ಬಳ್ಳಾರಿಯವರೇ ಆದ ಲಕ್ಷ್ಮಿಯವರಿಗೆ ಗುಲಾಬಿ ಗಿಡಗಳೆಂದರೆ ಪ್ರಾಣ. ಬೆಂಗಳೂರಿಗೆ ಬಂದಾಗಲೆಲ್ಲ ಲಾಲ್ ಬಾಗ್‌ಗೆ  ಅವರ ಭೇಟಿ ನಿಶ್ಚಿತ. ಬಗೆ ಬಗೆಯ, ಬಣ್ಣ ಬಣ್ಣದ ಗುಲಾಬಿ ನೋಡಿದೊಡನೆ ಕೊಳ್ಳುವ ತವಕ. ಎಷ್ಟೇ ಕಷ್ಟವಾದರೂ ನಾಲ್ಕಾರು ಗಿಡ ಬಳ್ಳಾರಿಗೆ ಪಾರ್ಸಲ್. ಆರೆಂಟು ತಿಂಗಳು ಹೂವು ಬಿಡುತ್ತಿದ್ದ ಗುಲಾಬಿ ಬಿಸಿಲಿನ ತಾಪಕ್ಕೆ ಬೆಂದು ಬಸವಳಿದು ಒಣಗಿಹೋಗುತ್ತಿದ್ದವು. ಎಷ್ಟೇ ಕಷ್ಟ ಪಟ್ಟರೂ ಗುಲಾಬಿಗಳನ್ನು ಉಳಿಸಿ ಕೊಳ್ಳಲಾಗದಿರುವುದು ಲಕ್ಷ್ಮಿಯವರಿಗೆ ಅತೀವ ನೋವುಂಟು ಮಾಡುತ್ತಿತ್ತು.

ಸಮೃದ್ಧ ನಿಂಬೆ

ತೋಟದ ಒಂದು ನೋಟ.

ಪ್ರಾಯ: ಈ ಹಂಬಲ, ಹಾರೈಕೆ, ದೇವರಿಗೂ ಕೇಳಿಸಿತ್ತೇನೋ. ಮದುವೆಯಾಗಿ  ಬೆಂಗಳೂರಿಗೆ  ಬಂದಾಗ ಲಕ್ಷ್ಮಿಯವರ ಗುಲಾಬಿಯ ಕನಸಿಗೆ ರಂಗೇರಿತ್ತು. ಬಂದವರೇ ಎಲ್ಲ ಬಣ್ಣಗಳ ಗುಲಾಬಿ ತಂದು ಬೆಳೆಸಿದರು. ನಂತರದ ದಿನಗಳಲ್ಲಿ ಕೆಲವೊಂದು ಅಲಂಕಾರಿಕ ಸಸ್ಯಗಳು ಜೊತೆಗೂಡಿದವು. ಅವಶ್ಯಕತೆ ಹೆಚ್ಚಿದಂತೆ ವೀಳೆಯದೆಲೆ, ಪುದೀನ, ಮೆಣಸಿನಕಾಯಿ ಗಿಡಗಳು ತೋಟದಲ್ಲಿ ಸ್ಥಾನ ಪಡೆದವು.

‘ಪೌಷ್ಟಿಕಾಂಶದ ಕೊರತೆಯಿಂದ ಬರ ಬಹುದಾದ ಕಾಯಿಲೆಗಳು ಮತ್ತು ಪರಿಹಾರ’ ಎಂಬ ವಿಚಾರದ ಬಗ್ಗೆ ‘ಡಿಪ್ಲೊಮ” ಮಾಡುವಾಗ ಲಕ್ಷ್ಮಿಯವರ ಗಮನ ತರಕಾರಿಗಳು ಮತ್ತು ಮನುಷ್ಯನ ಆರೋಗ್ಯದ ಸಂಬಂಧದ ಕಡೆಗೆ  ಹರಿಯಿತು. ಎಲ್ಲಕ್ಕಿಂತ ಮಿಗಿಲಾಗಿ ತರಕಾರಿಗಳಲ್ಲಿ ಕೀಟನಾಶಕಗಳ ಉಳಿಕೆ, ಗಗನ ಚುಂಬಿ ಬೆಲೆಗಳು ಲಕ್ಷ್ಮಿಯವರನ್ನು ಯೋಚಿಸುವಂತೆ ಮಾಡಿತು.

ಮೆಣಸಿನಕಾಯಿ.

ಅರಳಿದ ಸೇವಂತಿಗೆ.

ಅವರಿಗಿರುವ ತಾರಸಿ ೨೦/೧೫ಅಡಿಗಳು ಮಾತ್ರ. ಅದರಲ್ಲೇ ಸಾಧ್ಯವಾದಷ್ಟು ತರಕಾರಿಗಳನ್ನು ಬೆಳೆಯುವ ನಿಶ್ಚಯ ಮಾಡಿದಾಗ ಚಿಂತೆಯಾಗಿದ್ದು ನೀರಿನ ಬಗ್ಗೆ. ಮೇಲಿನ ತಾರಸಿಯಿಂದ ಹರಿದು ಮೋರಿ ಸೇರುತ್ತಿದ್ದ ನೀರಿಗೆ ತಡೆ ಒಡ್ಡಿದರು. ಕೊಳವೆಯಮೂಲಕ ಹರಿಯುವ ನೀರು ಶೋಧಕದ ಮೂಲಕ ಹಾಯ್ದು ಕೆಳಭಾಗದ ಟಾಂಕಿ ಸೇರುತ್ತದೆ. ತಾರಸಿಯಲ್ಲಿರುವ ನಲ್ಲಿಯಲ್ಲಿ ಬರುವುದು ಈ ಮಳೆ ನೀರೇ. ನೀರಿನ ಆತಂಕ ಕಮ್ಮಿಯಾದೊಡನೆ ಲಕ್ಷ್ಮಿ ಹಿಂತಿರುಗಿ ನೋಡಲಿಲ್ಲ.

ಗುಲಾಬಿಯೊಂದಿಗೆ ‘ಲಕ್ಷ್ಮಿ’

ಈಗಾಗಲೇ ತಮ್ಮಲ್ಲಿದ್ದ ಖಾಲಿ ಕುಂಡಗಳಲ್ಲಿ ಸೊಪ್ಪಿನ ಬೀಜ ಚೆಲ್ಲಿದರು. ದಂಟು, ಕೀರೆ, ಮೆಂತ್ಯ, ಪಾಲಕ್, ಸಬಸಿಗೆ ಇವರು ಬೆಳೆದ ಮೊದಲ ಸೊಪ್ಪಿನ ತರಕಾರಿ. ಇದನ್ನು ಬೆಳೆದು ಧೈರ್ಯ ಬಂತು. ಈಗ ನೋಡಿ ಹುರಳಿಕಾಯಿ, ಬೆಂಡೆಯ ಕಾಯಿ ಹಾಕಿದ್ದೀವಿ ಮೊದಲ ಕಾಯಿ ಕಿತ್ತಿದ್ದಾಯಿತು ಅಂತ ಸಂತಸ ಪಡುತ್ತಾರೆ. ದಿನ ನಿತ್ಯ ಬೇಕಾಗುವ ಮೆಣಸಿನ ಕಾಯಿ, ಕೊತ್ತಂಬರಿಗಳೂ ಇವೆ. ಕರಿಬೇವು ಮರವಾಗಿ ಬೆಳೆದಿದ್ದರೆ ನಿಂಬೆಯ ಪುಟ್ಟ ಗಿಡದಲ್ಲಿ ಗೊಂಚಲು ಗೊಂಚಲು ಕಾಯಿ ಬಿಡುತ್ತಿದೆ. ಗುಲಾಬಿ ಕೃಷಿ ಸಾಕಾಯಿತೇ? ಎಂಬ ಪ್ರಶ್ನೆಗೆ ಲಕ್ಷ್ಮಿಯ ಉತ್ತರ “ ಇಲ್ಲ. ಆದರೆ ಇಂದು ಹೂವಿಗಿಂತ ತರಕಾರಿಯ ಅವಶ್ಯಕತೆ ಜಾಸ್ತಿ ಇದೆ. ನಾವು ಏನಾಗಿದ್ದೀವಿ ಎಂಬುದನ್ನು ನಿರ್ಧರಿಸುವುದು ನಾವು ತಿನ್ನುವ ಆಹಾರ, ಅದರಲ್ಲೂ ತರಕಾರಿಗಳು. ಆರೋಗ್ಯ ಸಮಸ್ಥಿತಿಯಲ್ಲಿರ ಬೇಕಾದರೆ ಪೋಷಕಾಂಶಗಳು ಸಮತೋಲನದಲ್ಲಿರ ಬೇಕು. ದಿನದಲ್ಲಿ ಸೊಪ್ಪಿನೊಂದಿಗೆ , ಬೇರೊಂದು ತರಕಾರಿ ಜೊತೆಗಿದ್ದರೆ ಒಳ್ಳೆಯದು. ಸೊಪ್ಪು, ತರಕಾರಿ ಬೆಳೆಯುವುದಷ್ಟೇ ಅಲ್ಲ, ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳ ಬೇಕು. “.ಪಿತ್ತ ಶಮನಕ್ಕೆ ದೊಡ್ಡಿ ಪತ್ರೆ, ಮಲಬದ್ಧತೆಗೆ ದಂಟು ಕೀರೆ, ಬಾಯಿ ಹುಣ್ಣಿಗೆ ಬಸಳೆ, ಹೀಗೇ ಚರ್ಮದ ಸೋಂಕುಗಳಿಗೂ ದೊಡ್ಡಿಪತ್ರೆ ರಸ ರಾಮಬಾಣ ಎನ್ನುವ ಲಕ್ಷ್ಮಿ ನೆನಪು ಹೆಚ್ಚಿಸಲು ಒಂದೆಲಗ, ಜೀರ್ಣ ಶಕ್ತಿ ಹೆಚ್ಚಿಸಲು ಪುದೀನ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಾಮಿನ್ ‘ಸಿ’ ಹೆಚ್ಚಿರುವ ನಿಂಬೆ ಹಣ್ಣನ್ನು ನಿಯಮಿತ ವಾಗಿ ಉಪಯೋಗಿಸಿ ಎಂಬ ಕಿವಿಮಾತು ಸಹ ಹೇಳುತ್ತಾರೆ. ಹಿತ್ತಲಿನ ಕಾಯಿ ಪಲ್ಲೆ ಹತ್ತುಕೋಟಿಗೆ ಸಮ ಎನ್ನುವ ಅವರ ಮಾತು ಅಕ್ಷರಶ: ಸತ್ಯ.

(ಚಿತ್ರಗಳು : ಎಆರ್ಎಸ್ ಶರ್ಮ)