ಭಾಗ

ಕಾಯಕವೇ ಕೈಲಾಸ” : ಅದ್ವೈತ ನಿಷ್ಕ್ರಿಯತೆ ಮತ್ತು ವಚನಕಾರರ ಕ್ರಿಯಾತ್ಮಕತೆ

ವಿವೇಕಾನಂದ ಅಥವಾ ರಾಮಕೃಷ್ಣ ಮಿಶನ್‌ನ ಜೊತೆಗೆ ಯಾವ ಭಿನ್ನಾಭಿಪ್ರಾಯಗಳಿದ್ದವು ಎನ್ನುವ ಬಗ್ಗೆ ಹಳಕಟ್ಟಿಯವರು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಆಧುನಿಕ ಜಗತ್ತಿಗೆ ಅವಶ್ಯಕತೆ ಇರುವ ವ್ಯಾವಹಾರಿಕ ಅಂಶಗಳು ವಚನಗಳಲ್ಲಿರುವುದನ್ನು ಮೆಚ್ಚುಗೆಯಿಂದ ಗಮನಿಸಿದ ಹಳಕಟ್ಟಿಯವರು ವಿವೇಕಾನಂದರು ವ್ಯಾವಹಾರಿಕ ವೇದಾಂತದ ವಿಚಾರಗಳ ಜೊತೆಗೆ ಸಾಮ್ಯತೆ ಹೊಂದಿದ್ದರು. ವಿವೇಕಾನಂದರ ವೇದಾಂತ ಸಿದ್ಧಾಂತವು ಅದ್ವೈತವನ್ನು ತಾತ್ವಿಕವಾಗಿ ಮತ್ತು ಸಾಮಾಜಿಕವಾಗಿ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸುತ್ತದೆ.[1] ವಿವೇಕಾನಂದರು ೧೮೯೭ರ ಸುಮಾರಿಗೆ ತಮ್ಮ ವ್ಯಾವಹಾರಿಕ ವೇದಾಂತವನ್ನು ಪ್ರಚಾರಗೊಳಿಸಲು ದೇಶದಾದ್ಯಂತ ಅನೇಕ ಭಾಷಣಗಳನ್ನು ಹಾಗೂ ವಿಚಾರಗಳನ್ನು ಮಂಡಿಸಿದ್ದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ವೇದಾಂತದ ಗಹನವಾದ ವಿಚಾರಗಳನ್ನು ಸರಳೀಕರಣಗೊಳಿಸಿ ಪ್ರಚಾರ ಮಾಡುವುದು ಅವರ ಉದ್ದೇಶವಾಗಿತ್ತು. ಅವರ ಹಾಗೆ ಆಗಿನ ಅನೇಕ ಧಾರ್ಮಿಕ ಮುಖಂಡರು ಸಹ ತಾತ್ವಿಕ, ಸಾಮಾಜಿಕ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ವೇದಾಂತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಂಡಿದ್ದರು. ವಚನಗಳಿಗೆ ನೈತಿಕ ಮೌಲ್ಯಗಳನ್ನು ಹೊರಿಸಿದಾಗ ಹಳಕಟ್ಟಿಯವರು ವಿವೇಕಾನಂದರ ಈ ಮಾರ್ಗವನ್ನು ಅನುಸರಿಸಿದರು. ಹೀಗಾಗಿ ವಚನಕಾರರು ಧರ್ಮ ಸಹಿಷ್ಣುತೆಯನ್ನು ಪ್ರತಿನಿಧಿಸುವ ಸುಧಾರಕವಾಗಿ ಹೊರಹೊಮ್ಮಿದರು.

ವಚನಕಾರರ ‘ಕಾಯಕ ತತ್ವ’ ವಿವೇಕಾನಂದರ ವಿಚಾರಗಳಿಗಿಂತ ಭಿನ್ನವಾಗಿರುವಂತದ್ದು. ವಚನಗಳ ಕಾಯಕ ತತ್ವಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿರುವುದು ಫರ್ಕುಹರರ ಅನೇಕ ವಿಚಾರಗಳಿಗೆ ಸಾಮ್ಯತೆಯನ್ನು ಹೊಂದಿರುವದೆಂದು ಇಲ್ಲಿ ಊಹಿಸಲಾಗಿದೆ. ವ್ಯಕ್ತಿಯ ವಿಕಸನಕ್ಕೆ ಅದ್ವೈತ ವೇದಾಂತದ ಅವಶ್ಯಕತೆಯನ್ನು ಮತ್ತು ಮರು-ವ್ಯಾಖ್ಯಾನವನ್ನು ಪ್ರತಿಪಾದಿಸುತ್ತಿದ್ದ ವಿವೇಕಾನಂದರ ವಿಚಾರಗಳನ್ನು ಫರ್ಕುಹರರು ಒಪ್ಪಿಕೊಂಡಿರಲಿಲ್ಲ. ಅವರ ವಾದವೇನೆಂದರೆ ವಿವೇಕಾನಂದರ ವ್ಯಾಪಹಾರಿಕ ವೇದಾಂತವು ‘ವ್ಯಕ್ತಿಯ’ ಸುಧಾರಣೆಗೆ ಹೆಚ್ಚಿನ ಮಹತ್ವವನ್ನು ನೀಡಿರುವದರಿಂದ ಹಾಗೂ ಆತ್ಮಜ್ಞಾನ ಸಂಪಾದನೆಗೆ ಒತ್ತು ನೀಡಿರುವದರಿಂದ ಒಬ್ಬ ವ್ಯಕ್ತಿಗೆ ಅದು “ಯಾವುದೇ ಕಾರ್ಯವನ್ನು ಮಾಡಲು ನಿರುತ್ಸಾಹವನ್ನುಂಟು ಮಾಡುತ್ತದೆ” (ಹಾಲ್ಬ್ ಫಾಸ್, ೧೯೯೬: ೨೨೧). ಅವರ ಒಟ್ಟು ಸಾರಾಂಶವೇನೆಂದರೆ ವಿವೇಕಾನಂದರ ವ್ಯಾವಹಾರಿಕ ಸಿದ್ಧಾಂತವು ಸಾಮಾಜಿಕ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ಪರಿಹರಿಸಲು ಅಸಾಧ್ಯ. ಆದ್ದರಿಂದ ವ್ಯಕ್ತಿ ಮತ್ತು ಸಮಾಜಗಳೆರಡರ ನೈತಿಕ ಸಮಸ್ಯೆಗಳನ್ನು ಪರಿಹರಿಸಲು ವೇದಾಂತವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? “ಸ್ವ-ಅರಿವಿನ ಮಾರ್ಗವಾಗಿ ಇದು ಸಾಂಸ್ಕೃತಿಕ ತಟಸ್ಥ ಮತ್ತು ಸಮಾಜದಾಚೆಗೆ ಇರುವಂತದ್ದು, ಹೀಗಾಗಿ ಇದರಿಂದ ಸಾಂಸ್ಥಿಕ ವ್ಯವಸ್ಥೆ ಮತ್ತು ಸಾಂಘಿಕ ನಂಬುಗೆಗಳ ಜೊತೆಗೆ ಯಾವುದೇ ಕಾರ್ಯ ಕಾರಣ ಸಂಬಂಧ ಸಾಧ್ಯವಿಲ್ಲ” (ಕೃಷ್ಣ ಪ್ರಕಾಶ ಗುಪ್ತ, ೧೯೭೪: ೨೭). ಫರ್ಕುಹರರ ತರಹ ಹಳಕಟ್ಟಿಯವರಿಗೂ ವಿವೇಕಾನಂದರ ಸಿದ್ಧಾಂತಗಳಲ್ಲಿ ಮಿತಿಗಳನ್ನು ಕಂಡಿರಬಹುದು. ವಚನಕಾರರು ಯಾವುದೇ ದ್ವೈತ ಅಥವಾ ಅದ್ವೈತ ವಾದಗಳಿಗೆ ಮನ್ನಣೆ ಕೊಡಲಿಲ್ಲ ಎಂದು ವಾದಿಸುತ್ತಾ, ಅವರ ಕಾಯಕದ ಮಹತ್ವವನ್ನು ಎತ್ತಿ ಹಿಡಿಯುವ ವಚನಗಳನ್ನು ಹೇರಳವಾಗಿ ಬೆಳಕಿಗೆ ತಂದರು. ವಚನ ಶಾಸ್ತ್ರ ಸಾರದ ಮುನ್ನುಡಿಯಲ್ಲಿ ವಚನಕಾರರ ಕಾಯಕ ತತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವಚನಕಾರರು ಉದ್ಯೋಗ ಅಂದರೆ ಕಾಯಕಗಳಿಗೆ ಬಹಳ ಮಹತ್ವ ಕೊಟ್ಟಿರುವರು. ಅಂದರೆ ಮನುಷ್ಯರು ಸ್ವತಃ ದುಡಿದು, ಸ್ವತಂತ್ರತೆಯಿಂದಿದ್ದು ಲಿಂಗಾರ್ಪಣ ಭಾವದಿಂದ ವರ್ತಿಸುವುದೇ ಮಹತ್ವದ್ದೆಂದು ಅವರು ಅಭಿಪ್ರಾಯಪಟ್ಟಿರುವರು… ಆದ್ದರಿಂದ ನಾನಾ ತರಹದ ಕೈಗಾರಿಕೆಗಳು ಶೂದ್ರರ ಹೊರೆಗಳೆಂದು ಭಾವಿಸಿ, ಅವುಗಳನ್ನು ಅವರು ಕಡಿಮೆಯಾಗಿ ತಿಳಿಯಲಿಲ್ಲ (ಹಳಕಟ್ಟಿ. ೧೯೨೩: ೧೮).

ಇಲ್ಲಿ ಕಾಯಕವೆನ್ನುವುದು ವೈಯಕ್ತಿಕ ಹಾಗೂ ಸಾಂಘಿಕವಾದುದು. ವಚನಗಳು ಯಾವುದೇ ಕಾಯಕ ಕೀಳಲ್ಲ ಎಂಬ ಸಂದೇಶ ಸಾರುತ್ತದೆ; ಕಾಯಕದಲ್ಲಿ ಮೇಲು-ಕೀಳು ಎಂಬ ಶ್ರೇಣಿಗರಣವು ಮನುಷ್ಯದ ಮನೋಭಾವನೆಯೆ ಹೊರತು ಬೇರೆನಲ್ಲ. ಭಕ್ತಿ ಹಾಗು ನಂಬಿಕೆಯಿಂದ ಯಾವುದೇ ಕಾಯಕವನ್ನು ಮುಕ್ತಿಯ ಮಾರ್ಗವನ್ನಾಗಿ ಪರಿವರ್ತಿಸಬಹುದು. ಆಡಂಬರ, ಡಂಬಾಚಾರ ಇಲ್ಲದ ಭಕ್ತಿಯೆ ನೈತಿಕ ಗುಣ. ಶಿವ ಶರಣರ ಅನೇಕ ವಚನಗಳು ಕಾಯಕದ ಮಹತ್ವವನ್ನು ಒಳಗೊಂಡಿವೆ. ಕಾಯಕ ಮತ್ತು ಸದ್ನಡೆಯಿಂದ ನಾವು ದೇವರಲ್ಲಿ ಒಂದಾಗಬಹುದೆಂದು ಅವು ಪ್ರತಿಪಾದಿಸುತ್ತವೆ. ವಚನಶಾಸ್ತ್ರ ಸಾರದ ಮೂರನೇ ಭಾಗವು ಕಾಯಕದ ಮಹತ್ವದ ಬಗ್ಗೆ ಇರುವ ವಚನಗಳನ್ನು ಹೊಂದಿವೆ. ಲಿಂಗಾಯತರ ಕಠಿಣ ಮತ್ತು ಶಾಸ್ತ್ರಾಂಧತೆಯಿಂದ ಕೂಡಿದ ಆಚರಣೆಗಳನ್ನು (ವಿಶೇಷವಾಗಿ ಲಿಂಗಾಯತರ ಮಠಗಳನ್ನು ಗಮನದಲ್ಲಿಟ್ಟು) ಕಟುವಾಗಿ ಟೀಕಿಸುವ ವಚನಗಳನ್ನು ಇದರಲ್ಲಿ ಗಮನಿಸಲಾಗಿದೆ. ಸ್ವ-ಘೋಷಿತ ಸಂನ್ಯಾಸಿ ಅಥವಾ ಯೋಗಿಗಳ ಕೃತಕ ಹಾಗು ಗೋಸುಂಬೆತನದ ಬೋಧನೆ ಮತ್ತು ಆಚರಣೆಗಳನ್ನು ತೀಕ್ಷ್ಣವಾಗಿ ಪರಿಹಾಸ್ಯಗೊಳಿಸುವ ವಚನಗಳನ್ನು ಇಲ್ಲಿ ಸಂಕಲಿಸಲಾಗಿದೆ. ಆಂತರಿಕ ಜಗತ್ತಿನೊಳಗೆ ನಮ್ಮನ್ನು ನಾವು ಕಳೆದುಕೊಳ್ಳದೆ, ಸಮಾಜವನ್ನು ಸುಧಾರಿಸುವ ಪ್ರತಿಪಾದನೆಯನ್ನು ಈ ವಚನಗಳಲ್ಲಿ ತೀವ್ರವಾಗಿ ಕಾಣಬಹುದು. ಕಾಯಕ ತತ್ವಕ್ಕೆ ಸಂಬಂಧಿಸಿದಂತೆ ಆಯ್ದಕ್ಕಿ ಮಾರಯ್ಯನ ಒಂದು ವಚನಗಳನ್ನು ನಾವು ಗಮನಿಸಬಹುದು,

ಕಾಯಕದಲ್ಲಿ ನಿರತನಾದೆಡೆ
ಗುರುದರ್ಶನವದು ಮರೆಯಬೇಕು
ಲಿಂಗಪೂಜೆಯದು ಮರೆಯಬೇಕು
ಜಂಗಮ ಮುಂದಿದ್ದರು ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮಲೇಶ್ವರಲಿಂಗವಾಯಿತ್ತದು ಕಾಯಕದೊಳು

ಈ ವಚನಗಳನ್ನು ಪ್ರಸಾದಿ ಸ್ಥಲದಲ್ಲಿ ಸೇರಿಸಲಾಗಿದೆ. ಇದು ಕಾಯಕದ ಮಹತ್ವವನ್ನು ಎಷ್ಟರ ಮಟ್ಟಿಗೆ ಪ್ರತಿಪಾದಿಸುತ್ತದೆಯೆಂದರೆ ಕಾಯಕದಲ್ಲಿದ್ದಾಗ ನಾವು ಗುರು-ಲಿಂಗ-ಜಂಗಮರನ್ನೂ ಮರೆಯಬೇಕು ಎಂದು ಬೋಧಿಸುತ್ತದೆ. ಕಾಯಕಕ್ಕೊಸ್ಕರ ಈ ಮೂವರನ್ನು ಮೀರಿ ಹೋಗುವ ಅವಶ್ಯಕತೆಯನ್ನು ಈ ವಚನ ಬಲವಾಗಿ ಪ್ರತಿಪಾದಿಸುತ್ತದೆ. ಪ್ರಾಪಂಚಿಕ ಜಗತ್ತಿನೊಳಗೆ ಕಾಯಕವನ್ನು ಮಾಡುತ್ತಾ ದೈವದ ಅನುಭವವನ್ನು ಹೊಂದಬಹುದೆಂದು, ಇದಕ್ಕಾಗಿ ಕಾಯಕವೇ ಶ್ರೇಷ್ಠವಾದುದೆಂದು ಮಾರಯ್ಯನ ಪ್ರತಿಪಾದನೆ.

ಭಿನ್ನ, ಭಿನ್ನ, ಸ್ಥಳ, ಕಾಯಕ ಹಾಗೂ ಕಾಲ ಘಟ್ಟಕ್ಕೆ ಸೇರಿದ ಅಲ್ಲಮ, ಬಸವಣ್ಣ, ದೇವರ ದಾಸಮಯ್ಯ, ಅಕ್ಕಮಹಾದೇವಿ, ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ, ಅಕಲೆಶ ಮಾದರಸ (ಎಲ್ಲರೂ ೧೨ನೇ ಶತಮಾನದ ವಚನಕಾರರು), ಸ್ವಂತತ್ರ ಸಿದ್ಧಲಿಂಗ (೧೬೦೦), ಶಣ್ಮುಖ ಸ್ವಾಮಿ (೧೭೦೦)ಯವರ ವಚನಗಳು ನಿಜವಾದ ಭಕ್ತಿ ಮತ್ತು ಅತ್ಯುನ್ನತ ನೈತಿಕ ಮೌಲ್ಯಗಳನ್ನು ಹೊಂದಿದೆ ಎಂಬುದನ್ನು ಹಳಕಟ್ಟಿಯವರು ತೋರಿಸಿಕೊಟ್ಟರು. ಮೇಲು-ಕೀಳು ಎಂದು ಬಗೆಯದೆ, ಕಾಯಕದ ಮೂಲಕ ದೇವರಲ್ಲಿ ಒಂದಾಗುವ ಅನುಭವವನ್ನು ಈ ವಚನಗಳಲ್ಲಿ ಗಮನಿಸಿದರು. ವಚನಕಾರರು ಬೇರೆ, ಬೇರೆಯಾಗಿದ್ದರೂ ಅವರ ಮೂಲ ಉದ್ದೇಶ ಕಾಯಕದ ಮಹತ್ವವನ್ನು ಪ್ರಚಾರ ಪಡಿಸುವದೇ ಆಗಿತ್ತು ಎಂದು ಎಲ್ಲರನ್ನು ಅವರು ಸಮೀಕರಿಸಿದರು. ತಾಳೆ-ಗರಿ ಮತ್ತು ಹಸ್ತ ಪ್ರತಿಗಳಲ್ಲಿ ದೊರೆತ ವಚನಗಳು ಮೂಲವಾಗಿ ೧೨ನೇ ಶತಮಾನದಲ್ಲಿ ಮಾತ್ರ ರಚಿಸಲ್ಪಟ್ಟಂತವಾಗಿರಲಿಲ್ಲ. ಅವು ಮೈಸೂರು ಅಥವಾ ಧಾರವಾಡದಲ್ಲಿ ಮಾತ್ರ ಲಭ್ಯವಿರದೆ, ಆಗಿನ ಕಾಲದ ನಿಜಾಮ ಪ್ರಾಂತ್ಯಗಳಾದ ಬೀದರ್, ಗುಲ್ಬರ್ಗ ಪ್ರದೇಶಗಳಲ್ಲೂ ಸಹ ಲಭ್ಯವಿದ್ದವು. ಆದಾಗ್ಯೂ ಹಳಕಟ್ಟಿಯವರು ಈ ಎಲ್ಲಾ ವಚನಕಾರರನ್ನು ಒಂದೇ ಸೂರಿನಡಿಯಲ್ಲಿ ತಂದು ಪ್ರಾಂತ್ಯ, ಕಾಲದ ಭಿನ್ನತೆಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿದರು. ವಚನಕಾರರು ಒಂದೇ ಪ್ರಾಂತ್ಯಕ್ಕೆ ಸೇರಿದವರಲ್ಲ ಎಂದು ಮನಗಂಡಿದ್ದರೂ ತಮ್ಮ ಮೂಲ ಉದ್ದೇಶದಿಂದ ಅವರು ದೂರ ಸರಿಯಲಿಲ್ಲ. ಹೀಗಾಗಿ ಎಲ್ಲಾ ವಚನಕಾರರ ವಚನಗಳನ್ನು ಏಕೀಕೃತ ಸೂತ್ರದಲ್ಲಿ ಬಂಧಿಸಿ, ಆಧುನಿಕ ಕಾಲದ ಉಪಯೋಗಕ್ಕಾಗಿ ೧೨ನೇ ಶತಮಾನದ ವಚನ ‘ಚೈತನ್ಯ’ವನ್ನು ಮತ್ತೆ ಮರಳಿ ಪಡೆಯುವ ಹಠವನ್ನು ಹಳಕಟ್ಟಿಯವರಲ್ಲಿ ಕಾಣಬಹುದು. ‘ಕಾಯಕವೇ ಕೈಲಾಸ’ ಎಂಬ ತತ್ವವು ಇತಿಹಾಸದಲ್ಲಿ ಬದಲಾಗದೇ, ಸುಸೂತ್ರವಾಗಿ ಸಾಗಿ ಬಂದು, ಈಗಲೂ ಉಳಿದು ಕೊಂಡಿರುವ ೧೨ನೇ ಶತಮಾನದ ಮೂಲ ಸತ್ವವೆಂದು ಬಿಂಬಿಸಲಾಯಿತು. ಯಾವ, ಯಾವ ಸಂದರ್ಭದಲ್ಲಿ, ಯಾತಕ್ಕಾಗಿ ವಚನಗಳನ್ನು ರಚಿಸಲಾಗಿದೆ ಎಂಬ ಅಂಶವನ್ನು ಅವರು ಪರಿಗಣಿಸಲಿಲ್ಲ. ಬಹುಶಃ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲದಿರುವುದೇ ಇದಕ್ಕೆ ಕಾರಣವಿರಬಹುದು. ಇದಕ್ಕಾಗಿ ಅವರು ತಮ್ಮ ಊಹೆಯನ್ನು ಹೀಗೆ ವ್ಯಕ್ತಪಡಿಸುತ್ತಾರೆ.

ವಚನ ಗ್ರಂಥಗಳು, ಅವುಗಳಲ್ಲಿ ಮುಖ್ಯವಾಗಿ ಪುರಾತನಕಾಲದವುಗಳು, ಹ್ಯಾಗೆ ಈ ಕಾಲಕ್ಕೆ ಒಂದು ಪುಸ್ತಕವನ್ನು ವಿಷಯಗಳಿಗನುಸಾರವಾಗಿ ಕ್ರಮವಾಗಿ ಬರೆಯುವ ಪದ್ಧತಿಯು ಇದೆಯೇ ಹಾಗೆ ಬರೆದವುಗಳಲ್ಲ. ವಚನಕಾರನ ಮನಸ್ಸಿನಲ್ಲಿ ಯಾವಾಗ ಒಂದು ಸ್ಫೂರ್ತಿಯು ಬಂದಿತೋ, ಆ ಕಾಲಕ್ಕೆ ಅವು ಬರೆದವುಗಳಿರುತ್ತವೆ. (ಹಳಕಟ್ಟಿ, ೧೯೨೩: ೭) ಈ ತರಹದ ಊಹೆಯನ್ನು ಕಲ್ಪಿಸಿಕೊಂಡು, ಏಕೀಕೃತ ಚಿತ್ರಣವನ್ನು ನೀಡಲು ಮತ್ತು ಎಲ್ಲಾ ವಚನಕಾರರ ಅದರ್ಶಗಳ ನಡುವೆ ಏಕೀಭಾವದ ಸಂಬಂಧವನ್ನು ಬೆಸೆಯಲು ವಚನಗಳೇ ಸಹಾಯಕವಾಗಿದ್ದವು. ಏಕೆಂದರೆ ವಚನಗಳ ಮೂಲ ಕರ್ತೃಗಳು ನಾವೇ ಎಂದು ಯಾವ ವಚನಕಾರರು ಹೇಳಿಕೊಂಡಿಲ್ಲ. ಜೊತೆಗೆ ಆಗ ಅನೇಕ ವಿದ್ವಾಂಸರು ಮತ್ತು ಜನಸಾಮಾನ್ಯರಿಗೆ ವಚನಗಳ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ವಚನಗಳ ಬಗ್ಗೆ ಜನರಿಗಿದ್ದ ಅಲ್ಪ ಅರಿವು ಹಳಕಟ್ಟಿಯವರ ಕೆಲಸವನ್ನು ಹಗುರನ್ನಾಗಿಸಿತು. ಹಾಗಾಗಿ ತಮ್ಮಲ್ಲಿದ್ದ ವಚನಗಳನ್ನು ಸಂಕಲಿಸಿ, ಪ್ರಕಟಿಸಲು ಸಾಕಷ್ಟು ಸ್ವಾತಂತ್ರ‍್ಯವನ್ನು ಹೊಂದಿದ್ದರು. ಆದಾಗ್ಯೂ, ತಮ್ಮ ಪ್ರಯತ್ನಗಳು ಅಂತಿಮ ಅಥವಾ ಖಚಿತವಾದದ್ದು ಎಂದು ಅವರು ತಿಳಿದಿರಲಿಲ್ಲ. ಅವರಿಗಿದ್ದ ಒಂದು ನೋವು ಏನೆಂದರೆ ವಚನ ಇತಿಹಾಸ ಮತ್ತು ಪರಂಪರೆಯನ್ನು ಭದ್ರವಾಗಿಸಲು ಬೇಕಾದ ಮೂಲ ಸಾಮಗ್ರಿಗಳು, ಸಾಕ್ಷ್ಯಿಗಳು ಅಥವಾ ಯಾವುದೇ ಉಲ್ಲೇಖಗಳ ಕೊರತೆ. ವಚನಗಳಲ್ಲಿನ ನೈತಿಕ ಮೌಲ್ಯಗಳು ಮತ್ತು ಭಕ್ತಿಯ ಪರಿಕಲ್ಪನೆಗಳನ್ನು ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಸಮರ್ಥಿಸಿಕೊಳ್ಳುವದಕ್ಕೆ ಪರಿಮಿತಿಗಳಿವೆ ಎಂದು ಅವರಿಗೆ ಗೊತ್ತಿತ್ತು. ವಚನಗಳ ಬಗ್ಗೆ ಮತ್ತು ವಚನಕಾರರ ಬಗ್ಗೆ ಅಧಿಕೃತವಾಗಿ ಮಾತನಾಡಬೇಕಾದರೆ ಬಲವಾದ ಆಧಾರಗಳಿರಬೇಕೆಂಬುದನ್ನು ಮನಗಂಡರು. ಸದ್ಯಕ್ಕೆ ಲಭ್ಯವಿರುವ ಗ್ರಂಥಗಳು ಅಥವಾ ಇತಿಹಾಸದ ದಾಖಲೆಗಳು ಸೂಕ್ತವಾಗಿಲ್ಲವೆಂಬ ಕೊರತೆ ಹಳಕಟ್ಟಿಯವರನ್ನು ಪದೆ, ಪದೆ ಕಾಡಿದವು. ಹಾಗಾಗಿ ವಚನಗಳ ಮತ್ತು ಅವುಗಳ ಇತಿಹಾಸದ ಬಗ್ಗೆ ಗಂಭೀರವಾದ ಸಂಶೋಧನೆಯಾಗಬೇಕು ಎಂದು ಒತ್ತಿ ಹೇಳುತ್ತಿದ್ದರು. ಈ ಕಂದರನ್ನು ತುಂಬಲು ತಾವೇ ಸ್ವತಃ ಸಂಶೋಧನೆಯಲ್ಲಿ ತೊಡಗಿ ವಚನಕಾರದ ಐತಿಹಾಸಿಕ ಸತ್ಯವನ್ನು ನಿರೂಪಿಸಲು ತೀವ್ರವಾಗಿ ಪ್ರಯತ್ನಿಸಿದರು.

ನಾನು ಒಬ್ಬ ಸೇವಕ’ : ಅದ್ವೈತದ ಮೇಲಿನ ಆರೋಪಗಳು

ಬಸವಣ್ಣನ ಒಂದು ವಚನ ಪ್ರಾಯಶಃ ಹಳಕಟ್ಟಿ ಮತ್ತು ವಿವೇಕಾನಂದರ ವ್ಯಾವಹಾರಿಕ ವೇದಾಂತದ ನಡುವೆ ಇದ್ದ ಮತ್ತೊಂದು ವ್ಯತ್ಯಾಸವನ್ನು ತಿಳಿಸುತ್ತದೆ,

ಜನ್ಮ ಜನ್ಮಕೆ ಹೊಗಲಿಯದೆ ಸೊಹಂ ಎಂದೆನಿಸದೆ
ದಾಸೊಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೊರಿ ಬದುಕಿಸಯ್ಯ
ಕೂಡಲಸಂಗಮದೇವ, ನಿಮ್ಮ ಧರ್ಮ

ದೇವರ ಅರಿವನ್ನು ಅಥವಾ ಅನುಭವನ್ನು ಜ್ಞಾನದಿಂದ ಪಡೆಯಬಹುದೆಂಬ ಅದ್ವೈತ ತತ್ವಗಳನ್ನು ಈ ಮೇಲಿನ ವಚನವು ತಿರಸ್ಕರಿಸುತ್ತದೆ. ಶಂಕರಾಚಾರ್ಯರ ಈ ತತ್ವವನ್ನು ಒಪ್ಪಿಕೊಳ್ಳಲು ಬಸವಣ್ಣ ತಯಾರಿಲ್ಲ. ಅಹಂ ಬ್ರಹ್ಮಾಸ್ಮಿ ಎಂದು ಗರ್ವದಿಂದ ಅನ್ನುವ ಬದಲು ನಾನು ‘ನಿಮ್ಮಯ ಸೇವಕ’ ಎಂಬ ನಮ್ರತೆಯನ್ನು ಈ ವಚನದಲ್ಲಿ ಕಾಣಬಹುದು. ಇತರರ ಒಳಿತಿಗಾಗಿ ರಹಿತ ಸೇವೆಯನ್ನು ಮಾಡಿದರೆ ಮಾತ್ರ ವ್ಯಕ್ತಿಯ ಜೀವನ ಪರಿಶುದ್ಧವಾಗಿರುತ್ತದೆ. ಸೋಹಂ ಅನ್ನುವುದು ಗರ್ವವನ್ನು ತೊಡೆದು ಹಾಕುವದಿಲ್ಲ. ಹಾಗಾಗಿ ವ್ಯಕ್ತಿಯ ಆಧ್ಯಾತ್ಮಿಕ ಶುದ್ಧತೆಯನ್ನು ಸಾಧಿಸಲು ಸಾದ್ಯವಿಲ್ಲ. ದಾಸೋಹಂ ಎನ್ನುವುದು ನಮ್ರತೆಯ ಪ್ರತೀಕ. ಆದರಿಂದ ದೈವದ ಮೆಚ್ಚಿಗೆಯನ್ನು ಗಳಿಸಬಹುದು, ಅದ್ವೈತಕ್ಕೂ ಮತ್ತು ವಚನಗಳಿಗೂ ಇರುವ ವ್ಯತ್ಯಾಸಗಳನ್ನು ಎತ್ತಿ ತೋರಿಸಲು ಇಂತಹ ಹಳಕಟ್ಟಿಯವರಿಗೆ ಸಹಾಯಕವಾದವು. ಆದರೆ ವಿವೇಕಾನಂದರ ಅದ್ವೈತ ಸಿದ್ಧಾಂತದ ಜೊತೆಗೆ ನೇರವಾಗಿ ಬಡಿದಾಡದೆ ಶಂಕರಾಚಾರ್ಯರ ತತ್ವಗಳ ಜೊತೆಗೆ ಜಗಳವಾಡುತ್ತಾ ಈ ವ್ಯತ್ಯಾಸಗಳನ್ನು ತೋರಿಸಿಕೊಟ್ಟರು. ಅವರಿಗೆ ಶಂಕರಾರ್ಚಾರ ತತ್ವದ ಬಗ್ಗೆ ಅಸಮಾಧಾನವಿತ್ತು. ಇದರ ಬಗ್ಗೆ ಅವರು ಹೀಗೆ ಬರೆಯುತ್ತಾರೆ.

ಹಿಂದೂಧರ್ಮದಲ್ಲಿ ಶೃತಿ ಸ್ಮೃತ್ಯಾದಿ ಗ್ರಂಥಗಳಲ್ಲಿ ಪರಸ್ಪರ ವಿರೋಧಗಳೂ, ಮತಾಂತರಗಳೂ ಉತ್ಪನ್ನವಾಗಿವೆ. ಆಗಮ ಗ್ರಂಥಗಳಲ್ಲಿಯೂ ಇದೇ ತೆರನಾಗಿರುತ್ತದೆ. ಹಿಂದೂಧರ್ಮಕ್ಕೆ ಈ ಸ್ಥಿತಿಯುಂಟಾಗಲು, ಶಂಕರಾಚಾರ್ಯ ಮೊದಲಾದ ಭಾಷ್ಯಕಾರರು ಉತ್ಪನ್ನರಾಗಿ, ತಮಗೆ ಯುಕ್ತ ಕಂಡ ಮಾರ್ಗವನ್ನು ಅದರೊಳಗಿಂದ ಹುಡುಕಿ ತೆಗೆದು, ಅದನ್ನು ಜನರಿಗೆ ಬೋಧಿಸುವವರಾದರು. ಆದರೆ ಇದರಲ್ಲಿ ಅವರು ತಮ್ಮ ಮಾರ್ಗಕ್ಕೆ ವಿರೋಧವಿರುವ ವಿಷಯಗಳಿಗೆ ಉಕ್ತಿ ಪ್ರಯುಕ್ತಿಗಳಿಂದ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಿ, ತಮ್ಮ ತಮ್ಮ ರೀತಿಯಿಂದ ಭಾಷ್ಯಗಳನ್ನು ಬರೆದು, ತಮ್ಮ ತೊಂದರೆಗಳನ್ನು ಪರಿಹರಿಸಿಕೊಂಡಿರುತ್ತಾರೆ. (ಹಳಕಟ್ಟಿ. ೧೯೨೩: ಪು. ೧೭)

ಆದರೆ ಈ ರೀತಿಯ ಯುಕ್ತಿ ಪ್ರಯುಕ್ತಿಗಳು ವಚನಕಾರರ ಸ್ವಭಾವಕ್ಕೆ ಸಲ್ಲದವು ಎಂದು ಹೆಮ್ಮೆಯಿಂದ ಅವರು ಬರೆಯತ್ತಾರೆ. ತಮಗೆ ವಿರೋಧವಿರುವ ಸಂಗತಿಗಳನ್ನು ನಿರ್ಭಿಡೆಯಿಂದಲೂ ಸ್ವಷ್ಟ ಶಬ್ದಗಳಿಂದಲೂ ಅಲ್ಲಗಳೆದು, ತಮ್ಮದೇ ಆದ ಮಾರ್ಗವನ್ನು ಸ್ಥಾಪಿಸಿದರು ಎಂದು ನಂಬಿದ್ದರು.

ವಿವೇಕಾನಂದರ ಜೊತೆಗಿದ್ದ ಮತ್ತೊಂದು ಭಿನ್ನಾಭಿಪ್ರಾಯವು ಜಾತಿ ಮತ್ತು ಜಾತೀಯತೆಯ ಬಗ್ಗೆ ಅವರಿಗಿದ್ದ ವಿಚಾರಗಳಿಗೆ ಸಂಬಂಧಿಸಿದೆ. ಬ್ರಾಹ್ಮಣ ಮತ್ತು ಬ್ರಾಹ್ಮಣದ ವಿರುದ್ಧ ಅನೇಕ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದ ವಿವೇಕಾನಂದರನ್ನು ಹಳಕಟ್ಟಿ ಅಷ್ಟೊಂದು ಉತ್ಸಾಹದಿಂದ ಸ್ವೀಕರಿಸಲಿಲ್ಲ. ತಮ್ಮ ವ್ಯಾವಹಾರಿಕ ವೇದಾಂತದ ಭಾಗವಾಗಿ ವಿವೇಕಾನಂದರು “ಬ್ರಾಹ್ಮಣರ ಜಾತಿಯತೆಯ ವಿರುದ್ಧ ಯುದ್ಧವನ್ನೇ ಸಾರಿದ್ದರು” (ಇಂ, ೧೯೬೭” ೨೫೫). ಕಾಯಸ್ತ ಸಮುದಾಯಕ್ಕೆ ಸೇರಿದ ವಿವೇಕಾನಂದರು ಈಗ ಸಂನ್ಯಾಸಿಯಾಗಿ ತಮ್ಮ ಸಮುದಾಯದಿಂದ ದೂರವಿದ್ದರು, ಇವರಿಗಿಂತ ಭಿನ್ನವಾಗಿ ಹಳಕಟ್ಟಿಯವರು ತಮ್ಮ ಲಿಂಗಾಯತ ಸಮುದಾಯದಿಂದ ದೂರವಾಗದೆ ಇದ್ದವರು, ಆ ಸಮುದಾಯದ ಜಾತಿ ಘರ್ಷಣೆಗಳಲ್ಲಿ ಭಾಗಿಯಾಗಲು ಇಷ್ಟವಿರಲಿಲ್ಲ. ಆದರೆ ಅವರು ತಮ್ಮ ಸಮುದಾಯದ ಆಂತರಿಕ ವಿಮರ್ಶಕಾರರಾಗಿ ಹಾಗು ಸುಧಾರಕರಾಗಿ ಇರಲು ಬಯಸಿದ್ದರು. ತಮ್ಮ ಸಮುದಾಯದ ಆಂತರಿಕ ಜಾತಿ ಮತ್ತು ಮಠದ ಕಚ್ಚಾಟಗಳಲ್ಲಿ ಭಾಗವಹಿಸಿದೆ, ದೂರವಿದ್ದರು. ವಚನಗಳನ್ನು ಚರ್ಚಿಸುವಾಗ ಆಂತರಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿದರು. ಇದ್ಯಾವುದೂ ಆಗದೆ ಇದ್ದಾಗ ನೈತಿಕತೆಯ ಅಡಿಯಲ್ಲಿ ಅವುಗಳನ್ನು ಮರೆಮಾಚಿದರು. ಈ ರೀತಿಯ ಅನುಪಸ್ಥಿತಿಯು ಆಧುನಿಕ ಲಿಂಗಾಯತರ ಜಾತ್ಯಾತೀತ ಗುರುತನ್ನು ಸೂಚಿಸುತ್ತದೆ. ಆಗಿನ ಕಾಲದಲ್ಲಿ ಹಿಂದುಳಿದ ಜನಾಂಗದ ಮೀಸಲಾತಿ ಚಳುವಳಿಯಿಂದ (ಸರ್ಕಾರಿ ಶಿಕ್ಷಣ ಸಂಸ್ಥೆ ಮತ್ತು ಹುದ್ದೆಗಳಲ್ಲಿ ಸಮುದಾಯಾಧಾರಿತ ಮೀಸಲಾತಿಗಾಗಿ) ಇದೇ ಕಾರಣಕ್ಕಾಗಿ ದೂರವಿದ್ದು, ಅದನ್ನು ಬೆಂಬಲಿಸದೆ ತಟಸ್ಥವಾಗಿದ್ದರು. ಇದು ಅವರನ್ನು ವೈಯಕ್ತಿಕ ವಿಮರ್ಶೆ ಅಥವಾ ಟೀಕೆಗಳಿಂದ ವಿಮುಕ್ತರಾಗಲು ಸಹಾಯಕವಾದವು. ಹರ್ಡೆಕರ್ ಮಂಜಪ್ಪ[2] ಅಥವಾ ಹಿಂದುಳಿದ ಜನಾಂಗದ ಮೀಸಲಾತಿ ಚಳುವಳಿಯ ನಾಯಕ ಎಮ್. ಬಸವಯ್ಯನವರಂತೆ ನೇರವಾಗಿ ಬ್ರಾಹ್ಮಣರನ್ನು ತೆಗಳುವ ಯಾವುದೇ ಸಾಹಸಕ್ಕೆ ಅವರು ಕೈ ಹಾಕಲಿಲ್ಲ. ಅವರು ತಮ್ಮ ವಿಚಾರಗಳಲ್ಲಿ ತಟಸ್ಥ ನೀತಿಯನ್ನು ಅನುಸರಿಸಿದರು.

ಬಹುಜನರು ಲಿಂಗಾಯತ ಧರ್ಮವು ಬ್ರಾಹ್ಮಣ ವಿರೋಧಿ ಧರ್ಮವೆಂದು ತಿಳಿಯುವುದುಂಟು. ಇದು ತೀರ ತಪ್ಪಾದದ್ದೆಂದು ನನಗೆ ತೋರುತ್ತದೆ. ಲಿಂಗಾಯತ ಮತ ತತ್ವಗಳನ್ನರಿಯದ ಪಾಶ್ಚಿಮಾತ್ಯ ಪಂಡಿತರು ಈ ತಪ್ಪು ತಿಳುವಳಿಕೆಯನ್ನು ಗೊಂದಲ ಹುಟ್ಟಿಸಿದರು. ಅದರಂತೆಯೇ ಲಿಂಗಾಯತ ಧರ್ಮವನ್ನರಿಯದ ಬ್ರಾಹ್ಮಣರೂ ಲಿಂಗಾಯತರೂ ಹಾಗೆಯೇ ತಿಳಿಯುತ್ತ ಬಂದರು. ಆದರೆ ಆ ಗ್ರಂಥದಲ್ಲಿ ನಾನು ಲಿಂಗಾಯತ ಮತ ತತ್ವಗಳನ್ನು ಸವಿಸ್ತಾರವಾಗಿ ನಿರೂಪಿಸಿದ್ದು ಅವುಗಳಲ್ಲಿ ಎಲ್ಲಿಯೂ ಬ್ರಾಹ್ಮಣ ದ್ವೇಷವು ಕಂಡು ಬರುವುದಿಲ್ಲ. ಅದರಂತೆಯೇ ಜೈನ ಮೊದಲಾದ ಬೇರೆ ಯಾವ ಧರ್ಮದವರ ದ್ವೇಷವು ಇಲ್ಲ. ವಚನಕಾರರು ಜಾತಿ ವಿಷಯದಲ್ಲಿ ಬಹು ಉಚ್ಛಭಾವವುಳ್ಳವರಿರುತ್ತಾರೆ. ಅವರು ಯಾರನ್ನು ದ್ವೇಷ ಮಾಡುವವರಲ್ಲ (ಹಳಕಟ್ಟಿ. ೧೯೨೩: ೧೫-೧೬).

ಈ ವಾಕ್ಯದಲ್ಲಿ ಎರಡು ಅಂಶಗಳು ಸ್ಪಷ್ಟವಾಗಿ ಕಾಣುತ್ತವೆ. ಮೊದಲನೆಯದು ಲಿಂಗಾಯತ ಧರ್ಮ ಮತ್ತು ಸಾಹಿತ್ಯದ ಬಗ್ಗೆ ಪಾಶ್ಚಿಮಾತ್ಯ ಹಾಗು ಬ್ರಾಹ್ಮಣರ ಅಭಿಪ್ರಾಯಗಳನ್ನು ಅನುಮಾನಿಸುವ ಅಂಶ. ಲಿಂಗಾಯತ ಪುರಾಣ ಮತ್ತು ಕಾವ್ಯಗಳ ಕಡೆಗೆ ಇವರು ಹೆಚ್ಚು ಗಮನ ಹರಿಸಿದುದರಿಂದ ವಚನಗಳಲ್ಲಿ ಕಾಣಸಿಗುವ ಜಾತ್ಯಾತೀತ ಲಿಂಗಾಯತ ಧರ್ಮದ ಬಗ್ಗೆ ಅವರು ದಿವ್ಯ ಮೌನವನ್ನು ತೋರಿದರೆಂದು ಹಳಕಟ್ಟಿಯವರ ವಾದವಾಗಿತ್ತು. ಎರಡನೆಯದು, ಇತರ ಸಾಮಾಜಿಕ ಪಂಗಡದವರ ಬಗ್ಗೆ ಇರುವ ಸಹಣಿಯ ನಿಲುವು. ತಮ್ಮ ವಚನ ಕಾರ್ಯಕ್ಕೆ ಸಾರ್ವಜನಿಕ ಒಪ್ಪಿಗೆ ಮತ್ತು ಸ್ವೀಕಾರವನ್ನು ಸಾಧಿಸುವ ಸಲುವಾಗಿ ಈ ತರಹದ ನಿಲುವು ಅವಶ್ಯವಾಗಿತ್ತು. ವೈವಿಧ್ಯಮಯ ಸಾರ್ವಜನಿಕ ವಲಯದ ಬಗ್ಗೆ ಸ್ಪಷ್ಟ ಅರಿವಿದ್ದ ಹಳಕಟ್ಟಿಯವರಿಗೆ ಯಾರೊಬ್ಬರ ದ್ವೇಷವನ್ನು ಗಳಿಸಿಕೊಳ್ಳಲು ಇಷ್ಟವಿರಲಿಲ್ಲ. ಏಕೆಂದರೆ ಇದು ನಮ್ಮ ವಚನ ಅಧ್ಯಯನಕ್ಕೆ/ಪ್ರಸರಣಕ್ಕೆ ಧಕ್ಕೆ ಬರಬಹುದೆಂದು ಅವರು ನಂಬಿದ್ದರು.

ಭಾಗ

ಭಕ್ತಿ ಮತ್ತು ಸ್ವಅರಿವು

ವಚನಗಳಿಗೆ ಮತ್ತು ಅವುಗಳ ಷಟ್‌ಸ್ಥಲ ತತ್ವಗಳಿಗೆ ನೈತಿಕ ಮೌಲ್ಯಗಳನ್ನು ಜೋಡಿಸುವಲ್ಲಿ ಹಳಕಟ್ಟಿಯವರು ಸ್ಥಿರತೆಯನ್ನು ಹೊಂದಿರಲಿಲ್ಲ. ಪರಿಣಾಮವಾಗಿ, ನೈತಿಕ ಮೌಲ್ಯಗಳು ಪದೇ ಪದೇ ಬದಲಾವಣೆಗೊಳಪಡುತ್ತಿದ್ದವು. ಅದಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಗುರುತಿಸಬಹುದು: ಅ) ಸಮಕಾಲೀನ ನೈತಿಕ ಆಧಾರದ ಮೇಲೆ ಸರಿಹೊಂದುವಂತೆ ವಚನಗಳನ್ನು ಹೊಂದಿಸುವುದು, ಆ) ನೈತಿಕ ಆಧಾರದ ಮೇಲೆ ಭಕ್ತಿಯ ಹೊಸ ಮಾರ್ಗವನ್ನು ರೂಪಿಸುವುದು ಮತ್ತು ಇ) ವಿವಿಧ ಓದುಗ ವರ್ಗಕ್ಕಾಗಿ, ಅಂದರೆ ದೊಡ್ಡವರು, ಸಣ್ಣ ಮಕ್ಕಳು, ಹೆಂಗಸರಿಗಾಗಿ, ವಚನಗಳನ್ನು ಅದಷ್ಟು ಸರಳೀಕರಿಸುವುದು. ಉದಾಹರಣೆಗೆ ೧೯೨೭ರಲ್ಲಿ ನೈತಿಕ ಮತ್ತು ಭಕ್ತಿಯ ವಚನಗಳು ಎಂಬ ಮತ್ತೊಂದು ಸಂಕಲನವನ್ನು ಹಳಕಟ್ಟಿಯವರು ಪ್ರಕಟಿಸಿದರು. ಇದರಲ್ಲಿ ಭಕ್ತಿ ಮತ್ತು ನೈತಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದರು. ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕ್ಕೊಂಡು, ಉದ್ದೇಶಕ್ಕನುಗುಣವಾಗಿ ಕೇವಲ “ಮುಖ್ಯವಾದ ವಚನಗಳನ್ನು” (ಹಳಕಟ್ಟಿ, ೧೯೫೧ (೧೯೮೩): ೩೩) ಮಾತ್ರ ಆಯ್ಕೆ ಮಾಡಿದರು. ಕ್ಲಿಷ್ಟತೆಯನ್ನು ಹೋಗಲಾಡಿಸಲು ಸಂಕಲನದಲ್ಲಿ ಎಲ್ಲಿಯೂ ಷಟ್‌ಸ್ಥಲಗಳನ್ನು ಪ್ರಸ್ಥಾಪಿಸಿಲ್ಲ. ಷಟ್‌ಸ್ಥಲಗಳು ಮತ್ತು ನೈತಿಕ ಮೌಲ್ಯಗಳನ್ನು ಬೆಸೆಯುವಲ್ಲಿ ಹಳಕಟ್ಟಿಯವರು ಯಾಕೆ ಸ್ಥಿರತೆಯನ್ನು ಹೊಂದಿರಲಿಲ್ಲ? ನಿಜವಾದ ಭಕ್ತಿಗೆ ಆಧಾರವಾಗಿ ನೈತಿಕ ಮೌಲ್ಯಗಳನ್ನು ಪ್ರಮಾಣೀಕರಿಸುವ ಅವಶ್ಯಕತೆ ಏನಿತ್ತು? ಈ ಪ್ರಶ್ನೆಗಳಿಗೆ ಉತ್ತರವನ್ನು ಮೇಲೆ ಚರ್ಚಿಸಿದ ಮೂರು ಕಾರಣಗಳಿಂದ ವಿವರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಆಗಿನ ಸಾಮಾಜಿಕ-ಧಾರ್ಮಿಕ ಸಂದರ್ಭಗಳನ್ನು ಮತ್ತಷ್ಟು ಓರೆಗೆ ಹಚ್ಚಿ, ರಾಮಕೃಷ್ಣ ಮಿಶನ್‌ರ ಆಧ್ಯಾತ್ಮಿಕ ಭಕ್ತಿಯ ಜೊತೆಗೆ ಹಳಕಟ್ಟಿಯವರು ಯಾವ ಅನುಸಂಧಾನವನ್ನು ನಡೆಸಿದರು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಹಿಂದು ಧರ್ಮದ ಇತರ ತಾತ್ವಿಕ ಪರಂಪರೆಗಳಂತೆ, ಈ ಕಾಲದ  ಲಿಂಗಾಯತ ಧರ್ಮದಲ್ಲಿ ಭಕ್ತಿಯ ಪರಿಕಲ್ಪನೆ ಬಹಳ ಮುಖ್ಯ ಸ್ಥಾನವನ್ನು ಪಡೆದಿತ್ತು. ದೈವದ ಅನುಭವಕ್ಕಾಗಿ ಇರುವ ಆರು+ ಸ್ಥಲಗಳಲ್ಲಿ ಭಕ್ತಿಯು ಬಹುಮುಖ್ಯವಾದ ಸ್ಥಲ. ಪುರಾತನ ಕಾಲದಿಂದಲೂ ಭಕ್ತಿಯ ಮೇಲ್ಮೆಯನ್ನು ಲಿಂಗಾಯತ ಧರ್ಮವು ಎತ್ತಿ ಹಿಡಿದಿದೆ ಎಂಬ ಹೆಮ್ಮೆ ಲಿಂಗಾಯತರನ್ನು. ಭಕ್ತಿಯ ಮಹಿಮೆಯನ್ನು ಪುರಾತನ ಪುರಾಣಗಳು, ಗ್ರಂಥಗಳು ಮತ್ತು ತತ್ವ ಜ್ಞಾನದ ಆಧಾರದಿಂದ ಪ್ರದರ್ಶಿಸುವ ತಮ್ಮ ಪರಂಪರೆಯ ಬಗ್ಗೆ ಅವರು ಬಹು ಉತ್ಸಾಹದಿಂದ ಗರ್ವ ಪಡುತ್ತಾರೆ. ಆದರೆ ಇವು ಸಂಸ್ಕೃತ ಮತ್ತು ಪುರಾತನ ಬಹು ಉತ್ಸಾಹದಿಂದ ಗರ್ವ ಪಡುತ್ತಾರೆ. ಆದರೆ ಇವು ಸಂಸ್ಕೃತ ಮತ್ತು ಪುರಾತನ ಕನ್ನಡದಲ್ಲಿದ್ದರಿಂದ ಅವನ್ನು ಕೆಲವೇ ಕೆಲವು ಪಂಡಿತರಿಗೆ ಮಾತ್ರ ಅರ್ಥವಾಗುತ್ತಿದ್ದವು. ಸಾಮಾನ್ಯ ಜನರಿಗೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಪಾಂಡಿತ್ಯವಿರಲಿಲ್ಲ. ಮಿಗಿಲಾಗಿ ಸಾಂಸ್ಥಿಕ ವ್ಯವಸ್ಥೆ (ಪ್ರಮುಖವಾಗಿ ಮಠದ ಪರಂಪರೆ) ಮತ್ತು ಲಿಂಗಾಯತ ಗಣ್ಯರು ಸಾಮಾನ್ಯ ಜನರ ಏಕ ಮಾತ್ರ ಪ್ರತಿನಿಧಿಗಳು ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು, ಭಕ್ತಿಯ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಸ್ವಯಂ ಇವರೇ ಹೊತ್ತಿದ್ದರಿಂದ ಸಾಮಾನ್ಯ ಜನರು ತಮ್ಮ ಸಾಹಿತ್ಯ ಪರಂಪರೆಗಳ ಬಗ್ಗೆ ಗಂಭೀರತೆಯನ್ನು ಹೊಂದಿರಲಿಲ್ಲ. ಇವರಿಗೆ ಸಹಕಾರಿಯಾಗಲು ಗುರು-ಲಿಂಗ-ಜಂಗಮದ ತಾತ್ವಿಕ ಅಡಿಪಾಯವು ಸಹಾಯಕವಾಗಿತ್ತು. ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಗುರು-ಲಿಂಗ-ಜಂಗಮವನ್ನು ಲಿಂಗಾಯತರು ದೈನಂದಿನ ಜೀವನದಲ್ಲಿ ಯಾವ ಅರ್ಥದಲ್ಲಿ ಆಚರಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಹಳಕಟ್ಟಿಯವರ ವಚನ ಸಂಕಲನಗಳು ಈ ಅಂಶಗಳನ್ನು ತಮ್ಮದೇ ಆದ ಚೌಕಟ್ಟಿನಲ್ಲಿ ಸ್ಪಂದಿಸಿ, ಮರು-ರೂಪಿಸಿವೆ.

ಗುರುಲಿಂಗಜಂಗಮವೇಕಯ್ಯಾ?

ಗುರು-ಲಿಂಗ-ಜಂಗಮ ಅಷ್ಟಾವರಣದ ಮೂರು ಪ್ರಮುಖ ಅಂಶಗಳಾಗಿವೆ. ಲಿಂಗಾಯತರ ನೈತಿಕ ನಿಯಮಾವಳಿ ಮತ್ತು ನಡುವಳಿಕೆಯನ್ನು ತಿಳಿದುಕೊಳ್ಳಲು ಅಷ್ಟಾವರಣಗಳು ಅವಶ್ಯಕ. ತಲೆತಲಾಂತರದಿಂದ ಸಾಗಿ ಬಂದರೂ ಇವು ಬದಲಾಗದೆ ಉಳಿದಿಲ್ಲ? ಗುರು-ಜಂಗಮದ ತತ್ವ ಮತ್ತು ಉಪದೇಶಗಳು ೨೦ನೇ ಶತಮಾನದ ಆದಿಯಲ್ಲಿ ಸಾಂಸ್ಥಿಕ ರೂಪ ಪಡೆದುಕೊಳ್ಳುವದರ ಮೂಲಕ ಎರಡು ಧಾರ್ಮೀಕ ಪಂಥಗಳಾಗಿ ಮಾರ್ಪಾಡಿದವು. ಉದ್ದೇಶ ಮತ್ತು ಗುರಿಯಲ್ಲಿ ಭಿನ್ನತೆಯನ್ನು ತೋರಿಸಿದ ಈ ಎರಡು ಪಂಥಗಳು ಕ್ರಮೇಣ ಸಾಂಸ್ಥಿಕ ಅಂಗಗಳಾಗಿ (ಗುರುಸ್ಥಲ – ಜಂಗಮಸ್ಥಲದ ಮಠ ಪರಂಪರೆಗಳು) ಮಾರ್ಪಾಟಾಗಿದ್ದು ಎಲ್ಲರಿಗೂ ಗೊತ್ತಿರುವ ಅಂಶ. ಈ ಭಿನ್ನತೆಗಳು ಲಿಂಗಾಯತ ಧರ್ಮದ ಮೂಲ ಉದ್ದೇಶ, ಪಾರಂಪರಿಕ ಆಚಾರ ಮತ್ತು ಅಧಿಕಾರದ ವಿಷಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡವು. ಗುರು-ಜಂಗಮ ಮಠಗಳು ತಮ್ಮ ಗುರಿ, ಉದ್ದೇಶ ಮತ್ತು ಅಧಿಕಾರವನ್ನು ಪ್ರಚಾರ ಗೊಳಿಸುವದಕ್ಕೋಸ್ಕರ ತಮ್ಮದೇ ಆದ ಪೀಠ ಪರಂಪರೆಯನ್ನು ಬೆಳೆಸಿದವು. ಇವುಗಳನ್ನು ಸಾಮಾನ್ಯವಾಗಿ ನಾವು ಗುರು-ಸ್ಥಲ ಮತ್ತು ವಿರಕ್ತ ಮಠಗಳೆಂದು ಗುರುತಿಸುತ್ತೇವೆ. ಈ ಎರಡು ಮಠ ಸಂಪ್ರದಾಯಗಳ ನಡುವೆ ಕಾಲ ಕಾಲಕ್ಕೆ ಸಂಘರ್ಷಗಳು ಉಂಟಾಗುತ್ತಿದ್ದ ಹಲವು ಉದಾಹರಣೆಗಳಿವೆ. ಈ ಸಂಘರ್ಷಗಳು ಸಾಂಪ್ರದಾಯಿಕ ಅಧಿಕಾರ, ಆಚಾರ- ವಿಚಾರಗಳಿಗೆ ಸಂಬಂಧಿಸಿದವು. ಕಾಲ ಕ್ರಮೇಣ ಈ ಮಠ ಸಂಪ್ರದಾಯಗಳು ಆರ್ಥಿಕ ಮತ್ತು ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿ ಮಾರ್ಪಾಡಾದವು. “ಅನೇಕ ಗುರುಗಳು ಜಮೀನ್ದಾರನಾಗಿ ಮತ್ತು ಹಣ ಸಾಲ ನೀಡುವವರಾಗಿ” (ಶೌಟೆನ್, ೧೯೯೧: ೧೩೪)ದ್ದರಿಂದ ಅವುಗಳ ನಡುವೆ ಸ್ಪರ್ಧಾತ್ಮಕ ವಾತಾವರಣ ಉದ್ಭವವಾಯಿತು. ೧೯೨೦-೨೨ರ ನಡುವಿನ ಮೈಸೂರ್ ಸ್ಟಾರ್ ಪತ್ರಿಕೆಯನ್ನು ತಿರುವಿ ಹಾಕಿದರೆ ಆಗಿನ ಕಾಲದ ಲಿಂಗಾಯತ ಸಮಾಜದ ಬಗ್ಗೆ ಸಾಕಷ್ಟು ವಿಷಯಗಳು ದೊರೆಯುತ್ತವೆ. ಲಿಂಗಾಯತ ಮಠಗಳು ಮತ್ತು ಅವುಗಳ ಹಿಂಬಾಲಕರ ನಡುವಿನ ಜಗಳಗಳು, ಜಾತಿ ವೈಷಮ್ಯ, ಸ್ವಾರ್ಥ, ಸಂಕುಚಿತತೆ, ದ್ವೇಷ ಮತ್ತು ಕಾಲೆಳೆಯುವ ಪ್ರವೃತ್ತಿಯನ್ನು ಈ ಪತ್ರಿಕೆಯಲ್ಲಿನ ಲೇಖನಗಳು ಪ್ರಬಲವಾಗಿ ಖಂಡಿಸುತ್ತವೆ. ಲಿಂಗಾಯತ ಸಮಾಜವನ್ನು ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೊಳಿಸುವ ಬದಲು ಈ ಮಠಗಳು ಮೂಢನಂಬಿಕೆ, ಸ್ವಾರ್ಥ ಮತ್ತು ಅಂಧ ಆಚಾರ-ವಿಚಾರಗಳನ್ನು ಬೆಳೆಸುತ್ತಿರುವದನ್ನು ಬಲವಾಗಿ ಖಂಡಿಸಿವೆ.

ಈ ಹಿನ್ನೆಲೆಯಲ್ಲಿ ಹಳಕಟ್ಟಿಯವರು  ವಚನಗಳ ಬಗ್ಗೆ ನಿರೂಪಿಸಿದ ಭಿನ್ನ, ಭಿನ್ನ ಅರ್ಥ ಮತ್ತು ವ್ಯಾಖ್ಯಾನಗಳನ್ನು ವಿಶ್ಲೇಷಿಸಬೇಕಾಗಿದೆ. ಪ್ರಾಯಶಃ ಮೇಲಿನ ಸನ್ನಿವೇಶವನ್ನು ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಜ್ಞಾಪಿಸಿಕೊಳ್ಳುತ್ತಾರೆ.

ಬೇರೊಂದು ಪಂಗಡದವು ವೀರಶೈವರಲ್ಲಿ ಚಾತುವರ್ಣಗಳಿವೆ ಎಂದು ಭಾವಿಸಿ ಬ್ರಾಹ್ಮಣ ಪದ್ಧತಿಗಳನ್ನು ಸಮಾಜದಲ್ಲಿ ಉಂಟು ಮಾಡಬೇಕೆಂಬ ಧ್ಯೇಯವುಳ್ಳವರಾಗಿದ್ದರು. ಅವರು ಉಪನಯನವನ್ನು ಮಾಡುವುದರ ಬದಲು ಎಲ್ಲರೂ ದೀಕ್ಷಾವಂತರಾಗಬೇಕು, ಶಿಖಾಯಜ್ಞೋಪವೀತಗಳನ್ನು ಎಲ್ಲರೂ ಧರಿಸಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದರು. ಇವರಿಗೆ ಹಿಂದುಗಡೆ  ಪಂಚಚಾರ್ಯ ಪಂಗಡದವರೆಂಬ ಹೆಸರು ಉಂಟಾಯಿತು. ಇವರಿಗೆ ಪ್ರತಿಸ್ಪರ್ಧಿಯಾಗಿ ವಿರಕ್ತಾಶ್ರಮಿಗಳು ಆಚರಿಸುತ್ತಾ ಇದ್ದರು. ಈ ಉಭಯತರ ಕಲಹಗಳಲ್ಲಿ ಕೆಲವು ಗ್ರಾಮಗಳು ವಿರಕ್ತರ ಪಕ್ಷವನ್ನೂ ಬೇರೆ ಕೆಲವು ಗ್ರಾಮಗಳು ಆಚಾರ್ಯ ಪಕ್ಷವನ್ನೂ ವಹಿಸುವಂಥವಾಗಿದ್ದವು. ಇದರ ವ್ಯಾಜ್ಯಗಳು ಕೋರ್ಟು ಕಚೇರಿಗಳಿಗೂ ಸಹ ಹೋದದ್ದು ಕಂಡುಬರುತ್ತದೆ. (ಹಳಕಟ್ಟಿ. ೧೯೫೧ (೧೯೮೩): ೨೦-೨೧).

ಈ ಆಂತರಿಕ ಸಂಘರ್ಷಗಳು ಮತ್ತು ಷಟಸ್ಥಲಗಳ ‘ಮೂಲ’ ಅರ್ಥದಿಂದ ದೂವಾಗಿದ್ದ ಧಾರ್ಮಿಕ ಸಂದರ್ಭಗಳು ನಮ್ಮ ಚರ್ಚೆಗೆ ಅವಶ್ಯಕ. ಏಕೆಂದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಳಕಟ್ಟಿಯವರು ವಚನಗಳು ‘ಮೂಲ’ ಮತ್ತು ‘ನಿಜ’ವಾದ ಭಕ್ತಿಯ ಸ್ವರೂಪವನ್ನು ಮರು-ಕಳಿಸಿ, ಮೇಲಿನ ಸಂಘರ್ಷಗಳಿಗೆ ಋಣಾತ್ಮಕವಾಗಿ ಸ್ಪಂದಿಸುವ ಪ್ರಯತ್ನ ಮಾಡಿದರು.

ವಚನಗಳ ಬಗ್ಗೆ ಅಧ್ಯಯನಗಳು ಹೆಚ್ಚಾದಂತೆ ಈ ಎರಡು ಮಠ ಸಂಪ್ರದಾಯಗಳ ನಡುವಿನ ಕಂದರವು ಅಧಿಕವಾದಂತೆ ತೋರುತ್ತದೆ. ಗುರುಸ್ಥಲ ಮತ್ತು ವಿರಕ್ತ ಸಂಪ್ರದಾಯದ ಗಣ್ಯರ ಗಮನಕ್ಕೆ  ವಚನಗಳ ಮೊದಲ ಸಂಕಲನವು ಅಷ್ಟಾಗಿ ಹಿಡಿಸಲಿಲ್ಲ. ಜೊತೆಗೆ ಅವರು ಅಷ್ಟೊಂದು ಆಸಕ್ತಿಯ ತೋರಲಿಲ್ಲ. ಆದರೆ ಕಾಲಕ್ರಮೇಣ ವಚನಗಳ ಬಗ್ಗೆ ಹೆಚ್ಚಿನ ಜನರಲ್ಲಿ ಆಸಕ್ತಿ ಉಂಟಾಗಿ, ಇತರರಿಂದ ಅಧ್ಯಯನಗಳು ಆರಂಭವಾದಾಗ, ಈ ಎರಡು ಸಂಪ್ರದಾಯ ಮಠಸ್ಥರು ಮತ್ತು ಹಿಂಬಾಲಕರು ಎಚ್ಚೆತ್ತಿಕೊಂಡು ವಚನಗಳನ್ನು ಮತ್ತು ಅವುಗಳ ಪ್ರಸ್ತುತತೆಯನ್ನು ಪ್ರಶ್ನಿಸತೊಡಗಿದರು. ಸಂಪ್ರದಾಯಸ್ಥ ಹಿನ್ನಲೆಯನ್ನು ಹೊಂದಿದ ಈ ಎರಡು ಮಠಸ್ಥರ ಕೆಲವು ಗಣ್ಯರು ವಚನಗಳಲ್ಲಿ ಕಾಣುವ ದೋಷಗಳನ್ನು ಎತ್ತಿ ತೋರಿಸತೊಡಗಿದರು. ಇವು ಹಳಕಟ್ಟಿಯವರ ಪ್ರಯತ್ನಗಳಿಗೆ ವಿರುದ್ಧವಾಗಿದ್ದವು. ಸಂಪ್ರದಾಯಸ್ಥರಿಂದ ಮತ್ತು ವಿರೋಧಿಗಳಿಂದ ಉದ್ಭವವಾದ ಭಿನ್ನಾಭಿಪ್ರಾಯಗಳು ಹಳಕಟ್ಟಿಯವರ ವ್ಯಾಖ್ಯಾನ ಪರಿಯನ್ನು ಬದಲಾಯಿಸುತ್ತಾ ಹೋದವು. ಆದಾಗ್ಯೂ ಈ ವಿರೋಧಿಗಳ ನಡುವೆ ಹಳಕಟ್ಟಿಯವರು ತಮ್ಮ ವಚನ ಅಧ್ಯಯನವನ್ನು ಮುಂದುವರೆಸಿದರು. ಆಂತರಿಕ ಸಮಸ್ಯೆಗಳಿಂದ ಸ್ವಲ್ಪ ವಿಚಲಿತರಾದರೂ, ಹಳಕಟ್ಟಿಯವರು ತಮ್ಮ ವಚನ ಅಧ್ಯಯನವನ್ನು ಬಲು ದೃಢತೆಯಿಂದ ಸಮರ್ಥಿಸಿಕೊಳ್ಳುತ್ತಾರೆ.

ಈ ಕಾಲದಲ್ಲಿ ಅನೇಕ ಗ್ರಂಥಕರ್ತರು ಬಸವಾದಿ ಪ್ರಮಥರು ನೀತಿಯ ತತ್ವಗಳನ್ನು ಪರಿಪಾಲಿಸಿದೆ ದುಷ್ಟರೊಡನೆ ಸಹವಾಸ ಮಾಡುತ್ತಿದ್ದರೆಂಬ ಆರೋಪಗಳನ್ನು ಯಾವಾಗಲು ಮಾಡುತ್ತಿದ್ದರು. ಆದ್ದರಿಂದ ನಾನು ನನ್ನ ಸಂಗ್ರಹದಲ್ಲಿ ನೈತಿಕ ಮತ್ತು ಭಕ್ತಿಯ ವಚನಗಳಿಗೆ ಹೆಚ್ಚಿನ ಸ್ಥಾನವನ್ನು ಕೊಟ್ಟೆನು. (ಹಳಕಟ್ಟಿ, ೧೯೫೧ (೧೯೫೧): ೩೨-೩೩).

ವಚನಕಾರರು ಮತ್ತು ತಮ್ಮ ಅಧ್ಯಯನಗಳ ಬಗ್ಗೆ ಉಂಟಾದ ಅನೇಕ ಟೀಕೆ ಮತ್ತು ಆಪಾದನೆಗಳಿಗೆ ಪ್ರತ್ಯುತ್ತರವಾಗಿ ಹಳಕಟ್ಟಿಯವರು ಪದೇ, ಪದೇ ಸಮರ್ಥಿಸಿ ಕೊಳ್ಳುವುದನ್ನು ನಾವು ಕಾಣಬಹುದು. ಶಾಂತಪ್ಪ ಕುಬುಸದರವರ ಬಸವಾದಿನಿಜತತ್ವ ದರ್ಪಣ (೧೯೨೩ ಮತ್ತು ೧೯೩೨) ಮತ್ತು ಗುರುಸಿದ್ಧಶಾಸ್ತ್ರಿಯವರ ಬಸವಾದ್ವಾಂತ ದಿವಾಕರ (೧೯೨೩ ಮತ್ತು ೧೯೩೦) ಎಂಬ ಎರಡು ಕೃತಿಗಳ ಬಗ್ಗೆ ಎದ್ದ ವಿವಾದಗಳೇ ಹಳಕಟ್ಟಿಯವರ ಕಳವಳಕ್ಕೆ ಮತ್ತು ಅಸಮಾಧಾನಕ್ಕೆ ಸಾಕ್ಷಿ. ಕೃತಿಗಳು ಬಸವಣ್ಣ ಮತ್ತು ಇತರ ವಚನಕಾರರ ಮೂಲ, ಸತ್ಯ ಮತ್ತು ಇತಿಹಾಸದ ಬಗ್ಗೆ ನೂರಾರು ಪ್ರಶ್ನೆ, ಅನುಮಾನಗಳನ್ನು ಒಪಳಗೊಂಡಿದೆ.[3] ವಚನಕಾರರು ಪ್ರಗತಿಪರರು, ಅವರು ಯಾರನ್ನು ದ್ವೇಷಿಸದೆ ಎಲ್ಲರ ಒಳಿತನ್ನು ಆಶಿಸಿದರು ಎಂದು ಹಳಕಟ್ಟಿಯವರು ವಾದಿಸಿದರೆ ಅದಕ್ಕೆ ವಿರುದ್ಧವಾಗಿ ಅನೇಕ ಆರೋಪಗಳು ಹುಟ್ಟಿಕೊಂಡವು. ವಚನ ಸಾಹಿತ್ಯದ ವಿರೋಧಿಗಳು ವಚನಕಾರರನ್ನು ಹಿಂಸಾಪರರು, ಬ್ರಾಹ್ಮಣ, ಜೈನ ವಿರೋಧಿಗಳು ಎಂದು ಜರಿದರು. ಲಿಂಗಾಯತ ಪುರಾಣಗಳು, ದಂತಕಥೆಗಳು ಮತ್ತು ಇತರ ಕಾವ್ಯಗಳ ಆಧಾರದ ಮೇಲೆ ವಚನಕಾರರ ಪರ-ಮತ ದ್ವೇಷಗಳನ್ನು ತೋರಿಸುವ ಪ್ರಯತ್ನ ಮಾಡಿದರು. ಇಷ್ಟಾದಾಗ್ಯೂ, ಹಳಕಟ್ಟಿಯವರು ಎದೆಗುಂದಲಿಲ್ಲ. ಇದಕ್ಕೆ ಇದ್ದ ಒಂದೇ ಮದ್ದು ವಚನಕಾರರ ಉದಾತ್ತ ಭಕ್ತಿ ವಿಚಾರಧಾರೆಯನ್ನು ನೈತಿಕ ತಳಹದಿಯ ಮೇಲೆ ಬೆಳಕಿಗೆ ತರುವುದು ಮತ್ತು ಅದನ್ನು ಉನ್ನತೀಕರಿಸುವುದು.

ತಮ್ಮ ನೈತಿಕ…..ಸಂಕಲನದಲ್ಲಿ ಪ್ರಾಮಾಣಿಕ ಭಕ್ತಿ ಮತ್ತು ನಿಜವಾದ ನೈತಿಕ ನಡುವಳಿಕೆಯಿಂದ ದೈವದ ಸಾಕ್ಷಾತ್ಕಾರವನ್ನು ಹೊಂದುವ ಅಂಶವನ್ನು ಒತ್ತಿ ಹೇಳಲಾಗಿದೆ. ಮಿಂಡ, ಪುಂಡ ಜಂಗಮರೆಂದು ಜರಿಯಲ್ಪಟ್ಟ ವಚನಕಾರರನ್ನು ಇದರಲ್ಲಿ ಉನ್ನತೀಕರಿಸಲಾಗಿದೆ. ಈ ಸಂಕಲನದ ಮುನ್ನುಡಿಯಲ್ಲಿ ಹಳಕಟ್ಟಿಯವರು ಹೀಗೆ ಬರೆಯುತ್ತಾರೆ. “ಲಿಂಗಾಯತ ಶಿವ ಶರಣರು ನೈತಿಕ ಆಚರಣೆಗಳಿಗೆ ಮತ್ತು ಭಕ್ತಿಗೆ ಅತ್ಯುನ್ನತ ಸ್ಥಾನ ಕೊಟ್ಟಿದ್ದಾರೆ. ಭಕ್ತಿ ಮತ್ತು ನೀತಿಯ ತತ್ವಗಳ ಬಗ್ಗೆ ಅವರು ಉನ್ನತವಾದ ಮತ್ತು ಉಚ್ಛವಾದ ಭಾವನೆಯನ್ನು ಹೊಂದಿದ್ದಾರೆ’ (ಹಳಕಟ್ಟಿ, ೧೯೨೭: ೩). ಭಕ್ತಿಯನ್ನು ನೈತಿಕ ತಳಹದಿಯ ಮೇಲೆ ವ್ಯಾಖ್ಯಾನಿಸಲು ವಚನಗಳು ಸುಲಭವಾಗಿ ದಾರಿ ಮಾಡಿಕೊಡುತ್ತೇವೆ. ಕುರುಡು ನಂಬಿಕೆ ಮತ್ತು ಆಡಂಬರಗಳಿಂದ ಕೂಡಿದ ಭಕ್ತಿ ಅರ್ಥ ಹೀನ. ಯಾರ ಪುರೋಹಿತರ ಮಧ್ಯಸ್ಥಿಕೆ ಇಲ್ಲದೆ ನಿಜವಾದ ಭಕ್ತಿಯ ಆಸರೆಯಿಂದ ದೇವರನ್ನು ಕಾಣುವ ಅತ್ಯುನ್ನತ ಮಾರ್ಗ ಇದೊಂದೆ. ಭಕ್ತಿಯ ಅಂಶಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟದ್ದು ಹೊಸದಾಗಿರಲಿಲ್ಲ. ಯಾವ ಆರಂಭ ಆಚರಣೆಗಳಿಲ್ಲದ ಅಥವಾ ಪುರೋಹಿತಶಾಹಿಯಿಂದ ಮುಕ್ತವಾದ ಭಕ್ತಿಯನ್ನು ಮರು-ವ್ಯಾಖ್ಯಾನಿಸಿ, ಅದರ ಮಹತ್ವವನ್ನು ಸಾರುವ ಪ್ರಯತ್ನ ಇದಾಗಿತ್ತು. ಏಕ ಮನಸ್ಸಿನ, ನಿರಂತರವಾದ ಯಾವುದೇ ಬಾಹ್ಯ ಆಡಂಬರವಿಲ್ಲದ ಮತ್ತು ನಿಧಾನವಾಗಿ ಅತೀವ ಪ್ರೇಮದ ಕಡೆಗೆ ಪ್ರಯಾಣಿಸುವ ಪರಿ ಇದು. ಲಿಂಗಾಯತ ತತ್ವಗಳ ಸುತ್ತ ಇದ್ದ ಸಂಪ್ರದಾಯ ಮೌಲ್ಯಗಳ ವಿರೋಧಿಯಾಗಿ ಭಕ್ತಿಯ ಮಹತ್ವವನ್ನು ಪ್ರಮಾಣಿಕರಿಸಲಾಯಿತು. ದೇವರು ದೇವಾಲಯಗಳಲ್ಲಿ ಮಾತ್ರ ಇರುವುದಿಲ್ಲ. ಭಕ್ತನ ಹೃದಯದಲ್ಲಿ ಇದ್ದು, ಅದೇ ಅವನ ದೇವಾಲಯವಾಗಿರುತ್ತದೆ. ಆದ್ದರಿಂದ ನಮ್ಮ ದೇಹವನ್ನು ಪರಿಶುದ್ಧವಾಗಿಟ್ಟು ಕೊಳ್ಳಬೇಕಾಗುತ್ತದೆ.

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಯ್ಯ ಬಡವನಯ್ಯಾ?
ದೇಹವೇ ದೇಗುಲ

ಶಿರ ಹೊನ್ನ ಕಳಸವಯ್ಯ
ಕೂಡಲ ಸಂಗಮ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಈ ಮೇಲಿನ ವಚನದಲ್ಲಿ, ಬಸವಣ್ಣನು ಕೂಡಲ ಸಂಗಮನನ್ನು ಪ್ರಾರ್ಥಿಸುತ್ತಾ ದೇಹದ ಪ್ರಾಮುಖ್ಯತೆಯನ್ನು ತಿಳಿಸುತ್ತಾನೆ. ಜಗತ್ತಿನ ವಿಷಯಗಳಲ್ಲಿ ನಮ್ಮ ದೇಹವನ್ನು ತೊಡಗಿಸಿಕೊಂಡಿದ್ದರೂ, ದೈವದ ಸಾಕ್ಷಾತ್ಕಾರಕ್ಕಾಗಿ ಅದರ ಅವಶ್ಯಕತೆ ಇದೆ. ದೇಹವನ್ನು ಮಾಯವೆಂದು ನಿರ್ಲಕ್ಷಿಸದೆ, ನಮ್ಮಲ್ಲೆ ದೇವರನ್ನು ಕಾಣುವ ಮತ್ತು ಅನುಭವಿಸುವ ಒಂದು ಮಾರ್ಗ ಇದು. ಇದು ದೇಗುಲವನ್ನು (ಸ್ಥಾವರ), ಮಧ್ಯಸ್ಥರನ್ನು (ಪುರೋಹಿತರು ಅಥವಾ ಗುರು) ದೂರಮಾಡಿ ದೈವದ ಅನುಭವವನ್ನು ವೈಯಕ್ತಿಕಗೊಳಿಸುವ ಒಂದು ಸರಳ ಪದ್ಧತಿ. ಒಬ್ಬ ವ್ಯಕ್ತಿಯು ಪರಿಶುದ್ಧನಾಗಿ ಬಾಳಿ, ಉತ್ತಮ ಗುಣಗಳನ್ನು ಬೆಳೆಸಿಕೊಂಡು, ದೇವರ ಸಾನಿಧ್ಯ ಗಳಿಸುವದೇ ಉತ್ತಮ ಮಾರ್ಗ ಎಂದು ಇದರ ಅರ್ಥ. ಒಡಲು ಮತ್ತು ಅದರ ಮಹತ್ವದ ಅಂಶವನ್ನು ಇನ್ನೂ ಅನೇಕ ವಚನಗಳಲ್ಲಿ ಕಾಣಬಹುದು. ಜಗತ್ತಿನ ಉನ್ನತ ಮಾರ್ಗವನ್ನು ಈ ವಚನಗಳು ಸೂಚಿಸುತ್ತವೆ.

ಬಸವಣ್ಣನ ವಚನಗಳ ಮತ್ತೊಂದು ಸಂಕಲನ ಹೊಸ ಪದ್ಧತಿಯ ಬಸವೇಶ್ವರನ ವಚನಗಳು (೧೯೪೨) ಮೇಲೆ ಚರ್ಚಿಸಲ್ಪಟ್ಟ ವಿಷಯದ ಮುಂದುವರಿಕೆಯ ಭಾಗವಾಗಿದೆ. ‘ಸರಳ ಶೈಲಿ’ಯಲ್ಲಿನ ಮತ್ತೊಂದು ಸಂಕಲನವನ್ನು ಸಮರ್ಥಿಸುತ್ತಾ, ಹಳಕಟ್ಟಿಯವರು ವಚನಕಾರರ ದೃಷ್ಟಿಯಲ್ಲಿ ಶರೀರದ ಪರಿಕಲ್ಪನೆ ಯಾವ ಅರ್ಥವನ್ನು ಹೊಂದಿದೆಯೆಂದು ವಿವರಿಸುತ್ತಾರೆ. ಇದರ ಜೊತೆಗೆ ವಚನಗಳನ್ನು ಷಟ್‌ಸ್ಥಲಗನುಗುಣವಾಗಿ ಯಾಕೆ ಹೊಂದಿಸಲಾಗಿದೆ ಎಂಬ ವಿವರಗಳಿವೆ.[4] ಶರೀರದ ಪಂಚೇಂದ್ರಿಯಗಳನ್ನು ಪರಿಶುದ್ಧಿಗೊಳಿಸುವುದಕ್ಕೋಸ್ಕರ ವಚನಕಾರರು ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಇದು ಷಟ್‌ಸ್ಥಲಗಳ ನಿಯಮ ಮತ್ತು ತತ್ವಗಳಿಗನುಗುಣವಾಗಿ ಇರಬೇಕು. ನಮ್ಮ ಇಂದ್ರೀಯಗಳನ್ನು ಸುಧಾರಿಸುವುದೇ ಮೊದಲ (ಭಕ್ತಿ) ಸ್ಥಲ. ಈ ಸ್ಥಲಕ್ಕೆ ಸಂಬಂಧಿಸಿದ ವಚನಗಳು ವಿಶಾಲ ಮನೋವೃತ್ತಿ ಪ್ರಾಮಾಣಿಕ ಮತ್ತು ದೈವವನ್ನು ಒಲಿಸಿಕೊಳ್ಳುವುದಕ್ಕಾಗಿ ಸನ್ಮಾರ್ಗವನ್ನು ಬೋಧಿಸುತ್ತವೆ. ಈ ಗುಣಗಳನ್ನು ಕ್ರೋಡೀಕರಣ ಮಾಡುವುದೇ ಎರಡನೇ ಸ್ಥಲ. ಇದನ್ನು ಮಹೇಶ್ವರ ಸ್ಥಲ ಎಂದು ಕರೆಯುತ್ತಾರೆ. ಈಗ ವ್ಯಕ್ತಿಯ ಸ್ವ ತನ್ನ ಎಲ್ಲಾ ಸತ್ವ ಪರೀಕ್ಷೆಗಳನ್ನು ಮೀರಿ ಭಕ್ತಿ, ಧರ್ಮ, ನೈತಿಕತೆ ಮತ್ತು ನಡುವಳಿಕೆಯ ಅತ್ಯುನ್ನತ ಮಟ್ಟವನ್ನು ಪ್ರದರ್ಶಿಸಬೇಕು. ಮನೋವೇದಿಕೆಯನ್ನು ವಿಸ್ತರಿಸಿ ಜ್ಞಾನ ವೃದ್ಧಿಯನ್ನು ಸಾಧಿಸಿ, ಚೈತನ್ಯ ಮೂರ್ತಿಗಳಾಗಿ ಮಾರ್ಪಾಡುವುದೆ ಪ್ರಸಾದಿ ಮತ್ತು ಪ್ರಾಣಲಿಂಗಿ ಸ್ಥಲಗಳು. ಪ್ರಸಾದಿ ಸ್ಥಲದ ವಚನಗಳು ಇತರಿಗಾಗಿ ಬದುಕುತ್ತಾ, ಸ್ವಾರ್ಥವನ್ನು ತೊಡೆದು ಹಾಕುವುದನ್ನು ಬೋಧಿಸುತ್ತವೆ. ಮೂರನೇ ಸ್ಥಲದಲ್ಲಿರುವ ಈ ಗುಣಗಳನ್ನು ನಾವು ಕ್ರೋಡೀಕರಿಸಿ ಬಲವಂತವನ್ನಾಗಿಸಬೇಕಾಗುತ್ತದೆ. ಇದನ್ನು ಯಶಸ್ವಿಯಾಗಿ ಸಾಧಿಸುವುದೇ ಪ್ರಾಣಲಿಂಗಿ ಸ್ಥಲ. ಈ ಎರಡು ಸ್ಥಲಗಳ ತತ್ವ ಮತ್ತು ಆಚರಣೆಗಳು ಯೋಗದ ನಿಯಮದಡಿಯಲ್ಲಿದ್ದರೂ, ಅವು ಪಂಚಾಚಾರ[5] ಮತ್ತು ಅಷ್ಟಾವರಣಗಳ ಚೌಕಟ್ಟಿನೊಳಗೆ ಇರುತ್ತದೆ. ಈ ತತ್ವಗಳ ಜ್ಞಾನವು ಕೊನೆಯ ಎರಡು ಸ್ಥಲಗಳಾದ ಶರಣ ಮತ್ತು ಐಕ್ಯದ ಅಂತಿಮ ಘಟ್ಟ. ವ್ಯಕ್ತಿಯ ಚಟುವಟಿಕೆಗಳು ಶರೀರವನ್ನು ಪ್ರಭಾವಿಸುವದರಿಂದ ಹಾಗೂ ಪ್ರಭಾವಗಳು ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡುವದರಿಂದ ನಮ್ಮ ಚಟುವಟಿಕೆಗಳನ್ನು ಮತ್ತು ಶರೀರವನ್ನು ಶುದ್ಧವಾಗಿರಿಸಲು ನಾವು ಸ್ಥಿತಪ್ರಜ್ಞರಾಗಿರಬೇಕು. ಶರಣರು ಭಕ್ತಿ, ಕಾರ್ಯ ಮತ್ತು ಜ್ಞಾನದಿಂದ ಅಂತಿಮ ಘಟ್ಟ ತಲುಪಿದಾಗ ‘‘ಅವನು ಅಲಿಪ್ತ, ಸ್ವತಂತ್ರ ಮತ್ತು ಸ್ವಾವಲಂಬಿ” (ಹಳಕಟ್ಟಿ, ೧೯೪೨: ೪). ಈ ತತ್ವಗಳನ್ನು ಸಮರ್ಥಿಸುವ ಅನೇಕ ವಚನಗಳನ್ನು ಹಳಕಟ್ಟಿಯವರು ಉದಾಹರಣೆಯಾಗಿ ಕೊಡುತ್ತಾರೆ. ಕೊನೆಯ ‘ಐಕ್ಯ’ದ ಘಟ್ಟದಲ್ಲಿ ಸ್ವವು ಶೂನ್ಯವನ್ನು ಸಂಪಾದಿಸುತ್ತದೆ. ಇಲ್ಲಿ ನಮ್ಮ ಎಲ್ಲಾ ಕಾರ್ಯಗಳು ಸ್ಥಗಿತಗೊಂಡು, ಅಗಾಧ ಶಕ್ತಿಯ ಅರಿವಾಗುತ್ತದೆ. ಆದರೆ ಕೊನೆಯ ಸ್ಥಲವನ್ನು ಹಳಕಟ್ಟಿಯವರು ಎಚ್ಚರಿಕೆಯಿಂದ ಪ್ರತಿಪಾದಿಸುತ್ತಾರೆ. ಅದೇನೆಂದರೆ, ವಚನಕಾರರು ಶೂನ್ಯವನ್ನು (nothingenss) ಎಂದು ಬಳಸದೇ ನಮ್ಮಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಭಾವಿಸಿದರು.

ವಚನಗಳನ್ನು ಭಕ್ತಿಯ ದೃಷ್ಟಿಕೋನದಿಂದ ವ್ಯಾಖ್ಯಾನಿಸುವುದು ಮತ್ತೆರಡು ಉದ್ದೇಶಗಳು ಈಡೇರಿಸಿಕೊಳ್ಳುವದಕ್ಕಾಗಿ. ಮೊದಲನೆಯದು, ಪವಿತ್ರ ಭಾವನಾತ್ಮಕ ಭಕ್ತಿಯು, ಪ್ರೀತಿ ಮತ್ತು ಕರುಣೆಯ ಸಂಕೇತವಾಗಿದ್ದು, ಅದನ್ನು ಕ್ರಿಶ್ಚಿಯನ್ ಮತ್ತು ಮೊಹಮ್ದನ್ ನಂಬಿಕೆಗಳಿಗೆ ವಚನಗಳನ್ನು ಅಷ್ಟಾಗಿ ಹೋಲಿಸದಿದ್ದರೂ, ಹಳಕಟ್ಟಿಯವರಿಗೆ ಜಾತ್ಯಾತೀತ ಕ್ರಿಶ್ಚಿಯನ್ ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹಾಗಾಗಿ ವಚನಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಹೋಲಿಸಿ, ತೌಲನಿಕ ಅಧ್ಯಯನ ಮಾಡಿದ್ದೆ ಹೆಚ್ಚು. ವಚನಕಾರರ ಕೆಲವೊಂದು ನಂಬಿಕೆ, ಆಚಾರ-ವಿಚಾರಗಳು ಕ್ರಿಶ್ಚಿಯನ್ ಧರ್ಮಕ್ಕೆ ಬಹಳ ಸಮೀಪದಲ್ಲಿವೆ ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಿದ್ದರು. ಇದರ ಜೊತೆಗೆ ವಚನಕಾರರು ಪ್ರೊಟೆಸ್ಟಂಟ ಕ್ರಿಶ್ಚಿಯನ್ ಚಳುವಳಿಯ ನಾಲ್ಕು ಶತಕಗಳ ಮೊದಲೇ ತಮ್ಮ ತತ್ವಗಳನ್ನು ಪ್ರತಿಪಾದಿಸಿದ್ದು ಅವರಿಗೆ ಬಹಳ ಸಂತೋಷದ ವಿಷಯವಾಗಿತ್ತು. ಎರಡನೇ ಅಂಶ ಪ್ರಾಪಂಚಿಕ ಜೀವನವನ್ನ ತ್ಯಜಿಸುವ ಮಾತೇ ಇಲ್ಲ. ಅತಿಯಾದ ಆಧ್ಯಾತ್ಮಕತೆಯ ಕಡೆಗೆ ವಾಲದ ಸ್ವ-ಔನ್ಯತ್ತೀಕರಣವನ್ನು ವಚನಕಾರರು ಪ್ರತಿಪಾದಿಸಿದರು. ಸ್ವದ ಸುಧಾರಣೆಯ ಜೊತೆಗೆ ಸಮಾಜದ ಉದ್ಧಾರವನ್ನು ಗಮನಿಸಿರುವುದು ವಚನಕಾರರು ಪ್ರಪಂಚದ ಒಳಿತಿಗಾಗಿ ಬಾಳಿದರೆಂದು ತಿಳಿದು ಬರುತ್ತದೆ. ಈ ಎರಡೂ ಉದ್ದೇಶಗಳು (ಭಕ್ತಿ, ಸ್ವ/ಸಮಾಜದ ಉದ್ಧಾರ) ಪ್ರಾಯಶಃ ವಚನಕಾರರನ್ನು ರಾಮಕೃಷ್ಣ ಮಿಶನ್ನಿನ ಆಧ್ಯಾತ್ಮಿಕತೆಯಿಂದ ದೂರವಿರಿಸುವದಕ್ಕೆ ಕಾರಣವಿರಬಹುದು. ಆಧ್ಯಾತ್ಮಿಕತೆಯ ಮೂಲಕ ನಿಜವಾದ ಭಕ್ತಿಯನ್ನು ಪ್ರತಿಪಾದಿಸಿದ ರಾಮಕೃಷ್ಣ ಮಿಶನ್‌ನ ತತ್ವವನ್ನು ಹಳಕಟ್ಟಿಯವರು ಒಪ್ಪಿಕೊಂಡಿದ್ದರೂ ಸಮಾಜವನ್ನು ಕಡೆಗಣಿಸಿದುದು ಅವರಿಗೆ ಸರಿಬೀಳಲಿಲ್ಲ. ಗ್ರಾಂಥಿಕ ಮತ್ತು ಬಾಹ್ಯ ಕಾರ್ಯಗಳಿಗಿಂತ ಆಂತರಿಕ ಭಕ್ತಿಯೇ ಮೇಲೆಂದು ರಾಮಕೃಷ್ಣ ಮಿಶನ್ನರವರು ಪ್ರತಿಪದಿಸಿದರು. ವಚನಕಾರರನ್ನು ಸಮಾಜ-ಮುಖಿಯನ್ನಾಗಿ ಬಣ್ಣಿಸಿ, ಅವರು ಯಾವತ್ತೂ ಪ್ರಾಪಂಚಿಕ ವಿಷಯಗಳನ್ನು ತಿರಸ್ಕರಿಸಿದವರಲ್ಲ ಅಥವಾ ಸಮಾಜದಲ್ಲಿದ್ದುಕೊಂಡು ಅದರಿಂದ ದೂರ ಉಳಿದವರಲ್ಲ ಎಂದು ವಾದಿಸಿದರು. ಆದ್ದರಿಂದಲೇ ವಚನಗಳ ಮೊದಲ ಸಂಕಲನದಲ್ಲಿ ಆಧ್ಯಾತ್ಮಕತೆಯ ಬಗ್ಗೆ ಎಳ್ಳಷ್ಟು ಮಾತಿಲ್ಲ. ಅದರ ಜಾಗದಲ್ಲಿ ಶಿವಾನುಭವವನ್ನು ಉನ್ನತೀಕರಿಸಲಾಗಿದೆ. ರಾಮಕೃಷ್ಣ ಮಿಶನ್ ಸಮಾಜ-ಮಿಮುಖಿಯಾಗಿದ್ದು, ಸಮಾಜ ಸುಧಾರಣೆಯನ್ನು ಪ್ರಯತ್ನಿಸದೇ ಇರುವುದು ಅವರ ಆದರ್ಶಗಳನ್ನು ಹಳಕಟ್ಟಿಯವರು ಒಪ್ಪಿಕೊಳ್ಳದೆ ಇರುವದಕ್ಕೆ ಕಾರಣ. ಹೀಗಾಗಿ ತಮ್ಮ ಸಂಕಲನದಲ್ಲಿ ವಚನಕಾರರನ್ನು ಆಧ್ಯಾತ್ಮಿಕ ರೂವಾರಿಗಳಂತೆ ಬಿಂಬಿಸದೆ ಧಾರ್ಮಿಕ ಸುಧಾರಕರು ಮತ್ತು ಶಿವಾನುಭವಿಗಳಂತೆ ಬಣ್ಣಿಸುತ್ತಾರೆ.

[1] ವೇದಾಂತದ ಬಗ್ಗೆ ನೋಡಿ ಕೃಷ್ಣ ಪ್ರಕಾಶ್ ಗುಪ್ತ (೧೯೭೪) ಮತ್ತು ವಿಲಿಯಮ್ ಹಾಲ್ಬ್ ಫಾಸ್ (೧೯೯೬).

[2] ಹರ್ಡೆಕರ್ ಮಂಜಪ್ಪನವರು ಹಿಂದುಳಿದ ವರ್ಗಗಳ ಚಳುವಳಿಯಲ್ಲಿ ಬೆಂಬಲಿಸದಿದ್ದರೂ, ಬ್ರಾಹ್ಮಣದ ವರ್ಣ ವ್ಯವಸ್ಥೆಯ ಕಡು ವಿರೋಧಿಗಳಾಗಿದ್ದರು.

[3] ಈ ಎರಡು ಕೃತಿಗಳಲ್ಲಿ ಸಾಹಿತ್ಯ, ಚಾರಿತ್ರಿಕ ಹಾಗು ಮಾನವಶಾಸ್ತ್ರೀಯ ದಾಖಲೆಗಳು ಯಥೇಚ್ಛವಾಗಿ ಕಾಣುತ್ತವೆ. ಹಳಕಟ್ಟಿಯವರ ವಚನ ಅಧ್ಯಯನಗಳಿಗೆ ಪರ್ಯಾಯವಾಗಿ ಪಾಶ್ಚಾತ್ಯ ಮತ್ತು ಸ್ಥಳೀಯ ಕೃತಿಗಳನ್ನು ಬಳಸಿಕೊಂಡಿರುವುದು ಗಮನೀಯವಾಗಿದೆ. ಫ್ಲೀಟ್, ಗ್ಯಾರೆಟ್ ರ ಲೇಖನಗಳ ಜೊತೆಗೆ ಸ್ಥಳೀಯ ಕೃತಿಗಳಾದ ಬಸವಪುರಾಣ, ಪ್ರಭುಲಿಂಗಲೀಲೆ, ಕಾಡಸಿದ್ದೇಶ್ವರ ವಚನ, ಸಿಂಗಿರಾಜ ಪುರಾಣ, ಚೆನ್ನಪುರಾಣ ಪುರಾಣ, ಇತ್ಯಾದಿಗಳನ್ನು ತಮ್ಮ ವಾದದ ಸಮರ್ಥನೆಗೆ ಬಳಸಲಾಗಿದೆ.

[4] ಈ ಸಂಕಲನದ ವಚನಗಳು ಅಂಗ ಮತ್ತು ಲಿಂಗದ ಸಾಮರಸ್ಯವನ್ನು ಗಳಿಸುವ ಮಾರ್ಗವನ್ನು ತಿಳಿಸುತ್ತವೆ. ನೈತಿಕ ಆಧಾರದ ಮೇಲೆ ಷಟ್‌ಸ್ಥಲಗಳನ್ನು ಪಾಲಿಸುವುದನ್ನು ಇವು ಪ್ರತಿಪಾದಿಸುತ್ತವೆ.

[5] ಪಂಚಾಚಾರಗಳು ಲಿಂಗಾಯತರ ನಡುವಳಿಕೆ ಮತ್ತು ಜೀವನ ಶೈಲಿಯನ್ನು ನಿಯಂತ್ರಿಸುವ ನಿಯಮಗಳು. ಶರಣರ ಆದರ್ಶಗಳನ್ನು ಪಾಲಿಸಲು ಅವು ದಾರಿದೀಪಗಳಾಗಿವೆ. ಈ ಆಚಾರಗಳು ಯಾವುವೆಂದರೆ: ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ.