ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ಜಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ ಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನ ಸರ್ವ ಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ. ನಾಡಿನ ಕೋಟಿಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು. ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾ ಪಥವನ್ನು ಕ್ರಮಿಸುವುದು ನಮ್ಮ ವಿಶ್ವ ವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಸೇಷ ಹೋಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ಜಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ವಾಙ್ಮಯವನ್ನು ಕಾವ್ಯ ಮತ್ತು ಶಾಸ್ತ್ರ ಎಂದು ಎರಡು ಭಾಗವಾಗಿ ವಿಂಗಡಿಸುವುದು ಬಹು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಕಾವ್ಯವು ಸೃಜನಶೀಲ ಮನಸ್ಸಿನ ವಿಶೇಷ ಸೃಷ್ಟಿ. ಕವಿಯ ವಿಶೇಷಾನುಭವ, ಅಧ್ಯಯನ, ಚಿಂತನೆಗಳ ಜೊತೆಗೆ ನವೋನವ ನಿರ್ಮಾಣ ಕೌಶಲ ಶಕ್ತಿಯೂ ಸೇರಿ ಕಾವ್ಯ ಸೃಶೃಷ್ಟಿಯಾಗುತ್ತದೆ. ಈ ಕಾವ್ಯ ಸಾಮಾನ್ಯರಿಗೆ ಸ್ಫುರಿಸದ ಭಾವಾಲೋಚನೆಗಳನ್ನು, ಕಲ್ಪನಾ ಶಕ್ತಿಯ ನೆರವಿನಿಂದ ಹೊಚ್ಚ ಹೊಸದೆಂಬಂತೆ ಕಟ್ಟಿಕೊಡುತ್ತದೆ ಮತ್ತು ಅದು ಸಹೃದಯರ ಹೃದಯಲ್ಲಿ ಮತ್ತೆ ಮತ್ತೆ ಪ್ರತಿಪಲನವಾಗುತ್ತ ಹೊಸ ಹೊಸ ಅರ್ಥಛಾಯೆಗಳನ್ನು ಹೊರಡಿಸುತ್ತಾ ಹೋಗುತ್ತದೆ. ಇದು ಸಹೃದಯನ ವ್ಯುತ್ಪತ್ತಿ, ಲೋಕದ ಅರಿವು, ಭೌತಿಕತೆಯ ವಿಲಾಸ ಹಾಗೂ ವಿಶೇಷ ಗ್ರಹಣ ಶಕ್ತಿಗಳ ಆಧಾರದ ಮೇಲೆ ಭಿನ್ನವಾಗುತ್ತಾ ಹೋಗುತ್ತದೆ. ಹೀಗಾಗಿ ಕಾವ್ಯ ಸಹೃದಯರನ್ನು ಮತ್ತು ಸಹೃದಯ ಕಾವ್ಯವನ್ನು ಪ್ರರಸ್ಪರ ಪೋಷಿಸುತ್ತಾ ಹೋಗುವ ಪ್ರಕ್ರಿಯೆ ಪ್ರಧಾನವಾಗಿರುತ್ತದೆ. ಆದರೆ, ಶಾಸ್ತ್ರ ಪ್ರಧಾನವಾಗಿ ಬುದ್ಧಿ ವಿಹಾರಿ, ವಸ್ತುಲೋಕ ಸಂಚಾರಿ. ಇಲ್ಲಿ ವಾಸ್ತವ ಅರಿವಿಗೆ ಮತ್ತು ಅನುಭವಕ್ಕೆ ಪ್ರಾಧಾನ್ಯವೇ ಹೊರತು ಊಹೆ, ಕಲ್ಪನೆಗಳಿಗಲ್ಲ. ಆದ್ದರಿಂದ ಕಾವ್ಯ ಆನಂದದಾಯಕವಾದರೆ, ಶಾಸ್ತ್ರ ಅನುಭವದಾಯಕ ಮತ್ತು ಜ್ಞಾನದಾಯಕ. ಲೋಕದಲ್ಲಿ ಕಾವ್ಯಕ್ಕಿರುವ ಗೌರವ, ಆಕರ್ಷಣೆಗಳು ಶಾಸ್ತ್ರಕ್ಕಿಲ್ಲ. ಆದರೆ, ಶಾಸ್ತ್ರ ನಮ್ಮ ಸುತ್ತಮುತ್ತಣ ಪ್ರಪಂಚದ ವಿಷಯಗಳ ಕೂಲಂಕಷ ಅರಿವಿಗೆ ಎಡೆ ಮಾಡಿಕೊಟ್ಟು ನಮ್ಮ ಬದುಕುವ ಜ್ಞಾನವನ್ನು ವಿಸ್ತರಿಸುತ್ತದೆ. ಭಾರತೀಯರಲ್ಲಿ ಕಾವ್ಯ ಮತ್ತು ಶಾಸ್ತ್ರಗಳು ಪರಸ್ಪರ ಸಮಗೈಯಾಗಿ ವಿಜೃಂಭಿಸುತ್ತ ಬಂದಿವೆ. ಕಾವ್ಯ ಸೃಜಶೀಲ ಪ್ರತಿಭೆಯ ಫಲವಾದರೆ, ಶಾಸ್ತ್ರ ಪಾಂಡಿತ್ಯದ ಮತ್ತು ಲೋಕಾನುಭವದ ಬೌದ್ಧಿಕ ಎರಕವಾಗಿದೆ. ಈ ಕಾರಣದಿಂದ ರಾಮಾಯಣ, ಮಹಾಭಾರತ, ಶಾಕುಂತಲ ಮುಂತಾದ ಮಹಾಕೃತಿಗಳು ನಮ್ಮ ಆಂತರಿಕ ಜೀವನವನ್ನು ಸಮೃದ್ಧಗೊಳಿಸುವಲ್ಲಿ ನೆರವಾದರೆ ಲೋಕೋಪಕಾರ, ಕಾವ್ಯ ಮೀಮಾಂಸೆ, ಭಾಷಾ ಭೂಷಣ, ಛಂದಃಶಾಸ್ತ್ರ, ಗಜಶಾಸ್ತ್ರ, ಅಶ್ವಶಾಸ್ತ್ರ, ಕೃಷಿಶಾಸ್ತ್ರ ಮುಂತಾದವುಗಳು ನಿಜ ಜೀವನಕ್ಕೆ ಪೂರಕವಾಗುವ ಜ್ಞಾನವನ್ನು ಧಾರಣ ಮಾಡಿಕೊಂಡಿವೆ. ಈ ಶಾಸ್ತ್ರ ಪ್ರಜ್ಞೆ ಪ್ರರಿಶ್ರಮದಿಂದ, ಸತತ ಅಭ್ಯಾಸದಿಂದ ಮತ್ತು ಅನುಭವಗಳಿಂದ ಲಭ್ಯವಾಗುವಂತಹುದು. ಈ ಕಾರಣದಿಂದ ಕಾವ್ಯ ಮತ್ತು ಶಾಸ್ತ್ರಗಳೆರಡೂ ನಮ್ಮ ಬದುಕಿನ ಎರಡು ಶ್ವಾಸಕೋಶಗಳು. ಸಂಸ್ಕೃತ ಮುಂತಾದ ಭಾಷೆಗಳಲ್ಲಿ ಇರುವಂತೆ ಕನ್ನಡಲ್ಲಿಯೂ ಕಾವ್ಯ ಮತ್ತು ಶಾಸ್ತ್ರಗಳೆಂಬ ಎರಡೂ ಬಗೆಯ ಬರವಣಿಗೆಗಳು ಸಮೃದ್ಧವಾಗಿ ದೊರಕುತ್ತವೆ. ಕಾವ್ಯ ಜೀವನಾನಂದಕರವಾದರೆ, ಶಾಸ್ತ್ರ ವಾಸ್ತವ ಜೀವನ ಪೋಷಕವಾದ ಮತ್ತು ಪೂರಕವಾದ ಜ್ಞಾನವನ್ನು ಒದಗಿಸುವ ಮೂಲಕ ಬದುಕಿಗೆ ಅಂತಸ್‌ ಚೇತನವನ್ನು, ಬುದ್ಧಿಗೆ ಹರಿತ ಮತ್ತು ವೈಶಾಲ್ಯಗಳನ್ನು ನೀಡುತ್ತದೆ. ಹೀಗಾಗಿಯೇ ಕವಿ ಮತ್ತು ಶಾಸ್ತ್ರಕಾರ ಇಬ್ಬರಿಗೂ ನಮ್ಮ ಪ್ರಾಚೀನ ಪರಂಪರೆ ಸಮಾನ ಮನ್ನಣೆಯನ್ನು ನೀಡುತ್ತಾ ಬಂದಿದೆ. ಶಾಸ್ತ್ರ ಒಂದು ರೀತಿಯಲ್ಲಿ ವಸ್ತು ವಿಜ್ಞಾನ. ಮನುಷ್ಯ ಜೀವನಕ್ಕೆ ಆಗತ್ಯವಾದ ವಸ್ತುಗಳ, ಜೀವಿಗಳ ಪರಿಚಯವನ್ನು ಮತ್ತು ಅವುಗಳ ವಿವಿಧ ಅಯಾಮಗಳನ್ನು ಕುರಿತ ಜ್ಞಾನವನ್ನು ಇದು ಒದಗಿಸುತ್ತದೆ. ಆಡುಗೆಯಿಂದ ಹಿಡಿದು, ಕಾವ್ಯದ ವಿವಿಧ ಪ್ರಕಾರಗಳನ್ನು ಒಳಗೊಂಡು, ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ ನಮ್ಮ ಮೇಲೆ ನಿರಂತರ ಪ್ರಭಾವವನ್ನು ಬೀರುವ ಗ್ರಹತಾರೆ ನೀಹಾರಿಕೆಗಳವರೆಗೆ ಈ ಶಾಸ್ತ್ರ ತನ್ನ ವಿರಾಟ್ ಬಾಹುಗಳನ್ನು ಚಾಚುತ್ತ ಅವುಗಳ ವಿವೇಚನೆ, ಜಿಜ್ಞಾಸೆಗಳ ಸ್ವರೂಪ ಮತ್ತು ಫಲವನ್ನು ನಮ್ಮ ಅನುಭವ ಕೋಶದಲ್ಲಿ ತುಂಬುತ್ತಾ ಹೋಗುತ್ತದೆ.

ಪಶುಪಾಲನೆಯೇ ಮುಖ್ಯವಾಗಿದ್ದ ಮಾನವನ ಆರಂಭಿಕ ಜೀವನದಲ್ಲಿ ಗೋವುಗಳ ಜೊತೆಗೆ ಕುದುರೆಗಳು ಅವನ ಸಹಚರಿಗಳಾಗಿ ಅವನ ಜೀವನಾರಂಭಕ್ಕೆ ಸಹಕಾರಿಯಾಗಿದ್ದವು. ಈ ನಿತ್ಯ ಸಹಕಾರಿಗಳ ಪೋಷಣೆ, ಪಾಲನೆಯೂ ಅವನ ಆದ್ಯ ಕರ್ತವ್ಯವಾಗಿತ್ತು. ಹೀಗಾಗಿ ಸವಾರಿ ಸರಕು ಸಾಗಣೆ, ಯುದ್ಧ, ಕೃಷಿ ಮುಂತಾದ ವೃತ್ತಿಗಳಿಗೆ ನೆರವಾಗುತ್ತಿದ್ದ ಕುದುರೆಗಳ ಬಗೆಗಿನ ಆರೋಗ್ಯ ಮತ್ತು ಇತರ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮನುಷ್ಯನಿಗೆ ಆತ್ಯಗತ್ಯವಾಗಿತ್ತು. ಕುದುರೆಯ ದೇಹ, ಮನಸ್ಸು, ಆಹಾರ, ಆರೋಗ್ಯ, ವೈದ್ಯ, ನಿಯಂತ್ರಣ ಮುಂತಾದವುಗಳ ಲಕ್ಷಣಗಳನ್ನು ಮತ್ತು ಅವುಗಳಿಗೆ ಬಾಧೆಯುಂಟಾದಾಗ ನಡೆಸಬೇಕಾದ ಔಷಧೋಪಚಾರ ಮುಂತಾದ ಪರಿಹಾರ ಕ್ರಮಗಳನ್ನು ಅವನು ಅನುಭವದಿಂದ ಅರಿತುಕೊಳ್ಳತೊಡಗಿದ. ಈ ಅನುಭವ ವಿಸ್ತಾರವಾಗುತ್ತ, ವೈವಿಧ್ಯಮಯವಾಗುತ್ತ ನಡೆದು ಅದು ಒಂದು ಶಿಸ್ತಿನ ಚೌಕಟ್ಟಿನಲ್ಲಿ ಅಳವಟ್ಟಾಗ ಶಾಸ್ತ್ರವೆನಿಸಿಕೊಂಡಿತು. ಪ್ರಾಚೀನ ಸಂಸ್ಕೃತಿಯಲ್ಲಿ ಈ ಅಶ್ವಶಾಸ್ತ್ರವನ್ನು ಕುರಿತ ತಜ್ಞರು ರಾಜಾಸ್ಥಾನಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಇರುತ್ತಿದ್ದರು. ಪುರಾಣದ ನಳಮಹರಾಜ ಅಶ್ವಶಾಸ್ತ್ರ ಪ್ರವೀಣನಾಗಿದ್ದನೆಂದು ಹೇಳಲಾಗಿದೆ. ಹೀಗೆ ಪರಂಪರಾಗತವಾಗಿ ಬಂದ ಕುದುರೆಗಳನ್ನು ಕುರಿತ ಶಾಸ್ತ್ರೀಯವಾದ ವಿವೇಚನೆಯೇ ‘ಹಯಶಾಸ್ತ್ರ’. ಇಂಥ ಶಾಸ್ತ್ರ ಕೆವಲ ಜ್ಞಾನವರ್ಧಕ ಮಾತ್ರವಾಗಿರದೆ ಲೋಕೋಪಕಾರದ ಆಂಗವೂ ಆಗಿತ್ತೆಂಬುದನ್ನು ಸ್ಮರಿಸಬೇಕು. ವೈದ್ಯ ವಿಜ್ಞಾನ, ವಿಶೇಷವಾಗಿ ಪಶು ವೈದ್ಯವಿಜ್ಞಾನ, ಇಂದು ಪ್ರವರ್ಧಮಾನವಾಗಿದ್ದರೂ ಪ್ರಾಚೀನ ಜ್ಞಾನದ ನಿಧಿಯಾಗಿ ಇನ್ನೂ ಉಳಿದುಕೊಂಡು ಬಂದಿರುವ ಪಶು ಸಂಬಂಧಿಯಾದ ಆಕರಗಳನ್ನು ತೌಲನಿಕವಾಗಿ ಆಭ್ಯಾಸ ಮಾಡುವ ಮೂಲಕ ಪಾಶ್ಚಾತ್ಯ ಪಶು ವೈದ್ಯಶಾಸ್ತ್ರದ ಕೆಲವು ಕೊರತೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಪ್ರಾಚೀನ ಶಾಸ್ತ್ರ ಗ್ರಂಥಗಳ ಸಂಗ್ರಹ, ಸಂಪಾದನೆ ಮತ್ತು ವ್ಯಾಖಾನಗಳ ಅಗತ್ಯ ಇಂದೂ ಕೂಡ ಇದೆ. ಪ್ರಾಚೀನ ಜ್ಞಾನ ಪರಂಪರೆಯ ಬೇರುಗಳ ಶೋಧನೆಯನ್ನು ತನ್ನ ಮುಖ್ಯ ಗುರಿಗಳಲ್ಲಿ ಒಂದಾಗಿ ಸ್ವೀಕರಿಸುವ ಕನ್ನಡ ವಿಶ್ವವಿದ್ಯಾಲಯ ಈ ಬಗೆಯ ಕೃತಿಗಳ ಶೋಧನೆ ಮತ್ತು ಸಂಶೋಧನೆಗಳ ಬಗೆಗೂ ಆದ್ಯ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿ “ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ” ಗಮನಾರ್ಹವಾಗಿದೆ.

ಈ ಹಯರತ್ನ ಶ್ರೇಣಿ ಎಂಬ ಕೃತಿ ಹಿರಿಯಣ್ಣ ಕವಿಯಿಂದ ರಚಿತವಾದದ್ದು. ಈ ವಿಶಿಷ್ಟ ಕೃತಿಯನ್ನು ನಮ್ಮ ಹಸ್ತಪ್ರತಿ ವಿಭಾಗದ ವಿದ್ವಾಂಸರಾದ ಡಾ. ಎಫ್. ಟಿ. ಹಳ್ಳಿಕೇರಿ ಅವರು ಬಹು ಪರಿಶ್ರಮದಿಂದ ಸಂಗ್ರಹಿಸಿ, ಸಂಪಾದಿಸಿದ್ದಾರೆ. ಅವರ ದೀರ್ಘವಾದ ಪ್ರಸ್ತಾವನೆ ಈ ಕೃತಿಯ ಸ್ವರೂಪವನ್ನು, ಮುಖ್ಯ ಲಕ್ಷಣಗಳನ್ನು ಮತ್ತು ಉಪಯುಕ್ತತೆಯನ್ನು ಎತ್ತಿಹೇಳುತ್ತದೆ. ಲೇಖಕರು ಈ ಕೃತಿಯ ಸಂಪಾದನೆಯಲ್ಲಿ ತಮ್ಮ ವಿಶೇಷ ಶಾಸ್ತ್ರ ಜ್ಞಾನವನ್ನು, ಸಾಹಿತ್ಯ ಜ್ಞಾನವನ್ನು ಪ್ರಸ್ತುತಪಡಿಸಿದ್ದಾರೆ. ಪರಂಪರೆಯ ಜ್ಞಾನಕ್ಕೆ ಬೆನ್ನು ತಿರುಗಿಸುತ್ತಿರುವ ಈ ಕಾಲದಲ್ಲಿ ಈ ಕೃತಿ ನಾವು ಕಳೆದುಕೊಳ್ಳುತ್ತಿರುವ ಜ್ಞಾನದ ಶ್ರೇಷ್ಠತೆ ಮತ್ತು ಉಪಯುಕ್ತತೆ ಎಷ್ಟೆಂಬುದರ ಬಗ್ಗೆ ಕೆಲವು ಮುಖ್ಯ ಸೂಚನೆಗಳನ್ನು ನೀಡುತ್ತದೆ. ಆಧುನಿಕ ಆಶ್ವವೈದ್ಯ ವಿಜ್ಞಾನದ ಸ್ವರೂಪ ಮತ್ತು ಚಿಕಿತ್ಸಾ ಕ್ರಮಗಳನ್ನು ಈ ಕೃತಿಯ ವಿವರಗಳೊಡನೆ ತೌಲನಿಕವಾಗಿ ವಿಶ್ಲೇಷಿಸಿ, ನೋಡುವುದು ಮತ್ತು ಪ್ರಾಯೋಗಿಕವಾಗಿ ಪರಿಷ್ಕರಿಸುವುದು ಸಾಧ್ಯವಾದಲ್ಲಿ ಈ ಪರಂಪರಾಗತ ಜ್ಞಾನದಿಂದ ಆಧುನಿಕ ಬದುಕಿಗೆ ಸಂದಾಯವಾಗಬಹುದಾದ ಅನುಕೂಲಗಳ ಪ್ರಮಾಣ ಹೆಚ್ಚುತ್ತದೆಂದು ಭಾವಿಸಿದ್ದೇನೆ. ಇಂಥದೊಂದು ವಿಶಿಷ್ಟ ಹಸ್ತಪ್ರತಿಯನ್ನು ಶ್ರೀ ಗುರುನಾಥ ಸ್ವಾಮಿ ಅವರು ನಮ್ಮ ವಿಶ್ವವಿದ್ಯಾಲಯಕ್ಕೆ ನೀಡುವ ಮೂಲಕ ತಮ್ಮ ಜ್ಞಾನಪ್ರೀತಿಯನ್ನು ಮೆರೆದಿದ್ದಾರೆ. ಬೆಳಕನ್ನೇ ಕಾಣದೆ ಮನೆ ಮನೆಗಳ ಕತ್ತಲಲ್ಲಿ ಕೊಳೆಯುತ್ತಿರುವ, ಹುಳುಗಳಿಗೆ ಆಹಾರವಾಗುತ್ತಿರುವ ಹಸ್ತಪ್ರತಿಗಳನ್ನು ಅದರ ಒಡೆಯರು ಔದಾರ್ಯದಿಂದ ದಾನ ಮಾಡಿದಲ್ಲಿ ನಮ್ಮ ಪ್ರಾಚೀನ ಜ್ಞಾನ ಪರಂಪರೆಯ ವಸ್ತು ನಿಷ್ಠ ವಿಶ್ಲೇಷಣೆಗೆ ಮತ್ತು ರಕ್ಷಣೆಗೆ ಅನುಕೂಲವಾಗುತ್ತದೆ. ಈ ಹಸ್ತಪ್ರತಿಯನ್ನು ಶೋಧಿಸಿ, ಪರಿಶ್ರಮದಿಂದ ಸಂಪಾದಿಸಿಕೊಟ್ಟಿರುವ ಡಾ. ಎಫ್. ಟಿ. ಹಳ್ಳಿಕೇರಿ ಅವರಿಗೆ ವಿಶ್ವವಿದ್ಯಾಲಯದ ಪರವಾಗಿ ಆಭಿನಂದನೆಗಳು ಸಲ್ಲುತ್ತವೆ.

ಡಾ. ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಯವರು