ಕನಸು ಮನಸುಗಳಲ್ಲಿ ಥಟ್ಟನೆ ಎದ್ದು
ಸದಾ ಕರೆಯುತ್ತಿರುವ ಗಿರಿಶಿಖರ ಪಂಕ್ತಿಗಳೆ
ಪರ್ವತ ಪ್ರಪಂಚದಂತರಾಳಗಳಲ್ಲಿ
ಮೂಲರೂಪವ ಕುರಿತು ನಡೆಯುತ್ತಿರುವ ಹೆಜ್ಜೆಗಳೆ

ಕಗ್ಗಾಡು ಕಣಿವೆಗಳ ಹರಜಟಾಮಂಡಲದೊಳಗೆ
ಭ್ರಮಿಸುತ್ತಿರುವ ನಿತ್ಯಜಲ ಸತ್ವಗಳೆ
ಥಳತ್ತಳಿಪ ಧವಳ ಪರ್ವತದ ಹಿನ್ನೆಲೆಯಲ್ಲಿ
ಮುಡಿಯೆತ್ತಿ ನಿಂತ ಗುಡಿಯ ಗೋಪುರಗಳೆ

ಕಿಕಿರಿದ ಹೆಮ್ಮರದ ರೋಮರಾಜಿಯ ಮೈಯ್ಯ
ಪ್ರಪ್ರಾಚೀನ ಪೆಡಂಭೂತ ಸಂತಾನವೆ
ಭೈರವನ ಬಾಯ ಪಾತಾಳದಾಕಳಿಕೆಗಳ
ತಳಾತಳದಲ್ಲಿ ನಿದ್ರಿಸುವ ಘನ ಮೌನವೇ

ತತ್ತರಿಸುವೆತ್ತರದ ಬೃಹದಾಕಾರ ವಿಸ್ತಾರ-
ದಸ್ತವ್ಯಸ್ತ ನಿರ್ಲಕ್ಷ್ಯ ದೃಶ್ಯಾಭಿವ್ಯಕ್ತಿಗಳೆ
ಮುಂಜಾನೆ ಬಂಗಾರವಾಗಿ, ನಡು ಹಗಲು ರಜತ ಮಯವಾಗಿ,
ಸಂಜೆಗೆ ಹೊನ್ನೇರಿಲೆಯ, ಪಾರಿವಾಳದ ಬೂದು ಬಣ್ಣವಾಗಿ
ಶೋಭಿಸುವ ದಿಗ್‌ದೇವತಾತ್ಮ ತೇಜಶ್ಶರೀರಿಗಳೆ

ಸಂಜೆಗತ್ತಲಿನಲ್ಲಿ ಮರೆವೆಗೆ ಇಳಿವ
ಹಳೆಯ ನೆನಪುಗಳಂತೆ ನಿಂತ ಶಿಖರಕ್ಕೆ
ನಕ್ಷತ್ರದಾರತಿಯೆತ್ತುವಾಕಾಶವೇ,
ದಟ್ಟ ಕತ್ತಲಿನ ನಿದ್ರಾ ಸಮುದ್ರದೊಳಗು-
ದ್ಬುದ್ಧವಾದ ನೀರ‍್ಗಲ್ಲ ಕನಸುಗಳಂತೆ
ಮಬ್ಬಾದ ಗಿರಿಪಂಕ್ತಿ ವಿಸ್ತಾರವೇ

ಕಣಿವೆಯೊಳಗುಟ್ಟುಗಳಿಗಿಟ್ಟ ಕಡೆಗೋಲಂತೆ
ಭೋರಿಡುವ ನೀರುಗಳ ಅನುರಣನವೇ
ಜಟಿಲ ಕಾನನದ ಕುಟಿಲ ಕಂದರದ ದಾರಿಯಲಿ
ಹಠಾತ್ತನೆ ಒಂದನ್ನೊಂದು ಸಂಧಿಸಿದ
ನದೀ ಜಲೋಲ್ಲಾಸ ನಿರ್ಘೋಷಗಳೆ
ಬೆಟ್ಟದೆತ್ತರದ ಕೋಡುಗಳಿಂದ ಹಾಲಿಳಿವ
ಅಸಂಖ್ಯಾತ ಜಲಪಾತದುತ್ಸಾಹ ಗೀತಗಳೆ

ನಿದ್ದೆ ಎಚ್ಚರಗಳಲಿ ನಿಶ್ಶಬ್ದವಾಗಿ
ನನ್ನನು ಕರೆವ ಅದ್ಭುತಗಳೆ
ಕೂತಲ್ಲೆ ನೆನಪಲ್ಲಿ ಪ್ರತ್ಯಕ್ಷವಾಗುತ್ತ
ಮಸ್ತಕದಲ್ಲಿ ಮುದ್ರಿತವಾದ ಸಂಪುಟಗಳೆ
ಅಲ್ಲಿ ಹೇಗೋ ಹಾಗೆ ಇಲ್ಲಿಯೂ ನನ್ನೊಳಗೆ
ಸತ್ಯವಾಗುತ್ತಿರುವ ವಾಸ್ತವಗಳೇ.