ಬಡತನ ನಿರ್ಮೂಲನೆ ಚಿಂತನೆ

‘ಆರ್ಥಿಕ ಸಂಪತ್ತು ಮತ್ತು ಬೌದ್ಧಿಕ ಕೌಶಲ್ಯಗಳು’ ಕೆಲವೇ ವರ್ಗದ ಜನರಿಗೆ ಮೀಸಲಾಗಿರುವುದರಿಂದ ಉಳಿದ ಹಿಂದುಳಿದ ವರ್ಗಗಳು ಮತ್ತು ದಲಿತರು ಈ ದೇಶದಲ್ಲಿ ನಿರ್ಗತಿಕ ಸ್ಥಿತಿಗೆ ತಲುಪಿದ್ದಾರೆ. ಬಡತನಕ್ಕೆ ಬಡವರು ಕಾರಣರಲ್ಲ ಅಥವಾ ಅದು ಬಡವರು ಇಷ್ಟಪಟ್ಟು ಅಪ್ಪಿಕೊಂಡ ಸ್ಥಿತಿಯೂ ಅಲ್ಲ. ಅದೊಂದು ಅಸಹಾಯಕ ಪರಿಸ್ಥಿತಿಯಿಂದ ಜನಿಸಿದ ಅವಮಾನದ, ಅಮಾನವೀಯ ಸ್ಥಿತಿ. ಒಡಲನ್ನು ದಹಿಸುವ ಹಸಿವು ಮೈಮನಸ್ಸುಗಳನ್ನು, ಸ್ವಾಭಿಮಾನ ಪ್ರಾಮಾಣಿಕತೆ ಮೊದಲಾದ ಮೌಲ್ಯಗಳನ್ನು ಮಾರಿಕೊಳ್ಳುವಂತೆ ಮನುಷ್ಯನನ್ನು ಪ್ರಚೋದಿಸುತ್ತದೆ. ಮನುಷ್ಯ ಮನುಷ್ಯತ್ವವನ್ನು ಬಿಡುವಂತೆ ಮಾಡುತ್ತದೆ. ಹಿಂಸೆಯನ್ನು ಹುಟ್ಟುಹಾಕುತ್ತದೆ. ಜಗತ್ತಿನ ಇತಿಹಾಸವನ್ನು ನೋಡಿದರೆ ಬಹುತೇಕ ರಾಷ್ಟ್ರಗಳ ಆಂತರಿಕ ಯುದ್ಧಕ್ಕೆ ಈ ಬಡತನ, ದಬ್ಬಾಳಿಕೆಗೇ ಕಾರಣವಾಗಿರುವುದು ತಿಳಿದುಬರುತ್ತದೆ. ಇಂತಹ ಸಾಮಾಜಿಕ ಅಸಮಾನತೆಯಾದ ಬಡತನವನ್ನು ತೊಡೆದುಹಾಕುವುದು ಅರಸು ಅವರ ಸಂಕಲ್ಪವಾಗಿತ್ತು. ಇಂದಿರಾಗಾಂಧಿಯವರ ಅನುಯಾಯಿಯಾಗಿ ಅವರ ಮಹತ್ವಾಕಾಂಕ್ಷೆಯ ‘ಇಪ್ಪತ್ತು ಅಂಶಗಳ ಸೂತ್ರದ ಪ್ರಣಾಳಿಕೆ’ಯನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಅವರದು. ದೇಶದ ಹೆಚ್ಚಿನ ರಾಜ್ಯಗಳು ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿದ್ದರೂ, ಇಪ್ಪತ್ತು ಅಂಶಗಳ ಪ್ರಣಾಳಿಕೆಯನ್ನು ಜಾರಿಗೆ ತರುವಲ್ಲಿ ಹಿಂದೇಟು ಹಾಕಿದ್ದವು. ಹೀಗಾಗಿ ದೇಶದಲ್ಲೇ ಈ ಕೀರ್ತಿ ಕರ್ನಾಟಕ ರಾಜ್ಯ ಮತ್ತು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ಅವರಿಂದ ದಕ್ಷ ಆಡಳಿತ, ಭೂ ಸುಧಾರಣೆ ಮತ್ತು ಬಡತನದ ಬವಣೆಯಲ್ಲಿದ್ದವರನ್ನು ಮೇಲೆತ್ತುವಂಥ ಮಾತುಗಳೇ ಕೇಳಿ ಬರುತ್ತಿದ್ದವು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅವರ ಗಮನಕ್ಕೂ ತಂದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದರು. ಆಶ್ಚರ್ಯವೆಂಬಂತೆ ೧೯೭೩ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ದಕ್ಷಿಣಭಾರತದ ಹಿಂದುಳಿದ ವರ್ಗ ಮತ್ತು ಪರಿಶಿಷ್ಟಜಾತಿ ಪಂಗಡದ ಹಾಗೂ ಅಲ್ಪಸಂಖ್ಯಾತರ ಸಮಾವೇಶದಲ್ಲಿಯೇ, ಪ್ರಧಾನಿ ಇಂದಿರಾಗಾಂಧಿಯವರು ‘ಗರೀಬಿ ಹಠಾವೋ’ ಘೋಷಣೆ ಮಾಡಿದರು. ದೇವರಾಜ ಅರಸು ಅವರು ನಿಜಲಿಂಗಪ್ಪನವರ ಸಂಪುಟದಲ್ಲಿದ್ದಾಗಲೇ ಯೋಚಿಸಿದ್ದ ಹಲವಾರು ವಿಚಾರಗಳನ್ನು ತಮ್ಮ ಆಡಳಿತದ ಅವಧಿಯಲ್ಲಿ ಜಾರಿಗೆ ತಂದರು. ಅದರಲ್ಲಿ ‘ಗರೀಬಿ ಹಠಾವೋ’ ಆಂದೋಲನವು ಪ್ರಮುಖವಾದದ್ದು.

ಹರಿಜನಗಿರಿಜನ ಕಾರ್ಪೋರೇಷನ್ಸ್ಥಾಪನೆ

ಅರಸು ಚಿಂತಿಸಿದ ಮಹತ್ವದ ಯೋಜನೆಗಳಲ್ಲಿ ಪ್ರಮುಖವಾದದ್ದು ಹರಿಜನ-ಗಿರಿಜನರ ಕಾರ್ಪೊರೇಷನ್‌. ಅದರ ಫಲವಾಗಿ ಮೇ ೧೯, ೧೯೭೫ರಂದು ‘ಹರಿಜನ-ಗಿರಿಜನರ ಕಾರ್ಪೊರೇಷನ್‌’ ಅಧಿಕೃತವಾಗಿ ಸ್ಥಾಪನೆ ಆಯಿತು. ಬಾಬು ಜಗಜೀವನರಾವ್‌ ಅವರು ಇದನ್ನು ಉದ್ಘಾಟಿಸಿದ್ದು ಇನ್ನೊಂದು ವಿಶೇಷ. ಇದು ಈ ವರ್ಗಗಳ ಪಾಲಿಗೆ ಒಂದು ದೊಡ್ಡ ಮೈಲುಗಲ್ಲೆಂದರೆ ಸರಿ..ಅಂದು ಮುಂದುವರೆದ ಪ್ರಬಲ ವರ್ಗದ ಜನರು, ಹರಿಜನ-ಗಿರಿಜನರಿಗೆ ಪ್ರತ್ಯೇಕ ಕಾರ್ಪೊರೇಷನ್‌ ಏತಕ್ಕಾಗಿ ಸ್ಥಾಪನೆ ಮಾಡಬೇಕು ಎಂದು ಬಹಿರಂಗವಾಗಿ ಅಲ್ಲದಿದ್ದರೂ ಆಂತರಿಕವಾಗಿಯಾದರೂ ಅಂದು ಕೊಂಡಿರಬಹುದು. ಇದು ಸಹಜವೇ ಆಗಿದೆ. ಏಕೆಂದರೆ, ಪ್ರತ್ಯೇಕ ಕಾರ್ಪೊರೇಷನ್‌ ಮಾಡುವುದರಿಂದ ಒಂದು ವರ್ಗದ ಜನರ‍ ಅಭಿವೃದ್ಧಿಗಾಗಿ ಸಮಾಜದ ಭಿನ್ನತೆಯನ್ನು ಉಂಟು ಮಾಡಿದಂತಲ್ಲವೆ? ಭೇದ ಹೆಚ್ಚಿಸಿದಂತಾಗುವುದಿಲ್ಲವೆ? ಈ ರೀತಿ ಅನೇಕ ಪ್ರಶ್ನೆಗಳು ಉದ್ಭವಿಸುವುದು ಸ್ವಾಭಾವಿಕವೇ ಆಗಿದೆ. ಅಂದು ೪-೫ನೇ ಪಂಚವಾರ್ಷಿಕ ಯೋಜನೆಯ ಕಾಲ ಘಟ್ಟದಲ್ಲಿದ್ದ ರಾಜ್ಯ ಆ ೨೫ ವರುಷಗಳ ಅವಧಿಯಲ್ಲಿ ಸಾವಿರಾರು ಕೋಟಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಖರ್ಚು ಮಾಡಿತ್ತು. ಆದರೂ ಈ ಹರಿಜನ-ಗಿರಿಜನ ಮತ್ತು ಹಿಂದುಳಿದ ವರ್ಗಗಳಿಗೆ ದೀನ-ದಲಿತರಿಗೆ ಇದರ ಸಂಪೂರ್ಣ ಪ್ರತಿಫಲ ದೊರೆತಿಲ್ಲದಿರುವುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.. ತಳಮಟ್ಟದ ವರ್ಗಗಳಿಗೆ ಇದರ ಫಲ ದೊರೆತಿಲ್ಲದಿರುವುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ತಳಮಟ್ಟದ ವರ್ಗಗಳಿಗೆ ಇದರ ಫಲ ದೊರೆತಿಲ್ಲದಿರುವುದನ್ನು ಆರ್ಥಿಕ ತಜ್ಞರು ಮತ್ತು ರಾಜಕೀಯ ಚಿಂತಕರು ಅಂದು ಸ್ಪಷ್ಟಪಡಿಸಿದ್ದರು. ಇದೆಲ್ಲ ಬಡಜನರಿಗೆ ಸೇರದೇ ಇರುವುದಕ್ಕೆ ಮಧ್ಯದಲ್ಲಿ ಅನೇಕ ಅಡಚಣೆಗಳಿದ್ದವು. ಕಾರಣ ಅನೇಕ ಪಟ್ಟಭದ್ರ ಹಿತಾಸಕ್ತಿಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದವು. ಎಲ್ಲರಿಗೂ ಸೇರಬೇಕಾದುದ್ದನ್ನು ಈ ಶಕ್ತಿಗಳು ತಾವೇ ಕೈತುಂಬ ಹಿಡಿದುಕೊಂಡಿದ್ದವು. ಅವರ ಬೆರಳ ಸಂದಿಯಲ್ಲಿ ತೊಟ್ಟಿಕ್ಕಿದ್ದು ಮಾತ್ರ ಬಡಜನರಿಗೆ ಸೇರಬಹುದು, ಇಲ್ಲವೇ ಸೇರದೇ ಇರಬಹುದು. ಈ ಅನ್ಯಾಯವನ್ನು ತೊಡೆದು ಹಾಕಲು ಅರಸು ಸಂಕಲ್ಪ ಮಾಡಿದರು. ಅನ್ಯಾಯವನ್ನು ಸರಿ ಮಾಡುವುದೇ ಸಾಮಾಜಿಕ ‘ನ್ಯಾಯ’ ಎಂಬ ನಂಬಿಕೆ ಅರಸು ಅವರದಾಗಿತ್ತು.

ಆರ್ಥಿಕ ಅಭಿವೃದ್ಧಿ ಚಿಂತನೆಗಳು

ಭಾರತ ಸ್ವತಂತ್ರ ನಂತರ ಪ್ರಾಂತ್ಯ ಸರಕಾರಗಳು ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸತೊಡಗಿದವು. ಮೈಸೂರು ರಾಜ್ಯ ಉದಯವಾದೊಡನೆ, ಈ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅನೇಕ ಆರ್ಥಿಕ ಕಾರ್ಯ ಯೋಜನೆಗಳು ರೂಪ ತಳೆದವು.. ನಂತರ ಅಧಿಕಾರಕ್ಕೆ ಬಂದ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಅಭಿವೃದ್ದಿಯ ದೃಷ್ಟಿಯನ್ನಿಟ್ಟುಕೊಂಡು ತಮ್ಮದೇ ನೆಲೆಗಟ್ಟಿನಲ್ಲಿ ಆರ್ಥಿಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರು. ಅವರೆಲ್ಲರ ನಡುವೆಯೂ ೧೯೭೨ರಲ್ಲಿ ಅಧಿಕಾರಕ್ಕೆ ಬಂದ ದೇವರಾಜ ಅರಸು ರಾಜ್ಯದ ಆರ್ಥಿಕ ವ್ಯವಸ್ಥೆಗೆ ಒಂದು ಹೊಸ ದಿಕ್ಕನ್ನು ನೀಡಲು ಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದರು. ಅವುಗಳಲ್ಲಿ ಬಡತನ ನಿರ್ಮೂಲನಾ ಯೋಜನೆ, ಕಿರು ಮತ್ತು ಮಧ್ಯಮಗಾತ್ರದ ನೀರಾವರಿ ಯೋಜನೆಗಳು, ಒಣಭೂಮಿ ಬೇಸಾಯಕ್ಕೆ ಪ್ರೋತ್ಸಾಹ, ಗೃಹಕೈಗಾರಿಕೆ, ಸಣ್ಣ ಕೈಗಾರಿಕೆಗಳ ಸ್ಥಾಪನೆ, ಇಪತ್ತು ಅಂಶಗಳ ಕಾರ್ಯಕ್ರಮ ಮತ್ತು ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಯೋಜನೆಗಳು ಮುಖ್ಯವಾದವುಗಳಾಗಿವೆ. ಕೇವಲ ವ್ಯವಸಾಯದಿಂದಲೇ, ರಾಜ್ಯ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದ ಅರಸು, ಕೃಷಿಯ ಜೊತೆಯಲ್ಲಿ ಕೈಗಾರಿಕೆಗಳು ಬೆಳವಣಿಗೆಯಾಗಬೇಕು. ಮತ್ತು ಭೂ ಉತ್ಪಾದನೆಯಲ್ಲಿನ ಉತ್ಪಾದನೆ ಹಾಗೂ ಕೈಗಾರಿಕೆ ಇವೆರಡರ ನಡುವಿನ ಸಂಬಂಧದ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳಲು ದಕ್ಷತೆಯಿರುವ ಜನರು ಬೇಕು ಎನ್ನುವ ಮಾತನ್ನು ಒತ್ತಿ ಹೇಳಿದ ಅರಸರ ವಿಚಾರಧಾರೆ ಈ ನಿಟ್ಟಿನಲ್ಲಿ ಭಿನ್ನವಾಗಿತ್ತು. ಅಲ್ಲದೆ ಉತ್ಪತ್ತಿ, ದುಡಿಮೆ, ಪ್ರತಿಫಲ ಇವುಗಳ ಬಗ್ಗೆ ನಮ್ಮ ದೃಷ್ಟಿಕೋನಿ ಬದಲಾಗಬೇಕೆನ್ನುವ ಅವರು, ತುಂಬ ಪ್ರಾಯೋಗಿಕವಾಗಿ ಯೋಚನೆ ಮಾಡಿ ಪ್ರತಿಯೊಂದು ಸಮಸ್ಯೆಗೂ ಪ್ರಾಯೋಗಿಕವಾಗಿ ಪರಿಹಾಋ ಕಂಡುಹಿಡಿಯುತ್ತಿದ್ದರು. ಆ ಮೂಲಕ ನಾಡಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಯೋಜನೆಗಳು ಕರ್ನಾಟಕದ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳ ಉನ್ನತೀಕರಣ ಮತ್ತು ವಾಣಿಜ್ಯೋದ್ಯಮಗಳ ಬೆಳವಣಿಗೆಗಷ್ಟೇ ಸೀಮಿತವಾಗಲಿಲ್ಲ. ಇಲ್ಲಿನ ಜನಸಾಮಾನ್ಯನ ಜೀವನದ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿತವಾದ ಯೋಜನೆಗಳೆಂಬುದನ್ನು ಯಾರೂ ಮರೆಯುವಂತಿಲ್ಲ ಕರ್ನಾಟಕವು ಇಂದು ಈ ಮಟ್ಟದ ಪ್ರಗತಿಯನ್ನು ಸಾಧಿಸುವಲ್ಲಲಿ ಅವರ ಸರಕಾರದ ಕೊಡುಗೆ ಅಪಾರ. ಇದನ್ನು ಈ ಕೆಳಗಿನ ಅಂಶಗಳಿಂದ ಇನ್ನಷ್ಟು ಗಟ್ಟಿಗೊಳಿಸಬಹುದು.

ಕೃಷಿ ಹಾಗೂ ನೀರಾವರಿ ಚಿಂತನೆ

ರಾಜ್ಯದ ಕೃಷಿ ವಿಧಾನದ ಅಭಿವೃದ್ಧಿಯಲ್ಲಿನ ವಿಧಾನಗಳನ್ನು ಗಮನಿಸಿದಾಗ ಈ ಅಭಿವೃದ್ಧಿಗಾಗಿ ಕೆಲವು ನಿರ್ದಿಷ್ಟ ಗುರಿಯಲ್ಲಿ ನಾವು ಮುಂದುವರಿಯಬೇಕಾಗುತ್ತದೆ. ಒಟ್ಟು ಬೇಸಾಯ ಪ್ರದೇಶದಲ್ಲಿ ಶೇ ೨೦ಕ್ಕೂ ಕಡಿಮೆ ಪ್ರದೇಶಕ್ಕೆ ಮಾತ್ರ ನೀರಾವರಿ ಸೌಕರ್ಯವಿದೆ. ಶೇ ೨೦ ರಷ್ಟು ಪ್ರದೇಶಕ್ಕೆ ಸಾಕಷ್ಟು ಮಳೆಯಾಗುತ್ತದೆ. ಉಳಿದ ಒಣಭೂಮಿ ಪ್ರದೇಶ ಅನಿರ್ದಿಷ್ಟ ಮಳೆಯ ಆಶ್ರಯದಲ್ಲಿದೆ. ಇಂಥಹ ಪರಿಸ್ಥಿತಿ ಇದ್ದರೂ ಆಧುನಿಕ ಬೇಸಾಯ ಕ್ರಮಗಳ ಅನುಸರಣಿಯಿಂದ ಕೃಷಿ ಉತ್ಪನ್ನ ಹೆಚ್ಚಿಸುವುದರಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲು ಒಣಭೂಮಿ ಬೇಸಾಯಕ್ಕೆ ಪ್ರೋತ್ಸಾಹ ನೀಡಲು ಅರಸು ಮುಂದಾದರು. ಒಣ ಭೂಮಿಯನ್ನು ಕೃಷಿಗೆ ಯೋಗ್ಯ ಭೂಮಿಯನ್ನಾಗಿ ಮಾಡಿ, ಸಾಗುವಳಿ ಮಾಡಲು ಸುಮಾರು ಹೆಕ್ಟೇರ್ ಪಾಳುಬಿದ್ದ ಭೂಮಿಯನ್ನು ಜಲ ಅಭಿವೃದ್ಧಿ ಯೋಜನೆ ಕಾಯಿದೆಯನ್ನು ಜಾರಿಗೆ ತರುವ ಮುಖಾಂತರ ಕೆರೆ, ಕಾಲುವೆ, ಭಾವಿಯನ್ನು ನಿರ್ಮಿಸಿದರು. ಇದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಯಿತು. ಅದುವರೆವಿಗೂ ಈ ಪಾಳುಬಿದ್ದ ಭೂಮಿಯನ್ನು ಹಿಡುವಳಿಗೆ ಯೋಗ್ಯ ಭೂಮಿಯನ್ನಾಗಿ ಮಾಡಲು ಯಾವ ಸರಕಾರಗಳು ಆ ತಂಟೆಗೆ ಹೋಗಿರಲಿಲ್ಲ. ಇಂಥ ಪಾಳುಬಿದ್ದ ಭೂಮಿಗೆ ನೀರನ್ನು ಒದಗಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದು ಅರಸು ಅವರ ಸರಕಾರದ ಸಾಧನೆಯಾಗಿದೆ. ಅವರು ತೆಗೆದುಕೊಂಡ ಈ ನೀರಾವರಿಯೋಜನೆಯಿಂದ ಸುಮಾರು ಬಡ ರೈತ ಕುಟುಂಬಗಳು ಈವರೆಗೆ ದೂಡಿದ್ದ ನಿರಾಶದಾಯಕ ದಿನಗಳು ಈ ಯೋಜನೆಯಿಂದ ದೂರವಾದವು.

ರಾಜ್ಯದಲ್ಲಿ ಒಣಹವೆ ಮತ್ತು ಮಲೆನಾಡು ಪ್ರದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ತೆಗೆಯಲು ಕೆಲವು ಸಂದರ್ಭಗಳಲ್ಲಿ ಮಳೆಯ ಕೊರತೆಯುಂಟಾಗಿ ತಲೆದೋರುವ ಬಿಕ್ಕಟ್ಟನ್ನು ಪರಿಹರಿಸಲು ಅದರಲ್ಲೂ, ಒಣ ಮತ್ತು ಅರೆಒಣ ಪ್ರದೇಶಗಳನ್ನೊಳಗೊಂಡ ಕರ್ನಾಟಕದ ಬಯಲು ನಾಡಲ್ಲಿ ಕೃಷಿ ಚಟುವಟಿಕೆಗಳು ನಿರಂತರಗೊಳ್ಳಲು ನೀರಾವರಿಯ ಅವಶ್ಯಕತೆಯಿತ್ತು ಆದ್ದರಿಂದ ಅವರು ತಮ್ಮ ಆಡಳಿತ ಅವಧಿಯಲ್ಲಿ ಈ ‘ಕಿರು ಮತ್ತು ಮಧ್ಯಮ ಗಾತ್ರದ ನೀರಾವರಿ’ಗೆ ಹೆಚ್ಚಿನ ಮಹತ್ವ ನೀಡಿದ್ದು ಗಮನಾರ್ಹ.

ಕಿರು ಮತ್ತು ಮಧ್ಯಮ ನೀರಾವರಿಯ ಉದ್ದೇಶ

೧. ಕುಡಿಯುವ ನೀರಿಗೆ ಆಧ್ಯತೆ
೨. ಕಿರು ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಗಳ ಅಡಿಯಲ್ಲಿ ಮತ್ತು ಅಂತರ್ಜಲಗಳ ಬಳಕೆಯಿಂದ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವುದು

೩. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು
೪. ಜಲ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸುವುದು
೫. ರಾಜ್ಯ ಜಲಸಂಪನ್ಮೂಲ ಮಂಡಳಿ ರಚಿಸುವುದು

ಅರಸು ಅವರ ಈ ಮೇಲಿನ ಉದ್ದೇಶಿತ ಯೋಜನೆಯಿಂದ ಆದಷ್ಟು ಬೇಗ ಹೆಚ್ಚು ಕೃಷಿ ಭೂ ಪ್ರದೇಶಕ್ಕೆ ವಿಫುಲವಾಗಿ ನೀರಾವರಿ ಸೌಲಭ್ಯವನ್ನು ಒದಗಿಸುವುದು ಅವರ ಮಹತ್ತರವಾದ ಆಶಯವಾಗಿತ್ತು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳು ಆರ್ಥಿಕ ಅಭಿವೃದ್ಧಿಯಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು ಸರಕಾರ ಆ ವರ್ಷದಲ್ಲಿ(೧೯೭೩-೭೪) ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಮೀಸಲಿರಿಸಿದ್ದು ಒಟ್ಟು ೧೧೫ ಕೋಟಿರೂಪಾಯಿಗಳು. ಈ ಕೋಟಿ ರೂಪಾಯಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹಣವನ್ನು ವಿದ್ಯುತ್‌ ಮತ್ತು ನೀರಾವರಿಗಾಗಿ ನಿಗದಿ ಮಾಡಿತ್ತು. ಈ ಸಂದರ್ಭದಲ್ಲಿ ಭಾರಿ ನೀರಾವರಿ ಯೋಜನೆಗಾಗಿ ೧೦೦ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚ ಮಾಡಲಾಯಿತು. ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಗೆ ೭೦ ಕೋಟಿ ರೂಪಾಯಿ ಹಾಗೂ ಬಾವಿಗಳು ಮತ್ತು ಪಂಪ್‌ಸೆಟ್‌ಗಳಿಗೆ ೨೭ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿತ್ತು. ಈ ರೀತಿಯಾಗಿ ಅಪಾರವಾದ ಹಣವನ್ನು ಉಪಯೋಗಿಸಿ ಹೆಚ್ಚು ಭೂಪ್ರದೇಶಕ್ಕೆ ನೀರಿನ ಸೌಲಭ್ಯವನ್ನು ಒದಗಿಸುವುದು ಅವರ ಮೂಲ ಉದ್ದೇಶವಾಗಿತ್ತು. ಅಂತೆಯೇ ತಮ್ಮ ಅವಧಿಯಲ್ಲಿ ಕ್ರಿಷ್ಣಾ, ಘಟಪ್ರಭಾ, ಕಬಿನಿ, ಹಾರಂಗಿ, ಕಪಿಲ, ಹೇಮಾವತಿ, ಘಟಪ್ರಭಾ, ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಜಾರಿಗೊಳಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದು ರಾಜ್ಯದ ಅಭಿವೃದ್ಧಿಗೆ ಗಮನ ನೀಡಿದರು.

ಕೈಗಾರೀಕಾ ಅಭಿವೃದ್ಧಿ ಚಿಂತನೆ

‘ಕೈಗಾರೀಕರಣ ಇಲ್ಲವೆ ನಾಶ’ ಎಂದು ಎಂ.ವಿಶ್ವೇಶ್ವರಯ್ಯನವರು ಹೇಳಿರುವ ಮಾತು ಅಕ್ಷರ ಸಹ ನಿಜ ಎಂದು ಎನಿಸುತ್ತದೆ. ಏಕೆಂದರೆ ಒಂದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೀಕರಣವು ತುಂಬ ಮಹತ್ವ ಪಾತ್ರ ವಹಿಸುತ್ತದೆ. ಅಸಿದ್ಧ ವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ ಕ್ರಿಯೆಗೆ ಕೈಗಾರಿಕೆ ಎಂದು ಕರೆಯುತ್ತೇವೆ. ಕೈಗಾರಿಕೆಯನ್ನು ಸ್ಥಾಪಿಸುವ ಮತ್ತು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈಗಾರಿಕೀಕರಣ ಅಥವಾ ಔದ್ಯೋಗೀಕರಣ ಎಂದು ಕರೆಯುತ್ತಾರೆ. ಆದ್ದರಿಂದಲೇ ಕೈಗಾರಿಕೀಕರಣವು ಅಭಿವೃದ್ಧಿಯನ್ನು ಶೀಘ್ರವಾಗಿ ಪರಿಹರಿಸುವ ಒಂದು ವಿಭಾಗ ಎಂದು ಕರೆಯುತ್ತಾರೆ. ಕೈಗಾರಿಕೀಕರಣವೆಂದರೆ ಆರ್ಥಿಕ ಅಭಿವೃದ್ಧಿ ಎಂದು ಇದುವರೆವಿಗೂ ವ್ಯಾಖ್ಯಾನಿಸಲಾಗಿತ್ತು. ಅಂದರೆ ಇದರರ್ಥ ಕೈಗಾರಿಕಾ ಪ್ರಗತಿಯು ಆರ್ಥಿಕ ಅಭಿವೃದ್ಧಿಯ ಪ್ರಮುಖ ರೂಪವೆಂದೇ ಹೇಳಲಾಗಿತ್ತು. ಇದನ್ನು ಮನಗಂಡು ಅರಸು ಅವರು ರಾಜ್ಯವನ್ನು ಆರ್ಥಿಕವಾಗಿ ಮೇಲೆತ್ತುವ ದೃಷ್ಟಿಯಿಂದ ಹಲವಾರು ಕೈಗಾರಿಕಾ ಉದ್ಯಮಗಳ ಸ್ಥಾಪನೆಗೆ ಮುಂದಾದರು. ಅಂತೆಯೇ ಅವರ ಆಡಳಿತ ಅವಧಿಯಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆ ಮತ್ತು ಉಕ್ಕಿನ ಕಾರ್ಖಾನೆಯನ್ನು ವಿಸ್ತರಿಸಿದರಲ್ಲದೆ ಅದನ್ನು ಲಾಭ ನೀಡುವ ಉದ್ದಿಮೆಯಾಗಿ ಮಾಡಲಾಯಿತು. ಅಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಸ್ಕೂಟರ್ ಮತ್ತು ಟಾಯರ್ ಕಾರ್ಖಾನೆಗಳನ್ನು ಮತ್ತು ರಾಜ್ಯದಲ್ಲಿ ಸಿಮೆಂಟ್‌ ಹಾಗೂ ಸಕ್ಕರೆ ಕಾರ್ಖಾನೆಗಳೂ ಪ್ರಾರಂಭವಾದವು. ಇರಾನಿನ ಸಹಾಯದಿಂದ ಕುದುರೆ ಮುಖದಲ್ಲಿ ಕಬ್ಬಿಣದ ಅದಿರು ಎತ್ತುವ ಬೃಹತ್‌ ಉದ್ಯಮಕ್ಕೆ ಅಡಿಪಾಯವೂ ಹಾಕಿದರು. ಈ ಸಂದರ್ಭದಲ್ಲಿ ದೇಶಿ ಸಂಸ್ಕೃತಿಯ ಗೃಹ ಮತ್ತು ಗುಡಿಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಾ ಅವುಗಳನ್ನು ನಶಿಸದಂತೆಯೂ ನೋಡಿಕೊಂಡರು.

ಕರ್ನಾಟಕ ರಾಜ್ಯವು ಕೈಗಾರಿಕರಣದಲ್ಲಿ ಅರಸು ಅವಧಿಯ ಸಂದರ್ಭದಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಪ್ರಗತಿ ಸಾಧಿಸಿದರೆಂಬುದನ್ನು ಮರೆಯುವಂತಿಲ್ಲ ಮತ್ತು ಭಾರತ ಸರಕಾರದ ಎಲ್ಲಾ ಕೈಗಾರಿಕ ನೀತಿಗಳೂ ಕೂಡ ಕಾಲದಿಂದ ಕಾಲಕ್ಕೆ ಕರ್ನಾಟಕದ ಮೇಲು ಗಾಢ ಪ್ರಭಾವ ಬೀರಿವೆ ಎಂಬುದು ಅಷ್ಟೇ ಪ್ರಮುಖವಾದದ್ದು.

ಭಾಗ್ಯಜ್ಯೋತಿಯೋಜನೆ ಕುರಿತು ಚಿಂತನೆ

ದೇಶಕ್ಕೆ ಸ್ವಾತಂತ್ಯ್ರ ಬಂದು ಆರು ದಶಕಗಳೇ ಕಳೆದರೂ ಕೂಡ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಗಗನ ಕುಸುಮವಾಗಿಯೇ ಉಳಿದಿದೆ ಎಂದು ಹೇಳಬಹುದು. ಇದು ದೇಶದ ವಾಸ್ತವ ಸ್ಥಿತಿ ಎಂದರೂ ತಪ್ಪಾಗಲಾರದೇನೋ. ವಿದ್ಯುತ್ತಿನ ಅಭಾವ ನಮ್ಮನ್ನು ಅಷ್ಟು ಕಾಡುತಿತ್ತು. ಇಂಥ ಸಂದರ್ಭದಲ್ಲಿ ಅರಸು ಅವರು ರಾಜ್ಯದಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದರೊಂದಿಗೆ ಕೊಂಚ ಮಟ್ಟಿಗೆ ವಿದ್ಯುತ್ತಿನ ಅಭಾವದ ಪರಿಸ್ಥಿತಿಯನ್ನು ಸುಧಾರಿಸಿದರು ಎನ್ನಲಡ್ಡಿಯಿಲ್ಲ. ಏಕೆಂದರೆ, ಎಷ್ಟೋ ಹಳ್ಳಿಜನರ ಬದುಕು ಮನೆಗೊಂದು ದೀಪವಿಲ್ಲದ ಕತ್ತಲೆಯ ಕೋಣೇಯೊಂದರಲ್ಲೇ ತಮ್ಮ ಬದುಕಿನ ಬಂಡಿಯನ್ನು ನಡೆಸಬೇಕಾಗಿತ್ತು. ಹೀಗಾಗಿ ಆ ಕತ್ತಲೆಯನ್ನು ಓಡಿಸಲು ಅರಸು ಅವರು ತಮ್ಮ ಆಡಳಿತದ ಅವಧಿಯಲ್ಲಿ ಪ್ರತಿಯೊಬ್ಬ ಬಡವನಿಗೆ ನಿವೇಶನ ಒದಗಿಸಿದಂತೆ ‘ಭಾಗ್ಯಜ್ಯೋತಿ’ ಯೋಜನೆ ಅಡಿಯಲ್ಲಿ ಹಣತೆ ಬುಡ್ಡಿ ದೀಪಗಳನ್ನು ಬಳಸಲು ಆರ್ಥಿಕ ಸಾಮರ್ಥ್ಯವಿಲ್ಲದ ಬಡ ಕುಟುಂಬಗಳ ಪ್ರತಿಯೊಂದು ಮನೆಗೂ ಉಚಿತ ವಿದ್ಯುತ್‌ ದೀಪವನ್ನು ಒದಗಿಸಿದರು. ಹೊತ್ತು ಮುಳುಗಿದ ಕೂಡಲೇ ಉಂಡು ಮಲಗುವ ಬಡವನಿಗೆ ತನ್ನ ನೋವಿನಲ್ಲಿಯೇ ಹುಟ್ಟಿಬರುವ ವೈಚಾರಿಕ ವಿನಿಮಯಕ್ಕೆ ಚಿಂತನೆಗಳಿಗೆ ಅವಕಾಶವೆಲ್ಲಿ, ಬಡವರ ಮತ್ತು ಆರ್ಥಿಕವಾಗಿ ದುಃಸ್ಥಿತಿಯಲ್ಲಿ ಇದ್ದವರ ಮಧ್ಯ ಬೆಳೆದು ಬಂದ ಅರಸು, ಅಂಥ ಬಡ ಜನರೂ ತಮ್ಮ ಮೈಮನಗಳು ಬೆಳಕು ಕಾಣಬೇಕು ಎನ್ನುವ ಆಶಯ ಅವರದಾಗಿತ್ತು. ಪರಿಣಾಮವಾಗಿ ಈ ಭಾಗ್ಯಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದರು.

ನಾಡುನುಡಿ ಚಿಂತನೆ

ಸ್ವಾತಂತ್ಯ್ರ ಪೂರ್ವದಿಂದಲೂ ಹಲವಾರು ಚಿಂತಕರು, ಹೋರಾಟಗಾರರು ನಾಡಿನ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಶ್ರಮಿಸಿರುವುದನ್ನು ಕಾಣಬಹುದು. ಈ ಹೋರಾಟಕ್ಕೆ ಅವರಲ್ಲಿ ಇದ್ದಂತಹ ಸೈದ್ಧಾಂತಿಕ ವಿಚಾರಗಳೇ ಮುನ್ನುಡಿಯಾಗಿದ್ದವು. ಈ ಬಗೆಯ ಸಾಂಸ್ಕೃತಿಯ ಅಸ್ತಿತ್ವಗಳಿಗೆ ಸ್ವಾತಂತ್ಯ್ರ ಪೂರ್ವದಿಂದಲೂ ಬೇಡಿಕೆ ಮತ್ತು ಹೋರಾಟಗಳು ನಡೆದರೂ ಅದಕ್ಕೆ ಒಂದು ರೂಪ ಬಂದದ್ದು ಸ್ವಾತಂತ್ಯ್ರದ ನಂತರವಷ್ಟೆ. ಭಾರತವು ಗಣರಾಜ್ಯವಾದ ಮೇಲೆ ಭಾಷಾವಾರು ಪ್ರಾಂತ್ಯ ರಚನೆ ಕಾಯಿದೆ ಜಾರಿಯಾದ ನಂತರದಲ್ಲಿ ನಾಡು ಏಕೀಕರಣಗೊಂಡಿತು. ಈ ಹಿನ್ನೆಲೆಯಲ್ಲಿ ಕನ್ನಡ ಮಾತನಾಡುವ ಬಹಳಷ್ಟು ಪ್ರದೇಶಗಳು ಒಂದುಗೂಡಿ ಮೈಸೂರು ರಾಜ್ಯ ಉದಯವಾಯಿತು. ಇದಕ್ಕೆ ಹಲವಾರು ರಾಜಕೀಯ ನಾಯಕರುಗಳು ಮತ್ತು ನಾಡಿನ ಸಾಹಿತಿಗಳು ಸಾಕಷ್ಟು ಶ್ರಮವಹಿಸಿ ದುಡಿದರು. ಅವರಲ್ಲಿ ಡೆಪ್ಯೂಟಿ ಚೆನ್ನಬಸಪ್ಪ, ಸರ್.ಸಿದ್ದಪ್ಪ ಕಂಬಳಿ, ಅ.ನ. ಕೃಷ್ಣರಾಯರು, ಎಸ್‌.ನಿಜಲಿಂಗಪ್ಪ, ಕೆಂಗಲ್‌ ಹನುಮಂತಯ್ಯ, ಅಂದಾನಪ್ಪ ದೊಡ್ಡಮೇಟಿ, ಕುವೆಂಪು, ಆಲೂರ ವೆಂಕಟರಾಯರು, ಕಾರಂತರಂಥ ನಾಯಕರು ಪ್ರಮುಖರು. ಆದರೆ ನಾಡಿನ ಏಕೀಕರಣದ ನಂತರ ಕರ್ನಾಟಕ ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ ಜನರ ಸ್ಮೃತಿಯಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ವಿರಳ ನಾಯಕರಲ್ಲಿ ಡಿ. ದೇವರಾಜ ಅರುಸು ಅವರು ಒಬ್ಬರು. ಒಬ್ಬ ವ್ಯಕ್ತಿ ಸ್ಮರಣೆಗೆ ಅರ್ಹನಾಗಲು ಕಾರಣ ಆತನ ಅಪೂರ್ವ ಸತ್ವ ಸಾಧನೆಗಳು ಹಾಗೂ ಕಾಲದ ಮೇಲೆ ಅವು ಬೀರುವ ಗಾಢ ಪ್ರಭಾವ. ಅರಸು ಅವರು ಇತಿಹಾಸ ನಿರ್ಮಿಸಿದ ಪರಂಪರೆಯ ಒಡಲಿನಿಂದ ಮೂಡಿಬಂದು, ತಮ್ಮ ಅವಿರತ ದುಡಿಮೆಯಿಂದ ಇತಿಹಾಸ ನಿರ್ಮಿಸಿದವರು. ಅವರು ನಾಡು-ನುಡಿ ಮತ್ತು ಸಂಸ್ಕೃತಿ ಬಗೆಗೆ ತೋರಿದ ಕಾಳಜಿ, ಪ್ರೀತಿ ಅಪಾರವಾದದು. ಆದ್ದರಿಂದ ಅವರು ತಮ್ಮ ಅಧಿಕಾರದ ಅವಧಿಯಲ್ಲೇ ನಾಡಿನ ನಾಮಕರಣ ಮತ್ತು ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಕಡ್ಡಾಯಗೊಳಿಸಿದರು ಮತ್ತು ಕರ್ನಾಟಕ ರಾಜ್ಯವನ್ನು ಸಾಂಸ್ಕೃತಿಕವಾಗಿ ಎತ್ತರಕ್ಕೆ ಏರಿಸಿದರು. ಯಾವುದೇ ಒಂದು ನಾಡು, ‘ನಾಡು’ ಏನಿಸಿಕೊಳ್ಳಬೇಕಾದರೆ ಅಲ್ಲಿನ ನಡೆ-ನುಡಿ ಪರಸ್ಪರ ಸಂಬಂಧವನ್ನು ಹೊಂದಿರಬೇಕು. ಅದು ಸಮೃದ್ಧ ಹಾಗೂ ಸುಖಮಯವಾಗಿರಬೇಕು. ನಡೆ-ನುಡಿಗಳು ಸರಿಯಾಗಿ ಹೊಂದಿಕೊಂಡು ಹೋದರೆ ಒಂದು ಬಲಿಷ್ಠ ಶಕ್ತ, ಪ್ರಾಮಾಣಿಕ ನಾಡು ಆಗಲು ಸಾಧ್ಯವಾಗುತ್ತದೆ. ಆದಿಕವಿ ಪಂಪ ಈ ಕುರಿತಂತೆ ತನ್ನ ಕಾವ್ಯದಲ್ಲಿ; ಈ ರೀತಿ ಹೇಳಿದ್ದಾನೆ:

ಕ್ರಮಮಂ ಕೆಯ್ಕೊಳ್ಳಲೆಂದು ಪುಟ್ಟಿ ಅಕ್ರಮಂಗೆಯ್ದೊಡೆ ಕ್ರಮಮಾಕ್ಕುಮೆ

ಎಂಬುದೆ ಆ ನುಡಿ. ಕ್ರಮ ಮತ್ತು ಅಕ್ರಮಗಳು ಸಾಂಸ್ಕೃತಿಕವಾಗಿ ಬೀಜರೂಪದ ನುಡಿಗಳೇ ಆಗಿವೆ ಎಂಬುದನ್ನು ಅರಸು ಗಮನಿಸಿದಂತೆ ಕಾಣುತ್ತದೆ. ೧೯೫೬ರಲ್ಲಿ ಭೌಗೋಳಿಕವಾಗಿ ನಾಡು ಏಕೀಕರಣಗೊಂಡರೂ ಅದು ಮಾನಸಿಕವಾಗಿ ಪೂರ್ಣಗೊಂಡಿರಲಿಲ್ಲ. ಅರಸು ಅವರು ಅದನ್ನು ನಾಡಿಗೆ ‘ಕರ್ನಾಟಕ’ ಎಂದು ನಾಮಕರಣ ಮಾಡುವ ಮೂಲಕ ಪೂರ್ಣ ಗೊಳಿಸಿದರು. ಹೀಗಾಗಿ ಅರಸು ಅವರನ್ನು ‘ಸಂಸ್ಕೃತಿಯ ಹರಿಕಾರ’ ಎಂದು ಕರೆದರೆ ತಪ್ಪಾಗಲಾರದು. ಅರಸು ಅವರು ಯಾವುದೇ ಒಂದು ಪುರೋಗಾಮಿ ಶಾಸನವನ್ನು ಅನುಷ್ಠಾನಕ್ಕೆ ತರಬೇಕಾದರೆ ಆ ಶಾಸನಗಳ ಬಗ್ಗೆ ಬಹಳ ಅಧ್ಯಯನ ಮಾಡಿ, ಸಾಕಷ್ಟು ಓದಿಕೊಂಡು ಜ್ಞಾನ ಸಂಗ್ರಹದಿಂದ ಅದಕ್ಕೆ ಬೇಕಾದಂತ ವೈಚಾರಿಕ ಸಿದ್ಧತೆ ಮಾಡಿಕೊಂಡೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದರು.

ಕರ್ನಾಟಕ ಎಂಬ ಹೆಸರೇ ಮೂಲತಃ ಚೇತನದ ಶಕ್ತಿ, ಇಲ್ಲಿನ ಸಾಹಸಿಗರು ಇತಿಹಾಸ ಪ್ರಸಿದ್ಧ ಸಾಧನೆಗಳಿಂದ ರಾರಾಜಿಸಿದ ಮರೆಯಲಾಗದ ನಾಡು. ಧರ್ಮ, ಸಂಸ್ಕೃತಿ, ಸಾಹಿತ್ಯ ಭಾಷೆ ಹಾಗೂ ಕಲೆಗಳ ತವರೂರು ಈ ಕರ್ನಾಟ. ಬೆಟ್ಟಗುಡ್ಡಗಳ ನೆಲಸಂಪತ್ತು, ಹಿತಕರ ಹವೆ, ನಿತ್ಯಹರಿದ್ವರ್ಣ ಕಾಡುಗಳು, ಸಂಭ್ರಮದ ಜನ, ಸಡಗರದ ಕಡಲ ತೀರ, ಪ್ರಜ್ಞಾವಂತ ಜನಾಂಗ ಇಲ್ಲಿನ ವೈಶಿಷ್ಟ್ಯ. ಸಾಧನೆಯ ದೃಷ್ಠಿಯಿಂದ ನಾಯಕರು ಬಾಳಿ ಬೆಳಗಿದ ನಾಡು ಕರ್ನಾಟಕ. ಈ ನಾಡಿಗೆ ತನ್ನದೇ ಆದ ಒಂದು ಭವ್ಯವಾದ ಪರಂಪರೆಯಿದೆ, ಉಜ್ಲವಾದ ಇತಿಹಾಸವಿದೆ. ಸಂಸ್ಕೃತಿ, ಭಾಷೆ, ಸಾಹಿತ್ಯ ಈ ನಾಡಿನ ಇತಿಹಾಸದುದ್ದಕ್ಕೂ ವಿಕಾಸಶೀಲವಾಗಿ ನಡೆದು ಬಂದಿವೆ. ಅದಕ್ಕೆ ಅರಸು ಅವರು ಮತ್ತಷ್ಟು ಮಹತ್ವ ನೀಡಿ ನಾಡನ್ನು ವೈಭವೀಕರಿಸಿದರು. ಅರಸು ಅವರ ನಾಡು-ನುಡಿ ಮತ್ತು ಸಂಸ್ಕೃತಿಯ ನಿಲುವುಗಳು ಇಂದಿಗೂ ಪ್ರಸ್ತುತವಾಗಿವೆ.

ಭಾರತ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಇವು ಈ ಶತಮಾನದ ಕನ್ನಡಿಗರ ಜೀವನದಲ್ಲಿ ಸಂಭವಿಸಿದ ಎರಡು ಮಹತ್ವದ ಸಂದರ್ಭಗಳು. ಇವುಗಳ ಜೊತೆಗೆ ನಾಡಿನ ಮಾಮಕರಣವೂ ಚಾರಿತ್ರಿಕವಾಗಿ ಅಷ್ಟೇ ಮಹತ್ವದ ಘಟನೆಯಾಗಿದೆ. ೧೯೫೬ರಲ್ಲಿ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರು ರಾಜ್ಯವೆಂದು ಕರೆಸಿಕೊಂಡಾಗ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರು. ಈ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯನವರೂ ಕರ್ನಾಟಕ ನಾಮಕರಣದ ಬಗೆಗೆ ತುಂಬಾ ಉತ್ಸುಕರಾಗಿದ್ದರು. ಆದರೆ, ಅವರ ಆಡಳಿತದ ಅತ್ಯಲ್ಪ ಅವಧಿಯಲ್ಲಿ ಏನನ್ನೂ ಮಾಡಲಾಗಲಿಲ್ಲ. ಅನಂತರ ಬಂದ ರಾಜ್ಯದ ಮುಖ್ಯಮಂತ್ರಿಗಳಾದ ಕಡಿದಾಳ ಮಂಜಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ ಮತ್ತು ವೀರೇಂದ್ರ ಪಾಟೀಲರಂಥ ನಾಯಕರುಗಳಿಗೆ ಈ ನಾಡಿನ ಹೆಸರನ್ನು ಬದಲಾಯಿಸಲಾಗಿರಲಿಲ್ಲ. ಆದರೆ ಡಿ. ದೇವರಾಜ ಅರಸು ೧೯೭೨ರಲ್ಲಿ  ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇ ತಡ, ೧ ನವೆಂಬರ್ ೧೯೭೩ರಂದು ನಾಡಿಗೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದರು. ಅಲ್ಲದೇ ನಾಡಿನ ಎಲ್ಲಾ ಮಟ್ಟಗಳಲ್ಲಿಯೂ ಕನ್ನಡವನ್ನೇ ಆಡಳಿತ ಭಾಷೇಯಾಗಿ ಬಳಸಬೇಕೆಂದು ಇದೇ ಸಂದರ್ಭದಲ್ಲಿ ಅರಸು ಅವರು ಘೋಷಣೆ ಮಾಡಿದರು.

ಅರಸು ಅವರ ಕೊನೆಯ ದಿನಗಳು

ಜೂನ್ ೬, ೧೯೮೨ರ ದಿನ ಕರ್ನಾಟಕದ ಜನತೆಗೆ ಸಹಿಸಲಾರದ ದುಃಖದ ದಿನ. ಏಕೆಂದರೆ ಅಂದು ದೇವರಾಜ ಅರಸು ಅವರು ಮರಣ ಹೊಂದಿದ ದಿನ. ಅಂದು ಅವರು ವಿರೋಧ ಪಕ್ಷಗಳ ಏಕತೆಯನ್ನು ಕುರಿತು ರಾಷ್ಟ್ರನಾಯಕರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದರು. ಮಧ್ಯಾಹ್ನದ ಸುಖ ಭೋಜನ ಮಾಡಿ ತುಸು ಹೊತ್ತು ವಇರಮಿಸಿದ್ದರು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಅವರ ಆತ್ಮೀಯ ಸ್ನೇಹಿತ ದ್ವಾರಕನಾಥರು ಬಂದು ಅರಸು ಅವರನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಹೋದರು. ಅಲ್ಲಿಯೇ ಮಲಗಿದ್ದಂತೆಯೇ ಮರಣ ಹೊಂದಿದ್ದರು. ಎಂತಹ ವಿಪರ್ಯಾಸ! ವಿರೋಧ ಪಕ್ಷಗಳನ್ನು ಒಂದು ಗೂಡಿಸುವ ಬಗೆಗೆ ಚರ್ಚೆ ನಡೆಸಿದ್ದ ನಾಯಕ ಒಂದುಗೂಡಿಸದೆ ಕಾಲನ ಕರೆಗೆ ಓಗೊಡ್ಡು, ಒಂಟಿಯಾಗಿ ಸಾವಿನತ್ತ ನಡೆದದ್ದು ಒಂದು ವಿಪರ್ಯಾಸವೇ ಸರಿ.

ಕರ್ನಾಟಕ ರಾಜಕಾರಣದ ಅಖಾಡದಲ್ಲಿ ಅಪೂರ್ವ ಧೀಮಂತಿಕೆಯನ್ನು ತೋರಿದ್ದ ಅರಸು ಸತ್ತಾಗ ಅರಸರನ್ನು ವಿವಾದಾತ್ಮಕ ವ್ಯಕ್ತಿಯನ್ನಾಗಿ ಕಂಡಿದ್ದ ಅವರ ವಿರೋಧಿಗಳೂ ತಮಗರಿವಿಲ್ಲದಂತೆ ಕಣ್ಣೀರು ಸುರಿಸಿದರು. ಅವರ ಈ ಸಾವು ಸಮಸ್ತ ಜನಕೋಟಿಯನ್ನು ದುಃಖದ ಕಡಲಲ್ಲಿ ಮುಳುಗಿಸಿದ್ದಂತೂ ಸತ್ಯ. ಆದರೆ ರಾಜಕೀಯ ನಾಯಕರ ‘ಕಣ್ಣೀರಿ’ಗಿಂತ ಜನಸಾಮಾನ್ಯರು ಸುರಿಸಿದ ಕಣ್ಣೀರು ತುಂಬಿದ’ ಕಂಬನಿ’ಯಲ್ಲಿ ಅರಸು ಇನ್ನೂ ಬದುಕಿದ್ದರು.

ಅರಸು ಅವರ ಶವಸಂಸ್ಕಾರಕ್ಕೆ ಅವರ ಅಭಿಮಾನಿಗಳಾದಿಯಾಗಿ ರಾಷ್ಟ್ರಮಟ್ಟದ ರಾಜಕಾರಣಿಗಳೆಲ್ಲಾ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕಾಗಿ ಬೆಂಗಳೂರಿಗೆ ದೌಡಾಯಿಸಿ ಬಂದರು. ಅದರಲ್ಲೂ ಅರಸು ಅವರ ಆತ್ಮೀಯ ಬಂಧುವಾದ ಮಾಜಿಪ್ರಧಾನಿ ಚೌದರಿ ಚರಣ್‌ಸಿಂಗರು ಅಗಲಿದ ಮಿತ್ರನಿಗೆ ಅಶ್ರುತರ್ಪಣ ಮಿಡಿದರು. ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿಯಾದ ಆರ್. ಗುಂಡೂರಾವ್‌, ಚರಣ್‌ಸಿಂಗ್‌ರಂಥ ರಾಷ್ಟ್ರದ ಹಿರಿಯ ನಾಯಕರು ಶವ ಸಂಸ್ಕಾರಕ್ಕೆ ಆಗಮಿಸಿ ಗೌರವ ಸಲ್ಲಿಸಿದರು. ಆದರೆ ಕೇವಲ ಮೂರು ವರುಷಗಳ ಹಿಂದೆ ಚಿಕ್ಕ ಮಗಳೂರಿನ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆರಿಸಿ ಬಂದು ಅರಸರಿಂದ ಮತ್ತೇ ರಾಜಕೀಯ ಪುನರ್ ಜನ್ಮ ಪಡೆದಿದ್ದ ರಾಷ್ಟ್ರೀಯ ನಾಯಕಿ ಇಂದಿರಾಗಾಂಧಿಯವರು ಮಾತ್ರ ಸೌಜನ್ಯದ ನಡವಳಿಕೆಯನ್ನು ತೋರದೆ ಅರಸರ ಅಂತಿಮ ಶವಸಂಸ್ಕಾರಕ್ಕೆ ಬಾರದೆ ಇದದ್ದು ಆಶ್ಚರ್ಯದ ಸಂಗತಿಯೇ ಸರಿ. ಒಟ್ಟಿನಲ್ಲಿ ದೇವರಾಜ ಅರಸು ಅವರ ವ್ಯಕ್ತಿತ್ವ ಈಗಿರುವ ರಾಜಕಾರಣಿಗಳ ವ್ಯಕ್ತಿತ್ವದಂತದ್ದಲ್ಲ. ನಾಡಿನ ಇತಿಹಾಸದಲ್ಲಿ ಅವರು ತೆರೆದಿದ್ದ ಚೇತೋಹಾರಿ ಅಧ್ಯಾಯ ಅವರಿಗರಿವಿಲ್ಲದಂತೆ ನಿಗೂಢವಾಗಿ ಮಡಚಿಕೊಂಡಿತು. ಇದು ದೇವರಾಜ ಅರಸರ ದುರಂತವೆನ್ನುವುದಕ್ಕಿಂತ ಸಮಗ್ರ ನಾಡಿನ ದುರಂತವೆನ್ನುವುದೇ ಸೂಕ್ತ.