ಈ ಲೇಖನವು ಬೌದ್ಧಿಕ ಕಸರತ್ತು, ಸಾಹಿತ್ಯ ಮತ್ತು ಮತೀಯ ಶಕ್ತಿಗಳ ನಡುವಿನ ಸಂಕೀರ್ಣಮಯ ಸಂಬಂಧಗಳನ್ನು ವಿಶ್ಲೇಷಿಸುತ್ತದೆ. ಐತಿಹಾಸಿಕ ಕಾದಂಬರಿಯಾದ ಚೆನ್ನಬಸವ ನಾಯಕದ ಸುತ್ತ ೧೯೫೬ರಲ್ಲಿ ಉಂಟಾದ ವಿವಾದದ ಸಂದರ್ಭವನ್ನು ಈ ಲೇಖನವು ಚರ್ಚಿಸುತ್ತದೆ. ಇದರ ಸಲುವಾಗಿ ಲೇಖನವು ಒಂದು ಹೈಪೊಥಿಸಿಸನ್ನು ಹಾಕಿಕೊಂಡಿದೆ. ಸಾಹಿತ್ಯ ಸಾಂಘಿಕ ವ್ಯಾಖ್ಯಾನವು (ವ್ಯಕ್ತಿಗತ/ಗುಂಪು) ಅನೇಕ ಬಾರಿ ಮತೀಯವಾದಕ್ಕೆ ತಿರುಗಿ ಸಾಹಿತ್ಯವನ್ನು ರಾಜಕೀಯಗೊಳಿಸಿ ‘ಸ್ವೇಚ್ಛಾಚಾರ’ದ ಸೃಜನಶೀಲತೆಯನ್ನು ನಿಯಂತ್ರಿಸುವ ಮತ್ತು ಸಾಹಿತ್ಯವೆಂದರೇನು ಎಂದು ನಿರ್ಧರಿಸುವ ಬಲ ಪ್ರದರ್ಶನವನ್ನು ತೋರಿಸುತ್ತದೆ. ಸೃಜನಶೀಲತೆಯ ಹೆಸರಿನಲ್ಲಿ ಇತಿಹಾಸವನ್ನು ವಿರೂಪಗೊಳಿಸಿದ ಆರೋಪದ ಮೇಲೆ ಅಥವಾ ಅಪವ್ಯಾಖ್ಯಾನಗೊಳಿಸಿದ  ‘ತಪ್ಪಿ’ಗಾಗಿ ಈ ಬಲ ಪ್ರದರ್ಶನವನ್ನು ವ್ಯಕ್ತ ಪಡಿಸಲಾಗುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಚೆನ್ನ ಬಸವ ನಾಯಕವನ್ನು ೧೯೫೬ರಲ್ಲಿ ಭಾರತದ ಹದಿಮೂರು ಭಾಷೆಗಳಿಗೆ ಭಾಷಾಂತರವಾಗಬೇಕೆಂದು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಶಿಫಾರಸು ಮಾಡಿದಾಗ ಅದರ ವಿರುದ್ಧ ಎದ್ದ ಲಿಂಗಾಯತ ಸಮುದಾಯದ ಪ್ರತಿಭಟನೆ ಕ್ರೋಢೀಕೃತ ವ್ಯಾಖ್ಯಾನದ (collective interpretation) ಮನೋವೃತ್ತಿ ಮತ್ತು ‘ಜಾತ್ಯಾತೀತ’ ಸೃಜನಶೀಲತೆಯ ನಡುವೆ ಉಂಟಾದ ಸಂಘರ್ಷವನ್ನು ತೋರಿಸುತ್ತದೆ. ಈ ವಿವಾದವನ್ನು ಮತ್ತು ಸಮುದಾಯದ ಮತೀಯ ಧೋರಣೆಯನ್ನು ಅರ್ಥಮಾಡಿಕೊಳ್ಳಲು ಈ ಲೇಖನವು ವೈರುಧ್ಯ ಪರಿಕಲ್ಪನೆಗಳಾದ ವ್ಯಕ್ತಿ ವರ್ಸಸ್ ಸಮುದಾಯವನ್ನು ಮೀರುವ ಪ್ರಯತ್ನ ಮಾಡುತ್ತದೆ. ಒಂದು ಹೆಜ್ಜೆ ಮುಂದೆ ಹೋಗಿ ಈ ಐತಿಹಾಸಿಕ ಕಾದಂಬರಿಯು ಯಾಕೆ ವಿವಾದಕ್ಕೊಳಗಾಯಿತು; ಈ ವಿವಾದಕ್ಕೆ ಇದ್ದಂತ ಐತಿಹಾಸಿಕ ಒತ್ತಡಗಳೇನು ಮತ್ತು ಶಾಸ್ತ್ರೀಯ ಕಾದಂಬರಿಗಳಿಗಿಂತ ಭಿನ್ನವಾದುದು ಎಂದು ವರ್ಣಿಸಲ್ಪಟ್ಟ ಈ ಕಾದಂಬರಿಯ ಭಾಷಾಂತರಕ್ಕೆ ಅಡ್ಡಿಯನ್ನುಂಟು ಮಾಡಲು ಯಾವ ಕಾರಣಗಳಿದ್ದವು ಎಂದು ಅರಿಯಲು ಈ ಲೇಖನದಲ್ಲಿ ಒಂದು ಸಣ್ಣ ಪ್ರಯತ್ನಗಳನ್ನು ಮಾಡಲಾಗಿದೆ. ಸಾಮಾಜಿಕ ಮತ್ತು ಮತೀಯ ದೃಷ್ಟಿಗೆ ಎಡೆ ಮಾಡಿಕೊಟ್ಟ ಈ ವಿವಾದವು ಅಭಿವ್ಯಕ್ತಿ ಸ್ವಾತಂತ್ರ‍್ಯ, ಜಾತ್ಯಾತೀತತೆ ಮತ್ತು ಉದಾರವಾದಿ ನೀತಿಯ ಮೇಲೆ ಯಾವ ಪರಿಣಾಮವನ್ನುಂಟು ಮಾಡಿತು ಎಂಬ ಅಂಶವನ್ನು ಸಂಕ್ಷೀಕ್ತವಾಗಿ ಪರೀಕ್ಷಿಸೋಣ.

ಭಾಗ

ಭಾಷಾಂತರ ಮತ್ತು ವಿವಾದ

೧೯೫೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಮಾಸ್ತಿಯವರ ಚೆನ್ನ ಬಸವ ನಾಯಕವನ್ನು ಹದಿಮೂರು ಭಾಷೆಗಳಿಗೆ ಭಾಷಾಂತರ ಮಾಡಲು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಶಿಫಾರಸು ಮಾಡಿದಾಗ ಲಿಂಗಾಯತರ ಒಂದು ವರ್ಗ ಈ ಶಿಫಾರಸ್ಸಿಗೆ ತೀರ್ವ ಪ್ರತಿರೋಧವನ್ನು ವ್ಯಕ್ತಪಡಿಸಿತು. ಇದು ಉತ್ತರ ಕರ್ನಾಟಕದಲ್ಲಿ ಹೆಚ್ಚು ತೀವ್ರವಾಗಿತ್ತು. ಕಾದಂಬರಿಯು ೧೭ನೇ ಶತಮಾನದಲ್ಲಿ ಆಗಿ ಹೋದ ಲಿಂಗಾಯತ ರಾಣಿ ವೀರಮ್ಮಾಜಿ (೧೭೫೭-೬೩)ಯ ಬಗ್ಗೆ ಅವಹೇಳನಕಾರಿಯಾದ ವಿವರಗಳನ್ನೊಳಗೊಂಡಿದೆಯೆಂದು ಮತ್ತು ಲಿಂಗಾಯತ ರಾಣಿಗೆ ಅಪಚಾರವೆಸಗಿರುವದರಿಂದ ಅದರ ಭಾಷಾಂತರ ಯೋಜನೆಯನ್ನು ಕೈ ಬಿಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಕಾದಂಬರಿಯಲ್ಲಿ ವೀರಮ್ಮಾಜಿಯು ಒಬ್ಬ ‘ನೀತಿಗೆಟ್ಟ’ ಹೆಣ್ಣನ್ನಾಗಿ ಚಿತ್ರಿಸಿರುವುದು ಪ್ರಚಲಿತದಲ್ಲಿರುವ ಇತಿಹಾಸದ ಅಂಶಕ್ಕೆ ವಿರುದ್ಧವಾದದ್ದು ಎಂದು ಅವರು ತೀಕ್ಷ್ಣವಾಗಿ ಖಂಡಿಸಿದರು. ಮಾಸ್ತಿಯವರು ಇತಿಹಾಸದ ಹೆಸರಿನಲ್ಲಿ ವೀರಮ್ಮಾಜಿಯ ಬಗ್ಗೆ ಇಲ್ಲ ಸಲ್ಲದ್ದನ್ನು ಕಲ್ಪಿಸಿಕೊಂಡು, ಓದುಗರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಪಟ್ಟಿದ್ದಾರೆಂದು, ವೀರಮ್ಮಾಜಿಯ ವಂಶಸ್ಥರು ಈಗಲೂ ಇದ್ದು ಕಾದಂಬರಿಯನ್ನು ಬರೆಯುವ ಮೊದಲು ಅವರನ್ನು ಸಂಪರ್ಕಿಸಿದೆ. ತಮಗೆ ತೋಚಿದ್ದನ್ನೆ ಬರೆದಿದ್ದಾರೆಂದು ಅವರು ಆಪಾದಿಸಿದರು. ವೀರಮ್ಮಾಜಿಯು ಕಳಂಕಿತಳೆಂದು ಬಣ್ಣಿಸಿರುವುದು ಲಿಂಗಾಯತರಿಗೆ ಅತ್ಯಂತ ಕೋಪವನ್ನುಂಟು ಮಾಡಿತು. ಕಾದಂಬರಿಯ ಮೂಲಕ ಮಾಸ್ತಿಯವರು ಕೇಳದಿ ಮನೆತನಕ್ಕೆ (ವೀರಮ್ಮಾಜಿಯ ಮನೆತನ) ಅಗೌರವವನ್ನು ಸೂಚಿಸಿದ್ದಾರೆಂದು, ಅದು ಲಿಂಗಾಯತ ಸಂಸ್ಕೃತಿಗೆ ವಿರುದ್ಧವೆಂದು ಪ್ರತಿಭಟಿಸಿದರು. ತಮ್ಮ ಸಮುದಾಯದ ಗೌರವ-ಮಾರ್ಯಾದೆಗಳು ಈ ಕಾದಂಬರಿಯಿಂದ ಅವಗಣತೆಗೆ ಉಂಟಾಗಿದೆಯೆಂದು ತಿಳಿದು, ಇದರ ಭಾಷಾಂತರವೇನಾದರೂ ಆದರೆ ಅದು ಲಿಂಗಾಯತರ ಪ್ರತಿಷ್ಠೆಗೆ ರಾಷ್ಟ್ರೀಯ ಮಟ್ಟದಲ್ಲಿ ಕೊಡಲಿ ಪೆಟ್ಟು ಕೊಟ್ಟ ಹಾಗೆ ಎಂದು ಅನೇಕ ಲಿಂಗಾಯತರು ಆತಂಕಿತರಾದರು. ರಾಜ್ಯ ಸಾಹಿತ್ಯ ಅಕಾಡೆಮಿಯಂತಹ ಸರ್ಕಾರಿ ಅಂಗ ಸಂಸ್ಥೆಯು ಒಂದು ಕೋಮಿಗೆ (ಬ್ರಾಹ್ಮಣ ಸಮುದಾಯ)[1] ಮಾನ್ಯತೆ ನೀಡಿ, ಅವರಿಂದ ರಚಿಸಲ್ಪಟ್ಟ ಕಾದಂಬರಿಗೆ ಭಾಷಾಂತರದ ಮೂಲಕ ಮನ್ನಣೆ ನೀಡಿದ್ದು ಬೆಂಕಿಗೆ ತುಪ್ಪ ಸುರಿದ ಹಾಗೆ ಅನ್ನಿಸಿತು.

ಕಾದಂಬರಿಕಾರನ ವಿರುದ್ಧ ‘ಸಾಹಿತ್ಯದ ದುರ್ಬಳಕೆ’ಯೆಂದು ಶುರುವಾದ ಪ್ರತಿಭಟನೆ ಬಹುಬೇಗ ರಾಜ್ಯಾದ್ಯಂತ ಹಬ್ಬಿಕೊಂಡಿತು. ಅನೇಕ ಲಿಂಗಾಯತ ಸ್ತ್ರೀ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ವೀರಮ್ಮಾಜಿಯ ಸಚ್ಚಾರಿತ್ರ‍್ಯಕ್ಕೆ ಈ ಕಾದಂಬರಿಯು ಸವಾಲು ಎಸೆದಿದೆಯೆಂದು ಇವರ ಆಪಾದನೆಯಾಗಿತ್ತು.[2] ಕೇಂದ್ರ ಸರ್ಕಾರವು ಈ ಭಾಷಾಂತರ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯ ಮಾಡಿದರು. ಕರ್ನಾಟಕದ ಐದು ಮಂದಿ ಎಮ್.ಪಿ.ಗಳು ಕೇಂದ್ರ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದು ಈ ಕಾದಂಬರಿಯ ಭಾಷಾಂತರವು ರಾಷ್ಟ್ರೀಯ ಅಭದ್ರತೆಗೆ ಮತ್ತು ಮತೀಯ ಕ್ಷೋಭೆಗೆ ಕಾರಣವಾಗಬಹುದೆಂದು ಎಚ್ಚರಿಸಿದರು. ಅವರು ತಮ್ಮ ಪತ್ರದಲ್ಲಿ ಕಾದಂಬರಿಯು ಉನ್ನತ ಮಟ್ಟದ್ದಾಗಿದೆ, ಸತ್ಯಕ್ಕೆ ದೂರವಾಗಿರುವದೆಂದು ಖಂಡಿಸಿದರು. ಮಾಸ್ತಿಯವರು ಹೇಗೆ ಲಿಂಗಾಯತರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆಂದು ಒಂದೆರಡು ಉದಾಹರಣೆಗಳ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಎರಡು ವರ್ಷಗಳ  ಹಿಂದೆ ಅಂದರೆ ೧೯೫೪ರಲ್ಲಿ ಮದ್ರಾಸ್ ಸರ್ಕಾರವು ಮಾಸ್ತಿಯವರಿಂದ ಸಂಕಲಿಸಲ್ಪಟ್ಟ ಬಿಜ್ಜಳರಾಯ ಚರಿತ್ರೆಯನ್ನು ಪ್ರಕಟಿಸಿದಾಗ, ಆ ಕೃತಿಯಲ್ಲಿ ಮಾಸ್ತಿಯವರು ಬರೆದ ಪರಿಚಯಕ್ಕೆ ಲಿಂಗಾಯತರು ತೀರ್ವವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಕೃತಿಯು ಇತಿಹಾಸಕ್ಕೆ ವ್ಯತಿರಿಕ್ತವಾಗಿದ್ದು ಬಸವ ಚರಿತ್ರೆಗೆ ಕಳಂಕವನ್ನು ತರುತ್ತದೆಯೆಂದು ಮಾಸ್ತಿಯ ವಿರುದ್ಧ ದನಿಯೆತ್ತಿದ್ದರು. ಈಗ ಭಾಷಾಂತರದ ಯೋಜನೆಯು ಲಿಂಗಾಯತರ ಗಾಯಕ್ಕೆ ಬರೆ ಎಳೆದ ಹಾಗೆ ಎಂದು, ಪ್ರತಿಷ್ಠೆ, ಗೌರವಗಳಿಗೆ ಮಾರಕವೆಂದು ಅವರು ತಮ್ಮ ಪತ್ರದಲ್ಲಿ ಬರೆದರು.[3] ರಾಜ್ಯಾದ್ಯಂತ ಅನೇಕ ಸಭೆ, ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಸಭೆಗಳಲ್ಲಿ ಕಾದಂಬರಿ ಮತ್ತು ಮಾಸ್ತಿಯ ವಿರುದ್ಧ ಅನೇಕ ಗೊತ್ತುವಳಿಗಳನ್ನು ಮಂಡಿಸಿ, ಅವರ ವಿರುದ್ಧ ಕ್ರಮಕ್ಕೆ ನಿರ್ಧಾರ ತೆಗೆದುಕೊಳ್ಳಲಾಯಿತು.[4] ಸುದೀರ್ಘ ಕಾಲದ ಮಾಡಿತು. ಅಂತಿಮವಾಗಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳೆರಡು ಲಿಂಗಾಯತರ ಒತ್ತಡಕ್ಕೆ ಮಣಿದು ಭಾಷಾಂತರ ಯೋಜನೆಯನ್ನು ಹಿಂಪಡೆಯುವಂತೆ ಶಿಫಾರಸು ಮಾಡಿತು.

ಈ ಎಲ್ಲಾ ಪ್ರತಿಭಟನೆ, ವಿರೋಧದ ನಡುವೆ ಮಾಸ್ತಿಯವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿ, ಅವು ಹುರುಳಿಲ್ಲದ್ದು ಎಂದು ಪ್ರತಿಕ್ರಿಯಿಸಿದರು. ಯಾವುದೇ ಲಿಂಗಾಯತ ವ್ಯಕ್ತಿಯನ್ನು ಅವಹೇಳನ ಮಾಡಲಿಕ್ಕೆ ಕಾದಂಬರಿಯನ್ನು ಬರೆದಿದ್ದಲ್ಲವೆಂದು ಅವರು ಬಲವಾಗಿ ವಾದಿಸಿದರು (ಮಾಸ್ತಿ. ೧೯೯೦ : ೨೭೦). ಲಭ್ಯವಿರುವ ಇತಿಹಾಸದ ಸಾಕ್ಷ್ಯಾಧಾರಗಳ ಸಹಾಯದಿಂದ ಈ ಕಾದಂಬರಿಯನ್ನು ಬರೆದಿದ್ದಾಗಿಯೂ, ಮೂಲ ಆಕರಗಳು ನಿಜಾರ್ಥದಲ್ಲಿ ವೀರಮ್ಮಾಜಿಯ ಬಗ್ಗೆ ಇನ್ನೂ ಅವಹೇಳನಕಾರಿಯಾಗಿವೆಯೆಂದು, ಆದರೆ ತಮ್ಮ ಕಾದಂಬರಿಯು ಅವುಗಳನ್ನು ಒಳಗೊಂಡಿಲ್ಲವೆಂದು ಸಮರ್ಥಿಸಿಕೊಂಡರು (ಅದೇ). ಆದರೆ ಅವರ ಅಭಿಪ್ರಾಯಗಳನ್ನು ಲಿಂಗಾಯತ ಮತೀಯವಾದಿಗಳು ಕೇಳುವ ಹಂತದಲ್ಲಿರಲಿಲ್ಲ. ಅವರು ಮಾಸ್ತಿಯವರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು. ಕಾದಂಬರಿಯ ಸುತ್ತ ನಡೆದ ಘಟನೆ ಮತ್ತು ವಿವಾದದ ತಿರುವುಗಳಿಂದ ಬೇಸತ್ತು ಮಾಸ್ತಿಯವರು ರಾಜ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರಗಳು ಸ್ವಾಯತ್ತ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವದನ್ನು ಸಹಿಸದ ಅವರು ತಮ್ಮ ರಾಜೀನಾಮೆ ನೀಡುವದರ ಮೂಲಕ ವ್ಯಯಕ್ತಿಕ ನೆಲೆಯಲ್ಲಿ ವಿವಾದಕ್ಕೆ ಪ್ರತಿಭಟನೆ ವ್ಯಕ್ತ ಪಡಿಸಿದರು. ಅವರಿಗೆ ಅನೇಕ ಕನ್ನಡ ವಿದ್ವಾಂಸರ ಬೆಂಬಲವೂ ವ್ಯಕ್ತವಾಯಿತು. ಇವರಲ್ಲಿ ಅನೇಕ ಮಂದಿ ಲಿಂಗಾಯತರು ಇದ್ದರು.[5] ಇವರೆಲ್ಲರೂ ಮಾಸ್ತಿಯವರಿಗೆ ಬೆಂಬಲವಿತ್ತು, ಲಿಂಗಾಯತರ ‘ಸಣ್ಣತನ’ವನ್ನು ಖಂಡಿಸಿದರು.

‘ಸೃಜನಶೀಲತೆ’ಯ ಮೂಸೆಯಿಂದ ಮೂಡಿಬಂದ ಈ ಕಾದಂಬರಿಯು ಲಿಂಗಾಯತರನ್ನು ಅಷ್ಟು ತೀವ್ರವಾಗಿ ಕೆರಳಿಸಿದ್ದರ ಹಿಂದಿನ ಕಾರಣಗಳೇನು? ಈ ವಿವಾದವು ಉದ್ದೇಶ ಪೂರ್ವಕವಾಗಿತ್ತೆ? ಅಥವಾ ಸ್ವಯಂಪ್ರೇರಿತವೆ? ಕಾದಂಬರಿಯ ವಿರೋಧ ಸಾಂಘಿಕ ರೂಪ ತಳೆದಿದ್ದೇಕೆ? ಈ ಕಾದಂಬರಿಯನ್ನು ೧೯೪೯ರಲ್ಲೇ ಪ್ರಕಟಿಸಿದ್ದರೂ, ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಒಮ್ಮೆ ಪಠ್ಯ ಪುಸ್ತಕವಾಗಿದ್ದರೂ,[6] ಈಗ ಮಾಸ್ತಿಯವರ ವಿರುದ್ಧ ಪ್ರತಿಭಟನೆಗಳಾದವು. ರಾಜ್ಯಾದ್ಯಂತ ಖಂಡನೆಗಳಾಗಿರುವುದನ್ನು ಈಗಾಗಲೇ ಚರ್ಚೆ ಮಾಡಿದ್ದೇವೆ. ಈ ಕಾದಂಬರಿಯ ಮೂಲಕ ಕೆಳದಿ ಇತಿಹಾಸದ ಘಟನೆಗಳನ್ನು ಮರು-ಕಟ್ಟಿಕೊಳ್ಳುವ ಮಾಸ್ತಿಯವರ ಪ್ರಯತ್ನಕ್ಕೆ ಸರ್ಕಾರದ ಮನ್ನಣೆ ಸಿಕ್ಕಿದ್ದು ಲಿಂಗಾಯತರ ಕೋಪಕ್ಕೆ ಕಾರಣವಾಗಿದ್ದವು. ಇದನ್ನು ಸವಿವರವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಾವು ಲಿಂಗಾಯತರು ಮತ್ತು ಕನ್ನಡ ಸಾಹಿತಿಗಳ ನಡುವೆ ಇದ್ದ ‘ವಿಚಾರ -ಯುದ್ಧದ’ ಸ್ವರೂಪವನ್ನು ಅವಲೋಕಿಸಬೇಕಾಗುತ್ತದೆ, ಇದು ಅವಶ್ಯಕತೆಯು ಕೂಡ, ಇದನ್ನು ನಾವು ಮಾಸ್ತಿಯವರ ಕಾದಂಬರಿಯು ಇತರ ಐತಿಹಾಸಿಕ ಕಾದಂಬರಿಗಳ ಜೊತೆಗೆ ಯಾವ ಸಂಬಂಧ ಮತ್ತು ಸಂವಾದಗಳನ್ನು ಹೊಂದಿತ್ತು ಎಂದು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಜೊತೆಗೆ ಮಾಸ್ತಿಯವರು ಐತಿಹಾಸಿಕ ಕಾದಂಬರಿ ರಚಿಸಲು ತೋರುವ ಭಿನ್ನತೆ ಮತ್ತು ಪ್ರದರ್ಶಿಸುವ ಸಾಹಿತ್ಯಕ ಪ್ರಯೋಗಗಳನ್ನು ಅರಿತುಕೊಳ್ಳುವ ಜರೂರಿದೆ. ವಿವಾದದ ಸಂದರ್ಭದಲ್ಲಿ ಈ ಕಾದಂಬರಿಯನ್ನು ಮತ್ತು ಅದರ ಪ್ರಯೋಗಶೀಲತೆಯನ್ನು ಹೇಗೆ ಅರ್ಥೈಸಿ, ಸ್ವೀಕರಿಸಲಾಯಿತು ಎಂಬ ಅಂಶಕ್ಕೆ ಈ ಚರ್ಚೆಯು ಸಹಾಯಕವಾಗುತ್ತದೆ.

ಭಾಗ

ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳು

ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯ ಉಗಮ ಮತ್ತು ಬೆಳವಣಿಗೆ ೧೯ನೇ ಶತಮಾನದ ಕೊನೆಯಲ್ಲಿ ಉಂಟಾದ ಸಾಂಸ್ಕೃತಿಕ ಸ್ಥಿತ್ಯಂತರದ ಫಲ. ಪಾಶ್ಚಾತ್ಯರಿಂದ ಪರಿಚಯಿಸಲ್ಪಟ್ಟ ಇಂಗ್ಲೀಷ್ ಶಿಕ್ಷಣ, ಪ್ರಿಂಟ್ ತಾಂತ್ರಿಕತೆ ನವೀನ ಸಾಹಿತ್ಯ ಪ್ರಯೋಗಗಳು ಕನ್ನಡ ಸಾಹಿತ್ಯವನ್ನು ಪ್ರಭಾವಿಸಿದವು. ಇದರ ಮೇಲೆ ಹೊಸ ಸಾಹಿತ್ಯದ ಪ್ರಜ್ಞೆ ಮೂಡಿಸಿ ತಮ್ಮ ಸ್ವ ಹಾಗೂ ಸಮಾಜದ ಬಗ್ಗೆ ಹೊಸ ಅರಿವು ಮೂಡಿಸಿಕೊಳ್ಳವಂತೆ ಮಾಡಿದವು. ಕನ್ನಡ ಸಾಹಿತಿಗಳು ನಿಧಾನವಾಗಿ ಪಾಶ್ಚಾತ್ಯ ಮಾದರಿಗಳನ್ನು, ತಮ್ಮದಾಗಿಸಿಕೊಳ್ಳ ಹತ್ತಿದರು. ಈ ಕಾಲ ಘಟ್ಟದಲ್ಲಿ ಮೂಡಿ ಬಂದ ಕಾದಂಬರಿ (ನಾವೆಲ್)ಯು ಸಂಪೂರ್ಣವಾಗಿ ಪಾಶ್ಚಾತ್ಯ ಮಾದರಿಯಾಗಿರಲಿಲ್ಲ. ಅದು ಸಾಂಪ್ರದಾಯಿಕ ಸಾಹಿತ್ಯ ಪ್ರಕಾರಗಳಾದ ಮಹಾಕಾವ್ಯ,ದಂತ ಕಥೆ, ಪುರಾಣ, ಜಾನಪದಗಳ ಜೊತೆಗೆ ಇನ್ನೂ ಸಂಬಂಧಗಳನ್ನಿಟ್ಟು ಕೊಂಡಿತ್ತು. ಪಾಶ್ಚಾತ್ಯ ಮತ್ತು ಪೌರುತ್ಯ ಮಾದರಿಗಳನ್ನೊಳಗೊಂಡ ವಿಶಿಷ್ಟ ಮಾದರಿಯಾಗಿ ಅದು ಬೆಳೆಯಿತು.[7] ಆಧುನಿಕ ಘಟ್ಟದ ಮೊದಲ ಕಾದಂಬರಿಗಳ ಬಗ್ಗೆ ಶಿವರಾಮ ಪಡಿಕ್ಕಲ್‌ರು ಬರೆದಿರುವ ಸಂಶೋಧನಾ ಕೃತಿಯು ಈ ಕಾಲದಲ್ಲಿ ಯಾರು, ಯಾರು ಮಾದರಿಯ ಐತಿಹಾಸಿಕ ಕಾದಂಬರಿಗಳನ್ನು ಬರೆದರು ಎಂಬ ವಿವರಗಳನ್ನು ನೀಡುತ್ತವೆ. ಅವರು ತಮ್ಮ ಕೃತಿಯಲ್ಲಿ ಮರಾಠಿ, ಬೆಂಗಾಲದಿಂದ ಕನ್ನಡಕ್ಕೆ ಅನುವಾದಗೊಂಡ, ಕೆರೂರ್ ವಾಸುದೇವಚಾರ್ಯ, ಗಳಗನಾಥರಿಂದ ಸ್ವಂತವಾಗಿ ರಚಿಸಲ್ಪಟ್ಟ (ವಿಜಯನಗರ ಸಾಮ್ರಾಜ್ಯ ಮೇಲಿನ ರಮ್ಯ ಐತಿಹಾಸಿಕ ಕಥೆಗಳು) ಹಾಗೂ ಎಮ್. ಎಸ್. ಪುಟ್ಟಣ್ಣರ ಮೈಸೂರು ಮಹಾರಾಜರ ಭವ್ಯತೆಯ ಬಗ್ಗೆ ರಚಿಸಲ್ಪಟ್ಟ (ವಿಶೇಷವಾಗಿ ಮುಮ್ಮಡಿ ಕೃಷ್ಣರಾಜರ ಬಗ್ಗೆ) ಅನೇಕ ಕಾದಂಬರಿಯನ್ನು ಮುಂದಿನ ಐತಿಹಾಸಿಕ ಕಾದಂಬರಿಗಳಿಗೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟವು (೨೦೦೪ : ೪೭-೪೮).

ಮೊದಲ ಘಟ್ಟದ ಐತಿಹಾಸಿಕ ಕಾದಂಬರಿಕಾರರು ಹೆಚ್ಚಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯತೆ, ನಾಯಕನ ಆದರ್ಶಮಯ ಜೀವನ ಹಾಗೂ ಸಾಹಸಗಳನ್ನು ಮುಖ್ಯ ವಿಷಯಗಳನ್ನಾಗಿ ವರ್ಣಿಸಲಾಗಿದೆ. ಈ ಕಾರಣಕ್ಕಾಗಿಯೇ ಇವುಗಳನ್ನು “ರಾಷ್ಟ್ರೀಯತೆಯ” ಕಾದಂಬರಿಗಳೆಂದು ಪಡಿಕ್ಕಲ್ಲರು ಕರೆಯುತ್ತಾರೆ (ಪಡಿಕ್ಕಲ್, ೨೦೦೪ : ೯೨). ಗಳಗನಾಥರ ಸ್ವರಾಜ್ಯ ಸುಗಂಧ (೧೯೨೮), ದುರ್ಗದ ಬಿಚ್ಚುಗತ್ತಿ (೧೯೩೮) ಗತಿಸಿ ಹೋದ ಕರ್ನಾಟಕದ ಭವ್ಯತೆಗೆ ಹಿಂದು/ಕನ್ನಡ ಭಾವನೆಗಳನ್ನು ಮೂಡಿಸುತ್ತವೆ.[8] ಕನ್ನಡಿಗರ ಭಾಷಿಕ ಮತ್ತು ಸಾಂಸ್ಕೃತಿಕ ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಏಕಮೇವ ಕಾದಂಬರಿಕಾರರಾಗಿ ಇವರು ತಮ್ಮ ಪ್ರತಿಷ್ಠೆಯನ್ನು ಬೆಳೆಸಿಕೊಂಡರು. ಆದರೆ ಪುರುಷೋತ್ತಮ ಬಿಳಿಮಲೆಯವರು ಹೇಳುವ ಹಾಗೆ ಗಳಗನಾಥರ ಐತಿಹಾಸಿಕ ಕಾದಂಬರಿಗಳು ಸಾಕ್ಷ್ಯಾಧಾರಗಳನ್ನಾಗಲಿ ಅಥವಾ ವೈಜ್ಞಾನಿಕ ಸಂಶೋಧನಗಳಾಗಲಿ ಯಾವುದನ್ನು ಪಾತ್ರ, ಭಾಷೆ ಮತ್ತು ಕಥಾವಸ್ತುಗಳನ್ನು ಮೂಡಿಸಲು ಬಳಸಿರುವುದು ಕಾಣುವುದಿಲ್ಲ. ಅವರ ಪ್ರಕಾರ ಈ ಕಾದಂಬರಿಗಳಲ್ಲಿ ಕಲ್ಪನೆಗೆ ಹೆಚ್ಚು ಪ್ರಾಶಸ್ತ್ಯವಿದೆ. ಇಂತಹ ಕಾದಂಬರಿಗಳಲ್ಲಿ ಕಾಣುವ ಕಥಾ ವಸ್ತು, ಕಾಳಜಿ ಹಾಗು ಧ್ಯೇಯಗಳು ಭವಿಷ್ಯದ ಐತಿಹಾಸಿಕ ಕಾದಂಬರಿಗಳಿಗೆ ನಾಂದಿಯಾದವು.

೨೦ನೇ ಶತಮಾನದ ಮೂರನೇ ದಶಕದಷ್ಟರಲ್ಲಿ ಕನ್ನಡ ಕಾದಂಬರಿಗಳು ಒಂದು ನಿರ್ದಿಷ್ಟ ಹಾಗೂ ಖಚಿತತೆಯಿಂದ ಕೂಡಿದ ಕಾದಂಬರಿ ಪ್ರಕಾರವಾಗಿ ಬೆಳೆದು, ಹಿಂದೆ ಇದ್ದ ಅಡೆ-ತಡೆಗಳು ಮತ್ತು ಲೋಪ-ದೋಷಗಳು ಮೀರುವ ಪ್ರಯತ್ನ ಮಾಡಿದವು (ಬಿಳಿಮಲೆ, ೨೦೦೦ : ೨೦೦). ೧೯೨೫ರಿಂದ ೧೯೫೦ರ ನಡುವೆ ಅನೇಕ ಕಾದಂಬರಿಗಳನ್ನು (ಸರಿ ಸುಮಾರು ೩೫೦) ಬರೆದು ಪ್ರಕಟಿಸಲಾಯಿತು.[9] ಜಿ.ಎಚ್. ನಾಯಕರು ಇವುಗಳನ್ನು ಭಾವನಾ ಪ್ರಧಾನ ಹಾಗೂ ಚಿಂತನಾ ಪ್ರಧಾನ ಕಾದಂಬರಿಗಳೆಂದು ವಿಂಗಡಿಸಿರುವದನ್ನು ಬಿಳಿಮೆಯವರು ಸೂಚಿಸುತ್ತಾರೆ, ಈ ಕಾಲದ ಬಹುತೇಕ ಕಾದಂಬರಿಗಳು ಗತಿಸಿ ಹೋದ ಕರ್ನಾಟಕದ ಭವ್ಯತೆಯ ಬಗ್ಗೆ ಕಾಳಜಿ ಹಾಗೂ ಖಿನ್ನತೆಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ ಅನೇಕ ಐತಿಹಾಸಿಕ ಕಾದಂಬರಿಗಳಲ್ಲಿ ಕರ್ನಾಟಕದ ಗತ ವೈಭವ ಮತ್ತು ರಾಷ್ಟ್ರೀಯ ಭಾವನೆಗಳನ್ನು ಕಾಣಬಹುದು. ಶ್ರೀನಿವಾಸ ಜೋಯಿಸರ ಗಂಡುಗಲಿ ಕುಮಾರ ರಾಮ (೧೯೪೩) ಮತ್ತು ದೇವುಡುರವರ ಅವಳ ಕತೆ (೧೯೫೨)[10] ಭಾವನಾ ಪ್ರಧಾನ ಕಾದಂಬರಿಗಳಿಗೆ ಉದಾಹರಣೆ. ಹಿಂದಿನ ಐತಿಹಾಸಿಕ ಕಾದಂಬರಿಗಳ ಹಾಗೆ ಇವು ಕೂಡ ಆದರ್ಶ, ಉತ್ಪ್ರೇಕ್ಷೆ, ಅತಿರೇಕದ ಭಾವನೆಗಳು, ರಮ್ಮತೆ, ಸಾಹಸ, ಇವುಗಳನ್ನು ಆಧರಿಸಿವೆ. ಬ್ರಾಹ್ಮಣೇತರ ಕಾದಂಬರಿಕಾರರ ಪ್ರವೇಶ ಈ ಕಾಲದಲ್ಲಿ ವೈವಿಧ್ಯತೆ ಮತ್ತು ಹೊಸ ಅನುಭವಗಳನ್ನು ಪರಿಚಯಿಸಿತು. ಅವರ ಕಾದಂಬರಿಗಳನ್ನು ಚರ್ಚಿಸುವ ಮೊದಲು ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳ ಸ್ವರೂಪ, ಲಕ್ಷಣಗಳನ್ನು ತಿಳಿದುಕೊಳ್ಳುವುದು ನಮ್ಮ ಚರ್ಚೆಗೆ ಅವಶ್ಯಕ.

ಭಾಗ

ಐತಿಹಾಸಿಕ ಕಾದಂಬರಿಯಾಗಿ ಚೆನ್ನಬಸವ ನಾಯಕ

ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರು ತಮಿಳಿನ ಅಯ್ಯಂಗಾರ್ ಕುಟುಂಬಕ್ಕೆ ಸೇರಿದವರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಅವರ ಕಾಣಿಕೆ ಅಪಾರ. ಸಣ್ಣಕತೆಗಳ ಜನಕ ಎಂದೆ ಅವರು ಪ್ರಸಿದ್ಧ. ಸಾಮಾಜಿಕ ಹಾಗು ಐತಿಹಾಸಿಕ ಕಾದಂಬರಿಗಳಿಗು ಅವರು ಎತ್ತಿದ ಕೈ. ಮೈಸೂರು ಪ್ರಾಂತ್ಯದಲ್ಲಿ ಸಬ್-ಡಿವಿಜನ್ ಆಫೀಸರ್ ಆಗಿ ಕೆಲಸ ನಿರ್ವಹಿಸಿದರು. ಅವರ ಬರವಣಿಗೆಗಳು ಅಪಾರ. ಅವರು ಬರೆದ ವಿಷಯಗಳೂ ಸಹ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ- ಪತ್ರಿಕೋದ್ಯಮ, ಶಾಸನಶಾಸ್ತ್ರ, ಇತಿಹಾಸ, ಜಾನಪದ, ಭಾಷಾಂತರ, ಇತ್ಯಾದಿಗಳು ಇವಕ್ಕೆ ಉದಾಹರಣೆ. ಅವರು ಬರೆದ ನಾಲ್ಕು ಕಾದಂಬರಿಗಳಲ್ಲಿ ಎರಡು ಐತಿಹಾಸಿಕ ಕಥಾ ವಸ್ತುವನ್ನು ಹೊಂದಿವೆ. ಚೆನ್ನಬಸವ ನಾಯಕ ಮತ್ತು ಚಿಕವೀರ ರಾಜೇಂದ್ರ[11] ಕಾದಂಬರಿಗಳು ಅವರ ಐತಿಹಾಸಿಕ ಪ್ರಜ್ಞೆಗೆ ಮುಕುಟವಿಟ್ಟ ಕಾದಂಬರಿಗಳು. ಶೇಕ್ಸ್‌ಪಿಯರ್ ಮತ್ತು ವಾಲ್ಟರ್ ಸ್ಕಾಟ್ ಪ್ರಭಾವದಲ್ಲಿ ಅವರು ಚೆನ್ನಬಸವ ನಾಯಕವನ್ನು ಬರೆದರು. ಅದನ್ನು ಪ್ರಥಮ ಬಾರಿಗೆ ೧೯೪೯ರಲ್ಲಿ ಪ್ರಕಟಿಸಿದರು. ಚೆನ್ನಬಸವ ನಾಯಕ ಕಾದಂಬರಿಯು ೧೭ನೇ ಶತಮಾನದ ಅಂತ್ಯ ಭಾಗದಲ್ಲಿ ಬಿದನೂರನ್ನು ಆಳುತ್ತಿದ್ದ ಕೆಳದಿ ಸಂಸ್ಥಾನದ ಪ್ರಾಂತ್ಯಗಳಲ್ಲಿ ನಡೆದಿರಬಹುದಾದ ರಾಜಕೀಯ ಕ್ಷೋಬೆಯನ್ನು ಚಿತ್ರಿಕರಿಸುತ್ತದೆ. ಕೆಳದಿ ವಂಶದ ಅರಸರುಗಳು ತಮ್ಮ ವೈಯಕ್ತಿಕ ತಪ್ಪುಗಳಿಂದ ಹೇಗೆ ಹೈದರ್ ಅಲಿಯ ಕೈಯಲ್ಲಿ ಸೋಲನ್ನುಂಡು, ತಮ್ಮ ಸಾಮ್ರಾಜ್ಯದ ಪತನಕ್ಕೆ ಕಾರಣರಾದರು ಎಂಬುದನ್ನು ವರ್ಣಿಸಿದ್ದಾರೆ.

ಬಿದನೂರಿನ ಪಾಳಯಗಾರನಾಗಿದ್ದ ಬಸಪ್ಪನಾಯಕನ ಎರಡನೇ ಹೆಂಡತಿಯಾದ ವೀರಮ್ಮಾಜಿಯ ಮಗನೇ ಚೆನ್ನಬಸವ ನಾಯಕ. ಎರಡನೇ ಸಲ  ಮದುವೆಯಾದಾಗ ಬಸಪ್ಪ ನಾಯಕನಿಗೆ ೪೦ ವರ್ಷಗಳು, ಮತ್ತು ವೀರಮ್ಮಾಜಿಗೆ ೧೫ ವರ್ಷಗಳು. ಮೊದ ಮೊದಲು ಅವರ ವೈವಾಹಿಕ ಜೀವನ ಸುಗಮವಾಗಿ ಸಾಗುತ್ತದೆ. ಆದರೆ ಕ್ರಮೇಣ ಬಸಪ್ಪನ ಮಂತ್ರಿಗಳಲ್ಲೊಬ್ಬನಾದ ನಂಬಯ್ಯ ಎಂಬುವವನ ಜೊತೆಗೆ ವೀರಮ್ಮಾಜಿಯು ಅಕ್ರಮ ಸಂಬಂಧವನ್ನು ಹೊಂದಿದ್ದಳೆಂಬ ವದಂತಿ  ಅವರ ವೈವಾಹಿಕ ಜೀವನಕ್ಕೆ ಕಳಂಕವನ್ನು ತರುತ್ತದೆ. ಬಸಪ್ಪನಿಗೆ ಈ ವಿಷಯ ಗೊತ್ತಿದ್ದರೂ, ಬೇಕಂತಲೆ ಈ ವದಂತಿಯನ್ನು ನಿರ್ಲಕ್ಷ ಮಾಡುತ್ತಾನೆ. ಆದರೆ ಚೆನ್ನಬಸವ ನಾಯಕ ಪ್ರಾಯಕ್ಕೆ ಬಂದಾಗ ವೀರಮ್ಮಾಜಿಯ ಸಂಬಂಧದ ಬಗ್ಗೆ ಸುಮ್ಮನಿರುವದಿಲ್ಲ. ಸಮಯ ಸಿಕ್ಕಾಗಲೆಲ್ಲಾ ವೀರಮ್ಮಾಜಿಯನ್ನು ಮೂದಲಿಸುತ್ತಾನೆ. ತಾಯಿ-ಮಗನ ಸಂಬಂಧ ನಿಧಾನವಾಗಿ ಕೆಡುತ್ತದೆ. ಚೆನ್ನಬಸವನನ್ನು ಶಾಂತವ್ವ ಎಂಬುವವಳ ಜೊತೆಗೆ ಬಸಪ್ಪ ಮದುವೆ ಮಾಡಿಸುತ್ತಾನೆ. ಶಾಂತವ್ವ ಬಸಪ್ಪನ ಮತ್ತೋರ್ವ ಮಂತ್ರಿ ನೇಮಯ್ಯನ ಮಗಳು. ವೀರಮ್ಮಾಜಿಗೆ ಈ ಸಂಬಂಧ ಇಷ್ಟವಿರುವುದಿಲ್ಲ. ಬಸಪ್ಪನ ಮರಣಾ ನಂತರ ಚೆನ್ನಬಸವನನ್ನು ತಕ್ಷಣ ವಾರಸುದಾರನನ್ನಾಗಿ ಮಾಡುವದಿಲ್ಲ. ಆಡಳಿತದ ಚುಕ್ಕಾಣಿಯನ್ನು ವೀರಮ್ಮಾಜಿಯೆ ವಹಿಸುತ್ತಾಳೆ. ಚೆನ್ನಬಸವನ ಪಟ್ಟಾಭಿಷೇಕವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಾಳೆ. ಅವನಿಗೆ ತನ್ನ ಸಂಬಂಧಿಕರಲ್ಲೇ ಒಂದು ಹೆಣ್ಣನ್ನು ತಂದು ಮದುವೆ ಮಾಡುವ ಯೋಜನೆಯನ್ನು ಹಾಕಿಕೊಳ್ಳುತ್ತಾಳೆ. ಇದೇ ಸಂದರ್ಭದಲ್ಲಿ ಬಿದನೂರಿನಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆ ತಲೆಯೆತ್ತುತ್ತದೆ. ಇದರ ಮಧ್ಯೆ ನಂಬಯ್ಯ ತನ್ನ ಕುಟಿಲತೆ ಮತ್ತು ವೀರಮ್ಮಾಜಿಯ ಸಂಬಂಧ ನಿಧಾನವಾಗಿ ಬಳಸಿಕೊಂಡು ಪ್ರಬಲನಾಗತೊಡಗುತ್ತಾನೆ. ಇದೇ ಸಮಯದಲ್ಲಿ ಅತಿ ಆಕಾಂಕ್ಷಿಯಾದ ಮತ್ತು ತನ್ನ ಬಲವನ್ನು ವಿಸ್ತರಿಸಿಕೊಳ್ಳಲು ಹಾತೊರೆಯುತ್ತಿದ್ದ ಹೈದರ್ ಅಲಿಯು ಬಿದನೂರಿನ ಮೇಲೆ ಹತೋಟಿ ಪಡೆಯಲು ಇದೇ ಸರಿಯಾದ ಸಮಯವೆಂದು ತನ್ನ ಯೋಜನೆಯನ್ನು ರೂಪಿಸುತ್ತಾನೆ. ಬಿದನೂರಿನಲ್ಲಿ ಸುವ್ಯವಸ್ಥೆಯನ್ನು ಕಾಪಾಡುವ ನೆವದಿಂದ ಅದರ ಮೇಲಿನ ದಂಡೆತ್ತಿ ಹೋಗಲು ಸಿದ್ಧಬನಾಗುತ್ತಾನೆ. ಅದೇ ಸಮಯದಲ್ಲಿ ಕಾಪಾಡುವ ನೆವದಿಂದ ಅದರ ಮೇಲಿನ ದಂಡೆತ್ತಿ ಹೋಗಲು ಸಿದ್ಧನಾಗುತ್ತಾನೆ. ಅದೇ ಸಮಯದಲ್ಲಿ ಚೆನ್ನಬಸವನ ಅಕಾಲಿಕ ಮರಣವು ಬಿದನೂರಿನಲ್ಲಿ ಸಮರ್ಥ ಆಡಳಿತಗಾರನಿಲ್ಲದಂತೆ ಮಾಡಿದ್ದು, ಹೈದರನಿಗೆ ತನ್ನ ಯೋಜನೆಯನ್ನು ಜಾರಿಗೊಳಿಸಲು ಸುಲಭವಾಗುತ್ತದೆ. ಇಷ್ಟೆಲ್ಲಾ ಆಗುತ್ತಿರುವಾಗ ಚೆನ್ನಬಸವನ ಹೆಂಡತಿ ಶಾಂತವ್ವ ಬಸರಿ ಹೆಂಗಸಾದರೂ ತನ್ನ ಗಂಡನಿಗೆ ಒದಗಿದ ಆಪತ್ತುಗಳನ್ನು ತನ್ನ ಜೀವ ತ್ಯಾಗದಿಂದ ದೂರವಾಗಿಸಬಹುದೆಂದು ತಿಳಿದು ತನ್ನ ಜೀವವನ್ನೇ ತ್ಯಾಗ ಮಾಡುತ್ತಾಳೆ. ನಂತರ ಹೈದರ್ ನು ಬಿದನೂರನ್ನು ಆಕ್ರಮಿಸಿ, ವೀರಮ್ಮಾಜಿ ಮತ್ತು ನಂಬಯ್ಯನನ್ನು ಸೆರೆಯಲ್ಲಿಡುತ್ತಾನೆ.

ಈ ಕಾದಂಬರಿಯ ಸುತ್ತ ಉಂಟಾದ ವಿವಾದವು ಪಾತ್ರ ಕೇಂದ್ರಿತ. ಅಂದರೆ ವೀರಮ್ಮಾಜಿಯು ಕಳಂಕಿತಳೆಂದು ಕಾದಂಬರಿಯಲ್ಲಿ ಬಿಂಬಿಸಿದ್ದರಿಂದ ಈ ವಿವಾದವುಂಟಾಯಿತು. ಹಾಗಾಗಿ ಕಾದಂಬರಿಯನ್ನು ಕಾಣುವ ಪಾತ್ರಗಳ ಸ್ಥೂಲ ಪರಿಚಯಗಳನ್ನು ಮಾಡಿಕೊಳ್ಳುವ ಅವಶ್ಯಕತೆಯಿದೆ.

ಬಸಪ್ಪ, ವೀರಮ್ಮಾಜಿ ಮತ್ತು ಚೆನ್ನಬಸವ ಶಿವಾಚಾರ ಸಮುದಾಯಕ್ಕೆ ಸೇರಿದವರು.[12] ನೇಮಯ್ಯ ಮತ್ತು ಶಾಂತವ್ವ ಜೈನ ಮತದಿಂದ ಇತ್ತೀಚೆಗಷ್ಟೆ ಶಿವಾಚಾರ ಮತಕ್ಕೆ ಸೇರಿದವರಾಗಿದ್ದರು. ಸಂಸ್ಕಾರ, ಸಂಸ್ಕೃತಿಗಳ ಭಿನ್ನತೆಗಳಿದ್ದರೂ ಬಸಪ್ಪ ತನ್ನ ಮಗನನ್ನು ಶಾಂತವ್ವಳಿಗೆ ಕೊಟ್ಟು ಮದುವೆ ಮಾಡುವ ಔದಾರ್ಯವನ್ನು ತೋರಿಸುತ್ತಾನೆ. ಇದು ವೀರಮ್ಮಾಜಿಯ ಕೋಪಕ್ಕೆ ಗುರಿಯಾಗುತ್ತದೆ. ಕ್ರಮೇಣ ತಾಯಿ-ಮಗನ ಸಂಬಂಧಗಳು ಕೆಡುವಂತಹ ಸಂದರ್ಭಗಳು ಹುಟ್ಟಿಕೊಳ್ಳುತ್ತವೆ. ಕಾದಂಬರಿಯಲ್ಲಿ ವೀರಮ್ಮಾಜಿಯು ಜಾರಿಣಿಯೆಂದು ನಂಬಯ್ಯನ ಜೊತೆಗೆ ಅಕ್ರಮ ಸಂಬಂಧವನ್ನಿಟ್ಟು ಕೊಂಡಿದ್ದಳೆಂದು ಚಿತ್ರಿಸಲಾಗಿದೆ. ಆಕೆ ಕುತಂತ್ರಿ, ಕ್ಷುಲ್ಲಕ, ಅಲ್ಪ ಮತಿಯ ಹೆಣ್ಣು. ಆದರೆ ಮಹಾತ್ವಾಕಾಂಕ್ಷಿಯಾಗಿದ್ದವಳು. ಚೆನ್ನಬಸವ ನಾಯಕ ಇನ್ನೂ ಯುವಕ. ಗಾಂಭೀರ್ಯವಿದೆ ಮತ್ತು ಪ್ರತಿಷ್ಠೆಯಿಂದ ವರ್ತಿಸುವವನು. ಆದರೆ ತನ್ನ ಜವಾಬ್ದಾರಿಯೇನೆಂದು ಅರಿತುಕೊಳ್ಳುವ ಜ್ಞಾನ ಇಲ್ಲದವನು. ತನ್ನ ಸಾಮರ್ಥ್ಯ ಮತ್ತು ಬಲವನ್ನು ತೋರಿಸಬೇಕಾದ ಸಮಯದಲ್ಲಿ ವಿಫಲವಾದ ರಾಜಕುಮಾರ. ಅವನೊಬ್ಬ ಉತ್ತಮ ಕುಸ್ತಿ ಪಟುವಾದರು, ಸಮಯಕ್ಕೆ ಸರಿಯಾದ ದೃಢ ನಿರ್ಧಾರವನ್ನು ತೆಗೆದುಕೊಳ್ಳದ ಹ್ಯಾಮ್ಲೆಟ್ ನಾಗಿ ಗೋಚರಿಸುತ್ತಾನೆ. ಬಹುತೇಕ ಅವನು ಗೊಣಗಾಡುವ ವ್ಯಕ್ತಿಯಾಗಿ ಕಾಣಿಸುತ್ತಾನೆಯೋ ಹೊರತು, ಯಾವುದೇ ಜವಾಬ್ದಾರಿಯುತ ಕಾರ್ಯತಂತ್ರ ಅವನಲ್ಲಿ ಕಾಣುವದಿಲ್ಲ. ಹೀಗಾಗಿ ತನ್ನ ಮೇಲೆ ಮತ್ತು ತನ್ನ ರಾಜ್ಯದ ಮೇಲೆ ಗಂಡಾಂತರ ತಂದುಕೊಳ್ಳುವ ಹಾಗೆ ವರ್ತಿಸುತ್ತಾನೆ.

ನೇಮಯ್ಯ ಒಬ್ಬ ನಿಷ್ಟಾವಂತ, ನಿಸ್ವಾರ್ಥ ಹಾಗೂ ತೂಕವುಳ್ಳಂತ, ವಿಧೇಯ ಮಂತ್ರಿ, ಕಾದಂಬರಿಯಲ್ಲಿ ಅನೇಕ ಕಡೆ ಅವನ ನಿಷ್ಠೆ. ಪ್ರಾಮಾಣಿಕತೆಯನ್ನು ಚಿತ್ರಿಸಲಾಗಿದೆ. ಅವನ ನಿಷ್ಠೆಯೇ ಅವನ ಮತ್ತು ಬಿದನೂರಿನ ದುರುಂತಕ್ಕೆ ಕಾರಣವಾಗುತ್ತದೆ. ಶಾಂತವ್ವ ಸೌಮ್ಯ, ಮೃದು ಸ್ವಭಾವದ ಹೆಂಗಸು. ವೀರಮ್ಮಾಜಿ ತನಗೆ ಕಷ್ಟ ನೀಡುತ್ತಿದ್ದರೂ, ಶಾಂತಚಿತ್ತಳಾಗಿ ಎಲ್ಲವನ್ನೂ ಸಹಿಸಿಕೊಂಡು ಹೋಗುವ ದಯಾಮಯಿ. ವೀರಮ್ಮಾಜಿಯ ಸಣ್ಣತನ ಮತ್ತು ಕುತಂತ್ರದಿಂದ ಅವಳಿಗೆ ಅನೇಕ ತೊಂದರೆಗಳುಂಟಾಗುತ್ತವೆ. ಶಾಂತವ್ವ, ವೀರಮ್ಮಾಜಿಯ ದ್ವೇಷಕ್ಕೆ ಮತ್ತು ಚೆನ್ನಬಸವನ ನಿರ್ಬಲ ಗುಣಕ್ಕೆ ಬಲಿಯಾಗುತ್ತಾಳೆ. ಕಾದಂಬರಿಯ ಅನೇಕ ಕಡೆ ವೀರಮ್ಮಾಜಿ ಹಾಗು ಶಾಂತವ್ವನ ನಡುವೆ ಇರುವ ಗುಣ-ದೋಷಗಳ ಹೋಲಿಕೆಗಳನ್ನು ನೋಡಬಹುದು. ಶಾಂತವ್ವಳು ಆದರ್ಶ ಸ್ತ್ರೀಯಾಗಿ ವರ್ಣಿಸಲ್ಪಟ್ಟಿದ್ದರೆ, ವೀರಮ್ಮಾಜಿಯು ಇತಿಹಾಸದಲ್ಲಿ ಆಗಿಹೋದ ಒಬ್ಬ ಖಳನಾಯಕಿಯಾಗಿ ಕಾಣಿಸುತ್ತಾಳೆ.[13]

ವಾಸ್ತವಾಂಶದ ಪ್ರತಿಪಾದಕರಾಗಿ ಮಾಸ್ತಿಯವರು ತಮ್ಮ ಕಾದಂಬರಿಯಲ್ಲಿ ಕೆಳದಿ ರಾಜ್ಯದ ಕೊನೆಯ ದಿನಗಳನ್ನು ‘ವಸ್ತು ನಿಷ್ಠ’ವಾಗಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ.[14] ಈ ವಸ್ತುನಿಷ್ಠತೆಗೆ ಬೇಕಾಗುವ ಚಾರಿತ್ರಿಕ ಆಕರಗಳನ್ನು ಅವರೆಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಈ ಕಾದಂಬರಿಯ ರೂಪು-ರೇಷೆಗಳು ಬಹಳ ಹಿಂದಿನಿಂದಲೂ ಇತ್ತೆಂದು ಹೇಳಿಕೊಂಡಿದ್ದಾರೆ. ಮೈಸೂರು ಪ್ರಾಂತ್ಯದ ಚಿಕ್ಕಮಗಳೂರಿನಲ್ಲಿ ಸಬ್-ಡಿವಿಜನಲ್ ಆಫೀಸರ್ ಆಗಿದ್ದಾಗ, ಅವರು ಜಾಗರೆ, ವಸ್ತಾರೆ, ಸೋಮನಕಾಡು ಮುಂತಾದ ಪ್ರದೇಶಗಳನ್ನು ಭೇಟಿಯಾಗುವ ಪ್ರಮೇಯ ಬಂದಿತ್ತು (ಮಾಸ್ತಿ, ೧೯೮೦ : ೪). ಈ ಪ್ರದೇಶಗಳಲ್ಲಾದ ಅವರ ಅನುಭವಗಳನ್ನು ಈ ಕಾದಂಬರಿಯಲ್ಲಿ ನೋಡಬಹುದು. ಈ ಎಲ್ಲಾ ಊರಿನ ಹೆಸರುಗಳನ್ನು ಮಾಸ್ತಿಯವರು ತಮ್ಮ ಕಾದಂಬರಿಗೆ ಬಳಸಿಕೊಂಡಿದ್ದಾರೆ. ಕಾದಂಬರಿಯ ಮೊದಲ ಸಂಪುಟಕ್ಕೆ ಬರೆದ ಮುನ್ನುಡಿಯಲ್ಲಿ ಅನೇಕ ಪಾತ್ರಗಳ ಮೂಲದ ಬಗ್ಗೆ ಬರೆದಿದ್ದಾರೆ. ತಾವು ಹೋದಡೆಯಲ್ಲಿ ಆಪ್ತ ಸ್ನೇಹಿತರಿಂದ ಕೆಳದಿ ಅರಸರು, ಹೈದರ್ ಅಲಿ ಮುಂತಾದವರ ಬಗ್ಗೆ ಕೇಳಲ್ಪಟ್ಟ ಕತೆ, ಪುರಾಣಗಳು ಮತ್ತು ಶಾಸ್ತ್ರಿ ಎಂಬ ಸ್ನೇಹಿತರಿಂದ ದೊರಕಲ್ಪಟ್ಟ ಹಳೆಯ ಇತಿಹಾಸ ಪುಸ್ತಕವನ್ನು ಅವರು ಕಾದಂಬರಿಯ ಮೂಲವನ್ನಾಗಿ ಬಳಸಿಕೊಂಡಿರುವ ಅಂಶವನ್ನು ಓದುಗರ ಜೊತೆಗೆ ಹಂಚಿಕೊಂಡಿದ್ದಾರೆ. ಇವುಗಳನ್ನು ಹೊರತು ಪಡಿಸಿದರೆ, ಮತ್ಯಾವುದೇ ಮೂಲಗಳನ್ನು ಅವರು ನಮೂದಿಸಿಲ್ಲ.

ವಾಸ್ತವಾಂಶವನ್ನು ನಾವು ಸಾಹಿತ್ಯ ಪರಿಕರವನ್ನಾಗಿ ಪರಿಗಣಿಸಬೇಕಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಪರಿಕರವು ೧೯ನೇ ಶತಮಾನದಲ್ಲಿ ಪ್ರಚಲಿತದಲ್ಲಿದ್ದ ಸಾಂಪ್ರದಾಯಿಕ ಕಾದಂಬರಿಗಳಿಗಿಂತ ಪಾತ್ರ, ಧ್ಯೇಯ, ಭಾಷೆ, ಮತ್ತು ಕಥೆ ಹೇಳುವ ರೀತಿಯಲ್ಲಿ ಹೇಗೆ ಭಿನ್ನ, ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕಥನ ಪರಿಕರವಾಗಿ ವಾಸ್ತವಾಂಶ/ವಸ್ತು ನಿಷ್ಠತೆ ಎಂಬುದು ಕನ್ನಡ ಓದುಗರಿಗೆ ಆಗ ಹೊಸದಾಗಿತ್ತು. ಅದು ಆಗ ತಾನೇ ಬೇರೂರಲು ಪ್ರಯತ್ನಿಸುತ್ತಿತ್ತು.[15] ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳು ಪಾತ್ರ, ಘಟನೆ ಮತ್ತು ಭಾಷೆಯ ಉಪಯೋಗದಲ್ಲಿ ಹಿಂದಿನವರಿಗಿಂತ ಭಿನ್ನವಾಗಿ ಕಾಣುತ್ತವೆ. ವಸ್ತು ನಿಷ್ಠತೆ, ಪದಗಳ ಆಯ್ಕೆ ಮತ್ತು detached ಆಗಿ ಕಥೆ ಹೇಳುವ ಮಾದರಿ ಅವರ ಕಾದಂಬರಿಯ ವಿಶೇಷಗಳು. ಎಮ್. ಸೀತಾರಾಮಶಾಸ್ತ್ರಿಯವರ ನಗರದ ರಾಣಿ (೧೯೫೨)[16] ಮತ್ತು ಮಾಸ್ತಿಯವರ ಚೆನ್ನಬಸವ ನಾಯಕ ಕಾದಂಬರಿಗಳನ್ನು ಕೆ.ಎನ್. ಕೃಷ್ಣಮೂರ್ತಿಯವರು ಹೋಲಿಸಿ ನೋಡಿದ್ದಾರೆ. ಶಾಸ್ತ್ರಿಯವರ ಕಾದಂಬರಿಯಲ್ಲಿ ಕಾಣುಬರುವ ವೀರ ಮತ್ತು ಶೃಂಗಾರ ರಸದ ವಿವರಗಳಿಗಿಂತ ಅವರು ಮಾಸ್ತಿಯವರ ಸಹಜವಾದ ಮತ್ತು ವಸ್ತು ನಿಷ್ಠವಾದ ನಿರೂಪಣೆಯನ್ನು ಮೆಚ್ಚುತ್ತಾರೆ (ಕೃಷ್ಣಮೂರ್ತಿ, ೧೯೫೭ : ೧೫೭-೧೬೧). ಪುರೋಷೋತ್ತಮ ಬಿಳಿಮಾಲೆಯವರು ಸಹ ಮಾಸ್ತಿಯವರು ಇತಿಹಾಸವನ್ನು ಉಪಯೋಗಿಸಿಕೊಂಡಿರುವ ಬಗ್ಗೆ ವ್ಯಕ್ತ ಪಡಿಸುತ್ತಾರೆ (೨೦೦೦ : ೨೦೨). ಕನ್ನಡದ ಮತ್ತೊಬ್ಬ ಐತಿಹಾಸಿಕ ಕಾದಂಬರಿಕಾರರಾದ ಟಿ.ಆರ್. ಸುಬ್ಬರಾವ್ ರ ಕಾದಂಬರಿಗೆ ಮಾಸ್ತಿಯವರನ್ನು ಹೋಲಿಸುತ್ತಾ, ಸುಬ್ಬರಾವ್ ರವರು ಭಾವನೆ ಮತ್ತು ಉದ್ರೇಕಗಳಿಗೆ ಮಾಸ್ತಿಯವರನ್ನು ಹೋಲಿಸುತ್ತಾ, ಸುಬ್ಬರಾವ್ ರವರು ಭಾವನೆ ಮತ್ತು ಉದ್ರೇಕಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದರಿಂದ ಮಾಸ್ತಿಯವರ ಹಾಗೆ ‘ಚಾರಿತ್ರಿಕ ಸತ್ಯ’ವನ್ನು ನಿಷ್ಠವಾಗಿ ಹೇಳಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.

ಚೆನ್ನಬಸವ ನಾಯಕರಲ್ಲಿ ಮಾಸ್ತಿಯವರು ಯಾವುದೇ ಪಾತ್ರಗಳನ್ನು ರಮ್ಯವಾಗಿ ಚಿತ್ರಿಸಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಶಾಂತವ್ವ ಮತ್ತು ನೇಮಯ್ಯರನ್ನು ಆದರ್ಶ ವ್ಯಕ್ತಿಗಳೆಂದು ವರ್ಣಿಸಿದ್ದಾರೆ. ಕೆಳದಿ ಸಂಸ್ಥಾನದ ಪತನವನ್ನು ಪಾತ್ರಗಳ ಮೂಲಕ ವಿವರಿಸುತ್ತಾರೆ. ಇದು ವಿಜಯನಗರ ಸಾಮ್ರಾಜ್ಯವು ಮುಸ್ಲಿಂರ ಕೈಗೆ ಸಿಕ್ಕು ಹಾಳಾಗಿ ಹೋಗಿರುವದನ್ನು ಕಣ್ಣೀರಿಡುವ ಅನೇಕ ಕಾದಂಬರಿಗಳಿಗಿಂತ ಭಿನ್ನವಾಗಿ ಹೇಗೆ ಕೆಳದಿ ನಾಯಕರ ಕೌಟುಂಬಿಕ ಮತ್ತು ಆಂತರಿಕ ಕಲಹಗಳು ಕೆಳದಿ ರಾಜ್ಯವನ್ನು ಪತನದೆಡೆಗೆ ಕೊಂಡೊಯ್ಯಿತು ಎಂದು ತೋರಿಸಿದ್ದಾರೆ. ನಿರ್ಬಲ, ಅನಿಶ್ಚಿತ ಮತ್ತು ಗೊಂದಲಮಯ ಮನೋಸ್ಥಿತಿಯ ಪಾತ್ರಗಳನ್ನು ಚಿತ್ರಿಸುವದರ ಮೂಲಕ ಕೆಳದಿ ರಾಜ್ಯದ ರಾಜಕೀಯ ಕ್ಷೋಭೆಯನ್ನು ಅವರು ನಾಯಕ ವಂಶಸ್ಥರು ಆಂತರಿಕ ಕೌಟುಂಬಿಕ ಜಗಳದ ಪ್ರತಿಫಲವೆಂದು ಸಂಕುಚಿತಗೊಳಿಸಿ ಬಿಡುತ್ತಾರೆ. ವೀರಮ್ಮಾಜಿ, ಚೆನ್ನಬಸವ, ನೇಮಯ್ಯಗಳ ನಡುವೆ ಇರುವ ಭಾವನಾತ್ಮಕ ಸಂಘರ್ಷಗಳು ಕೆಳದಿ ರಾಜ್ಯವನ್ನು ಹಾಳು ಮಾಡಿತು ಎಂದು ಅನೇಕ ವಿವರಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ಕಾದಂಬರಿಯ ಅನೇಕ ಪಾತ್ರಗಳು ‘ಒಳ್ಳೆಯ’ ಮತ್ತು ‘ಕೆಟ್ಟ’ ಪಾತ್ರಗಳಾಗಿ ಹೊರ ಹೊಮ್ಮುತ್ತಾರೆ.[17] ಅವರನ್ನು ಮನುಷ್ಯ ಸಹಜ ಭಾವನೆ, ಅಸಮರ್ಥನೆ ಹಾಗೂ ಅನಿಶ್ಚಿತತೆಗಳಿಗೆ ಉಪಯೇಯಗಳಾಗಿ ಕಾಣುತ್ತಾರೆ. ಯಾವುದೇ ರೀತಿಯ ವೀರಾವೇಷದ ಸಾಹಸಮಯ ಹೀರೋಗಳಾಗಿ ಕಾಣುವುದಿಲ್ಲ. ಎಲ್ಲಿಯೂ ಸಹ ಅವರು ಪಾತ್ರ ಅಥವಾ ಘಟನೆಗಳನ್ನು ಉತ್ಪ್ರೇಕ್ಷೆಯಿಂದ ಬಣ್ಣಿಸುವದಿಲ್ಲ. ಮುಖ್ಯ ಕಥೆಗೆ ಸಂವಾದಿಯಾಗಿ ಮತ್ತೊಂದು ಉಪಕಥೆಗಳನ್ನು ಹೆಣೆದಿರುವುದು ಈ ಕಾದಂಬರಿಯ ವಿಶೇಷ ನಾಯಕ ಕುಟುಂಬದ ಪ್ರತಿಷ್ಠೆಗೆ ಪರ್ಯಾಯ ಕಥೆಯೆಂಬಂತೆ ಸಗುಣ ಮತ್ತು ಮಲ್ಲಿಗೆಯವರ ಪ್ರಾಮಾಣಿಕ ಪ್ರೇಮಕಥೆಗೆ ಪ್ರಾಶ್ಚಸ್ತ್ಯ ನೀಡಲಾಗಿದೆ. ಇವರಿಬ್ಬರು ಕೆಳದಿ ಸಂಸ್ಥಾನದ ಸೇವಕರು, ಆದರೂ ಇವರಿಬ್ಬರ ಪ್ರೇಮವು ಕೆಳದಿ ನಾಯಕರ ಪ್ರತಿಷ್ಠೆಗಿಂತ ಮಿಗಿಲಾದದು ಎಂದು ಮಾಸ್ತಿಯವರು ತೋರಿಸಿದ ಹಾಗೆ ಇದೆ. ಎಲ್.ಎಸ್. ಶೇಷಗಿರಿರಾವ್ ರವರು  ಬರೆಯುವ ಹಾಗೆ “ಕಥೆಯಲ್ಲಿ ಕಾಣುವ ದೊಡ್ಡ ಪಾತ್ರಧಾರಿಗಳು ಯುದ್ಧ, ಆಕ್ರಮಣ, ಕೊಲೆಗಳಿಗೆ ಯೋಜನೆಗಳನ್ನು ರೂಪಿಸಿದರೆ, ಮಲ್ಲಿಗೆ-ಸುಗುಣರು ಸರಳ ಜೀವನವನ್ನು ನಡೆಸುತ್ತಾರೆ. ಜೀವನ ಉತ್ಸಾಹ, ಬೆಳಕನ್ನು ಮಲ್ಲಿಗೆಯಲ್ಲಿ ಕಾಣಬಹುದು” (ರಾವ್, ೧೯೭೬ – ೪೪).

ಈ ಕಾದಂಬರಿಯು ಅನೇಕ ವಿಮರ್ಶೆಗೊಳಗಾಯಿತು. ಅನೇಕ ವಿದ್ವಾಂಸರು, ಓದಗರನು ಈ ಕಾದಂಬರಿಯ ಶ್ರೇಷ್ಠ ಗುಣಗಳ ಬಗ್ಗೆ ಕೊಂಡಾಡಿದರು. ಇವರೆಲ್ಲರೂ ಪಾಶ್ಚಾತ್ಯ ಮಾದರಿಯ ಶಿಕ್ಷಣವನ್ನು ಪಡೆದಿದ್ದವರು ಮತ್ತು ಕನ್ನಡ ವಿದ್ವಾಂಸರು ಕೂಡ. ಇವರು ಕಾದಂಬರಿಯ ಪ್ರಾಮುಖ್ಯತೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿ, ಕನ್ನಡಕ್ಕೆ ಇಂತಹ ಕಾದಂಬರಿಗಳ ಅವಶ್ಯಕತೆಯನ್ನು ಅನುಮೋದಿಸಿದರು. ಮಾಸ್ತಿ ಒಬ್ಬ ಒಳ್ಳೆಯ ಕಾದಂಬರಿಕಾರನೆಂದು ಅವರು ಸಿದ್ಧಪಡಿಸಲು ಪ್ರಯತ್ನಿಸಿದರು.[18] ಅನೇಕರು ಈ ಕಾದಂಬರಿಯನ್ನು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರ ವಾಗಬೇಕೆಂದು ಬಯಸಿದರು. ಈ ಕಾದಂಬರಿಯು ಕೆಳದಿ ಸಂಸ್ಥಾನದ ಅವನತಿ ಮತ್ತು ಅದಕ್ಕೆ ಕಾರಣವಾದ ನಾಯಕ ವಂಶಸ್ಥರ ಅಂತಃಕಲಹವನ್ನು ಹಾಗು ಹೈದರ್ ಅಲಿಯ ಮಹಾದಾಸೆ, ಆಕ್ರಮಣವನ್ನು ಮಾಸ್ತಿಯವರು ವಸ್ತು ನಿಷ್ಠವಾಗಿ, ಉತ್ಪ್ರೇಕ್ಷೆಯಿಲ್ಲದೆ ಚಿತ್ರೀಕರಿಸಿದ್ದಾರೆಂದು ಇವರೆಲ್ಲರ ಒಮ್ಮತವಾಗಿತ್ತು.[19] ಒಂದು ವಿಶೇಷವನ್ನು ನಾವಿಲ್ಲಿ ಗಮನಿಸಬೇಕು. ಈ ಓದುಗ ಸಮುದಾಯವು ಬಹುತೇಕ ಬ್ರಾಹ್ಮಣ ಸಮುದಾಯದಿಂದ ಕೂಡಿತ್ತು.[20] ಈ ಬ್ರಾಹ್ಮಣ ವಿದ್ವಾಂಸರು ‘ಐತಿಹಾಸಿಕ ಸಮೂಹ’ (ಗ್ರಾಮ್ಷಿಯನ್ನು ಅನುಸರಿಸುತ್ತಾ) ವನ್ನು ರೂಪಿಸುವಲ್ಲಿ ಸಕ್ರೀಯವಾಗಿ ಅನೇಕ ಪ್ರಯೋಗಗಳನ್ನು ಸ್ವಾಗತಿಸಿದರು. ಇವರ ಸಾಹಿತ್ಯಕ ಮಧ್ಯಸ್ಥಿಕೆಯು ಬಹಳ ಪ್ರಭಾವಶಾಲಿಯಾಗಿ ಪರಿಣಮಿಸಿತು. ಮಾಸ್ತಿಯವರ ಕಾದಂಬರಿಗಳು ಒಂದು ಹೊಸ ‘ಸಾಹಿತ್ಯ ಶ್ರೇಣಿ’ಯನ್ನು ಹುಟ್ಟಿ ಹಾಕಿತು. ಚೆನ್ನಬಸವನಾಯಕದಂತಹ ಕಾದಂಬರಿಗಳು ಸಾಂಪ್ರದಾಯಿಕ ಐತಿಹಾಸಿಕ ಕಾದಂಬರಿಗಳನ್ನು ನಿರ್ಲಕ್ಷಿಸಿ, ಅವುಗಳನ್ನು ಹಳಸಲು ಮಾದರಿಗಳೆಂದು ಕಡೆಗಣಿಸಿದವು. ಇದನ್ನು ಔಪಚಾರಿಕವಾಗಿ ಅಂಗೀಕರಿಸಲು ಸಾಹಿತ್ಯದ ಹೊಸ ವರ್ಗ (ಬಹುತೇಕ ಬ್ರಾಹ್ಮಣರು) ತುದಿಗಾಲ ಮೇಲೆ ನಿಂತಿತ್ತು.

[1] ೧೮೫೬ರಲ್ಲಿ ಧಾರವಾಡದಲ್ಲಿ ಜರುಗಿದ ರಾಜ್ಯ ಸಾಹಿತ್ಯ ಅಕಾಡೆಮಿಯ ಸಭೆಯನ್ನು ಭಾಷಾಂತರಕ್ಕಾಗಿ ಕನ್ನಡ ಕೃತಿಗಳನ್ನು ಆಯ್ಕೆ ಮಾಡುವದನ್ನು ನಿರ್ಧರಿಸಲು ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಸ್ವತಃ ಮಾಸ್ತಿಯವರೆ ವಹಿಸಿದ್ದರು.

[2] ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಮಂತ್ರಿಯಾದ ಲೀಲಾದೇವಿ ಆರ್. ಪ್ರಸಾದರು ಅನೇಕ ಸ್ತ್ರೀ ಸಂಘಟನೆಗಳೊಂದಿಗೆ (ಅಕ್ಕನ ಬಳಗ ಎಂಬ ಹೆಸರಿನಡಿಯಲ್ಲಿ) ಅಂದಿನ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳನ್ನು ಭೇಟಿ ಮಾಡಿ ಈ ಕಾದಂಬರಿಯ ಅಪಾಯವನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಇದನ್ನು ಲೀಲಾದೇವಿಯವರು ನಿಷ್ಕಳಂಕಿ ಕೆಳದಿ ರಾಣಿ ವೀರಮ್ಮಾಜಿ ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಜ್ಞಾಪಿಸಿಕೊಂಡಿದ್ದಾರೆ. ನೋಡಿ ಕೆಳದಿ ಗುಂಡಾ ಜೋಯಿಸ್, ೨೦೦೭: iii.

[3] ಈ ಪತ್ರವನ್ನು ಡೆಕ್ಕಾನ್ ಹೆರಾಲ್ಡ್ ನಲ್ಲಿ (೮ನೇ ಏಪ್ರಿಲ್, ೧೮೫೮, ಪು. ೪) ನೋಡಬಹುದು.

[4] ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳಿಗೆ ಕೆಳದಿ ಗುಂಡಾ ಜೋಯಿಸರ ನಿಷ್ಕಳಂಕಿ ಕೆಳದಿ ರಾಣಿ ವೀರಮ್ಮಾಜಿ ಕೃತಿಯನ್ನು ನೋಡಿ (೨೦೦೭)

[5] ೫.       ಎ.ಎನ್. ಮೂರ್ತಿರಾವ್ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ (೧೮೮೮) ಜಿ.ಎಸ್. ಶಿವರುದ್ರಪ್ಪ, ಚಿದಾನಂದ ಮೂರ್ತಿ ಹಾಗೂ ಕೆ.ಬಿ. ಪ್ರಭುಶಂಕರವರನ್ನು (ಎಲ್ಲರೂ ಲಿಂಗಾಯತರು) ಪ್ರಶಂಸೆಯಿಂದು ನೆನೆಯುತ್ತಾರೆ. ಇವರೆಲ್ಲರೂ ಲಿಂಗಾಯತರ ಮತೀಯ ವಾದವನ್ನು ಖಂಡಿಸಿ ಮಾಸ್ತಿಯವರಿಗೆ ನೈತಿಕ ಬೆಂಬಲ ನೀಡಿ ಒಬ್ಬ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ‍್ಯ, ಸೃಜನಶೀಲತೆಯನ್ನು ಯಾರೂ ಅತಿಕ್ರಮ ಮಾಡಲಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಇತಿಹಾಸದ ಘಟನೆಗಳನ್ನು ಕಲ್ಪನಾ ಉದ್ದೇಶಗಳಿಗೆ ಬಳಸಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ಅವರು ನಂಬಿದ್ದರು.

[6] ಈ ಪಠ್ಯದ ಬಗ್ಗೆ ರಾಜರತ್ನಂರವರು ವಿವರಗಳನ್ನು ನೀಡಿದ್ದಾರೆ. ನೋಡಿ (ರಾಜರತ್ನಂ, ೧೮೫೮).

[7] ಈ ಕಾಲದಲ್ಲಿ ಬೆಳೆದ ಕಾದಂಬರಿಯ ಸಾಮ್ಯತೆ ಹಾಗು ಭಿನ್ನತೆಗಳನ್ನು ಮೀನಾಕ್ಷಿ ಮುಖರ್ಜಿಯವರು ತಮ್ಮ ರಿಯಲಿಸಂ ಮತ್ತು ರಿಯಾಲಿಟಿ (೧೮೮೫) ಕೃತಿಯಲ್ಲಿ ಬಲು ಸೊಗಸಾಗಿ ಚರ್ಚಿಸಿದ್ದಾರೆ. ಇದರ ಜೊತೆಗೆ ಸಿ.ಎನ್. ರಾಮಚಂದ್ರನ್ ಅವರ ಲೇಖನವನ್ನು (೨೦೦೦: ೧೭೪-೧೮೭) ಸಹ ನೋಡಿರಿ.

[8] ಸ್ವರಾಜ್ಯ ಸುಗಂಧವು ಶಿವಾಜಿಯ ದೇಶಭಕ್ತಿಯನ್ನು ಕೊಂಡಾಡುತ್ತದೆ. ಎರಡನೇ ಕಾದಂಬರಿ (ದುರ್ಗದ ಬಿಚ್ಚುಗತ್ತಿ) ಬರಮ ನಾಯಕನ ವೀರತ್ವವನ್ನು ಪ್ರತಿಬಿಂಬಿಸುತ್ತದೆ. ಈ ಕಾದಂಬರಿಗಳಲ್ಲಿ ಕಾಣುವ ವಿಶೇಷವೇನೆಂದರೆ ಕನ್ನಡ ಭಾಷೆಯನ್ನು ಹಿಂದು ಸಂಸ್ಕೃತಿಗೆ ಸಂವಾದಿಯಾಗಿ ಕಂಡಿರುವ ಅಂಶ.

[9] ಐತಿಹಾಸಿಕ ಕಾದಂಬರಿಗಳಿಗೆ ವಸ್ತುವಿಷಯವನ್ನು ತಯಾರು ಮಾಡುವ ಸಲುವಾಗಿ ಎ.ಆರ್. ಕೃಷ್ಣಶಾಸ್ತ್ರಿಯವರು ಮೈಸೂರು ಸಂಸ್ಥಾನದ ಮೇಲೆ ಯಾವ, ಯಾವ ಐತಿಹಾಸಿಕ ಸಾಕ್ಷ್ಯಾಧಾರಗಳನ್ನು ಬಳಸಿಕೊಳ್ಳಬಹುದೆಂದು ಪಟ್ಟಿ ಮಾಡಿದ್ದಾರೆ (೧೮೧೮). ಉತ್ತಮ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಈ ಮೂಲ ಸಾಮಾಗ್ರಿಗಳನ್ನು ಯಾರು ಬಳಸಲು ಸಮರ್ಥರು, ಅದಕ್ಕೆ ಬೇಕಾಗಿರುವ ಅರ್ಹತೆ, ಕೌಶಲ್ಯ ಮತ್ತು ಕಲ್ಪನಾ ಶಕ್ತಿಯನ್ನು ಸಹ ಅವರೇ ನಿರ್ಧರಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

[10] ಈ ಕಾದಂಬರಿಯು ವಿಜಯನಗರ ಸಾಮ್ರಾಜ್ಯದ ಕಥೆಯನ್ನು ಹೇಳುತ್ತದೆ.

[11] ಇದು ಕೊಡಗಿನ ಲಿಂಗಾಯತ ರಾಜನಾದ ಚಿಕವೀರ ರಾಜೇಂದ್ರನನ್ನು ಕುರಿತದ್ದು. ಈ ಕಾದಂಬರಿಯನ್ನು ೧೮೮೮ರಲ್ಲಿ ಟಿ.ವಿ. ಧಾರವಾಹಿಯಾಗಿ ಚಿತ್ರೀಕರಿಸಲು ಹೊರಟಾಗ ಅನೇಕ ಲಿಂಗಾಯತರು ಇದರ ವಿರುದ್ಧ ಸಿಡಿದೆದ್ದರು. ಈ ಕಾದಂಬರಿಯು ಲಿಂಗಾಯತ ರಾಜನ ವಿರುದ್ಧವಿದ್ದುದರಿಂದ ಮತ್ತು ಇತಿಹಾಸಕ್ಕೆ ‘ವ್ಯತಿರಿಕ್ತ’ವಾದುದರಿಂದ ಧಾರವಾಹಿಯ ವಿರುದ್ಧ ಪ್ರತಿಭಟನೆಗಳಾದವು.

[12] ಶಿವಾಚಾರವು ಲಿಂಗಾಯತರಿಗೆ ಇದ್ದ ಮತ್ತೊಂದು ಹೆಸರು.

[13] ಕಾದಂಬರಿಯ ಎರಡನೇ ಆವೃತ್ತಿಗೆ ಬರೆದ (೧೮೫೬) ಮುನ್ನುಡಿಯಲ್ಲಿ ಇತಿಹಾಸದ ಪಾತ್ರಗಳ್ಯಾವುವು ಮತ್ತು ಕಾಲ್ಪನಿಕ ಪಾತ್ರಗಳ್ಯಾವುವು ಎಂದು ತಿಳಿಸಿದ್ದಾರೆ. ವೀರಮ್ಮಾಜಿ, ಹೈದರ್ ಅಲಿ, ಚೆನ್ನಬಸವ ನಾಯಕ, ಬಸಪ್ಪ ನಾಯಕರು ನಿಜವಾಗಿ ಆಗಿ ಹೋದ ವ್ಯಕ್ತಿಗಳಾಗಿದ್ದರೆ, ನೇಮಯ್ಯ ಮತ್ತು ಶಾಂತವ್ವರು ತಮ್ಮ ಕಲ್ಪನೆಯಿಂದ ಮೂಡಿಬಂದ ಪಾತ್ರಗಳೆಂದು ಅವರು ತಿಳಿಸಿದ್ದಾರೆ.

[14] ಮಾಸ್ತಿಯವರ ವಾಸ್ತವತೆಯ ಬಗ್ಗೆ ತಾಳಿದ್ದ ವಿಚಾರಗಳೂ ನಂಜನಗೂಡು ತಿರುಮಲಾಂಬರ ಬಗ್ಗೆ ಬರೆದ ಕಟು ವಿಮರ್ಶೆಯಲ್ಲಿ ಕಾಣಸಿಗುತ್ತವೆ. ತಿರುಮಲಾಂಬರು ೧೮೨೦ರ ಸುಮಾರಿಗೆ ಅನೇಕ ಕನ್ನಡ ಕಾದಂಬರಿಗಳನ್ನು ಬರೆದರು. ಆ ಕಾದಂಬರಿಗಳನ್ನು ವಿಮರ್ಶಿಸುತ್ತಾ ಮಾಸ್ತಿಯವರು ತಿರುಮಲಾಂಬರ ಅನುಭವದ ಕೊರತೆ ಮತ್ತು ಅವಾಸ್ತವಾಂಶವನ್ನು ಟೀಕಿಸಿದ್ದಾರೆ. ಕಥಾವಸ್ತು ಮತ್ತು ಪಾತ್ರಗಳನ್ನು ಸೃಷ್ಟಿಸುವಲ್ಲಿ ತಿರುಮಲಾಂಬರ ಅನುಭವದ ಕೊರತೆಯನ್ನು ಕಾಣಬಹುದೆಂದು ಅವರು ವಾದಿಸುತ್ತಾರೆ. ನೋಡಿ ಶಿವರಾಮ ಪಡಿಕ್ಕಲ್, (೨೦೦೫: ೮೦-೧೦೮).

[15] ೧೮೪೦ರಲ್ಲಿ ಜರುಗಿದ ಸಣ್ಣ ಕತೆಗಳ ಮೂರನೇ ಅಧಿವೇಶನದಲ್ಲಿ ಸಣ್ಣಕತೆಗಳಲ್ಲಿ ವಾಸ್ತವಾಂಶದ ಮಹತ್ವವನ್ನು ಚರ್ಚಿಸಲಾಗಿದೆ. ಅಧಿವೇಶನದಲ್ಲಿ ಪಾಲ್ಗೊಂಡಿದ್ದ ವಿದ್ವಾಂಸರುಗಳಾದ ತೀ.ನಂ. ಶ್ರೀಕಂಠಯ್ಯ, ವೈ.ಎಂ. ಷಣ್ಮಖಯ್ಯ ಮತ್ತು ಕೆ. ನರಸಿಂಹಮೂರ್ತಿಯವರು ಸಣ್ಣಕತೆಗಳಲ್ಲಿ ವಾಸ್ತವಾಂಶ, ವಸ್ತುನಿಷ್ಠತೆ ಮತ್ತು ನಿಖರತೆಗೆ ಪ್ರಾಶಸ್ತ್ಯ ನೀಡಿ ತಮ್ಮ ವಿಚಾರಗಳನ್ನು ಮಂಡಿಸಿದರು. ವಾಸ್ತವವಾಗಿ ಸಣ್ಣಕತೆಗಳನ್ನು ಹೇಗೆ ಬರೆಯಬೇಕೆಂದು ತಿಳಿಸಿ, ಅದರ ಬಗ್ಗೆ ದೀರ್ಘ ಚರ್ಚೆ ಮಾಡಿದ್ದಾರೆ. ಮಾಸ್ತಿಯವರು ಈ ಅಧಿವೇಶನದ ಅನೇಕ ವಿಚಾರಗಳನ್ನು ತಮ್ಮ ಜೀವನ ಪತ್ರಿಕೆಯಲ್ಲಿ (೧೮೪೬: ೩೦೮-೩೨೧) ಪ್ರಕಟಿಸಿದರು.

[16] ಈ ಕಾದಂಬರಿಯು ಕೂಡ ಕೆಳದಿ ಸಂಸ್ಥಾನದ ಬಗ್ಗೆ ಇದ್ದು, ವೀರಮ್ಮಾಜಿಯ ಕಥೆಯನ್ನು ಹೊಂದಿದೆ. ೧೮೫೮ರಲ್ಲಿ ಶಾಸ್ತ್ರಿಗಳು ಬಿದನೂರ ರಾಣಿ ಎಂಬ ಇನ್ನೊಂದು ಕಾದಂಬರಿಯನ್ನು ಸಹ ಬರೆದರು. ಈ ಸಂದರ್ಭದಲ್ಲಿ ಎಮ್. ಎಸ್. ಪುಟ್ಟಣ್ಣಯ್ಯರನ್ನು ನೆನೆಯಬೇಕು. ಅವರು ಇಕ್ಕೇರಿಯ ಇತಿಹಾಸ ಎಂಬ ಕೃತಿಯನ್ನು ೧೮೩೧ರಲ್ಲಿ ಬರೆದು ಪ್ರಕಟಿಸಿದರು. ಅವರೂ ಸಹ ತಮ್ಮ ಹಿಂದಿನವರಂತೆ ವೀರಮ್ಮಾಜಿಯ ಹಗರಣವು ಲಿಂಗಾಯತ ಇತಿಹಾಸಕ್ಕೆ ಕಪ್ಪು ಚುಕ್ಕೆಯೆಂದು ಬರೆದರು (೧೮೩೧: ೪೭-೪೮).

[17] ಒಳ್ಳೆಯ-ಕೆಟ್ಟ ಗುಣಗಳು ಮಾಸ್ತಿಯವರ ಸಾಂಪ್ರದಾಯಿಕ ನಿಲುವನ್ನು ಪ್ರದರ್ಶಿಸುತ್ತದೆ. ಈ ಧೋರಣೆ ಕಾದಂಬರಿಯುದ್ದಕ್ಕೂ ಕಾಣಬಹುದು. ಆದರೂ ಇದನ್ನು ಮಾಸ್ತಿಯವರು ವಸ್ತು-ನಿಷ್ಠ, ನೇರ, ಆಡಂಬರರಹಿತ ಕಥನ ಮಾದರಿ ಎಂಬ ಸೋಗಿನಲ್ಲಿ ಮುಚ್ಚಿಬಿಡುತ್ತಾರೆ. ಡಿ.ಆರ್. ನಾಗರಾಜರವರು ಇದೇ ಮಾತನ್ನು ತಮ್ಮ ಟೀಕೆಯಲ್ಲಿ (ಸಾಹಿತ್ಯ ಕಥನ, ೧೮೮೬) ಮಾಡಿದ್ದಾರೆ. ನಾಗರಾಜರು ಭಾವಿಸಿರುವಂತೆ ಮಾಸ್ತಿಯವರ ಪ್ರಕಾರ ಜೀವನಕ್ಕೊಂದು, ಅಷ್ಟೇ ಅಲ್ಲ ಇಡೀ ವಿಶ್ವಕ್ಕೊಂದು ನಿಯಮವಿದೆ. ಇದು ತನ್ನದೇ ಆದ ತರ್ಕದ ಪ್ರಕಾರ ತನ್ನದೇ ಆದ ಪಥದಲ್ಲಿ ಸಾಗುತ್ತದೆ. ನಮ್ಮ ಆಗು ಹೋಗುಗಳೆಲ್ಲಾ ವಿಧಿ ಲಿಖಿತ ಎಂಬ ಧೋರಣೆ ಮಾಸ್ತಿಯವರದ್ದು ಎಂಬುದು ನಾಗರಾಜರ ಅಭಿಮತ (೧೮೮೬, ೨೮೦-೨೮೫).

[18] ಪ್ರಸಿದ್ಧ ಸಾಹಿತಿ ಹಾಗು ರಾಜಕೀಯ ಚಿಂತಕರಾದ ಡಿ.ವಿ. ಗುಂಡಪ್ಪ, ಎಸ್. ಹಿರಿಯಣ್ಣಯ್ಯ, ಸಿ. ರಾಜಗೋಪಾಲಚಾರಿಯವರು ಮಾಸ್ತಿಯವರ ಈ ಕಾದಂಬರಿಯನ್ನು ಕೊಂಡಾಡಿದವರಲ್ಲಿ ಪ್ರಮುಖರು. ಮಾಸ್ತಿಗೆ ಅವರು ಬರೆದ ಪತ್ರಗಳಲ್ಲಿ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪತ್ರಗಳನ್ನು ಮಾಸ್ತಿಯವರು ತಮ್ಮ ಸಂಕಲನ ‘ಸಾಹಿತ್ಯ ಲಾಲನೆ’ (೧೮೬೭) ಯಲ್ಲಿ ಸಂಗ್ರಹಿಸಿದ್ದಾರೆ.

[19] ಇದರ ಬಗ್ಗೆ ಎಸ್. ಶ್ರೀಕಂಠಯ್ಯ (೧೮೫೨) ಮತ್ತು ಎಲ್. ಎಸ್. ಕಾಡದೇವರ ಮಠ (೨೦೦೫-೬)ರ ಕೃತಿಗಳನ್ನು ನೋಡಿ.

[20] ಮಾಸ್ತಿಯವರಿಗೆ ಪತ್ರ ಬರೆದ ಅನೇಕ ವಿದ್ವಾಂಸರ ಹೆಸರುಗಳಿಂದ ಈ ಅಂಶವನ್ನು ತಿಳಿದುಕೊಳ್ಳಬಹುದು. ನೋಡಿ, ಸಾಹಿತ್ಯ ಲಾಲನೆ (೧೮೬೭).