(ಕ್ರಿ.ಪೂ. ೪೬೦-ಕ್ರಿ.ಪೂ. ೩೭೭) (ರೋಗದ ಗುಣಲಕ್ಷಣಗಳ ವರ್ಗೀಕರಣ)

ಆಧುನಿಕ ವೈದ್ಯಶಾಸ್ತ್ರದ ಪಿತಾಮಹನೆಂದು ವಿಶ್ವವಿಖ್ಯಾತರಾದ ಹಿಪೊಕ್ರೇಟಿಸ್ ಕ್ರಿ. ಪೂ. ೪೬೦ರಲ್ಲಿ ಗ್ರೀಸ್ ದೇಶಕ್ಕೆ ಸೇರಿದ್ದ ಕಾಸ್ ಎಂಬ ದ್ವೀಪದಲ್ಲಿ ವೈದ್ಯಕೀಯ ಮನೆತನದಲ್ಲಿ ಜನಿಸಿದರು. ವೈದ್ಯಶಾಸ್ತ್ರದ ಬಗ್ಗೆ ಖುದ್ದಾಗಿ ಸಾಕಷ್ಟು ತಿಳಿದುಕೊಂಡಿದ್ದ ಇವರು ಅಥೆನ್ಸ್ನಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದರು.

ಯಾವುದೇ ಬಗೆಯ ಆಧುನಿಕ ವೈದ್ಯಕೀಯ ಉಪಕರಣಗಳಾಗಲಿ ತಾಂತ್ರಿಕ ಸಾಧನಗಳಾಗಲಿ ಇಲ್ಲದ ಕಾಲ ಆಗಿತ್ತು ಆದು. ಹಿಪೊಕ್ರೇಟಿಸ್ ರೋಗಿಗಳ ಬದಿಯಲ್ಲಿ ಕುಳಿತು, ರೋಗದ ಇತಿಹಾಸವನ್ನು ಕೇಳಿ, ಅವರು ವ್ಯಕ್ತಗೊಳಿಸುತ್ತಿದ್ದ ಬೇರೆ ಬೇರೆ ಗುಣಲಕ್ಷಣಗಳನ್ನು ಪರಿಶೀಲಿಸಿ ರೋಗವನ್ನು ಗುರುತಿಸುತ್ತಿದ್ದರು ಮತ್ತು ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ವಿಭಿನ್ನ ರೋಗಗಳ ಗುಣಲಕ್ಷಣಗಳ ಬಗ್ಗೆ ಸಂಶೋಧನೆ ಮಾಡಿ ಅವರು ನೀಡಿದ ರೋಗ ವಿವರಣೆಗಳು ಇಂದಿಗೂ ಸಿಂಧುವಾಗಿವೆ. ವೈದ್ಯಶಾಸ್ತ್ರ ವೈಜ್ಞಾನಿಕ ತಳಪಾಯವನ್ನು ಪಡೆದು ಇಂದಿನ ಸ್ವರೂಪಕ್ಕೆ ಬೆಳೆದಿದ್ದರೆ ಖ್ಯಾತಿ ಮುಖ್ಯತಃ ಹಿಪೊಕ್ರೇಟಿಸ್ ಗೆ ಸಲ್ಲುತ್ತದೆ. ಅಂತಲೇ ಅವರನ್ನು “ವೈದ್ಯಶಾಸ್ತ್ರದ ಪಿತಾಮಹ” ಎಂದು ಕರೆಯಲಾಗುತ್ತದೆ.

ವೈದ್ಯ ಅನುಸರಿಸಬೇಕಾದ ನೀತಿ ನಿಯಮಗಳನ್ನು ಕುರಿತು ನೀತಿ ಸಂಹಿತೆಯೊಂದನ್ನು ಅವರು ರೂಪಿಸಿದ್ದರು. ಅವರು ಸೂಚಿಸಿದ್ದ ನೀತಿ ನಿಯಮಗಳನ್ನು ಪಾಲಿಸುವ ಬಗ್ಗೆ ಪ್ರತಿಯೊಬ್ಬ ವೈದ್ಯನೂ ವೈದ್ಯಕೀಯ ವೃತ್ತಿಗಿಳಿಯುವ ಮುಂಚೆ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕೆಂಬ ಅಲಿಖಿತ ಸೂಚನೆಯೊಂದನ್ನು ಇಂದಿಗೂ ಪಾಲಿಸಲಾಗುತ್ತಿದೆ.

“… ಯಾರು ಕೇಳಿದರೂ ನಾನು ಮಾರಕ ಔಷಧ ನೀಡಲಾರೆ. ಅಂಥ ಔಷಧ ನೀಡಬೇಕೆಂಬ ಆದೇಶವನ್ನೂ ಯಾರಿಗೂ ಕೊಡುವುದಿಲ್ಲ…” – ಇದು ಆತನ ಹೆಸರಿನಲ್ಲಿ ವೈದ್ಯರು ಸ್ವೀಕರಿಸುವ ಪ್ರತಿಜ್ಞಾ ವಿಧಿಯಲ್ಲಿನ ಒಂದು ಅಂಶ.