ಭಾಗ

ವೈರುಧ್ಯಮಯ ಸಂಧಾನ : ಪ್ರತಿರೋಧವನ್ನು ಎದುರಿಸುತ್ತಾ

ಲಿಂಗಾಯತರಿಗೆ ಮತ್ತು ಸಾಮಾನ್ಯ ಜನರಿಗೆ ರೂಪಿಸಲ್ಪಟ್ಟ ವಚನ ವಾಙ್ಞಯವು ಆಂತರಿಕವಾಗಿ ವೈರುಧ್ಯಗಳನ್ನು ಹೊಂದಿತ್ತು. ಶರೀರ ಮತ್ತು ಷಟ್‌ಸ್ಥಲಗಳ ಬಗ್ಗೆ ಇರುವ ವಾದದಲ್ಲಿ ಈ ವೈರುಧ್ಯಗಳು ಎದ್ದು ಕಾಣುತ್ತವೆ. ಹಳಕಟ್ಟಿಯವರಿಗೆ ಇವುಗಳ ಬಗ್ಗೆ ಸಂಪೂರ್ಣವಾದ ಅರಿವಿಲ್ಲದಿದ್ದರೂ, ಅದರ ಬಗ್ಗೆ ಕಾಳಜಿ ವಹಿಸುವ ಸೂಕ್ಷ್ಮತೆ ಇತ್ತು. ಆದಾಗ್ಯೂ ಅವರಿಗೆ ವಚನಾಕಾರರ ಸಾಧನೆಯ ಬಗ್ಗೆ ಹೆಮ್ಮೆ ಇತ್ತು. ಈಗ ಅದು ಪಂಚಾಚಾರ ಮತ್ತು ಅಷ್ಟಾವರಣಗಳಿಗೆ ಸಂಬಂಧಿಸಿದ ಹೆಮ್ಮೆ. ವಚನಕಾರರು ಇವೆರಡರ ಪರಿಧಿಯೊಳಗೆ ನೈತಿಕ ಮತ್ತು ಬೋಧನಾತ್ಮಕ ಅಂಶಗಳನ್ನು ಸೇರಿಸಿರುವುದು ಅವರ ಉದಾತ್ತ ಮನೋಭಾವನೆಯನ್ನು ತೋರಿಸುತ್ತದೆ ಎಂದು ಹಳಕಟ್ಟಿಯವರು ನಂಬಿದರು. ವಚನಶಾಸ್ತ್ರ ಸಾರದ ಮೂರನೇ ಆವೃತ್ತಿಯಲ್ಲಿ (೧೯೨೯) ನೈತಿಕ ನಡುವಳಿಕೆಯ ಆಧಾರದ ಮೇಲೆ ಅಷ್ಟಾವರಣ ತತ್ವಗಳನ್ನು ಹೇಗೆ ಅನುಷ್ಟಾನ ಗೊಳಿಸಬೇಕೆಂದು ವಿವರಿಸಲಾಗಿದೆ. ಇಲ್ಲಿ ಎರಡು ಅಂಶಗಳು ಮುಖ್ಯ. ಒಂದನೆಯದು ನೈತಿಕ ವಿಚಾರಧಾರೆಯ ಚೌಕಟ್ಟಿನಲ್ಲಿ ಪಂಚಾಚಾರ ಮತ್ತು ಅಷ್ಟಾವರಣಗಳನ್ನು ಸೇರಿಸುವುದು. ಇದು ಎರಡನೇ ಅಂಶಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ: ಲಿಂಗಾಯತರಿಂದ ಗೌರವಿಸಲ್ಪಡುವ ಧಾರ್ಮಿಕ ನಂಬಿಕೆಗಳನ್ನು ನಿರ್ಲಕ್ಷಿಸದಂತೆ ಹಳಕಟ್ಟಿಯವರ ಮೇಲೆ ಉಂಟಾದ ಆಗೋಚರ ಹಾಗು ಅವ್ಯಕ್ತ ಒತ್ತಡ. ೧೯೪೨ರ ಬಸವಣ್ಣನ ವಚನಗಳ ಮತ್ತೊಂದು ಸಂಕಲನವು ಧಾರ್ಮಿಕ ಅಂಶಗಳನ್ನು ನೈತಿಕತೆಯ ತಳಹದಿಯ ಮೇಲೆ ಅರ್ಥೈಸುವ ಪ್ರಯತ್ನವನ್ನು ಸೂಚಿಸುತ್ತದೆ. ಇಲ್ಲಿ ಒಂದು ಅಂಶ ಸ್ಪಷ್ಟ. ಏನೆಂದರೆ ಅಷ್ಟಾವರಣ ಮತ್ತು ಪಂಚಾಚಾರ ತತ್ವಗಳನ್ನು ಮರು-ಮೌಲ್ಯಮಾಪನ ಮಾಡಿ, ಅವುಗಳಿಂದ ಮನುಜ ಕುಲಕ್ಕಾಗುವ ಒಳಿತನ್ನು ನಿರೂಪಿಸುವುದು. ಇಲ್ಲಿಯೂ ಸಹ ಮೂಲ ಮತ್ತು ನಿಜವಾದ ಅಷ್ಟಾವರಣ ತತ್ವಗಳ ಶೋಧನೆಯಿದೆ. ಅದಾಗ್ಯೂ ಈ ತತ್ವಗಳಿಗೆ ಸಂಬಂಧಿಸಿದ ದಿನನಿತ್ಯದ ಆಚರಣೆಗಳ ಹಳಕಟ್ಟಿಯವರು ಮೌನವಹಿಸಿದರು. ಅನೇಕ ವೇಳೆ ಅವರು, “ಪೂರ್ವ ನಿಶ್ಚಿತ ಸಮಾಜವನ್ನು ಹುಡುಕುತ್ತಾ, ಸಮಾಜದ ವಾಸ್ತವಿಕತೆಯಿಂದ ದೂರವಿದ್ದ ಆದರ್ಶವಾದಿ” (ಮಾರ್ಟಿನ್ ಫಕ್ಸ್, ೨೦೦೧: ೨೬೩) ಯಾಗಿ ಗೋಚರಿಸುತ್ತಾರೆ. ಈಗ ಅಷ್ಟಾವರಣದ ಆಧುನಿಕ ರೂಪದ ಬಗ್ಗೆ ಚರ್ಚಿಸೋಣ.

ಲಿಂಗಾಯತರ ತತ್ವ, ಆಚರಣೆ, ಸಾಮಾಜಿಕ ಮತ್ತು ಧಾರ್ಮಿಕ ಗುರುತಿಗೆ ವಿಶೇಷತೆಯನ್ನು ಕೊಡುವುದೇ ಈ ಅಷ್ಟಾವರಣಗಳು, ಹಣೆಯ ಮೇಲಿನ ವಿಭೂತಿ, ಕೊರಳ ಸುತ್ತ ರುದ್ರಾಕ್ಷಿ, ಓಂ ನಮಂ ಶಿವಾಯಃ ಮಂತ್ರ ಗುರುವಿನ ಪಾದೋದಕ ಪವಿತ್ರ ಜಲವನ್ನು ದೇವರಿಗೆ ಅರ್ಪಿಸುವ ಆಚರಣೆಗಳು ಲಿಂಗಾಯತರ ಧಾರ್ಮಿಕ ಗುರುತನ್ನು ಸೂಚಿಸುತ್ತವೆ. ಅವರು ತಮ್ಮ ದೇಹದ ಮೇಲೆ ಮೂಡಿಸಿಕೊಳ್ಳುವ ಚಿಹ್ನೆಗಳ ಪ್ರಾಮುಖ್ಯತೆಯು ಅಷ್ಟಾವರಣದ ಕ್ರಿಯಾ-ಸಂಸ್ಕರಣಗಳ ಮೇಲೆ ಅವಲಂಬಿತವಾಗಿದೆ. ದೈನಂದಿನ ಪೂಜಾವಿಧಿ, ದೀಕ್ಷೆ, ಮದುವೆ, ಜನ್ಮ ಹಾಗು ಮರಣದ ಕಾರ್ಯಕ್ರಮಗಳಿಗೆ ಅನುಗುಣವಾಗಿ ತಮ್ಮ ದೇಹದ ಮೇಲೆ ಮೂಡಿಸಿಕೊಳ್ಳುವ ಚಿಹ್ನೆಗಳ ವ್ಯಾವಹಾರಿಕ ಉಪಯುಕ್ತತೆಯನ್ನು ಇವು ನಿರೂಪಿಸುತ್ತವೆ. ವಸಾಹತುಶಾಹಿ ಕಾಲದಲ್ಲಿ ಬ್ರಾಹ್ಮಣರು ಲಿಂಗಾಯತರನ್ನು ಈ ದೈಹಿಕ ಚಿಹ್ಮೆಗಳಿಂದ ಸ್ವ-ಪ್ರತಿಮೆಯನ್ನು ಪ್ರಚೋಧಿಸವಲ್ಲಿ ಪಾತ್ರ ವಹಿಸಿದೆ. ೧೯೯೦ರಲ್ಲಿ ಸ್ಟೇಷನ್ ಮಾಸ್ಟರ್ ಪಾಲಳ್ಳಿ ರಂಗಣ್ಣ ಮತ್ತು ಪಿ.ಆರ್. ಕರಿಬಸವಶಾಸ್ತ್ರಿಯವರ ನಡುವೆ ನಡೆದ ವಾದಗಳು ಈ ಅಂಶವನ್ನು ಸ್ಪಷ್ಟ ಪಡಿಸುತ್ತವೆ. ಈ ಕಾಲದಲ್ಲಿ ಲಿಂಗಾಯತರು ಮಂಡಿಸಿದ ತಮ್ಮ ‘ಬ್ರಾಹ್ಮಣ’ರ ವಿರುದ್ಧ ಬ್ರಾಹ್ಮಣರು ಅಸಮಧಾನ ವ್ಯಕ್ತಪಡಿಸಿದರು. ರಂಗಣ್ಣನವರು ಲಿಂಗಾಯತರ ‘ಬ್ರಾಹ್ಮಣ’ವನ್ನು ಪ್ರಶ್ನಿಸಿ, ಲಿಂಗಾಯತರು ಯಾವತ್ತೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ ಎಂದು ವಾದಿಸಿದರು. ಅವರಲ್ಲಿ ಕೆಳ ಜಾತಿಯ ಜನರಿದ್ದು, ಅವರ ಕಸಬು ಕೀಳು. ಹಾಗಾಗಿ ಅವರಿಗೆ ಸ್ವಚ್ಚತೆ-ಮಲೀನತೆ ಸಿದ್ಧಾಂತದ ಬಗ್ಗೆ ಎಳ್ಳಷ್ಟೂ ಗೊತ್ತಿರುವುದಿಲ್ಲ. ಇದಕ್ಕೆ ಪ್ರತಿಯಾಗಿ ಪಿ.ಆರ್. ಕರಿಬಸವಶಾಸ್ತ್ರಿಗಳು ಬಲವಾದ ವಿರೋಧವನ್ನು ವ್ಯಕ್ತಪಡಿಸಿದರು. ಬ್ರಾಹ್ಮಣರ ಹಾಗೆ ಲಿಂಗಾಯತರಲ್ಲೂ ಸಹ ಆಂತರಿಕವಾಗಿ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ ಇರುವುದೆಂದು. ಈ ಆಂತರಿಕ ಸಾಮಾಜಿಕ ವ್ಯವಸ್ಥೆಯ ಬಗ್ಗೆ ರಂಗಣ್ಣನವರು ಅಜ್ಞಾನಿಗಳಾಗಿದ್ದಾರೆಂದು ಹಾಸ್ಯ ಮಾಡುತ್ತಾರೆ. ಈ ಸಂದರ್ಭದಲ್ಲಿ ಶಾಸ್ತ್ರಿಗಳು ವ್ಯಾವಹಾರಿಕವಾಗಿ ವರ್ತಿಸುತ್ತಾರೆ. ಕೆಳವರ್ಗದವರ ಸಾಮಾಜಿಕ ವರ್ಗವನ್ನು ಮನ್ನಿಸಿದರೂ, ಅವರಿಂದ ಭಿನ್ನತೆಯನ್ನು ಸ್ಥಾಪಿಸುವದಕ್ಕೋಸ್ಕರ ಲಿಂಗಾಯತರನ್ನು ಎರಡು ವರ್ಗಗಳನ್ನಾಗಿ ವರ್ತಿಸುತ್ತಾರೆ. ಕೆಳವರ್ಗದವರ ಸಾಮಾಜಿಕ ವರ್ಗವನ್ನು ಮನ್ನಿಸಿದರೂ, ಅವರಿಂದ ಭಿನ್ನತೆಯನ್ನು ಶುದ್ಧ ಶೈವರು ಮತ್ತು ವೀರಶೈವರೆಂದು ಗುರುತಿಸಿ, ಉಚ್ಚವರ್ಗದ ಲಿಂಗಾಯತರನ್ನು ಶುದ್ಧ ಶೈವರ ಗುಂಪಿಗೆ, ಕೆಳವರ್ಗದವರನ್ನು ವೀರಶೈವರ ಗುಂಪಿಗೆ ಸೇರಿಸುತ್ತಾರೆ. ಕೆಳವರ್ಗದವರ ದೈಹಿಕ ಚಿಹ್ನೆಗಳ ಆಧಾರದ ಮೇಲೆ ಅವರ ಧಾರ್ಮಿಕ ಆಚರಣೆ ಮತ್ತು ಅವರ ವೀರಶೈವತ್ವವನ್ನು ವ್ಯಾಖ್ಯಾನಿಸುತ್ತಾರೆ. ಉದಾಹರಣೆಗೆ, ಮೈಸೂರು ಸ್ಟಾರ್ ಕರೆಸ್ಪಾಂಡೆನ್ಸ್‌ನ ಒಂದು ಲೇಖನದಲ್ಲಿ (೧೮೮೨) ನೊಣಬ, ಗಾಣಿಗ, ದೋಭಿ ಮತ್ತು ಹಜಾಮರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವರು ಶುದ್ಧ ಶೈವರ ತರಹ ಹಣೆಗೆ ವಿಭೂತಿ ಹಾಕಿಕೊಂಡು, ಲಿಂಗವನ್ನು ಧರಿಸಿ, ರುದ್ರಾಕ್ಷಿಯನ್ನು ಕೊರಳಿಗೆ ಹಾಕಿಕೊಳ್ಳುವದನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಕೇರಳ ಸಂದರ್ಭದಲ್ಲಿ ಉದಯಕುಮಾರ್ ಎಂಬ ವಿದ್ವಾಂಸರು ವಿವರಿಸುವ ಹಾಗೆ ದೈಹಿಕ ಚಿಹ್ನೆಗಳು ಹಾಗು ಅವಕ್ಕೆ ಸಂಬಂಧಿಸಿದ ಆಚರಣೆಗಳು ಮೇಲ್ಮೈಯಲ್ಲಿ ಪ್ರದರ್ಶಿಸುವ ಅರ್ಥಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಂಪ್ರದಾಯಸ್ಥರಿಂದ ಆಚರಿಸಲ್ಪಡುವ ಮಲೀನತೆಯ ಕಠಿಣ ವ್ಯವಸ್ಥೆಯ ಉಲ್ಲಂಘನೆಯನ್ನು ಅವು ಸೂಚಿಸುತ್ತವೆ; ಮತ್ತೊಂದು ಅರ್ಥದಲ್ಲಿ ಅವು ಒಬ್ಬ ವ್ಯಕ್ತಿಯು ಮತ್ತೊಂದು ವ್ಯಕ್ತಿಗಿಂತ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಹೇಗೆ ಭಿನ್ನ ಎಂದು ಗುರುತಿಸಲು ಬೇಕಾಗುವ ಮಾನದಂಡವಾಗಿಯೂ ಇರುತ್ತದೆ. ಅಥವಾ ಈ ಚಿಹ್ನೆಗಳನ್ನು ಉಪಯೋಗಿಸುವದಕ್ಕೆ ಇರುವ ನಿರ್ಬಂಧ ಅಥವಾ ಅನುಮತಿ ಅಥವಾ ಚಿಹ್ನೆಗಳ ಮೇಲೆ ಇರುವ ಹಕ್ಕನ್ನು ತ್ಯಜಿಸುವ ಕ್ರಿಯೆಯನ್ನು ಸೂಚಿಸುತ್ತವೆ (ಉದಯಕುಮಾರ್, ೧೯೯೭: ೨೪೮). ಉದಯಕುಮಾರರ ಈ ಮಾತುಗಳು ಲಿಂಗಾಯತರ ವಿಷಯದಲ್ಲಿ ಕೆಳವರ್ಗದವರನ್ನು ದೂರವಿಡುವ ಸಾಮಾಜಿಕ ಚಲನೆಯನ್ನು ಸೂಚಿಸುತ್ತದೆ. ಬ್ರಾಹ್ಮಣ ಪ್ರಾಬಲ್ಯವನ್ನು ವಿರೋಧಿಸಿದರೂ, ಕೆಳವರ್ಗದವರಿಗೆ ಸ್ಥಾನ-ಮಾನಗಳನ್ನು ನಿರಾಕರಿಸಿ, ಶ್ರೇಷ್ಟತೆಯನ್ನು ಶುದ್ಧ ಶೈವರಿಗೆ ಮಾತ್ರ ಮೀಸಲಾಗಿಡುವ ಆಂತರಿಕ ವ್ಯವಸ್ಥೆ ಮತ್ತು ತಟಸ್ಥ ನೀತಿ ಇದು. ಈ ಎಲ್ಲಾ ಚರ್ಚೆ, ವಾದಗಳು ಗ್ರಂಥಾಧಾರವಾಗಿದ್ದು ಸಾಂಪ್ರದಾಯಿಕ ವ್ಯವಸ್ಥೆಯನ್ನು ಮತ್ತು ಆಚಾರ-ವಿಚಾರವನ್ನು ಬಲವಾಗಿ ಸಮರ್ಥಿಸುವದನ್ನು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣಬಹುದು.

ಆಚರಣೆ ಮತ್ತು ವಿಧಿ-ವಿಧಾನಗಳಾಧಾರಿತ ಜಾತಿ ತಾರತಮ್ಯಮಗಳ ಬಗ್ಗೆ ಹಳಕಟ್ಟಿಯವರು ಯಾವತ್ತೂ ಮಾತನಾಡಲಿಲ್ಲ. ಶರೀರ ಮತ್ತು ಅದರ ಅಂತಿಮ ಗುರಿಯಾದ ಐಕ್ಯ ಇವೆರಡರ ಸಂಬಂಧದ ಬಗ್ಗೆ ಮಾತನಾಡುವಾಗ ಬಹಳ ಅಮೂರ್ತವಾಗಿ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ವ್ಯಕ್ತಿಯ ಶರೀರವು/ ಸ್ವ ಸಾಮಾಜಿಕ ಶ್ರೇಣಿಯಲ್ಲಿ ಮತ್ತು ಜಾತಿ ವ್ಯವಸ್ಥೆಯಲ್ಲಿ ಭಾಗವಹಿಸಿ ಅದಕ್ಕೆ ತನ್ನದೇ ಆದ ಕಾಣಿಕೆಯನ್ನು ನೀಡಿದರೂ ಅದು ಈ ಎಲ್ಲಾ ಜಂಜಾಟಗಳನ್ನು ಮೀರಿದ್ದು ಎಂದು ಅವರು ಚಿತ್ರಿಸುತ್ತಾರೆ. ವಚನಗಳು ಮತ್ತು ವಚನಕಾರರು ಈ ಎಲ್ಲಾ ಆಚಾರ-ವಿಚಾರಗಳನ್ನು ಮೀರಿ ಬೆಳೆದು ನಿಂತ ಮಹನೀಯರು ಎಂಬಂತೆ ಬಣ್ಣಿಸಿದರು. ತಮ್ಮ ಮೊದಲ ವಚನ ಸಂಕಲನದಲ್ಲಿ ಅನೇಕ ವಚನಗಳನ್ನು ಶರಣ ಸ್ಥಲದಲ್ಲಿ ಇರಿಸಿ, ಅವುಗಳು ಹೇಗೆ ಜಂಗಮರು ಮತ್ತು ವಿರಕ್ತರ ಸಂಪ್ರದಾಯ ಆಚಾರ-ವಿಚಾರಗಳನ್ನು ಟೀಕಿಸಿ, ಸ್ವ-ಜಾತಿ ಪ್ರೇಮವನ್ನು ಮೆರೆಯುವುದಿಲ್ಲವೆಂದು ನಿರೂಪಿಸಿದ್ದಾರೆ. ಮೂರನೇ ಸಂಕಲನದಲ್ಲಿ ವಚನಕಾರರು ಮಾರ್ಗದಲ್ಲಿ ಅಳವಡಿಸಿಕೊಂಡಿದ್ದರೆಂದು ವಿವರಿಸಿದ್ದಾರೆ. ಅರಿವಿನ ಮೂಲಕ ಸ್ವವನ್ನು ಔನ್ಯತ್ತೀಕರಿಸಿ, ಅಂಧ ವಿಶ್ವಾಸಗಳನ್ನು ತೊಡೆದು ಹಾಕುವದಕ್ಕೆ ಈ ಭಾಗವು ಮಹತ್ವವನ್ನು ನೀಡುತ್ತದೆ. ೧೯೪೨ರ ಬಸವಣ್ಣನವರ ವಚನಗಳ ಸಂಕಲನ ಈ ವ್ಯಾಖ್ಯಾನಗಳನ್ನು ಸಮರ್ಥಿಸಿಕೊಳ್ಳುತ್ತದೆ. ಈ ಹೊಸ ವ್ಯಾಖ್ಯಾನಗಳು ಷಟ್‌ಸ್ಥಲಗಳ ಮಹತ್ವವನ್ನು ತಿಳಿಸುತ್ತಾ ಅವುಗಳಿಂದ ಶರೀರವನ್ನು ಹೇಗೆ ಔನ್ಯತ್ತೀಕರಿಸಬಹುದೆಂದು ತಿಳಿಸಿ ಹೇಳುತ್ತವೆ. ಆದರೆ ದೈನಂದಿನ ಆಚರಣೆಗಳು ಜಾತಿ ವ್ಯವಸ್ಥೆಯ ಜೊತೆಗೆ ಯಾವ ರೀತಿಯಲ್ಲಿ ತಳಕು ಹಾಕಿಕೊಂಡಿದ್ದವು ಎಂಬುದರ ಬಗ್ಗೆ ಹಳಕಟ್ಟಿಯವರು ದಿವ್ಯ ಮೌನವನ್ನು ತಾಳಿದ್ದು ಅವರ ಜಾತ್ಯಾತೀತ ವ್ಯಾಖ್ಯಾನಗಳನ್ನು ಮತ್ತೊಮ್ಮೆ ಮರು-ಚಿಂತನೆ ಮಾಡುವ ಹಾಗೆ ಪ್ರೇರೇಪಿಸುತ್ತವೆ. ಅವರಿಗೆ ಒಂದು ಸತ್ಯದ ಅರಿವಾಗಿತ್ತು. ಆಚಾರ-ವಿಚಾರಗಳು ಮತ್ತು ವಿಧಿ-ವಿಧಾನಗಳು ಲಿಂಗಾಯತರ ಮನಸ್ಸಿನಲ್ಲಿ ಬಹಳ ಆಳದವರೆಗೆ ಬೇರೂರಿದ್ದು, ಅವಕ್ಕೆ ಲಿಂಗಾಯತ ಮಠಗಳ ಸಮರ್ಥನೆ ಇರುವುದರಿಂದ ಅವುಗಳನ್ನು ತೊಡೆದು ಹಾಕಲು ಸಾಧ್ಯವೆ ಇಲ್ಲ. ಹಾಗಾಗಿ ಉಳಿದಿದ್ದು ಒಂದೇ ಮಾರ್ಗ ಜಾತ್ಯಾತೀತ ವ್ಯಾಖ್ಯಾನಗಳ ಮೂಲಕ ಆಧುನಿಕಗೊಳಿಸುವ ಉಪಾಯ. ಹೀಗಾಗಿ ತಮ್ಮ ವಚನ ಶಾಸ್ತ್ರ ಸಾರದ ಮೂರನೇ ಸಂಕಲನದಲ್ಲಿ ಅಷ್ಟಾವರಣ ಮತ್ತು ಪಂಚಾಚಾರಗಳನ್ನು ವೈಚಾರಿಕತೆಯ ಪರಧಿಯಲ್ಲಿ ಅರ್ಥೈಸಲು ಅವರು ಯಶಸ್ವಿಯಾದರು.

                                                                       ಭಾಗ

ಒಮ್ಮತದ ತಯಾರಿ ಮತ್ತು ಸಾಂಸ್ಥಿಕೀರಣ (institutionalization)

ಗಣ್ಯರ ಆದರ್ಶಮಯ ಸಂಪ್ರದಾಯ ಮತ್ತು ಪರಂಪರೆಗೆ ಅನುಗುಣವಾಗಿ ವಚನಗಳನ್ನು ಸಾದರ ಪಡಿಸಲು ಹಳಕಟ್ಟಿಯವರು ವಚನಗಳಲ್ಲಿ ಭಕ್ತಿ ಮತ್ತು ನೈತಿಕತೆಯನ್ನು ಪ್ರಮಾಣಿಕರಿಸಿದರು. ಇದರಲ್ಲಿ ಅಸ್ಪಷ್ಟ ಅಥವಾ ಅಪಾರದರ್ಶಕ ಅಂಶಗಳನ್ನು ಶುದ್ಧಿಕರಿಸಿ, ಅವುಗಳಲ್ಲಿರುವ ವೈರುಧ್ಯಗಳನ್ನು ತೆಗೆದು ಹಾಕುವ ಪ್ರಯತ್ನ ಮಾಡಿದರು. ಇದು ಕರ್ನಾಟಕದಲ್ಲಿ ಸಾಂಸ್ಕೃತಿಕ ಯಜಮಾನಿಕೆಯನ್ನು ಸಾಧಿಸುವ ಪ್ರಯತ್ನವು ಸಹ ಆಗಿತ್ತು. ಇಲ್ಲಿ ಯಜಮಾನಿಕೆಯ ಅರ್ಥ “ವಿವಿಧ ವರ್ಗಗಳು, ಮೈತ್ರಿ ಮತ್ತು ಸಾಮಾಜಿಕ ಗುಂಪುಗಳು ಸಕ್ರಿಯ ಒಮ್ಮತವನ್ನು ಗಳಿಸುವದಕ್ಕೋಸ್ಕರ ರಾಜಕೀಯ, ಬೌದ್ಧಿಕ ಮತ್ತು ನೈತಿಕ ನಾಯಕತ್ವವನ್ನು ವಹಿಸಿಕೊಳ್ಳುವು” (ಮಾರ್ಕ ಜೆ. ಸ್ಮಿತ್, ೨೦೦೨: ೨೮)ದು. ವಸಾಹತುಶಾಹಿಯ ಆಧುನಿಕ ಕಾಲದಲ್ಲಿ ಅನೇಕ ವರ್ಗಗಳು ಮತ್ತು ಮೈತ್ರಿಗಳ ನಡುವೆ ಈ ನೈತಿಕ ನಾಯಕತ್ವವನ್ನು ಸಾಂಪ್ರದಾಯಿಕ ವ್ಯವಸ್ಥೆಗಳ ಮೂಲಕ (ಅಂದರೆ ಜಾತಿ, ಬಂಧು-ಬಳಗ ಅಥವಾ ಧರ್ಮ) ಗಳಿಸುವುದು ಅಸಾಧ್ಯವಾಗಿತ್ತು. ಇದಕ್ಕಾಗಿ ಮುಕ್ತ ಮತ್ತು ಉದಾರ ಮನೋಭಾವನೆಯನ್ನು ಒಳಗೊಂಡಿರಬೇಕಾದ ಪರಿಸ್ಥಿತಿ ಇತ್ತು. ತಮ್ಮ ವೈಚಾರಿಕ ದೃಷ್ಟಿಕೋನದಿಂದ ವಚನಗಳಿಗೆ ಒಂದು ರೂಪವನ್ನು ಕೊಟ್ಟ ಮೇಲೆ ತಮ್ಮ ಪ್ರಯತ್ನಗಳು ಸಂಘ, ಸಂಸ್ಥೆಗಳಿಂದ ಪ್ರೋತ್ಸಾಹಿಸಲ್ಪಟ್ಟರೆ ಬಹಳ ಅನುಕೂಲವಾಗುತ್ತದೆಂದು ಹಳಕಟ್ಟಿಯವರು ಬಹುಬೇಗ ಅರಿತರು. ಇದು ಚಾರಿತ್ರಿಕವಾಗಿ ಅತ್ಯವಶ್ಯಕವಾಗಿತ್ತು. ಏಕೆಂದರೆ ತಮ್ಮ ಪ್ರಯತ್ನಗಳನ್ನು ಟೀಕಿಸುವವರಿಗೆ ಸಾಂಸ್ಥಿಕ ಮತ್ತು ಸಂಘಟನಾತ್ಮಕ ಪ್ರೋತ್ಸಾಹವಿದ್ದುದು ಹಳಕಟ್ಟಿಯವರನ್ನು ಚಿಂತಾಕ್ರಾಂತರನ್ನಾಗಿ ಮಾಡಿತ್ತು. ಇದಕ್ಕೆ ಉತ್ತರವಾಗಿ ಹಳಕಟ್ಟಿಯವರು ತಮ್ಮ ನಂಬಿಕೆಗಳಿಗೆ ಹತ್ತಿರವಿರುವ ಮತ್ತು ತಮ್ಮ ವಿಚಾರಗಳನ್ನು ಒಪ್ಪಿಕೊಳ್ಳುವ ಸಮಾನ ಮನಸ್ಕ ವಿದ್ವಾಂಸರ ಗುಂಪನ್ನು ಸೃಷ್ಟಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿದರು. ಇದನ್ನು ಸಾಧಿಸಲು ಸಾರ್ವಜನಿಕ ಕಾರ್ಯಕ್ರಮಗಳು, ಪ್ರಕಟಣೆ, ನಿಯತಕಾಲಿಕೆಗಳು ಮತ್ತು ಶೈಕ್ಷಣಿಕ ಸಂಘ-ಸಂಸ್ಥೆಗಳನ್ನು ಹುಟ್ಟಿಹಾಕಿದರು. ೧೯೪೧-೧೯೫೦ರ ನಡುವೆ ತಮ್ಮ ಆಪ್ತ ಸ್ನೇಹಿತ ಮಲ್ಲಪ್ಪನವರೊಡನೆ ನಡೆಸಿದ ಪತ್ರ ವ್ಯವಹಾರಗಳನ್ನು ಗಮನಿಸಿದರೆ ಹಳಕಟ್ಟಿಯವರು ಬಿಜಾಪುರದಲ್ಲಿ ಸ್ಥಾಪಿಸಿದ ಶಿವಾನುಭವ ಮಂದಿರದಿಂದ ವಚನ ಸಾಹಿತ್ಯ

ವನ್ನು ಪ್ರಸಾರಗೊಳಿಸುವುದಕ್ಕೋಸ್ಕರ ಎಷ್ಟೊಂದು ಉತ್ಸಾಹ ಮತ್ತು ಆಸಕ್ತಿಯುಳ್ಳವರಾಗಿದ್ದರೆಂದು ತಿಳಿಯುತ್ತದೆ[1] ಇದಕ್ಕಾಗಿ ಅವರು ಕೇವಲ ಆಧುನಿಕ ಸವಲತ್ತುಗಳಲ್ಲಿ ಮಾತ್ರ ಆಸಕ್ತಿ ವಹಿಸಬಲ್ಲ. ಸಾಂಪ್ರಾದಾಯಿಕ ಮೂಲಗಳ ಮೂಲಕವೂ ಸಹ ವಚನಗಳ ಆದರ್ಶಗಳನ್ನು ಹರಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ತರಹದ, ಮಧ್ಯಸ್ಥಿಕೆಯು ಅವರಿಗೆ ಅತ್ಯವಶ್ಯಕವಾಗಿತ್ತು. ಏಕೆಂದರೆ ಲಿಂಗಾಯತರು ತಮ್ಮ ಸರ್ವಾಂಗೀಣ ಅಭಿವೃದ್ಧಿಗಾಗಿ ಆಧುನಿಕ ಹಾಗೂ ಪಾರಂಪಾರಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ಉತ್ಸಾಹವನ್ನು ತೋರಿಸಹತ್ತಿದ್ದರು. ಸಂಗೀತ, ಶಿಕ್ಷಣ, ಕಾನೂನು, ಆಡಳಿತ, ವ್ಯವಸಾಯ, ರಾಜಕೀಯ, ಭಾಷೆ, ಧರ್ಮ, ಪ್ರಾಂತ, ಇತ್ಯಾದಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಶುರು ಮಾಡಿದ್ದರು. ತಾವು ಲಿಂಗಾಯತರು ಎಂಬ ಗುರುತನ್ನು ಈ ಕ್ಷೇತ್ರಗಳಲ್ಲಿ ಸ್ಥಾಪಿಸಲು ಪ್ರಯತ್ನಪಟ್ಟರು. ಇದರ ಜೊತೆಗೆ ಸಮುದಾಯದ ಒಳಗೆ ಆಗುತ್ತಿದ್ದ ಬೌದ್ಧಿಕ ಬದಲಾವಣೆಗಳನ್ನು ಸಹ ನಾವು ಗಮನಿಸಬೇಕು. ಹೊಸ ತಲೆಮಾರಿನ ಲಿಂಗಾಯತ ಸುಶಿಕ್ಷಿತರು ತಮ್ಮ ಸಮುದಾಯಕ್ಕೆ ನವೀನ, ಏಕತೆಯ ಮತ್ತು ಪ್ರಗತಿಪರ ಬದಲಾವಣೆಗಳನ್ನು ತರಬೇಕು ಎಂದು ಸಮುದಾಯಕ್ಕೆ ನವೀನ. ಏಕತೆಯ ಮತ್ತು ಪ್ರಗತಿಪರ ಬದಲಾವಣೆಗಳನ್ನು ತರಬೇಕು ಎಂದು ನಿರೀಕ್ಷಿಸುತ್ತಿದ್ದರು. ಅವರು ಲಿಂಗಾಯತರ ಪ್ರಸ್ತುತ ಪರಿಸ್ಥತಿಗಳ ಬಗ್ಗೆ ಅಸಮಾಧಾನವನ್ನು ಹೊಂದಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾವ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದ ಕೆಲವೇ ಕೆಲವು ಗಣ್ಯರು ಮತ್ತು ಅವರ ಕಾರ್ಯ ವೈಖರಿಯು ಅನೇಕ ಲಿಂಗಾಯತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು. ಕಾರ್ಯಕರ್ತ, ರಾಜಕಾರಿಣಿ ಮತ್ತು ಸಮಾಜ ಸುಧಾರಕರಾದ ಬಸವಯ್ಯ, ಸಿದ್ಧಪ್ಪ ಕಂಬಳಿ, ಹರ್ಡೇಕರ್ ಮಂಜಪ್ಪ, ಇತ್ಯಾದಿಯವರು ಸ್ವಾತಂತ್ರ‍್ಯ, ಸಮಾನತೆ, ವೈಚಾರಿಕತೆ, ಪ್ರಜಾಪ್ರಭುತ್ವ, ವಿಚಾರಧಾರೆಯಿಂದ ಪ್ರಭಾವಿತರಾದ ನಾಯಕರುಗಳು. ಅವರು ತಮ್ಮ ಸಮುದಾಯದಲ್ಲಿ ಅಮೂಲಾಗ್ರ ಬದಲಾವಣೆಗಳಾಗಬೇಕೆಂದು ಬಯಸಿದ್ದವರು. ಹೀಗಾಗಿ ವಚನಗಳ ‘ಹೊಸ’ ವಿಚಾರಗಳು ಅವರ ಮನಸ್ಸನ್ನು ಆಕರ್ಷಿಸಿದವು. ನವೀನ ವಿಚಾರಗಳನ್ನು ಒಳಗೊಂಡ ವಚನಗಳನ್ನು ಇವರು ಬಹು ಉತ್ಸಾಹದಿಂದ ಸ್ವೀಕರಿಸಿದರು. ಅವರಲ್ಲಿ ಕೆಲವರು ವಚನ ಅಧ್ಯಯನಕ್ಕೆ ತಮ್ಮದೇ ಆದ ಕಾಣಿಕೆಯನ್ನು ಸಹ ಇತ್ತರು.

ಆಧುನಿಕ ಪೂರ್ವ ಧರ್ಮ ಸಂಸ್ಥೆಗಳಾದ ಲಿಂಗಾಯತ ಮಠಗಳ ಸಂಬಂಧವನ್ನು ಹಳಕಟ್ಟಿಯವರು ಬಿಡಲಿಲ್ಲ. ಮಠಗಳ ನಡುವಿನ ವೈಮನಸ್ಯ ಮತ್ತು ಬ್ರಾಹ್ಮಣ ಶಿಕ್ಷಣ ಮಾದರಿಯ ಬಗ್ಗೆ ಅಸಮಾಧಾನವಿದ್ದರು, ಅವುಗಳ ವಿರುದ್ಧ ಸೈದ್ಧಾಂತಿಕ ಸಮರವನ್ನೆನೂ ಅವರು ಸಾರಲಿಲ್ಲ. ಬದಲಾಗಿ ಅವರ ಸಹಕಾರವನ್ನು ಬಯಸಿದ್ದರು. ಅದಕ್ಕಾಗಿ ಮಠ-ಮಾನ್ಯಗಳು ಮತ್ತು ಮಠಾಧೀಶರ ಜೊತೆಗೆ ಸಕ್ರಿಯವಾದ ಮತ್ತು ಉತ್ತಮವಾದ ಸಂಬಂಧವನ್ನು ಇರಿಸಿಕೊಂಡಿದ್ದರು. ಅನೇಕ ಮಠಾಧೀಶರು ಮತ್ತು ಲಿಂಗಾಯತ ನಾಯಕರ ಜೊತೆಗೆ ನಡೆದ ವಚನ-ಚರ್ಚೆಗಳನ್ನು ತಮ್ಮ ಆತ್ಮಚರಿತ್ರೆಯಲ್ಲಿ ಸವಿಸ್ತಾರವಾಗಿ ಜ್ಞಾಪಿಸಿಕೊಂಡಿದ್ದಾರೆ. ಮಠಾಧೀಶರು ವಚನಗಳಲ್ಲಿ ಅಡಗಿರುವ ಮೌಲ್ಯವನ್ನು ಅರಿತು. ಹಳಕಟ್ಟಿಯವರ ಬೆನ್ನು ತಟ್ಟಿ ಅವರ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದರು. ನಿಧಾನವಾಗಿ ಇತರ ಲಿಂಗಾಯತ ಮಠಗಳು ವಚನಗಳ ಮಹತ್ವನ್ನು ಅರಿತು. ಅವುಗಳ ಧಾರ್ಮಿಕ ಪ್ರಾಮುಖ್ಯತೆಯ ಬಗ್ಗೆ ಆಸಕ್ತಿ ವಹಿಸಿದರು. ಬಸವಣ್ಣನನ್ನು ದ್ವಿತೀಯ ಶಂಭು ಎಂದು ಪೂಜಿಸುತ್ತಿದ್ದ ಇವರಿಗೆ ಈಗ ವಚನಗಳ ಮೂಲಕ ತಮ್ಮ ಧಾರ್ಮಿಕ ನಂಬಿಕೆಯನ್ನು ಸಮರ್ಥಿಸಿಕೊಳ್ಳಲು ವೈಚಾರಿಕ ಬಲ ಬಂದ ಹಾಗಾಯಿತು. ಜಾತ್ಯಾತೀತ ಲಿಂಗಾಯತ ಸಾಹಿತ್ಯದ ವಿಚಾರ ಧಾರೆಯು ನಿಧಾನವಾಗಿ ಬೇರೂರುತ್ತಿದೆ ಎಂದು ಹಳಕಟ್ಟಿಯವರು ಭಾವಿಸುತ್ತಿದ್ದಾಗಲೆ, ಅವಕ್ಕೆ ವ್ಯತಿರಿಕ್ತವಾಗಿ ಸಾಂಪ್ರದಾಯಕ ಹಾಗು ಪುರಾತನ ಲಿಂಗಾಯತ ಕಾವ್ಯ, ಪುರಾಣಗಳು ಕಣ್ಮರೆಯಾಗದೆ, ಜೊತೆ ಜೊತೆಗೆ ಇದ್ದವು. ವಚನಗಳ ವಿಚಾರಗಳಿಂದ ಪ್ರಭಾವಿತರಾದರೂ ಲಿಂಗಾಯತ ಮಠಗಳು ತಮ್ಮ ಸಂಸ್ಥೆಗಳಲ್ಲಿ ಮತ್ತು ಕಾರ್ಯ ವೈಖರಿಯಲ್ಲಿ ಗುರುತರವಾದ ಅಥವಾ ಪ್ರಗತಿಪರ ಬದಲಾವಣೆಗಳನ್ನು ತರಲಿಲ್ಲ. ಸಾಂಪ್ರದಾಯಿಕ ಕಟ್ಟುಪಾಡುಗಳ ಜೊತೆಗೆ ಬೆಸೆದುಕೊಂಡಿದ್ದ ಆಚಾರ-ವಿಚಾರಗಳನ್ನು ಒಮ್ಮೆಲೆ ತೊಡೆದು ಹಾಕಲು ಅವರು ಸಿದ್ಧರಿರಲಿಲ್ಲ. ಹಾಗಾಗಿ ಸಂಪ್ರದಾಯಬದ್ಧ ಮತ್ತು ಆಚರಣೆಗಳ ಜೊತೆಗೆ, ಹೊಸ ಬದಲಾವಣೆಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಪ್ರಯತ್ನಗಳನ್ನು ಅವರು ಮಾಡಿದರು. ತಲೆತಲಾಂತರದಿಂದ ಸಾಗಿ ಬಂದ ಗ್ರಾಂಥಿಕ ಸಂಪ್ರದಾಯವನ್ನು ತಮ್ಮ ದಿನನಿತ್ಯದ ಆಚರಣೆಗಳಲ್ಲಿ (ದೀಕ್ಷೆ, ಪೂಜಾವಿಧಿ, ಮದುವೆ, ಇತ್ಯಾದಿ) ಮುಂದುವರೆಸಿದರಾದರೂ, ವಚನಗಳನ್ನು ತಮ್ಮ ನೈತಿಕ ಅಸ್ತಿತ್ವವನ್ನು ತಿಳಿಸಿಕೊಡುವ ಮತ್ತು ತಮ್ಮ ಪ್ರಗತಿಪರತೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಬಳಸಿಕೊಂಡರು. ಉದಾಹರಣೆಗೆ, ಲಿಂಗಾಯತ ಮಠಾಧೀಶರು ಮತ್ತು ಸಂಪ್ರದಾಯಸ್ಥರು ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರೆಸುವುದಕ್ಕಾಗಿ ಚೆನ್ನಬಸವಣ್ಣನ ವಚನಗಳನ್ನು ಬಹು ಉತ್ಸಾಹದಿಂದ ಬಳಸಿಕೊಂಡರು.[2] ಶ್ರಾವಣದ ದಿನಗಳಲ್ಲಿ ಲಿಂಗಾಯತ ಪುರಾಣ ಮತ್ತು ಕಾವ್ಯಗಳನ್ನು ಮಠ-ಮಾನ್ಯಗಳಲ್ಲಿ ಓದಿ ಹೇಳುವ ಪರಿಪಾಠ ಈಗಲೂ ಮುಂದುವರೆದಿರುವದು  ಎಲ್ಲರಿಗೂ ಗೊತ್ತಿರುವ ಸಂಗತಿ. ಬಸವ ಪುರಾಣದಲ್ಲಿ ಬ್ರಾಹ್ಮಣರ ಮತ್ತು ಪುರೋಹಿತಶಾಹಿಯ ವಿರುದ್ಧ ಬಂಡೆದ್ದ ಬಸವಣ್ಣನ ವಿಚಾರಗಳು ಮತತ್ತು ಭಕ್ತಿಯ ಇರುವ ಪ್ರಾಮುಖ್ಯತೆಯು ಮಠಸ್ಥರಿಗೆ ಈಗಲೂ ಪ್ರಿಯವಾದ ಘಟನೆ. ಜಾತೀಯತೆಯನ್ನು (ವಿಶೇಷವಾಗಿ ಬ್ರಾಹ್ಮಣರ ಜಾತೀಯತೆ) ಖಂಡಿಸುವಾಗ ಈ ಘಟನೆಯನ್ನು ಜ್ಞಾಪಿಸಿಕೊಳ್ಳದೆ ಇರುವುದಿಲ್ಲ. ಮಠಗಳಲ್ಲಿ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬಸವ ಪುರಾಣದ ಬಗ್ಗೆ ಉಪನ್ಯಾಸ ನೀಡುವಾಗ ಈ ಘಟನೆಯನ್ನು ವಚನಗಳ ಮೂಲಕ ಸಮರ್ಥಿಸಿಕೊಳ್ಳುವ ರೀತಿ ಸರ್ವೆ ಸಾಮಾನ್ಯ. ಹೀಗೆ ಬಸವಣ್ಣನು ಶಿವನ ಅವತಾರವೆಂಬ ನಂಬುಗೆಯ ಜೊತೆಗೆ ಜಾತ್ಯಾತೀತ ವಿಚಾರಗಳ ಹರಿಕಾರನೆಂದು ಬೆಸೆಯುವ ಪ್ರಕ್ರಿಯೆಯನ್ನು ಇಲ್ಲಿ ಕಾಣಬಹುದು.

ಹಳಕಟ್ಟಿಯವರು ಲಿಂಗಾಯತ ಮಠಗಳ ಜೊತೆಗೆ ನಡೆಸಿದ ಅನುಸಂಧಾನ ತನ್ನದೇ ಆಸೆ ಮಿತಿಗಳನ್ನು ಹೊಂದಿತ್ತು. ಮಠಾಧೀಶರು ಮತ್ತು ಸಂಪ್ರದಾಯಸ್ಥರು ನೈತಿಕ ವಚನಗಳ ಜೊತೆಗೆ ಧಾರ್ಮಿಕ ದೃಷ್ಟಿಕೋನವನ್ನು ಬೆಸೆದಿದ್ದು ಹಳಕಟ್ಟಿಯವರ ಪರಧಿಯಾಚೆಗೆ ಇತ್ತು. ಇದನ್ನು ಹಳಕಟ್ಟಿಯವರು ವಿರೋಧಿಸಲಿಲ್ಲ. ಏಕೆಂದರೆ ಅವರಿಗೆ ಸಾಂಸ್ಥಿಕ ನೆರವು, ಸಹಕಾರ ಬೇಕಾಗಿತ್ತು. ಆದಾಗ್ಯೂ ತಮ್ಮ ವೈಯಕ್ತಿಕ ನಿಲುವುಗಳ ಜೊತೆಗೆ ರಾಜಿ ಮಾಡಿಕೊಳ್ಳಲಿಲ್ಲ. ತಮ್ಮ ಅಭಿಪ್ರಾಯಗಳ ಅಭಿವ್ಯಕ್ತಿಗಾಗಿ ಅವರು ತಮ್ಮದೇ ಆದ ಪ್ರಕಟಣೆ ಮತ್ತು ನಿಯತಕಾಲಿಕಗಳನ್ನು ಶುರು ಮಾಡಿದರು. ಇವುಗಳ ಮೂಲಕ, ಅವರು ಸಾವಿರಾರು ಓದುಗರನ್ನು ಮತ್ತು ವಿಮರ್ಶಕರನ್ನು ತಲುಪಿ, ಅವರು ಸಹ ವಚನ/ಲಿಂಗಾಯತ ಅಧ್ಯಯನಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಇದಕ್ಕಾಗಿ ತಾವು ಶುರು ಮಾಡಿದ ನಿಯತಕಾಲಿಕೆಗಳ ಮೂಲಕ ಅನೇಕ ವಿದ್ವಾಂಸರು ಮತ್ತು ಸಾಹಿತಿಗಳಿಗೆ ವೇದಿಕೆಯನ್ನು ಏರ್ಪಡಿಸಿದರು.

ಶಿವಾನುಭವ (೧೯೨೬) ಮತ್ತು ನವಕರ್ನಾಟಕ (೧೯೨೭) ಎಂಬ ಎರಡು ನಿಯತಕಾಲಿಕೆಗಳನ್ನು ಶುರು ಮಾಡಿ, ಅವುಗಳ ಮೂಲಕ ಲಿಂಗಾಯತ ಸಾಹಿತ್ಯವನ್ನು ಪಸರಿಸಲು ಪ್ರಾರಂಭಿಸಿದರು. ಮೊದಲನೆಯದು ಲಿಂಗಾಯತ ಸಾಹಿತ್ಯ, ಧರ್ಮ, ಇತಿಹಾಸ ಮತ್ತು ತತ್ವಗಳ ಚರ್ಚೆ ಮತ್ತು ಪ್ರಸಾರಕ್ಕೆ ಮೀಸಲಾಗಿದ್ದರೆ, ಎರಡನೆಯದು ಭಾರತ ಮತ್ತು ಕರ್ನಾಟಕದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಷಯಗಳನ್ನು ಚರ್ಚಿಸಲು ಮೀಸಲಾಗಿತ್ತು. ಈ ನಿಯತಕಾಲಿಕೆಗಳ ಮೂಲಕ ಅನೇಕ ವಿಮರ್ಶಕರು, ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು, ಮಾನವಶಾಸ್ತ್ರಜ್ಞರು ಮತ್ತು ಭಾಷಾಶಾಸ್ತ್ರಜ್ಞರಿಗೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಯಿತು. ಈ ಎಲ್ಲಾ ವಿದ್ವಾಂಸರಿಂದ ಲಿಂಗಾಯತ ಸಾಹಿತ್ಯದ ಕ್ಷಿತಿಜವನ್ನು ಅವರು ವಿಸ್ತಾರಗೊಳಿಸಿದರು. ತಮ್ಮ ಹಿತಚಿಂತಕ ಪ್ರೆಸ್ ನಿಂದ ಯುವ ಲಿಂಗಾಯತರು ಮತ್ತು ಸಂಶೋಧಕರನ್ನು ಪರಿಚಯ ಮಾಡಿ ಕೊಟ್ಟ ಹೆಗ್ಗಳಿಕೆ ಇವರದು. ಅವರ ಪುಸ್ತಕಗಳು, ಲೇಖನಗಳು, ಇತಿಹಾಸದ ಶೋಧನೆಗಳು, ಮತ್ತು ಕಾವ್ಯಗಳನ್ನು ತಮ್ಮ ಪ್ರೆಸ್ ನಿಂದ ಹೊರ ತಂದು ಪ್ರೋತ್ಸಾಹ ನೀಡಿದರು. ಲಿಂಗಾಯತ ಸಾಹಿತ್ಯದ ಬಗ್ಗೆ ತಮ್ಮ ನಿಲುವುಗಳನ್ನು ಹಂಚಿಕೊಳ್ಳಲು ಮತ್ತು ಪ್ರಭಾವಿಸಲು ಸಹಮತವುಳ್ಳ ಅನೇಕರನ್ನು ಯಶಸ್ವಿಯಾಗಿ ಕಲೆ ಹಾಕಿದರು. ಆದಾಗ್ಯೂ ಈ ಎಲ್ಲಾ ಲೇಖಕರು ತಮ್ಮದೇ ಆದ ವೈವಿದ್ಯಮಯ ವಿಚಾರಗಳು, ನಿಲುವುಗಳು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು.

ಮತ್ತೊಂದು ಅಪೂರ್ವವಾದ ಅಂಶವೇನೆಂದರೆ ವಚನಗಳನ್ನು ಪಠನ ಮಾಡುವ ಸಂಪ್ರದಾಯವನ್ನು ಹುಟ್ಟುಹಾಕಿದ್ದು. ಆಧುನಿಕ ಪ್ರಕಟನಾ ತಂತ್ರಜ್ಞವು ಸಾಮಾನ್ಯ ಜನರನ್ನು ಇನ್ನೂ ತಲುಪದೆ ಇದ್ದಿದ್ದರಿಂದ ಮತ್ತು ಲಿಂಗಾಯತರಲ್ಲಿ ಇನ್ನು ಅನೇಕರು ಅಶಿಕ್ಷಿತರಾಗಿದ್ದರಿಂದ, ಹಳಕಟ್ಟಿಯವರಿಗೆ ಜನಪದ ಸಂಪ್ರದಾಯದ ಮಹತ್ವ ತಿಳಿದಿತ್ತು. ಹೀಗಾಗಿ ಪುರಾತನ ಕಾಲದ ಓದು-ಸಂಪ್ರದಾಯವನ್ನು ಅವರು ಮುಂದುವರೆಸಿದರು. ಈಗಲೂ ಸಹ ಲಿಂಗಾಯತರ ಮಠಗಳಲ್ಲಿ ಓದುವ-ಸಂಪ್ರದಾಯ ಮುಂದುವರೆದಿದೆ. ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವದಕ್ಕೋಸ್ಕರ ವಚನಗಳನ್ನು ಸಂಗೀತವನ್ನಾಗಿ ಪರಿವರ್ತಿಸಿದವರಲ್ಲಿ ಹಳಕಟ್ಟಿಯವರು ಮೊದಲಿಗರು. ಇದಕ್ಕಾಗಿ ಅವರು ಪಿ.ವಿ. ಪಾಟೀಲ ಎಂಬ ಸಂಗೀತ ಗುರುವನ್ನು ನೇಮಿಸಿದರು.[3] ಶಾಲೆಗಳಲ್ಲಿ (ವಿಶೇಷವಾಗಿ ಲಿಂಗಾಯತರು ಮತ್ತು ಮಠಗಳ ಸ್ವಾಧೀನದಲ್ಲಿರುವ ಶಾಲೆಗಳು) ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಚನಗಳನ್ನು ಭಜನೆಯ ರೂಪದಲ್ಲಿ ಹಾಡುವ ಪರಿಪಾಟವನ್ನು ಬೆಳೆಸಿದರು. ವಚನಗಳು ಕೇವಲ ತತ್ವಗಳಲ್ಲ, ಅವು ಸಂಗೀತದ ಲಕ್ಷಣಗಳುಳ್ಳ ರಚನೆಗಳು ಎಂದು ಹಳಕಟ್ಟಿಯವರು ಸಾಬೀತು ಪಡಿಸಲು ಪ್ರಯತ್ನಿಸಿದ ಪರಿ ಇದು. ಬಹುಶಃ ಹಿಂದುಸ್ಥಾನಿ ಶೈಲಿಯಲ್ಲಿ ವಚನಗಳನ್ನು ಹಾಡುವ ಸಂಪ್ರದಾಯವನ್ನು ಹಳಕಟ್ಟಿಯವರೆ ಪ್ರಥಮ ಬಾರಿಗೆ ಶುರು ಮಾಡಿದರೇನೊ?

ಭಾಗ

ಏಕಸ್ವಾಮ್ಯದಾಚೆಗೆ : ಸಹಮತ ಮತ್ತು ಪ್ರಾತಿನಿಧ್ಯದ ರಾಜಕೀಯ

ವಚನಗಳನ್ನು ಒಂದು ನಿರ್ದಿಷ್ಟ ಮಾದರಿಯಲ್ಲಿ ಓದುವ ಸಂಪ್ರದಾಯವನ್ನು ಶುರು ಮಾಡಲು ಪ್ರಯತ್ನಿಸಿದ ಹಳಕಟ್ಟಿಯವರು ಇದರ ಮೂಲಕ ಲಿಂಗಾಯತರಿಗೆ ನವೀನ ಗುರುತನ್ನು/ಅಸ್ಮಿತೆಯನ್ನು ಕಟ್ಟಿಕೊಂಡು ಹಂಬಲವನ್ನು ಹೊಂದಿದ್ದರು. ಈ ಪ್ರಕ್ರಿಯೆಯಲ್ಲಿ ಲಿಂಗಾಯತ ಸಾಹಿತ್ಯಕ್ಕೆ ಅಂಟಿಕೊಂಡಿದ್ದ ‘ಅಂಧ’ ಧಾರ್ಮಿಕ ಮತ್ತು ಆಡಂಬರದ ಸಂಪ್ರದಾಯವನ್ನು ತೊಡೆದು ಹಾಕುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಆದರೆ, ಈ ಪ್ರಕ್ರಿಯೆಯಲ್ಲಿ, ಅಪ್ರಜ್ಞಾಪೂರ್ವಕವಾಗಿ, ಹಳಕಟ್ಟಿಯವರು ವ್ಯಾಖ್ಯಾನಗಳ ಪ್ರವಾಹವನ್ನೆ ಸೃಷ್ಟಿ ಮಾಡಿದರು. ತಾವು ಮರು-ಸೃಷ್ಟಿಸಿದ ವಚನಗಳೂ ಮತ್ತು ಅವುಗಳ ಸ್ವೀಕರಣೆಯ ನಡುವೆ ಅಸ್ಥಿರ ಸಂಬಂಧವೇರ್ಪಟ್ಟಿತು. ಅಂದರೆ ಯಾವ ಉದ್ದೇಶಕ್ಕಾಗಿ ವಚನಗಳನ್ನು ಮರು-ಸೃಷ್ಟಿಸಲಾಯಿತೊ, ಆ ಉದ್ದೇಶಗಳಿಗೂ ಮತ್ತು ಅವುಗಳನ್ನು ಸ್ವೀಕರಿಸಿದ ಓದುಗರ ವ್ಯಾಖ್ಯಾನಗಳಿಗೂ ಬಹಳಷ್ಟು ವ್ಯತ್ಯಾಸಗಳುಂಟಾದವು. ವಚನಗಳನ್ನು ವಿವಿಧ ವ್ಯಾಖ್ಯಾನಗಳು, ಹೊಸ ಕ್ಷಿತಿಜ ಮತ್ತು ಸಂದರ್ಭಗಳಿಗೆ ಓರೆ ಹಚ್ಚಿ ನೋಡುವ ಪರಿಪಾಟ ಬೆಳೆಯಿತು. ಬಸವದ್ವಾಂತ ದಿವಾಕರ ಸುತ್ತ ನಡೆದ ವಿವಾದವು ಸಾಮಾಜಿಕ ಹಿನ್ನಲೆ, ಧಾರ್ಮಿಕ ನಂಬಿಕೆ ಮತ್ತು ಜಾತಿಯ ದೃಷ್ಟಿಕೋನದಿಂದ ವಚನಗಳನ್ನು ಅರ್ಥೈಸುವಾಗ ಯಾವ ಪರಿಣಾಮ ಉಂಟಾಗಬಹುದು ಎಂಬುದಕ್ಕೆ ಉದಾಹರಣೆ. ಲಿಂಗಾಯತ ಮಠಗಳು ವಚನಗಳನ್ನು ತಮ್ಮ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಿಕೊಂಡಿರುವ ಸಂಗತಿಯ ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ಅವರು ವಚನಗಳನ್ನು ಅರ್ಥ ಮಾಡಿಕೊಳ್ಳಲು ಹಳಕಟ್ಟಿಯವರ ಪಾಂಡಿತ್ಯವನ್ನು ಅವಲಂಬಿಸಲಿಲ್ಲ. ಅವರೂ ಸಹ ಹೊಸ ವಚನಗಳ ಶೋಧಕ್ಕೆ, ಅಧ್ಯಯನಕ್ಕೆ ಮತ್ತು ಪ್ರಕಟಣೆಗೆ ತಮ್ಮದೆ ಆದ ಕಾಣಿಕೆಗಳನ್ನು ನೀಡಿದರು. ವಚನಗಳನ್ನು ಹುಡುಕಿ. ಅಧ್ಯಯನ ಮಾಡಲು ಶುರು ಮಾಡಿದಾಗ ಹಳಕಟ್ಟಿಯವರಿಗೆ ಈ ತರಹದ ತಿರುವುಗಳು ಉಂಟಾಗಬಹುದೆಂಬ ಊಹೆ ಇರಲಿಲ್ಲ. ಆದಾಗ್ಯೂ, ವಚನಗಳಿಗೆ ಜಾತ್ಯಾತೀತ ಅರ್ಥಗಳನ್ನು ನೀಡುವಲ್ಲಿ ಮತ್ತು ಅವನ್ನು ಪ್ರಸಾರ ಮಾಡುವಲ್ಲಿ ಅವರು ಬಹುತೇಕ ಯಶಸ್ವಿಯಾದರು. ಆದರೆ ಈ ಜಾತ್ಯಾತೀತ ಅರ್ಥಗಳನ್ನು ಜನಪ್ರಿಯಗೊಳಿಸಲು ಹಳಕಟ್ಟಿಯೊಬ್ಬರೇ ಕಾರಣರಾದರು ಎಂದು ಹೇಳಲು ಸಾಧ್ಯವಿಲ್ಲ. ಅನೇಕ ಕನ್ನಡ ವಿದ್ವಾಂಸರು (ಬಹುತೇಕ ಬ್ರಾಹ್ಮಣರು) ಸಹ ಹಳಕಟ್ಟಿಯವರ ಪ್ರಯತ್ನಗಳನ್ನು ಗುರುತಿಸಿ ಅವುಗಳಿಗೆ ಮಾನ್ಯತೆಯನ್ನು ನೀಡುವಲ್ಲಿ ಕಾರಣರಾದರು. ಲಿಂಗಾಯತ ಸಾಹಿತ್ಯವನ್ನು ಗಟ್ಟಿಗೊಳಿಸಿ ಅವುಗಳಿಗೆ ಮಾನ್ಯತೆಯನ್ನು ನೀಡುವಲ್ಲಿ ಕಾರಣರಾದರು. ಲಿಂಗಾಯತ ಸಾಹಿತ್ಯವನ್ನು ಗಟ್ಟಿಗೊಳಿಸಿ, ಅದರ ಸುತ್ತ ಒಂದು ಅಧ್ಯಯನ ಪರಂಪರೆಯನ್ನು ಹುಟ್ಟಿ ಹಾಕುವದಕ್ಕೋಸ್ಕರ ಶ್ರಮ ವಹಿಸಿದ ಆಲೂರ್ ವೆಂಕಟರಾವ್, ಕಪಟರಾಳ ಕೃಷ್ಣರಾವ್, ಆರ್.ಆರ್. ದಿವಾಕರ, ಎಮ್.ಆರ್. ಶ್ರೀನಿವಾಸ ಮೂರ್ತಿ ಮತ್ತು ಮಾಸ್ತಿ ವೆಂಕಟೇಶ ಐಯ್ಯಂಗಾರರ ಕಾಣಿಕೆಗಳನ್ನು ಪ್ರಶಂಸಿಸಿ, ಪ್ರೋತ್ಸಾಹವನ್ನು ನೀಡಿದರು. ಹಳಕಟ್ಟಿಯವರ ಲೇಖನಗಳು ಈ ಅಂಶವನ್ನು ಸಾಬೀತು ಮಾಡಿರುತ್ತವೆ. ಈ ವಿದ್ವಾಂಸರು ವಚನಗಳ ಬಗ್ಗೆ ಅಥವಾ ಲಿಂಗಾಯತ ಸಾಹಿತ್ಯದ ಬಗ್ಗೆ ಮಾಡಿದ ಅಧ್ಯಯನಗಳು ಹಳಕಟ್ಟಿಯವರ ಚೌಕಟ್ಟಿನಲ್ಲಿ ಅಥವಾ ಮಠಾಧೀಶರ ಹತೋಟಿಯಲ್ಲಿರಲಿಲ್ಲ.

ಬ್ರಾಹ್ಮಣ-ಅಬ್ರಾಹ್ಮಣ ಪರಿಕಲ್ಪನೆಗಳಡಿಯಲ್ಲಿ ನಡೆದ ಇದುವರೆಗಿನ ಚರ್ಚೆಯು ತನ್ನದೇ ಆದ ಮಿತಿಯನ್ನು ಹೊಂದಿದೆ. ಕ್ಷಣ ಕಾಲ ಈ ಪರಿಕಲ್ಪನೆಗಳ ಚೌಕಟ್ಟನ್ನು ಮೀರ ಬೇಕಾಗುತ್ತದೆ. ವಿಶೇಷವೇನೆಂದರೆ, ಹಳಕಟ್ಟಿಯವರ ಜಾತ್ಯಾತೀತ ನಂಬಿಕೆಗಳಿಗೂ ಮತ್ತು ರಾಷ್ಟ್ರೀಯ ಪ್ರಗತಿಪರರಿಗೂ ಅಷ್ಟೊಂದು ವ್ಯತ್ಯಾಸಗಳಿರಲಿಲ್ಲ. ಆದಾಗ್ಯೂ, ರಾಷ್ಟ್ರೀಯ ಪ್ರಗತಿಪರರಿಗೆ ಲಿಂಗಾಯತ ವಿದ್ವಾಂಸರ ಹಾಗೆ ಅವರ ಆಂತರಿಕ ಸಂಘರ್ಷಗಳನ್ನು (ಲಿಂಗಾಯತರ ಆಂತರಿಕ ಸಂಘರ್ಷಗಳು) ಯಾವ ರೀತಿಯಲ್ಲಿ ನಿಭಾಯಿಸಬೇಕು ಎಂದು ತಿಳಿದಿರಲಿಲ್ಲ. ಮೇಲಾಗಿ ಅದು ಅವರಿಗೆ ಅವಶ್ಯಕತೆಯೂ ಇರಲಿಲ್ಲ. ಇದರರ್ಥ ಹಳಕಟ್ಟಿಯವರ ಅಧ್ಯಯನಗಳನ್ನು ಅವರು ನಿರ್ಲಿಪ್ತವಾಗಿ ಸ್ವೀಕರಿಸಿದರು ಎಂದಲ್ಲ. ಅವರ ವಚನ ಅಥವಾ ಲಿಂಗಾಯತ ಅಧ್ಯಯನಗಳು ಪ್ರಚಲಿತದಲ್ಲಿಲ್ಲದ್ದ ವಿಚಾರಗಳಿಗೆ ಬೆಳೆಸಿದವು. ಈ ವೈವಿಧ್ಯಮಯ ಸಂದರ್ಭ ಹಾಗು ವ್ಯಾಖ್ಯಾನಗಳ ಪ್ರತಿಫಲವಾಗಿ ವಚನಗಳು ವಿಶ್ವಾತ್ಮಕ ಮತ್ತು ಜಾತ್ಯಾತೀತ ಗುಣವನ್ನು ಪಡೆದವು. ವಚನಗಳು ಕನ್ನಡ ಸಾಹಿತ್ಯಕ್ಕೆ ಲಿಂಗಾಯತರು ನೀಡಿದ ಅಪೂರ್ವವಾದ ಕಾಣಿಕೆಗಳು ಎಂದು ಪ್ರಗತಿಪರರು ಒಪ್ಪಿಕೊಂಡರೂ, ಅವರ ಅಧ್ಯಯನಗಳು ತಮ್ಮದೇ ಆದ ಚೌಕಟ್ಟಿನಲ್ಲಿ ಮತ್ತು ತಮ್ಮದೇ ಆದ ನುಡಿಗಟ್ಟುಗಳಲ್ಲಿ ಸಾಗಿತು. ಇದು ವಚನಗಳಿಗೆ ಅಂಟಿಕೊಂಡಿದ್ದ ಸಾಮುದಾಯಿಕ ಗುರುತಿನ ವಿರುದ್ಧವಾಗಿ ಅಥವಾ ಸಂವಾದಿಯಾಗಿ ಬೆಳೆಯಿತು. ಇಲ್ಲಿ ಆಸಕ್ತಿದಾಯಕ ವಿಷಯವೇನೆಂದರೆ ಯಾವುದನ್ನು ಲಿಂಗಾಯತ ಸಂಪ್ರದಾಯಸ್ಥರು ಮತ್ತು ಮಠಾಧೀಶರು ನಂಬಿಕೆಗೆ ಅಥವಾ ಸ್ವೀಕರಣೆಗೆ ಅರ್ಹವಲ್ಲ ಎಂದು ಭಾವಿಸಿದ್ದರೋ ಅವು ಈ ಪ್ರಗತಿಪರ ವಿದ್ವಾಂಸರ ಪ್ರಮುಖ ಆಕರ್ಷಣೆಗಳಾದವು.

ಈ ಸಂದರ್ಭದಲ್ಲಿ ಕರ್ನಾಟಕದ ಮೂರು ಪ್ರಗತಿಪರ ಸಾಹಿತಿಗಳನ್ನು ಚರ್ಚಿಸಬಹುದು. ಮೊದಲಿಗೆ, ಆಧುನಿಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಹರಿಕಾರರೆಂದು ಪ್ರಸಿದ್ಧರಾಗಿರುವ ಬಿ.ಎಮ್. ಶ್ರೀಕಂಠಯ್ಯನವರು. ವಚನಗಳ ಸರಳ ಭಾಷೆ ಮತ್ತು ಸುಲಭವಾಗಿರುವ ಅರ್ಥಗಳನ್ನು ಅವರು ಮೆಚ್ಚಿದರು. ಅವರ ಕನಸಿನ ಕನ್ನಡದಲ್ಲಿ ವಚನಗಳಿಗೆ ವಿಶೇಷ ಸ್ಥಾನವನ್ನು ನೀಡಿದರು. ಗ್ರಾಮ್ಯ ಮತ್ತು ಪುರಾತನ ಕನ್ನಡದ ಅರ್ಥವಾಗದ ಪದಗಳನ್ನು ತಮ್ಮ ಕನಸಿನ ಕನ್ನಡದಿಂದ ಹೊರ ಹಾಕಿದರೂ, ವಚನಗಳ ಭಾಷೆಗೆ ಪ್ರಾಶಸ್ತ್ಯ ನೀಡುವ ಉತ್ಸಾಹವನ್ನು ಅವರು ತೋರಿದರು. ಕನ್ನಡಕ್ಕೆ ನೀಡಿದ ಅಪೂರ್ವ ಕಾಣಿಕೆಗಾಗಿ ಹಳಕಟ್ಟಿಯವರನ್ನು ವಚನ ಗುಮ್ಮಟ ಎಂದು ಬಣ್ಣಿಸಿದರು. ಮತ್ತೊಂದು ಉದಾರಣೆಗೆ ಬಸವಣ್ಣನ ವಚನಗಳನ್ನು ವ್ಯಾಖ್ಯಾನ ಮಾಡಿದ ಎಮ್.ಆರ್. ಶ್ರೀನಿವಾಸಮೂರ್ತಿಯವರ ಭಕ್ತಿ ಭಂಡಾರಿ ಬಸವಣ್ಣನವರು (೧೯೩೧) ಎಂಬ ಕೃತಿ. ಈ ಕೃತಿಯ ಶೀರ್ಷಿಕೆ ತಿಳಿಸುವ ಹಾಗೆ, ಕೃತಿಯಲ್ಲಿ ಬಸವಣ್ಣನನ್ನು ಭಕ್ತಿ ಭಂಡಾರಿಯೆಂದು ವರ್ಣಿಸಲಾಗಿದೆ. ಬಸವಣ್ಣನ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಭಕ್ತಿಯ ಬಗ್ಗೆ ತಮ್ಮದೇ ಆದ ಹೊಸ ಅರ್ಥಗಳನ್ನು ಶ್ರೀನಿವಾಸಮೂರ್ತಿಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಮೂರನೇ ಉದಾಹರಣೆ ಮಾಸ್ತಿಯವರ ಪಾತ್ರಕ್ಕೆ ಸಂಬಂಧಿಸಿದ್ದು. ೧೯೩೫ ರಲ್ಲಿ ಮಾಸ್ತಿ ವೆಂಕಟೇಶ ಐಯ್ಯಂಗಾರರು ಬಸವಣ್ಣನ ವಚನಗಳನ್ನು ಸೇಯಿಂಗ್ಸ್ ಆಫ್ ಬಸವಣ್ಣ ಎಂದು ಇಂಗ್ಲೀಷಿಗೆ ಭಾಷಾಂತರ ಮಾಡಿದರು. ವಚನಕಾರರ ರಾಷ್ಟ್ರೀಯತೆಯ ಭಾವನೆಗಳು ಮಾಸ್ತಿಯವರನ್ನು ಬಹಳವಾಗಿ ಪ್ರಭಾವಿಸಿರುವ ಹಾಗೆ ಕಾಣುತ್ತದೆ. ಹೀಗಾಗಿ ಬಸವಣ್ಣನು ರಾಷ್ಟ್ರೀಯ ನಾಯಕ ಮತ್ತು ಕೆಳವರ್ಗದವರ ಉದ್ದಾರಕ್ಕಾಗಿ ಹೋರಾಡಿದ ಪ್ರಥಮ ಮಹಾನ್ ವ್ಯಕ್ತಿಯೆಂದು ತಮ್ಮ ಭಾಷಾಂತರದ ಮುನ್ನುಡಿಯಲ್ಲಿ ವರ್ಣಿಸಿದ್ದಾರೆ. ತಮ್ಮ ಮುನ್ನುಡಿಯಲ್ಲಿ ಬಸವಣ್ಣನ ವಿಚಾರಗಳು ಯಾವುದೇ ಸಮುದಾಯ ಅಥವಾ ಜಾತಿಗೆ ಸೀಮಿತವಾಗಿಲ್ಲ ಎಂದು ಅವರು ಘೋಷಿಸಿದ್ದಾರೆ. ಬಸವಣ್ಣನ ವಿಚಾರಗಳು ವಿಶ್ವಾತ್ಮಕವಾಗಿದ್ದು, ಎಲ್ಲರಿಗೂ ಅನ್ವಯಿಸುವಂತದ್ದು ಎಂದು ಹೊಗಳಿದ್ದಾರೆ. ಷಟ್‌ಸ್ಥಲಗಳ ಬಗ್ಗೆ ಯಾವುದೇ ಉಲ್ಲೇಖ ಮಾಡದಿರುವುದು ಈ ಮೂರು ವಿದ್ವಾಂಸರಲ್ಲಿ ಕಾಣಿಸುವ ಸಾಮಾನ್ಯವಾದ ಒಂದು ಅಂಶ.

ಈ ವಿದ್ವಾಂಸರನ್ನು ಮೆಚ್ಚುಗೆಯಿಂದ ಸ್ವೀಕರಿಸಿದರೂ, ಹಳಕಟ್ಟಿಯವರಲ್ಲಿ ಒಂದು ಅಸಮಾಧಾನವಿತ್ತು. ಶಿವಾನುಭವ ಪತ್ರಿಕೆಯ ತಮ್ಮ ವಿಮರ್ಶಾ ಲೇಖನದಲ್ಲಿ[4] ಎಂ.ಆರ್. ಶ್ರೀನಿವಾಸಮೂರ್ತಿ ಮತ್ತು ಮಾಸ್ತಿಯವರ ಬಗ್ಗೆ ವ್ಯಕ್ತ ಪಡಿಸಿರುವ ಅನಿಸಿಕೆಗಳು ವಚನಗಳ ಮೇಲಿನ ತಮ್ಮ ಹತೋಟಿಯನ್ನು ಕಳೆದುಕೊಳ್ಳುವ ಆತಂಕಮಯ ಮನೋಸ್ಥಿತಿಯನ್ನೂ ಮತ್ತು ಅಸಮಾಧಾನವನ್ನು ಬಿಚ್ಚಿಡುತ್ತದೆ. ಈ ಆತಂಕವು ವಚನಗಳ ‘ಮೂಲ’ದ ಮಲೀನತೆಯ ಬಗ್ಗೆ ಇದ್ದ ಅಸಮಾಧಾನ. ಎಂ.ಆರ್. ಶ್ರೀ ಮತ್ತು ಮಾಸ್ತಿಯವರು ತಮ್ಮ ಅಧ್ಯಯನ ಮತ್ತು ಭಾಷಾಂತರಗಳಲ್ಲಿ ಷಟ್‌ಸ್ಥಲಗಳ ಬಗ್ಗೆ ಒಂದು ಮಾತನ್ನು ಉಲ್ಲೇಖಿಸುವುದಲ್ಲ. ವಚನಗಳಿಗೆ ತಮ್ಮದೇ ಆದ ಗುರುತಿರುವುದು ಷಟ್‌ಸ್ಥಲ ತತ್ವಗಳ ಆಧಾರದ ಮೇಲೆ. ಆದರೆ ಈ ತತ್ವಗಳನ್ನೇ ಮರೆತರೆ ಹೇಗೆ ಎಂಬ ಆಂತಕ ಹಳಕಟ್ಟಿಯವರಿಗೆ. ಷಟ್‌ಸ್ಥಲಗಳ ಮಹತ್ವವನ್ನು ನೆನಪಿಸಿಕೊಳ್ಳುತ್ತಾ, ವಚನಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಷಟ್‌ಸ್ಥಲಗಳ ಜ್ಞಾನದ ಅವಶ್ಯಕತೆ ಇದೆ; ಇಲ್ಲದಿದ್ದರೆ ವಚನಗಳನ್ನು ಅಪಾರ್ಥ ಮಾಡಿಕೊಳ್ಳುವ ಸಂಭವವಿರುತ್ತದೆ ಎಂದು ಈ ಇಬ್ಬರು ವಿದ್ವಾಂಸರಿಗೆ ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ. ಇವರಿಬ್ಬರು ವಚನಗಳ ಆಯ್ಕೆಯಲ್ಲಿ ಎಡವಿದ್ದಾರೆಂದು, ಇತರ ಅನೇಕ ವಚನಗಳ ಬಗ್ಗೆ ಗಮನ ಹರಿಸಿ ಶಿವಾನುಭವದ ನಿಜ ಸ್ವರೂಪವನ್ನು ತಿಳಿಸಿಕೊಡಬೇಕಾಗಿತ್ತೆಂದು ವಾದಿಸುತ್ತಾರೆ. ಇಷ್ಟೆಲ್ಲಾ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ, ವ್ಯತ್ಯಾಸಗಳಿಂದಲೂ ಕ್ರಮೇಣ ಲಿಂಗಾಯತ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡುವ ಒಂದು ಬಳಗವೇ ಸೃಷ್ಟಿಯಾಯಿತು. ಕನ್ನಡ ಸಾಹಿತ್ಯಕ್ಕೆ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ವಚನಗಳ ಕಾಣಿಕೆ ಅಪಾರವಾದುದೆಂದು ಇವರಿಗೆ ಮನವರಿಕೆಯಾಯಿತು. ಇವೆಲ್ಲದರ ಪರಿಣಾಮವಾಗಿ ವೀರಶೈವ ಸಂಸ್ಕೃತ, ಶೈವ ಧಾರ್ಮಿಕ ಕೃತಿಗಳ ಬಗ್ಗೆ ಇದ್ದ ಆಸಕ್ತಿ ಕ್ಷೀಣವಾಗತೊಡಗಿತು.

೧೯೪೦ರ ದಶಕ ಹೊತ್ತಿಗೆ ವಚನಗಳ ಬಗ್ಗೆ ಇದ್ದ ಅನುಮಾನ, ಆತಂಕ, ವಾದ-ವಿವಾದಗಳ ತೀವ್ರತೆ ಕಡಿಮೆಯಾಗತೊಡಗಿತು. ಸಂಪ್ರದಾಯಸ್ಥರಿಂದ ಉಂಟಾಗಿದ್ದ ವಾದ-ವಿವಾದಗಳು ಕಾಲ, ಕ್ರಮೇಣ ಕಣ್ಮತೆಯಾಗತೊಡಗಿದವು. ಪ್ರಗತಿಪರ ಲಿಂಗಾಯತರು ಸಾಂಪ್ರದಾಯಿಕ ಲಿಂಗಾಯತರ ವಿರುದ್ಧ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ವಚನಗಳನ್ನು ಪುರಾತನ ಕನ್ನಡ ಕಾವ್ಯದ ಅವಿಭಾಜ್ಯ ಅಂಗವೆಂದು, ನೈತಿಕ ಶಿಕ್ಷಣದ ಅಂಗವಾದಿ ವಚನಗಳನ್ನು ಶಾಲೆಯ ಪಠ್ಯಗಳಲ್ಲಿ ಸೇರಿಸಬೇಕೆಂದು ಅನೇಕರು ಬಲವಾಗಿ ಪ್ರತಿಪಾದಿಸಿದರು. ೧೯೬೪ರಲ್ಲಿ ಹಳಕಟ್ಟಿಯವರು ನಿಧನರಾಗುವ ಹೊತ್ತಿಗೆ, ಕರ್ನಾಟಕ ವಿಶ್ವ ವಿದ್ಯಾಲಯವು ವಚನ ಮತ್ತು ಲಿಂಗಾಯತ ಸಾಹಿತ್ಯವನ್ನು ಅಧ್ಯಯನ ಮಾಡುವ, ಸಂಶೋಧಿಸುವ, ಪಸರಿಸುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊತ್ತಿತು.

ಭಾಗ

ಅಪೂರ್ಣತೆ?

ವಚನಗಳನ್ನು ಜನಪ್ರಿಯಗೊಳಿಸಿ, ಅದಕ್ಕೊಂದು ಪ್ರಗತಿಪರ/ಜಾತ್ಯಾತೀತ ಚೌಕಟ್ಟನ್ನು ನಿರ್ಮಿಸಿದರೂ ಪುರಾತನ ಗ್ರಾಂಥಿಕ ಸಂಸ್ಕೃತಿ, ಆಚರಣೆಗೆ ಸಂಬಂಧಿಸಿದ ಇನ್ನೂ ಅನೇಕ ಜಟಿಲ ಸಮಸ್ಯೆಗಳನ್ನು ಪರಿಹರಿಸುವ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ಅವರ ನೈತಿಕೀರಣ ಮತ್ತು ಜಾತ್ಯಾತೀತಕರಣಗೊಳಿಸುವ ಯೋಜನೆಯ ತನ್ನದೇ ಆದ ವಿರೋಧಾಭಾಸಗಳಿಂದ ಕೂಡಿದ್ದವು. ಹಳಕಟ್ಟಿಯವರ ವಿಫಲತೆ ರಾಷ್ಟ್ರೀಯತೆಯು ತನ್ನ ವೈರುಧ್ಯಗಳನ್ನು ಮೀರಿ ಆದರ್ಶ ಸಮುದಾಯ/ದೇಶವನ್ನು ಕಟ್ಟಲು ಸಾಧ್ಯವಾಗದೇ ಇರುವ ಸ್ಥಿತಿಯನ್ನು ಸಂಕೇತಿಸುತ್ತದೆ. ಈಗಲೂ ಸಹ ಸಾರ್ವಜನಿಕ ಪ್ರಜ್ಞೆಯನ್ನು ವಚನಗಳ ಜಾತ್ಯಾತೀತ, ಧಾರ್ಮಿಕ ಹಾಗೂ ಆಚರಣೆಗಳೆಲ್ಲವೂ ಪ್ರಭಾವಿಸುತ್ತಿವೆ. ಒಂದಕ್ಕೊಂದು ವಿರುದ್ಧವಾಗಿದ್ದರೂ ಅವುಗಳ  ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಬಂದಿಲ್ಲ. ವಚನಗಳನ್ನು ಆಧುನಿಕ ನೈತಿಕ ಚೌಕಟ್ಟಿನೊಳಗೆ ಅಥವಾ ಜಾತ್ಯಾತೀತ ಕ್ರಿಶ್ಚಿಯನ್ ವ್ಯಾಖ್ಯಾನಗಳ ಚೌಕಟ್ಟಿನಲ್ಲಿ ಬಂಧಿಸಲಾಯಿತು ಎಂಬುದು ಕೆಲವರ ವಾದವಿದ್ದರೂ, ಅವು ವಚನಗಳ ಧಾರ್ಮಿಕ ಅರ್ಥಕ್ಕೆ ವ್ಯತಿರಿಕ್ತವಾಗಿವೆ. ನೈತಿಕತೆಯ ಪರಧಿಯೊಳಗೆ ಎಲ್ಲಾ ವಚನಗಳನ್ನು ಅರ್ಥೈಸಲಾಗಲಿಲ್ಲ. ಉದಾಹರಣೆಗ, ಅಲ್ಲಮನ ಬೆಡಗಿನ ವಚನಗಳನ್ನು ನೈತಿಕವಾಗಿ ಅರ್ಥೈಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವು ಸಂಕೀರ್ಣವಾದ ಮತ್ತು ಗಹನವಾದ ಅರ್ಥವುಳ್ಳ ತಾತ್ವಿಕ ವಿಚಾರಗಳಾಗಿದ್ದು, ನೈತಿಕತೆಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಜಾತ್ಯಾತೀತ ಕ್ರಿಶ್ಚಿಯನ್ ವ್ಯಾಖ್ಯಾನವನ್ನು ಧಾರ್ಮಿಕ ಮತ್ತು ಅವೈಚಾರಿಕತೆಗೆ ವಿರುದ್ಧವಾಗಿ ಅರ್ಥೈಸಿರುವುದೇ ಈ ಪರಿಕಲ್ಪನೆಯ ಸಮಸ್ಯೆ, ಜಾತ್ಯಾತೀತ ಹಾಗು ಧರ್ಮದ ನಡುವಿನ ಕೊಳ್ಳು-ಕೊಡುವಿಕೆಯನ್ನು ಈ ಪರಿಕಲ್ಪನೆಯು ಪರಿಗಣಿಸುವುದಿಲ್ಲ. ಈ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಹಳಕಟ್ಟಿಯವರು ಷಟ್‌ಸ್ಥಲ ಸಿದ್ಧಾಂತದ ಜೊತೆಗೆ ಯಾವ ರೀತಿಯ ಸಂಧಾನವನ್ನು ಏರ್ಪಡಿಸಿಕೊಂಡರು ಎಂಬುದರ ಬಗ್ಗೆ ಮತ್ತಷ್ಟು ಸಂಶೋಧನೆಯಾಗಬೇಕಾಗಿದೆ. ೨೦ನೇ ಶತಮಾನದುದ್ದಕ್ಕೂ ವಚನಗಳನ್ನು ಯಾವ, ಯಾವ ರೀತಿಯಲ್ಲಿ ಮತ್ತು ಯಾವ ಯಾವ, ಉದ್ದೇಶಗಳಿಗಾಗಿ ಅಧ್ಯಯನ ಮಾಡಿದರು ಎಂದು ಅವಲೋಕಿಸಬೇಕಾದ ಅವಶ್ಯಕತೆ ಇದೆ. ಹಳಕಟ್ಟಿಯವರ ಕಾಲದಲ್ಲೇ ವಚನಗಳನ್ನು ಯಾವ, ಯಾವ ಧಾರ್ಮಿಕ ಅರ್ಥಗಳಿಗೆ ಸಂವಾದಿಯಾಗಿ ನೋಡಿದರು ಎಂದು ತಿಳಿದುಕೊಳ್ಳುವ ಪ್ರಯತ್ನ ಅಪೂರ್ಣವಾಗಿದೆ.

ಹಳಕಟ್ಟಿಯವರ ವಚನ ಅಧ್ಯಯನವು ಕೇವಲ ಜಾತ್ಯಾತೀತ ಪ್ರಭಾವದಿಂದ ಮಾತ್ರ ಮೂಡಿ ಬರಲಿಲ್ಲ ಎಂಬ ಅಂಶವನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ತಮ್ಮ ಸಮುದಾಯದ ಆಂತರಿಕ ಮತ್ತು ಬಾಹ್ಯ ಒತ್ತಡಗಳು ಮತ್ತು ಭಾರತೀಯ ಧಾರ್ಮಿಕ/ತಾತ್ವಿಕ ಚಳುವಳಿಗಳು ಹಳಕಟ್ಟಿಯವರ ಅಧ್ಯಯನಗಳನ್ನು ಹೇಗೆ ರೂಪಿಸಿದವು ಎಂದು ಅನೇಕ ಉದಾಹರಣೆಗಳ ಮೂಲಕ ಮಂಡಿಸಲಾಗಿದೆ. ಇಷ್ಟಾದಾಗ್ಯೂ, ಕರ್ನಾಟಕ ಏಕೀಕರಣ ಚಳುವಳಿ, ಕನ್ನಡ ಸಾಹಿತ್ಯ ಸಂದರ್ಭಗಳು,[5] ರಾಷ್ಟ್ರೀಯ ಸ್ವಾತಂತ್ರ‍್ಯ ಹೋರಾಟ ಮತ್ತು ಹಿಂದುತ್ವದ ವಿಚಾರಧಾರೆಗಳು೩೩[6] ಹಳಕಟ್ಟಿಯವರನ್ನು ಯಾವ ರೀತಿಯಲ್ಲಿ ಪ್ರಭಾವಿಸಿದವು ಎಂಬುದನ್ನು ಚರ್ಚೆಗೊಳಪಡಿಸಬೇಕಾಗಿದೆ.

ವಸಾಹತ್ತೋತ್ತರ ಸಮಾಜಗಳಲ್ಲಿ ಇತ್ತೀಚೆಗೆ ಉದ್ಭವವಾಗಿರುವ ‘ಪ್ರತಿ-ಯಜಮಾನಿಕೆ’ ಓದು-ಸಂಸ್ಕೃತಿ (ದಲಿತ ಮತ್ತು ಇತರ ನಿರ್ಲಕ್ಷಿತರಿಂದ) ಏಕವ್ಯಾಖ್ಯಾನಕ್ಕೆ ಮತ್ತು ಕೆಲವೇ ಕೆಲವು ವಚನಕಾರರ ಗಮನಕ್ಕೆ (ಬಸವಣ್ಣ, ಅಕ್ಕಮಹಾದೇವಿ, ಚೆನ್ನ ಬಸವಣ್ಣ, ಸಿದ್ಧರಾಮ, ಅಲ್ಲಮರನ್ನು ಕುರಿತು) ಉಂಟಾಗಿರುವ ಸವಾಲುಗಳನ್ನು ಈ ಲೇಖನವು ನಿರ್ಲಕ್ಷಿಸಲಾಗಿದೆ. ಮಠ-ಮಾನ್ಯರಿಂದ ಹಾಗು ಲಿಂಗಾಯತ ಗಣ್ಯರಿಂದ ವಚನಗಳನ್ನು ಯಾವ ರೀತಿಯಾಗಿ ಬಳಸಲಾಯಿತು ಎಂಬ ಅರಿವು ಈ ಪ್ರತಿ ಓದು – ಸಂಸ್ಕೃತಿಗೆ ಗೊತ್ತಿರಬೇಕು. ಧಾರ್ಮಿಕ ವಚನಗಳನ್ನು ಮತ್ತು ಬಸವಣ್ಣನ ಹಳಕಟ್ಟಿಯವರು ಅನೇಕ ಜಟಿಲಮಯ ವಿಷಯವನ್ನು ದೂರವಿಟ್ಟರು. ಇದನ್ನು ಸಹ ಪ್ರತಿ-ಓದಿನ ಸಂಸ್ಕೃತಿಯು ಗಮನಿಸಬೇಕಾಗುತ್ತದೆ. ಇದಕ್ಕೆಲ್ಲಾ ಮಿಗಿಲಾಗಿ ವಸಾಹತೋತ್ತರ ಕಾಲದಲ್ಲಿ ಆದ ವಚನ ಮತ್ತು ಲಿಂಗಾಯತ ಸಾಹಿತ್ಯ ಅಧ್ಯಯನದ ಸಾಂಸ್ಥಿಕೀರಣವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಇದು ವಸಾಹತುಶಾಹಿ ಕಾಲದ ಮುಂದುವರಿಕೆಯಾಗಿದೆ. ಪ್ರಸ್ತುತ ಲೇಖನ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದೆ ಎಂದು ನಾನು ನಂಬುತ್ತೇನೆ.

ಉಲ್ಲೇಖಿತ ಕೃತಿಗಳು ಮತ್ತು ಲೇಖನಗಳು

೧.        ಝೈಡೆನ್ ಬೋಸ್, ರಾಬರ್ಟ್. ೧೯೯೭. ‘Virasaivisam, Caste, Revolution, Etc.’, Journal of Americal Oriental Studies.’ ಸಂ. ೧೧೭, ಸಂಖ್ಯೆ.

೨.        ಬೋರ್ದ್ಯು, ಪಿಯರ್, ೧೯೯೦. “Reading, Readers, the Literate, Literature”, In Other Words: Essays Towards a Reflexive Sociology, ಕೆಂಬ್ರಿಡ್ಜ್: ಪಾಲಿಟಿ ಪ್ರೆಸ್.

೩.        ಹಳಕಟ್ಟಿ, ಫ.ಗು. ೧೯೫೧, (೧೯೮೩) ‘ಆತ್ಮ ಚರಿತ್ರೆ’, ಹಳಕಟ್ಟಿ ನುಡಿಪುರುಷ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

೪.        — ೧೯೨೨. ‘Vachanas Attributed to Basava’, Indian Antiquery,’ ಸಂ. ರಿಚರ್ಡ್ ಟೆಂಪಲ್, ಸಂ. ೫೧.

೫.        — ೧೯೨೩. ‘ಮುನ್ನುಡಿ’, ವಚನ ಶಾಸ್ತ್ರ ಸಾರ, ಬೆಳಗಾಂ: ಹಳಕಟ್ಟಿ.

೬.        — ೧೯೨೭. ನೈತಿಕ ಮತ್ತು ಭಕ್ತಿಯ ವಚನಗಳು, ವಿಜಾಪುರ ಹಿತಚಿಂತಕ.

೭.        — ೧೯೩೧. ಶಿವಾನುಭವ, ೧೯೩೧, ಸಂ. ೬, ಸಂ. ೩.

೮.        — ೧೯೩೯. ವಚನ ಶಾಸ್ತ್ರ ಸಾರ ಭಾಗ – ೩, ವಿಜಾಪುರ: ಹಿತಚಿಂತಕ.

೯.        — ೧೯೪೨. ‘ಹೊಸ ಪದ್ಧತಿಯ ಬಸವೇಶ್ವರನ ವಚನಗಳು’, ಶಿವಾನುಭವ, ಸಂ. ೨೯, ಸಂಖ್ಯೆ ೭. ಪು. ೪.

೧೦.      ಕರಿಬಸವಶಾಸ್ತ್ರಿ. ಪಿ.ಆರ್. ೧೯೨೫. ‘ಯತ್ನಾಗ್ರಫಿಯ ವಿಷಯ ಮತ್ತು ಖಂಡನೆಯು’, ಉಪನ್ಯಾಸ ಸಂಗ್ರಹ, ಸಂ. ಶಿರಸಿ ಗುರುಸಿದ್ಧಶಾಸ್ತ್ರಿ, ಮೈಸೂರು: ಪಂಚಾಚಾರ್ಯ ಪ್ರೆಸ್.

೧೧.      ರೆಗೆ, ಶರ್ಮಿಳ. ೨೦೦೦. “Understanding Popular Culture: The Satyashodhak and Ganesh Mela in Maharashtra”, Sociological Bulletin, ಸಂ, ೪೯, ಸಂಖ್ಯೆ ೨.

೧೨.      ಮ್ಯಾಕ್ ಕಾರ್ಕ್, ವಿಲಿಯಮ್. ೧೯೬೩. “Lingayath As Sect”, Journal of the Royal Anthropological Institute of Great Britain and Ireland, ಸಂ.೯೩, ಸಂಖ್ಯೆ. ೧ (ಜನವರಿ-ಜೂನ್).

೧೩.      ಲಕಬುರ್ಗಿ, ಎಮ್.ಎಮ್. ೧೯೯೦. ವಚನ ಸಾಹಿತ್ಯ ಪ್ರಕಟಣೆಯ ಇತಿಹಾಸ, ಗದಗ: ವೀರಶೈವ ಅಧ್ಯಯನ ಸಂಸ್ಥೆ.

೧೪.      ವಕನ್ ಕರ್, ಮಿಲಿಂದ್. ೨೦೦೫. ‘The Anamoly of Kabir: Caste and Canonicity in Indian Modernity’, Subaltern Studies XII, ಸಂ. ಶೈಲ್ ಮಾಯಾರಾಮ್, ಎಮ್.ಎಸ್.ಎಸ್. ಪಾಂಡ್ಯನ್ ಮತ್ತು ಅಜಯ್ ಸ್ಕಾರಿಯ , ಆಕ್ಸ್ ಫರ್ಡ್ ಯೂನಿರ್ವಸಿಟಿ ಪ್ರೆಸ್: ದೆಲ್ಲಿ.

೧೫.      ಜಾಗಿರ್ ದಾರ್, ಸೀತಾರಾಮ. ೧೯೮೨. ಗ್ರಂಥ ಸಂಪಾದನೆ ಶಾಸ್ತ್ರಕ್ಕೆ ಡಾ. ಹಳಕಟ್ಟಿಯವರ ಕೊಡುಗೆ, ಮಣಿಹ, ಬೆಂಗಳೂರು: ಬಿ.ಎಮ್.ಶ್ರೀ ಮೆಮೋರಿಯಲ್ ಟ್ರಸ್ಟ್.

೧೬.      ದತ್ತ, ನೊನಿಕ. ೧೯೯೭. “Arya Saaj and the Making of the Jat Identity”, Studies in History, ೧೩ (೧).

೧೭.      ಫಾಸ್, ಹಾಲ್ಬ್. ೧೯೯೬. “Practical Vedanta”, Representing Hinduism: The Construction of  Religious Traditions and National Identity, ಸೇಜ್: ನ್ಯೂ ದೆಲ್ಲಿ.

೧೮.      ಗುಪ್ತ, ಕೃಷ್ಣ ಪ್ರಕಾಶ. ೧೯೭೪. “Religious Evolution and Social Change in India: A Study if the Ramakrishna Mission Movement, Contributions to Indian Sociology, ಸಂ. ೮, ಸಂಖ್ಯೆ. ೨೫.

೧೯.      ಇಂ. ಇಂದುಕಲಾ. ೧೯೬೭. “Sri Basavesvara and Swami Vivekananda as Social Reformers”, Sri Basaveswara: A Commemoration Volume, ಬೆಂಗಳೂರು: ಗೌರ್ನಮೆಂಟ್ ಪ್ರೆಸ್.

೨೦.      ಶೌಟೆನ್, ಜೆ.ಪಿ. ೧೯೯೧. “The Colonial Period – Lingayaths as a Conglomeration of Castes”, Revolution of the Mystics: on the Social Aspects of Virashaivism, ದಿ ನೆದರ್ ಲ್ಯಾಂಡ್: ಕೊಕ್ ಪ್ರೊಸ್.

೨೧.      ಫಕ್ಸ್, ಮಾರ್ಟಿನ್, ೨೦೦೧.

೨೨.      ಲಂಗೋಟಿ, ಸಿದ್ಧಪ್ಪ, ೨೦೦೦. ಡಾ. ಫ.ಗು. ಹಳಕಟ್ಟಿಯವರು, ಬೆಳಗಾಂ: ಬಸವೇಶ್ವರ ಅನುಭವ ಪೀಠ.

೨೪.      ಸ್ಮಿತ್, ಮಾರ್ಕ್ ಜೆ, ೨೦೦೨. Culture: Reinventing the Social Science, ನ್ಯೂ ದೆಲ್ಲಿ: ವಿವಾ ಬುಕ್ಸ್.

೨೫.      ಉದಯಕುಮಾರ್, ೧೯೯೭. ‘Self, Body and Inner Sense: Some Reflections in Sree Narayana Guru and Kumaran Asan’ Studies in History,’ , ಸಂ. ೧೩, ಸಂಖ್ಯೆ ೨.

[1] ಈ ಪತ್ರಗಳನ್ನು ಸಿದ್ಧಯ್ಯ ಪುರಾಣಿಕರಿಂದ ಸಂಪಾದಿಸಲ್ಪಟ್ಟ ‘ಮಣಿಹ’ (೧೯೮೨) ಎಂಬ ಪುಸ್ತಕದಲ್ಲಿ ನೋಡಬಹುದು.

[2] ೨೯.     ನೂರಾರು ವಚನಗಳನ್ನು ರಚಸಿರುವ ಚೆನ್ನಬಸವಣ್ಣನು ಶಿವ ಶರಣರ ಆಚಾರ-ವಿಚಾರಗಳಿಗೆ ತಾತ್ವಿಕ ಚೌಕಟ್ಟನ್ನು ರೂಪಿಸಿ, ಸಾಂಸ್ಥಿಕೀಕರಣಕ್ಕೆ ನಾಂದಿ ಹಾಡಿದ ಪ್ರಥಮನೆಂದು ನಂಬಲಾಗಿದೆ. ಕೆಳ ಜಾತಿ ವಚನಕಾರರಿಂದ ಮಲೀನಗೊ೦ಡ ಲಿಂಗಾಯತ ಚಳುವಳಿಯನ್ನು ಪರಿಶುದ್ಧಿಗೊಳಿಸಿ, ಶುದ್ಧತೆಯನ್ನು ಕಾಪಾಡಿದನೆಂದು ಪ್ರತೀತಿ ಇದೆ (ಶೌಟೆನ್, ೧೯೯೧: ೪೧-೪೨). ಚೆನ್ನ ಬಸವಣ್ಣನ ವಚನಗಳು ಹಳಕಟ್ಟಿಯವರ ಜಾತ್ಯಾತೀತ ಮತ್ತು ಪ್ರಗತಿಪರ ವಿಚಾರಗಳ ವಿರುದ್ಧವಿದ್ದವು. ಆಡಂಬರ, ಪುರೋಹಿತಶಾಹಿ ಆಚರಣೆಗಳನ್ನು ವಿರೋಧಿಸುವ ವಚನಕಾರರ ಆದರ್ಶಗಳಿಗೆ ಚೆನ್ನ ಬಸಣ್ಣನ ವಚನಗಳು ವ್ಯತಿರಿಕ್ತವಾಗಿದ್ದವು. ಈ ವೈರುಧ್ಯಗಳು ಹಳಕಟ್ಟಿಯವರನ್ನು ಸದಾ ಕಾಲ ಎಚ್ಚರಿಕೆಯಿಂದ ಇರುವಂತೆ ಪ್ರಚೋದಿಸುತ್ತಿದ್ದವು.

[3] ನೋಡಿ ಸಿದ್ಧಪ್ಪ ಲಂಗೋಟಿ (೨೦೦೦: ೩೬).

[4] ನೋಡಿ ಹಳಕಟ್ಟಿಯವರ ಲೇಖನ ‘ಬಸವಣ್ಣನ ವಚನಗಳು’, (೧೯೩೧: ೧೪೫-೧೫೮).

[5] ೧೯೩೦ರ ದಶಕದಲ್ಲಿ ಹಿಂದು ಮಹಾಸಭಾದ ಅಧ್ಯಕ್ಷರಾಗಿದ್ದ ಹಳಕಟ್ಟಿಯವರು ಹಿಂದು ಧರ್ಮಕ್ಕೆ ವಚನಕಾರರು ನೀಡಿದ ಕಾಣಿಕೆಯನ್ನು ಮತ್ತು ಸುಧಾರಣ ಅಂಶಗಳನ್ನು ವಿಶೇಷವಾಗಿ ವಿವರಿಸಿದ್ದಾರೆ.

[6] ಕನ್ನಡ ಮತ್ತು ಕರ್ನಾಟಕದ ಹೆಮ್ಮೆಯಾಗಿ ವಚನಗಳನ್ನು ಬಣ್ಣಿಸಿದುದನ್ನು ಅನೇಕ ಕನ್ನಡ ವಿದ್ವಾಂಸರು ಮತ್ತು ಪಂಡಿತರು ಬಹು ಉತ್ಸಾಹದಿಂದ ಸ್ವೀಕರಿಸಿದರು. ಕನ್ನಡ, ಕರ್ನಾಟಕ ಏಕೀಕರಣ ಮತ್ತು ರಾಷ್ಟ್ರೀಯ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಜನರನ್ನು ಒಗ್ಗೂಡಿಸಲು ವಚನಗಳನ್ನು ಬಳಸಿಕೊಂಡವರಲ್ಲಿ ಬ್ರಾಹ್ಮಣ ಮತ್ತು ಲಿಂಗಾಯತ ವಿದ್ವಾಂಸರಿಬ್ಬರೂ ಇದ್ದರು. ಇವರಿಗೆ ವಚನಗಳು ಒಂದು ಸಾಮಾನ್ಯವಾದ ಚೌಕಟ್ಟನ್ನು ಒದಗಿಸಿತು.