ಕೊಪ್ಪಳ ಜಿಲ್ಲೆಯ ಮುದ್ದಾಬಳ್ಳಿ ಗ್ರಾಮದ ಶ್ರೀ ಶೇಷೆಂದ್ರಾಚಾರ್ ಅವರ ವಾರಸುದಾರರು ಕಳೆದ ಎಂಬತ್ತು ವರ್ಷಗಳಿಂದ ವಿವಿಧ ಬಗೆಯ ಹಸ್ತಪ್ರತಿಗಳನ್ನು ಸಂರಕ್ಷಿಸಿಕೊಂಡು ಬಂದವರು. ಇವರು ಶೀಮದ್ಧಾನೆಗುಂದಿ ಸಂಸ್ಥಾನ ಸರಸ್ವತಿ ಪೀಠ, ಏಕದಂಡಗಿ ಮಠದ ಪೀಠಾಧಿಪತಿಗಳಾಗಿದ್ದರು. ಪಾಂಚಾಳ ಸಮಾಜದ ಗುರುಗಳಾದ ಶೇಷೆಂದ್ರಾಚಾರ್ ಅವರು ಮೊಮ್ಮಗನಾದ ಶೀ ಗುರುನಾಥಸ್ವಾಮಿ ಅವರು ಸಂಸ್ಕೃತಿ ಮೇಲಿನ ಪ್ರೀತಿಯಿಂದಾಗಿ ಪರಂಪರಾನುಗತವಾಗಿ ಬಂದ ಹಸ್ತಪ್ರತಿಗಳನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಕೊಂಡು ಬಂದವರಾಗಿದ್ದಾರೆ. ನಾನು ಮತ್ತು ಸಹೋದ್ಯೋಗಿ ಮಿತ್ರ ಡಾ. ಕೆ. ರವೀಂದ್ರನಾಥ ಅವರು ವಿಭಾಗದ ವತಿಯಿಂದ ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಮುದ್ದಾಬಳ್ಳಿಗೆ ಹೋದಾಗ ಶ್ರೀಯುತರು ನಮ್ಮನ್ನು ಅತ್ಯಂತ ವಿಶ್ವಾಸದಿಂದ ಅತಿಥಿ ಸತ್ಕಾರ ನೀಡಿ, ತಮ್ಮ ಅಧೀನದಲ್ಲಿದ್ದ ಹಸ್ತಪ್ರತಿಗಳೆಲ್ಲವನ್ನು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರಕ್ಕೆ ದಾನವಾಗಿ ನೀಡಿದರು. ಅವುಗಳನ್ನೆಲ್ಲ ಪರಿಶೀಲಿಸುವಾಗ ಪ್ರಸ್ತುತ ಹಿರಿಯಣ್ಣ ಕವಿಯ ಹಯರತ್ನಶ್ರೇಣಿ ಎಂಬ ಅಪ್ರಕಟಿತ ಕೃತಿಯೊಂದು ಶೋಧವಾಯಿತು. ಶ್ರೀ ಗುರುನಾಥಸ್ವಾಮಿ ಅವರು ತಮ್ಮಲ್ಲಿದ್ದ ಹಸ್ತಪ್ರತಿ ಸಂಗ್ರಹವನ್ನು ತೋರಿಸದೆ ಇದ್ದರೆ ಈ ಕೃತಿ ಬೆಳಕಿಗೆ ಬರುತಿರಲಿಲ್ಲವೆನೋ. ಇದಕ್ಕೆ ಮೂಲ ಕಾರಣಕರ್ತರಾದ ಶ್ರೀ ಗುರುನಾಥಸ್ವಾಮಿ ಅವರ ಔದಾರ್ಯಕ್ಕೆ ಕೃತಜ್ಞತೆಗಳು.

ಅಶ್ವಶಾಸ್ತ್ರ ಕುರಿತ ಕೃತಿಗಳು ಪ್ರಕಟವಾದುದು ತುಂಬ ಕಡಿಮೆ. ಹೀಗಿದ್ದಾಗ ಈ ಕೃತಿಯನ್ನು ಪರಿಷ್ಕರಿಸಿ ಪ್ರಕಟಿಸಬೇಕೆಂದು ಯೋಚಿಸಿದೆನು. ಈ ಕಾರ್ಯಕ್ಕೆ ಆಡಳಿತಾತ್ಮಕ ಅನುಮತಿ ನೀಡಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಾಳಾದ ಡಾ. ಎಚ್. ಜೆ. ಲಕ್ಕಪ್ಪಗೌಡ, ಮಾನ್ಯ ಕುಲಸಚಿವರಾದ ಡಾ. ಕೆ. ವಿ. ನಾರಾಯಣ, ಅಧ್ಯಯನಾಂಗದ ನಿರ್ದೇಶಕರಾದ ಡಾ. ಕರೀಗೌಡ ಬೀಚನಹಳ್ಳಿ, ಪ್ರಕಟನೆಯ ಕಾರ್ಯದಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪ್ರಸರಾಂಗದ ನಿರ್ದೇಶಕರಾದ ಡಾ. ಹಿ. ಚಿ. ಬೋರಲಿಂಗಯ್ಯ, ಹಸ್ತಪ್ರತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಪ್ರಕಟನೆಗೆ ಶಿಫಾರಸ್ಸು ಮಾಡಿದ ಹಸ್ತಪ್ರತಿ ತಜ್ಞರಾದ ಶ್ರೀ ಎಸ್. ಶಿವಣ್ಣ, ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ, ಹಸ್ತಪ್ರತಿ ಸಂಗ್ರಹಕಾರ್ಯದಲ್ಲಿ ನೆರವಾದ ಸಹೋದ್ಯೋಗಿ ಮಿತ್ರ ಡಾ. ಕೆ. ರವೀಂದ್ರನಾಥ ಪದಕೋಶವನ್ನು ಸಿದ್ಧಪಡಿಸುವಲ್ಲಿ ನೆರವು ನೀಡಿದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಇವರೆಲ್ಲರಿಗೂ ಕೃತಜ್ಞತೆಗಳು.

ಪುಟ ವಿನ್ಯಾಸವನ್ನು ರೂಪಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಸುಜ್ಞಾನ ಮೂರ್ತಿ, ಅಂದವಾದ ಮುಖಪುಟ ರಚಿಸಿದ ಕಲಾವಿದ ಕೆ. ಕೆ. ಮಕಾಳಿ, ಅಚ್ಚುಕಟ್ಟಾಗಿ ಡಿ. ಟಿ. ಪಿ. ಕಾರ್ಯ ಪೂರೈಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀಮತಿ ಎ. ನಾಗಮಣಿ ಇವರೆಲ್ಲರ ಸಹಾಯವನ್ನು ಪ್ರೀತಿಯಿಂದ ನೆನೆಯುತ್ತೇನೆ.

ಡಾ. ಎಫ್. ಟಿ. ಹಳ್ಳಿಕೇರಿ