ಹಾವನೂರ ಆಯೋಗದ ನೇಮಕ

ದೇವರಾಜ ಅರಸು ಅಧಿಕಾರಕ್ಕೆ ಬಂದಮೇಲೆ ಈ ಸಾಮಾಜಿಕ(ಹಿಂದುಳಿದ ವರ್ಗಗಳ ಮತ್ತು ದಲಿತರ) ಚಳವಳಿಗೆ ಮತ್ತಷ್ಟು ಬಲ ಬಂದಿತು. ಸಾಮಾಜಿಕವಾಗಿ ಅಸಹಾಯಕರಂತೆ ಬದುಕಿದ್ದ ಬೆಸ್ತ, ಮಡಿವಾಳ, ಉಪ್ಪಾರ, ಕುಂಬಾರ, ಕಮ್ಮಾರ, ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳಿಗೆ ಸೆಟೆದು ನಿಲ್ಲುವಂತೆ ಮಾಡುವುದರ ಜೊತೆಗೆ, ಎಲ್ಲರಂತೆ ತಾವು ಕೂಡ ಎಲ್ಲ ಅವಕಾಶಗಳಿಗೆ ಅರ್ಹರು ಎಂಬ ಜಾಗೃತಿಯನ್ನು ಮೂಡಿಸಿದ ಹೆಗ್ಗಳಿಕೆ ಅರಸು ಅವರದು. ೧೯೭೧ರ ವರೆಗೆ ಜಾತಿ ರಾಜಕಾರಣದ ಪ್ರಾಬಲ್ಯದಲ್ಲಿ ಯಾವ ಬದಲಾವಣೆಗಳೂ ಆಗಲಲಿಲ್ಲ. ಮುಖ್ಯವಾಗಿ ಬ್ರಾಹ್ಮಣ ಮತ್ತು ಲಿಂಗಾಯತರ ರಾಜಕಾರಣದ ಮೇಲಿನ ಹಿಡಿತ ಮಾತ್ರವಲ್ಲದೆ, ಆರ್ಥಿಕ ಕ್ಷೇತ್ರಗಳ ಮೇಲಿನ ಮೇಲ್ಜಾತಿಗಳ ಪ್ರಾಬಲ್ಯವನ್ನು ತೊಡೆದು ಹಾಕುವುದು ಅರಸು ಅವರ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ ದೀನ-ದಲಿತರನ್ನು ಮತ್ತು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಬೇಕೆನ್ನುವ ಅವರಲ್ಲಿದ್ದ ದೃಢ ಸಂಕಲ್ಪವೇ ಇದಕ್ಕೆ ಕಾರಣ. ಅರಸು ಅಧಿಕಾರಕ್ಕೆ ಬಂದ ಹೊಸತರಲ್ಲೇ ಹಿಂದುಳಿದ ವರ್ಗಗಳನ್ನು ನಿರ್ಧರಿಸುವಲ್ಲಿ ಹೊಸ ಮಾನದಂಡಗಳ ಬಗ್ಗೆ ಸೂಚನೆ ನೀಡಿದರು. ಅದರಂತೆ ಹಿಂದುಳಿದ ವರ್ಗಗಳ ನಿರ್ಧರಿಸುವಿಕೆಗೆ ವಕೀಲರೂ, ರಾಜಕಾರಣಿಯೂ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರೂ ಆದ ಎಲ್‌.ಜಿ. ಹಾವನೂರ ಅಧ್ಯಕ್ಷತೆಯಲ್ಲಿ ಆಯೋಗವನ್ನು ಆಗಸ್ಟ್‌ ೮, ೧೯೭೨ರಲ್ಲಿ ನೇಮಕ ಮಾಡಿದರು.

ಹಿಂದುಳಿದವರಿಂದಲೇ ವಂಚನೆಗೆ ಒಳಗಾದ ಇತರ ದುರ್ಬಲ ವರ್ಗದವರನ್ನು ರಾಜಕೀಯವಾಗಿ ಒಗ್ಗೂಡಿಸುವ, ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಅವರಲ್ಲಿ ತುಂಬುವ ತೀರಾ ಮಹತ್ವದ ಕಾರ್ಯವನ್ನು ದೇವರಾಜ ಅರಸು ಮಾಡಿದರೆನ್ನಲಡ್ಡಿಯಿಲ್ಲ. ಅದುವರೆವಿಗೂ ಇದ್ದ ಲಿಂಗಾಯಿತ ಹಾಗೂ ಒಕ್ಕಲಿಗರ ಪ್ರಾಬಲ್ಯವನ್ನು ಮುರಿಯುವುದು ಅವರ ಉದ್ದೇಶವಾಗಿತ್ತು. ಮುಖ್ಯವಾಗಿ ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದ ಅವರು ಸಮಾನತೆ ಬರಬೇಕೆಂದರೆ ಜಾತಿ-ವರ್ಗ ಸಂಪೂರ್ಣ ನಾಶವಾಗಬೇಕು ಎನ್ನುವ ನಿಲುವು ಅವರದು. ಸಮಾನತೆಗೆ ಪೂರಕವಾಗಿಯೇ ಸಮಾನರಲ್ಲದವರಿಗೆ ನೆರವು ನೀಡಿ, ಕೈಹಿಡಿದು ಮೇಲೆತ್ತಿದವರು. ತುಳಿತಕ್ಕೆ ಒಳಗಾದವರಿಗೆ ಬೇಕಾದುದು ಸಹಾನುಭೂತಿಯ ಅನುಕಂಪವಲ್ಲ, ಬದಲಾಗಿ ಸಮಾನತೆ ಮತ್ತು ಸಂಪತ್ತು. ಮನುಷ್ಯರೆಂಬ ಬಾವನಾತ್ಮಕ ತಿಳಿವು. ಅರಸು ಅವರು ಮೀಸಲಾತಿ ಜಾರಿಗೆ ತರುವ ಕಲ್ಪನೆಯ ಆಶಯವೂ ಇದೇ ಆಗಿತ್ತು. ಇದರ ಜೊತೆಗೆ ೧೯೫೬ರಿಂದ ಜಾರಿಯಲ್ಲಿದ್ದ ಮೀಸಲಾತಿ ನೀತಿಯ ಪ್ರಯೋಜನ ಕೇವಲ ಪ್ರಬಲ ಜಾತಿಯವರಿಗೆ ಮಾತ್ರ ಲಭ್ಯವಾಗಿತ್ತು ಎನ್ನುವ ಭಾವನೆಯನ್ನು ಈ ಹಿಂದುಳಿದ ವರ್ಗಗಳಲ್ಲಿ ಬೆಳೆಸುವಲ್ಲಿಯೂ ಅವರು ಸಾಕಷ್ಟು ಯಶಸ್ವಿಯಾದರು.

೧೯೭೨ರ ಆಗಸ್ಟ್‌ನಲ್ಲಿ ಆದ ಆಯೋಗದ ರಚನೆ ಹಿಂದುಳಿದವರ ಕಲ್ಯಾಣಕ್ಕಾಗಿ ನಡೆದ ಮೊದಲ ಪ್ರಾಮಾಣಿಕ ಪ್ರಯತ್ನವೆಂಬ ಸಾರ್ವತ್ರಿಕ ಮನ್ನಣೆ ಪಡೆಯಿತು. ಈ ಆಯೋಗವು ಒಟ್ಟು ಏಳು ಜನ ಸದಸ್ಯರನ್ನೊಳಗೊಂಡಂತೆ ಎಲ್‌. ಜಿ. ಹಾವನೂರರ ಅಧ್ಯಕ್ಷತೆಯಲ್ಲಿ ಆಯೋಗವನ್ನು ನೇಮಿಸಲಾಯಿತು.

ಈ ಆಯೋಗಕ್ಕೆ ಪರಿಶಿಷ್ಟ ಜಾತಿ/ಪಂಗಡಗಳನ್ನು ಹೊರತುಪಡಿಸಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ನಿರ್ಣಾಯಕ ಅಂಶಗಳ ಬಗೆಗೆ ಸಲಹೆ ನೀಡುವುದು; ಈ ವರ್ಗಗಳ ಬಗೆಗೆ ವಿವರವಾಗಿ ಅಧ್ಯಯನ ನಡೆಸಿ ಈ ವರ್ಗಗಳ ಉನ್ನತಿಗಾಗಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಶಿಫಾರಸ್ಸು ಮಾಡುವುದು; ಈ ವರ್ಗಗಳ ಪಟ್ಟಿಯನ್ನು ತಯಾರಿಸುವುದು; ಈ ವರ್ಗಗಳಿಗೆ ಕಲ್ಪಿಸಬೇಕಾದ ಮೀಸಲಾತಿ ಪ್ರಮಾಣದ ಬಗೆಗೆ ಸಲಹೆ ನೀಡುವುದು ಇತ್ಯಾದಿಯನ್ನು ಸೂಚಿಸಿ ಸರಕಾರ ಆದೇಶ ಹೊರಡಿಸಿತು. ಸರಕಾರ ಆದೇಶ ಹೊರಡಿಸಿದ ಬೆನ್ನಲ್ಲಿಯೇ ಈ ಆಯೋಗದ ಸದಸ್ಯರು ಮತ್ತು ಅಧ್ಯಕ್ಷರು ವರದಿಯ ಸಿದ್ಧತೆಗೆ ವ್ಯವಸ್ಥಿತವಾದ ಕಾರ್ಯ ಚಟುವಟಿಕೆಯಲ್ಲಿ ತೊಡಗಿದರು. ಒಟ್ಟು ಮೂರು ವರುಷಗಳ ಕಾಲಾವಧಿಯನ್ನು ತೆಗೆದುಕೊಂಡು ಸಿದ್ಧಪಡಿಸಿದ ವರದಿಯನ್ನು ಆಯೋಗ ಅಂತಿಮವಾಗಿ ೧೯೭೫ರ ನವೆಂಬರ್ ನಲ್ಲಿ ಸರಕಾರಕ್ಕೆ ಒಪ್ಪಿಸಿತು.

ಈ ಆಯೋಗವು ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿತು. ೧. ಹಿಂದುಳಿದ ಸಮುದಾಯಗಳು ೨. ಹಿಂದುಳಿದ ಜಾತಿಗಳು ೩. ಹಿಂದುಳಿದ ಬುಡಕಟ್ಟುಗಳು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.೧೪ ರಷ್ಟು ಪರಿಶಿಷ್ಟಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜೊತೆಗೆ ಶೇ. ೪೪.೫೨ ರಷ್ಟು ಜನಸಂಖ್ಯೆಯನ್ನು “ಇತರ ಹಿಂದುಳಿದ ವರ್ಗಗಳು ಎಂದು ನಿರ್ಧರಿಸಿತು. ಭಾರತೀಯ ಸಂವಿಧಾಣದ ವಿಧಿ ೧೫(೪) ಹಾಗೂ ೧೬(೪)ರ ಪ್ರಕಾರ ಸಮುದಾಯಗಳನ್ನು ಜಾತಿಗಳನ್ನು ಮತ್ತು ಬುಡಕಟ್ಟುಗಳನ್ನು ಹಿಂದುಳಿದ ಪಂಗಡಗಳೆಂದು ಪರಿಗಣಿಸಬೇಕು ಮತ್ತು ವಿದ್ಯಾಸಂಸ್ಥೆಗಳಲ್ಲಿ ಹಾಗೂ ಸರಕಾರಿ ಹುದ್ದೆಗಳಲ್ಲಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳನ್ನು ಬಿಟ್ಟು) ಶೇ.೩೨ ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸ್ಸು ಮಾಡಿತು.

೧೯೭೭ ಫೆಬ್ರವರಿ ೨೨ರಂದು ರಾಜ್ಯ ಸರಕಾರ ಹಾವನೂರ ಆಯೋಗದ ಎಲ್ಲಾ ಶಿಫಾರಸ್ಸುಗಳನ್ನು ಮಾನ್ಯಮಾಡಿ ಈ ಸಂಬಂಧ ಆದೇಶ ಹೊರಡಿಸಿತು. ಆದರೆ ೧೯೭೯, ಮೇ ಮತ್ತು ಜೂನ್‌ ತಿಂಗಳಲ್ಲಿ ಕೆಲ ತಿದ್ದುಪಡಿ ಮಾಡಿ, ಆ ಪ್ರಕಾರ ಮುಸ್ಲಿಮರನ್ನು ಮತ್ತು ಪರಿಶಿಷ್ಟಜಾತಿ/ವರ್ಗಗಳಿಂದ ಮತಾಂತರಗೊಂಡ ಕ್ರೈಸ್ತರನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿ, ಈ ಸಮುದಾಯಗಳ ಮೀಸಲಾತಿ ಪ್ರಮಾಣ ಶೇ.೧೬ರಿಂದ ೨೦ಕ್ಕೆ ಹೆಚ್ಚಿಸಿತು.

ಭೂ ಸುಧಾರಣೆ ಕುರಿತ ಚಿಂತನೆ

ಸ್ವಾತಂತ್ಯ್ರಾ ನಂತರದ ಕರ್ನಾಟಕದಲ್ಲಿ ಭೂ ಸುಧಾರಣಾ ಪ್ರಯತ್ನಗಳು ನಡೆದದ್ದು ಅರಸು ಅವರ ಕಾಲದ ಅವಧಿಯಲ್ಲಿ. ಅದರಲ್ಲೂ ಭೂ ಸುಧಾರಣೆ ಕಾನೂನಿಗೆ ಸಂಬಂಧಿಸಿದಂತೆ ಅವರ ವಿಚಾರಗಳು ತೀರಾ ಭಿನ್ನವಾಗಿದ್ದವು. ಈ ಹಿಂದೆ ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆಯ ಕಾಲದಲ್ಲಿಯೇ ಮೊದಲಬಾರಿಗೆ ಭೂಸುಧಾರಣ ಕ್ರಮಗಳು ಜಾರಿಗೆ ಬಂದಿದ್ದವು. ಆದರೆ ಇವು ಪೂರಕ ಬೆಳವಣಿಗೆಗಳಾದವೇ ವಿನಃ ರೈತಾಪಿ ವರ್ಗದ ಹೊರೆಯನ್ನು ಹಗುರಗೊಳಿಸುವ ಪ್ರಯತ್ನಗಳಾಗಿರಲಿಲ್ಲ.

ರಾಷ್ಟ್ರಮಟ್ಟದಲ್ಲಿ ಐವತ್ತು ಮತ್ತು ಅರವತ್ತರ ದಶಕದಲ್ಲಿ ನೆಹರು ನೇತೃತ್ವದಲ್ಲಿ ಕಾಂಗ್ರೆಸ್‌ ಸರಕಾರ ಭೂಸುಧಾರಣೆಗಳ ಪರವಾಗಿ ಕೆಲವು ಕಾನೂನುಗಳನ್ನು ಅನುಮೋದಿಸಿತ್ತಾದರೂ ಅವುಗಳನ್ನು ಜಾರಿಗೊಳಿಸಲು ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದ ಯಾವ ರಾಜ್ಯವೂ ಸಹ ಅಂಥ ಗಂಭೀರ ಪ್ರಯತ್ನ ನಡೆಸಿರಲಿಲ್ಲ. ಈ ಮಾತು ಕೂಡ ಎಪ್ಪತ್ತರ ದಶಕದ ಹಿಂದಿನ ಮೈಸೂರು ರಾಜ್ಯಕ್ಕೂ ಅನ್ವಯಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಹೀಗಾಗಿ ಕಾಂಗ್ರೆಸ್ಸಿನ ಆರ್ಥಿಕ ನೀತಿಗೆ ಸಮಾಜವಾದಿ ನೆಲೆಯನ್ನೂ ದೊರಕಿಸಿಕೊಡಲು ನೆಹರು ಅವರು ಅವಿರತವಾಗಿ ಶ್ರಮಿಸಿದರೂ, ಭೂ ಸುಧಾರಣೆಗಳಿಂದ ಸಮಾಜವಾದಿ ಕ್ರಮಗಳನ್ನು ಜಾರಿಗೊಳಿಸಿಲ್ಲದಿರುವುದು ತಿಳಿದುಬರುತ್ತದೆ. ಕಾರಣ ಅಂದು ಕಾಂಗ್ರೆಸ್‌ ಪಕ್ಷದಲ್ಲಿ ಭೂಮಾಲೀಕರ ವರ್ಗವೇ ತನ್ನ ಪ್ರಾಬಲ್ಯತೆಯನ್ನು ಪಡೆದುಕೊಂಡಿತ್ತು ಎಂದು ಸ್ಪಷ್ಟವಾಗಿ ಹೇಳಬಹುದು. ಈ ವರ್ಗ ಭೂಸುಧಾರಣೆ ಕಾಯಿದೆ ಜಾರಿಗೆ ಎಂದೂ ಸಕಾರಾತ್ಮಕವಾಗಿ ಸಹಕರಿಸಲಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಕರ್ನಾಟಕದಲ್ಲಿ ಎಸ್‌. ನಿಜಲಿಂಗಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ೧೦.೦೬.೧೯೫೭ರಲ್ಲಿ ಬಿ.ಡಿ.ಜತ್ತಿಯವರ ನೇತೃತ್ವದಲ್ಲಿ ಭೂಸುಧಾರಣಾ ಕಮಿಟಿಯನ್ನು ರಚಿಸಲಾಯಿತು. ೧೦.೦೯.೧೯೫೭ರಲ್ಲಿ ಈ ಕಮಿಟಿ ತಾನು ಅಧ್ಯಯನ ನಡೆಸಿ ತಯಾರಿಸಿದ ಸಲಹೆಗಳನ್ನು ಸರಕಾರದ ಮುಂದೆ ಇಟ್ಟಿತು. ಈ ಸಮಿತಿ ಸಲಹೆಗಳ ಆಧಾರದ ಮೇಲೆ ಸರಕಾರದ ಬಿಲ್ಲೊಂದನ್ನು ರಚಿಸಿ ಶಾಸನಸಭೆಯ ಮುಂದಿಡಲು ತೀರ್ಮಾನಿಸಿತು. ಅಂತಿಮವಾಗಿ ೦೫.೦೩.೧೯೬೨ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಕರ್ನಾಟಕದಲ್ಲಿ ಭೂಸುಧಾರಣಾ ಶಾಸನವಾಯಿತು. ಹೀಗೆ ಭೂ ಸುಧಾರಣಾ ಕಾಯಿದೆ ಕುರಿತಂತೆ ಮಹತ್ವದ ಚರ್ಚೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆದಿರುವುದು ತಿಳಿದುಬರುತ್ತದೆ.

ಸಮಾಜವು ಆರ್ಥಿಕ ರಚನೆಯ ಮೇಲೆ ನಿಂತಿದ್ದು ಅದರ ಮೇಲೆ ಸಾಮಾಜಿಕ ರಚನೆ ಆಗಿದೆ. ಅದರ ಮೇಲೆ ರಾಜಕೀಯ ವ್ಯವಸ್ಥೆ ನಿಂತಿದೆ. ಸಾಮಾಜಿಕ ಮಟ್ಟದಲ್ಲಿ ಸುಸ್ಥಿತಿಯಲ್ಲಿರುವವರು, ಆಸ್ತಿಯನ್ನು ಹೊಂದಿರುವವರು, ರಾಜಕೀಯ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿರಿಸಿ ಕೊಂಡಿದ್ದಾರೆ. ಹೀಗಾಗಿ ದಲಿತರನ್ನು ಒಳಗೊಂಡಂತೆ ಎಲ್ಲಾ ಜಾತಿಯ ಭೂಮಾಲೀಕರನ್ನು ಬಂಡವಾಳಶಾಹಿಗಳು, ಬಂಡವಾಳಶಾಹಿ ಹಿತಾಸಕ್ತಿ ಕಾಪಾಡುವವರು ರಾಜಕೀಯ ಅಧಿಕಾರವನ್ನು ಹಿಡಿದುಕೊಂಡಿದ್ದರಿಂದ ಅರಸು ಅವರಿಗೆ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸುವಾಗ ಅನೇಕ ತೊಡಕುಗಳನ್ನು ಎದುರಿಸಬೇಕಾಯಿತು.

ಅದರಲ್ಲಿ ಐ.ಎ.ಎಸ್‌. ಅಧಿಕಾರಿಗಳು ಮತ್ತು ಜಮೀನುದಾರರ ವರ್ಗಗಳ ಒಳ ಜಗಳ ಈ ಕಾಯ್ದೆ ಅನುಷ್ಠಾನಗೊಳ್ಳುವಂತೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದ್ದವು. ಬಹಳಷ್ಟು ಪುರೋಗಾಮಿ ಎನಿಸಿದ್ದ ಭೂ ಸುಧಾರಣಾ ಕಾಯಿದೆಯ ನಿಯಮಗಳನ್ನು ರಚಿಸುವಾಗಲಂತೂ ಐ.ಎ.ಎಸ್‌ ಅಧಿಕಾರಿಗಳ ವರ್ಗ ಹೆಜ್ಜೆ ಹೆಜ್ಜೆಗೂ ಕಾನೂನಿನ ತೊಡಕುಗಳನ್ನು ಮತ್ತು ಆತಂಕಗಳನ್ನು ತಂದೊಡ್ಡಿದರಂತೆ. ಈ ಕಾನೂನಿನ ಸೆಣಸಾಟದಲ್ಲಿ ಬೇಸತ್ತ ಅರಸು ಅವರು ಈ ಕಾಯಿದೆಯ ರಚನೆಯ ಪೂರ್ಣ ಹೊಣೆಯನ್ನು ಆಗಿನ ಕಾನೂನು ಇಲಾಖೆಯ ಕಾರ್ಯದರ್ಶಿಯಾಗಿದ್ದ ವೆಂಕಟೇಶ್‌ ಅವರಿಗೆ ವಹಿಸಿಕೊಟ್ಟಿದ್ದರು. ಈಗ ಅರಸು ಉಸಿರು ಗಟ್ಟಿರುವ ವಾತಾವರಣದಿಂದ ಸ್ವಲ್ಪ ಮಟ್ಟಿಗೆ ಹೊರಬಂದು ನಿರುಮ್ಮಳವಾಗಿ ಉಸಿರಾಡುವಂತಾಗಿದ್ದರು. ನಿಜಲಿಂಗಪ್ಪನವರ ಕಾಲದಿಂದಲೂ ನೆನೆಗುದ್ದಿಗೆ ಬಿದ್ದಿದ್ದ ಭೂ ಸುಧಾರಣಾ ಕಾಯಿದೆಗೆ ಎಪ್ಪತ್ತರ ದಶಕದಲ್ಲಿ ಅರಸು ಅವರು ನಿರಂತರ ಪ್ರಯತ್ನದಿಂದ ರಾಜ್ಯದಲ್ಲಿ ಲಕ್ಷಾಂತರ ಗೇಣಿದಾರರಿಗೆ ಭೂಮಿ ಮೇಲಿನ ಒಡೆತನ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಎಂಬುದು ಅತ್ಯಂತ ಮಹತ್ವಪೂರ್ಣವಾದದ್ದು. ಜೊತೆಗೆ ಕೃಷಿಗೆ ಸಂಬಂಧಿಸಿದಂತೆ ಅದಕ್ಕೆ ಬೇಕಾದ ಸೇವಾಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಅವರು ದಿಟ್ಟ ಹೆಜ್ಜೆ ಶ್ಲಾಘನೀಯವಾದದ್ದು. ಅಷ್ಟೇ ಅಲ್ಲದೆ ಕಾನೂನಿನ ಆಧಾರದ ಮೇಲೆ ಪ್ರತಿ ತಾಲ್ಲೂಕಿಗೊಂದರಂತೆ ಭೂನ್ಯಾಯ ಮಂಡಳಿಯನ್ನು ಸ್ಥಳೀಯ ಜನತಾ ಪ್ರತಿನಿಧಿಗಳ ಸಮೇತ ನೇಮಿಸಿದರು. ಇಂಥ ನ್ಯಾಯಾಲಯಗಳನ್ನು ‘ಜನತಾ ನ್ಯಾಯಾಲಯ ’ಗಳೆಂದು ಕರೆದರು.

ಅರಸು ಅವರ ದೃಷ್ಟಿಯಲ್ಲಿ ಈ ಕೆಳಕಂಡ ಭೂಸುಧಾರಣೆಯ ಉದ್ದೇಶಗಳು ಬಹುಮುಖ್ಯವಾಗಿದ್ದವು:

೧. ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸುವುದು.

೨. ಜೀತಪದ್ಧತಿಯನ್ನು ನಿರ್ಮೂಲನೆ ಮಾಡುವ ಉದು.

೩. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು.

೪. ಭೂಮಿ ಇಲ್ಲದವರಿಗೆ ಭೂಮಿಯನ್ನು ಹಂಚುವುದು.

೫. ಬಂಡವಾಳಶಾಹಿತ್ವವನ್ನು ತಡೆಗಟ್ಟುವುದು.

೬. ಆಥಿ೯ಕ ಸಮಾನತೆಯನ್ನು ತರುವುದು.

೭. ಉದ್ಯೋಗಗಳ ಸೃಷ್ಟಿ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು.

ಒಟ್ಟಿನಲ್ಲಿ ೧೯೯೫ರ ಭೂಸುಧಾರಣಾ ಮಾರ್ಪಾಟಿನಿಂದಾಗಿ, ಗೇಣಿ ಪದ್ಧತಿ ತನ್ನದೇ ಆದ ಹೊಸರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ‘ಸಾರ್ವಜನಿಕ ಹಿತಾಸಕ್ತಿ’ ಎಂಬ ತಲೆಬರಹದಲ್ಲಿ ಭೂ ಒಡೆತನವನ್ನು ಮತ್ತೆ ಬಲಿಷ್ಠರಿಗೆ ಬಿಟ್ಟುಕೊಡಲಾಗುತ್ತಿದೆ.

೧೯೭೪ರಲ್ಲಿ ಅರಸು ಜಾರಿಗೆ ತಂದ ಭೂಸುಧಾರಣಾ ಶಾಸನ ಸಾಮಾಜಿಕ ವ್ಯವಸ್ಥೆಯನ್ನೇ ಒಮ್ಮೆ ಅಲುಗಾಡಿಸಿತು ಎಂದೇ ಹೇಳಬೇಕು. ಕೇವಲ ಭೂಮಾಲೀಕರ ಆಜ್ಞಾನುವರ್ತಿಗಳಾಗಿ ಯಜಮಾನ ಸಂಸ್ಕೃತಿಗೆ ತಲೆಬಾಗಿ ಬದುಕಿ ಬಂದಿದ್ದ ಗೇಣಿದಾರ ರೈತ ಜನರು ಸೆಟೆದು ನಿಂತು ಉಳುಮೆಯ ಭೂಮಿಯ ಒಡೆತನ ಪಡೆಯಲು ಇದೊಂದು ಅವಕಾಶವನ್ನು ಒದಗಿಸಿಕೊಟ್ಟಿತು. ಇದು ಕೇವಲ ಗೇಣಿದಾರರಿಗೆ ಸ್ವತಂತ್ರ ಬದುಕಿನ ಆಸರೆಯನ್ನು ಒದಗಿಸುವ ಆರ್ಥಿಕ ಕಾರ್ಯಕ್ರಮವಾಗಿರದೆ ಸಾಮಾಜಿಕ ಬಂಧನಗಳಿಂದಲೂ ಅವರನ್ನು ಬಿಡುಗಡೆಗೊಳಿಸಿದ ಸಾಮಾಜಿಕ ಕ್ರಾಂತಿಯೂ ಆಗಿತ್ತು. ಆದರೆ ಇದರಿಂದ ಅರಸು ಅವರು ಪ್ರತಿಷ್ಠಿತರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಏಕೆಂದರೆ ಭೂ ಒಡೆತನವನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳು ಅರಸರನ್ನು ಮನಸಾರೆ ಶಪಿಸಿದರು. ಅಲ್ಲದೆ ರಾಜಕೀಯವಾಗಿ ಪ್ರಜ್ಞಾವಂತರಾದ ಈ ಜನರು ಅರಸು ವಿರುದ್ಧ ಪ್ರಚಾರದ ಸಮರವನ್ನೇ ಸಾರಿದರು. ಆದರೂ ಅರಸು ಕೈಗೊಂಡ ಈ ಕ್ರಮದಿಂದ ಗ್ರಾಮೀಣ ಪ್ರದೇಶದ ಕಡುಬಡವರಾದ ಕೃಷಿಕಾರ್ಮಿಕರಿಗೆ ಯಾವ ಅನುಕೂಲವೂ ಆಗಲಿಲ್ಲ ಎನ್ನುವ ಒಂದು ವಾದವಿದೆ. ಏಕೆಂದರೆ ಇದರಿಂದ ಹೆಚ್ಚು ಲಾಭ ಪಡೆದುಕೊಂಡವರು ರಾಜಕಾರಣಿಗಳ ಹಿಂಬಾಲಕರು ಮತ್ತು ಪ್ರತಿಷ್ಠಿತರ ಹಿಂಬಾಲಕರು. ಇದರಿಂದಾಗಿ ಹೆಚ್ಚುವರಿ ಭೂಮಿಯನ್ನು ಕೃಷಿಕಾರ್ಮಿಕರಿಗೆ ಹಂಚುವ ಕಾರ್ಯ ಯಶಸ್ವಿಯಾಗಲಿಲ್ಲ. ಏಕೆಂದರೆ ಮೊದಲನೆಯದಾಗಿ ಹೆಚ್ಚುವರಿ ಭೂಮಿ ಅಷ್ಟೇನೂ ಹೆಚ್ಚಾಗಿ ಇರಲಿಲ್ಲ. ಪ್ರಬಲ ಕೋಮುಗಳ ಭೂಮಾಲೀಕರು ಭೂಮಿತಿ ಶಾಸನ ರಚನೆಯಾಗುವುದೆಂಬುದರ ಸುಳಿವು ತಿಳಿದು ತಮ್ಮ ಸಂಬಂಧಿಗಳಿಗೆ ಭೂಮಿಯನ್ನು ಹಂಚುವುದರಲ್ಲೂ ವಿಳಂಬ ಮಾಡಿದರು. ಹೀಗಾಗಿ ಅರಸು ಕೈಗೊಂಡ ಈ ಭೂ ಸುಧಾರಣಾ ಯೋಜನೆಯು ಸಂಪೂರ್ಣವಾಗಿ ಸಫಲವಾಗದಿದ್ದರೂ ಸಾಮಾಜಿಕ ದುರ್ಬಲರ ಬದುಕಿಗೆ ಒಂದು ಸ್ವಂತಿಕೆಯ ನೆಲೆಯನ್ನು ಒದಗಿಸುವಲ್ಲಿ ಅವರು ತೆಗೆದುಕೊಂಡ ಈ ನಿಲುವು ಅತ್ಯಂತ ಕ್ರಾಂತಿಕಾರಕವಾದದ್ದು. ಈ ಹಿನ್ನೆಲೆಯಲ್ಲಿ ಅವರನ್ನು ‘ಮೌನಕ್ರಾಂತಿಯ ಹರಿಕಾರ’ ಎಂದು ಕರೆದಿದ್ದರಲ್ಲಿ ಅತಿಶಯೋಕ್ತಿಯೇನಲ್ಲ. ಹೀಗಾಗಿ ಭೂ ಸುಧಾರಣೆ ಎಂಬುವುದು ಐತಿಹಾಸಿಕ ಕ್ರಮವಾಗಿದೆ ಎನ್ನಬಹುದು.

ಜಾತಿ ಪದ್ಧತಿ ಕುರಿತ ಚಿಂತನೆ

ಮನುಷ್ಯನ ಹುಟ್ಟು ಆಕಸ್ಮಿಕ. ಹುಟ್ಟಿನಿಂದ ಯಾರೂ ಕೀಳಲ್ಲ, ಮೇಲೂ ಅಲ್ಲ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಯಾರ ಬದುಕೂ ಬರಡಾಗಬಾರದು. ಸಾಮಾಜಿಕ ಅನಿಷ್ಟಗಳಿಂದುಂಟಾದ ಸಾಮಾಜಿಕ ಪಿಡುಗು ಜಾತಿ ಪದ್ಧತಿ. ಈ ಅಮಾನುಷ ಪದ್ಧತಿಯಿಂದಾಗಿ ದೇಶ ಹಾಗೂ ತುಳಿತಕ್ಕೊಳಗಾದ ವರ್ಗಗಳ ಅಭಿವೃದ್ಧಿಗೆ ತೊಡಕು ಉಂಟಾಗಿದೆ. ದೇಶದ ಮಹಾನ್‌ ನಾಯಕರಾದ ಮಹಾತ್ಮ ಗಾಂಧೀಜಿ, ಬಿ.ಆರ್. ಅಂಬೇಡ್ಕರ್, ಜ್ಯೋತಿಬಾಫುಲೆ, ಬಾಬು ಜಗಜೀವನ್‌ರಾಮ್‌, ಜಯಪ್ರಕಾಶ್‌ ನಾರಾಯಣ ಮತ್ತು ಲೋಹಿಯಾ ಅವರಂಥ ಸಮಾಜ ಸುಧಾರಕರು ಈ ಅಮಾನುಷ ಜಾತಿಪದ್ಧತಿ ನಿರ್ಮೂಲನೆಗಾಗಿ ಹಲವಾರು ಕ್ರಾಂತಿಕಾರಕ ಹೋರಾಟಗಳನ್ನು ಮಾಡಿರುವುದನ್ನು ಕಾಣುತ್ತೇವೆ. ಅದಕ್ಕಾಗಿಯೇ ಅದರಂತೆ ರಾಜ್ಯದಲ್ಲಿ ದೇವರಾಜ ಅರಸು ಅವರು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಬೇಕೆಂದರೆ ಜಾತಿ ಪದ್ಧತಿ ನಿರ್ಮೂಲನೆ ಆದಾಗ ಮಾತ್ರ ಸಾಧ್ಯ ಎಂಬುದನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ಕೈಗೊಂಡರು. ಯಾವುದೋ ಕಾಲದಲ್ಲಿ ಯಾವುದೋ ಒಂದು ಕಾರಣಕ್ಕೆ ಜನ ಒಡೆದು ಗುಂಪಾಗಿ,; ಜಾತಿ ಮತ್ತು ಉಪಜಾತಿಗಳಾಗಿ ಹುಟ್ಟಿಕೊಂಡಿದ್ದು ಮನುಕುಲದ ದುರಂತವೆಂಬ ಭಾವನೆ ಅವರದಾಗಿತ್ತು. ದುಡಿಯುವ ಜನರನ್ನು ಶೂದ್ರರು ಅಸ್ಪೃಶ್ಯರು ಎಂದು ಪರಿಗಣಿಸಿ, ಯಾವ ಕೆಲಸವನ್ನು ಮಾಡದೆ ಮೈಬೆಳೆಸಿ ಕುಳಿತ ಮೈಗಳ್ಳರನಕ್ನು ಶ್ರೇಷ್ಠರೆಂದು ಭಾವಿಸಿದ್ದ ಜಾತಿಪದ್ಧತಿಯ ನಿರ್ಮೂಲನೆ ಅಗತ್ಯವಾಗಿ ಆಗಬೇಕಾದದ್ದು ಮೊದಲನೆ ಕೆಲಸ ಎಂಬುದು ಅರಸರ ದೃಢವಾದ ನಂಬಿಕೆಯಾಗಿತ್ತು. ಅದಕ್ಕಾಗಿ ದೀನದಲಿತರಿಗೆ ರಾಜಕೀಯ ಶಕ್ತಿ, ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಗಣ್ಯತೆಯನ್ನು ಗಳಿಸಿಕೊಡುವ ಹಂಬಲ ಅವರದಾಗಿತ್ತು. ಆ ಮೂಲಕ ಈ ತಳಸಮುದಾಯ ವರ್ಗಗಳಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಸಮಾನತೆಯನ್ನು ಕಲ್ಪಸಿಕೊಟ್ಟರು. ಅರಸು ಅವರು, ಸ್ವತಃ ತೀರ ಅಲ್ಪಸಂಖ್ಯಾತರಾಗಿರುವ ಬಹುತೇಕ ಜಾತಿಶ್ರೇಣಿಯ ಯಾಜಮಾನ್ಯವನ್ನು ಪ್ರತಿಷ್ಠಾಪಿಸುವುದೇ ಆಗಿದೆ. ನಮ್ಮ ದೇಶದ ಬಹುಪಾಲು ಎಲ್ಲ ರಾಜಕೀಯ ಪಕ್ಷಗಳು ಇಂದು ಜಾತಿಯನ್ನು ನಿರಾಕರಿಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಾರವು. ಅದಕ್ಕಾಗಿಯೇ ಇಂದು ರಾಜಕೀಯ ಪಕ್ಷಗಳು ಅತಿ ಹೆಚ್ಚು ಮತವಿರುವ ಕೋಮಿನ ನಾಯಕರನ್ನು ಚುನಾವಣೆಗೆ ಇಳಿಸುತ್ತವೆ. ಇದು ಜಾತಿಯ ಬೇರುಗಳು ಮತ್ತಷ್ಟು ಗಟ್ಟಿಗೊಳ್ಳಲು ಅವಕಾಶವನ್ನು ಒದಗಿಸಿದೆ. ಇಂಥ ಪ್ರಕ್ಷುಬ್ಧ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಅರಸು ಅವರು, “ಜಾತೀಯತೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಕೆರಳಿಸುವ ಜನರಿಗೆ ಇದು ಸಲ್ಲದ ಮಾರ್ಗ. ಮಾನವ ಜಾತಿ ಎಂಬುದು ಒಂದೇ. ಮಾನವರೆಲ್ಲ ಬಂಧುಗಳು, ಮಾನವನ ಹಿತಸಾಧನೆಯೇ ತನ್ನ ಕರ್ತವ್ಯ ಎಂಬ ಭಾವನೆ ತಾಳಿ ಸೇವಾಭಾವನೆಯಿಂದ ದುಡಿಯುವವರು ಎಲ್ಲಾ ಜಾತಿಯ ಜನರಿಗೂ ಬಂಧುವಿನಂತೆ ಪ್ರಿಯವಾಗುವರು” ಎಂಬ ಸ್ಪಷ್ಟ ಸಂದೇಶವನ್ನು ಸಾರಿದವರು.

ಜೀತ ಪದ್ಧತಿ ನಿಷೇದ ಕುರಿತ ಚಿಂತನೆ

ಭಾರತೀಯ ಸಮಾಜಕ್ಕೆ ಅಂಟಿಕೊಂಡು ಬಂದಿದ್ದ ಅನೇಕ ಸಾಮಾಜಿಕ ಜಾಢ್ಯಗಳಲ್ಲಿ ಜೀತ ಪದ್ಧತಿ ಬಹಳ ನಿಕೃಷ್ಟವಾದುದು. ಅದು ಪ್ರಾಣಿಗಳಂತೆ ಮನುಷ್ಯರ ಮಾರಾಟದಲ್ಲಿ ರೂಪಗೊಂಡಿದ್ದ ಗುಲಾಮಗಿರಿ. ಜೀತಪದ್ಧತಿ ಸಮಾಜದ ಅತ್ಯಂತ ಕಳಾಹೀನವಾದ ಪದ್ಧತಿ. ಕಡುಬಡವರಾದ ಕೃಷಿಕಾರ್ಮಿಕರು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳಲು ಮತ್ತು ಕುಟುಂಬವನ್ನು ಸಾಕಲು ತಮ್ಮೂರಿನ ಸಾಹುಕಾರರ ಮನೆಯಲ್ಲಿ ೨೦೦-೩೦೦ ರೂಪಾಯಿಗಳಷ್ಟು ಸಾಲಪಡೆದು ಅದನ್ನು ತೀರಿಸಲಾಗದೆಲ, ಅದೇ ಸಾಹುಕಾರರ ಮನೆಯಲ್ಲಿ ಜೀತಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದರು. ಈ ಬಡಜನರು ತಮ್ಮ ಜೀವನದುದ್ದಕ್ಕೂ ಸಂದಾಯ ಮಾಡಲಾಗದ ಸಾಲವಿದು. ಈ ಸಾಲಕ್ಕೆ ಒತ್ತೆಯಾಳಾಗಿ ದುಡಿಯಬೇಕಾದ ಪರಿಸ್ಥಿತಿಯೂ ಉಂಟು. ಸಾಲದ್ದಕ್ಕೆ ಈ ಕೆಲಸಕ್ಕೆ ವೇತನವೆಂಬುದು ಇರುತ್ತಿರಲಿಲ್ಲ. ಸಾಲವನ್ನು ತೀರಿಸಲು ಜೀವನಪರ್ಯಂತ ಅವನು ಶ್ರೀಮಂತರ ಕೊಟ್ಟಿಗೆ ಮನೆಯಲ್ಲಿಯೇ ವಾಸಮಾಡಿ ಪುಕ್ಕಟೆಯಾಗಿ ದುಡಿಯುವುದೇ ಇವನ ಜೀವನದ ದಿನನಿತ್ಯದ ಕಾಯಕ. ಈ ಸಂದರ್ಭದಲ್ಲಿ ಶ್ರೀಮಂತರು ಹಾಕಿದ ಗಂಜಿಯನ್ನೋ, ಅನ್ನವನ್ನೋ ತಿಂದು ದುಡಿಯಬೇಕಾಗಿತ್ತು. ಒಂದು ವೇಳೆ ಜೀತದಾಳು ಸತ್ತರೆ ಅವನ ಮಕ್ಕಳಲ್ಲಿ ಒಬ್ಬನನ್ನು ಜೀತಕ್ಕೆ ತೆಗೆದುಕೊಳ್ಳುವ ಅಮಾನುಷ ಸಂಪ್ರದಾಯ ಈ ಪದ್ಧತಿಯಲ್ಲಿ ಅಡಕವಾಗಿತ್ತು. ಇಂತಹ ಒಂದು ಕ್ರೂರ ಸಂಪ್ರದಾಯಕ್ಕೆ ೧೯೭೫ರಲ್ಲಿ ದೇವರಾಜು ಅರಸು ಹಾಗೂ ಅವರ ಸಚಿವ ಸಂಪುಟವು ಈ ಪದ್ಧತಿಯ ನಿರ್ಮೂಲನೆಗೆ ಕೊನೆ ಹಾಡುವ ಒಂದು ರಚನಾತ್ಮಕ ಶಾಸನ ಜಾರಿಗೊಳಿಸಿದರು. ‘ಸಾಮಾಜಿಕ ನ್ಯಾಯದ ಹರಿಕಾರ’ ಎಂದು ಹೆಸರು ಪಡೆದ ಅವರು ಜಾರಿಗೊಳಿಸಿದ ಕಾಯ್ದೆಗಳಲ್ಲಿ ಈ ಜೀತಪದ್ಧತಿ ನಿರ್ಮೂಲನಾ ಕಾಯ್ದೆ ಅತ್ಯಂತ ಮಹತ್ವದ್ದು. ಈ ಹಿಂದೆ ಎಸ್‌.ನಿಜಲಿಂಗಪ್ಪ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಕಷ್ಟಕೋಟಲೆಗಳನ್ನು ಕಣ್ಣಾರೆ ಕಂಡಿದ್ದ ಅರಸು ಅವರು ಈ ಕಾರ್ಮಿಕ ಅಭಿವೃದ್ಧಿ ಮತ್ತು ಜೀತಗಾರರ ಬದುಕಿಗೆ ಒಂದು ಹೊಸ ಆಯಾಮ ನೀಡುವ ಸಂಕಲ್ಪವನ್ನು ಆಗಲೇ ಮಾಡಿದ್ದರೆಂದು ಕಾಣುತ್ತದೆ. ಆದ್ದರಿಂದ ೧೯೭೫ರಲ್ಲಿ ಈ ಜೀತಪದ್ಧತಿ ನಿಷೇಧ ಕಾನೂನು ಜಾರಿಗೆ ತಂದ ಅರಸು, ಭೂಮಾಲೀಕರಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಸಾವಿರಾರು ನತದೃಷ್ಟರ ಬಾಳಿಗೆ ಬೆಳಕು ತೋರಿದರು. ಅಲ್ಲದೆ ಅವರು ಹೊಸ ಬದುಕನ್ನು ರೂಪಿಸಿಕೊಳ್ಳಲು ರಚನಾತ್ಮಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಇದರಿಂದಾಗಿ ಸುಮಾರು ಅರವತ್ತೈದು ಸಾವಿರ ಜೀತದಾರರು ಈ ಜೀತದಿಂದ ವಿಮುಕ್ತಿಯನ್ನು ಪಡೆದರು. ಇಂತಹ ಪದ್ಧತಿಯನ್ನು ಬೇರುಸಮೇತ ತೆಗೆದು ಹಾಕಲು ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ, ಜೀತಪದ್ಧತಿಯ ನಿರ್ಮೂಲನೆ ಕಾರ್ಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದು ಹಾಗೂ ಜೀತದಾಳುಗಳನ್ನು ಗುರುತಿಸಿ ಅಂತಹ ಜೀತದಾಳುಗಳಿಗೆ ಪರ್ಯಾಯ ಉದ್ಯೋಗಳನ್ನು ಒದಗಿಸುವುದಕ್ಕೆ ಸರಕಾರ ಕ್ರಮಗಳನ್ನು ಕೈಗೊಂಡಿತು. ಜೊತೆಗೆ ಜೀತದಾಳುಗಳಿಗೆ ಕನಿಷ್ಟ ವೇತನಗಳನ್ನು ನೀಡಲೂ ಸಹ ಸರಕಾರ ಯೋಚಿಸಿತ್ತು. ೧೯೭೬-೭೭ರ ಸಂದರ್ಭದಲ್ಲಿ ಬೆಂಗಳೂರಿನ ಸುತ್ತಮುತ್ತ ಕೆಲ ಪ್ರದೇಶಗಳಲ್ಲಿ ನಡೆಯುತ್ತಿದ್ದ ಜೀತಪದ್ಧತಿಯು ಜೀವಂತವಾಗಿರುವ ಸುದ್ದಿ ಪತ್ರಿಕೆಗಳಲ್ಲಿ ನೋಡಿದ ತಕ್ಷಣವೇ ಮುಖ್ಯಮಂತ್ರಿ ಅರಸು ಆ ಭಾಗಕ್ಕೆ ಖುದ್ದಾಗಿ ಭೇಟಿ ನೀಡಿ ಆ ಪದ್ಧತಿಯನ್ನು ನಡೆಸಿಕೊಂಡು ಬರುತ್ತಿದ್ದ ವ್ಯಕ್ತಿಗಳನ್ನು ಅಪರಾಧಿಗಳೆಂದು ಪರಿಗಣಿಸಿ ಕಾನೂನಿನ್ವಯ ಶಿಕ್ಷಿಸಿದರು. ಹೀಗೆ ಜೀತಪದ್ಧತಿಯನ್ನು ಸಮಾಜದಿಂದ ಬೇರುಸಮೇತ ಕಿತ್ತುಹಾಕಬೇಕೆಂದು ಅವರು ದೃಢವಾದ ನಿಲುವುಗಳನ್ನು ತಾಳಿದರೂ, ಇಂದು ಸಂಪೂರ್ಣವಾಗಿ ಈ ಅಮಾನುಷ ನೀಚಪದ್ಧತಿಯು ಇನ್ನೂ ಸಮಾಜದಿಂದ ಕಣ್ಮರೆಯಾಗಿಲ್ಲದಿರುವುದು ಬೇಸರದ ಸಂಗತಿ.

ಋಣ ಪರಿಹಾರ ಕಾಯ್ದೆ ಕುರಿತ ಚಿಂತನೆ

ದೀನ-ದಲಿತರ ಬಂಧ ವಿಮೋಚನೆಯ ವಿಷಯದಲ್ಲಿ ಅರಸು ಯಾವಾಗಲೂ ವಿರಮಿಸಲಿಲ್ಲ. ಸದಾ ದೀನ-ದಲಿತರ ಬಗೆಗೆ ಚಿಂತನಾಶೀಲರಾಗಿರುತ್ತಿದ್ದ ಅವರಿಗೆ, ಬೆವರು ಸುರಿಸಿ ದುಡಿಯುವ ಜನಕ್ಕೆ ಈ ಕಾನೂನುಗಳಿಂದ ಹೊಟ್ಟೆ ತುಂಬದು ಎನ್ನುವ ವಿಚಾರ ಆಗ ಹೊಳೆದಿರಬೇಕು. ಹೀಗಾಗಿ ಭೂರಹಿತ ಕೃಷಿ ಕಾರ್ಮಿಕರಿಗೆ, ಸಣ್ಣ ಹಿಡುವಳಿದಾರರಿಗೆ ಸಾಲಸೌಲಭ್ಯ ಶೀಘ್ರಗತಿಯಲ್ಲಿ ದೊರಕುವಂತೆ ಮಾಡಿದರು. ಕಮ್ಮಾರ, ಕುಂಬಾರ, ಅಗಸ, ಉಪ್ಪಾರ ಮತ್ತಿತರ ಕಸಬುದಾರ ಕುಟುಂಬಗಳು ಹಾಗೂ ಸಾಲಶೂಲದಲ್ಲಿ ಮುಳುಗಿದ ನಿರ್ಗತಿಕ ಕುಟುಂಬಗಳು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿವೆ ಎಂಬ ಅರಿವೂ ಅವರಿಗಿತ್ತು. ಇಂತಹ ಬಡಜನರು ತಮ್ಮ ಬದುಕಿನ ಬಂಡಿಯನ್ನು ಸಾಗಿಸಲು ಊರಿನ ಶ್ರೀಮಂತರಿಂದ ಸಾಲ ಪಡೆದು ಇದ್ದ ಬದ್ದದ್ದನ್ನೆಲ್ಲ ಅಡವು ಇಡುತ್ತಿದ್ದರು. ತುಂಡು ಜಮೀನು ಇದ್ದರೂ ಸಹ, ಅದನ್ನು ಒತ್ತೆಯಿಡುತ್ತಿದ್ದರು. ಹೀಗೆ ಶ್ರೀಮಂತರ ಹಂಗಿನಲ್ಲಿ ಬದುಕಿಬಂದಿರುವ ಬಡಜನರ ಸಾಲದ ಹೊರೆಯನ್ನು ಒಂದೇ ಬಾರಿಗೆ ಇಳಿಸುವ ನಿರ್ಧಾರಕ್ಕೆ ಅರಸು ಬಂದರು. ಪರಿಣಾಮವಾಗಿ, ಬಡಜನರು ಶ್ರೀಮಂತರಿಂದ ಪಡೆದಿದ್ದ ಎಲ್ಲಾ ಸಾಲವನ್ನು ಮನ್ನಾಮಾಡುವ ಶಾಸನವನ್ನು ೧೯೭೫ರಲ್ಲಿ ಜಾರಿಗೆ ತಂದರು. ಇದನ್ನು ‘ಋಣಪರಿಹಾರ’ ಕಾಯಿದೆ ಎಂದು ಕರೆದರು. ಇದರಿಂದ ರಾಜ್ಯದ ಲಕ್ಷಾಂತರ ಜನರ ಕಣ್ಣೀರು ಒರೆಸಿದ ಶ್ರೇಯಸ್ಸು ದೇವರಾಜ ಅರಸು ಅವರದಾಯಿತು.

ಅಸ್ಪೃಶ್ಯತೆ ನಿವಾರಣೆ ಚಿಂತನೆ

ಅಸ್ಪೃಶ್ಯತೆಯು ಹಿಂದೂ ಸಮಾಜದ ವರ್ಣವ್ಯವಸ್ಥೆಯಲ್ಲಿನ ಒಂದು ‘ಅನಿಷ್ಟ ಕೂಸು’. ಒಂದೇ ಸಮಾಜದ ಒಂದು ಜಾತಿಯು ಇನ್ನೊಂದು ಜಾತಿಯ ಮೇಲೆ ನಡೆಸಿಕೊಂಡು ಬಂದ ಸಾಮಾಜಿಕ ಅಸಹನೆ. ಅಸ್ಪೃಶ್ಯತೆ ಎಂದರೆ ಹೊಲೆ ಮೈಲಿಗೆ, ಕಳಂಕ ಎಂದರ್ಥ. ಹಿಂದು ಸಮಾಜದ ಅತ್ಯಂತ ಕೆಳಸ್ತರದವರು ಜೀವನವಿಡೀ ಅನುಭವಿಸಬೇಕಾದ ಶಿಕ್ಷೆ. ಒಂದು ಕಾಲಕ್ಕೆ ಸಾಮಾಜಿಕ ವ್ಯವಸ್ಥೆ ಎನಿಸಿಕೊಂಡಿದ್ದ ವ್ಯವಸ್ಥೇ ಇಂದು ಕೊಳತು ನಾರುತ್ತಿರುವ ದುರ್ಗಂಧ, ನಿಂತ ನೀರು. ಆದರೆ ಹುಟ್ಟಿನಿಂದಲೇ ಅಂಟಿಕೊಂಡು ಬಂದ ಈ ಜಾತಿ, ಬ್ರಾಹ್ಮಣರನ್ನು ಬ್ರಾಹ್ಮಕಣರನ್ನಾಗಿಸಿದರೆ, ಹರಿಜನರನ್ನು ಹುಟ್ಟಿನಿಂದಲೇ ಹರಿಜನರೆಂದು ದೂರವಿಡುತ್ತದೆ. ವಿಶ್ವ ಇತಿಹಾಸದಲ್ಲಿ ಈ ಕ್ರೌರ್ಯಕ್ಕೆ, ಅಸಹನೆಗೆ, ಅಸಹ್ಯ ಪದ್ಧತಿಗೆ ಸಮಾನವಾದದ್ದು ಯಾವುದೂ ಇಲ್ಲ. ಸರಕಾಢರ ಅಸ್ಪೃಶ್ಯತೆ ನಿವಾರಣೆ ಕುರಿತು ಕಾಯಿದೆ ಜಾರಿಗೆ ತಂದಿದ್ದರೂ, ಅದು, ಇಂದು ಅಲ್ಲಲ್ಲಿ ಕಂಡುಬರುತ್ತಿರುವುದು ಒಂದು ವಿಷಾದನೀಯ ಸಂಗತಿ. ಹಿಂದೂಗಳಲ್ಲದವರು ಶುಚಿ-ಅಶುಚಿಯನ್ನು ಮೈಲಿಗೆಯಾದರೆ ಅಂತಹವರನ್ನು ಶುದ್ಧೀಕರಣಗೊಳಿಸಲು ಸಾಧ್ಯ ಎಂಬುದು ಆ ಸಮಾಜಗಳ ನಿಲುವು. ಅಲ್ಲದೇ ಈ ಮೈಲಿಗೆ ತಾತ್ಕಾಲಿಕ. ಆದರೆ ಹಿಂದೂಗಳಲ್ಲಿ ಒಮ್ಮೆ ಅಶುದ್ಧನಾದವನು ಎಂದಿಗೂ ಶುದ್ಧಿಗೊಳ್ಳಲಾರ. ಅದಕ್ಕಾಗಿಯೇ ‘ಊರಿಗೊಂದು ಹೊಲಗೇರಿ’ ಎಂಬ ಮಾತನ್ನು ಆಡಿ, ಅಸ್ಪೃಶ್ಯರನ್ನು ಇತರ ಜನರು ವಾಸಿಸುವ ಜಾಗಗಳಿಂದ ದೂರ ಇಟ್ಟರು. ಡಾ.ಬಿ.ಆರ್. ಅಂಬೇಡ್ಕರ್ ಹೇಳುವಂತೆ “ಇಂಥ ಹಟ್ಟಿಗಳು ಮುಳ್ಳುಬೇಲಿಗಳಲ್ಲಿನ ಸೆರೆಮನೆ” ಇದ್ದಂತೆ. ಅರಸು ಅವರು ರಾಜ್ಯದಲ್ಲಿ ಹರಿಜನರಿಗೆ ಶೇ.೧೮ರಷ್ಟು ಸರಕಾರಿ ಹುದ್ದೆಗಳನ್ನು ಮೀಸಲಿಟ್ಟರು. ಪರಂಪರಾನುಗತವಾಗಿ ತಮ್ಮದೇ ಆಗಿದ್ದ ಸ್ಥಾನಮಾನಗಳೆಲ್ಲ ಹಂಚಿಹೋಗುವ ಭೀತಿ ಮೇಲ್ವರ್ಗಗಳಿಗೆ ಶುರುವಾಯಿತು. ಸರ್ಕಾರಿ ಸವಲತ್ತುಗಳಲ್ಲಿಯೂ ಸಿಂಹಪಾಲನ್ನು ಪಟ್ಟಭದ್ರ ವಿದ್ಯಾವಂತ ಪ್ರಬಲ ಕೋಮುಗಳು ಪಡೆದಿದ್ದವು. ಸುಲಿಗೆ, ಶೋಷಣೆಯ ಕಾಲಚಕ್ರಕ್ಕೆ ಸಿಕ್ಕಿ ನುಚ್ಚುನೂರಾದವರು ಎಲ್ಲಾ ಕೋಮಿನ ಬಡವರು, ದಲಿತರು. ಈ ವಂಚಿತರ ಬಾಳು ಅಂಬಿಗನಿಲ್ಲದ ದೋಣಿ. ಈ ದೋಣಿಗೆ ಚಾಲನೆ ದೊರಕಿಸಿ ಕೊಟ್ಟವರು ದೇವರಾಜ ಅರಸು. ಅವರ ಆಡಳಿತಕ್ಕೆ ಮುಂಚೆ ಸರ್ಕಾರಿ ಸ್ಥಾನ-ಮಾನಗಳನ್ನೆಲ್ಲ ಕಬಳಿಸಿದ್ದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಜಾತಿಯನ್ನುಳಿದು ಸಮಾಜದಲ್ಲಿ ಉಳಿದ ಜಾತಿಯವರೂ ಇದ್ದರೆಂಬುದು ಬೆಳಕಿಗೆ ಬಂದಿರಲಿಲ್ಲ. ಅರಸು ಅವರ ಕಾಲದಲ್ಲಿ ಈ ಮುಂದುವರಿದ ಮೇಲ್ಜಾತಿಗಳನ್ನು ಬಿಟ್ಟು ಉಳಿದ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಜಾತಿಯ ಜನರಗೆ ಶೇ.೫೬ರಷ್ಟು ಮೀಸಲು ವ್ಯವಸ್ಥೆಯನ್ನು ಜಾರಿಗೆ ತಂದರು.

ಮಲಹೊರುವ ಅನಿಷ್ಠತೆಯ ವಿರೋಧಿ ನಿಲುವು

ಭಾರತೀಯ ಸಾಮಾಜಿಕ ಜೀವನದಲ್ಲಿ, ಅದರಲ್ಲೂ ಹಿಂದೂ ಸಾಮಾಜಿಕ ಜೀವನದಲ್ಲಿ ಅಸ್ಪೃಶ್ಯತೆ ಬಹಳ ಹಿಂದಿನಿಂದಲೂ ಅಂಟಿಕೊಂಡೇ ಬೆಳೆದುಬಂದ ಒಂದು ಅಮಾನವೀಯ ಪದ್ಧತಿ. ಒಂದು ಸಮಾಜ ತನ್ನವರೇ ಆದ ಒಂದು ಭಾಗದ ಜನತೆಯನ್ನು ಅಸ್ಪೃಶ್ಯರೆಂದು ಘೋಷಿಸಿ, ಅವರ ನಾಗರಿಕ ಹಕ್ಕುಗಳನ್ನು ಕಸಿದುಕೊಂಡು ಜೀವಂತ ಸಲಿಕರಣೆಗಳಂತೆ ದುಡಿಸಿಕೊಂಡು ಬರುತ್ತಿರುವುದು ಒಂದು ಅಮಾನವೀಯ ಕ್ರಮ. ಈ ಅಸ್ಪೃಶ್ಯರಿಗೆ ಪರಂಪರಾನುಗತವಾಗಿ ಬಂದ ಕಾಯಕ ಎಂದರೆ “ಹೊಲಸಿರುವ ಸ್ಥಳವನ್ನು ಶುಚಿಗೊಳಿಸುವುದು. ಮತ್ತು ಮೇಲ್ಜಾತಿಯ ಜನರ ಮಲವನ್ನು ತಲೆ ಹೊರೆಯಾಗಿ ಸಾಗಿಸುವುದು”. ಸಮಾಜದ ಉತ್ತಮ ಜನಾಂಗ ಈ ಅಮಾನುಷ ಕಾರ್ಯವನ್ನು ದಲಿತರು ಮಾಡಲೇಬೇಕಾದ ಕರ್ತವ್ಯ ಎಂದು ಬಗೆದಿತ್ತು. ಜಗತ್ತಿನ ಯಾವ ನಾಗರಿಕ ಸಮಾಜದಲ್ಲಿಯೂ ಆಚರಣೆಯಲ್ಲಿಲ್ಲದ ಈ ಮಲಹೊರುವ ಪದ್ಧತಿಗೆ ಧಾರ್ಮಿಕ ಆಚರಣೆಯ ಕವಚವನ್ನು ಹೊದಿಸಲಾಗಿತ್ತು. ಇಲ್ಲಿ ಪುರೋಹಿತಶಾಹಿವರ್ಗ ಮತ್ತು ಬಂಡವಾಳಶಾಹಿ ವರ್ಗಗಳು ದಲಿತವರ್ಗಗಳ ಮೇಲೆ ಸಾಕಷ್ಟು ಒತ್ತಡವನ್ನು ಹೇರಿದ್ದರು ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅಂಬೇಡ್ಕರ್, ಗಾಂಧೀಜಿ, ಬಾಬು ಜಗಜೀವನ್‌ರಾಮ್‌ ಅವರಂತ ಮಹಾನ್‌ ಚಿಂತಕರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದರೂ ರಾಜ್ಯದಲ್ಲಿ ಈ ಕ್ರೂರ ಪದ್ಧತಿ ಇನ್ನೂ ಮಾಯವಾಗಿರಲಿಲ್ಲ. ಇದು ನಿಷೇಧಿಸಲೇಬೇಕಾದ ಅನಿಷ್ಟ ಪದ್ಧತಿಯೆಂದು ಅಂದು ಯಾವ ರಾಜಕೀಯ ನಾಯಕರು ಚಿಂತಿಸಿರಲಿಲ್ಲ. ಆದರೆ ಕೃತಿಯಲ್ಲಿ ಇಂತಹ ಅನಿಷ್ಟ ಪದ್ಧತಿಯನ್ನು ನಿಷೇಧಿಸಿ, ೧೯೭೭ರಲ್ಲಿ ಶಾಸನ ಜಾರಿಗೆ ತಂದ ಶ್ರೇಯಸ್ಸು ಅರಸು ಮತ್ತು ಅವರ ಸಂಪುತದ್ದು. ಇದು ಅರಸು ಜಾರಿಗೊಳಿಸಿದ ಕಾಯ್ದೆಗಳಲ್ಲೇ ಅತ್ಯಂತ ದೂರಗಾಮಿ ಪರಿಣಾಮ ಬೀರಬಲ್ಲ ಕಾಯ್ದೆಯಾಗಿದೆ.

ಬಹುಶಃ ಅರಸು ಅವರ ಆಡಳಿತದ ಅವಧಿಯಲ್ಲೇ ‘ತಲೆಯ ಮೇಲೆ ಮಲ ಹೊರುವ ಪದ್ಧತಿ’ ಬಹುಪಾಲು ಕೊನೆಗೊಂಡಿತು. ಹಾಗೂ ಅಂಥವರನ್ನು ‘ಪೌರಕಾರ್ಮಿಕ’ರನ್ನಾಗಿ ಸರಕಾರ ಖಾಯಂ ಆಗಿ ನೇಮಿಸಿಕೊಂಡಿತು..ಇದೊಂದು ಕ್ರಾಂತಿಕಾರಕ ಸಾಧನೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಅರಸು ಆರಂಭಿಸಿದ ಸಾಮಾಜಿಕ ಪರಿವರ್ತನೆಯ ವಾತಾವರಣದಲ್ಲಿ ಈ ವಿಚಾರ ಕುರಿತು ಚಿಂತನೆ ಚಿಗುರೊಡೆಯಿತು. ಅರಸು ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು ಈ ಪದ್ಧತಿಯ ಉಚ್ಛಾಟನೆಗೆ ದೃಢಸಂಕಲ್ಪ ಮಾಡಿದ್ದರು ಮತ್ತು ಅರಸು ಅವರಿಗೆ ಈ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲವನ್ನೂ ನೀಡಿದರು.