ನಮ್ಮಲ್ಲಿ ಬೇವು, ಅರಿಸಿನಗಳಿಗೆ ವಿದೇಶದವರು ಪೇಟೆಂಟ್‌ ಪಡೆದರೆಂದು ಏನೆಲ್ಲಾ ಹುಯಿಲೆದ್ದಿತು.  ಆ ಗದ್ದಲಗಳ ಮಧ್ಯೆ ನಮ್ಮ ಹಿತ್ತಿಲೊಳಗೆ ಅವಿತುಕೊಂಡಿದ್ದ ಅಮೂಲ್ಯ ಸಸ್ಯವೊಂದರ ಹಣ್ಣು ವಿದೇಶಕ್ಕೆ ಹೋಗಿದ್ದು, ಅಲ್ಲಿ ಅದರ ಸಿಪ್ಪೆ, ರಸ, ಬೀಜ ಏನೆಲ್ಲಾ ಇದೆಯೋ ಅದರೊಳಗಿನ ರಾಸಾಯನಿಕಗಳು, ಅದರಿಂದ ತಯಾರಾಗಬಲ್ಲ ಔಷಧೀಯ ಗುಣಗಳೆಲ್ಲಾ ಅವರದೇ ಪಾಲಾಗಿತ್ತು.  ಸಧ್ಯಕ್ಕೆ ಅವರಿಗೆ ಬಿಳಿಮುರುಗಲು ಸಿಕ್ಕಿಲ್ಲ!  ಕೇವಲ ಕೆಂಪು ಮುರುಗಲು ಮಾತ್ರ ಸಿಕ್ಕಿದೆ.

ಇದು ಕೃಷಿ ಮಾಡದೇ ಬೆಳೆಯಬಲ್ಲ ಗಿಡ.  ಬೀಜ, ಬೇರುಗಳಿಂದೆಲ್ಲಾ ಗಿಡ ಮಾಡಬಹುದು.  ಕಸಿ ಸಸಿಯಾದರೆ ನಾಲ್ಕನೇ ವರ್ಷಕ್ಕೆ ಫಸಲು.  ೨೦ನೇ ವರ್ಷಕ್ಕೆ ಒಂದು ಕ್ವಿಂಟಾಲ್‌. ಬೆಲೆ ಇಲ್ಲದ ಕಾರಣ ಜನಪ್ರಿಯವಲ್ಲ ಎಂದು ಹೇಳುವ ಹಾಗಿಲ್ಲ.  ಔಷಧಿಗಳಿಗೆ, ಪಾನಕ, ಸಾರು, ತಂಬುಳಿ ಮುಂತಾದ ಅಡುಗೆಗಳಿಗೆ ನಿತ್ಯ ಬಳಕೆ.  ಟೊಮ್ಯಾಟೋಗೆ, ಹುಣಸೆಗೆ ವಿದಾಯ ಹೇಳಬಹುದು.

ಇದು ಏಕಜಾತಿಯಲ್ಲಿ ಬೆಳೆಯಲು ಯಾರೂ ಶಿಫಾರಸು ಮಾಡರು.  ಹಿತ್ತಿಲು, ತೋಟ, ಬೆಟ್ಟ, ಗುಡ್ಡ, ಬ್ಯಾಣ ಎಲ್ಲಾದರೂ ನಾಲ್ಕು ಗಿಡಗಳು ಸಾಕು.  ಆಚೆ, ಈಚೆ ನೋಡದೆ ನೆಟ್ಟಗೆ ಬೆಳೆಯುವ ಈ ಮರ ಹಣ್ಣು ಕೊಡುವುದು ಮಾತ್ರ ಮಳೆಗಾಲದಲ್ಲಿ.  ಇದರಿಂದ ಹಣ್ಣುಗಳಲ್ಲಿ ಹುಳ, ಒಣಗಿಸಲು ಆಗದ ಸ್ಥಿತಿ.  ಕೆಲವು ಕಡೆ ಬೇಸಿಗೆಯಲ್ಲೇ ಬರುವುದಿದೆ.  ಆದರೆ ಅದಕ್ಕೂ ರೇವತಿ ಮಳೆ ತೊಂದರೆ ಕೊಡುವುದಿದೆ.  ಹಣ್ಣಂತೂ ಬಹಳ ದಿನ ಇಡಲಾಗದು.  ಸಿಪ್ಪೆಯನ್ನು ಒಣಗಿಸಿ ತೇವವಾಗದಂತೆ ಕಟ್ಟಿಟ್ಟರೆ ಎರಡು ವರ್ಷಗಳ ಕಾಲ ಉಳಿದೀತು.

ಇದು ದಕ್ಷಿಣಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಪಕ್ಕದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಅಯ್ಯೋ ಹೀಗಲ್ಲ ಪಶ್ಚಿಮಘಟ್ಟದಲ್ಲಿ ಇದು, ಇದರ ಸಂಬಂಧಿಗಳಾದ, ಜೀರಕ, ಉಪ್ಪಾಗೆ ಎನೆಲ್ಲಾ ಇವೆ.  ಹಾಗೇ ಬಿಳಿ ಮುರುಗಲು ಸಹ.

ಅಂಕೋಲಾ ತಾಲ್ಲೂಕಿನ ಕರಿಕಲ್ಲು, ಶಿರಸಿಯ ಗರಶಿನಬೇಣ ಮುಂತಾದ ಕಡೆ ಲಿಂಬೆಬಣ್ಣದ ಮುರುಗಲು ಇದೆ.  ಕರಿಕಲ್ಲಿನಲ್ಲಿ ನೂರಾರು ಗಿಡಗಳು.  ಮುರುಗಲು ತೋಟದ ಹಾಗೆ.  ಯಾರೂ ನೆಟ್ಟಿದ್ದಲ್ಲ.

ಕೆಂಪು ಮುರುಗಲು ಸಿಪ್ಪೆಯಲ್ಲಿ ಅಂಥೋಸಯಾನಿನ್‌ ರಾಸಾಯನಿಕ ಇದೆಯಂತೆ.  ಇದರ ಸಿಪ್ಪೆಯಲ್ಲಿ ಏನಿದೆಯೋ, ಆದರೆ ಭೇದಿ ನಿಲ್ಲಲು ಬಿಳಿ ಮುರುಗಲಿನ ಒಂದು ಲೋಟ ಜ್ಯೂಸ್‌ ಸಾಕು ಎನ್ನುತ್ತಾರೆ ಗೋವಿಂದ ಹೆಗಡೆ.

ಇದರ ಬೀಜದ ತುಪ್ಪ ತಯಾರಿಕೆಯೂ ಇಲ್ಲಿದೆ.  ಅಡುಗೆಗೆ, ತಿನ್ನಲು ಹಾಗೂ ಔಷಧಿಯಾಗಿಯೂ ಬಳಕೆ.  ಕ್ವಿಂಟಾಲ್‌ಗಟ್ಟಳೆ ಸಿಗುವ ಹಣ್ಣು ಒಣಗೆ ಸಿಪ್ಪೆಯಾಗಿ ದಿನಾ ಅಡುಗೆಗಳಲ್ಲಿ ಲೀನ.

ಕೃಷಿ ಇಲಾಖೆಗೆ ಇದರ ಬಗ್ಗೆ ಚಿಂತೆ ಏನಿಲ್ಲ.  ಅರಣ್ಯ ಇಲಾಖೆ ಒಂದಿಷ್ಟು ಸಸಿಗಳನ್ನು ಮಾಡಿ ಮಾರುತ್ತಿದೆಯಷ್ಟೆ.

ಕೋಕಂ ಲಾಬಿ ಏನಾದರೂ ಆದರೆ… ಈ ಹಣ್ಣುಗಳೆಲ್ಲಾ ಡಾಲರ್‌ಗಳಾಗುತ್ತವೆ.  ಹಿತ್ತಲಿನಲ್ಲಿ ಹಣದ ಗಿಡ?

ಮುರುಗಲಿನಲ್ಲಿ ಗಂಡು ಹಣ್ಣು ಬಿಡುವುದಿಲ್ಲ.  ಅಂದ್ರೆ ಡಾಲರ್‌ ಬಿಡುವುದಿಲ್ಲ.  ಆದರೆ… ಗಿಡ ದೊಡ್ಡದಾದ ಮೇಲೇ ಗೊತ್ತಾಗುವುದು.  ಅಲ್ಲಿಯವರೆಗೆ ಗೊತ್ತಾಗಲಿಕ್ಕಿಲ್ಲ.