ರಾಜ್ಯದಲ್ಲಿ ಆರ್ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎನ್ನುವ ಪ್ರಶ್ನೆಗಳು ಕಾಂಗ್ರೆಸ್‌ ಪಾಳೆಯದಲ್ಲಿ ಕೇಳಿಬಂದವು. ಕೆಂಗಲ್‌ ಹನುಮಂತಯ್ಯ, ಎಚ್‌.ಸಿದ್ಧವೀರಪ್ಪನವರಂಥ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದರು. ಯಾವುದೇ ಪಕ್ಷದಲ್ಲಾಗಲಿ ಅಂದು ಒಕ್ಕಲಿಗ, ಲಿಂಗಾಯತರ ಪ್ರಾಬಲ್ಯವೇ ಹೆಚ್ಚು. ಇಂಥ ಸಂದರ್ಭದಲ್ಲಿ ಮೈನಾರಿಟಿ ಕೋಮಿನವರಾದ ಅರಸು ಆರ್. ಕಾಂಗ್ರೆಸ್‌ ಸ್ಥಾನಕ್ಕೆ ಅಧ್ಯಕ್ಷರಾಗಿ ಆಯ್ಕೆ ಆದದ್ದು, ಆಶ್ಚರ್ಯದ ಸಂಗತಿಯೇ ಸರಿ. ಅದುವರೆಗೂ ಎರಡೂ ಪ್ರಬಲ ಕೋಮುಗಳ ಅಚಲ ಬೆಂಬಲವನ್ನೇ ನಂಬಿ ಬದುಕಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೇತನವೊಂದು ದೊರಕಿತು. ಇಲ್ಲಿಂದಲೇ ಅರಸು ನಾಯಕತ್ವದಲ್ಲಿ ಕರ್ನಾಟಕದ ರಾಜಕಾರಣಕ್ಕೆ ಒಂದು ಹೊಸ ತಿರುವು ದೊರಕಿತು.

ಮೈಸೂರಿನಲ್ಲಿ ‘ಆರ್ ಕಾಂಗ್ರೆಸ್‌’ನ ವಿರೋಧಿ ಬಣವಾದ ‘ಸಂಸ್ಥಾ ಕಾಂಗ್ರೆಸ್‌’ಗೆ ನಿಷ್ಟವಾದ ವೀರೇಂದ್ರೆ ಪಾಟೀಲ್‌ರ ಸರಕಾರ ಅಸ್ತಿತ್ವದಲ್ಲಿತ್ತು. ಸಂಸ್ಥಾ ಕಾಂಗ್ರೆಸ್‌ನ ಅಧ್ಯಕ್ಷರಾದ ನಿಜಲಿಂಗಪ್ಪನವರು ೧೯೭೧ರ ಚುನಾವಣೆಯಲ್ಲಿ ಆಡಳಿತ ಕಾಂಗ್ರಸ್‌ನ್ನು ಎದುರಿಸಲು ವಿರೋಧಿ ಮೈತ್ರಿಕೂಟ ರಚನೆಗೆ ಬಹಳ ಪ್ರಾಧಾನ್ಯತೆಯನ್ನು ನೀಡಿದ್ದರು. ಆದರೆ, ಇದು ಯಾವುದೇ ಫಲ ನೀಡಲಿಲ್ಲ. ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಕೆ.ವಿ. ಶಂಕ್ರೆಗೌಡ, ಬಿ. ರಾಚಯ್ಯ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ನಾಗಪ್ಪ ಅವರಂಥ ನಿಷ್ಠಾವಂತ ನಾಯಕರನ್ನೊಳಗೊಂಡಿದ್ದ ಸಂಸ್ಥಾ ಕಾಂಗ್ರೆಸ್‌ ೪.೭. ಮಾರ್ಚ್ ೧೯೭೧ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ೧೬ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಮೈಸೂರು ರಾಜ್ಯದಲ್ಲಿ ಯಾವುದೇ ಒಂದು ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸಫಲವಾಗಲಿಲ್ಲ. ಏಕೆಂದರೆ, ಅರಸು ಅವರ ಸಂಘಟನಾ ಸಾಮರ್ಥ್ಯ ಹಾಗೂ ಇಂದಿರಾ ಗಾಂಧಿಯವರ ಪ್ರಭಾವ ರಾಜ್ಯದಲ್ಲಿ ಹೆಚ್ಚಾಗಿ ಕೆಲಸ ಮಾಡಿತ್ತು. ಇದರಿಂದ ಇಂದಿರಾ ಅವರ ಆಡಳಿತ ಕಾಂಗ್ರೆಸ್‌ ಎಷ್ಟು ಬಲವಾಗಿ ಬೇರೂರಿತ್ತು ಎಂಬುದು ತಿಳಿದು ಬರುತ್ತದೆ. ಇಲ್ಲಿ ಮುಖ್ಯವಾಗಿ ಸಂಸ್ಥಾ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ಹೊಂದಾಣಿಕೆ ಜನರನ್ನು ಸೆಳೆಯುವಲ್ಲಿ ವಿಫಲವಾದದ್ದು ಹಿನ್ನೆಡೆಗೆ ಕಾರಣವಾಯಿತು.

೧೯೭೨ ಮಾರ್ಚ್ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆದವು. ಆಗ ಕರ್ನಾಟಕದಲ್ಲಿ ವಿರೇಂದ್ರ ಪಾಟೀಲರ ‘ಸಂಸ್ಥಾ ಕಾಂಗ್ರೆಸ್‌’ ನೇತೃತ್ವದ ಸರಕಾರ ವಿಸರ್ಜನೆಯಾಗಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಆಗ ಸಂಸ್ಥಾನ ಕಾಂಗ್ರೆಸ್‌ನ ಮುಖಂಡರಾದ ವೀರೇಂದ್ರ ಪಾಟೀಲ, ಡಾ. ನಾಗಪ್ಪ, ಆಳ್ವ, ರಾಮಕೃಷ್ಣ ಹೆಗಡೆ ಮೊದಲಾದ ನಾಯಕರು ಭಾಗವಹಿಸಿದ್ದರು. ಈ ಸಭೆಯಲ್ಲಿ, ಮೈಸೂರು ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್‌ನ್ನು ಮುಂದುವರಿಸಿಕೊಂಡು ಹೋಗಲು, ಪ್ರಬಲವಾದ ರೀತಿಯಲ್ಲಿ ಸಂಘಟನೆಗೊಂಡು ಚುನಾವಣೆಗಳನ್ನು ಎದುರಿಸಲು ಸನ್ನದ್ದರಾಗಲು ತೀರ್ಮಾನಿಸಲಾಯಿತು. ಈ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನ್ನು ಸೋಲಿಸುವ ಇವರ ಯಾವುದೇ ಪ್ರಯತ್ನಗಳು ಫಲಿಸಲಿಲ್ಲ. ಏಕೆಂದರೆ, ಫಲಿತಾಂಶ ಪ್ರಕಟಗೊಂಡಾಗ ಸಂಸ್ಥಾ ಕಾಂಗ್ರೆಸ್‌ ಕೇವಲ ೨೪ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾದದ್ದು ಎಂಬುದನ್ನು ನೋಡಿದರೆ ಆರ್ ಕಾಂಗ್ರೆಸ್‌ನೊಂದಿಗಿನ ಸಂಸ್ಥಾ ಕಾಂಗ್ರೇಸ್‌ನ ಪೈಪೋಟಿ ಎಷ್ಟರ ಮಟ್ಟಿಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೂ ಕೂಡ ಶೇಕಡಾ ೨೬.೨೨ರಷ್ಟು ಮತಗಳನ್ನು ಗಳಿಸಿದ್ದು ನಿಜಕ್ಕೂ ಒಂದು ಸಾಧನೆಯೇ ಸರಿ ಎಂದು ಹೇಳಬಹುದು. ಆದರೆ, ಇಂದಿರಾ ಕಾಂಗ್ರೆಸ್‌ (ಆರ್) ೧೬೫ ಸ್ಥಾನಗಳಲ್ಲಿ ಜಯಗಳಿಸಿತ್ತು. ಇದಕ್ಕೆ ಅರಸು ಅವರ ಸ್ಫೂರ್ತಿ ಹಾಗೂ ಸಂಘಟನಾ ಸಾಮರ್ಥ್ಯವೇ ಕಾರಣ. ಅವರು ಅಧ್ಯಕ್ಷರಾದ ಮೇಲಂತೂ ನಾಡಿನ ಉದ್ದಗಲಕ್ಕೂ ಸಂಚಾರ ಮಾಡಿ ಈ ಸಂಘಟನೆಗೆ ಮತ್ತಷ್ಟು ಬಲ ತುಂಬಿದ್ದರು. ಸಮಾಜದ ಮೇಲ್ವರ್ಗಗಳು ಅದುವರೆಗೂ ಕಡೆಗಣಿಸಿದ ಅಸಂಖ್ಯಾತ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತ ವರ್ಗಗಳಲ್ಲಿ ಉತ್ಸಾಹವನ್ನು ತುಂಬಿದ್ದರು. ಇದರಿಂದಾಗಿ ಮೈತ್ರಿ ಕೂಟದ ವಿರೋಧ ಪಕ್ಷಗಳು ತತ್ತರಿಸಿ ಈ ಚುನಾವಣೆಯಲ್ಲಿ ಸಂಪೂರ್ಣ ಸೋಲನುಭವಿಸಿದವು. ಇದರೊಂದಿಗೆ ಆರ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಇಲ್ಲಿಂದಲೇ ರಾಜ್ಯದ ರಾಜಕಾರಣದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಅರಸು ಅವರು ಆರಂಭಿಸಿದರು. ಅದುವರೆಗೆ ಆಡಳಿತದಲ್ಲಿ ಆರ್ಥಿಕ, ಸಾಮಾಜಿಕ, ಅಸಮಾನತೆ ಅಧಿಕವಾಗಿತ್ತು.

ಆದರೆ, ಅರಸು ಈ ಅಸಮಾನತೆಯನ್ನು ತೊಡೆದು ಹಾಕುವ ಸಂಕಲ್ಪವನ್ನು ತೊಟ್ಟರು. ಇದರಿಂದ ಕಡುಬಡವರಲ್ಲಿ ಕಮರಿಹೋಗಿದ್ದ ಕನಸುಗಳು ಮರು ಹುಟ್ಟು ಪಡೆದುಕೊಂಡವು. ಅವರ ಹಿಂಬಲ ಆಶೋತ್ತರ, ಕನಸುಗಳಿಗೆ ಹೊಸ ಹುಟ್ಟುಕೊಟ್ಟ ಅರಸು ಅವರು “ಸಾಮಾಜಿಕ ಪರಿವರ್ತನೆಗೆ ಹರಿಕಾರ”ರಾದರು. ಅರಸು ಅಧಿಕಾರದಲ್ಲಿ ಇದ್ದಷ್ಟು ದಿನವೂ ನಾಡಿಗೆ, ಕನ್ನಡಕ್ಕೆ ಘನತೆ ತರುವ ಕೆಲಸಗಳನ್ನು ಮಾಡಿದರು. ಮೇಲ್ಜಾತಿಯವರನ್ನು ಓಲೈಸುತ್ತಲೇ ಹಿಂದುಳಿದವರನ್ನು ಉಸಿರಿಗಿಂತಲೂ ಹೆಚ್ಚಾಗಿ ಪ್ರೀತಿಸಿದರು. ಈ ವರ್ಗಗಳ ನಾಯಕರನ್ನು ಗುರುತಿಸಿ ಅವರಲ್ಲಿ ರಾಜಕೀಯ ಪ್ರಜ್ಞೆಯನ್ನು ಬಿತ್ತಿದರು.

ಬೂಸಾ ಪ್ರಕರಣ

೧೯೭೨ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಆರಂಭದಲ್ಲಿಯೇ ಕಠಿಣವಾದ ರಾಜಕಾರಣ ಸಮಸ್ಯೆಯನ್ನು ಎದುರಿಸಬೇಕಾಯಿತು. ಬಹುಶಃ ವಿರೋಧಿಗಳು ಮನಸ್ಸು ಮಾಡಿದರೆ ಎಂಥ ಸಣ್ಣ ವಿಷಯವನ್ನಾದರೂ ಅದನ್ನು ಭೂತಾಕಾರಕ್ಕೆ ಬೆಳೆಸಬಲ್ಲರು ಎಂಬುದಕ್ಕೆ ಬೂಸಾ ಪ್ರಕರಣವೇ ಒಂದು ಉತ್ತಮ ನಿದರ್ಶನವಾಗಿದೆ. ಇದು ದೇವರಾಜ ಅರಸು ಅವರಿಗೆ ಆಗ ದೊಡ್ಡ ರಾಜಕೀಯ ಸಮಸ್ಯೆಯನ್ನು ಒಡ್ಡಿದ ಬಹಳ ಚಿಕ್ಕವಿಷಯವಾಗಿತ್ತು. ೧೯೭೩ರಲ್ಲಿ ಅರಸು ಸಂಪುಟದಲ್ಲಿ ಕಂದಾಯ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪನವರು ಆಧುನಿಕ ಕನ್ನಡ ಸಾಹಿತ್ಯದ ಕುರಿತು ಬಹಿರಂಗವಾಗಿ ವ್ಯಕ್ತಪಡಿಸಿದ ವೈಯಕ್ತಿಕ ಅಭಿಪ್ರಾಯವು ಅರಸು ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಚಕಾರವನ್ನು ತಂದೊಡ್ಡಿತು.

ಅರಸು ಆಡಳಿತ ಕಾಲದ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ಸಾಮಾಜಿಕ, ರಾಜಕೀಯ ಚಿಂತನೆಗಳಲ್ಲಿ ಬಿ. ಬಸವಲಿಂಗಪ್ಪನವರ ಪಾತ್ರ ಮುಖ್ಯವಾದದ್ದು. ಇವರು ಯಾವುದೇ ಮುಲಾಜಿಲ್ಲದೆ ದಲಿತರ ಸುತ್ತ ಹೆಣೆದಿರುವ ಸುಳ್ಳುಗಳನ್ನು ಬಯಲಿಗೆಳೆದು ಅವರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡುವಂತೆ ಮಾಡಿದರು. ಅಷ್ಟೇ ಅಲ್ಲದೆ, ಜಡ್ಡುಗಟ್ಟಿದ ಸಮಾಜದ ಬದಲಾವಣೆಯ ಕನಸುಗಾರರಾಗಿ ಬಸವಲಿಂಗಪ್ಪನವರು ಜಾರಿಗೆ ತಂದೆ ತಲೆಯ ಮೇಲೆ ಮಲ ಹೊರುವ ಪದ್ಧತಿಯ ರದ್ಧತಿ, ನಿವೇಶನ ಹಂಚಿಕೆಯಲ್ಲಿ ಒಂದೇ ಕಡೆ ಒಂದೇ ಜಾತಿಯ ಜನರಿರಕೂಡದೆಂದು ತಂದ ಆಜ್ಞೆ ಮತ್ತು ನಿಗದಿತ ಅವಧಿಯಲ್ಲಿ ಬೆಂಗಳೂರು ಮಹಾನಗರಕ್ಕೆ ಕಾವೇರಿ ನೀರು ಪೂರೈಕೆ ಯೋಜನೆ ಆರಂಭ, ಇವು ಅವರ ಆಗಿನ ಸಾಧನೆಗಳಲ್ಲಿ ಪ್ರಮುಖವಾದಂಥವು. ಇಂಥ ಪ್ರಗತಿಪರ ವಿಚಾರಗಳಿದ್ದ ಮಂತ್ರಿ ಬಿ. ಬಸವಲಿಂಗಪ್ಪನವರನ್ನು ‘ಅಂಬೇಡ್ಕರ್ ಸ್ಕೂಲ್‌ ಆಫ್‌ ಥಾಟ್‌’ ಸಂಸ್ಥೆಯು ‘ಹೊಸ ಅಲೆ’ (ನ್ಯೂವೇವ್‌) ಎಂಬ ವಿಷಯದ ಕುರಿತು ಭಾಷಣ ಮಾಡಲು ಆಹ್ವಾನಿಸಿತ್ತು. ಈ ಸಭೆಯಲ್ಲಿ ಬಹಳ ಸಂಖ್ಯೆಯ ದಲಿತ ವಿದ್ಯಾರ್ಥಿಗಳು, ಪ್ರಗತಿಪರ ಚಿಂತನೆಗಳಲ್ಲಿ ನಂಬಿಕೆ ಇಟ್ಟವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಾಗತಭಾಷಣ ಇಂಗ್ಲಿಷ್‌ನಲ್ಲಿ ಆರಂಭವಾದೊಡನೆ ಕೆಲವರು ವಿರೋಧಿಸಿದರು. ತಮ್ಮ ಮಾತಿನ ಸರದಿ ಬಂದಾಗ ಬಸವಲಿಂಗಪ್ಪನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ-

ಸವರ್ಣೀಯರು ಬರೆದ ಕಳಪೆ ಕನ್ನಡ ಸಾಹಿತ್ಯವನ್ನೋದಿ ಕೆಟ್ಟು
ಹೋಗಬೇಡಿ. ಇದೆಲ್ಲ ಸಾಹಿತ್ಯ ಅಲ್ಲ. ಬರೀ ಬೂಸಾ. ಅದನ್ನೆಲ್ಲಾ ಗಟಾರಕ್ಕೆ
ಎಸೆಯಿರಿ. ಪುರೋಗಾಮಿ ವಿಚಾರಗಳನ್ನು ಸ್ಫುರಿಸಬಲ್ಲ ಇಂಗ್ಲಿಷ್ಸಾಹಿತ್ಯ
ವನ್ನೋದಿ

ಎಂದು ಕರೆನೀಡಿದರು. “ಕೇವಲ ಕನ್ನಡ ಪುಸ್ತಕವನ್ನೋದುವುದರಿಂದ ದೇಶಪ್ರೇಮ, ಸ್ವತಂತ್ರ ವಿಚಾರಶಕ್ತಿ, ಧೈರ್ಯ, ಸೇವಾ ಮನೋಭಾವನೆ ಬರುವುದಿಲ್ಲ. ಕನ್ನಡ ಅಭಿಮಾನ ಇರಬೇಕು, ಕನ್ನಡದಲ್ಲಿ ಮಾತನಾಡಬೇಕು, ಕನ್ನಡವನ್ನು ಬೆಳೆಸಬೇಕು. ಆದರೆ ಇಂಗ್ಲೀಷ್‌ ಓದುವುದರಿಂದ ವಿಚಾರ ಶಕ್ತಿ, ಸ್ವತಂತ್ರ ಮನೋಭಾವ, ದೇಶಪ್ರೇಮ ಎಲ್ಲಾ ಬರುತ್ತದೆ” ಎಂದು ಕನ್ನಡ ಕನ್ನಡ ಎಂದು ಕೂಗಾಡುತ್ತಿದ್ದವರ ಮೇಲೆ ಬಸವಲಿಂಗಪ್ಪ ಹರಿಹಾಯ್ದರು. ನಂತರ ತಮ್ಮ ಮಾತುಗಳನ್ನು ಎಂದಿನಂತೆ ಹಿಂದೂ ಧರ್ಮದ ಕಂದಾಚಾರ, ಜಾತಿ ವ್ಯವಸ್ಥೆ ಮತ್ತು ಶೋಷಣೆ ವಿರುದ್ಧ ತಿರುಗಿಸಿದರು. ಬಸವಲಿಂಗಪ್ಪನವರ ವಿಚಾರಗಳನ್ನು ಮೆಚ್ಚಿದರೂ ಸಭೆಯಲ್ಲಿದ್ದ ಸಾಹಿತಿ ಶ್ರೀಕೃಷ್ಣ ಆಲನಹಳ್ಳಿ ಅವರು, ಬಸವಲಿಂಗಪ್ಪ ಕನ್ನಡ ಸಾಹಿತ್ಯವನ್ನು ಬೂಸಾಕ್ಕೆ ಹೋಲಿಸಿದ್ದನ್ನು ಎದ್ದು ನಿಂತು ವಿರೋಧಿಸಿದರು. ಮರುದಿನ ಪತ್ರಿಕೆಗಳಲ್ಲಿ ಬಸವಲಿಂಗಪ್ಪನವರ ಹೇಳಿಕೆಗಳು ಮುಖಪುಟದಲ್ಲಿ ಪ್ರಕಟಗೊಂಡವು. ಅಂದಿನಿಂದ ‘ಹೊಸ ಅಲೆ’ಯ ಭಾಷಣ, ಹೊಸದೊಂದು ದಿಕ್ಕು ಹಿಡಿಯಿತು. ಇದೊಂದು ಅನಿರೀಕ್ಷಿತ ಬೆಳವಣಿಗೆ.

ಇದರ ಮರುದಿನವೇ ಸಾಹಿತಿಗಳು ಮತ್ತು ಕನ್ನಡ ಸಂಘ-ಸಂಸ್ಥೆಗಳಿಂದ ಬಸವಲಿಂಗಪ್ಪನವರ ಹೇಳಿಕೆಯ ಖಂಡನೆ, ಪ್ರತಿಕೃತಿ ದಹನ, ಪ್ರತಿಭಟನೆ ಮತ್ತು ಸಚಿವಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡಗಳು ಬಂದವು. ಪ್ರತಿಯಾಗಿ ದಲಿತ ವಿದ್ಯಾರ್ಥಿಗಳು ಬಸವಲಿಂಗಪ್ಪ ಅವರ ಬೆಂಬಲಕ್ಕೆ ನಿಂತರು. ಸವರ್ಣೀಯೆ ವಿದ್ಯಾರ್ಥಿಗಳು ಮುಖ್ಯವಾಗಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಕಾಲೇಜು ಬಂದ್‌ ಮಾಡಿಸಿ ಬೀದಿಗಿಳಿದರು. ಬೀದಿ ಬೀದಿಗಳಲ್ಲಿ ಬಸವಲಿಂಗಪ್ಪನವರ ಪರ ಮತ್ತು ವಿರುದ್ಧ ಚಳವಳಿ ನಡೆದರೆ, ಕಾಲೇಜುಗಳಲ್ಲಿ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಗುರುತಿಸಿಕೊಂಡು ಅಟ್ಟಾಡಿಸಿಕೊಂಡು ಹೊಡೆಯುವ ಘಟನೆಗಳು ದಿನ ನಿತ್ಯವು ನಿರಾತಂಕವಾಗಿ ನಡೆದವು. ಈ ಸಂದರ್ಭದಲ್ಲಿ ಅನಂತಮೂರ್ತಿ ಅವರು “ಕನ್ನಡ ಸಾಹಿತ್ಯದ ಬಗ್ಗೆ ಟೀಕಿಸಲು ಬಸವಲಿಂಗಪ್ಪ ಅವರಿಗೆ ಎಲ್ಲಾ ಹಕ್ಕುಗಳು ಇವೆ. ಅಲ್ಲದೆ ಕನ್ನಡ ಸಾಹಿತ್ಯದ ಬಗ್ಗೆ ಅವರು ಆಡಿರುವ ಮಾತು ವಾಸ್ತವವಾಗಿದೆ” ಎಂದು ಮಡಿಕೇರಿಯ ಒಂದು ಸಭೆಯಲ್ಲಿ ಹೇಳಿದರು. ಆದರೂ ಕನ್ನಡ ಪರ ಸಂಘಟನೆಗಳ, ವಿದ್ಯಾರ್ಥಿಗಳ ಪ್ರತಿಭಟನೆಗಳು ಮುಂದುವರೆದವು. ಶಿವಮೊಗ್ಗ, ಧಾರವಾಡ, ಗುಲ್ಬರ್ಗಾ, ಬೆಳಗಾವಿ, ಮಂಡ್ಯ ಮುಂತಾದ ಕಡೆಗಳಲ್ಲಿ ಈ ಹೋರಾಟ ಉಗ್ರರೂಪ ತಾಳಿತು. ರಾಜ್ಯದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳ ತಾತ್ಕಾಲಿಕ ಹೋರಾಟ ಕ್ರಿಯಾ ಸಮಿತಿಯೊಂದು ಮೈಸೂರಿನ ಮಹಾರಾಜ ಕಾಲೇಜಿನ ಕೆ.ಸಿ.ಶಂಕರೇಗೌಡ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಚಳವಳಿಯ ಜೊತೆಗೆ ಕನ್ನಡ ಪರ ಹೋರಾಟಗಾರರಾದ ವಾಟಾಳ್‌ ನಾಗರಾಜ, ಜಿ.ನಾರಾಯಣಕುಮಾರ್, ನಾಡಿಗೇರ್ ಕೃಷ್ಣರಾಯರಂಥ ಅನೇಕ ಮುಖಂಡರು ಬಸವಲಿಂಗಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವವರೆಗೂ ಹೋರಾಟ ಮಾಡುವುದಾಗಿ ಘೋಷಿಸಿ ಬೀದಿಗಿಳಿದರು. ಹೋರಾಟದ ಕಾವು ಏರುತ್ತಿದ್ದಂತೆ ಬಸವಲಿಂಗಪ್ಪ ಹೇಳಿಕೆಯೊಂದನ್ನು ನೀಡಿ ಚಳವಳಿ ನಿರತ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು ಸಫಲವಾಯಿತು. ಚಳವಳಿ ಉಗ್ರಸ್ವರೂಪ ತಾಳಿದ್ದರಿಂದ ರಾಜ್ಯದಲ್ಲಿ ಎರಡುವಾರಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಲಾಯಿತು. ಅನೇಕ ಕಡೆ ಪ್ರತಿಬಂಧಕಾಜ್ಞೆಗಳು ಜಾರಿಗೆ ಬಂದವು. ಮುಖ್ಯಮಂತ್ರಿ ದೇವರಾಜ ಅರಸು ಅವರು ಎಷ್ಟೇ ಮನವಿ ಮಾಡಿದರೂ ವಿದ್ಯಾರ್ಥಿಗಳು ಚಳವಳಿ ನಿಲ್ಲಿಸಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿಯುತ್ತಿದ್ದುದನ್ನು ಕಂಡು ಅರಸು ಅವರು, ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ನೇತೃತ್ವದಲ್ಲಿ ಶಾಂತಿ ಸಮಿತಿ ರಚಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಚ್‌. ನರಸಿಂಹಯ್ಯ ಎಲ್ಲಾ ಕಾಲೇಜುಗಳ ಪ್ರಿನ್ಸಿಪಾಲರನ್ನು ಸಭೆ ಕರೆದು ಶಾಂತಿ ಕಾಪಾಡಲು ಸಮಿತಿ ರಚಿಸಿದರು. ಮುಖ್ಯಮಂತ್ರಿ ಅರಸು ಬಸವಲಿಂಗಪ್ಪ ಅವರ ರಾಜೀನಾಮೆ ನಡೆಯಲು ಮುಂದಾಗಲಿಲ್ಲ. ಸ್ವತಃ ಬಸವಲಿಂಗಪ್ಪ ಅವರೂ ಕೂಡ ರಾಜೀನಾಮೆ ನೀಡಲು ಮುಂದಾಗಲಿಲ್ಲ.

ಮುಖ್ಯಮಂತ್ರಿ ಅರಸು ಎಷ್ಟೇ ಮನವಿಮಾಡಿದರೂ ವಿದ್ಯಾರ್ಥಿಗಳು ಚಳವಳಿ ನಿಲ್ಲಸಲಿಲ್ಲ. ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿಯುತ್ತಿದೆ. ಬಸವಲಿಂಗಪ್ಪ ಅವರನ್ನು ಸಂಪುಟದಿಂದ ಕೈಬಿಡದೆ ಬೇರೆದಾರಿ ಇಲ್ಲ’ ಎಂದು ಅರಸು ಅವರ ಮೇಲೆ ಅವರ ಸಂಪುಟ ಸಹೋದ್ಯೋಗಿಗಳು ಒತ್ತಡ ತಂದರು. ಆಗಿನ ಸಮಾಜವಾದಿ ಅಧ್ಯಕ್ಷ ಜೆ.ಎಚ್‌.ಪಟೇಲ್‌, ‘ಈ ಕ್ರಿಯೆ, ಪ್ರತಿಕ್ರಿಯೆ ನೋಡಿದರೆ ಇದು ಕೇವಲ ಕನ್ನಡಾಭಿಮಾನಿಗಳ ಪ್ರತಿಭಟನೆಯಾಗಿ ಕಾಣುವುದಿಲ್ಲ. ಇದರಲ್ಲಿ ಭಾಷೆಗೆ ಮೀರಿದ ಅಂಶಗಳೂ ಇದ್ದಂತಿವೆ. ಕೇವಲ ಒಬ್ಬ ಮಂತ್ರಿಯ ಪ್ರತಿಕೃತಿ ದಹನಕ್ಕೆ ಬದಲು ವಿದ್ಯಾರ್ಥಿಗಳು ಕನ್ನಡ ರಾಜ್ಯ ಭಾಷೆಯು ಶಿಕ್ಷಣ ಮಾಧ್ಯಮ ಮತ್ತು ನ್ಯಾಯಾಂಗ ಭಾಷೆಯಾಗಲು ಹೋರಾಟ ನಡೆಸುವುದು ಉಚಿತ’ ಎಂದರು. ಕೊನೆಗೆ ಸೆಪ್ಟೆಂಬರ್ ೫ರಂದು ಬೆಂಗಳೂರಿನಲ್ಲಿದ್ದ ಎಂ.ಮಲ್ಲಿಕಾರ್ಜುನಸ್ವಾಮಿ, ಕೆ.ಎಚ್‌.ರಂಗನಾಥ ಸೇರಿದಂತೆ ಹತ್ತು ಮಂದಿ ಸಂಪುಟ ದರ್ಜೆಯ ಸಚಿವರು ಬಸವಲಿಂಗಪ್ಪನವರಿಗೆ ಬೆಂಬಲವಾಗಿ ಸಾಮೂಹಿಕ ರಾಜೀನಾಮೆ ನೀಡಿದರು. ಅಂತಿಮವಾಗಿ, ಬಸವಲಿಂಗಪ್ಪ ಕೂಡ ತಮ್ಮ ರಾಜೀನಾಮೆ ಸಲ್ಲಿಸಿದರು. ಈ ಎಲ್ಲಾ ರಾಜೀನಾಮೆ ನೀಡಿದರು. ಅಂತಿಮವಾಗಿ, ಬಸವಲಿಂಗಪ್ಪ ಕೂಡ ತಮ್ಮ ರಾಜೀನಾಮೆ ಸಲ್ಲಿಸಿದರು. ಈ ಎಲ್ಲಾ ರಾಜೀನಾಮೆ ಪತ್ರಗಳನ್ನು ತೆಗೆದುಕೊಂಡು ಅರಸು ಅವರು ಇಂದಿರಾಗಾಂಧಿಯವರ ಭೇಟಿಗೆ ದೆಹಲಿಗೆ ತೆರಳಿದರು. ಮುಂದೆ ಅರಸು ರಾಜ್ಯ ರಾಜಕಾರಣದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಕಾಂಗ್ರೆಸ್‌ ಅಧ್ಯಕ್ಷೆ ಇಂದಿರಾಗಾಂಧಿ ಅವರಿಗೆ ವಿವರಿಸಿದರು. ಅಲ್ಲಿ ಬಸವಲಿಂಗಪ್ಪನವರನ್ನು ಸಂಪುಟದಿಂದ ಬಿಡುವ ತೀರ್ಮಾನ ಕೈಗೊಂಡು ಹೊಸದಾಗಿ ಸಚಿವ ಸಂಪುಟವನ್ನು ರಚಿಸಿದರು. ಒಟ್ಟಾರೆ ಈ ಬೂಸಾ ಪ್ರಕರಣ ರಾಜ್ಯದಲ್ಲಿ ಮುಂದೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಲಿತ ಚಳವಳಿಗೆ ಒಂದು ಹೊಸ ಆಯಾಮವನ್ನೇ ನೀಡಿದ್ದು, ಕರ್ನಾಟಕ ರಾಜಕಾರಣದಲ್ಲೊಂದು ಹೊಸ ಅಧ್ಯಾಯವನ್ನೇ ಆರಂಭಿಸಿತು ಎಂದು ಹೇಳಬಹುದು.

೧೯೭೫ರ ಜೂನ್‌ ೧೨ರಂದು ಭಾರತದ ಚರಿತ್ರೆಯಲ್ಲಿ ಒಂದು ಐತಿಹಾಸಿಕ ಘಟನೆ ನಡೆಯಿತು. ಅಂದು ಅಲಹಾಬಾದ್‌ ಹೈಕೋರ್ಟ್ ನೀಡಿದ ತೀರ್ಪು ಭಾರತದ ರಾಜಕಾರಣ ಇತಿಹಾಸದಲ್ಲಿ ಒಂದು ಹೊಸ ತಿರುವು. ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರ ಶಿಷ್ಯ ರಾಜನಾರಾಯಣ ಅವರು ಇಂದಿರಾಗಾಂಧಿಯವರ ಚುನಾವಣೆಯ ಆಯ್ಕೆಯ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅಂದು ಹೊರಬಿದ್ದ ತೀರ್ಪಿನಲ್ಲಿ ಇಂದಿರಾಗಾಂಧಿಯವರು ಲೋಕಸಭೆಗೆ ಆಯ್ಕೆಯಾದದ್ದು ಕ್ರಮಬದ್ಧವಲ್ಲವೆಂದು ಕೋರ್ಟ್ ತೀರ್ಮಾನಿಸಿತು. ಈ ತೀರ್ಪು ದೇಶದ ರಾಜಕಾರಣದ ವಲಯದಲ್ಲಿ ತೀವ್ರ ಸಂಚಲನವನ್ನು ಉಂಟುಮಾಡಿತು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ತಾಳ್ಮೆಗೆಡದೆ ಇದೊಂದು ಸೂಕ್ಷ್ಮವಾದ ವಿಷಯವೆಂದು ಪರಿಗಣಿಸಿ ಪರಿಸ್ಥಿತಿಯನ್ನು ಕಾಂಗ್ರೆಸ್‌ನ ಹಿತಾಸಕ್ತಿಗೆ ತಕ್ಕಂತೆ ನಿಭಾಯಿಸಿದರು. ದೇಶದ ನಾಯಕರೆಲ್ಲರು ಇಂದಿರಾಗಾಂಧಿಯವರಿಗೆ ರಾಜೀನಾಮೆ ನೀಡಲು ಎಷ್ಟೇ ಬುದ್ಧಿವಾದ ಹೇಳಿದರೂ ಅದಕ್ಕೆ ಇಂದಿರಾಗಾಂಧಿಯವರು ಮನಗೊಡದೆ ಸರ್ವಾಧಿಕಾರಿಯಂತೆ ವರ್ತಿಸಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು.

ಹಿಟ್ಲರ್ ಅಧಿಕಾರಕ್ಕೆ ಬಂದಕಾಲದಲ್ಲಿ ತನ್ನ ದೇಶದ ಸಮಸ್ಯೆಗಳನ್ನು ಬಗೆಹರಿಸಿದಂತೆ ಕಂಡಹಾಗೆ ಇಂದಿರಾಗಾಂಧಿಯೂ ಬಡಜನರಲ್ಲಿ ಬಡತನ ನಿರ್ಮೂಲನ ಭ್ರಮೆಯನ್ನು ಉಂಟುಮಾಡಿದರು. ಪರಿಣಾಮವಾಗಿ ೧೯೭೫ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರೀಯ ತುರ್ತುಪರಿಸ್ಥಿತಿ ಹೇರಿದ್ದಾಗಲೇ ‘ಇಪ್ಪತ್ತು ಅಂಶ’ಗಳ ಕಾರ್ಯಕ್ರಮವನ್ನು ಸಾರಿದರು. ಈ ಪರಿಸ್ಥಿತಿಯಿಂದ ಸಿಕ್ಕ ಅಧಿಕಾರವನ್ನು ಆನೇಕ ನಾಯಕರು, ಅಧಿಕಾರಿಗಳು ಅದನ್ನು ದುರುಪಯೋಗ ಪಡಿಸಿಕೊಂಡರು. ದೇಶದ ಇತರ ಕಡೆಗಳಲ್ಲಿ ೧೯೭೭ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವಂಥ ವಾತಾವರಣ ನಿರ್ಮಾಣವಾದರೂ ಕರ್ನಾಟಕದಲ್ಲಿ ಅಂಥ ದಬ್ಬಾಳಿಕೆಗೆ ಅರಸು ಅವರು ಅವಕಾಶ ಮಾಡಿಕೊಡಲಿಲ್ಲ.

೧೯೭೭ರ ಚುನಾವಣೆಯಲ್ಲಿ ಲೋಕಸಭೆಯಲ್ಲಿ ರಾಜ್ಯದ ೨೮ ಸ್ಥಾನಗಳಲ್ಲಿ ೨೬ ಇಂದಿರಾಗಾಂಧಿಯವರ ಪಕ್ಷದ ಪಾಲಾಯಿತು. ೧೯೭೭ರ ಮಹಾಚುನಾವಣೇಯಲ್ಲಿ ಇಂದಿರಾ ಹಾಗೂ ಅವರ ಪುತ್ರ ಸಂಜಯಗಾಂಧಿ ಕೂಡ ಸೋಲನುಭವಿಸಿದ್ದರು. ಕೇಂದ್ರದಲ್ಲಿನ ಜನತಾ ಸರಕಾರ ಅರಸು ಸರಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿತು (೧.೧.೧೯೭೮). ಎರಡು ತಿಂಗಳ ನಂತರ ನಡೆದ ಚಿಕ್ಕಮಗಳೂರು ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾಗಾಂಧಿ ಗೆದ್ದುಬಂದರು. ಫೆಬ್ರವರಿ ೨೦, ೧೯೭೮ರಂದು ಅರಸು ಅವರು ಎರಡನೆಯ ಬಾರಿಗೆ ಅಧಿಕಾರ ವಹಿಸಿಕೊಂಡರು. ಆದರೆ ಮುಂದೆ ಸಂಭವಿಸಿದ ರಾಜಕೀಯ ತಿರುವಿನಲ್ಲಿ ಅರಸು ಮತ್ತು ಇಂದಿರಾಗಾಂಧಿಯವರಲ್ಲಿ ವೈಯಕ್ತಿಕ ಸಂಘರ್ಷವುಂಟಾಗಿ ೧೯೭೯ರಲ್ಲಿ ಇಂದಿರಾಗಾಂಧಿ ದೇವರಾಜ ಅರಸು ಅವರನ್ನು ಪಕ್ಷದಿಂಧ ಉಚ್ಛಾಟಿಸಿದರು.

ಜೂನ್‌ ೨೪, ೧೯೭೯ರಂದು ಇಂದಿರಾಗಾಂಧಿ ಕಾರ್ಯಕಾರಿ ಸಮಿತಿಯು ದೇವರಾಜ ಅರಸು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿದರು. ಅದೇ ದಿನ ಪ್ರದೇಶ ಕಾಂಗ್ರೆಸ್‌ ಸಮಿತಿಯ ಸಾಮಾನ್ಯ ಸಭೆ ನಡೆಯಿತು. ೨೫ರಂದು ಇಂದಿರಾ ನಿಷ್ಠರು ಹಾಗೂ ಅರಸು ಬೆಂಬಲಿಗರ ನಡುವೆ ಬಲಾಬಲದ ಪರೀಕ್ಷೆ ನಡೆಯಿತು. ಅಂದು ನಡೆದ ಬಲಪ್ರದರ್ಶನದಲ್ಲಿ ಅರಸು ಸಂಘಟನಾ ಶಕ್ತಿ ಪ್ರದರ್ಶಿತವಾಯಿತು. ಅಂದು ೨೪೦ ಪಿ.ಸಿ.ಸಿ.ಐ. ಸದಸ್ಯರ ಪೈಕಿ ೨೦೮ ಜನ ಸದಸ್ಯರು ಹಾಜರಿದ್ದರು. ೧೫೪ ವಿಧಾನಸಭಾ ಸದಸ್ಯರ ಪೈಕಿ ೧೩೧ ಜನ ಶಾಸಕರು, ೮ ಜನ ಸದಸ್ಯರು ತಂತಿಯ ಮೂಲಕ ಬೆಂಬಲ ಸೂಚಿಸಿದರು. ೧೮ ಜನ ಲೋಕಸಭಾ ಸದಸ್ಯರು ಹಾಗೂ ೨೪ ಜನ ವಿಧಾನ ಪರಿಷತ್‌ ಸದಸ್ಯರು ಅರಸು ಅವರಿಗೆ ಬೆಂಬಲ ವ್ಯಕ್ತಪಡಿಸಲು ಹಾಜರಿದ್ದರು. ಆಗ ಅರಸರು ತಮ್ಮದು ‘ಕರ್ನಾಟಕ ಕಾಂಗ್ರೆಸ್‌ ಪಕ್ಷ’ ಎಂದು ಘೋಷಣೆ ಮಾಡಿದರು. ಈ ರೀತಿಯಾಗಿ ಕರ್ನಾಟಕ ಕಾಂಗ್ರೆಸ್‌ಪಕ್ಷ ರಾಜ್ಯದಲ್ಲಿ ಇಂದಿರಾಗಾಂಧಿಯವರ ವಿರುದ್ಧ ಪರ್ಯಾಯ ಪಕ್ಷವಾಗಿ ಉದಯಿಸಿತು. ಬಹುಶಃ ಇಲ್ಲಿಂದಲೇ ರಾಜ್ಯರಾಜಕಾರಣದಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಯಿತು. ಎಲ್ಲಾ ಪಕ್ಷದಲ್ಲಿರುವ ಪ್ರಗತಿಪರರು, ಬಡವರ ಪಕ್ಷಪಾತಿಗಳು, ಅನ್ಯಾಯವನ್ನು ಪ್ರತಿಭಟಿಸುವವರು ಒಂದುಗೂಡುವ ಕಾಲ ಬಂದಿದೆ ಎಂದು ಅರಸು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜುಲೈ ೪, ೧೯೭೯ ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರ ಸಮ್ಮೇಳನ ಸಂಘಟಿತವಾಯಿತು. ಕಾಂಗ್ರೆಸ್‌(ಎಸ್‌)ಗೆ ಸೇರಿದ ಎಸ್‌.ಆರ್.ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಬಹುಸಂಖ್ಯೆಯ ಪ್ರತಿನಿಧಿಗಳು ಹಾಜರಿದ್ದರು. ಮಹಾರಾಷ್ಟ್ರ, ಆಂಧ್ರ, ಬಿಹಾರ, ಕಾಶ್ಮೀರ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಪಂಜಾಬ್‌ ಮತ್ತು ದೆಹಲಿಯ ಕಾಂಗ್ರೆಸ್‌(ಐ)ನ ಭಿನ್ನಮತೀಯರೂ ಈ ಸಮ್ಮೇಳನದಲ್ಲಿ ಹಾಜರಿದ್ದರು ಎಂಬುದು ಈ ಸಮ್ಮೇಳನದ ಇನ್ನೊಂದು ವಿಶೇಷ.

ಅಖಿಲ ಭಾರತ ಕಾಂಗ್ರೆಸ್ಅಧ್ಯಕ್ಷರಾಗಿ ಅರಸು

ದೇವರಾಜ ಅರಸು ಜನತಾಪಕ್ಷಕ್ಕೆ ಪರ್ಯಾಯವಾಗಿ ೧೯೬ ೯ರ ವಿಭಜನಾ ಪೂರ್ವ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸಲು ಉದ್ದೇಶಿಸಿದ್ದರು. ಅದರ ಪರಿಣಾಮವಾಗಿ ೧೯೭೯ ಸೆಪ್ಟೆಂಬರ್ ೧೨, ೧೩ರಂದು ಬೆಂಗಳೂರಿನ ಲಾಲ್‌ಬಾಗ್‌ ಗಾಜಿನಮನೆಯಲ್ಲಿ ವಿಭಜಿತ ರಾಷ್ಟ್ರೀಯ (ಎಸ್‌) ಕಾಂಗ್ರೆಸ್‌ನ ಅಧಿವೇಶನ ನಡೆಯಿತು. ಅಂದು ಮಾಜಿ ಕೇಂದ್ರ ಸಚಿವ ಸರ್ದಾರ್ ಸ್ವರಣ್‌ಸಿಂಗ್‌ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ದೇವರಾಜ ಅರಸು ಅವರಿಗೆ ವಹಿಸಿಕೊಟ್ಟಿದ್ದರು. ಅಂದು ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಅದು ‘ಅರಸು ಕಾಂಗ್ರೆಸ್‌’ ಎಂದು ಕರೆಯಿಸಿಕೊಂಡಿತು. ಅಂದು ರಾಜ್ಯ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರಾಗಿ ಗುಲ್ಬರ್ಗಾ ಲೋಕಸಭಾ ಸದಸ್ಯ ಸಿದ್ದರಾಮರೆಡ್ಡಿಯವರನ್ನು ಆಯ್ಕೆಮಾಡಲಾಯಿತು. ಮುಂದೆ ಅರಸು ಅವರು ರಾಷ್ಟ್ರೀಯ ಕಾಂಗ್ರೆಸ್ಸನ್ನು ಚೌಧರಿ, ಚರಣ್‌ಸಿಂಗರ ಲೋಕದಳ ಪಕ್ಷದೊಂದಿಗೆ ಮೈತ್ರಿ ಏರ್ಪಡಿಸಿಕೊಂಡು ಲೋಕಸಭಾ ಚುನಾವಣೆಗಳನ್ನು ಎದುರಿಸಬೇಕೆಂದು ಈ ಸಮ್ಮೇಳನದಲ್ಲಿ ತೀಮಾನಿಸಲಾಯಿತು. ಅರಸು ಈ ಸಂದರ್ಭದಲ್ಲಿ ಮಾತನಾಡುತ್ತಾ “ಕಾಂಗ್ರೆಸ್‌ ಪಕ್ಷದ ಶ್ರೀಮಂತರು ಹಾಗೂ ಬಡವರನ್ನು ಸಮಾನವಾಗಿ ಓಲೈಸುವ ಸಿದ್ಧಾಂತವನ್ನು ಟೀಕಿಸುತ್ತಾ ಇದು ‘ಕುರಿ ಮತ್ತು ತೋಳ’ ಎರಡರ ಮೇಲೆಯೂ ಸಮಾನವಾಗಿ ಕೈಯಿಡುವ ಆಟ ಎಂದು ವಿವರಿಸಿದರು. ತಮ್ಮ ಪಕ್ಷ ಬಡಜನರು ಹಾಗೂ ದಲಿತರ ಪರವಾಗಿ ನಿಲ್ಲಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಅಕ್ಟೋಬರ್ ೧೯೭೯ರಲ್ಲಿ ರಾಜ್ಯಶಾಸನ ಸಭೆಯ ಅಧಿವೇಶನದಲ್ಲಿ ಇತ್ತೀಚಿನವರೆಗೂ ತಮ್ಮ ನಿಷ್ಟಾವಂತ ಬೆಂಬಲಿಗರಾಗಿದ್ದವರಿಂದಲೆ ಅರಸು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಯಿತು. ಆ ಸಮಯದಲ್ಲಿ ಅರಸು ನಂಬಿಕೊಂಡಿದ್ದ ಶಾಸಕರಾದ ಬಂಗಾರಪ್ಪ, ಗುಂಡೂರಾವ್‌, ಕೆ.ಎಚ್‌.ಪಾಟೀಲ್‌ ಇಂದಿರಾ ಪಕ್ಷ (ಬಣ) ಸೇರಿಕೊಂಡರು. ತಮ್ಮ ಭದ್ರತೆಗಾಗಿ ಅರಸು ಜನತಾ ಪಕ್ಷದಿಂದ ಕೆಲವರನ್ನು ಸೆಳೆದರು. ಪಕ್ಷಾಂತರ, ಭ್ರಷ್ಟಾಚಾರ, ನಂಬಿಕೆದ್ರೋಹ ಮುಂತಾದ ಕೆಟ್ಟ ರಾಜಕೀಯ ಪ್ರಕ್ರಿಯೆಗಳೆಲ್ಲ ಅನಾವರಣಗೊಳ್ಳತೊಡಗಿದವು. ಕೇವಲ ಕ್ರಾಂತಿಕಾರಕ ವಿಚಾರಗಳ ಕುರಿತು ಮಾತನಾಡುತ್ತಿದ್ದ ಅರಸು ಅವರು ಈಗ ತಾವಾಗಿಯೇ ಸಿಕ್ಕಿಬಿದ್ದರು ಎಂಬುದು ಒಂದು ಸೋಜಿಗದ ಸಂಗತಿ.

ಕ್ರಾಂತಿರಂಗ ಪಕ್ಷ ಸ್ಥಾಪನೆ

೧೯೭೯ರಲ್ಲಿ ಕೇಂದ್ರದಲ್ಲಿದ್ದ ಜನತಾ ಸರಕಾರದ ಪತನದಿಂದಾಗಿ, ೧೯೮೦ರ ಜನವರಿ ತಿಂಗಳಲ್ಲಿ ಲೋಕಸಭೆಗೆ ಚುನಾವಣೆಗಳು ನಡೆದವು. ಆಗ ದೇವರಾಜ ಅರಸು ‘ಕಾಂಗ್ರೆಸ್‌’(ಯು) ಇಂದಿರಾ ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಯಾಗಿತ್ತು. ಜನರ ಒಲವೂ ಕೂಡ ಇಂದಿರಾ ಕಾಂಗ್ರೆಸ್‌ ಕಡೆಗೆ ಬಲವಾಗಿತ್ತು. ಅರಸು ಅವರು ಈ ಚುನಾವಣಾ ಪ್ರಚಾರದಲ್ಲಿ ಜನತೆಯನ್ನು ತನ್ನತ್ತ ಸೆಳೇದುಕೊಳ್ಳುವಲ್ಲಿ ಬಹುತೇಕ ಸಫಲವಾಗಿದ್ದರೂ ಜನತೆ ಇಂದಿರಾಗಾಂಧಿಯ ಪ್ರಭಾವಕ್ಕೆ ಸಿಕ್ಕಿ ಇಂದಿರಾ ಕಾಂಗ್ರೆಸ್‌ಗೆ ಮತ ನೀಡಿ ಅತಿ ಹೆಚ್ಚು ಬಹುಮತದಿಂದ ಆರಿಸಿ ತಂದಿದ್ದರು. ಅರಸು ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಸಂಪೂರ್ಣ ಸೋಲನ್ನು ಅನುಭವಿಸಿತ್ತು. ಅರಸು ಪಕ್ಷದಿಂದ ಸ್ಪರ್ಧಿಸಿದ್ದ ಎಂ.ವಿ. ಕೃಷ್ಣಪ್ಪ, ಬಿ.ಎ.ಪೈ, ಮತ್ತು ಬಿ.ರಾಚಯ್ಯನವರಂಥ ನಾಯಕರು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ ಒಟ್ಟು ೨೯ ಲೋಕಸಭಾ ಸ್ಥಾನಗಳ ಪೈಕಿ ೨೭ ಸ್ಥಾನಗಳಲ್ಲಿ ಜಯಗಳಿಸಿತ್ತು. ಜನತಾ ಪಕ್ಷ ಒಂದು ಸ್ಥಾನ ಮಾತ್ರ ಗೆದ್ದುಕೊಂಡಿತ್ತು. ಆದರೆ ಅರಸು ಪಕ್ಷ ಒಂದೂ ಸ್ಥಾನವನ್ನು ಗೆಲ್ಲಲಿಲ್ಲ.

ದೇವರಾಜ ಅರಸು ಅವರು ಒಬ್ಬ ದಕ್ಷನಾಯಕನಾಗಿ, ಒಳ್ಳೆಯ ಸಂಘಟಕರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಸಮರ್ಥ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೂ ಸಹ ಅಂಥ ಅವಮಾನಕರ ಸೋಲನುಭವಿಸಿದ್ದಾದರೂ ಏಕೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೋಲಾಹಲವನ್ನುಂಟು ಮಾಡಿತು. ಅರಸು ಅವರ ರಾಜಕೀಯ ಬದುಕಿನಲ್ಲಲಿ ನಡೆದ ಅತ್ಯಂತ ಆಘಾತಕಾರಿಯಾದ ಈ ಸಂದರ್ಭದಲ್ಲಿಯೂ ಅವರು ನಡೆದುಕೊಂಡ ರೀತಿ ಮಾತ್ರ ಎಲ್ಲರ ಮನಸ್ಸಿನಲ್ಲಿಯೂ ಬಹುಕಾಲ ಉಳಿಯುವಂಥದ್ದು. ಚುನಾವಣಾ ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಜನವರಿ ೬, ೧೯೮೦ರಂದು ರಾಜೀನಾಮೆ ನೀಡಿ ಪ್ರಜಾಪ್ರಭುತ್ವದಲ್ಲಿದ ತಮ್ಮ ನಂಬಿಕೆಯನ್ನು ಸಾಬೀತು ಪಡಿಸಿದರು. ಇಂಥ ದಯನೀಯ ಪರಿಸ್ಥಿತಿಯಲ್ಲಿಯೂ ಧೃತಿಗೆಡದ ಅರಸು ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್‌ ವಿರುದ್ಧ ಒಂದು ಪರ್ಯಾಯ ಪಕ್ಷವನ್ನು ಹುಟ್ಟುಹಾಕಬೇಕೆಂಬ ಯೋಚನೆಯಲ್ಲಿ ತೊಡಗಿದರು. ಅಂತೆಯೇ ವಿರೋಧ ಪಕ್ಷಗಳು ಛಿದ್ರಛಿದ್ರವಾಗಿರುವುದನ್ನು ಗಮನಿಸಿ ವಿರೋಧ ಪಕ್ಷಗಳ ನಾಯಕರುಗಳಾದ, ಚರಣ್‌ಸಿಂಗ್‌, ಚಂದ್ರಶೇಖರ್, ಸಮಾಜವಾದಿನಾಯಕ ಜಾರ್ಜ್ ಫರ್ನಾಂಡೀಸ್‌, ರಾಮಕೃಷ್ಣಹೆಗಡೆ, ಎಸ್‌,ಆರ್. ಬೊಮ್ಮಾಯಿ ಅವರಂಥ ರಾಜಕೀಯ ಮುಖಂಡರನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ತೊಡಗಿದರು. ಆದ್ದರಿಂದ ಅರಸು ಕರ್ನಾಟಕ ಮಟ್ಟದಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟುವ ಹಂಬಲಕ್ಕೆ ಮತ್ತಷ್ಟು ಚಾಲನೆ ನೀಡತೊಡಗಿದರು. ಇದರ ಪರಿಣಾಮವೇ ‘ಕ್ರಾಂತಿರಂಗ ಪಕ್ಷ’ ಸ್ಥಾಪನೆ ಮಾಡಿದರು. ರಾಜ್ಯದಲ್ಲಿ ತಮಗಿದ್ದ ಜನಬೆಂಬಲದಿಂದ ಕ್ರಾಂತಿರಂಗ ಪಕ್ಷವನ್ನು ಇಂದಿರಾಗಾಂಧಿ ಪಕ್ಷಕ್ಕೆ ಪರ್ಯಾಯ ಪಕ್ಷವಾಗಿ ಕಟ್ಟುವ ಭರವಸೆಯನ್ನು ಹೊಂದಿದ್ದರು. ಸದ್ಯಕ್ಕೆ ಪ್ರಾದೇಶಿಕ ಪಕ್ಷವಾದರೂ ಮುಂದೆ ಇದನ್ನು ಚರಣ್‌ಸಿಂಗ್‌ ಪಕ್ಷವಾದ ಲೋಕದಳದಲ್ಲಿ ವಿಲೀನಗೊಳಿಸುವ ಮೂಲಕ ರಾಷ್ಟ್ರಮಟ್ಟದಲ್ಲೂ ಒಂದು ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವ ಉದ್ದೇಶ ಅರಸು ಅವರದಾಗಿತ್ತು. ಆದರೆ ಈ ನಡುವೆ ಅರಸು ಅವರ ಆರೋಗ್ಯ ಕೆಟ್ಟಿತ್ತು. ಮುಖ್ಯಮಂತ್ರಿಯಾಗಿದ್ದಾಗಲೇ ಸರ್ಪಸುತ್ತು ಆಗಿ ತೀವ್ರ ಬಳಲಿದರು. ೧೯೮೦ರ ಚುನಾವಣೆಯಲ್ಲಿ ಆದ ತೀವ್ರ ಸೋಲಿನಿಂದ ಅವರಿಗೆ ಭಾರೀ ಮಾನಸಿಕ ಆಘಾತವಾಯಿತು. ಇದೇ ಸಂದರ್ಭದಲ್ಲಿ ಅರಸರ ಮಗಳು ನಾಗರತ್ನ ತೀರಿಕೊಂಡಳು. ಆ ಕಾರಣಕ್ಕಾಗಿಯೇ ಅರಸು ಅವರ ಉದ್ದೇಶ ಸಫಲವಾಗದೆ ಹೋಯಿತು.

ಅರಸು ಸಮಾಜಮುಖಿ ಚಿಂತನೆಗಳು

ಭಾರತದ ಇತಿಹಾಸದಲ್ಲಿ ಜಾತಿಯೊಂದಿಗೆ ಬಂಡಾಯವು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಬುದ್ಧ, ಬಸವಣ್ಣ, ಗಾಂಧೀಜಿ ಮತ್ತು ಅಂಬೇಡ್ಕರ್, ಲೋಹಿಯಾ ಅವರಂಥ ನಾಯಕರು ಜಾತಿವ್ಯವಸ್ಥೆಯ ವಿರುದ್ಧ ಸಮರವನ್ನೇ ಸಾರಿದವರು. ಅಲ್ಲದೆ ಈ ನಾಯಕರು ಒಂದು ವ್ಯವಸ್ಥಿತವಾದ ಜಾತಿರಹಿತ ಸಮಾಜವನ್ನು ಕಟ್ಟಲು ಮುಂದಾದವರು. ಆದರೆ ಇಂದು ಸಮಾಜ ಅದೇ ಜಾತಿಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅದೇ ವ್ಯವಸ್ಥೆಯಲ್ಲಿ ಬಿದ್ದು ತೊಳಲಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪಾರಂಪರಿಕ ಸಾಮಾಜಿಕ ಮೌಢ್ಯತೆಯನ್ನು ಮತ್ತು ಜಡವಾದ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕಲು ದೇವರಾಜ ಅರಸು ಕಂಕಣಬದ್ಧರಾದರು. ಅಲ್ಲದೆ ಆ ಮೂಲಲಕ ದಲಿತರ ಹಾಗೂ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಕ್ರಾಂತಿಕಾರಕ ಬದಲಾವಣೆಯನ್ನು ಜಾರಿಗೆ ತಂದರು.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಚಳವಳಿಯು ಮೊದಲು ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರು ನಡೆಸಿದ ಚಳವಳಿಯೊಂದಿಗೆ ಆರಂಭಗೊಂಡಿತು. ಹೀಗಾಗಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ೨೩.೦೮.೧೯೧೮ರಂದು ಲೆಸ್ಲಿಮಿಲ್ಲರ್ ನೇತೃತ್ವದಲ್ಲಿ ‘ಮಿಲ್ಲರ್ ಸಮಿತಿ’ಯನ್ನು ನೇಮಿಸಿದರು. ಹೀಗಾಗಿ ಭಾರತದಲ್ಲೇ ಮೊದಲಬಾರಿಗೆ ದಲಿತ ಹಾಗೂ ಹಿಂದುಳಿವ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಿದ ಕೀರ್ತಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಭಾಜನರಾದರು. ಈ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಸರಕಾರ ಏನು ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲಿಸಿ ತನ್ನ ವರದಿಯನ್ನು ನೀಡುವಂತೆ ಈ ಸಮಿತೆಗೆ ಸೂಚಿಸಲಾಯಿತು. ಪರಿಣಾಮವಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸ್ವಲ್ಪಮಟ್ಟಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.