ಕನ್ನಡ ವಿಶ್ವವಿದ್ಯಾಲಯವು ರಾಜ್ಯದ ನಾಲ್ಕು ಸಾಂಸ್ಕೃತಿಕ ಸ್ಥಳಗಳಲ್ಲಿ ತನ್ನ ಅಧ್ಯಯನ ಕೇಂದ್ರಗಳನ್ನು ತೆರೆದಿದೆ. ಬಸವಣ್ಣನ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೂಡಲಸಂಗಮದಲ್ಲಿ ನಾವು ೨೦೦೭ರಲ್ಲಿ ‘ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ’ವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ತೆರೆದಿದ್ದೇವೆ. ವಚನ ಸಂಸ್ಕೃತಿಯನ್ನು ಕುರಿತಂತೆ ಅಧ್ಯಯನ ನಡೆಸುವುದು ಅಲ್ಲಿನ ಕೇಂದ್ರದ ಮುಖ್ಯ ಕಾರ್ಯವಾಗಿದೆ. ವಚನ ಸಾಹಿತ್ಯವನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿ ಪ್ರಕಟಿಸುವುದು ಅದರ ಮತ್ತೊಂದು ಉದ್ದೇಶವಾಗಿದೆ. ವಚನ ಸಂಸ್ಕೃತಿಯನ್ನು ಬಹುಶಿಸ್ತೀಯ ಚೌಕಟ್ಟಿನಲ್ಲಿ ನಡೆಸುವ ಅಧ್ಯಯನಗಳನ್ನು ಪ್ರೋತ್ಸಾಹಿಸುವುದು ಮತ್ತು ಅಂತಹ ಅಧ್ಯಯನಗಳನ್ನು ಪ್ರಕಟಿಸುವುದು ಅದರ ಇನ್ನೊಂದು ಗುರಿಯಾಗಿದೆ.

ವಚನ ಸಂಸ್ಕೃತಿಯನ್ನು ಕುರಿತಂತೆ ಭಾವುಕ ನೆಲೆಯಲ್ಲಿ ಅಧ್ಯಯನಗಳ ನಡೆಸುವ ಒಂದು ಸಂಪ್ರದಾಯ ನಮ್ಮಲ್ಲಿದೆ. ವಚನ ಸಾಹಿತ್ಯವನ್ನು ಸಂಗ್ರಹಿಸುವ, ಸಂಪಾದಿಸುವ, ಪ್ರಕಟಿಸುವ ಕೆಲಸ ಸಾಕಷ್ಟು ನಡೆದಿದೆ. ವಚನ ಸಂಸ್ಕೃತಿಯನ್ನು ಜ್ಞಾನ ಶಿಸ್ತುವಿನ ರೀತಿಯಲ್ಲಿ ಅಧ್ಯಯನಕ್ಕೆ ಒಳಪಡಿಸುವ ಬಗ್ಗೆ ನಮ್ಮ ಕೇಂದ್ರಕ್ಕೆ ಆಸಕ್ತಿಯಿದೆ. ಆ ನೆಲೆಯಲ್ಲಿ ನಮ್ಮ ವಿಶ್ವವಿದ್ಯಾಲಯವು ಪ್ರಕಟಿಸುವ ‘ವಚನಸಾವಿರ’ ಕೃತಿಯನ್ನು ನೋಡಬಹುದು. ವಚನ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿ ಕೊಡುವ ಬಗ್ಗೆ ನಾವು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ನಾಗರಿಕತೆಗಳಿಂದ ನಾವು ಸಾಕಷ್ಟು ಸ್ವೀಕರಿಸಿದ್ದೇವೆ. ವಿಶ್ವ ನಾಗರಿಕತೆಗೆ ಕೊಡುವ ಸಾಮರ್ಥ್ಯ ನಮಗೂ ಇದೆ ಎಂಬುದನ್ನು ಪಶ್ಚಿಮಕ್ಕೆ ತೋರಿಸಬೇಕಾಗಿದೆ. ವೈದಿಕತೆಯೇ ಭಾರತದ ಪ್ರಧಾನಧಾರೆ ಸಂಸ್ಕೃತಿಯಲ್ಲ. ಇಲ್ಲಿ ಅವೈದಿಕ ಸಂಸ್ಕೃತಿಗಳು ಪ್ರಾಚೀನ ಕಾಲದಿಂದಲೂ ಜನರ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತ ಬಂದಿದೆ. ಭಾರತದ ಸಂದರ್ಭದಲ್ಲಿ ನಾವು ‘ಸಂಸ್ಕೃತಿಗಳು’ ಎಂಬ ಪದವನ್ನು ಬಳಸಬೇಕೇ ವಿನಾ ‘ಸಂಸ್ಕೃತಿ’ಯನ್ನಲ್ಲ. ನಮ್ಮ ಅವೈದಿಕ ಸಂಸ್ಕೃತಿಗಳಿಗೆ ಪ್ರಾದೇಶಿಕ ಗುಣವಿದೆ. ಕರ್ನಾಟಕ ನಾಗರಿಕತೆಯನ್ನು ಕಟ್ಟುವಲ್ಲಿ ವಚನ ಸಂಸ್ಕೃತಿಯ ಕೊಡುಗೆ ಅಪಾರವಾದುದು. ಇಂದು ನಾವು ಸಂವಿಧಾನದಲ್ಲಿ ಪ್ರತಿಪಾದಿಸುತ್ತಿರುವ ಸಮಾನತೆಯನ್ನು ಮತ್ತು ಜನರನ್ನು ಒಳಗೊಳ್ಳುವ ಗುಣವನ್ನು, ಶ್ರಮನಿಷ್ಠೆಯನ್ನು ವಚನಕಾರರು ತಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿದ್ದರು. ಅವರು ಎಲ್ಲ ಬಗೆಯ ಅಸಮಾನತೆಯನ್ನು ವಿರೋಧಿಸಿದರು. ಲಿಂಗ ಸಮಾನತೆಯ ಅದರ ಅವಿಭಾಜ್ಯ ಅಂಗವಾಗಿದೆ.

ನಮ್ಮ ಕೇಂದ್ರವು ಕಾಲೇಜು ವಿದ್ಯಾರ್ಥಿಗಳಿಗಾಗಿ ವಚನ ಅಧ್ಯಯನ ಕಮ್ಮಟಗಳನ್ನು ನಡೆಸುತ್ತಿದೆ. ಅದರ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಿದೆ. ಈಗ ಅದು ‘ವಚನ ಸಂಸ್ಕೃತಿ ಮಾಲೆ’ ಎಂಬ ಹೆಸರಿನಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಕಾರ್ಯಗಳನ್ನು ಒಂದು ಜ್ಞಾನ ಶಿಸ್ತುವಿನ ಕ್ರಮದಲ್ಲಿ ನಡೆಸುತ್ತಿದ್ದೇವೆ.

ಈ ಮಾಲೆಯ ಮೊದಲ ಕೃತಿಯಾಗಿ ವಚನ ಸಂಸ್ಕೃತಿಯ ಗಂಭೀರ ವಿದ್ಯಾರ್ಥಿಯಾದ ಡಾ. ವಿಜಯಕುಮಾರ್ ಬೋರಟ್ಟಿ ಅವರು ನಡೆಸಿರುವ ಅಧ್ಯಯನವನ್ನು ನಾವು ಪ್ರಕಟಿಸುತ್ತಿದ್ದೇವೆ. ಅವರು ಕೃತಿಯಲ್ಲಿ ವಸಾಹತುಶಾಹಿ, ಪೌರಾತ್ಯವಾದ, ಲಿಂಗಾಯತ ಸಮುದಾಯಗಳ ನಡುವಿನ ಸಂಬಂಧ ಕುರಿತಂತೆ ಆಳವಾದ ಅಧ್ಯಯನ ಮಾಡಿದ್ದಾರೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಲಿಂಗಾಯತ ಸಮುದಾಯವು ವಚನ ಸಂಸ್ಕೃತಿಯ ಮೂಲಕ ಹೇಗೆ ತನ್ನ ಅನನ್ಯತೆಯನ್ನು ಗಟ್ಟಿಗೊಳಿಸಿಕೊಂಡಿತು ಎಂಬುದನ್ನು ಚಾರಿತ್ರಿಕವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಡಾ.ಫ.ಗು. ಹಳಕಟ್ಟಿ ಅವರ ವಚನ ಸಾಹಿತ್ಯದ ಪ್ರಕಟಣೆಯ ಕಾರ್ಯವನ್ನು ಚರ್ಚಿಸುತ್ತಾ ವಿಜಯಕುಮಾರ್ ಅವರು ವಸಾಹತುಶಾಹಿಯು ಒದಗಿಸಿಕೊಟ್ಟ ಆಧುನಿಕತೆಯ ವಿಚಾರವು ನಾಡಿನ ವಿವಿಧ ವರ್ಗಗಳ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿತ್ತು ಎಂಬುದನ್ನು ಇಲ್ಲಿ ಗುರುತಿಸಿದ್ದಾರೆ. ವಚನ ಸಂಸ್ಕೃತಿಯನ್ನು ಕುರಿತ ಅಧ್ಯಯನ ಇದಾದರೂ ಇದು ಇನ್ನೊಂದು ಅರ್ಥದಲ್ಲಿ ಇಪ್ಪತ್ತನೆಯ ಶತಮಾನದ ಆದಿ ಭಾಗದ ಕರ್ನಾಟಕದ ಅಧ್ಯಯನವೇ ಆಗಿದೆ. ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾದ ಈ ಕೃತಿಯನ್ನು ಆಗಿದೆ. ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾದ ಈ ಕೃತಿಯನ್ನು ನಾವು ಹೆಮ್ಮೆಯಿಂದ ಪ್ರಕಟಿಸುತ್ತಿದ್ದೇವೆ.. ಇನ್ನು ಮುಂದೆ ನಮ್ಮ ಕೇಂದ್ರದಿಂದ ವಚನ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚು ಹೆಚ್ಚಾಗಿ ಪ್ರಕಟಿಸುವ ಉದ್ದೇಶವಿದೆ. ಬೆಳಗಾವಿ ಮತ್ತು ವಿಜಾಪುರದಲ್ಲಿ ವಿದ್ಯಾರ್ಥಿಗಳಿಗಾಗಿ ೨೦೧೦ರಲ್ಲಿ ನಡೆಸಿದ ಕಮ್ಮಟಗಳಲ್ಲಿ ಮಂಡನೆಯಾದ ವಿಚಾರಗಳನ್ನು ಪ್ರಬಂಧಗಳ ರೂಪಕ್ಕೆ ಇಳಿಸಿ ಸಂಕಲನ ರೂಪದಲ್ಲಿ ಪ್ರಕಟಿಸುವ ಗುರಿಯಿದೆ.

ಈ ಕೇಂದ್ರದ ಸ್ಥಾಪನೆಗೆ, ಅದರ ಬೆಳವಣಿಗೆ, ಅದರ ಕಾರ್ಯ ಚಟುವಟಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿರುವ ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ.ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಹಾಗೂ ನಮ್ಮ ಕೇಂದ್ರಕ್ಕೆ ಅಗತ್ಯವಾಗಿರುವ ಮೂಲಸೌಲಭ್ಯವನ್ನು, ಗ್ರಂಥಾಲಯವನ್ನು, ಸಂಪನ್ಮೂಲವನ್ನು ನೀಡುತ್ತಿರುವ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿಗಳಾದ ಡಾ.ಎಸ್.ಎಮ್. ಜಾಮದಾರ್. ಭಾ.ಆ.ಸೇ. ಅವರಿಗೆ ಹಾಗೂ ಮಂಡಳಿಯ ಆಯುಕ್ತರಾದ ಶ್ರೀ ಚಿನವಾಲ ಕ.ಆ.ಸೇ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಕೃತಿಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ವಹಿಸಿಕೊಂಡು ಬಂದಿರುವ ಮತ್ತು ಅದರ ಪ್ರಕಟಣೆಗೆ ಕಾರಣರಾಗಿರುವ  ಡಾ. ರಹಮತ್ ತರೀಕೆರೆ ಅವರಿಗೆ ಮತ್ತು ಈ ಕೃತಿಯ ಪರಿಶೀಲನಾ ವರದಿ ನೀಡಿದ ಡಾ.ಶಿವರಾಮ ಪಡಿಕ್ಕಲ್ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.

ಈ ಕೃತಿಯನ್ನು ಪ್ರಕಟಿಸುತ್ತಿರುವ ನಮ್ಮ ಪ್ರಸಾರಾಂಗದ ನಿರ್ದೇಶಕರಾದ ಡಾ.ಎ. ಸುಬ್ಬಣ್ಣ ರೈ ಅವರಿಗೆ, ಇದರ ಪುಟ ವಿನ್ಯಾಸ ರೂಪಿಸುವ ಶ್ರೀ ಬಿ. ಸುಜ್ಞಾನ ಮೂರ್ತಿ ಮತ್ತು ಮುಖಪುಟ ಬಿಡಿಸಿಕೊಟ್ಟ ಕಲಾವಿದರಾದ ಶ್ರೀ ಕೆ.ಕೆ. ಮಕಾಳಿ ಹಾಗೂ ಅಕ್ಷರ ಜೋಡಣೆ ಮಾಡಿಕೊಟ್ಟ ಶ್ರೀ ಜೆ. ಬಸವರಾಜ್ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.

ಈ ಕೃತಿಯನ್ನು ಪ್ರಕಟಣೆಗೆ ನೀಡಿದ ವಿದ್ವಾಂಸರಾದ ಡಾ. ವಿಜಯಕುಮಾರ್ ಬೋರಟ್ಟಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ನನ್ನ ಕರ್ತ್ಯವ್ಯ.

ಟಿ.ಆರ್. ಚಂದ್ರಶೇಖರ
ಮುಖ್ಯಸ್ಥರು