ಹಿತ್ತಿಲಿನ ಗಿಡಗಳಲ್ಲಿ ಸುವಾಸನೆ ಬೀರುವ ಹೂವಿನ ಗಿಡಗಳಿಗೆ ಪ್ರಮುಖ ಸ್ಥಾನ. ಮಲ್ಲಿಗೆ, ಗುಲಾಬಿ, ಸುಗಂಧರಾಜ, ಕಾಮ ಕಸ್ತೂರಿ, ಬರೆಯುತ್ತ ಹೋದರೆ ಪುಟ ಗಟ್ಟಳೆ ಆದೀತು. ಆದರೂ ಈ ಗಿಡಗಳಿಲ್ಲದ ಹಿತ್ತಿಲನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಪಟ್ಟಿಗೆ ಸೇರಿಸ ಬಹುದಾದ, ಹಿತ್ತಿಲಲ್ಲಿ ಸರಾಗವಾಗಿ ಬೆಳೆಯ ಬಹುದಾದ ಇನ್ನೂ ಹಲವು ಗಿಡಗಳಿವೆ. ಪ್ರಮುಖವಾಗಿ ‘ಮನೋರಂಜಿನಿ’, ಮತ್ತು ‘ಮ್ಯಾಗ್ನೋಲಿಯ’ ಇತ್ತೀಚೆಗೆ ಪ್ರಾಮುಖ್ಯತೆ ಪಡೆಯುತ್ತಿವೆ. ಮನೋರಂಜಿನಿಯ ಹೆಸರು ಹಾಗೇ ಉಳಿದರೆ, ಮ್ಯಾಗ್ನೋಲಿಯ ಮಲೆನಾಡಿನಲ್ಲಿ ‘ಮೊಟ್ಟೆ ಸಂಪಿಗೆ’ಯಾಗಿದೆ.

ಮನೋರಂಜಿನಿಯ ಮೊಗ್ಗು ಮತ್ತು ಹೂವು.

ಏಶ್ಯಾದ ಉಷ್ಣವಲಯಗಳಲ್ಲಿ, ಹಾಗೂ ಭಾರತದಲ್ಲಿ ಬೆಳೆಯುವ ಸಸ್ಯ ಮನೋರಂಜಿನಿ. ಹಿಂದಿಯಲ್ಲಿ ಮದನ್ ಮಸ್ತಿ, ಹರಿಚಂಪ ಎಂದು ಕರೆಸಿಕೊಳ್ಳುವ ಈ ಗಿಡಕ್ಕೆ ಕನ್ನಡದಲ್ಲಿ ಮನೋರಂಜಿನಿ, ನಾಗಚಂಪಕ ಎಂಬ ಹೆಸರು. ಮರಾಟಿಯಲ್ಲಿ ಹಿರವ ಚಂಪಾ ಎಂದು ಕರೆದರೆ ತಮಿಳಿನಲ್ಲಿ ಮನೋರಂಜಿತಮ್ ಎನ್ನುತ್ತಾರೆ. ಆರ್ಟಾಬಾಟ್ರಿಸ್ ಹೆಕ್ಸಾಪೆಟ್ಯುಲಿಸ್ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಈ ಗಿಡವನ್ನು ಇಲಾಂಗ್-ಇಲಾಂಗ್, ಲೆಮೆನ್ ಕ್ಯಾಂಡಿ ಗಿಡವೆಂದೂ ಕರೆಯುತ್ತಾರೆ. ನಾವು ನೆನೆಸಿಕೊಂಡ ಹಣ್ಣಿನ ವಾಸನೆ ಬರುವುದರಿಂದ ಈ ಹೂವಿಗೆ ಲೆಮೆನ್ ಕ್ಯಾಂಡಿ ಎಂಬ ಹೆಸರೂ ಬಂದಿರ ಬಹುದು.

ಬಿಸಿಲಿನಲ್ಲಿ, ಮರಗಳ ಮಧ್ಯದಿಂದ ಬೀಳುವ ನೆರಳು-ಬೆಳಕಿನಲ್ಲಿ ಸಹ ಈಗಿಡ ಚೆನ್ನಾಗಿಯೇ ಬೆಳೆಯುತ್ತೆ. ಆದರೆ ಬೆಳೆಯುವ ಜಾಗ ಚೆನ್ನಾಗಿ ನೀರು ಬಸಿದು ಹೋಗುವಂತಿರ ಬೇಕು. ಬೇರೆ ಮರಗಳ ಆಶ್ರಯದಲ್ಲಿ, ಟ್ರಿಲ್ಲೀಸ್ ಮೇಲೆ ಏರುವ ಗಿಡವಾದರೂ, ಆಧಾರ ಸಿಗದಿದ್ದರೆ, ತನ್ನ ಕೊಂಬೆಗಳಿಗೇ ಸುತ್ತಿಕೊಂಡು ಗುಂಪಾಗಿ ಬೆಳೆಯುವ ಗಿಡ. ಅಲ್ಲಲ್ಲಿ ಈ ಗಿಡ ಬೆಳೆಸುವವರಿದ್ದಾರೆ. ಶಾಲೆಯ ಸಮೀಪ ಈ ಗಿಡವಿದ್ದರೆ, ಸಂಜೆಯ ವೇಳೆ ಮಕ್ಕಳು ಗಿಡದ ಸುತ್ತ ಗುಂಪು ಕಟ್ಟಿಕೊಂಡು ಹೂವು ಹುಡುಕುವುದು ಸಾಮಾನ್ಯ.

ಅರಳಿದ ಸುವಾಸಿತ ಹೂಗಳು.

ಗೊಂಚಲಿನಲ್ಲಿ ಮೊಗ್ಗುಗಳಾದರೂ, ಅರಳುವುದು ಒಂದೋ ಎರೆಡೋ ಹೂವು. ಎಲ್ಲವೂ ಒಟ್ಟಿಗೆ ಅರಳುವುದಿಲ್ಲ. ‘ಸೀತಾಫಲ’ ಹಣ್ಣಿನ ಮರದ ಜಾತಿಗೆ ಸೇರಿದ ಗಿಡವಾದ್ದರಿಂದ ಸಣ್ಣದಾಗಿ ಬಿಟ್ಟ ಹೂವು ದೊಡ್ಡದಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೊಡ್ಡದಾದ ಮೇಲೆ ದಟ್ಟ ಹಸಿರು ಬಣ್ಣ ಹೋಗಿ, ತಿಳಿ ಹಸಿರಾಗಿ ನಂತರ ನಸು ಹಳದಿಗೆ ತಿರುಗುತ್ತದೆ. ಹೂವಿನಿಂದ ಪರಿಮಳ ಹೊರಡುವುದು ಈ ಸಮಯದಲ್ಲೇ. ಕಾಯಿಗಳು ಗೊಂಚಲು ತುಂಬ ಬಿಡುತ್ತವೆ. ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡ ಬಹುದು. ಕಾಂಡದ ತುಂಡುಗಳಿಗೆ ಬೇರು ಬರಿಸಿ ನಾಟಿ ಮಾಡಿದರೆ ಗಿಡ ಬೇಗ ಬೆಳೆಯುತ್ತದೆ. ಬಹಳ ಬೆಲೆ ಬಾಳುವ ಗಿಡ ವಾದ್ದರಿಂದ ಇದರ ಸಂತತಿಯನ್ನು ಉಳಿಸಿಕೊಳ್ಳುವುದು ಎಲ್ಲ ಸಸ್ಯ ಪ್ರೇಮಿಗಳ ಕರ್ತವ್ಯ.

ದೊಡ್ಡದಾದ, ಬಣ್ಣ ಬಣ್ಣದ ಹೂಗಳನ್ನು  ಬಯಸುವುದಾದರೆ, ಈ ಗಿಡ ಬೆಳೆಯುವ ಯೋಚನೆ ಮಾಡದೇ ಇರುವುದೇ ಒಳ್ಳೆಯದು. ಇಲ್ಲದಿದ್ದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಈ ಗಿಡದಲ್ಲಿ ಬಿಡುವುದು ಹಸಿರು ಹೂವು. ದಿನಕಳೆದಂತೆ ತಿಳಿ ಹಸಿರಾಗಿ, ನಂತರ ಹಳದಿಯಾಗಿ ಕಂಗೊಳಿಸುತ್ತದೆ. ಗಿಡದಲ್ಲಿ ಹೂವು ಕಾಣಲು ಅದರ ವಾಸನೆಯ ಜಾಡು ಹಿಡಿದು ಹುಡುಕ ಬೇಕು. ಎಲೆಗಳ ಸಂದಿನಲ್ಲಿ ಕಾಣುವ ಹೂವಿನ ಸುವಾಸನೆಯೊಂದು ಅಪರೂಪದ್ದು.ಹಣ್ಣಿನ ವಾಸನೆ ಇದ್ದರೂ, ನಾವು ನೆನೆಸಿಕೊಂಡ ಹಣ್ಣಿನ ವಾಸನೆ ಬರುವುದು ಚೋದ್ಯದ ಸಂಗತಿ.  ಮನೋರಂಜಿನಿ ಹೂವಿಗೆ ಆರು ದಳಗಳು. ಹೊರಗಿನಿಂದ ಮೂರು, ಒಳಗಿನಿಂದ ಮೂರು, ಅದಕ್ಕೆ ಈ ಹೂವಿಗೆ ‘ಹೆಕ್ಸಾ ಪೆಟಲ್ಲಿಸ್’ ಎಂಬ ಹೆಸರು. ನೀರಿನಲ್ಲಿ ಈ ಹೂವು ಇಟ್ಟರೆ ರೂಮಿನಲ್ಲೆಲ್ಲ ಪರಿಮಳ.

ಗಿಡದ ಹೊಳೆಯುವ ಎಲೆಗಳು.

ನಾವು ನೆನೆಸಿಕೊಳ್ಳುವ ಹಣ್ಣಿನ ವಾಸನೆ ಈ ಹೂವಿಗಿರುವಂತೆ ತೋರುವುದು ಇದರ ವೈಶಿಷ್ಟ್ಯ. ಬೆಚ್ಚಗಿರುವ ಹವಾಮಾನದಲ್ಲಿ ಹೆಚ್ಚು ಹೂವು ಬಿಡುವುದು ಈ ಗಿಡದ ಹವ್ಯಾಸ. ಆದರೆ ಫಳ ಫಳನೆ ಹೊಳೆಯುವ ಎಲೆಗಳು ಈ ಗಿಡದ ಹೆಗ್ಗುರುತು ಮತ್ತು ಹೆಮ್ಮೆಯ ಆಸ್ತಿ. ವಿರಳವಾಗುತ್ತಿರುವ ಈ ಗಿಡ ಭಾರತದ ಆಸ್ತಿ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ‘ಚಂದೀಗಢ’ ದ ‘ಭಾರತೀಯ ವಸ್ತು ಸಂಗ್ರಹಾಲಯ’ ದ ಬಾಗಿಲಲ್ಲಿ ಎರೆಡೂ ಬದಿಗಳಲ್ಲಿ ಮನೋರಂಜನಿಯ ಗಿಡಗಳನ್ನು ಬೆಳೆಸಲಾಗಿದೆ. ಎತ್ತರಕ್ಕೆ ಬೆಳೆದು, ತನ್ನ ಸುವಾಸಿತ ಹೂಗಳಿಂದ ಜನರನ್ನು ಸ್ವಾಗತಿಸುವ ಈ ಗಿಡಗಳ ಸೌಂದರ್ಯವನ್ನು ನೋಡಿಯೇ ಆನಂದಿಸ ಬೇಕು. ನಾವು ಕಾಳಜಿ ವಹಿಸದೆ ಇದ್ದರೆ ಈ ಗಿಡವೂ ‘ಆಂಟಿಕ್’ ಆಗ ಬಹುದು.

ತಮಿಳುನಾಡಿನ ‘ಸೇವ’ ಸಂಸ್ಥೆಯ ಸದಸ್ಯರಾಗಿರುವ ಕರುಣಾನಿಧಿ ವೃತ್ತಿಯಲ್ಲಿ ಬಸ್ ಚಾಲಕ. ಬಿಡುವಿನ ವೇಳೆಯಲ್ಲಿ. ದೇವಸ್ಥಾನಗಳಲ್ಲಿ, ರಸ್ತೆಯ ಬದಿಗಳಲ್ಲಿ, ಪಾರ್ಕುಗಳಲ್ಲಿ ಗಿಡ ನೆಡುವುದಲ್ಲದೆ ಅವು ಬೆಳೆಯುವವರೆಗೂ ನೀರುಣಿಸಿ ಪೋಷಿಸುತ್ತಾರೆ. ಈ ಗಿಡಗಳಲ್ಲಿ ಮನೋರಂಜಿನಿ ವಿಶೇಷದ್ದು. ಈಗಾಗಲೇ ಹತ್ತಾರು ಸಾವಿರ ಗಿಡ ನೆಟ್ಟಿರುವ ಇವರು ಒಂದು ಲಕ್ಷ ಗಿಡ ನೆಡುವ ಗುರಿ ಹೊಂದಿದ್ದಾರೆ. ಇವುಗಳಲ್ಲಿ ಮನೋರಂಜಿನಿಯ ಗಿಡಗಳೂ ಇವೆ.

ಸಸ್ಯಾಭಿವೃದ್ಧಿಗೆ ಸಿದ್ದವಾಗುತ್ತಿರುವ ಕಾಯಿಗಳು.

ಅಹಮದಾಬಾದಿನ ಹನಿ-ಬೀ ನೆಟ್ ವರ್ಕ್‌ನ ಅಂಗ ಸಂಸ್ಥೆ ವಿಶೇಷ ಕೆಲಸ ಮಾಡಿದವರಿಗೆ  ‘ಸೃಷ್ಟಿ ಸಮ್ಮಾನ್ ‘ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿ ಪಡೆದ ಕರುಣಾನಿಧಿ ತಮ್ಮೊಂದಿಗೆ ಪ್ರಶಸ್ತಿ ಪಡೆದ ಎಲ್ಲರಿಗೂ ಒಂದೊಂದು ಗಿಡ ನೀಡಿ ಶುಭ ಹಾರೈಸಿದರು. ಅದರಲ್ಲಿದ್ದ ಒಂದು ಮನೋರಂಜಿನಿ ಗಿಡ ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ‘ಅರಳುಮಲ್ಲಿಗೆ’ಯ  ‘ಋತುಪರ್ಣ’ ಸಾವಯವ ತೋಟದಲ್ಲಿ ಹೂವು ಬಿಡುತ್ತಿದೆ. ವಿಶೇಷವಾದ ಗಿಡವಾದ್ದರಿಂದ ಬೀಜ ಸಂಗ್ರಹಣೆ, ಸಸಿಗಳ ನರ್ಸರಿ ಮಾಡುವ ಅವಶ್ಯಕತೆ ಇದೆ. ಬರುವ ಆದಾಯದೊಂದಿಗೆ ಅಪರೂಪದ ಗಿಡವೊಂದನ್ನು ಉಳಿಸಿದ ಹೆಮ್ಮೆಯೂ ನಮ್ಮದಾದೀತು. ವಿಶೇಷ ಸಂದರ್ಭಗಳಲ್ಲಿ ಈ ಗಿಡವನ್ನು ಬಳುವಳಿಯಾಗಿ ಕೊಡುವುದರಿಂದ ಇದರ ಸಂತತಿ ಶಾಶ್ವತವಾಗಿರುವಂತೆ ಮಾಡ ಬಹುದು. ಈ ನಿಟ್ಟಿನಲ್ಲಿ  ನಾವು ಒಂದಾದರೂ ಗಿಡ ನೆಡ ಬಹುದಲ್ಲವೇ ?

ಚಿತ್ರಗಳು : ಆರ್ ಎಸ್ ಶರ್ಮ