ಮಾನವನ ಕರ್ತವ್ಯಗಳಲ್ಲಿ ಯಾವುದಾದರೊಂದು ವಿಷಯವನ್ನು ಕುರಿತು ನಿರ್ದಿಷ್ಟವಾಗಿ ಅದರ ಸ್ವರೂಪ, ಗುಣಲಕ್ಷಣಗಳ ಮಹತ್ವವನ್ನು ವಿವರಿಸುವುದಕ್ಕೆ ಶಾಸ್ತ್ರವೆನ್ನುತ್ತೇವೆ. ಅಂದರೆ ಶಾಸನ (ಕಟ್ಟಳೆ) ಮಾಡುವುದೇ ಶಾಸ್ತ್ರವೆಂದರ್ಥ. ಧಾರ್ಮಿಕ ವಿಷಯ, ತತ್ತ್ವ ಸಿದ್ಧಾಂತಗಳಲ್ಲದೆ, ಲೌಕಿಕ ಬದುಕಿಗೆ ಆಗತ್ಯವಾಗಿರುವ ಮಾಹಿತಿಯನ್ನು ಕ್ರಮಬದ್ಧವಾಗಿ ಬರೆದ ಪ್ರಯಾಣ ಗಂಥಗಳಿಗೆ ಶಾಸ್ತ್ರಗ್ರಂಥಗಳೆಂದು ಕರೆಯಬಹುದು. “ಶಬ್ದಾಗಮ ಯುಕ್ತಾಗಮ ಪರಮಾಗಮ ವಿಷಯಾಣಾಂ ಬಹುನಾಂ ಗ್ರಂಥನಾಮಾಪಿ ಭಾಷಾ ಕೃತಾನುಮುಪಲಭ್ಯ ಮಾನಾತ್ವಾತ್” ಎಂಬ ಭಟ್ಟಾಕಳಂಕನ ಮಾತನ್ನಾಗಲಿ, “ಆರಯೆ ತಚ್ಛಾಸ್ತ್ರವ್ಯಹಾರ ಜ್ಞಾನರ್ಥಮಾಗಿ ಪೇಳ್ಪಡೆಗುಂ” ಎಂಬ ಕೇಶಿರಾಜನ ಹೇಳಿಕೆಯನ್ನಾಗಲಿ ಗಮನಿಸಿದಾಗ ಪ್ರಾಚೀನ ಕಾಲದಿಂದಲೂ ಕನ್ನಡಲ್ಲಿ ಶಾಸ್ತ್ರಗ್ರಂಥಗಳು ವಿಫುಲವಾಗಿ ರಚನೆಗೊಂಡಿರುವುದು ವೇದ್ಯವಾಗುತ್ತದೆ.

ಜನ ಬದುಕಬೇಕೆಂಬ ಉದ್ದೇಶದಿಂದ ನಮ್ಮ ಕವಿಗಳು ಕಾವ್ಯರಚನೆಗೆ ತೊಡಗಿದಂತೆ, ಶಾಸ್ತ್ರಕಾರರು ಇದೇ ಉದ್ದೇಶವನ್ನಿರಿಸಿಕೊಂಡಿದ್ದರು. ಆಧುನಿಕ ಸೌಲಭ್ಯಗಳಿಲ್ಲದ ಅಂದಿನ ದಿನಮಾನಗಳಲ್ಲಿ ತಮ್ಮದೇ ಆದ ಅನುಭವಗಳ ಮೂಲಕ ಜ್ಞಾನಶಾಖೆಯನ್ನು ಸೃಷ್ಟಿಸಿ ಕೊಂಡಿದ್ದ ಇವರು ಬುದ್ಧಿಯ ವಿಕಾಸಕ್ಕೆ, ಆರೋಗ್ಯಪೂರ್ಣ ಸಮಾಜಕ್ಕೆ ಸಾಕಷ್ಟು ಪೋಷಣೆ ನೀಡಬಲ್ಲಂತಹ ಸೂತ್ರಬದ್ಧವಾದ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳು ಲೌಕಿಕ ಮತ್ತು ಆಗಮಿಕ ಎಂಬೆರೆಡು ರೀತಿಯಲ್ಲಿ ಪರಂಪರಾನುಗತವಾಗಿ ಬೆಳೆದು ಬಂದಿವೆ. ನಕ್ಷತ್ರ ಫಲ, ಹೋರಾಶಾಸ್ತ್ರ, ಪ್ರಶ್ನಾಶಾಸ್ತ್ರ, ಮೊದಲಾದವುಗಳು ಗ್ರಹ, ನಕ್ಷತ್ರಗಳ ಚಲನೆ, ಅವುಗಳ ಸ್ಥಾನ ಪರಿಣಾಮಗಳನ್ನು ತಿಳಿಸುವ ಜೋತಿಷ್ಯಶಾಸ್ತ್ರಗಳಾಗಿವೆ. ಮಳೆ-ಮಳೆ ಕುರಿತಾದ ರಟ್ಟಮತ, ಲೋಕ ವ್ಯವಹಾರ ತಿಳಿಸುವ ಸಾಂಘೀಕಶಾಸ್ತ್ರ ಮಲ್ಲವಿದ್ಯೆ, ಧನುರ್ವಿದ್ಯೆ, ಕತ್ತಿವರಸೆ ತಿಳಿಸುವ ಖಡ್ಗಶಾಸ್ತ್ರ, ಲೈಂಗಿಕ ಜ್ಞಾನ ಕುರಿತಾದ ಕಾಮಶಾಸ್ತ್ರ, ಅಡುಗೆ ಕಲೆ ಕುರಿತಾದ ಸೂಪಶಾಸ್ತ್ರ, ಆನೆಗಳ ಲಕ್ಷಣ, ಸ್ವರೂಪ, ಅವುಗಳಿಗೆ ಬರುವ ರೋಗಗಳ ವಿವರ, ಚಿಕಿತ್ಸಾ ವಿಧಾನ, ಪ್ರಯೋಜನವನ್ನು ತಿಳಿಸುವ ಗಜಶಾಸ್ತ್ರ, ಇವುಗಳ ಸಾಲಿಗೆ ಸೇರುವ ಮತ್ತೊಂದು ಶಾಸ್ತ್ರವಾಗಿದೆ. ಆಶ್ವಶಾಸ್ತ್ರ, ಕುದುರೆಗಳ ಶಕ್ತಿ, ಸ್ವಭಾವ, ಪ್ರಕಾರಗಳು, ಅವುಗಳಿಗೆ ಬರುವ ರೋಗಾದಿಗಳ ಲಕ್ಷಣ ಮತ್ತು ಚಿಕಿತ್ಸೆಯ ವಿಧಾನಗಳನ್ನು ವಿವರಿಸುವ ಶಾಸ್ತ್ರ, ಇದಾಗಿದೆ.

ವೇದಗಳ ಕಾಲದಿಂದಲೂ ಭಾರತೀಯರಿಗೆ ಕುದುರೆಗಳು ಬಹು ಪ್ರಯೋಜನಕಾರಿ ಯಾಗುತ್ತಾ ಬಂದಿವೆ. ಆಶ್ವಮೇಧದ ಉಲ್ಲೇಖಗಳೇ ಇದಕ್ಕೆ ನಿದರ್ಶನವಾಗಿದೆ. ಯುದ್ಧದಲಿ ವೈರಿಗಳನ್ನು ಸದೆಬಡಿಯಲು ಆಶ್ವಪಡೆಯೂ ಮುಖ್ಯವಾಗಿ ಇರಬೇಕಾಗುತ್ತಿತ್ತು. ಇದಕ್ಕಾಗಿ ರಾಜನು ತನ್ನ ಸಾಮ್ರಾಜ್ಯದ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಮೀಸಲಾಗಿಡುತ್ತಿದ್ದನು. ಅಶ್ವಪಡೆಯ ಮುಖ್ಯಸ್ಥನಿಗೆ ೮೦೦೦ ಪಣಗಳು, ಮೇಲ್ವಿಚಾರಕನಿಗೆ ೪೦೦೦ ಪಣಗಳು ಹಾಗೂ ಅವುಗಳಿಗೆ ಔಷಧೋಪಚಾರ ಕೊಡುವಂಥ ವೈದ್ಯನಿಗೆ ೨೦೦೦ ಪಣಗಳನ್ನು ವೇತನರೂಪದಲ್ಲಿ ನೀಡುತ್ತಿದ್ದ ಬಗೆಗೆ ಶಾಸನಗಳು ತಿಳಿಸುತ್ತವೆ. ಅಲೆಮಾರಿ ಜೀವನವನ್ನು ನಡೆಸುವ ಸಂದರ್ಭದಲ್ಲಿ ಸ್ಥಳದಿಂದ ಸ್ಥಳಕ್ಕೆ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯಲು ಕುದುರೆಗಳು ಬಹುಮುಖ್ಯ ಸಾರಿಗೆ ಸಾಧನಗಳಾಗಿದ್ದವು. ಅಷ್ಟೇ ಏಕೆ ಈಗಲೂ ಕುರಿಕಾಯುವ ಕುರುಬರು ಮತ್ತಿತರೆ ಅಲೆಮಾರಿ ಜನಗಳು ಕುದುರೆಗಳನ್ನು ಸಾಕುವ ಪರಿಪಾಠವನ್ನಿಟ್ಟು ಕೊಂಡಿರುವುದು ಕಂಡುಬರುತ್ತದೆ. ಹೀಗಾಗಿ ಇವುಗಳನ್ನು ಪೋಷಿಸುವ, ಪಳಗಿಸುವ, ಆರೈಕೆ ಮಾಡುವ ವಿಧಾನಗಳನ್ನು ಕುರಿತಂತೆ ಶಾಸ್ತ್ರೋಕ್ತವಾದ ಕೃತಿಗಳು ಬಹು ಹಿಂದಿನಿಂದಲೂ ರಚನೆಗೊಳ್ಳುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ರೇವಂತ, ಸಿಂಹದತ್ತ ಹಾಗೂ ಶಾಲಿ ಹೋತ್ರ ಮುನಿಯು ಪ್ರಮುಖ ಅಶ್ವಶಾಸ್ತ್ರಜ್ಞರೆಂದು ಗುರುತಿಸಲ್ಪಟ್ಟಿದ್ದಾರೆ. ಕುದುರೆಗಳ ಬಗೆಗೆ ಅಧಿಕೃತ ಗ್ರಂಥವನ್ನು ಮೊದಲಿಗೆ ಬರೆದವನು ಶಾಲಿಹೊತ್ರಮುನಿ. ಈತನ ಹಯ ಆಯುರ್ವೇದವು ಹನ್ನೆರಡು ಸಾವಿರ ಶ್ಲೋಕಗಳನ್ನೊಳಗೊಂಡ ಬೃಹದ್ಗ್ರಂಥ.

ಕನ್ನಡದಲ್ಲಿ ಆಶ್ವಶಾಸ್ತ್ರ :

ಶಾಲಿಹೋತ್ರನನ್ನು ಅನುಸರಿಸಿ ಕನ್ನಡದಲ್ಲಿ ಅನೇಕ ಕೃತಿಗಳು ಹುಟ್ಟಿಕೊಂಡಿವೆ. ೧೦೨೫ರಲ್ಲಿದ್ದ ಮದನತಿಲಕದ ಕರ್ತೃ ಚಂದ್ರರಾಜನು

            ಸಕಲವ್ಯಾಕರಣಾರ್ಥಶಾಸ್ತ್ರ ಗಣಿತಾಲಂಕಾರ ಸತ್ಕಾವ್ಯ ನಾ
            ಟಕ ವಾತ್ಸ್ಯಾಯನ ನೃತ್ಯ ಗೀತ ಹಯಶಾಸ್ತ್ರದ್ವೈತಗಾಂಧರ್ವ ತಾ
ರ್ಕೀಕವಿಂದ್ರಾಗಮ ವೈದ್ಯ ಶಕುನೋದ್ಯದ್ ಹೃದ್ಯ ವಿದ್ಯಾಕದಂ
ಬಕನುಂ ಚಂದ್ರಕವೀಂದ್ರನೋರ್ವನೆವಲ್ಲಂ ಬಲ್ಲಂ ಪೆಱರ್ಬಲ್ಲರೇ
|| [1]

ಎಂದು ಹೇಳಿಕೊಂಡಿದ್ದಾನೆ. ಇದರಿಂದಾಗಿ ಈತ ಕನ್ನಡದ ಪ್ರಪ್ರಥಮ ಆಶ್ವಶಾಸ್ತ್ರಕಾರನೆಂದು ಹೇಳಬಹುದು. ಚಾವುಂಡರಾಯ (೧೦೫೦) ನ್ನು ತನ್ನ ಲೋಕೋಪಕಾರದಲ್ಲಿ ಕುದುರೆಯ ಲಕ್ಷಣ ಹಾಗೂ ಅವುಗಳ ವೈದ್ಯವನ್ನು ಕುರಿತು ವಿವರವಾಗಿ ತಿಳಿಸಿದ್ದಾನೆ.[2] ಪಿತ್ತ, ಕಫ, ವಾತ, ಸೆಂಬರೋಗ, ಕಾಸ, ಶೂಲೆ, ಹೊಟ್ಟೆಯುಬ್ಬರ ಅತೀಸಾರ ಮೊದಲಾದ ನಾನಾ ರೋಗಗಳಿಗೆ ಚಿಕಿತ್ಸೆಯನ್ನು ಸೂಚಿಸಿದ್ದಾನೆ. ಉದಾಹರಣೆಗಾಗಿ ಸೆಂಬರೋಗ ಹಾಗೂ ಅದಕ್ಕೆ ನೀಡುವ ಚಿಕಿತ್ಸೆಯನ್ನು ಎರಡು ಪದ್ಯಗಳಲ್ಲಿ ಕವಿ ಪರಿಣಾಮಕಾರಿಯಾಗಿ ಹೇಳುತ್ತಾನೆ:

            ಅನವರತಚ್ಛಜಳಮರಿ
ಸಿನವರ್ಣಂ ಮಾಸರವರ್ನಾಮಾಗೊಸರ್ವೊಡೆ ಮೂ
ಗಿನೊಳನಿಲ ಪಿತ್ತ ಕಫ ಸಂ
ಜನಿತಂ ತುರಗಕ್ಕೆ ಸೆಂಬಮೆಂಬುದದಕ್ಕುಂ
||

            ಸುರದಾರು ಸೈಂಧವಂ ಜಳ
ಧರಂ ಬಿಡಂ ಬೀೞಲಕ್ಕಿ ಸದ್ಯಃಕ್ಷಾರಂ
ಸುರಭಿ ಜಳಮೆಣ್ಣೆಯೆಂಬುವ
ನಿರದಟ್ಟೆಱೆ ನಸ್ಯಮಂ ಕವಿಲ್ಗುಂ ಸೆಂಬಂ
||

೧೪೦೦ರಲ್ಲಿ ಅಭಿನ್ವ ಚಂದ್ರನ ಅಶ್ವಶಾಸ್ತ್ರವು[3] ತುರಗೋ ತ್ಪತ್ತಿ, ಸರ್ವಾಂಗ ಪರೀಕ್ಷೆ, ವರ್ನಾ, ಪುಂಡ್ರ, ಸುಳಿ, ಆಯು ನಿರ್ನಾಯ, ಶರೀರ ಲಕ್ಷಣ, ಪೋಷಣ ವಿಧಿ, ನೀರಾಂಜನ ವಿಧಿ, ಅವಯವ ನಿರೂಪಣೆ, ಗುರುಶಿಷ್ಯ ಲಕ್ಷಣ, ಚಿಕಿತ್ಸಾ ಭೇದಗಳು, ವೃಣಚಿಕಿತ್ಸೆ, ಜ್ವರ, ರೋಗ ಭೇದಗಳು, ವಿಷವೈದ್ಯ ಹರೀತಕೀಕ್ರಿಯೆ ಇತ್ಯಾದಿ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಅಶ್ವಶಾಸ್ತ್ರವುಅಭಿನವಚಂದ್ರನು.

            ಅನುಪಮ ಹಯಶಾಸ್ತ್ರಾಗಮ
ವನಧಿಯೊಳಾ ಸಿಂಹದತ್ತ ಕೃತಿಲಕ್ಷಣಮಂ
ದಿನಕರತನಯನ ರೇವಂ
ತನ ಮತದಿಂ ಪೇಳ್ವೆನೆಸೆವ ಪೊಸಕನ್ನಡದಿ
|| [4]

ಸಿಂಹದತ್ತ ರೇವಂತರ ಸಂಪ್ರದಾಯದಲ್ಲಿ ಈ ಕೃತಿಯನ್ನು ರಚಿಸಿದ್ದೇನೆಂದು ಹೇಳಿಕೊಂಡಿದ್ದಾನೆ. ಆದರೆ ಇದುವರೆಗೂ ಇವರಿಬ್ಬರ ಕೃತಿಗಳು ಉಪಲಬ್ಧವಾಗಿಲ್ಲ. ಅದೇನೇ ಇರಲಿ, ಅಶ್ವಶಾಸ್ತ್ರವನ್ನು ಕುರಿತು ಪೂರ್ಣ ಪ್ರಮಾಣದ ಕೃತಿಯನ್ನು ಮೊದಲಿಗೆ ರಚಿಸಿದವನು, ಅಭಿನವಚಂದ್ರ.

ಚೌಡರಾಜನ ಸುತ ಬಾಚರಸನು ಶಾಲಿಹೋತ್ರನ ಮತ ಎಂಬ ಕೃತಿಯನ್ನು ೧೫೦೦ರಲ್ಲಿ ರಚಿಸಿದ್ದಾನೆ.[5] ಇದರಲ್ಲಿ ಹಯಚೇಷ್ಟೆ ರೂಪುದಂತ ಶ್ರವಣ ಅಕ್ಷಿ ವರ್ಣ ಸುಳಿ, ನಾಲಿಗೆ, ಗಂಧ ಶುಭಾಶುಭಗಳನ್ನು ಹೇಳಲಾಗಿದೆ. ಅಶ್ವಶಾಸ್ತ್ರವನ್ನು ಬರೆದ ಮತ್ತೊಬ್ಬ ಕವಿ ರಾಮ ಚಂದ್ರ (೧೬೨೫)[6]. ಈತ ಶಾಲಿಹೋತ್ರವನ್ನು ಅನುಸರಿಸಿ ಕೃತಿಯನ್ನು ರಚಿಸಿದ್ದೇನೆಂದು ಹೇಳಿದರೂ, ಕಾವ್ಯವನ್ನು ಪರಿಶೀಲಿಸಿದಾಗ ಅಭಿನವಚಂದ್ರನ ಆಶ್ವಶಾಸ್ತ್ರದ ಪ್ರಭಾವ ರಾಮಚಂದ್ರನ ಮೇಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದಕ್ಕೆ ಇವರಿಬ್ಬರ ಪದ್ಯಗಳು ನಿದರ್ಶನವಾಗಿವೆ.[7] ಮಲೆಯೂರಿನ ಪದ್ಮಣ ಪಂಡಿತ (೧೬೨೭) ನ ಹಯುಸಾರ ಸಮುಚ್ಚಯ ಅಥವಾ ತುರಗ ಶಾಸ್ತ್ರ ಕಂದಪದ್ಯಗಳನ್ನೊಳಗೊಂಡ ಕೃತಿ.[8] ಇದಕ್ಕೆ ‘ಚಾಮರಾಜೀಯ’ ಎಂದೂ ಕರೆಯಲಾಗುತ್ತಿದೆ. ಇವುಗಳಲ್ಲದೆ ಮಾನಪ್ರಿಯ ಶಾಲಿಹೋತ್ರನ ಅಶ್ವವೈದ್ಯಂ[9] (ಕನ್ನಡ ಟೀಕು), ಅಶ್ವವೈದ್ಯ ಸಂಗ್ರಹ[10], ಅಶ್ವಪರೀಕ್ಷೆ[11], ಅಶ್ವವೈದ್ಯ ಸಚಿತ್ರ[12] ಮೊದಲಾದ ಕೃತಿಗಳು ರಚನೆಗೊಂಡಿವೆ.

ಅಶ್ವಶಾಸ್ತ್ರ ಕೃತಿಗಳ ಪ್ರಕಟನೆ

ಕನ್ನಡ ಅಶ್ವಶಾಸ್ತ್ರ ಕೃತಿಗಳ ಸುಮಾರು ನೂರು ವರ್ಷಗಳ ಇತಿಹಾಸವಿದ್ದರೂ ಕೆಲವೇ ಕೆಲವು ಕೃತಿಗಳು ಮಾತ್ರ ಪ್ರಕಟಗೊಂಡಿದ್ದು, ಇನ್ನೂ ಹಸ್ತಪ್ರತಿಯಲ್ಲಿಯೇ ಉಳಿದು ಕೊಂಡಿರುವುದು ಗಮನಿಸತಕ್ಕ ಸಂಗತಿಯಾಗಿದೆ. ೧೯೧೬ರಲ್ಲಿ ಕೃಷ್ಣರಾಯ ಅವರು ಅಶ್ವಶಾಸ್ತ್ರ ಸಂಗ್ರಹ ಎಂಬ ಕೃತಿಯನ್ನು ಪ್ರಕಟಿಸಿದ್ದು, ಅದು ಕುದುರೆಗಳ ಕಾಲ, ಗುಣ-ಸ್ವಭಾವಗಳು, ರೋಗ-ರುಜಿನಗಳು, ಚಿಕಿತ್ಸಾ ಕ್ರಮ ಇತ್ಯಾದಿ ಸಂಗತಿಗಳನ್ನು ತಿಳಿಸಿಕೊಡುತ್ತದೆ.[13] ಇನ್ನೊಂದು ಕೃತಿ ಅಶ್ವಪರೀಕ್ಷಾ ಅಥವಾ ಶಾಲಿಹೋತ್ರ (ಕುದರೆ ಪರೀಕ್ಷಾ) ಕೃತಿಯನ್ನು ಉಪ್ಪಿನ ಚನ್ನವೀರ ಬಸಲಿಂಗಪ್ಪ ಅವರು ಪ್ರಕಟಿಸಿದ್ದಾರೆ, (ಪ್ರಕಟನ ವರ್ಷವನ್ನು ನಮೂದಿಸಿಲ್ಲ). ಇದು ಕುದುರೆಯ ಹಣೆ, ಕಿವಿ ಮುಂತಾದವುಗಳನು ಪರೀಕ್ಷಿಸುವ ವಿಧಾನಗಳನ್ನು ವಿವರಿಸುತ್ತದೆ.[14]

ಅಶ್ವಶಾಸ್ತ್ರ ಕೃತಿಗಳ ಪ್ರಕಟನೆಯಲ್ಲಿ ಅಭಿನವಚಂದ್ರನ ಅಶ್ವಶಾಸ್ತ್ರಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗುತ್ತದೆ. ಮದರಾಸು ಸರಕಾರದ ಪ್ರಾಚ್ಯಕಾವ್ಯ ಮಾಲೆಯ ಮೂಲಕ ಶ್ರೀ. ಹೆಚ್. ಶೇಷಯ್ಯಂಗಾರ್ ಅವರು ೧೯೫೦ರಲ್ಲಿ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಇದೇ ಕೃತಿಯನ್ನು ೧೯೮೭ರಲ್ಲಿ ಜಿ. ಜಿ. ಮಂಜುನಾಧನ್ ಅವರು ಆರು ಹಸ್ತಪ್ರತಿಗಳ ಸಹಾಯದಿಂದ ಸಾಸ್ತ್ರ ಶುದ್ಧವಾಗಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ವಿಸ್ತಾರವಾದ ಪ್ರಸ್ತಾವನೆಯಲ್ಲಿ ಕವಿ ವಿಚಾರ, ಗ್ರಂಥಸಾರ, ಕನ್ನಡ ಅಶ್ವಶಾಸ್ತ್ರ ಕೃತಿಗಳ ಸ್ಥೂಲವಾದ ಪರಿಚಯವನ್ನು ಮಾಡಲಾಗಿದೆ. ಅನುಬಂಧದಲ್ಲಿ ಅಶ್ವಶಾಸ್ತ್ರದ ಟೀಕು, ಶಾಲಿಹೋತ್ರನ ಮತ, ತುರಗ ಲಕ್ಷಣ (ಸದಾಶಿವ ನೀತಿಯಿಂದ) ಕೃತಿಗಳ ಪಾಠಗಳನ್ನು ಕೊಟ್ಟಿರುವುದು ಕೃತಿಯ ಅಧ್ಯಯನಕ್ಕೆ ಸಹಕಾರಿ ಯಾಗುತ್ತವೆ. ಹೀಗಾಗಿ ಅಶ್ವಶಾಸ್ತ್ರಗಳಲ್ಲಿಯೇ ಪರಿಷ್ಕರಣ, ಮರು ಪರಿಷ್ಕರಣಗೊಂಡ ಏಕೈಕ ಕೃತಿ ಇದಾಗಿದೆ. ಇವುಗಳ ಸಾಲಿಗೆ ನಾನು ಶೋಧಿಸಿದ ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ ಕೃತಿಯು ಅಶ್ವಶಾಸ್ತ್ರಕ್ಕೊಂದು ಹೊಸ ಸೇರ್ಪಡೆಯಾಗಿದೆ.

ಹಿರಿಯಣ್ಣ ಕವಿಯ ಹತರತ್ನ ಶ್ರೇಣಿ

ಹಯರತ್ನ ಶ್ರೇಣಿಯ ೭ ಸಂಧಿ ೧೪೨ ಪದ್ಯಗಳನ್ನೊಳಗೊಂಡ ಒಂದು ಕಿರು ಕೃತಿ. ೧ ರಿಂದ ೫ ಸಂಧಿಗಳು ಭಾಮಿನಿ ಷಟ್ಟದಿ, ೫ ರಿಂದ ೭ ಸಂಧಿಗಳು ವಾರ್ಧಕ ಷಟ್ಟದಿಯಲ್ಲಿವೆ. ಆರಂಭದಲ್ಲಿ ಗಣೇಶ, ಉಚ್ಚಂಗಿದುರ್ಗದ ದುರ್ಗಾಂಬಿಕೆಯನ್ನು ಮಾತ್ರ ಸ್ತುತಿಸಿ ನೇರವಾಗಿ ಕವಿ ಅಶ್ವಶಾಸ್ತ್ರ ನಿರೂಪಣೆಗೆ ತೊಡಗುತ್ತಾನೆ. ತನ್ನ ಇತಿವೃತ್ತದ ಬಗೆಗೆ ಕವಿಯು ಹೇಳಿ ಕೊಂಡಿರುವುದು ತುಂಬ ಕಡಿಮೆ. ಪ್ರತಿಸಂಧಿಯ ಕೊನೆಯಲ್ಲಿ –

            “ಧರೆಗಧಿಕವುತ್ಸಂಗಿ ಗಿರಿಯಲಿ
ಮೆರೆವ ದುರ್ಗಾಂಬಿಕೆಯ ಸಿರಿಪದ
ಸರಸಿಜ ಭ್ರಮರಾಯಮಾನ ಕವೀಂದ್ರ ಹಿರಿಯಣ್ಣ
ವಿರಚಿಸಿದ ಹಯರತ್ನ ಶ್ರೇಣಿಯ
ಲೊರದ…….”
(೧-೨೯)

ಎಂದು ದುರ್ಗಾಂಬಿಕೆಯ ಪರಮಭಕ್ತನೆಂದು ಕೊಂಡಾಡಿದ್ದಾನೆ.

ಕೃತಿಯ ಕೊನೆಯ ಪದ್ಯದಲ್ಲಿ ಮಾತ್ರ ತನ್ನ ಆಶ್ರಯದಾತನನ್ನು, ಕೃತಿರಚನೆ ಮಾಡಿದ ಕಾಲವನ್ನು ನಮೂದಿಸಿದ್ದಾನೆ. ಅದು ಹೀಗಿದೆ :

            ಶಾಲಿವಾಹನ ಶಕವು ಸಂದೊಂದು ಸಾವಿರದ
ಏಳುನೂರು ವರುಷಕ್ಕೆ ವಿಳಂಬಿ ಸಂವತ್ಸರದ ವನ
ಮಾಲೆ ಪೆಸರಾಂತ ಮಾಸ ಶುಕ್ಲಪಂಚಮಿಯ ಭೃಗುವಾರಲೀಕ್ಷಿತಿಯೊಳೊ
ಲೀಲೆಮಿಗೆ ಹರಪುರವನಾಳ್ದ ಬಾಗುಳಿಯ ಭೂ
ಪಾಲಮಣಿ ಬಸವೇಂದ್ರ ನೃಪಾಲ ಪುರೋಹಿತಂ
ಪೇಳಿದ ಹಯರತ್ನ ಶ್ರೇಣಿಯೆಂಬ ತುರಗಲಕ್ಷಣರ್ಥಿಯಿಂದಾ
|| (೭-೫೭)

ಅಂದರೆ ೧೬೯೦ರಿಂದ ೧೭೦೯ರ ಅವಧಿಯಲ್ಲಿದ್ದ ಹರಪನಹಳ್ಳಿ ಪಾಳೆಯಗಾರ ಬಾಗುಳಿಯ ಬಸಪ್ಪನಾಯಕನಲ್ಲಿ ಪುರೋಹಿತನಾಗಿದ್ದವನು ಹಿರಿಯಣ್ಣ ಕವಿ. ಈತ ೧೭೦೦ (ಕ್ರಿ. ಶ.೧೭೭೮) ರಲ್ಲಿ ಕುದುರೆಗಳ ಲಕ್ಷಣ, ಸ್ವರೂಪ, ಪ್ರಕಾರ, ಅವುಗಳಿಗೆ ಬರುವ ಕಾಯಿಲೆಗಳು, ಔಷಧಿಗಳು ಇತ್ಯಾದಿ ಸಂಗತಿಗಳನ್ನು ತಿಳಿಸುವ ಹಯರತ್ನ ಶ್ರೇಣಿಯೆಂಬ ಹೆಸರನ್ನುಳ್ಳ ಅಶ್ವಶಾಸ್ತ್ರವನ್ನು ರಚನೆ ಮಾಡಿದ್ದಾನೆಂಬುದು ಮೇಲಿನ ಪದ್ಯದಿಂದ ತಿಳಿದು ಬರುತ್ತದೆ. ಇಷ್ಟನ್ನು ಬಿಟ್ಟರೆ ಕವಿಯ ಬಗೆಗೆ ಮತ್ತಾವುದೇ ಮಾಹಿತಿ ನಮಗೆ ದೊರೆಯುವುದಿಲ್ಲ.

ಕುದುರೆಗಳ ಲಕ್ಷಣ, ವಂಶ, ಬಣ್ಣ, ಜಾತಿ, ಅಂಗಾಂಗಗಳ ಬಗೆಗೆ ಮೊದಲನೆಯ ಸಂಧಿಯಲ್ಲಿ ನಿರೂಪಿಸುತ್ತಾ, ಅವುಗಳ ದುರ್ಲಕ್ಷಣ ವಿಚಾರಗಳನ್ನು ಸಹ ಕವಿ ಹೇಳಿದ್ದಾನೆ. ಶೃಂಗಿ, ವಾಳಾಂಜನಿಕ, ರಳಿಕುಚಾಂಗಿ, ಕಾಳಮುಖಿ, ವಿಕಾಳಿ, ಕೃಶಾಂಗಿ, ಪಂಚಖರಿ, ತ್ರಿಕರ್ಣಿ, ವಿದಿಕ್‌ ಮತ್ತು ಶೃತಿಗಳೆಂಬ ಹತ್ತು ಬಗೆಯ ಕುದುರೆಗಳು ದೇಶಾಧಿಪತಿಗಳ ಭಂಗವನ್ನು ಕೆಡಿಸುವಂಥವುಗಳು. ಮೂರು ಲೋಕದ ಜನರಿಗೆ ಉಪಕಾರವಾಗುವಂಥ ಕುದುರೆಗಳ ಲಕ್ಷಣಗಳನ್ನು ಗ್ರಂಥರೂಪದಲ್ಲಿ ವಿವರಿಸಿದ ಶಾಲಿಹೋತ್ರನನ್ನು ಅನುಸರಿಸಿ ನಾನು ಅಶ್ವಶಾಸ್ತ್ರವನ್ನು ವಿಸ್ತರಿಸಿ ವಿವರಿಸುತ್ತೇನೆಂದು ಕವಿ ಹೇಳಿಕೊಂಡಿದ್ದಾನೆ. ಸುಳಿಗಳ ಬಗೆಗೆ ಒಂದು ಕಡೆ ಉಲ್ಲೇಖಿಸುತ್ತಾ –

            “ಆವ ಕುದುರೆಯ ಬಾಲದ್ಹಣೆಗಳ
ಠಾವಿನಲಿ ಸುಳಿಯಿರಲು ಒಡೆಯಗೆ
ಸಾವು ಕೇಡಹುದು …….”
(೧- ೧೩)

            “ಒಂದು ಭಾಗದಲ್ಲಿದ್ದ ಸುಳಿ ಮ
ತ್ತೊಂದು ಭಾಗದಲಿಲ್ಲದಿರ್ದೊಡೆ
ಸಾದ್ಯವದು ……..”
(೧-೨೮)

ಎಂದು ಸುಳಿಯಿಂದ ಒಡೆಯಾನಾಗುವ ದುರ್ಲಕ್ಷಣಗಳನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಉತ್ತಮ ಸುಳಿಯಿಂದ ಒಡೆಯಾನಿಗಾಗುವ ಲಾಭಗಳನ್ನು ಎರಡನೆಯ ಸಂಧಿಯು ವಿಶ್ಲೇಷಿಸುತ್ತದೆ.

            ತಲೆ ಲಲಾಟಗಳುದರುರಸ್ಥಳ
ಗಳವಿವೈದರ ಮುಂದುಗಡೆಯಲಿ
ಸುಳಿಯೆರಡು ನಾಲ್ಕಿರಲು ಜಯಮಂಗಳನು ತಾನೆನಿಕುಂ
ಘಳಿಲನುತ್ಸಹ ವೇದವಾದ್ಯಂ
ಗಳನು ತಾನೇ ನಡೆಸಿಕೊಂಬದು
ತಿಳಿವುದೀ ಹಯ ವಿಜಯಮಾಳ್ಪುದು ರಾಜಯೋಗಮದೂ
|| (೨-೧)

ಅಲ್ಲದೆ ಕುದುರೆಗೆ ಕಂಠಾಭರಣವಿದ್ದರೆ ಯುದ್ಧದಲ್ಲಿ ಒಡೆಯರು ಜಯವನ್ನು ಹೊಂದುತ್ತಾನೆ; ಮಕ್ಕಳಾಗುತ್ತಾರೆ. ದೇವ ಮಣಿಯಿರಲು ಭಯ ನಿವಾರಣೆಯಾಗಿ ಭಾಗ್ಯೋದಯವು ಕೈ ಸೇರುವುದು. ಆಯುಷ್ಯ ರೇಕೆಯ ಲಕ್ಷಣವನ್ನು ತಿಳಿಸುತ್ತಾ, ಕೋಳಿ ಹಕ್ಕಿಯ ಕಾಲಿನ ಉಗುರುಗಳ ಹೋಲಿಕೆಯಂತೆ ಸುಳಿ ರೇಖೆಯಿದ್ದರೆ ಕುದುರೆ ಬಹುಕಾಲ ಬಾಳುತ್ತದೆ. ಧನುರಾ ಕೃತಿಯ ರೇಖೆಯಿದ್ದರೆ ದೀರ್ಘಾಯುಷ್ಯವಾಗಿರುತ್ತದೆ.

ಕುದುರೆಗಳನ್ನು ವಾತ, ಪಿತ್ತ, ಶ್ಲೇಷ್ಮ ಎಂದು ಪ್ರಕೃತಿಗನುಗುಣವಾಗಿಯೂ, ಸತ್ವ, ರಜ, ತಮ ಎಂದು ಗುಣಗಳಿಗೆ ಅನುಗುಣವಾಗಿಯೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವರ್ಣಗಳಿಗನುಗುಣವಾಗಿಯೂ ವಿಂಗಡಿಸಲಾಗಿದೆ. ಉದಾಹರಣೆಗೆ.

            “ನೋಡುತಿಹುದು ವಿಶಾಲನಯನದಿ
ಓಡುತೋಡುತ ನಿಲ್ಲುವದು ನೆಲ
ಗಾಡಿನಲಿ ಮಲಗುವದು ಮಹಾಘರ್ಜಿಪುದು ವೆಸನಕ್ಕೆ
ಕಾಡುವದು ದುಶ್ಚಿತ್ತದಲಿ ಹರಿ
ದಾಡುವದು ತಾ ಸಗಣಿತಿಂಬುದು
ರೂಢಿಗಿದು ಕ್ಷತ್ರಿಯ ….. ” (
-೯)

ಕುದುರೆಗಳ ಜನನದ ಕಾಲ, ಹನ್ನೆರಡು ವಿಧದ ಗುಪ್ತ ಖೋಡಿಗಳನ್ನು ಹೇಳುವುದಕ್ಕಾಗಿ ಕವಿ ಮೂರನೆಯ ಸಂಧಿಯನ್ನು ಮೀಸಲಿರಿಸಿದ್ದಾನೆ. ಹುಟ್ಟಿದಾಗ ಮರಿಗೆ ಹಲ್ಲುಗಳು ಬಂದಿದ್ದರೆ ಒಡೆಯನಿಗೆ ಬಹುವಿಧ ಕಷ್ಠ ಬರುವುದಲ್ಲದೆ, ಅದು ಸ್ಪಲ್ಪ ಕಾಲ ಮಾತ್ರ ಬದುಕುತ್ತದೆ. ಶ್ರಾವಣದಿ ಹಯ ಪ್ರಸವವಾಗಲು ಸಾವು ತಪ್ಪದು ಮನೆಯ ಒದೆಯಗೆ, ಭಾದ್ರಪದ ಮಾಸದಲಿ ಹುಟ್ಟಲು ಹೊದ್ದಿಪುದು ಅಪಕೀರ್ತಿ ಒಡೆಯನಿಗೆ ಎಂಬಂಥ ಮಾತುಗಳಲ್ಲಿ ನಮ್ಮವರು ಕುದುರೆಗಳ ಮೇಲೆ ಎಷ್ಟೊಂದು ಬಲವಾಗಿ ನಂಬಿಕೆಯನ್ನಿಟ್ಟು ಕೊಂಡಿದ್ದರು ಎಂಬುದು ಗೊತ್ತಾಗುತ್ತದೆ. ಕಣ್ಣಿನಲ್ಲಿ ನೀರಳಿಯುತ್ತಿದ್ದರೆ ಇರುಳುಳ್ಗಣ್ಣು ಕಾಣದು, ಬಾಯಲ್ಲಿ ನೀರು ಸೋರುವದು, ಮೋರೆ ಬಾಯವದು, ಕಣ್ಮುಚ್ಚುತ್ತ ಒದರುವುದು ಇತ್ಯಾದಿ ಹನ್ನೆರಡು ವಿಧದ ಗುಪ್ತ ರೋಗಗಳ ಸ್ವರೂಪವನ್ನೂ ಸಹ ವಿವರಿಸಲಾಗಿದೆ. ಕುದುರೆಗಳ ಅಂಗಾಂಗಗಳಿಗೆ ಬರುವ ಶೂಲಿ, ವಾಯು, ಜ್ವರ, ಮೂಲವ್ಯಾಧಿ ಮೊದಲಾದ ನಾನಾ ವಿಧದ ರೋಗಗಳ ಲಕ್ಷಣಗಳನ್ನು ನಾಲ್ಕನೆಯ ಸಂಧಿಯಲ್ಲಿ ವಿವೇಚಿಸಿದ್ದಾನೆ ಕವಿ. ಸ್ತನ್ಯಾವರ್ತ, ಸದಾವರ್ತಾಖ್ಯ, ಸಂಭಾವರ್ತಾಖ್ಯ ಕ್ಷುಧಾವರ್ತಾಖ್ಯ, ಬಿಂಬಾವರ್ತಾಖ್ಯ, ಮೊದಲಾದ ಹದಿನೆಂಟು ರೀತಿಯ ಶೂಲಿಗಳು ಕುದುರೆಗೆ ಬರುತ್ತವೆಂಬುದನ್ನು ತಿಳಿಸುತ್ತಾ –

            “ನಡುಗುತಲಿ ಬಾಯಿಂದ ಭುಜವನು
ಕಡಿದುಕೊಂಡರೆ ಮತ್ತೆ ಕಂಪಿಸಿ
ದಡೆ ದದಾವರ್ತಾಖ್ಯ ಶೂಲಿಯು ಮೂರನೆಯದೆಂದಾ
ಒಡನೆ ಬಿದ್ದುರುಳುತ್ತ ಭೂಮಿಯ
ಬಿಡದಿರಲು ಅತಿದಾಹ ಶೂಲಿಯ
ಬೆಡಗ ಭಾವಿಸಿ ನಾಲ್ಕನೆಯದೆಂದುಸುರಿದನು ಮುನಿಪಾ
|| (೪-೩)

ಹೀಗೆ ೧೨ ಪದ್ಯಗಳಲ್ಲಿ ನಾನಾ ರೀತಿಯ ಶೂಲಿಗಳನ್ನು ಪರಿಚಯಿಸಲಾಗಿದೆ. ಬಾಯೊಳಗೆ ದುರ್ಗಂಧವಾದ ವಾಸನೆಯಿದ್ದು, ನಡುಗುತ್ತಲಿದ್ದರೆ ಅದು ಅತಿಜ್ವರ, ಕಣ್ಣು ಮುಚ್ಚುತ್ತ ಮೇವು ತಿನ್ನುತ್ತಿದ್ದರೆ ಸನ್ನಿಪಾತ ಜ್ವರ, ಮೈಯನ್ನು ಅಳುಕಿಸುತ, ತತ್ತರಿಸಿ ಬೀಳುತ್ತ, ಗಾದರಿಗಳು ಮಯೊಳೆದ್ದರೆ ವಾತಜ್ವರ – ಹೀಗೆ ಎಂಟು ರೀತಿಯ ಜ್ವರಗಳನ್ನು ಅರಿತು ಅವುಗಳಿಗೆ ಔಷಧಿಗಳನ್ನು ಕೊಡಬೇಕು ಎನ್ನಲಾಗಿದೆ.

ಐದನೆಯ ಸಂಧಿಯಲ್ಲಿ ಏಳು ರಸಕ್ರಿಮಿದೋಷಗಳು ಹಾಗೂ ಏಳು ವಾಯ್ಮುಖ ರೋಗಗಳ ಭೇದವನ್ನು ತಿಳಿಸಲಾಗಿದೆ. ವಾತ ಪ್ರಕೋಪದಿಂದ ಉಂಟಾಗುವ, ದೇಹದ ಕೀಲುಗಳು ಹಿಡಿದುಕೊಳ್ಳುವ ಒಂದು ಬಗೆಯ ರೋಗಕ್ಕೆ ವಾಯು ಎನ್ನುತ್ತಾರೆ. ಇಂಥ ಏಳು ವಾಯುಗಳನ್ನು ಹಿರಿಯಣ್ಣ ಕವಿ ಗುರುತಿಸಿದ್ದಾನೆ. ಉದಾಹರಣೆಗಾಗಿ-

            “ಎರಡು ಹಿಂಗಾಲೊಡೆದು ಸುರಿಯಲು
ಪರಿಹರಿಸುವಡಸಾಧ್ಯ ಬಾತು
ಬ್ಬಿರಲು ಸಾಧ್ಯವದಕ್ಕೆ ಪೆಸರೇಕಾಂಗಾವಾಯು”

            “ಗೋಣು ಕೈಕಾಲುಗಳು ಬಿಗಿದಿಹ
ಠಾಣದಲಿ ಹಿಂಗಾಲ ಮಡಿಚುತ
ವೇಣು ಕಣ್ಣೆವೆ ಮುಚ್ಚುಲಾರದೆ ದವಡೆಳಕುತಿರಲೂ
ಝಾಣದಿರುತ್ಕರಣ ವಾಯುವು”
|| (೫-೫)

ಇಂಥ ಹಲವಾರು ರೋಗಗಳಿಗೆ ಯಾವ ರೀತಿಯ ಚಿಕಿತ್ಸೆ, ಔಷಧೋಪಚಾರ ನೀಡಬೆಕೆಂಬುದನ್ನು ೬ ಮತ್ತು ೮ನೆಯ ಸಂಧಿಗಳಲ್ಲಿ ನಿರೂಪಿಲಾಗಿದೆ.

ಎಂಟು ಪ್ರಕಾರದ ಜ್ವರ ಹದಿನೆಂಟು ರೀತಿಯ ಶೂಲಿ, ಏಳು ಬಗೆಯ ವಾಯುಗಳನ್ನು ಹೋಗಲಾಡಿಸಬೇಕಾದರೆ ನೆಲಬೇವು, ಇಂದ್ರವಾರುಣಿ, ಬ್ರಹ್ಮಿ, ಹೆಗ್ಗುಳ, ನೆಲದವರಿಕೆ, ಸಮೂಲ, ಚವೆ. ಇಂಗು, ತ್ರಿಕಟಕ ಮೊದಲಾದ ನಾಲ್ವತ್ತು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯನ್ನು ಕುಡಿಸಬೇಕೆಂದೂ ಸಹ ಸಲಹೆ ಕೊಡಲಾಗಿದೆ. ಉದಾಹರಣೆ –

            “ಇಂಗಳದ ಮೇಣ ನುಗ್ಗಿಯ ತಾಟೆ ಬಜೆ ವಾಯಿವ
ಳಂಗ ಹಿಪ್ಪಲಿಯ ಮೂಲ ಹೊನ್ನಾವರಿಕೆಯ ಪು
ಪ್ಪಂಗಳಜಿವಾನ ಕಾರ್ಚಿಯ ಗಡ್ಡೆ ಕರಿಲಕ್ಕಿಯ ಮುಗುಳು ಸೈಂಧಲವಣಾ
ಮುಂಗಲಿಯ ಮೂಗಿವರ ಗಡ್ಡೆ ಬೋನಗಾರಿಯ ಕಾಯಿ
ಭಂಗಿ ಬಳ್ಳೊಳ್ಳಿ ಹೆಬ್ಬೇವಿನ ಮುಗುಳ್
ತ್ರಿಕಟು
ಕಂಗಳ ಹದಿನೆಂಟು ಬಿಸಿನೀರು ಮಧುವಿನೊಳ್ ….
(೬-೭)

ಬರೆಸಿ ಕೊಟ್ಟರೆ ವಾಯು ಪರಿಹರವಾಗುತ್ತದೆ. ಗಿಣಿಯ ಮೂಗಿನ ಗಡ್ಡೆ, ಹೆಗ್ಗುಳ, ನೆಲಗುಳವು, ಗಣಜಿಲಿ, ಕರಿಯ ಬದನಿ, ಮೆಣಸು, ಹಿಪ್ಪಲಿ, ಶುಂಠಿ ಸಹಿತ ಹದಿನೆಂಟು ಗಿಡಮೂಲಿಕೆಗಳನ್ನು ಅರ್ಧಸೇರಿನಷ್ಟು ಹಾಲಿನಲ್ಲಿ ಕುಟ್ಟಿ ಹಾಕಿದರೆ ಶ್ಲೇಷ್ಮಂಗಳು ನಾಶವಾಗುವವು. ಬಿಳಿ ಜೀರಿಗೆ, ಸಣ್ಣಕ್ಕಿ ಹಿಟ್ಟು, ಬೆಲ್ಲವನ್ನು ಕಲಸಿ ತಿನಿಸಿದರೆ ಮನ್ಮಥ ಜ್ವರ ಹೋಗುವದು. ಹೀಗೆ ಹಲವಾರು ರೋಗಗಳಿಗೆ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ನೀಡಿ ರೋಗವನ್ನು ಗುಣಪಡಿಸುವ ಚಿಕಿತ್ಸಾವಿಧಾನ ಇಲ್ಲಿದೆ, ಇದು ಕೃತಿಯ ಸ್ಥೂಲವಾದ ವಸ್ತು.

ಈ ರೀತಿಯ ಮುಕ್ತಾಯದ ನಂತರ ಪಶುವೈದ್ಯ ಮತ್ತು ಮುನುಷ್ಯರಿಗೆ ಬರುವ ಕೆಲವು ರೋಗಗಳನ್ನು ಕುರಿತಂತೆಯೂ ಸಂಕ್ಷಿಪ್ತವಾಗಿ ಹೇಳಲಾಗಿದೆ. ಇದನ್ನು ಕವಿ ಹೇಳಿದ್ದಾನೆಯೇ ಅಥವಾ ಲಿಪಿಕಾರ ಹೇಳಿದ್ದಾನೆಯೇ ಸ್ಪಷ್ಟವಾಗುವುದಿಲ್ಲ. ಬಹುಶಃ ಲಿಪಿಕಾರ ಅನ್ಯಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಪಶುವೈದ್ಯವೆಂಬ ಈ ಕಿರುಕೃತಿಯನ್ನು ಲಿಪ್ಯಂತರ ಮಾಡಿರಬಹುದು. (ಅನುಬಂಧದಲ್ಲಿ ಈ ಕೃತಿಯ ಪಾಠವನ್ನು ಕೊಡಲಾಗಿದೆ). ಆಕಳು ಎತ್ತು ಮೊದಲಾದ ದನಗಳಿಗೆ ಬರುವ ಹಲವು ರೋಗಗಳ ಲಕ್ಷಣ ಹಾಗೂ ಅದಕ್ಕೆ ಔಷಧಿಗಳನ್ನು ಸೂಚಿಸಲಾಗಿದೆ. ಅಳಲುರೋಗ, ಉರಗಬಿಲ್ಲು ರೋಗ, ಕಳ್ಳು ರೋಗ, ತಲೆನೋವು, ಹುಚ್ಚುರೋಗ, ಕಾಮರೋಗ, ಕತ್ತೆರೋಗ ಇತ್ಯಾದಿ ಮೂವತ್ತೈದು ರೋಗಗಳ ಲಕ್ಷಣ, ಚಿಕಿತ್ಸಾ ವಿಧಾನಗಳನ್ನು ದಾಖಲಿಸಿದೆ. ಆರೇಳು ದಿವಸ ಮೇಯದಲೆ ಇರುವುದು ಕಳ್ಳುರೋಗದ ಲಕ್ಷಣವಾಗಿದ್ದು, ನೇಗುಡತಿ ಸೋಪ್ಪು, ಸಮೂಲವ ತಂದು ಅರದು ಅಂಬಿಲದಲ್ಲಿ ಕೊಟ್ಟರೆ ಈ ರೋಗ ನಾಶವಾಗುವದು. ಮನುಷ್ಯರಿಗೆ ಬರುವ ಚೇರು, ಹಳೆಹುಣ್ಣಿಗೆ ಸಂಬಂಧಿಸಿದಂತೆ ಕೆಲವು ಚಿಕಿತ್ಸಾ ವಿಧಾನಗಳನ್ನು ಸಹ ಹೇಳಲಾಗಿದೆ. ಉದಾ : ಹಳೆಹುಣ್ಣಿಗೆ ಮುಲಾಮು ಸಿದ್ಧಪಡಿಸಲು ಬೇಕಾಗುವ ಸಾಮಗ್ರಿಗಳನ್ನು ದಾಖಲಿಸಿದುದು. ಆಯುರ್ವೇದ ಪದ್ಧತಿಯ ಔಷಧೋಪಚಾರ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದದ್ದರಿಂದ ಇಂಥ ಕೃತಿಗಳ ರಚನೆಗೆ ಪ್ರೇರಣೆಯಾಗಿರಬಹುದು.

ಹರಪನಹಳ್ಳಿ ಫಾಳೆಗಾರರ ಆಶ್ರಯದಲ್ಲಿ ಕವಿಗಳಿದ್ದದ್ದು ತುಂಬ ಕಡಿಮೆ. ದಾದಯ್ಯ ನಾಯಕ (೧೪೮೮-೧೫೧೪) ನ ಕಾಲದಲ್ಲಿ ದೇವಕವಿ ಎನ್ನುವವನು ಬಾಗಳಿಯಲ್ಲಿ “೧೫೦೯ನೆಯ ಸರ್ವಜಿತು ಸಂವತ್ಸರ ವೈಶಾಖ ಶುದ್ಧ ೧೫ರ ಗುರುವಾರ ಮರುಳಸಿದ್ದೇಶ್ವರನ ಪದ್ಯ ಕಾವ್ಯ” ಎಂಬ ಕೃತಿಯನ್ನು ಬರೆದಿದ್ದಾನೆ. ಈತನನ್ನು ಬಿಟ್ಟರೆ ಪ್ರಸ್ತುತ ಹಿರಿಯಣ್ಣ ಕವಿಯ ಅರಮನೆ ಪುರೋಹಿತನಾಗಿ ಬಾಗುಳಿ ಬಸಪ್ಪನಾಯಕನ ಕಾಲದಲ್ಲಿ ಹಯರತ್ನ ಶ್ರೇಣಿ ಕೃತಿ ರಚಿಸಿದ್ದು ವಿಶೇಷ. ಏಕೆಂದರೆ ಈ ಮನೆತನದಲ್ಲಿದ್ದ ಅರಸರು ಆಶ್ವದಳದ ಬಗೆಗೆ, ಅವುಗಳ ಆರೈಕೆ ಮಾಡುವುದರತ್ತ ಗಮನಹರಿಸಿ ಈ ಕೃತಿಯನ್ನು ಹಿರಿಯಣ್ಣನಿಂದ ಬರೆಯಿಸಿರಬಹುದು. ಹೀಗಾಗಿ ಐತಿಹಾಸಿಕವಾಗಿಯೂ ಈ ಕೃತಿ ನಮಗೆ ಮುಖ್ಯವಾಗುತ್ತದೆ.

ಹಸ್ತಪ್ರತಿ ವಿವರ :

೮”x ೬” ಅಳತೆಯ ದಪ್ಪನೆಯ ಕಾಗದ ರೂಪದ ಈ ಪ್ರತಿ ಕೊಪ್ಪಳ ಜಿಲ್ಲೆಯ ಮುದ್ದಾಬಳ್ಳಿಯ ಶ್ರೀಗುರುನಾಥ ಸ್ವಾಮಿಯವರ ಮನೆಯಲ್ಲಿ ಸಿಕ್ಕಿದ್ದು, ಈಗ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರ (ಕ್ರಮಾಂಕ ೮೫೫) ದಲ್ಲಿ ಸಂರಕ್ಷಣೆಗೊಳ್ಳುತ್ತಿದೆ. ಹಸ್ತಪ್ರತಿಯ ಪ್ರಾರಂಭದ ಪುಟದಲ್ಲಿ “ಶ್ರೀ ರೂಢಾಚಾರ್ಯ ಆನೆಗೊಂದಿ ಸಂಸ್ಥಾನದ ಪಾಂಚಾಳ ಗುರು ಶೇಷೇಂದ್ರಸ್ವಾಮಿ ಗುರೇಂದ್ರ ಯಾತಗಿರಿ ಮೂಲಮಠ ಹಂಪಸಾಗರ, ಮುದ್ದಬಳ್ಳಿ, ಕೊಪ್ಪಳ ನಿಜಾಮ ಇಲಾಖೆ” ಎಂದಿದೆ. ಕೃತಿಯ ಆದಿಯಲ್ಲಿ ಲಿಪಿಕಾರ ಶೇಷೇಂದ್ರಾಚಾರ್ಯ ಗುರುಸ್ವಾಮಿಯವರು ಹೀಗೆ ಹೇಳಿಕೊಂಡಿದ್ದಾರೆ:

“ಓಂ ನಮಃ ಶ್ರೀ ಪಂಪಾವಿರೂಪಾಕ್ಷ ಪ್ರಸನ್ನ || ಆಶ್ವಶಾಸ್ತ್ರವಿದು || ಪೂರ್ವ ಕಾಲದಲ್ಲಿ ಅಶ್ವಲಾಯನ ಋಷಿಯು ಶಾಲಿಹೋತ್ರ ಮುನಿ ಕೂಡಿಕೊಂಡು ಯಜ್ಞ ಮಾಡಿದ ವ್ಯಾಳ್ಯಾದಲ್ಲಿ ಹುಟ್ಟಿದ ಶಾಸ್ತ್ರವಿದು. ಗೀರ್ವಾಣ ಭಾಷೆಯಲ್ಲಿ ಗ್ರಂಥರೂಪದಿಂದಿರ್ದ ಋಷಿ ಪ್ರಣೀತಕ್ಕೆ ಈ ಕಾಲದ ಪಂಡಿತರು ಅಂದರೆ ಹರಪನಹಳ್ಳಿ ಶೀಮಗೆ ಆರಸನಾದ ಬಾಗಳಿ ಬೂದಿ ಬಸಪ್ಪನಾಯಕನ ಆರಮನೆ ಪುರೋಹಿತರೂ ಉಚ್ಚಂಗಿದುರ್ಗದ ಹಿರಿಯಣ್ಣಪ್ಪನೆಂಬ ಕವಿಯು ಕನ್ನಡ ಭಾಷೆಯ ಭಾಮಿನಿ ಸ್ಷಟ್ಟದಿ (ವಾರ್ಧಿಕ ಷಟ್ಟದಿ) ರೂಪದಿಂಬರದು ಲೋಕೋಪಚಾರ ಮಾಡಿರುವನು. ಮುದ್ದಾಬಳ್ಳಿ ಮಾಲೀಪಾಟೀಲ ಹಚ್ಚನಗವುಡರ ಅಸಲಪ್ರತಿ ನೋಡಿ ಇದನ್ನು ತರ್ಜುಮಿ ಮಾಡಿರುತ್ತದೆ.

ಶ್ರೀಮನೃಪ ಶಾಲಿವಾಹನ ಶಕೆ ೧೮೪೩ನೇ ದುರ್ಮತಿ ನಾಮ ಸಂವತ್ಸರದ ವೈಶಾಖ ಶುದ್ಧ ೨ ಸೋಮವಾರ ಉದಯ ಕಾಲ ಶುಭಮುಹೋರ್ತದಲ್ಲಿ ಬರೆದಿದೆ”.

ಅಂತ್ಯ ಭಾಗದಲ್ಲಿ –

“ದುರ್ಮತಿ ಸಂವತ್ಸರದ ವೈಶಾಖ ಶುದ್ಧ ೧೪ ಶುಕ್ರವಾರ ಮಧ್ಯಾಹ್ನದಲ್ಲಿ ಸಮಾಪ್ತ ಮಾಡಿದ್ದಕ್ಕೆ ಮಂಗಳಮಸ್ತು | ಮಹಾ ಶ್ರೀಶ್ರೀ || ಶ್ರೀ ಪಂಪಾ ವಿರೂಪಾಕ್ಷವರ ಪ್ರಸನ್ನ || ಶ್ರೀರಸ್ತು ||

ಮೇಲಿರುವ ಹೇಳಿಕೆಗಳಿಂದ ಇದು ಕ್ರಿ. ಶ. ೧೯೨೧ರಲ್ಲಿ ಶೇಷೇಂದ್ರಾಚಾರ್ಯ ಗುರುಸ್ವಾಮಿಯವರು ಮುದ್ದಾಬಳ್ಳಿಯ ಮಾಲಿಪಾಟೀಲ ಹಚ್ಚನಗೌಡರ ಬಳಿಯಿದ್ದ ಪ್ರತಿಯನ್ನು ನೋಡಿ ಲಿಪಿಗೆಯ್ಯಲಾಗಿದೆ. ಈಗ ಮುದ್ದಾಬಳ್ಳಿ ಬಳ್ಳಿಯಲ್ಲಿರುವ ಶೀ ಗುರುನಾಥಸ್ವಾಮಿಯವರ ತಾತ ಶೇಷೇಂದ್ರಾಚಾರ್ಯರು, ಹೀಗಾಗಿ ಲಿಪಿಕಾರನ ಮನೆಯಲ್ಲಿಯೇ ಈ ಪ್ರತಿ ದೊರೆತಿರುವುದು ವಿಶೇಷವಾಗಿದೆ.

ಪರಿಷ್ಕರಣ :

ಪ್ರಸ್ತುತ ಹಯರತ್ನ ಶ್ರೇಣಿಯನ್ನು ಏಕೈಕ ಹಸ್ತಪ್ರತಿಯಿಂದ ಪರಿಷ್ಕರಣ ಮಾಡಲಾಗಿದೆ. ಹೀಗಾಗಿ ಪಾಠಾಂತರ ಗುರುತಿಸಲು ಇಲ್ಲಿ ಸಾಧ್ಯವಾಗಿಲ್ಲ. ಪಾಠಕ್ಕೆ ಧಕ್ಕೆ ಬರದ ಹಾಗೆ ಅಲ್ಲಲ್ಲಿ ಪರಿಷ್ಕರಿಸಿದ್ದೇನೆ. ಪಾಠ ಬಿಟ್ಟು ಹೋದಲ್ಲಿ x x x x ಚಿಹ್ನೆಯನ್ನೂ, ಸೇರಿಸಿದಲ್ಲಿ [ ] ಈ ಚಿಹ್ನೆಯನ್ನೂ ಕೊಡಲಾಗಿದೆ. ಉಳಿದಂತೆ ಯಥಾವತ್ತಾಗಿ ಪಾಠವನ್ನು ಮೂಲದಲ್ಲಿದ್ದ ಹಾಗೆ ಉಳಿಸಿಕೊಳ್ಳಲಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಆರ್. ಎಸ್. ಪಂಚಮುಖಿ (ಸಂ) ಚಂದ್ರರಾಜವಿರಚಿತಂಮದನತಿಲಕಮಂ೧-೫೧.

[2] ಎಚ್. ಶೇಶಯ್ಯಂಗಾರ್ (ಸಂ), ಚಾವುಂಡರಾಯನಲೋಕೋಪಕಾರ, ಸಂಧಿ೯ಹಾಗೂ೧೧ರಲ್ಲಿಅಶ್ವಶಾಸ್ತ್ರದಬಗೆಗೆವಿವರಗಳಿವೆ.

[3] ಜಿ. ಜಿ. ಮಂಜುನಾಥನ್ (ಸಂ), ಅಭಿನವಚಂದ್ರವಿರಚಿತಅಶ್ವಶಾಸ್ತ್ರ.

[4] ಅದೇ, ೧-೨೦.

[5] ಕೆ. ಎ. ೧೦೩, ಕನ್ನಡಅಧ್ಯಯನಸಂಸ್ಥೆ, ಮೈಸೂರುವಿಶ್ವವಿದ್ಯಾಲಯ, ಮೈಸೂರು.

[6] ಕೆ. ೧೮೬೫, ಕೆ. ಬಿ. ೨೨೭ಕ್ರಮಾಂಕದಹಸ್ತಪ್ರತಿ, ಕನ್ನಡಅಧ್ಯಯನಸಂಸ್ಥೆ, ಮೈಸೂರುವಿಶ್ವವಿದ್ಯಾಲಯ.

[7] ಹೆಚ್ಚಿನಮಾಹಿತಿಗಾಗಿಅಭಿವನಚಂದ್ರವಿರಚಿತಅಶ್ವಶಾಸ್ತ್ರಕೃತಿಯಪ್ರಸ್ತಾವನೆಯನ್ನುನೋಡಿರಿ.

[8] ಕೆ. ೪೨೪ನೆಯಕ್ರಮಾಂಕದಹಸ್ತಪ್ರತಿ, ಕನ್ನಡಅಧ್ಯಯನಸಂಸ್ಥೆ, ಮೈಸೂರುವಿಶ್ವವಿದ್ಯಾಲಯ, ಮೈಸೂರು.

[9] ಕೆ. ೧೪೦ನೆಯಕ್ರಮಾಂಕದಹಸ್ತಪ್ರತಿ, ಕನ್ನಡಅಧ್ಯಯನಸಂಸ್ಥೆ, ಮೈಸೂರುವಿಶ್ವವಿದ್ಯಾಲಯ, ಮೈಸೂರು.

[10] ಕೆ. ೧೦೩೭ನೇಕ್ರಮಾಂಕದಹಸ್ತಪ್ರತಿ, ಕನ್ನಡಅಧ್ಯಯನಸಂಸ್ಥೆ, ಮೈಸೂರುವಿಶ್ವವಿದ್ಯಾಲಯ, ಮೈಸೂರು.

[11] ಕೆ. ಎ. ೫೭೨ನೇಕ್ರಮಾಂಕದಹಸ್ತಪ್ರತಿ, ಕನ್ನಡಅಧ್ಯಯನಸಂಸ್ಥೆ, ಮೈಸೂರುವಿಶ್ವವಿದ್ಯಾಲಯ, ಮೈಸೂರು.

[12] ಕುಂ. ಬಾ. ಸದಾಶಿವಪ್ಪ, ಹರಪನಹಳ್ಳಿಪಾಳೆಯಗಾರರು, ಪುಟ-೭೮.

[13] ಕನ್ನಡಗ್ರಂಥಸೂಚಿಸಂಪುಟ : ೧, ಪುಟ-೧೨೮

[14] ಅದೇ, ಪುಟ- ೧೨೮