ಹುಟ್ಟಿದ್ದು ೫ ಪ್ರೆಬ್ರವರಿ ೧೯೩೧ ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆ ಎಂಬ ಹಳ್ಳಿಯಲ್ಲಿ. ಪೂರ್ಣಹೆಸರು ಹಾರೋಗದ್ದೆ ಮಾನಪ್ಪ ನಾಯಕ, ಹಾ.ಮಾ.ನಾ ಎಂಬುದು ಅವರ ಕಾವ್ಯನಾಮ. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಆಗುಂಬೆ ಹತ್ತಿರದ ನಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಬಿಸಿದ ಇವರು ಮೈಸೂರು ಮತ್ತು ಕಲ್ಕತ್ತ ವಿಶ್ವವಿದ್ಯಾಲಯಗಳಿಂದ ಎಂ.ಎ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಬಿಸಿದ ಹಾ.ಮಾ.ನಾಯಕರು ಫುಲ್‌ಬ್ರೈಟ್ ವಿದ್ಯಾರ್ಥಿವೇತನ ಪಡೆದು ಅಮೆರಿಕದ ಇಂಡಿಯಾನ ವಿಶ್ವ ವಿದ್ಯಾಲಯದಿಂದ ‘ಕನ್ನಡ: ಸಾಹಿತ್ಯಕ ಮತ್ತು ಆಡುಭಾಷೆ ಎಂಬ ವಿಷಯ ಕುರಿತು ಮಂಡಿಸಿದ ಪ್ರಬಂಧ ಡಾಕ್ಟರೇಟ್ ಪದವಿಯನ್ನು ತಂದುಕೊಟ್ಟಿತು. ನಾಯಕರು ಬಾಲ್ಯದಲ್ಲಿಯೇ ‘ಮಕ್ಕಳ ಪುಸ್ತಕ ಎಂಬ ಪತ್ರಿಕೆಯ ಮೂಲಕ ಬರವಣಿಗೆ ಪ್ರಾರಂಬಿಸಿ ಪ್ರೌಡಶಾಲೆಯಲ್ಲಿರುವಾಗಲೇ ಪ್ರಥಮ ಕೃತಿ ಬಾಳ್ನೋಟಗಳು (೧೯೫೦) ಪ್ರಕಟಿಸಿದರು. ಇವರು ಜಾನಪದ ವಿದ್ವಾಂಸರಾಗಿದ್ದರು. ಇದರ ಫಲವಾಗಿ ‘ಜಾನಪದ ಸ್ವರೂಪ ಎಂಬ ಕೃತಿಯನ್ನು ಪ್ರಕಟಿಸಿದರು.
ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೆಲಸಮಾಡಿರುವ ಇವರು ಅಂಕಣ ಬರಹಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ‘ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ವಾರ ವಾರ ಬರೆಯುತ್ತಿದ್ದ ಈ ಅಂಕಣ ಬರಹಗಳು ಹಲವಾರು ಪುಸ್ತಕಗಳಾಗಿ ಹೊರತಂದಿದ್ದಾರೆ. ಸಾಹಿತ್ಯಸಲ್ಲಾಪ, ಸಂಚಯ, ಸಂವಾದ, ಸಂಗ್ರಹ, ಸಂದರ್ಭ, ಸಂಪುಟ, ಸಂಪದ(ವಿಮರ್ಶೆ), ಸ್ಮರಣೆ(ವ್ಯಕ್ತಿಚಿತ್ರಗಳು), ಸಮೂಹ, ಸಂಪರ್ಕ, ಸಾಂಪ್ರತಿ, ಸಪ್ತಕ, ಸೃಜನ, ಎಂಬ ಕೃತಿಗಳು ಪ್ರಮುಖವಾದವುಗಳು. ಸಂಗ್ರಹದಲ್ಲಿ ಕೃತಿಪರಿಶೀಲನೆ, ಭಾಷೆ ನೆಲಜಲ ದಂತಹ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಸಂದರ್ಭ-ಭಾಷಣಗಳ ಸಂಕಲನ. ಇದರಲ್ಲಿ ವಿಚಾರಗೋಷ್ಠಿ, ಸಭೆ, ಸಮ್ಮೇಳನಗಳಲ್ಲಿ ಮಾಡಿದ ಭಾಷಣಗಳು ಸೇರಿವೆ. ಸ್ಮರಣ ದಲ್ಲಿ ದೇಶ-ವಿದೇಶಗಳಲ್ಲಿ ಪ್ರಸಿದ್ದರಾದ ಲೇಖಕ ತತ್ವಜ್ಞಾನಿ, ವಿದ್ವಾಂಸ ಮತ್ತು ಕಲಾವಿದರ ವ್ಯಕ್ತಿಚಿತ್ರಗಳನ್ನು ಮೂಡಿಸಿದ್ದಾರೆ.
ಮಹಮದ್ ಪೈಗಂಬರ್, ರವೀಂದ್ರ ನಾಥ ಠಾಕೂರ್, ಅಕ್ಕಮಹಾದೇವಿ, ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಗೋಕಾಕ್ ಕಥಾವಳಿ, ಸುನೇರಿ(ಅಮೃತಪ್ರೀತಂ ರವರ ಕವನಗಳ ಅನುವಾದ) ಗಳಂತಹ ಇತರೆ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಸೇವೆಗೆ ಸಂಧ ಗೌರವಗಳು- ೧೯೮೨ ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಸಂಪ್ರತಿ ಅಂಕಣಕ್ಕೆ ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೮೬ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೫೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಪರಮುಖವಾದವು.