ವ|| ಅಂತಿರುತ್ತಮೊಂದು ದಿವಸಂ ಯುವರಾಜನಿಂದ್ರಾಯುಧಮನೇಱ ಬೇಂಟೆಯ ವಿನೋದದಿಂ ತೊೞಲುತ್ತಮಿರೆಯಿರೆ

ಪಿರಿದಪ್ಪಾಶ್ವರ್ಯಪರಂ
ಪರೆ ಸಮನಿಸಲದ್ರಿಶಿಖರದಿಂದಿೞದಾಡು
ತ್ತಿರೆಯಿರೆ ನೀಜೆಚ್ಛೆಯಿಂ ಕಿ
ನ್ನರಮಿಥುನಮನವನಿಪಾಲತನಯಂ ಕಂಡಂ              ೧

ವ|| ಆಗಳ್ ಸಮುಪಜಾತಕುತೂಹಲಂ ವಿಸ್ಮಯಕ್ಷಿಪ್ತಚಿತ್ತನಾಗಿ

ಜಗದೊಳಗಪೂರ್ವಮೆಂಬೀ
ಬಗೆಯಿಂ ತಾಂ ಪಿಡಿವ ತವಕದಿಂ ಭೋಂಕನೆ ಬಂ
ದಗಣಿತ ಜವಮಂ ಕಿನ್ನರ
ಯುಗದ ಸಮೀಪಕ್ಕೆ ಬಿಟ್ಟನಿಂದ್ರಾಯುಧಮಂ              ೨

ವ|| ಆಗಳ್ ತಮ್ಮೆಡೆಗೆಯ್ತರ್ಪುದಂ ಕಂಡದೃಷ್ಟಪೂರ್ವಮಪ್ಪುದಱಂ ಕಿನ್ನರದ್ವಯ ಮತಿಭೀತಿಯಿಂ ಪರಿಯೆ

ಪಿಡಿದಪನೀಗಳಾ ಪಿಡಿಯಲೆಯ್ದಿದನಾ ಪಿಡಿದಪ್ಪನೀಗಳಾ
ಪಿಡಿದನೆ ಕಿನ್ನರದ್ವಯಮನೆಂಬಿನೆಗಂ ಬೞಸಂದು ತನ್ನ ಸಂ
ಗಡದವರುಂ ಪರಿಗ್ರಹಮುಮೆಯ್ತರಲಾಱದೆ ಪಿಂದೆ ನಿಲ್ವಿನಂ
ಕಡುಪಿನೊಳಂದು ಬಿಟ್ಟನತಿಶೀಘ್ರದೆ ವಾಜಿಯನಾ ನೃಪೋತ್ತಮಂ            ೩

ಮಡದಲಿ ನೂಂಕೆ ವಾಜಿ ಗರುಡಂಗಮದಿರ್ಮಡಿ ವಾಯುವಿಂಗೆ ಮೂ
ರ್ಮಡಿಯೆನಿಪೊಂದು ತನ್ನ ಜವದಿಂ ಪರಿಯಲ್ಕೆ ಮುಹೂರ್ತಮಾತ್ರದೊಳ್
ಗಡಪದಿನೈದುಯೋಜನಮನೊರ್ವನೆ ಸಂಸಿ ಪೋದನಂದು ಪೇ
ರಡವಿಯೊಳಾ ತುರಂಗವದನರ್ಕಳ ಬೆಂಬೞಯಂ ಮಹೀಭುಜಂ            ೪

ಛಲದಿಂದರಸಂ ತಾಂ ಬೆ
ನ್ನೊಳೆ ಪರಿದೆೞ್ಬಟ್ಟಿ ಪಿಡಿಯಲನುಗೆಯ್ವುದುದಮ
ಸ್ಖಲಿತಂ ಮುಂದಣ ತಾರಾ
ಚಲಶಿಖರಮನೇಱದತ್ತು ಕಿನ್ನರಮಿಥುನಂ           ೫

 

ವ|| ಹೀಗಿರಲು ಒಂದು ದಿನ ಯುವರಾಜನು ಇಂದ್ರಾಯುಧವನ್ನು ಹತ್ತಿ ಬೇಟೆಯಾಡುತ್ತಾ ವಿನೋದದಿಂದ ಸಂಚರಿಸುತ್ತಿರಲಾಗಿ, ೧. ಒಂದು ಅತ್ಯಾಶ್ಚರ್ಯಕರವಾದ ಸನ್ನಿವೇಶವು ಒದಗಿಬಂತು. ಬೆಟ್ಟದ ತುದಿಯಿಂದ ಕಿನ್ನರ ಜಾತಿಗೆ ಸೇರಿದ ದಂಪತಿಗಳು ಸ್ವೇಚ್ಛೆಯಿಂದ ಇಳಿದುಬರುತ್ತಿರುವುದನ್ನು ರಾಜಕುಮಾರನು ನೋಡಿದನು. ವ|| ಆಗ ಅವನಿಗೆ ಬಹಳ ಕುತೂಹಲವುಂಟಾಯಿತು. ಆಶ್ಚರ್ಯದಿಂದ ಪ್ರೇರಿಸಲ್ಪಟ್ಟ ಮನಸ್ಸುಳ್ಳವನಾಗಿ, ೨. ಈ ಜಗತ್ತಿನಲ್ಲಿ ಬಹಳ ದುರ್ಲಭವಾದ ಈ ದೇವಜಾತಿಯ ಜೋಡಿಯನ್ನು ಹಿಡಿಯಬೇಕೆಂಬ ತವಕದಿಂದ ಕೂಡಲೆ ಮಹಾವೇಗವುಳ್ಳ ಇಂದ್ರಾಯುಧವನ್ನು ಅವರ ಹತ್ತಿರಕ್ಕೆ ಬಿಟ್ಟನು. ವ|| ಆಗ ಆ ಕಿನ್ನರಯುಗ್ಮವು ತಮ್ಮ ಹತ್ತಿರಕ್ಕೆ ಬರುತ್ತಿದ್ದ ರಾಜಕುಮಾರನನ್ನು ಕಂಡು ಹಿಂದೆಂದೂ ಕಾಣದೆಯಿರುವುದರಿಂದ ಭಯಗೊಂಡು ಓಡಲಾಗಿ, ೩. ಆ ಜೋಡಿಯನ್ನು ಈಗ ಹಿಡಿಯುತ್ತಾನೆ! ಅಗೋ! ಹಿಡಿಯಲು ಹೋದನು. ಅಗೋ! ಹಿಡಿಯುತ್ತಾನೆ ಅಗೋ! ಹಿಡಿದೇಬಿಟ್ಟನಲ್ಲ! ಎಂಬಂತೆ ಹತ್ತಿರಕ್ಕೆ ಬರುತ್ತ, ತನ್ನ ಜೊತೆಯವರೂ ಪರಿವಾರದವರೂ ಹಿಂಬಾಲಿಸಲಾರದೆ ಹಿಂದೆ ನಿಲ್ಲಲಾಗಿ ಯುವರಾಜನು ಶಕ್ತಿಮೀರಿ ಬಹಳ ವೇಗದಿಂದ ಇಂದ್ರಾಯುಧವನ್ನು ಬಿಡುತ್ತಿದ್ದನು. ೪. ಅವನು ಕುದುರೆಯನ್ನು ಹಿಮ್ಮಡಿಯಿಂದ ತಿವಿಯುತ್ತಿದ್ದನು. ಅದು ಗರುಡನ ವೇಗಕ್ಕೆ ಎರಡರಷ್ಟು, ವಾಯುವಿಗೆ ಮೂರರಷ್ಟು ಎಂಬ ತನ್ನೊಂದು ವೇಗದಿಂದ ಧಾವಿಸುತ್ತಿತ್ತು. ಯುವರಾಜನು ಮುಹೂರ್ತಮಾತ್ರದಲ್ಲಿ ಆ ದೊಡ್ಡ ಕಾಡಿನಲ್ಲಿ ವೇಗದಿಂದ ಕಿನ್ನರರನ್ನು ಹಿಂಬಾಲಿಸುತ್ತ ಐದು ಯೋಜನದಷ್ಟು ದೂರವನ್ನು ಒಬ್ಬನೆ ಅತಿಕ್ರಮಿಸಿ ಬಂದುಬಿಟ್ಟನು. ೫. ಹೀಗೆ ಯುವರಾಜನು ಹಟದಿಂದ ಹಿಂಬಾಲಿಸಿ ಓಡಿ ಹಿಡಿಯಲು ಪ್ರಯತ್ನಿಸುತ್ತಿರಲು ಆ ಕಿನ್ನರ ದಂಪತಿಗಳು ತಡೆಯಿಲ್ಲದೆ ಮುಂದಿರುವ

ಏಕೆ ನಿರರ್ಥಕಂ ಮಗುವಿನಂದದೆ ಕೋಟಲೆಗೊಂಡೆನಕ್ಕಟಿಂ
ತೇಕೆಯೊ ಕಿನ್ನರದ್ವಯದ ಬೆಂಬೞಯಂ ತಗುಳುತ್ತೆ ಬಂದೆನಿಂ
ತೇಕೆಯೊ ಮೂರ್ಖನಂತೆ ಮತಿಗೆಟ್ಟೆನಿದಂ ಪಿಡಿದಲ್ಲಿ ಬರ್ಪುದೇಂ
ವ್ಯಾಕುಲನಾಗುತಂ ಪಿಡಿಯದಿರ್ದೊಡೆ ಪೇೞು ಕಿಡುವೊಂದು ವಸ್ತುವೇಂ    ೬

ಏನಾನೊಂದನೆ ಮಾಡಿದೆಂ ಮಗುವಿನಂತೇನಾನುಮೊಂದಕ್ಕೆ ಪೇ
ೞೇನೋ ಕೌತುಕದಿಂದ ಬಂದೆನೆನಗೀ ದುರ್ಮೋಹದುದ್ಯೋಗಮಿಂ
ತೇನಾನೊಂದನೊಡರ್ಚಿತಿಂತಿದೆನುತಂ ತದ್ವೇಗದಿಂ ವಿಸ್ಮಯ
ಧ್ಯಾನಾನಮನಸ್ಕನೊಂದಿನಿಸುಬೇಗಂ ನಿಂದನುರ್ವೀಶ್ವರಂ                   ೭

ವ|| ಅಂತು ನಿಂದು

ಪಿರಿದು ಜವಮುಳ್ಳುದಱನೀ
ಹರಿ ನಿಮಿಷಕೆ ಪಿರಿದುವರಿಗುಮನಿತಳೆನಿತಂ
ತರಮನೆಡೆವರಿಗುಮೋ ಚೆ
ಚ್ಚರದಿಂ ಬೞಸಂದು ಮಱುಗಿ ಬರ್ಪೆನ್ನ ಬಲಂ                                ೮

ತಱಗೆಲೆ ಬಳ್ಳಿಯೆಂಬಿವಱ ತಿಂತಿಣಿಯೊಳ್ ತುರಗಾತಿವೇಗದಿಂ
ದಱಯಲೆ ಬಂದುದಿಲ್ಲ ಪಥಮುಂ ಬರುತಂ ಮಗುೞ್ವಂದಮೆಂತೊ ಮೇ
ಣ್ಮದುವರಣ್ಯದೊಳ್ ಸುೞವನಿಲ್ಲ ನರಂ ಸರದೋಱುವನ್ನನೇ
ತೆಱದೊಳಮೆಂತು ಪೋಪೆನೊ ಸುವರ್ಣಪುರಕ್ಕೆನುತಂ ನರಾಪಂ            ೯

ವ|| ಅಂತು ಚಿಂತಿಸುತಮಿರ್ಪುದುಂ

ವಸುಧೆಯ ಬಡಗಣ ದೇಶ
ಕ್ಕೆ ಸೀಮೆಯನಿಸುಪುದು ಸುವರ್ಣಪುರಮತ್ತಲ್ ಮಾ
ನಿಸರಿಲ್ಲದಡವಿ ಬೞಕ
ತ್ತೆಸೆವುದು ಕೈಲಾಸಮೆಂಬುದಾ ನಗಮಿದಿರೊಳ್                                   ೧೦

ಅದಱಂದೊರ್ವನೆ ತೆಂಕಲಾವುದೆನುತಂ ನೋಡುತ್ತಮಿಂ ಪೋಗವೇ
ೞ್ಪುದಿಂದತಲ್ಲದೆ ಬೇಱುಪಾಯಮಣಮಿಲ್ಲಂತಲ್ತೆ ತಂತಮ್ಮ ಮಾ
ಡಿದುದಂ ತಾಮುಣವೇೞ್ಕುಮೆಂದು ಪಿರಿದೊಂದುದ್ವೇಗದಿಂದಂ ಮಗು
ೞದನಿಂದ್ರಾಯುಧಮಂ ನೃಪಾಲತನುಜಂ ರಾಜಾರಾಜಾತ್ಮಜಂ             ೧೧

ಕೈಲಾಸಪರ್ವತದ ಶಿಖರವನ್ನು ಏರಿಬಿಟ್ಟರು. ೬. ಅಯ್ಯೋ! ಏಕೆ ಹೀಗೆ ಮಗುವಿನಂತೆ ವ್ಯರ್ಥವಾಗಿ ತೊಂದರೆಪಟ್ಟೆನು? ಏಕೆ ಈ ಕಿನ್ನರ ದಂಪತಿಗಳನ್ನು ಹಿಂಬಾಲಿಸಿ, ಓಡಿಬಂದೆನು? ಹೀಗೇಕೆ ಮೂರ್ಖನಂತೆ ಬುದ್ಧಿಗೆಟ್ಟೆನು? ಇದನ್ನು ಹಿಡಿಯುವುದರಿಂದ ಬರುವ ಲಾಭವೇನು? ಇಷ್ಟು ಆಯಾಸಪಟ್ಟುಕೊಂಡಾದರೂ ಹಿಡಿಯಬೇಕಾದ್ದೇನು? ಹಿಡಿಯದಿದ್ದರೆ ಏನು ಕೆಟ್ಟುಹೋಗುತ್ತಿತ್ತು. ೭. ಎಳೆಯ ಮಗುವಿನಂತೆ ಏನೋ ಒಂದನ್ನು ಮಾಡಿಬಿಟ್ಟೆ. ಏನು ಬೇಕಾದರೂ ಆಗಿ ಹೋಗಲಿ. ಏನೋ ಒಂದು ಕುತೂಹಲದಿಂದ ಬಂದೆ. ಈ ಅಳಿಯಾಸೆಯ ಕೆಲಸವು ಹೀಗೆ ಏನನ್ನೋ ಮಾಡಿಬಿಟ್ಟಿತು ಎಂದು ಹೇಳುತ್ತ, ಅದೇ ಕಳವಳದಿಂದ ಅಚ್ಚರಿ ಮತ್ತು ಚಿಂತೆಗೆ ಒಳಗಾದ ಮನಸ್ಸುಳ್ಳವನಾಗಿ ರಾಜಕುಮಾರನು ಸ್ವಲ್ಪ ನಿಂತಿದ್ದನು. ವ|| ಹಾಗೆ ನಿಂತು. ೮. ಈ ಕುದುರೆಯು ಬಹಳ ಚುರುಕಾಗಿರುವುದರಿಂದ ಒಂದೇ ನಿಮಿಷಕ್ಕೆ ಬಹಳ ದೂರ ಬಂದುಬಿಡುತ್ತದೆ. ಇಷ್ಟು ಹೊತ್ತಿಗಾಗಲೆ ಗಾಬರಿಪಟ್ಟು ಅವಸರದಿಂದ ಹಿಂಬಾಲಿಸಿ ಬರುತ್ತಿರುವ ಸೈನ್ಯವು ಎಷ್ಟು ದೂರ ಹಿಂದೆಬಿದ್ದಿದೆಯೊ? ೯. ಬರುವಾಗ ಕುದುರೆಯ ವೇಗದಿಂದ ತರಗೆಲೆ ಮತ್ತು ಬಳ್ಳಿಗಳ ಗುಂಪಿನಲ್ಲಿ ದಾರಿಯೂ ಗೊತ್ತಾಗಲಿಲ್ಲ. ಈಗ ಹಿಂದಕ್ಕೆ ಹೋಗುವುದು ಹೇಗೆ? ಈ ಕಾಡಿನಲ್ಲಿ ದಾರಿತೋರಿಸಲು ಮರೆತಾದರೂ ಒಂದು ನರಪಿಳ್ಳೆ ಕೂಡ ಸುಳಿಯುತ್ತಿಲ್ಲವಲ್ಲಾ! ಸುವರ್ಣಪುರಕ್ಕೆ ಯಾವ ರೀತಿಯಲ್ಲಿ ಹೇಗೆ ಹೋಗಲಿ? ಎಂದು ಆ ಯುವರಾಜನು ಚಿಂತಿಸುತ್ತಿದ್ದನು. ವ|| ಹಾಗೆ ಚಿಂತಿಸುತ್ತಿದ್ದು ೧೦. ‘ಭೂಮಿಯ ಉತ್ತರಪ್ರದೇಶಕ್ಕೆ ಸುವರ್ಣಪುರವೇ ಗಡಿಯಾಗಿದೆ. ಅಲ್ಲಿಂದ ಮುಂದೆ ಮನುಷ್ಯರಿಲ್ಲದ ಕಾಡು. ಅದಕ್ಕಿಂತ ಮುಂದೆ ಕೈಲಾಸಪರ್ವತವಿದೆ’ ಎಂದು ಹೇಳುತ್ತಾರೆ. ಆ ಕೈಲಾಸವೇ ಎದುರಿಗೆ ಕಾಣುತ್ತಿದೆ. ೧೧. ಅದರಿಂದ ಇನ್ನು ಒಬ್ಬನೆ ದಕ್ಷಿಣದಿಕ್ಕು ಯಾವುದೆಂದು ನೋಡುತ್ತಾ ಹಿಂದಿರುಗಬೇಕು, ಹಾಗಿಲ್ಲದೆ ಬೇರೆ ಯಾವ ಉಪಾಯವೂ ಇಲ್ಲವಲ್ಲ! ಜನರು

ವ|| ಅಂತು ಕುದುರೆಯಿಂ ಮಗುೞ ಮತ್ತಮಿಂತೆಂದಂ

ದಿನಲಕ್ಷಿ ರಸನೈಕ ಮಧ್ಯಮಣಿಯಾದಂ ಭಾಸ್ಕರಂ ಶ್ರಾಂತಿಯುಂ
ಘನಮಾದತ್ತು ತುರಂಗಮಕ್ಕದಱನಾಂ ನೀರ್ದಾಣಮಂ ನೋಡಿ ಮೆ
ಲ್ಲನೆ ಸಾರ್ದಲ್ಲಿ ಬೞಲ್ಕೆಯಂ ಕಳೆದು ಪೋಪೆಂ ಬೞಕ್ಕೆಂದು ವಾ
ರಿನಿವಾಸಂಗಳನಲ್ಲಿ ನಾಲ್ದೆಸೆಗಳೊಳ್ ನೋೞ್ಕುಂ ಮಹೀವಲ್ಲಭಂ               ೧೨

ವ|| ಅಂತು ನೋಡುತ್ತುಮಿರೆಯಿರೆ

ಕೊಳದಿಂದಂ ತೆಗೆದೊಟ್ಟಿಕೊಂಡ ಕುಮುದಾಂಭೋಜಾತ ಕಲ್ಹಾರ ಕು
ಟ್ಮಲಶಾಲೂಕ ಮೃಣಾಳಜಾಲಮನಿಡುತ್ತೀಡಾಡುತಂ ಪಾದಪಂ
ಗಳ ಪುಷ್ಪಸ್ತಬಕಂಗಳಂ ಮುಱವುತಂ ಪೋಗಲ್ ಮದೇಭಂಗಳಾ
ಗಳದೇಂ ತೀಡಿದುದೋ ಸುಗಂಧಬಹುಳಂ ಬಂದೊಂದು ಮಂದಾನಿಲಂ        ೧೩

ವ|| ಅಂತು ನಿರೀಕ್ಷಿಸುತ್ತಂ ಬಂದ ಸುರಭಿಗಂಧವಹ ಸೂಚ್ಯಮಾನ ಗಜಾಯುಧಮಾರ್ಗಂ ಬಿಡಿದನೇಕ ಚಮತ್ಕಾರಿಯಪ್ಪ ಕೈಲಾಸತಟದೊಳ್ ಪೋಗೆವೋಗೆ

ಗಿರಿಶಾದ್ರೀಂದ್ರದ ಪೂರ್ವೋ
ತ್ತರದಿಶೆಯೊಳ್ ಕಾರ್ಮುಗಿಲ್ಗಳೆಱಗಿದುವೆನೆ ಕಾ
ರಿರುಳೆಳಸಿತೆನೆ ಕಱಂಗಿದ
ತರುಷಂಡಮನವನಿಪಾಲತನಯಂ ಕಂಡಂ                        ೧೪

ವ|| ಅಂತು ನಿರೀಕ್ಷಿಸುತ್ತಂ ಪೋಗೆವೋಗೆ

ಕುಮುದರಜಂಗಳೊಳ್ ಪೊರೆದು ವಾಕಣಜಾಲಮನಾಂತು ಕೂಡೆ ವಿ
ಶ್ರಮಿಸಿ ತರಂಗಮಾಲಿಕೆಗಳೊಳ್ ಕಲಹಂಸನಿನಾದಬಂಭ್ರಮ
ದ್ಭ ಮರರವಂಗಳೊಳ್ ಬೆರಸಿ ಮಾರುತನೊಯ್ಯನೊಯ್ಯನೆ ಬಂದು ತೀಡಿದ
ತ್ತಮರ್ದೊಸೆದಪ್ಪಿಕೊಂಡು ಕರೆವಂತೆವೊಲಾ ಮನುಜೇಂದ್ರಚಂದ್ರನಂ      ೧೫

ವ|| ಅಂತಾ ತರುಷಂಡಮಂ ನೋೞ್ಪನ್ನೆಗಮಲ್ಲಿ

ಎಲೆ ತಾರಾಗಂ ಹರಂ ಕಣ್ಣಿಡೆ ಕರಗಿದುದಂತಲ್ತು ರುದ್ರಾಟ್ಟಹಾಸಂ
ಜಲಮಾದತ್ತಲ್ತು ಚಂದ್ರಾತಪಮಮೃತರಸಾಕಾರಮಾಯ್ತಲ್ತು ಹೈಮಾ
ಚಲಮಂಭೋರೂಪದಿಂದಂ ಪರಿಣಮಿಸಿದುದಂತಲ್ತು ನೈರ್ಮಲ್ಯಶೋಭಾ
ಕಲಿತಂ ತ್ರೈಲೋಕ್ಯಲಕ್ಷಿ ಮಣಿಮುಕುರಮನೆಲ್ ಚೆಲ್ವದಾಯ್ತಬ್ಜಷಂಡಂ         ೧೬

ತಾವು ಮಾಡಿದ ಕೆಲಸದ ಫಲವನ್ನು ತಾವೇ ಅನುಭವಿಸಬೇಕು” ಎಂದು ಬಹಳ ವ್ಯಥೆಯಿಂದ ಆ ಚಕ್ರವರ್ತಿಕುಮಾರನು ಇಂದ್ರಾಯುಧವನ್ನು ಹಿಂದಿರುಗಿಸಿದನು. ವ|| ಹಾಗೆ ಕುದುರೆಯನ್ನು ಹಿಂದಿರುಗಿಸಿ ಮತ್ತೆ ಹೇಳಿದನು. ೧೨. “ಸೂರ್ಯನು ಹಗಲಿನ ಭಾಗ್ಯದೇವತೆಯ ಡಾಬಿನ ಮಧ್ಯದ ರತ್ನದಂತೆ ಕಾಣುತ್ತಿದ್ದಾನೆ. ಕುದುರೆಗೆ ಬಹಳ ಆಯಾಸವಾಗಿದೆ. ಆದ್ದರಿಂದ ನಾನು ನೀರಿರುವ ಸ್ಥಳವನ್ನು ಕಂಡುಹಿಡಿದು ಮೆಲ್ಲನೆ ಹೋಗಿ ಬಳಲಿಕೆಯನ್ನು ಪರಿಹರಿಸಿಕೊಂಡು ಬಳಿಕ ಹಿಂದಿರುಗುತ್ತೇನೆ”  – ಎಂದು ಯೋಚಿಸಿ ಎಲ್ಲಾದರೂ ನೀರಿದೆಯೆ? ಎಂದು ಆ ಯುವರಾಜನು ನಾಲ್ಕು ದಿಕ್ಕುಗಳನ್ನೂ ಹುಡುಕಾಡಿದನು. ವ|| ಹಾಗೆ ಹುಡುಕುತ್ತಿರಲಾಗಿ ೧೩. ಕೊಳದಿಂದ ಕಿತ್ತು ರಾಶಿ ಹಾಕಿರುವ ಬಿಳಿ ಕಮಲ, ಕೆಂದಾವರೆ, ನೈದಿಲೆಗಳ ಮೊಗ್ಗು, ಗಡ್ಡೆ, ದಂಟುಗಳನ್ನು ಕಿತ್ತು ಬಿಸಾಡುತ್ತ ಬಿಸಾಡುತ್ತ, ಮರಗಳ ಹೂಗೊಂಚಲುಗಳನ್ನು ಮುರಿದುಹಾಕುತ್ತ ಮದ್ದಾನೆಗಳು ಆಗತಾನೆ ಹೊರಟುಹೋಗಿರಲು ಸುವಾಸನೆಯಿಂದ ತುಂಬಿದ ಮಂದಮಾರುತವು ಆಗ ಬೀಸಲು ಪ್ರಾರಂಭಿಸಿತು. ವ|| ಹಾಗೆಯೆ ನೋಡುತ್ತಿರಲು ಬೀಸುತ್ತಿರುವ ಸುವಾಸನೆಯಾದ ಗಾಳಿಯಿಂದ ಸೂಚಿತವಾಗಿರುವ ಆನೆಯ ಹಿಂಡಿನ ದಾರಿಯನ್ನು ಹಿಡಿದು ಬಹಳ ಆಶ್ಚರ್ಯಕರವಾದ ಕೈಲಾಸಪರ್ವತದ ತಪ್ಪಲಿನಲ್ಲೇ ಹೋಗುತ್ತಿರಲಾಗಿ ೧೪. ಆ ಕೈಲಾಸಪರ್ವತದ ಈಶಾನ್ಯದಿಕ್ಕಿನಲ್ಲಿ ಕಪ್ಪುಮೋಡಗಳು ಕವಿದಂತೆ ಕಗ್ಗತ್ತಲೆಯು ಆವರಿಸಿದಂತೆಯೂ ಕಪ್ಪಾಗಿಸುವ ಮರಗಳ ಗುಂಪನ್ನು ರಾಜಕುಮಾರನು ನೋಡಿದನು. ವ|| ಹಾಗೆ ನಿರೀಕ್ಷಿಸುತ್ತ ಹೋಗುತ್ತಿರಲಾಗಿ ೧೫. ತಾವರೆಯ ಧೂಳುಗಳಲ್ಲಿ ವೃದ್ಧಿಯಾಗಿ, ನೀರಿನ ತುಂತುರುಗಳನ್ನು ಹೊಂದಿ, ಅಲೆಗಳ ಸಾಲುಗಳಲ್ಲಿ ಸೇರಿ ವಿಶ್ರಾಂತಿ ಪಡೆದು, ಕಲಹಂಸಪಕ್ಷಿಗಳ ಧ್ವನಿಗಳಲ್ಲಿ ಸುತ್ತಾಡಿ, ದುಂಬಿಗಳ ಧ್ವನಿಯೊಂದಿಗೆ ಬೆರೆದು ಬಂದ ಗಾಳಿಯು ಮೆಲ್ಲಗೆ ಬಂದು ಆ ರಾಜಕುಮಾರನನ್ನು ಪ್ರೀತಿಯಿಂದ ಗಾಢವಾಗಿ ತಬ್ಬಿಕೊಂಡು ಕರೆಯುವಂತೆ ಬೀಸಿತು. ವ|| ಹಾಗೆ ಆ ಮರದ ಗುಂಪನ್ನು ನೋಡುತ್ತಿರುವಾಗ ಅಲ್ಲಿ ೧೬. ಪರಮೇಶ್ವರನು ಹಣೆಗಣ್ಣಿನಿಂದ ನೋಡಲಾಗಿ ಬೆಳ್ಳಿಯ

ವ|| ಅದಲ್ಲದೆಯುಂ

ವಸುಧೆಯ ಚಂದ್ರಕಾಂತಮಣಿಭೂಗೃಹಮೆನ್ನದೆ ಘೂರ್ಣಿತಾರ್ಣವ
ಪ್ರಸವ ಸಮಗ್ರನಿರ್ಗಮನಮಾರ್ಗಮಿದೆನ್ನದೆ ನೋಡೆ ಪರ್ವಿದಾ
ಗಸದವತಾರಮೆನ್ನದೆ ಜಗತ್ರಯಸಂಚಿತ ಪುಣ್ಯಸಂಚಯಂ
ರಸಮಯಮಾದುದೆನ್ನದೆ ಸರೋವರಮಂ ಪೆಱತೇನೆನೆಂಬುದೋ          ೧೭

ವ|| ಮತ್ತಮದು ತೆಕ್ಕನೆತೀವಿಯುಮತಿನಿರ್ಮಲತೆಯಿಂ ರಿಕ್ತಮಾದಂತಿರ್ಪುದಂತಿರ್ಪುದಂತುಮಲ್ಲದೆಯುಂ

ಎಸಗುವ ಮಂದಾನಿಲನಿಂ
ಕುಸುಮರಜಂಬೊರೆದು ಪೊಣ್ಮುವಳಿದೆರೆಗಳಿನೇ
ನೆಸೆದುದೊ ಸುರಚಾಪಂಗಳ್
ಪಸರಿಸಿದಂಬರಮೆನಲ್ ಸರೋವರಮಾಗಳ್                                 ೧೮

 

ಪ್ರತಿಬಿಂಬದ ನೆವದಿಂ ವನ
ತತಿ ಶೈಲಗ್ರಹನಿಕಾಯ ತಾರಾಂಕ ಜಗ
ತ್ರಿತಯಮನಬ್ಜೋದರನಾ
ಕೃತಿಯಂ ತನ್ನೊಳಗೆ ತಳೆದು ತಿಳಿಗೊಳನೆಸೆಗುಂ                            ೧೯

ತಡಿವಿಡಿದೊಪ್ಪಿ ತೋಱುವ ತಮಾಲವನಂಗಳ ಮರ್ವು ಪರ್ವಿ ಕ
ರ್ಮಡುಗಳೊಳೆಯ್ದೆ ಮಾರ್ತೊಳಗೆ ನೀಲಸರೋಜವನಂಗಳಲ್ಲಿ ತ
ಳ್ತಿಡಿದಿರೆ ಕಾಳಗತ್ತಲೆ ತಗುಳ್ದಿರುಳಾದುದೆ ಗೆತ್ತು ತಮ್ಮೊಳಿ
ರ್ದೆಡೆಯಿನಗಲ್ವವಂಜಿ ಕೆಲವುಂ ಪೊಣರ್ವಕ್ಕಿಗಳಬ್ಜಷಂಡದೊಳ್             ೨೦

ಅದೊಂದೆಡೆ ಜಲೇಶಹಂಸಮುಖದಾರಿತಾಂಭೋಜಮಂ
ತದೊಂದೆಡೆ ದಿಶೇಭಜರ್ಝರಿತ ನೀಲನೀರೇಜಮಂ
ತದೊಂದೆಡೆ ವೃಷಾಂಕಪುಂಗವವಿಘಟ್ಟಿತೋತ್ತೀರಮಂ
ತದೊಂದೆಡೆ ಕೃತಾಂತಸೈರಿಭವಿಕೀರ್ಣಫೇನೋತ್ಕರಂ                    ೨೧

ಬೆಟ್ಟವು ಕರಗಿ ನೀರಾಗಿರುವಂತೆಯೂ, ರುದ್ರಮೂರ್ತಿಯ ಅಟ್ಟಹಾಸವು ಜಲರೂಪವನ್ನು ಪಡೆದಂತೆಯೂ, ಬೆಳದಿಂಗಳು ಅಮೃತದ್ರವದ ರೂಪನ್ನು ತಾಳಿದಂತೆಯೂ, ಹಿಮಾಲಯವು ಜಲಾಕಾರವಾಗಿ ಪರಿಣಮಿಸಿರುವಂತೆಯೂ ಇರುವ ಸ್ವಚ್ಛವಾದ ಶೋಭೆಯಿಂದ ಕೂಡಿಕೊಂಡಿರುವ, ಮೂರುಲೋಕದ ಭಾಗ್ಯದೇವತೆಯ ರನ್ನಗನ್ನಡಿಯಂತಿರುವ ಒಂದು ತಾವರೆಗೊಳವು ಬಹಳ ಮನೋಹರವಾಗಿತ್ತು. ವ|| ಅದಲ್ಲದೆ ೧೭. ಇದು ಭೂದೇವಿಯ ಚಂದ್ರಕಾಂತ ಶಿಲಾಮಯವಾದ ನೆಲಮಾಳಿಗೆಯಂತಿದೆ. ಉಕ್ಕುತ್ತಿರುವ ಸಮುದ್ರಗಳು ಪಾತಾಳಲೋಕದಿಂದ ಭೂಮಿಯ ಮೇಲಕ್ಕೆ ಏಳುವ ದೊಡ್ಡ ಜಲಮಾರ್ಗದಂತಿದೆ. ವಿಸ್ತಾರವಾದ ಆಕಾಶವು ಜಲರೂಪದಿಂದ ಕೆಳಗಿಳಿದು ಬಂದಂತಿದೆ. ಮೂರುಲೋಕದ ಪುಣ್ಯಸಮೂಹವು ಜಲಮಯವಾಗಿ ಪರಿಣಮಿಸಿದಂತಿದೆ ಎಂದು ಹೇಳಬೇಕಲ್ಲದೆ ಬೇರೆ ರೀತಿಯಲ್ಲಿ ಹೇಳುವಂತೆಯೇ ಇಲ್ಲ. ವ|| ಮತ್ತು ಅದು ಸಂಪೂರ್ಣನಾಗಿ ಜಲಭರಿತವಾಗಿದ್ದರೂ ತನ್ನ ನಿರ್ಮಲತೆಯಿಂದ ನೀರೇ ಇಲ್ಲವೇನೊ! ಎಂಬಂತೆ ಕಾಣುತ್ತಿತ್ತು. ೧೮. ಮಂದಮಾರುತದ ಚಲನೆಯಿಂದ ಹೂವಿನ ಪುಡಿಗಳಿಂದ ಮಿಶ್ರಿತವಾಗಿ ಹರಡುತ್ತಿರುವ ಸಣ್ಣ ಸಣ್ಣ ತೆರೆಗಳಿಂದ ಕೂಡಿರುವ ಈ ಸರೋವರವು ಅನೇಕ ಕಾಮನಬಿಲ್ಲುಗಳಿಂದ ಕೂಡಿಕೊಂಡಿರುವ ಆಕಾಶದಂತೆ ವಿರಾಜಿಸುತ್ತಿತ್ತು. ೧೯. ಆ ತಿಳಿಗೊಳದಲ್ಲಿ ಕಾಡು, ಬೆಟ್ಟ, ಗ್ರಹ, ನಕ್ಷತ್ರಗಳಿಂದ ಕೂಡಿರುವ ಮೂರುಲೋಕಗಳೂ ಪ್ರತಿಬಿಂಬರೂಪದಿಂದ ಕಾಣುತ್ತಿದ್ದುವು. ಇದರಿಂದ ಅದು ವಿಶ್ವಂಭರನೆನಿಸಿರುವ ಶ್ರೀಮನ್ನಾರಾಯಣನ ಆಕಾರವನ್ನು ಧರಿಸಿರುವಂತೆ ಶೋಭಿಸುತ್ತಿತ್ತು. ೨೦. ಅದರ ಸುತ್ತಲೂ ದಡದಲ್ಲಿ ಹೊಂಗೆಮರಗಳು ಬೆಳೆದಿದ್ದುವು. ಅವು ಸರೋವರದ ಮಡುವಿನಲ್ಲಿ ಪ್ರತಿಬಿಂಬಿಸುತ್ತಿದ್ದುವು. ಇದರಿಂದ ಸರೋವರದೊಳಗೆ ಕತ್ತಲೆಯು ಹರಡಿದಂತಿತ್ತು. ಹಾಗೆಯೆ ಕನ್ನೆ ದಿಲೆಗಳ ಗುಂಪು ಕಪ್ಪು ಛಾಯೆಯಿಂದ ಕತ್ತಲೆಯನ್ನುಂಟುಮಾಡುತ್ತಿದ್ದುವು. ಇದರಿಂದ ತಾವರೆಪೊದೆಗಳಲ್ಲಿದ್ದ ಹಲವಾರು ಚಕ್ರವಾಕದಂಪತಿಗಳು ಇರುಳಾಯಿತೆಂಬ ಭ್ರಾಂತಿಯಿಂದ ಪರಸ್ಪರ ಅಗಲಿಹೋಗುತ್ತಿದ್ದುವು.

೨೧. ಆ ಸರೋವರವು ಒಂದು ಕಡೆ ವರುಣನ ವಾಹನವಾದ ಹಂಸಪಕ್ಷಿಯ ಕೊಕ್ಕಿನಿಂದ ಸೀಳಲ್ಪಟ್ಟ ಕಮಲಗಳುಳ್ಳದ್ದಾಗಿಯೂ, ಮತ್ತೊಂದು ಕಡೆ ದಿಗ್ಗಜಗಳಿಂದ ಛಿದ್ರಛಿದ್ರ ಮಾಡಲ್ಪಟ್ಟ ಕನ್ನೆ ದಿಲೆಗಳುಳ್ಳದ್ದಾಗಿಯೂ, ಮತ್ತೊಂದು ಕಡೆ ಪರಮೇಶ್ವರನ ವಾಹನವಾದ

ವ|| ಅಂತುಮಲ್ಲದೆಯುಂ

ವಿರಹಿಗಳಂತೆ ಮೃಣಾಳೋ
ತ್ಕರ ವಲಯಾಂಕಿತವರೇಣ್ಯದಂತೆ ವಿಜೃಂಭೋ
ದ್ಧುರ ಪುಂಡರೀಕ ಸಂಕುಳ
ಮುರಗಾನ್ವಯದಂತನಂತಪದ್ಮೋಪೇತಂ                      ೨೨

ದಿವಿಜರಗೇಂದ್ರದಿಂ ಕಡೆದ ಪಾಲ್ಗಡಲಂತಿರೆ ನೀಲಕಂಠಪೀ
ತ ವಿಷಮನಂಗಕೇತನದವೊಲ್ ಮಕರಾಂಕಿತಮುರ್ವರೇಶ್ವರಾಂ
ಘ್ರಿವೊಲನಿಮೇಷಕೂರ್ಮಲಲಿತಂ ಮಲಯಾದ್ರಿನಿಕುಂಜದೇಶದಂ
ತೆವೊಲತಿಸೌರಭಾಕಲಿತ ಚಂದನಶೀತವನಂ ಸರೋವರಂ        ೨೩

ಆವುವುೞದೆಡೆಗಳೆಂದು ಸ
ರೋವರಮಂ ನೋಡುತಿರ್ಪ ಬಗೆಯಿಂ ಕೈಲಾ
ಸಾವಾಸಮಂ ಬಿಡಂ ಗೌ
ರೀವಲ್ಲಭನೆಂದೊಡಾರಿದಂ ನೆ ಪೊಗೞರ್                         ೨೪

ಅಳವಱಯದೆ ತುರುಗಮುಖ
ರ್ಕಳ ಬೞವೞಯನೆ ತಗಳ್ದು ಬಂದುದುಮೀಗಳ್
ಫಳಮಾದತ್ತೊಂದಳೀ
ಕೊಳನಂ ಕಂಡುದಳೆನುತೆ ಮತ್ತಂ ಭೂಪಂ                       ೨೫

ವ|| ಆಗಳುಮಾವಲ್ಲಭಪದಪದ್ಮಮುದ್ರಾಂಕಿತಮುಂ ದಿವಿಜರಾಜ ಗಜಗಂಡಸ್ಥಳಗಳಿತ ಮದಜಲಸಿಕ್ತಮುಂ ಭಗವತೀಸಿಂಹಾವತರಣ ಮಾರ್ಗಮುಮಪ್ಪ ದಕ್ಷಿಣತೀರದ ಕುಸುಮಲತಾ ಮಂಟಪದ ಮುಂದೆ ತುರಂಗದಿಂದವನಿತಳಕ್ಕವತರಿಸಿ ಪಲ್ಲಣಮಂ ಬಿಟ್ಟು ತದನಂತರದೊಳ್

ವೃಷಭನಿಂದ ಇರಿದುಹಾಕಿರುವ ದಡಗಳುಳ್ಳದ್ದಾಗಿಯೂ, ಬೇರೊಂದು ಕಡೆ ಯಮನ ವಾಹನವಾದ ಕೋಣನಿಂದ ಚೆಲ್ಲಾಪಿಲ್ಲಿ ಮಾಡಲ್ಪಟ್ಟಿರುವ ನೊರೆಗಳ ಗುಂಪುಳ್ಳದ್ದಾಗಿಯೂ ಇತ್ತು. ವ|| ಅದಲ್ಲದೆ ೨೨. ಆ ಸರೋವರವು ವಿರಹಿಗಳಂತೆ “ಮೃಣಾಳೋತ್ಕರ ವಲಯಾಂಕಿತ” (೧. ತಾವರೆದಂಟುಗಳ ಗುಂಪಿನಿಂದ ಕೂಡಿಕೊಂಡಿರುವುದು, ೨. ಶೈತ್ಯೋಪಚಾರಕ್ಕಾಗಿ ತಾವರೆದಂಟುಗಳಿಂದ ಮಾಡಿದ ಬಳೆಗಳುಳ್ಳದ್ದು)ವಾಗಿದ್ದಿತು. ಕಾಡಿನಂತೆ “ವಿಜೃಂಭೋದ್ಧುರ ಪುಂಡರೀಕರಸಂಕುಳ” (೧. ಅರಳುತ್ತಿರುವ ಶ್ರೇಷ್ಠವಾದ ಬಿಳಿಕಮಲಗಳ ಗುಂಪುಳ್ಳದ್ದು, ೨. ಆಕಳಿಸುತ್ತಿರುವ ನಿರಾತಂಕವಾಗಿರುವ ಹುಲಿಗಳುಳ್ಳದ್ದು)ವಾಗಿದ್ದಿತು. ಸರ್ಪಗಳ ವಂಶದಂತೆ “ಅನೇಕಪದ್ಮೋಪೇತ” (೧. ಅನೇಕ ಕಮಲಗಳುಳ್ಳದ್ದು, ೨. ಪದ್ಮ ಎಂಬ ನಾಗರುಳ್ಳದ್ದು)ವಾಗಿದ್ದಿತು. ೨೩. ಆ ಸರೋವರವು ದೇವತೆಗಳು ಮಂದರಪರ್ವತದಿಂದ ಕಡೆದ ಕ್ಷೀರಸಮುದ್ರದಂತೆ “ನೀಲಕಂಠಪೀತವಿಷ” (೧. ನವಿಲುಗಳಿಂದ ಕುಡಿಯಲ್ಪಟ್ಟ ನೀರುಳ್ಳದ್ದು, ೨. ಪರಮೇಶ್ವರನಿಂದ ಕುಡಿಯಲ್ಪಟ್ಟ ನಂಜುಳ್ಳದ್ದು)ವಾಗಿದ್ದಿತು. ಮನ್ಮಥನ ಬಾವುಟದಂತೆ “ಮಕರಾಂಕಿತ” (೧. ಮೊಸಳೆಗಳಿಂದ ಕೂಡಿರುವುದು, ೨. ಮೊಸಳೆಯ ಚಿಹ್ನೆಯುಳ್ಳದ್ದು)ವಾಗಿದ್ದಿತು. ರಾಜರ ಕಾಲುಗಳಂತೆ “ಅನಿಮೇಷ ಕೂರ್ಮಲಲಿತ”. (೧. ಮೀನು ಮತ್ತು ಆಮೆಗಳಿಂದ ಸುಂದರವಾದುದು, ೨. ಮತ್ಸ ರೇಖೆ, ಕೂರ್ಮರೇಖೆಗಳಿಂದ ಶೋಭಿಸುತ್ತಿರುವುದು)ವಾಗಿದ್ದಿತು. ಮಲಯಪರ್ವತದ ತೋಪಿನಂತೆ “ಅತಿಶೌರಭಾಕಲಿತ ಚಂದನ ಶೀತವನ” (೧. ಬಹಳ ಸುವಾಸನೆಯುಳ್ಳ ಗಂಧದಮರಗಳಂತೆ ತಂಪಾದ ನೀರುಳ್ಳದ್ದು, ೨. ಬಹಳ ಸುವಾಸನೆಯಿಂದ ಗಂಧದಮರಗಳಿಂದ ಕೂಡಿದ ತಂಪಾದ ಕಾಡುಳ್ಳದ್ದು) ವೆನಿಸಿ ಶೋಭಿಸುತ್ತಿತ್ತು. ೨೪. ಈ ಸರೋವರವನ್ನು ಬಿಟ್ಟರೆ ಮತ್ತಾವ ಸುಂದರವಾದ ಪ್ರೇಕ್ಷಣೀಯ ಸ್ಥಳಗಳಿವೆ? ಎಂದು ಪರಮೇಶ್ವರನು ಇದನ್ನು ನೋಡಿಕೊಂಡಿರಬೇಕೆಂಬ ಉದ್ದೇಶದಿಂದಲೇ ಕೈಲಾಸವಾಸವನ್ನು ಬಿಡುವುದಿಲ್ಲ ಎಂದುಮೇಲೆ ಇದನ್ನು ಯಾರು ತಾನೆ ಹೆಚ್ಚಾಗಿ ವರ್ಣಿಸದೆ ಇರುತ್ತಾರೆ? ೨೫. ಆಗ ಚಂದ್ರಾಪೀಡನು ನಾನು ನನ್ನ ಶಕ್ತಿಯನ್ನೇ ತಿಳಿದುಕೊಳ್ಳದೆ ಆ ಕಿನ್ನರರ ಬೆನ್ನುಹತ್ತಿ ಬಂದುದು ಈಗ ಈ ಸರೋವರವನ್ನು ಕಂಡುದರಿಂದ ಒಂದು ರೀತಿಯಲ್ಲಿ ಸಾರ್ಥಕವೇ ಆಯಿತು ಎಂದು ಆಲೋಚಿಸುತ್ತಿದ್ದನು. ವ|| ಆಗ ಪರಮೇಶ್ವರನ ಪಾದಕಮಲಗಳ ಗುರುತಿನಿಂದ ಕೂಡಿಕೊಂಡಿರುವ ದೇವೇಂದ್ರನ ವಾಹನವಾದ ಐರಾವತದ ಕೆನ್ನೆಗಳಿಂದ ಸುರಿಯುತ್ತಿರುವ, ಮದೋದಕದಿಂದ ನೆನಸಲ್ಪಟ್ಟಿರುವ ದುರ್ಗಾದೇವಿಯ ಸಿಂಹದ ನೀರಿಗಿಳಿಯುವ ದಾರಿಯಾದ ದಕ್ಷಿಣತೀರದ ಪುಷ್ಪಭರಿತವಾದ ಲತಾಮಂಟಪದ ಮುಂದೆ ಕುದುರೆಯಿಂದ