ಭಾಗ

ವಚನಗಳಶೋಧ

ಪ್ರತಿಕೂಲ ವಾತಾವರಣವನ್ನು ಎದುರಿಸುತ್ತಿರುವಾಗಲೇ, ಲಿಂಗಾಯತ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳವ ರೀತಿಯಲ್ಲಿ ಕ್ಷೀಣತೆ ಮತ್ತು ಅಧೋಗತಿಯನ್ನು ಮನಗಂಡ ಹಳಕಟ್ಟಿಯವರಿಗೆ ಅದನ್ನು ಮತ್ತೆ ಕಟ್ಟುವ ಹಾಗೂ ಅದಕ್ಕೆ ಪುನರ್ ಜನ್ಮವನ್ನು ನೀಡುವ ಉತ್ಕಟತೆ ಹೆಚ್ಚಾಯಿತು. ೧೯೦೦ರ ಸುಮಾರಿಗೆ ಅನೇಕ ಸಾರ್ವಜನಿಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೂ,[1] ವಕೀಲಿ ವೃತ್ತಿ ಅವರ ಮೇಲೆ ಬಹಳ ಪ್ರಭಾವ ಬೀರಿ, ಹೊಸ, ಹೊಸ, ಅನುಭವಗಳನ್ನು ನೀಡಿತು. ಆದರೂ ಕಾನೂನಿನ ಬಾಹುಗಳಲ್ಲಿ ಸಿಲುಕಿ, ಕಾನೂನಿನ ಪರಿಭಾಷೆಯಲ್ಲಿ ಲಿಂಗಾಯತ ಸಾಹಿತ್ಯ ಮತ್ತು ಗ್ರಾಂಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗದೆ, ತಮ್ಮ ಧ್ಯೇಯವನ್ನು ಈಡೇರಿಸಿಕೊಳ್ಳುವ ಮಾರ್ಗೋಪಾಯವನ್ನು ವಚನಗಳಲ್ಲಿ ಕಂಡು ಕೊಂಡರು. ಕಾನೂನಿನ ಕ್ಷೇತ್ರದಲ್ಲಿ ಸಾಧಿಸಲಾಗದ ವೈಯಕ್ತಿಕ ಅಧಿಪತ್ಯವನ್ನು ವಚನಗಳ ಸಾಂಸ್ಕೃತಿಕ ಲೋಕದಲ್ಲಿ ಚಲಾಯಿಸಲು ಸಾಧ್ಯವಿತ್ತು. ಇದೇ ಸಮಯದಲ್ಲಿ (ಅಂದರೆ ೧೯೦೨) ತಮ್ಮ ಸ್ನೇಹಿತರಾದ ವೀರಭದ್ರಪ್ಪ ಹಾಲಭಾವಿಯವರಿಂದ ಪ್ರಥಮ ಬಾರಿಗೆ ಲಿಂಗಾಯತ ಸಾಹಿತ್ಯದ ಪರಿಚಯ ಮಾಡಿಕೊಂಡರು. ಒಮ್ಮೆ ಭೇಟಿಯ ಸಂದರ್ಭದಲ್ಲಿ ಹಾಲಾಭಾವಿಯವರು ಲಿಂಗಾಯತ ಸಾಹಿತ್ಯದ ಅನೇಕ ಕೃತಿಗಳನ್ನು ಹಳಕಟ್ಟಿಯವರ ಮುಂದೆ ಇಟ್ಟರು. ಇವುಗಳಲ್ಲಿ ಪ್ರಭುಲಿಂಗಲೀಲೆ ಮತ್ತು ಗಣ ಭಾಷ್ಯ ರತ್ನಮಾಲೆ ಎಂಬ ಲಿಂಗಾಯತ ಪುರಾಣಗಳು ಅವರ ಗಮನವನ್ನು ಎಷ್ಟೊಂದು ಸೆಳೆದವೆಂದರೆ ಅವುಗಳಲ್ಲಿನ “ವಿಚಾರಗಳು ಹೊಸ ತರಹದ ಶೈಲಿಯಲ್ಲಿದ್ದು, ಅವು ಹೊಸ ತರಹದ ಶ್ರೇಷ್ಟ ವಿಚಾರವುಳ್ಳಗಳಾಗಿದ್ದವು” (ಹಳಕಟ್ಟಿ, ೧೯೨೩: ೧೫) ಎಂದು ಅವರು ಪ್ರತಿಗಳು, ಹಸ್ತ ಪ್ರತಿಗಳನ್ನು ಹುಡುಕುವಲ್ಲಿ ಹಳಕಟ್ಟಿಯವರು ಯಶಸ್ವಿಯಾದರು, ಭಾವಚಿಂತಾಮಣಿ, ಕವಿವರ್ಣ ರಸಾಯನ, ಶಿವತತ್ವ ಚಿಂತಾಮಣಿ, ಎಕೋರಾಮೇಶ್ವರ ಪುರಾಣ, ಏಕೋತ್ತರ ಪಟ್‌ಸ್ಥಲ ಸಂಗ್ರಹಿಸುವಲ್ಲಿ ಅವರು ಯಶಸ್ಸನ್ನು ಕಂಡರು. ಇದೇ ಸಮಯದಲ್ಲಿ ಪ್ರಭುದೇವನ ಅನೇಕ ವಚನಗಳು ತಾಳೆಗರಿಯಲ್ಲಿ ದೊರಕಿದವು. ನೂರಾರು ಪಸ್ತಪ್ರತಿಗಳು ಹಾಗು ತಾಳೆಗರಿಯ ಪ್ರತಿಗಳನ್ನು ಹುಡುಕುವ ಮುಂದಿನ ಕಾರ್ಯಕ್ಕೆ ಇವು ನಾಂದಿಯಾದವು. ಸಂಗ್ರಹಿಸಲ್ಪಟ್ಟ ಕೃತಿಗಳನ್ನು ಅವಲೋಕಿಸಿದಾಗ ಪ್ರಥಮ ಬಾರಿಗೆ ಹಳಕಟ್ಟಿಯವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೋಚರಿಸಿತು: ಲಿಂಗಾಯತ ಸಾಹಿತ್ಯವು ತನ್ನದೇ ಆದ ಸ್ವತಂತ್ರ ಸಿದ್ಧಾಂತ, ನಿಯಮ, ತತ್ವ, ಶೈಲಿ ಹಾಗು ಧಾರ್ಮಿಕ ಅಂಶಗಳನ್ನು ಹೊಂದಿದೆ.

*

ಅತ್ಯಂತ ಮಹತ್ವವುಳ್ಳ ಇಂತಹ ಲಿಂಗಾಯತ ಸಾಹಿತ್ಯವನ್ನು ಸ್ವತಃ ಲಿಂಗಾಯತರೆ ಮರೆತಿರುವುದು ಹಳಕಟ್ಟಿಯವರಿಗೆ ಸೋಜಿಗವಾಗಿತ್ತು. ಆದಾಗ್ಯೂ ಅವರು ಭಾವಿಸಿದ ಹಾಗೆ ಅದು ಸಂಪೂರ್ಣ ಸ್ಮೃತಿನಾಶದ ಸಂಗತಿಯಾಗಿರಲಿಲ್ಲ. ಅವರು ಸಂಪೂರ್ಣವಾಗಿ ವಚನ ಅಧ್ಯಯನಕ್ಕೆ ತೊಡಗಿಸಿಕೊಳ್ಳುವ ಮೊದಲೆ ವಚನಗಳ ಅನೇಕ ಪ್ರಕಟಣೆಗಳು ಹೊರ ಬಂದಿದ್ದವು. ಬಾಲ ಸಂಗಯ್ಯನ ಶಿಖಾರತ್ನ ಪ್ರಕಾಶ (೧೮೮೩) ದಲ್ಲಿನ ವಚನಗಳು ಮೊದಲ ಪ್ರಕಟಣೆಗಳು. ನಂತರ ತೋಂಟದ ಸಿದ್ಧಲಿಂಗೇಶ್ಚರ, ಅಖಂಡೇಶ್ವರ, ಮೌನೇಶ್ವರ (ಎಲ್ಲವೂ ೧೮೮೭), ಬಸವಣ್ಣ (೧೮೮೭ ಮತ್ತು ೧೮೮೯) ಮತ್ತು ಅಂಬಿಗರ ಚೌಡಯ್ಯ (ಎರಡನೆ ಸಂಚಿಕೆ ೧೯೦೫) ರ ವಚನಗಳು ಪ್ರಕಟಗೊಳಲ್ಪಟ್ಟಿದ್ದವು.[2] ಈ ವಚನಗಳನ್ನು ಪ್ರಕಟಿಸಿದವರು ವ್ಯಾಪಾರಿ ಮೂಲದವರಾಗಿದ್ದರು. ಹಾಗಾಗಿ ಅವುಗಳ ಗಂಭೀರ ಅಧ್ಯಯನಕ್ಕೆ ಆಗ ಅಷ್ಟೊಂದು ಆಸಕ್ತಿದಾಯಕ ವಾತಾವರಣವಿರಲಿಲ್ಲ. ಆದರೆ ಈ ಎಲ್ಲಾ ವಚನಗಳನ್ನು ಹಿಂದೂ ಧರ್ಮದ ಸಾರವೆಂಬಂತೆ ಬಿಂಬಿಸಲಾಯಿತು. ಉದಾಹರಣೆಗೆ, ಬಸವಣ್ಣನ ವಚನಗಳು (೧೮೮೯) ಎಂಬ ಕೃತಿಯ ಮುಖ ಪುಟದಲ್ಲಿ ಹಿಂದೂ ಧರ್ಮ ಮತ್ತು ಭಕ್ತಿಯ ಬಗ್ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಇಲ್ಲಿನ ವಚನಗಳು ನಿಗಮ, ಆಗಮ, ಉಪನಿಷತ್, ಸ್ಮೃತಿಗಳು, ಶಿವಪುರಾಣ, ಶಾಸ್ತ್ರ ಹಾಗೂ ವೀರಮಾಹೇಶ್ವರ ಶಾಸ್ತ್ರದ ರಹಸ್ಯಗಳ ಸಾರವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಪಟ್‌ಸ್ಥಲದ ತತ್ವದ ಬಗ್ಗೆ ಇರುವ ನಂಬಿಕೆಯನ್ನು ವರ್ಣಿಸುತ್ತಾ, ಎಲ್ಲಾ ವಚನಗಳನ್ನು ಅದರ ತತ್ವಾನುಸಾರ ವಿಂಗಡಿಸಲಾಗಿದೆ.

ಕ್ರಮೇಣ ಸಹಸ್ರಾರು ಸಂಖ್ಯೆಯಲ್ಲಿ ವಚನಗಳಿರುವುದು ಹಳಕಟ್ಟಿಯವರಿಗೆ ತಿಳಿದು ಬಂತು. ಮೊದಮೊದಲಿಗೆ “ಮಹತ್ವಿಕರಾದ ಶಿವ ಶರಣರ ವಿಚಾರಗಳನ್ನು ಅರಿಯಬೇಕೆಂದು ನನ್ನ ಕುತೂಹಲವಿದ್ದರಿಂದ” (ಹಳಕಟ್ಟಿ, ೧೯೨೩: ೧೧) ಅವರು ಕೆಲವೇ ಕೆಲವು ವಚನಕಾರರ ವಚನಗಳನ್ನು ಮಾತ್ರ ಸಂಗ್ರಹಿಸಿದರು. ವಚನಗಳ ಸಂಖ್ಯೆ ಅಧಿಕವಿದ್ದು “ಅವುಗಳಂಥ ವಿಚಾರಸರಣಿಯ ಹಿಂದೂ ಧರ್ಮದ ಯಾವ ವಾಙ್ಞಯದಲ್ಲಿಯೂ ದೊರಕುವುದಿಲ್ಲ” (ಹಳಕಟ್ಟಿ, ೧೯೨೩: ೮) ಎಂಬ ನಂಬಿಕೆಯವರ ವಚನಗಳ ‘ಮೂಲ’ ಆದರ್ಶದ ಬಗ್ಗೆ ಇದ್ದ ಅಚಲವಾದ ನಂಬಿಕೆಯೆ ಕಾರಣವಾಗಿದೆ. ಈ ನಂಬಿಕೆ ಹಳಕಟ್ಟಿಯವರನ್ನು ಮತ್ತಷ್ಟು ಹುರುಪಿನಿಂದ ಕೆಲಸ ಮಾಡುವಂತೆ ಪ್ರೇರೇಪಿಸಿತು. ವಚನಗಳ ಸುತ್ತ ಒಂದು ಕೇಂದ್ರೀಕೃತ ಅಧ್ಯಯನವನ್ನು ಸ್ಥಾಪಿಸುವ ಉದ್ದೇಶ ಇದೇ ಸಮಯದಲ್ಲಿ ಚಿಗುರೊಡೆಯಿತು. ಇದಕ್ಕಾಗಿ ಅವರು ಮಾಡಬೇಕಾಗಿದ್ದ ಮೊದಲ ಕೆಲಸವೇನೆಂದರೆ ವಚನಗಳು ‘ನೈತಿಕ’ ಗುಣಗಳನ್ನು ಬೋಧಿಸುವದಕ್ಕಾಗಿ ರಚಿಸಲ್ಪಟ್ಟವು ಎಂದು ನಿರೂಪಿಸುವುದು. ಈ ನೈತಿಕತೆಯ ಅಂಶವು ಪವಾಡ, ಉತ್ಪ್ರೇಕ್ಷೆಗಳಿಂದ ಆವರಿಸಲ್ಪಟ್ಟಿದ್ದ ಲಿಂಗಾಯತ ಸಾಹಿತ್ಯವನ್ನು ಮಾನವತೆ ಮತ್ತು ವೈಚಾರಿಕತೆಯ ಕಡೆಗೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿತ್ತು. ವಚನಗಳನ್ನು ನೈತಿಕತೆಯ ದೃಷ್ಟಿಕೋನದಿಂದ ನೋಡುವುದರಿಂದ ವಚನಕಾರರನ್ನು ಮಾನವತೆಯ ಹರಿಕಾರರಂತೆ ಮತ್ತು ವಿಶಾಲ ಹೃದಯದವರಂತೆ ಬಿಂಬಿಸಲು ಸಾಧ್ಯವೆಂದು ಹಳಕಟ್ಟಿಯವರಿಗೆ ಮನವರಿಕೆಯಾಯಿತು. ಇದ್ದಕ್ಕಾಗಿ ವಚನಗಳನ್ನು ನೈತಿಕೀಕರಣಗೊಳಿಸುವದು (moralization) ಹಳಕಟ್ಟಿಯವರಿಗೆ ಅತ್ಯವಶ್ಯಕವಾಗಿತ್ತು. ಏಕೆಂದರೆ ಆಗಿನ ಕಾಲದಲ್ಲಿ ನೀತಿ ಮತ್ತು ನೀತಿಶಾಸ್ತ್ರದ ವಿಚಾರಧಾರೆಗಳು ಅಮೂರ್ತವಾಗಿ ಹಾಗು ಅಸಮಸ್ಯಾತ್ಮಕವಾಗಿ ಭಾರತೀಯ ಮಧ್ಯಮ ವರ್ಗದ ಮನೋಭೂಮಿಕೆಯನ್ನು ರೂಪಿಸಿತ್ತು.[3] ಅದು ಮಾನವತೆಯ ವಿಶಾಲ ಪರಿಧಿಯೊಳಗೆ ವೈಚಾರಿಕ ಧರ್ಮ ಮತ್ತು ಸಾಹಿತ್ಯವನ್ನು ರೂಪಿಸುವ ಮಾರ್ಗವಾಗಿತ್ತು. ಹಳಕಟ್ಟಿಯವರಿಗೆ ಈ ವಿಚಾರಧಾರೆಯ ಪ್ರಭಾವ ಸಾಕಷ್ಟಾಗಿತ್ತೆಂದು ತಿಳಿಯಬಹುದು. ವಚನಗಳನ್ನು ಶಾಸ್ತ್ರಾಂಧತೆ ಮತ್ತು ಪುರಾಣಗಳಿಂದ ಮುಕ್ತವಾಗಿಸುವ / ಬೇರ್ಪಡಿಸುವ ವೈಚಾರಿಕ ನಿಯಮಗಳನ್ನು ಇದರಿಂದ ಪಡೆಯುವಂತಾಯಿತು. ಜೊತೆಗೆ ವಚನಕಾರರ ಸುತ್ತ ಹೆಣೆಯಲ್ಪಟ್ಟ ದಂತಕಥೆಗಳು, ಪವಾಡ ಸದೃಶ ಅಂಶಗಳು ಹಾಗು ಅಮಾನವೀಯ ವರ್ಣನೆಗಳನ್ನು ತೊಡಿದು ಹಾಕಿ ಅವುಗಳನ್ನು ವೈಚಾರಿಕತೆಯಡಿಯಲ್ಲಿ ವ್ಯಾಖ್ಯಾನಿಸುವ ಶಕ್ತಿಯು ಹಳಕಟ್ಟಿಯವರಿಗೆ  ದೊರಕಿತು. ತಮ್ಮದೇ ಆದ ಯಾವುದೇ ಪ್ರತ್ಯೇಕ ನೈತಿಕ ಸಿದ್ಧಾಂತವನ್ನು ರೂಪಿಸಿದೆ. ಹಳಕಟ್ಟಿಯವರು ಎರಡು ರೀತಿಯಲ್ಲಿ ವಚನಗಳನ್ನು ಪ್ರದೀಪಿಸುವ ಪ್ರಯತ್ನ ಮಾಡಿದರು: ಅ) ವ್ಯಕ್ತಿಗಳ ನೈತಿಕ ಪರಿಶುದ್ಧಿಗಾಗಿ ವಚನಗಳ ಅತ್ಯವಶ್ಯಕತೆ, ಆ) ನಿಸ್ವಾರ್ಥ ಭಕ್ತಿಗಾಗಿ ವಚನಗಳ ಉನ್ನತ ಮೌಲ್ಯ. ಈಗಾಗಲೇ ನೈತಿಕೀಕರಣಕ್ಕೆ ಹಾಗು ಜಾತ್ಯಾತೀತಕರಣಕ್ಕೆ (secularization) ಒಳಗಾದ ವಿಶ್ವದ ಇತರ ಸಾಹಿತ್ಯ ಮತ್ತು ಧರ್ಮಗಳ ಜೊತೆಗೆ ವಚನಗಳನ್ನು ಹೋಲಿಸಿ ತೌಲನಿಕವಾಗಿ ಅಧ್ಯಯನ ಮಾಡುವ ಮೊದಲ ಹೆಜ್ಜೆಯಾಗಿ ಈ ಪ್ರಯತ್ನಗಳು ಮುಖ್ಯವಾಗಿದ್ದವು. ಇತರ ಧರ್ಮ/ಸಾಹಿತ್ಯಗಳನ್ನು ಅಳೆದು, ತೂಕ ಮಾಡುವ ವೈಚಾರಿಕ ವಿಮರ್ಶೆಯಾಗಿ ವಚನಗಳನ್ನು ಉಪಯೋಗಿಸಿಕೊಳ್ಳುವ ಇಚ್ಛೆಯು ಸಹ ಇದರಲ್ಲಿ ಅಡಗಿತ್ತು.

ಭಾಗ

ವಚನಗಳ ನೈತಿಕ ಜಗತ್ತು : ಜಾತ್ಯಾತೀತ ವ್ಯಾಖ್ಯಾನಗಳಡಿಯಲ್ಲಿ

ಹದಿನೈದು ಅಥವಾ ಹದಿನಾರು ವರ್ಷಗಳ ನಂತರ ಅಂದರೆ ೧೯೨೦ರ ಸುಮಾರಿಗೆ ಹಳಕಟ್ಟಿಯವರು ಸರಿ ಸುಮಾರು ಒಂದು ಸಾವಿರ ತಾಳೆಗರಿ ಹಾಗೂ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಅವುಗಳಲ್ಲಿ ಬಸವ, ಅಲ್ಲಮ, ಸಿದ್ಧರಾಮ, ಅಕ್ಕಮಹಾದೇವಿ, ಇತ್ಯಾದಿಗಳ ವಚನಗಳನ್ನು ಸ್ಪಷ್ಟವಾಗಿ ಗುರುತಿಸಿದರು. ಮೊದ ಮೊದಲಿಗೆ ಅವುಗಳನ್ನು ಶುದ್ಧ ರೂಪದಲ್ಲಿ ಬರೆದು, ಅವಕ್ಕೆ ಸಮರೂಪ ಕೊಡುವುದು ಅಸಾಧ್ಯವಾದ ಕೆಲಸವೆನಿಸಿತು. ಏಕೆಂದರೆ ಅವುಗಳಲ್ಲಿ ವ್ಯಕ್ತವಾಗಿರುವ ವಿಚಾರಗಳು “ಹಿಂದೂ ಧರ್ಮದ ಬೇರೆ ಯಾವ ವಾಙ್ಞಯದಲ್ಲಿಯೂ ದೊರಕುವುದಿಲ್ಲ” (ಹಳಕಟ್ಟಿ, ೧೯೨೩: ೮) ಎನ್ನುವಷ್ಟು ಅಪರೂಪವಾಗಿದ್ದವು. ವಚನಗಳ ರೂಪ ಮತ್ತು ಸಾರ ಹಳಕಟ್ಟಿಯವರಿಗೆ ಹೊಸ ಸವಾಲನ್ನೊಡ್ಡಿದವು. ಅವುಗಳನ್ನು ಆಧುನಿಕ ಮಾದರಿಯಲ್ಲಿ ಪದ್ಯವನ್ನಾಗಿ ಪರಿವರ್ತಿಸುವುದೋ ಅಥವಾ ಮೂಲ ರೂಪದ ಗದ್ಯ ಮಾದರಿಯನ್ನು ಉಳಿಸಿಕೊಳ್ಳುವುದೋ, ಬೇಡವೊ ಎಂಬ ಜಿಜ್ಞಾಸೆ ಅವರನ್ನು ಕಾಡಿತು. ಆದಾಗ್ಯೂ ವಚನಗಳ ಸಾರ ಅವರ ಮನಸ್ಸನ್ನು ಆವರಿಸಿತ್ತು. ಇದರರ್ಥ ವಚನಗಳ ರೂಪ/ಶೈಲಿಯನ್ನು ನಿರ್ಲಕ್ಷಿಸಿದರು ಎಂದರ್ಥವಲ್ಲ. ಅಂತಿಮವಾಗಿ ವಚನಗಳ ಗದ್ಯ ರೂಪವನ್ನು ಉಳಿಸಿಕೊಂಡರು. ಆದರೆ ಅದರಲ್ಲಿನ ‘ಕಾವ್ಯಾತ್ಮಕ’ ಅಂಶಗಳ ಬಗ್ಗೆ ಗಮನ ಹರಿಸಿದೆ ಬಿಡಲಿಲ್ಲ. ಯಾರಾದರೂ ವಚನಗಳನ್ನು ಸಂಗೀತವಾಗಿ ಪರಿವರ್ತಿಸಿ ಹಾಡುವದಾದರೆ ಅನುಕೂಲವಾಗಲೆಂಬ ಮುಂದಾಲೋಚನೆಯಿಂದ ಈ ಕಾವ್ಯ ಗುಣವನ್ನು ಅವರು ವಿಶೇಷಿಕರಿಸಿದರು. ವಚನಗಳನ್ನು ಸಂಸ್ಕರಿಸುವಾಗ ಆಧುನಿಕ ಚಿನ್ಹೆಗಳನ್ನು ಯಥೇಚ್ಛವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪ್ರಶ್ನೆ, ಉದ್ಗಾರ ಮತ್ತು ವಿರಾಮ ಚಿನ್ಹೆಗಳು ಪ್ರಥಮ ಬಾರಿಗೆ ವಚನಗಳಲ್ಲಿ ಪ್ರಯೋಗಿಸಲಾಯಿತು. ವಚನಗಳ ಸಾಲುಗಳನ್ನು ಸಣ್ಣ, ಸಣ್ಣವಾಗಿ ಒಡೆದು ಬೇರ್ಪಡಿಸಿ, ಅರ್ಥವಾಗದ ಪದ ಮತ್ತು ಸಾಲುಗಳನ್ನು ತೆಗೆದು ಹಾಕಿದರು. ವಚನಗಳ ಗೇಯತೆ ಮತ್ತು ಮಾಧುರ್ಯವನ್ನು ಒತ್ತಿ ಹೇಳಿದರು. ಮರು-ಬರೆಯಲ್ಪಟ್ಟ ಈ ವಚನಗಳಲ್ಲಿ ಪುನುರುಕ್ತಿ, ರೂಪಕ, ಸಾದೃಶ್ಯ ಮತ್ತು ಪದೋಕ್ತಿಗಳ ಮಹತ್ವಕ್ಕೆ ಹೆಚ್ಚಿನ ಆಸಕ್ತಿ ನೀಡಿದರು. ಸೀತರಾಮ ಜಾಗಿರದಾರರು ಹಳಕಟ್ಟಿಯವರ ವಚನಗಳಿಗೂ ಮತ್ತು ಮರಿಶಂಕರ ದ್ಯಾವರಿಂದ ಸಂಕಲಿಸಲ್ಪಟ್ಟ ಬಸವಣ್ಣನವರ ವಚನಗಳಿಗೂ (೧೮೮೯) ಇರುವ ವ್ಯತ್ಯಾಸವನ್ನು ತೋರಿಸಿದ್ದಾರೆ (ಜಾಗಿರ್ ದಾರ್, ೧೯೮೨: ೧೪). ಹಳಕಟ್ಟಿಯವರ ವಚನಗಳಲ್ಲಿರುವ ಶಬ್ಧಾರ್ಥ ಹಾಗು ಭಾಷೆಯಲ್ಲಿನ ಪ್ರಾಯೋಗಿಕತೆಯು ಮರಿಶಂಕರ ದ್ಯಾವರ ಸಂಕಲನದಲ್ಲಿ ಕಾಣುವುದಿಲ್ಲ. ಈ ಸಂಕಲನದಲ್ಲಿ ವಚನಗಳು ಸಾಂಪ್ರದಾಯಿಕ ಗದ್ಯ ರೂಪದಲ್ಲಿ ಇದ್ದು, ಯಾವುದೇ ಆಧುನಿಕ ಚಿನ್ಹೆಗಳ ಉಪಯೋಗವಿರುವದಿಲ್ಲ (ಸಾಂಪ್ರದಾಯಕ ಚಿನ್ಹೆಗಳಾದ ಲಂಬ ಮತ್ತು ಸಮಾನಾಂತರ ಗೆರೆಗಳನ್ನು ಹೊರತು ಪಡಿಸಿ). ಹಳಕಟ್ಟಿಯವರ ವಚನ ಸಂಗ್ರಹದಲ್ಲಿ (೧೯೨೩) ಆಗಾಗ ಅರ್ಥ ವಿವರಣೆಗಳನ್ನು ಕಾಣಬಹುದಾಗಿದ್ದು, ಮರಿಶಂಕರ ದ್ಯಾವರ ಸಂಕಲನದಲ್ಲಿ ಅದು ಇರುವದಿಲ್ಲ. ಇದಕ್ಕೆಲ್ಲಾ ಮಿಗಿಲಾಗಿ ನಮ್ಮ ಗಮನವನ್ನು ಗಳಿಸುವ ಅಂಶ ಭಾಷೆಗೆ ಸಂಬಂಧಿಸಿದ್ದು. ಎರಡೂ ಸಂಕಲನಗಳಲ್ಲಿ ಕಾಣಬರುವ ಭಾಷೆ ಆಧುನಿಕ ಕನ್ನಡವಾಗಿದ್ದು. ವಚನಕಾರರು ಇದೇ ಭಾಷೆಯಲ್ಲಿ ವಚನಗಳನ್ನು ರಚಿಸಿದ್ದರೆ ಎಂಬ ಪ್ರಶ್ನೆ ನಮ್ಮನ್ನು ಕಾಡದೇ ಇರದು. ಇತ್ತೀಚಿನ ಭಾಷಾ ಶಾಸ್ತ್ರದ ಸಂಶೋಧನೆಗಳನ್ನು ಅನುಸರಿಸುವುದಾದರೆ, ೧೨ನೇ ಶತಮಾನದ ಕನ್ನಡವು ಆಧುನಿಕ ಕನ್ನಡಕ್ಕಿಂತ ಭಿನ್ನವಾಗಿತ್ತು ಎಂದು ತಿಳಿದು ಬರುತ್ತದೆ.[4]

ಹಳಕಟ್ಟಿಯವರಿಗೆ ಮತ್ತೊಂದು ತೊಡಕಿತ್ತು. ಈಗಾಗಲೇ ವಚನಗಳನ್ನು ಸಾಂಪ್ರದಾಯಿಕವಾಗಿ ೩೬ ಅಥವಾ ೧೦೧ ಷಟ್‌ಸ್ಥಲಗಳಿಗನುಗುಣವಾಗಿ ವಿಂಗಡಿಸಲಾಗಿತ್ತು. ಉದಾಹರಣೆ, ಬಸವಣ್ಣನ ವಚನಗಳ ಮತ್ತೊಂದು ಸಂಕಲನದಲ್ಲಿ (೧೮೮೯, ಮರಿಶಂಕರ ದ್ಯಾದರಿಂದ ಸಂಗ್ರಹಿಸಲ್ಪಟ್ಟಿದ್ದು) ೩೬ಕ್ಕಿಂತ ಹೆಚ್ಚು ಷಟ್‌ಸ್ಥಲಗಳನ್ನು ಕಾಣಬಹುದು. ಎನ್.ಆರ್. ಕರಿಬಸವಶಾಸ್ತ್ರಿಯವರಿಂದ ಸಂಕಲಿಸಲ್ಪಟ್ಟ ಷಟ್‌ಸ್ಥಲ ವಿದ್ಯಾ (ಎರಡನೇ ಸಂಪುಟ, ೧೯೨೩)ದಲ್ಲಿ[5] ೧೦೧ ಷಟ್‌ಸ್ಥಲಗಳ ಉಪ-ವಿಭಾಗಗಳನ್ನು ಕಾಣಬಹುದು. ಹಾಗಾಗಿ ತಮ್ಮ ಸಂಕಲನದಲ್ಲಿಯೂ ಸಹ ಅಷ್ಟೇ ಭಾಗಗಳನ್ನಾಗಿ ವಿಂಗಡಿಸಿಕೊಳ್ಳಬೇಕೆ ಅಥವಾ ಇಲ್ಲವೇ ಎಂಬ ದ್ವಂದ್ವತೆ ಹಳಕಟ್ಟಿಯವರನ್ನು ಕಾಡಿತು. ಷಟ್‌ಸ್ಥಲಗಳ ಉಪ-ವಿಭಾಗಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡದೆ ಇದ್ದರೂ, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಹಳಕಟ್ಟಿಯವರಿಗೆ ಇಷ್ಟವಿರಲಿಲ್ಲ. ಷಟ್‌ಸ್ಥಲಗಳು ಎಲ್ಲಾ ಉಪ-ವಿಭಾಗಗಳನ್ನು ಒಳಗೊಂಡಿರುವದರಿಂದ ವಚನಗಳ ವಿಂಗಡನೆಗೆ ಅವುಗಳನ್ನು ಉಳಿಸಿಕೊಳ್ಳುವುದು ಸೂಕ್ತವಲ್ಲ ಎಂದು ಅವರು ಭಾವಿಸಿದರು.[6] ಈ ಎಲ್ಲಾ ಧಾರ್ಮಿಕ ಮತ್ತು ತಾತ್ವಿಕ ಅನಿಶ್ಚಿತತೆ ಮತ್ತು ದ್ವಂದ್ವತೆಯನ್ನು ಮೀರುವಲ್ಲಿ ಅವರು ಕೊನೆಗೂ ಯಶಸ್ವಿಯಾದರು. ಪರಿಣಾಮವಾಗಿ, ೧೯೨೩ರಲ್ಲಿ ಪ್ರಕಟವಾದ ವಚನಶಾಸ್ತ್ರ ಸಾರ[7] ಅವರ ಪ್ರಥಮ ವಚನ ಸಂಕಲನವಾಯಿತು.

ಹಳಕಟ್ಟಿಯವರ ಈ ಸಂಕಲನದಲ್ಲಿ ಭಿನ್ನವಾದದ್ದು ಮತ್ತು ಹೊಸದು ಏನಿತ್ತು? ೧೮೮೩ರಲ್ಲೇ ವಚನಗಳ ಬಗ್ಗೆ ಒಲವನ್ನು ತೋರಿಸಿ, ಅವುಗಳನ್ನು ಪ್ರಕಟ ಮಾಡಿದನ್ನು ನೋಡಿದ್ದೇವೆ. ಆದರೆ ಅವನ್ನು ಕೂಲಂಕಷವಾಗಿ ಅಥವಾ ತೀವ್ರವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಕಾಣುವುದಿಲ್ಲ. ಹಳಕಟ್ಟಿಯವರ ಸಂಕಲನದ ವಿಶೇಷವೇನೆಂದರೆ ಧಾರ್ಮಿಕ/ತಾತ್ವಿಕ ವಚನಗಳಿಗೆ ನೈತಿಕ ಗುಣಗಳನ್ನು ಬೆಸೆದಿದ್ದು. ವಚನಗಳ ಮೊದಲ ಸಂಕಲನದಲ್ಲಿ ಅವುಗಳನ್ನು ಷಟ್‌ಸ್ಥಲಗಳನ್ನಾಗಿ ವಿಂಗಡಿಸಿ ಪ್ರತಿ ಷಟ್‌ಸ್ಥಲಗಳ ಅಡಿಯಲ್ಲಿ ನೈತಿಕ ಗುಣಗಳನ್ನು ನಮೂದಿಸಿದರು. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು:

೧.        ಭಕ್ತಿ ಸ್ಥಲ: ಶುದ್ಧ ಮನಸ್ಸುಳ್ಳವನಾಗಿರುವುದು, ದೇವರಲ್ಲಿ ಮೊರೆ ಹೋಗುವುದು, ಒಳ್ಳೆಯ ಗುಣವುಳ್ಳವನಾಗಿರುವುದು, ಸತ್ಯವನ್ನು ನುಡಿಯುವುದು, ಕೋಪಿಷ್ಟನಾಗಿರದೇ ಇರುವುದು, ಲಿಂಗವನ್ನು ಪೂಜಿಸುವುದು, ಇತ್ಯಾದಿ.

೨.        ಮಹೇಶ ಸ್ಥಲ : ಧೈರ್ಯವಂತನಾಗಿರುವುದು, ಏಕದೇವೋಪಾಸಕನಾಗಿರುವುದು, ಪ್ರಾಣಿಗಳನ್ನು ಹಿಂಸಿಸದೇ ಇರುವುದು, ಜ್ಯೋತಿಷ್ಯದಲ್ಲಿ ನಂಬಿಕೆ ಇಡದಿರುವುದು, ವೇದ, ಶಾಸ್ತ್ರ, ಪುರಾಣಗಳಲ್ಲಿ ನಂಬಿಕೆ ಇಡದಿರುವುದು, ತೀರ್ಥಯಾತ್ರೆಗಳನ್ನು ಮಾಡದಿರುವುದು.

೩.        ಪ್ರಸಾದ ಸ್ಥಲ : ದೇವರಲ್ಲಿ ಶರಣಾಗುವುದು, ನಿಸ್ವಾರ್ಥದಿಂದ ಕಾಯಕ ಮಾಡುವುದು, ದೇಹವನ್ನು ದಂಡಿಸದಿರುವುದು.

೪.        ಪ್ರಾಣಲಿಂಗಿ ಸ್ಥಲ : ಯೋಗ (ಹಠ ಯೋಗವನ್ನು ಹೊರತು ಪಡಿಸಿ) ಮತ್ತು ಶಕ್ತಿಯ ಬಗ್ಗೆ ಉನ್ನತ ವಿಚಾರಗಳನ್ನು ಹೊಂದುವುದು.

೫.        ಶರಣ ಸ್ಥಲ : ಶರಣಾಗುವಿಕೆ, ಲಿಂಗ-ಜ್ಞಾನ, ಅದ್ವೈತ ಅಥವಾ ದ್ವೈತಗಳಾಚೆ, ದುಃಖಗಳಿಂದಾಚೆ ಇರುವುದು.

೬.        ಐಕ್ಯ ಸ್ಥಲ : ಐಕ್ಯದ ಅಂತಿಮ ಹಂತ

ಈ ರೀತಿಯ ನೈತಿಕ ಮತ್ತು ಭೋದನಾತ್ಮಕ ಗುಣಗಳನ್ನು ವಚನಗಳಿಗೆ ಬೆಸೆದುದರ ಉದ್ದೇಶ ವಚನಗಳ ವಿಶ್ವಾತ್ಮಕ ಮಹತ್ತನ್ನು ತೋರಿಸುವದಕ್ಕಾಗಿ, “ವಚನಕಾರರ ಈ ನೀತಿಯ ವಚನಗಳು ಎಷ್ಟು ಮನೋಹರವಾಗಿರುತ್ತವೆಂಬುದನ್ನು ವಾಚಕರು ತಾವೇ ತಿಳಿದು ನೋಡಬೇಕು. ಅವುಗಳು ಪಾಶ್ಚಿಮಾತ್ಯ ಮತ್ತು ಪೌರುತ್ಯ ವಿದ್ವಾಂಸರು ಬರೆದ ಯಾವ ನೀತಿಯ ಗ್ರಂಥವನ್ನಾದರೂ ಸರಿಗಟ್ಟುವಂತೆ ಇವೆ (ಹಳಕಟ್ಟಿ, ೧೯೨೩: ೧೫). “ವಚನಕಾರರ ವಿಶ್ವ ಬಂಧುತ್ವದ ವಿಚಾರಗಳು ಬಹು ಶ್ರೇಷ್ಟವಾದವುಗಳು” (ಅದೇ) ಎಂಬುದರ ಬಗ್ಗೆ ಯಾರೇ ಆದರೂ ಹೆಮ್ಮೆ ಪಡುವಂತ ವಿಷಯ ಎಂದು ಅವರು ನಂಬಿದ್ದರು. ಈ ಮೊದಲ ಸಂಕಲನದ ನಂತರ ಮತ್ತೆರಡು ಸಂಕಲನಗಳು ಕ್ರಮವಾಗಿ ೧೯೩೧ ಮತ್ತು ೧೯೩೯ರಲ್ಲಿ ಪ್ರಕಟಗೊಂಡವು. ೧೯೩೧ರ ಸಂಕಲನವು ಸಾಮಾಜಿಕ ಮತ್ತು ಧಾರ್ಮಿಕ (ಸಾಮಾಜಿಕ-ಧಾರ್ಮಿಕ ನೈತಿಕತೆಯ ಬಗ್ಗೆ ಹೆಚ್ಚಿನ ಒಲವಿದೆ) ಅಂಶಗಳ ಬಗ್ಗೆ ಇದ್ದು, ೧೯೩೯ರ ಪ್ರಕಟನೆಯು ವೀರಶೈವ ಸಿದ್ಧಾಂತದ ಬಗ್ಗೆ ಹೆಚ್ಚಿನ ಗಮನವನ್ನು ಹೊಂದಿದೆ. ಇದರಲ್ಲಿ ಮತ್ತೊಂದು ವಿಶೇಷವೇನೆಂದರೆ ವೀರಶೈವಾಚಾರಗಳು ಮತ್ತು ಏಕೋತ್ತರ ಷಟ್‌ಸ್ಥಲಗಳ ಬಗ್ಗೆ ಹೆಚ್ಚಿನ ಮಹತ್ತನ್ನು ನೀಡಲಾಗಿದೆ. ಇದರಲ್ಲಿ ನೈತಿಕ ಮೌಲ್ಯ ಮತ್ತು ಸೂಕ್ತವಾದ ಆಚಾರಗಳನ್ನು ಧಾರ್ಮಿಕ ಅಂಧತೆ/ಡಂಬಾಚಾರ ಇಲ್ಲದೆ ಹೇಗೆ ಅಳವಡಿಸಿಕೊಳ್ಳಬೇಕೆಂದು ಈ ವಚನಗಳ ಮೂಲಕ ಹೆಚ್ಚು ಗಮನ ಹರಿಸುತ್ತೇನೆ. ಉಳಿದೆರಡು ಭಾಗಗಳನ್ನು ಅವಶ್ಯಕತೆ ಇದ್ದಾಗ ಮಾತ್ರ ಚರ್ಚಿಸುತ್ತೇನೆ.

ಹಳಕಟ್ಟಿಯವರ ವಿಚಾರ ಧಾರೆಯು ಒಂದೇ ಸಲ ಉದ್ಭವವಾದದಲ್ಲ, ಅದು ಕಾಲಕ್ರಮೇಣ ವಿಕಸನಗೊಂಡಿರುವಂತದ್ದು. ಅವರ ಅನೇಕ ಸಂಕಲನಗಳು ಈ ವಿಕಾಸದ ಪ್ರತಿರೂಪಗಳು, ಮೊದಲ ಸಂಕಲನದ ಶೀರ್ಷಿಕೆಯೆ ಸೂಚಿಸುವಂತೆ ವಚನಗಳಿಗೆ ಶಾಸ್ತ್ರೀಯ ಸ್ಥಾನ-ಮಾನಗಳನ್ನು ನೀಡಲಾಯಿತು. ಶಾಸ್ತ್ರವು ಗೊತ್ತು ಮಾಡಲ್ಪಟ್ಟ, ಹಿಂದಿನಿಂದಲೂ ನಡೆದುಕೊಂಡು ಬಂದ ನಿಯಮ, ಕಟ್ಟು ಪಾಡುಗಳಿಗೆ ಬದ್ಧವಾಗಿರುವುದರಿಂದ, ವಚನಗಳಿಗೆ ಇದರಿಂದ ಪುರಾತನ ಹಾಗೂ ವಿಶ್ವಾತ್ಮಕ ಪಟ್ಟವು ಸಿಕ್ಕಂತಾಗುತ್ತದೆ. ಈ ಶಾಸ್ತ್ರೀಯ ಸ್ಥಾನ-ಮಾನವು ಮತ್ತೊಂದು ಉದ್ದೇಶವನ್ನು ಹೊಂದಿತ್ತು. ವಚನಗಳು ಹಿಂದೆ ಕನ್ನಡಿಗರ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದು, ಅದನ್ನೀಗ ಮರುಕಳಿಸುವ ಜರೂರತ್ತಿದೆ ಎಂಬ ನಂಬಿಕೆ. ಮೂಲ ಯೋಜನೆಯ ಪ್ರಕಾರ ವಚನಗಳನ್ನು ಷಟ್‌ಸ್ಥಲಗಳ ಚೌಕಟ್ಟಿನಲ್ಲಿ ಸಂಕಲಿಸಿ, ಮೊಟ್ಟ ಮೊದಲ ಬಾರಿಗೆ ಅನೇಕ ವಚನಕಾರರನ್ನು ಸಾರ್ವಜನಿಕ ಗಮನಕ್ಕೆ ತರಲಾಯಿತು. ೧೯೨೩ರ ಸಂಕಲನವು ವಚನ ಅಧ್ಯಯನದ ಮೊದಲ ಹೆಜ್ಜೆಗಳಾದುದರಿಂದ ಮತ್ತು ಅದು ನೂತನವಾದ ಪ್ರಯತ್ನವಾದ್ದರಿಂದ ಹಳಕಟ್ಟಿಯವರು ತಮ್ಮ ಅಧ್ಯಯನದ ಬಗ್ಗೆ ವಿಸ್ತೃತವಾದ ಮುನ್ನುಡಿಯನ್ನು ಬರೆದು, ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಅದರಲ್ಲಿ ಅವರು ಅ) ಆಧುನಿಕ ಜಗತ್ತಿಗೆ ವಚನಗಳ ಪ್ರಸ್ತುತತೆ, ಆ) ಸಾಹಿತ್ಯಕ ಮತ್ತು ಧಾರ್ಮಿಕ ಸಾಫಲ್ಯತೆ ಇ) ವಚನ ಅಧ್ಯಯನಕ್ಕೆ ಎದುರಿಸಿದ ಪ್ರತಿಕೂಲ ವಾತಾವರಣ ಮತ್ತು ಸವಾಲುಗಳು ಈ) ವಚನಗಳನ್ನು ನೂತನವಾಗಿ ವಿಂಗಡಿಸಿ, ಜೋಡಿಸುವ ಅವಶ್ಯಕತೆ, ಉ) ಜಾತಿ ವೈಷಮ್ಯ, ಒಳ ಜಗಳ ಹಾಗು ಡಂಬಾಚಾರದಿಂದ ಕೂಡಿದ ಹಿಂದೂ ಧರ್ಮಕ್ಕೆ ಪ್ರಗತಿಪರ ಮತ್ತು ಆಂತರಿಕ ಚಿಕಿತ್ಸೆಗಳಾಗಿ ವಚನಗಳು ನೀಡಿದ ಕಾಣಿಕೆ, ಇತ್ಯಾದಿಗಳ ಬಗ್ಗೆ ಚರ್ಚಿಸುತ್ತಾರೆ. ಅನೇಕ ವಚನಕಾರರನ್ನು ಗುರುತಿಸಿದರೂ, ಕೆಲ ವಚನಕಾರರ ಗುರುತನ್ನು ಪತ್ತೆ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಉದಾಹರಣೆಗೆ, ಮೊದಲ ಸಂಕಲನದಲ್ಲಿ ೨೧೩ ವಚನಕಾರರ ಗುರುತನ್ನು ಕಂಡು ಹಿಡಿದರೆ, ಇನ್ನುಳಿದ ೩೬ ವಚನಕಾರರ ಗುರುತನ್ನು ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ.

ಷಟ್‌ಸ್ಥಲಗಳ ಧಾರ್ಮಿಕ ಮೂಲವನ್ನು ಒಳಗೂಡಿಸಿ ಕೊಂಡಿರುವ ವಚನಗಳಿಗೆ ನೈತಿಕ ಮೌಲ್ಯಗಳನ್ನು ಬೆಸೆದಿದ್ದು ಹೇಗೆ? ವಚನಗಳ ನೈತಿಕೀಕರಣ ಹಳಕಟ್ಟಿಯವರ ಏಕ ಮಾತ್ರ ಉದ್ದೇಶವಾಗಿತ್ತೆ? ಅವರಿಗಿಂತ ಮೊದಲು ನೈತಿಕತೆ ಹಾಗು ಧರ್ಮವನ್ನು ಬೆಸೆಯುವ ಅನುಕರಣೇಯ ಪರಂಪರೆ ಮತ್ತು ಅದನ್ನು ಹಳಕಟ್ಟಿಯವರು ಕುರುಡುತನದಿಂದ ಅನುಕರಿಸಿದರೆ? ಬಹುಶಃ ಈ ಪ್ರಶ್ನೆಗಳಿಗೆ ಉತ್ತರವನ್ನು ಆಗಿನ ಭಾರತೀಯ ತತ್ವ ಮತ್ತು ಧರ್ಮದ ಜೊತೆಗೆ ಬೌದ್ಧಿಕವಾಗಿ ಹಳಕಟ್ಟಿಯವರು ಹೇಗೆ ತೊಡಗಿಸಿಕೊಂಡರು ಎಂಬ ಅಂಶದಲ್ಲಿ ಹುಡುಕಬಹುದು. ಮೊದಲಿಗೆ, ಅವರು ತಮ್ಮ ಬೌದ್ಧಿಕ ಮತ್ತು ಅನುಭವದ ಹಿನ್ನಲೆಯನ್ನು ವಚನಗಳನ್ನು ಅಧ್ಯಯನ ಮಾಡಲು, ವಿಂಗಡಿಸಲು ಹಾಗೂ ವ್ಯವಸ್ಥಿತವಾಗಿ ಜೋಡಿಸುವ ಸಲುವಾಗಿ ಬೇಕಾಗುವ ಸೂಕ್ತವಾದ ಮಾರ್ಗ/ಪದ್ಧತಿಗಾಗಿ ವಿನಿಯೋಗಿಸಿದರು. ಸಾಂಪ್ರದಾಯಿಕ ಲಿಂಗಾಯತರ ಧಾರ್ಮಿಕ ಮತ್ತು ಗ್ರಾಂಥಿಕ ಪರಂಪರೆಯೊಳಗೆ ಸಮಂಜಸವಾದ ಪದ್ಧತಿ ಅಥವಾ ಮಾದರಿ ಇಲ್ಲದಿರುವುದನ್ನು ಗ್ರಹಿಸಿ ಭಾರತೀಯ ಧಾರ್ಮಿಕ ಪರಂಪರೆ ಕಡೆಗೆ ತಮ್ಮ ಗಮನಹರಿಸಿದರು.[8] ಆದರೆ ಇಲ್ಲಿಯೂ ಸಹ ಅವರಿಗೆ ನಿರಾಶೆ ಕಾದಿತ್ತು. ವೇದ, ಉಪನಿಷತ್, ವೈಷ್ಣವ ದಾಸ ಪರಂಪರೆ, ಜೈನ-ಲಿಂಗಾಯತ-ಬ್ರಾಹ್ಮಣರ ಸಂಸ್ಕೃತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅದರಲ್ಲೇನ್ನಾದರೂ ಅನುಕರಣೀಯ ಮಾದರಿ ಸಿಗಬಹುದೇ ಎಂದು ಗಮನಿಸಿದರು. ಆದರೆ ಅದ್ಯಾವುದೂ ಅವರ ಮನಸ್ಸಿಗೆ ಒಗ್ಗದೆ, ಅವುಗಳಲ್ಲಿ ಯಾವುದೇ ಮಾದರಿಯನ್ನು ಹುಡುಕುವಲ್ಲಿ ವಿಫಲರಾದರು. ಕೊನೆಗೆ ಆಧುನಿಕ ಕಾಲದ ಧಾರ್ಮಿಕ ಚಳುವಳಿಗಳಾದ ಆರ್ಯ ಸಮಾಜ, ಬ್ರಹ್ಮೋಸಮಾಜ, ಪ್ರಾರ್ಥನಾ ಸಮಾಜ ಮತ್ತು ವಿವೇಕಾನಂದರ ವಿಚಾರಗಳಲ್ಲಿ ತಮಗೆ ಬೇಕಾದ ಮಾರ್ಗೋಪಾಯ ಸಿಗಬಹುದೆಂದು ನಿರೀಕ್ಷಿಸಿ, ಅವುಗಳನ್ನು ಅವಲೋಕಿಸಿದರು.

ಈ ಆಧುನಿಕ ಧಾರ್ಮಿಕ ಚಳುವಳಿಗಳನ್ನು ಅರ್ಥಮಾಡಿಕೊಳ್ಳಲು ಒಂದು ಚಾರಿತ್ರಿಕ ಕಾರಣವೂ ಇತ್ತು. ಭಾರತದಾದ್ಯಂತ ನಡೆಯುತ್ತಿದ್ದ ಸಮಾಜ ಸುಧಾರಣೆಯ ಮೇಲೆ ಈ ಚಳುವಳಿಗಳು ಅಪಾರವಾದ ಪ್ರಭಾವ ಬೀರಿದವು. ಈ ಪ್ರಭಾವವು ಧಾರ್ಮಿಕ ಸುಧಾರಣೆಯ (ವಿಶೇಷವಾಗಿ ಹಿಂದು ಧರ್ಮ) ಮೇಲೆ ನಿಚ್ಛಳವಾಗಿತ್ತು. ಅನೇಕ ಜಾತಿ/ಸಮುದಾಯಗಳು ಈ ಚಳುವಳಿಗಳಿಂದ ಪ್ರಭಾವಿತವಾಗಿ ತಮ್ಮ ಅಸ್ತಿತ್ವವನ್ನು (ಸಮಾಜೋ-ಧಾರ್ಮಿಕ) ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು.[9]

ಈ ಚಳುವಳಿಗಳ ಸಿದ್ಧಾಂತಗಳಿಗೆ ವಚನಶಾಸ್ತ್ರವನ್ನು ಹೋಲಿಸಿ ಅಧ್ಯಯನ ಮಾಡುವುದರಿಂದ ವಚನಗಳು ಈ ಚಳುವಳಿಗಳ ಸಿದ್ಧಾಂತಕ್ಕೆ ಸಂವಾದಿಯಾಗಿ ಉನ್ನತವಾದುದೆಂದು ಸಮರ್ಥಿಕೊಳ್ಳಬಹುದೆಂದು ಹಳಕಟ್ಟಿಯವರು ನಂಬಿದ್ದರು. ಆದಾಗ್ಯೂ, ಸ್ವಲ್ಪ ಮಟ್ಟಿಗೆ ವಿವೇಕಾನಂದರ ವಿಚಾರಧಾರೆಯನ್ನು ಹೊರತು ಪಡಿಸಿದರೆ ಈ ಆಧುನಿಕ ಚಳುವಳಿಗಳು ಹಳಕಟ್ಟಿಯವರನ್ನು ಆಕರ್ಷಿಸಲಿಲ್ಲ. ಇದರ ಬಗ್ಗೆ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಬರೆದಿದ್ದಾರೆ,

ನಮ್ಮ ದೇಶದಲ್ಲಿ ವಿವೇಕಾನಂದರು ವೇದಾಂತ ಮಾರ್ಗವನ್ನು ತಮ್ಮದೇ ಆದ ರೀತಿಯಲ್ಲಿ ವಿವೇಚಿಸುತ್ತಾ ಅದರ ಮಹತ್ವವನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. ಅವರ ಅನೇಕ ಗ್ರಂಥಗಳನ್ನು ನಾನು ಪರಿಶೀಲಿಸಿದ್ದೇನೆ. ಅವುಗಳಲ್ಲಿ ಪ್ರಕಟವಾದ ವಿಚಾರಗಳಿಗೂ ಶಿವ ಶರಣದ ತತ್ವಗಳಿಗೂ ಬಹಳ ಸಾಮ್ಯತೆ ಇದ್ದುದು ನನಗೆ ಕಂಡು ಬಂದಿತು. ಆದ್ದರಿಂದ ರಾಮಕೃಷ್ಣ ಮಿಶನ್ ರವರ ವಾಙ್ಞಯದಿಂದ ನನ್ನ ಸಂಶೋಧನ ಕಾರ್ಯಗಳಲ್ಲಿ ಬಹುಮಟ್ಟಿಗೆ ಸಹಾಯಕವಾಗಿರುತ್ತದೆ. ಆದರೆ ಈ ಉಭಯ ಮಾರ್ಗಗಳ ರೀತಿಗಳು ಭಿನ್ನ, ಭಿನ್ನವಾಗಿರುತ್ತವೆ. (ಹಳಕಟ್ಟಿ, ೧೯೫೧ (೧೯೮೩): ೩೦).

ವಿವೇಕಾನಂದರ ವಿಚಾರಗಳನ್ನು ಸ್ವಲ್ಪ ಮಟ್ಟಿಗೆ ಹೊರತುಪಡಿಸಿ, ಇತರ ಚಳುವಳಿಗಳ ವಿಚಾರಗಳು ಉಪಯೋಗವಿಲ್ಲದಿರುವದನ್ನು ಅರಿತ ಹಳಕಟ್ಟಿಯವರು,

ಈ ಪರಿಸ್ಥಿತಿಯಲ್ಲಿ ನಾನು ಹೊರಗಿನ ವಾಙ್ಞಯಗಳನ್ನು ಅವಲಂಬಿಸದೆ ಸ್ವತಂತ್ರ ವಿಚಾರಗಳುಳ್ಳ ಶಿವಶರಣರು ಉಂಟು ಮಾಡಿದ ವಾಙ್ಞಯವನ್ನೇ ಅವಲಂಬಿಸಿ ಅವರದೇ ಆದ ಪದ್ಧತಿಯನ್ನು ಕಂಡು ಹಿಡಿದು ಅದಕ್ಕೆಯೆ ಅಂಟಿಕೊಂಡು ಅವರ ತತ್ವಗಳನ್ನು ಜನತೆಯ ಮುಂದೆ ಇಡುವುದೇ ಯುಕ್ತಿ ಮಾರ್ಗವೆಂದು ನನಗೆ ತೋರಹತ್ತಿತು (ಅದೇ)

ಹಾಗಾದರೆ ಹಳಕಟ್ಟಿಯವರಿಂದ ರೂಪಿಸಲ್ಪಟ್ಟ ಈ ಹೊಸ ಪದ್ಧತಿ ಯಾವುದು? ಅವರ ಪದ್ಧತಿ ವಿವೇಕಾನಂದರ ವ್ಯಾವಹಾರಿಕ ವೇದಾಂತ ಸಿದ್ಧಾಂತ ಹಾಗು ರಾಮಕೃಷ್ಣ ಮಿಶನ್‌ನ ಆಧ್ಯಾತ್ಮಿಕ ಭಕ್ತಿಗೆ ಹೋಲಿಕೆಗಳಿದ್ದರೂ, ಸೂಕ್ಷ್ಮವಾಗಿ ಗಮನಿಸಿದಾಗ, ಹಳಕಟ್ಟಿಯವರ ವಚನ ವಾಙ್ಞಯವು ಅನೇಕ ಭಿನ್ನತೆಗಳನ್ನು ಹೊಂದಿತ್ತು. ಆಗಿನ ಕಾಲದಲ್ಲಿ ಪ್ರಸ್ತುತವಿದ್ದ ಜಾತ್ಯಾತೀತ ವ್ಯಾಖ್ಯಾನ ಪರಂಪರೆ (ವೇದಾಂತ ಹಾಗು ಮಧ್ಯಕಾಲೀನ ಭಕ್ತಿಗೆ ಸಂಬಂಧಿಸಿದಂತೆ)ಯು ಹಳಕಟ್ಟಿಯವರನ್ನು ಬಹಳಷ್ಟು ಪ್ರಭಾವಿಸಿದ ಹಾಗೆ ಕಾಣುತ್ತದೆ. ಇದರ ಜೊತೆಗೆ ವಿವೇಕಾನಂದ ಹಾಗೂ ರಾಮಕೃಷ್ಣ ಮಿಶನ್ನರ ಜನಪ್ರಿಯತೆ ಅವರನ್ನ ಪ್ರಚೋದಿಸಿದ ಸಾಧ್ಯತೆಯು ಇದ್ದಿರಬಹುದು, ಭಾರತದ ಆಧುನಿಕ ಧಾರ್ಮಿಕ ಚಳುವಳಿಗಳ ಮೇಲೆ ಗಮನಾರ್ಹ ವಿಚಾರಗಳನ್ನು ಮಂಡಿಸಿರುವ ಪಾಶ್ಚಾತ್ಯ ವಿದ್ವಾಂಸ ಫರ್ಕುಹರರ (೧೯೧೫) ಪ್ರಭಾವವೂ ಇನ್ನೊಂದು ಅಂಶವಾಗಿದೆ. ಏಕೆಂದರೆ ವಿವೇಕಾನಂದರ ವೇದಾಂತ ತತ್ವ ಜ್ಞಾನವನ್ನ ತೀಕ್ಷ್ಣವಾಗಿ ಟೀಕಿಸಿದ ಫರ್ಕುಹರರ ವಿಚಾರಗಳು ಹಳಕಟ್ಟಿಯವರನ್ನು ಪ್ರಭಾವಿಸಿರುವ ಸಾಧ್ಯತೆಗಳಿವೆ.[10] ಇಷ್ಟಾದಾಗ್ಯೂ, ಹಳಕಟ್ಟಿಯವರು ಎಲ್ಲಾ ವಿಚಾರಧಾರೆಗಳನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸಿ ವಚನಗಳಲ್ಲಿ ಅಡಗಿರುವ ನವೀನ ವಿಚಾರಗಳು ಮತ್ತು ಮೌಲ್ಯಗಳನ್ನು ಬೆಳಕಿಗೆ ತರಲು ನಿಶ್ಚಯಿಸಿದರು.

[1] ಹಳಕಟ್ಟಿಯವರು ಶಿಕ್ಷಣ ತಜ್ಞರು ಮತ್ತು ಸಮಾಜ ಸುಧಾರಕರು, ಲಿಂಗಾಯತರ ಶಿಕ್ಷಣ ಅಭಿವೃದ್ಧಿಯಾಗಿ ೧೯೦೦ರಲ್ಲಿ ಅವರು ಹೈಸ್ಕೂಲ್ ನ್ನು ಸ್ಥಾಪಿಸಿದರು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ೧೯೧೨ರಲ್ಲಿ ಸಹಕಾರಿ ಸೊಸೈಟಿಯನ್ನು ಶುರು ಮಾಡಿ, ಸಣ್ಣ ರೈತರ, ಕುಂಬಾರರ, ನೆಯ್ಗೆಯವರ ಸಮಸ್ಯೆಗಳಿಗೆ ಸ್ಪಂದಿಸಿದರು. ೧೯೨೦ರಲ್ಲಿ ಅವರು ಮುಂಬೈ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರಿಂದ ಬಿಜಾಪುರ ಪ್ರಾಂತ್ಯದ ರಾಜಕೀಯಕ್ಕೆ ಅವರು ಹೊಸ ಆಯಾಮ ತಂದುಕೊಟ್ಟರು. ತಮ್ಮ ರಾಜಕೀಯ ಜೀವನ ಸ್ವಲ್ಪ ಸಮಯವಿದ್ದರೂ, ಅವರಿಗೆ ಅನೇಕ ಸಹದ್ಯೋಗಿಗಳ, ಸ್ನೇಹಿತರ ಮತ್ತು ರಾಷ್ಟ್ರೀಯ ನಾಯಕರ ಒಡನಾಟವುಂಟಾಯಿತು.

[2] ಈ ವಿವರಗಳನ್ನು ಎಮ್.ಎಮ್. ಕಲಬುರ್ಗಿಯವರ “ವಚನ ಸಾಹಿತ್ಯ ಪ್ರಕಟನೆಯ ಇತಿಹಾಸ” (೧೯೯೦) ದಿಂದ ಆರಿಸಲಾಗಿದೆ.

[3] ೨೦ನೇ ಶತಮಾನದ ಆದಿಯಲ್ಲಿ ಮಧ್ಯಕಾಲೀನ ಭಕ್ತಿ ಸಾಹಿತ್ಯವನ್ನು ನೈತಿಕೀಕರಣಗೊಳಿಸುವ ಕಾರ್ಯವು ಭಾರತದ ಇತರೆಡೆಗಳಲ್ಲಿಯೂ ನಡೆಯಿತು. ಮಿಲಿಂದ್ ವಕನ್ ಕರ್ ಎಂಬುವವರು ತಮ್ಮ ಲೇಖನದಲ್ಲಿ (೨೦೦೫) ಮಧ್ಯಕಾಲೀನ ಭಕ್ತಿ ಸಾಹಿತ್ಯದ “ರಾಷ್ಟ್ರೀಯತೆಯ ನೈತಿಕತೆ”ಯನ್ನು ಚರ್ಚಿಸುತ್ತಾರೆ.

[4] ಸಮಾಜೊ-ಭಾಷಾತಜ್ಞರು ತಮ್ಮ ವಸ್ತುನಿಷ್ಠ ಮತ್ತು ನಿಖರ ಮಾಹಿತಿಗಳಿಂದ ವಚನಗಳ ಭಾಷೆ ಬಗ್ಗೆ ಮತ್ತೊಮ್ಮೆ ಗಮನ ಹರಿಸಬೇಕಾಗಿದೆ.

[5] ಈ ಕೃತಿಯು ವಚನಗಳನ್ನು ಸಂಪೂರ್ಣವಾಗಿ ಧಾರ್ಮಿಕ ದೃಷ್ಟಿಕೋನದಿಂದ ಅರ್ಥೈಸುತ್ತದೆ. ಇದು ಹಳಕಟ್ಟಿಯವರ ನೈತಿಕ ವ್ಯಾಖ್ಯಾನಗಳಿಗೆ ವಿರುದ್ಧವಾಗಿತ್ತು.

[6] ಈ ಅಂಶವು ಸಹ ಹಳಕಟ್ಟಿಯವರ ವೈರುಧ್ಯವನ್ನು ತಿಳಿಸುತ್ತದೆ. ವಚನಗಳ ಮೊದಲ ಸಂಕಲನದಲ್ಲಿ ಷಟ್ ಸ್ಥಲಗಳ ಉಪ-ವಿಭಾಗಗಳನ್ನು ಪಕ್ಕಕ್ಕಿಟ್ಟರೂ, ತಮ್ಮ ಮೂರನೇ ಭಾಗದಲ್ಲಿ ೧೦೧ ಷಟ್‌ಸ್ಥಲಗಳ ಪ್ರಾಶಸ್ತ್ಯ ನೀಡಿ ಅವುಗಳನ್ನು ಸಹ ತಮ್ಮ ನೈತಿಕ ಚೌಕಟ್ಟಿನಲ್ಲಿ ತರಲು ಪ್ರಯತ್ನಿಸುತ್ತಾರೆ.

[7] ವಚನಶಾಸ್ತ್ರ ಸಾರದ ಮೊದಲ ಸಂಕಲನದಲ್ಲಿ ವಚನಗಳನ್ನು ಸಂಗ್ರಹಿಸಲು ಸಹಕರಿಸಿದ ಅನೇಕರನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತಾರೆ. ಈ ಸಂಕಲನದ ವಿಶೇಷವೇನೆಂದರೆ ಇದರಲ್ಲಿ ಬಸವಣ್ಣನಿಗೆ ಪ್ರಾಶಸ್ತ್ಯ ನೀಡಲಾಗಿದೆ. ಬಸವಣ್ಣನನ್ನು ಸ್ತುತಿಸುವ ಹತ್ತೊಂಬತ್ತು ವಚನಗಳಿಗೆ ವಿಶೇಷ ಸ್ಥಾನಮಾನವನ್ನು ಕೊಡಲಾಗಿದೆ. ಸಂಗ್ರಹಿಸಲಾದ ಎಲ್ಲಾ ವಚನಗಳು ತಾಳೆಗರಿ ಅಥವಾ ಹಸ್ತಪ್ರತಿ ರೂಪದಲ್ಲಿದವೊ ಅಥವಾ ಬೇರೆ ರೂಪದಲ್ಲಿದ್ದವೊ ಎಂಬುದು ಈಗಲೂ ಬಗೆಹರಿಸಲಾಗದ ವಿಷಯವಾಗಿದೆ. ಪಿ.ಆರ್. ಗಿರಿರಾಜು ಎಂಬುವವರು ಇದರ ಬಗ್ಗೆ ನಮ್ಮ ಗಮನ ಸೆಳೆದಿದ್ದಾರೆ. ಅವರು ವಾದಿಸುವ  ಹಾಗೆ ಸಿದ್ಧರಾಮನ ವಚನಗಳ ನೈಜತೆಯನ್ನು ಪರೀಕ್ಷಿಸುವಲ್ಲಿ ಹಳಕಟ್ಟಿಯವರು ಎಡವಿದ್ದಾರೆಂದು ಆಪಾದಿಸುತ್ತಾರೆ. ಸಿದ್ಧರಾಮನ ಎಲ್ಲಾ ವಚನಗಳು ಹಸ್ತಪ್ರತಿ ರೂಪದಲ್ಲಿದ್ದರೂ, ಅವುಗಳ ಮೂಲ ಲೇಖಕರಾರೆಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲವೆಂದು ಅವರದ ಟೀಕೆ (೧೯೮೮).

[8] ಇದಕ್ಕಾಗಿ ಹಳಕಟ್ಟಿಯವರು ಅನೇಕ ಲಿಂಗಾಯತ ಕಾವ್ಯಗಳನ್ನು ಪರೀಕ್ಷಿಸುತ್ತಾರೆ. ಆದರೆ ಯಾವುದೂ ಅವರ ಗಮನ ಸೆಳೆಯುವುದಿಲ್ಲ. ಉದಾಹರಣೆಗೆ, ಶೂನ್ಯ ಸಂಪಾದನೆಯನ್ನು ಅವರು ಗಮನಿಸಿದರೂ, ಅದು ಶಿವ ಶರಣರ ವರ್ತನೆ ಮತ್ತು ನಡುವಳಿಕೆಗಳನ್ನು ಒಳಗೊಂಡಿದೆಯೇ ಹೊರತು, ಷಟ್ ಸ್ಥಲಗಳ ಬಗ್ಗೆ ಏನನ್ನು ಹೇಳುವುದಿಲ್ಲವೆಂದು ಭಾವಿಸಿದರು. ಗಣ ಭಾಷ್ಯಾ ರತ್ನಮಾಲೆ ಮತ್ತು ಲಿಂಗಲೀಲಾ ವಿಲಾಸಗಳನ್ನು ಅವರು ಅಭ್ಯಸಿಸಿದರು. ಆದರೆ ಅವು ಕೂಡ ಅವರಿಗೆ ಅಸಮಂಜಸವಾಗಿ ಗೋಚರಿಸಿದವು.

[9] ನೋನಿಕ ದತ್ತರವರು ತಮ್ಮ ಲೇಖನದಲ್ಲಿ (೧೯೯೭) ಆರ್ಯ ಸಮಾಜದ ಪ್ರಭಾವವನ್ನು ಚರ್ಚಿಸಿದ್ದಾರೆ. ಉತ್ತರ ಭಾರತದಲ್ಲಿ ಝೂಟ್ ಸಮುದಾಯದ ಅಸ್ಮಿತೆಯನ್ನು ಆರ್ಯ ಸಮಾಜದ ತತ್ವಗಳಾಧಾರವಾಗಿ ರೂಪಿಸಿರುವುದಲ್ಲದೆ, ಸಾಹಿತ್ಯ ಹಾಗು ಜಾನಪದ ಬೆಳವಣಿಗೆಯಲ್ಲೂ ಸಹ ಅದರ ಪ್ರಭಾವವಿತ್ತು ಎಂದು ನೋನಿಕರವರು ತೋರಿಸಿ ಕೊಟ್ಟಿದ್ದಾರೆ.

[10]ಆರ್ಯ ಸಮಾಜವು ವಚನಗಳಷ್ಟು ಉದಾತ್ತ ವಿಚಾರಗಳನ್ನು ಹೊಂದಿಲ್ಲದೆಂದು ಹಳಕಟ್ಟಿಯವರಿಗೆ ಮನವರಿಕೆಯಾಯಿತು. ಅದು ಹಿಂಸಾಪರವಾದುದೆಂದು, ಅದರಿಂದ ಸಮಾಜಕ್ಕೆ ಒಳಿತಾಗುವುದಿಲ್ಲವೆಂದು ಭಾವಿಸಿದರು. ಬ್ರಹ್ಮೊ ಮತ್ತು ಪ್ರಾರ್ಥನಾ ಸಮಾಜಗಳು ಕ್ರಿಶ್ಚಿಯನ್ ತತ್ವಗಳನ್ನು ಅನುಕರಣೆ ಮಾಡುವುದರಿಂದ ಅವಕ್ಕೆ ವಚನಗಳಂತೆ ತನ್ನದೇ ಆದ ಸ್ವಂತ ಮತ್ತು ನೈಜ ಸ್ವರೂಪವಿಲ್ಲ. ಶಿವ ಶರಣರ ಉನ್ನತ ವಿಚಾರಗಳ ತರಹ ಅವು ತತ್ವಗಳನ್ನು ಒಳಗೊಂಡಿರದೆ ಇರುವುದರಿಂದ ಹಳಕಟ್ಟಿಯವರು ಈ ಚಳುವಳಿಗಳನ್ನು ತಿರಸ್ಕರಿಸಿದರು. ಈ ವಿಷಯದಲ್ಲಿ ಹಳಕಟ್ಟಿಯವರಿಗೂ ಮತ್ತು ಫರ್ಕುಹರರಿಗೂ ಸಾಮ್ಯತೆ ಇತ್ತು. ಫರ್ಕುಹರರು ಸಹ ಭಾರತದ ಆಧುನಿಕ ಧಾರ್ಮಿಕ ಚಳಿವಳಿಗಳು ಪಾಶ್ಚಾತ್ಯ ಧಾರ್ಮಿಕ ತತ್ವಗಳಿಂದ ಪ್ರಭಾವಿತವಾಗಿರುವಂತದೆಂದು ಭಾವಿಸಿದ್ದರು.