ನರ್ಮದಾ ನದಿ ತೀರದಲ್ಲಿ ಇಮ್ಮಡಿ ಪುಲಿಕೇಶಿಯ ಸೈನ್ಯ ಒಂದೆಡೆ. ಅದಕ್ಕೆ ಎದುರಾಗಿ ಸಾಮ್ರಾಟ್ ಹರ್ಷವರ್ಧನನ ಸೈನ್ಯ ನಿಂತಿದೆ. ಆದರೆ ಇದೇನು ವಿಚಿತ್ರ! ಶಸ್ತ್ರಾಸ್ತ್ರಕ್ಕೆ ಬದಲಾಗಿ ಎರಡೂ ಕಡೆ ಸೈನಿಕರು ಕಹಳೆ, ತುತ್ತೂರಿ, ಡೋಲು ಮುಂತಾದ ವಾದ್ಯಗಳಿಂದ ಸಜ್ಜಿತರಾಗಿ ನಿಂತಿದ್ದಾರೆ!

ಪುಲಿಕೇಶಿಯ ಸೈನಿಕರು ಉತ್ಸಾಹದಿಂದ ಕುಣಿಯುತ್ತಿದ್ದಾರೆ. ಸಂತೋಷದಿಂದ ನಗುತ್ತಿದ್ದಾರೆ. ಆದರೆ ಹರ್ಷವರ್ಧನನ ಸೈನಿಕರು ತಲೆತಗ್ಗಿಸಿ ನಿಂತಿದ್ದಾರೆ. ಮುಖ ಕಳೆಗುಂದಿದೆ.

ದಕ್ಷಿಣ ಭಾರತ-ಉತ್ತರ ಭಾರತಗಳ ಸ್ನೇಹ

ಹರ್ಷರ್ವರ್ಧನನ ಪಾಳಯದಿಂದ ಹೊರಟ ರಥವೊಂದು ನಿಧಾನವಾಗಿ ಬಂದು ಪುಲಿಕೇಶಿಯ ಬಿಡಾರದ ಬಳಿ ನಿಲ್ಲುತ್ತದೆ.

ಸಾರ್ವಭೌಮ ಪುಲಿಕೇಶಿ ಆಸನದಿಂದೆದ್ದು ಹಸನ್ಮುಖನಾಗಿ ಸ್ವಾಗತಿಸಲು ಮುಂದೆ ಬರುತ್ತಾನೆ.

“ಹರ್ಷ ಚಕ್ರವರ್ತಿಗಳಿಗೆ ಸುಸ್ವಾಗತ”

“ಹರ್ಷವರ್ಧನನು ರಥದಿಂದಿಳಿದು ನಿಧಾನವಾಗಿ ನಡೆದುಬಂದು ಪುಲಿಕೇಶಿಯನ್ನು ಆಲಂಗಿಸುತ್ತಾನೆ. ಎರಡು ಶಿಬಿರಗಳಲ್ಲೂ ಮಂಗಳವಾದ್ಯಗಳು ಮೊಳಗುತ್ತವೆ.”

“ಪುಲಿಕೇಶಿ ಸಾರ್ವಭೌಮರೇ, ನಿಮ್ಮ ಸೌಜನ್ಯ ನನ್ನ ಕಣ್ಣನ್ನು ತೆರೆಸಿತು. ನಿಮ್ಮ ಶೌರ್ಯ ಮತ್ತು ಸೌಜನ್ಯದ ಬಗ್ಗೆ ಬಹಳ ಸಮಾಚಾರ ಕೇಳಿದ್ದೆ. ಈ ಯುದ್ಧದಲ್ಲಿ ನಿಮ್ಮ ಶೌರ್ಯದ ದರ್ಶನವಾಯಿತು. ನೀವು ನನ್ನನ್ನು ಯುದ್ಧದಲ್ಲಿ ಅಲ್ಲ, ಮನಸ್ಸಿನಿಂದಲೂ ಗೆದ್ದಿದ್ದೀರಿ. ಇಂದಿನಿಂದ ನೀವು “ದಕ್ಷಿಣಾಪಥೇಶ್ವರ.”

ಸೈನಿಕರ ಹರ್ಷೋದ್ಗಾರ ಮುಗಿಲು ಮುಟ್ಟಿತು.

“ಸತ್ಯಾಶ್ರಯ ಶ್ರೀ ಪೃಥ್ವಿವಲ್ಲಭ, ಪರಮ ಭಟ್ಟಾರಕ, ಮಹಾರಾಜಾಧಿರಾಜ, ದಕ್ಷಿಣಾಪಥೇಶ್ವರ, ಪರಮೇಶ್ವರ ಪುಲಿಕೇಶಿಯವರಿಗೆ ಜಯವಾಗಲಿ!” ಕವಿಶ್ರೇಷ್ಠ ರವಿಕೀರ್ತಿಯ ನುಡಿ ಸಹಸ್ರ ಕಂಠಗಳಲ್ಲಿ ಪ್ರತಿಧ್ವನಿಸಿತು. ತುತ್ತೂರಿ, ನಗಾರಿಗಳು ಹಿಮ್ಮೇಳ ನುಡಿಸಿದವು.

“ಉತ್ತರಾಪಥೇಶ್ವರ ಸಾಮ್ರಾಟ್ ಹರ್ಷವರ್ಧನರ ಸ್ನೇಹಹಸ್ತವನ್ನು ಹಾರ್ದಿಕವಾಗಿ ಹಿಡಿದು ಅವನನ್ನು ಆಲಿಂಗಿಸಿದಾಗ ಮತ್ತೆ ನಭೋಮಂಡಲ ಬಿರಿಯುವಂತೆ ಜಯಕಾರ ಮೊಳಗಿತು.

ಇದು ನಡೆದದ್ದು ಸುಮಾರು ೧೩೫೦ ವರ್ಷಗಳ ಹಿಂದೆ. ಆದರೆ ಇಂದೂ ಪುಲಿಕೇಶಿಯ ಹೆಸರು ಕೇಳಿದೊಡನೆ ಈ ದೃಶ್ಯ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಮೈ ಜುಂ ಎನ್ನುತ್ತದೆ. ಕರ್ನಾಟಕದ ಯಶಸ್ಸನ್ನು ವಿಶ್ವವಿಖ್ಯಾತಗೊಳಿಸಿದ ಮಹಾ ವ್ಯಕ್ತಿ ಈತ ಎಂದು ನಮ್ಮ ಎದೆ ಅಭಿಮಾನದಿಂದ ಉಬ್ಬಿ ನಿಲ್ಲುತ್ತದೆ.

ಕನ್ನಡನಾಡಿನಲ್ಲಿ ಸಾಮ್ರಾಜ್ಯ ಕಟ್ಟಿ ಕೀರ್ತಿ ಪತಾಕೆಯನ್ನು ಮುಗಿಲೆತ್ತರ ಹಾರಿಸಲು ಶ್ರಮಿಸಿದ ರಾಜಮನೆತನಗಳು ಹಲವು. ಹೀಗೆ ಶ್ರಮಿಸಿದವರಲ್ಲಿ ಕದಂಬರು, ಗಂಗರು, ಚಾಳುಕ್ಯರು, ಹೊಯ್ಸಳರು, ರಾಷ್ಟ್ರಕೂಟರು ಮತ್ತು ಅನಂತರ ಬಂದ ವಿಜಯನಗರ ಹಾಗೂ ಮೈಸೂರು ಅರಸರು ಮುಖ್ಯರು.

ಭಾರತೀಯ ಸಂಸ್ಕೃತಿ ಹಾಗೂ ಪ್ರತಿಷ್ಠೆಗೆ ತಾವೇ ಕಾರಣರು ಎಂದು ಅಹಂಕಾರದಿಂದ ಬೀಗುತ್ತಿದ್ದವರ ಕಣ್ಣು ತೆರೆಸಿ ಇದಕ್ಕೆ ಕರ್ನಾಟಕದ ಪ್ರಾಚೀನ ಸಾಂಸ್ಕೃತಿಕ ಪರಂಪರೆ, ಧೈರ್ಯಸ್ಥೈರ್ಯದ ಕೊಡುಗೆಯೂ ಸೇರಿದೆ ಎಂಬುದನ್ನು ತೋರಿಸಿಕೊಟ್ಟವನೇ ಚಾಳುಕ್ಯ ಚಕ್ರೇಶ್ವರ ಇಮ್ಮಡಿ ಪುಲಿಕೇಶಿ.

ಇಮ್ಮಡಿ ಪುಲಿಕೇಶಿ ಬಾದಾಮಿ ಚಾಳುಕ್ಯ ವಂಶದ ರಣಪರಾಕ್ರಮಿ ಒಂದನೆ ಕೀರ್ತಿವರ್ಮನ ಮಗ.

ಚಾಳುಕ್ಯ ವಂಶ

ಯಾವ ವ್ಯಕ್ತಿಯೇ ಆಗಲಿ ಉನ್ನತ ಸ್ಥಿತಿಗೆ ಬರಬೇಕಾದರೆ ಅವನು ಬೆಳೆಯುವ ಪರಿಸರ, ಕಲಿಯುವ ವಿದ್ಯೆ ಬಹಳ ಮುಖ್ಯ ಸಾಧನಗಳಾಗಿರುತ್ತವೆ. ಪುಲಿಕೇಶಿ ಹುಟ್ಟಿದ್ದು ಚಾಳುಕ್ಯ ವಂಶದಲ್ಲಿ. ಕಾರ್ತಿಕೇಯ ಇವರ ಆರಾಧ್ಯ ದೈವ. ವರಾಹವೇ ಇವರ ಲಾಂಛನ.

ಚಾಳುಕ್ಯ ವಂಶದ ಪ್ರಥಮ ಮುಖ್ಯ ವ್ಯಕ್ತಿ ಎಂದರೆ ಮೊದನೆಯ ಪುಲಿಕೇಶಿ. ಬಟ್ಟೂರ ಮನೆತನದ ದುರ್ಲಭಾದೇವಿ ಈತನ ಹಿರಿಯ ರಾಣಿ. ಕೀರ್ತಿವರ್ಮ, ಮಂಗಳೇಶ ಪುಲಿಕೇಶಿಯ ಇಬ್ಬರು ಮಕ್ಕಳು.

ಪುಲಿಕೇಶಿಯ ನಂತರ ಹಿರಿಯ ಮಗ ಕೀರ್ತಿವರ್ಮನು ಚಾಳುಕ್ಯ ಸಿಂಹಾಸನವನ್ನೇರಿದ. ಸುಮಾರು ಮೂವತ್ತು ವರ್ಷ ದರ್ಪದಿಂದ ರಾಜ್ಯವಾಳಿದ. ಇವನೂ ತಂದೆಯಂತೆಯೇ ಬಹಳ ಪರಾಕ್ರಮಶಾಲಿ.

ಕೀರ್ತಿವರ್ಮನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. (ಇಮ್ಮಡಿ) ಪುಲಿಕೇಶಿ, (ಕುಬ್ಜ) ವಿಷ್ಣುವರ್ಧನ, ಧಾರಾಶ್ರಯ ಜಯಸಿಂಹ ಮತ್ತು ಬುದ್ಧವರಸ ಇವರೇ ಆ ನಾಲ್ಕು ಜನ ಮಕ್ಕಳು. ಅವನು ಸತ್ತಾಗ ಮಕ್ಕಳು ಇನ್ನೂ ಬಹಳ ಚಿಕ್ಕವರಾಗಿದ್ದರು. ಆದ್ದರಿಂದ ಅಜ್ಜಿ ದುರ್ಲಭಾದೇವಿಯೇ ಇವರನ್ನು ಸಾಕಿ ದೊಡ್ಡವರನ್ನಾಗಿ ಮಾಡುವ ಕಾರ್ಯ ನಿರ್ವಹಿಸಬೇಕಾಯಿತು. ತನ್ನ ಮಲಮಗ ಮಂಗಳೇಶನ ಸಹಾಯದಿಂದ ರಾಜ್ಯಭಾರದ ಕೆಲಸವನ್ನು ಈಕೆ ಸಮರ್ಪಕವಾಗಿ ನಿರ್ವಹಿಸಿದಳು.

ಮಂಗಳೇಶ ಬಹಳ ಶೂರ. ತನ್ನ ಶಕ್ತಿ ಸಾಮರ್ಥ್ಯದಿಂದ ರಾಜ್ಯವನ್ನು ಮತ್ತಷ್ಟು ವಿಸ್ತರಿಸಿ “ರಣವಿಕ್ರಾಂತ”, “ಉರುರಣವಿಕ್ರಾಂತ”, “ಪೃಥ್ವೀವಲ್ಲಭ” ಮೊದಲಾದ ಬಿರುದುಗಳನ್ನು ಗಳಿಸಿದ್ದ.

ಒಬ್ಬ ಮನುಷ್ಯನಿಗೆ ತಾನು ಸುಖಪಡಬೇಕು ಎಂಬ ಆಸೆ ಬಂದರೆ ಅವನು ಕೆಟ್ಟ ಹಾಗೆಯೇ. ಕೀರ್ತಿ ಬೇಕು ಎಂಬ ಆಸೆ ಬಂದರೂ ಹಾಗೆಯೇ. ಈ ಆಸೆಗಳು ಮನಸ್ಸನ್ನು ಮುಟ್ಟಿದರೆ ಗೆದ್ದಲಿನಂತೆ ಅದರ ಒಳ್ಳೆಯತನವನ್ನು ಹಾಳುಮಾಡಿಬಿಡುತ್ತವೆ. ಸುಖ ಮತ್ತು ಕೀರ್ತಿಗಳಿಗಾಗಿ ಮನುಷ್ಯ ಏನನ್ನಾದರೂ ಮಾಡಲು ಸಿದ್ಧನಾಗುತ್ತಾನೆ.

ಮಂಗಳೇಶನೂ ಹೀಗೆಯೇ ಕೆಟ್ಟ.

ವಿದ್ಯಾಭ್ಯಾಸ

ಮಂಗಳೇಶ ಬಹಳ ಧೂರ್ತ, ಕಪಟಿ. ಸ್ವಾರ್ಥಕ್ಕಾಗಿ ಏನು ಮಾಡಲೂ ಹೇಸದವನು. ಗೋಮುಖವ್ಯಾಘ್ರನಂತೆ ಮುಂದೊಂದು ತೋರಿ ಹಿಂದೊಂದು ಸಾಧಿಸಿಕೊಳ್ಳುವುದರಲ್ಲಿ ನಿಪುಣ ಇದನ್ನು ಚೆನ್ನಾಗಿ ಅರಿತಿದ್ದ ದುರ್ಲಭಾದೇವಿ ಮೊಮ್ಮಕ್ಕಳು ಇವನಿಂದ ದೂರವಿರುವಂತೆ ಏರ್ಪಾಟು ಮಾಡಿದರು. ವಿದ್ಯಾಭ್ಯಾಸಕ್ಕೆಂದು ಸಾಕಷ್ಟು ರಕ್ಷಣೆಯೊಡನೆ ಅವರನ್ನು ಐಹೊಳೆಗೆ ಕಳುಹಿಸಿದಳು. ಐಹೊಳೆ ಆಗ ಆರ್ಯಪುರವೆಂಬ ಹೆಸರಿನಿಂದ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಬೆಣ್ಣಮ ಸೋಮಯಾಜಿಗಳು ಅಲ್ಲಿನ ವಿದ್ಯಾಧಿಪತಿಗಳಾಗಿದ್ದರು. ರಾಜಮಾತೆಯ ಅಂತರ್ಯುದ ಕಳಕಳಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಆಚಾರ್ಯರು ಮಕ್ಕಳ ವಿದ್ಯಾಭ್ಯಾಸದ ಹೊಣೆಯ ಜೊತೆಗೆ ರಕ್ಷಣೆಯ ಹೊರೆಯನ್ನೂ ಹೊತ್ತರು. ಹೊತ್ತದ್ದೇ ಅಲ್ಲದೆ ಚೆನ್ನಾಗಿ ನಿರ್ವಹಿಸಿದರು.

ಆರ್ಯಪರದ ವಿದ್ಯಾಕೇಂದ್ರದಲ್ಲೇ ಬಹಳ ಮೇಧಾವಿಯಾದ ವಿದ್ಯಾರ್ಥಿ ರವಿಕೀರ್ತಿ. ಪುಲಿಕೇಶಿ ಹಾಗೂ ರವಿಕೀರ್ತಿ ಈ ಗುರುಕುಲದಲ್ಲೇ ಪ್ರಾಣಸ್ನೇಹಿತರಾದರು. ಪುಲಿಕೇಶಿ ರಾಜನಾದ ಮೇಲೂ ಇವರಿಬ್ಬರ ಸ್ನೇಹ ಆತ್ಮೀಯವಾಗುತ್ತ ಹೋಯಿತು.

ಮಂಗಳೇಶನ ಕುತಂತ್ರ

ಸರ್ವವಿದ್ಯಾಪಾರಂಗತನಾಗಿ ಪುಲಿಕೇಶಿ ರಾಜಧಾನಿಗೆ ಹಿಂತಿರುಗಿದ. ಮಂಗಳೇಶ ತೋರಿಕೆಗಾದರೂ ಸಂಭ್ರಮದ ಸ್ವಾಗತವನ್ನೇರ್ಪಡಿಸಬೇಕಾಯಿತು. ರಸ್ತೆಯುದ್ದಕ್ಕೂ ನಿಂತಿದ್ದ ಜನ ಅತ್ಯುತ್ಸಾಹದಿಂದ ಪುಲಿಕೇಶಿಗೆ ಜಯ ಜಯಕಾರ ಮಾಡಿದರು. ಹೂಮಳೆಗೆರೆದರು. ಜನರು ತನ್ನನ್ನೇ ಮಹಾರಾಜ ಎಂದು ಭಾವಿಸಿದ್ದಾರೆ, ತನ್ನಲ್ಲಿ ಅವರಿಗೆ ಬಹು ಗೌರವ, ವಿಶ್ವಾಸ ಎಂದುಕೊಂಡಿದ್ದ ಮಂಗಳೇಶ. ಪುಲಿಕೇಶಿಯನ್ನು ಸ್ವಾಗತಿಸುವಾಗ ಜನರ ಸಂಭ್ರಮ, ಹರ್ಷಕಂಡು ಮಂಗಳೇಶನ ಹೃದಯ ತಲ್ಲಣಿಸಿತು. ಮಲತಾಯಿ ಅಭಿಪ್ರಾಯವನ್ನು ಚೆನ್ನಾಗಿ ಅರಿತಿದ್ದ ಮಂಗಳೇಶ ಕೂಡಲೇ ಒಂದು ನಾಟಕ ಆಡಿದ. ಎಲ್ಲ ಸಭಿಕರ ಮುಂದೆ ಪುಲಿಕೇಶಿಯನ್ನು ಆಲಿಂಗಿಸಿ ಕಣ್ಣಲ್ಲಿ ಸಂತೋಷ ತುಳುಕಿಸಿ ರಾಜಮಾತೆಯ ಬಳಿಗೆ ನಿಧಾನವಾಗಿ ನಡೆದುಹೋದ. ಅವರ ಪಾದ ಮುಟ್ಟಿ ನಮಸ್ಕರಿಸಿ ಪಾದಧೂಳನ್ನು ಹಣೆಗೆ ಹಚ್ಚಿಕೊಂಡು ನಮ್ರವಾಗಿ ಅಂಜಲಿಬದ್ಧನಾಗಿ ನಿಂತು ನುಡಿದ:

“ರಾಜಮಾತೆಯವರೇ, ನಿಮ್ಮ ಅಣತಿಯನ್ನು ಶಿರಸಾವಹಿಸಿ ಇಷ್ಟು ದಿನ ರಾಜ್ಯವನ್ನು ನಿರ್ವಹಿಸಿದೆ. ಈಗ ರಾಜಕುಮಾರರು ನಗರಕ್ಕೆ ಆಗಮಿಸಿದ್ದಾರೆ. ರಾಜ್ಯಭಾರ ನಿರ್ವಹಿಸಲು ಸಮರ್ಥರಿದ್ದಾರೆ. ಇನ್ನು ಸುಮುಹೂರ್ತವನ್ನು ಮುಂದೂಡುವುದು ಒಳ್ಳೆಯದಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ಗೊತ್ತುಪಡಿಸಲು ಪುರೋಹಿತರಿಗೆ ಕರೆಕಳುಹಿಸಿದ್ದೇನೆ. ರಾಜಕುಮಾರರಿಗೆ ರಾಜ್ಯವಹಿಸಿ ನಾನು ವಿಶ್ರಾಂತಿ ಪಡೆಯುತ್ತೇನೆ. ಈ ದಿನವನ್ನು ಎಷ್ಟೋ ಕಾಲದಿಂದ ನಾನು ಎದುರು ನೋಡುತ್ತಿದ್ದೇನೆ.”

ದುರ್ಲಭಾದೇವಿಗೆ ಮಂಗಳೇಶನ ಈ ನಡತೆ ಬಹು ಅನಿರೀಕ್ಷಿತವಾಗಿತ್ತು. ಕಾರ್ತಿಕೇಯನ ದಯದಿಂದ ಮಂಗಳೇಶ ಪರಿವರ್ತನೆಗೊಂಡಿರಬಹುದೆಂದು ಬಹಳ ಸಂತೋಷಗೊಂಡಳು.

ಸ್ವಲ್ಪ ಹೊತ್ತಿನಲ್ಲೇ ಪಂಚಾಂಗ ಹಿಡಿದು ಒಳಗೆ ಬಂದ ಪುರೋಹಿತರಿಬ್ಬರು ಹಲವು ಪುಟ ತಿರುವಿಹಾಕಿ ಏನೇನೋ ಗುಣಕಾರ ಹಾಕಿ ರಾಜ್ಯಾಭಿಷೇಕಕ್ಕೆ ಸೂಕ್ತ ಲಗ್ನ ಇನ್ನು ೬-೭ ತಿಂಗಳು ಇಲ್ಲವೆಂದೂ ಆದರೆ ಮುಂದಿನ ತಿಂಗಳೇ ವಿವಾಹಕ್ಕೆ ಪ್ರಶಸ್ತ ಲಗ್ನಗಳಿವೆ ಎಂದೂ ತಿಳಿಸಿದರು.

ಮಂಗಳೇಶ ತಲೆತಗ್ಗಿಸಿ ಸವಿನಯದಿಂದ ನುಡಿದ:

“ರಾಜಮಾತೆಯವರಲ್ಲಿ ನನ್ನದೊಂದು ಸಣ್ಣ ಬಿನ್ನಹ. ರಾಜಕುಮಾರರು ಹೇಗೋ ಪ್ರಾಪ್ತವಯಸ್ಕರಾಗಿದ್ದಾರೆ. ವಿವಾಹ ಮಾಡುವುದು ಕೂಡ ನಮ್ಮ ಕರ್ತವ್ಯ. ದೈವವೂ ಅದನ್ನೇ ಮೊದಲು ಬಯಸಿದಂತಿದೆ. ನಿಮ್ಮ ಅಪ್ಪಣೆ ದೊರೆತರೆ ಶೀಘ್ರದಲ್ಲೇ ವಿವಾಹಕ್ಕೆ ಏರ್ಪಾಟು ಮಾಡುತ್ತೇನೆ. ನಾನೂ ಈ ಬಗ್ಗೆ ಆಗಲೇ ಯೋಚಿಸಿದ್ದೆ. ಆದರೆ ಅಪ್ಪಣೆ ತಮ್ಮಿಂದಲೇ ಬರಲಿ ಎಂದು ಕಾದಿದ್ದೆ.”

ದುರ್ಲಭಾದೇವಿ ನಿಜವಾಗಿ ಸಂತಸಗೊಂಡಳು. “ಆಗಲಿ” ಎಂದು ಒಡನೆಯೇ ಸಮ್ಮತಿ ಇತ್ತಳು.

ಆದರೆ ಪುಲಿಕೇಶಿ ಇದಕ್ಕೆ ಒಪ್ಪಿಗೆಯನ್ನೀಯಲಿಲ್ಲ. “ನಾನೀಗ ರಾಜ್ಯವನ್ನು ಆಳುವ ಹೊಣೆಗೆ ಸಿದ್ಧನಾಗಬೆಕು. ಆಡಳಿತ ವಿಷಯವನ್ನು ತಿಳಿದುಕೊಳ್ಳಬೇಕು. ಈಗಲೇ ಮದುವೆ ಏಕೆ? ಎಂದುಬಿಟ್ಟ. ದ್ವಿಗುಣಿತ ಉತ್ಸಾಹದಿಂದ ರಾಜ್ಯದ ಸಕಲ ಆಗುಹೋಗುಗಳನ್ನು ಅರಿಯಲು ಮುಂದಾದ.

ಮಂಗಳೇಶನಿಗೆ ಈಗ ನಿಜವಾಗಿ ಸಂಕಟಕ್ಕಿಟ್ಟುಕೊಂಡಿತು.

ದುರ್ಲಭಾದೇವಿ ಮೊಮ್ಮಗನ ಇಂಗಿತವನ್ನು ಅರ್ಥಮಾಡಿಕೊಂಡು ಪಟ್ಟಾಭಿಷೇಕಕ್ಕೆ ಆದಷ್ಟು ಬೇಗ ದಿನ ನಿಷ್ಕರ್ಷೆ ಮಾಡಲು ಮಂಗಳೇಶನನ್ನು ಪುನಃ ಒತ್ತಾಯ ಮಾಡಿದಳು.

"ನನಗೆ ರಾಜ್ಯ ಬೇಡ."

ರಾಜಮಾತೆಯವರೇ, ಇದು ರಾಜ್ಯಕ್ಕೆ ಅಪಮಾನ!”

ಪಟ್ಟಾಭಿಷೇಕವನ್ನು ಹೇಗೆ ತಡೆಯಬೇಕು ಎಂದು ಯೋಚಿಸುತ್ತಿರುವಾಗಲೇ ಬೇಹುಗಾರರು ತಂದ ವಾರ್ತೆ ಮಂಗಳೇಶನಿಗೆ ಹೊಸ ಸ್ಫೂರ್ತಿ ಕೊಟ್ಟಿತು.

ರೇವತಿ ದ್ವೀಪದಲ್ಲಿ ದುರ್ಲಭಾದೇವಿಯ ವಂಶಸ್ಥರೇ ಮಾಂಡಲೀಕರಾಗಿದ್ದರು. ಕಲಚುರಿ ವಂಶಸ್ಥ ಶಂಕರಗಣನ ಮಗನಾದ ಬುದ್ಧರಾಜನು, ಕೊಂಕಣದ ಸ್ವಾಮಿ ರಾಜನೊಡಗೂಡಿ ರೇವತಿ ದ್ವೀಪವನ್ನು ಮುತ್ತಿದ್ದಾನೆಂದು ಕೇಳಿದೊಡನೆ ರಾಜಮಾತೆ ಬಹು ಉದ್ವಿಗ್ನಗೊಂಡಳು. ಕಬ್ಬಿಣ ಕಾದಿದೆ ಎಂದು ಗುರುತಿಸಿದ ಮಂಗಳೇಶ ಬಹುಬೇಗ ಉಪಯೋಗ ಪಡೆಯಲು ಯೋಚಿಸಿದ.

“ರಾಜಮಾತೆಯವರೇ, ನೋಡಿದಿರಾ? ಬುದ್ಧರಾಜ ಹಾಗೂ ಸ್ವಾಮಿರಾಜ ಬಂಡಾಯ ಎದ್ದು ನಿಮ್ಮ ಸೋದರಳಿಯನ ಮೇಲೆ ದಂಡೆತ್ತಿಹೋಗಿ ರೇವತಿ ದ್ವೀಪವನ್ನು ವಶಪಡಿಸಿಕೊಂಡಿದ್ದಾರಂತೆ. ಇದು ರಾಜ್ಯಕ್ಕೆ ತೋರಿಸಿದ ಅವಿಧೇಯತೆ ಮಾತ್ರವಲ್ಲ. ನಿಮ್ಮ ವಂಶಕ್ಕಾದ ಅವಮಾನ. ಆ ಕುನ್ನಿಗಳನ್ನು ಸದೆಬಡಿದು ಅವರ ರಕ್ತ ಹೀರಿದಾಗಲೇ ನನ್ನ ಮನಸ್ಸಿಗೆ ಶಾಂತಿ. ರಾಜಮಾತೆಯವರು ಅಪ್ಪಣೆ ಕೊಡಬೇಕು. ಹೋಗಿ ಬರುತ್ತೇನೆ.”

ರಾಜಮಾತೆ, ತಕ್ಷಣ ಜಯಶಾಲಿಯಾಗಿ ಬಾ ಎಂದು ಹರಸಿ ದಂಡಯಾತ್ರೆಗೆ ಅಪ್ಪಣೆ ಇತ್ತಳು.

ಆ ಹೊತ್ತಿಗೆ ಸರಿಯಾಗಿ ಪುಲಿಕೇಶಿ ಅಲ್ಲಿಗೆ ಬಂದ.

ರಾಜಮಾತೆಯಿಂದ ಅವನಿಗೆ ವಿಷಯ ತಿಳಿಯಿತು.

“ಮಹಾರಾಣಿಯವರೆ, ನಾನು ಮಂಗಳೇಶನ ಜೊತೆಗೆ ಹೋಗುತ್ತೇನೆ. ಹಿರಿಯರಾದ ಅವರೇ ಯುದ್ಧಭೂಮಿಗೆ ಹೊರಟಿರುವಾಗ ತರುಣನಾದ ನಾನು ಹಿಂದೆ ಉಳಿಯಬಹುದೆ? ಅಪ್ಪಣೆ ಕೊಡಿ” ಎಂದು ಕೈಮುಗಿದ.

ಮಂಗಳೇಶನಿಗೆ ಇದು ರುಚಿಸಲಿಲ್ಲ.

“ರಾಜಕುಮಾರರೆ, ವೃಥಾ ನೀವೇಕೆ ಶ್ರಮ ತೆಗೆದುಕೊಳ್ಳುತ್ತೀರಿ? ಹಾಯಾಗಿ ನಾಲ್ಕು ದಿನ ಇರಿ. ನಿಮ್ಮ ಪರವಾಗಿ ಈ ಕಾರ್ಯ ನೆರವೇರಿಸಲು ನಾನು ಇಲ್ಲವೆ? ಶತ್ರು ನಿರ್ಮೂಲಮಾಡಿ ಬಂದೊಡನೆ ನಿಮ್ಮ ಪಟ್ಟಾಭಿಷೇಕ ಕಾರ್ಯವನ್ನು ನೆರವೇರಿಸಿಬಿಡೋಣ. ರಾಜನಾದ ಮೇಲೆ ಯುದ್ಧ ಮಾಡುವುದು ಒಂದಲ್ಲ ಒಂದು ಕಾರಣದಿಂದ ಅನಿವಾರ್ಯ ಆಗೇ ಆಗುತ್ತದೆ. ಅಲ್ಲಿಯವರೆಗೆ ವಿಶ್ರಮಿಸಿಕೊಳ್ಳಿ.”

ಮಂಗಳೇಶನ ಮಾತು ರಾಜಮಾತೆಗೂ ಸರಿ ಎನಿಸಿತು. ಪಟ್ಟಾಭಿಷೇಕಕ್ಕೆ ಮುಂದೆ ಪುಲಿಕೇಶಿಯನ್ನು ಯುದ್ಧಕ್ಕೆ ಕಳುಹಿಸುವುದು ಅವಳಿಗೂ ಸರಿ ಕಾಣಲಿಲ್ಲ. ಅವನನ್ನು ರಾಜಧಾನಿಯಲ್ಲೇ ಉಳಿಸಿಕೊಂಡಳು.

ಚಾಣಾಕ್ಷ ಮಂಗಳೇಶ ತಾನು ರಾಜಧಾನಿಯಲ್ಲಿ ಇಲ್ಲದೆ ಇರುವ ವೇಳೆಯಲ್ಲಿ ತನ್ನ ಆಡಳಿತಕ್ಕೆ ಧಕ್ಕೆ ತರುವಂತಹ ಏನಾದರೂ ಘಟನೆ ನಡೆದೀತೆಂದು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅಪಾರ ಸೈನ್ಯದೊಡನೆ ರೇವತಿ ದ್ವೀಪದತ್ತ ಹೊರಟ.

ಮಂಗಳೇಶನ ಸಿದ್ಧತೆ

ಕೆಲ ದಿನಗಳ ಯುದ್ಧದಲ್ಲಿ ಕಲಚೂರ್ಯ ಬುದ್ಧರಾಜ ಕೈಸೆರೆ ಸಿಕ್ಕಿದ. ಮಂಗಳೇಶ ಅವನ ರಾಜ್ಯವನ್ನು ವಶಪಡಿಸಿಕೊಂಡು ಅಲ್ಲಿನ ಸಮಸ್ತ ಐಶ್ವರ್ಯವನ್ನು ಕೊಳ್ಳೆಹೊಡೆದು ತನ್ನ ಸ್ವಂತ ಬೊಕ್ಕಸಕ್ಕೆ ಸೇರಿಸಿಕೊಂಡ. ರೇವತಿ ದ್ವೀಪವನ್ನು ಗೆದ್ದು ಪುನಃ ಅಲ್ಲಿನ ಹಿಂದಿನ ಮಾಂಡಲೀಕನಾಗಿದ್ದ ಇಂದ್ರವರ್ಮನಿಗೇ ರಾಜ್ಯವನ್ನು ವಹಿಸಿಕೊಟ್ಟ. ಯುದ್ಧದಲ್ಲಿ ದೊರೆತ ಅಪಾರ ಧನಕನಕ ವಸ್ತುಗಳನ್ನು ತನಗೆ ಅನುಕೂಲವಾಗುವಂತೆ ತನ್ನ ಹಿತಚಿಂತಕರಲ್ಲಿ ಹಂಚಿ ತನಗೆ ನಿಷ್ಠೆಯಿಂದ ಇರುವ ಒಂದು ಸೈನ್ಯಕ್ಕೆ ಪಡೆಯನ್ನು ರಚಿಸಿದ. ಮುಂದೆ ಸಿಂಹಾಸನಕ್ಕೆ ಯುದ್ಧವೇನಾದರೂ ನಡೆದರೆ ಇದು ತನ್ನ ಬೆಂಬಲಕ್ಕೆ ಇರಲೆಂಬುದು ಇವನ ದೂರಾಲೋಚನೆ ಆಗಿತ್ತು.

ಮಂಗಳೇಶನು ತಾನು ಪಡೆದ ಈ ವಿಜಯದಿಂದ ಉಬ್ಬಿ “ಉರುರಣವಿಕ್ರಾಂತ” ಎಂಬ ಬಿರುದನ್ನು ಧರಿಸಿದ. ಈ ದಿಗ್ವಿಜಯದಿಂದಾಗಿ ತನ್ನನ್ನು ಎದುರಿಸಬಲ್ಲವರು ಯಾರೂ ಇಲ್ಲವೆಂಬ ಅಹಂಕಾರ ಬೆಳೆಯಿತು. ತಾನೇ ರಾಜನಾಗಿ ಮೆರೆಯಬೇಕೆಂಬ ಉತ್ಕಟಾಕಾಂಕ್ಷೆ ಈಗ ಮತ್ತೆ ಕೆರಳಿ ನಿಂತಿತು. ಇದನ್ನು ಸಾಧಿಸಲಿಕ್ಕಾಗಿ ಎಂತಹ ದುಸ್ಸಾಹಸ ಮಾಡಲೂ ಸಿದ್ಧನಾದ.

ಮಂಗಳೇಶ ಪುಲಿಕೇಶಿಯ ಪಟ್ಟಾಭಿಷೇಕವನ್ನು ಮುಂದಕ್ಕೆ ಹಾಕಿದಾಗ ಅವನ ಲೆಕ್ಕಾಚಾರ ಒಂದು ರೀತಿಯದಾಗಿತ್ತು. ಪುಲಿಕೇಶಿಗೆ ಇನ್ನೂ ಚಿಕ್ಕವಯಸ್ಸು, ಗುರುಗಳ ಆಶ್ರಮದಲ್ಲಿ ಕಟ್ಟುನಿಟ್ಟಾಗಿ ಬಾಳಿ ಬಂದಿದ್ದಾನೆ. ಅರಮನೆಯ ಸಂಪತ್ತು, ಸುಖದ ಜೀವನ ಇವುಗಳಿಗೆ ಮನಸೋಲುತ್ತಾನೆ, ರಾಜ್ಯಭಾರದ ಕಷ್ಟ ನನಗೇಕೆ ಎಂದು ಸುಖವನ್ನೇ ಬಯಸುತ್ತಾನೆ ಎಂದುಕೊಂಡಿದ್ದ ಮಂಗಳೇಶ. ಆದರೆ ಪುಲಿಕೇಶಿ ಸುಖಕ್ಕೆ ಮನಸ್ಸು ಕೊಡಲಿಲ್ಲ. ರಾಜ್ಯದ ಆಡಳಿತದ ವಿಷಯಗಳನ್ನು ಮನಸ್ಸಿ‌ಟ್ಟು ತಿಳಿದುಕೊಳ್ಳಲು ಮುಂದಾದ.

ಈಗ ಮಂಗಳೇಶ ಅಧಿಕಾರವನ್ನು ಉಳಿಸಿಕೊಳ್ಳಲು ಬೇರೆ ಯೋಚನೆ ಮಾಡಬೇಕಾಯಿತು. ಪುಲಿಕೇಶಿಯ ತಮ್ಮನಾದ ಕುಬ್ಜ ವಿಷ್ಣುವರ್ಧನನ ಮೇಲೆ ಹೆಚ್ಚಿನ ಮಮತೆ ವಿಶ್ವಾಸ ತೋರಿ ಅವನನ್ನು ತನ್ನ ಕಡೆಗೆ ಒಲಿಸಿಕೊಂಡ.

“ನಿನಗೆ ರಾಜನಾಗಿ ಮೆರೆಯಬೇಕೆಂಬ ಆಸೆ ಇದ್ದರೆ ನಾನು ಎಲ್ಲಾ ವಿಧದ ಸಹಾಯ ಮಾಡಲು ಸಿದ್ಧ. ನನ್ನ ಪ್ರಾಣ ಕೊಟ್ಟಾದರೂ ನಿನ್ನ ಅಭಿಲಾಷೆಯನ್ನು ನಡೆಸಿಕೊಡುತ್ತೇನೆ.” ಎಂದು ವಿಷ್ಣುವರ್ಧನನನ್ನು ಹುರಿದುಂಬಿಸಿ ವಿಷಬೀಜ ಬಿತ್ತಿದ.

ವಿಷ್ಣುವರ್ಧನ ದುರ್ಲಭಾದೇವಿಯ ಹತ್ತಿರ ಹೋದ. ಅಣ್ಣನ ಪಟ್ಟಾಭಿಷೇಕಕ್ಕೆ ವಿರೋಧ ಸೂಚಿಸಿದ. ದುರ್ಲಭಾದೇವಿ ಬಹಳ ಸಿಟ್ಟಾದಳು.

“ನಾನು ಕೀರ್ತಿವರ್ಮರ ಮಗ, ಅಲ್ಲವೆ? ನನಗೂ ರಾಜ್ಯದಲ್ಲಿ ಭಾಗ ಬೇಕು” ಎಂದು ಸೆಟೆದು ನಿಂತ ವಿಷ್ಣುವರ್ಧನ.

ಈಗ ರಾಜಮಾತೆ ವಿಷಣ್ಣಳಾಗಿ ಕುಸಿದು ಕುಳಿತಳು. ವಿಷ್ಣುವರ್ಧನನಿಗೆ ಬುದ್ಧಿ ಹೇಳಿದರು. “ಅಣ್ಣನಿಗೆ ಬೆಂಬಲವಾಗಿ ನಿಲ್ಲು, ರಾಜ್ಯದ ಕಲ್ಯಾಣವನ್ನು ಯೋಚಿಸು” ಎಂದರು. “ಹಿರಿಯ ಮಗನಿಗೆ ಸಿಂಹಾಸನ ದೊರೆಯುವುದು ನ್ಯಾಯ. ಪುಲಿಕೇಶಿ ರಾಜನಾದರೆ ನಿನಗೆ ಮರ್ಯಾದೆಗೆ, ಪದವಿಗೆ ಕುಂದಿಲ್ಲ. ಸ್ವಾರ್ಥಕ್ಕಾಗಿ ಮನೆಯನ್ನೂ ರಾಜ್ಯವನ್ನೂ ಮುರಿಯುವವರ ಮಾತನ್ನು ಕೇಳಿ ನೀನು ಹಾಳಾಗಬೇಡ” ಎಂದು ಬುದ್ಧಿ ಹೇಳಿದಳು.

ಮಹಾತ್ಯಾಗ

“ಅಣ್ಣ ತಮ್ಮಂದಿರಲ್ಲಿ ಸಾಮರಸ್ಯ ಇಲ್ಲದಾಗ ಪುಲಿಕೇಶಿಗೆ ರಾಜ್ಯ ಒಪ್ಪಿಸಲು ನಾನು ಸಿದ್ಧನಿಲ್ಲ. ವೃಥಾ ರಕ್ತಪಾತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ” ಎಂದು ಮಂಗಳೇಶ. ವಿಷಣ್ಣವದನಳಾಗಿ ಕುಳಿತಳು ರಾಜಮಾತೆ.

ಸಿಂಹಾಸನಕ್ಕಾಗಿ ಅಣ್ಣತಮ್ಮಂದಿರಲ್ಲಿ ಕಲಹವಾಗುವುದು ವಿವೇಕಿಯೂ ಪ್ರಾಜ್ಞಾನೂ ಆಗಿದ್ದ ಪುಲಿಕೇಶಿಗೆ ಇಷ್ಟವಾಗಲಿಲ್ಲ. ಚಕ್ರಾಧಿಪತ್ಯ ಒಡೆದು ಹಂಚಿಹೋದರೆ ಇತರರು ಅದನ್ನು ಕಬಳಿಸಲು ಎಡೆಮಾಡಿಕೊಟ್ಟಂತಾಗುತ್ತದೆ. ಚಾಳುಕ್ಯ ಸಾಮ್ರಾಜ್ಯ ಇನ್ನೂ ಬೆಳೆಸಬೇಕೆಂದಿದ್ದವನಿಗೆ ಅದು ಚೂರಾಗುವುದು ಸರಿಬೀಳಲಿಲ್ಲ. ತನ್ನ ತ್ಯಾಗದಿಂದಾದರೂ ಸಾಮ್ರಾಜ್ಯ ಅಖಂಡವಾಗಿ ಉಳಿದರೆ ಸಾಕೆನಿಸಿತು.

“ನನಗೆ ರಾಜ್ಯ ಬೇಡ, ನಾನು ರಾಜ್ಯವನ್ನೇ ಬಿಟ್ಟು ಹೋಗುತ್ತೇನೆ” ಎಂದು ಘೋಷಿಸಿದ.

ಮಂಗಳೇಶನ ಈ ವಾರ್ತೆ ಕೇಳಿ ಬಹಳ ಪ್ರಸನ್ನನಾದ. ರಾಜಮಾತೆ ಬಹಳ ವ್ಯಥೆಗೊಂಡಳು. ಅವಳ ಆಶಾಸೌಧವೆಲ್ಲಾ ಒಮ್ಮೆಗೇ ಕುಸಿದುಬಿದ್ದತು. ಪುಲಿಕೇಶಿಯನ್ನು ಕರೆಸಿ ಉಪದೇಶಿಸಿದಳು. ಕರ್ತವ್ಯದ ಅರಿವನ್ನು ಎಚ್ಚರಿಸಿದಳು. ಮಂತ್ರಿಗಳೂ, ಹಿತೈಷಿಗಳೂ ಇದು ಅನ್ಯಾಯವೆಂದು ಬಹಳ ತಿಳಿಹೇಳಿದರು. ಪುಲಿಕೇಶಿ ನಿರ್ಧಾರವನ್ನು ಸಡಿಲಿಸಲಿಲ್ಲ. ತಕ್ಷಣ ಊರು ಬಿಟ್ಟು ಹೊರಟ.

ಈ ದುಃಖವನ್ನು ಸಹಿಸಲಾರದ ರಾಜಮಾತೆ ಎದೆ ಒಡೆದು ಸತ್ತಳು.

"ನಿಮ್ಮ ಸೌಜನ್ಯ ನನ್ನ ಕಣ್ಣನ್ನು ತೆರೆಸಿತು."

ಮರಳಿ ಸಿಂಹಾಸನಕ್ಕೆ

ಪುಲಿಕೇಶಿ ನಾಡನ್ನು ಬಿಟ್ಟು ಹೊರಟ. ವಿಷ್ಣುವರ್ಧನ ರಾಜನಾದ. ಆದರೆ ಪುಲಿಕೇಶಿಯಿಂದ ಸಿಂಹಾಸನ ಕಿತ್ತುಕೊಂಡ ಮಾತ್ರಕ್ಕೆ ಪುಲಿಕೇಶಿಯ ಯೋಗ್ಯತೆ ಬಂದೀತೆ? ಸೈನಿಕರಿಗೆ ವಿಷ್ಣುವರ್ಧನನಲ್ಲಿ ನಿಷ್ಠೆ ಇರಲಿಲ್ಲ. ಅವರಲ್ಲಿ ಅಶಿಸ್ತು, ಗಲಭೆ ತಲೆದೋರಿದವು. ರಾಜ್ಯದಲ್ಲಿ ವಿಕ್ಷುಬ್ಧತೆ ಹೆಚ್ಚಿತು. ಜನ ದಂಗೆ ಎದ್ದರು. ಮಂಗಳೇಶ ಅಮಾನುಷವಾಗಿ ಅದನ್ನು ಹತ್ತಿಕ್ಕಲು ಪ್ರಯತ್ನಿಸಿದ. ಈ ಹೋರಾಟದಲ್ಲಿ ಮಂಗಳೇಶ ತನ್ನ ದ್ರೋಹದ ಬೆಲೆಯನ್ನು ತೆರಲೇಬೇಕಾಯಿತು. ಯಾವನೋ ದೇಶಭಕ್ತ ಈ ಗಲಭೆಯಲ್ಲಿ ಮಂಗಳೇಶನನ್ನು ಕೊಂದು ಹಾಕಿದ.

ಮಂಗಳೇಶ ಕೊಲೆಯಾದಾಗ ವಿಷ್ಣುವರ್ಧನ ತತ್ತರಿಸಿದ. ರಾಜ್ಯದ ಹಿತೈಷಿಗಳನ್ನು ಎದುರಿಸಿ ರಾಜನಾಗಿ ನಿಲ್ಲಲು ಧೈರ್ಯ ಬರಲಿಲ್ಲ. ಕ್ರಮೇಣ ಚಿಕ್ಕಪ್ಪನ ಸ್ವಾರ್ಥ, ಅಣ್ಣನ ಅಮೋಘ ತ್ಯಾಗ ಇವುಗಳ ಅರಿವಾಯಿತು. ತನ್ನ ಸಣ್ಣತನಕ್ಕೆ ನಾಚಿಕೆಪಟ್ಟುಕೊಂಡು ಮರಳಿಬಂದು ರಾಜ್ಯದ ಕಡಿವಾಣವನ್ನು ಹಿಡಿಯಬೇಕೆಂದು ಅಣ್ಣನಿಗೆ ಬೇಡಿಕೆ ಕಳುಹಿಸಿದ. ಮಂತ್ರಿಗಳೂ ರಾಜ್ಯದ ಇತರ ಹಿತೈಷಿಗಳೂ ಹೋಗಿ ಮರಳಿಬರಬೇಕೆಂದು ಪುಲಿಕೇಶಿಯನ್ನು ಬೇಡಿದಾಗ ತನ್ನ ಕರ್ತವ್ಯ ನೆನೆದು ರಾಜಧಾನಿಗೆ ಮರಳಿ ಬರಲು ಸಮ್ಮತಿಸಿದ.

ಭಾದ್ರಪದ ಶುಕ್ಲ ೧, ಶಕ ಸಂವತ್ ೫೩೨ (ಕ್ರಿ.ಶ. ೬೦೯)ರಿಂದ ಭಾದ್ರಪದ ಕೃಷ್ಣ ೧೫ ಪೂರ್ಣಿಮಾ, ಈ ಮಧ್ಯದಲ್ಲಿ ಸಲ್ಲುವ ಒಂದು ಶುಭ ದಿನದಂದು ಪುಲಕೇಶಿ ಚಾಳುಕ್ಯ ಸಿಂಹಾಸನವನ್ನೇರಿದ.

ಗೊಂದಲದ ಮುಕ್ತಾಯ

ಮಂಗಳೇಶನ ಮರಣಾನಂತರ ರಾಜ್ಯದಲ್ಲಿ ತಲೆದೋರಿದ ಅರಾಜಕತೆ ಮತ್ತು ಗೊಂದಲವನ್ನು ಪುಲಿಕೇಶಿ ಬಹುಬೇಗ ತಹಬದಿಗೆ ತಂದು ರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿದ. ಮಂಗಳೇಶನಿಗೆ ಸಹಾಯಕರಾಗಿದ್ದ ಹಲವರನ್ನು ಕ್ಷಮಿಸಿ ತನ್ನ ಅಂಕೆಯೊಳಗಿಸಿಕೊಂಡ. ಕ್ಷಮಾರ್ಹರಲ್ಲದವರನ್ನು ನಿರ್ದಯದಿಂದ ಶಿಕ್ಷಿಸಿದ.

ಮೊದಲನೇ ಕೀರ್ತಿವರ್ಮ, ಮಂಗಳೇಶರಿಂದ ಪರಾಜಿತರಾಗಿ ಅಧೀನರಾಗಿದ್ದ ಹಲವು ರಾಜರುಗಳು, ಮಾಂಡಲೀಕರುಗಳಲ್ಲಿ ಕೆಲವರು, ರಾಜನಿಷ್ಠೆಯನ್ನು ತೊರೆದು ಅಲ್ಲಲ್ಲಿ ಬಂಡೆದಿದ್ದರು.

ಭೀಮಾ ನದಿಯ ಉತ್ತರದಲ್ಲಿ ಮಾಂಡಲೀಕರಾಗಿದ್ದ ಆಪ್ಯಾಯಕ ಮತ್ತು ಗೋವಿಂದ ಎಂಬುವರು ಪುಲಿಕೇಶಿ ರಾಜನಾದುದನ್ನು ಸಹಿಸದಾದರು. ಅವರು ಮಂಗಳೇಶನ ಪಕ್ಷಪಾತಿಗಳಾಗಿದ್ದರು. ಮಹತ್ವಾಕಾಂಕ್ಷಿಗಳೂ ಆಗಿದ್ದರು. ರಾಜ್ಯದಲ್ಲಿ ಅನಾಯಕತ್ವ ನೆಲೆಸಿದ್ದ ವೇಳೆಯನ್ನೇ ಸೂಕ್ತ ಕಾಲವೆಂದು ನಿರ್ಣಯಿಸಿ ಬಾದಾಮಿಯ ಮೇಲೆ ದಂಡೆತ್ತಿ ಬಂದರು. ಪುಲಿಕೇಶಿ ಇನ್ನೂ ಹುಡುಗನಾದರೂ ಧೃತಿ ಕೆಡಲಿಲ್ಲ. ಧೈರ್ಯದಿಂದ ಹಿತೈಷಿಗಳೊಡನೆ ಸಮಾಲೋಚಿಸಿ ಸೈನಿಕರನ್ನು ಒಂದುಗೂಡಿಸಿದ. ಹುರಿದುಂಬಿಸಿದ ತಾನೇ ಸೈನ್ಯದ ನಾಯಕನಾಗಿ ನಿಂತು ಶತ್ರುಗಳನ್ನು ಸದೆಬಡಿಯಲು ಕಾಲರುದ್ರನಂತೆ ನುಗ್ಗಿದ. ಸಾಮ್ರಾಜ್ಯ ಹಾಗೂ ತನ್ನ ಆತ್ಮಗೌರವದ ಪ್ರತಿಷ್ಠೆ ಈ ಯುದ್ಧದ ಪರಿಣಾಮದ ಮೇಲೆ ನಿರ್ಧಾರವಾಗಬೇಕಾಗಿದ್ದುದರಿಂದ ತನ್ನೆಲ್ಲ ಬುದ್ಧಿಮತ್ತೆ ಹಾಗೂ ಯುದ್ಧಕೌಶಲವನ್ನು ಉಪಯೋಗಿಸಿದ. ಗೋವಿಂದ ಮತ್ತು ಆಪ್ಯಾಯಕರು ಒಂದುಗೂಡದಂತೆ ಅವರನ್ನು ಬೇರೆ ಬೇರೆಯಾಗಿಯೇ ಎದುರಿಸಿದ. ಸಹಾಯ ಸಿಕ್ಕದೆ ಹೋದ ಗೋವಿಂದ ಕೆಲವು ದಿನಗಳಲ್ಲೇ ಹತಾಶನಾಗಿ ಸ್ನೇಹ ಯಾಚಿಸಿದಾಗ ಪುಲಿಕೇಶಿ ಆದರದಿಂದ ಸ್ವಾಗತಿಸಿ ರಕ್ಷೆ ಇತ್ತು ತನ್ನ ಸ್ನೇಹಿತನನ್ನಾಗಿ ಅಂಗೀಕರಿಸಿದ. ಒಂಟಿಯಾಗಿ ಉಳಿದ ಆಪ್ಯಾಯಕನನ್ನು ಸುಲಭವಾಗಿ ಸೋಲಿಸಿ ಹಿಂದಕ್ಕಟ್ಟಿದ. ಈ ಯುದ್ಧದಲ್ಲಿ ಗಳಿಸಿದ ಜಯ ಇವನ ಗೌರವವನ್ನು ಹೆಚ್ಚಿಸಿತು.

ದಿಗ್ವಿಜಯ

ಇನ್ನೂ ಕೆಲವು ರಾಜರುಗಳು ರಾಜ್ಯ ಹೊರಗೆ ಜಂಬದಿಂದ ಗುಡುಗುಡಿಸುತ್ತಿದ್ದರು. ಅವರುಗಳನ್ನು ತನ್ನ ಅಂಕೆಯೊಳಗಿಟ್ಟುಕೊಂಡರೆ ರಾಜ್ಯದಲ್ಲಿ ಶಾಂತಿಯ ಜೊತೆಗೆ ಸುಭಿಕ್ಷೆಯನ್ನೂ ಉಂಟುಮಾಡಲು ಅನುಕುಲವಾಗುವುದಂದೆಣಿಸಿ ಸುತ್ತಲಿನ ರಾಜರುಗಳ ಸೊಕ್ಕನ್ನು ಅಡಗಿಸಲು ನಿಶ್ಚಯಿಸಿದ. ಮಂತ್ರಿಗಳ ಜೊತೆಗೆ ರಾಜಪ್ರತಿನಿಧಿ ಇರುವುದು ಒಳಿತೆಂದೆಣಿಸಿ ತನ್ನ ತಮ್ಮ ವಿಷ್ಣುವರ್ಧನನಿಗೆ ಯುವರಾಜ ಪಟ್ಟಾಭಿಷೇಕ ಮೊದಲು ನೆರವೇರಿಸಿ ತಾನು ಸೈನ್ಯ ತೆಗೆದುಕೊಂಡು ದಿಗ್ವಿಜಯಕ್ಕೆ ಹೊರಟ.

ರಾಜ್ಯದಲ್ಲಿನ ಅರಾಜಕತೆಯ ಲಾಭ ಪಡೆದು ಪ್ರಬಲರಾಗಹೊರಟಿದ್ದ ಬನವಾಸಿಯ ಕದಂಬರನ್ನು ಸದೆಬಡಿದು ಕದಂಬ ಕನ್ಯೆಯೊಬ್ಬಳನ್ನು ವಿಜಯವಧುವಾಗಿ ಸ್ವೀಕರಿಸಿದ. ಗಂಗರಾಜಕುಮಾರಿಯನ್ನು ಮದುವೆಯಾಗಿ ಅಳುಪರ ರಾಜಧಾನಿಯನ್ನು ಮುತ್ತಿದ. ಅಪಾರ ಸೈನ್ಯ ಕಂಡೇ ಹೆದರಿದ ಅಳುಪರಾಜ ಚಾಳುಕ್ಯ ಸಾಮ್ರಾಜ್ಯದ ಮಾಂಡಲೀಕನಾಗಿರುವ ಆಶಯ ವ್ಯಕ್ತಪಡಿಸಿದ. ಅಲ್ಲಿಂದ ಕೊಂಕಣದ ಕಡೆ ಹೊರಟ. ಅಲ್ಲಿನ ಮೌರ್ಯ ಮನೆತನದ ರಾಜ ಅಹಂಕಾರದಿಂದ ಸುತ್ತಲಿನ ಪ್ರದೇಶದ ಜನರಿಗೆಲ್ಲ ಬಹಳ ಕಿರುಕುಳ ಕೊಡುತ್ತಿದ್ದ. ಪುಲಿಕೇಶಿ ಹಡಗುಗಳ ಒಂದು ಪಡೆಯನ್ನು ನಿರ್ಮಿಸಿ ಮೌರ್ಯರ ಮುಖ್ಯ ನೆಲೆಯಾದ “ಪುರಿ” ದ್ವೀಪದ ಮೇಲೆ ದಂಡೆತ್ತಿ ಹೋಗಿ ಅವರನ್ನು ಸೋಲಿಸಿ ಅಲ್ಲಿಗೆ ತನ್ನ ನೆಚ್ಚಿನ ಮಾಂಡಲೀಕನೊಬ್ಬನನ್ನು ನೇಮಿಸಿದ.

ದೇವಾಲಯದಲ್ಲಿ

ಅದೊಂದು ದಿನ ಮಧ್ಯಾಹ್ನ ಪುಲಿಕೇಶಿ ವೇಷ ಬದಲಾಯಿಸಿಕೊಂಡು ನಗರ ವೀಕ್ಷಣೆಗೆ ಹೊರಟ. ಊರ ಮೂಲೆಯೊಂದರಲ್ಲಿ ಸಣ್ಣ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಇಂಪಾದ ದನಿಯಲ್ಲಿ ವೇದಘೋಷ ಒಳಗಿನಿಂದ ಕೇಳಿಬರುತ್ತಿತ್ತು. ಪುಲಿಕೇಶಿ ಒಳಹೊಕ್ಕು ಜನರ ಮಧ್ಯದಲ್ಲಿ ನಿಂತುಕೊಂಡ. ಅರ್ಚಕರು ಪೂಜೆಯಲ್ಲಿ ತನ್ಮಯರಾಗಿದ್ದಾರೆ. ಭಕ್ತವೃಂದ ಆನಂದಪರವಶವಾಗಿ ನಿಂತಿದೆ. ಮಹಾಮಂಗಳಾರತಿ ಆದ ಮೇಲೆ ಅರ್ಚಕರು ಎಲ್ಲರಿಗೂ ತೀರ್ಥವನ್ನು ಕೊಟ್ಟು ಹೂವನ್ನು ಪ್ರಸಾದವಾಗಿ ಹಂಚಿದರು. ಅನಂತರ ದೇವರ ಮುಂದೆ ಹೋಗಿ ನಿಂತ ಅರ್ಚಕರು ದೇವರನ್ನೊಮ್ಮೆ, ಮುಂದೆ ನಿಂತಿದ್ದ ಭಕ್ತರನ್ನೊಮ್ಮೆ ನೋಡಿದರು. ಕಣ್ಣಲ್ಲಿ ನೀರು ಗಳಗಳನೆ ಸುರಿಯಲಾರಂಭಿಸಿತು. ಮುಂದೆ ನಿಂತಿದ್ದ ಭಕ್ತನೊಬ್ಬ ತಟ್ಟೆಯಲ್ಲಿದ್ದ ಬಾಳೆಯ ಚಿಪ್ಪನ್ನು ಅರ್ಚಕರ ಮುಂದೆ ಸುರಿಸಿದ. ಅವರು ಕಣ್ಣೊರೆಸಿಕೊಂಡು ಮುಂದೆ ಬಂದು ಬಾಳೆಯ ಹಣ್ಣನ್ನು ಸುಲಿದು ಎಲ್ಲ ಭಕ್ತರಿಗೂ ಹಂಚಿದರು. ಜನಗಳು ನಮಸ್ಕರಿಸಿ ಹೊರಹೋದರು. ಪುಲಿಕೇಶಿ ಒಬ್ಬ ಭಕ್ತನನ್ನು ತಡೆದು ಪ್ರಶ್ನಿಸಿದ.

“ಹಯಗ್ರೀವ, ಹುಗ್ಗಿ ಅಂತಾದ್ದು ಏನೂ ಕೊಡುವುದಿಲ್ಲವೆ ಇಲ್ಲಿ ಪ್ರಸಾದವಾಗಿ?”

ಪ್ರಶ್ನೆ ಕೇಳಿ ಗಹಗಹಿಸಿ ನಕ್ಕುಬಿಟ್ಟ ಆತ..

“ನಾರಾಯಣ ಸ್ವಾಮಿಗಳಿಗೆ ದೇವರು ವಿದ್ವತ್ತು ಒಳ್ಳೆಯ ಕಂಠ, ನಿರ್ಮಲ ಹೃದಯದೊಡನೆ ಕಡುಬಡತನಾನೂ ದಯಪಾಲಿಸಿದ್ದಾನೆ. ಪಾಪ, ಇವತ್ತು ನೈವೇದ್ಯಕ್ಕೆ ಯಾರೂ ಏನೂ ತಂದುಕೊಟ್ಟಿರಲಿಲ್ಲ ಅಂತ ಕಾಣುತ್ತೆ. ಹೆಂಡ್ತಿ ಮಕ್ಕಳನ್ನು ಉಪವಾಸ ಕೆಡವಿ ತಾವೂ ಉಪವಾಸ ಮಲಗ್ತಾರೆ. ಹೋಗಿ ಸಾಯಂಕಾಲಕ್ಕಾದ್ರೂ ಏನಾದ್ರೂ ಏರ್ಪಾಟು ಮಾಡ್ತೀನಿ.” ಅವಸರವಸರವಾಗಿ ಮುಂದೆ ಧಾವಿಸಿದ ಆತ.

ಪುಲಕೇಶಿಯ ಮನಸ್ಸು ಬಹಳ ನೊಂದಿತು. ಮಾರನೆಯ ದಿನವೇ ದೇವಸ್ಥಾನದ ಬಳಿಯಲ್ಲೇ ಇದ್ದ ಮಾಕರಪ್ಪಿ ಗ್ರಾಮವನ್ನು ಆ ಬ್ರಾಹ್ಮಣನಿಗೆ ದತ್ತಿ ಬರೆಸಿಕೊಟ್ಟ. ಇದೇ ರೀತಿ ರಾಜ್ಯದ ಇತರ ದೇವಾಲಯಗಳಿಗೂ ಜಮೀನನ್ನು ದಾನ ಕೊಟ್ಟ.

ಉತ್ತರಾಪಥೇಶ್ವರನ ದಕ್ಷಿಣ ಪ್ರವಾಸ

ಕಾನ್ಯಕುಬ್ಜದ ಹರ್ಷವರ್ಧನ ಮಹಾರಾಜ ಉತ್ತರ ಭಾರತವನ್ನೆಲ್ಲಾ ಗೆದ್ದು ಉತ್ತರಾಪಥೇಶ್ವರನೆಂದು ಬಹಳ ಪ್ರಖ್ಯಾತನಾಗಿದ್ದ. ಆದರೂ ಇನ್ನೂ ರಾಜ್ಯದಾಹ ಅಡಗಿರಲಿಲ್ಲ. ದಕ್ಷಿಣ ದೇಶವನ್ನೂ ಕಬಳಿಸಲು ಹೊಂಚು ಹಾಕುತ್ತಿದ್ದ. ಅವನ ಆಶ್ರಿತ ರಾಜರುಗಳಾದ ಲಾಟ, ಮಾಳವ, ಗುರ್ಜರರನ್ನು ಚಾಳುಕ್ಯ ಚಕ್ರೇಶ್ವರ ಪುಲಿಕೇಶಿ ಗೆದ್ದಿದ್ದ. ಪುಲಿಕೇಶಿಯನ್ನೇ ಗೆದ್ದು ಇಡೀ ಭಾರತದ ಸಾಮ್ರಾಟನಾಗಬೇಕೆಂದು ಹರ್ಷನ ಬಯಕೆ. ಬೃಹತ್ ಸೈನ್ಯವನ್ನು ತೆಗೆದುಕೊಂಡು ಪುಲಿಕೇಶಿಯ ಮೇಲೆ ದಂಡೆತ್ತಿ ಬಂದ.

ಬೇಹುಗಾರರು ಈ ದಂಡಯಾತ್ರೆಯ ಸುದ್ದಿಯನ್ನು ಪುಲಿಕೇಶಿಗೆ ತಿಳಿಸಿದರು. ಹರ್ಷವರ್ಧನನ ಶಕ್ತಿ ಪುಲಿಕೇಶಿಗೆ ತಿಳಿದಿತ್ತು. ಆದರೆ ತನ್ನ ಶಕ್ತಿಯಲ್ಲಿ ವಿಶ್ವಾಸವೂ ದೃಢವಾಗಿತ್ತು. ಸಾಮ್ರಾಟ್ ಹರ್ಷವರ್ಧನನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ನಿಶ್ಚಯಿಸಿದ. ತನ್ನ ಸ್ನೇಹಿತರುಗಳಾದ ಕದಂಬರು, ಗಂಗರು, ಅಳುಪರು, ಸೇಂದ್ರಕರು ಮುಂತಾದವರುಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ತನ್ನ ಶಕ್ತಿಯುತ ಚಾಳುಕ್ಯ ಸೇನೆಯನ್ನು ಮುಂದಾಗಿಟ್ಟುಕೊಂಡು ನರ್ಮದಾ ತೀರದತ್ತ ಪ್ರಯಾಣ ಬೆಳೆಸಿದ.

ಯುದ್ಧಕ್ಕೆ ಮುನ್ನ ಸಂಧಾನಕ್ಕೆ ಪ್ರಯತ್ನಿಸುವುದು ರಾಜಧರ್ಮ. ರಾಯಭಾರಿಗಳು ಒಂದು ಬಿಡಾರದಿಂದ ಇನ್ನೊಂದು ಬಿಡಾರಕ್ಕೆ ಓಡಿಯಾಡಿದರು. ಇಬ್ಬರೂ ಅಭಿಮಾನಿಗಳು. ಒಬ್ಬರ ಷರತ್ತು ಇನ್ನೊಬ್ಬರಿಗೆ ಒಪ್ಪಿಗೆಯಾಗಲಿಲ್ಲ. ಯುದ್ಧ ಅನಿವಾರ್ಯವಾಯಿತು.

ಪುಲಿಕೇಶಿಯ ಚತುರೋಪಾಯ, ವ್ಯೂಹರಚನೆ, ಯುದ್ಧಕೌಶಲದ ಮುಂದೆ ಹರ್ಷವರ್ಧನನ ಅಪಾರ ಸಂಖ್ಯೆಯ ಆನೆ, ಕುದುರೆ, ಪದಾತಿಗಳ ಸೈನ್ಯವೂ ದಿಕ್ಕುಕಾಣದಾಯಿತು. ಹರ್ಷವರ್ಧನನ ಹರ್ಷ ಇಳಿಯುವಂತೆ ಮಾಡಿ ಪುಲಿಕೇಶಿ “ಪರಮೇಶ್ವರ” , “ದಕ್ಷಿಣಾಪಥೇಶ್ವರ” ಬಿರುದುಗಳನ್ನು ಗಳಿಸಿದ. ಪುಲಿಕೇಶಿ ಕೊನೆಗೆ ಹರ್ಷವರ್ಧನನೊಡನೆ ಸಂಧಿಯನ್ನು ಮಾಡಿಕೊಂಡು ಆತನ ಸ್ನೇಹವನ್ನು ಅಂಗೀಕರಿಸಿ ವಿಜಯೋತ್ಸಾಹದಿಂದ ಬದಾಮಿಯತ್ತ ಹಿಂದುರುಗಿದ.

ಸ್ವಲ್ಪಕಾಲ ಪ್ರಜೆಗಳ ಯೋಗಕ್ಷೇಮ, ರಾಜ್ಯಾಡಳಿತದ ಸುಧಾರಣೆಗಳತ್ತ ಗಮನ ಹರಿಸಿದ. ರಾಜ್ಯ ಬಹಳ ವಿಸ್ತಾರವಾಗಿದ್ದುದರಿಂದ ಗುಜರಾತಿನ ಸುತ್ತಮುತ್ತಲ ಪ್ರದೇಶಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಇನ್ನೊಬ್ಬ ತಮ್ಮ ಜಯಸಿಂಹವನ್ನು ರಾಜಪ್ರತಿನಿಧಿಯಾಗಿ ನೇಮಿಸಿದ.

ಭ್ರಾತೃಪ್ರೇಮ

ರಾಜ್ಯವನ್ನಾಳಲಾರದೆ ಅಣ್ಣನನ್ನು ಬೇಡಿ ಹಿಂದಕ್ಕೆ ಬರಮಾಡಿಕೊಂಡ ವಿಷ್ಣುವರ್ಧನ ಅವನ ಕೃಪೆಯಿಂದ ಯುವರಾಜನಾಗಿದ್ದ. ಪದವಿ, ಅಧಿಕಾರ, ಗೌರವ ಎಲ್ಲ ಅವನಿಗೆ ದೊರೆತಿದ್ದವು.

ಆದರೆ ವಿವೇಕ ಬಂದಿರಲಿಲ್ಲ.

ಅಣ್ಣ ಯುದ್ಧಗಳಲ್ಲಿ ಮುಳುಗಿದ್ದಾಗ ತಮ್ಮ ಅವನ ವಿರುದ್ಧ ಪಿತೂರಿ ಮಾಡಿದ. ತಾನೇ ರಾಜನಾಗಲು ಹಂಚಿಕೆ ಹಾಕಿದ.

ಪುಲಿಕೇಶಿಗೆ ವಿಷಯ ತಿಳಿಯಿತು.

ತಮ್ಮನಿಗೆ ಹೇಳಿಕಳಿಸಿದ. “ಈಗಲಾದರೂ ನಿನ್ನ ಅವಿವೇಕವನ್ನು ಬಿಡು, ಅಣ್ಣತಮ್ಮಂದಿರು ಸಂತೋಷವಾಗಿ ಬಾಳೋಣ” ಎಂದ. ವಿಷ್ಣುವರ್ಧನ ಕೇಳಲಿಲ್ಲ.

ರಾಜ್ಯದಲ್ಲಿ ಅನಾಯಕತ್ವ ತಲೆದೋರದಂತೆ ಮಾಡಲು ಪುಲಕೇಶಿಗೆ ಉಳಿದಿದ್ದುದು ಒಂದೇ ಮಾರ್ಗ. ದೊಡ್ಡ ಸೈನ್ಯವನ್ನು ಕಳುಹಿಸಿದ. ತಮ್ಮ ಸೋತ, ಸೆರೆ ಸಿಕ್ಕಿದ.

ರಾಜಸಭೆ ಕಿಕ್ಕಿರಿದು ತುಂಬಿದೆ. ಮಹಾರಾಜನೆಂದರೆ ಜನರಿಗೆ ಪೂಜ್ಯಭಾವನೆ. ಅಂತಹ ಅರಸನ ವಿರುದ್ಧ, ಅಂತಹ ಅಣ್ಣನ ಮೇಲೆ ವೃಥಾ ಹಗೆತನ ತೋರಿ ನೂರಾರು ಜನರ ಸಾವಿಗೆ ಕಾರಣನಾದ ವಿಷ್ಣುವರ್ಧನನ ಮೇಲೆ ಜನರ ಕರುಣೆ ಎಳ್ಳಷ್ಟೂ ಕಾಣದಾಗಿದೆ.

ಝಣಝಣ ಸರಪಣಿಯ ಸದ್ದಿನಲ್ಲಿ, ಬಿಚ್ಚುಕತ್ತಿಯ ಪಹರೆಯವರ ಮಧ್ಯೆ ತಲೆತಗ್ಗಿಸಿ ಸಭೆಯ ಮುಂದೆ ಬಂದು ನಿಂತ ವಿಷ್ಣುವರ್ಧನ.

ಆತನ ವಿದ್ರೋಹವನ್ನು ಆವೇಶದಿಂದ ಬಣ್ಣಿಸಿದ ಅಮಾತ್ಮರು, “ರಾಜದ್ರೋಹಿಗೆ ಕ್ರೂರ ಶಿಕ್ಷೆ ಆಗಲೇಬೇಕು. ಮಂಗಳೇಶನಿಗೆ ಮೊದಲಿನಿಂದಲೂ ಅನುಚರನಾಗಿದ್ದ ಇವನಿಗೆ ಆಜನ್ಮ ಕಾರಾಗೃಹವಾಸವೇ ತಕ್ಕ ಶಿಕ್ಷೆ” ಎಂದು ಹೇಳಿ ಕುಳಿತರು.

“ದೇಶದ್ರೋಹಿ… ದಂಗೆಕಾರನಿಗೆ ಮರಣದಂಡನೆಯೇ ಶಿಕ್ಷೆ!” ಕೆರಳಿದ್ದ ಪ್ರಜೆಗಳು ಕೂಗಿದರು.

ಪುಲಿಕೇಶಿ ತಮ್ಮನನ್ನು ಕಣ್ಣಗಲಿಸಿ ನೋಡಿದ. ಸಿಂಹಾಸನದಿಂದಿಳಿದು ಪಟ್ಟದ ಕತ್ತಿ ಹಿರಿದು ಝಳಪಿಸುತ್ತ ತಮ್ಮನತ್ತ ನಡೆದ. ಸಭಿಕರು ಮೂಕವಿಸ್ಮಿತರಾಗಿ ಕುಳಿತರು. ಪುಲಿಕೇಶಿ ತಮ್ಮನ ತಲೆಯ ಮೇಲಿದ್ದ ಲೋಹದ ಕುಲಾವಿಯನ್ನು ಕಿತ್ತು ದೂರ ಎಸೆದ. ಕೈಸರಪಣಿ ಕಳಚಲು ಸೈನಿಕನಿಗೆ ಹೇಳಿ ಮೌನವದನನಾಗಿ ನಿಂತಿದ್ದ ಅವನ ತಲೆಯನ್ನು ಕತ್ತಿಯ ಕೊನೆಯಿಂದ ಮೇಲೆತ್ತಿ, “ಹೂಂ… ತೆಗೆದುಕೊ” ಎಂದು ಕತ್ತಿಯನ್ನು ಅವನ ಕೈಗಿತ್ತ.

ರಾಜನ ರೀತಿ ಜನಕ್ಕೆ ಅರ್ಥವಾಗಲಿಲ್ಲ. ಇದೇನು, ಅಣ್ಣತಮ್ಮಂದಿರ ಮಧ್ಯೆ ಕಾಳಗೆ ಪ್ರಾರಂಭವಾಗುವುದೋ ಎಂದು ಗಾಬರಿಗೊಂಡರು. ಗುಸುಗುಸು ಪ್ರಾರಂಭವಾಯಿತು. ಅಮಾತ್ಮರು, ಸೇನಾನಿಗಳು ಹತ್ತಿರ ಬಂದು ನಿಂತರು.

ತಮ್ಮನ ಮುಖ ನೋಡಿ ಪುಲಿಕೇಶಿ ಮುಗುಳ್ನಕ್ಕ. ಚಪ್ಪಾಳೆ ತಟ್ಟಿದ. ಸೇವಕನೊಬ್ಬ ಬಟ್ಟೆ ಮುಚ್ಚಿದ ಹರಿವಾಣವೊಂದನ್ನು ಹೊತ್ತು ತಂದು ಹತ್ತಿರ ನಿಂತ. ಪುಲಕೇಶಿ ಬಟ್ಟೆಯನ್ನು ಪಕ್ಕಕ್ಕೆ ಸರಿಸಿದೊಡನೆ ಸಭಿಕರು ದಂಗಾದರು. “ಹೋ!” ಉದ್ಗಾರ ಹೊರಟಿತು.

ರತ್ನಖಚಿತ ಕಿರೀಟ ಹೊಳೆಯುತ್ತಿತ್ತು ತಟ್ಟೆಯ ಮೇಲೆ.

“ಅಣ್ಣ ನನ್ನನ್ನು ಕ್ಷಮಿಸು,” ವಿಷ್ಣುವರ್ಧನ ಮಂಡಿ ಊರಿದ. ಪುಲಿಕೇಶಿ ಅವನನ್ನು ಹಿಡಿದೆತ್ತಿ ಆಲಿಂಗಿಸಿಕೊಂಡು ಕಿರೀಟವನ್ನು ಆತನ ಮುಡಿಗೇರಿಸಿ ಕತ್ತಿಯನ್ನು ಕೈಗಿತ್ತು, “ವೆಂಗಿಮಂಡಲದ ರಾಜ” ಎಂದು ಘೋಷಿಸಿದ.

ವಿಷ್ಣುವರ್ಧನನ ಕಣ್ಣಿನಲ್ಲಿ ನೀರು ತುಂಬಿಬಂದಿತು. ಅವನಿಗೆ ಮಾತೇ ಬಾರದಾಯಿತು.

ಯಶೋಗಾನ

ಹರ್ಷವರ್ಧನನನ್ನು ಗೆದ್ದ ಮೇಲೆ ಪುಲಕೇಶಿಯ ಯಶೋಗಾನ ದಶದಿಕ್ಕುಗಳಿಗೂ ಹಬ್ಬಿತು. ದೂರದ ಪರ್ಷಿಯಾ ದೇಶದಲ್ಲೂ ಆತನ ಯಶಸ್ಸಿನ ದುಂದುಭಿ ಮೊಳಗಿತು. ಪರ್ಷಿಯಾದ ರಾಜ ಎರಡನೇ ಖುಸ್ರು ತಾತ್ಕಾಲಿಕವಾಗಿ ರಾಜ್ಯ ಕಳೆದುಕೊಂಡು ಕಷ್ಟಸ್ಥಿತಿಯಲ್ಲಿದ್ದುದರಿಂದ ಸಹಾಯ ಯಾಚಿಸಿ ರಾಯಭಾರಿಯನ್ನು ಇವರ ಆಸ್ಥಾನಕ್ಕೆ ಕಳುಹಿಸಿದ್ದನು. (ಈ ದೃಶ್ಯವನ್ನು ಕಂಡ ಕಲಾಕಾರನೊಬ್ಬನು ಅಜಂತದ ಮೊದಲ ಗುಹೆಯಲ್ಲಿ ಬಹು ಕಲಾತ್ಮಕವಾಗಿ ಸುಂದರ ವರ್ಣಗಳಿಂದ ಅದನ್ನು ಚಿತ್ರಿಸಿದ್ದಾನೆ.) ಪುಲಿಕೇಶಿಯೂ ತನ್ನ ರಾಯಭಾರಿಯನ್ನು ಖುಸ್ರುವಿನ ಆಸ್ಥಾನಕ್ಕೆ ಕಳುಹಿಸಿದ್ದನು.

ಹಗೆತನ

ಪಲ್ಲವರಿಗೂ ಚಾಳುಕ್ಯರಿಗೂ ಬಹಳ ದಿನಗಳ ಹಗೆತನ. ಅದು ದಿನಂಪ್ರತಿ ಬೆಳೆಯುತ್ತಿತ್ತಲ್ಲದೆ ಕಡಿಮೆ ಆಗುವ ಲಕ್ಷಣಗಳೇ ತೋರುತ್ತಿರಲಿಲ್ಲ. ಇಬ್ಬರೂ ಮಹತ್ವಾಕಾಂಕ್ಷಿಗಳು. ಒಬ್ಬರು ಇನ್ನೊಬ್ಬರನ್ನು ಮಹಾರಾಜನೆಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದ್ದರಿಂದ ಆಗಾಗ ಯುದ್ಧ ಅನಿವಾರ್ಯವಾಗುತ್ತಿತ್ತು.

ವೆಂಗಿಯನ್ನು ಕಳೆದುಕೊಂಡಿದ್ದ ಪಲ್ಲವ ಮಹೇಂದ್ರ ವರ್ಮನು ಚಾಳುಕ್ಯ ಪುಲಿಕೇಶಿಯ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು ತವಕಿಸುತ್ತಿದ್ದ. ಅಸೂಯಾಪರನೂ ಸ್ವಾರ್ಥಿಯೂ ಆದ ಕಬ್ಜ ವಿಷ್ಣುವರ್ಧನ ಸ್ವತಂತ್ರ ರಾಜನಾಗಿದ್ದುದು ಮಹೇಂದ್ರವರ್ಮನಿಗೆ ತನ್ನ ಭೇದೋಪಾಯ ನೀತಿಯ ಪ್ರಯೋಗಕ್ಕೆ ಒಳ್ಳೆಯ ಸನ್ನಿವೇಶವನ್ನು ನಿರ್ಮಿಸಿತ್ತು. ಕುಬ್ಜ ತನ್ನ ಶತ್ರುವಾದರೂ

 

ಪರ್ಷಿಯಾದ ರಾಜನ ರಾಯಭಾರಿ ಪುಲಿಕೇಶಿಯ ಆಸ್ಥಾನಕ್ಕೆ ಬಂದನು.

ಮಿತ್ರನಂತೆ ವ್ಯವಹರಿಸಿದ. ಸವಿನುಡಿಯನ್ನಾಡಿ ಪುಲಿಕೇಶಿಯ ಮೇಲೆ ಆಪಾದನೆಗಳ ಹೊರೆ ಹೊರಿಸಿ, ತಮ್ಮನಿಗೂ ಮೋಸ ಮಾಡುತ್ತಿರುವ ಮಹಾಪಾತಕಿ ಎಂದು ಜರಿದು, ಆತನ ಸೊಕ್ಕು ಮುರಿದು ವಾತಾಪಿ (ಬಾದಾಮಿ)ಯ ಸಿಂಹಾಸನದ ಮೇಲೆ ಕಬ್ಜ ವಿರಾಜಿಸಿದಾಗಲೇ ತನ್ನ ಮನಸ್ಸಿಗೆ ಶಾಂತಿ ಎಂದೂ ಅದಕ್ಕೆ ತಾನು ಯಾವ ತ್ಯಾಗಕ್ಕೂ ಸಿದ್ಧವೆಂದೂ ಪ್ರಮಾಣ ಮಾಡಿ ತನ್ನಲ್ಲಿ ನಂಬಿಕೆ ಹುಟ್ಟುವಂತೆ ಮಾಡಿದ.

ವಿಷ್ಣುವರ್ಧನ ಮತ್ತೆ ಕೆಟ್ಟತನಕ್ಕೆ ಮನಸೋತ. ಅಣ್ಣನ ರಾಜನ ವಿರುದ್ಧ ನಿಂತ.

ಕುಬ್ಜನ ಮನಸ್ಸು ಅಣ್ಣನ ಪ್ರತಿಯಾಗಿ ಪೂರಾ ತಿರುಗಿದೆ ಎಂದು ಮನದಟ್ಟಾಗುತ್ತಲೇ ಪಲ್ಲವ ರಾಜ ಭಾರಿ ಸೈನ್ಯ ತೆಗೆದುಕೊಂಡು ವಾತಾಪಿಯತ್ತ ಪಯಣ ಬೆಳೆಸಿದ.ಯುದ್ಧ ಸನ್ನದ್ಧನಾಗಿಯೇ ಇದ್ದ ಪುಲಿಕೇಶಿ ಈ ನಿರೀಕ್ಷಿತ ದಾಳಿಯನ್ನು ಧೈರ್ಯದಿಂದ ಎದುರಿಸಿದ. ಬಿರುಗಾಳಿಯಂತೆ ಪಲ್ಲವರ ಮೇಲೆ ತಿರುಗಿಬಿದ್ದು ಹಿಂದಕ್ಕಟ್ಟಿದ. ತಮ್ಮನ ಮೋಸದಿಂದಾಗಿ ಪುಳ್ಳಲೂರಲ್ಲಿ ಪುಲಿಕೇಶಿಗೆ ಸೋಲಾದರೂ, ಜರ್ಜರಿತವಾದ ಸೈನ್ಯವನ್ನು ಮತ್ತೆ ಒಂದುಗೂಡಿಸಿ, ಹುರಿದುಂಬಿಸಿ ಪಕ್ಕದಿಂದ ಹೊರಟು ಕಾಳ್ಗಿಚ್ಚಿನಂತೆ ಸಿಕ್ಕಿದ್ದನ್ನು ನಾಶಮಾಡುತ್ತ ಕಂಚಿಯ ತನಕ ಹೋಗಿ ಮಹೇಂದ್ರವರ್ಮನ ಜಂಬವನ್ನು ಅಡಗಿಸಿದ. ಅಲ್ಲಿಂದ ಇನ್ನೂ ಮುಂದುವರಿದು ಕಾವೇರಿ ನದಿಯನ್ನು ದಾಟಿ ಚೇರ, ಚೋಳ, ಪಾಂಡ್ಯರನ್ನು ಸೋಲಿಸಿದ. ಪಲ್ಲವರ ಸ್ನೇಹಿತರನ್ನೆಲ್ಲಾ ತನ್ನ ಅಂಕೆಯೊಳಗಿಸಿಕೊಂಡು ಕೀರ್ತಿ ಪತಾಕೆಯನ್ನು ಮತ್ತೂ ಮೇಲಕ್ಕೆ ಏರಿಸಿ ವಿಜಯದುಂದುಭಿ ಮೊಳಗಿಸುತ್ತ ರಾಜಧಾನಿಗೆ ಹಿಂದಿರುಗಿದ. ಈ ಎಲ್ಲ ವಿಜಯದ ಕುರುಹಾಗಿ ಅಶ್ವಮೇಧಯಾಗ ಮಾಡಿದನೆಂದು ಪ್ರತೀತಿ ಇದೆ.

ಪ್ರಜಾವತ್ಸವ

ಪುಲಿಕೇಶಿ ವೈಷ್ಣವ ಧರ್ಮದ ಅನುಯಾಯಿ ಆಗಿದ್ದರೂ ಜೈನ, ಶೈವ ಧರ್ಮಗಳನ್ನೂ ಗೌರವಿಸುತ್ತಿದ್ದ. ಜನರು ತಮಗೆ ಬೇಕೆನಿಸಿದ ಧರ್ಮವನ್ನು ಅಂಗೀಕರಿಸಿ ಶ್ರದ್ಧೆಯಿಂದಿರಲು ಸ್ವತಂತ್ರರಾಗಿದ್ದರು. ರಾಜನೂ ಸಹ ಮತಭೇದ ಎಣಿಸದೆ ಹಲವಾರು ದೇವಸ್ಥಾನಗಳಿಗೆ ನಿತ್ಯ ಪೂಜೆ ನಡೆಸಲು ಅನುಕೂಲವಾಗಲೆಂದು ಗ್ರಾಮಗಳ ಉಂಬಳಿ ಕೊಡುವ ಸಂಪ್ರದಾಯವನ್ನಿರಿಸಿಕೊಂಡಿದ್ದ. ವಿದ್ಯಾಭ್ಯಾಸಕ್ಕೆ ಈತನು ಬಹಳ ಉತ್ತೇಜನ ಕೊಡುತ್ತಿದ್ದ. ರಾಜ್ಯದಲ್ಲೆಲ್ಲಾ ನೂರಾರು ಸಂಘಾರಾಮಗಳನ್ನು ನಿರ್ಮಿಸಿ, ಶ್ರೇಷ್ಠ ಆಚಾರ್ಯರನ್ನು ನೇಮಿಸಿ, ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಕಲಿಯಲು ಏರ್ಪಾಟು ಮಾಡಿದ್ದ. ಕವಿಗಳು, ಕಲಾವಿದರಿಗೆ ಆಶ್ರಯದಾತನಾಗಿದ್ದ. ಐಹೊಳೆಯ ಶಾಸನ ಕನ್ನಡನಾಡಿನಲ್ಲಿ ಪ್ರಸಿದ್ಧವಾದದ್ದು. ಐಹೊಳೆ ಎನ್ನುವ ಹಳ್ಳಿ ಬಿಜಾಪುರ ಜಿಲ್ಲೆಯಲ್ಲಿದೆ. ಅಲ್ಲಿನ ಒಂದು ಶಾಸನ ಚರಿತ್ರೆಗೆ ಸಂಬಂಧಿಸಿದ ಹಲವು ವಿವರಗಳನ್ನು ಕೊಡುತ್ತದೆ. ಇದನ್ನು ರಚಿಸಿದ ರವಿಕೀರ್ತಿಯ ಹೆಸರನ್ನು ಆಗಲೇ ಕೇಳಿದೆವಲ್ಲ? ಇವನು ಪುಲಿಕೇಶಿಯ ಆಸ್ಥಾನಕವಿ, ರಾಜನ ಸ್ನೇಹಿತ.

ನರ್ಮದಾ ನದಿಯಿಂದ ಕನ್ಯಾಕುಮಾರಿ ತನಕ ವಿಸ್ತರಿಸಿದ್ದ ಸಾಮ್ರಾಜ್ಯವನ್ನು ತನ್ನ ಅಂಕೆಯಲ್ಲಿರಿಸಿಕೊಂಡು ಪ್ರಜೆಗಳ ಹಿತರಕ್ಷಣೆ ಮಾಡುವುದು ಕಷ್ಟ ಎಂದು ಪುಲಿಕೇಶಿ ಕಂಡುಕೊಂಡ. ಇದನ್ನು ಹಲವು ಮಂಡಲಗಳಾಗಿ ವಿಭಜಿಸಿ ಪ್ರತಿಯೊಂದಕ್ಕೂ ಒಬ್ಬೊಬ್ಬ ಮಾಂಡಲೀಕನನ್ನು ನೇಮಿಸಿದ. ಸಾಮಂತ ರಾಜರುಗಳು ಈತನಿಗೆ ಪ್ರತಿ ವರ್ಷ ಪೊಗದಿ ಸಲ್ಲಿಸಿ ತಮ್ಮ ರಾಜ್ಯದಲ್ಲಿ ಸ್ವತಂತ್ರರಾಗಿದ್ದರು. ಆದರೆ ಯುದ್ಧಕಾಲದಲ್ಲಿ ದಂಡಿನೊಡನೆ ಬಂದು ಸಾಮ್ರಾಜ್ಯಕ್ಕೆ ನೆರವು ನೀಡುತ್ತಿದ್ದರು.

ಸಂಸ್ಕೃತ, ಕನ್ನಡಗಳೆರಡಕ್ಕೂ ಆಡಳಿತ ಭಾಷೆಯ ಸ್ಥಾನಮಾನಗಳಿದ್ದು, ಅವೆರಡೂ ಶಾಸನಗಳಲ್ಲಿ ಬಳಸಲ್ಪಡುತ್ತಿದ್ದವು. ಹೆಂಗಸರಿಗೆ ಸಮಾಜದಲ್ಲಿ ಬಹಳ ಗೌರವವಿತ್ತು. ಅವರು ರಾಜ್ಯಾಡಳಿತದಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಚೀನ ಪ್ರವಾಸಿ

ಚೀನಾ ಪ್ರವಾಸಿ ಹ್ಯೂಯೆನ್‌ತ್ಸಾಂಗ್‌ಇದೇ ಕಾಲದಲ್ಲಿ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದನು. ಈತನು ತಾನು ಪ್ರವಾಸದಲ್ಲಿ ಕಂಡ ಸತ್ಯಸಂಗತಿಗಳನ್ನು ಬರೆದಿಟ್ಟಿದ್ದಾನೆ. ಇದು ಬಹಳ ಉಪಯುಕ್ತ ಪ್ರವಾಸೀ ಗ್ರಂಥ. ಇದರಲ್ಲಿ ಆಗಿನ ಕಾಲದ ಜನಜೀವನ, ರಾಜಕೀಯದ ಪರಿಸ್ಥಿತಿ, ಧಾರ್ಮಿಕ ಪ್ರಜೆ ಎಲ್ಲವೂ ನಿರೂಪಿತವಾಗಿವೆ. ಇವನಿಂದ ತಿಳಿಯುವಂತೆ ರಾಜ್ಯವು ೫೦೦೦ ಲಿ ಸುತ್ತಳತೆ ಉಳ್ಳದ್ದು (ಲಿ=೬೩೩ ಗಜ). ರಾಜಧಾನಿ ನದಿಯ ದಂಡೆಯ ಮೇಲಿತ್ತು. ಅದರ ಸುತ್ತಳತೆ ಸುಮಾರು ೩೦; ಲಿ. ಭೂಮಿಯು ಬಹಳ ಫಲವತ್ತಾಗಿದ್ದು, ಉತ್ತಮ ಉತ್ಪನ್ನ ಕೊಡುತ್ತಿತ್ತು. ಬಿಸಿಲು ಹೆಚ್ಚು. ಜನರು ಪ್ರಾಮಾಣಿಕರು ಮತ್ತು ಸರಳ ಸ್ವಭಾವದವರು. ಅನ್ಯಾಯ ಸಹಿಸರು. ತಮಗೆ ಉಪಕಾರ ಮಾಡಿದವರಿಗೆ ಅವರು ಕೃತಜ್ಞರು. ಆದರೆ ವೈರಿಗಳಿಗೆ ನಿಷ್ಕರುಣರು. ಅಪಮಾನವಾದರೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇಡು ತೀರಿಸಿಕೊಳ್ಳುವ ಕೆಚ್ಚು ಅವರದು. ಅರಸ ಪುಲಿಕೇಶಿ ಮಹತ್ವಾಕಾಂಕ್ಷಿಯೂ ಲೋಕೋಪಕಾರಿಯೂ ಆಗಿದ್ದ. ಇವನ ಪ್ರಜೆಗಳು ಇವನಿಗೆ ಸಂತೋಷದಿಂದ ವಿಧೇಯರಾಗಿದ್ದರು. ಹರ್ಷವರ್ಧನ ತನ್ನ ಸಾಮ್ರಾಜ್ಯದ ಎಲ್ಲ ಭಾಗಗಳ ದಂಡುಗಳನ್ನು ಒಟ್ಟುಗೂಡಿಸಿಕೊಂಡು ಆ ರಾಜ್ಯದ ಮೇಲೆ ದಂಡೆತ್ತಿಹೋದರೂ ಗೆಲ್ಲುವುದು ಅವನಿಂದ ಆಗಲಿಲ್ಲ.

ಕಷ್ಟದ ಮುಪ್ಪು

ಪುಲಿಕೇಶಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಆಗಲೇ ಅವರೆಲ್ಲ ಪ್ರವರ್ಧಮಾನಕ್ಕೆ ಬಂದಿದ್ದರು. ರಾಜಯೋಗ್ಯವಾದ ಸಕಲ ವಿದ್ಯೆಗಳಲ್ಲೂ ಪಾರಂಗತರಾಗಿದ್ದರು. ಅವರಿಗೆ ರಾಜ್ಯಾಡಳಿತದಲ್ಲಿ ಅನುಭವ ದೊರಕಿಸಿಕೊಡಲು ಅವರು ಪ್ರಾಪ್ತ ವಯಸ್ಸಿಗೆ ಬಂದೊಡನೆ ಒಂದೊಂದು ರಾಜ್ಯಕ್ಕೆ ಮಾಂಡಲೀಕರಾಗಿ ನೇಮಿಸಿದ್ದನು. ಹೆಚ್ಚು ಪ್ರೀತಿಪಾತ್ರನಾದ ಮೂರನೆ ಮಗ ವಿಕ್ರಮಾದಿತ್ಯ ತಂದೆಯ ಬಳಿಯಲ್ಲಿದ್ದುಕೊಂಡು ಸಹಾಯಕನಾಗಿದ್ದ.

ಎಲ್ಲವನ್ನೂ ತನ್ನ ಸ್ವಶಕ್ತಿ, ಸಾಮರ್ಥ್ಯದಿಂದ ದೊರಕಿಸಿಕೊಂಡ ಪುಲಿಕೇಶಿ ತನ್ನ ಕೊನೆಯ ದಿನಗಳಲ್ಲಿ ಆರೋಗ್ಯವನ್ನು ಕಳೆದುಕೊಂಡು, ಕೋಡು ಮುರಿದ ಸಲಗದಂತೆ ಜೀವನ ತಳ್ಳಬೇಕಾಯಿತು. ಯುದ್ಧ ಹಾಗೂ ರಾಜ್ಯನಿರ್ವಹಣೆಯಲ್ಲೇ ಹಗಲು ರಾತ್ರಿ ಎನ್ನದೆ ಶ್ರಮಿಸಿ ಸಂಪೂರ್ಣವಾಗಿ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿದ್ದ. ಇದರಿಂದ ಉಗ್ರ ಕಾಯಿಲೆ ಶರೀರವನ್ನು ಹೊಕ್ಕಿತು. ರಾಜ್ಯ ವೈದ್ಯರುಗಳು ಹತಾಶರಾದರು. ಭಗವತ್ಸೇವೆ, ದಾನ ಧರ್ಮಗಳು ದೇಶಾದ್ಯಂತ ಅವಿರತವಾಗಿ ನಡೆದವು. ಸಮಯ ಕಾಯುತ್ತಿದ್ದ ಪುಲಿಕೇಶಿಯ ಶತ್ರುಗಳು ಪರಿಸ್ಥಿತಿಯ ಲಾಭ ಪಡೆಯಲು ಯೋಚಿಸಿದರು. ಇದೇ ಸಮಯದಲ್ಲಿ ದುರ್ದೈವದಿಂದ ಪುಲಕೇಶಿಯ ಮಕ್ಕಳಿಗೂ ದುರ್ಬುದ್ಧಿ ಆವರಿಸಿತ್ತು. ಮೂರನೆ ಮಗ ವಿಕ್ರಮಾದಿತ್ಯನನ್ನೇ ರಾಜನಾಗಿ ಮಾಡಲು ತಂದೆ ಹವಣಿಸುತ್ತಿದ್ದಾನೆಂದು ತಪ್ಪು ತಿಳಿದು ಮೊದಲ ಇಬ್ಬರು ಅವನ ಮೇಲೆ ಸೆಟೆದು ನಿಂತರು. ಸ್ವತಂತ್ರರಾಗಲು ಪ್ರಯತ್ನಿಸಿದರು. ಒಬ್ಬೊಬ್ಬರೂ ಚಾಳುಕ್ಯ ಸಾಮ್ರಾಜ್ಯದ ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದರು.

ಧ್ರುವತಾರೆ ಅಸ್ತಮಿಸಿತು

ಅನೇಕ ಯುದ್ಧಗಳಲ್ಲಿ ಸೋತು ಸೊರಗಿದ್ದ ಪಲ್ಲವ ಮಹೇಂದ್ರವರ್ಮ ಚಾಳುಕ್ಯ ಸಾಮ್ರಾಜ್ಯದ ಮೇಲೆ ಜಯಗಳಿಸಲು ಅಸಮರ್ಥನಾಗಿದ್ದರೂ ಮಗ ನರಸಿಂಹ ವರ್ಮನ ಮೂಲಕ ಸೇಡು ತೀರಿಸಿಕೊಳ್ಳಲು ಹವಣಿಕೆ ಹೂಡಿದ್ದ. ಯುವಕ ನರಸಿಂಹವರ್ಮ ಶೂರನೂ ಧೀರನೂ ಮೇಲಾಗಿ ಬಹಳ ಚಾಣಾಕ್ಷನೂ ಆಗಿದ್ದುದರಿಂದ ತಂದೆಯ ಆಸೆಯನ್ನು ನಡೆಸಿಕೊಡುವ ಪ್ರತಿಜ್ಞೆ ಮಾಡಿ, ವಾತಾಪಿಯನ್ನು ಮರಳಿಪಡೆಯುವ ಇಚ್ಛೆಯಿಂದ ಭರದಿಂದ ಭಾರಿ ಸೈನ್ಯದೊಡನೆ ಹೊರಟ. ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಚೋಳ, ಚೇರ, ಪಾಂಡ್ಯರೂ ನರಸಿಂಹವರ್ಮನ ಸಹಾಯಕ್ಕೆ ಹೊರಟರು. ಸಿಂಹಳದ ದೊರೆ ಮನವಮ್ಮ ಕೂಡ ಇವನಿಗೆ ಸಹಾಯ ಮಾಡಿದನೆಂದು ಸಿಂಹಳದ “ಮಹವಂಶ” ಗ್ರಂಥದಲ್ಲಿ ಹೇಳಿದೆ.

ಪುಲಿಕೇಶಿಯು ನರಸಿಂಹವರ್ಮನ ವಿದ್ರೋಹ ಅಡಗಿಸಲು ಮಕ್ಕಳೆಲ್ಲರ ಸಹಾಯ ಕೇಳಿದ. ವಿಕ್ರಮಾದಿತ್ಯನಿಗೆ ಸೈನ್ಯ ಕೊಟ್ಟು ಶತ್ರುವನ್ನು ಎದುರಿಸಲು ಕಳುಹಿಸಿದ. ಆದರೆ ಉಳಿದ ಮಕ್ಕಳು ಸಹಾಯಕ್ಕೆ ಬರಲಿಲ್ಲ.

ಪಲ್ಲವರ ಮೇಲೆ ನಡೆದ ಯುದ್ಧದಲ್ಲಿ ಚಾಳುಕ್ಯ ಸೇನೆಗೆ ಪರಿಯೊಳ, ಮಣಿಮಂಗಳ ಮತ್ತು ಸುರಮಾರ ಯುದ್ಧಗಳಲ್ಲಿ ಭಾರಿ ಸೋಲಾಯಿತು. ಪಲ್ಲವರ ಸೇನಾನಿ ಶಿವಭಕ್ತ ಶಿರಾಯಳ ಶೆಟ್ಟಿಯ ಶೌರ್ಯ ಪಲ್ಲವರ ಜಯಕ್ಕೆ ಬಹಳಷ್ಟು ಕಾರಣವಾಯಿತು.

ಈ ವಿಜಯದಿಂದ ಉಬ್ಬಿದ ನರಸಿಂಹವರ್ಮ ದ್ವಿಗುಣಿತ ವೇಗದಿಂದ ಚಾಳುಕ್ಯ ರಾಜಧಾನಿ ವಾತಾಪಿಯತನಕ ನುಗ್ಗಿಬಂದ. ಐಶ್ವರ್ಯವನ್ನು ಕೊಳ್ಳೆಹೊಡೆದ. ನಾಗರಿಕರನ್ನು ನಿರ್ದಯದಿಂದ ಕೊಂದು ವಾತಾಪಿ ನಗರವನ್ನು ಸುಟ್ಟು ತನ್ನ ಪೈಶಾಚಿಕ ಸೇಡನ್ನು ತೀರಿಸಿಕೊಂಡ. ತೀವ್ರ ಕಾಯಿಲೆಯಲ್ಲಿದ್ದ ಪುಲಿಕೇಶಿ ಈ ಅನ್ಯಾಯವನ್ನು ಸಹಿಸದಾದ. ಆಗಲೂ ಹುಲಿಯಂತೆ ಕೆರಳಿ ನಿಂತ. ಕೆಚ್ಚೆದೆಯಿಂದ ಕಾದಾಡಿ ವೀರಮರಣವನ್ನಪ್ಪಿದ. ನರಸಿಂಹವರ್ಮ ಈ ವಿಜಯದಿಂದ “ವಾತಾಪಿಕೊಂಡ” ಎಂಬ ಬಿರುದನ್ನು ಧರಿಸಿದ.

ಚಾಳುಕ್ಯ ಸಾಮ್ರಾಜ್ಯದ ಧ್ರುವತಾರೆ ಹೀಗೆ ೬೪೨ರಲ್ಲಿ ಅಸ್ತಮಿಸಿತು.

ಪುಲಿಕೇಶಿಯ ಮೂರನೆ ಮಗ ವಿಕ್ರಮಾದಿತ್ಯ ಹದಿಮೂರು ವರ್ಷಗಳ ಅವಿಶ್ರಾಂತ ಹೋರಾಟದ ಫಲವಾಗಿ ಚಾಳುಕ್ಯ ಸಾಮ್ರಾಜ್ಯವನ್ನು ಮರಳಿ ಗಳಿಸಿ ವಾತಾಪಿ ಗದ್ದುಗೆ ಏರಲು ಸಮರ್ಥನಾದ. ಸೋಲಿನಿಂದ ಪರಿತಪಿಸುತ್ತಿದ್ದ ಪುಲಿಕೇಶಿಯ ಆತ್ಮಕ್ಕೆ ಅಂದು ಮತ್ತೆ ಶಾಂತಿ ದೊರಕಿರಬೇಕು.