ಕರ್ನಾಟಕ ಹಾಗೂ ಭಾರತದ ರಾಜಕಾರಣದ ಚರಿತ್ರೆಯಲ್ಲಿ ಡಿ. ದೇವರಾಜ ಅರಸು ಅವರಿಗೆ ವಿಶಿಷ್ಟ ಸ್ಥಾನವಿದೆ. ರಾಮಮನೋಹರ ಲೋಹಿಯಾ, ಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಜಯಪ್ರಕಾಶ್‌ ನಾರಾಯಣ ಮೊದಲಾದವರು ಕಂಡಿದ್ದ ಕನಸನ್ನು ನನಸು ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ದಲಿತ, ಹಿಂದುಳಿದ ಹಾಗೂ ಬಡವರ ಪರವಾದ ಚಿಂತನೆಯುಳ್ಳ ವ್ಯಕ್ತಿ ದೇವರಾಜ ಅರಸು. ಈ ವರ್ಗಗಳನ್ನು ರಾಜಕೀಯ ವಲಯದಲ್ಲಿ ಶಕ್ತಿವಲಯವನ್ನಾಗಿ ಸಂಘಟಿಸಿದ್ದು ಸಣ್ಣ ಸಾಧನೆಯೇನಲ್ಲ. ೧೯೫೨ರಿಂದಲೂ ಕರ್ನಾಟಕದ ರಾಜಕಾರಣದಲ್ಲಿದ್ದ ಅರಸು ಅವರು, ಮುಖ್ಯಮಂತ್ರಿಯಾದ ನಂತರ ತಮ್ಮ ಅನುಭವವನ್ನು ದಲಿತ ಹಾಗೂ ಬಡವರ ಪರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕಾಗಿ ಬಳಸಿಕೊಂಡರು. ಏಕೀಕರಣದ ನಂತರ ಕರ್ನಾಟಕ ರಾಜಕಾರಣದಲ್ಲಿ ಏಕಸ್ವಾಮ್ಯತೆಯನ್ನು ಸ್ಥಾಪಿಸಿಕೊಂಡಿದ್ದ ಬ್ರಾಹ್ಮಣ, ಲಿಂಗಾಯತ ಹಾಗೂ ಒಕ್ಕಲಿಗರಂಥ ದೊಡ್ಡ ಸಮುದಾಯದವರನ್ನು ದೂರವಿಟ್ಟು ರಾಜಕಾರಣ ಮಾಡಿದ ಹೆಗ್ಗಳಿಕೆ ದೇವರಾಜ ಅರಸು ಅವರದು. ದಲಿತ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ-ವರ್ಗಗಳ ಜೊತೆಗೆ ಅಲ್ಪಸಂಖ್ಯಾತ ಹಾಗೂ ಇನ್ನಿತರೆ ಜನಾಂಗಗಳ ಬಡವರನ್ನು ಒಂದುಗೂಡಿಸಿ ಕರ್ನಾಟಕ ರಾಜಕಾರಣ ಮತ್ತು ಸಮಾಜದಲ್ಲಿ ಅವರಿಗೆ ಒಂದು ಸೂಕ್ತ ಸ್ಥಾನ ಕೊಡಿಸಿದ ಹೆಗ್ಗಳಿಕೆ ಅರಸು ಅವರಿಗೆ ಸಲ್ಲುತ್ತದೆ.

ಕೌಟುಂಬಿಕ ಹಿನ್ನೆಲೆ

ಮೈಸೂರಿನ ಮೂರನೆಯ ಮಂಗರಸರ ಮೂಲ ವಂಶದ ಮನೆತನಕ್ಕೆ ಸೇರಿದ (ಜೈನಕ್ಷತ್ರಿಯ ಕುಟುಂಬ) ದೇವರಾಜ ಅರಸು, ಮೈಸೂರು ಜಿಲ್ಲೆಯ, ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ೧೯೧೫ ಆಗಸ್ಟ್‌ ೨೦ರಂದು, ದೇವರಾಜ ಮತ್ತು ದೇವೀರಮ್ಮಣ್ಣಿ ದಂಪತಿಗಳ ಮೊದಲ ಮಗನಾಗಿ ಜನಿಸಿದರು. ಕಲ್ಲಹಳ್ಳಿ ಎಂಬುದು ಇತಿಹಾಸ ಪ್ರಸಿದ್ಧ ಮೂರನೆಯ ಮಂಗರಸರ ರಾಜಧಾನಿಯಾಗಿತ್ತು, ಕಲ್ಲಹಳ್ಳಿಯ ಮೂಲ ಹೆಸರು ‘ದಾತುಪುರ’ ಎಂದು. ಇದು ಚಿಲಕುಂದಿ ಹೋಬಳಿಗೆ ಸೇರಿದ ಗ್ರಾಮವಾಗಿತ್ತು. ದೇವೀರಮ್ಮಣ್ಣಿಯವರ ತಾಯಿಗೆ ಗಂಡುಮಕ್ಕಳಾಗದಿದ್ದ ಕಾರಣ ಬೆಟ್ಟದಪುರದ ದೇವರಾಜ ಅರಸು ಅವರನ್ನು ಅರಮನೆಯ ಅಳಿಯನಾಗಿ ಕಲ್ಲಹಳ್ಳಿಯಲ್ಲಿ ಬಂದು ನೆಲಸುವಂತೆ ಮಾಡಿದರು. ಇವರು ಕ್ಷತ್ರಿಯ ಕುಟುಂಬದವರಾದರೂ ವ್ಯವಸಾಯ ಇವರ ಕುಟುಂಬದ ಮೂಲ ವೃತ್ತಿಯಾಗಿತ್ತು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ನಂತರ ತಾಯಿಯ ಅಕ್ಕರೆಯಲ್ಲಿ ಬೆಳೆದರು. ಚಿಕ್ಕಂದಿನಲ್ಲೆ ಗರಡಿ ಮನೆಗೆ ಹೋಗಿ ಕುಸ್ತಿ ಕಲಿತು ಪೈಲ್ವಾನ್‌ ಎನಿಸಿಕೊಳ್ಳುವಷ್ಟು ದೇಹದಾರ್ಢ್ಯವನ್ನು ತಾರುಣ್ಯದಲ್ಲೇ ಪಡೆದರು.

ಶಿಕ್ಷಣ, ಪರಿಸರ ಹಾಗೂ ಪ್ರಭಾವ

ಅರಸು ಅವರು ಪ್ರಾಥಮಿಕ ಶಿಕ್ಷಣವನ್ನು ಕಲ್ಲಹಳ್ಳಿಯಲ್ಲೇ ಮಾಡಿದರು ಮತ್ತು ಅಪ್ಪಾಜೈ ಎಂಬುವರು ಅರಸು ಅವರಿಗೆ ಮನೆಯ ‘ಜಗಲಿ’ಯಲ್ಲಿ ಪಾಠವನ್ನು ಬೋಧನೆ ಮಾಡುತ್ತಿದ್ದರು. ಆದರೆ ದೇವರೀರಮ್ಮಣ್ಣಿಯವರಿಗೆ ತನ್ನ ಮಗ ಚೆನ್ನಾಗಿ ಓದಿ ದೊಡ್ಡ ಕೆಲಸ ಸಂಪಾದಿಸಬೇಕೆಂಬ ಆಸೆ. ಹೀಗಾಗಿ ಮೈಸೂರಿನ ಮಹಾರಾಜ ಚಾಮರಾಜ ಒಡೆಯರು ಸ್ಥಾಪಿಸಿದ್ದ ಅರಸು ಬೋರ್ಡಿಂಗ್‌ ಶಾಲೆಗೆ ಸೇರಿದರು. ಆದರೆ ಅಲ್ಲಿನ ರೀತಿ-ನೀತಿಗಳು ಸ್ವತಂತ್ರ ಪ್ರವೃತ್ತಿಯ ಅರಸು ಅವರಿಗೆ ಸರಿ ಕಾಣಲಿಲ್ಲ. ಅಲ್ಲಿ ಕೇವಲ ಆರನೆಯ ತರಗತಿಯವರೆಗೆ ಓದಿ ಹೊರ ಬಂದರು. ಮುಂದೆ ಹೈಸ್ಕೂಲ್‌ ಶಿಕ್ಷಣಕ್ಕೆ ಮೈಸೂರಿಗೆ ಬಂದು ಅಲ್ಲಿಯೇ ಇಂಟರ್ ಮೀಡಿಯೇಟ್‌ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಸೆಂಟ್ರಲ್‌ ಕಾಲೇಜ್‌ ಸೇರಿದರು. ಆಗ ಅದೊಂದು ಹೆಸರಾಂತ ವಿದ್ಯಾಸಂಸ್ಥೆಯಾಗಿತ್ತು. ಅಲ್ಲಿ ಓದಿ ವಿಜ್ಞಾನದಲ್ಲಿ ಪದವಿಯನ್ನು ಪಡೆದರು. ಹೀಗಾಗಿ ಓದುವುದನ್ನೇ ಗೀಳಾಗಿಸಿ ಕೊಂಡ ಅವರು ತತ್ವಶಾಸ್ತ್ರದಲ್ಲಿ ಅಭಿರುಚಿ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಅಲ್ಲದೆ ಕುವೆಂಪು, ಬೇಂದ್ರೆ, ಕಾರಂತರ ಸಾಹಿತ್ಯವನ್ನು ಓದಿ ಕನ್ನಡ ನಾಡು-ನುಡಿಯ ಬಗೆಗೆ ಒಲವು ಬೆಳೆಸಿಕೊಂಡರು. ಸಮಾಜವಾದ, ಸಾಮಾಜಿಕ ಪ್ರಜ್ಞೆ ಎಲ್ಲವೂ ಈ ಬುದ್ಧಿಜೀವಿಗಳ ಬರಹಗಳಲ್ಲೇ ಬಿಂಬಿತವಾಗಿದೆ ಎನ್ನುತ್ತಾರೆ ಅರಸು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಮಣ್ಣಿನ ಮಗನಾಗಲು ಮತ್ತೆ ಕಲ್ಲಹಳ್ಳಿಗೆ ಹಿಂತಿರುಗಿ ಬಂದ ಅರಸು ವ್ಯವಸಾಯದಲ್ಲಿ ತೊಡಗಿದರು. ಕಲ್ಲಹಳ್ಳಿಯ ಪರಿಸರವನ್ನು ಬಹು ಆತ್ಮೀಯವಾಗಿ ಕಂಡಿದ್ದ ಅವರು, ಅಲ್ಲಿನ ಅಭಿವೃದ್ಧಿಗಾಗಿ ಕೆಲಸ ಮಾಡಿದರು. ಹಳ್ಳಿಗರ ಮೂಲ ಬದುಕನ್ನು ರೂಪಿಸುವ ಕೃಷಿಯ ಬದುಕನ್ನು ಅವರು ಗಾಢವಾಗಿ ಪ್ರೀತಿಸಿದರು. ಸ್ವತಃ ಕೃಷಿಕರಾಗಿ, ಕಟ್ಟಿಗೆ ವ್ಯಾಪಾರಿಯಾಗಿ, ಹೋರಿ ಎತ್ತುಗಳನ್ನು ಮೇಯಿಸುವ ದನಗಾಹಿಯಾಗಿ ಹಾಗೂ ಹಾಲು ಮಾರುವವರಾಗಿ ತಮ್ಮ ಬದುಕನ್ನು ನಡೆಸಿದರು. ಇದು ಸುಲಭವಾಗಿ ಕಂಡರೂ ಅದರಲ್ಲಿನ ಕಾಯಕ ಮೌಲ್ಯ ಅನನ್ಯವಾದದ್ದು.

ನಟನೆಯಲ್ಲಿಯೂ ಅಭಿರುಚಿ ಹೊಂದಿದ್ದ ಅರಸುಗೆ ಸಹಜವಾಗಿಯೇ ಬೆಂಗಳೂರಿನಲ್ಲಿ ಚಲನಚಿತ್ರ ಗೆಳೆಯರ ಸಹವಾಸ ಲಭಿಸಿತ್ತು. ಆಗ ನಿರ್ಮಾಣದ ಹಂತದಲ್ಲಿದ್ದ ‘ಭಕ್ತ ರಾಮದಾಸ’ ಚಲನಚಿತ್ರದಲ್ಲಿನ ಪಾತ್ರವೊಂದನ್ನು ಅಭಿನಯಿಸಲು ಒಪ್ಪಿದ್ದ ಅರಸು, ಅದೇಕೋ ಈ ಸಿನಿಮಾ ಮಂದಿಯ ಸಹವಾಸ ಬೇಡ ಎಂದು ಚಲನಚಿತ್ರರಂಗದಿಂದ ಹೊರಬಂದರು. ಆದರೆ ರಾಜಕೀಯ ರಂಗ ಅವರನ್ನು ಕರ್ನಾಟಕದ ರಾಜಕಾರಣಕ್ಕೆ ಧುಮುಕುವಂತೆ ಪ್ರೇರೇಪಿಸಿತು.

೧೯೪೧ರಲ್ಲಿ ರಾಜಕಾರಣದ ನಂಟು ಬೆಳಸಿಕೊಂಡ ದೇವರಾಜ ಅರಸು ಅವರು, ೧೯೪೩ ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದರು. ಚದುರಂಗರ ಅಣ್ಣ ಮುದ್ದುರಾಜೇ ಅರಸು ಅವರು ಪಾಳೆಯಗಾರ ವಂಶಕ್ಕೆ ಸೇರಿದ ಚಿಕ್ಕಮ್ಮಣಿಯವರೊಂದಿಗೆ ದೇವರಾಜ ಅರಸರ ವಿವಾಹ ನೆರವೇರಿಸಿದರು. ಈ ದಂಪತಿಗಳಿಗೆ ಗಂಡು ಸಂತಾನವಿರಲಿಲ್ಲ. ಅವರಿಗೆ ಚಂದ್ರಪ್ರಭಾ, ನಾಗರತ್ನ ಮತ್ತು ಭಾರತಿ ಎಂಬ ಹೆಣ್ಣು ಮಕ್ಕಳು ಜನಿಸಿದರು. ನಾಗರತ್ನ ಎನ್ನುವ ಎರಡನೆಯ ಮಗಳು ತಂದೆಯವರಿಗೆ ರಾಜಕೀಯ ಗುರುವಿನಂತಿದ್ದವಳು. ಈಕೆಯೊಂದಿಗೆ ಅರಸು, ಕರ್ನಾಟಕ ರಾಜಕಾರಣ ಕುರಿತಂತೆ ಮತ್ತು ಕನ್ನಡ ಸಾಹಿತ್ಯದ ಕುರಿತಂತೆ ಗಹನ ವಿಚಾರಗಳನ್ನು ಚರ್ಚಿಸುತ್ತಿದ್ದರು.

ರಾಜಕಾರಣದ ಪ್ರವೇಶ ಹಾಗೂ ಏಳಿಗೆ

ದೇವರಾಜ ಅರಸರಿಗೆ ರಾಜಕೀಯ ನಂಟು ಬೆಳೆದದ್ದು ೧೯೪೧ರಿಂದ. ಆಗ ದೇಶದಲ್ಲಿ ಸ್ವಾತಂತ್ಯ್ರ ಸಂಗ್ರಾಮದ ಕಾವು ತೀವ್ರವಾಗಿತ್ತು. ಮಹಾತ್ಮ ಗಾಂಧಿಯವರು ‘ಮಾಡು ಇಲ್ಲವೆ ಮಡಿ’ ಎಂದು ಕರೆಕೊಟ್ಟಿದ್ದರು. ಹುಣಸೂರಿನ ಖ್ಯಾತ ವಕೀಲ ಕೃಷ್ಣಮೂರ್ತಿಯವರ ಸಂಪರ್ಕವನ್ನು ಬೆಳಸಿದ ದೇವರಾಜ ಅರಸರು ರಾಜಕಾರಣದಲ್ಲಿ ಪ್ರಥಮ ಪಾಠಗಳನ್ನು ಅವರ ಮಾರ್ಗದರ್ಶನದಲ್ಲಿ ಕಲಿತರು. ಇವರ ಜೊತೆಗೆ ಸಾಹುಕಾರ ಚೆನ್ನಯ್ಯನವರ ಪ್ರೋತ್ಸಾಹದಿಂದ ೧೯೪೧ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ನಡೆದ ಚುನಾವಣೇಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು. ೧೯೪೨ರಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಸೆರಮನೆವಾಸವನ್ನೂ ಅನುಭವಿಸಿದರು. ೧೯೪೫ರಲ್ಲಿ ಮತ್ತೆ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. ಆಗ ಅರಸರಿಗೆ ಕೇವಲ ೨೬ ವರ್ಷ ವಯಸ್ಸು. ಪ್ರಜಾಪ್ರತಿನಿಧಿ ಸಭೆಯ ಅತ್ಯಂತ ಕಿರಿಯ ಸದಸ್ಯರೆಂಬ ಹೆಗ್ಗಳಿಕೆಯಿಂದ ವಿಧ್ಯುಕ್ತವಾಗಿ ಅರಸು ಅವರು ಕರ್ನಾಟಕ ರಾಜಕಾರಣಕ್ಕೆ ಪ್ರವೇಶ ಮಾಡಿದರು.

ಪ್ರಜಾಪ್ರತಿನಿಧಿ ಸಭೆಯಲ್ಲೂ ಆಗ ರಾಜಕೀಯ ಗುಂಪುಗಾರಿಕೆ ಇತ್ತು. ಕಾಂಗ್ರೆಸ್‌ ಪಕ್ಷವೂ ಇದಕ್ಕೆ ಹೊರತಾಗಿರಲಿಲ್ಲ. ಅರಸು ಅವರು ಆಗ ಕಾಂಗ್ರೆಸ್‌ನೊಳಗೆ ಒಂದು ಗುಂಪಿನ ನಾಯಕರಾಗಿದ್ದ ಹಿರಳ್ಳಿ ದಾಸಪ್ಪನವರ ಕಟ್ಟಾ ಬೆಂಬಲಿಗರಾಗಿದ್ದರು.

೧೯೪೫ರಲ್ಲಿ ಪುನಃ ಪ್ರಜಾಪ್ರತಿನಿಧಿ ಸಭೆಗೆ ಚುನಾವಣೆ ನಡೆಯಿತು. ಆಗ ಅರಸು ಅವರ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ೧೫೦ ರೂಪಾಯಿ ಮೊತ್ತದ ಠೇವಣಿ ಹಣ ಕಟ್ಟುವುದೂ ಸಹ ಅರಸರಿಗೆ ಸಾಧ್ಯವಿರಲಿಲ್ಲ. ಈ ಜಂಜಾಟಗಳನ್ನು ಬಿಟ್ಟು ಊರಿನಲ್ಲಿ ಬೇಸಾಯ ಮಾಡಬೇಕೆಂದು ನಿರ್ಧರಿಸಿ ಅವರು ತಮ್ಮ ಊರಿಗೆ ಮರಳಿದರು. ತಮ್ಮ ಈ ನಿರ್ಧಾರವನ್ನು ಸಾಹುಕಾರ ಚೆನ್ನಯ್ಯನವರಿಗೂ ತಿಳಿಸಿದ್ದರು. ವಿಧಯಿಲ್ಲದೆ ಚೆನ್ನಯ್ಯನವರು ಹುಣಸೂರು ಕ್ಷೇತ್ರದಿಂದ ಬೇರೊಬ್ಬ ಅಭ್ಯರ್ಥಿಯನ್ನು ಸ್ಪರ್ಧಾಳುವಾಗಿ ಆಯ್ಕೆ ಮಾಡಿದ್ದರು. ಅರಸು ರಾಜಕೀಯದಿಂದ ದೂರವಿರಲು ತೀರ್ಮಾನಿಸಿದರೂ ರಾಜಕಾರಣ ಅವರನ್ನು ಮತ್ತೆ ಸೆಳೆದುಕೊಂಡಿತು. ಸ್ಪರ್ಧಿಸಬೇಕಿದ್ದ ಹುರಿಯಾಳು ನಾಮಪತ್ರ ಸಲ್ಲಿಸುವ ಎರಡು ದಿನದ ಮೊದಲೇ ನಾಪತ್ತೆಯಾಗಿದ್ದರು. ಆಗ ಕಾಂಗ್ರೆಸ್‌ ಪಕ್ಷದ ಪರವಾಗಿ ಸ್ಪರ್ಧಿಸುವುದೆಂದರೆ ಮಹಾರಾಜರ ಸರಕಾರವನ್ನು ವಿರೋಧಿಸಿದಂತೆಯೇ ಆಗಿತ್ತು. ಸರಕಾರದ ವಿರೋಧವನ್ನು ಕಟ್ಟಿಕೊಳ್ಳಲಾಗದ ದಿಗಿಲಿನಿಂದ ಆ ಹುರಿಯಾಳು ಕೊನೆಗಳಿಗೆಯಲ್ಲಿ ಕೈಕೊಟ್ಟಿದ್ದರು. ಇದರಿಂದ ವಿಚಲಿತರಾದ ಚೆನ್ನಯ್ಯನವರು ಬೇರೆ ದಾರಿಕಾಣದೆ ನೇರವಾಗಿ ಹುಣಸೂರಿಗೆ ಹೋಗಿ ಅರಸರನ್ನು ಕರೆಯಿಸಿ ಪರಿಸ್ಥಿತಿಯನ್ನು ವಿವರಿಸಿ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದು, ಚುನಾವಣೆಯಲ್ಲಿ ಸ್ಪರ್ಧಿಸುವುದು ಅರಸು ಅವರಿಗೆ ಅನಿವಾರ್ಯವಾಯಿತು.

ಸ್ವತಂತ್ರ ಭಾರತದ ೧೯೫೨ರಲ್ಲಿ ನಡೆದ ಚುನಾವಣೆ ಪ್ರಥಮ ಮಹಾಚುನಾವಣೆಯಾಗಿದ್ದು, ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಂಗಲ್‌ ಹನುಮಂತಯ್ಯನವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದರು. ಆಗ ದೇವರಾಜ ಅರಸು ಅವರು ಹನುಮಂತಯ್ಯನವರ ಅತ್ಯಂತ ನಿಕಟವರ್ತಿಗಳಾಗಿದ್ದರು. ಅರಸು ಅವರು ಈ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೈಸೂರು ರಾಜ್ಯದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ಆಗ ಅರಸು ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿತು. ಅದೇ ರೀತಿ ೧೯೫೭ರ ದ್ವಿತೀಯ ಚುನಾವಣೆಯ ಸಂದರ್ಭದಲ್ಲಿಯೂ ಹುಣಸೂರಿನ ಜನ ಅರಸರನ್ನು ನಿರಾಯಾಸವಾಗಿ ಆರಿಸಿ ತಂದು ಅರಸರ ಮೇಲಿದ್ದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಅಲ್ಲಿಂದಾಚೆಗೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಆರು ಬಾರಿ ಅದೇ ಕ್ಷೇತ್ರವನ್ನು ಪ್ರತಿನಿಧಿಸಿ ಆಯ್ಕೆಯಾಗುತ್ತಾ ಬಂದರು. ೧೯೮೨ರವರೆಗ ಮೂರು ದಶಕಗಳ ಕಾಲ ಅವರ ರಾಜಕೀಯ ಕ್ಷೇತ್ರ ವಿಸ್ತರಿಸಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಅವರು ನಡೆದ ಈ ಹಾದಿಯಲ್ಲಿ ಅದೆಷ್ಟೋ ಮಿತ್ರರು ಶತೃಗಳಾದರು, ಶತೃಗಳು ಮಿತ್ರರಾದರು. ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಹಿರಿಯರ ಆಶೀರ್ವಾದದಿಂದ ಹಾಗೂ ಮಿತ್ರರ ಸಹಾಯದಿಂದ ಅವರು ರಾಜಕೀಯ ಉತ್ತುಂಗಕ್ಕೇರಿದ್ದನ್ನು ತಮ್ಮ ಕೊನೆಯ ಜೀವಿತದವರೆಗೂ ಮರೆತಿರಲಿಲ್ಲ. ರಾಜಕಾರಣದಲ್ಲಿ ತಮಗೆ ಅಡ್ಡಗಾಲು ಹಾಕಿದವರನ್ನು ಹಾಗೂ ಹಿಂದಕ್ಕೆಳೆದವರನ್ನೂ ಸಹ ಅರಸರು ತಮ್ಮ ಸ್ನೇಹಿತರೆಂದೇ ಭಾವಿಸಿಕೊಳ್ಳುತ್ತಿದ್ದರು. ಏಕೆಂದರೆ ವಿರೋಧ ಇಲ್ಲದೆ ಹೋದರೆ, ಪೌರುಷತನ ಕಳೆಗುಂದುತ್ತಾ ಹೋಗುವುದೆಂಬ ವಾದ ಅರಸು ಅವರದಾಗಿತ್ತು.

೧೯೫೨ರಿಂದ ೧೯೬೨ರ ಮಧ್ಯಭಾಗದಲ್ಲಿ ಬಹುಶಃ ಅರಸರ ಜೀವನದಲ್ಲಿ ಸಂದಿಗ್ಧ ಸಮಯ ತಲೆದೋರಿತ್ತು ಎಂದು ಹೇಳಬಹುದು. ೧೯೫೭ರಲ್ಲಿ ಬಿ.ಡಿ.ಜತ್ತಿಯವರ ಅಧ್ಯಕ್ಷತೆಯಲ್ಲಿ ನೇಮಿಸಲ್ಪಟ್ಟ ಭೂ ಸುಧಾರಣಾ ಸಮಿತಿಯ ಸದಸ್ಯರಾಗಿ ಭೂರಹಿತ ರೈತರ ಹಿತಸಾಧಿಸಬೇಕೆಂಬ ಅಪೇಕ್ಷೆ ಅರಸು ಅವರಿಗೆ ಪ್ರಬಲವಾಗಿತ್ತಾದರೂ ಪಟ್ಟಭದ್ರ ಹಿತಾಸಕ್ತಿಗಳು ಈ ಸೆಲೆಕ್ಟ್‌ ಕಮಿಟಿಗೆ ಆಯ್ಕೆಗೊಳ್ಳಲು ಅವಕಾಶ ಕೊಡಲಿಲ್ಲ. ಅದರಿಂದಾಗಿ ಅವರಿಗೆ ನಿರಾಶೆಯೇನು ಆಗಲಿಲ್ಲ. ಮುಂದೆ ೧೯೬೨ರಲ್ಲೂ ಹುಣಸೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅವಿರೋಧವಾಗಿ ಗೆದ್ದುಬಂದರು. ಅದೇ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಅನಿರೀಕ್ಷಿತ ಪರಾಭವ ಅನುಭವಿಸಿದರು. ಕಾರಣ ಬಿ.ಡಿ.ಜತ್ತಿ ಮತ್ತು ನಿಜಲಿಂಗಪ್ಪ ಗುಂಪುಗಳ ಮಧ್ಯ ಇರುವ ಅಂತಃಕಲಹ. ಕುತೂಹಲವೆಂದರೆ ನಿಜಲಿಂಗಪ್ಪ ಅವರ ಅನುಯಾಯಿಗಳೆಲ್ಲ ಗೆದ್ದು ಬಂದಿದ್ದರು ಎಂಬುವುದು ಈ ಚುನಾವಣೆಯ ಇನ್ನೊಂದು ವಿಶೇಷ. ನಿಜಲಿಂಗಪ್ಪನವರೇ ಶಾಸಕಾಂಗ ಪಕ್ಷದ ನಾಯಕರಾಗಬೇಕು ಹಾಗೂ ಅವರೇ ಮುಖ್ಯಮಂತ್ರಿಯಾಗಬೇಕೆಂದು ಬಹುಮತವು ವ್ಯಕ್ತವಾಯಿತು. ಈ ಚುನಾವಣೆಯಲ್ಲಿ ಸೋತಿದ್ದರೂ ಗೆದ್ದಂತೆಯೇ ಎಂಬ ಅಭಿಪ್ರಾಯ ಕಾಂಗ್ರೆಸ್‌ನ ಹಲವರಲ್ಲಿ ಮೂಡಿದ್ದರಿಂದ ಬಹುಮತ ಅಭಿಪ್ರಾಯದ ಮೇಲೆ ಅವರು ಮುಖ್ಯಮಂತ್ರಿಯಾಗಲು ಸಿದ್ಧರಾದದ್ದು ರಾಜಕಾರಣದಲ್ಲಿ ಸಂದಿಗ್ಧ ಸ್ಥಿತಿಯುಂಟಾಗಲು ಕಾರಣವಾಯಿತು. ಆದರೆ “ಜನತಂತ್ರ ರಾಜ್ಯ ವ್ಯವಸ್ಥೆಯ ಚುನಾವಣೆಯಲ್ಲಿ ಸೋತವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಸಲ್ಲದು. ಇಂತಹ ವರ್ತನೆಯಿಂದ ಮುಖ್ಯಮಂತ್ರಿ ಪದವಿಗೆ ಅಗತ್ಯವಾದ ನೈತಿಕ ಶಕ್ತಿ ಇರುವುದಿಲ್ಲ” ಎಂದು ದಿಟ್ಟತನದಿಂದ ನೇರವಾಗಿ ನಿಜಲಿಂಗಪ್ಪ ಅವರಂತಹ ಹಿರಿಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದನ್ನು ಗಮನಿಸಿದರೆ ಅರಸು ಅವರ ರಾಜಕೀಯ ದಿಟ್ಟತನಕ್ಕೆ ಒಂದು ನಿದರ್ಶನಸಿಗುವುದು. ಇದರಿಂದ ಅರಸು ಅವರು ಅಂದಿನ ಕರ್ನಾಟಕ ರಾಜಕಾರಣದ ವ್ಯವಸ್ಥೆಯಲ್ಲಾಗುವ ಅನೀತಿಯುತವಾದ ಪಲ್ಲಟಗಳನ್ನು ಖಂಡಿಸುವ ಸ್ಥೈರ್ಯವನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಅರಸು ಅವರ ಈ ಮಾತಿಗೆ ಬೆಲೆಕೊಟ್ಟಂತೆ ಕಂಡುಬಂದ ನಿಜಲಿಂಗಪ್ಪನವರು ಅಧಿಕಾರವನ್ನು ವಹಿಸಿಕೊಳ್ಳಲು ನಿರಾಕರಿಸಿದರು. ಆಗ ರಾಜ್ಯದ ಮುಖ್ಯಮಂತ್ರಿಯಾಗಿ ಎಸ್‌.ಆರ್. ಕಂಠಿಯವರು ತಾತ್ಕಾಲಿಕವಾಗಿ ಅಧಿಕಾರವನ್ನು ವಹಿಸಿಕೊಂಡರು. ಅಲ್ಲಿಯತನಕ ಅರಸು ಅವರನ್ನ ಕಾಂಗ್ರೆಸ್‌ ಗೌಣವಾಗಿಯೇ ಕಂಡಿತೆ ಹೊರತು, ಅವರು ಒಬ್ಬ ಚಿಂತನಾಶೀಲ ರಾಜಕಾರಣಿ ಎನ್ನುವುದನ್ನು ಯಾರೂ ಗ್ರಹಿಸಿಕೊಂಡಿರಲಿಲ್ಲ ಎಂಬುದು ಕಟು ವಾಸ್ತವದ ಸಂಗತಿ. ಮುಂದೆ ೧೯೬೨ ಜೂನ್‌ ತಿಂಗಳಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಎಸ್ಸೆನ್‌ ಅವರು ಗೆದ್ದುಬಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ನಿಜಲಿಂಗಪ್ಪನವರು ಅರಸು ಅವರಿಗೆ ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನವನ್ನು ನೀಡಿದರು. ಅರಸು ಅವರು ಸಾರಿಗೆ, ಪಶುಸಂಗೋಪನೆ, ವಾರ್ತಾ ಇಲಾಖೆ, ರೇಷ್ಮೆ ಖಾತೆಗಳ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ೧೯೬೭ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರಸು ಅವರಿಗೆ ಪಕ್ಷದ ಟಿಕೆಟ್‌ ಸಿಗುವುದರ ಬಗೆಗೆ ಗುಮಾನಿ ಶುರುವಾಯಿತು. ಮತ್ತು ಟಿಕೇಟ್‌ ತಪ್ಪಿಸುವ ಎಲ್ಲಾ ಸಂಚುಗಳನ್ನು ಮಾಡಲಾಯಿತು. ಆದರೆ ದೇವರಾಜ ಅರಸು ಅವರು ಕಾಮರಾಜ್‌ ಅವರಿಂದಲೇ ಪಕ್ಷದ ಟಿಕೆಟ್‌ ಪಡೆದು ಮತ್ತೆ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವುದರೊಂದಿಗೆ ಚರಿತ್ರೆಯನ್ನೇ ನಿರ್ಮಿಸಿದರು. ಇದೇ ಸಂದರ್ಭದಲ್ಲಿ ನಿಜಲಿಂಗಪ್ಪ ಅವರು ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ವೀರೇಂದ್ರ ಪಾಟೀಲ್‌ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಆದರು. ಆಗ ದೇವರಾಜ ಅರಸರನ್ನು ಬೇಕೆಂದೇ ಮೂಲೆಗುಂಪು ಮಾಡಲಾಯಿತು. ಬಹುಶಃ ಅರಸು ಅವರ ರಾಜಕೀಯ ಜೀವನ ಇನ್ನು ಮುಂದೆ ಮುಗಿದ ಅಧ್ಯಾಯ ಎಂದು ಪತ್ರಿಕೆಗಳು ಸುದ್ಧಿ ಮಾಧ್ಯಮದಲ್ಲಿ ಪ್ರಕಟಿಸತೊಡಗಿದವು. ಆದರೆ ಈ ಬಾರಿಯೂ ಹೊಸ ಸಚಿವ ಸಂಪುಟದಲ್ಲಿ ಅರಸು ಅವರಿಗೆ ಅಧಿಕಾರ ದೊರೆಯಿತಾದರೂ, ಅಷ್ಟೊಂದು ಮಹತ್ವವಲ್ಲದ ಕಾರ್ಮಿಕ ಖಾತೆಯನ್ನು ಅವರಿಗೆ ನೀಡಲಾಗಿತ್ತು. ಮೊದಲಿನಿಂದಲೂ ರಾಜಕೀಯ ಕ್ಷೇತ್ರದಲ್ಲಿ ಅನರ್ಹರನ್ನು ಅರ್ಹರನ್ನಾಗಿ, ಅರ್ಹರನ್ನು ಅನರ್ಹರನ್ನಾಗಿ ಮಾಡುವಂತಹ ಶೋಚನೀಯವಾದ ರಾಜಕೀಯ ವ್ಯವಸ್ಥೆಯು ಬೆಳೆದುಕೊಂಡು ಬಂದಿರುವುದಕ್ಕೆ ಕರ್ನಾಟಕ ರಾಜಕಾರಣವೂ ಒಂದು ನಿದರ್ಶನವಾಗಿದೆ.

ದೇವರಾಜ ಅರಸು ಅವರ ಮೇಲಾದ ಸೈದ್ಧಾಂತಿಕ ಪ್ರೇರಣೆಗಳು

ದೇವರಾಜ ಅರಸು ಅವರು ಸೈದ್ಧಾಂತಿಕವಾಗಿ ರೂಪುಗೊಳ್ಳಲು ಪ್ರೇರಣೆ ನೀಡಿದ್ದು ಸಾಹಿತ್ಯ ಕ್ಷೇತ್ರ ಹಾಗೂ ಸಮಾಜವಾದಿ ನಾಯ ಕರ ಆದರ್ಶ ತತ್ವಗಳು. ಈ ಸಮಾಜವಾದಿ ಸೈದ್ಧಾಂತಿಕ ತತ್ವಗಳ ಮೇಲೆ ಹೆಚ್ಚು ನಂಬಿಕೆಯಿಟ್ಟಿದ್ದ ಅರಸು, ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತರಲು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದ ತಳಸಮುದಾಯಗಳನ್ನು ಮೇಲೆತ್ತಲು ಈ ಸಮಾಜವಾದಿ ಆದರ್ಶಗಳನ್ನು ಅನುಷ್ಠಾನಕ್ಕೆ ತರುವುದರೊಂದಿಗೆ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದರು.

ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿ ಶೋಷಣೆ ಮಾಡುವುದನ್ನು ಕೊನೆಗಾಣಿಸುವುದಕ್ಕೆ ಸಮನಾಗಿ, ಒಂದು ರಾಷ್ಟ್ರವನ್ನು ಮತ್ತೊಂದು ರಾಷ್ಟ್ರವು ಶೋಷಣೆ ಮಾಡುವುದನ್ನು ಕೊನೆಗಾಣಿಸುತ್ತದೆ. ಒಂದು ರಾಷ್ಟ್ರದೊಳಗೆ ಅಥವಾ ಒಂದು ಸಮಾಜದಲ್ಲಿ ಸಂಘರ್ಷವು ಮರೆಯಾಗುವುದಕ್ಕೆ ಅನುಗುಣವಾಗಿ ಒಂದು ರಾಷ್ಟ್ರವಾಗಿ ಮತ್ತೊಂದು ರಾಷ್ಟ್ರದ ವಿರೋಧವಾಗಿ ವರ್ತಿಸುವುದು ಕೊನೆಗಾಣುತ್ತದೆ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದ ಅರಸು, ಸಾಮಾಜಿಕ ಅಸಮತೋಲನವನ್ನು ತೊಡೆದು ಹಾಕುವಲ್ಲಿ ಈ ಮೇಲಿನ ಸಿದ್ಧಾಂತದಿಂದ ಪ್ರಭಾವಿತರಾದವರು. ಈ ಮಾನವತಾವಾದದ ಹಿನ್ನೆಲೆಯಲ್ಲಿ ಕರ್ನಾಟಕದ ರೈತ, ಕೂಲಿಕಾರರ, ಹಿಂದುಳಿದವರ ಮತ್ತು ದಲಿತರ ಏಳಿಗೆಗೆ ಹಲವಾರು ಯೋಜನೆಗಳನ್ನು ರೂಪಿಸಿ ಸಮಗ್ರ ಕರ್ನಾಟಕದ ಪ್ರಗತಿಗೆ ಶ್ರಮಿಸಿದ ಧೀಮಂತ ನಾಯಕ, ನವ ಸಮಾಜದ ಹರಿಕಾರ ದೇವರಾಜ ಅರಸು. ಜೊತೆಗೆ ಅರಸು ಅವರು ತಮ್ಮ ಉನ್ನತ ವ್ಯಾಸಂಗದಲ್ಲಿನ ಸಮಯದಲ್ಲಿ ಸುಭಾಷ್‌ ಚಂದ್ರ ಬೋಸರನ್ನು ತಮ್ಮ ಆರಾಧ್ಯದೈವವನ್ನಾಗಿ ಸ್ವೀಕರಿಸಿದ್ದರು. ವೈಚಾರಿಕವಾಗಿ ಮಹಾತ್ಮಗಾಂಧಿ, ಅಂಬೇಡ್ಕರ್, ಆಚಾರ್ಯ ವಿನೋಭಭಾವೆ ಅವರ ಚಿಂತನೆಗಳನ್ನು ಇಷ್ಟ ಪಡುತ್ತಿದ್ದರು. ಹಾಗೆಯೇ ಕಾರ್ಲ್‌ಮಾರ್ಕ್ಸ್, ಲೆನಿನ್‌, ಎಂ.ಎನ್‌. ರಾಯ್‌, ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರಂಥ ಸಮಾಜವಾದಿ ನಾಯಕರುಗಳ ವಿಚಾರ ಮತ್ತು ಆದರ್ಶಗಳು ಅರಸು ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದವು.

ಅಂಬೇಡ್ಕರ್ ಹೇಳಿದಂತೆ, ರಾಜಕೀಯ “ಸ್ವಾತಂತ್ಯ್ರವು ಆರ್ಥಿಕ, ಸಾಮಾಜಿಕ ಸಮಾನತೆಯನ್ನು ತರಲು ವಿಫಲವಾದರೆ, ಅನ್ಯಾಯಕ್ಕೆ ಒಳಗಾದ ಜನರು ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಬಹುದು” ಎನ್ನುವ ಮಾತು ದೇವರಾಜ ಅರಸು ಅವರ ಮನ ಕಲಕಿರಬೇಕು. ಅಂತೆಯೇ ಬಡವರ, ದೀನದಲಿತರ, ಹಿಂದುಳಿದವರ ಪರವಾಗಿ ಸದಾ ಎಚ್ಚರದಿಂದ ಚಿಂತಿಸುವಂತೆ ಮಾಡಿರಬೇಕು. ಈ ಹಿನ್ನೆಲೆಯಲ್ಲಿ ಕಾಳಜಿ ಎಂದರೆ ಸಮಗ್ರ ಸಾಮಾಜಿಕ ಬದಲಾವಣೆ ಎಂಬರ್ಥದಲ್ಲಿ ಅವರು ಈ ಬಡ ವರ್ಗಗಳ ಪರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು.

ರಾಜಕೀಯ ಬದುಕಿನಲ್ಲಿ ಅಸಾಧಾರಣ ಏರಿಳಿತಗಳನ್ನು ಕಂಡ ಅರಸು ಅವರ ಸೋಲುವಾಗಲೂ ಗೆಲ್ಲುವ ಗಟ್ಟಿತನ ತೋರುತ್ತಿದ್ದ ಅಪರೂಪದ ರಾಜಕಾರಣಿ. ಅಧಿಕಾರದ ದೃಷ್ಟಿಯಿಂದ ದೇವರಾಜ ಅರಸರ ಮೇಲೆ ಪ್ರಭಾವ ಬೀರಿದ್ದು ಕೌಟಿಲ್ಯನ ‘ಅರ್ಥಶಾಸ್ತ್ರ’ಈ ಕುರಿತಂತೆ ಅವರು-

ಅಧಿಕಾರವನ್ನು ಚಲಾಯಿಸಲು, ಅದನ್ನು ಉಳಿಸಿಕೊಳ್ಳಲು ಏನು ಹುಟ್ಟು
ಹಾಕಬೇಕು ಎಂಬುದನ್ನು ಅದರಿಂದ ಕಲಿತುಕೊಂಡೆ

ಎಂದು ಅವರ ಒಡನಾಡಿ ಹಾಗೂ ಖ್ಯಾತ ಲೇಖಕ ಚದುರಂಗರ ಮುಮದೆ ಸ್ವತಃ ಅರಸು ಅವರೇ ಹೇಳಿಕೊಂಡಿದ್ದರು. ಸ್ವತಃ ಚಿಂತನಾಶೀಲರಾಗಿದ್ದ ಅರಸು ಪ್ರಸ್ತುತ ಸಂದರ್ಭದಲ್ಲಿ ‘ವರ್ಗಕ್ಕಿಂತ ಜಾತಿ ಮುಖ್ಯ’ ಎಂಬ ತೀರ್ಮಾನಕ್ಕೆ ಆಗಲೇ ಬಂದಿದ್ದರು ಎಂದು ಕಂಡುಬರುತ್ತದೆ. ಆದ್ದರಿಂದ ಅಧಿಕಾರದ ಅಖಾಡದಲ್ಲಿ ಉಳಿದುಕೊಳ್ಳಲು ವಿವಿಧ ತಂತ್ರಗಳನ್ನು ಬಳಸಿ, ರಾಜಕಾರಣದಲ್ಲಿ ಅಪೂರ್ವ ಮುತ್ಸದ್ದಿತನದ ಧೀಮಂತಿಕೆ ತೋರಿದವರು ಅರಸು.

ಮುಖ್ಯಮಂತ್ರಿಯಾಗಿ ಅರಸು

೧೯೭೨ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ಹೆಚ್ಚಿನ ಬಹುಮತ ದೊರೆಯಿತು. ಅರಸು ಅವರ ರಾಜಕೀಯ ನಿಪುಣತೆ, ದೂರದೃಷ್ಟಿ, ಸಂಘಟನಾ ಶಕ್ತಿಗೆ ಮತ್ತೆ ಯಶಸ್ಸು ದೊರೆಯಿತು. ಅರಸು ಕಾಂಗ್ರೆಸ್‌ ಪಕ್ಷದ ವಿಜಯದ ರೂವಾರಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ಆ ವರ್ಷದ ಮಾರ್ಚ್ ೨೦, ೧೯೭೨ ರಂದು ರಾಜ್ಯದ ಎಂಟನೆಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅದುವರೆಗೂ ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ಸಮುದಾಯಗಳ ಮೇಲ್ಜಾತಿಯ ನಾಯಕರನ್ನು ಹೊರತುಪಡಿಸಿ ಹಿಂದುಳಿದ ವರ್ಗದ ಅರಸು ಮುಖ್ಯಮಂತ್ರಿ ಆಗ ಅಧಿಕಾರ ವಹಿಸಿಕೊಂಡಿದ್ದು ಐತಿಹಾಸಿಕ ಮಹತ್ವದ ಘಟನೆಯೆಂದು ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಲ್ಲಿಂದಲೇ ಕರ್ನಾಟಕ ರಾಜಕಾರಣದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು ಎಂದು ಹೇಳಿದರೆ ತಪ್ಪಾಗಲಾರದು.

ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ರಾಜ್ಯದ ಎಲ್ಲಾ ಅಭಿವೃದ್ಧಿಕಾರ್ಯಗಳಿಗೆ ಪ್ರಗತಿಪರ ತಿರುವು ದೊರೆಯಿತು. ಅಲ್ಲದೆ ಅವುಗಳಿಗೆ ಹೊಸ ಚೈತನ್ಯವನ್ನು ಅರಸು ತುಂಬಿದರು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಯ ವ್ಯವಸ್ಥೆಯಲ್ಲಿ ಹೊಂದಿಕೊಳ್ಳುವಂತೆ ಆಡಳಿತವನ್ನು ರೂಪಿಸಿದರು. ಜೊತೆಗೆ ರಾಜ್ಯಕ್ಕೆ ಸ್ಥಿರ ರಾಜಕೀಯ ನಾಯಕತ್ವ ನೀಡಿ, ಭದ್ರ ಆರ್ಥಿಕ ತಳಹದಿ ಹಾಕಿ, ಸುರಕ್ಷಿತ ಸಾಮಾಜಿಕ ಚೌಕಟ್ಟು ನಿರ್ಮಿಸುವ ಕಾಯಕದಲ್ಲಿ ನಿರತರಾದರು.

ಕರ್ನಾಟಕ ರಾಜಕಾರಣದಲ್ಲಿ ಪಟ್ಟಭದ್ರ ಹಿತಾಸಕ್ತಿಯನ್ನು ಸಡಿಲಿಸಿ ರಾಜ್ಯದ ರಾಜಕೀಯಕ್ಕೆ ಹೊಸ ಪರಿಭಾಷೆ ಬರೆಯಲು ಆರಂಭಿಸಿದರು. ಅದಕ್ಕಾಗಿಯೇ ಅವರು ದೀನ ದಲಿತರು ಅನುಭವಿಸುತ್ತಿದ್ದ ಯಾತನೆ, ಜಾತಿ ಆಧಾರಿತ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದರು.

ರಾಜಕಾರಣದ ಚಿಂತನೆಗಳು ಹಾಗೂ ಸಂಘರ್ಷಗಳು

ಕರ್ನಾಟಕದ ರಾಜಕಾರಣಲ್ಲಿ ನಾಲ್ಕು ದಶಕಗಳ ಕಾಲ ತನ್ನದೇ ಆದ ಛಾಪನ್ನು ಮೂಡಿಸಿದ ವ್ಯಕ್ತಿ ಡಿ. ದೇವರಾಜ ಅರಸು. ರಾಜ್ಯದ ರಾಜಕಾರಣಕ್ಕೆ ಒಂದು ಮಹತ್ತರವಾದ ತಿರುವನ್ನು ಕೊಟ್ಟು, ಜನರ ಮನಸ್ಸಿನಲ್ಲಿ ಬಹುಕಾಲ ಉಳಿಯಬಲ್ಲ ನಾಯಕರು ಇವರಾಗಿದ್ದಾರೆ. ಸ್ವಾತಂತ್ಯ್ರ ನಂತರದಲ್ಲಿ ಎರಡೂವರೆ ದಶಕಗಳ ಕಾಲ ಅಧಿಕಾರದ ಪ್ರಾಬಲ್ಯದಲ್ಲಿ ಮೆರೆದಿದ್ದ ಮೇಲ್ವರ್ಗದವರಾದ ಒಕ್ಕಲಿಗ, ವೀರಶೈವ, ಬ್ರಾಹ್ಮಣರ ಶಕ್ತಿಯನ್ನು ಗಣನೀಯವಾಗಿ ನಿಷ್ಕ್ರಿಯಗೊಳಿಸಿದವರು ಇವರು. ಅಲ್ಲದೆ ಸಮಾಜದ ಹಿಂದುಳಿದವರಲ್ಲಿ ಜಾಗೃತಿ ಮೂಡಿಸಲು ಹಾಗೂ ಪರ್ಯಾಯ ನಾಯಕತ್ವ ಬೆಳೆಸಲು ಅವಿರತವಾಗಿ ಶ್ರಮಿಸಿದ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ.

೧೯೬೯ರ ಪ್ರಾರಂಭದಲ್ಲೇ ರಾಷ್ಟ್ರಮಟ್ಟದ ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಇದರಿಂದಾಗಿ ಆಡಳಿತರೂಢ ಕಾಂಗ್ರೆಸ್‌ ಪಕ್ಷದಲ್ಲಿ ಇಂದಿರಾಗಾಂಧಿಯವರ ನಾಯಕತ್ವದಲ್ಲಿ ಪುರೋಗಾಮಿ(ಯಂಗ್‌ಟರ್ಕ್) ಬಣ, ಹಾಗೆಯೇ ಎಸ್‌. ನಿಜಲಿಂಗಪ್ಪನವರ ನಾಯಕತ್ವದಲ್ಲಿ ಪ್ರತಿಗಾಮಿ(ಸಿಂಡಿಕೇಟ್‌) ಗುಂಪು ಹುಟ್ಟಿಕೊಂಡಿತು. ಅಖಿಲ ಭಾರತ ಮಟ್ಟದ ನಾಯಕರಾಗಿ ವಿಜೃಂಭಿಸಿದ್ದ ನಿಜಲಿಂಗಪ್ಪ ಅವರಿಗೆ ಮೊದಲಿನಿಂದಲೂ ನೆಹರು ಕುಟುಂಬಕ್ಕೂ ಅಷ್ಟಕಷ್ಟೆ ನಂಟು ಇದ್ದಿತು ಮತ್ತು ಮೇಲಾಗಿ ಒಳ ಒಳಗೆ ಆಂತರಿಕ ಒಳ ಜಗಳಗಳಿದ್ದವು. ಈ ವಿರಸಗಳು ಇಂದಿರಾ ಗಾಂಧಿಯವರ ಕಾಲದಲ್ಲೂ ಮುಂದುವರಿಯಿತು. ಇದರಿಂದ ಪಕ್ಷದಲ್ಲಿ ಗುಂಪುಗಾರಿಕೆ ತಲೆದೋರಿತು. ಕೊನೆಗೆ ೧೯೬೯ರಲ್ಲಿ ಬೆಂಗಳೂರಿನ ಗಾಜಿನಮನೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ಭಿನ್ನಾಭಿಪ್ರಾಯಗಳು ತಾರಕಕ್ಕೇರಿ ಕಾಂಗ್ರೆಸ್‌ ಇಬ್ಭಾಗವಾಯಿತು. ಈ ರಾಷ್ಟ್ರೀಯ ಕಾಂಗ್ರೆಸ್ಸಿನ ವಿಭಜನೆಯ ಪರಿಣಾಮ ಕರ್ನಾಟಕದ ಮೇಲೂ ದಟ್ಟವಾದ ಪ್ರಭಾವ ಬೀರಿತು. ಸಹಜವಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್‌ ಎರಡು ಭಾಗವಾಯಿತು. ಆ ಸಂದರ್ಭದಲ್ಲಿ ಬಹಳಷ್ಟು ಜನ ನಿಜಲಿಂಗಪ್ಪನವರ ನೆರಳಾಗಿ ಹಿಂಬಾಲಿಸಿದರು. ಅದರಲ್ಲಿ ದೇವೇಗೌಡರು, ವೀರೇಂದ್ರ ಪಾಟೀಲ್‌, ರಾಮಕೃಷ್ಣ ಹೆಗೆಡೆಯವರು ಸಹ ಇದ್ದರು. ಆಗ ದೇವರಾಜ ಅರಸು ಅವರು ಇಂದಿರಾ ಕಾಂಗ್ರೆಸ್ಸನ್ನು ಸೇರಿಕೊಂಡರು. ಇದು ಅರಸು ಅವರನ್ನು ರಾಜ್ಯ ರಾಜಕಾರಣದಲ್ಲಿ ಮೇಲೆ ಬರಲು ಭದ್ರಬುನಾದಿ ಹಾಕಿಕೊಟ್ಟಿತು ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಿಕೊಳ್ಳಬಹುದು. ಕಾಂಗ್ರೆಸ್‌ ಇಬ್ಬಾಗವಾದಾಗಲೂ ವೀರೇಂದ್ರಪಾಟೀಲ್‌ರು ತಟಸ್ಥರಾಗಿ ಉಳಿದು ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಿದರಲ್ಲದೆ ೧೯೭೧ರ ವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರು.

ಕಾಂಗ್ರೆಸ್‌ ವಿಭಜನೆಯು ಮೈಸೂರು ರಾಜಕೀಯ ಪರಿಸ್ಥಿತಿಗೆ ತಡೆಯುಂಟು ಮಾಡಲಿಲ್ಲವಾದರೂ ರಾಜ್ಯದ ರಾಜಕಾರಣದಲ್ಲಂತೂ ತೀವ್ರವಾದಿ ತಿರುವನ್ನುಂಟು ಮಾಡಿತು. ದೇವರಾಜ ಅರಸು ಅವರು ರಾಜ್ಯ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಯಿತು. ಬಹುಶಃ ಅವರು ಇಲ್ಲಿಂದಲೇ ಹೊಸ ರಾಜಕಾರಣದ ಶಕ್ತಿಯ ಬೆಳವಣಿಗೆಯನ್ನು ಕಾಣಲಾರಂಭಿಸಿದರು. ಈ ಶಕ್ತಿಯ ಬೆಳವಣಿಗೆಗಾಗಿ ಅವರು ಕ್ರಮ ಕೈಗೊಂಡಿದ್ದು ಅವರು ಅಧಿಕಾರದ ಗದ್ದುಗೆಗೆ ಏರಿದ ನಂತರವೆ. ‘ಸಂಸ್ಥಾ ಕಾಂಗ್ರೆಸ್‌’ನ ಪ್ರಮುಖರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲರಂಥ ಸಮರ್ಥ ನಾಯಕರ ಮಧ್ಯೆ ಇಂದಿರಾ ಕಾಂಗ್ರೆಸನ್ನು ಕಟ್ಟುವುದು ಸುಲಭವಲ್ಲದಂಥ ಸಂದರ್ಭದಲ್ಲಿ ಅರಸು ಅವರು ಇದನ್ನು ಸಾಧ್ಯವಾಗಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಸಂಘಟನೆಯ ವಿಚಾರಧಾರೆ ಮತ್ತು ಕಾರ್ಯಕ್ಷಮತೆಯ ಬದಲಿಗೆ ವೈಯಕ್ತಿಕ ಅನುಸರಣೆ ನೆಲೆಯಲ್ಲಿ ಕಾಂಗ್ರೆಸ್‌ ಒಳಗೆ ಬೆಂಬಲ ಸೂಚಿಸಿತು. ಈ ಕಾಂಗ್ರೆಸ್‌ ವಿಭಜನೆ ಬಹುಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಜಾತಿಗಳವರು ಒಂದು ರೀತಿಯಲ್ಲಿ ರಾಜಕೀಯವಾಗಿ ಧೃವೀಕರಣಗೊಳ್ಳಲು ಸಹಾಯಕವಾಯಿತು.

೧೯೬೯ನೇ ಇಸವಿಯಿಂದ ಕಾಂಗ್ರೆಸ್‌ ಪಕ್ಷದಲ್ಲಿ ಹಳಬರು, ಹಿರಿಯರಿಂದ ಕೂಡಿದ್ದ ನಿಜಲಿಂಗಪ್ಪನವರ ಗುಂಪಿಗೂ ಹೊಸಬರು, ಪ್ರಮುಖ ಉತ್ಸಾಹಿ ನಾಯಕರಿಂದ ಕೂಡಿದ್ದ ಪ್ರಧಾನಿ ಇಂದಿರಾ ಗಾಂಧಿಯವರ ಗುಂಪಿಗೂ ತಾತ್ವಿಕ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮೂಡಿಬರತೊಡಗಿದವು. ಜುಲೈ ೧೦.೧೯೬೯ರಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ಭಿನ್ನಾಭಿಪ್ರಾಯಗಳು ಪೂರ್ಣ ಪ್ರಮಾಣದಲ್ಲಿ ಗೋಚರಿಸತೊಡಗಿದವು. ಇಂಥ ಹಲವು ಭಿನ್ನಾಭಿಪ್ರಾಯಗಳೇ ರಾಷ್ಟ್ರೀಯ ಕಾಂಗ್ರೆಸ್‌ನ ವಿಭಜನೆಯನ್ನು ಮತ್ತಷ್ಟು ತೀವ್ರಗೊಳಿಸಿದವು. ಹೀಗಾಗಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಕಾಂಗ್ರೆಸ್‌ ಪಕ್ಷ ಒಡೆದು ಹೋಳಾಯಿತು. ೨೨.೧೧.೧೯೬೯ರಂದು ದೆಹಲಿಯಲ್ಲಿ ಸೇರಿದ್ದ ವಿಶೇಷ ಕಾಂಗ್ರೆಸ್‌ ಅಧಿವೇಶನದಲ್ಲಿ ಇಂದಿರಾ ಗಾಂಧಿಯವರು ಎಸ್‌.ನಿಜಲಿಂಗಪ್ಪ ಅವರನ್ನು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಿದರು. ಪ್ರತಿಯಾಗಿ ನಿಜಲಿಂಗಪ್ಪ ಅವರು ೨೦.೧೨.೧೯೬೯ರಂದು ಅಹಮದಾಬಾದ್‌ನಲ್ಲಿ ತಮ್ಮ ಬೆಂಬಲಿಗರನ್ನು ಸೇರಿಸಿ ಕಾಂಗ್ರೆಸ್‌ ಅಧಿವೇಶನ ನಡೆಸಿದರು. ಇದೇ ಮುಂದೆ “ಸಂಸ್ಥಾ ಕಾಂಗ್ರೆಸ್‌” ಎಂದು ಹೆಸರಾಯಿತು. ಈ ಸಭೆಯಲ್ಲಿ ಪಕ್ಷವನ್ನು ಉಳಿಸಿ ಬೆಳೆಸಲು ನಿರ್ಧರಿಸಲಾಯಿತು. ಮತ್ತೆ ನಿಜಲಿಂಗಪ್ಪನವರೇ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾ ಆಯೋಗ ಈ ಪಕ್ಷವನ್ನು ಐ.ಎನ್‌.ಸಿ (ಒ) ಎಂದು ಗುರುತಿಸಿತು. (ಒ. ಎಂದರೆ ಆರ್ಗನೈಸೇಷನ್‌ ಅಥವಾ ಸಂಸ್ಥೆ) ಹೀಗೆ ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಹುಟ್ಟಿಕೊಂಡ ಈ ಪಕ್ಷಕ್ಕೆ “ಸಂಸ್ಥಾ ಕಾಂಗ್ರೆಸ್‌” ಎಂಬ ಹೆಸರು ರೂಢಿಗೆ ಬಂದಿತು.

ರಾಷ್ಟ್ರೀಯ ಕಾಂಗ್ರೆಸ್‌ ಒಡೆದು ಇಬ್ಭಾಗವಾದ ನಂತರ ದೇವರಾಜ ಅರಸು ಮತ್ತು ಅವರ ಬೆಂಬಲಿಗರು ಇಂದಿರಾ ಗಾಂಧಿಯವರನ್ನು ಬೆಂಬಲಿಸಿದರು. ಅದುವರೆಗೂ ‘ಎಲೆ ಮರೆಕಾಯಿ’ ನಂತಿದ್ದ ಅರಸು ಕರ್ನಾಟಕದ ಅತಿರಥ ಮಹಾರತರನ್ನು ಹಿಂದೆ ಸರಿಸಿ ಬೆಳಕಿಗೆ ಬಂದರು. ಈ ದಿಕ್ಕಿನಲ್ಲಿ ಅರಸು ಅವರಿಗೆ ಸಹಕಾರ ನೀಡಿದವರು ಎಂ.ವಿ.ಕೃಷ್ಣಪ್ಪ, ಕೆಂಗಲ್‌ಹನುಮಂತಯ್ಯ, ಕೊಲ್ಲೂರು ಮಲ್ಲಪ್ಪ, ಕೆ.ಎಚ್‌. ಪಾಟೀಲ್‌, ಸಿದ್ದವೀರಪ್ಪನವರಂಥ ಹಿರಯನಾಯಕರು, ಮುಖ್ಯವಾಗಿ ಅರಸು ಅವರಿಗೆ ರಾಜಕೀಯ ಗುರುವಿನಂತಿದ್ದ ಚೆನ್ನಯ್ಯನವರೂ ಕೂಡ ತಮ್ಮ ಪ್ರಜಾಪಕ್ಷವನ್ನೇ ತನ್ನ ಶಿಷ್ಯನ ಪಕ್ಷದಲ್ಲಿ ವಿಲೀನಗೊಳಿಒಸಿ ಅರಸು ಅವರ ನೈತಿಕ ಶಕ್ತಿಯನ್ನು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಅರಸು ಅವರು ಇಂದಿರಾ ಕಾಂಗ್ರೆಸ್‌ (ಆರ್ ಆಡಳಿತ ಕಾಂಗ್ರೆಸ್‌)ನ ಮುಂದಾಳು ಹಾಗೂ ಪಕ್ಷದ ವ್ಯವಸ್ಥಾಪಕರಾಗಿ ಹಗಲಿರುಳೆನ್ನದೆ ದುಡಿದು ಜನಶಕ್ತಿಯನ್ನು ಸಂಘಟಿಸಿದ್ದು ಸಾಮಾನ್ಯ ಸಂಗತಿಯೇನಲ್ಲ. ಆಗ ಅವರಿಗೆ ಎದುರಾದ ಅಡ್ಡಿ-ಆತಂಕಗಳು ಹಾಗೂ ಸವಾಲುಗಳು ಹಲವಾರು. ಇವುಗಳನ್ನು ಅವರು ಸುಲಭವಾಗಿ ಹಾಗೂ ಶಾಂತ ಚಿತ್ರದಿಂದ ಬಗೆಹರಿಸಿದ್ದು ಅವರಲ್ಲಿದ್ದ ದೃಢತೆ ಮತ್ತು ಧಕ್ಷತೆಯನ್ನು ಸೂಚಿಸುತ್ತದೆ.