ಇಷ್ಟೊಂದು  ಅನುಭವ ಏಲ್ಲಿ ಸಿಗುತ್ತೇ ? ಎಂದು  ಹಲವರು ಪ್ರಶ್ನಿಸಬಹುದು. ಬಿಗ್ ಬಜಾರ್, ಜಾತ್ರೆ ಪೇಟೆ, ಡಿಸ್ಕೌಂಟ್ ಸೇಲ್ಸ್, ಸಗಟು ಮಾರಾಟ ಮಳಿಗೆಯಲ್ಲಿ  ಸಿಗದ  ಅಮೂಲ್ಯ ಸಂಗತಿ ನಮ್ಮ ಪಕ್ಕದ ಹಿರಿಯಲ್ಲಿದೆ ಎಂಬುದು ಹಲವರಿಗೆ ಗೊತ್ತಿಲ್ಲ. ಸಮೀಕ್ಷೆ,  ಸಭೆ, ಪ್ರವಾಸ, ಕೃಷಿ ಕೆಲಸ, ಧಾರ್ಮಿಕ ಸಭೆ ಕಾರ್ಯಕ್ರಮ ಯಾವುದೇ  ಇರಲಿ ನಮಗೆ ಒಂದಿಷ್ಟು ಹಿರಿಯರು  ಎದುರಾಗುತ್ತಾರೆ. ಗಾಂಭೀರ್ಯ,ಸಿಟ್ಟು, ಒರಟುತನ, ಉಪದೇಶ, ಮಾಹಿತಿ ಹೇಗೆ ಇರಲಿ ಅವರು  ಒಂದಿಷ್ಟು  ಒರಿಜಿಲ್ ಮಾತಾಡುತ್ತಾರೆ. ಮಾತಿನಲ್ಲಿ ತಾಜಾ ಅನುಭವಗಳಿವೆ,  ಇಡೀ ಬದುಕಿನಲ್ಲಿ ಕಂಡ ವಿಶೇಷ ಸಂಗತಿಗಳಿವೆ. ಮಾಗಿದ ಜೀವಗಳು ವಿವಿಧ ರಂಗದಲ್ಲಿ  ಕಣ್ಣಿಗೆ ಕಂಡಿದ್ದನ್ನು, ಅರಿತಿದ್ದನ್ನು  ಹಂಚಿಕೊಳ್ಳುವ ಹಂಬಲವಿದೆ. ನಾವು ನೂರಾರು ಪುಸ್ತಕ ಓದಿದರೂ ಸಿಗಲಾರದ ಸಂಗತಿ  ಇವರಲ್ಲಿ ದೊರೆಯುತ್ತದೆ.  ಕಾಲ,ಸಂದರ್ಭಗಳ ವಿವರ ಪಡೆದರೆ ಅದು ಜನಜೀವನದ ನೈಜ ಚರಿತ್ರೆಯೂ  ಆಗಬಹುದು. ಅಪ್ರಕಟಿತ ಹಸ್ತಪ್ರತಿ ಓದುವ ಖುಷಿ ಹಿರಿಯರ ಮಾತುಗಳಲ್ಲಿ  ದೊರೆಯಬಹುದು.

ಕೇರಳದ ಮಿಯಪದುವಿನ ಗುಡ್ಡದಲ್ಲಿದ್ದಾಗ ಇನ್ನೊಂದು ಗುಡ್ಡದ ತುದಿಯ ತೋಟ ತೋರಿಸಿದ ಚಂದ್ರಶೇಖರ ಚೌಟರು ಅಲ್ಲಿ ಅಡಿಕೆ ಬೆಳೆದ ರೀತಿ ಹೇಳಿದರು. ಸುಮಾರು ೪೦೦ ಅಡಿ ತಗ್ಗಿನಲ್ಲಿ ಹರಿಯುವ ನದಿಯ ನೀರನ್ನು  ಭಾರೀ ಗಾತ್ರದ ಕೊಡದಲ್ಲಿ ಹೊತ್ತು  ಸಸಿಗಳಿಗೆ ನೀರು ಹಾಕುತ್ತಿದ್ದ ನೀರಾವರಿ ವಿಧಾನ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಮುಂಜಾನೆ ನಾಲ್ಕು ಗಂಟೆಗೆ ಒಂದೊಂದು ಕೊಡದಲ್ಲಿ  ಸುಮಾರು ೬೦ ಲೀಟರ್ ನೀರು ಎತ್ತಿ ಹೆಗಲಲ್ಲಿ ಹೊತ್ತು  ಗುಡ್ಡವೇರಿತ್ತಿದ್ದ ರೀತಿ ಅಂದಿನ  ಕೃಷಿಕರ ತಾಕತ್ತು, ಪರಿಶ್ರಮ ಹೇಳಬಲ್ಲುದು. ಬೇಸಿಗೆಯಲ್ಲಿ  ಪ್ರತಿ ದಿನ ನೀರು ಹಾಕುವ ಕೆಲಸ ನಡೆಯುತ್ತಿತ್ತು.  ಇಂದು ಆ ತೋಟಗಳಿಗೆ ವಿದ್ಯುತ್ ಪಂಪ್ ಮುಖೇನ ನೀರು ಹರಿಯುತ್ತಿದೆ. ಉತ್ತರ ಕನ್ನಡದ  ಯಲ್ಲಾಪುರದಲ್ಲಿ  ಸನ್ಯಾಸಿಯೊಬ್ಬರು ಒಂದು ತಿಂಗಳ ಕಾಲ ಕಾಡಿನ ಮಸೆಸೊಪ್ಪಿನ ರಸ ಕುಡಿದು ಬದುಕಿದ್ದರು ಎಂದು   ಇನ್ನೊಬ್ಬರು ಶತಮಾನದ ಕತೆ ಹೇಳಿದರು. ಬಾಳೆಕಾಯಿ ಒಣಗಿಸಿ ಅದನ್ನು  ಗೋದಿಯಂತೆ ಹಿಟ್ಟು ತಯಾರಿಸಿ ಅದನ್ನು ರೊಟ್ಟಿಯಾಗಿ ಬಳಸಬಹುದೆಂದು ಸಿದ್ದಾಪುರದ  ಶೇಡಿದಂಟ್ಕಲ್‌ನ ಗಣೇಶ ಹೆಗಡೆ ಹೇಳಿದರು. ಜನ ನಂಬಲಿಲ್ಲ, ಸರಿ ಸತತ ಒಂದು ತಿಂಗಳ ಕಾಲ ಬಾಳೆಕಾಯಿ ಹಿಟ್ಟಿನ ರೊಟ್ಟಿ ತಯಾರಿಸಿ ಗಣೇಶ ಹೆಗಡೆ ಬದುಕಿ ತೋರಿಸಿದರು !  ಹುಲಿಯಜ್ಜ ಹುಲಿಭೇಟೆಗೆ ಹೆಸರಾದವರು, ಗುರಿ ಎಂದೂ ತಪ್ಪುತ್ತಿರಲಿಲ್ಲ, ನಾವು ಚಿಕ್ಕವರಿದ್ದಾಗ ಹುಲಿ ದಾಳಿಯಿಂಂದ ಸಮಸ್ಯೆಯಿರುವಲ್ಲಿ  ಈ ಅಜ್ಜ ಕೋವಿ ಹಿಡಿದು ಬರುತ್ತಿದ್ದರು. ಹುಲಿ ಹೊಡೆಯುತ್ತಿದ್ದರು. ಚಿಕ್ಕವರಿದ್ದಾಗ  ಒಂದದೆರಡು ಸಾರಿ ಹುಲಿಯಜ್ಜ ಹೊಡೆದ ಹುಲಿ ನೋಡಿದ್ದೇನೆ ಎಂದು ಸಂಪಿಗೆಮನೆಯ ಚಂದ್ರಶೇಖರ ಹೆಗಡೆ ವಿವರಿಸುತ್ತಾರೆ. ಶಿರಸಿಯ  ಬಕ್ಕಳದಲ್ಲಿ ಇನ್ನೊಬ್ಬರು  ಆನೆ ಹೊಡೆಯುವ ಪ್ರವೀಣರಿದ್ದರು.  ಮಂಚಿಕೇರಿ ಪ್ರದೇಶದಲ್ಲಿ ಇವರು ಕನಿಷ್ಟ  ೧೦-೧೫ ಆನೆ ಭೇಟೆಯಾಡಿರಬಹುದು  ಎಂದು ಇತ್ತೀಚೆಗೆ ಹಿರಿಯರು ವಿವರಿಸಿದರು. ಹೆಚ್ಚು ಕಡಿಮೆ ೬೦-೭೦ ವರ್ಷಗಳ ಹಿಂದಿನ ಈ ಕತೆ ಕೇಳಿದರೆ ನಮ್ಮ ಊರು ಹೇಗಿರಬಹುದೆಂಬ ಅರಿವಾಗುತ್ತದೆ.

ನಮಗೆ ಪುಸ್ತಕಗಳು  ಮಾನವಾಸಕ್ತಿ  ಮೂಡಿಸುವಲ್ಲಿ  ಸೋಲಬಹುದು. ಹಿರಿಯರ ಒಂದು ಮಾತುಕತೆಯ ಸುತ್ತ ಕುತೂಹಲದಲ್ಲಿ ನಿಲ್ಲಲು ಹಚ್ಚುತ್ತದೆ. ನಮ್ಮ ಅನುಭವಕ್ಕೆ ನಿಲುಕದ ಸಂಗತಿಗಳನ್ನು  ಎದುರು ಹಿಡಿಯುತ್ತದೆ. ನಮಗೆ ನೆಲದ ಚರಿತ್ರೆಯನ್ನು ಇಷ್ಟು ಪ್ರಭಾವಿಯಾಗಿ ಹೇಳಲು ಹಿರಿಯರಿಗಿಂತ ಬೇರೆ ಮಾಧ್ಯಮವಿಲ್ಲ. ಇತ್ತೀಚೆಗೆ ಜಮಖಂಡಿಯ ಅರಮನೆ ನೋಡಲು ಹೋಗಿದ್ದೆ.  ರಾಜರ ಆಸ್ಥಾನಲ್ಲಿ ಓಲೆಕಾರರಾಗಿ ಕೆಲಸ ಮಾಡಿದ ಹಿರಿಯರೊಬ್ಬರ ಸ್ನೇಹವಾಯ್ತು. ಅರಮನೆಯ ಎಲ್ಲ ಪ್ರದೇಶಗಳಿಗೆ  ಅವರ ಜತೆ  ಓಡಾಡಿದೆ. ಕುದುರೆ ಲಾಯ, ಆನೆ ಕಟ್ಟುವ ಸ್ಥಳ, ಸೈನಿಕರ ವಸತಿ, ಹಗ್ಗ ಜಗ್ಗಾಟ ನಡೆಯುವ ಸ್ಥಳ, ರಾಜನ ಹಸು ಕಟ್ಟುವ ಸ್ಥಳ, ಸಿಂಧೂರ ಲಕ್ಷ್ಮಣನ ಕತೆ ಹೀಗೆ ಪ್ರತಿಯೊಂದು ಸಂಗತಿ ವಿವರಿಸಿದರು,  ಕಾಲವೇ ಮಾತಾಡುವಂತೆ  ಕಿವಿಗೊಟ್ಟು ಆಲಿಸಿದೆ. ಬರೋಬ್ಬರಿ ೬-೮ತಾಸು ಅವರ ಜತೆಗಿನ ಮಾತಿನಲ್ಲಿ  ನನಗೆ ಸಿಕ್ಕ ಸಂಗತಿಗಳು  ಅಮೂಲ್ಯ.  ರಾಜವಂಶದ  ಕೊನೆಯ ನಿರ್ಧಾರಗಳ ಬಗೆಗಿನ ಮಾಹಿತಿಗಳಂತೂ  ಯಾವತ್ತೂ  ಮರೆಯಲಾರದಷ್ಟು ಜೀವಂತ ! ಬದುಕಿನಲ್ಲಿ  ಇಂತಹ ಹತ್ತಾರು ತಾಸುಗಳು ನಮಗೆ  ಹರಟೆ ಹೊಡೆಯುವದರಲ್ಲಿ, ಚರ್ಚೆ ಮಾಡುವದರಲ್ಲಿ  ಖರ್ಚಾಗಬಹುದು. ಹಿರಿಯರ ಜತೆಗಿನ ಮಾತಿಗೆ ಸಮಯ ವಿನಿಯೋಗವಾದಾಗ ಸಿಕ್ಕ ಆನಂದ  ಮತ್ತೆ  ಎಲ್ಲಿಯೂ  ಸಿಗಲಾರದು.

ಹಿರಿಯರನ್ನು  ಒಂದೆಡೆ ಸೇರಿಸಿ ಹಳೆ ಹಳೆಯ ಕತೆಗಳನ್ನು ಅವರಿಂದ ಹೇಳಿಸಬಹುದೇ ? ಗೆಳೆಯರೊಬ್ಬರು ಕೇಳಿದ್ದರು.  ನಿಜಕ್ಕೂ ಪ್ರತಿ ಹಳ್ಳಿಯೂ ಯೋಚಿಸಬೇಕಾದ ಸಂಗತಿ. ಊರು ಬೆಳೆದ ರೀತಿ ಅರಿಯಲು ಹಳೆಯ ದಫ್ತರಿನಂತೆ ಇವರು ಅಧಿಕೃತ ಮಾಹಿತಿ ಹೇಳಬಲ್ಲವರು. ಆದರೆ ಇವರ ಮಾತು  ನಾವು ಬರೆಹ ಬರದಷ್ಟು ಸರಳವಲ್ಲ, ಕತೆ ಒಂದೊದಾಗಿ ಸುರುಳಿ ಬಿಚ್ಚುವದಿಲ್ಲ.  ನೆನಪಾದಂತೆ ಹೇಳುವ ಅವರ ಮಾತು ಕೇಳುವ ಸಂಯಮ, ಆಸಕ್ತಿ ಬೇಕು. ಪೂರ್ವಾಗ್ರಹ ಬಿಟ್ಟು  ಅರಿವು ಮೀರುವ ಕಾಳಜಿ ಬೇಕು.  ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಮಾತಿಗೆ ಸೆಳೆಯುವ, ಅವರ ಭಾವನೆಗಳನ್ನು ಗೌರವಿಸುವ ಗುಣ ನಮಗೆ ಬೇಕು. ಇಂದು ಹಿರಿಯರ ಬದುಕು ಕೇಳಲು ಯಾರಿಗೂ ಸಮಯವಿಲ್ಲ. ಅವರ ಬದುಕನ್ನು ವೃದ್ಧಾಶ್ರಮದ ಜತೆಗೆ ನೋಡುವ ಫಾರಿನ್ ಪರಿಪಾಟ ಹೆಚ್ಚುತ್ತಿದೆ. ಹಿರಿಯರ ಅನುಭವದ ಜತೆಗೆ ಬೆಳೆಯುವ ನಮ್ಮ ಅವಿಭಕ್ತ ಕುಟುಂಬದ ಕಾರ್ಯಶೈಲಿ ಮರೆಯಾಗುತ್ತಿದೆ. ನೆಲದ ಜೀವನ ವಿಧಾನದ ಹಳೆಹಳೆಯ ಮಾಹಿತಿ ಇಲ್ಲದೇ  ಹೊಸ ರಸ್ತೆಯಲ್ಲಿ  ನಾವು ಅವಸರದಲ್ಲಿ ಓಡತೊಡಗಿದ್ದೇವೆ.