ಅಣ್ಣ ತಮ್ಮರಿಗೆಲ್ಲಾ ಚೆನ್ನಾಗಿ ಹೇಳುವೆನು
ಸುಮ್ಮನ ಕುಂತ ನೀವು ಕೇಳಬೇಕ
ಸದ್ದೆ ಬಂದೇನ ನಿಮಗೊಂದ ತಿಳಿಸುದಕ
ಇದನ್ನ ನೆನಪೆಟ್ಟು ನಡಿಬೇಕ್ರಿ ಕಡಿತನಕ ||
ಹುಂಡೆ ಗಳಸೊ ಆಸೆಕಾಗಿ ಹೆಂಡರ ಕೈಯ್ಯಾಗ ಹಿರೇತನಾ
ಎಂದೆಂದು ಕೊಡಬ್ಯಾಡ್ರಿ ಕಡಿತನಕ ||
ಪ್ರೀತಿ ಮಾತ ಹೇಳಿ ಕೆಡವತಾರ ಮಾಯದ ಮಡಕ ||

ಗಂಡಾಹೇಣ್ತಿ ಇದ್ದಾರಿಬ್ರು ಮೂರಬಟ್ಟಿ ಬಡತನ ಬಾಳ್ವೆ
ತಕ್ಕ ಮಟ್ಟಿಗಿ ಹೆಚ್ಚಾಗಿಲ್ಲ ಖರ್ಚ ಮಾಡೋದಕ
ಗಂಡ ಹವಣಸತಿದ್ದ ಹಾಲೂ ಹೈನಾ ಉಣ್ಣುದಕ
ಎಮ್ಮಿ ತಂದಾನಂತಾನ ರೂಪಾಯಿಲ್ಲ ಹಂತೇಕ ||
ಸಾಲ ಆದ್ರು ಸೆಂಟ ಹೋತು ಹೊಂಟ ಹ್ವಾದ ಸಾವಕಾರ ಮನಿಗೆ
ಮುನ್ನೂರ ರೂಪಾಯಿ ಬೇಕ್ರಿ ನನಗ ಎಮ್ಮಿತರಾಕ
ಅಸಲು ಬಡ್ಡಿತಂದು ಮುಟ್ಟಸತೇನು ಸುಗ್ಗಿಕಾಲಕ್ಕ ||

ಸಾಹುಕಾರ ಹಂತೆ ಸಾಲಾ ತಗದ ಲಗೂಮಾಡಿ ಓಡಿಬಂದ
ಹುರಿಪಿಲಿಂದ ಹುಡಕಿ ತಂದ ಎಮ್ಮಿ ಮಣಕ
ಹೊಸಾ ಹಗ್ಗಾ ಹಂಗಡಾ ಮಾಡಿದಾನ ಮೂರ‍್ನಾಲ್ಕ
ಬ್ಯಾರೆ ಗೂಟಾ ನಿಲ್ಲಿಸಿದಾನ ಕರಾ ಕಟ್ಟುದಕ ||
ಹೇಣತಿಗಿ ಹೇಳತಾನ ಗಂಡ ಹೊಲಕ್ಕ ಹೋಗತೇನ ಉಂಡ
ಎಮ್ಮಿಗಿ ಮನಗಂಡ ಹುಲ್ಲ ತರೋದಕ
ನಾನು ಬರೋದರೊಳಗ ಎಮ್ಮಿನೀನು ಹಿಂಡಿ ಇಡಬೇಕ ||

ಗಂಡಗ ಅಂತಾಳ ಹೇಣ್ತಿ ಲಗೂ ಮನಗಿ ಯಾಕ ಬರತಿ
ಹೊಲದಾಗ ಮಂಗ್ಯಾ ಮುಕರತಾವ ಮೆಣಸಿನ ಗಿಡಕ
ಇಷ್ಟ ಹೇಳೋದರಾಗ ಗಂಡ ಹ್ವಾದ ಹೊಲಕ
ಎಮ್ಮಿ ಹಿಂಡಕೊಂಡ ಕುಂತಾಳ ಸವನೆಲಕ ||
ಕುಬ್ಬಹಾಲ ಕುಡದಾಳ ಉಟ್ರಾಸೈಲ ಮಾಡ್ಯಾಳ
ಶಸ್ತಾಗಿ ಕಚ್ಚಿ ಹಾಕ್ಯಾಳ ಆ ಕ್ಷಣಕ
ಎದ್ದ ಊಟಾ ಬೈಟ ಹೊಡಿತಾಳ ಹಾಲ ಕಪ್ಪಸೋದಕ ||

ಒಂದನೇ ಚಾಲ

ಹೊಲದಿಂದ ಗಂಡ ಬಂದ ಹೊಂಟ
ಹುಲ್ಲಹೊರಿ ದಂಟ ತಂದ ವಗದಾನು |
ಕಾಲಿಗಿ ನೀರ ಹೇಣ್ತಿಗಿ ಕೇಳ್ಯಾನು ||

ತಂದ ಕೊಟ್ಟಾಳಾಗ ಬಿಸಿನೀರ
ತೊಳದ ಅವಸರ ಒಳಗ ಬಂದಾನು |
ಹಂಬಲಿಸಿ ಹಾಲ ಬೇಡ್ಯಾನು ||

ಎರಡನೇ ಚಾಲ

ಗಂಡಗ ಅಂತಾಳ ಆವಾಗ
ಏನ ಹುಚ್ಚ ಹಿಡದಿತ್ತೊ ನಿನಗ |

ಎಂಥಾ ಎಮ್ಮಿ ತಂದೀದಿ ಮನಿಯಾಗ
ಹನಿಹಾಲ ಇಲ್ಲೊ ಮಲಿಯಾಗ ||

||ಏರ||

ಸಿಟ್ಟಿಗೆದ್ದ ಹೊಂಟ ಗಂಡ ಇನ್ನ ಎಂಟದಿನಾ ನೋಡಿ
ಪ್ಯಾಟಿಗಿ ಓದ ಹಚ್ಚತೇನ ಮಾರಾಟಕ |
ತಿನ್ನ ಉಣ್ನೋದಿಲ್ಲ ನನ್ನ ದೈವಾನಕ ||
ಹುಂಡೆ ಗಳಸೊ ಆಸೆಕಾಗಿ ಹೆಂಡರ ಕೈಯ್ಯಾಗ ಹರೇತನಾ
ಎಂದೆಂದು ಕೊಡಬ್ಯಾಡ್ರಿ ಕಡಿತನಕ |
ಪ್ರೀತಿ ಮಾತ ಹೇಳಿ ಕೆಡವತಾರ ಮಾಯದ ಮಡಕ |||| ೧ ||

ಗಂಡನ ಮನಸ ಒಡಿಸ್ಯಾಳ ನಾರಿ ಎಮ್ಮಿಯಾಕ ಮಾರತೇರಿ
ಇಟಗೊಂಡ ನೋಡೋಣ ಅಂದ್ಲ ಇನ್ನೊಂದ ಸೂಲಾ
ಹಿಂಗ ಕಟ್ಟ ಮಾಡಾಕಿಲ್ಲಾ ಹಗಲೆಲ್ಲಾ
ಲಕ್ಷಣಸುಳಿ ಚೊಲೋ ಎತಿ ಇಂಥಾ ಎಮ್ಮಿ ಸಿಗಾಕಿಲ್ಲಾ ||
ಪಾಲಿಗಿ ಬಂದದ್ದ ಪಂಚಾಮೃತ ಮನ್ಯಾಗಿರಲಿ ಮೇಕೊಂತ
ಮತ್ತೊಂದ ಎಮ್ಮಿ ತರೋಣ ಸುಗ್ಗಿ ಆದಮ್ಯಾಲಾ
ಹಿಂಗ ಗಂಟಬಿದ್ದ ಹೇಳತಾಳ ಹಗಲೆಲ್ಲಾ ||

ದಿನಂಪ್ರತಿ ಹಾಲ ಮಸರ ಹೊಡದ ಹೊಡದ ಆದ್ಲ ತಯ್ಯಾರ
ಕುಸ್ತಿ ಹುಡಗನಂಗ ಬಣ್ಣಬಂತ ಮಾರಿಮ್ಯಾಲ
ಈಕಿ ಸೊಕ್ಕನೋಡಿ ನಕ್ಕಾರು ಊರ ಜನರೆಲ್ಲಾ
ಈ ಮಸಲತ್ತ ಗಂಡಗ ಏನೂ ತಿಳಿಯಾನಿಲ್ಲಾ ||
ನಮ್ಮ ನಸಿಬ ಬಾಳ ಕೆಟ್ಟ ಎಮ್ಮಿ ತಂದಿ ಗಂಟಕೊಟ್ಟ
ಒಂದಿನಾ ಹೈನಾ ನೀನು ಉಣಲಿಲ್ಲಾ
ನಿನ್ನ ಸಲವಾಗಿ ಮರಗತೇನ ಹಗಲೆಲ್ಲಾ ||

ಬೋಧ ಕೇಳೋದಕ್ಕ ಗಂಡ ಹ್ವಾದ ಸಾಧೂರ ಮಠಕ ಉಂಡ
ಭಕ್ತಿಲಿಂದ ಬಿದ್ದ ಸಾಧೂರ ಪಾದದ ಮ್ಯಾಲಾ
ಬಿಚ್ಚಿ ಹೇಳತಾನ ಮನಿಯಾಗ ನಡದದ್ದೆಲ್ಲಾ
ನನಗ ಇಲ್ಲಿ ತನಕಾ ದ್ಯಾಸಕ್ಕಿದು ಬರಲಿಲ್ಲಾ ||
ಶೋಧ ಮಾಡಿ ಸಾಧು ಆಗ ಭೂತಗಾಳಿ ಮಂತ್ರಊದಿ
ಚೀಟಿವಂದ ಬರದ್ದಾನ ತತ್ಕಾಲಾ
ನೆಲವಿಗೆ ಓದ ಕಟ್ಟಂತ ಹೇಳ್ಯಾನ ಅಕಲಾ ||

ನೆಲವಿಗೆ ಚೀಟಿ ಕಟ್ಟ್ಯಾನ ಓದ ಹೊಲಕ ಹ್ವಾದ ಮುಂಜಾನೆದ್ದ
ಈಕಿ ಎಮ್ಮಿ ಹಿಂಡಿ ಓದ ಇಟ್ಲ ನೆಲವಿನ ಮ್ಯಾಲಾ
ಅಡಗಿ ಅಂಬಲಿ ಕಸಾ ಮುಸರಿ ದಗದ ಮೊದಲಾ
ಎಲ್ಲಾ ಹ್ವಾರೆ ಮುಗಿಸಿದಾಳ ಸುಸ್ತ ಮಾಡಿಲ್ಲಾ ||
ತಗೊಂಡಾಳ ಸಕ್ರಿ ಚೀಟ ಕ್ವಾಣಿ ಹೊಕ್ಕಾಳ ಲಗೂಟ
ಕೈ ಓದ ಇಟ್ಲ ಹಾಲಿನ ಸ್ವಾರಿಮ್ಯಾಲಾ
ಮಂತ್ರದ ಶಕ್ತಿ ಗಟ್ಟಿಮುಟ್ಟಿ ಹಿಡಿದೀತಾಗ ಬಿಡಲಿಲ್ಲ ||

ಒಂದನೇ ಚಾಲ

ಮನದಲ್ಲಿ ಮಾಡ್ಯಾಳ ಗಡಿಬಿಡಿ ನೋಡ್ಯಾಳ ಜಗ್ಗ್ಯಾಡಿ
ಹಿಡದೀತ ರಿಕ್ಕ ಮುಕ್ಕs
ಏನ ಬಂತ ನನ್ನ ಹಣಿಬಾರಕ ||

ಹಿಂಗ್ಯಾಕ ಹಿಡದೀತ ನನಗ ಇದ ಏನ ಸೋಜಿಗ
ಹಾಲಮಸರ ಮಜ್ಜಿಗಿ ಒಯ್ಯಾಕ |
ಆಕಿ ಗೆಳತಿ ಬಂದಾಳ ಆ ಕ್ಷಣಕ ||
ಮುಂದಕೂತು ಬಾರ ಗೆಳತೆವ್ವ ಹಿಡದsತಿ ಈ ನೆಲವ
ನಿಲಬ್ಯಾಡ ಸುಮ್ಮsಕ
ನೆರವಾಗ ನನ್ನ ಬಿಡಸೋದಕ ||

ಎರಡನೇ ಚಾಲ
ಮತ್ತಷ್ಟು ಕೊಡತೇನಿ ಮಸರ ಮಜ್ಜಿಗಿ
ಹಾಲ ತುಪ್ಪ ಮತ್ತ ತಿತಿಮತಿಗಿ ||

ಹೋಗಿ ನಿಂತಾಳೊ ಆಕಿ ಎದುರೀಗಿ
ಎರಡು ಕೈಯ್ಯ ಹಚ್ಚ್ಯಾಳೊ ನೆಲವೀಗಿ ||

ಹತ್ತಂಡಿ ಆತ ಕೈಯ್ಯ ನೆಲವೀಗಿ
ಸಿಕ್ಕೊಂಡಿನಿ ಅಂತಾಳ ಹೈನಕಾಗಿ ||

||ಏರ||

ಹಿಂದುಗಡೆ ಬಂದಾಕಿ ದಂಗಬಡದ ನಿಂತಾಳ
ನಾನು ಹೊಲಕ ಹೋಗೋದಿತ್ತ ಹಕ್ಕಲಾ ಬಿತ್ತೋದಕ
ಗಂಡ ಮುಂಜಾನೆದ್ದು ಮುಂದ ಹ್ವಾದ ಗಳೆ ಹೂಡೋದಕ
ಅಂವಗ ಊಟಾ ಒಯ್ಯಬೇಕ ನಾನು ಮಧ್ಯಾಹ್ನಕ ||
ಹುಂಡೆ ಗಳಸೊ ಆಸೆಕಾಗಿ ಹೆಂಡರ ಕೈಯ್ಯಾಗ ಹಿರೇತನಾ
ಎಂದೆಂದು ಕೊಡಬ್ಯಾಡ್ರಿ ಕಡಿತನಕ |
ಪ್ರೀತಿ ಮಾತ ಹೇಳಿ ಕೆಡವತಾರ ಮಾಯದ ಮಡಕ |||| ೨ ||

ಜಗ್ಗ್ಯಾಡಿ ಕೈಸೋತ ನಿಂತಾರಿಬ್ಬರೂ ಆತಗೋತ
ಚಿಂತಿ ಮಾಡತಿದ್ರ ಮನದಾಗ
ನಾವು ನಗ್ಗೀಡಾಗೋದು ಬಂತ ಸದ್ದೆ ಜನದಾಗ
ಅಷ್ಟರೊಳಗ ಐನಾರ ಬಂದ ಬಾಗಲದಾಗ ||
ಕಜ್ಜಾಯ ಭಿಕ್ಷಾ ನೀಡ್ರಿ ಈಗ ಯಾರದೇರಿ ಮನಿಯಾಗ
ಮಧ್ಯಾಹ್ನದ ಹೊತ್ತ ಹಸಿವಿ ಆಗೇದ ನನಗ
ಇಬ್ರೂ ಕದ್ದೀಲಿ ಕರದ ಹೇಳತಾರ ಆ ಜಂಗಮಗ ||

ಊರೆಲ್ಲ ತಿರಗಿದರ ಸೇರ ಜ್ವಾಳಾ ಸಿಗೋದಿಲ್ಲ
ಈ ಹಾಲಸ್ವಾರಿ ಇಳಿಸಿ ಕೊಡ ನಮಗ
ಜಳಕಾ ಮಾಡಿಸಿ ಹುಗ್ಗಿ ಮಾಡಿ ನೀಡತೇವ ನಿನಗ
ಜೋಳಿಗಿ ತುಂಬಾ ಜೋಳದ ಭಿಕ್ಷಾ ಹೋಗುವಾಗ ||
ಹುಗ್ಗಿ ಜೋಳದ ಆಸೆಕಾಗಿ ಜೋಳಗಿ ಬೆತ್ತಾ ಮೂಲ್ಯಾಗಿಟ್ಟ
ಅರಿವಿ ಕಳದ ಹೋಗಿ ಹೊಕ್ಕ ಕ್ವಾಣ್ಯಾಗ
ಎರಡು ಕೈಯ್ಯ ಹಾಕಿದಾನ ಹಾಲ ಸ್ವಾರಿ ಮ್ಯಾಲ ||

ಆ ಮಳ್ಳ ಅಯನಾರಗ ಇವರ ಮಳ್ಳತನಾ ತಿಳೀಲಿಲ್ಲ
ಒಳಗ ಯಾಕ ಬನ್ನಿ ಗಂಡಸರಿಲ್ಲದ ಮನಿಯಾಗ
ಎಂಥಾ ಬುದ್ಧಿ ಕೊಟ್ಟ್ಯೊ ಸ್ವಾಮಿ ಶಂಕರಾ ನನಗ
ಅಲ್ಲೆ ಜೋತ ಬಿದ್ದನಿಂತ ಅವರ ಮಗ್ಗಲದಾಗ ||
ಎಮ್ಮಿಕರಾ ಅಡ್ಡ್ಯಾಡತಿತ್ತ ಅರಿವಿ ತಿನ್ನೋದು ಕಲಿತಿತ್ತ
ಅಡಬಡಿಸುತ್ತ ಬಂತ ಅವರ ಕಾಲಾಗ
ಅದು ಸೀರಿ ಜಗ್ಗಿ ನೆಕ್ಕತಿತ್ತ ಅವರ ತೊಡಿಮ್ಯಾಲ ||

ಚಿಂತಿ ಇಲ್ಲೋ ಅಯ್ಯಾ ನಿನಗ ಹೊತ್ತ ಬಂದsತಿ ನಮಗ
ಭ್ರಾಂತಿ ಆಗೇತೇನೋ ನಿಂದ ನಮ್ಮಮ್ಯಾಗ
ಅತ್ತೆ ದೂರಸರಿ ಮೈಗೆ ಮೈ ಹತ್ತವಾಂಗ
ಹಿಂಗ ಬರೀ ಬತ್ಲೆ ನಿಂತ್ರು ಕತ್ತಲ ಮೂಲ್ಯಾಗ ||
ಅತ್ತ ಹೊಳ್ಳ ಇತ್ತ ಹೊಳ್ಳ ಅಷ್ಟರೊಳಗೆ ಗಂಡ ಬಂದ
ಏನ ಮಾಡಾತೀ ಅಂತ ಹೊಕ್ಕ ಕ್ವಾಣ್ಯಾಗ
ದಿಟ್ಟಿಸಿ ನೋಡ್ಯಾನ ಅತಿ ಸಿಟ್ಟಿನೊಳಗ ||

ಅತ್ತ ಜಗ್ಗ ಇತ್ತ ಜಗ್ಗ ಮೂರು ಮಂದಿ ಜಗ್ಗಿ ಜಗಿ
ತಬ್ಬಿಬ್ಬಾಗಿ ನಿಂತಿದಾರ ಅಡಿಗಿ ಕ್ವಾಣ್ಯಾಗ
ಗಂಡ ಹುಡಕತಿದ್ದ ಬಡಿಗಿ ಬಾರಕೋಲ ಅತಿಬೇಗ
ಕಟಿಗಿ ವಡ ವಳಿಕಿ ಎರಿತಿತ್ತ ಒಳಿಯೊಳಗ ||
ಹೊಳ್ಳಿ ನೋಡಿದಾಗ ಗಂಡಕೊಳ್ಳಿ ಕೈಯಾಗ ತಗೊಂಡ್ಹೋಗಿ
ಒಳಿತಾಗಿ ಎಳದ ಅವರ ಬೆನ್ನಮ್ಯಾಗ
ಅದು ಸಿಕ್ಕಾ ಹೊಡದಂಗಾತು ಎಂದು ಮಾಜದಂಗ

ಒಂದನೇ ಚಾಲ

ಬಡಗಿ ತಗೊಂಡ ಹಣದಾನ ಕುಬ್ಬ ಬಾತಿತವರ ದುಬ್ಬ
ಶಸರ ಉಳಿಲಿಲ್ಲಾ |
ಎಸರ‍್ಹಾತತಾರ ಮ್ಯಾಲ ಮ್ಯಾಲ ||
ಮೂರು ಮಂದಿ ಮಾಡ್ಯಾರ ಹಾಯ್ ಹಾಯ್ ಬಂದಿತವಗ ದಯಾ
ಚೀಟಿ ಬಿಚ್ಚಿ ಬಿಟ್ಟ ತಾತ್ಕಾಲಾ |
ಅಡ ಬಡಸಿ ಬಿದ್ದಾರವನ ಕಾಲಾ ||
ನಮ್ಮ ಕಡೆ ಆಗೇತಿ ತಪ್ಪ ಮಾಡರಿ ಮಾಪ
ನೆಂಪ ಉಳೀತ ಕಡಗಿನ ಕಾಲಾ ||
ಇಂಥಾ ಕೆಲಸ ಎಂದೂ ಮಾಡೋದಿಲ್ಲಾ ||

ಎರಡನೇ ಚಾಲ

ಹೋಗಂತ ಅಪ್ಪಣಿ ಕೊಟ್ಟಾನು ಸ್ವಾಮೀಗಿ
ಭಿಕ್ಷಕ್ಕ ಬರುದಿಲ್ಲರಿ ನಾನು ಈ ಊರಿಗಿ ||
ಕರದ ಹೇಳ್ಯಾವ ನೆರಮನಿ ಯಜಮಾನರಿಗಿ
ಬುದ್ಧಿ ಕಲಸರಿ ನಿಮ್ಮ ಹೆಂಗಸರಿಗಿ ||

||ಏರ||

ಬಂಟ ಗಂಡಸರಿಗೆ ಪಂಟ ಹೇಳಿ ಹೆಂಗಸರು
ಕೈಗಂಟ ಮಾಡತಾರ ಚೈನಿ ಹೊಡಿಯೋದಕ
ತಿಗಡೊಳ್ಳಿ ಮರಿಕಲ್ಲ ಮಾಡಿದ ಕವಿ ಠೀಕ
ಗುರು ಬಲಭೀಮದಾನ ಅವನ ಸಾಯಕ್ಕ ||
ಹುಂಡೆ ಗಳಸೊ ಆಸೆಕಾಗಿ ಹೆಂಡರ ಕೈಯ್ಯಾಗ ಹಿರೇತನಾ
ಎಂದೆಂದು ಕೊಡಬ್ಯಾಡ್ರಿ ಕಡಿತನಕ |
ಪ್ರೀತಿ ಮಾತ ಹೇಳಿ ಕೆಡವತಾರ ಮಾಯದ ಮಡಕ |||| ೩ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು