ಯಾವುದೇ ಭಾಷೆ ಮತ್ತು ಸಾಹಿತ್ಯದ ಸಮುದಾಯದಲ್ಲಿ ಕೃತಿಯ ನಿಷೇಧ ಅಥವಾ ಅದರ ವಿರುದ್ಧ ಉಂಟಾಗುವ ಸಾಹಿತ್ಯ ವಿವಾದಗಳು ಸರ್ವೇಸಾಮಾನ್ಯ.[1] ಅನಾದಿ ಕಾಲದಿಂದ ಮತ್ತು ಅನೇಕ ಸ್ಥಳಗಳಲ್ಲಿ ಸಾಹಿತ್ಯ ವಿವಾದಗಳು ಉದ್ಭವಿಸಿವೆ. ಅವು ಬಹುತೇಕ ಯಾವ ಮುನ್ಸೂಚನೆ ಇಲ್ಲದೇ ಉಂಟಾಗುತ್ತವೆ. ಭಾಷೆ, ನೈತಿಕತೆ, ವ್ಯಾಖ್ಯಾನ, ಇತಿಹಾಸ, ಅಭಿವ್ಯಕ್ತಿ ಸ್ವಾತಂತ್ರ‍್ಯ, ಸಮುದಾಯ ಹಾಗು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅವು ನಮ್ಮ ಮುಂದೊಡ್ಡುತ್ತವೆ. ಪ್ರಭಾವ ಹಾಗೂ ಪರಿಣಾಮದಲ್ಲಿ ಅವು ಅಲ್ಪಕಾಲೀನ ಘಟನೆಗಳಾದ?, ಸಮಾಜದ ಸಮತೋಲನವನ್ನು ಅಲ್ಲಾಡಿಸಿ ಸಂಬಂಧಪಟ್ಟ ಸೃಜನಶೀಲ ಲೇಖಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಮರ್ಥ್ಯವುಳ್ಳದಾಗಿರುತ್ತವೆ. ಇದಕ್ಕೆ ಸಟಾನಿಕ್ ವರ್ಸಸ್ (೧೯೮೮) ಅಥವಾ ಲಜ್ಜಾ (೧೯೯೩) ವಿವಾದಗಳೇ ಉತ್ತಮ ಉದಾಹರಣೆಗಳು. ಭಾರತವೂ ಸಹ ಸಾಹಿತ್ಯ ವಿವಾದಗಳಿಂದ ಮುಕ್ತವಾಗಿಲ್ಲ. ನಿರ್ದಿಷ್ಟ ಸಾಹಿತ್ಯ ವಿವಾದಗಳ ಬಗ್ಗೆ ಅಸಂಖ್ಯಾತ ಲೇಖನ, ಪ್ರತಿಕ್ರಿಯೆಗಳಿದ್ದರೂ, ಅವುಗಳ ಬಗ್ಗೆ ಗಂಭೀರವಾದ, ಸವಿಸ್ತಾರವಾದ ಅಧ್ಯಯನ ಅತಿ ವಿರಳ. ಸಾಹಿತ್ಯ ವಿವಾದಗಳಿಂದುಂಟಾಗುವ ವಿಷಯಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಅವಲೋಕಿಸುವ ಪ್ರಯತ್ನಗಳು ಕಡಿಮೆ. ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದು ಸಾಹಿತ್ಯ-ವಿಮರ್ಶೆಯ ಸಂಪ್ರದಾಯತ್ವ. ಬದಲಾಗದೆ ಉಳಿದಿರುವ ವಿಮರ್ಶೆಯ ಮಾನದಂಡಗಳು ಸಾಹಿತ್ಯ ವಿವಾದಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಗತಿಯನ್ನು ಸಾಧಿಸಿಲ್ಲ. ಎರಡನೇಯದು ಸಾಹಿತ್ಯ ವಿವಾದಗಳಿಗೆ ಅಂಟಿಸುವ ‘ಮತೀಯವಾದಿ’ಯ ಪಟ್ಟಿ. ಇದರಿಂದ ಸಾಹಿತ್ಯ ವಿವಾದಗಳನ್ನು ಸವಿಸ್ತಾರವಾಗಿ ಮತ್ತು ಅರ್ಥಪೂರ್ಣವಾಗಿ ವಿಶ್ಲೇಷಿಸಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಸಾಹಿತ್ಯ ವಿವಾದಗಳನ್ನು ಸ್ವಯಂಪ್ರೇರಿತ, ಭಾವನಾತ್ಮಕ ಮತ್ತು ಯಾವಾಗಲೊಮ್ಮೆ ನಡೆಯುವ ‘ಅಹಿತಕರ’ ಘಟನೆಗಳು ಎಂದು ಭಾವಿಸಲಾಗಿದೆ. ಸಾಹಿತ್ಯದ ಗಂಭೀರತೆ ಮತ್ತು ಸುಲಲಿತ ಕಾರ್ಯಕ್ಕೆ ಇವುಗಳಿಂದ ಅಡ್ಡಿಯುಂಟಾಗುತ್ತದೆಯೆಂದು ಅನೇಕರು ವಿವಾದಗಳನ್ನು ಮತ್ತು ಅವುಗಳನ್ನು ಸೃಷ್ಟಿಸಿದವರನ್ನು ಖಂಡಿಸಲಾಗುತ್ತದೆ. ಇವು ಮತಿಭ್ರಮಣೆಗೊಂಡ ಜನರ ಗುಂಪಿನ ಅವೈಚಾರಿಕತೆಯ ಸಂಕೇತ ಎಂದು ಅನೇಕರು ನಂಬಿದ್ದಾರೆ. ಈ ತರಹದ ನಂಬಿಕೆಗಳು ಸಾಹಿತ್ಯ ವಿವಾದಗಳನ್ನು ಖಂಡಿಸಲು ಬಳಕೆಯಾಗುತ್ತವೆಯೇ ಹೊರತು ಅವುಗಳಿಂದ ವಿವಾದಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತಿಲ್ಲ. ವಿಮರ್ಶೆಯ ಸಂಪ್ರದಾಯವನ್ನು ಬೆಳೆಸುವುದಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲದಿರುವದರಿಂದ ಅವುಗಳನ್ನು ಮತೀಯವಾದದ ರಾಕ್ಷಸೀ ಲಕ್ಷಣಗಳೆಂದು ನಿರ್ಲಕ್ಷಿಸುವುದೇ ಒಳಿತೆಂದು ಹಲವಾರು ವಾದಿಸುತ್ತಾರೆ. ಇವಕ್ಕೆಲ್ಲಾ ಕಾರಣ ನಮ್ಮ ಪಠ್ಯ-ಕೇಂದ್ರಿತ ವಿಮರ್ಶಾ ಪದ್ಧತಿ. ಸಾಹಿತ್ಯ ವಿವಾದಗಳಿಗೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ಇದು ದೂರಕ್ಕಿಡುತ್ತದೆ. ಪಠ್ಯದ  ಅಂತರಂಗ (intrinsic) ವಿಷಯಗಳನ್ನು ಮಾತ್ರ ಪರಿಗಣಿಸುವ ಈ ವಿಮರ್ಶಾ ವಿಧಾನವು ಸಾಹಿತ್ಯವನ್ನು ಔಪಚಾರಿಕವಾಗಿ ಗ್ರಹಿಸುತ್ತದೆ. ಆಂಗ್ಲೋ-ಸ್ಯಾಕ್ಸ್ ನ್ ವಿಮರ್ಶಾ ಮಾದರಿಗಳಾದ ‘ನವ ವಿಮರ್ಶಾವಾದ’ (New Criticism) ಮತ್ತು ವ್ಯಾವಹಾರಿಕ ವಿಮರ್ಶಾವಾದಗಳು (practical criticism) ಈ ಪಠ್ಯ ಕೇಂದ್ರಿತ ಧೋರಣೆಗೆ ಪ್ರಮುಖ ಕಾರಣ. ಸಾಂಸ್ಥಿಕವಾಗಿ ಭದ್ರ ಬುನಾದಿಯನ್ನು ಹೊಂದಿರುವ ಈ ವಿಮರ್ಶಾ ಪದ್ಧತಿಗಳು ಸಾಹಿತ್ಯವನ್ನು ಔನತ್ಯಗೊಳಿಸಿ, ಅದು ಹೊರಡಿಸುವ ಅರ್ಥವನ್ನು ಮಾತ್ರ ಪರಿಗಣಿಸುತ್ತದೆ. ಇಲ್ಲಿ ಸಾಹಿತ್ಯವೆಂಬುದು ಸ್ವಾಯತ್ತತೆ ಹೊಂದಿದ ಮತ್ತು ತನ್ನದೆ ಆದ ವಿಶಿಷ್ಟ ಲಕ್ಷಣಗಳನ್ನೊಳಗೊಂಡ ಲೋಕ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳಲು ಯಾವುದೇ  ತರಹದ ಸೈದ್ಧಾಂತಿಕ ಪರಿಕರಗಳ ಅವಶ್ಯಕತೆಯಿಲ್ಲ. ಒಂದು ಸಾಹಿತ್ಯ ಕೃತಿಯು ಭೌತಿಕ ಸಂದರ್ಭಕ್ಕನುಗುಣವಾಗಿ ಮತ್ತು ಸಾಮಾಜಿಕ ಶಕ್ತಿಗಳಿಂದ ರೂಪುಗೊಳ್ಳುತ್ತಿರುತ್ತದೆ ಎಂಬ ಅಂಶವು ಇಲ್ಲಿ ಸಂಪೂರ್ಣ ಗೌಣ. ಇಂತಹ ವಿಮರ್ಶಾ ಪ್ರಕ್ರಿಯೆಯಲ್ಲಿ ಅರ್ಥವು ಪಠ್ಯ ಕೇಂದ್ರಿತವಾಗಿ ಹೊರಹೊಮ್ಮುತ್ತದೆ. ಪರಿಣಾಮವಾಗಿ ಸಾಹಿತ್ಯ ವಿವಾದಗಳು ಇತಿಹಾಸದಲ್ಲಿ ದಂತಕಥೆಗಳಾಗಿ ಕಣ್ಮರೆಯಾಗುತ್ತವೆ.

ಎರಡನೆ ಅಂಶವು ಭಾವನಾತ್ಮಕತೆಗೆ ಸಂಬಂಧಿಸಿದ್ದು. ಅನೇಕ ವಿದ್ವಾಂಸರು, ಸಂಶೋಧಕರು, ಪತ್ರಕರ್ತರು ಮತ್ತು ಕಾರ್ಯಕರ್ತರು ಸಾಹಿತ್ಯ ವಿವಾದಗಳನ್ನು ಮತೀಯವಾದದ ಕರಾಳ ಛಾಯೆಯೆಂದು ಹೀಗೆಳೆಯುತ್ತಾರೆ. ಇದಕ್ಕೆ ವಿರುದ್ಧವಾಗಿ ಮೂಡುವ ವಿಚಾರಗಳನ್ನು ಪ್ರಗತಿಪರವೆಂದು ಬಣ್ಣಿಸುತ್ತಾರೆ. ಸಾಹಿತ್ಯ ವಿವಾದಗಳನ್ನು ಸೃಷ್ಟಿ ಮಾಡಲು ಕಾರಣವಾದ ಕೆಲವೊಂದು ಹಿತಾಸಕ್ತಿಗಳು ಹಿಂಸಾತ್ಮಕ ಪದ್ಧತಿಗಳನ್ನು ಅನುಸರಿಸುವದರಿಂದ ಅವರನ್ನು ಮತೀಯವಾದಿಗಳೆಂದು ಖಂಡಿಸುತ್ತಾರೆ. ಸಾಹಿತ್ಯವನ್ನು ರಾಜಕೀಯಗೊಳಿಸಿ. ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಾರೆಂದು ಇವರ ವಾದ. ಇಲ್ಲಿಯೂ ಸಹ ಸಾಹಿತ್ಯವು ಸ್ವತಂತ್ರ ಮತ್ತು ಅಲಿಪ್ತವಾದ ಸೃಜನಶೀಲತೆಯೆಂದು, ಕೇವಲ ಪಂಡಿತರು, ವಿದ್ವಾಂಸರು ಮತ್ತು ಸೃಜನಶೀಲರು ಮಾತ್ರ ಸಾಹಿತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು ಎಂಬ ಧೋರಣೆ ಸಾಹಿತ್ಯ ವಿವಾದಗಳನ್ನು ಅಮುಲಾಗ್ರವಾಗಿ ಅರ್ಥ ಮಾಡಿಕೊಳ್ಳಲು ಅಡ್ಡಿಯನ್ನುಂಟು ಮಾಡುತ್ತದೆ. ಇಲ್ಲಿ ಸೃಜನೇತರ ಅಂಶಗಳಾದ ಮತೀಯವಾದಿಗಳ ಮತ್ತು ಅದರ ನಂಬಿಕೆಗಳು ಸಾಹಿತ್ಯವನ್ನು ಪ್ರವೇಶಿಸಬಾರದೆಂದು ನಿರ್ಭಂದ ಹೇರುತ್ತಾರೆ. ಇಲ್ಲಿಯೂ ಸಹ ವಿವಾದಕ್ಕೆ ಸಂಬಂಧಿಸದ ಧರ್ಮ, ನಂಬಿಕೆ, ಸಿದ್ಧಾಂತ, ನೈತಿಕತೆ, ಇತ್ಯಾದಿಗಳನ್ನು ಸಾಹಿತ್ಯದ ಜೊತೆಗೆ ಹೇಗೆ ತಳುಕು ಹಾಕಿಕೊಂಡಿದೆಯೆಂದು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷಿಸಲಾಗುವುದು.

ಸಾಹಿತ್ಯ ವಿವಾದಗಳು ಕೇವಲ ಕೋಪೋದ್ರಿಕ್ತ ಘಟನೆಗಳಲ್ಲ. ಅವು ಮತಿಭ್ರಮಣೆಯ ಅಥವಾ ಪಥಭ್ರಮಣೆಗಳು ಸಂಗತಿಗಳಲ್ಲ. ಅವು ಸಮಾಜದ ಭೌತಿಕ ಪರಿಸ್ಥಿತಿಗಳ (material conditions) ಜೊತೆಗೆ ತೀವ್ರವಾಗಿ ಸಂಬಂಧವನ್ನೊಂದಿದ್ದು, ಅವು ‘ನ್ಯಾಯಕ್ಕಾಗಿ’ ಅಥವಾ ‘ಅಧಿಪತ್ಯ’ಕ್ಕಾಗಿ ಆಗಾಗ ಉಂಟಾಗುವ ‘ಸಾಂಸ್ಕೃತಿಕ ಸಂಘರ್ಷಗಳು’ ಈ ವಿರೋಧಾತ್ಮಕ ಕಾರಣಗಳಿಗಾಗಿ ಉಂಟಾಗುವ ಸಾಹಿತ್ಯ ವಿವಾದಗಳನ್ನು ಮತೀಯವಾದಿ ಅಥವಾ ಪಠ್ಯ-ಕೇಂದ್ರಿತ ವಿಮರ್ಶಾ ಚೌಕಟ್ಟಿನೊಳಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೃತಿಯ ನಿಷೇಧವು ಸಾರ್ವಜನಿಕ ವಲಯದಲ್ಲಿ ವಾದ-ವಿವಾದಗಳನ್ನು ಬುಗಿಲೆಬ್ಬಿಸುತ್ತವೆ. ಅವು ಸಾರ್ವಜನಿಕ ರೂಪವನ್ನು ಪಡೆಯುವುದರಿಂದ ಅವುಗಳನ್ನು ನಾವು ಸಾಮಾಜಿಕ ಘಟನೆಗಳೆಂದು ತಿಳಿಯಬೇಕಾಗುತ್ತದೆ. ಈ ಸಾಮಾಜಿಕ ಘಟನೆಯು ಅನೇಕ ಸಾಮಾಜಿಕ ಶಕ್ತಿಗಳನ್ನು ಒಳಗೊಂಡಿರುವದರಿಂದ ನಮ್ಮ ಓದುವ ಕ್ರಮ, ವ್ಯಾಖ್ಯಾನ ಹಾಗು ಅರ್ಥೈಸುವ ಕ್ರಮವನ್ನು ಇವು ಪ್ರಭಾವಿಸುತ್ತಿರುತ್ತವೆ. ಆದಾಗ್ಯು ಪದೇ, ಪದೇ, ಉಂಟಾಗುವ ಸಾಹಿತ್ಯ ವಿವಾದಗಳನ್ನು ಸರಳವಾಗಿ ವಿವರಿಸಲು ಅಥವಾ ವರ್ಗಿಕರಿಸಲು ಅಥವಾ ತೀರ್ಪುಕೊಡಲು ಸಾಧ್ಯವಾಗಿಸುವದಿಲ್ಲ. ಒಂದು ಕಡೆ ಅನೇಕ ವಿವಾದಗಳು ಪ್ರಬಲ ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಂದರ್ಭಗಳನ್ನು ಸೃಷ್ಟಿಸಿದರೆ, ಇತರ ವಿವಾದಗಳು ಶೋಷಣೆಯ/ಅಸಮಾನತೆಯ (ಲಿಂಗ, ಜಾತಿ, ಜನಾಂಗೀಯ ಶೋಷಣೆಯ ಅಂಶಗಳಿಗೆ ಸಂಬಂಧಿಸಿದ್ದು) ವಿರುದ್ಧ ದನಿ ಎತ್ತಿದ ಘಟನೆಗಳಾಗಿವೆ. ಅವು ಕೆಲವೊಮ್ಮೆ ಸಾಮಾಜಿಕ ಗುರುತನ್ನು ಸ್ಥಾಪಿಸಲು ಸಹ ಸಹಕಾರಿಯಾಗಿರುತ್ತವೆ ಅಥವಾ ಬಳಕೆಯಾಗಿಸಲ್ಪಡುತ್ತವೆ. ಈ ರೀತಿಯ ವೈವಿಧ್ಯತೆಯಿಂದ ಮತ್ತು ವಿರೋಧಾತ್ಮಕ ಕಾರಣಗಳಿಂದ ಸಾಹಿತ್ಯ ವಿವಾದಗಳನ್ನು ವರ್ಗೀರಿಸಲು ವಿಂಗಡಿಸಲು ಅಸಾಧ್ಯ. ಆದಾಗ್ಯು ಒಟ್ಟಾರೆಯಾಗಿ ಹೇಳುವುದಾದರೆ ಸಾಹಿತ್ಯ ವಿವಾದಗಳ ಪರಿಣಾಮಗಳನ್ನು ನಾವು ಊಹಿಸಲಾಗದಿರುವುದರಿಂದ ಅವುಗಳನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಲು ನಮ್ಮ ಕುತೂಹಲವನ್ನು ಪ್ರಚೋದಿಸಿವೆ.

ಇತ್ತೀಚಿನ ಅಂತ್ಶಸ್ತ್ರೀಯ ಸಂಶೋಧನೆಗಳು ಭಾಷೆಯ ಬಗ್ಗೆ ಹುಟ್ಟು ಹಾಕಿರುವ ನವೀನ ಪ್ರಶ್ನೆಗಳು ಮತ್ತು ಜ್ಞಾನ/ಶಕ್ತಿಗಳ (nexus between power and knowledge) ನಡುವಿನ ಸಂಬಂಧಗಳು ಸಾಹಿತ್ಯ ವಿವಾದಗಳನ್ನು ಗಂಭೀರವಾಗಿ ಮತ್ತು ಶಿಸ್ತಿನಿಂದ ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿವೆ. ಕೆಲವು ವಿದ್ವಾಂಸರು ಸಾಹಿತ್ಯ ವಿವಾದಗಳನ್ನು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೋಭೆಯ/ಆತಂಕ ಭರಿತ ಸನ್ನಿವೇಶವು ಉತ್ಪನ್ನಗಳೆಂದು ವಾದಿಸಿದ್ದಾರೆ. ಸಲ್ಮಾನ್ ರಶ್ದಿಯ ಸಟಾನಿಕ್ ವರ್ಸ್‌ಸ್ ವಿವಾದವು ಅನೇಕ ಅಂಶಗಳ ಸುತ್ತ ಬೌದ್ಧಿಕ ಚರ್ಚೆಗಳನ್ನು ಹುಟ್ಟು ಹಾಕಿತು. ಉದಾಹರಣೆಗೆ ಪಾಶ್ಚಾತ್ಯ ರಾಜಕೀಯ ಚಿಂತಕರಾದ ಚಾರ್ಲ್ಸ್ ಟೇಲರ್ ಎಂಬುವವರು ಸಟಾನಿಕ್ ವರ್ಸಸ್ ವಿವಾದವು ಪಾಶ್ಚಾತ್ಯದ ಅಭಿವ್ಯಕ್ತಿ ಸ್ವಾತಂತ್ರ‍್ಯದ ಗರ್ವದ ಮೇಲೆ ಮತ್ತು ಅದು ಹೆಮ್ಮೆ ಪಡುವ ವೈವಿಧ್ಯಮಯ ಸಂಸ್ಕೃತಿಗೆ ಕೊಟ್ಟ ಪೆಡಲಿ ಏಟು ಎಂದು ಭಾವಿಸಿದ್ದಾರೆ. ಈ ವಿವಾದದ ಸಂದರ್ಭದಲ್ಲಿ ಇಂಗ್ಲೆಂಡ್ ಸರ್ಕಾರವು ಕಾದಂಬರಿಯ ಸುತ್ತ ವಿವಾದ ಉಂಟಾದಾಗ ಅದರ ಮೇಲೆ ತಕ್ಷಣ ನಿರ್ಬಂಧ ಹೇರದೆ, ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಸೋಗಿನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ರೊಚ್ಚಿಗೇಳಿಸಿದ್ದನ್ನು ಅವರು ಬಲವಾಗಿ ಪ್ರಶ್ನಿಸಿದ್ದಾರೆ (೧೯೮೯ : ೧೧೮-೧೨೨). ಫಿರೋಜ್ ಜುಸ್ಸವಾಲ ಎಂಬ ಸಾಹಿತ್ಯ ವಿಮರ್ಶಕ ಈ ಕಾದಂಬರಿಯನ್ನು ಎಡ್ವರ್ಡ ಸೈದ್ನ ಓರಿಯಂಟಲಿಸ್ಂ ಹಿನ್ನಲೆಯಲ್ಲಿ ಅಧ್ಯಯನ ಮಾಡಿ, ರಶ್ದಿಯನ್ನು ಓರಿಯಂಟಲಿಸ್ಟ್ ದೃಷ್ಟಿಕೋನಕ್ಕೆ ಉಂಟಾದ ವಿರೋಧವೆಂದು ಜುಸ್ಸಾವಾಲರ ಅಭಿಪ್ರಾಯ (೧೯೮೯, ೧೦೬-೧೧೬). ಪೀಟರ್ ಬೇಯರ್ ಎಂಬ ಮತ್ತೊಬ್ಬ ರಾಜಕೀಯ ಶಾಸ್ತ್ರಜ್ಞ ಈ ವಿವಾದವು ಪಾಶ್ಚಾತ್ಯ ಪ್ರಬಲತೆ ಮತ್ತು ಗೋಳಿಕರಣಕ್ಕೆ (globalization) ಮುಸ್ಲಿಂಮರು ಒಡ್ಡಿದ ಪ್ರತಿರೋಧದ ಪರಿಣಾಮ ಎಂದು ವಾದಿಸುತ್ತಾರೆ.

ಸಾಹಿತ್ಯ ವಿವಾದಗಳನ್ನು ಅರ್ಥೈಸಿಕೊಳ್ಳಲು ಈ ಮೂವರು ‘ಸಾಹಿತ್ಯ ಪಾವಿತ್ರ‍್ಯತೆ’ಯನ್ನು ದಾಟಿ, ಅಂತರ್ ಶಿಸ್ತೀಯ ಅಧ್ಯಯನಕಾರನಾಗಿ ನಮಗೆ ಕಾಣುತ್ತಾರೆ. ಒಂದು ಸಾಹಿತ್ಯ ಕೃತಿಯನ್ನು ಓದುವ ಮತ್ತು ಅರ್ಥೈಸುವ ಪ್ರಕ್ರಿಯೆ ಹೇಗೆ ಅನೇಕ ಅಂಶಗಳಿಂದ ಪ್ರಭಾವಿತವಾಗಿರುತ್ತವೆಯೆಂದು ಈ ಮೂವರ ಅಧ್ಯಯನಗಳಿಂದ ತಿಳಿದುಕೊಳ್ಳಬಹುದು. ಇಂತಹ ಅಧ್ಯಯನಗಳು ರಾಜಕೀಯದ ವಿವಿಧ ಮಜಲುಗಳು ಮತ್ತು ಅವುಗಳ ಸಂಕೀರ್ಣತೆಯನ್ನ ವಿಶ್ಲೇಷಿಸಲು ಸಹಾಯಕವಾಗಿವೆ. ಇದಕ್ಕಿಂತ ಮಿಗಿಲಾಗಿ ಇವರ ಲೇಖನಗಳು ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿಗಳ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನು ಅವಲೋಕಿಸಲು ಸಹಾಯಕವಾಗಿವೆ. ಇವರ ಅಧ್ಯಯನದಿಂದ ನಮಗೆ ನಮ್ಮ ಸಂದರ್ಭದಲ್ಲಾದ ಸಾಹಿತ್ಯ ವಿವಾದಗಳನ್ನು ಅಮೂಲಾಗ್ರವಾಗಿ ವಿಶ್ಲೇಷಿಸಲು ಮತ್ತು ಅವಕ್ಕೆ ಒಂದು ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸಲು ಅನುಕೂಲವಾಗುತ್ತದೆ. ಮುಂದಿನ ಚರ್ಚೆ ಮತ್ತು ಅಂಶಗಳು ಸಾಹಿತ್ಯ ವಿವಾದಗಳ ಉಗಮ, ಕಾರಣ ಮತ್ತು ಅವಕ್ಕೆ ಸಂಬಂಧಿಸಿದ ಇತರ ಅಂಶಗಳನ್ನು ಅವಲೋಕಿಸುತ್ತದೆ. ಈ ಅಂಶಗಳು ಅಂತಿಮವೇನಲ್ಲ. ವಾದದ ಅನುಕೂಲಕ್ಕಾಗಿ ನಾನು ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದಲ್ಲುಂಟಾದ ವಿವಾದಗಳನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದೇನೆ.

.        ‘ಸಾರ್ವಜನಿಕ ನಂಬಿಕೆಗಳ ತಪ್ಪು ಪ್ರತಿನಿಧೀಕರಣ

ಸಾಹಿತ್ಯ ಕೃತಿಯಲ್ಲಿ ‘ಸಾರ್ವಜನಿಕ’ ನಂಬಿಕೆಗಳನ್ನೇನಾದರು ತಪ್ಪಾಗಿ ಪ್ರತಿನಿಧಿಸಿದರೆ ಅಥವಾ ಅರ್ಥೈಸಿದರೆ, ಸಾಹಿತ್ಯ ವಿವಾದಗಳು ಉಂಟಾಗುತ್ತವೆ. ಆ ಕೃತಿಯನ್ನು ನಿಷೇಧಿಸಬೇಕೆಂದು ಒತ್ತಾಯಿಸುವ ಒಂದು ಗುಂಪು ಹುಟ್ಟಿಕೊಳ್ಳುತ್ತದೆ. ಇದು ತಪ್ಪು ವ್ಯಾಖ್ಯಾನಗಳಿಗೆ ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಕೃತಿಯು ಪ್ರಚಲಿತದಲ್ಲಿರುವ ಸಾಮಾಜಿಕ ಮೌಲ್ಯ, ನೈತಿಕತೆ (ಕೌಟಂಬಿಕ, ವಿವಾಹ, ಸ್ತ್ರೀ, ಧರ್ಮ, ಇತ್ಯಾದಿಗಳಿಗೆ ಸಂಬಂಧಿಸಿದ್ದು), ಐತಿಹಾಸಿಕ ವ್ಯಕ್ತಿಗಳು ಅಥವಾ ಸಾರ್ವಜನಿಕವಾಗಿ ಅಂಗೀಕೃತವಾಗಿರುವ ನಂಬಿಕೆಗಳನ್ನು ತಪ್ಪಾಗಿ/ತಿರುಚಿ ಚಿತ್ರಿಸಿದ್ದರೆ ಅದರ ವಿರುದ್ಧ ವಿರೋಧವನ್ನು ವ್ಯಕ್ತಪಡಿಸಲಾಗುವುದು. ಈ ಸಾರ್ವಜನಿಕ ನಂಬಿಕೆಗಳು ಹಿಂದಿನಿಂದಲೂ ‘ಬದಲಾಗದೆ’ ಉಳಿದುಕೊಂಡು ಬಂದಿರುವ ಬಳುವಳಿಗಳಾದುದರಿಂದ ಮತ್ತು ಸಮಕಾಲೀನ ಸಮಾಜದ ಅವಿಚ್ಛಿನ್ನ ಸೂಚಕಗಳಾದುದರಿಂದ, ಅವುಗಳನ್ನು ತಿರುಚಿ ಬರೆಯುವದನ್ನು ವಿಘಟನಕಾರಿಯೆಂದು ಖಂಡಿಸಲಾಗುವುದು. ಇಂಗ್ಲಿಷ್ ಕಾದಂಬರಿಕಾರ ಥಾಮಸ್ ಹಾರ್ಡಿಯ ಜ್ಯೂಡ್ ದಿ ಅಬ್ಸ್ಕೂರ್ (೧೮೯೫)ನ ಬಗ್ಗೆ ಬುಗಿಲೆದ್ದ ವಿವಾದ ಅದು ಕ್ರಿಶ್ಚಿಯನ್ ಕುಟುಂಬ, ಪ್ರೀತಿ, ವೂವಾಹಿಕ ಸಂಬಂಧಗಳ ಬಗ್ಗೆ ಅಶ್ಲೀಲವಾದ ವಿವರಗಳನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಕೋಪೋದ್ರಿಕ್ತಗೊಂಡ ಈ ಜನರು ತಪ್ಪು ಪ್ರತಿನಿಧಿಕರಣವನ್ನು ಸರಿಪಡಿಸಿ ಸಮಾಜವನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ಸ್ವಯಂ ಹೇರಿಕೊಳ್ಳುತ್ತಾರೆ. ಕನ್ನಡದ ಸಂದರ್ಭದಲ್ಲಿಯೂ ಸಹ ತಪ್ಪು ಪ್ರಾತಿನಿಧ್ಯ ಮತ್ತು ತಪ್ಪು ವ್ಯಾಖ್ಯಾನಗಳ ವಿರುದ್ಧವಾಗಿ ವಿವಾದಗಳುಂಟಾಗಿವೆ. ೧೯೯೭ರಲ್ಲಿ ಬುಗಿಲೆದ್ದ ಧರ್ಮಕಾರಣ ವಿವಾದವು ಲಿಂಗಾಯತರ ಅಸಮಧಾನವನ್ನು ಪ್ರದರ್ಶಿಸಿತು. ಬಸವಣ್ಣ ಮತ್ತು ಆತನ ಅಕ್ಕ ಅಕ್ಕನಾಗಮ್ಮನನ್ನು ‘ತಪ್ಪಾಗಿ’ ಚಿತ್ರಿಸಿದ್ದರಿಂದ ಲಿಂಗಾಯತ ಪ್ರತಿಭಟನಕಾರರು ಅದನ್ನು ಇತಿಹಾಸಕ್ಕೆ ಎಸಗಿದ ಅಪಚಾರವೆಂದು, ಅದರ ನಿಷೇಧಕ್ಕೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿತು. ಕಾದಂಬರಿಯಲ್ಲಿ ಅಕ್ಕನಾಗಮ್ಮನನ್ನು ‘ವೈಶ್ಯೆ’ ಎಂದು ಚಿತ್ರಿಸಲಾಗಿದೆ ಎಂದು ಅಸಂಖ್ಯಾತ ಲಿಂಗಾಯತರು ಮತ್ತು ಲಿಂಗಾಯತರ ಮಹಿಳೆಯರು ಅದರ ಬೀದಿಗಳಿದರು. ಇದೇ ಸಂದರ್ಭದಲ್ಲಿ ಅವರು ನೈತಿಕತೆ ಏನು, ಅದನ್ನು ಯಾವ ರೀತಿಯಲ್ಲಿ ಸಾಹಿತ್ಯ ಕೃತಿಗಳಲ್ಲಿ ಪ್ರತಿನಿಧಿಸಬೇಕೆಂದು ಲೇಖಕನಿಗೆ ಪಾಠ ಹೇಳುವ ಸಾಹಸವನ್ನು ಪ್ರದರ್ಶಿಸಿದರು.

ನೈತಿಕತೆಯನ್ನು ತಪ್ಪಾಗಿ ವ್ಯಾಖ್ಯಾನಿಸುವುದರಿಂದ ಮಾತ್ರ ಸಾಹಿತ್ಯ ವಿವಾದಗಳು ಉಂಟಾಗುತ್ತವೆಂದು ಹೇಳಲಿಕ್ಕಾಗುವದಿಲ್ಲ. ಇದಕ್ಕೆ ಸಂವಾದಿಯಾಗಿ ಅನೇಕ ಕಾರಣಗಳು ಇವೆ. ಪ್ರತಿಭಟನಾಕಾರರು ಸಾಹಿತ್ಯ ಕೃತಿಯಲ್ಲಿ ಕಾಣುವ ನೈತಿಕ ‘ಪಥ ಭ್ರಮಣೆಯ’ ವಿರುದ್ಧ ಹೋರಾಟ ಮಾಡಿದರೆ (ಹಲವಾರು ಬಾರಿ ಹಿಂಸಾತ್ಮಕವಾಗಿ), ಮತ್ತೊಂದು ಗುಂಪು ಈ ತರಹದ ಹಿಂಸಾತ್ಮಕ ಪ್ರತಿಭಟನೆಗೆ ಸಮ್ಮತಿಯನ್ನು ನೀಡದಿದ್ದರೂ ಸಾಹಿತ್ಯ ಕೃತಿಯ ನಿಷೇಧಕ್ಕೆ ನೈತಿಕತೆಯ ಹೊರತಾದ ‘ಸಾಹಿತ್ಯ’ ಕಾರಣಗಳನ್ನು ನೀಡುತ್ತಾರೆ. ಈ ಗುಂಪು ಲೇಖಕನ ಸೃಜನಶೀಲತೆಗೆ ಬಲವಾದ ಬೆಂಬಲವನ್ನು ಸೂಚಿಸುತ್ತದೆ. ಈ ಸೃಜನಶೀಲತೆಗೆ ವಿರುದ್ಧವಾದ ಯಾವುದೇ ಹಿಂಸಾತ್ಮಕ ಪ್ರತಿಭಟನೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ನಿಷೇಧದ ವಿರುದ್ಧ ಮತ್ತು ಪರವಾಗಿರುವವರ ವಾದಕ್ಕೆ ಪರ್ಯಾಯ ಮಾದರಿಯನ್ನು ಸೂಚಿಸುವ ಪ್ರಯತ್ನ ಮಾಡುತ್ತಾರೆ. ಸೌಂದರ್ಯ ಶಾಸ್ತ್ರ, ಕಥೆ ಮತ್ತು ಸೃಜನಶೀಲತೆಗೆ ವಿವಾದಾತ್ಮಕ ಕೃತಿಯು ವ್ಯತಿರಿಕ್ತವಾಗಿರುವದರಿಂದ ಸಾಹಿತ್ಯ ಕೃತಿಯನ್ನು ನಿಷೇಧಿಸಬೇಕೆಂದು ಈ ಗುಂಪು ಒತ್ತಾಯಿಸುತ್ತದೆ. ಇಂತಹ ಗುಂಪಿಗೆ ಪ್ರಶ್ನಾತ್ಮಕ/ವಿವಾದಾತ್ಮಕ ಸಾಹಿತ್ಯ ಕೃತಿಯು ಓದಲು ಅಥವಾ ವಿಮರ್ಶಿಸಲು ಅನರ್ಹ, ಸಾಹಿತ್ಯದ ಸಾಂಪ್ರದಾಯಿಕ ವಿಚಾರಗಳಾದ ಸೃಜನಶೀಲತೆ, ಸೌಂದರ್ಯ ಶಾಸ್ತ್ರ ಮತ್ತು ಕಲ್ಪನೆಗಳನ್ನು ಅವು ಯಥಾವತ್ತಾಗಿ ಇರುವ, ಬದಲಾಗದ ಪರಿಕಲ್ಪನೆಗಳು ಎಂದು ಮರು-ಸ್ಥಾಪಿಸುವ ಪ್ರಯತ್ನವನ್ನು ಈ ಧೋರಣೆಯಲ್ಲಿ ನೋಡಬಹುದು ಎಂದು ಮರು-ಸ್ಥಾಪಿಸುವ ಪ್ರಯತ್ನವನ್ನು ಈ ಧೋರಣೆಯಲ್ಲಿ ನೋಡಬಹುದು.

.        ಲೇಖಕನ ಸಾರ್ವಜನಿಕ ಸ್ಥಾನಮಾನ

ಒಂದು ಸಾಹಿತ್ಯ ಕೃತಿಯು ತನಗೆ ತಾನೇ ವಿವಾದವನ್ನು ಸೃಷ್ಟಿ ಮಾಡಿಕೊಳ್ಳುವಷ್ಟು ಸಾಮರ್ಥ್ಯವಿರುವುದಿ‌ಲ್ಲ. ವಿವಾದಗಳುಂಟಾಗುವದಕ್ಕೆ ಸಾಹಿತ್ಯ ಕೃತಿಯ ಲೇಖಕನ ಸಾರ್ವಜನಿಕ ಸ್ಥಾನ-ಮಾನವು ಕಾರಣವಾಗಿರುತ್ತದೆ. ಲೇಖಕನು ಪ್ರಸಿದ್ಧಿಯನ್ನು ಪಡೆದಿದ್ದರೆ, ಆತನ ಕೃತಿಯ ಬಗ್ಗೆ ಎದ್ದಿರುವ ವಿವಾದವು ತೀವ್ರ ಸ್ವರೂಪ ತಾಳುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಸಲ್ಮಾನ್ ರಶ್ದಿಯ ಸಟಾನಿಕ್ ವರ್ಸಸ್ ವಿವಾದ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹಾಗು ಖ್ಯಾತಿಯನ್ನು ಪಡೆದಿದ್ದ ಸಲ್ಮಾನ್ ರಶ್ದಿಯ ಈ ಕಾದಂಬರಿ ತೀವ್ರ ವಿವಾದಕ್ಕೊಳಗಾಗಿದ್ದು ಆತನ ಕಾದಂಬರಿಗೆ ಇದ್ದ ಅಸಂಖ್ಯಾತ ಓದುಗರು. ಈ ಕಾದಂಬರಿಯು ಜಾಗತಿಕ ಮಟ್ಟದಲ್ಲಿ ಇಸ್ಲಾಂ ಧರ್ಮಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ಇದರ ವಿರುದ್ಧ ಅನೇಕ ಕಡೆ ಪ್ರತಿಭಟನೆಗಳಾದವು. ಇದೇ ರೀತಿಯಲ್ಲಿ ಕನ್ನಡದ ಯು.ಆರ್. ಅನಂತಮೂರ್ತಿಯವರ ಕಾದಂಬರಿ ಸಂಸ್ಕಾರ (೧೯೭೦) ಆಧಾರಿತ ಚಲನಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾದ ಅಂಶವಿತ್ತೆಂದು (ಅಶ್ಲೀಲತೆಗೆ ಸಂಬಂಧಿಸಿದ್ದು) ಬ್ರಾಹ್ಮಣ ಸಮುದಾಯದಿಂದ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಯು.ಆರ್. ಅನಂತಮೂರ್ತಿಯವರ ಖ್ಯಾತಿ ಸಂದರ್ಭಗಳಲ್ಲಿ ಲೇಖಕನ ಜವಾಬ್ದಾರಿ, ನೈತಿಕತೆ ಮತ್ತು ನಿಷ್ಠೆಯನ್ನು ಬಲವಾಗಿ ಪ್ರಶ್ನಿಸಲಾಗುತ್ತದೆ. ಸಾರ್ವಜನಿಕ ಓದುಗರನ್ನು ಉದ್ದೇಶಪೂರ್ವಕವಾಗಿ ಮನನೋಯಿಸಲು ಲೇಖಕ ಇಂತಹ ಕಾದಂಬರಿಗಳನ್ನು ಬರೆದಿದ್ದಾನೆಂದು ಆರೋಪಿಸಲಾಗುವುದು. ಕೆಲವೇ ಕೆಲವು ಓದುಗರಿಗೆ ಇಂತಹ ಕೃತಿಗಳಿಂದ ಮನನೋಯುವಂತಾಗಿದ್ದರೂ ಅದನ್ನು ಸಾರ್ವಜನಿಕಗೊಳಿಸಿ ಇಡೀ ಸಮಾಜವೇ ಈ ಕೃತಿಯಿಂದ ತೊಂದರೆಗೀಡಾಗಿದೆಯೆಂದು ಬಿಂಬಿಸಲಾಗುವುದು.

.        ಸರ್ಕಾರಿ/ಸಾರ್ವಜನಿಕ/ ಪ್ರಭುತ್ವ ಮನ್ನಣೆ

ಪ್ರಶ್ನಾತ್ಮಕ ಸಾಹಿತ್ಯ ಕೃತಿಗೆ ಸಾರ್ವಜನಿಕ ಮನ್ನಣೆ ಸಿಕ್ಕಾಗ ಸಾಹಿತ್ಯ ವಿವಾದಗಳು ಉದ್ಭವವಾಗುವ ಸಂಬಂಧವುಂಟು. ಐತಿಹಾಸಿಕ ಅಥವಾ ಸಾಂಸ್ಕೃತಿಕ ಮಹತ್ವವುಳ್ಳ ಕೃತಿಗಳು ಇದೇ ಕಾರಣಕ್ಕಾಗಿ ಕೆಂಗಣ್ಣಿಗೆ ಗುರಿಯಾಗಿರುವ ಉದಾಹರಣೆಗಳು ಅನೇಕ. ಇಲ್ಲಿ ಸಾರ್ವಜನಿಕ ಪ್ರಭುತ್ವವೆಂದರೆ ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳಾದ ರಾಜ್ಯ ಸಾಹಿತ್ಯ ಅಕಾಡೆಮಿ, ವಿಶ್ವ ವಿದ್ಯಾನಿಲಯಗಳು. ಇತ್ಯಾದಿ. ಪ್ರಭುತ್ವ ಮನ್ನಣೆ ಎಂದರೆ ವಿಸ್ತೃತವಾದ ಅಂಗೀಕಾರ, ಪ್ರಸರಣ ಮತ್ತು ಓದುಗಾರಿಕೆ. ಸಾರ್ವಜನಿಕ ಮನ್ನಣೆಯಿಂದ ಉಂಟಾಗುವ ಈ ಪ್ರಭಾವದ ಬಗ್ಗೆ ಎಚ್ಚರಿಕೆ ಪ್ರತಿಭಟನಕಾರರು ಈ ಸಾಹಿತ್ಯ ಕೃತಿಯು ಓದುಗರ ಮೇಲೆ ಉಂಟು ಮಾಡುಬಹುದಾದ ‘ದುಷ್ಪರಿಣಾಮದ’ ಬಗ್ಗೆ ಕೆಂಡ ಕಾರುತ್ತಾರೆ. ಪ್ರತಿಭಟನಕಾರರು ರಾಜ್ಯ ಪ್ರಭುತ್ವದ ಮೇಲೆ ಒತ್ತಡ ಹೇರಿ, ಬಲವಂತವಾಗಿ ಆ ಕೃತಿಯ ನಿಷೇಧಕ್ಕೆ ಅಥವಾ ಅದರ ವಿರುದ್ಧ ಕಾನೂನು ಕ್ರಮಕ್ಕೆ ಬೀದಿಗಳಿಯುತ್ತಾರೆ. ಉದಾಹರಣೆಗೆ ಮಾಸ್ತಿಯವರ ಚೆನ್ನಬಸವ ನಾಯಕ (೧೯೫೬), ಶಿವಪ್ರಕಾಶರ ಮಹಾಚೈತ್ರ (೧೯೯೪) ಮತ್ತು ಪಿ.ವಿ. ನಾರಾಯಣರ ಧರ್ಮಕಾರಣ (೧೯೯೭) ಕೃತಿಗಳು[2] ಒಂದು ವರ್ಗದ ಲಿಂಗಾಯತರ ಕೋಪಕ್ಕೆ ಗುರಿಯಾದಂತವು. ಈ ಎಲ್ಲಾ ಕೃತಿಗಳಿಗೆ ಸರ್ಕಾರಿ ಪ್ರಭುತ್ವದ ಮನ್ನಣೆ ಸಿಕ್ಕಾಗ ಅದರ ವಿರುದ್ಧ ಆದಂತ ವಿವಾದಗಳು ನನ್ನ ಅಂಶವನ್ನು ಪುಷ್ಟೀಕರಿಸುತ್ತವೆ. ಈ ವಿವಾದಗಳಲ್ಲಿ ಪ್ರತಿಭಟನಕಾರರು ಅಥವಾ ಬುದ್ಧಿಜೀವಿಗಳು ಪ್ರಜಾಪ್ರಭುತ್ವ, ಜಾತ್ಯಾತೀತತೆ ಬಗ್ಗೆ ಅನೇಕ ಪ್ರಶ್ನೆಗಳನ್ನು ಹಾಗು ಸಂದೇಹಗಳನ್ನು ವ್ಯಕ್ತಪಡಿಸುತ್ತಾರೆ. ಸಮಾಜಶಾಸ್ತ್ರಜ್ಞೆ ನೀರಾ ಚಂದೋಕೆ ಸರಿಯಾಗಿ ಭಾವಿಸುವ ಹಾಗೆ ಈ ವಿವಾದಗಳು “ನಾಗರಿಕ ಸಮಾಜಕ್ಕೂ ಮತ್ತು ರಾಜ್ಯಕ್ಕು” ನಡುವೆ ನಡೆಯುವ ಸಂಘರ್ಷ.

.        ಸಾಹಿತ್ಯದ ಅಂಶಗಳು

ಇದುವರೆಗಿನ ಚರ್ಚೆ ಪ್ರಾಮುಖ್ಯತೆ ಪಡೆದ ಸಾಹಿತ್ಯೇತರ ಅಂಶಗಳು ಸಾಹಿತ್ಯ ವಿವಾದಗಳನ್ನು ಅರ್ಥ ಮಾಡಿಕೊಳ್ಳಲು ಸಂಪೂರ್ಣವಾಗಿ ಸಹಕಾರಿಯಾಗುವುದಿಲ್ಲ. ಪ್ರಶ್ನಾತ್ಮಕ ಕೃತಿಯ ‘ಸಾಹಿತ್ಯ’ ಅಂಶಗಳೂ ಸಹ ವಿವಾದಗಳಿಗೆ ಕಾರಣೀಭೂತವಾಗುತ್ತವೆ. ಯಾವುದೇ ಸಾಹಿತ್ಯ ಕೃತಿಯು ಮುಗ್ಧ ಅಥವಾ ಅಲಿಪ್ತವಲ್ಲ. ಆದ್ದರಿಂದ, ಅದು ವಿವಿಧ ಓದುಗರ ನಡುವೆ ‘ಪದ ಘರ್ಷಣೆ’ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕುತ್ತವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಕೃತಿಯು ಈಗಾಗಲೇ ಚಾಲ್ತಿಯಲ್ಲಿರುವ ಸಾಹಿತ್ಯ ಆಚರಣೆ, ನಂಬಿಕೆ ಮತ್ತು ನಿಯಮಗಳಿಗೆ ವ್ಯತಿರಿಕ್ತವಾದ ಚಲನಶೀಲತೆಯನ್ನು ಸಂಕೇತಿಸುತ್ತದೆ ಮತ್ತು ನವೀನ ವಿಚಾರಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸಾಹಿತ್ಯ ನಿಯಮಗಳನ್ನು ಯಾರು, ಹೇಗೆ, ಎಷ್ಟು ಮತ್ತು ಯಾಕೆ ಅನುಸರಿಸುತ್ತಾರೆ ಅಥವಾ ಲಭ್ಯವಿರುವ ಸಾಹಿತ್ಯ ನಿಯಮಗಳಿಗೆ ಪರ್ಯಾಯವನ್ನು ಏಕೆ ಸೂಚಿಸುತ್ತಾರೆ ಎಂಬ ಅಂಶವನ್ನು ತಿಳಿಯುವ ಅವಶ್ಯಕತೆ ಇದೆ. ಈ ಕೃತಿಯನ್ನು ಓದುಗ ಪ್ರಪಂಚವೂ ಯಾವ ರೀತಿಯಲ್ಲಿ ಸ್ವೀಕರಿಸುತ್ತದೆ ಎಂಬುದು ಸಹ ಮುಖ್ಯ. ಈ ಮಾರ್ಗವು ಪಠ್ಯ ಕೇಂದ್ರಿತ ಅಂಶವನ್ನು ಎತ್ತಿ ಹಿಡಿದು. ಪ್ರಶ್ನಾತ್ಮಕ ಕೃತಿಯಲ್ಲಿ ಕಾಣಸಿಗುವ ಅಲಂಕಾರಗಳು, ಶೈಲಿ, ಪಾತ್ರ ವಿವರಣೆ, ಚಿತ್ರಣ, ಇತ್ಯಾದಿಗಳನ್ನು ಅಧ್ಯಯನ ಮಾಡುವ ಜರೂರತ್ತನ್ನು ಪ್ರತಿಪಾದಿಸುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯನ್ನು ನಾವು ಪರೀಕ್ಷಿಸೋಣ. ಹೈದರ್ ಹೈದರ್ ನ (ಈಜಿಪ್ಟಿಯನ್ ಕಾದಂಬರಿಕಾರ) Banquet for Seaweed ಎಂಬ ಕಾದಂಬರಿಯ ಸುತ್ತ ಉಂಟಾದ ವಿವಾದವನ್ನು ಅಧ್ಯಯನ ಮಾಡಿರುವ ಸಾಬ್ರಿ ಹಫ್ಹೀಜ್ ರವರು (ಮಾರ್ಕ್ಸಿಸ್ಟ್ ವಿದ್ವಾಂಸ) ತಮ್ಮ ಲೇಖನ “The Novel, Politics and Islam” ದಲ್ಲಿ ಮುಸ್ಲಿಂ ಮತಾಂಧರು ಸಾಹಿತ್ಯದಲ್ಲಿ ಆಗುತ್ತಿದ್ದ ಬದಲಾವಣೆಗಳಿಗೆ ಪ್ರತಿರೋಧ ವ್ಯಕ್ತಪಡಿಸಿದರೆಂದು ವಾದಿಸುತ್ತಾರೆ. ಈ ವಿವಾದವು ಆಧುನಿಕ ರಾಜಕೀಯ ಪರಿಕಲ್ಪನೆಗಳಾದ ವೈಚಾರಿಕತೆ, ಪ್ರಜಾಪ್ರಭುತ್ವ ಮತ್ತು ಉದಾರಿವಾದತ್ವಕ್ಕೆ ಮುಸ್ಲಿಂ ಮತಾಂಧರು, ಕೊಟ್ಟ ಬದಲಾದ ಪೆಟ್ಟು ಎಂದು ಹಫ್ಹೀಜ್ ಅವರು ಟೀಕಿಸುತ್ತಾರೆ. ಈಜಿಪ್ಟನಲ್ಲಿ ಕಾದಂಬರಿಯ ಹುಟ್ಟು, ಬೆಳವಣಿಗೆಯನ್ನು ಪರೀಕ್ಷಿಸುತ್ತಾ, ಕಾದಂಬರಿಯು ಒಂದು ಹೊಸ ಸಾಹಿತ್ಯದ ಪ್ರಕಾರವನ್ನು ಪ್ರಾರಂಭಿಸಿತು ಎಂದು ಅವರು ತೋರಿಸುತ್ತಾರೆ. ಕಾದಂಬರಿಯ ಪ್ರಕಾರವು ಅನೇಕ ಆಧುನಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಸಂಕೇತಿಸಿತು. ಇದರ ಉಗಮ, ಹಫ್ಹೀಜ್‌ರ ಪ್ರಕಾರ, ಮುಸ್ಮಿಂ ಮತಾಂಧತೆಯನ್ನು ಕಣ್ಮರೆಯಾಗಿಸಿ ಜಾತ್ಯಾತೀತ ವಿಚಾರಗಳ ಬೆಳವಣಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೆ ಕಾಲಕ್ರಮೇಣ ಮುಸ್ಲಿಂ ಮತಾಂಧತೆಯು ತಲೆಯೆತ್ತಿ ಆಧುನಿಕತೆಗೆ ಸಂಕೇತವಾಗಿದ್ದ ಕಾದಂಬರಿಯನ್ನು ಮಟ್ಟ ಹಾಕುವದಕ್ಕೆ ಪ್ರಾರಂಭಿಸಿದಾಗ ಹೈದರ್ ಹೈದರ್‌ನ ಕಾದಂಬರಿ ವಿವಾದಕ್ಕೊಳಗಾಗುತ್ತದೆ. ಅದು ಅವರ ಮತಾಂಧತೆಗೆ ಬಲಿ ಪಶುವಾಗುತ್ತದೆ. ಈ ಕಾದಂಬರಿಕಾರನ ವಿರುದ್ಧ ಘೋಷಿಸಲ್ಪಟ್ಟ ಫತ್ವಾ ಆಧುನಿಕ ಕಾದಂಬರಿ ಮತ್ತು ಅದರ ಸಾಂಸ್ಕೃತಿಕ ಪ್ರಾಮುಖ್ಯತೆಗೆ ಕೊಟ್ಟ ಬಲವಾದ ಏಟು ಎಂದು  ಹಫ್ಹೀಜ್‌ರವರು ವಾದಿಸುತ್ತಾರೆ. ಕನ್ನಡದ ಧರ್ಮಕಾರಣ ಕಾದಂಬರಿಯು ಸಹ ತನ್ನ ಆಂತರಿಕ ಅಂಶಗಳಿಂದಲೇ ವಿವಾದವನ್ನುಂಟು ಮಾಡಿತು ಎಂದು ಹೇಳಬಹುದು. ಅಕ್ಕನಾಗಮ್ಮನ ಬಸುರಿನ ಬಗ್ಗೆ ವರ್ಣಿಸುವಾಗ ನಾರಾಯಣರು ಜಾಬಾಲಿ-ಸತ್ಯಕಾಮನ ಕತೆಯನ್ನು ಉಪ-ಕತೆಯಾಗಿ ಬಳಸಿಕೊಂಡಿದ್ದು ಲಿಂಗಾಯತರ ಕ್ರೋಧಕ್ಕೆ ಗುರಿಯಾಯಿತು.

.        ವ್ಯಾಖ್ಯಾನ ಮತ್ತು ಅದಕ್ಕೊದಗುವಶಿಸ್ತಿ ಕ್ರಮ

ಸಾಹಿತ್ಯ ವಿವಾದಗಳ ಸಂದರ್ಭದಲ್ಲಿ ಸಾರ್ವಜನಿಕ ‘ಹಿತಾಸಕ್ತಿ’ ಕಾಪಾಡುವ ಪ್ರತಿಭಟನಾಕಾರರು ಸ್ವಯಂ ಘೋಷಿತ ನಾಯಕರಾಗಲು ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಈ ಪ್ರತಿಭಟನಾಕಾರರು ವಿವಾದಾತ್ಮಕ ಕೃತಿಯನ್ನು ತಮ್ಮ ಹಿತಾಸಕ್ತಿ ಮತ್ತು ಉದ್ದೇಶಗಳಿಗನುಗುಣವಾಗಿ ವ್ಯಾಖ್ಯಾನಿಸುವುದು ಸರ್ವೇಸಾಮಾನ್ಯ. ವೈಯಕ್ತಿಕ ಮತ್ತು ಸಾಂಘಿಕ ವ್ಯಾಖ್ಯಾನಗಳು ಒಂದು ಗೂಡಿ ತಮ್ಮದು ಬಹುಸಂಖ್ಯಾತರ ದನಿಯೆಂದು ಬಿಂಬಿಸಲಾಗುವುದು. ಇದರ ಉದ್ದೇಶ ಸಾಹಿತ್ಯ ಕೃತಿಯನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೆಂದು ಘೋಷಿಸುವದಕ್ಕಾಗಿ ಮತ್ತು ಓದುವ ಕ್ರಮವನ್ನು ತಮ್ಮ ನಿಯಮಗಳಿಗನುಗುಣವಾಗಿ ಶಿಸ್ತಿನಲ್ಲಿಡುವುದಕ್ಕೆ, ಇದು ಸಾಹಿತ್ಯ ಮತ್ತು ಸಮಾಜದ ಬಗ್ಗೆ ಪ್ರತಿಭಟನಾಕಾರರ ಏಕ-ಮುಖಿ ದೃಷ್ಟಿಕೋನವನ್ನು ಎತ್ತಿ ತೋರಿಸುತ್ತದೆ. ಅವರು ತಮ್ಮ ವ್ಯಾಖ್ಯಾನಗಳನ್ನು ಸಂಪ್ರದಾಯ, ಗುರುತು, ಧರ್ಮ ಮತ್ತು ನೈತಿಕ ಮೌಲ್ಯಗಳ ಆಧಾರದ ಮೇಲೆ ಸಮರ್ಥಿಸಿಕೊಳ್ಳುತ್ತಾರೆ. ‘ಹೊರಗಿನವರ ಆಕ್ರಮಣ’ದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಕರೆ ಕೊಡುತ್ತಾರೆ. ಹೀಗಾಗಿ ‘ತಪ್ಪು’ ವ್ಯಾಖ್ಯಾನಕ್ಕೊಳಪಟ್ಟ ಐತಿಹಾಸಿಕ ವ್ಯಕ್ತಿತ್ವ ಅಥವಾ ಘಟನೆಗಳನ್ನು ‘ಸರಿ-ಪಡಿಸಿ’ ಪರ್ಯಾಯ ಅರ್ಥ, ವ್ಯಾಖ್ಯಾನಗಳನ್ನು ಇವರು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲಾ ಪ್ರತಿಭಟನಕಾರರು ವ್ಯಾಖ್ಯಾನಕಾರರಾಗಬೇಕೆಂಬ ನಿಯಮವೇನಿಲ್ಲ. ಒಬ್ಬ ಅಥವಾ ಒಂದು ಸಂಸ್ಥೆಯ ಏಕೀಕೃತ ಮತ್ತು ಸಾಂಘಿಕ ವ್ಯಾಖ್ಯಾನದಡಿಯ ಘೋಷಣೆಯಲ್ಲಿ ಇತರರನ್ನು ಮನವೊಲಿಸಿ, ಪ್ರಶ್ನಾತ್ಮಕ ಕೃತಿಯನ್ನು ವಿರೋಧಿಸುವ ಸಾಹಸವನ್ನು ಮಾಡಲಾಗುವುದು. ಇಲ್ಲಿ ಬುದ್ಧಿಜೀವಿಗಳ ಯೋಚನಾ ಲಹರಿ ಪ್ರಮುಖ ಪಾತ್ರ ನಿಭಾಯಿಸುತ್ತದೆ. ಪ್ರತಿಭಟನೆಗೆ ಬೆಂಬಲಿಸುವವರ ಸಂಖ್ಯೆಯನ್ನು ಹೆಚ್ಚಿಸಲು ವ್ಯಾಖ್ಯಾನ ಪ್ರಕ್ರಿಯೆ ಬಹಳ ಮುಖ್ಯ ಮತ್ತು ಅತ್ಯವಶ್ಯಕ. ಇದು ಸಮರ್ಥನೆಯ ಅಸ್ತ್ರ ಕೂಡ.

.        ಸಂದರ್ಭದ ವಿಶೇಷತೆ

ಸಾಹಿತ್ಯ ವಿವಾದಗಳನ್ನು ಸೃಷ್ಟಿಸುವ ಸಂದರ್ಭಗಳು ರಾಜಕೀಯ ಪ್ರೇರಿತವು ಆಗಿರಬಹುದು. ರಾಜಕೀಯ ಅಂಶದ ಬಗ್ಗೆ ಹೆಚ್ಚಿನ ಗಮನ ಹರಿಸುವವರು ಸಾಂದರ್ಭಿಕ ಅಧ್ಯಯನದ (contextual study) ಅವಶ್ಯಕತೆಯನ್ನು ಪ್ರತಿಪಾದಿಸುತ್ತಾರೆ. ಸಾಹಿತ್ಯ ವಿವಾದಗಳನ್ನು ರಾಜಕೀಯ ಉದ್ದೇಶಕ್ಕಾಗಿಯೇ ಸೃಷ್ಟಿಸಲಾಗುವುದು ಎಂದು ಕೆಲವರು ವಾದಿಸುತ್ತಾರೆ. ಇವರೆಲ್ಲರೂ ನಿರ್ದಿಷ್ಟ ಸಂದರ್ಭಗಳಿಗೆ ವಿಶೇಷ ಒತ್ತನ್ನು ನೀಡುತ್ತಾರೆ. ಡೆಕ್ಕನ್ ಹೆರಾಲ್ಡ್ ಇಂಗ್ಲೀಷ ಪತ್ರಿಕೆಯಲ್ಲಿ ಮಹಾಚೈತ್ರ ವಿವಾದದ ಬಗ್ಗೆ ಲೇಖನ (೧ನೇ ಜುಲೈ, ೧೯೯೫) ಬರೆದಿರುವ ಡಿ.ಎಸ್. ಶ್ರೀಧರರವರು ಈ ವಿವಾದವನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಯಿತು ಎಂದು ಅಭಿ‌ಪ್ರಾಯ ಪಟ್ಟಿದ್ದಾರೆ. ಆಗ ಕರ್ನಾಟಕದಲ್ಲಿ ಪಂಚಾಯತ ಚುನಾವಣೆ ನಡೆಯುವದಿತ್ತು. ಈ ಚುನಾವಣೆಯಲ್ಲಿ ಲಾಭ ಪಡೆಯಲು ಮತಾಂಧರು ಈ ವಿವಾದವನ್ನು ಸೃಷ್ಟಿಸಿದರೆಂದು ಅವರ ವಾದ. ಈ ವಿವಾದದಲ್ಲಿ ಕೆಲವು ಲಿಂಗಾಯತ ರಾಜಕೀಯ ನಾಯಕರು ಪಾಲ್ಗೊಂಡಿದ್ದು ಈ ವಿಚಾರಕ್ಕೆ ಪ್ರಚೋದನೆಯನ್ನು ನೀಡಿತು. ಆದರೆ ಸಾಹಿತ್ಯ ವಿವಾದಗಳು ಸದಾ ಕಾಲ ರಾಜಕೀಯ ಲಾಭಕ್ಕಾಗಿಯೇ ಸೃಷ್ಟಿಯಾಗುತ್ತವೆಂದು ಹೇಳಲಿಕ್ಕಾಗುವುದಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಸಾಹಿತ್ಯ ವಿವಾದಗಳನ್ನು ಬಳಸಿಕೊಳ್ಳುವ ಸಂಭವಗಳಿರುತ್ತವೆಯೋ ಹೊರತು ಅದಕ್ಕಾಗಿಯೇ ವಿವಾದಗಳನ್ನು ಸೃಷ್ಟಿಸಲಾಗುವುದು ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ವಿವಾದದ ಸಂದರ್ಭದಲ್ಲಿ ಸಂಭವಿಸುವ ಸಾರ್ವಜನಿಕ ಸಂಘಟನೆ, ವಿಚಾರಗಳ ಕ್ರೋಡೀಕರಣ, ಭಾವನಾತ್ಮಕ ಪ್ರದರ್ಶನಗಳು, ಬೀದಿ ರಂಪಾಟಗಳು, ನಿಷ್ಠರ, ಬೆಂಬಲ ಇತ್ಯಾದಿಗಳು ರಾಜಕೀಯ ಉದ್ದೇಶಗಳಿಗೆ ಪ್ರಶಸ್ತ ವಾತಾವರಣಗಳನ್ನು ಉಂಟು ಮಾಡುತ್ತವೆ. ಅಂದರೆ ವಿವಾದಗಳ ಸಾರ್ವಜನಿಕ ದೃಗ್ದೋಚರವು ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ತಕ್ಕನಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಸಮಕಾಲೀನ ರಾಜಕೀಯ ವಿಚಾರಧಾರೆ, ಸಾಮಾಜಿಕ ಸಂರಚನೆ ಮತ್ತು ಸಾರ್ವಜನಿಕರ ಸಾಮಾನ್ಯ ದೃಷ್ಟಿಕೋನಗಳನ್ನು ನಾವು ಸಾಂದರ್ಭಿಕ ಅಧ್ಯಯನದಲ್ಲಿ ಪರಿಶೀಲಿಸಬೇಕಾಗುತ್ತದೆ. ಇದರ ಜೊತೆಗೆ ಸಾಂದರ್ಭಿಕ ಅಧ್ಯಯನವು ಐತಿಹಾಸಿಕ ಅಂಶಗಳನ್ನೂ ಸಹ ಒಳಗೊಳ್ಳಬೇಕಾಗುತ್ತದೆ. ಏಕೆಂದರೆ ಅನೇಕ ಸಾಹಿತ್ಯ ವಿವಾದಗಳು ಗತಕಾಲದ ಅಥವಾ ಇತ್ತೀಚಿನ ಸಾಹಿತ್ಯ ವಿವಾದಗಳಿಂದ ಪ್ರೇರಣೆಯನ್ನು ಪಡೆದುಕೊಳ್ಳುತ್ತವೆ. ಇಲ್ಲಿ ಎರಡು ವಿಚಾರಗಳನ್ನು ಗಮನದಲ್ಲಿಡಬೇಕು: ಅ) ಗತಕಾಲದ ಸಾಹಿತ್ಯ ವಿವಾದಗಳಿಂದ ಉಂಟಾದ ಅನುಭವ, ವಿಚಾರ ಮತ್ತು ಅವುಗಳ ಬಗ್ಗೆ ಇರುವ ಮರೆಯುವ ನೆನಪುಗಳು, ಮತ್ತು ಆ) ಸಾಹಿತ್ಯ ವಿವಾದಗಳ ಇತಿಹಾಸ. ಈ ಇತಿಹಾಸದ ಅವಲೋಕನದಿಂದ ಬದಲಾಗುತ್ತಿರುವ ಸಾಹಿತ್ಯ ಮೌಲ್ಯಗಳು, ಸೌಂದರ್ಯ ಶಾಸ್ತ್ರ ಮತ್ತು ಸಾಮಾಜಿಕ ಅಪೇಕ್ಷೆಗಳನ್ನು ಅರ್ಥಮಾಡಿಕೊಳ್ಳಬಹುದು.[3]

. ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳು

ವಿವಿಧ ಓದುಗರ (ಭಿನ್ನ,  ಜಾತಿ, ಧರ್ಮ ಅಥವಾ ರಾಜಕೀಯ ವಿರೋಧಿಗಳು) ನಡುವೆ ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳು ಸಮತೋಲನದಿಂದ ಇರದಿದ್ದರೆ ಅಥವಾ ವಿಘಟನೆಗೊಂಡಿದ್ದರೆ ಸಾಹಿತ್ಯ ವಿವಾದಗಳು ಉದ್ಭವಿಸಬಹುದು. ಇಂತಹ ಸಂದರ್ಭಗಳಲ್ಲಿ ವಿವಾದಕ್ಕೊಳಗಾದ ಸಾಹಿತ್ಯ ಕೃತಿಯ ಲೇಖಕನ ಜಾತಿ/ಸಮುದಾಯದ ಮೂಲವನ್ನು ಗುರುತಿಸಿ, ಇತರ ಸಮುದಾಯದ ವಿರುದ್ಧ ಈ ಲೇಖಕನು ತನ್ನ ಕೃತಿಯ ಮೂಲಕ ದ್ವೇಷದ ಬೀಜವನ್ನು ಸಾರ್ವಜನಿಕರಲ್ಲಿ ಬಿತ್ತುತ್ತಿದ್ದಾನೆಂದು ‘ನಾವು’ ಮತ್ತು ‘ನೀವು’ ಎಂದು ವಿಭಾಗಿಸುತ್ತವೆ, ಈ ಸಂದರ್ಭದಲ್ಲಿ ವಿವಾದವನ್ನು ಲೇಖಕ ಮತ್ತು ಸಮುದಾಯಗಳ ನಡುವೆ ಇರುವ ಸಮಸ್ಯೆಯೆಂದು ಬಿಂಬಿಸಲಾಗುವುದು. ಈ ಸಂದರ್ಭದಲ್ಲಿ ಜಾತಿ, ಧರ್ಮ ಅಥವಾ ಮತದ ಬಗ್ಗೆ ಪ್ರಚೋದಕ ಅಂಗಳನ್ನು ಹೇರಳವಾಗಿ ಬಳಸುವುದರಿಂದ ಕೃತಿಯ ವಿರೋಧಕ್ಕೆ ಬೆಂಬಲಿಗರನ್ನು ಒಗ್ಗೂಡಿಸಬಹುದು; ತಮ್ಮ ಬಲ/ಒತ್ತಾಯದ ಪ್ರದರ್ಶನ ಮಾಡಬಹುದು; ಸಾಮುದಾಯಿಕ ಭಾವನೆಗಳನ್ನು ಬಡಿದೆಬ್ಬಿಸಬಹುದು. ಇದು ಸಮುದಾಯಗಳ ನಡುವಿನ ಸಾಮರಸ್ಯ/ಸಂಬಂಧವನ್ನು ಕೆಡಿಸಬಹುದು. ವಿಶುಕುಮಾರರ ಕರಾವಳಿ ಕಾದಂಬರಿ (೧೯೬೯)ಯ ವಿರುದ್ಧ ಉಂಟಾದ ವಿವಾದವೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ವಿವಾದವು ಎಷ್ಟೊಂದು ತಾರಕಕ್ಕೇರಿತೆಂದರೆ ಅದು ಮೊಗವೀರ ಮತ್ತು ಮುಸ್ಲಿಂ ನಡುವೆ ದ್ವೇಷಕ್ಕೆ ಕಾರಣವಾಗಿ, ಹಿಂಸಾರೂಪ ಪಡೆಯಿತು.

ರಾಜಕೀಯ ಕಾರಣಗಳೂ ಇಲ್ಲಿ ಮುಖ್ಯ. ರಾಜಕೀಯವಾಗಿ ಕೆಟ್ಟ ಪರಿಣಾಮ ಬೀರುವುದನ್ನು ತಪ್ಪಿಸಲು ಇತಿಹಾಸದಲ್ಲಿ ಅನೇಕ ಸಾಹಿತ್ಯ ಕೃತಿಗಳನ್ನು ನಿಷೇಧಿಸಲಾಗಿದೆ ಅಥವಾ ಅದರ ಪ್ರಕಟಣೆಯನ್ನು ತಡೆ ಹಿಡಿಯಲಾಗಿದೆ. ಇವುಗಳಲ್ಲಿ ಕೆಲವು ರಾಷ್ಟ್ರೀಯ ಮಟ್ಟವನ್ನು ಹೊಂದಿದ್ದರೆ ಇನ್ನು ಕೆಲವು ಅಂತರಾಷ್ಟ್ರೀಯ ಮಟ್ಟವನ್ನು ತಲುಪಿವೆ. ಉದಾಹರಣೆಗೆ, ರಷ್ಯಾದಲ್ಲಿ ಬೋರಿಸ್ ಪ್ಯಾಸ್ಟರ್‌ನಕ್‌ನ ಡಾ. ಝಿವಾಗೊ ಕಾದಂಬರಿಯನ್ನು ೧೯೮೯ರಲ್ಲಿ ನಿಷೇಧಿಸಲಾಯಿತು. ಈ ಕಾದಂಬರಿಯು ಬೋಲ್ಷೆವಿಕ್ ಪಾರ್ಟಿಯ ವಿರುದ್ಧ ಟೀಕೆಯನ್ನು ಮಾಡುವದರಿಂದ ಇದರ ಮೇಲೆ ನಿಷೇಧ ಹೇರಲಾಯಿತು. ಮತ್ತೊಂದು ಉದಾಹರಣೆ ಕೊಡುವದಾದರೆ ಜಾರ್ಜ ಆರ್ ವೆಲ್ ನ ಅನಿಮಲ್ ಫಾರ್ಮ್ (೧೯೪೫) ಕಾದಂಬರಿಯು ಕಮ್ಯುನಿಸ್ಟ ವ್ಯವಸ್ಥೆ ಮತ್ತು ಸರ್ವಾಧಿಕಾರದ ವಿರುದ್ದ ಇದೆಯೆಂದು ಆಪಾದಿಸಿ ೧೯೪೬ರಲ್ಲಿ ಜರ್ಮನಿ ಮತ್ತು ಯುಗೊಸ್ಲೇವಿಯ ದೇಶಗಳಲ್ಲಿ ನಿಷೇಧಿಸಲಾಯಿತು. ಇಂತಹ ವಿವಾದಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಾಹಿತ್ಯ ವಿವಾದಗಳ ವಿಸ್ತಾರತೆಯನ್ನು ತಿಳಿಸುತ್ತವೆ. ಒಂದು ಗೊತ್ತಾದ ಸಮಯದಲ್ಲಿ ಹೇಗೆ ಸಾಹಿತ್ಯ ಕೃತಿಗಳು ರಾಜಕೀಯ ಮತ್ತು ಸಾಮಾಜಿಕ ಪ್ರಕ್ರಿಯೆಗಳಿಂದ ಪ್ರಭಾವಕ್ಕೊಳಗಾಗುತ್ತವೆಂದು ಈ ವಿವಾದಗಳಿಂದ ನಾವು ತಿಳಿಯಬಹುದು.

. ಸಾರ್ವಜನಿಕ ಪ್ರದರ್ಶನ ಮತ್ತು ಗುರುತಿನ (identity) ರಾಜಕೀಯ

ಬೀದಿ ಪ್ರದರ್ಶನ, ಪ್ರತಿಭಟನೆ, ಬೀದಿ ರಂಪಾಟ, ರಾಜಕೀಯ, ಧಾರ್ಮಿಕ ಘೋಷಣೆಗಳು ಕೃತಿಯ ವಿರೋಧಿಗಳ ಪರವಾಗಿರುವ ನಿಷ್ಠರಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಕೆರಳಿಸುವದಕ್ಕೆ ಮತ್ತು ತಮ್ಮ ಸಂಖ್ಯಾಬಲವನ್ನು ನಿರೂಪಿಸುವದಕ್ಕೆ ಸಹಾಯ ಮಾಡುತ್ತವೆ. ಸಮಾಜ ಶಾಸ್ತ್ರಜ್ಞೆ ಆನ್ನಾ ಹಾರ್ಡಗ್ರೋವ್ ಭಾವಿಸುವ ಹಾಗೆ ಅವು “ಕೆಲವು ಆಚರಣೆಗಳು ಮತ್ತು ಪ್ರದರ್ಶನಗಳನ್ನು ಸೂಚಿಸುತ್ತವೆ. ಇವುಗಳ ಮೂಲಕ ಸಾಂಘಿಕ ಮತ್ತು ಅಂತರ್-ಸಂಬಂಧಗಳ ಗುರುತನ್ನು ಸ್ಥಾಪಿಸಲಾಗುವುದು” (೨೦೦೪ : ೨೦). ಸಾಮುದಾಯಿಕ ಗುರುತು (ಜನಾಂಗೀಯ, ಧಾರ್ಮಿಕ, ಸಾಮಾಜಿಕ ಅಥವಾ ರಾಜಕೀಯವಾಗಿರಬಹುದು) ಪ್ರತಿಭಟನಾಕಾರರಿಗೆ ಬಹು ಮುಖ್ಯವಾಗಿ ಪರಿಣಮಿಸಿ, ಅದನ್ನು ಈ ವಿವಾದಗಳು ಪ್ರಚೋದಿಸುತ್ತವೆ, ಧಾರ್ಮಿಕ ಮುಖಂಡರುಗಳು ಈ ಸಂಘಟನಾ ಕಾರ್ಯದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಸಾಹಿತ್ಯ ಕೃತಿಗೆ ಸಾರ್ವಜನಿಕ ಪ್ರಭುತ್ವದ ಮನ್ನಣೆ ಸಿಕ್ಕಾಗ ಧಾರ್ಮಿಕ ಮತ್ತು ರಾಜಕೀಯ ಮುಂಖಡರುಗಳು ಸಾಂಘಿಕ ಶಕ್ತಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಇವರು ವಿವಾದದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದನ್ನು ನಾವು ನೋಡಬಹುದು. ಭಿತ್ತಿಪತ್ರಗಳು, ಪ್ರಚೋದನಾ ಭಾಷಣಗಳು, ಹರತಾಳಗಳು ಈ ಸಂದರ್ಭದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಇವುಗಳ ಮೂಲಕ ‘ಸಾರ್ವಜನಿಕ’ ಸಂಸ್ಕೃತಿಗೆ ತಾವೇ ವಾರಸುದಾದರು ಎಂದು, ಅದು ನಮ್ಮದೇ ಎನ್ನುವ ಮಟ್ಟಿಗೆ ಅವರು ಗರ್ವ ಪಡುತ್ತಾರೆ. ಮತ್ತೊಬ್ಬ ಸಮಾಜ ಶಾಸ್ತ್ರಜ್ಞೆ ಎ.ಆರ್. ವಾಸವಿಯವರು ಈ ಪ್ರತಿಭಟನಕಾರರನ್ನು ನವೀನ ‘ರಾಜಕೀಯ ಪಾತ್ರಧಾರಿ’ಗಳೆಂದು (political actors), ಇವರು ತಮ್ಮ ಸಮುದಾಯಗಳ ಪುನರುತ್ಥಾನದಲ್ಲಿ ನಿರತರಾಗಿರುತ್ತಾರೆಂದು ಅಭಿಪ್ರಾಯ ಪಟ್ಟಿದ್ದಾರೆ (೨೦೦೧ : ೩).[4] ಕರ್ನಾಟಕದಲ್ಲಿ ೧೯೯೦ರ ದಶಕದ ಸಾಹಿತ್ಯ ವಿವಾದಗಳನ್ನು ಅಭ್ಯಸಿಸಿರುವ ವಾಸವಿಯವರು ವಸಾಹತ್ತೋತ್ತರ ಕಾಲಘಟ್ಟದಲ್ಲಿ ಸಾಮುದಾಯಿಕ ಬಲ ಮತ್ತು ರಾಜಕೀಯ ಪಾತ್ರದ ಬಗ್ಗೆ ಹೆಚ್ಚು, ಹೆಚ್ಚು ಅರಿವು ಉಂಟಾಗುತ್ತಿರುವದರಿಂದ ಅದು ಕಾಲಕ್ರಮೇಣ ಸಮುದಾಯ ಮತ್ತು ಸಾಹಿತ್ಯಗಳೆರಡರ ‘ರಾಜಕೀಯಕರಣ’ಕ್ಕೆ ಮೂಲವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

. ಜನಸಂಖ್ಯೆ

ಸಾಹಿತ್ಯ ವಿವಾದಗಳು ಜನಸಂಖ್ಯೆಗೂ ಸಂಬಂಧಿಸಿದೆ. ಎಲ್ಲಿ ‘ದುಃಖಿತ’ ಸಮುದಾಯದ ಜನರು (ರಾಜಕೀಯ ಶಕ್ತಿ ಜೊತೆಗೆ) ಹೆಚ್ಚು ಸಂಖ್ಯೆಯಲ್ಲಿ ಇರುವರೋ ಅಲ್ಲಿ ವಿವಾದದ ಬಿಸಿ ತೀವ್ರ ಸ್ವರೂಪದಲ್ಲಿರುತ್ತದೆ. ಸಟಾನಿಕ್  ವರ್ಸಸ್ ವಿವಾದವು ತೀವ್ರ ಸ್ವರೂಪ ಪಡೆದದ್ದು ಭಾರತ, ಪಾಕಿಸ್ತಾನ್, ಬಾಂಗ್ಲದೇಶ ಮತ್ತು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಇತರ ದೇಶಗಳಲ್ಲಿ. ಕರ್ನಾಟಕದಲ್ಲು ಸಹ ಸಾಹಿತ್ಯ ವಿವಾದಗಳು ಎಲ್ಲಾ ಕಡೆಯೂ ಒಂದೇ ತೆರನಾಗಿ ತೀವ್ರತೆಯನ್ನು ಹೊಂದಿಲ್ಲ. ಮೇಲೆ ತಿಳಿಸಲ್ಪಟ್ಟ ಸಾಹಿತ್ಯ ವಿವಾದಗಳು ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದ್ದರೂ, ಅವುಗಳ ತೀವ್ರತೆ ಮತ್ತು ಸ್ವರೂಪ ಕರ್ನಾಟಕದಾದ್ಯಂತ ಏಕರೂಪವಾಗಿಲ್ಲ. ಈ ಸಾಹಿತ್ಯ ವಿವಾದಗಳು ಲಿಂಗಾಯತರು ಹೆಚ್ಚಿರುವ ಉತ್ತರ ಕರ್ನಾಟಕದಲ್ಲಿ ತೀರ್ವ ಸ್ವರೂಪ ಪಡೆದುಕೊಂಡಿದ್ದವು. ಲಿಂಗಾಯತ ಸಂಘಟನೆಗಳು, ಸಂಸ್ಥೆಗಳು ಮತ್ತು ಸಾಹಿತ್ಯ ಒಕ್ಕೂಟಗಳು, ಹೆಚ್ಚಾಗಿರುವ ಈ ಪ್ರದೇಶದಲ್ಲಿ, ಅವು ವಿವಾದಗಳಲ್ಲಿ ಸಕ್ರೀಯ ಪಾತ್ರವಹಿಸಿ ಅವುಗಳ ಸ್ವರೂಪವನ್ನು ಪ್ರಭಾವಿಸುತ್ತವೆ. ಆದ್ದರಿಂದ ಕರ್ನಾಟಕದ ಈ ಭಾಗದಲ್ಲಿ ಸಾಹಿತ್ಯ ವಿವಾದಗಳು ಸೂಕ್ಷ್ಮ ಸ್ವರೂಪವನ್ನು ಪಡೆಯುತ್ತವೆ. ಆದಾಗ್ಯೂ ಲಿಂಗಾಯತ ಸಮುದಾಯವು ಒಗ್ಗಟ್ಟಿನಿಂದ, ಒಂದೇ ದನಿಯಿಂದ ವಿವಾದಿತ ಸಾಹಿತ್ಯ ಕೃತಿಯ ವಿರುದ್ಧವಿರುವುದಿಲ್ಲ. ವಿರೋಧ ವ್ಯಕ್ತಪಡಿಸುವ ಲಿಂಗಾಯತ ಸಮುದಾಯದಲ್ಲೆ ಅನೇಕ ಒಡಕಿನ ದನಿಗಳು, ಭಿನ್ನ, ಭಿನ್ನ ವಿಚಾರಗಳು ಮತ್ತು ಸೈದ್ಧಾಂತಿಕ ನಿಲುವುಗಳನ್ನು ಕಾಣಬಹುದು. ಹಾಗಾಗಿ ಈ ಸಮುದಾಯವು ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು  ಆಂತರಿಕ ಒಡಕನ್ನು ತಪ್ಪಿಸಲು ಹರಸಾಹಸ ಮಾಡುತ್ತದೆ. ‘ದಮನಿತ ಸಮುದಾಯ’ ದ ವಿಚಾರ ಧಾರೆಯನ್ನು ತಮ್ಮ ಜನರ ಬೆಂಬಲಕ್ಕಾಗಿ ಉದಾರವಾಗಿ ಬಳಸಿಕೊಳ್ಳುತ್ತದೆ. ‘ಪರರು ತಮ್ಮ ಮೇಲೆ ಮಾಡುವ ಆಕ್ರಮಣ’, ‘ಸಮುದಾಯದ ಒಳಿತಿಗಾಗಿ’, ‘ಲಿಂಗಾಯತ ಚರಿತ್ರೆಗೆ ಕಳಂಕ” ಇತ್ಯಾದಿ ಘೋಷಣೆಗಳು ಈ ಸಂದರ್ಭದಲ್ಲಿ ಧಾರಾಳವಾಗಿ ಕೇಳಲ್ಪಡುತ್ತವೆ.

೧೦.      ಕಾಲ ಬದ್ಧತೆ ಮತ್ತು ಸ್ಥಳ ಬದ್ಧತೆ : ಸಾಹಿತ್ಯ ವಿವಾದಗಳು ಕಾಲ ಮತ್ತು ಸ್ಥಳ ಬದ್ಧತೆಗೆ ಒಳಗಾಗಿರುತ್ತವೆ. ಹಲವಾರು ಬಾರಿ ಅವು ಒಂದು ನಿರ್ದಿಷ್ಟ ಭಾಷೆ/ಸಂಸ್ಕೃತಿ/ಸಮುದಾಯದಾಚೆಗೆ ತನ್ನ ವ್ಯಾಪ್ತಿಯನ್ನು ಹೊಂದಿರುವದೇ ಇಲ್ಲ. ಅವು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸ್ವರೂಪವನ್ನು ಪಡೆಯುತ್ತವೆಂಬ ಅಂಶ ಸಾರ್ವಕಾಲಿಕ ಸತ್ಯವಲ್ಲ. ತೀವ್ರತೆ ಮತ್ತು ಸ್ವರೂಪದಲ್ಲಿ ಅವು ಕಾಲ ಮತ್ತು ಸ್ಥಳದ ನಿರ್ದಿಷ್ಟತೆಗೆ ಒಳಪಟ್ಟಿರುತ್ತವೆ. ಉದಾಹರಣೆಗೆ, ವ್ಲ್ಯಾಡಿಮೀರ್ ನವಕೊವ್ ನ ಲೊಲಿಟ (೧೯೫೫)ವನ್ನು ಫ್ರಾನ್ಸ್‌ನಲ್ಲಿ ಅಶ್ಲೀಲತೆಯ ಕಾರಣದಿಂದ ನಿಷೇಧಿಸಲಾಯಿತು[5] ಆದರೆ ಅದೇ ಸಮಯದಲ್ಲಿ ಆ ಕಾದಂಬರಿಯನ್ನು ಅಮೆರಿಕಾದಲ್ಲಿ ತುಂಬು ಹೃದಯದಿಂದ ಸ್ವಾಗತಿಸಲಾಯಿತು. ಇದು ಹಿಂದೆ ಜೇಮ್ಸ್ ಜಾಯ್ಸ್ ನ ಯುಲಿಸಿಸ್ ಕಾದಂಬರಿಗೆ ಉಂಟಾದ ಪ್ರತಿಕ್ರಿಯೆಗೆ ವ್ಯತಿರಿಕ್ತವಾಗಿತ್ತು. ಈ ಕಾದಂಬರಿಯನ್ನು ಅಮೆರಿಕಾದಲ್ಲಿ ಅಶ್ಲೀಲತೆಯ ಕಾರಣದಿಂದ ಅದರ ಪ್ರಸರಣಕ್ಕೆ ಅಡ್ಡಿಯನ್ನುಂಟು ಮಾಡಿದ್ದರೆ, ಫ್ರಾನ್ಸಿನಲ್ಲಿ ಅದನ್ನು ನಿಷೇಧಿಸಿರಲಿಲ್ಲ. ಅರೇಬಿಯನ್ ನೈಟ್ಸ್ ನ ಇಂಗ್ಲೀಷ್ ಭಾಷಾಂತರ (ಫ್ರಾನ್ಸಿನ ವಿದ್ವಾಂಸ ಮಾರ್ಡ್ರಸ್ ಎಂಬುವವನು ಭಾಷಾಂತರಿಸಿದ್ದು) ರದ ೫೦೦ ಪ್ರತಿಗಳನ್ನು ಇಂಗ್ಲೇಂಡಿನಿಂದ ಅಮೆರಿಕಾಕ್ಕೆ ರಫ್ತು ಮಾಡಿದಾಗ (೧೯೨೭-೩೧ರಲ್ಲಿ) ಅಲ್ಲಿನ ಕಂದಾಯ ಇಲಾಖೆಯವರು ಅವುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದೇ ಪುಸ್ತಕವನ್ನು ಕೈರೋ, ಈಜಿಪ್ಟ ದೇಶಗಳಲ್ಲಿ ಬಹು ದಶಕಗಳ ನಂತರ (೧೯೮೫ರಲ್ಲಿ) ನಿಷೇಧಿಸಿದ್ದರು. ಇದಕ್ಕೆ ಪ್ರಮುಖ ಕಾರಣ ಆ ಪುಸ್ತಕದಲ್ಲಿರುವ ಕೆಲವು ನೈತಿಕ ವಿಷಯಗಳು ತಮ್ಮ ದೇಶದ ನೈತಿಕ ಬದುಕಿಗೆ ಮಾರಕವೆಂದು ಭಾವಿಸಿದ್ದರಿಂದ. ಅದೇ ವರ್ಷದಲ್ಲಿ ವಿದ್ಯಾರ್ಥಿಗಳ ಓದಲು ಅರ್ಹವಲ್ಲವೆಂದು ಅದನ್ನು ನಿಷೇಧಿಸಿದ್ದ. ನೈತಿಕತೆ, ಸಾಹಿತ್ಯ ಮೌಲ್ಯಗಳು, ಇತ್ಯಾದಿಗಳು ಸಾರ್ವಕಾಲಿಕ ಸತ್ಯವನ್ನು ಹೊಂದಿಲ್ಲವೆಂದು ಈ ಉದಾಹರಣೆಗಳು ರುಜುವಾತು ಮಾಡುತ್ತವೆ. ಸದಾ ಕಾಲ ಬದಲಾಗುವ ಸಾಹಿತ್ಯ ಮೌಲ್ಯಗಳು ಮತ್ತು ಧಾರ್ಮಿಕ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ತರಹದ ಸಾಹಿತ್ಯ ವಿವಾದಗಳನ್ನು ನಾವು ಗಂಭೀರವಾಗಿ ಪರಿಶೀಲಿಸಬೇಕಾಗುತ್ತದೆ.

ಮೇಲೆ ಚರ್ಚಿಸಲ್ಪಟ್ಟ ಅಂಶಗಳು ಪ್ರತ್ಯೇಕವಲ್ಲ. ಈ ಎಲ್ಲಾ ಅಂಶಗಳು ಒಂದಲ್ಲ ಒಂದು ರೀತಿಯಲ್ಲಿ ಅಂತರ್-ಸಂಬಂಧವನ್ನು ಹೊಂದಿವೆ ಮತ್ತು ಒಂದಕ್ಕೊಂದು ಪ್ರಭಾವಿಸುವ ಸಾಮರ್ಥವುಳ್ಳವಾಗಿವೆ. ನಮ್ಮ ಅರ್ಥಪೂರ್ಣ ಸಾಹಿತ್ಯ ಅಧ್ಯಯನವು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕಾಗುತ್ತದೆ. ಸಾಹಿತ್ಯ ವಿವಾದಗಳು ಸಾರ್ವಜನಿಕ ಸ್ವರೂಪವನ್ನು ಪಡೆಯುವದರಿಂದ, ಸಾಹಿತ್ಯ, ಪ್ರಜಾಪ್ರಭುತ್ವ ಮತ್ತು ಪೌರತ್ವದ ಸ್ವರೂಪವನ್ನು ಪ್ರಭಾವಿಸುವಂತವು ಎಂಬ ಅಂಶವನ್ನು ಮರೆಯದಿರೋಣ!

ಉಲ್ಲೇಖಿತ ಕೃತಿಗಳು ಮತ್ತು ಲೇಖನಗಳು

೧.        ಟೇಲರ್, ಚಾರ್ಲ್ಸ್, ೧೯೮೯. “The Rushdie Controversy” , ಪಬ್ಲಿಕ್ ಕಲ್ಚರ್, ಸಂ. ೨. ಸಂಖ್ಯೆ ೧.

೨.        ಜುಸ್ಸವಾಲ, ಫಿರೋಜ್, ೧೯೮೯. “Resurrecting the Prophet: The case of Salman, the Otherwise”, ಪಬ್ಲಿಕ್ ಕಲ್ಚರ್, ಸಂ. ೨. ಸಂಖ್ಯೆ ೧.

೩.        ಬೇಯರ್, ಪೀಟರ್, ೧೯೯೪. Religion and Globalisation, ಲಂಡನ್: ಸೇಜ್.

೪.        ಹಫೇಜ್, ಸಾಬ್ರಿ, ೨೦೦೦. “The Novel, Politics and Islam”, New Left Review, ಸಂ. ಪೆರ‍್ರಿ ಆನ್ ಡರ್ ಸನ್, ಸಂ. ೪೦. ಸಂಖ್ಯೆ. ೩.

೫.        ಹಾರ್ಡ್‌ಗ್ರೋವ್, ಅನ್ನಾ. ೨೦೦೪. “ Community and Public Culture”, Community and Public Culture:” The Marwaris in Culcutta, ನ್ಯೂ ದೆಲ್ಲಿ: ಓಯೂಪಿ.

೬.        ಮೊದಲಿಯರ್, ಗಂಗಾಧರ. ೧೯೯೮. “ಹೊಸ ಅಲೆ”, ಕನ್ನಡ ಸಿನಿಮಾ: ಇತಿಹಾಸದ ಪುಟಗಳಲ್ಲಿ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

೭.        ಚಂದೋಕೆ, ನೀರಾ. ೨೦೦೩. The Conceits of Civil Society, ದೆಲ್ಲಿ: ಓಯೂಪಿ.

೮.        ವಾಸವಿ, ಎ.ಆರ್. ೧೯೯೯. Harbringers of Rain: Land and Life in South India, ದೆಲ್ಲಿ: ಓಯೂಪಿ.

[1] ಪಾಶ್ಚಾತ್ಯ ದೇಶಗಳಲ್ಲಿ ಸಾಹಿತ್ಯ ವಿವಾದಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಿ. ಅವುಗಳನ್ನು ವರ್ಗೀಕರಣ ಮಾಡಿರುವ ಉದಾಹರಣೆಗಳಿವೆ. ಉದಾಹರಣೆಗೆ, ಅಮೇರಿಕನ್ ಲೈಬ್ರರಿ ಅಸೋಸಿಯೇಷನ್‌ರ Banned Books Resource Guide ಯೂರೋಪಿನಲ್ಲಿ ಉಂಟಾದ ಸಾಹಿತ್ಯ ವಿವಾದಗಳ ದೊಡ್ಡ ಪಟ್ಟಿಯನ್ನೇ ನೀಡುತ್ತದೆ. Books Banned in United States: A Public Service Report from Adler & Robin in Books (online, Adler Books.com/banned. ೨೦ನೇ ಮಾರ್ಚ್, ೨೦೦೪) ಇ-ನಿಯತಕಾಲಿಕವಾಗಿದ್ದು ಅಸಂಖ್ಯಾತ ಸಾಹಿತ್ಯ ವಿವಾದಗಳ ಮಾಹಿತಿಗಳನ್ನು ಕಾಣಬಹುದು. ಭಾರತದಲ್ಲಿ ಈ ತರಹದ  ವ್ಯವಸ್ಥಿತ ಪ್ರಯತ್ನಗಳು ಅತಿ ಕಡಿಮೆ.

[2] ‘ಈ ಕಾದಂಬರಿಯನ್ನು ಭಾರತದ ಇತರ ೧೪ ಭಾಷೆಗಳಿಗೆ ಭಾಷಾಂತರಿಸಬೇಕೆಂದು ರಾಜ್ಯ ಸಾಹಿತ್ಯ ಅಕಾಡೆಮಿಯು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಶಿಫಾರಸ್ಸು ಮಾಡಿದಾಗ (೧೯೫೬ರಲ್ಲಿ) ಈ ಶಿಫಾರಸ್ಸಿನ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು. ಶಿವಪ್ರಕಶರ ನಾಟಕವನ್ನು ಗುಲ್ಬರ್ಗಾ ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯ ಪುಸ್ತಕವನ್ನಾಗಿ ಅಂಗೀಕರಿಸಿದ್ದರಿಂದ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಅದನ್ನು ವಿರೋಧಿಸಿ ನಾಟಕದ ಪ್ರತಿಗಳನ್ನು ಸುಟ್ಟು ಹಾಕಲಾಯಿತು, ನಾರಾಯಣರ ಕಾದಂಬರಿಗೆ ೧೯೯೬ರಲ್ಲಿ ರಾಜ್ಯ ಸರ್ಕಾರವು ಪ್ರಶಸ್ತಿ ಕೊಡಲು ಮುಂದಾದಾಗ, ಅನೇಕ ಲಿಂಗಾಯತರು ಇದರ ವಿರುದ್ಧ ಹೋರಾಟಕ್ಕಿಳಿದರು. ಇದು ನಿಷೇಧ ಆಗುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಯಿತು. ಇವಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳಿಗೆ ನನ್ನ ಅಪ್ರಕಟಿತ ಪಿ.ಎಚ್.ಡಿ. ಮಹಾಪ್ರಬಂಧವನ್ನು (೨೦೦೫) ನೋಡಿ.

[3] ಆಂಡ್ರ‍್ಯು ಹ್ಯಾಡ್ ಫೀಲ್ಡ್ ರವರಿಂದ ಸಂಪಾದಿಸಲ್ಪಟ್ಟ Literature and Censorship in Renaissance England (೨೦೦೧) ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ.

[4] ಒಂದು ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತೀವ್ರವಾಗಿ ತಾವು ಯಾರು, ತಮ್ಮ ಸ್ಥಾನ-ಮಾನಗಳೇನು ಎಂಬ ಮನೋಧೋರಣೆಗಳನ್ನು ವ್ಯಕ್ತಪಡಿಸುತ್ತಿರುವ ಸಮುದಾಯದವರನ್ನು ಅವರು ರಾಜಕೀಯ ಪಾತ್ರಧಾರಿಗಳೆಂದು ಕರೆದಿದ್ದಾರೆ.

[5] ನೋಡಿ “Book Banned in the United States: A Public Service Report from Adler & Robin in Books”, Online. Adler Books.com/banned, ೨೦ನೇ ಮಾರ್ಚ್, ೨೦೦೪.