ಭಾಗ

ಮಧ್ಯಸ್ಥಿಕೆಯ ರಾಜಕೀಯ ಮತ್ತು ವಾಸ್ತವಾಂಶ

ಸ್ವತಂತ್ರ ಭಾರತದಲ್ಲಿ ಏಕತೆ-ಭಾವೈಕ್ಯತೆಯ ವಿಚಾರ ಧಾರೆಯು ಭಾರತೀಯರನ್ನು ಒಟ್ಟಾಗಿರುವ ಪ್ರಯತ್ನ ಮಾಡಿದರೂ, ಜಾತಿ ಸಮುದಾಯಗಳ ನಡುವಿನ ಅಸಮಾನತೆ ಇದ್ದೇ ಇತ್ತು. ಈ ಅಸಮಾನತೆಯು ಸಾಹಿತ್ಯ ವಲಯವನ್ನು ಪ್ರವೇಶಿಸದೇ ಇರಲಿಲ್ಲ. ಕನ್ನಡ ಸಾಹಿತ್ಯವನ್ನು ಜಾತ್ಯಾತೀತಗೊಳಿಸುವ ಪ್ರಯತ್ನಗಳು ಅಷ್ಟೊಂದು ಯಶಸ್ಸು ಕಾಣಲಿಲ್ಲ. ಕರ್ನಾಟಕದಲ್ಲಿ ಬ್ರಾಹ್ಮಣರು ಸಾಂಪ್ರದಾಯಿಕ ಪ್ರಭುತ್ವವನ್ನು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋದರು. ವಸಾಹತುಶಾಹಿ ಕಾಲದಲ್ಲಿ ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಗಳ ನಡುವೆ ಉಂಟಾದ ಭಾಷಿಕ ವಿಭಜನೆಯು[1] ಬ್ರಾಹ್ಮಣರಿಗೆ ಲಾಭವನ್ನುಂಟು ಮಾಡಿತು. ಆಧುನಿಕ ಇಂಗ್ಲೀಷ್ ಶಿಕ್ಷಣದ ಲಾಭ ಪಡೆದ ಮೊದಲಿಗರಲ್ಲಿ ಅವರು ಇದ್ದ ಕಾರಣ, ವಸಾಹತುಶಾಹಿ ಮತ್ತು ವಸಾಹತುಗೊಳಲ್ಪಟ್ಟವರ ನಡುವೆ ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಮಧ್ಯಸ್ಥಿಕೆಯನ್ನು ವಹಿಸಿಕೊಂಡರು. ಸ್ವತಂತ್ರ‍್ಯ ಭಾರತದಲ್ಲೂ ಸಹ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳ ನಡುವೆ ಅವರು ಮಧ್ಯಸ್ಥಿಕೆಯನ್ನು ಮುಂದುವರೆಸಿದರು. “ಸ್ಥಳೀಯ ಅಭಿಪ್ರಾಯಗಳನ್ನು ಪ್ರತಿನಿಧಿಸಲು ರಾಯಭಾರಿಯಾಗುವ ಈ ಕ್ಷಣವು” ಸ್ಥಳೀಯ ಭಾರತದಲ್ಲಿ ಸ್ಥಳೀಯ ಭಾಷೆಗಳಿಗೆ ಸಿಕ್ಕ ಪ್ರಾಮುಖ್ಯತೆಯ ಫಲ. ಸ್ಥಳೀಯ ಭಾಷೆಗಳಿಗೆ ಸಿಕ್ಕ ಪ್ರಾತಿನಿಧ್ಯ, ಲಾಭ ಹಾಗೂ ಸಾಂಸ್ಕೃತಿಕ ಮಹತ್ವ ಬ್ರಾಹ್ಮಣರನ್ನು ದೇಶದ ಐಕ್ಯತೆಯನ್ನು ಕಟ್ಟುವ ರೂವಾರಿಗಳಾಗಿ ಮಾರ್ಪಡಿಸಿತು. ಇದರಲ್ಲಿ ಅವರು ಬಹುತೇಕ ಯಶಸ್ಸು ಕಂಡರೂ ಕೂಡ ಈ ಸಾಮಾಜಿಕ ವರ್ಗವು ಸ್ಥಳೀಯ ಭಾಷೆಗಳ ರಾಜಕೀಯ ಲಾಭವನ್ನು ತಮ್ಮದಾಗಿಸಿ ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಹಿತಾಸಕ್ತಿಯನ್ನು ತೋರಿಸಿತು. ಸಾಂಸ್ಕೃತಿಕ ವಲಯದಲ್ಲಿ ಈ ಹಿತಾಸಕ್ತಿಯನ್ನು ಮತ್ತು ಸಂಪ್ರದಾಯದ ಪ್ರತಿನಿಧಿಗಳಾಗಿ ಪೂರೈಸಿಕೊಳ್ಳಲು ಅವರು ಪ್ರಯತ್ನಿಸಿದರು. ಈ ವಾತಾವರಣದಲ್ಲಿ ರೂಪುಗೊಂಡ ಮಾಸ್ತಿಯವರು ಸಾಂಸ್ಕೃತಿಕ ಪ್ರತಿನಿಧಿಗಳಾಗಿ ಲಿಂಗಾಯತ ಸಾಹಿತ್ಯ ಹಾಗು ಇತಿಹಾಸವನ್ನು ಪ್ರತಿನಿಧಿಸುವ ಮಹತ್ವದ ಪ್ರಾತಿನಿಧಿಕ ಕಾರ್ಯ ನಿರ್ವಹಿಸಿದರು. ಉದಾಹರಣೆಗೆ ೧೯೨೩ರಲ್ಲಿ ಅವರು ಬಸವಣ್ಣನ ವಚನಗಳನ್ನು ಇಂಗ್ಲೀಷ್‌ಗೆ ಭಾಷಾಂತರಿಸುವುದರ ಮೂಲಕ ಲಿಂಗಾಯತ ಸಾಹಿತ್ಯವನ್ನು ಕಾತ್ಯಾತೀತಗೊಳಿಸಲು ಪ್ರಯತ್ನಿಸಿದರು.        [2] ಸ್ವತಂತ್ರ ಭಾರತದಲ್ಲೂ ಅವರು ತಮ್ಮ ಈ ಆಸಕ್ತಿಯನ್ನು ಮುಂದುವರೆಸಿಕೊಂಡು ಹೋದರು. ಇದರ ಜೊತೆಗೆ ಅವರು ಅನೇಕ ಸ್ವತಂತ್ರ ಕಾದಂಬರಿ ಹಾಗು ಸಣ್ಣಕಥೆಗಳನ್ನು ಬರೆಯುವದನ್ನು ಮುಂದುವರೆಸಿದರು.

ಮಾಸ್ತಿಯವರ ಬಗ್ಗೆ ಲಿಂಗಾಯತರಿಗೆ ಯಾವಾಗಲು ಅನುಮಾನ. ಆವರನ್ನು ಅನುಮಾನಿಸುತ್ತಾ, ಲಿಂಗಾಯತರು ಸಹ ಸಾಂಸ್ಕೃತಿಕವಾಗಿ ಪ್ರಬಲರಾಗಲು ಹಾತೊರೆಯುತ್ತಿದ್ದರು. ಲಿಂಗಾಯತ ಸಾಹಿತ್ಯ ಹಾಗು ಸಂಸ್ಕೃತಿಯನ್ನು ಪ್ರತಿನಿಧಿಸುವ ಏಕಸ್ವಾಮತೆಯನ್ನು ತಮ್ಮದಾಗಿಸುವ ಪ್ರಯತ್ನಗಳನ್ನು ಸಹ ಮಾಡಿದರು. ಇದು ಬ್ರಾಹ್ಮಣರ ಸಂಪ್ರದಾಯುಕ ಸಾಂಸ್ಕೃತಿಕ ಪ್ರಭುತ್ವ, ಮಧ್ಯಸ್ಥಿಕೆ ಮತ್ತು ಪ್ರಾತಿನಿಧ್ಯವನ್ನು ಪ್ರಶ್ನಿಸುವ ಧೈರ್ಯವನ್ನೂ ಸಹ ಹೊಂದಿತ್ತು. ಈ ಪ್ರತಿಕ್ರಿಯೆಯಲ್ಲಿ ಅವರು ಅವಿರತವಾಗಿ ಲಿಂಗಾಯತರ ಬಗ್ಗೆ ಪಾಶ್ಚಾತ್ಯ ಹಾಗು ಬ್ರಾಹ್ಮಣರ ವಿಚಾರಧಾರೆಗಳನ್ನ ವಿರೋಧಿಸುತ್ತಾ ಅಥವಾ ಅದಕ್ಕೆ ಪರ್ಯಾಯವನ್ನು ಹುಡುಕುತ್ತಾ ತಮ್ಮ ಬಲವನ್ನು ಪ್ರದರ್ಶಿಸಿದರು.[3] ಇದಕ್ಕಾಗಿ ತಮ್ಮ ಲಿಂಗಾಯತ ಸಾಹಿತ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಇಂಗ್ಲಿಷ್‌ಗೆ ಮತ್ತು ಕನ್ನಡದಿಂದ ಸಂಸ್ಕೃತ, ಇಂಗ್ಲಿಷ್‌ಗೆ ಭಾಷಾಂತರಿಸುವ ತೀವ್ರ ಕೆಲಸಗಳನ್ನು ಮಾಡಿದರು. ತಮ್ಮ ಸಾಹಿತ್ಯ ಇತಿಹಾಸವನ್ನು ‘ಅಧಿಕೃತ’ವಾಗಿ ಮತ್ತು ‘ಖಚಿತ’ವಾಗಿ ಪ್ರತಿನಿಧಿಸಲು ಭಾಷಾಂತರವು ನೆರವಿಗೆ ಬಂತು. ಇವರಲ್ಲಿ ಪಿ.ಆರ್. ಕರಿಬಸವಶಾಸ್ತ್ರಿ,[4] ಫ.ಗು. ಹಳಕಟ್ಟಿ[5] ಮತ್ತು ಶಿವಮೂರ್ತಿಶಾಸ್ತ್ರಿಗಳು[6] ಬಲು ಉತ್ಸಾಹದಿಂದ ಲಿಂಗಾಯತ ಸಾಹಿತ್ಯಕ್ಕೆ ಪರಂಪರೆಯನ್ನು ಮರುಕಳಿಸಿ, ಆಧುನಿಕ ಕಾಲಕ್ಕೆ ತಕ್ಕಂತೆ ಅದನ್ನು ಮಾರ್ಪಾಡಿಸಲು ಆಸಕ್ತಿ ತೋರಿಸಿ, ಅದರಂತೆ ಅನೇಕ ಸಾಧನೆಗಳನ್ನು ಕೈಗೊಂಡರು.

ಇವರ ಸಾಹಿತ್ಯ ಕೃಷಿಯಲ್ಲಿ ಕೆಳದಿ ಇತಿಹಾಸಕ್ಕೆ ಮತ್ತು ಕೆಳದಿ ವಂಶಸ್ಥರಿಗೆ ಮಹತ್ವದ ಸ್ಥಾನ ನೀಡಲಾಯಿತು. ಇದಕ್ಕೆ ಸಂಬಂಧಿಸಿ ಅನೇಕ ಕಾದಂಬರಿಗಳನ್ನು ರಚಿಸಲಾಯಿತು. ಶಿಸ್ತಿನ ಶಿವಪ್ಪನಾಯಕ,[7] ಕೆಳದಿ ಚೆನ್ನಮ್ಮ ಹಾಗೂ ಕಿತ್ತೂರು ಚೆನ್ನಮ್ಮ[8] ಕಾದಂಬರಿಗಳನ್ನು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಇದು ಲಿಂಗಾಯತ ರಾಜ-ರಾಣಿಯರ ಗತ ವೈಭವವನ್ನು ಮತ್ತೆ ಮರುಕಳಿಸುವ ನೆನಪುಗಳು. ಅವರು ಸಾಧಿಸಿದ ಮತ್ತು ಅವರಿಂದಾದ ಮಹತ್ಕಾರ್ಯಗಳನ್ನು ಮತ್ತೆ ಜನರ ಮನಸ್ಸಿನಲ್ಲಿ ಸ್ಥಿರವಾಗಿ ಮೂಡಿಸುವ ಸಲುಬಾಗಿ ಅನೇಕ ಕೃತಿಗಳು ಹೊರಬಂದವು. ಸಾಮುದಾಯಿಕ ಮುದ್ರೆಯಿದ್ದ ಈ ನೆನಪುಗಳನ್ನು ಹಾಗೂ ಮಾಹಿತಿಗಳನ್ನು ಕಾಲಕ್ರಮೇಣ ಸಾರ್ವತ್ರಿಕಗೊಳಿಸಿ ಅವನ್ನು ಸರಿಯಾಗಿ ಅರ್ಥಮಾಡಿಕೊಂಡು, ವ್ಯಾಖ್ಯಾನಿಸುವದಕ್ಕೊಸ್ಕರ ಈ ಪ್ರಯತ್ನಗಳು ಆಸಕ್ತಿ ತೋರಿಸಿದವು. ಈ ಪ್ರಕ್ರಿಯೆಯು ಕೆಳದಿ ರಾಜರುಗಳು ಹೇಗೆ ಹಿಂದು ಸಂಸ್ಕೃತಿ/ಧರ್ಮವನ್ನು ಪರಕೀಯ, ವಿಶೇಷವಾಗಿ ಮುಸ್ಲಿಮರ ಆಕ್ರಮಣದಿಂದ ರಕ್ಷಿಸಿದರು ಎಂಬ ಕಥನಗಳನ್ನು ಮುಂಚೂಣಿಯಲ್ಲಿಡಲಾಯಿತು.[9] ಇವರೆಲ್ಲರೂ “ರಾಷ್ಟ್ರೀಯ ನಾಯಕರು” (ಡೆಕ್ಕನ್ ಹೆರಾಲ್ಡ್, ೧೯೫೮) ಹಾಗೂ “ಭಾರತವು ಹೆಮ್ಮೆ” ಪಡುವಂತೆ (ಕುಪ್ಪಸ್ತ, ೧೯೫೯ : ೧೨೨) ಮಾಡಿದವರು.[10] ಈ ತರಹದ ಐತಿಹಾಸಿಕ ಅಂಶಗಳಿಂದ ಲಿಂಗಾಯತರ ದೇಶಭಕ್ತಿಯೆಂಬುದು ತಲೆತಲಾಂತರದಿಂದ ಸಾಗಿ ಬಂದಿರುವುದು ಮತ್ತು ಈಗಲೂ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಸಲು ಸದಾಸಿದ್ಧ ಎಂದು ನಿರೂಪಿಸುವುದಾಗಿತ್ತು. ಈ ಐತಿಹಾಸಿಕ ವ್ಯಕ್ತಿಗಳು ಜನರ ಮನಪಟಲದಲ್ಲಿ ಸ್ಥಾಪಿಸಲ್ಪಡುತ್ತಿದ್ದ ಹಾಗೆ, ಅವರ ಬಗ್ಗೆ ಹೆಚ್ಚು ಗಮನ ಹರಿಸುವುದರ ಜೊತೆಗೆ ಅನೇಕ ಸಂದೇಹಗಳೂ ಸಹ ಉದ್ಭವವಾದವು. ಕಾಲಕ್ರಮೇಣ ಈ ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ಹುಟ್ಟಿಕೊಂಡ ಹೊಸ, ಹೊಸ ವ್ಯಾಖ್ಯಾನಗಳು ಲಿಂಗಾಯತರ ಉತ್ಸಾಹಕ್ಕೆ ಮತ್ತಷ್ಟು ಬಲಕೊಟ್ಟ ಹಾಗೆ ಆದರೂ, ಕೆಳದಿ ಚರಿತ್ರೆಯ ಬಗ್ಗೆ ಅನೇಕ ವಿರೋಧಾತ್ಮಕ ಅಭಿಪ್ರಾಯಗಳು ಸಹ ಮೂಡಿ ಬಂದವು. ಕೆಳದಿ ನಾಯಕರ ಬಗ್ಗೆ; ಲಭ್ಯವಿರುವ ಮಾಹಿತಿಗಳ ಖಚಿತತೆಯ ಬಗ್ಗೆ ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದರು. ಹೀಗೆ ಅಖಚಿತವಾದ ಹಾಗೂ ವೈರುಧ್ಯಗಳಿಂದ ಕೂಡಿದ ಕೆಳದಿ ಚರಿತ್ರೆಯ ಇತಿಹಾಸಕಾರರಿಗೆ ಮತ್ತು ಸಾಹಿತ್ಯ ಲೇಖಕರಿಬ್ಬರಿಗೂ ವಿವಾದಾತ್ಮಕ ವಿಷಯವಾಗಿ ಗೋಚರಿಸಿತು. ಇವುಗಳಲ್ಲಿ ವೀರಮ್ಮಾಜಿಯ ಸಂಗತಿಯು ಪ್ರಮುಖ ಸ್ಥಾನ ಪಡೆದು ಅವಳ ಚರಿತ್ರೆಯ ಬಗ್ಗೆ ಇದ್ದ ಅನುಮಾನಗಳು ಪರಿಹಾರವಾಗದೇ ಹಾಗೇ ಉಳಿದವು. ಹೀಗೆ ಲಿಂಗಾಯತರು ಹಾಗೂ ಬ್ರಾಹ್ಮಣ ಪಂಡಿತರ ನಡುವೆ ಕೆಳದಿ ನಾಯಕರ ಬಗ್ಗೆ ಇದ್ದ ಭಿನ್ನಾಭಿಪ್ರಾಯಗಳು ವಸಾಹತ್ತೋತ್ತರ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳಲಿಲ್ಲ. ಅದು ವಸಾಹತುಶಾಹಿ ಕಾಲಘಟ್ಟದಲ್ಲೂ ಪ್ರಾಮುಖ್ಯತೆ ಪಡೆಯಿತು.

ಭಾಗ

ಭಾಷಾಂತರದ ಭಯ

ಮಾಸ್ತಿಯವರ ಚೆನ್ನಬಸವನಾಯಕ ಲಿಂಗಾಯತರಿಗೆ ಕೇವಲ ಕಾದಂಬರಿಯಾಗಿರಲಿಲ್ಲ. ಅದು ಅವರಿಗೆ ಅನೇಕ ವಿಷಯಗಳನ್ನೊಳಗೊಂಡಿತ್ತು. ಮೊದಲಿಗೆ ಅದು ವಾಸ್ತವತೆ ಹಾಗು ವಸ್ತು ನಿಷ್ಠತೆಯ ಹೆಸರಿನಲ್ಲಿ ಮಾಸ್ತಿಯವರು ಲಿಂಗಾಯತರ ಆಂತರಿಕ ವಿಷಯದಲ್ಲಿ ಹಾಗು ವಸ್ತು ನಿಷ್ಠತೆಯ ಹೆಸರಿನಲ್ಲಿ ಮಾಸ್ತಿಯವರು ಲಿಂಗಾಯತರ ಆಂತರಿಕ ವಿಷಯದಲ್ಲಿ ಅನವಶ್ಯಕವಾಗಿ ಮೂಗು ತೂರಿಸಿಕೊಂಡು ಬಂದ ಅಂಶ. ನಾಯಕ ಕುಟುಂಬದ ಆಂತರಿಕ ಕಲಹದಿಂದ ಕೆಳದಿ ಸಾಮ್ರಾಜ್ಯವು ಪತನಹೊಂದಿತು ಎಂಬ ಅಂಶ ಇತಿಹಾಸಕ್ಕೆ ವಿರುದ್ಧವಾದದ್ದು ಎಂದು ಲಿಂಗಾಯತ ಅಭಿಪ್ರಾಯವಾಗಿತ್ತು. ಕೆಳದಿ ಸಾಮ್ರಾಜ್ಯದ ಮುನ್ನೂರು ವರ್ಷಗಳ ಭವ್ಯತೆಯು ಕೇವಲ ವೀರಮ್ಮಾಜಿಯ ದೌರ್ಬಲ್ಯದಿಂದ ನಶಿಸಿ ಹೋಯಿತು ಎಂಬುದು ಲಿಂಗಾಯತರಿಗೆ ಸರಿ ಬೀಳಲಿಲ್ಲ. ಎರಡನೆಯದಾಗಿ ಈ ಕಾದಂಬರಿಯು ಬೌದ್ಧಿಕ ಜಗತ್ತಿನಲ್ಲಿ ಲಿಂಗಾಯತರಿಗೆ ಹೊರಗಿನವರಿಂದ ಉಂಟಾದ ಬೆದರಿಕೆ ಎಂಬಂತೆ ಗ್ರಹಿಸಲಾಯಿತು, ಮೂರನೆಯದಾಗಿ ಈ ಕಾದಂಬರಿಯು ಲಿಂಗಾಯತರ ಆತಂಕವನ್ನು ಹೆಚ್ಚಿಸಿತು. ಏಕೆಂದರೆ ಕಾದಂಬರಿಯ ಭಾಷಾಂತರ ಲಿಂಗಾಯತರ ಬಗ್ಗೆ ಅವಹೇಳನಕಾರಿಯಾದ ಅಂಶಗಳನ್ನು ಭಿತ್ತರಿಸುತ್ತದೆ ಎಂಬುದು ಲಿಂಗಾಯತರನ್ನು ಎಚ್ಚರಿಸಿತ್ತು. ಇದು ಕರ್ನಾಟಕ ಹಾಗು ಕರ್ನಾಟಕ ದಾಚೆಗೂ ಹರಡುವ ಸಂಭವ ಲಿಂಗಾಯತರನ್ನು ಚಿಂತೆಗೀಡು ಮಾಡಿತು. ಇದಕ್ಕೆಲ್ಲಾ ಮಿಗಿಲಾಗಿ ಸಾರ್ವಜನಿಕ ಸಂಸ್ಥೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯು ಎಲ್ಲರಿಗೂ ಸಮಾನವಾಗಿ ಸ್ಪಂದಿಸುತ್ತಿಲ್ಲ ಮತ್ತು ಅದು ಬ್ರಾಹ್ಮಣೀಕೃತವಾಗಿದೆ ಎಂಬ ಅನುಮಾನದ ಪ್ರಶ್ನೆಯು ಇಲ್ಲಿ ಅಡಗಿತ್ತು.

ಮಾಸ್ತಿಯವರ ‘ಲೇಖಕನ ಉದ್ದೇಶಗಳು” (authorical intentions) ಮತ್ತು ಉದ್ದೇಶಿತ ಭಾಷಾಂತರವು ವಿವಾದದಲ್ಲಿ ಹೊಸ ಅರ್ಥವನ್ನು ಪಡೆಯಿತು. ಭಾಷಾಂತರದಿಂದ ಭವಿಷ್ಯದಲ್ಲಿ ಉಂಟಾಗುವ ‘ಅನರ್ಥ’ಗಳನ್ನು ಲಿಂಗಾಯತರು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲಾಗದ ಭಾಷಾಂತರದಿಂದ ಉಂಟಾಗುವ “ಹೊಸ ಓದು, ಹೊಸ ವಿಷಯ, ಹೊಸ ಸಂಗತಿಗಳಿಗೆ ಕಾಳಜಿ ವಹಿಸಲು ಹೊಸ ಕಾರಣಗಳು” (ಕ್ವಾಮಿ ಅಪ್ಪಯ್ಯ, ೨೦೦೦ : ೪೨೫) ಲಿಂಗಾಯತರನ್ನು ಜಾಗರೂಕತವನ್ನಾಗಿ ಮಾಡಿತ್ತು. ಇದಕ್ಕೆಲ್ಲಾ ಮಿಗಿಲಾಗಿ “ಒಂದು ಸಾಹಿತ್ಯ ಕೃತಿಯ ಭಾಷಾಂತರವು ವ್ಯಾಖ್ಯಾನದ ಹಾಗೆ ಹೊಸ ಅರ್ಥಗಳನ್ನು ಹಾಗು ಮೌಲ್ಯಗಳನ್ನು ಹುಟ್ಟು ಹಾಕಬಹುದು. ಇವು ಪರಕೀಯ ಪಠ್ಯಕ್ಕೆ ಅಸಂಬದ್ಧದ ಸಂಬಂಧವನ್ನು ಹೊಂದಿರಬಹುದು” (ವೆನ್ಯುಟಿ, ೨೦೦೦ : ೩೩೯) ಎಂಬ ಆಗೋಚರ ಭಯ ಲಿಂಗಾಯತರನ್ನು ಕಾಡಿತು. ಜೊತೆಗೆ ಕಾದಂಬರಿ ರೂಪುಗೊಂಡ ಸಂದರ್ಭವನ್ನು ಭಾಷಾಂತರವು ಮರೆ ಮಾಚಿ, ಇತಿಹಾಸದ ಜೊತೆಗೆ ಕಾದಂಬರಿಗಿರುವ ಸಂಬಂಧವನ್ನು ಅಳಿಸಿ ಹಾಕಿ, ವಾಸ್ತವಾಂಶವನ್ನು ಅರ್ಥ-ಬಾಹುಳ್ಳವನ್ನು ಮತ್ತು ಅದನ್ನು ನಿಯಂತ್ರಿಸುವ ಸಾಮರ್ಥ್ಯವೆಲ್ಲವೂ ಭಾಷಾಂತರಕ್ಕೆ ಹೊಸ ಅರ್ಥಕೊಡುವುದರಿಂದ ಲಿಂಗಾಯತರು ಭಾಷಾಂತರವನ್ನು ವಿರೋಧಿಸಿದರು. ಈ ಭಾಷಾಂತರವು ಹೊಸದಾ ರೀತಿಯಲ್ಲಿ ತನ್ನನ್ನು ತಾನು ರೂಪಿಸಿಕೊಂಡು, ಅದನ್ನು ಓದುವ ಹೊಸ ನಿಯಮಗಳನ್ನು, ಮಾದರಿಗಳನ್ನು ಮತ್ತು ಹೊಸ ಓದುಗರನ್ನು ಸೃಷ್ಟಿ ಮಾಡುವ ಸಾಮರ್ಥ್ಯವುಳ್ಳದ್ದಾಗಿದ್ದರಿಂದ ಲಿಂಗಾಯತರು ಈ ಕೃತಿಯ ಭಾಷಾಂತರದ ಪರಿಣಾಮದ ಬಗ್ಗೆ ಇತಿಹಾಸದ ಬಗ್ಗೆ ಕರ್ನಾಟಕದಾಚೆಗೆ ತಪ್ಪು ಮಾಹಿತಿ ನೀಡಿ, ಅಪಪ್ರಚಾರ ಮಾಡುವ ಸಂಭವವು ಲಿಂಗಾಯತರಿಗೆ ದೊಡ್ಡ ತಲೆನೋವಾಗಿತ್ತು. ಈ ಭಾಷಾಂತರದಿಂದ ಉಂಟಾಗುವ ಹೊಸ ಅರ್ಥ ಹಾಗು ಓದುವಿಕೆಗಳು ಇತಿಹಾಸದ ಸತ್ಯಕ್ಕೆ ಮತ್ತು ಖಚಿತತೆಗೆ ದೂರವಾದದ್ದು ಎಂದು ಅವರು ವಾದಿಸಿದರು. ಈಗಾಗಲೇ ಕೆಳದಿ ಇತಿಹಾಸದ ಬಗ್ಗೆ ವೈರುಧ್ಯದಿಂದ ಕೂಡಿದ ದಾಖಲೆಗಳು, ಲೇಖನಗಳು, ಸಾಹಿತ್ಯದ ಕೃತಿಗಳು ಚಲಾವಣೆಯಲ್ಲಿದ್ದು ಕೆಳದಿ ಅರಸರ ಬಗ್ಗೆ ಭಿನ್ನ, ಭಿನ್ನ, ಚಿತ್ರಣಗಳನ್ನು ಹುಟ್ಟು ಹಾಕಿದ್ದವು ಬ್ರಾಹ್ಮಣರ ಹಾಗೆ ಲಿಂಗಾಯತರ ಸಾಂಸ್ಕೃತಿಕ ಅಥವಾ ರಾಜಕೀಯ ಪ್ರಭಾವವು ಕರ್ನಾಟಕದಾಚೆಗೆ ಅಷ್ಟಾಗಿ ಇಲ್ಲದಿರುವುದರಿಂದ ಭಾಷಾಂತರವು ಇತರ ಸ್ಥಳಗಳಲ್ಲಿ ಉಂಟು ಮಾಡುವ ಅಲ್ಲೋಲ ಕಲ್ಲೋಲವನ್ನು ತಡೆಯಲು ಸಾಧ್ಯವಿರಲಿಲ್ಲ. ಕರ್ನಾಟಕದ ಮಟ್ಟಿಗೆ ಮಾತ್ರ ಸೀಮಿತವಾಗಿದ್ದ ತಮ್ಮ ಸಮುದಾಯದಿಂದ ಭಾಷಾಂತರ, ಅದರ ಮಿತಿ ಹಾಗೂ ಅದು ಉಂಟು ಮಾಡಬಹುದಾದ ಅರ್ಥಬಾಹುಳ್ಳವನ್ನು ನಿಯಂತ್ರಿಸುವ ಶಕ್ತಿಯನ್ನು ಪ್ರದರ್ಶಿಸುವದಕ್ಕೆ ಸಾಧ್ಯವಿರಲಿಲ್ಲ. ಲಿಂಗಾಯತ, ಬ್ರಾಹ್ಮಣ ಹಾಗು ಓದುಗ ಪ್ರಪಂಚಗಳ ನಡುವೆ ಇದ್ದ ಅಸಮತೋಲನವು ಲಿಂಗಾಯತರನ್ನು ಧೃತಿಗೆಡಿಸಿತು. ಭಾಷಾಂತರದ ಮೂಲಕ ಕೆಳದಿ ಇತಿಹಾಸವು ಅಪಪ್ರಚಾರವು ‘ರಾಷ್ಟ್ರೀಕರಣ’ವಾಗುವುದೆಂಬ ಆತಂಕ ಲಿಂಗಾಯತರಿಗೆ ಇತ್ತು.

ಭಾಗ

ಸಾಂಘಿಕ ವ್ಯಾಖ್ಯಾನದ ಜರೂರತ್ತು ಮತ್ತು ಸಮಾಜೋಸಾಹಿತ್ಯ ಸಂಬಂಧಗಳು

ಈ ವಿವಾದದ ಅತಿ ಮುಖ್ಯ ಪ್ರಶ್ನೆಗಳು ಸಾಂಘಿಕ ವ್ಯಾಖ್ಯಾನಕ್ಕೆ ಸಂಬಂಧಿಸಿವೆ. ಈ ಕಾದಂಬರಿಯ ವಿರುದ್ಧ ದನಿ ಎತ್ತಿದ ಲಿಂಗಾಯತರಿಗೆ ‘ಸಾಂಘಿಕ ಮತ್ತು ಏಕೀಕೃತ’ವಾದ ವ್ಯಾಖ್ಯಾನದ ಅವಶ್ಯಕತೆ ಯಾಕೆ ಇತ್ತು? ಈ ವ್ಯಾಖ್ಯಾನದ ಉದ್ದೇಶಗಳು ಮತ್ತು ಸ್ವರೂಪವೇನಿದ್ದಿತು? ಇವನ್ನು ಸಾಂಘಿಕ ರೂಪದಲ್ಲಿ ಅಭಿವ್ಯಕ್ತಿಸಿದ್ದು ಹೇಗೆ? ಇಲ್ಲಿ ಸಾಂಘಿಕ ಎಂಬುದನ್ನು ಹೇಗೆ ಅರ್ಥೈಸಬಹುದು? ಅನೇಕ ವ್ಯಕ್ತಿಗಳು ಒಂದು ಗುಂಪಿನಡಿಯಲ್ಲಿ ವ್ಯಾಖ್ಯಾನದ ಪ್ರಕ್ರಿಯೆಯ ಮೂಲಕ, ಒಂದು ಚೌಕಟ್ಟಿನೊಳಗೆ ಅರ್ಥಗಳನ್ನು ಕಟ್ಟುವ ಕ್ರಿಯೆಯನ್ನು ನಾವು ಸಾಂಘಿಕ ವ್ಯಾಖ್ಯಾನವೆಂದು ತಿಳಿಯಬಹುದು. ಅದು ಕ್ರಮೇಣ ‘ಮತೀಯ ದನಿ’ಯಾಗಿ ವಿಕಾಸ ಹೊಂದುವ ಲಕ್ಷಣಗಳನ್ನು ಹೊಂದಿದ್ದು, ಕಟ್ಟಲ್ಪಟ್ಟ ವ್ಯಾಖ್ಯಾನ ಅಥವಾ ಅರ್ಥವನ್ನು ಪದೇ, ಪದೇ ಮರುಗಳಿಸಿ ಅದನ್ನು ಅಂತಿಮ ಸತ್ಯ ಎಂದು ನಿರೂಪಿಸುವವರೆಗೆ ತನ್ನ ಶಕ್ತಿ ಪ್ರದರ್ಶನ ಮಾಡುತ್ತದೆ. ಇದನ್ನು ಬೌದ್ಧಿಕ ಜಾಲದಲ್ಲಿ[11] ತೊಡಗಿಸಿಕೊಂಡು ಸಾಧಿಸಲಾಗುವುದು. ತಾನು ಕಟ್ಟಿಕೊಂಡ ವ್ಯಾಖ್ಯಾನ ಅಥವಾ ಅರ್ಥವನ್ನು ಇದು ಮನ್ನಿಸಿ ಉಳಿಸಿ ವಿಸ್ತರಿಸುತ್ತದೆ. ಈ ರೀತಿಯಾಗಿ ಕಟ್ಟಿಕೊಂಡ ‘ಅಂತಿಮ ಸತ್ಯ’ವನ್ನು ಮೊದಲಿಗೆ ಅಥವಾ ನಂತರ ಸಾರ್ವಜನಿಕ ಚರ್ಚೆಯ ಮೂಲಕ ಅಥವಾ ಬೌದ್ಧಿಕ ಚರ್ಚೆಯ ಮೂಲಕ ಸಿದ್ಧಪಡಿಸುವ ಅವಶ್ಯಕತೆಯಿಲ್ಲ. ಈ ಸತ್ಯವನ್ನು ನಿರೂಪಿಸಲು ಸಮುದಾಯದ ಅಥವಾ ಧರ್ಮದ ನುಡಿಕಟ್ಟನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು. ಈ ನುಡಿಕಟ್ಟು ಸಾಂಘಿಕ ವ್ಯಾಖ್ಯಾನಕ್ಕೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಂತ ಇದು ಈಗಾಗಲೇ ಲಭ್ಯವಿದ್ದು, ಅದನ್ನು ಕೇವಲ ಸದ್ಯದ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದರ್ಥವಲ್ಲ. ಅಥವಾ ಇದು ಬೌದ್ಧಿಕ ವಲಯದಲ್ಲಿ ಲಭ್ಯವಿದ್ದು ಇದನ್ನು ಯಾರು ಬೇಕಾದರು ಉಪಯೋಗಿಸಿಕೊಳ್ಳಬಹುದು ಎಂದಲ್ಲ. ಇದನ್ನು ಬೌದ್ಧಿಕೇತರವಾಗಿಯೂ ಸ್ಥಾಪಿಸಿ, ದೃಢವಾಗಿ ನಿಲ್ಲುವಂತೆ ಮಾಡಲಾಗುವುದು. ಬೌದ್ಧಿಕೇತರವಾಗಿ ಸ್ಥಾಪಿಸುವುದು ಎರಡು ಕಾರಣಗಳಿಗಾಗಿ ಸಾರ್ವಜನಿಕ ವಲಯವು ವೈವಿಧ್ಯಮಯವಾಗಿರುವದರಿಂದ ಹಾಗೂ ಭಿನ್ನ, ಭಿನ್ನ, ದನಿಗಳಿಂದ ಕೂಡಿರುವದರಿಂದ, ಭಿನ್ನಾಭಿಪ್ರಾಯಗಳನ್ನು ದೂರವಾಗಿಸಿ ಏಕೀಕೃತ ಅರ್ಥವನ್ನು ಹೊಮ್ಮಿಸಬೇಕಾಗುತ್ತದೆ. ಎರಡನೆಯದಾಗಿ ಸಂದರ್ಭದ ತುರ್ತು ಹಾಗೂ ಪ್ರತಿಕ್ರಿಯೆ ಈ ವಿವಾದ ಕ್ಷಣಗಳಲ್ಲಿ ಎಷ್ಟೊಂದು ತೀವ್ರವಾಗಿರುತ್ತದೆ ಎಂದರೆ ವಿರೋಧದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಪ್ರತಿಭಟನಕಾರರಿಗೂ ವಿವಾದದ ಆಗು-ಹೋಗುಗಳನ್ನು ತಿಳಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಮುದಾಯಿಕ ಅಥವಾ ಧಾರ್ಮಿಕ ನುಡಿಕಟ್ಟನ್ನು ಬಳಸಲಾಗುವುದು. ಇದಕ್ಕಾಗಿ ಸಂವಾದಿಯಾಗಿ ಏರ್ಪಡಿಸಲಾಗುವುದು. ಇದರ ಮೂಲ ಉದ್ದೇಶ ಬೆಂಬಲಿಗರ ಮನವೊಲಿಸುವ ಉದ್ದೇಶವೂ ಆಗಿರುತ್ತದೆ. ಈ ಬೌದ್ದೀಕೇತರ ಸಾರ್ವಜನಿಕ ಧೋರಣೆಯು ಹೊರಗಿನವರಿಂದ ಸಮುದಾಯಕ್ಕೆ ಒದಗಿ ಬಂದ ಬೆದರಿಕೆ ಎಂಬ ಘೋಷಣೆಯಡಿಯಲ್ಲಿ ಸಾಗುತ್ತಿರುತ್ತದೆ. ಈ ಬೆದರಿಕೆಯನ್ನು ಎದುರಿಸುವುದೇ ಸದ್ಯದ ತುರ್ತು ಪರಿಸ್ಥಿತಿಯೆಂದು ಕರೆಕೊಡಲಾಗುವುದು.

ಈ ವಿವಾದದ ಮೊದಲ ಹಂತದಲ್ಲಿ ವೈಯಕ್ತಿಕ ವ್ಯಾಖ್ಯಾನಗಳು ಹುಟ್ಟುಕೊಳ್ಳುತ್ತವೆ. ಕಾದಂಬರಿ, ಅದರ ಭಾಷಾಂತರ ಮತ್ತು ಅದರ ಪ್ರಸರಣದಲ್ಲಿ ಉಂಟಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಇವು ನೀಡುತ್ತವೆ. ಲಿಂಗಾಯತರಿಗೆ ಸಾಹಿತ್ಯದಿಂದ ಉಂಟಾಗುವ ಅಪಾಯವನ್ನು ಹೋಗಲಾಡಿಸಲು ಮೊದಲಿಗೆ ಸಾಹಿತ್ಯವನ್ನು ‘ನಮ್ಮ’ (ಲಿಂಗಾಯತ) ಮತ್ತು ‘ಅವರ’ (ಬ್ರಾಹ್ಮಣರು) ಸಾಹಿತ್ಯವೆಂದು ವಿಭಾಗಿಸುವದರ ಮೂಲಕ ಮತೀಯ ದೃಷ್ಟಿಕೋನವನ್ನು ನೀಡಲಾಗುವುದು. ಎರಡನೇಯದಾಗಿ ಕಾದಂಬರಿಯ ಮುಖ್ಯ ಪಾತ್ರ ವೀರಮ್ಮಾಜಿಯೆಂದು ಬಲವಾಗಿ ನಿರೂಪಿಸುವುದರ ಮೂಲಕ, ಆ ಪಾತ್ರಕ್ಕೆ ಅನ್ಯಾಯವಾಗಿದೆ ಎಂದು ಕೋಪಿಸಿಕೊಳ್ಳುವುದು. ವೀರಮ್ಮಾಜಿಯನ್ನು ಕೇಂದ್ರ ಸ್ಥಾನದಲ್ಲಿಟ್ಟು, ಆ ಪಾತ್ರವನ್ನು ಮಾಸ್ತಿಯವರು ವಿರೂಪಗೊಳಿಸಿದ್ದಾರೆಂದು, ಚರ್ಚೆಯನ್ನು ಏಕೆ ಮುಖವನ್ನಾಗಿಸುವ ತಂತ್ರವನ್ನು ನಾವು ಇಲ್ಲಿ ನೋಡಬಹುದು, ವಿವಾದದಲ್ಲಿ ಪ್ರಮುಖ ದನಿಯಾಗಿದ್ದ ಮತ್ತು ಕಾದಂಬರಿಯನ್ನು ಬಲವಾಗಿ ವಿರೋಧಿಸಿ ಸಂಗಣ್ಣ ಕುಪ್ಪಸ್ತ ಎಂಬ ಲಿಂಗಾಯತ ವಿದ್ವಾಂಸರ ವಿಚಾರಗಳು ಇಲ್ಲಿ ಮುಖ್ಯ. ಅವರ ವಿಚಾರಗಳು ಮತೀಯ ದೃಷ್ಟಿಕೋನದಿಂದ ಕೂಡಿದ್ದು. ಹೀಗಾಗಿ ಕುಪ್ಪಸ್ತರವರ ವಿಚಾರಗಳನ್ನು ಚರ್ಚಿಸುವುದು ಇಲ್ಲಿ ಸೂಕ್ತ.

ಈ ವಿವಾದದ ಸಂದರ್ಭದಲ್ಲಿ ಕುಪ್ಪಸ್ತರವರು ಕಾದಂಬರಿಯ ವಿರುದ್ಧ ಒಂದು ಸಣ್ಣ ಪುಸ್ತಕವನ್ನು ಪ್ರಕಟಿಸಿದರು. ಅದರಲ್ಲಿ ಕೆಳದಿ ವಂಶಸ್ತರನ್ನು, ವೀರಮ್ಮಾಜಿ ಹಾಗು ಚೆನ್ನಬಸವ ನಾಯಕರನ್ನು ಹೇಗೆ ಕಳಂಕಿತರನ್ನಾಗಿ ಚಿತ್ರಿಸಿದ್ದಾರೆಂದು ವಿವರಿಸಿದ್ದಾರೆ. ಮಾಸ್ತಿಯವರು ಇತಿಹಾಸದ ಸತ್ಯಕ್ಕೆ ಮಸಿ ಬಳಿದಿದ್ದಾರೆಂದು ಇವರ ಮುಖ್ಯವಾದ. ಮಾಸ್ತಿಯವರು ತಮಗೆ ಬೇಕಾದ ಅಂಶಗಳನ್ನು ಮಾತ್ರ ಚಿತ್ರೀಕರಿಸಿದ್ದರಿಂದ ಇತಿಹಾಸದ ಸತ್ಯಕ್ಕೆ ಮತ್ತು ಕೆಳದಿ ನಾಯಕರುಗಳ ಬಗ್ಗೆ ಹಗುರವಾಗಿ ಮಾತನಾಡುವ ಮೊಂಡು ಧೈರ್ಯವನ್ನು ಪ್ರದರ್ಶಿಸಿದ್ದಾರೆಂದು ಕುಪ್ಪಸ್ತರವರ ಆಪಾದನೆ.

ಶ್ರೀ ಮಾಸ್ತಿಯವರಿಗೂ, ವೀರಮ್ಮಾಜಿಯ ನೈಜ ಇತಿಹಾಸಕ್ಕೂ ಯಾವ ಸಂಬಂಧವೂ ಇಲ್ಲ. ಮಾಸ್ತಿ ಬರೆದಿರುವದೊಂದು ಕಾದಂಬರಿ; ಇತಿಹಾಸವಲ್ಲ… ವೀರಮ್ಮಾಜಿ ಗುಣ ಸಂಪನ್ನೆಯಾಗಿದ್ದಳೆಂಬ ಬಗೆಗೆ ಕೈತುಂಬ ಐತಿಹಾಸಿಕ ಆಧಾರಗಳಿರುವಾಗ, ಮೂಲೆಯೊಳಗಿನ, ಸಂದಿಗ್ಧ ಆಧಾರಗಳನ್ನು ಆಧರಿಸಿ ಓರ್ವ ಉಜ್ವಲ ಐತಿಹಾಸಿಕ ಮಹಿಳೆಯನ್ನು ಬೀದಿಯ ಬಸವಿಯನ್ನಾಗಿ ಚಿತ್ರಿಸಿರುವುದರ ಔಚಿತ್ಯವೇನು? (೧೯೫೯ : ೧೨೬).

ವೀರಮ್ಮಾಜಿಯ ಅಕಳಂಕಿತ ಚರಿತ್ರೆ, ಗುಣಗಳನ್ನು ಮತ್ತು ದೇಶಭಕ್ತಿಯನ್ನು ಕೊಂಡಾಡಿರುವ ದಾಖಲೆಗಳು ಅನೇಕವಿದ್ದರೂ, ಮಾಸ್ತಿಯವರು ಅವೆಲ್ಲವನ್ನು ನಿರ್ಲಕ್ಷಿಸಿ, ತಮ್ಮ ಕಲ್ಪನೆಯೇ ನಿಜವಾದದ್ದು ಎಂದು ನಿರೂಪಿಸಲು ಈ ಕಾದಂಬರಿಯನ್ನು ಬರೆದಿದ್ದಾರೆಂದು ಕುಪ್ಪಸ್ತರು ಗುಡುಗಿದ್ದಾರೆ.[12] ಕಾದಂಬರಿಯಲ್ಲಿ ಚೆನ್ನಬಸವ ನಾಯಕನನ್ನು ಬೂದಿಬಸವನನ್ನಾಗಿ, ಕಳ್ಳ-ಡಕಾಯಿತರ ನಾಯಕನನ್ನಾಗಿ ಚಿತ್ರಿಸಿದ್ದು ಕುಪ್ಪಸ್ತರಿಗೆ ಮತ್ತಷ್ಟು ಕೋಪ ತಂದಿತು. (ಅದೇ, ೨೦೨). ಜೊತೆಗೆ ಒಬ್ಬ ರಾಜಕುಮಾರನನ್ನು (ಚೆನ್ನಬಸವ ನಾಯಕ) ಮಾರುವೇಷದ ಸಾಮಾನ್ಯ ಸಂನ್ಯಾಸಿಯನ್ನಾಗಿ ಚಿತ್ರಿಸಿದ್ದು ಮಾಸ್ತಿಯು ಚಿತ್ರಿಸಿದ ಅಪ್ಪಟ ಸುಳ್ಳು ಎಂದು ಕುಪ್ಪಸ್ತರು ವಾದಿಸುತ್ತಾರೆ. ಮಾಸ್ತಿಯವರ ಜ್ಞಾನ ಮತ್ತು ಪಾಂಡಿತ್ಯವನ್ನು ಅವರು ಬಲವಾಗಿ ಪ್ರಶ್ನಿಸುತ್ತಾರೆ. ಇತಿಹಾಸದ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಐತಿಹಾಸಿಕ ಕಾದಂಬರಿಯನ್ನು ಬರೆದಿರುವುದು ಕುಪ್ಪಸ್ತರಿಗೆ ಗಾಬರಿಯನ್ನುಂಟು ಮಾಡುತ್ತದೆ. ಕಾದಂಬರಿಯಲ್ಲಿ ಮಾಸ್ತಿಯವರ ಕಲ್ಪನೆ-ಇತಿಹಾಸದ ಮಿಶ್ರಣವು ಚೆನ್ನಬಸವನಾಯಕ ಮತ್ತು ಶಾಂತವ್ವನಲ್ಲಿ ಎದ್ದು ಕಾಣುತ್ತದೆ. ಇವರಿಬ್ಬರ ವಿವಾಹವನ್ನು ವರ್ಣಿಸುವಾಗ ಮಾಸ್ತಿಯವರು ಅವರ ಜಾತಿಯನ್ನು (ಚೆನ್ನಬಸವ ನಾಯಕ ಶಿವಾಚಾರದವನೆಂದು, ಶಾಂತವ್ವಳು ಜೈನ ಮೂಲದವಳೆಂದು) ನಮೂದಿಸಿದ್ದು ಕುಪ್ಪಸ್ತರ ಟೀಕೆಗೆ ಗುರಿಯಾಗುತ್ತದೆ. ಕುಪ್ಪಸ್ತರ ಪ್ರಕಾರ ಚೆನ್ನಬಸವ ನಾಯಕ ಕೊನೆವರೆಗೂ ವಿವಾಹವಾಗಲೇ ಇಲ್ಲ. ಹಾಗಾಗಿ ಜೈವರ ಹುಡುಗಿಯ ಜೊತೆಗೆ ಆಗುವ ವಿವಾಹವು ಇತಿಹಾಸದ ಹೆಸರಿನಲ್ಲಿ ಮಾಸ್ತಿಯವರು ಆಡಿರುವ ಶುದ್ಧ ಸುಳ್ಳು ಎಂದು; ಇದರಿಂದ ಮತೀಯ ಭಾವನೆಗಳನ್ನು ಓದುಗರ ಮನದಲ್ಲಿ ಬಿತ್ತಲು ಮಾಸ್ತಿಯವರು ಪ್ರಯತ್ನಿಸಿದ್ದಾರೆಂದು ಕುಪ್ಪಸ್ತರು ಖಂಡಿಸಿದ್ದಾರೆ (ಅದೇ, ೨೦೫). ಇಲ್ಲಿ ಕುಪ್ಪಸ್ತರು ತಮ್ಮ ವಾದಗಳಿಗೆ ಆಧಾರವಾಗಿ ಸೂಚಿಸುವ ಕೃತಿ ಯಾವುದೆಂದರೆ ಕೆಳದಿ ನೃಪವಿಜಯ. ಕೆಳದಿ ಅರಸರ ವಂಶಸ್ಥರು ಮತ್ತು ಅವರ ರಾಜ್ಯಾಡಳಿತ ಬಗ್ಗೆ ಇರುವ ಲಿಂಗಣ್ಣ ಕವಿಯ ಈ ಕೃತಿಯನ್ನು ಅನೇಕ ವಿದ್ವಾಂಸರು ಮತ್ತು ಪಂಡಿತರು ಈಗಾಗಲೇ ಅನೇಕ ಸಂಶೋಧನೆಗಳ ಮೂಲಕ ಪ್ರಸಿದ್ಧಿಗೊಳಿಸಿದ್ದರು.[13] ತಮ್ಮ ವಾದದಲ್ಲಿ ಪದೇ ಪದೇ ಈ ಕೃತಿಯನ್ನು ಅವರು ಉಲ್ಲೇಖಿಸುವುದು ಮಾಸ್ತಿಯವರ ಐತಿಹಾಸಿಕ ಪ್ರಜ್ಞೆಯನ್ನು ಹೀಳಾಯಿಸುವದಕ್ಕೆ ಮತ್ತು ಮಾಸ್ತಿಯವರ ಆಧಾರಗಳನ್ನು ಗೌಣವಾಗಿಸುವುದಕ್ಕೆ. ಮಾಸ್ತಿಯವರು ಒಬ್ಬ ಒಳ್ಳೆಯ ನಾಟಕಕಾರ, ಭಾಷಾಂತರಕಾರ ಮತ್ತು ಕಾದಂಬರಿಕಾರನೆಂದು ಪ್ರಸಿದ್ಧಿ ಪಡೆದಿದ್ದು ಕುಪ್ಪಸ್ತರನ್ನು ಮತ್ತಷ್ಟು ಪ್ರಚೋದನೆಗೊಳಿಸುತ್ತದೆ. ಇಂತಹ ಪ್ರಸಿದ್ಧ ಲೇಖಕರು ಇತಿಹಾಸವನ್ನು ಹಳದಿ ಕಣ್ಣಿನಿಂದ ನೋಡುವ ಕುಪ್ಪಸ್ತರಿಗೆ ಕ್ಷುಲ್ಲಕವಾಗಿ ಕಾಣುತ್ತದೆ. ಇತಿಹಾಸದ ಸಂಗತಿಗಳನ್ನು ಕೂಲಂಕುಷವಾಗಿ ವೀಕ್ಷಿಸಿ, ಪರೀಕ್ಷಿಸಲು ಮಾಸ್ತಿಯವರು ವಿಫಲರಾಗಿದ್ದಾರೆಂದು ಕುಪ್ಪಸ್ತರು ಖಂಡಿಸಿದ್ದಾರೆ. ಕೆಳದಿ ವಂಶಸ್ಥರು ಇನ್ನು ಜೀವಂತವಾಗಿದ್ದಾರೆಂದು, ಅವರನ್ನು ಸಂಪರ್ಕಿಸದೇ ಮಾಸ್ತಿಯವರು ಕೆಳದಿ ವಂಶಕ್ಕೆ ಅಗೌರವವನ್ನು ಸೂಚಿಸಿದ್ದಾರೆಂದು ಅವರ ಐತಿಹಾಸಿಕ ಆಲಿಪ್ತತೆ ಮತ್ತು ವಸ್ತುನಿಷ್ಠತೆಯು ಬರಿ ಸೋಗಿನ ಮಾತುಗಳೆಂದು ಕುಪ್ಪಸ್ತರ ಅಭಿಪ್ರಾಯ. ಅವರು ತಮ್ಮ ವಾದದಲ್ಲಿ ಶಿವಪ್ಪನಾಯಕ ಮತ್ತು ಚೆನ್ನಮ್ಮಾಜಿಯ ಕಾಲದಲ್ಲಿ ಕೆಳದಿ ಸಾಮ್ರಾಜ್ಯವು ಮೆರೆದ ಭವ್ಯತೆಯನ್ನು ಪದೇ, ಪದೇ, ಜ್ಞಾಪಿಸಿಕೊಂಡು ಮಾಸ್ತಿಯವರು ಈ ಭವ್ಯತೆಯನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆಂದು ಮತ್ತು ಕೆಳದಿ ವಂಶಸ್ಥರ ಪ್ರಗತಿಪರತೆಯನ್ನು ಅವರು ನಿರ್ಲಕ್ಷಿಸಿದ್ದಾರೆಂದು ತಮ್ಮ ಖಂಡನೆಯನ್ನು ಮುಂದುವರೆಸಿದ್ದಾರೆ.

ಹಿಂದಿನ ಅನೇಕ ಉದಾಹರಣೆಗಳಲ್ಲಿ ಬ್ರಾಹ್ಮಣ ಲೇಖಕರು ಲಿಂಗಾಯತ ಇತಿಹಾಸವನ್ನು ತಪ್ಪಾಗಿ ಚಿತ್ರಿಸುವ ಅಂಶವು ಕುಪ್ಪಸ್ತರನ್ನು ಮತ್ತಷ್ಟು ಚಿಂತೆಗೀಡು ಮಾಡಿರುವ ಹಾಗೆ ತೋರುತ್ತದೆ. ಈ ಕೋಪೋದ್ರಿಕ್ತ ಭಾವನೆಯು ಎಷ್ಟಿತ್ತೆಂದರೆ ಬ್ರಾಹ್ಮಣರು ಲಿಂಗಾಯತರ ಬಗ್ಗೆ ನಮೂದಿಸಿರುವ ತಪ್ಪುಗಳ ಸರಣಿಯನ್ನೇ ಅವರು ಪಟ್ಟಿ ಮಾಡಿದ್ದಾರೆ. ಈ ತಪ್ಪು ವ್ಯಾಖ್ಯಾನ ಅಥವಾ ಪ್ರಾತಿನಿಧ್ಯ ಪೂರ್ವನಿರ್ಧಾರಿತವೆಂದು ಕುಪ್ಪಸ್ತರ ನಂಬುಕೆ.[14] ಕುಪ್ಪಸ್ತರ ಅಭಿಪ್ರಾಯಗಳು ಲಿಂಗಾಯತರು ಯಾವ ರೀತಿಯಲ್ಲಿ ತಮ್ಮ ಹಾಗೂ ಇತರರ ನಡುವಿನ ಮಧ್ಯದಲ್ಲಿ ಅಂತರ್-ಮತೀಯ ಗಡಿಗಳನ್ನು ಮೂಡಿಸಿ, ತಮ್ಮ ಸಾಂಸ್ಕೃತಿಕ ಜಗತ್ತನ್ನು ಕಲ್ಪಿಸಿಕೊಳ್ಳುವ ಮಾರ್ಗಗಳನ್ನು ಸೂಚಿಸುತ್ತದೆ. ಯಾವ ರೀತಿಯಲ್ಲಿ ಕೆಳದಿ ಅರಸರ ಭವ್ಯತೆ, ಗತ ವೈಭವವನ್ನು ಜನರ ಮನಸ್ಸಿನಲ್ಲಿ ಮತ್ತೆ ಮೂಡಿವೋ, ಅದೇ ರೀತಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಬ್ರಾಹ್ಮಣರ ಅಧಿಪತ್ಯವನ್ನು ಅವರು ಕಡೆಗಣಿಸುವ ಪ್ರಯತ್ನ ಮಾಡಿದರು. ಈ ವಿವಾದದ ಸಂದರ್ಭದಲ್ಲಿ ಲಿಂಗಾಯತರು ಬ್ರಾಹ್ಮಣ ವಿದ್ವಾಂಸರನ್ನು ಪದೇ ಪದೇ ಮೂದಲಿಸದೇ ಬಿಡಲಿಲ್ಲ. ಅವರು ಲಿಂಗಾಯತ ಸಾಹಿತ್ಯ-ಪರಂಪರೆಗಳನ್ನು ಅಪವ್ಯಾಖ್ಯಾನಗೊಳಿಸುವಲ್ಲಿ ತೊಡಗಿದ್ದಾರೆಂದು ಲಿಂಗಾಯತರ ಆಪಾದನೆಯಾಗಿತ್ತು. ಚೆನ್ನಬಸವ ನಾಯಕ ಕಾದಂಬರಿಯು ಈ ಅಪವ್ಯಾಖ್ಯಾನದ ಅಂತಿಮ ಘಟ್ಟವಾಗಿ ಅವರಿಗೆ ಗೋಚರಿಸಿತು.

ವಿವಾದವು ಎರಡು ತುದಿಗಳನ್ನೊಳಗೊಂಡ ಖಡ್ಗವಾಗಿತ್ತು. ಅದು ಮಾಸ್ತಿಯವರ ವಿರುದ್ಧವಿದ್ದುದಲ್ಲದೆ ಬ್ರಾಹ್ಮಣರಿಂದಲೇ ತುಂಬಿ ಹೋಗಿದ್ದ ಸಾರ್ವಜನಿಕ ಸಂಸ್ಥೆಗಳ ವಿರುದ್ಧವೂ ಆಗಿತ್ತು. ರಾಜ್ಯ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಈ ಕಾದಂಬರಿಗೆ ಅಧಿಕೃತ ಸ್ಥಾನ-ಮಾನ ನೀಡಿದ್ದಕ್ಕಾಗಿ ತೀಕ್ಷ್ಣ ಟೀಕೆಗೆ ಒಳಗಾಯಿತು. ವಿಶೇಷವೇನೆಂದರೆ, ಈ ವಿವಾದವು ಕಾದಂಬರಿಗೆ ಅಕಾಡೆಮಿಯು ಮನ್ನಣೆ ನೀಡಿದ ಕ್ಷಣದಿಂದ ಶುರುವಾಗಿದ್ದು. ೧೯೪೯ರಲ್ಲಿ ಈ ಕಾದಂಬರಿಯು ಪ್ರಕಟವಾಗಿದ್ದರೂ, ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಒಮ್ಮೆ ಪಠ್ಯವಾಗಿದ್ದರೂ ಇದರ ವಿರುದ್ಧ ವಿರೋಧಗಳಾಗಲಿಲ್ಲ. ರಾಜರತ್ನಂರವರು ಇದರ ವಿಷಯ ಪ್ರಸ್ತಾಪಿಸಿ, ಈಗ ಉಂಟಾಗಿರುವ ವಿವಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.[15]

[1] ವೀಣಾ ನರೆಗಲ್ ಅವರು (೧೮೮೮) ಈ ವಿಭಜನೆ ಮತ್ತು ಅದರ ಭಾಷಿಕ ರಾಜಕೀಯದ ಬಗ್ಗೆ ಮಹತ್ವವಾದ ವಿಚಾರಗಳನ್ನು ಮಂಡಿಸಿದ್ದಾರೆ. ವಸಾಹತುಶಾಹಿ ಕಾಲದಲ್ಲಿ ಉಂಟಾದ ಭಾಷಿಕ ವಿಭಜನೆ ಮತ್ತು ಅದರ ಪರಿಣಾಮವಾದ ಭಾಷಿಕ ಅಸಮತೋಲನವನ್ನು ಅವರು ಚರ್ಚಿಸಿದ್ದಾರೆ.

[2] ಈ ಭಾಷಾಂತರಗಳ ಸಾಂಸ್ಕೃತಿಕ ರಾಜಕೀಯವನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಹಳಕಟ್ಟಿ ಮತ್ತು ಮಾಸ್ತಿಯವರ ಭಾಷಾಂತರಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿರುವುದನ್ನು ನೋಡಿ.

[3] ಯೂರೋಪಿನ ಪ್ರವಾಸಿಗಳು, ವಿದ್ವಾಂಸರು ಹಾಗು ಇತಿಹಾಸಕಾರರು (ಮಾರ್ಕ್ ವಿಲ್ಕ್ಸ್, ೧೮೧೦: ೫೦೨-೫೦೫), ಫ್ರಾನ್ಸಿಸ್ ಬುಕನಾನ್ (೧೮೦೦, ೧೮೮೮: ೨೫೩-೫೫), ಲೇವಿನ್ ಬಿ. ಬೋರಿಂಗ್ (೧೮೮೩: ೩೬-೩೮), ಅರ್ನೆಸ್ಟ್ ಎಂ. ಅಲ್ವಾಡೇನ್ (೧೮೩೦: ೪೧೮-೪೪೪) ಕೆಳದಿ ಇತಿಹಾಸ ಹಾಗು ಹೈದರ್ ಅಲಿಯ ಮೇಲೆ ಪ್ರಮುಖವಾದ ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಇವರೆಲ್ಲರೂ ವೀರಮ್ಮಾಜಿ ಹಾಗು ನಂಬಯ್ಯನ ನಡುವಿನ ‘ಅಕ್ರಮ’ ಸಂಬಂಧದ ಬಗ್ಗೆ ಬರೆದಿದ್ದಾರೆ. ಆದಾಗ್ಯು ಈ ಅಂಶವನ್ನು ನಿರೂಪಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ಅವರು ಕೊಟ್ಟಿರುವದಿಲ್ಲ. ಹಿಂದಿನವರು ಹೇಳಿದ ರೀತಿಯಲ್ಲಿ ಪುನಾರಾವರ್ತನೆಯನ್ನು ನಾವು ಕಾಣುತ್ತೇವೆ. ಆದರೆ ಎನ್.ಕೆ. ಸಿನ್ಹಾ (೧೮೪೧:೮) ಹಾಗೂ ಶೇಕ್ಅಲಿ (೧೮೮೧:೬೮) ಯವರು ಇವರಿಗಿಂತ ಭಿನ್ನವಾಗಿ ಯೋಚಿಸಿದ್ದಾರೆ. ಅವರ ಪ್ರಕಾರ ವೀರಮ್ಮಾಜಿ-ನಂಬಯ್ಯ ಪ್ರಕರಣವು ಬಜಾರ್ ನಲ್ಲಿ ಕೇಳಿ ಬಂದ ವದಂತಿಯ ಹೊರತು ಸತ್ಯವಾದ ಸಂಗತಿಯಲ್ಲ.

[4] ಕರಿಬಸವಶಾಸ್ತ್ರಿಗಳು ತಮ್ಮ ವೀರಶೈವ ಧರ್ಮ ಶಿರೋಮಣಿ (೧೮೦೮) ಎಂಬ ಕೃತಿಯಲ್ಲಿ ಲಿಂಗಾಯತ ರಾಜನಾದ ಚೌಡಪ್ಪ ನಾಯಕನ ಬಗ್ಗೆ (೧೫೦೦-೧೫೩೦) ಕೊಂಡಾಡಿ ಬರೆದಿದ್ದಾರೆ. ಅವನು ಸಾಹಿತ್ಯಕ್ಕೆ ನೀಡಿದ ಕಾಣಿಕೆಯನ್ನು ಹೃತ್ಪೂರ್ವಕವಾಗಿ ಜ್ಞಾಪಿಸಿಕೊಳ್ಳುತ್ತಾರೆ. ಅದೇ ರೀತಿ, ಮಧ್ಯಕಾಲೀನ ಕವಿಯಾದ ಷಡಕ್ಷರ ದೇವನು ಶಿವಪ್ಪನಾಯಕನ (ಕೆಳದಿ ರಾಜ, ೧೬೪೮-೬೦) ಆಶ್ರಯದಲ್ಲಿ ರಚಿಸಿದ ಕಾವ್ಯಗಳನ್ನು ಹೊಗಳಿದ್ದಾರೆ.

[5] ಹಳಕಟ್ಟಿಯವರು ಶಿವಾನುಭವ ಪತ್ರಿಕೆಯಲ್ಲಿ ಲಿಂಗಾಯತ ರಾಜ-ರಾಣಿಯರ ಬಗ್ಗೆ ಸಂಶೋಧನೆಯಾಗಬೇಕೆಂದು ತೀವ್ರವಾಗಿ ಪ್ರತಿಪಾದಿಸುತ್ತಾರೆ (೧೮೯೨೬: ೧-೪). ಮೊದಲಿಗೆ ಅವರು ಕೆಳದಿ ಮತ್ತು ಸ್ವಾದಿ ಸಂಸ್ಥಾನಗಳ ಬಗ್ಗೆ ಯೂರೋಪಿಯನ್ ಪ್ರವಾಸಿಗರು ಕೈಗೊಂಡ ಸಂಶೋಧನೆಗಳ ಸಹಾಯದಿಂದ ಈ ಎರಡು ಸಂಸ್ಥಾನಗಳು ಲಿಂಗಾಯತರ ಹೆಮ್ಮೆಯ ಗತ ವೈಭವವೆಂದು ಬಣ್ಣಿಸಿದ್ದಾರೆ (೧೮೩೧: ೧೪-೨೧). ನಂತರ ಪಾರ್ವತಿ ಬಾಯಿ ಎಂಬ ಲಿಂಗಾಯತಳಿಂದ ರಾಣಿ ಚೆನ್ನಮ್ಮಾಜಿಯ ಬಗ್ಗೆ ಬರೆಯಲ್ಪಟ್ಟ ಲೇಖನವನ್ನು ಅವರು ಶಿವಾನುಭವದಲ್ಲಿ ಹೆಮ್ಮೆಯಿಂದ ಪ್ರಕಟಿಸಿದರು (೧೮೩೧).

[6] ಕೆಳದಿ ಇತಿಹಾಸದ ಬಗ್ಗೆ ತಾವು ಬರೆದ ಲೇಖನದಲ್ಲಿ (೧೮೨೪: ೭೩-೮೩) ಶಿವಪ್ಪನಾಯಕ ಮತ್ತು ಚೆನ್ನಮ್ಮಾಜಿಯ ಬಗ್ಗೆ ಪ್ರಶಂಸಾ ನುಡಿಗಳನ್ನು ಬರೆದು, ವೀರಮ್ಮಾಜಿಯ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸುತ್ತಾರೆ.

[7] ಶಿವಪ್ಪ ನಾಯಕ ಆಡಳಿತ, ಕಂದಾಯ ವಸೂಲಿ ಹಾಗೂ ಸೈನ್ಯದ ಉಸ್ತುವಾರಿಯಲ್ಲಿ ಕಠಿಣವಾದ ಶಿಸ್ತನ್ನು ಪಾಲಿಸಿದುದರಿಂದ ಅವನನ್ನು ಶಿಸ್ತಿನ ಶಿವಪ್ಪನಾಯಕನೆಂದು ಕರೆಯಲಾಗಿದೆ.

[8] ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ವೀರ ಮಹಿಳೆಯೆಂದು ಲಿಂಗಾಯತರಿಗೆ ಹೆಮ್ಮೆ.

[9] ಈ ವಿಷಯದಲ್ಲಿ ರಾಣಿ ಚೆನ್ನಮ್ಮಾಜಿಯ (೧೬೭೧-೧೬೮೬) ಬಗ್ಗೆ ಲಿಂಗಾಯತರ ಅಭಿಪ್ರಾಯಗಳು ಗಮನೀಯ. ಅನೇಕ ಲಿಂಗಾಯತರು ಮತ್ತು ಇತಿಹಾಸಕಾರರು ಗರ್ವದಿಂದ ಜ್ಞಾಪಿಸಿಕೊಳ್ಳುವ ಅಂಶವು ಚೆನ್ನಮ್ಮಾಜಿಯು ಶಿವಾಜಿಯ ಮಗನಾದ ರಾಜಾರಾಮನಿಗೆ ಔರಂಗಜೇಬನ ವಿರುದ್ಧವಾಗಿ ಆಶ್ರಯವಿತ್ತ ವಿಷಯಕ್ಕೆ ಸಂಬಂಧಿಸಿವೆ. ಔರಂಗಜೇಬನ ಸೈನ್ಯದಿಂದ ತಪ್ಪಿಸಿಕೊಳ್ಳಲು ರಾಜಾರಾಮ ಚೆನ್ನಮ್ಮಾಜಿಯ ಆಶ್ರಯ ಕೇಳಿದಾಗ ಚೆನ್ನಮ್ಮಾಜಿಯು ಆತನಿಗೆ ಆಶ್ರಯವಿತ್ತಳು. ಇದರಿಂದ ಕೋಪಗೊಂಡ ಔರಂಗಜೇಬನು ಚೆನ್ನಮ್ಮಾಜಿಯನ್ನು ಆಕ್ರಮಿಸಿದಾಗ ಆಕೆ ಆತನ ವಿರುದ್ಧ ವೀರಾವೇಶದಿಂದ ಕಾದಾಡಿದಳು (ಖರೆ, ೧೮೮೧: ೫೪-೫೫).

[10] ಕೆಳದಿ ಅರಸರು ಕರ್ನಾಟಕ ಸಂಸ್ಕೃತಿ ಮತ್ತು ಧರ್ಮಕ್ಕೆ ನೀಡಿದ ಅಪೂರ್ವವಾದ ಕಾಣಿಕೆಯನ್ನು ಅನೇಕ ಮಂದಿ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಶಿವಾಚಾರ್ಯ ಮಹಾಸ್ವಾಮಿಜಿಯವರ ಕೃತಿ (೧೮೮೧)ಯು ಇದಕ್ಕೆ ಮಹತ್ವವಾದ ಉದಾಹರಣೆ. ಜಿ.ಪಿ. ರಾಜರತ್ನಂರವರು ಕೆಳದಿ ಅರಸರು ಧಾರ್ಮಿಕ ಸಹಿಷ್ಣುತೆಗೆ ನೀಡಿದ ಕೊಡುಗೆಯನ್ನು ತಮ್ಮ ಕೃತಿಯಾದ ಬಿದನೂರು ರಾಣಿ ವೀರಮ್ಮಾಜಿ (೧೮೫೮)ರಲ್ಲಿ ಕೊಂಡಾಡಿದ್ದಾರೆ. ರಾಜರತ್ನಂರವರು ಚೆನ್ನಬಸವ ನಾಯಕ ವಿವಾದದಲ್ಲಿ ಮಾಸ್ತಿಯವರನ್ನು ಬಲವಾಗಿ ಬೆಂಬಲಿಸಿದರು ಎಂಬುದನ್ನು ಮರೆಯುವ ಹಾಗಿಲ್ಲ. ಅದಾಗ್ಯು ರಾಜರತ್ನಂರವರಿಗೆ ನಂಬಯ್ಯ ಹಾಗೂ ವೀರಮ್ಮಾಜಿಯ ನಡುವೆ ಇದ್ದ ಸಂಬಂಧದ ಬಗ್ಗೆ ಅನುಮಾನ. ಇದನ್ನು ನಿರೂಪಿಸಲು ಅವರು ಅನೇಕ ಇತಿಹಾಸಕಾರರ ಮತ್ತು ವಿದ್ವಾಂಸರ ಸಂಶೋಧನೆಯನ್ನು ಬಳಸಿಕೊಂಡಿದ್ದಾರೆ.

[11] ಬೌದ್ಧಿಕ ಜಾಲವೆಂದರೆ ಪತ್ರಿಕೋದ್ಯಮಿ, ವಿದ್ವಾಂಸರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು ಮತ್ತು ಕಾದಂಬರಿಯ ವಾಙ್ಮಯಗಳು (ಭಾಷೆಯ ಸಾಮಾಜಿಕ ಮತ್ತು ಐತಿಹಾಸಿಕ ಸನ್ನಿವೇಶ) ಸಾಮಾನ್ಯವಾಗಿ ಸಮ್ಮತಿಸುವ ಮತ್ತು ಉತ್ಪಾದಿಸುವ ಅಂತರ ಸಂಬಂಧವುಳ್ಳ ವ್ಯವಸ್ಥೆ ಎಂದು ಅರ್ಥ.

[12] ಕುಪ್ಪಸ್ತರು ತಮ್ಮ ವಾದ ಸಮರ್ಥನೆಗೆ ಕೆ.ಡಿ. ಸ್ವಾಮಿನಾಥನ್ನರ ಹೆಸರನ್ನು ಸೂಚಿಸುತ್ತಾರೆ (೧೮೫೮: ೧೭೪). ಆದರೆ ಎಲ್ಲಿಯೂ ಇದಕ್ಕೆ ಆಧಾರವನ್ನು ನೀಡಿಲ್ಲ. ಇದೇ ಸಂದರ್ಭದಲ್ಲಿ ಕುಪ್ಪಸ್ತರ ವಾದವನ್ನು ಸಮರ್ಥಿಸಿಕೊಳ್ಳುವಂತೆ ಜಯ ಕರ್ನಾಟಕದ ಸಂಪಾದಕರಾಗಿದ್ದ ಎಸ್.ಈ. ಮೈಸೂರ್ ಮಠರವರು ಎಸ್.ಜಿ.ಕಾಡದೇವರಮಠರವರ ಪಿಎಚ್.ಡಿ. ಮಹಾಪ್ರಬಂಧದ ಒಂದು ಭಾಗವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ವೀರಮ್ಮಾಜಿಯ ಉತ್ತಮ ಚಾರಿತ್ರ‍್ಯದ (೧೮೫೩ರಲ್ಲಿ ಬಾಂಬೆ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ್ದು) ಬಗ್ಗೆ ಅನೇಕ ವಿವರಗಳಿವೆ (೧೮೫೮: ೩೬-೪೦); ಈ ಭಾಗವು ಕೆಳದಿ ನೃಪವಿಜಯ (೧೭ನೇ ಶತಮಾನದ ಕೃತಿ) ದ ಮೇಲೆ ಅವಲಂಬಿತವಾಗಿ, ಸಾಕ್ಷ್ಯಗಳನ್ನು ನೀಡುತ್ತದೆ. ಆದರೆ ಇನ್ಯಾವುದೇ ಆಧಾರಗಳು ಈ ಪ್ರಬಂಧದಲ್ಲಿ ಕಾಣಬರುವುದಿಲ್ಲ.

[13] ಈ ಕೃತಿಯು ವೀರಮ್ಮಾಜಿ ಹಾಗು ನಂಬಯ್ಯನ ನಡುವಿನ ಸಂಬಂಧವನ್ನಾಗಲಿ ಅಥವಾ ಚೆನ್ನಬಸವ ನಾಯಕನ ವಿವಾಹ, ಸಾವಿನ ಬಗ್ಗೆ ಯಾವುದೇ ವಿವರಗಳನ್ನು ಹೊಂದಿಲ್ಲ. ಆದಾಗ್ಯೂ ಕುಪ್ಪಸ್ತರವರು ಈ ಕೃತಿಯನ್ನು ಮುಖ್ಯ ಅಧಿಕೃತ ಆಧಾರವನ್ನಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಮಾಸ್ತಿಯವರ ಹಾಗೆ ಕುಪ್ಪಸ್ತರೂ ಸಹ ಆಯ್ಕೆಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

[14] ಕುಪ್ಪಸ್ತರು ಬ್ರಾಹ್ಮಣರ ದೊಡ್ಡ ಪಟ್ಟಿಯನ್ನೆ ನೀಡಿದ್ದಾರೆ. ಕೃಷ್ಣ ಬೆಟಗೇರಿ ಶರ್ಮ, ನರಗುಂದ ಬಾಬಾ ಸಾಹೇಬ, ಕಪಟರಾಳ್ ಕೃಷ್ಣರಾವ ಮತ್ತು ಡಿ.ಎಲ್. ನರಸಿಂಹ ಚಾರ್ಯರು ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟ ಬ್ರಾಹ್ಮಣ ವಿದ್ವಾಂಸರು. ಕುಪ್ಪಸ್ತರ ಪ್ರಕಾರ ಇವರೆಲ್ಲರೂ ಲಿಂಗಾಯತ ಧರ್ಮ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ತಪ್ಪಾಗಿ ಅರ್ಥೈಸಿದ್ದಾರೆ (ಕುಪ್ಪಸ್ತ, ೧೮೫೮: ೧೮೨).

[15] ಆದರೆ ಕುಪ್ಪಸ್ತರು ಭಾವಿಸುವ ಹಾಗೆ ಅವರು ಅಕಾಡೆಮಿಯು ಕಾದಂಬರಿಗೆ ಮನ್ನಣೆ ನೀಡುವ ಮೊದಲೇ ಅದರ ವಿರುದ್ಧ ದನಿ ಎತ್ತಿದ್ದವರು. ೧೮೫೬-೫೮ರಲ್ಲಿದ್ದ ವಿರೋಧ, ಪ್ರತಿಭಟನೆ ಗಮನಿಸಿದರೆ, ರಾಜ್ಯ/ಕೇಂದ್ರ ಮನ್ನಣೆಯು ಪ್ರಸ್ತುತ ಇರುವ ದ್ವೇಷಮಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಈ ವಿರೋಧಮಯ ವಾತಾವರಣದಲ್ಲಿ ಒಂದು ಸೋಜಿಗಮಯ ಸಂಗತಿಯನ್ನು ಸಹ ಗಮನಿಸಬೇಕು. ಕುವೆಂಪುರವರ ರಕ್ತಾಕ್ಷಿ (೧೮೩೨)ಯು ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದ ರೂಪಾಂತರವಾಗಿದ್ದರೂ, ಅದು ಕೆಳದಿ ಅರಸರ ಕೊನೆಯ ದಿನಗಳನ್ನು ವಸ್ತುವನ್ನಾಗಿ ಆರಿಸಿಕೊಂಡಿದೆ. ಚೆನ್ನಬಸವನಾಯಕ ಕಾದಂಬರಿಯ ವಿರೋಧಿಗಳ ದೃಷ್ಟಿಯಿಂದ ಗಮನಿಸಬಹುದಾದರೆ ರಕ್ತಾಕ್ಷಿಯು ಖಂಡನೀಯ ನಾಟಕವಾಗಿದೆ. ಏಕೆಂದರೆ ಈ ನಾಟಕದಲ್ಲಿ ಖಂಡನೀಯ ಮತ್ತು ಆಕ್ಷೇಪಣೀಯ ಮಾತುಗಳನ್ನು (ವೀರಮ್ಮಾಜಿ ಮತ್ತು ನಂಬಯ್ಯರ ಸಂಬಂಧದ ಬಗ್ಗೆ) ಕಾಣಬಹುದು. ಆದರೆ ಯಾವತ್ತೂ ಸಹ ಲಿಂಗಾಯತರು ಈ ನಾಟಕದ ವಿರುದ್ಧ ದನಿ ಎತ್ತಲಿಲ್ಲ.