ಭಾಷಾಶಾಸ್ತ್ರದ ಸಂಘರ್ಷಗಳಲ್ಲಿ ವ್ಯಾಖ್ಯಾನುಕಾರನೇ ಅಂತಿಮನಲ್ಲ (ಪಿಯರ್ ಬೋರ್ದ್ಯು, ೧೯೯೦: ೯೬)

ಪ್ರಸ್ತುತ ಲೇಖನವು ೧೨ನೇ ಶತಮಾನದ ವಚನಗಳ ಆಧುನಿಕ ಇತಿಹಾಸವನ್ನು (ವಿಶೇಷವಾಗಿ ೨೦ನೇ ಶತಮಾನದ ಮೊದಲರ್ಧ) ಅವಲೋಕಿಸುತ್ತದೆ. ಈ ಕಾಲದ ಘಟ್ಟದಲ್ಲುಂಟಾದ ವಚನ ಅಧ್ಯಯನಗಳ ವಿಶ್ಲೇಷಣೆ ಈ ಲೇಖನದ ಪ್ರಮುಖ ಕೇಂದ್ರ ಬಿಂದು. ಈ ಕಾಲ ಘಟ್ಟವು ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಹಾಗು ಲಿಂಗಾಯತ ಸಮುದಾಯದ ಸಂಕ್ರಮಣ ಕಾಲವಾದ್ದರಿಂದ, ಇವುಗಳ ನಡುವಿನ ಸಂಬಂಧಗಳನ್ನು ಅವಲೋಕಿಸಿ, ಅರಿಯುವ ಅವಶ್ಯಕತೆಯಿದೆ. ಅಂದರೆ ಈ ಸಂಬಂಧಗಳ ಸಮಾಜೋ-ಐತಿಹಾಸಿಕ ಅಧ್ಯಯನದ ಜರೂರಿತ್ತು. ಈ ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯುವ ಸಣ್ಣ ಪ್ರಯತ್ನವನ್ನು ಮಾಡುತ್ತದೆ. ಜಾಗತಿಕ ಸಾಹಿತ್ಯ (world literature)[1] ವೆಂದು ಗರ್ವ ಪಡುವ ಮೊದಲು ಕನ್ನಡಿಗರು (ವಿಶೇಷ ಲಿಂಗಾಯತರು) ವಚನಗಳಿಗೆ ಯಾವ ಸ್ಥಾನ ಮಾನವನ್ನು ಕೊಟ್ಟಿದ್ದರು? ವಚನಗಳು ಜಾಗತಿಕ, ರಾಷ್ಟ್ರೀಯ ಭಾವನೆಗಳನ್ನೊಳಗೊಂಡ ಕನ್ನಡ ವಾಙ್ಞಯವೆಂದು ಹೇಳುವದಾದರೆ, ಅವು ಲಿಂಗಾಯತರ ಸಾಮುದಾಯಿಕ ಕಥನಗಳು ಹೇಗಾದವು? ಯಾವ ಅರ್ಥದಲ್ಲಿ ಅವು ಲಿಂಗಾಯತರ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸಿದವು? ಲಿಂಗಾಯತರ ಜ್ಞಾನ ಪರಂಪರೆಯನ್ನು ಅವು ರೂಪಿಸಿದ್ದು ಹೇಗೆ? ವಚನ ಸಾಹಿತ್ಯದ ಅಧ್ಯಯನದಲ್ಲುಂಟಾಗುತ್ತಿದ್ದ ಮಹತ್ತರ ಬದಲಾವಣೆಗಳಿಗೆ ಲಿಂಗಾಯತರು ತಮ್ಮನ್ನು ತಾವು ಹೇಗೆ ಬದಲಾಯಿಸಿಕೊಂಡರು? ಅವರು ಅವುಗಳನ್ನು ಯಾವ ಅರ್ಥದಲ್ಲಿ ಸ್ವೀಕರಿಸಿದರು? ಈ ಹಿನ್ನಲೆಯಲ್ಲಿ ವಚನ ಸಾಹಿತ್ಯವನ್ನು ಕೇವಲ ಧಾರ್ಮಿಕ ಅಥವಾ ಸಾಹಿತ್ಯದ ಆಶಯಗಳನ್ನು ಈಡೇರಿಸುವ ಸಾಧನಗಳಾಗಿ ಮಾತ್ರ ನೋಡಲು ಸಾಧ್ಯವೆ?

ಈ ಮೇಲಿನ ಪ್ರಶ್ನೆಗಳಿಗೆ ಹಿನ್ನೆಲೆಯಾಗಿ ಒಂದು ಪ್ರಚೋದನೆ ಇದೆ. ಅದು ವಚನ ಸಾಹಿತ್ಯವನ್ನು ಇದುವರೆಗೆ ಅವಲೋಕಿಸುವ ಮತ್ತು ವಿಶ್ಲೇಷಿಸುವ ಮಾದರಿಗೆ ಸಂಬಂಧಿಸಿದ್ದು. ಸಾಮಾನ್ಯವಾಗಿ ವಚನಗಳನ್ನು ಕ್ರಾಂತಿಕಾರಕ, ಪ್ರಗತಿಪರ ಮತ್ತು ಸಮಾನತೆಯ ಪ್ರಬಲ ಧ್ವನಿಯೆಂದು ನಂಬಲಾಗಿದೆ. ಇಂತಹ ಅಧ್ಯಯನಗಳು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಸಂಖ್ಯಾತ. ಆದರೆ ಇವು ಸ್ವ – ಸಮಾಧಾನದ ಗಡಿಯನ್ನು ಮುಟ್ಟಿ ಮುಂದೆ ಸಾಗದೆ ನಿಂತ ನೀರಾಗಿವೆ. ವಚನ ಅಧ್ಯಯನಗಳು ಅಥವಾ ವಚನಗಳ ಬಗ್ಗೆ ಇರುವ ವ್ಯಾಖ್ಯಾನಗಳು ಔಪಚಾರಿಕವಾಗಿಯೋ ಅಥವಾ ಹಿಂದಿನ ಅಧ್ಯಯನಗಳ ಮರುಕಳಿಕೆಯೂ ಎಂಬಂತೆ ಭಾಸವಾಗುತ್ತವೆ. ಆದರೆ ವಚನಗಳ ಆಧುನಿಕ ಅವತಾರವು ಲಿಂಗಾಯತ ಸಮುದಾಯದ ಜೊತೆಗೆ ಯಾವ ರೀತಿಯ ಸಂಬಂಧವನ್ನು ಪಡೆದು ಕೊಂಡಿದೆ ಎಂಬ ಅಂಶದ ಬಗ್ಗೆ ಹೆಚ್ಚಿನ ಚರ್ಚೆಗಳಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮತ್ತು ಮೇಲಿನ ಪ್ರಶ್ನೆಗಳಿಗೆ ಪೂರಕವಾಗಿ ಪ್ರಸ್ತುತ ಲೇಖನವು ಕೆಲವೊಂದು ಅಂಶಗಳನ್ನು ಪರೀಕ್ಷಿಸುತ್ತದೆ: ಲಿಂಗಾಯತ  ಅಸ್ಮಿತೆಯನ್ನು (identity) ಕಟ್ಟಿಕೊಳ್ಳಲು ವಚನಗಳು ಹೇಗೆ ಸಹಾಯಕವಾದವು? ಈ ಕಾಲ ಘಟ್ಟದಲ್ಲಾದ ವಚನ-ವ್ಯಾಖ್ಯಾನಗಳು ಮತ್ತು ಅಸ್ಮಿತೆಯ ಕಟ್ಟುವಿಕೆ ಪಾರದರ್ಶಕವಾಗಿರುವಂತದ್ದೆ? ವಚನ-ಅಧ್ಯಯನಗಳನ್ನು ಎಲ್ಲರೂ ಒಂದೇ ರೀತಿಯಲ್ಲಿ ಸ್ವೀಕರಿಸಿದರೆ? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವುದು ಎರಡು ಕಾರಣಗಳಿಗಾಗಿ ಮುಖ್ಯ. ಮೊದಲನೆಯ ವಚನಗಳನ್ನು ಒಟ್ಟಾರೆಯಾಗಿ, ಕಾಲಾಂತರದಲ್ಲಿ ಬದಲಾಗದೆ ಉಳಿದುಕೊಂಡು ಬಂದ ಸಾಹಿತ್ಯ ಪರಂಪರೆ ಎಂದು ಅರ್ಥೈಸಿರುವದರಿಂದ ಅದರಲ್ಲಿನ ಮಿತಿಗಳನ್ನು ನಾವು ಅರಿಯದೆ ಹೋಗುತ್ತೇವೆ. ಎರಡನೆಯದು, ವಚನಗಳ ಧಾರ್ಮಿಕ ಮತ್ತು ಸಾಹಿತ್ಯಕ ವ್ಯಾಖ್ಯಾನಗಳು ೧೨ನೇ  ಶತಮಾನದ ಕ್ರಾಂತಿಕಾರಕ ಚಳುವಳಿಯ ಪ್ರತಿಬಿಂಬಗಳೆಂದು ಅಥವಾ ಜಾತ್ಯಾತೀತ ಪರಂಪರೆಯನ್ನು ಒಳಗೊಂಡಿರುವಂತದ್ದು ಎಂಬ ಸಾಮಾನ್ಯ ಅರಿವು ಅನೇಕ ಚಾರಿತ್ರಿಕ ಅಡೆ-ತಡೆಗಳನ್ನು ಒಳಗೊಂಡಿವೆ. ಏಕೆಂದರೆ ಜಾತ್ಯಾತೀತ ಅಥವಾ ಪ್ರಗತಿಪರ ಅಧ್ಯಯನಗಳು ವಚನಗಳ ಆಧುನಿಕ ಅವತಾರವನ್ನು ಸೂಚಿಸುತ್ತವೆಯೆ ಹೊರತು ಅವುಗಳನ್ನು ೧೨ನೇ ಶತಮಾನಗಳಿಂದ ನೇರವಾಗಿ ಎರವಲು ಪಡೆದಂತವುಗಳಲ್ಲ. ಈ ಆಧುನಿಕ ಅವತಾರವು ಬರೀ ಬೌದ್ಧಿಕ ಕಸರತ್ತು ಅಲ್ಲ. ಇದು ೨೦ನೇ ಶತಮಾನದ ಆದಿಯಲ್ಲಿ ಲಿಂಗಾಯತರು ಧಾರ್ಮಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಚಾರ-ವಿಚಾರಗಳ ಸಮುದ್ರ ಮಂಥನವನ್ನು ಹೇಗೆ ಕೈಗೊಂಡರು ಎಂದು ತಿಳಿದುಕೊಳ್ಳುವ ಚಾರಿತ್ರಿಕ ಖಜಾನೆಯಾಗಿದೆ.

ಈ ಮೇಲಿನ ಅಂಶಗಳಿಗೆ ಸಮಾಧಾನವನ್ನು ಕಂಡು ಹಿಡಿಯಲು, ಪ್ರಸ್ತುತ ಲೇಖನದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿಯವರು (೧೮೮೦-೧೯೬೪) ವಚನಗಳ ಜೊತೆಗೆ ನಡೆಸಿದ ವೈಯಕ್ತಿಕ ಹಾಗೂ ಸಾಮುದಾಯಿಕ ಅನುಸಂಧಾನವನ್ನು ವಿಶ್ಲೇಷಿಸಲಾಗಿದೆ. ನಮಗೆಲ್ಲಾ ತಿಳಿದಿರುವಂತೆ ಹಳಕಟ್ಟಿಯವರು ಅಸಂಖ್ಯಾತ ವಚನಗಳನ್ನು ಹುಡುಕಿ, ಸಂಶೋಧಿಸಿ, ವ್ಯಾಖ್ಯಾನಿಸಿ, ಪ್ರಕಟಿಸಿ, ಅವುಗಳ ಪ್ರಸಾರಕ್ಕೆ ಕಾರಣರಾದ ೨೦ನೇ ಶತಮಾನದ ಅತ್ಯಂತ ಪ್ರಮುಖ ಬುದ್ಧಿ ಜೀವಿ ಮತ್ತು ಚಿಂತಕ. ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಕೋನದಿಂದ ವಚನಗಳನ್ನು ಅಳೆದು-ತೂಕ ಮಾಡಿದ ಪ್ರಥಮರಲ್ಲಿ ಅವರ ಹೆಸರು ಅಜರಾಮರ, ವಸಾಹತುಶಾಹಿ-ಪೂರ್ವದ ವಚನಗಳಿಗೆ ಆಧುನಿಕ ತತ್ವಧಾರೆ ಮತ್ತು ನೈತಿಕ ಅರ್ಥಗಳನ್ನು ಬೆಸೆದ ವ್ಯವಸ್ಥಾಪಕರು. ಹಾಗಂತ ಹಳಕಟ್ಟಿಯವರ ಸಾಹಿತ್ಯ ಕೃಷಿಯನ್ನು ವಸಾಹತುಶಾಹಿ ಪ್ರಾಬಲ್ಯದ ಕಾಲದಲ್ಲಿ ಉಂಟಾದ ಕನ್ನಡ ಸಾಹಿತ್ಯದ ಪುನುರುಜ್ಜೀವನ ಮತ್ತು ’ಸಾಂಸ್ಕೃತಿಕ ಪ್ರತ್ಯಾಘಾತ’ ಎಂದು ಬಣ್ಣಿಸುವದಕ್ಕೆ ಸಾಧ್ಯವಿಲ್ಲ. ಅಥವಾ ಅದೊಂದು ವಸಾಹತುಶಾಹಿಯ ವಿರುದ್ಧ ತನ್ನ ಸಂಸ್ಕೃತಿಯನ್ನು ರಮ್ಯವಾಗಿಸುವ ಮಧ್ಯಮ ವರ್ಗದ ಆತಂಕಭರಿತ ಸನ್ನಿವೇಶವೆಂದು ತಿಳಿಯಲು ಮಿತಿಗಳಿವೆ. ಮತೀಯ ದೃಷ್ಟಿಕೋನಗಳಿದ್ದಾಗ್ಯೂ ವಚನಗಳನ್ನು ಜಾಗತಿಕಗೊಳಿಸುವ ವೈರುಧ್ಯವನ್ನು ಹೊಂದಿದ್ದ ಹಳಕಟ್ಟಿಯವರು ತಮ್ಮ ಸಮುದಾಯಕ್ಕೆ ವೈಚಾರಿಕ ಸಂಪ್ರದಾಯವನ್ನು ಓರೆ ಹಚ್ಚುವ ಅಥವಾ ಪ್ರಗತಿಪರವನ್ನಾಗಿ ಬಿಂಬಿಸುವ ಆತುರತೆಯನ್ನು ಮೈಗೊಡಿಸಿಕೊಂಡಿದ್ದರು. ‘ಜಾತ್ಯಾತೀತ ಸಾರ್ವಜನಿಕ’ ವಲಯದಲ್ಲಿ (secular public sphere) ವೈಚಾರಿಕ, ಪ್ರಗತಿಪರ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಮೂಲಕ ಲಿಂಗಾಯತ ಸಂಸ್ಕೃತಿಯನ್ನು ಮರು-ಕಟ್ಟುವ ಪ್ರಯತ್ನವನ್ನು ಈ ಆತುರತೆಯು ತಿಳಿಸುತ್ತದೆ. ವಿದ್ವಾಂಸ, ಕಾನೂನು ಪಂಡಿತ, ಶಿಕ್ಷಣ ತಜ್ಞ, ಸಂಪಾದಕ ಮತ್ತು ಪ್ರಕಟಕರಾಗಿದ್ದ ಹಳಕಟ್ಟಿಯವರು ಧಾರ್ಮಿಕ/ಮತೀಯ ಚೌಕಟ್ಟಿನಲ್ಲಿದ್ದ ವಚನಗಳನ್ನು ನೈತಿಕತೆ ಮತ್ತು ಉನ್ನತ ವಿಚಾರಗಳ ಸಾಹಿತ್ಯವೆಂದು ಜಾಗತೀಕರಣಗೊಳಿಸುವ ಜೊತೆ, ಜೊತೆಗೆ ಅವು ಲಿಂಗಾಯತರ ಪ್ರಗತಿಪರ ಪರಂಪರೆಯನ್ನು ಸೂಚಿಸುವ, ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಅತ್ಯವಶ್ಯಕವಾಗಿರುವ ಮತೀಯ ಸಾಹಿತ್ಯವೆಂದು ಸ್ಥಾಪಿಸುವ ವೈರುಧ್ಯವನ್ನು ಹೊಂದಿದ್ದರು.

ಎರಡನೇ ಅಂಶ ವಚನ ಸಾಹಿತ್ಯ ಮತ್ತು ಸಾರ್ವಜನಿಕ ಓದುಗರಿಗೆ[2] ಸಂಬಂಧಿಸಿದ್ದು. ವಚನ ಸಾಹಿತ್ಯದ ಮುಖೇನ ಲಿಂಗಾಯತ ಸಮುದಾಯಕ್ಕೆ ಒಂದು ಪ್ರಗತಿಪರ ಬುನಾದಿಯನ್ನು ಹಾಕುವ ಹಳಕಟ್ಟಿಯವರ ಪ್ರಯತ್ನವು ಅಂತಿಮವಾಗಿ ಎಲ್ಲವನ್ನು ಸಾಧಿಸಿತೆ? ವಚನಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಓದುವ ಪರಂಪರೆಯನ್ನು ಅಂತಿಮವಾಗಿ ನಿರ್ಧರಿಸುವ ಅವರ ಪ್ರಯತ್ನವು ಸಫಲವಾಗಲಿಲ್ಲ ಎಂದು ಈ ಲೇಖನವು ವಾದಿಸುತ್ತದೆ. ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳು: ಅ) ಓದುಗ ಪ್ರಪಂಚವು ವಚನಗಳನ್ನು ಮತ್ತು ಲಿಂಗಾಯತ ಸಮುದಾಯವನ್ನು ಅರ್ಥೈಸುವಲ್ಲಿ ಪ್ರದರ್ಶಿಸಿದ ವೈವಿಧ್ಯತೆ ಮತ್ತು ಆ) ಇದಕ್ಕೆ ಹಳಕಟ್ಟಿಯವರು ಪ್ರತಿಕ್ರಿಯಿಸಿದ ರೀತಿ. ವಚನಗಳನ್ನು ಸ್ವೀಕರಿಸುವಲ್ಲಿ ಓದುಗ ಸಮುದಾಯವು ತೋರಿದ ಭಿನ್ನತೆ ವಚನಗಳು ಕೇವಲ ಲಿಂಗಾಯತ ಸಮುದಾಯಕ್ಕೆ ಸೇರಿದ ಪರಂಪರೆಯೆಂಬುದನ್ನು ಒಡೆಯುವಲ್ಲಿ ಯಶಸ್ವಿಯಾಯಿತು. ತನ್ನದೇ ಆದ ಪರಿಕಲ್ಪನೆಗಳ ಮುಖಾಂತರ ವಚನಗಳನ್ನು ಅರ್ಥೈಸಿಕೊಂಡಿದುದರಿಂದ, ಸಾರ್ವಜನಿಕ ಓದು ಹಳಕಟ್ಟಿಯವರಿಗಿಂತ ಭಿನ್ನವಾದ ‘ಓದು ಪರಂಪರೆ’ಯನ್ನು ಸ್ಥಾಪಿಸಿತು. ವಚನಗಳ ಆಧುನಿಕ ಇತಿಹಾಸ ಮತ್ತು ಅದು ಕಟ್ಟಿಕೊಂಡ ಸಂಸ್ಕೃತಿಯನ್ನು ಅರಿಯಲು ಈ ಅಂಶ ಅತ್ಯವಶ್ಯವಾಗಿದೆ. ಇದು ಎರಡು ಅಂಶಗಳನ್ನು ಪ್ರಬಲವಾಗಿ ಮರು-ಚಿಂತಿಸುವಂತೆ ಪ್ರಚೋದಿಸಿವೆ: ಅ) ವಚನಗಳು ೧೨ನೇ ಶತಮಾನದ ಇತಿಹಾಸ ಮತ್ತು ಸಂಸ್ಕೃತಿಯನ್ನು ಅವಶ್ಯವಾಗಿ ಪ್ರತಿಬಿಂಬಿಸುತ್ತದೆ ಎಂಬ ನಂಬಿಕೆ ಮತ್ತು ಆ) ಅವು ೨೦ನೇ ಶತಮಾನದಲ್ಲಿ “ಜಾತ್ಯಾತೀತ ಕ್ರಿಶ್ಚಿಯನ್ ವ್ಯಾಖ್ಯಾನ” (secularized Christian interpretation) ಕ್ಕೆ ಒಳಗಾದ ಇತಿಹಾಸವನ್ನು ತೆರೆದಿಡುತ್ತದೆ ಎಂಬ ಚಿಂತನೆ[3] ಇವುಗಳಾಚೆ ಹೋಗಿ ಅವಲೋಕಿಸಬಹುದಾದರೆ, ವಚನ ಅಧ್ಯಯನವು ೨೦ನೇ ಶತಮಾನದ ಆದಿಯಲ್ಲಿ ಮಂಥನಕ್ಕೊಳಗಾದ ಧಾರ್ಮಿಕ, ಸಾಹಿತ್ಯಕ ಮತ್ತು ಐತಿಹಾಸಿಕ ಆಚಾರ-ವಿಚಾರಗಳನ್ನು ಅರಿಯಲು ಸಹಾಯ ಮಾಡುತ್ತದೆ.

ವಚನಗಳನ್ನು ಮರುಕಳಿಸಿ ಅದನ್ನೊಂದು ಐತಿಹಾಸಿಕ ಪರಂಪರೆಯೆಂದು ಬಿಂಬಿಸುವ ಹಳಕಟ್ಟಿಯವರ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳುತ್ತಾ, ಅವರ ಪರಿಧಿಯನ್ನು ಮೀರುವ ಸಾಹಸವನ್ನು ಈ ಲೇಖನವು ಮಾಡುತ್ತದೆ. ಏಕೆಂದರೆ ಹಳಕಟ್ಟಿಯವರನ್ನು ಮತ್ತು ಲಿಂಗಾಯತ ಸಮುದಾಯವನ್ನು ಮೀರಿ ಬೆಳೆದ ವಚನಗಳು ಯಾವುದೇ ಒಬ್ಬ ವ್ಯಕ್ತಿಯ ಅಥವಾ ಸಮುದಾಯದ ಆಸ್ತಿಯಲ್ಲ ಎಂದು ನಿರೂಪಿಸಿದವು. ವೈವಿಧ್ಯಮಯ ಮತ್ತು ವೈರುಧ್ಯಮಯ ಹಿನ್ನಲೆಯಲ್ಲಿ ಬೆಳೆದು ಬಂದ ವಚನಗಳ ಈ ಆಧುನಿಕ ಇತಿಹಾಸವನ್ನು ದಾಖಲಿಸುವ ಪ್ರಯತ್ನದಲ್ಲಿ ಈ ಲೇಖನವು ಕ್ರಮೇಣ ಹಳಕಟ್ಟಿ ಮತ್ತು ಸಮುದಾಯ-ಕೇಂದ್ರಿತ ಚರ್ಚೆಯನ್ನು ದಾಟುತ್ತದೆ. ವಚನಗಳನ್ನು ಜನರ ಹತ್ತಿರ ಕೊಂಡೊಯ್ಯುವ ಪ್ರಯತ್ನ ಮತ್ತು ಅದರಿಂದಾದ ಅರ್ಥ-ಪ್ರವಾಹ ಯಾವುದೇ ಅರ್ಥ-ಪರಂಪರೆ ಅಥವಾ ಸಂಸ್ಕೃತಿಯನ್ನು ಅಂತಿಮವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲವೆಂಬ ಅಂಶವನ್ನು ಈ ಲೇಖನ ಸಾಬೀತುಪಡಿಸುವ ಪ್ರಯತ್ನ ಮಾಡುತ್ತದೆ.

ಭಾಗ

ಐತಿಹಾಸಿಕ ಜರೂರತ್ತುಗಳನ್ನು ಎದುರಿಸುತ್ತಾ ಮತ್ತು ಸಂಧಾನಿಸುತ್ತಾ

ಇಂಡಿಯನ್ ಆಂಟಿಕ್ವೆರಿಯ ೧೯೨೨ರ ಸಂಚಿಕೆಯಲ್ಲಿ ಹಳಕಟ್ಟಿಯವರು ಬಸವಣ್ಣನ ವಚನಗಳ ಇಂಗ್ಲಿಷ್ ಭಾಷಾಂತರವನ್ನು ಪ್ರಥಮ ಬಾರಿಗೆ ಪ್ರಕಟಿಸಿದಾಗ, ಅವು ಲಿಂಗಾಯತ ಸಾಹಿತ್ಯದ ಹೊಸ ಮತ್ತು ಆಧುನಿಕ ಇತಿಹಾಸಕ್ಕೆ ನಾಂದಿ ಹಾಡುತ್ತವೆ ಎಂದು ಮನಗಂಡವರು ಅತಿ ವಿರಳ. ವಚನಗಳನ್ನು ಭಾಷಾಂತರಿಸಿ, ಪ್ರಕಟಿಸಿ ಮತ್ತು ಅವುಗಳಿಗೆ ಜಾತ್ಯತೀತ (secular) ಮತ್ತು ನೈತಿಕ (moral) ಅರ್ಥಗಳನ್ನು ಬೆಸೆಯುವ ಹಳಕಟ್ಟಿಯವರ ಪ್ರಯತ್ನವು ಈ ಭಾಷಾಂತರದಿಂದ ಶುರುವಾಗುತ್ತದೆ. ಇದಕ್ಕೆ ಮೊದಲು ವಚನಗಳನ್ನು ಧಾರ್ಮಿಕ ಪರಿಧಿಯನ್ನು ಬಚ್ಚಿಟ್ಟಿದ್ದೆ ಹೆಚ್ಚು. ಈ ಭಾಷಾಂತರಗಳು ಪ್ರಕಟನಾ ತಂತ್ರಜ್ಞಾನ (print technology), ಇಂಗ್ಲಿಷ್ ಮತ್ತು ಪಾಶ್ಚಾತ್ಯ ಪರಿಕಲ್ಪನೆಗಳ ಬಗ್ಗೆ ಹಳಕಟ್ಟಿಯವರ ಒಲವನ್ನು ಪ್ರದರ್ಶಿಸುತ್ತವೆ. ಮೊಟ್ಟ ಮೊದಲ ಬಾರಿಗೆ ಈ ಭಾಷಾಂತರಗಳ ಮೂಲಕ ಬಸವಣ್ಣನನ್ನು ಆಧುನಿಕ ಅರ್ಥದಲ್ಲಿ ಒಬ್ಬ ಮಾನವತಾವಾದಿ ಎಂದು ಬಿಂಬಿಸಲಾಯಿತು. ಅಂದಿನ ದಿನವರೆಗೂ ಪೂಜ್ಯ ಭಾವನೆಯಿಂದ ಆರಾಧಿಸಲ್ಪಡುತ್ತಿದ್ದ ಬಸವ ಪುರಾಣದ ಮೇಲೆ  ಆಧುನಿಕತೆಯು ತನ್ನ ಛಾಯೆಯನ್ನು ಈ ಭಾಷಾಂತರಗಳ ಮೂಲಕ ಹರಡಿತು. ಕ್ರಮೇಣ ಈ ಮಾನವತಾವಾದಿ ಪರಿಕಲ್ಪನೆಯನ್ನು ಇತರ ವಚನಕಾರರಿಗೂ ವಿಸ್ತರಿಸಲಾಯಿತು. ಆಧುನಿಕ ಮಾನವತಾವಾದಿ ಪರಿಕಲ್ಪನೆಗೆ ಸಿಲುಕಿಸುವ ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ಹಾಕಿಕೊಳ್ಳುವ ಅವಶ್ಯಕತೆ ಇದೆ. ಈ ವಚನಕಾರರನ್ನು ಬಣ್ಣಿಸಲು ಮಾನವತಾವಾದು ಪರಿಕಲ್ಪನೆಯನ್ನು ಉಪಯೋಗಿಸಿದ್ದೇಕೆ? ಪಾಶ್ಚಾತ್ಯರಲ್ಲಿ ಭಾರತೀಯರಲ್ಲೂ ಸಹ ಪ್ರಗತಿಪರ ಮತ್ತು ಜಾತ್ಯಾತೀತ, ಮನೋಭಾವನೆಗಳುಳ್ಳ ಆದರ್ಶವಾದಿಗಳಿದ್ದರು ಎಂದು ಸಾರುವ ಉತ್ಕಟೇಚ್ಛ ಹಳಕಟ್ಟಿಯವರಲ್ಲಿತ್ತೆ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಬಹುಶಃ ಆಗಿನ ಐತಿಹಾಸಿಕ ಸಂದರ್ಭಗಳು ಮತ್ತು ಹಳಕಟ್ಟಿಯವರ ಮೇಲೆ ಆದ ಪ್ರೇರಣಾ ಅಂಶಗಳನ್ನು ಸ್ಥೂಲವಾಗಿ ವಿಶ್ಲೇಷಿಸಬೇಕಾಗುತ್ತದೆ. ಹಳಕಟ್ಟಿಯವರ ಆತ್ಮ ಚರಿತ್ರೆ (೧೯೫೧, ೧೯೮೩), ವಚನಗಳ ಮೇಲೆ ಅವರು ಬರೆದ ಅಸಂಖ್ಯಾತ ಲೇಖನಗಳು ಹಾಗು ಅಂದು ವಚನಕಾರರ ಬಗ್ಗೆ ಇದ್ದ ಅಭಿಪ್ರಾಯಗಳು ಚಾರಿತ್ರಿಕ ಸಂದರ್ಭಗಳು ಹಾಗು ಒತ್ತಡಗಳನ್ನು ಬಿಚ್ಚಿಡುತ್ತವೆ. ಮೊದಲಿಂದಲು ಹಳಕಟ್ಟಿಯವರಿಗೆ ಕೆಲವೊಂದು ಅಂಶಗಳು ಸವಾಲಾಗಿದ್ದವು; ಲಿಂಗಾಯತ ಸಂಸ್ಕೃತಿ, ಸಾಹಿತ್ಯ ಮತ್ತು ತತ್ವಜ್ಞಾನಗಳನ್ನು ಅರಿಯಲು ಬೇಕಾಗಿರುವ ಬಲವಾದ ಸಿದ್ಧಾಂತದ ಕೊರತೆ; ಲಿಂಗಾಯತರಲ್ಲಿ ಸಾಮಾಜಿಕ ವಿಷಯಗಳ ಬಗ್ಗೆ ಇದ್ದ ಸಂಪ್ರದಾಯಬದ್ಧ ನಿಲುವು; ಸಾರ್ವಜನಿಕ ವಲಯದಲ್ಲಿ ಇತರರೊಂದಿಗೆ (ವಿಶೇಷವಾಗಿ ಬ್ರಾಹ್ಮಣರ ಜೊತೆಗಿನ ಬೌದ್ಧಿಕ ಸಂಘರ್ಷ) ಬೆಳೆಸಿಕೊಂಡಿದ್ದ ಸಂಘರ್ಷಮಯ ವಾತಾವರಣ. ಇಂತಹ ಸನ್ನಿವೇಶದಲ್ಲಿ, ಮಧ್ಯಮ ವರ್ಗದ ಕಾನೂನು ಪಂಡಿತರಾಗಿದ್ದ ಹಳಕಟ್ಟಿಯವರಿಗೆ ಲಿಂಗಾಯತರ ಸ್ವ-ಅರಿವಿಗೆ ಮತ್ತು ಲಿಂಗಾಯತ ಸಾಹಿತ್ಯದ ಮರು-ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಜಟಿಲತೆಗಳಿದ್ದವು.

ವೈರುಧ್ಯಗಳ ಸುತ್ತ : ಆಧುನಿಕತೆಯ ಮೊದಲ ದಿನಗಳಲ್ಲಿ

ಲಿಂಗಾಯತರ ಕಲ್ಪನಾ ಲಹರಿ

೧೮೭೦ರ ದಶಕದಿಂದ ಮೊದಲ್ಗೊಂಡು ಲಿಂಗಾಯತ ಗಣ್ಯರು[4] ಕೈಗೊಂಡ ಸಾಮಾಜಿಕ ಸುಧಾರಣೆಗಳು ಲಿಂಗಾಯತರ ಅರಿವನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರವಹಿಸಿದರು. ಭಿನ್ನ, ಭಿನ್ನ ಸಾಮಾಜಿಕ ಸ್ತರಗಳಲ್ಲಿದ್ದ ವಿದ್ಯಾವಂತ, ಹೊಸ ಲಿಂಗಾಯತ ವರ್ಗವು ಆಧುನಿಕ ವಿಚಾರಧಾರೆಯ ಪ್ರಭಾವದಿಂದ ದೂರವಿರಲು ಸಾಧ್ಯವಿರಲಿಲ್ಲ. ಆಧುನಿಕತೆಗೆ ಸಂವಾದಿಯಾಗಿ ತಮ್ಮನ್ನು ಬೌದ್ಧಿಕವಾಗಿ ತೊಡಗಿಸಿಕೊಂಡು, ಲಿಂಗಾಯತ ಸಂಸ್ಕೃತಿಯನ್ನು ಪೋಷಿಸುವ ಕಾರ್ಯದಲ್ಲಿ ಅವರು ಸಕ್ರಿಯವಾಗಿ ಭಾಗಹಿಸಿದರು. ತಮ್ಮ ಚರಿತ್ರೆ ಸಾಹಿತ್ಯ, ಧಾರ್ಮಿಕ ಗ್ರಂಥ ಹಾಗೂ ಪ್ರತಿಮೆಗಳನ್ನು ಗಟ್ಟಿಯಾದ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಕಾರ್ಯವನ್ನು ಅವರು ಉತ್ಸಾಹದಿಂದ ಮತ್ತು ತುರ್ತಿನಿಂದ ಶುರು ಮಾಡಿದರು. ಹಾಗಂತ ಅವರು ಎಲ್ಲವನ್ನು ಸಾರ ಸಗಟವಾಗಿ ಆಯ್ಕೆ ಮಾಡಿದರು ಎಂದರ್ಥ ಅಲ್ಲ. ತಮ್ಮ ಉದ್ದೇಶಕ್ಕೆ ಮತ್ತು ಭಾವನೆಗಳಿಗೆ ಸೂಕ್ತವಾದುದನ್ನು ಮಾತ್ರ ಆರಿಸಿ, ಅವುಗಳಿಗೆ ಹೊಸ ಅರ್ಥವನ್ನು ನೀಡುವ ಪ್ರಯತ್ನವನ್ನು ಅವರು ಮಾಡಿದರು. ಸಂಸ್ಕೃತ ಭಾಷೆ ಮತ್ತು ಭಾಷೆ ಮತ್ತು ಸಾಹಿತ್ಯದ ಮೇಲಿನ ವ್ಯಾಮೋಹದ ಜೊತೆಗೆ ಧಾರ್ಮಿಕ ವಲಯದಲ್ಲಿ ಬ್ರಾಹ್ಮಣರಷ್ಟೇ ನಾವು ಕೂಡ ಶ್ರೇಷ್ಟರು ಎಂದು ಸಾರುವಷ್ಟು ಉತ್ಸಾಹ ಮತ್ತು ಉದ್ವೇಗದಿಂದ ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದರು. ಇದರ ಬಗ್ಗೆ ಮತ್ತಷ್ಟು ಚರ್ಚೆಯನ್ನು ನಂತರ ಕೈಗೆತ್ತಿಕೊಳ್ಳಲಾಗುವುದು. ಸಂಸ್ಕೃತ ಪ್ರೇಮ ಮತ್ತು ಬ್ರಾಹ್ಮಣ್ಯದ ಹಿರಿಮೆ ಬಸವಣ್ಣ ಮತ್ತು ಇತರ ವಚನಕಾರರ ಬಗ್ಗೆ ಇದ್ದ ಸುಧಾರಣವಾದಿ[5] ಹೆಗ್ಗಳಿಕೆಯ ವಿರುದ್ಧವಿದ್ದುದು ಐತಿಹಾಸಿಕ ವಿಪರ್ಯಾಸ. ಆದ್ದರಿಂದ ಈ ಕಾಲದ ಲಿಂಗಾಯತರ ಕಲ್ಪನೆಯಲ್ಲಿ ವಚನಗಳು ಮತ್ತು ವಚನಕಾರರು ಯಾವ ಅರ್ಥ ಮತ್ತು ಸ್ಥಾನವನ್ನು ಪಡೆದುಕೊಂಡಿದ್ದರು? ಬಸವಣ್ಣ ಹಾಗು ಇತರ ವಚನಕಾರರ ಬಗ್ಗೆ ಮೂಡಿಬಂದ ”ಜಾತ್ಯಾತೀತ ಕ್ರಿಶ್ಚಿಯನ್ ವ್ಯಾಖ್ಯಾನ”ಗಳನ್ನು ಅವರು ಸ್ವೀಕರಿಸಿದುದು ಹೇಗೆ? ಅವನ್ನು ಅವರು ಯಾವ ಅರ್ಥದಲ್ಲಿ ನೋಡಲು ಪ್ರಯತ್ನಿಸಿದರು? ಬಸವಣ್ಣ, ವಚನಗಳು ಮತ್ತು ಲಿಂಗಾಯತರ ನಡುವೆ ಯಾವ ರೀತಿಯ ಸಂಬಂಧವಿದ್ದಿತು? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕ ಬೇಕಾದರೆ ನಾವು ೧೯೨೦ ನಂತರ ವಚನಗಳನ್ನು ಪರಿಗ್ರಹಿಸುವ ರೀತಿಯಲ್ಲಿ ಉಂಟಾದ ಬದಲಾವಣೆಗಳನ್ನು ಮೊದಲು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ.

೧೮೮೦ರ ಸುಮಾರಿಗೆ ವಚನಗಳು ಮತ್ತು ಶಿವಶರಣರ ‘ಕ್ರಾಂತಿಕಾರಕ’ ವಿಚಾರಗಳನ್ನು ತಿಳಿದುಕೊಂಡಿದ್ದವರು ಬೆರಳೆಣಿಕೆಯಷ್ಟು. ಶಿವಶರಣರ ಪ್ರಗತಿ ಪರ ವಿಚಾರಗಳನ್ನು ವಿಶೇಷವಾಗಿ ಬಸವಣ್ಣನ ಬ್ರಾಹ್ಮಣ್ಯ-ವಿರೋಧಿ ಬಂಡಾಯವನ್ನು, ಲಿಂಗಾಯತರು ಅಷ್ಟೊಂದು ಉತ್ಸಾಹದಿಂದ ಸ್ವೀಕಾರ ಮಾಡಿರಲಿಲ್ಲ. ಆದಾಗ್ಯು ಬಸವಣ್ಣನನ್ನು ಶಿವನ ಅವತಾರವೆಂದು ಆರಾಧಿಸಿ, ಅವನು ತ್’ದ್ವಿತ್ಯ ಶಂಭು’ ಎಂದು ನಂಬಿದ್ದರು. ಬಸವಣ್ಣನು ಲಿಂಗಾಯತ ಧರ್ಮವನ್ನು ಉದ್ಧರಿಸಿದ ದೈವಾಂಶನೆಂದು ತಿಳಿದಿದ್ದರೆ ಹೊರತು ಅದರ ಸಂಸ್ಥಾಪಕನೆಂದಲ್ಲ. ಇಷ್ಟಾದಾಗ್ಯೂ ಬಸವಣ್ಣ ಅಥವಾ ಅಲ್ಲಮ ಪ್ರಭುವಿನ ಬಗ್ಗೆ ಯಾರಾದರು ಅವಹೇಳಕಾರಿಯಾಗಿ ಮಾತನಾಡಿದರೆ ಅವರನ್ನು ಖಂಡಿಸದೇ ಬಿಡುತ್ತಿರಲಿಲ್ಲ. ಆದರೆ ಈ ಖಂಡನೆ ಶಿವಶರಣದ ಪ್ರಗತಿ ಪರ ಅಥವಾ ಕ್ರಾಂತಿಕಾರಕ ವಿಚಾರದ ಚೌಕಟ್ಟಿನಲ್ಲಿ ಇರಲಿಲ್ಲ.

ಬಸವಣ್ಣನನ್ನು ದೀನ-ದಲಿತರ, ಬಡವರ ಜನನಾಯಕ ಅಥವಾ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಸಮಾಜ ಸುಧಾರಕ ಎಂದು ಎಲ್ಲಿಯಾದರೂ ದಾಖಲಿಸಲ್ಪಟ್ಟರೆ ಅದು ಲಿಂಗಾಯತ ಗಣ್ಯರಿಗೆ ಕಸಿವಿಸಿ ಮತ್ತು ಕಳವಳವನ್ನುಂಟು ಮಾಡುತ್ತಿತ್ತು. ಲಿಂಗಾಯತರ ಬ್ರಾಹ್ಮಣವನ್ನು ನಿರೂಪಿಸಲು ಈ ತರಹದ ಚಿತ್ರಣ ಲಿಂಗಾಯತ ಗಣ್ಯರಿಗೆ ಅಡ್ಡಿಯನ್ನುಂಟು ಮಾಡಿತ್ತು. ಹೀಗಾಗಿ ತಮ್ಮ ಬ್ರಾಹ್ಮಣದ ಹಿರಿಮೆಯನ್ನು ಪ್ರದರ್ಶಿಸುವದಕ್ಕೋಸ್ಕರ ಬಸವಣ್ಣನ/ಇನ್ನ್ಯಾವುದೇ ವಚನಕಾರರ ವಚನಗಳನ್ನು ನಿರ್ಲಕ್ಷಿಸಲಾಯಿತು. ಈ ಅಂಶವನ್ನು ಅಂದಿನ ಹೆಸರಾಂತ ಲಿಂಗಾಯತ ವಿದ್ವಾಂಸರಾದ ಪಿ.ಆರ್. ಕರಿಬಸವ ಶಾಸ್ತ್ರಿಯವರ ಸರ್ಕಾರಿ ದಾಖಲೆಯ (ಯತ್ನಾಗ್ರಫಿಯ ದಾಖಲೆ) ವಿಮರ್ಶೆಯನ್ನು ನಿರೂಪಿಸುತ್ತದೆ. ಇದನ್ನು ಈಗಾಗಲೇ ಚರ್ಚಿಸಲಾಗಿದೆ.[6]

ಇಂತಹ ವಾದ-ವಿವಾದಗಳಲ್ಲಿ ಶಿವ-ಶರಣರ ವಚನಗಳು ಲಿಂಗಾಯತರ ಅಧಿಕೃತ ಪಠ್ಯವೆಂದು ಅಥವಾ ಲಿಂಗಾಯತರ ಸಾಹಿತ್ಯ ಪರಂಪರೆಯ ಅತಿ ಮುಖ್ಯ ಭಾಗವೆಂದು ತಿಳಿದಿದ್ದವರ ಸಂಖ್ಯೆ ವಿರಳ ಎಂದು ಹೇಳಬಹುದು. ಆದಾಗ್ಯೂ ತಮ್ಮ ಪಠ್ಯ ಪರಂಪರೆ ಮತ್ತು ಮೌಲ್ಯವನ್ನು ಸಾಬೀತು ಪಡಿಸಲು ಸಂಸ್ಕೃತ ಮತ್ತು ಕನ್ನಡದಲ್ಲಿದ್ದ ಶೈವ ಕೃತಿಗಳನ್ನು ಹೆಕ್ಕಿ, ಸಂಸ್ಕರಿಸಿ, ವ್ಯಾಖ್ಯಾನಿಸಿ ಪ್ರಕಟಿಸಿರುವ ಸಂಖ್ಯೆ ಅಸಂಖ್ಯಾತ. ನೀಲಕಂಠ ಭಾಷ್ಯ, ಶ್ರೀಕರ ಭಾಷ್ಯ, ಶಂಕರ ಸಂಹಿತೆ, ಸ್ಕಂದ ಪುರಾಣ, ಶತಕಗಳು, ಲಿಂಗಾಯತ ಲಿಂಗಾ ಪೂಜಾವಿಧಿ, ತ್ರಿಶಷ್ಟಿ ಪುರಾತನ ಚರಿತ್ರೆ, ಬಸವೇಶ ವಿಜಯ, ವೀರಶೈವ ಚಿಂತಾಮಣಿ, ಪಂಡಿತ ಚರಿತ್ರೆ, ಕ್ರಿಯಾಸಾರ, ವೀರಶೈವ ರತ್ನಾಕರ (ಈ ಎಲ್ಲಾ ಕೃತಿಗಳು ೧೩ ರಿಂದ ೧೭ನೇ ಶತಮಾನಗಳಲ್ಲಿ ರಚಿಸಲ್ಪಟ್ಟಂತವು) ಕೃತಿಗಳನ್ನು ಸಂಕಲಿಸಿ ಅಥವಾ ಭಾಷಾಂತರಿಸಿ ಪ್ರಕಟಿಸಿದರು. ಈ ಎಲ್ಲಾ ಕೃತಿಗಳಿಗೆ ಶಾಸ್ತ್ರೀಯ ಪಟ್ಟ ಕಟ್ಟಲಾಯಿತು. ಇವುಗಳ ಜೊತೆಗೆ ಬಸವಪುರಾಣ, ಪ್ರಭುಲಿಂಗಲೀಲೆ, ಅನುಭಾವಸಾರ, ಚೆನ್ನಬಸವ ಪುರಾಣಗಳು ಲಿಂಗಾಯತರ ಗ್ರಂಥ ಪರಂಪರೆ ಮತ್ತು ಧಾರ್ಮಿಕ ನಿಯಮಗಳನ್ನೊಳಗೊಂಡ ಕೃತಿಗಳೆಂದು ಪ್ರಸಿದ್ಧಿಸಲಾಯಿತು.[7] ಇವುಗಳಲ್ಲಿ ಕೆಲವೊಂದನ್ನು ಶಾಲೆ ಹಾಗು ಕಾಲೇಜುಗಳ ಪಠ್ಯದಲ್ಲಿಯೂ ಸೇರಿಸಲಾಯಿತು.

ಬಸವಣ್ಣ ಮತ್ತು ಅವನ ಸಮಕಾಲೀನ ಶಿವಶರಣರ ಬಗ್ಗೆ ಇದ್ದ ವಾದ-ವಿವಾದಗಳು, ಭಿನ್ನಾಭಿಪ್ರಾಯಗಳು ಲಿಂಗಾಯತರ ಅಸ್ಮಿತೆಯ ಬಗ್ಗೆ, ಅವರ ಗ್ರಂಥ ಪರಂಪರೆ, ಧರ್ಮದ ಸಂಸ್ಥಾಪಕರಾರು ಎಂಬ ವಿವಾದಗಳನ್ನು ಸಹ ಒಳಗೊಂಡಿದ್ದವು. ಧರ್ಮ ಸಂಸ್ಥಾಪಕರಾರು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಹೇಳುವದಾದರೆ, ಪಿ.ಆರ್. ಕರಿಬಸವಶಾಸ್ತ್ರಿಯಂತವರು ಬಸವ-ಪೂರ್ವ ಯುಗದ ಲಿಂಗಾಯತ ಧರ್ಮವನ್ನು ಪ್ರತಿಪಾದಿಸಿದರೆ, ಮತ್ತಿತರರು[8] ಬಸವ ಯುಗವೇ ಲಿಂಗಾಯತ ಧರ್ಮದ ಆರಂಭದ ಯುಗ ಎಂದು ನಂಬಿದ್ದರು.

ಈ ಎಲ್ಲಾ ಸಂದಿಗ್ಧ ಸನ್ನಿವೇಶಗಳಿಗೆ ಮತ್ತು ಪ್ರತಿಕೂಲ ಬೌದ್ಧಿಕ ವಾತಾವರಣಕ್ಕೆ ಸಾಕ್ಷಿಯಾಗಿದ್ದ ಹಳಕಟ್ಟಿಯವರು ಲಿಂಗಾಯತ ಪುರಾಣ, ಕಾವ್ಯ ಹಾಗು ದಂತಕಥೆಗಳ ಪ್ರಸ್ತುತತೆಗೆ ಮಿಶ್ರ ಭಾವನೆಯನ್ನು ವ್ಯಕ್ತಪಡಿಸಿದರು. ಲಿಂಗಾಯತರ ಅನೇಕ ಕೃತಿಗಳು ಅವರಿಗೆ ಸಾಂಪ್ರದಾಯಿಕವಾಗಿ, ಮೂಢನಂಬಿಕೆಗಳ ಆಗರವಾಗಿ ಗೋಚರಿಸಿದವು. ಉತ್ಪ್ರೇಕ್ಷೆ, ಅಲೌಕಿಕತೆಯ ಈ ಕೃತಿಗಳನ್ನು ಆವರಿಸಿದ್ದರೂ ಅವುಗಳ ಜೊತೆಗೆ ‘ತಾಳ್ಮೆಭರಿತ ನಿರುತ್ಸಾಹ’ವನ್ನು ಪ್ರದರ್ಶಿಸುತ್ತಾರೆ. ಅಸ್ಪಷ್ಟತೆ, ಅಪೂರ್ಣತೆಯಿಂದ ಕೂಡಿದ ಈ ಕೃತಿಗಳು ಲಿಂಗಾಯತರ ನೈಜವಾದ ಇತಿಹಾಸ ಹಾಗೂ ಧರ್ಮವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುವುದಿಲ್ಲ ಎಂದು ಅವರು ನಂಬಿದರು. ಸಾರ್ವಜನಿಕ ವಲಯದಲ್ಲಿ ಲಿಂಗಾಯತರಿಗೆ ಈ ಕೃತಿಗಳಿಂದ ಎಳ್ಳಷ್ಟೂ ಉಪಯೋಗವಿಲ್ಲ ಮತ್ತು ಲಿಂಗಾಯತರ ಸ್ಪಷ್ಟ ಸಾಂಸ್ಕೃತಿಕ ಅಥವಾ ಧಾರ್ಮಿಕ ಗುರುತನ್ನು ಸಾಧಿಸಲು ಇವುಗಳಿಂದ ಸಾಧ್ಯವಿಲ್ಲವೆಂದು ಭಾವಿಸಿದರು. ಆದಾಗ್ಯೂ, ಈ ಕೃತಿಗಳನ್ನು ಸಾರಾಸಗಟು ತಿರಸ್ಕರಿಸಲಿಲ್ಲ. ತಮ್ಮ ವೈಚಾರಿಕ ನಿಲವುಗಳಿಗೆ ಸಂವಾದಿಯಾಗಿ ಅವುಗಳನ್ನು ವ್ಯಾಖ್ಯಾನಿಸಿ, ಅವನ್ನು ಲಿಂಗಾಯತರ ಪುರಾತನ ಭವ್ಯವೆಂದು ಘೋಷಿಸಿದರು. ಆದರೆ ಮಾನವತೆಯ ಸಂದೇಶವನ್ನು ಸಾರಲು ಅವುಗಳಿಂದ ಸಾಧ್ಯವಿಲ್ಲ ಎಂಬ ನೋವು ಕೂಡ ಇತ್ತು.

ಇಲ್ಲಿ ಮತ್ತೊಂದು ವಿಷಯವನ್ನು ಪರಿಗಣಿಸಬೇಕು. ಇದು ಹಳಕಟ್ಟಿಯವರ ಸಾಮುದಾಯಿಕ ಪ್ರಜ್ಞೆ ಮತ್ತು ಸಮಾಜದಲ್ಲಿ ಲಿಂಗಾಯತರಿಗೆ  ಇದ್ದ ಕನಿಷ್ಟ ಗೌರವದ ಬಗ್ಗೆ ಇದ್ದ ಅಸಮಾಧಾನಕ್ಕೆ ಸಂಬಂಧಪಟ್ಟಿದ್ದು. ಲಿಂಗಾಯತರಿಗೆ ಸಮಾಜದಲ್ಲಿ ಸ್ವ-ಪ್ರಜ್ಞೆಯನ್ನು ಹೊಂದುವಂತೆ ಮಾಡುವ ಜರೂರತ್ತು ಹಳಕಟ್ಟಿಯವರನ್ನು ಲಿಂಗಾಯತ ಸಾಹಿತ್ಯಕ್ಕೆ ಒಂದು ಸಮಂಜಸವಾದ ಪರಿಧಿಯನ್ನು ಹಾಕಲು ಪ್ರಚೋದಿಸಿತು. ಇದು ಆಗಿನ ಕಾಲದ ಅತ್ಯವಶ್ಯಕವಾಗಿತ್ತು. ಏಕೆಂದರೆ ಆಗಿನ ಸಾರ್ವಜನಿಕ ವಲಯವು ‘ಅಸ್ಮಿತೆಗಳ ಸಂಧಾನ” ಹಾಗೂ ‘ಪ್ರತಿರೋಧ ವಲಯವಾಗಿ’[9] ಇದ್ದಿದ್ದರಿಂದ ಹಳಕಟ್ಟಿಯವರಿಗೆ ಆ ವಲಯದಲ್ಲಿ ಲಿಂಗಾಯತರ ಸ್ಥಾನ-ಮಾನ ಬಹು ಮುಖ್ಯವಾಗಿತ್ತು. ಪುರಾತನ ಲಿಂಗಾಯತ ಸಾಹಿತ್ಯಕ್ಕೆ ಇದ್ದ ಕನಿಷ್ಟ ಮರ್ಯಾದೆ, ಸ್ಥಾನ-ಮಾನ ಬರೀ ಬೌದ್ಧಿಕ ಜಗತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಜ್ಞಾಪಿಸಿಕೊಳ್ಳುವ ಒಂದು ಘಟನೆಯು ಅವರ ಮನಸ್ಸಿನ  ಮೇಲಾದ ಪರಿಣಾಮವನ್ನು ಮತ್ತು ಸಾಮುದಾಯಿಕ ಪ್ರಜ್ಞೆಯನ್ನು ಸೂಚಿಸುತ್ತದೆ.

ಕರ್ನಾಟಕದಲ್ಲಿ ಮತ ಮತಗಳಲ್ಲಿ ಪಂಗಡ ಪಂಗಡಗಳಲ್ಲಿ ನಾನಾ ತರದ ಕಲಹಗಳು ಯಾವಾಗಲೂ ಇದ್ದದ್ದು ಈಗಲೂ ಕಂಡು ಬರುತ್ತದೆ. ಈ ಸ್ಥಿತಿಯು ಶಾಲಾ ಶಿಕ್ಷಕರಲ್ಲಿಯೂ ಕೂಡ ಇದ್ದುದು ತಿಳಿಯುತ್ತದೆ. ನಮ್ಮ ಕ್ಲಾಸಿಗೆ ಬರುತ್ತಿದ್ದ ಒಬ್ಬ ಶಿಕ್ಷಕರು ತಮ್ಮ ಶಿಕ್ಷಣ ಕಾರ್ಯ ನಡೆಸುತ್ತಾ ಮಧ್ಯದಲ್ಲಿಯೇ ವೀರಶೈವ ಸಮಾಜದ ಮೇಲೆ ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಅವರು ವೀರಶೈವ ಸಮಾಜದಲ್ಲಿ ಪಂಡಿತರಾರೂ ಆಗಿ ಹೋಗಿಲ್ಲ. ವೀರಶೈವ ಸಮಾಜಕ್ಕೆ ವಾಙ್ಞಯವಿಲ್ಲ, ಅವರಲ್ಲಿ ಹಲಕೆಲ ಗ್ರಂಥಕಾರರು ಇದ್ದದ್ದು ಕಂಡು ಬಂದರೂ ಅವರು ಜನ್ಮತಃ ವೀರಶೈವರಿರದೆ ಹಿಂದುಗಡೆ ಅವರು ವೀರಶೈವರಾದರು, ವೀರಶೈವರು ಮರಾಠರಂತೆ ಶೂರರಲ್ಲ, ರಾಜಕಾರಣಿಗಳಲ್ಲ, ಅವರಲ್ಲಿ ರಾಜರಾಗಿಲ್ಲ ಎಂದು ಮೊದಲಾಗಿ ಬಹು ವೇಳೆ ಹೇಳುವದರಲ್ಲಿ ವೇಳೆಗೆಳೆಯುತ್ತಿದ್ದರು. (ಹಳಕಟ್ಟಿ, ೧೯೫೧ (೧೯೮೩), ಪು. ೧೧).

ಈ ಶಿಕ್ಷಕರು ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಲಿಂಗಾಯತ ಧರ್ಮ ಮತ್ತು ಇತಿಹಾಸದ ಬಗ್ಗೆ ಆಧುನಿಕ ಶಿಕ್ಷಣವು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುತ್ತಿರುವುದು ಹಳಕಟ್ಟಿಯವರಿಗೆ ಸರಿಬೀಳಲಿಲ್ಲ. ಅವರಿಗೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಲಿಂಗಾಯತ ಕೃತಿಗಳು ಸರಿಯಾದ ಮೌಲ್ಯ, ನಿಯಮ ಮತ್ತು ಕ್ರಮ ಬದ್ಧತೆಯನ್ನು, ಮೈಗೂಡಿಸಿಕೊಳ್ಳಲು ಸಹಾಯ ಮಾಡುತ್ತವೆಯೋ, ಇಲ್ಲವೋ ಎಂಬ ಅನುಮಾನ ಇತ್ತು.

ಹಳಕಟ್ಟಿಯವರ ಈ ವಿಚಾರಗಳ ಹಿಂದೆ ಕಾನೂನಿನ ಅಂಶವು ಇತ್ತು. ಕಾನೂನಿಗೆ ಸಂಬಂಧಿಸಿದಂತೆ ಅನೇಕ ಧಾರ್ಮಿಕ ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಲಿಂಗಾಯತರು ತಮ್ಮ ಧರ್ಮ, ಸಾಹಿತ್ಯ ಹಾಗು ತತ್ವಗಳನ್ನು ಸ್ಪಷ್ಟವಾಗಿ ಮತ್ತು ಅಧಿಕೃತವಾಗಿ ವ್ಯಾಖ್ಯಾನಿಸಿ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದರೆಂದು ಹಳಕಟ್ಟಿಯವರಿಗೆ ಗೋಚರಿಸಿತು.

ಹೀಗೆ ಅನೇಕ ವಿಧವಾದ ಧಾರ್ಮಿಕ ವಿವಾದಗಳು. ವ್ಯಾಜ್ಯಗಳೂ ಹೋರಾಟಗಳು ವೀರಶೈವ ಸಮಾಜದಲ್ಲಿರುವ ಉಪ ಪಂಗಡಗಳಲ್ಲಿ ಪರಸ್ಪರವಾಗಿ ಅಥವಾ ಪರಧರ್ಮಿಯರೊಡನೆ ಯಾವಾಗಲೂ ನಡೆಯುತ್ತ ಇದ್ದುದು ಕಂಡುಬರುತ್ತದೆ. ಈ ತರಹದ ಕೋಲಾಹಲಗಳು ವೀರಶೈವ ಧರ್ಮದ ಸಲುವಾಗಿ ೧೯೦೪ ರಿಂದ ೧೯೨೦ರ ಮಧ್ಯದಲ್ಲಿ ಅನೇಕ ಕಡೆಗೆ ಏಳುತ್ತಿದ್ದವು. ಅವುಗಳಲ್ಲಿ ವೀರಶೈವ ಧರ್ಮದ ನಿಜ ತತ್ವಗಳಾವುವು ಎಂಬ ವಿಷಯದ ಬಗ್ಗೆ ವಾದ ವಿವಾದಗಳುಂಟಾಗಿ ಅವುಗಳಲ್ಲಿ ಯಾವ ತತ್ವಗಳು ಸತ್ಯವಾದವು, ಯಾವುವು ಅಸತ್ಯವಾದವುಗಳು ಎಂಬುದನ್ನು ತಿಳಿಯುವುದೇ ಕಠಿಣವಾಗಿದ್ದಿತು.

(ಹಳಕಟ್ಟಿ, ೧೯೫೧ (೧೯೮೩), ಪು. ೨೧-೨೨)

ಹಳಕಟ್ಟಿಯವರಿಗೆ ಧಾರ್ಮಿಕ ಪರಿಧಿಯೊಳಗೆ ಲಿಂಗಾಯತ ತತ್ವಗಳ ಅರ್ಥ ಮತ್ತು ಸ್ವರೂಪವನ್ನು ತಿಳಿದುಕೊಳ್ಳುವುದು ಅಸಾಧ್ಯ ಮತ್ತು ಅಪೂರ್ಣವೆಂದು ಮನದಟ್ಟಾಯಿತು. ವೀರಶೈವ ಮಠಗಳ ನಡುವಿನ ಆಂತರಿಕ ವೈಮನಸ್ಯಗಳು[10] ಹಾಗು ಲಿಂಗಾಯತರಿಗೂ, ಇತರರಿಗೂ (ವಿಶೇಷವಾಗಿ ಬ್ರಾಹ್ಮಣರು) ಇದ ಭಿನ್ನಾಭಿಪ್ರಾಯಗಳನ್ನು ಸಾಂಪ್ರದಾಯಿಕ ಅಥವಾ ಇದುವರೆಗೂ ಅನುಸರಿಸಿಕೊಂಡು ಬಂದಿದ್ದ ಆಚಾರ-ವಿಚಾರಗಳ ಪಾರಂಪರಿಕ ಚೌಕಟ್ಟಿನಲ್ಲಿ ಬಗೆಹರಿಸಲು ಸಾಧ್ಯವಿಲ್ಲವೆಂದು ಹಳಕಟ್ಟಿಯವರಿಗೆ ಸ್ಪಷ್ಟವಾಯಿತು. ಜೊತೆಗೆ ಬಹಳ ಹಿಂದಿನಿಂದಲೂ ಬಗೆಹರಿಸಲಾಗದೆ ಉಳಿದಿದ್ದ ಸಮಸ್ಯೆಗಳು ಮತ್ತಷ್ಟು ಜಟಿಲತೆಯನ್ನು ಹುಟ್ಟು ಹಾಕಿದವು. ಅವುಗಳಲ್ಲಿ ಪ್ರಮುಖವು: ಅ) ಲಿಂಗಾಯತ ಧರ್ಮದ ಸ್ಥಾಪಕರಾರು ಆ) ಲಿಂಗಾಯತರ ಅಧಿಕೃತ ದೈವ ಮತ್ತು ಗ್ರಂಥಗಳಾವುವು. ಇ) ತನ್ನ ತಾತ್ವಿಕ ನಿಲುವು ಯಾವುದು ಎನ್ನುವುದರ ಬಗ್ಗೆ ಇದ್ದ ಗೊಂದಲ. ತಮ್ಮ ಧಾರ್ಮಿಕ ನೆಲೆಯೇನು ಎಂಬುದರ ಪ್ರಶ್ನೆಗಳಿಗೆ ಸರಿಯಾದ ಸ್ಪಷ್ಟವಾದ ಹಾಗೂ ನೇರವಾದ ಉತ್ತರಗಳಿಲ್ಲ ಎಂಬ ಭಾವನೆ ಹಳಕಟ್ಟಿಯವರನ್ನು ಕಾಡುತ್ತಿತ್ತು. ಜೊತೆಗೆ ಈ ವಿವಾದಗಳು ಸದಾ ಕಾಲ ಮತೀಯ ಮತ್ತು ಸಂಕುಚಿತ ಭಾವನೆಗಳಿಂದ ಕೂಡಿದ್ದವೆಂದು ಹಾಗೂ ಅವು ಕೋರ್ಟು-ಕಛೇರಿಗಳನ್ನು ತಲುಪಿದ್ದು ಹಳಕಟ್ಟಿಯವರಿಗೆ ಬೇಸರವನ್ನುಂಟು ಮಾಡಿದ್ದವು. ಅವರಿಗೆ ಈ ವಿವಾದಗಳಿಂದುಂಟಾದ ಕಾನೂನಿನ ತೊಡಕುಗಳ ಅರಿವಿತ್ತು. ಬ್ರಾಹ್ಮಣರ ವಿರುದ್ಧದ ಧಾರ್ಮಿಕ ವ್ಯಾಜ್ಯಗಳಲ್ಲಿ  ಲಿಂಗಾಯತರು ತಮ್ಮ ಸರಿಯಾದ ಸಾಮಾಜಿಕ ಹಾಗು ಧಾರ್ಮೀಕ ಗುರುತಿನ ಬಗ್ಗೆ ಅಧಿಕಾರಯುತವಾಗಿ ವಾದಿಸಲು ಸಾಧ್ಯವಿರದ ಸನ್ನಿವೇಶದ ಬಗ್ಗೆ ಅವರು ಬಹಳ ಸಲ ತಲೆಕೆಡಿಸಿಕೊಂಡಿದ್ದರು. ಅವರಿಗೆ ಆಧುನಿಕ ಕಾನೂನಿನ ಅವಶ್ಯಕತೆ (ವಿಶೇಷವಾಗಿ ಕಾನೂನಿನ ಪರಿಭಾಷೆಗಳಾದ ನಿಖರತೆ, ಅನುಭವಿಕತೆ ಹಾಗು ಖಚಿತತೆ) ಹಿಂದೆಂದಿಗಿಂತಲೂ ಈಗ ಹೆಚ್ಚು ಅವಶ್ಯಕವಾಗಿ ಕಂಡಿತು. ಆಧುನಿಕ ಸಾರ್ವಜನಿಕ ವಲಯದಲ್ಲಿ ಗೌರವದಿಂದ ನಿಲ್ಲಲು ಹಾಗು ಲಿಂಗಾಯತರ ಗುರುತನ್ನು ಸ್ಪಷ್ಟ ಪಡಿಸಲು ಕಾನೂನಿನ ಚೌಕಟ್ಟು ಸಹ ಹಳಕಟ್ಟಿಯವರಿಗೆ ಬೇಕಾಗಿತ್ತು.[11]

ಈ ಸಾಮಾಜಿಕ, ಧಾರ್ಮಿಕ ಮತ್ತು ಬೌದ್ಧಿಕ ಸ್ಥಿತಿಗತಿಗಳು ಹಳಕಟ್ಟಿಯಂತವರಿಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಮನದಟ್ಟು ಮಾಡಿತು. ಲಿಂಗಾಯತ ಸಾಹಿತ್ಯವನ್ನು ಅರ್ಥೈಸಲು ಹಾಗೂ ಅದನ್ನು ಬೆಳಕಿಗೆ ತರಲು ಬಲವಾದ ಸೈದ್ಧಾಂತಿಕ ಹಾಗು ವೈಚಾರಿಕತೆಯ ಅಡಿಪಾಯದ ಅವಶ್ಯಕತೆ ಇದ್ದು ಅದಕ್ಕಾಗಿ ೧೨ನೇ ಶತಮಾನದ ವಚನ ಸಂಪ್ರದಾಯ ಮತ್ತು ಅದು ಪ್ರತಿನಿಧಿಸುವ ಆದರ್ಶಗಳನ್ನು ಆಧುನಿಕ ಪರಿಭಾಷೆಯಲ್ಲಿ ಪುನರುಜ್ಜೀವನಗೊಳಿಸುವುದೇ ಸರಿಯಾದ ದಾರಿಯೆಂದು ಹಳಕಟ್ಟಿಯವರು ಮನಗಂಡರು. ಇದಕ್ಕಾಗಿ ವಚನಗಳಲ್ಲಿ ಅಡಗಿರುವ ‘ಮೂಲ’ (original) ಅಂಶಗಳನ್ನು ಬೆಳಕಿಗೆ ತರುವುದೆ ಸೂಕ್ತ ಕ್ರಮವೆಂದು ಹಳಕಟ್ಟಿಯವರಿಗೆ ಹೊಳೆಯಿತು. ಹಾಗಾಗಿ ಅವರು ಪುರಾತನ ಸಾಹಿತ್ಯವನ್ನು ಸಂಪೂರ್ಣವಾಗಿ ತಿರಸ್ಕರಿಸಲಿಲ್ಲ. ಮಧ್ಯಸ್ಥಿಕೆಯ ಮತ್ತು ಮರು-ವ್ಯಾಖ್ಯಾನದ ಮಾರ್ಗವನ್ನು ಅನುಸರಿಸಿದರು. ಸಮಕಾಲೀನ ಅವಶ್ಯಕತೆ ಮತ್ತು ತುರ್ತು ಪರಿಸ್ಥಿತಿಗಳು ಹಳಕಟ್ಟಿಯವರ ಮಾರ್ಗವನ್ನು ಪ್ರಭಾವಿಸಿದವು. ಮತ್ತೊಂದು ಮಾತಿನಲ್ಲಿ ಹೇಳುವದಾದರೆ ವಚನಗಳ ಗತ ವೈಭವವನ್ನು ಅರಸುವದಲ್ಲದೆ, ಅದು ಪ್ರಸ್ತುತ ದಿನಗಳ ಸ್ಪಷ್ಟೀಕರಣವು ಆಗಿತ್ತು. ಇದಕ್ಕಾಗಿ ವಚನಗಳ ಸಮಾಜೋದ್ಧಾರ ಧ್ಯೇಯಗಳನ್ನು ಅಭ್ಯಸಿಸಿದರು. ಅವರೇ ಹೇಳುವ ಹಾಗೆ.

*

ವಚನಶಾಸ್ತ್ರದಲ್ಲಿ ಆಧುನಿಕ ಕಾಲಕ್ಕೆ ಅನ್ವಯಿಸುವಂತ ವಿಷಯಗಳ ವಿವರಣೆಗಳು ಇದ್ದುದು ಕಂಡು ಬರುತ್ತದೆ. ಆದ್ದರಿಂದ ಇಂಥ ವಿಷಯಗಳಿಗೆ ಸಂಬಂಧಿಸಿದ ವಚನಗಳನ್ನೆಲ್ಲಾ ಒತ್ತಟ್ಟಿಗೆ ತರಲು ಪ್ರಯತ್ನಿಸುತ್ತಾ ಬಂದೆನು. ಈ ವಚನಗಳು ಮುಖ್ಯವಾಗಿ ಜಾತಿ ಭೇದ ನಿರಾಕರಣೆ, ಧರ್ಮ ಮೂಡತೆ ಮತ್ತು ಕರ್ಮಠತನದ ನಿರಾಕರಣೆ, ಭಿಕ್ಷೆಯ ಬದಲು ಉದ್ಯೋಗ ಮಾಡುವುದು, ಸ್ತ್ರೀಯರ ಸಮಾನತೆ ಇವೇ ಮೊದಲಾದ ವಿಷಯಗಳು ಇದ್ದು ಅವುಗಳಿಗೆ ಸಂಬಂಧಿಸಿದ ವಚನಗಳನ್ನು ನಾನು ಒತ್ತಟ್ಟಿಗೆ ಸೇರಿಸಲಿಕ್ಕೆ ಹತ್ತಿದೆನು (ಹಳಕಟ್ಟಿ, ೧೯೫೧ (೧೯೮೩): ೩೨).

[1] ವಚನಗಳನ್ನು ಪ್ರಪಂಚದ ಶ್ರೇಷ್ಠ ಸಾಹಿತ್ಯ ಮತ್ತು ತತ್ವಜ್ಞಾನಗಳಿಗೆ ಹೋಲಿಸಿರುವ ಅಧ್ಯಯನಗಳು ಹೇರಳವಾಗಿ ಸಿಗುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆಗೆ ಮೈಸೂರು ಸರ್ಕಾರವು ಬಸವೇಶ್ವರರ ಬಗ್ಗೆ ಮಾಡಿದ ಸಂಸ್ಮರಣಾತ್ಮಕ ಸಂಪುಟ (೧೯೬೭). ಇದರಲ್ಲಿ ಅನೇಕ ವಿದ್ವಾಂಸರು ಬಸವಣ್ಣನನ್ನು ಮತ್ತು ವಚನಗಳನ್ನು ಶ್ರೇಷ್ಟ ಮಟ್ಟದ ಸಾಹಿತ್ಯ ಮತ್ತು ತತ್ವ ಜ್ಞಾನಿಗಳಿಗೆ ಹೋಲಿಸಿ ಅನೇಕ ಲೇಖನಗಳನ್ನು ಬರೆದಿದ್ದಾರೆ.

[2] ಸಾರ್ವಜನಿಕ ಓದುಗ ಪ್ರಪಂಚವು ಸಮಾಜದ ಅಂಗವಾಗಿದ್ದರೂ, ಅದು ಎಲ್ಲವನ್ನು ಪ್ರತಿನಿಧಿಸುವ ಅಂಶವಲ್ಲ. ಪ್ರಸ್ತುತ ಲೇಖನದಲ್ಲಿ ಓದುಗ ಪ್ರಪಂಚವೆಂದರೆ ಅಕ್ಷರಸ್ತ, ಮಧ್ಯಮ ವರ್ಗದ ಓದುಗರು ಎಂಬ ಅರ್ಥದಲ್ಲಿ ಬಳಸಲಾಗಿದೆ.

[3] ಶೌಟೆನ್ನರ Revolution of the Mystics: on the Social Aspects of Virashaivism (೧೯೯೧) ಎಂಬ ಕೃತಿಯನ್ನು ವಿಮರ್ಶಿಸುತ್ತಾ ರಾಬರ್ಟ್ ಝೈಡೆನ್ ಬೋಸ್ ಎಂಬುವವರು ವಚನಗಳ ಆಧುನಿಕ ಇತಿಹಾಸವನ್ನು (ವಿಶೇಷವಾಗಿ ಅವುಗಳ ಅರ್ಥ ಮತ್ತು ವ್ಯಾಖ್ಯಾನಗಳು) ಮತ್ತೊಮ್ಮೆ ಪರಿಶೀಲಿಸಬೇಕೆಂದು ಪ್ರತಿಪಾದಿಸುತ್ತಾರೆ (೧೯೯೭: ೫೨೮). ಶೌಟನ್ ರು ಈ ಅಂಶದ ಬಗ್ಗೆ ಗಮನ ಹರಿಸದೇ ಇರುವುದನ್ನು ರಾಬರ್ಟರವರು ತೀವ್ರವಾಗಿ ಟೀಕಿಸುತ್ತಾರೆ. ರಾಬರ್ಟ್‌ರ ಪ್ರಕಾರ ವಚನಗಳಿಗಿರುವ ಆಧುನಿಕ ವ್ಯಾಖ್ಯಾನಗಳು ಇತ್ತೀಚಿನ (ಅಂದರೆ ಆಧುನಿಕ ಕಾಲ) ಬೆಳವಣಿಗೆಗಳಾಗಿದ್ದು ಅವು “ಜಾತ್ಯಾತೀತ ಕ್ರಿಶ್ಚಿಯನ್ ವ್ಯಾಖ್ಯಾನ”ಗಳಿಗೆ ಸಂವಾದಿಯಾಗಿ ರೂಪುಗೊಂಡಿರುವಂತದ್ದು.

[4] ಈ ಲಿಂಗಾಯತ ಗಣ್ಯರು ಶ್ರೀಮಂತ ವ್ಯಾಪಾರ ಮತ್ತು ಜಮೀನ್ದಾರಿ ಮನೆತನಕ್ಕೆ ಸೇರಿದವರಾಗಿದ್ದರು. ಅವರ ಸತತ ಪ್ರಯತ್ನದಿಂದಲೆ ೧೯೦೪ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಲಾಯಿತು. ಈ ಮಹಾಸಭೆಯು ಲಿಂಗಾಯತರ ಐಕ್ಯತತೆ ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶವನ್ನು ಹೊಂದಿತ್ತು.

[5] ಪಾಶ್ಚಾತ್ಯ ವಿದ್ವಾಂಸರಲ್ಲಿ ಪ್ರಮುಖರಾದ ಸಿ.ಪಿ. ಬ್ರೌನ್ ಪ್ರಥಮ ಬಾರಿಗೆ (೧೮೪೦ರ ಸುಮಾರಿನಲ್ಲಿ) ಲಿಂಗಾಯತ ಧರ್ಮವನ್ನು ಮತ್ತು ಬಸವಣ್ಣನನ್ನು ಸುಧಾರಣವಾದಿಯನ್ನಾಗಿ ಚಿತ್ರಿಸಿದ್ದಾನೆ. ಆತನ ಪ್ರಕಾರ ಲಿಂಗಾಯತ ಧರ್ಮವು ಅಥವಾ ಆ ಧರ್ಮದ ಜಂಗಮರು ಪ್ರಗತಿ ಪರರು ಕ್ರಿಶ್ಚಿಯನ್ ಪ್ರೊಟೆಸ್ಟಂಟರಷ್ಟೆ ಕ್ರಾಂತಿಕಾರರು.

[6] ಮೂರನೇ ಅಧ್ಯಾಯವನ್ನು ನೋಡಿ.

[7] ಹುಚ್ಚವೀರ ಶಾಸ್ತ್ರಿಯವರಿಂದ ರಚಿಸಲ್ಪಟ್ಟ ವೀರಶೈವಾನ್ವಯ ಚಂದ್ರಿಕ (೧೮೯೦) ಲಿಂಗಾಯತ ಕೃತಿಗಳ ದೊಡ್ಡ ಪಟ್ಟಿಯನ್ನೆ ಕೊಡುತ್ತದೆ

[8] ಮಾರ್ಕ್ಸ್ ವಿಲ್ಕ್ಸ್, ಮುರ‍್ರೆ ಹ್ಯಾಮಿಕ್ ಮತ್ತು ಸಿ.ಪಿ. ಬ್ರೌನ್‌ರು ಈ ನಂಬಿಕೆಯನ್ನು ಈಗಾಗಲೇ ಗಟ್ಟಿಗೊಳಿಸಿದ್ದರು.

[9] ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೋಡಿ ಶರ್ಮಿಳರೆಗೆ, “Understanding Popular Culture: The Satyashokhak and Ganesh Mela in Maharashtra”, ಸೋಸ್ಯಾಲಾಜಿಕಲ್ ಬುಲೆಟಿನ್, ಸಂಪುಟ ೪೯ (೨), ೨೦೦೦, ಪು. ೨೦೬.

[10] ೨೦ನೇ ಶತಮಾನದ ಆದಿಯಲ್ಲಿ ಅನೇಕ ಲಿಂಗಾಯತ ಮಠಗಳು ಹುಟ್ಟಿಕೊಂಡವು. ಆದರೆ ಈ ಮಠಗಳ ನಡುವೆ ನಮ್ಮ ಧಾರ್ಮಿಕ ಮುಖಂಡರು ಯಾರು ಮತ್ತು ಆಚರಣೆಗಳನ್ನು ನಡೆಸಲು ಯಾರಿಗೆ ನಿಜವಾದ ಹಕ್ಕಿದೆ ಎಂಬ ವಿಷಯಗಳ ಬಗ್ಗೆ ವಾದ-ವಿವಾದಗಳಿದ್ದವು.

[11] ಹಳಕಟ್ಟಿಯವರ ಮೇಲಿದ್ದ ಕಾನೂನಿನ ಒತ್ತಡಗಳು ಮತ್ತು ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ವಿಲಿಯನ್ ಮ್ಯಾಕ್ ಕಾರ್ಕ್‌ನ ಲೇಖನವನ್ನು ನೋಡಿ. ಇದರಲ್ಲಿ ಲಿಂಗಾಯತ ಕಾನೂನು ಪಂಡಿತರು. ಆಧುನಿಕ ಕಾನೂನಿನ ಚೌಕಟ್ಟಿನಲ್ಲಿ, ತಮ್ಮ ಸಮುದಾಯದ ಒಗ್ಗಟಿಗಾಗಿ ಶ್ರಮಿಸಿದುದರ ಚಿತ್ರಣವಿದೆ.