨ ಕಿ.ಮೀ. ಅಂತರದಲ್ಲಿದೆ.

೧೯೫೬ರಲ್ಲಿ ಈ ಮಠವನ್ನು ಪೂಜ್ಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಸ್ಥಾಪನೆ ಮಾಡಿದ್ದಾರೆ. ಈ ಮಠದಲ್ಲೀಗ ವೈದಿಕ ಶಿಕ್ಷಣ ಪಡೆಯುವ ಸುಮಾರು ೧೦೦ ಮಂದಿ ವಠುಗಳಿದ್ದಾರೆ. ಇಲ್ಲಿ ವೈದಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕರ್ನಾಟಕದಾದ್ಯಂತ ಇದ್ದಾರೆ. ಸಂಸ್ಕೃತ ಪಾಠಶಾಲೆ, ಜ್ಯೋತಿಷ್ಯ, ಆಯುರ್ವೇದ ಶಿಕ್ಷಣದ ವ್ಯವಸ್ಥೆ ಇದ್ದು, ಉಚಿತ ವ್ಯೆದ್ಯಕೀಯ ಶಿಬಿರಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಗದುಗಿನ ಪೂಜ್ಯ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಿತ್ಯ ದಾಸೋಹ ನಡೆಯುತ್ತಿದ್ದು, ಪ್ರತಿದಿನ ನೂರಾರು ಭಕ್ತರು ಪ್ರಸಾದ ಸೇವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದು, ಇದು ಗ್ರಂಥಾಲಯ ಮತ್ತು ಧ್ಯಾನಮಂದಿರವನ್ನು ಹೊಂದಿದೆ. ಪ್ರತಿವರ್ಷ ಕೀರ್ತನೆ, ಪುರಾಣ, ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಬೆಳವಣಿಗೆ ಮೂಲಕ ಜನರಲ್ಲಿ ಧಾರ್ಮಿಕ, ನೈತಿಕ ಸಾಂಸ್ಕೃತಿಕ ಪರಂಪರೆಯನ್ನು ಬಿತ್ತುತ್ತಾ ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರ ತತ್ವಾದರ್ಶಗಳ ಘನತೆಯನ್ನು ಎತ್ತಿ ಹಿಡಿದಿದೆ. ಸಾವಿರಾರು ಭಕ್ತ ಸಮೂಹದ ಮನಸೆರೆ ಹಿಡಿಯುವ ಸಿಂದಗಿಮಠ ಒಂದು ಪವಿತ್ರಯಾತ್ರಾ ಸ್ಥಳವಾಗಿದೆ.

 

ಹುಕ್ಕೇರಿಮಠ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ : ೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦ ಕಿ.ಮೀ.

 

ಹುಕ್ಕೇರಿಮಠ

ಹಾವೇರಿಗೆ ಕಳಸಪ್ರಾಯವಾದ ಶ್ರೀ ಹುಕ್ಕೇರಿಮಠವು ಕಳೆದ ೩೦೦ ವರ್ಷಗಳ ಹಿಂದೆ ಪರಮಪೂಜ್ಯ ಶ್ರೀ ರಾಜೋಟಿ ಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟು ಕುಮಾರ ಸಮಯದ ಸಂಪ್ರದಾಯದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನ ಸಮೂಹದ ಉದ್ಧಾರಕ್ಕಾಗಿ ಮಾಡುತ್ತಾ ಬಂದಿದೆ. ವೀರಶೈವ ಧರ್ಮದ ತತ್ವಾದರ್ಶಗಳನ್ನು ಎತ್ತಿ ಹಿಡಿದು ತನ್ನ ಪ್ರಭಾವವನ್ನು ಭಕ್ತ ಸಮೂಹದಲ್ಲಿ ಬಿತ್ತಿದೆ.

ಶ್ರೀ ಮಠದಲ್ಲಿ ಪರಮಪೂಜ್ಯ ಶ್ರೀ ರಾಜೋಟಿ ಸ್ವಾಮಿಗಳ, ಶ್ರೀ ಶಿವಬಸವ ಸ್ವಾಮಿಗಳ ಮತ್ತು ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳ ಕತೃ ಗದ್ದುಗೆಗಳಿವೆ.

ಶ್ರೀ ಮಠದ ಪರಂಪರೆಯಲ್ಲಿ ಶ್ರೀ ಮ.ನಿ.ಪ್ರ. ರಾಜೋಟಿ ಸ್ವಾಮಿಗಳು. ಪರಮಪೂಜ್ಯ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳು ಮತ್ತು ಪೂಜ್ಯ ಶ್ರೀ ಶಿವಲಿಂಗ ಸ್ವಾಮಿಗಳು ಪಟ್ಟಾಧಿಕಾರ ಪಡೆದು ಆಳಿಬಾಳಿ ಶಿವಾಧೀನರಾಗಿದ್ದಾರೆ.

ಶ್ರೀಮಠದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಡಿ.ಇಡಿ. ಕಾಲೇಜುಗಳಿದ್ದು, ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ.

 

ಸಂಗೂರ ಸಕ್ಕರೆ ಕಾರ್ಖಾನೆ, ಹಾವೇರಿ

ಜಿಲ್ಲಾ ಕೇಂದ್ರದಿಂದ ದೂರ : ೧೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೨ ಕಿ.ಮೀ.

 

ಸಂಗೂರ ಸಕ್ಕರೆ ಸಹಕಾರಿ ಕಾರ್ಖಾನೆ

ಹಾವೇರಿ – ಹಾನಗಲ್ಲ ರಸ್ತೆಯಲ್ಲಿ ೧೨ ಕಿ.ಮೀ. ಸಾಗಿದರೆ ಈ ಸಕ್ಕರೆ ಕಾರ್ಖಾನೆ ನಮಗೆ ಕಾಣಸಿಗುತ್ತದೆ. ೧೭೯ ಎಕರೆ ಭೂಮಿ ವಿಸ್ತೀರ್ಣದಲ್ಲಿ ಇದು ದಿನಾಂಕ: ೨೮.೧೨.೧೯೮೩ ರಲ್ಲಿ ಅಂದಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿದೆ.

ದಿನಮೊಂದಕ್ಕೆ ೧೨೫೦ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಈ ಕಾರ್ಖಾನೆ ಈಗ ನಾವಿನ್ಯತೆಯಿಂದಾಗಿ ೨೨೫೦ ಟನ್ ಕಬ್ಬನ್ನು ಒಂದು ದಿನಕ್ಕೆ ನುರಿಸುವ ಸಾಮರ್ಥ್ಯ ಹೊಂದಲಿದೆ.

ನೂರಾರು ಹೆಕ್ಟೇರ್ ಕಬ್ಬು ಬೆಳೆಯುವ ಅವಕಾಶ ಹಾವೇರಿ ಜಿಲ್ಲೆಯ ರೈತರಿಗೆ ದೊರಕಿದ್ದು, ಅಂದಾಜು ೩೦೦ ಜನರು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಕಾರ್ಖಾನೆಯ ಕೆಲಸಕಾರ್ಯ ಹಾಗೂ ಸಕ್ಕರೆ ತಯಾರಾಗುವ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಲು ಇದೊಂದು ಉತ್ತಮವಾದ ಶೈಕ್ಷಣಿಕ ಸ್ಥಳ.

 

ಶ್ರೀ ಸೋಮೇಶ್ವರ ದೇವಾಲಯ, ಹರಳಹಳಿ

ಜಿಲ್ಲಾ ಕೇಂದ್ರದಿಂದ ದೂರ :೩೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೩೨ ಕಿ.ಮೀ.

 

ಶ್ರೀ ಸೋಮೇಶ್ವರ ದೇವಸ್ಥಾನ

ಸೋಮೇಶ್ವರ ದೇವಾಲಯ ಹಾವೇರಿ ತಾಲೂಕಿನ ಹರಳಹಳ್ಳಿಯ ಪ್ರಾಚೀನ ಶಿಲ್ಪಸಂಪತ್ತು ಹೊಂದಿರುವ ವೈಶಿಷ್ಯಪೂರ್ಣ ದೇವಾಲಯ. ತ್ರಿಕೂಟಾಚಲ ದೇವಾಲಯವಿದು. ಮೂರು ಗರ್ಭಗೃಹ, ಮೂರು ಅಂತರಾಳವಿರುವ ಈ ದೇಗುಲ ಒಂದೇ ಒಂದು ವಿಶಾಲ ಹರವಿನ ನವರಂಗ ಹೊಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೂರು ಗರ್ಭಗೃಹಗಳಲ್ಲಿ ಪ್ರತ್ಯೇಕ ಮೂರು ಈಶ್ವರ ಲಿಂಗಗಳಿವೆ. ದೇವಾಲಯದ ಸುತ್ತಲೂ ಮಧ್ಯಬಾಗದಲ್ಲಿ ನಿರ್ದಿಷ್ಟ ಅಂತರದಲ್ಲಿ ಚಿಕ್ಕ ಚಿಕ್ಕ ಗೂಡುಗಳಿವೆ. ಇದು ಕಲ್ಯಾಣ ಚಾಳುಕ್ಯರ ದೇವಾಲಯ ನಿರ್ಮಿಸುವ ಶೈಲಿಯಲ್ಲಿ ನಿರೂಪಿಸಲ್ಪಡುತ್ತವೆ. ಹೊಯ್ಸಳರ ಲಾಂಛನವಿರುವುದರಿಂದ ರಾಜಾಡಳಿತ ವಂಶದಿಂದ ವಂಶಕ್ಕೆ ಹಸ್ತಾಂತರಗೊಂಡಂತೆ ಪ್ರತಿ ರಾಜವಂಶಸ್ಥರು ತಮ್ಮ ಕುರುಹು ಬೀರುವ ಶಿಲ್ಪ ರಚನೆಗಳನ್ನು ಸೇರಿಸಿರಬಹುದಾದ ಉಲ್ಲೇಖಗಳನ್ನು ಈ ದೇವಾಲಯದ ಇತಿಹಾಸದಲ್ಲಿಯೂ ಗುರುತಿಸಬಹುದಾಗಿದೆ.

ತುಂಗಾಭದ್ರ ನದಿದಡದ ಮೇಲೆ ನಿರ್ಮಿತವಾಗಿರುವ ಸೋಮೇಶ್ವರ ದೇವಾಲಯದಲ್ಲಿ ಹೊಯ್ಸಳ ಲಾಂಛನವಿರುವುದರಿಂದ ಹೊಯ್ಸಳ ಶೈಲಿಯ ದೇವಾಲಯವೆಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ಶಿಲ್ಪ ಸೌಂದರ್ಯ ಅದ್ಭುತವಾಗಿದೆ. ಗರ್ಭಗುಡಿಯ ಬಾಗಿಲು ಉತ್ತಮ ಆಭರಣಗಳಿಂದ ಅಲಂಕಾರ ಮಾಡಲ್ಪಟ್ಟ ಪರಡೆರೂಪದ ಕೆತ್ತನೆಯನ್ನು ಹೊಂದಿದೆ. ಶಿಲ್ಪಗಳ ತಂತ್ರ ಕೌಶಲ್ಯ ಶ್ಲಾಘನೀಯ. ಕ್ರಿ.ಶ. ೧೨೧೩ರಲ್ಲಿ ಇದು ನಿರ್ಮಾಣಗೊಂಡಿದೆ. ದೇವಾಲಯದ ಹೊರ ಮೈಮೇಲೆ ಹಲವಾರು ದೇವತೆಗಳ ವಿಶಿಷ್ಟ ಭಂಗಿಯ ಕೆತ್ತನೆಗಳು ಕಣ್ಮನವನ್ನು ಸೆಳೆಯುತ್ತವೆ. ಈ ದೇವಾಲಯವು ಹಾವೇರಿ – ಹೊಸಪೇಟೆಯ ರಸ್ತೆಯಲ್ಲಿರುವ ಗುತ್ತಲದಿಂದ ಮುಂದಿದೆ.