ಇದೀಗ ಮುಂಗಾರು ಸುಗ್ಗಿ ಮುಗಿದಿದೆ. ಹಿಂಗಾರು ಹಂಗಾಮು ಆರಂಭ ಆಗಲಿದೆ. ಬೆಳೆಗಳ ಆರೋಗ್ಯ, ಕೀಟಗಳ ನಿಯಂತ್ರಣ, ಕಳೆ- ಕಸಗಳ ನಿರ್ವಹಣೆ ಹವಾಮಾನದಿಂದಲೇ ಸಾಧ್ಯ ಎಂಬುದು ತಲೆ- ತಲಾಂತರದಿಂದ ನಂಬಿ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಜ್ಞಾನ.

ಹಿಂಗಾರು ಹಂಗಾಮು ಪೂರ್ತಿ ಚಳಿಗಾಲ. ಜವಾರೀ ಬೀಜಗಳಿಗೆ ಈ ಹಂಗಾಮು ಬಹಳ ಮಹತ್ವದ್ದಾಗಿದೆ. ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳೆಂದರೆ ಜೋಳ, ಗೋಧಿ, ಕಡಲೆ, ಎಳ್ಳು, ಕುಸುಬೆ, ಅವರೆ, ಚನ್ನಂಗಿ, ಹೆಸರು, ಸಾಸಿಮೆ ಮುಂತಾದವು. ಅಗಸೆಯಂತಹ ಬೆಳೆ ಮಾಡಲು ಕೂಡ ಹಿಂಗಾರು ಸಕಾಲವೆನಿಸಿದೆ. ತೊಗರಿ, ಹುರುಳಿ, ಔಡಲ ಹಾಗೂ ಹತ್ತಿ ಬೆಳೆಯಲು ಹೇಳಿ ಮಾಡಿಸಿದ ಕಾಲವಿದು.

ಉತ್ತರ ಮತ್ತು ಹಸ್ತ ಮಳೆಗಳು ಭರವಸೆಯ ಮಳೆಗಳಾಗಿವೆ. ಬಹುತೇಕ ರೈತರು ಉತ್ತರಿ ಮಳೆ ಹುಸಿ ಹೋಗಲಾರದೆಂದು ನಂಬಿದ್ದಾರೆ. ಅದೇ ರೀತಿ ಹಸ್ತ ಮಳೆಯು ಭರವಸೆಯ ಮಳೆಯಾಗಿದೆ. ಉತ್ತರಿ ಮಳೆ ಆಗದಿದ್ದರೆ ಹಿಂಗಾರು ಹಂಗಾಮು ಬರಗಾಲವಾಗುವುದು, ಹಸ್ತಾ ಮಳೆ ಆಗದಿದ್ದರೆ ಹಲ್ಲು ಕಿಸಿವರು ಎಂಬ ನಂಬಿಕೆಯಿದೆ. ಉತ್ತರದ ಕಡೆಯಿಂದ ಬೀಸುವ ಗಾಳಿಗೆ ‘ಹರಿಶ್ಚಂದ್ರನ ಗಾಳಿ’ ಎಂದು ಕರೆಯುತ್ತಾರೆ. ಹರಿಶ್ಚಂದ್ರ ಸತ್ಯಕ್ಕೆ ಹೆಸರಾಗಿರುವಂತೆ ಈ ಗಾಳಿ ಬೀಸಿದರೆ ‘ಮಳೆ ಹುಸಿಯಾಗದು’ ಎಂಬ ನಂಬಿಕೆ ಪ್ರಚಲಿತದಲ್ಲಿದೆ.

ಅಕ್ಟೋಬರ್ ಮೊದಲನೇ ವಾರದಿಂದ ನವೆಂಬರ್ ಎರಡನೇ ವಾರದ ತನಕ ಹಿಂಗಾರು ಬೆಳೆಯ ಬಿತ್ತನೆ ಮಾಡುತ್ತಾರೆ. ಮುಂಗಾರು ಬೆಳೆಗಳನ್ನು ಕಟಾವು ಮಾಡಿದ ಹೊಲದಲ್ಲಿ ಗಳೆ ಹೊಡೆದು ಹಿಂಗಾರು ಬೆಳೆ ಮಾಡಲಾಗುತ್ತದೆ. ಮುಂಗಾರುನಲ್ಲಿ ಹೆಸರು ಬಿತ್ತಿದ ಹೊಲದಲ್ಲಿ ಹಿಂಗಾರುನಲ್ಲಿ ಜೋಳ ಚೆನ್ನಾಗಿ ಬೆಳೆಯುತ್ತದೆ. ಮಂಗಾರುನಲ್ಲಿ ಶೇಂಗಾ, ಸೋಯಾ ಅವರೆ ಬೆಳೆದ ಹೊಲದಲ್ಲಿ ಗೋಧಿ, ಕಡಲೆ, ಕುಸುಬೆ ಬೆಳೆಯಲಾಗುತ್ತಿದೆ.

ಭತ್ತ ಬೆಳೆದ ಹೊಲದಲ್ಲಿ ಹಿಂಗಾರುನಲ್ಲಿ ಚನ್ನಂಗಿ, ಕಡಲೆ, ಅವರೆ, ಹೆಸರು, ಸಾಸಿವೆ ಮತ್ತು ಅಗಸೆ ಬೆಳೆಯುತ್ತಾರೆ. ಇದಲ್ಲದೇ ಕೆಲವು ಕಡೆಗೆ ಮುಂಗಾರುನಲ್ಲಿ ಬೆಳೆಯನ್ನೇ ಮಾಡುವುದಿಲ್ಲ. ಆಗಾಗ ಗಳೆ ಹೊಡೆದು ಹಿಂಗಾರು ಬೆಳೆ ಮಾಡುತ್ತಾರೆ. ಯಾವುದೇ ಬೆಳೆ ಮಾಡದೇ ಇರುವುದರಿಂದ ಈ ಹೊಲಕ್ಕೆ ‘ತನು ಹೊಲ’ಎಂದು ಕರೆಯುತ್ತಾರೆ. ಹೀಗೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವುದು. ಜೈಧರ ಹತ್ತಿಯನ್ನು ಇಡೀ ಹೊಲವಾಗಿ ಬಿತ್ತಲು ಹಿಂಗಾರು ಹಂಗಾಮು ಸೂಕ್ತ.

ಮಂಗಾರು ಬೆಳೆಗಳಲ್ಲಿ ಅಕ್ಕಡಿ ಬೆಳೆಯಾಗಿ ಬಿತ್ತನೆ ಮಾಡಿದ ತೊಗರಿ, ಹಿಂಗಾರು ಬೆಳೆಯಾಗಿ ಮುಂದುವರಿಯುತ್ತದೆ. ಅದೇ ರೀತಿ ಮುಂಗಾರುನಲ್ಲಿ ಸಾವೆ ಬೆಳೆಯ ಸಾಲಿನ ನಡುವೆ ಬಿತ್ತಿದ ಹುರುಳಿ ಹಿಂಗಾರುನಲ್ಲಿ ಚೆನ್ನಾಗಿ ಬೆಳೆಯುವುದು. ಕಲ್ಲು ಮಸಾರಿ ಹಾಗೂ ಹಕ್ಕಲು ಜಮೀನಿನಲ್ಲಿ ಔಡಲವನ್ನು ಅಕ್ಕಡಿ ಬೆಳೆ ಮಾಡಿದ್ದಲ್ಲಿ ಚೆನ್ನಾಗಿ ಬೆಳೆಯುವುದು. ಅದೇ ರೀತಿಯಲ್ಲಿ ಹೈಬ್ರಿಡ್ ಹತ್ತಿಗಳು ಹೂವು ಕಾಯಿಗಳಾಗಿ ಹಿಂಗಾರುನಲ್ಲಿ ಕಟಾವಿಗೆ ಬರುತ್ತವೆ. ಕೆಲವು ಕಡೆಗೆ, ಧಾರವಾಡ ಜಿಲ್ಲೆಯ ಕುಂದಗೋಳ ಭಾಗದಲ್ಲಿ ಬ್ಯಾಡಗಿ ಮೆಣಸಿನ ಗಿಡದ ಸಾಲಿನ ನಡುವೆ ಜೈಧರ ಹತ್ತಿ ಕೈಗಾಳು ಹಾಕಿದ್ದರೆ ಹಿಂಗಾರುನಲ್ಲಿ ಚೆನ್ನಾಗಿ ಬೆಳೆಯುತ್ತದೆ. ನವಣೆ, ಸಜ್ಜೆ, ಎಳ್ಳು ಮೊದಲಾದ ಧಾನ್ಯಗಳನ್ನು ಬಿತ್ತಲು ಕೂಡ ಇದು ಸಕಾಲವೆನಿಸಿದೆ. ಜೋಳವನ್ನು ಇಡಿ ಬೆಳೆಯಾಗಿ, ಕುಸುಬೆಯನ್ನು ಗೋಧಿ ಮತ್ತು ಕಡಲೆ ಬೆಳೆಯಲ್ಲಿ ಅಕ್ಕಡಿ ಬೆಳೆಯಾಗಿ ಬೆಳೆಯುತ್ತಾರೆ.

ಹಿಂಗಾರು ಬೆಳೆಗಳು ಚಳಿಗಾಲದ ಬೆಳೆಗಳಾಗಿವೆ. ಆಗಲೇ ಬಿತ್ತನೆ ಮಾಡಿದ ಕಡಲೆ, ಹತ್ತಿ, ಕುಸುಬೆ ಬೆಳೆಗಳು ಹಾಗೂ ಮುಂಗಾರುನಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ ಬೆಳೆಗಳು ಕಾಯಿ ಆಗುವ ಹಂತ. ಎರಡು ತಿಂಗಳ ಬೆಳೆ ಆಗುವಷ್ಟರಲ್ಲಿ ವಿಶಾಖ ಮಳೆ ಆಗುತ್ತದೆ. ವಿಶಾಖಾ ಮಳೆಗೆ ವಿಷ ಮಳೆ ಎಂದೂ ಕರೆಯುತ್ತಾರೆ. ಈ ಮಳೆ ಆದರೆ ಮರಿ ಹಂತದಲ್ಲಿದ್ದ ಕಾಯಿಕೊರಕ ಕೀಟಗಳು ಸಾಯುತ್ತವೆ ಎಂಬ ನಂಬಿಕೆಯಿದೆ. ವಿಶಾಖಾ ಮಳೆಯ ಹನಿಗಳಲ್ಲಿ ವಿಷದ ಪ್ರಮಾಣ ಜಾಸ್ತಿ ಇರುವುದೆಂದು ಹೇಳಲಾಗುತ್ತದೆ.

ಹಿಂಗಾರು ಬೆಳೆಗಳು ಹೂಗಟ್ಟಲು ತೇವಾಂಶ ಇದ್ದರೆ ಸಾಕು. ಬಿತ್ತನೆ ಮಾಡಿದ ಬೆಳೆಗಳು ಮತ್ತೆ- ಮಳೆ ಆಗದಿದ್ದರೂ ಚೆನ್ನಾಗಿ ಬೆಳೆಯುತ್ತವೆ. ಬಿತ್ತಿದ ನಂತರ ಅಲ್ಪ ಮಳೆಯಾದರೂ ಇಳುವರಿಯಲ್ಲಿ ಹೆಚ್ಚಳವಾಗುವುದು. ಮೋಡ ಕವಿದ ವಾತಾವರಣ ಆಗಲಿ, ಮಳೆಯ ವಾತಾವರಣ ಆಗಲಿ ಕೀಟಗಳ ನಿಯಂತ್ರಣ ಸಾಧ್ಯ.

ಹಿಂಗಾರು ಬೆಳೆ ಮಾಡುವುದರಿಂದ ರೈತರಿಗೆ ಹಲವಾರು ಪ್ರಯೋಜನಗಳಿವೆ. ಮಳೆಯ ಕಾಟ ಇರುವುದಿಲ್ಲ. ಕಳೆ- ಕಸಗಳು ಹೆಚ್ಚಾಗಿ ಬೆಳೆಯುವುದಿಲ್ಲ. ಒಂದೆರಡು ಸಲ ಬೆಳೆಯ ನಡುವೆ ಎಡೆಕುಂಟೆ ಹೊಡೆದರೆ ಕಳೆಗಳ ನಿಯಂತ್ರಣ ಸಾಧ್ಯವಾಗುವುದು. ಚಳಿಯ ವಾತಾವರಣದಲ್ಲಿ ಕೀಟಗಳನ್ನು ನೈಸರ್ಗಿಕವಾಗಿ ಹತೋಟಿ ಮಾಡಲು ಸಾಧ್ಯವಿದೆ. ಜೋಳದ ಕಾಳು, ಕುಸುಬೆ ಕಾಳು, ಕಡಲೆ ಹಾಗೂ ತೊಗರಿ ಕಾಳು ರಸದುಂಬಿ, ಕಾಯಿಗಳು ಚೆನ್ನಾಗಿ ಬಲಿತು ಇಳುವರಿ ಹೆಚ್ಚಾಗಲು ಚಳಿಯ ವಾತಾವರಣ ಹೇಳಿ ಮಾಡಿಸಿದಂತಿರುವುದು.

ಮಂಜು, ಇಬ್ಬನಿಗಳ ಕಾಟವೂ ಇರುವುದಿಲ್ಲ. ಇದರಿಂದ ಬೆಳೆಗಳಿಗೆ ರೋಗದ ಬಾಧೆ ಆಗಲಾರದು. ಬೆಳೆಗಳು ಆರೋಗ್ಯ ಪೂರ್ಣವಾಗಿ ಬೆಳೆಯುತ್ತವೆ. ಗೋಧಿಯ ಬೆಳೆಯಂತೂ ಚಳಿಗಾಲದ ಬೆಳೆ. ನೀರಾವರಿಯಲ್ಲೂ ಗೋಧಿಯನ್ನು ಬೆಳೆಯಲು ಹಿಂಗಾರು ಹಂಗಾಮು ಸಕಾಲ. ಒಟ್ಟಿನಲ್ಲಿ ಹಿಂಗಾರು ಬೆಳೆಗಳ ಹೊಟ್ಟು, ಕಣಿಕೆ ಸಂಗ್ರಹಿಸಿಡಲು, ಬಣವೆ ಒಟ್ಟಲು ಈ ಹಂಗಾಮು ಅನುಕೂಲ.

ಹಿಂಗಾರು ಹಂಗಾಮು ಬೆಳೆಗಳ ಕೊಯ್ಲು ಒಕ್ಕಣೆ ಮಾಡಲು ಹೆಚ್ಚು ಪ್ರಶಸ್ತವೆನಿಸಿದೆ. ಕೊಯ್ಲು ಮಾಡಲು ಒಂದೆರಡು ದಿನ ಅಷ್ಟೇ ಅಲ್ಲ, ವಾರಗಟ್ಟಲೇ ಆಗದಿದ್ದರೂ ತೊಂದರೆ ಆಗಲಾರದು. ಯಾಕೆಂದರೆ ಮಳೆ ಬರುವ ಭಯ ಇರುವುದಿಲ್ಲ. ಕಣ ಮಾಡಿ ಒಕ್ಕಣೆ ಮಾಡಲು ಅನುಕೂಲವಾಗುವುದು. ಇದರಿಂದ ಒಕ್ಕಣೆ ಮಾಡಲು ಯಂತ್ರಗಳ ಮೊರೆ ಹೋಗಬೇಕಿಲ್ಲ. ಕಳೆ– ಕಸಗಳ ನಿರ್ವಹಣೆ, ಕೊಯ್ಲು ಒಕ್ಕಣೆ ಮಾಡಲು ಕೃಷಿ ಕೂಲಿಕಾರರ ಅಭಾವದ ಈ ದಿನಗಳಲ್ಲಿ ಸುಲಭ ಸಾಧ್ಯವಾಗುವುದು.

ಬೆಳೆಗಳಿಗೆ ರಾಸಾಯನಿಕ ಕೀಟನಾಶಕ, ಕ್ರಿಮಿನಾಶಕಗಳ ಸಿಂಪರಣೆಯ ಖರ್ಚಿನಲ್ಲೂ ಉಳಿತಾಯ, ಕಡಿಮೆ ಕೃಷಿ ಕೂಲಿಕಾರರ ಬಳಕೆ,.. ಹೀಗೆ ಹಲವಾರು ರೀತಿಯಲ್ಲಿ ರೈತರಿಗೆ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಕಡಿಮೆ ಆಗಿ ಇಳುವರಿಯಲ್ಲಿ ಹೆಚ್ಚಳ ಆಗಿ, ಆರ್ಥಿಕ ಪ್ರಯೋಜನ ಹೆಚ್ಚಾಗುವವು.

ಒಟ್ಟಿನಲ್ಲಿ ಮುಂಗಾರುಗಿಂತ ಹಿಂಗಾರು ಹಂಗಾಮು ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಬೆಳೆಗಳಿಗೆ ಕೂಡ ಹಿಂಗಾರು ಹಂಗಾಮು ಮುಂಗಾರುಗಿಂತ ಉತ್ತಮವಾಗಿದೆ.