೧ ನೆಯ ಚೌಕ
ಸತಿಪತಿ ಕೂಡಿ ಜೋಡಿ | ಹಿತದಿಂದ ಮಲಗಿದಾಗ
ಗೊತ್ತಮಾಡಿ ಹೇಳ್ಗಂಡಾ ಹ್ಯಾಂಗ್ಮಾಡೂನ ?

ನಿನ್ಮುಂದ ಮಾತೊಂದು | ಬಿಚ್ಚಿ ಮುಚ್ಚಿ ಹೇಳ್ತೀನು
ಬಸರಿದ್ದೀನ್ಹೆಸರಿನ್ನ ಏನಿಡೂನ ? ||

ಗಂಡ ಹಿಗ್ಗಿ ನಕ್ಕ ನಗಿ | ಸುಳ್ಳ ತಗಿ ಗಾಳಿಮಾತ
ನನ್ಮುಂದ ಹೇಳಬ್ಯಾಡ ಇಂಥಾ ಹೊಯ್ಕ |

ಔ ಶಿವನೆ ಎಂಥಾ ಮಾತ | ತಿಂಗಳ ಮ್ಯಾಲ ಒಂದಿನ ಆಯ್ತ
ಮಂದೀ ಹಾಂಗ ಹೇಳಕ್ಕೆಲ್ಲ ನಾ ಸುಮಕ ||

ಕುರುಬರಂಥ ಅರಬರಂಡಿ | ಜರಬದಿಂದ ಬೇದ್ಹೇಳ್ತೀನು
ಅರಬೀ ಸಾಹಿತ ಮಾಡ ಕೂಸೀಗಿ ಮೆತ್ತಗ್ಹಾಸುದಕ ||

ಕೆಟ್ಟ ತೊಟ್ಲ ಕಟ್ಟಾಂವಲ್ಲ | ನಿತ್ತ ತೂಗು ಅಳುವಾಗ
ಬಿಟ್ಟ ಹೊರಗ ಹೋದರೊದ್ದು ಮುರದೇನು ಸೊಣಕ ||

ಖುಷಿಯಿಂದ ಕೂತ ಕೊಂಡು | ಹೆಣ್ತೀ ಮುಂದ ಹೇಳ್ತಾನ
ಮಕ್ಕಳ  ಮಾರಿ ಇದ್ದಿದ್ದಿಲ್ಲ ಇಂದಿನ ತನಕ |

ಇನ್ನ ಮಾತ್ರ ದೇವರು ಕೊಟ್ಟ | ಸಂಶಾಯಿಲ್ಲ ಎಳ್ಳಷ್ಟ
ನೆಡತನ ಮಾಡಬೇಕು ನಮ್ಮ ತಕ್ಕಾ ||

||ಇಳುವು||

ಹೆಣತ್ಹೇಳತಾಳ ಓಡಾಡಿ | ವರ ನೋಡಿ ಬಾರ ತಿರುಗಾಡಿ ||
ಮುಚ್ಚೆ ಹುಚ್ಚ ನಂಥವ ನೀ ಖೋಡಿ | ಕೋರಿ ಹರ್ಕರ ನೆಡತನ ಮಾಡಿಗೀಡಿ
ಅಳಿಯಾಗ ಹಾಕಬೇಕು ಖಡಿ ತೋಡಿ | ಸೀರಿ ಕುಬಸ ನಿನಗ ಧೋತ್ರ ಜೋಡಿ

||ಏರು||

ಯಾತರಾಗ ಏನೂ ಇಲ್ಲ ಖಾತ್ರಿ ಮಾತ್ರ ಬೀಗರು ಬೇಕು |
ರಾತ್ರೀ ಹಗಲ ಕೂಡಿ ನಾವು ಮದವೀ ಮಾಡೂನ |
ನಿನ್ಮುಂದ ಮಾತೊಂದು | ಬಿಚ್ಚಿ ಮುಚ್ಚಿ ಹೇಳ್ತಿನು
ಬಸರಿದ್ದೀನ್ಹೇಸರಿನ್ನೇನಿಡೂನ ||

ನೆಯ ಚೌಕ

ಅಬ್ರುಗೇಡಿ ರಂಡಿ ನೀನು | ಖಬರ‍್ಹಾರಿ ಮಾತನಾಡಬ್ಯಾಡ
ಇಬ್ರೂ ಕಾರಭಾರ ಮಾಡಿದ್ರ ಮನೀ ಸಾಗೀತ ಹ್ಯಾಂಗ |

ಒಂದ ಬೇಕು ಒಂದಿಲ್ಲ | ಇಂದ ಮನ್ಯಾಗ್ಹಡೆದರ
ಸೂಲಗಿತ್ತಿ ಶೋಧ ಮಾಡ ಮುಚ್ಚ ಹೋಗ ||

ಚೊಚ್ಚಿಲ ಮಗ ಹುಟ್ಟಿದರ | ಗಚ್ಚಿಲೆ ಬಚ್ಚಲ ಮುಚ್ಚಬೇಕ
ಹುಚ್ಚಿಯೇನು ಕೂಸೀಗಿ ನೀರಾ ಹನಿಸೂದು ಹ್ಯಾಂಗ |

ಕೊಡ ಹರವಿ ಇಡೂ ಜಾಗ | ಸನೀದಾಗ ಮಾಡಬೇಕ
ಉಳ್ಳದ್ಹಾಂಗ ಸುರಳೀ ಸುತ್ತಿ ಸಿಂಬಿ ಇಡಬೇಕ ||

ಸಣ್ಣ ನೂಲಿನ ಎಣ್ಣೀ ಅರಬೀ | ತಣ್ಣಗಾದರ ಕಡಿದಾಡೀನು
ನುಣ್ಣಗೊರಿಸಿ ಕೂಸಿನ ಮೈಯ ಚೊಕ್ಕ ಇಡಬೇಕ |

ಖುಷಿಯಿಂದ ಕೂತುಕೊಂಡು | ಅಕ್ಕರತಿ ಬಂದು ಎತ್ತಿಕೊಂಡು
ಹೌಸದಿಂದ ಮುದ್ದ ಕೊಟ್ಟು ಜೋಗುಳ ಪಾಡಬೇಕ ||

||ಇಳುವು||

 ತೊಟ್ಲ ಕಟ್ಟುವ ಜಾಗ ವೈನಿಲ್ಲ | ಪಡಸಲಿಗಿ ಕುಲಾಬಿ ವಂಕಿಲ್ಲ ||
ರೊಕ್ಕ ಕೊಟ್ಟಿದ ಕಂಬಾರ್ಗ ಹಾಸಿಲ | ವ್ಯಾಳ್ಯಾಕ ಮಾಡಿ ಕುಡುವೊಲ್ಲ ||
ರೊಕ್ಕ ಹೋದರ ಹರಕತ ಇಲ್ಲ | ಸಂತಿಗ್ಹೋಗಿ ತರ್ತಿನಿ ನಿರ್ವಾಹಿಲ್ಲ ||

||ಏರು|| 

ತಿಂಗಳ ಬಸರಾ ಕೇಳಿಕೊಂಡು | ಗುಂಗ ಭಾಳ ಸೇರ‍್ಯಾದವ್ವ
ಮಂಗನಾಂಗ ಮಾತನಾಡತಾನ ಮಾಡಲಿನ್ನೇನ |
ನಿನ್ನ ಮುಂದ ಮಾತ ಒಂದು | ಬಿಚ್ಚಿ ಮುಚ್ಚಿ ಹೇಳ್ತೀನು
ಬಸರಿದ್ದೀನ್ಹೆಸರಿನ್ನೇನಿಡೂನ ||

೩ ನೆಯ ಚೌಕ

 ಏಸ್ದಿನಾ ನೋಡಿದರ | ಧ್ಯಾಸೆಲ್ಲ ಕೂಸಿನ ಮ್ಯಾಲ
ಆಶಾ ಇಲ್ಲ ನನ್ನ ಮ್ಯಾಲ ಪುನಃ ಪುರುಷ |

ನೆರಿ ಹೊರಿ ಓಣಿ ಓಣಿ | ಫೇರಿ ಹಾಕಿ ನೋಡಿ ಬಾರ
ಧೀರೆ ಆಗತಾದ ತಂದು ಇಡು ಹೊರಸ |

ಇಂದ ನಿಂತು ಸಂತೀಗ್ಹೋಗಿ | ಮಾಹಿತ ಮಾಡಿ ಸಾಹಿತ್ತಗೊ
ಬೆಲ್ಲ ಅಕ್ಕಿ ಲಕ್ಕ ಚಕ್ಕ ಎಲಿ ಕಾಚಾ |

ಖಾರೀಖ್ಖೊಬ್ರಿ ಆರಿಸಿ ತಗೊ | ಘೋರಾದ್ರ ಪೂರಯಿಸೀತು
ಬ್ಯಾರೆ ಒಂದು ಪುಡಿ ಕಟ್ಟು ಬೇಕು ಬತ್ತಾಸಾ ||

ಅಕಲ ಗಡಿಗಿ ಎಲ್ಲಾ ಇಳುವಿ | ಹುಡುಕಿ ತಗಿ ಒಡಕ ಗಡಗಿ
ಬುಡಕಿಡೂ ಅಗಟಗೀಗಿ ಆದೀತಾಯಾಸ |

ಕುಳ್ಳ ನೋಡಿ ಕೊಂಡು ತಗೊ | ಫಳ್ಳಾದ್ರ ಪಾಡಲ್ಲ
ಮಳ್ಳನಾಂಗ ಮಾಡಬ್ಯಾಡ ಎಂಥ ಗಂಡಸ ||

||ಇಳುವು||

ಕಣ್ಣಿನೊಳಗ ಹಚ್ಚುವ ಕಾಡಿಗಿ | ಹಿಡಿದಿಡಬೇಕಂತ ಮುಂಚಾಗಿ
ನೆರೆಮನಿಗಿ ಹೋಗಿದ್ದ ಸಿಂಪಿಗಿ | ಕಾಡಿಗ್ಹಿಡಿದ ಕಟ್ಲಾಕ ಹೊರಸಿಗಿ
ಅವಸರಕ ಬರಬೇಕ ಶಾವಾಗೀ | ತುಪ್ಪದರ ಮ್ಯಾಗ ಒಂದು ಮಗಿ ||

||ಏರು||

ಹಿಂದ ಮುಂದ ಅಣ್ಣ ತಮ್ಮರು | ಬಂಧು ಬಳಗ ಯಾರಿಲ್ಲ
ಹೇಳಬೇಕ ನನ್ನ ಗೆಣತಿಗಿ ಬಾಣತೀ ಸಾಮಾನ |

ನಿನ್ಮುಂದ ಮಾತ ಒಂದು | ಬಿಚ್ಚಿ ಮುಚ್ಚಿ ಹೇಳತೀನು
ಬಸರಿದ್ದೀನ್ಹೆಸರಿನ್ನೇನು ಇಡೂನ ||

೪ ನೆಯ ಚೌಕ-

ಮತ್ತ ಬೇಕ ಸುತ್ತಗೆಜ್ಜಿ | ಹತ್ತು ಕೊಟ್ಟರಾಗತಾವ
ಅತ್ತೀ ಹತ್ತರಿಟ್ಟೀದೇನ ಇಪ್ಪತ್ತ |

ಉಡದಾರ ಉಣ್ಣೀ ಖಡಿ | ಬಂಗಾರ ಪುತಳೀ ಸರ
ಮತ್ತೇನು ಬೇಕ್ಹೇಳ ಇದರ ಹೊರತ ||

ಅಡದಂಡಿಗಿ ಅಳ್ಳೊಳ್ಳಿ | ಜುಲಪೀ ಹೂವ್ವ ಹಲಪೀಗುಳ್ಳ
ಕಡಿಮಿ ಆದರಿಲ್ಲ ಸನಮತ್ತ |

ಮಣಿಗಾರ ಮನೀಗ್ಹೋಗಿ | ಎಣ್ಣಿ ಮಣಿ ತಗೊಂಬಾ
ಸರಗಿ ಮುರಗಿ ಸಣ್ಣತಾಯಿತ ||

||ಇಳುವು||

ಕೂಸೀಗ್ಹಾಲ ಹಾಕುವ ಥಾಲೀ ಮಿಳ್ಳಿ | ಸಣ್ಣ ಬಟ್ಟಲದಾಗ ಮಗ ಉಳ್ಳಿ |
ತವರ ಮನಿದು ತರಹೋಗ ಮಳ್ಳಿ | ಆಯಿಮುತ್ಯಾಂದು ಮಗ ಹೆಸರ‍್ಹೇಳ್ಲಿ ||
ಅಕಿಸುತ್ತ ನಡಿಸಿದಾನ ಹೊಳಿ | ಅಂದಿಗಿಂದಗಿ ಲಗು ಹೋಗ ನಾಳಿ ||

||ಏರು||

ಹಡಿಯೂ ದಿನ ಸನೀ ಬಂತು | ಎಂಟೇ ತಿಂಗಳ ಮುಂದುಳೀತು
ಕೆಟ್ಟಗಿಟ್ಟ ಹಡೆದೀ ನಿನ್ನ ಚೆಟ್ಟಾ ಎತ್ತೀನ |
ನಿನ್ನ ಮುಂದ ಮಾತ ಒಂದು | ಬಿಚ್ಚಿ ಮುಚ್ಚಿ ಹೇಳ್ತೀನು
ಬಸುರಿದ್ದೀನ್ಹೆಸರಿನ್ನ ಏನಿಡೂನ ||

೫ ನೆಯ ಚೌಕ-

ಜೋಡ್ನಿ ಎಲ್ಲಾ ಕೂಡ್ಸೂದ್ರೊಳಗ | ದೀಡು ತಿಂಗಳಾಯಿತಪ್ಪ
ತಡದು ಹೊರಗ ಆದಳಲ್ಲಿಂದ |

ಗಂಡನ ಮುಂದ ಹೇಳ್ತಾಳ | ಸನಿಯಾಕ ಬರುಗುಡವೊಲ್ಳು
ಇದು ಇಲ್ಲಿ ಕೇಳು ನನ್ನ ಮಾತೊಂದ ||

ಹೆಣ್ಣು ಮಗಳು ಹುಟ್ಟಿದರ | ಬಣ್ಣದ ಒನಕಿ ಸಣ್ಣದು ಬೇಕ
ಗುಳ್ಳೆಪಿಲ್ಲೆ ಹೇಳಿ ಬಾರ ಹೋಗಿ ಇಂದ |

ಹೆಣ್ಣು ಒಯ್ದು ಮಣ್ಣಾಗ್ಹಾಕು | ನೀನೂ ಹೋದ್ರ ಹರಕತ್ತಿಲ್ಲ
ಉಳಸ್ಯಾಡಿ ಹೊಡದಾನ ಅಲ್ಲಿಂದ ||

ಕಡಿದಾಡಿ ಬಡಿದಾಡಿ ಗಂಡ | ಹರ‍್ಯಾಗೆದ್ದು ಅಡವೀಗಿ
ಹೊಲಕ ಹೋಗ್ಯಾನ ಹ್ವಾರೇಕ |

ಹ್ವಾರೇ ಮಾಡಿ ಬರೂದರೊಳಗ | ನೀರ ಬೂದಿ ತೊಯಿಸಿಟ್ಟು
ಹೊಲಿಯ ತಗದಾಳಪ್ಪ ಎಲ್ಲಾ ಪಾಕ ||

||ಇಳುವು||

ನೀ ನನ್ನ ಬಡಿಯಬಾರದಿತ್ತ | ಕೂಸೀಗಿ ಪೆಟ್ಟ ಪೂರಸ್ತ
ಹೆಣ್ಣಲ್ಲ ಗಂಡ ಹುಟ್ಟಿತ್ತ | ಥೇಟ ಹೋಲೀಕಿ ನಿನ್ನಾಂಗೆ ಇತ್ತ
ಗಂಡ ಅಳತಾನ ಭೋರಾಡಿ ಕುಂತ | ಮೊದಲೇ ದೇವರು ಕುಡಬಾರದಿತ್ತ ||

||ಏರು||

ಜನವಾಡದೂರಾ ನೆನದಾನ ಪೀರಾ | ಗುರುಹರ ಮತಿ ಕೊಟ್ಟ
ನಾನಾಸಾಬ ಮಾಡ್ಯಾನ ಕವಿ ಇದನಾ |
ನಿನ್ನ ಮುಂದ ಮಾತೊಂದು ಬಿಚ್ಚಿ ಮುಚ್ಚಿ ಹೇಳ್ತೀನು
ಬಸರಿದ್ದೀನ್ಹೆಸರಿನ್ನ ಏನಿಡೂನ ||

ರಚನೆ : ನಾನಾಸಾಬಕವಿ
ಕೃತಿ :
ಜೀವನ ಸಂಗೀತ