ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಗೊಳಲ್ಪಡುವ ಯಾವುದೇ ಸಾಹಿತ್ಯ ಅಥವಾ ಶಾಸ್ತ್ರೀಯ ಕೃತಿಯು ಸಾಂಸ್ಕೃತಿಕ ಯಜಮಾನಿಕೆಗಾಗಿ (cultural hegemony) ನಡೆಯುವ ಭಾಷಾ ಸಂಘರ್ಷವನ್ನು ಸೂಚಿಸುವ ಸಾಧ್ಯತೆಗಳಿರುತ್ತದೆ. ಅಸಮಾನ ಶ್ರೇಣಿಕರಣದಿಂದ ರೂಪಿತವಾದ ಸಮಾಜದಲ್ಲಿ ಭಾಷೆಗಳ ನಡುವೆ ಇರುವ ಸಂಬಂಧಗಳು ಸಹ ಶ್ರೇಣೀಕೃತವಾಗಿರುತ್ತವೆ. ಇಂತಹ ಸಮಾಜದಲ್ಲಿ  ನಡೆಯುವ ಭಾಷಾಂತರ ಕ್ರಿಯೆಗಳು ಒಂದು ಧ್ರುವದಲ್ಲಿ ಆಗ ತಾನೆ ಉದಯಿಸುತ್ತಿರುವ ಸಮುದಾಯದ ಅರಿವಿನ ಸೂಚಕಗಳಾದರೆ, ಮತ್ತೊಂದು ಧ್ರುವದಲ್ಲಿ ಈ ಸಮಾಜದ ಸಾಹಿತ್ಯ, ಇತಿಹಾಸ, ಧರ್ಮ ಅಥವಾ ತತ್ವಗಳನ್ನು ಮೀರಿ ಅವುಗಳನ್ನು ರಾಷ್ಟ್ರೀಕರಣ ಅಥವಾ ಸಾಹಿತ್ಯೀಕರಣಗೊಳಿಸುವ ಪ್ರಯತ್ನಗಳನ್ನು ಪ್ರದರ್ಶಿಸುತ್ತವೆ.

ಪ್ರಸ್ತುತ ಲೇಖನ ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ಭಾಷಾಂತರಿಸಲ್ಪಟ್ಟ ಬಸವಣ್ಣನವರ ವಚನಗಳನ್ನು ವಿಶ್ಲೇಷಿಸುತ್ತದೆ. ಈ ಉದ್ದೇಶಕ್ಕಾಗಿ ಅ). ಫ.ಗು. ಹಳಕಟ್ಟಿ (೧೯೨೩), ಆ) ಮಾಸ್ತಿ ವೆಂಕಟೇಶ ಅಯ್ಯಂಗಾರ್ (೧೯೩೨) ಮತ್ತು ಇ) ಶಿ.ಶಿ. ಬಸವನನಾಳ ಮತ್ತು ಶ್ರೀನಿವಾಸ ಐಯ್ಯಂಗಾರರ (೧೯೪೦) ಭಾಷಾಂತರಗಳನ್ನು ಅಧ್ಯಯನ ಮಾಡಲಾಗಿದೆ. ಮೊದಲನೆ ಭಾಷಾಂತರ ಕ್ರಿಯೆಯು ಸಾಮುದಾಯಿಕ ಹಿತಾಶಕ್ತಿಗಳನ್ನು ಪ್ರದರ್ಶಿಸುತ್ತದೆ. ಎರಡನೇ ಭಾಷಾಂತರ ಪ್ರಕ್ರಿಯೆಯು ರಾಷ್ಟ್ರೀಕರಣದ ರಾಜಕೀಯವನ್ನು ಬಯಲುಗೊಳಿಸುತ್ತದೆ. ಮೂರನೇ ಭಾಷಾತರವು ಸಾಹಿತ್ಯಕರಣದ ಮೀಮಾಂಸೆಯನ್ನು ತೋರಿಸುತ್ತದೆ. ಬಸವಣ್ಣನವರ ವಚನಗಳನ್ನು ಕನ್ನಡದಿಂದ ಇಂಗ್ಲೀಷಿಗೆ ಭಾಷಾಂತರಿಸಿದ ಈ ಲೇಖಕರ ಉದ್ದೇಶಗಳು ಆಗಿನ ಐತಿಹಾಸಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಂದರ್ಭಗಳ ಸಂಕ್ರಮಣ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಇಲ್ಲಿ ನಂಬಲಾಗಿದೆ.

ಭಾಗ

ಶ್ರಾಸ್ತ್ರೀಯ ವಾಙ್ಞಯವಾಗಿ ವಚನಗಳು

ರಾವ್ ಬಹದ್ದೂರ್ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ‘ವಚನ ಪಿತಾಮಹ’ ರೆಂದೇ ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದಲ್ಲಿ ಹೆಸರು ವಾಸಿ. ಲಿಂಗಾಯತ ಸಮುದಾಯದ ನೇಕಾರ ಕುಟುಂಬದಲ್ಲಿ ಜನಿಸಿದ ಹಳಕಟ್ಟಿಯವರು ವಚನಗಳ ಅಧ್ಯಯನಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಅವರ ವಚನ ಶಾಸ್ತ್ರ ಸಾರ (೧೯೨೨)ವು ೧೨ನೇ ಶತಮಾನದ ವಚನಗಳ ಸಂಕಲನ ಮತ್ತು ಅಧ್ಯಯನಕ್ಕೆ ಇಂದಿಗೂ ದಾರಿ ದೀಪವಾಗಿದೆ. ಪ್ರಪ್ರಥಮ ಬಾರಿಗೆ ಶಿವಶರಣರ ವಚನಗಳನ್ನು ಶೋಧಿಸಿ, ಆರಿಸಿ, ಸಂಸ್ಕರಿಸಿ, ವೈಜ್ಞಾನಿಕ ಪದ್ಧತಿಯಲ್ಲಿ ಬಾರಿಗೆ ಅವುಗಳನ್ನು ಬೌದ್ಧಿಕ ಜಗತ್ತಿಗೆ ಪರಿಚಯಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ೨೦ನೇ ಶತಮಾನದ ಮೊದಲ ದಶಕಗಳಲ್ಲಿ ಲಿಂಗಾಯತ ಸಮುದಾಯವು ತನ್ನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಹೊಸ ಸಂದರ್ಭದಲ್ಲಿ ಹಳಕಟ್ಟಿಯಂತಹ ಪ್ರಗತಿಪರರು ತಮ್ಮ ಸಾಹಿತ್ಯ ಮತ್ತು ಸಂಶೋಧನೆಗಳ ಮೂಲಕ ಲಿಂಗಾಯತ ಸಮುದಾಯವನ್ನು ಆಧುನಿಕ ವಿಚಾರಧಾರೆಗೆ ಒಗ್ಗಿಸಿಕೊಳ್ಳುವಂತೆ ಮಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಹಳಕಟ್ಟಿಯವರು ಬಸವಣ್ಣನ ಕೆಲವೊಂದು ವಚನಗಳನ್ನು ೧೯೧೫ರಲ್ಲಿ ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರಿಸಲು ಆರಂಭಿಸಿ ೧೯೧೬ ರಲ್ಲಿ ಪೂರ್ಣಗೊಳಿಸಿದರು. ಆದರೆ ಅವುಗಳನ್ನು ಇಂಡಿಯನ್ ಆಂಟಿಕ್ವೆರಿಯಲ್ಲಿ ಪ್ರಕಟಿಸಿದ್ದು ೧೯೨೨ ರಲ್ಲಿ. ಪ್ರಸಿದ್ಧ ಧಾರ್ಮಿಕ ತತ್ವಜ್ಞಾನಿ ಮತ್ತು ಇತಿಹಾಸಕಾರರಾದ ಜೆ.ಎನ್. ಫರ್ಕೂಹರರು ಕೆಲವೊಂದು ಭಾಷಾಂತರಗಳನ್ನು ಆಯ್ಕೆ ಮಾಡಿ, ಪ್ರಕಟಿಸಲು ಕಾರಣರಾದರು. ಈ ಸಂಚಿಕೆಯ ಸಂಪಾದಕ ಸರ್ ರಿಚರ್ಡ್ ಟೆಂಪಲರು ಪ್ರಕಟವಾದ ವಚನಗಳ ಬಗ್ಗೆ ಸಂಕ್ಷಿಪ್ತವಾಗಿ ಹೀಗೆ ಬರೆದಿದ್ದಾರೆ:

ವಚನಗಳನ್ನು ಬಸವನು ಬರೆದನೋ ಅಥವಾ ಇಲ್ಲವೋ ಅನ್ನುವ ಪ್ರಶ್ನೆಗೆ ಸಮಾಧಾನ ಇನ್ನೂ ಇತ್ಯರ್ಥವಾಗಿಲ್ಲ, ಭಾಷೆ ಮತ್ತು ಇತಿಹಾಸದ ದೃಷ್ಟಿಕೋನದಿಂದ ವಿಮರ್ಶಕವಾಗಿ ಪರೀಕ್ಷಿಸುವವರಿಗೆ ಅವುಗಳನ್ನು ಬಸವನ ನುಡಿಗಳೆಂದು ಹೇಳುವುದು ಅಸಾಧ್ಯವಾಗುತ್ತದೆ (ಟೆಂಪಲ್, ೧೯೨೨: ೭).

ಮೇಲಿನ ಪೀಠಿಕೆಯ ವಚನಗಳ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತದೆ. ಅನುಮಾನಗಳನ್ನು ಬಗೆಹರಿಸುವ ಗೀಜಿಗೆ ಹೋಗದೆ, ರಿಚರ್ಡ್ ಟೆಂಪಲರು ಆ ಕೆಲಸವನ್ನು ಇತಿಹಾಸ ತಜ್ಞರಿಗೆ ಮತ್ತು ಸಂಶೋಧಕರಿಗೆ ಬಿಡುತ್ತಾರೆ. ಟೆಂಪಲ್ಲರ ಅನುಮಾನ/ಸಂದೇಹಗಳು ೨೦ನೇ ಶತಮಾನದ ಆದಿ ಭಾಗದಲ್ಲಿ ೧೨ನೇ ಶತಮಾನದ ಶಿವಶರಣರ ಚಳುವಳಿಯ ಬಗ್ಗೆ ಮತ್ತು ವಚನಕಾರರ ಅಸ್ತಿತ್ವದ ಸತ್ಯಾನುಸತ್ಯಗಳ ಬಗ್ಗೆ ನಡೆಯುತ್ತಿದ್ದ ಬೌದ್ಧಿಕ ಚರ್ಚೆಗಳಿಗೆ ಒಂದು ಸಣ್ಣ ಉದಾಹರಣೆ. ಲಿಂಗಾಯತ ಸಮುದಾಯದ ಒಳಗಡೆಯೇ ಲಿಂಗಾಯತ ಧರ್ಮದ ಮೂಲ, ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಬಗೆಹರಿಸಲಾಗದಂತಹ ಪ್ರಶ್ನೆಗಳು ಉದ್ಭವಿಸಿದ್ದವು. ಇದು ಪ್ರಮುಖವಾಗಿ ಬಸವ ಪಂಥದ ಪ್ರಗತಿಪರರಿಗೂ ಹಾಗೂ ಶೈವ ಮೂಲದ ಪಂಚಾಚಾರ್ಯರ ನಡುವಿನ ವೈಮನಸ್ಯಕ್ಕೆ ಮೂಲಭೂತ ಕಾರಣವಾಗಿತ್ತು. ಟೆಂಪಲ್ಲರ ಮೇಲಿನ ಹೇಳಿಕೆಯ ಪೂರ್ವದಲ್ಲಿಯೇ (೧೯೧೦ರ ನಂತರ ಕಾಲದಲ್ಲಿ) ಹಳಕಟ್ಟಿಯಂತಹ ವಿದ್ವಾಂಸರು ವಚನಕಾರರು. ವೀರಶೈವ ಧರ್ಮ ಮತ್ತು ಇತಿಹಾಸದ ಬಗ್ಗೆ ‘ಖಚಿತ’ ನಿಲುವನ್ನು ಮತ್ತು ಐತಿಹಾಸಿಕ ‘ವಾಸ್ತವ’ವನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು.[1] ಈ ಹಿನ್ನಲೆಯಲ್ಲಿ ಹಳಕಟ್ಟಿಯವರ ಭಾಷಾಂತರಗಳು ಚಾರಿತ್ರಿಕ ಮಹತ್ವವನ್ನು ಪಡೆದಿವೆ.

ಹಳಕಟ್ಟಿಯವರು ತಮ್ಮ ಭಾಷಾಂತರಕ್ಕಾಗಿ ಆಯ್ದುಕೊಂಡ ವಚನಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ೧೯೦೫ ರಿಂದಲೇ ಹಳಕಟ್ಟಿಯವರು ವಚನಗಳ ಮಹತ್ವವನ್ನು ಅರಿತು ಅದರ ಬಗ್ಗೆ ಸಂಶೋಧನೆಯಲ್ಲಿ ತೊಡಗಿದರು. ೧೯೨೩ರಲ್ಲಿ ಪ್ರಕಟವಾದ ವಚನಶಾಸ್ತ್ರಸಾರ ಅನೇಕ ವಚನಗಳನ್ನುಮತ್ತು ವಚನಕಾರರನ್ನು ಓದುಗರಿಗೆ ಪರಿಚಯಿಸಿತು. ವಚನಗಳನ್ನು ಶಾಸ್ತ್ರೀಯ ಸ್ಥಾನಕ್ಕೆ ಉದಾತ್ತಗೊಳಿಸುವ ಪ್ರಯತ್ನ ಇಲ್ಲಿ ಎದ್ದು ಕಾಣುತ್ತದೆ. ಇದರಲ್ಲಿ ವಚನಗಳನ್ನು ಲಿಂಗಾಯತ ಧರ್ಮದ ಆಧಾರ ಸ್ತಂಭವಾದ ಷಟ್‌ಸ್ಥಲಗಳಿಗನುಗುಣವಾಗಿ ವಿಭಾಗಿಸಿರುವುದಲ್ಲದೆ. ಭಾಷಾಂತರಕ್ಕಾಗಿ ಆಯ್ದಕೊಂಡ ಬಸವಣ್ಣನವರ ವಚನಗಳನ್ನು ಸಹ ಷಟ್‌ಸ್ಥಲಗಳನ್ನಾಗಿ ವಿಭಾಗಿಸಿ, ಅವುಗಳ ಮೂಲಕ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಹಾಗಾಗಿ ಇಂಗ್ಲೀಷ್ ಭಾಷಾಂತರಗಳನ್ನು ಭಕ್ತಿ ಸ್ಥಲ, ಮಹೇಶ ಸ್ಥಲ, ಪ್ರಸಾದ ಸ್ಥಲ, ಪ್ರಾಣಲಿಂಗ ಸ್ಥಲ ಮತ್ತು ಐಕ್ಯ ಸ್ಥಲಗಳನ್ನಾಗಿ ವಿಂಗಡಿಸಿಕೊಂಡಿರುವುದನ್ನು ಕಾಣಬಹುದು. ಎಲ್ಲಾ ವಚನಗಳನ್ನು ಮೂಲದ ಗದ್ಯ ರೂಪದಲ್ಲಿಯೇ ಕಾಣಿಸುವ ಹಾಗೆ ಭಾಷಾಂತರಿಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಒಂದು ಭಾಷಾಂತರವನ್ನು ನೋಡಬಹುದು.

Alas!  Alas!  O God, Thou hast not slightest pity for me. Alas!  Alas!  O
God, Thou hast not the slightest mercy me. Why did’st Thou create me, who
am far away from the other world? why did’st thou create me, O
Kudalasangama Deva? O hear me: Were there no trees and shrubs for me? (ಹಳಕಟ್ಟಿ, ೧೯೨೨: ೨).

ಈ ಮೇಲಿನ ಭಾಷಾಂತರದಲ್ಲಿ ಉಪಯೋಗಿಸಲ್ಪಟ್ಟಿರುವ ‘thou’, ‘did’st’ ಪದಗಳು ವಚನಗಳಿಗೆ ಪ್ರಾಚೀನತೆಯನ್ನು ಕಲ್ಪಿಸುವ ಪ್ರಯತ್ನವಾಗಿದೆ. ಈ ವಚನದಲ್ಲಿ ಬಸವಣ್ಣನು ಕೂಡಲಸಂಗಮನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾನೆ. ಯಾವುದೇ ದೈವಿಕ ಶಕ್ತಿಗಳನ್ನೊಳಗೊಳ್ಳದ, ಸಾಮಾನ್ಯ ಮನುಷ್ಯರ ಹಾಗೆ ದೇವರನ್ನು ಪ್ರಾರ್ಥಿಸುವ ಬಸವಣ್ಣನ ಚಿತ್ರವನ್ನು ಇಲ್ಲಿ ಕಾಣಬಹುದು. ನಮ್ಮ ನಿಮ್ಮಂತೆ ಬಸವಣ್ಣನು ಇತಿಹಾಸದಲ್ಲಿ ಆಗಿ ಹೋದ ಒಬ್ಬ ಸಾಮಾನ್ಯ, ಆದರೆ ದಿವ್ಯ ಶಕ್ತಿಯುಳ್ಳ ಮಹಾನ್ ವ್ಯಕ್ತಿ ಎಂದು ಚಿತ್ರಿಸುವಲ್ಲಿ ಹಳಕಟ್ಟಿಯವರು ಆಸಕ್ತಿ ತೋರಿಸಿದರು. ವಚನಗಳನ್ನು ಸಂಸ್ಕರಿಸುವಾಗ ಆಧುನಿಕ ಚಿಹ್ನೆಗಳನ್ನು ಯಥೇಚ್ಛವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪ್ರಶ್ನೆ, ಉದ್ಧಾರ ಮತ್ತು ವಿರಾಮ ಚಿಹ್ನೆಗಳು ಪ್ರಥಮ ಬಾರಿಗೆ ವಚನಗಳಲ್ಲಿ ಪ್ರಯೋಗಿಸಲಾಯಿತು. ವಚನಗಳ ಸಾಲುಗಳನ್ನು ಸಣ್ಣ, ಸಣ್ಣದಾಗಿ ಒಡೆದು ಬೇರ್ಪಡಿಸಿ, ಅರ್ಥವಾಗದ ಪದ ಮತ್ತು ಸಾಲುಗಳನ್ನು ತೆಗೆದು ಹಾಕಿದರು. ವಚನಗಳ ಗೇಯತೆ ಮತ್ತು ಮಾದುರ್ಯವನ್ನು ಒತ್ತಿ ಹೇಳಿದರು. ಮರು-ಬರೆಯಲ್ಪಟ್ಟ ಈ ವಚನಗಳಲ್ಲಿ ಪುನುರುಕ್ತಿ, ರೂಪಕ, ಸಾದೃಶ್ಯ ಮತ್ತು ಪದೋಕ್ತಿಗಳ ಮಹತ್ವಕ್ಕೆ ಹೆಚ್ಚಿನ ಆಸಕ್ತಿ ನೀಡಿದರು. ಹಳಕಟ್ಟಿಯವರ ಭಾಷಾಂತರ ಉತ್ತಮವಾಗಿದೆಯೋ, ಇಲ್ಲವೋ ಅನ್ನುವ ಪ್ರಶ್ನೆ ಇಲ್ಲಿ ಪ್ರಮುಖವಾಗಿಲ್ಲ. ಇತ್ತೀಚಿನ ವಚನಗಳ ಭಾಷಾಂತರಗಳನ್ನು ಗಮನಿಸಿದಾಗ,[2] ಹಳಕಟ್ಟಿಯವರು ವಚನದ ಗದ್ಯರೂಪವನ್ನು ಏಕೆ ಉಳಿಸಿಕೊಂಡರು ಎಂಬ ಪ್ರಶ್ನೆ ಉಂಟಾಗುತ್ತದೆ. ಪ್ರಾಯಶಃ ಅದಕ್ಕೆ ಕಾರಣ ಹಳಕಟ್ಟಿಯವರಿಗೆ ಕಾವ್ಯದ ರೂಪದಲ್ಲಿ ಭಾಷಾಂತರಿಸಲು ಇಷ್ಟವಿರಲಿಲ್ಲವೋ? ಅಥವಾ ಅದಕ್ಕೆ ಬೇಕಾದ ತರಬೇತಿ ಪಡೆದಿದ್ದರೋ? ಅಥವಾ ಆಗ ಇನ್ನೂ ಪ್ರಾಚೀನ ಕೃತಿಗಳನ್ನು ಆಧುನಿಕ ಮಾದರಿಯಲ್ಲಿ ಕಾವ್ಯವನ್ನಾಗಿಸುವ ಮಾದರಿ ಇರಲಿಲ್ಲವೋ? ಒಂದಂತೂ ನಿಜ. ಆಧುನಿಕ ಪಾಶ್ಚಾತ್ಯ ಮಾದರಿಯ ಚಿಹ್ನೆಗಳನ್ನು ಬಳಸಿಕೊಂಡಿದ್ದು, ವಚನಗಳ ಜನ್ಮವನ್ನು ಸೂಚಿಸುತ್ತದೆ.

ಇಲ್ಲಿ ಒಂದು ಪ್ರಶ್ನೆ ಉದ್ಭವವಾಗುತ್ತದೆ. ಹಳಕಟ್ಟಿಯವರಿಗೆ ವಚನಗಳಲ್ಲಿನ ನೈತಿಕ ಮತ್ತು ಬೋಧನಾತ್ಮಕ ಅಂಶಗಳ ಬಗ್ಗೆ ಯಾಕೆ ಹೆಚ್ಚು ಆಸಕ್ತಿ ವಹಿಸಿದರು? ಆಗಿನ ಕಾಲದಲ್ಲಿ ಇಂಗ್ಲೀಷಿನಿಂದ ಕನ್ನಡಕ್ಕೆ ಆಗುತ್ತಿದ್ದ ಭಾಷಾಂತರಗಳ ಸಂಖ್ಯೆ ಹೆಚ್ಚಾಗಿದಾಗ ಮತ್ತು ಪಶ್ಚಿಮದಿಂದ ಜ್ಞಾನದ ಹರಿವು ಕನ್ನಡ ಸಂಸ್ಕೃತಿ ಮತ್ತು ಭಾಷೆಯ ಅಭಿವೃದ್ಧಿಗೆ ಅತ್ಯವಶ್ಯಕವಾದಾಗ ಹಳಕಟ್ಟಿಯಂತವರಿಗೆ ಕನ್ನಡದ ವಚನಗಳನ್ನು ಇಂಗ್ಲೀಷಿಗೆ  ಕೊಂಡೊಯ್ಯುವ ಚಾರಿತ್ರಿಕ ಅವಶ್ಯಕತೆ ಏನಿತ್ತು? ಈ ಪ್ರಶ್ನೆಗಳಿಗೆ ಉತ್ತರವನ್ನು ಹಳಕಟ್ಟಿಯಂತವರಲ್ಲಿ ಮೂಡಿದ್ದ ಆಧುನಿಕ ವಿಚಾರಧಾರೆ ಮತ್ತು ಲಿಂಗಾಯತ ಸಮಾಜಕ್ಕೆ ಹೊಸ ಇತಿಹಾಸವನ್ನು ನಿರ್ಮಿಸುವ ಬಯಕೆಯಲ್ಲಿ ನೋಡಬಹುದು. ಪ್ರಾಯಶಃ ವಚನಗಳು ಮತೀಯ ಸಾಹಿತ್ಯವಾಗಿರದೆ ವಿಶ್ವದಲ್ಲಿ ನೈತಿಕ ಮೌಲ್ಯಗಳನ್ನು ಹರಡುವ ಉದಾತ್ತ ಧ್ಯೇಯವುಳ್ಳದ್ದು ಮತ್ತು ಎಲ್ಲರ ಗಮನಕ್ಕೆ ಅರ್ಹವಾದುದು ಎಂದು ಸಾಬೀತು ಪಡಿಸುವದಕ್ಕೋಸ್ಕರ ನೈತಿಕ ಮೌಲ್ಯಗಳನ್ನು ವಿಶೇಷಿಕರಿಸಲಾಗಿದೆ. ಲಿಂಗಾಯತರ ಮತ್ತು ಅವರ ಸಮಾಜದ ಮಹತ್ವವನ್ನು ಮತ್ತು ಯೋಗ್ಯತೆಯನ್ನು ಸಮರ್ಥಿಸುವ  ಜವಾಬ್ದಾರಿಯನ್ನು ಹಳಕಟ್ಟಿಯವರು ನಿಭಾಯಿಸಿದರು. ಪಾಶ್ಚಾತ್ಯಕ್ಕೆ – ಬ್ರಾಹ್ಮಣ ಮತ್ತು ಶೈವ ಲಿಂಗಾಯತರಿಂದ ತಪ್ಪಾಗಿ ಬರೆಯಲ್ಪಟ್ಟ ಲಿಂಗಾಯತ ಇತಿಹಾಸ, ಸಾಹಿತ್ಯ ಮತ್ತು ಧರ್ಮವನ್ನು ಸರಿಪಡಿಸಿ, ಮರುವ್ಯಾಖ್ಯಾನಿಸುವ ಪ್ರಯತ್ನದಲ್ಲಿ ಹಳಕಟ್ಟಿಯವರ ಪಾತ್ರ ಹಿರಿದು. ಈ ಚಾರಿತ್ರಿಕ ಅವಶ್ಯಕತೆಗಳು ಮತ್ತು ಒತ್ತಡಗಳು ಹಳಕಟ್ಟಿಯವರ ಮನೋಭೂಮಿಕೆಯನ್ನು ನಿರ್ಮಿಸಿರುವುದನ್ನು ನಾನು ಮುಂದಿನ ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದೇನೆ. ಆಧುನಿಕ ಕನ್ನಡ ಲೇಖಕರ ಒಡನಾಟ ಮತ್ತು ಕನ್ನೆ ಸಾಹಿತ್ಯದ ಬಗ್ಗೆ ಒಲವಿದ್ದರೂ, ಲಿಂಗಾಯತ ಸಮುದಾಯವು ಪ್ರಗತಿಪರ ಮತ್ತು ಜಾತ್ಯಾತೀತ ಎಂದು ತೋರಿಸುವ ಉತ್ಕಟತೆಯನ್ನು ಹಳಕಟ್ಟಿಯವರಲ್ಲಿ ಕಾಣುತ್ತೇವೆ. ಈ ಉತ್ಕಟತೆಯಲ್ಲಿ ಅವರ ಸಮುದಾಯ ಕೇಂದ್ರಿತ ಒಲವುಗಳು ಎದ್ದು ಕಾಣುತ್ತವೆ. ಬಿ.ಎಂ. ಶ್ರೀಕಂಠಯ್ಯನವರಂತೆ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಧುನಿಕಗೊಳಿಸುವ ಅಥವಾ ಬೇಂದ್ರೆಯವರಂತೆ ಕನ್ನಡ ಸಾಹಿತ್ಯಕ್ಕೆ? ಕಾವ್ಯಕ್ಕೆ ದೇಸಿ ಜಾನಪದದ ಸೊಗಡನ್ನು ಬೆಸೆಯುವ ಪ್ರಯತ್ನವನ್ನು ಹಳಕಟ್ಟಿಯವರಲ್ಲಿ ಕಾಣುವದಿಲ್ಲ.

ಹಳಕಟ್ಟಿಯವರಿಗೆ ೧೨ನೇ ಶತಮಾನದ ವೀರಶೈವ/ವಚನ ಚಳುವಳಿ ಒಂದು ಧಾರ್ಮಿಕ ಚಳುವಳಿ. ಈ ಧಾರ್ಮಿಕ ಚಳುವಳಿಯ ಮೂಲಕ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿ ಉದ್ಭವಿಸಿತು. ಕ್ರಾಂತಿಯ ನೈತಿಕ ಆಧಾರದ ಮೇಲೆ ನಡೆಯಿತು. ಧಾರ್ಮಿಕ ತತ್ವದ ಜೊತೆಗೆ ನೈತಿಕ ಹಾಗು ಬೋಧನಾತ್ಮಕ ಅಂಶಗಳನ್ನು ಬೆಸೆದಿರುವದನ್ನು ನೋಡಿ ಹಳಕಟ್ಟಿಯವರಿಗೆ ಆಶ್ಚರ್ಯ ಹಾಗು ಹೆಮ್ಮೆ. ಈ ನೈತಿಕತೆಯ ತಳಹದಿಯ ಮೇಲೆ ಹಳಕಟ್ಟಿಯವರು ವಚನಗಳನ್ನು ಹಾಗು ವಚನಕಾರರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ವಿಶ್ವಾತ್ಮಕಗೊಳಿಸುವ ಪ್ರಯತ್ನಗಳನ್ನು ಮಾಡಿದರು. ಇತರ ಸಮುದಾಯಕ್ಕೆ ಸೀಮಿತಗೊಳಿಸದೇ ವಿಶ್ವಾತ್ಮಕಗೊಳಿಸುವ ಪ್ರಯತ್ನಗಳನ್ನು ಮಾಡಿದರು. ಇತರ ಪ್ರಸಿದ್ಧ ಧರ್ಮಗಳಂತೆ ವಚನಗಳು ಬರೀಯ ಸಮುದಾಯ-ಕೇಂದ್ರಿತವಾಗಿರದೆ, ಮಾನವತೆ ಹಾಗು ಜಾತ್ಯಾತೀತ ಅಂಶಗಳನ್ನು ಒಳಗೊಂಡ ಅಮೂಲ್ಯ ರತ್ನಗಳಿವು ಎಂದು ಒತ್ತಿ ತೋರಿಸಿದರು. ಅವರ ಪ್ರಕಾರ ವಚನಗಳು ಧಾರ್ಮಿಕ ಸಹಿಷ್ಣುತೆ ಹಾಗು ಅಹಿಂಸೆಯನ್ನು ಪ್ರತಿಪಾದಿಸುತ್ತವೆ. ಈ ಎಲ್ಲಾ ಮೌಲ್ಯಗಳನ್ನು ಭಾಷಾಂತರಗಳ ಮೂಲಕ ಪ್ರಚಾರಗೊಳಿಸುವ ಪ್ರಯತ್ನಗಳನ್ನು ಅವರು ನಿಷ್ಠೆಯಿಂದ ಮಾಡಿದರು.

ಇಂತಹ ಪ್ರಯತ್ನಗಳಿಗೆ ವಿರೋಧವಿರಲೇ ಇರಲಿಲ್ಲ. ಲಿಂಗಾಯತ ಸಮುದಾಯದಲ್ಲಿ ಕೆಲವರು ಶೈವ ಸಿದ್ಧಾಂತದಲ್ಲಿ ನಂಬಿಕೆಯುಳ್ಳವರಾಗಿದ್ದರು. ಅವರಿಗೆ ಈ ವಚನಗಳಿಂದ ಸಮಾಧಾನವಾದ ಹಾಗೆ ಕಾಣುವುದಿಲ್ಲ. ಅವುಗಳನ್ನು ಲಿಂಗಾಯತರ ಪ್ರಾತಿನಿಧಿಕ ಕೃತಿಗಳೆಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.[3] ಹಳಕಟ್ಟಿಯಂತವರಿಗೆ ಎದುರಾದ ಈ ವಿರೋಧದ ನಡುವೆಯೂ ವಚನಗಳ ಪ್ರಸಿದ್ಧಿ ಲಿಂಗಾಯತೇತರ ಪ್ರಗತಿಪರ ವಿದ್ವಾಂಸರಾದ – ಎಂ.ಆರ್. ಶ್ರೀನಿವಾಸಮೂರ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆರ್.ಆರ್. ದಿವಾಕರ ಹಾಗು ಇನ್ನಿತರರ – ಕೊಡುಗೆ ಮಹತ್ವದ್ದು. ಇವರಿಗೆ ವಚನಗಳು ಮತ್ತು ವಚನಕಾರರು ಮಾನವತೆಯ ಹರಿಕಾರವಾಗಿ ಗೋಚರಿಸಿದವು. ಈ ಸಂದರ್ಭದಲ್ಲಿ ಮಾಸ್ತಿಯವರ Sayings of Basavanna ಸಾಂಸ್ಕೃತಿಕ ಮಹತ್ತನ್ನು ಪಡೆದುಕೊಂಡಿತು.

ಭಾಗ

‘Sayings of Basavanna’ : ರಾಷ್ಟ್ರೀಯತೆ ಮತ್ತು ಹಿಂದೂ ಧರ್ಮ

ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ. ಮಾಸ್ತಿಯವರು ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆಗಳ ಜನಕರೆಂದೇ ಪ್ರಸಿದ್ಧಿ. ಉನ್ನತ ಅಧಿಕಾರಿಯಾಗಿದ್ದುಕೊಂಡು ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಮಾಸ್ತಿಯವರ ಚೆನ್ನಬಸವ ನಾಯಕ, ಚಿಕವೀರ ರಾಜೇಂದ್ರ ಕಾದಂಬರಿಗಳು ಮತ್ತು ಬಿಜ್ಜಳರಾಯ ಚರಿತ್ರೆ ಮೇಲಿನ ಸಂಶೋಧನೆ ಉಲ್ಲೇಖನೀಯವಾಗಿವೆ.

ಬಸವಣ್ಣನವರ ವಚನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಲು ಮಾಸ್ತಿಯವರಿಗಿದ್ದ ಕಾರಣ ವಚನಗಳ ‘ಉತ್ತಮಾಂಶಗಳು’. ಅವುಗಳಲ್ಲಿ ಕಾಣುವ ಹೃದಯ ವೈಶಾಲ್ಯತೆ, ಏಕದೇವೋಪಾಸನೆ ಮತ್ತು ಬಡವರ ಬಗೆಗಿನ ಮಮತೆ, ಇತ್ಯಾದಿಗಳು ಮಾಸ್ತಿಯವರನ್ನು ಆಕರ್ಷಿಸಿವೆ. ಅವರ ಭಾಷಾಂತರಗಳಲ್ಲಿ (೧೯೩೫) ರಾಷ್ಟ್ರೀಯತೆಯ ಭಾವನೆಗಳು ಪ್ರಮುಖವಾಗಿದ್ದರೆ, ಎರಡನೇ ಬಾರಿ ಪ್ರಕಟಗೊಂಡ ಭಾಷಾಂತರಗಳಲ್ಲಿ (೧೯೮೩) ಹಿಂದೂ ಧರ್ಮ ಹಾಗು ಪ್ರಾಚೀನ ಜಾತಿ ಪದ್ಧತಿಗಳು grand narratives ಆಗಿ ಕಾಣುತ್ತವೆ. ಇವನ್ನು ಅವರು ವಚನಗಳನ್ನು ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಬಳಸಿಕೊಂಡಿದ್ದಾರೆ. ೧೯೩೫ರ ಭಾಷಾಂತರದಲ್ಲಿ ಮಾಸ್ತಿಯವರು ೧೨ನೇ ಶತಮಾನದ ಚಳುವಳಿ ಹಾಗು ಬಸವಣ್ಣನ ಬಗ್ಗೆ ಹೀಗೆ ಹೇಳುತ್ತಾರೆ.

ಧರ್ಮದ ತಳಹದಿಗಳು ಮೇಲೆ ಸಮಾಜವನ್ನು ಸುತ್ತುವರೆದಿದ್ದ ರಾಕ್ಷಸ ಪ್ರವೃತ್ತಿಯನ್ನು ನಿರ್ಮೂಲನಗೊಳಿಸಲು ಅಂದಿನ ಕಾಲದಲ್ಲಿಯೇ  ಒಬ್ಬ ರಾಷ್ಟ್ರೀಯ ನಾಯಕನು ಪಟ್ಟ ಪರಿಶ್ರಮವನ್ನು ಅದರ ಚರಿತ್ರೆಯಿಂದ ತಿಳಿಯಬಹುದು. ಸ್ವತಂತ್ರವಾಗಿರಲು ಶ್ರಮ ಪಡುತ್ತಿದ್ದ ದೇಶದ ಮನೋಸ್ಥಿತಿಯನ್ನು ಈ ನಾಯಕನ ಜೀವನ ಹಾಗು ವಿಚಾರಗಳಲ್ಲಿ ಸ್ಪಷ್ಟವಾಗಿ ಪ್ರತಿಫಲನಗೊಂಡಿದೆ (೧೯೮೩: ೬೪).

೧೯೩೦ರ ಆಸುಪಾಸಿನಲ್ಲಿ ಉತ್ತಂಗಕ್ಕೇರಿದ ರಾಷ್ಟ್ರೀಯತೆ ಮನೋಭಾವನೆಯು ಮಾಸ್ತಿಯವರನ್ನೂ ಸಹ ಪ್ರಭಾವಿಸಿದೆ. ಬಸವಣ್ಣನಲ್ಲಿ ರಾಷ್ಟ್ರೀಯತೆ ಧೋರಣೆಯನ್ನು ಗುರುತಿಸಿರುವ ಮಾಸ್ತಿಯವರು ಅವನನ್ನು ರಾಷ್ಟ್ರೀಯ ವಾಹಿನಿಗೆ ಬಂಧಿಸುತ್ತಾರೆ.

ಹಳಕಟ್ಟಿಯವರಂತೆ ಮಾಸ್ತಿಯವರು ಸಹ ವಚನಗಳನ್ನು ಬಹುತೇಕ ಗದ್ಯರೂಪದಲ್ಲಿ ಭಾಷಾಂತರಿಸಿದ್ದಾರೆ. ಅವರ ಭಾಷಾಂತರದ ಶೈಲಿಗೆ ಒಂದು ಉದಾಹರಣೆ,

Alas!  My master, you are without any pity
Alas!  My God, you have no mercy, why
Did you make me such a travaller on the
earth? Why did you create me hopless
Of heaven? Why did you give me birth?
O Gmd Kudala Sangama, Listen and tell
Me. Could you not have made some
Plnat tree rather than me? (೧೯೩೫: ೫).

ಮೇಲಿನ ಭಾಷಾಂತರದಲ್ಲಿ ಯಾವುದೇ ಪುರಾತನ ಇಂಗ್ಲೀಷ್ ಪದಗಳನ್ನು ಉಪಯೋಗಿಸಿಲ್ಲ. ಜೊತೆಗೆ ಬಸವಣ್ಣನ ವಚನಗಳು ನಿರ್ಧಿಷ್ಟ ಅರ್ಥವನ್ನು (ಮಾಸ್ತಿಯವರ ಪ್ರಕಾರ ರಾಷ್ಟ್ರೀಯತೆಯ ಭಾವನೆಗಳು) ಹೊರಡಿಸುತ್ತದೆಯೆಂದು ಹೇಳುವದರ ಮೂಲಕ ಅರ್ಥಗಳನ್ನು ಸಂಕುಚಿತಗೊಳಿಸುವ ಪ್ರಯತ್ನವನ್ನು ಹಳಕಟ್ಟಿ ಹಾಗು ಮಾಸ್ತಿಯವರಿಬ್ಬರಲ್ಲೂ ಕಾಣಬಹುದು. ಹಳಕಟ್ಟಿಯವರಂತೆ ಮಾಸ್ತಿಯವರೂ ಸಹ ವಚನಗಳನ್ನು ನೈತಿಕ ಹಾಗು ಬೋಧನಾತ್ಮಕ ವಿಷಯಗಳ ತಳಹದಿಯ ಮೇಲೆ ವಿಂಗಡಿಸಿಕೊಂಡಿದ್ದಾರೆ. ಆದರೆ ಇವು ಷಟ್‌ಸ್ಥಲಗಳಿಗನುಗುಣವಾಗಿ ಇಲ್ಲ. ವಚನಗಳು ಬಸವಣ್ಣನಿಂದಲೇ ರಚಿಸಲ್ಪಟ್ಟಿದ್ದು ಎಂಬುದರಲ್ಲಿ ಮಾಸ್ತಿಯವರಿಗೆ ಎಳ್ಳಷ್ಟು ಸಂಶಯವಿಲ್ಲ. ಮಾಸ್ತಿಯವರ ಪ್ರಕಾರ ಬಸವಣ್ಣನು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ನಂತರ ಅಲ್ಲಿನ ಮೂಢ ಸಂಪ್ರದಾಯವನ್ನು ವಿರೋಧಿಸಿ ವೀರಶೈವ ತತ್ವವನ್ನು ಅನುಸರಿಸಿದನು. ಬಸವಣ್ಣನ ಉದಾತ್ತ ಜೀವನದ ಬಗ್ಗೆ ಪ್ರಚಲಿತದಲ್ಲಿದ್ದ ಮಾಹಿತಿಗಳಿಗಿಂತ ವಚನಗಳ ಮೂಲಕ ಬಸವಣ್ಣನ ಜೀವನೋದ್ದೇಶ, ಗುರು, ಸಾಧನೆಗಳನ್ನು ತಿಳಿದುಕೊಳ್ಳುವಲ್ಲಿ ಮಾಸ್ತಿಯವರಿಗೆ ಹೆಚ್ಚು ಆಸಕ್ತಿ (ಮಾಸ್ತಿ, ೧೯೩೨: ೨-೩). ಬಸವಣ್ಣನು ಒಬ್ಬ ಸುಧಾರಣವಾದಿಯಾಗಿ ಹಾಗು ಸತ್ಯಾನ್ವೇಷಕನಾಗಿ ಕಾಣಿಸಿಕೊಳ್ಳುತ್ತಾನೆ. ಬಸವಣ್ಣನನ್ನು ದೇವರನ್ನಾಗಿ ಪೂಜಿಸುತ್ತಿದ್ದುದರ (ಮಾಸ್ತಿ, ೧೯೩೫: ೨) ಬಗ್ಗೆ ಮಾಸ್ತಿಯವರಿಗೆ ಅಸಮಾಧಾನವಿದೆ. ಇದಕ್ಕೆ ವ್ಯತಿರಿಕ್ತವಾಗಿ ಮಾಸ್ತಿಯವರಿಗೆ ಬಸವಣ್ಣನು ಯಾವುದೇ ಪವಾಡಗಳನ್ನೊಳಗೊಳ್ಳದ ಅಥವಾ ದೈವೀ ಲಕ್ಷಣಗಳನ್ನೊಳಗೊಳ್ಳದ ಆದರೆ ವ್ಯಕ್ತಿ ಸ್ವಾತಂತ್ರ‍್ಯ ಹಾಗು ಸ್ತ್ರೀ ಸಮಾನತೆಗಾಗಿ ಹೋರಾಡಿದ ಮಹಾಪುರುಷನಾಗಿ ಕಾಣಿಸುತ್ತಾನೆ.

ಈ ವಚನಗಳನ್ನು ಎರಡನೇ ಸಲ (೧೯೮೩) ಪ್ರಕಟಿಸಿದಾಗ ಮಾಸ್ತಿಯವರು ಮತ್ತೊಮ್ಮೆ ಹೊಸದಾಗಿ ವಚನಗಳ ಮಹತ್ತನ್ನು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಈಗ ೧೨ನೇ ಶತಮಾನದ ವೀರಶೈವ ಚಳುವಳಿಯು ಅವರಿಗೆ ಹಿಂದು ಧರ್ಮದ ಆಂತರಿಕ ಸುಧಾರಣವಾದಿ ಚಳುವಳಿಯಾಗಿ ಕಾಣಿಸುತ್ತದೆ. ವೀರಶೈವರು ಹಿಂದೂ ಧರ್ಮದ ಅಭಿನ್ನ ಭಾಗವಾಗಿದ್ದಾರೆಂದು ಮಾಸ್ತಿಯವರ ಅಚಲ ನಂಬಿಕೆ. ಹಾಗಾದರೆ ಈ ಹಿರಿಯ ಧರ್ಮದ ಮೂಲ ಯಾವುದು? ಹಿಂದಿನ ಸನಾತನ ಧರ್ಮವೇ ಹಿಂದೂ ಧರ್ಮದ  ತಳಪಾಯ ಎಂದು ಮಾಸ್ತಿಯವರು ಘೋಷಿಸುತ್ತಾರೆ. ಅವರ ಪ್ರಕಾರ ಬಸವಣ್ಣನ ಮತ್ತೊಂದು ನಾಮಧೇಯವಾದ ಬಸವೇಶ್ವರ ಎಂಬುದು  ಬಸವಣ್ಣ ಎಂಬುದರ ಸಂಸ್ಕೃತ ರೂಪ. ಇತ್ತೀಚಿನ ಯುಗದಲ್ಲಿ ಎಲ್ಲರಿಗೂ ದೇವರ ಮೇಲೆ ನಂಬಿಕೆ ಇಲ್ಲದಿರುವದರಿಂದ ವಚನಗಳ ದೇವರಲ್ಲಿ ಮತ್ತೆ ನಂಬಿಕೆ ಹುಟ್ಟಿಸಲು ಕಾರಣವಾಗಿದೆಯೆಂದು ಭಾವಿಸುತ್ತಾರೆ. ಪರಮಾತ್ಮನಲ್ಲಿ ನಂಬಿಕೆ ಕ್ಷೀಣಿಸುತ್ತಿರುವದಕ್ಕೆ ಕಮ್ಯುನಿಸಂ ಕಾರಣವಾಗಿದೆ ಎಂದು ಮಾಸ್ತಿಯವರು ಆಪಾದಿಸುತ್ತಾರೆ, ತಕ್ಷಣ ಮಾಸ್ತಿಯವರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡುತ್ತಾ ಕಮ್ಯುನಿಸಂ ಪರಮಾತ್ಮನ ಅಸ್ತಿತ್ವವನ್ನು ಅಲ್ಲಗಳೆಯುವ ಅವಶ್ಯಕತೆ ಇಲ್ಲ. ಏಕೆಂದರೆ ಕಾರ್ಲ ಮಾರ್ಕ್ಸ್‌ನ ವಿಚಾರಗಳು ಅಂದಿನ ಸಮಾಜಕ್ಕೆ ಪ್ರಸುತ್ತವಾಗಿದ್ದವು. ಜೊತೆಗೆ ಜನಹಿತವೇ ಮಾರ್ಕ್ಸ್‌ನ ಉದ್ದೇಶವಾದುದರಿಂದ ಪರಮಾತ್ಮನ ಆಸ್ತಿತ್ವವನ್ನು ಪ್ರಶ್ನಿಸುವ ಅವಶ್ಯಕತೆ ಕಾಣಿಸುವದಿಲ್ಲ. ಮಾರ್ಕ್ಸ್‌ನ ವಿಚಾರಗಳು ಪ್ರಚಲಿತವಾಗಿರುವ ಮೊದಲೇ ಅಂದರೆ ಏಳು ನೂರು ವರ್ಷಗಳ ಹಿಂದೆಯೆ, ಬಸವಣ್ಣ ವಚನಗಳು ಸಮಾನ ಜೀವನವನ್ನು ಪ್ರತಿಪಾದಿಸಿದ್ದವು ಎಂದು ಮಾಸ್ತಿಯವರು ಹೆಮ್ಮೆಯಿಂದ ಹೇಳುತ್ತಾರೆ. ಜಾರಿ ಪದ್ಧತಿಯ ಬಗ್ಗೆ ಮಾಸ್ತಿಯವರು ವ್ಯಕ್ತ ಪಡಿಸಿರುವ ವಿಚಾರಗಳು ಇಲ್ಲಿ ಗಮನಾರ್ಹ. ಆಧುನಿಕ ಕಾಲದಲ್ಲಿನ ಜಾತಿ ಪದ್ಧತಿಯ ಬಗ್ಗೆ ಮಾಸ್ತಿಯವರಿಗೆ ತಿರಸ್ಕಾರ ಭಾವನೆಯಿದೆ. ಅವರ ಪ್ರಕಾರ “ಜಾತಿ ಪದ್ಧತಿಯ ನಿಸ್ಸಂಶಯವಾಗಿ  ಒಳ್ಳೆಯ ಕಾರಣಗಳಿಗಾಗಿಯೇ ಹುಟ್ಟಿಕೊಂಡಿತು” (ಮಾಸ್ತಿ, ೧೯೮೩: ೪); ಹಿಂದೆ ಬೇರೆ, ಬೇರೆ ಜಾತಿಯ ಕಸುಬುದಾರರನ್ನು ಒಂದು ಗೂಡಿಸುವಲ್ಲಿ ಹಾಗು ತನ್ನದೇ ಆದ ಜೀವನ ಶೈಲಿ ಹಾಗು ಆಚಾರಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿತು. ಆದರೆ ಈಗಿನ ಜಾತಿ ಆಧಾರಿತ ರಾಜಕೀಯದ ಬಗ್ಗೆ ಮಾಸ್ತಿಯವರಿಗೆ ಒಂದು ಬಗೆಯ ಅಸಹ್ಯ ಭಾವನೆ ಇದೆ. “ಪ್ರತಿಯೊಬ್ಬನಿಗೂ, ಮತದ ಹಕ್ಕಿದೆ. ಈ ಮತವನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರಾಜಕೀಯ ನಾಯಕನು ಜಾತಿಯನ್ನು ಆಧಾರಿಸಿದ್ದಾನೆ” (ಮಾಸ್ತಿ. ೧೯೮೩: ೫) ಎಂದು ಜರಿಯುತ್ತಾರೆ. ಮಾಸ್ತಿಯವರಿಗೆ ಹಿಂದಿನ ಕಾಲದ (ಬಸವಣ್ಣನಿಗೂ ಮೊದಲು) ಜಾತಿ ಪದ್ಧತಿಯೆ ಸೂಕ್ತವೆನಿಸಿದೆ. ಆ ಪದ್ಧತಿಯನ್ನು ಆಧುನಿಕ ಕಾಲದಲ್ಲೂ ಅನುಸರಿಸಬೇಕೆಂದು ಬಯಸುತ್ತಾರೆ. ಗುರು ನಾನಕ್, ಬುದ್ಧ ಹಾಗು ರಾಜಾರಾಮ್ ಮೋಹನ್ ರಾಯ್ ಇವರುಗಳ ಬಗ್ಗೆ ಮಾಸ್ತಿಯವರಿಗೆ ಅಸಮಾಧಾನವಿದೆ. ಏಕೆಂದರೆ ಅವರೆಲ್ಲರೂ ಧಾರ್ಮಿಕ, ಜಾತಿಯ ಸಮುದಾಯಗಳಿಗೆ ಮತ್ತಷ್ಟು ಮತೀಯ ಬಣ್ಣವನ್ನು ಸೇರಿಸಿದರೆಂದು ಮಾಸ್ತಿಯವರು ಆಪಾದಿಸಿದ್ದಾರೆ. ಆದರೆ ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರ ಬಗ್ಗೆ ಗೌರವ. ಏಕೆಂದರೆ ಅವರ ವಿಚಾರಗಳು ಪ್ರತ್ಯೇಕ ಜಾತಿ/ಸಮುದಾಯವಾಗಿ ಮಾರ್ಪಾಡಲಿಲ್ಲ. ಬಸವಣ್ಣನ ಬಗ್ಗೆ ಇಂತಹ ಅಸಮಾಧಾನ ಇದ್ದರೂ ಆತನ ವಚನಗಳು ಜಾತಿ ಪದ್ಧತಿಯನ್ನು ಅಳಿಸಿ ಹಾಕುವ ಶಕ್ತಿಯನ್ನು ಹೊಂದಿವೆಯೆಂದು ಮಾಸ್ತಿಯವರು ಭಾವಿಸುತ್ತಾರೆ. ಜಾತಿ ಪದ್ಧತಿಯನ್ನು ನಿರ್ಮೂಲನ ಮಾಡಿ, ಸಮಾನತೆ ಹಾಗು ಪ್ರಗತಿಪರ ಸಮಾಜವನ್ನು ಕಟ್ಟಲು ವಚನಗಳನ್ನು ಬಳಸಬೇಕೆಂದು ಅವರು ಆಶಿಸುತ್ತಾರೆ. ಪ್ರಾಚೀನ ಜಾತಿ ಪದ್ಧತಿ ಆಧಾರಿತ ಹಿಂದೂ ಧರ್ಮವನ್ನು ಕಾಪಾಡುವ ಕಾಳಜಿ ಮಾಸ್ತಿಯವರ ಮುನ್ನುಡಿಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಈ ಉದ್ದೇಶ ಈಡೇರಲು ಮಾಸ್ತಿಯವರಿಗೆ ಬಸವಣ್ಣನ ವಚನಗಳು ಅವಶ್ಯಕ.

ಭಾಗ

‘Musings of Basava’ : ಸಾಹಿತ್ಯಕಾವ್ಯಗಳಾಗಿ ವಚನಗಳು

ಶಿ.ಶಿ. ಬಸವನಾಳ ಹಾಗೂ ಕೆ.ಆರ್. ಶ್ರೀನಿವಾಸ ಐಯ್ಯಂಗಾರರು ಕ್ರಮವಾಗಿ ಲಿಂಗಾಯತ ಹಾಗು ಬ್ರಾಹ್ಮಣ ಮೂಲದವರು. ವಚನಗಳನ್ನು ಮತೀಯ ಹಾಗೂ ಶಾಸ್ತ್ರೀಯ ದೃಷ್ಟಿಯಿಂದ ನೋಡುವ ’ಸಂಕುಚಿತ’ ಕ್ರಮದಾಚೆಗೆ ಹೋಗಿ ಅವುಗಳಲ್ಲಿ ಕಾವ್ಯದ ಅಂಶಗಳನ್ನು ಶೋಧಿಸಿ, ಪ್ರಸಿದ್ಧಿಗೊಳಿಸುವಲ್ಲಿ ಇವರಿಬ್ಬರ ಕಾಣಿಕೆ ಮಹತ್ವದ್ದು. ವಚನಗಳನ್ನು ಆಧುನಿಕ ಹಾಗು ಪಾಶ್ಚಾತ್ಯ ಮಾದರಿಯಲ್ಲಿ ಪುನರ್ ರಚಿಸಿ, ಅವುಗಳನ್ನು ಪಾಶ್ಚಾತ್ಯ ಭಾವಗೀತೆಗಳಂತೆ (lyric) ಇಂಗ್ಲೀಷ್‌ಗೆ ಭಾಷಾಂತರಿಸುವಲ್ಲಿ ಇವರ ಸಾಧನೆ ಈಗಲೂ ಸ್ಮರಣಿಯ ಮತ್ತು ಮಾದರಿಯೂ ಕೂಡ ಆಗಿದೆ. ಇವರಿಬ್ಬರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಸಹದ್ಯೋಗಿಗಳಾಗಿದ್ದರು. ಬಸವನಾಳರು ಕನ್ನಡ ಪಂಡಿತರಾದರೆ, ಐಯ್ಯಂಗಾರರು ಇಂಗ್ಲೀಷ್ ಸಾಹಿತ್ಯದ ಪ್ರಾಧ್ಯಾಪಕರು. ಇಂಗ್ಲೀಷ್ ಕಾವ್ಯದ ಮಾದರಿಯಂತೆ ವಚನಗಳನ್ನು (Musings of Basava) (೧೯೪೦) ಎಂಬ ಶೀರ್ಷಿಕೆಯಡಿಯಲ್ಲಿ ಭಾಷಾಂತರಿಸಿದ್ದಾರೆ. ಅವರು ಹೇಳುವ ಪ್ರಕಾರ,

ಆಯ್ಕೆ ಮಾಡಲ್ಪಟ್ಟ ವಚನಗಳನ್ನು ಭಾಷಾಂತರಿಸುವಾಗ ನಮಗೆ ಗದ್ಯ-ಕಾವ್ಯದ ನಡುವೆ ಹಿಂಜರಿಕೆಯಾಯಿತು, ಮೂಲ ಗದ್ಯ ರೂಪದಲ್ಲಿರುವದನ್ನು ಇಂಗ್ಲೀಷ್‌ಗೆ ಪ್ರಾಸಬದ್ಧ ಅಥವಾ ಅಪ್ರಾಸಬದ್ಧವಾಗಿ ತರುವುದು ಒಟ್ಟಿನಲ್ಲಿ ಸಮಸ್ಯೆಯಾಗುತ್ತಿತ್ತು; ಲಯಬದ್ಧತೆಯಿಂದ ಕೂಡಿದ ಮೂಲ ಗದ್ಯವನ್ನು ಬರೀಯ ಗದ್ಯರೂಪವಾಗಿ ಮಾರ್ಪಾಡಿಸಿದ್ದಾರೆ ನಿಸ್ತೇಜವಾಗುತ್ತಿದ್ದವು. ಅದ್ದರಿಂದ ನಾವು ಮೂಲವಾದದ್ದನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಲು ‘ಮುಕ್ತ ಭಾಷಾಂತರ’ ಗಳನ್ನಾಗಿ ಮಾರ್ಪಡಿಸಿದ್ದೇವೆ (೧೯೪೦: ೩೭).

ಪ್ರಸಿದ್ಧ ಕವಿಗಳ ಕಾವ್ಯದ ಶ್ರೇಷ್ಠ ಹಾಗು ಪರಿಣಾಮಕಾರಿ ಅಂಶಗಳನ್ನು ಅವರು ಧಾರಾಳವಾಗಿ ಸ್ವೀಕರಿಸಿದ್ದಾರೆ. ಹೀಗಾಗಿ ವಚನಗಳನ್ನು ಆಧುನಿಕಗೊಳಿಸಿ, ಭಾಷಾಂತರಿಸಲು ಮೂಲ ಹೀಬ್ರೂ ಭಾಷೆಯಿಂದ ಆಧುನಿಕಗೊಳಲ್ಪಟ್ಟ ಬೈಬಲ್ ಇವರಿಗೆ ಮಾದರಿಯಾಯಿತು. ಭಾಷಾಂತರ ಸಮಸ್ಯೆ ಹಾಗು ಪರಿಣಾಮಗಳ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿರುವುದು ಇಲ್ಲಿ ಕಾಣಿಸುತ್ತದೆ. ಆದಾಗ್ಯೂ ಇದು ಅವರ ಚೊಚ್ಚಲ ಪ್ರಯತ್ನವಾದ್ದರಿಂದ ಭಾಷಾಂತರ ಪ್ರಕ್ರಿಯೆಯಲ್ಲಿ ಅನೇಕ ಸ್ವಾತಂತ್ರತೆಯನ್ನು ಚಲಾಯಿಸಿದ್ದಾರೆ. ಆದ್ದರಿಂದ ಅವರ ನಮ್ಮ ಭಾಷಾಂತರಗಳಿಗೆ ‘free rendering’ ಎಂದು ಓದುಗರಿಗೆ ಮುನ್ಸೂಚನೆ ನೀಡುತ್ತಾರೆ.

ಭಾಷಾಂತರಗಳನ್ನು ಪರಿಚಯಿಸುತ್ತಾ ವಚನಗಳ ಬಗ್ಗೆ ಅವರು ಅನೇಕ ವಿಚಾರಗಳನ್ನು ಮಂಡಿಸಿದ್ದಾರೆ. ಅದರಲ್ಲಿ ಬಸವಣ್ಣ ಹಾಗು ವೀರಶೈವ ಚಳುವಳಿಯ ಬಗ್ಗೆ ಹೆಮ್ಮೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಳಕಟ್ಟಿ ಹಾಗು ಇವರ ನಡುವೆ ಇರುವ ಭಿನ್ನತೆಗಳು ಇಲ್ಲಿ ಎದ್ದು ಕಾಣಿಸುತ್ತವೆ, ಹಳಕಟ್ಟಿಯವರಿಗೆ ವಚನಗಳು ಶಾಸ್ತ್ರೀಯ ವಾಙ್ಞಯವಾಗಿ ಕಂಡರೆ, ಬಸವನಾಳ ಹಾಗೂ ಐಯ್ಯಂಗಾರರಿಗೆ ಅವು ಕಾವ್ಯದ ಅಂಶವನ್ನು ಒಳಗೊಂಡರುವ ಕನ್ನಡ ಸಾಹಿತ್ಯ. ವಚನಗಳ ಅನುಭಾವದ (mysticism) ಬಗ್ಗೆ ಬಸವವಾಳ ಹಾಗೂ ಐಯ್ಯಂಗಾರರು ವಿಶೇಷ ಮಹತ್ವನ್ನು ತೋರಿಸಿದ್ದಾರೆ. ಬಸವಣ್ಣನ ಅನುಭಾವ ತತ್ವಗಳನ್ನು ತುಕಾರಾಮ್, ಕಬೀರ್, ಮೀರಾಬಾಯಿ ಹಾಗೂ ಸೂಫಿ ಸಂತರ ತತ್ವಗಳೊಂದಿಗೆ ಹೋಲಿಸಿ ಅವನ ಹಿರಿಮೆಯನ್ನು ಕೊಂಡಾಡಿದ್ದಾರೆ. ವಚನಗಳಲ್ಲಿನ ಪ್ರಾಸದ ಲಕ್ಷಣಗಳ ಬಗ್ಗೆ ಅವರಿಗೆ ಅತೀವ ಸಂತೋಷ. ಹೀಗಾಗಿ ಪ್ರಾಸದ ಲಕ್ಷಣಗಳಿಗೆ ಅನುಗುಣವಾಗಿ ವಚನಗಳನ್ನು ಸಣ್ಣ, ಸಣ್ಣ ಸಾಲುಗಳನ್ನಾಗಿ ವಿಂಗಡಿಸಿ ಗದ್ಯದ ಅಂಶಗಳನ್ನು ಕಡಿಮೆಗೊಳಿಸಿದ್ದಾರೆ. ವ್ಯಾಕರಣ ಹಾಗು ಛಂಧಸ್ಸಿನ ಭಿನ್ನತೆಗಳನ್ನು ತೋರಿಸಿಕೊಟ್ಟಿದ್ದಾರೆ. ಅವರು ಮಾಡಿದ ಭಾಷಾಂತರದ ಒಂದು ಉದಾಹರಣೆ ಹೀಗಿದೆ,

Alas, my Lord,

why made you me-

this thing of nought

a vain travalier here,

Bereft of grace?

Have you no pity, Lord?

Alas, you have none!

Listen, then, and say,

were it not brtter done

a tree, a plnat to create

than wrethched me,
O Lord, Kudala Sangama!   (೧೯೪೦: ೪೨).

ಹೀಗೆ ವಚನಗಳಲ್ಲಿನ ಸಾಹಿತ್ಯದ ಅಂಶ ಹಾಗು ಅನುಭಾವದ ಬಾಹುಳ್ಯತೆಗಳು ವಚನಗಳನ್ನು ಇಂಗ್ಲೀಷ್‌ಗೆ ಭಾಷಾಂತರಿಸಲು ಒಂದು ಕಾರಣವಾದರೆ, ಮತ್ತೊಂದು ಕಾರಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ೧೨ನೇ ಶತಮಾನದಲ್ಲಿಯೇ ಭಾವಗೀತೆಗಳು ಉಪಲಬ್ದವಿದ್ದವು ಎಂದು ನಿರೂಪಿಸುವ ತನಕ. ಆಧುನಿಕ ಇಂಗ್ಲೀಷ್ ಸಾಹಿತ್ಯ ಭಾವಗೀತೆಗಳನ್ನು ಹೊಂದುವ ಮೊದಲೇ ಕನ್ನಡ ಸಾಹಿತ್ಯವು ವಚನಗಳಂತಹ ಭಾವಗೀತೆಗಳಿಂದ ಶ್ರೀಮಂತವಾಗಿತ್ತು ಎಂಬ ಹೆಮ್ಮೆಯ ಮನೋಭಾವವು ಇವರಿಬ್ಬರಲ್ಲಿ ಕಾಣುತ್ತದೆ, ಮಾಸ್ತಿಯವರ ಹಾಗೆ ಇವರೂ ಸಹ ಷಟ್‌ಸ್ಥಲಗಳನ್ನು ಗಮನಿಸುವುದಿಲ್ಲ. ಅವು ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದರಿಂದ (ಅಂದರೆ ಮತೀಯ ಛಾಪನ್ನು ದಟ್ಟವಾಗಿ ಒಳಗೊಂಡಿರುವುದು), ಅವುಗಳನ್ನು ಪಕ್ಕಕ್ಕಿರಿಸಿದ್ದಾರೆ. ಈ ವಚನ ಸಂಕಲನದ ವಿಶೇಷವು ಆಧುನಿಕ ಭಾಷೆಯ ಚಿನ್ಹೆಗಳನ್ನು ಯಥೇಚ್ಛವಾಗಿ ಬಳಸಿರುವಲ್ಲಿ ಅಡಗಿದೆ. ವಿರಾಮ, ಅಲ್ಪ ವಿರಾಮ, ಆಶ್ಚರ್ಯ ಸೂಚಕ ಚಿನ್ಹೆ, ಪ್ರಶ್ನಾತ್ಮಕ ಚಿನ್ಹೆಗಳನ್ನು ಇಂಗ್ಲಿಷ್ ಭಾಷೆಯ ಮಾದರಿಯಲ್ಲಿ ಬಳಸಿರುವುದನ್ನು ನಾವು ಕಾಣಬಹುದು. ಮೇಲೆ ಚರ್ಚಿಸಲ್ಪಟ್ಟ ಎರಡು ಭಾಷಾಂತರಗಳಲ್ಲೂ ಸಹ ಈ ಚಿನ್ಹೆಗಳ ಬಳಕೆಯಾಗಿದ್ದರು. ಅವುಗಳನ್ನು ಪಕ್ವವಾಗಿ ಮತ್ತು ಸ್ಪಷ್ಟವಾಗಿ ಬಳಸಿರುವುದು ಮೂರನೇ ಭಾಷಾಂತರದಲ್ಲಿ.

೧೯೫೨ ರಲ್ಲಿ ಬಸವನಾಳರು ಬಸವಣ್ಣನ ಷಟ್‌ಸ್ಥಲಗಳು ಎಂಬ ಕನ್ನಡ ಸಂಕಲನವನ್ನು ಹೊರ ತಂದಾಗ ಅವರಿಗೆ ತಾವು ಹಿಂದೆ ಮಾಡಿದ ಭಾಷಾಂತರದಿಂದುಂಟಾದ ಅನುಭವ ಹಾಗು ಇಂಗ್ಲಿಷ್ ಕಾವ್ಯದ ಜ್ಞಾನ ಬಹುಮಟ್ಟಿಗೆ ಸಹಾಯಕವಾಗಿವೆ. ಆಧುನಿಕ ಕಾವ್ಯದ ಸೂತ್ರ ಮತ್ತು ಮೀಮಾಂಸೆಯ ಅನುಕರಣೆ ಈ ಸಂಕಲನದಲ್ಲೂ ಯಾವ ವಚನಗಳನ್ನು ಧಾರ್ಮಿಕ ಅಥವಾ ಶಾಸ್ತ್ರೀಯವಾಗಿ ಅಭ್ಯಸಿಸಲ್ಪಡುತ್ತಿತ್ತೊ. ಅದೇ ವಚನಗಳು ೧೯೪೦ ನಂತರ ಸಾಹಿತ್ಯ ಕಾವ್ಯಗಳಾಗಿ ಹೊರಹೊಮ್ಮುತ್ತವೆ. ಈ ಬದಲಾವಣೆ ಬಹಳ ಮಹತ್ವದ್ದು. ಏಕೆಂದರೆ ವಚನಗಳನ್ನು ಶುದ್ಧ ಸಾಹಿತ್ಯವೆಂದು (ವಿಶೇಷವಾಗಿ ಆಧುನಿಕ ಕಾವ್ಯದ ರೀತಿಯಲ್ಲಿ) ವಿಶ್ಲೇಷಿಸುವ ಕ್ರಮ ಮಧ್ಯಮ ವರ್ಗ, ಪ್ರಗತಿಪರ ವಿದ್ಯಾವಂತರಿಗೆ ಧಾರ್ಮಿಕ ಅಥವಾ ಸಂಪ್ರದಾಯಸ್ಥ ವಿದ್ವಾಂಸರಿಂದ ತಾವು ಭಿನ್ನ ಎಂದು ತೋರಿಸಿಕೊಳ್ಳುವದಕ್ಕೆ ದಾರಿದೀಪವಾಯಿತು.

ಭಾಗ

ಯಜಮಾನಿಕೆ, ಭಾಷೆ ಹಾಗೂ ಭಾಷಾಂತರ

ಭಾಷಾ ರಾಜಕೀಯದ ಬಗ್ಗೆ ಇತ್ತೀಚೆಗೆ ಆಸಕ್ತಿಯಾದ ವಿಚಾರಗಳನ್ನು ಮಂಡಿಸಿರುವವರಲ್ಲಿ ವೀಣಾ ನರೇಗಲ್ ರವರು (೨೦೦೧) ಒಬ್ಬರು. ಅವರ ಅಧ್ಯಯನವು ಭಾಷೆ ಹಾಗೂ ಸಾಂಸ್ಕೃತಿಕ ಯಜಮಾನಿಕೆಯ ನಡುವಿನ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿವೆ. ವಸಾಹತುಶಾಹಿ ಕಾಲದಲ್ಲುಂಟಾದ ಭಾಷಾ ಸ್ಥಾನ ಪಲ್ಲಟಗಳು ಮತ್ತು ಸಾಮಾಜಿಕ ಸ್ಥಿತ್ಯಂತರಗಳ ನಡುವೆ ಯಾವ ಸಂಕೀರ್ಣಮಯ ಸಂಬಂಧಗಳಿದ್ದವು ಎಂದು ಪಶ್ಚಿಮ ಭಾರತದ ಮಹಾರಾಷ್ಟ್ರದ ಸಂದರ್ಭದಲ್ಲಿ ಅವರು ವಿಶ್ಲೇಷಿಸಿದ್ದಾರೆ. ಅವರ ಅಧ್ಯಯನವು ಭಾಷಾಂತರ ಮತ್ತು ವಸಾಹತುಶಾಹಿ ಕಾಲದಲ್ಲಿ ಉದ್ಭವಿಸಿದ ಹೊಸ ದ್ವಿ-ಭಾಷಾ ಪದ್ಧತಿಯು (ಇಂಗ್ಲಿಷ್ ಮತ್ತು ಮರಾಠಿ) ಮಧ್ಯಮ ವರ್ಗ ವಿದ್ವಾಂಸರಿಗೆ ‘ಸಾಂಸ್ಕೃತಿಕ ಯಜಮಾನಿಕೆ’ಯನ್ನು ಸಾಧಿಸಲು ಹೇಗೆ ಸಹಾಯಕವಾಯಿತು ಎಂಬುದನ್ನು ಚರ್ಚಿಸುತ್ತದೆ. ದ್ವಿಭಾಷಾ ಪದ್ಧತಿಯು ಕೇವಲ ‘ಭಾಷೆ’ಗೆ ಸಂಬಂಧ ಪಟ್ಟ ಬದಲಾವಣೆಯಾಗಿರದೆ ಶ್ರೇಣಿಕೃತ ಸಮಾಜ ಮತ್ತು ಅಸಮಾನ ಭಾಷಾ ಆರ್ಥಿಕತೆಯನ್ನು ನವೀನವಾಗಿ ರೂಪಿಸಿತು. ಇಂಗ್ಲೀಷ್ ಹಾಗು ಮರಾಠಿ ಭಾಷೆಗಳ ನಡುವಿನ ಭಾಷಿಕ ಅಸಮಾನತೆ ಬ್ರಾಹ್ಮಣ ವಿದ್ವಾಂಸರಿಗೆ ಅನುಕೂಲತೆಯನ್ನು ಉಂಟು ಮಾಡಿತು. ಮರಾಠಿ ಭಾಷಿಕರು ಹಾಗು ವಸಾಹತುಶಾಹಿ ವ್ಯವಸ್ಥೆಯ ನಡುವೆ ಬ್ರಾಹ್ಮಣ ವಿದ್ವಾಂಸರು ಒಂದು ಕೊಂಡಿಯಾಗಿ ಹಾಗು ಮನಧ್ಯಸ್ಥಿಕೆ ವಹಿಸುವ ಸಮುದಾಯವಾಗಿ ರೂಪುಗೊಂಡರು, ಇಂಗ್ಲೀಷ್ – ಮರಾಠಿ ಹಾಗು ಮರಾಠಿ – ಇಂಗ್ಲೀಷ್ ಭಾಷೆಗಳ ನಡುವೆ ಭಾಷಾಂತರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಡೀ ಮರಾಠಿ ಭಾಷಿಕ ಸಮುದಾಯವನ್ನು ಪ್ರತಿನಿಧಿಸುವ ಸಾಂಸ್ಕೃತಿಕ ‘ಹಕ್ಕು’ನ್ನು ಪಡೆದುಕೊಂಡರು.

ಬ್ರಾಹ್ಮಣ ಸಮುದಾಯಕ್ಕೆ ಮೀಸಲಾಗಿದ್ದ ಈ ಸಾಂಸ್ಕೃತಿಕ ರಾಯಭಾರವು ಸದಾ ಕಾಲ ಅವರ ಸ್ವತ್ತಾಗಿ ಉಳಿಯಲಿಲ್ಲ. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಉದಯಿಸಿದ ಬ್ರಾಹ್ಮಣೇತರ ಸಮುದಾಯಗಳು ಬ್ರಾಹ್ಮಣರ ಸಾಂಸ್ಕೃತಿಕ ಯಜಮಾನಿಕೆಗೆ ಮತ್ತು ಪ್ರತಿನಿಧಿತ್ವಕ್ಕೆ ಸವಾಲು ಒಡ್ಡಿದವು. ಬ್ರಾಹ್ಮಣೇತರ ಸಮುದಾಯಗಳೂ ಸಹ ಸಾಂಸ್ಕೃತಿಕ ಯಜಮಾನಿಕೆಗೆ ಮತ್ತು ಭಾಷೆಯ ಮೇಲಿನ ಸ್ವಾಧೀನತೆಗೆ ಹಾತೊರೆಯತೊಡಗಿದವು. ಆದ್ದರಿಂದ ವಸಾಹತುಶಾಹಿಯ ಕೊನೆಯ ದಶಕಗಳಲ್ಲಿ ಸಾಂಸ್ಕೃತಿಕ ಯಜಮಾನಿಕೆಯು ಕೇವಲ ಬ್ರಾಹ್ಮಣರ ಸ್ವತ್ತಾಗಿ ಮುಂದೆವರೆಯಲಿಲ್ಲ. ಭಾಷೆ ಮತ್ತು ಅದರ ಮೇಲಿನ ಹಿಡಿತ ಪ್ರಬಲ ಹಾಗು ‘ಅಬಲ’ ಸಮುದಾಯಗಳ ನಡುವೆ ಒಂದು ಕದನ ರಂಗವಾಗಿ ಮಾರ್ಪಾಡಾದವು. ಪಿಯರ್ ಬೋರ್ದ್ಯುರವರು[4] ಯಜಮಾನಿಕೆ ಹಾಗು ಭಾಷೆಯ ಕ್ಷೇತ್ರಗಳಲ್ಲಿ ನಡೆಯುವ ಸಾಂಸ್ಕೃತಿಕ ಕದನವನ್ನು ತಮ್ಮ ಸಿದ್ಧಾಂತದಲ್ಲಿ ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ಯಜಮಾನಿಕೆ ಹಾಗು ಭಾಷೆ ಕೇವಲ ಅಧೀನಕ್ಕೊಳಪಡಿಸಿಕೊಳ್ಳುವ ತಂತ್ರ/ಅಥವಾ ಅಭಿವ್ಯಕ್ತಿಯ ಮಾಧ್ಯಮವಲ್ಲ. ಅನೇಕ ಸಮುದಾಯಗಳು ಒಂದನ್ನೊಂದು ಎದುರಾಗಿ ಮತ್ತು ಸಂಘರ್ಷಿಸುವ ಸಾಂಸ್ಕೃತಿಕ ಕದನ ರಂಗವಾಗಿರುತ್ತವೆ. ಈ ಕದನವು ಸಾಂಸ್ಕೃತಿಕ ಯಜಮಾನಿಕೆಯನ್ನು ಸಾಧಿಸಿ, ತಮ್ಮ ಐಡಿಯಾಲಾಜಿಯನ್ನು ಸ್ಥಾಪಿಸುವದಕ್ಕೋಸ್ಕರ ನಡೆಯುತ್ತದೆ. ಆದರೆ ಈ ಯಜಮಾನಿಕೆಯನ್ನು ಸಾಧಿಸಿ ಮತ್ತು ಸ್ಥಾಪಿಸುವುದಕ್ಕೆ ಎಲ್ಲರಿಂದ ಅಂಗೀಕೃತವಾದ ಅಥವಾ ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಸಾಹಿತ್ಯ ಅಥವಾ ಸಾಂಸ್ಕೃತಿಕ ಕಥನಗಳು ಇದ್ದಾಗ ಮಾತ್ರ ಇದ್ದರಿಂದ ಸಾಂಸ್ಕೃತಿಕ ಕದನಕ್ಕೆ ಮತ್ತು ಯಜಮಾನಿಕೆಯ ಗಳಿಕೆ ಒಂದು ರೂಪ ಮತ್ತು ಅರ್ಥ ಬರಲು ಸಾಧ್ಯ ಹೀಗಾಗಿ ಯಜಮಾನಿಕೆಯನ್ನು ಸಾಧಿಸಬೇಕಾದರೆ ಎಲ್ಲ ವರ್ಗಗಳಿಂದ ಮನ್ನಣೆ ಪಡೆದ ಅಥವಾ ಸ್ವೀಕೃತಗೊಂಡ ಒಂದು ‘ಸಾಮಾನ್ಯ ಅರ್ಥದ ಚೌಕಟ್ಟಿ’ನ ಪರಧಿಯೊಳಗೆ ಸಾಧಿಸಬೇಕಾಗುತ್ತದೆ ಎಂದು ಬೋರ್ದ್ಯು ವಾದಿಸುತ್ತಾನೆ.

ಯಜಮಾನಿಕೆಯಾಗಿ ನಡೆಯುವ ಹೋರಾಟವು ವಿವಿಧ ರೀತಿಗಳಲ್ಲಿ ನಡೆಯುತ್ತದೆ. ಇದರಲ್ಲಿ ಘರ್ಷಣೆ ಅಥವಾ ಕೇವಲ ಪೈಪೋಟಿ ಮಾತ್ರ ಇರದೇ, ಎದುರಾಳಿಯ ಸಾಧನಗಳನ್ನು (ಸಾಂಸ್ಕೃತಿಕ/ಸಾಮಾಜಿಕ) ಅಥವಾ ಸಾಂಸ್ಕತಿಕ ಹತ್ಯಾರುಗಳನ್ನು ತನ್ನದಾಗಿಸಿಕೊಳ್ಳುವ ಅಥವಾ ಒಳಗಾಗಿಸಿಕೊಳ್ಳವ ತಂತ್ರಗಳನ್ನು ರೂಪಿಸಿಕೊಳ್ಳುತ್ತಿರುತ್ತದೆ. ‘ಎಲ್ಲಾ ಜನರ’ ಹಾಗು ‘ಸಾಮಾನ್ಯ ಆಸಕ್ತಿ’ಗಳನ್ನು ಪ್ರತಿನಿಧಿಸುವಾಗ ತನ್ನದೇ ‘ಅಧಿಕೃತ’ ವಾದುದೆಂದು ಸ್ಥಾಪಿಸಲು ಪ್ರಯತ್ನಿಸುತ್ತದೆ. ಪ್ರಸ್ತುತ ಲೇಖನದ ಸಂದರ್ಭದಲ್ಲಿ ಈ ಮೂರು ಭಾಷಾಂತರಗಳು ಭಾಷಿಕ ಮಧ್ಯಸ್ಥಿಕೆ ಹಾಗೂ ಯಜಮಾನಿಕೆಯನ್ನು ಸಾಧಿಸುವದಕ್ಕಷ್ಟೆ ಮೀಸಲಾಗಿರದೆ, ತನ್ನ ಸಮುದಾಯದ ಆಸಕ್ತಿಗಳನ್ನು ಅಭಿವ್ಯಕ್ತಿಗೊಳಿಸಲು ಹಾಗು ಇತರರ ಆಸಕ್ತಿಗಳನ್ನು ತನ್ನದಾಗಿಸಿಕೊಳ್ಳುವ / ಒಳಗಾಗಿಸಿಕೊಳ್ಳುವ ಕ್ರಿಯೆಯಲ್ಲೂ ತೊಡಗಿಸಿಕೊಂಡಿವೆ. ವಚನಗಳು ಈ ಭಾಷಾಂತರಗಳಿಗೆ ಸಾಮಾನ್ಯ ಚೌಕಟ್ಟನ್ನು ಒದಗಿಸಿದರೂ, ಅವುಗಳನ್ನು ಗ್ರಹಿಸುವ ರೀತಿ ಮಾತ್ರ ಬೇರೆ. ಮೇಲಿನ ಚರ್ಚೆಯು ಈ ವಿಷಯವನ್ನು ಪರೀಕ್ಷಿಸುವ ಸಣ್ಣ ಪ್ರಯತ್ನವನ್ನು ಮಾಡಿದೆ.

ಮೂರೂ ಭಾಷಾಂತರಗಳು ವಚನಗಳನ್ನು ’ಜಾತ್ಯಾತೀತ’ವನ್ನಾಗಿ ಬಿಂಬಿಸುವ ಪ್ರಯತ್ನ ಮಾಡುತ್ತದೆ. ಉದಾಯವಾದಿ, ಮಾನವತಾವಾದಿ, ಮನೋಭಾವನೆಯನ್ನು ಮೇಲಿನ ಎಲ್ಲಾ ಭಾಷಾಂತರಕಾರದಲ್ಲಿ ಕಾಣಬಹುದು. ಹಳಕಟ್ಟಿ ಹಾಗು ಮಾಸ್ತಿಯವರು ಪದಕ್ಕೆ ಪದವನ್ನು ಸೇರಿಸಿ, ಮೂಲಕ್ಕೆ ಅತಿ  ನಿಷ್ಠೆಯನ್ನು ತೋರಿಸುವ ಗೋಜಿಗೆ ಹೋಗುವುದಿಲ್ಲ. ಅವರಿಗಿರುವ ಬೇರೆ, ಬೇರೆ ಉದ್ದೇಶಗಳು ಅವರ ಭಾಷಾಂತರ ಕ್ರಿಯೆಯನ್ನು ನಿಯಂತ್ರಿಸಿವೆ. ಸಾಮಾನ್ಯವಾಗಿ ಭಾಷಾಂತರ ಕೃತಿಗಳ ವಿಮರ್ಶೆ ಮಾಡುವಾಗ ಹಲವಾರು ವಿರುದ್ಧ ದ್ವಿಪದಗಳ ಸ್ವಚ್ಚಂದ ಬಳಕೆಯಾಗುತ್ತವೆ: ಮೂಲನಿಷ್ಟೆ-ಸ್ವಚ್ಛಂದ, ಪ್ರಾಮಾನಿಕ-ಅಪ್ರಾಮಾಣಿಕ, ಪದಶಃ-ಸೃಜನಶೀಲ, ಪದ-ಭಾವ ಇತ್ಯಾದಿಗಳು ಭಾಷಾಂತರ ಅಧ್ಯಯನವನ್ನು ನಿರ್ಧರಿಸುತ್ತವೆ. ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಭಾಷಾಂತರವು ಸೂತ್ರ-ಬದ್ಧವಾಗಿರಬೇಕೆಂದು ಇದು ಪ್ರತಿಪಾದಿಸುತ್ತದೆ. ಆದರೆ ಹಳಕಟ್ಟಿ ಹಾಗು ಮಾಸ್ತಿಯವರಿಗೆ ಇವು ಯಾವುದೇ ಆತಂಕ ಅಥವಾ ಕಳವಳವನ್ನುಂಟು ಮಾಡುವುದಿಲ್ಲ. ಹಳಕಟ್ಟಿಯವರ ಭಾಷಾಂತರದಲ್ಲಿ ಸೂತ್ರ-ರಹಿತ ಸಂಕಲನ ಕ್ರಿಯೆಯ ಪ್ರಯತ್ನಗಳು ಎದ್ದು ಕಾಣುತ್ತವೆ. ಅವರೇ ಹೇಳುವ ಹಾಗೆ ”ನನಗೆ ದೊರೆತ ವಚನ ಗ್ರಂಥಗಳ ಪ್ರತಿಗಳೆಲ್ಲವೂ ಬಹಳ ಅಶುದ್ಧವಾದವುಗಳು. ಬಹಳ ಕಡೆ ಅವುಗಳ ಅರ್ಥವೇ ಆಗುವುದಿಲ್ಲ. ಆದರೂ ಅವುಗಳಲ್ಲಿಯ ಅಶುದ್ಧತೆಯನ್ನು ಆದಷ್ಟು ಮಟ್ಟಿಗೆ ತಿದ್ದಿ ಅವುಗಳನ್ನು ನಾನು ಇಲ್ಲಿ ಪ್ರಸಿದ್ಧಿಸಿದ್ದೇನೆ” (ಹಳಕಟ್ಟಿ, ೧೯೨೩: ೧೫). ಮೂಲ ಪಠ್ಯಗಳೇ ಅಶುದ್ಧವಾಗಿರುವಂತವು!  ಅವುಗಳನ್ನು ಶುದ್ಧವಾಗಿಸುವ ಹೊಣೆ ಹಳಕಟ್ಟಿಯವರ ಹೆಗಲ ಮೇಲೆ!

೧೨ನೇ ಶತಮಾನದಲ್ಲಿ ಶಿವಶರಣರು ಇತರ ಶೈವ-ಭಕ್ತರ ವಿರುದ್ಧವಿದ್ದರೋ ಇಲ್ಲವೋ, ಆದರೆ ಹಳಕಟ್ಟಿಯವರ ಭಾಷಾಂತರಗಳು ಬ್ರಾಹ್ಮಣರು ಆರಾಧಿಸುವ ವೇದಗಳನ್ನು ಮತ್ತು ಶೈವರು ಗೌರವಿಸುವ ಆಗಮಗಳನ್ನು ತೀಕ್ಷ್ಣವಾಗಿ ಟೀಕಿಸುವ ಅಂಶಗಳನ್ನು ಹೊಂದಿವೆ. ಹಳಕಟ್ಟಿಯವರು ತಮ್ಮ ಭಾಷಾಂತರಗಳಿಗೆ ನೀಡಿರುವ ಅಡಿ ಟಿಪ್ಪಣಿಗಳಲ್ಲಿ ‘ಲಿಂಗಾಯತ’ರು ಶುದ್ಧ ಶಾಖಾಹಾರಿಗಳೆಂದು ಬರೆಯುತ್ತಾ, ಬ್ರಾಹ್ಮಣರನ್ನು “Those Brahman priests who wear the sacred thread and repeat the liturgy which accompanices animal sacrifice” (ಹಳಕಟ್ಟಿ, ೧೯೨೨: ೨೯) ಎಂದು ವರ್ಣಿಸಿದ್ದಾರೆ. ಮಾಸ್ತಿಯವರ ಭಾಷಾಂತರದಲ್ಲಿ ಲಿಂಗಾಯತರ ಷಟ್‌ಸ್ಥಲವಾಗಲಿ ಅಥವಾ ಅಡಿ ಟಿಪ್ಪಣಿಗಳಾಗಲಿ ಇಲ್ಲ. ಬ್ರಾಹ್ಮಣರನ್ನು ಟೀಕಿಸುವ ಯಾವುದೇ ವಚನಗಳನ್ನು ಮಾಸ್ತಿಯವರು ಭಾಷಾಂತರಿಸಿಲ್ಲ. ಈ ಭಾಷಾಂತರಗಳು ವಚನಕಾರರನ್ನು ಜಾತ್ಯಾತೀತ ಚಿಂತಕರನ್ನಾಗಿ ಬಿಂಬಿಸುವುದರ ಜೊತೆಗೆ, ಅವರು ನೈತಿಕ ಮೌಲ್ಯಗಳಿಗೆ ಅತ್ಯುನ್ನತ ಸ್ಥಾನ ನೀಡಿದರೆಂದು ನಿರೂಪಿಸುತ್ತವೆ.

ಬಸವನಾಳ ಮತ್ತು ಶ್ರೀನಿವಾಸ ಅಯ್ಯಂಗಾರರಿಗೆ ವಚನದಲ್ಲಿ ಗೋಚರಿಸುವ ಸಾಹಿತ್ಯ ಅಂಶಗಳು ಬಹಳ ಮುಖ್ಯವೆನಿಸುತ್ತವೆ. ‘ಶುದ್ಧ ಸಾಹಿತ್ಯ’ ಧೋರಣೆಯು ಅವರ ಭಾಷಾಂತರಗಳನ್ನು ರೂಪಿಸಿವೆ. ಅವರಿಗೆ ಮೂಲ ಪಠ್ಯ, ಮೂಲ ಪದ, ಭಾವಗಳ ಬಗ್ಗೆ ಕಾಳಜಿ, ಆದ್ದರಿಂದ ಅವರು ವಚನಗಳಲ್ಲಿ ಕಾಣುವ ಪ್ರತಿಮೆಗಳು, ಪ್ರಾಸ, ಲಯ, ಗದ್ಯ ಮತ್ತು ಛಂದಸ್ಸುಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ವಚನಗಳ ಕಾವ್ಯದ ಮೆರಗನ್ನು ಛಾಪಿಸಲು ಈ ಎಲ್ಲಾ ಲಕ್ಷಣಗಳನ್ನು ಅವರು ಯಶಸ್ವಿಯಾಗಿ ಬಳಸಿಕೊಳ್ಳುತ್ತಾರೆ. ಆಧುನಿಕ ಕಾವ್ಯ ಶೈಲಿಯ ಸೂತ್ರಕ್ಕೆ ತಮ್ಮ ಬದ್ಧತೆಯನ್ನು ಇವರು ಪ್ರದರ್ಶಿಸಿದ್ದಾರೆ. ಹೀಗೆ ಶಾಸ್ತ್ರೀಯ/ಧಾರ್ಮಿಕ ಕೃತಿಗಳು ‘ಸಾಹಿತ್ಯಕ’ವಾಗಿ ಮಾರ್ಪಾಡುವ ಚಾರಿತ್ರಿಕ ಸಂದರ್ಭವು ಕೇವಲ ಕರ್ನಾಟಕದಲ್ಲಿ ಮಾತ್ರ ಉಂಟಾಗಲಿಲ್ಲ. ಪಕ್ಕದ ತಮಿಳುನಾಡಿನ ‘ದ್ರಾವಿಡ ಚಳುವಳಿ’ಯ ಸಂದರ್ಭದಲ್ಲಿಯೂ ಇದನ್ನು ನಾವು ಗಮನಿಸಬಹುದು. ಅಲ್ಲಿ ಸುಬ್ರಹ್ಮಣ್ಯಭಾರತಿ ಹಾಗು ಸೇತುಪಿಳ್ಳೈ ತಮಿಳಿನ ಶಾಸ್ತ್ರೀಯ ಕೃತಿಗಳನ್ನು ಸಾಹಿತ್ಯದ ದೃಷ್ಟಿಯಿಂದ ಅಧ್ಯಯನ ಮಾಡಿದರು.

ಹಿಂದೂ ಧರ್ಮಕ್ಕೆ ವಚನಗಳ ಮೂಲಕ ಹೊಸ ಅರ್ಥವನ್ನು ನೀಡುವ ನಿಟ್ಟಿನಲ್ಲಿ ಮಾಸ್ತಿಯವರಿಗೂ ಹಳಕಟ್ಟಿಯವರಿಗೂ ಬಹಳ ಸಾಮ್ಯತೆಗಳಿವೆ. ಈ ವಚನಗಳ ಭಾಷಾಂತರ, ವ್ಯಾಖ್ಯಾನ ಹಾಗು ಪ್ರಾತಿನಿಧ್ಯವನ್ನು ನಿಯಂತ್ರಿಸುವ ಉತ್ಕಟ ಹಂಬಲವನ್ನು ಅವರು ಹೊಂದಿದ್ದರು. ಆದರೆ ಇದಕ್ಕಾಗಿ ಅವರಿಗಿದ್ದ  ಉದ್ದೇಶಗಳು ನಿಸ್ಸಂಶಯವಾಗಿ ಬೇರೆ ಬೇರೆ. ಹಳಕಟ್ಟಿಯವರ ಭಾಷಾಂತರಗಳಲ್ಲಿ ಹಿಂದು ಧರ್ಮಕ್ಕೆ ಲಿಂಗಾಯತ ಮತದ ಛಾಪನ್ನು ಮೂಡಿಸುತ್ತಾರೆ. ಹಾಗಾಗಿ ಅವರ ಭಾಷಾಂತರಗಳು ಮತೀಯ ಬಣ್ಣವನ್ನು ಪಡೆದಿವೆ. ಅವುಗಳಲ್ಲಿ ಷಟ್‌ಸ್ಥಲಗಳನ್ನು ಉಲ್ಲೇಖಿಸಿರುವುದು ಇದೇ ಉದ್ದೇಶಕ್ಕಾಗಿ ಮಾಸ್ತಿಯವರ ಭಾಷಾಂತರಗಳು ವಚನಗಳ ಮೇಲಿದ್ದ ಮತೀಯ ಹಿಡಿತವನ್ನು ಸಡಿಲಗೊಳಿಸುವ ಪ್ರಯತ್ನವನ್ನು ಸೂಚಿಸುತ್ತವೆ. ಇದನ್ನು ಅವರು ಷಟ್‌ಸ್ಥಲಗಳನ್ನು ನಿರ್ಲಕ್ಷಿಸುವುದರ ಮೂಲಕ ಸಾಧಿಸುತ್ತಾರೆ. ವಚನಗಳಿಗೆ ವಿಶಾಲ ಹಿಂದು ಧರ್ಮದೊಳಗೆ ಸ್ಥಾನ ಕಲ್ಪಿಸಿ ಅವುಗಳಲ್ಲಿರುವ ಮತೀಯ ಅಂಶವನ್ನು (ವಿಶೇಷವಾಗಿ ಬ್ರಾಹ್ಮಣ-ವಿರೋಧಿ ವಿಚಾರಗಳು) ದೂರವಿಡುತ್ತಾರೆ. ಮಾಸ್ತಿಯವರ ಭಾಷಾಂತರಗಳನ್ನು ಮೆಚ್ಚುಗೆಯಿಂದ ಸ್ವೀಕರಿಸಿದ ಹಳಕಟ್ಟಿಯವರಿಗೆ ಒಂದು ಅಸಮಾಧಾನವಿತ್ತು. ಶಿವಾನುಭವ ಪತ್ರಿಕೆಯ ತಮ್ಮ ವಿಮರ್ಶಾ ಲೇಖನದಲ್ಲಿ[5] ಮಾಸ್ತಿಯವರ ಬಗ್ಗೆ ವ್ಯಕ್ತ ಪಡಿಸಿರುವ ಅನಿಸಿಕೆಗಳು ವಚನಗಳ ಮೇಲಿನ ತಮ್ಮ ಹತೋಟಿಯನ್ನು ಕಳೆದುಕೊಳ್ಳುವ ಆತಂಕಮಯ ಮನೋಸ್ಥಿತಿ ಮತ್ತು ಅಸಮಾಧಾನವನ್ನು ಬಿಚ್ಚಿಡುತ್ತವೆ. ಷಟ್‌ಸ್ಥಲಗಳ ಮಹತ್ವವನ್ನು ನೆನಪಿಸಿಕೊಳ್ಳುತ್ತಾ, ವಚನಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಅವುಗಳ ಜ್ಞಾನದ ಅವಶ್ಯಕತೆ ಇದೆ. ಇಲ್ಲವಿದ್ದರೆ ವಚನಗಳನ್ನು ಅಪಾರ್ಥ ಮಾಡಿಕೊಳ್ಳುವ ಸಂಭವವಿರುತ್ತದೆ ಎಂದು ಮಾ‌ಸ್ತಿಯವರಿಗೆ ಎಚ್ಚರಿಕೆಯ ಮಾತು ಹೇಳಿದ್ದಾರೆ. ಮಾಸ್ತಿಯವರು ವಚನಗಳ ಆಯ್ಕೆಯಲ್ಲಿ ಎಡವಿದ್ದಾರೆಂದು, ಇತರ ಅನೇಕ ವಚನಗಳ ಬಗ್ಗೆ ಗಮನ ಹರಿಸಿ ಶಿವಾನುಭವದ ನಿಜ ಸ್ವರೂಪವನ್ನು ತಿಳಿಸಿಕೊಡಬೇಕಾಗಿತ್ತೆಂದು ಅವರು ವಾದಿಸುತ್ತಾರೆ. ‘ನಿಜ’ ಮತ್ತು ‘ಸರಿ’ಯಾದ ವ್ಯಾಖ್ಯಾನಕ್ಕೆ ದಾರಿ ಮಾಡಿಕೊಡುವದಕ್ಕಾಗಿ ಈ ವಿಮರ್ಶೆಯಲ್ಲಿ ಮಾಸ್ತಿಯವರನ್ನು ಎಚ್ಚರಿಸಿದ್ದಾರೆ. ಇದು ವಚನಗಳ ಮೇಲೆ ಅವರಿಗಿದ್ದ ಪ್ರಭುತ್ವದ ಪುನುರ‍್ರುಚ್ಛಾರವೂ ಹೌದು.

ಉಲ್ಲೇಖಿತ ಕೃತಿಗಳು ಮತ್ತು ಲೇಖನಗಳು

೧.        ಟೆಂಪಲ್, ರಿಚರ್ಡ್, ೧೯೭೭ Indian Antiquery, ಸಂ. ಸರ್ ರಿಚರ್ಡ್ ಟೆಂಪಲ್, ಸಂಖ್ಯೆ ೫೨.

೨.        ಹಳಕಟ್ಟಿ, ಫ. ಗು. ೧೯೨೨. Indian Antiquery, ಸಂ. ಸರ್. ರಿಚರ್ಡ್ ಟೆಂಪಲ್, ಸಂಖ್ಯೆ ೫೨.

೩.        – ೧೯೨೩, ‘ಮುನ್ನುಡಿ’, ವಚನ ಶಾಸ್ತ್ರ ಸಾರ, ಬೆಳಗಾಂ: ಹಳಕಟ್ಟಿ.

೪.        – ೧೯೩೧, “ವಚನ ವಾಙ್ಞಯ ವಿಮರ್ಶೆ”, ಶಿವಾನುಭವ, ಸಂ. ೬, ಸಂ. ೩. ಪು. ೧೪೫ – ೧೫೮.

೫.        ಐಯ್ಯಂಗಾರ್, ಮಾಸ್ತಿ ವೆಂಕಟೇಶ, Sayings of Basavanna, ೧೯೩೫, ಬಸವ ಸಮಿತಿ, ಬೆಂಗಳೂರು.

೬.        ಬಸವನಾಳ, ಶಿ.ಶಿ. ಮತ್ತು ಶ್ರೀನಿವಾಸ ಐಯ್ಯಂಗಾರ್, ೧೯೪೦. Musings of Basava – A Free Rendering, ಬಾಸೆಲ್ ಮಿಷನ್ : ಮಂಗಳೂರು.

೭.        ನರೇಗಲ್, ವೀಣಾ. ೨೦೦೧. “Bilingualism, Hegemony and the `Swing To Orthodoxy’: The Shaping of the Political Sphere (1860-1881)”, Language Politics, Elites, and the Public Sphere: Western Indian Under Colonialism ಪರ್ಮನೆಂಟ್ ಬ್ಲ್ಯಾಕ್: ನ್ಯೂ ದೆಲ್ಲಿ.

[1] ಇದರ ಬಗ್ಗೆ ಮುಂದಿನ ಲೇಖನದಲ್ಲಿ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಬಹುದು.

[2] ಏ.ಕೆ. ರಾಮಾನುಜನ್ ರ ಸ್ಪೀಕಿಂಗ್ ಆಫ್ ಶಿವ (೧೯೭೨) ಅಥವಾ ಓ.ಎಲ್. ನಾಗಭೂಷಣ ಸ್ವಾಮಿಯವರ ದಿ ಸೈನ್ (೨೦೦೭) ಭಾಷಾಂತರಗಳು.

[3] ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮುಂದಿನ ಲೇಖನದಲ್ಲಿ ಕೊಡಲಾಗಿದೆ.

[4] ಪಿಯರ್ ಬೋರ್ದ್ಯುರವರು ಫ್ರಾನ್ಸ್ ನ ಪ್ರಸಿದ್ಧ ಶಿಕ್ಷಣ ಹಾಗು ಸಮಾಜ ಶಾಸ್ತ್ರಜ್ಞರು. ಅವರ ಪ್ರಕಾರ ಯಾವುದೇ ಭಾಷೆಯು ‘ತಟಸ್ಥ’ ನಿಲುವನ್ನು ತಳೆಯುವುದಿಲ್ಲ. ಅದು ಅನೇಕ ಸಾಮಾಜಿಕ ಶಕ್ತಿಗಳ ನಡುವೆ ನಡೆಯುವ ಘರ್ಷಣಾತ್ಮಕ ಸಂಬಂಧಗಳನ್ನು ಸೂಚಿಸುತ್ತದೆ. ಈ ಘರ್ಷಣೆಯು ಭಾಷೆಯ ಮುಖಾಂತರ ‘ಸಾಂಕೇತಿಕ ಪ್ರಾಬಲ್ಯ’ವನ್ನು ಸಾಧಿಸುವದಕ್ಕಾಗಿ ನಡೆಯುತ್ತಿರುತ್ತದೆ. ಬೋರ್ದ್ಯುರವರ ಬಗ್ಗೆ ನೋಡಿ, ರಿಚರ್ಡ್ ಜೆಂಕಿನ್ಸ್, Key Sociologists: Pierre Bourdieu, ಲಂಡನ್: ರೌಟ್ಲೆಜ್, ೧೯೯೬.

[5] ಶಿವಾನುಭವ (೧೯೩೧)