ಬೀಗನ ಮನಿಗಿ ಬೀಗ ಹೋದನೋ
ಅಕ್ಕನ ಮಾತಾಡಿಸಿ ಬರಬೇಕಂತ |

ತುಂಟ ತುಂಟರಿಗೆ ಗಂಟುಬಿದ್ದರ
ಗರದಿ ಆಗತದ ಗಮ್ಮತಾ || ಪಲ್ಲ ||

ಅಕ್ಕನ ಗಂಡ ಭಾಳ ಜೀನ ಇದ್ದನೋ
ಅವನಿಗಿಂತ ಹೇಣತಿ ನಿಗಳಾ |

ಒಪ್ಪತ್ತ ಉಂಡವರು ಉಪ್ಪಾಸ ಮಾಡತಿದ್ರು
ಎರಡ್ಹೊತ್ತ ಉಣ್ತಿದ್ದಿಲ್ಲ ಕೂಳಾ ||

ಒಂದಿನ ಅಂತಾನ ಗಂಡ ಹೇಣ್ತಿಗೆ
ನನ್ನ ಮಾತ ಕೇಳ ಸತಿಯಳ |

ಹೋಳಿಗಿ ಉಣ್ಣೊಹಾಂಗ ಆಗೈತಿ ಮನಸಾ
ಹುಕೀ ಬಂದು ಜೀವದಾಗ ಭಾಳ ||

ಗಂಡ ಹೇಣ್ತಿದು ಆಯ್ತೊಂದು ಮನಸಾ
ಯಾಕಾಗವೊಲ್ಲದಂದಳು ಪುರುಷಾ |

ಇಂದ ಬ್ಯಾಡ ನಾಳೀನ ದಿವಸ ನಾವು
ಮಾಡಿಕೊಂಡ ತಿನ್ನೋಣು ಅನ್ನರಸಾ ||

ಮರುದಿನ ಮುಂಜಾನೆದ್ದು ಗಳಗ್ಯಾಗ ಕೈಹಾಕಿ
ಗೋದಿ ತಗದಾಳೊಂದು ಅದ್ದನ |

ಅದ್ದನ ಹೂರಣ್ಹಾಕಿ ಹೋಳಿಗಿ ಮಾಡಿ
ಮ್ಯಾಲ ಅಟ್ಟಾಳೊ ಅಕ್ಕಿ ಅನ್ನ ||

ಉಪ್ಪು ಎಣ್ಣಿ ಬೆಲ್ಲ ಉದ್ದರಿ ಆಗತದ
ತುಪ್ಪ ಅಯ್ತಿ ನಮ್ಮ ಮನೀದಿನ್ನ |

ಅಂಗಡಿಯವರದಿಷ್ಟು ಸಾಲ ಆಗತದ
ಕೊಟ್ಟಾಗ ತಗೋತಾರ ಅವರು ರಿಣ ||

ಜಳಕಂತ ಗಂಡ ಹಳ್ಳಕ ಹೋದರ
ಬೀಗ ಬಂದ ಸಾಧಿಸಿ ಅದೇ ದಿನ |

ಬೀಗನ ನೋಡಿ ಮಜುರಿ ಮಾಡಿದಾ
ಹಾದ್ಯಾಗಾಯ್ತೊ ಅವನ ದರ್ಶನ ||

||ಇಳುವು||

ಬೀಗ ತಿಳಿದ ತನ್ನ ಮನಸಿಗಿ
ದಾಡಿ ತಂದ ನಮ್ಮ ಹೋಳಗಿಗಿ ||
ಮುಂಚೆ ಓಡಿ ಬಂದ ಮನಿಗಿ
ಮುಚ್ಚಿದ ಮಾಡಿದ ಹೋಳಿಗಿ ||
ನಿಮ್ಮ ತಮ್ಮ ಬಂದ ನಮ್ಮೂರಿಗಿ
ಎಲ್ಲಿ ಕುಂತಿತ್ತು ಕಾಳಾಗಿ ||

||ಏರು||

ಅಯ್ಯೋ ಖೋಡಿ ಇದು ಯಾಕ ಬಂತಂತ
ತಲಿಕಟ್ಟಿ ಮಲಗ್ಯಾಳ ಬ್ಯಾನಿಯಂತ |

ತುಂಟ ತುಂಟರಿಗೆ ಗಂಟುಬಿದ್ದರ
ಗರದಿ ಆಗತದ ಗಮ್ಮತ|| ೧ ಚೌಕ ||

ಬೀಗನ ಮನೀಗಿ ಬೀಗ ಬಂದರ
ಕುಡಿಯಂತ ಕುಡಲಿಲ್ಲ ಮುಕ್ಕ ನೀರ |

ಅಕ್ಕ ಅನೂವಾಕಿ ತಲಿಕಟ್ಟಿ ಮನಗ್ತಾಳ
ಸಾಯುವ ಹಾಂಗ ಆಗಿ ಜೇರ ||

ಬೀಗನ ಮುಂದ ಬೀಗ ಹೇಳತಾನ
“ನೋಡೊ ಬೀಗ ನಮ್ಮ ತಾಪತರಾ

ಮೂರ್ದಿವಸಾಯ್ತು ಕೂಳ್ ನೀರ ಕಂಡಿಲ್ಲ
ದಿಕ್ಕಿಲ್ಲ ರೊಟ್ಟೀ ಮಾಡವರಾ” ||

ಹೂರಣ ಕಲ್ಲ ಹೊರಗ್ಯಾಕ ಇಟ್ಟದ
ಇದರದು ಏನು ಚಮತ್ಕಾರ |

ಮನೆಯೆಲ್ಲ ಹಿಡಿದದ ದುಂದಕಾರ ಕಮರಿಂದು
ಖಚಿತ ಮಾಡ್ಯಾರ ಹೋಳಗಿ ಇವರ ||

||ಇಳುವು||

ನನ್ನ ಕಳಿಸಿಕೊಟ್ಟು ತಿನ್ನುವ ಬಗಿ
ಇವರ ಮನಸಿನ ಬೇತ ಹೀಂಗಾಗಿ ||
“ಬೀಗಾ ಹೋಗೋ ನಿನ್ನ ಊರೀಗಿ
ಇಲ್ಲದಿದ್ದರ ಉಪವಾಸ ಮರುಗೀ” ||

||ಏರು||

“ಹೋಗೂದು ಹೋಗತೀನಿ ತಲಬ ಆಗೇದ
ಚುಟ್ಟ ತಂಬಾಕರೆ ಸೇದೋಣು ತಾ”|
ತುಂಟ ತುಂಟರಿಗೆ ಗಂಟುಬಿದ್ದರ
ಗರದಿ ಆಗತದ ಗಮ್ಮತ  || ೨ ಚೌಕ ||

“ ಮನೀ ತಂಬಾಕೆಲ್ಲ ಮೊನ್ನೇ ಮಾರಿದೆವು
ತಂಬಾಕಿಲ್ಲ ಈಗಿನ ಹೊತ್ತ |

ಅಂಗಡಿಗ್ಹೋಗಿ ಉದ್ರಿ ತಂದೇನಂದ್ರ
ಅಂಗಡೆವರಿಲ್ಲ ನಮ್ಮ ಪತ್ತಾ ||

ಎಮ್ಮಿ ಈದ  ಮ್ಯಾಲೆ ಒಮ್ಮೇ ಬಂದೀದಿ ಖರೆ
ನಮ್ಮ ಉಪಾಯವಿಲ್ಲದ ಮಾತಾ |

ಮಜ್ಜೀಗಿ ಆಗ್ಯಾವ ನುಚ್ಚ ಇದ್ದರ
ಉಣಿಸುದಿತ್ತು ಹೀಂಗ ನಮ್ಮ ಬೇತ” ||

ಇಷ್ಟು ಕೇಳಿ ಬೀಗಿ ಹೊಂಟು ಹೋಗ್ಯಾನೊ
“ಏಳೇಳು ಪೀಡಾ ಹೋಯಿತಂತ |

ಹಸಿವಾದ ಕೈಲೆ ಬಿಸಿ ಅಡಿಗಿ ತಾರ
ಲಗು ನೀಡಬಾರ ಪಂಚಾಮೃತ” ||

||ಇಳುವು||

ಗಂಡಂತಾನ “ ಹೀಂಗಲ್ಲ ಠೀಕ
ಇಬ್ಬರು ಕಣ್ಣ ಕಟ್ಟಿ ಉಣಬೇಕ ||
ನೀ ಬಾಯಾಗ ತುತ್ತ ಮಾಡಿ ಹಾಕ
ನಿಮಗುಣಿಸ್ತೀನಿ ನುಂಗ ಸಾಕ್ಸಾಕ” ||
ತೋಡಿಮಾಡಿ ಕುಂತಾರ ಉಣಲಾಕ
ಕಣ್ ಕಟಿಗೊಂಡು ಆ ಕ್ಷಣಕ ||

||ಏರು||

ಹೊಳ್ಳಿ ಬೀಗ ಬಂದು ಮಾಳೀಗಿ ಏರಿದ್ದ
ಹೋಗಿದ್ದಿಲ್ಲ ಬೆಂಡಲ ಮತ್ತ |
ತುಂಟ ತುಂಟರಿಗಿ ಗಂಟು ಬಿದ್ದರ
ಗರದಿ ಆಗತದ ಗಮ್ಮತ|| ೩ ಚೌಕ ||

ಮೊದಲಿಗೆ ತುತ್ತ ಮಾಡಿ ಹೇಣತಿ
ಒಯ್ದಾಳ ಗಂಡನ ಬಾಯೀಕಡಿ |

ಹಗರ ಇಳಿದು ಬಂದು ಆ ತುತ್ತ ತಗೊಂಡಾನ
ಮಾಳಿಗಿ ಬೀಗ ಇವನ ಕಡಿ ||

ಹೇಣತಿ ಅಂತಾಳ ಮನದಾಗ “ನನಗಂಡ
ಹಸಿದು ಭಾಳ ನುಂಗತೈತಿ ಖೋಡಿ |

ಯಾವಾಗನ ತುತ್ತು ನಾ ಅವಗ ಹಾಕ್ತೀನಿ
ನನಗೊಂದು ತುತ್ತ ಹಾಕಲಿಲ್ಲ ಮಾಡಿ” ||

ಗಂಡ ತಿಳಿದಾನ ತನ್ನ ಮನಸೀಗಿ
“ ಎಲ್ಲಾ ತಾನೇ ತಿಂತಾಳ ರಂಡಿ |”

ಅಡ್ಡಬಾಯಿ ಹಾಕಿ ಎಡ್ಡು ಕಡಿ ಹೊಡೆದನ
ಗಡ್ಡ ಮೀಸಿ ಎಲ್ಲಾ ಸೋರ‍್ಯಾಡಿ ||

||ಇಳುವು||

ಉಂಡು ತಿಂದು ಬಿಟ್ಟಾನ ಢರಿ
ಏನೋ ಗಾತಾಯ್ತು ಲಗು ಕಣ್ತೆರಿ ||
ಬೀಗಂತಾನ ಗುಲಾಮ ಭಾರಿ
ಹೋಗಿ ಬರ‍್ತೀನು ಕುಶಾಲ ಇರ್ರೀ ||

||ಏರು||

ಸಂಕದ ಊರಾಗ ಬಲಭೀಮನ ದಯದಿಂದ
ಹೋಳಿಗೆ ಉಂಡಾರ ನಗನಗತ |
ತುಂಟ ತುಂಟರಿಗಿ ಗಂಟು ಬಿದ್ದರ
ಗರದಿ ಆಗತದ ಗಮ್ಮತ || ೪ ಚೌಕ ||

ರಚನೆ : ಸಂಕದ ಕವಿ
ಕೃತಿ : ಜೀವನ ಸಂಗೀv